ಯಾರೋ ಹೇಳಿದರು, ಕಾಶಿಯ ರಾಜನಲ್ಲಿ ಬಿಳಿ ಕುದುರೆಗಳಿವೆಯೆಂದು. ಹಾಗಾಗಿ, ಗಾಲವ ನನ್ನ ಕಾಶಿಗೆ ಕರೆತಂದ. ಅಲ್ಲಿನ ರಾಜ ದಿವೋದಾಸನಲ್ಲಿ ೨೦೦ ಬಿಳಿ ಕುದುರೆಗಳಿದ್ದವು. ಅವನಿಗೂ ಗಂಡು ಮಗು ಬೇಕಿತ್ತು. ಗಾಲವ ಪುನಃ ಒಪ್ಪಂದ ಮಾಡಿಕೊಂಡ. ನನಗೆ ಈ ಬಾರಿ ಏನು ಅನ್ನಿಸಲಿಲ್ಲ. ಮನಸ್ಸು ಮತ್ತು ಹೃದಯಗಳೆರಡೂ ಹೆಪ್ಪುಗಟ್ಟಿದ್ದವು. ವರ್ಷ ಕಳೆಯೋದರಲ್ಲಿ ಮಗ ಪ್ರತಾರ್ಧನ ಹುಟ್ಟಿದ. ಆದರೆ, ಈ ಬಾರಿ ಮಗುವಿನೊಂದಿಗೆ ಯಾವುದೇ ವ್ಯಾಮೋಹ ಬೆಳೆಸಿಕೊಳ್ಳಲಿಲ್ಲ.
ಡಾ. ಜ್ಯೋತಿ ಬರೆದ ಈ ಭಾನುವಾರದ ಕಥೆ “ಮಾಧವಿ ಮನೆಗೆ ಬಂದಿದ್ದಳು”

 

ಕಳೆದ ಕೆಲವು ದಿನಗಳಿಂದ ಮಲಗುವ ಮೊದಲು ಮಹಾಭಾರತವನ್ನು ಓದುವ ಅಭ್ಯಾಸ ಮಾಡಿಕೊಂಡವಳು, ಇಂದು ರಾತ್ರಿ ಉದ್ಯೋಗಪರ್ವ ತಲುಪಿದೆ. ಅಲ್ಲಿ ಮಾಧವಿಯ ಮುಖಾಮುಖಿಯಾಯಿತು. ಅದರಲ್ಲಿ, ಅವಳ ಕಥೆಯನ್ನು ಒಂದು ಚಿಕ್ಕ ಘಟನೆಯಂತೆ ನಿರ್ಭಾವುಕತೆಯಿಂದ ವಿವರಿಸಿದ್ದರೂ, ಮಾಧವಿ ನನ್ನ ಮನಸಿನ ಆಳಕ್ಕೆ ಇಳಿದು ಪ್ರಶ್ನೆಯ ಸರಮಾಲೆಯಾಗಿ ಆ ಕ್ಷಣದಿಂದ ಕಾಡಲಾರಂಭಿಸಿದಳು. ಒಂದು ಕ್ಷಣ ದೀರ್ಘ ನಿಟ್ಟುಸಿರೆಳೆದು, ಪುಟದ ಗುರುತು ಹಾಕಿ ಪುಸ್ತಕ ಮಡಚಿ ಮಲಗಿದರೂ ನಿದ್ರೆ ಕಣ್ಣಿಗೆ ಸುಳಿಯಲಿಲ್ಲ. ಅವಳ ನಿಟ್ಟುಸಿರು, ಮೌನದ ಕಾವು ಕಿವಿಗೆ ತಟ್ಟಲಾರಂಭಿಸಿ, ಬಿಸಿಯೆನಿಸಿ ಎಚ್ಚರವಾಯಿತು. ಬಾರದ ನಿದ್ರೆಯಿಂದ ಉರಿಯಲಾರಂಭಿಸಿದ ಕಣ್ಣುಗಳನ್ನು ತೆರೆಯಲು ಕಷ್ಟ ಪಟ್ಟೆ. ಸುತ್ತಲೂ ಗಾಢವಾದ ಕತ್ತಲು. ಬೀದಿಯಲ್ಲಿ ನಾಯಿ ಬೊಗಳುವ ಸದ್ದು ಕೇಳಿಸಿತು.

ಮನುಷ್ಯ ಜಗತ್ತು ನಿಶ್ಯಬ್ದವಾದ ಮೇಲೆ ಬೀದಿಗಳಲ್ಲಿ ನಾಯಿಗಳದ್ದೇ ಕಾರುಭಾರು. ಅವುಗಳ ಸ್ನೇಹಿತರು ಅಥವಾ ಶತ್ರುಗಳು ಎದುರಾದಂತೆ ತಕ್ಕಂತೆ ಪ್ರತಿಕ್ರಿಯಿಸುತ್ತವೆ. ಹೋಗಲಿ, ನನಗ್ಯಾಕೆ ಎಚ್ಚರವಾಯಿತು. ಒಮ್ಮೆ ಎಚ್ಚರವಾದರೆ, ಇನ್ನು ಬೆಳಗಿನವರೆಗೆ ನಿದ್ರೆ ಹತ್ತಿರ ಸುಳಿಯುವುದಿಲ್ಲ. ತಡಕಾಡಿ ಮೊಬೈಲ್ ಕೈಗೆತ್ತಿಕೊಂಡೆ. ಗಂಟೆ ಎರಡುವರೆ. ಇನ್ನೂ ಮೂರುಗಂಟೆಯಿದೆ ಏಳಲಿಕ್ಕೆ. ದರಿದ್ರ ಅವಸ್ಥೆ. ನನ್ನಂತಹ ಸೂಕ್ಷ್ಮ ಮನಸ್ಸಿನವರು, ನಿದ್ರಿಸುವ ಹೊತ್ತಿನಲ್ಲಿ ಮಾಧವಿಯಂತವರ ಹತ್ತಿರ ಸಿಕ್ಕಿಹಾಕಿಕೊಳ್ಳಬಾರದು. ನಿದ್ರೆ ಸರಿಯಾಗಿ ಆಗದಿದ್ದರೆ, ಇಡೀ ದಿವಸ ಹಾಳು. ಆಫೀಸಿನಲ್ಲಿ ಬೇರೆ ಸಿಕ್ಕಾಪಟ್ಟೆ ಕೆಲಸವಿದೆ. ಹೇಗಾದರೂ ನಿದ್ರೆ ಮಾಡಲೇಬೇಕು. ಬಹಳ ಚಳಿಯೆನಿಸಿ ಬೆಡ್ ಶೀಟ್ ಮುಖಕ್ಕೆಳೆದುಕೊಂಡೆ.

ಯಾರೋ ಸಣ್ಣಗೆ ಅತ್ತಂತೆ ಕೇಳಿಸಿತು. ಪಕ್ಕದ ಮನೆಯಲ್ಲಿ ಇರಬಹುದೆಂದು ಮಗ್ಗಲು ಬದಲಾಯಿಸಿದೆ. ಧ್ವನಿ ಏರುತ್ತಾ ಬಹಳ ಹತ್ತಿರದಲ್ಲಿಯೇ, ಕಾಲಬುಡದಲ್ಲಿಯೇ ಕೇಳಿಸಿದಂತೆ ಭಾಸವಾಯಿತು. ಒಂದು ಕ್ಷಣ ಮೈ ಜುಮ್ಮೆಂದಿತು. ದಡಬಡಿಸಿ ಎದ್ದು ಕೂತೆ. ಕತ್ತಲಲ್ಲಿಯೇ ನೋಡಿದರೆ, ನನ್ನ ಮಂಚದ ತುದಿಯಲ್ಲಿಯೇ ಒಂದು ಹೆಂಗಸಿನ ಆಕೃತಿ ನನಗೆ ಬೆನ್ನು ತಿರುಗಿಸಿ ಕುಳಿತಂತೆ ಕಾಣಿಸಿತು. ಆ ಕ್ಷಣ ಹೃದಯ ಬಡಿತ ನಿಂತಂತೆ ಅನ್ನಿಸಿತು. ಜೋರಾಗಿ ಕಿರುಚಿ ಲೈಟ್ ಹಾಕಿದೆ. ಭ್ರಮೆಯಲ್ಲ, ಈಗ ಸ್ಪಷ್ಟವಾಗಿ ಕಾಣಿಸುತ್ತಿದೆ. ಆ ಹೆಂಗಸು ನನ್ನ ಕಡೆ ಮುಖ ಮಾಡಿದಳು. ಮಧ್ಯ ವಯಸ್ಸಿನ ಸುಂದರ ಮುಖ. ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ಹಸಿರು ಅಂಚಿನ ಕೆಂಪು ಸೀರೆ, ಅದೇ ಬಣ್ಣದ ರವಿಕೆ ತೊಟ್ಟಿದ್ದಳು.

ನಾನು ಭಯದಿಂದ ಗೋಡೆಗೆ ಆನಿಸಿ ನಿಂತೆ. ನನಗೆ ದುಃಖ ಉಮ್ಮಳಿಸಿ ಗಂಟಲು ಕಟ್ಟಿಕೊಂಡಂತೆ ಅನ್ನಿಸಿತು. ಸ್ವಲ್ಪ ಸಾವರಿಸಿಕೊಂಡು, ಕಣ್ಣೀರು ತುಂಬಿಕೊಂಡೇ ಕೇಳಿದೆ. “ಯಾರ್… ಯಾರಮ್ಮ ನೀನು? ಹೇಗೆ ಒಳಗೆ ಬಂದೆ?” ಯಾರಿಗೂ ತೊಂದರೆ ಕೊಡದೆ ನನ್ನಷ್ಟಕ್ಕೆ ಇದ್ದರೂ ಜನ ಸುಮ್ಮನೆ ಬದುಕಲು ಬಿಡುವುದಿಲ್ಲವಲ್ಲ. ಇದು ಅವನದ್ದೇ ಕೆಲಸ, ಒಬ್ಬಳೇ ಹೇಗೆ ಬದುಕುತ್ತಾಳೆ ಎಂದು ಹೆದರಿಸಲು ಮಾಡಿದ ಪ್ಲಾನ್.

“ಗಾಬರಿ ಬೀಳಬೇಡ. ನಿನಗೆ ಏನು ತೊಂದರೆ ಕೊಡುವುದಿಲ್ಲ. ಆರಾಮವಾಗಿ ಕೂತುಕೋ…”
ಹಾಸಿಗೆಯ ಮೇಲೆ ಕೈ ತೋರಿಸಿ ಕೂರಲು ಆಹ್ವಾನಿಸಿದಳು.

ಎಷ್ಟು ಸೊಕ್ಕು ಇವಳಿಗೆ… ನನ್ನ ಮನೆಯೊಳಗೇ ಮಧ್ಯರಾತ್ರಿ ನುಸುಳಿ ನನಗೇನೇ ಕುಳಿತುಕೊಳ್ಳಲು ಹೇಳಿ ಯಜಮಾನಿಕೆ ತೋರಿಸುತ್ತಿದ್ದಾಳೆ.

“ನೋಡಮ್ಮ, ಮರ್ಯಾದೆಯಲ್ಲಿ ಜಾಗ ಖಾಲಿಮಾಡು. ನಾನು ಯಾರಿಗೂ ಹೆದರುವವಳಲ್ಲ. ಹೆಂಗಸು ಅಂತ ಸುಮ್ಮನೆ ಬಿಟ್ಟಿದ್ದೇನೆ. ಸೀದಾ ಹೊರಗೆ ಹೋಗು. ನನಗೆ ನಿದ್ರೆ ಮಾಡಬೇಕು. ಆಫೀಸಿಗೆ ಹೋಗಲಿಕ್ಕಿದೆ.” ಬಾಗಿಲತ್ತ ಹೆಜ್ಜೆ ಹಾಕಿದೆ.

“ಸ್ವಲ್ಪ ನಿಲ್ಲು ಸುನಿತಾ. ನಾನಾಗಿಯೇ ಬಂದಿಲ್ಲ. ನೀನೆ ನನ್ನ ಕರೆದಿದ್ದು.”

“ಏನು? ಅರೇ … ನನ್ನ ಹೆಸರು ನಿನಗೆ ಹೇಗೆ ಗೊತ್ತು? ನೀನು ಯಾರಂತಲೇ ಗೊತ್ತಿಲ್ಲ. ಯಾರು ನಿನ್ನ ಕಳುಹಿಸಿದ್ದು? ಪ್ಲೀಸ್ ಹೋಗು. ನನ್ನ ನೆಮ್ಮದಿ ಹಾಳು ಮಾಡಬೇಡ.”

“ರಿಲ್ಯಾಕ್ಸ್ … ನನ್ನ ಯಾರು ಕಳುಹಿಸಿಲ್ಲಾ… ನಾನಾಗಿಯೇ ಬಂದೆ… ನೀನು ಮಲಗುವ ಮೊದಲು ನನ್ನ ಕಥೆ ಓದಿ ಬಹಳ ವಿಚಲಿತಳಾದೆ… ನಾನು ತುಂಬಾ ವರ್ಷಗಳಿಂದ ಗಮನಿಸುತ್ತಿದ್ದೇನೆ… ಹೆಚ್ಚಿನ ಮಂದಿ ನನ್ನ ವೃತ್ತಾಂತ ನಿರ್ಲಿಪ್ತರಾಗಿ ಓದಿ ಮುಂದಿನ ಪುಟ ತಿರುಗಿಸುತ್ತಾರೆ… ಆದ್ರೆ… ನೀನು ಅಲ್ಲಿಯೇ ನಿಲ್ಲಿಸಿ, ಹಾಗೆಯೇ ಆಲೋಚಿಸಿದೆ… ನಿನ್ನ ಒಳ್ಳೆಯ ಮನಸ್ಸು ನನ್ನ ಹೃದಯಕ್ಕೆ ತಟ್ಟಿತು. ಬಹುಶಃ, ನನ್ನ ಕಥೆ ಹಿಗ್ಗಿಸಿ ಪೂರ್ಣ ವೃತ್ತಾಂತ ಬರೆಯಬೇಕೆಂದು ಯೋಚಿಸುತ್ತಾ, ನಿದ್ರೆ ಹತ್ತದೇ ನೀನು ಮಗ್ಗುಲು ಬದಲಾಯಿಸುತ್ತಿದ್ದುದ ಗಮನಿಸಿದೆ… ನಿನಗೆ ಸಹಾಯ ಮಾಡಲು ಬಂದಿದ್ದೇನೆ… ಕಥೆ ಚೆನ್ನಾಗಿ ಬರಿ… ಏನಾದರೂ ಕೇಳುವುದಿದ್ದರೆ ಕೇಳು… ಯಾರಿಗೂ ನನ್ನ ಬಗ್ಗೆ ಬರೆಯಬೇಕೆನಿಸಲಿಲ್ಲ… ಬರಿ ಸೀತೆ, ದ್ರೌಪದಿ ಬಗ್ಗೆನೇ ಬರೆಯುತ್ತಾರೆ… ನನ್ನಂತವರ ನೋವು ಯಾರಲ್ಲಿ ಹೇಳಿಕೊಳ್ಳಲಿ?”

ನಾನು ಕಥೆ ಓದಿದ್ದು ಮಾಧವಿಯದ್ದು… ಅಂದರೆ… ಇವಳು ಮಾಧವಿ… ಹೇಗೆ ಸಾಧ್ಯ? ಮಹಾಭಾರತದ ಮಾಧವಿ… ೨೧ನೇ ಶತಮಾನದಲ್ಲಿ… ಅದೂ ನನ್ನ ಬೆಡ್ ರೂಮಿನಲ್ಲಿ… ಮಧ್ಯ ರಾತ್ರಿಯಲ್ಲಿ… ನನಗೆ ಏನೋ ಭ್ರಮೆ… ಆದರೂ ನನಗೇಕೆ ಇವಳ ನೋಡಿ ಭಯ ಆಗುತ್ತಿಲ್ಲ.. ಆಶ್ಚರ್ಯ! ಕತ್ತಲಿಗೆ ಹೆದರುವವಳು ಧೈರ್ಯವಾಗಿ ಮಾತನಾಡುತ್ತಿದ್ದೇನಲ್ಲ… ಕರುಣೆ ಹುಟ್ಟುತಿದೆ… ಅವಳ ಒದ್ದೆಯಾಗಿರುವ ಕಣ್ಣುಗಳು ನನ್ನ ಮನಸ್ಸ ಮೃದುಗೊಳಿಸಿತೇ?… ಇಲ್ಲ… ನಾನು ಸಲಿಗೆ ಕೊಡಬಾರದು…

“ಹೋಗಮ್ಮ ನೀನು… ಏನೇನೊ ಕಥೆ ಹೇಳಬೇಡ… ಮಹಾಭಾರತದ ಮಾಧವಿ ಎಂದುಬಿಟ್ಟರೆ ನಂಬುತ್ತೇನೆಯೇ? ಕಥೆ ಬರೆಯುವ ಹುಚ್ಚಂತೂ ಇದೆ. ಆದರೆ, ದೆವ್ವಗಳ ಜೊತೆ ಮಧ್ಯರಾತ್ರಿ ಸಂಭಾಷಣೆ ಮಾಡಿಯಲ್ಲ… ಅಧ್ಯಯನ ಮಾಡಿ… ನಂಗೆ ನನ್ನದೇ ಪ್ರಾಬ್ಲೆಮ್ಸ್ ಬೇಕಾದಷ್ಟಿವೆ… ಮರ್ಯಾದೆಯಿಂದ ಜಾಗ ಖಾಲಿಮಾಡು.”

“ಸುನೀತಾ… ಸ್ವಲ್ಪ ಸಮಾಧಾನ… ನಾನು ಬಂದಿರುವುದು ನಿನ್ನ ಒಳ್ಳೆಯದಕ್ಕೆ… ಹೇಗೂ ಕಥೆ ಬರೆಯಲು ಹೊರಟಿದ್ದಿ… ಆದರೆ… ನನ್ನ ಜೊತೆ ಚರ್ಚಿಸಿ ಬರಿ… ಕಥೆ ಸತ್ಯಕ್ಕೆ ಹತ್ತಿರವಿರುತ್ತದೆ… ಧ್ವನಿ ನನ್ನದು… ಬರವಣಿಗೆ ನಿನ್ನದು… ಕೊನೆಗೆ ಬೇಕಿದ್ದರೆ ಟಿಪ್ಪಣಿಯಂತೆ ಸೇರಿಸು-
‘ಇಲ್ಲಿ ಬರೆದಿರುವ ವಿಷಯಗಳಿಗೆ ಮತ್ತು ನನಗೆ ಯಾವುದೇ ಸಂಬಂಧವಿಲ್ಲ. ಸ್ವತಃ ಮಾಧವಿ ಹೇಳಿದ್ದನ್ನು ನಾನು ಬರೆದಿದ್ದೇನೆ ಅಷ್ಟೇ.’
ಸೆರಗಿನ ಅಂಚಿನಿಂದ ಮುಖ ಒರೆಸುತ್ತಾ ತುಸು ನಕ್ಕಳು.

ನನಗೂ ಈ ಗೊಂದಲದ ನಡುವೆ ನಗು ಬಂತು…

“ಸರಿ. ಪೆನ್ನು ಪೇಪರ್ ತೆಗೆದುಕೊಂಡು ಬಾ… ಇಲ್ಲಿ ಕೂತ್ಕೋ… ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಕಥೆ ನನ್ನ ಬಾಯಿಂದಲೇ ಕೇಳಿದರೆ, ನಿನ್ನ ಪ್ರಶ್ನೆಗಳಿಗೆ ಉತ್ತರ ಸಿಕ್ಕು ನಿದ್ರೆನೂ ಸುಳಿಯಬಹುದು.” ಅವಳ ಧ್ವನಿಯಲ್ಲಿ ಒತ್ತಾಯವಿತ್ತು.

ನನ್ನ ಮಾತು ಗಂಟಲೊಳಗೆ ಉಳಿಯಿತು. ಕೀಲಿ ಕೊಟ್ಟ ಗೊಂಬೆಯಂತೆ ಅವಳ ಮಾತು ಕೇಳಿದೆ. ಬರೆಯುವ ಟೇಬಲ್ ಮೇಲಿದ್ದ ನೋಟ್ ಪ್ಯಾಡ್ ಮತ್ತು ಪೆನ್ ತೆಗೆದುಕೊಂಡು ಬಂದು ಅವಳ ಎದುರಾಗಿ ಕುಳಿತೆ.

ಮಾಧವಿ ಹಾಸಿಗೆಯ ಮೇಲೆ ಚಕ್ಕಳ ಮಕ್ಕಳ ಹಾಕಿ ಕೂತಳು. ಗಂಟಲು ಸರಿ ಮಾಡುತ್ತಾ ಒಮ್ಮೆ ನನ್ನನ್ನೇ ದಿಟ್ಟಿಸಿ ನೋಡಿದಳು.

“ಎಲ್ಲಿಂದ ಶುರು ಮಾಡಲಿ? ನನ್ನ ಬಗ್ಗೆ ಹೆಚ್ಚಿನವರಿಗೆ ಗೊತ್ತೇ ಇಲ್ಲಾ. ಹಾಗಾಗಿ ಹುಟ್ಟಿನಿಂದಲೇ ಕಥೆ ಆರಂಭಿಸುತ್ತೇನೆ.”

“ನಾನು ಯಯಾತಿ ಮತ್ತು ಅಪ್ಸರಾ ದಂಪತಿಗಳ ಒಬ್ಬಳೇ ಮಗಳಾಗಿ ಹುಟ್ಟಿದೆ. ನನ್ನ ಅಪ್ಪ ದಾನಶೂರನೆಂದು ಆ ಕಾಲದಲ್ಲಿ ಖ್ಯಾತಿ ಗಳಿಸಿದ್ದ. ಸಹಾಯ ಕೇಳಲು ಬಂದ ಯಾರನ್ನೂ ಬರಿಗೈಯಲ್ಲಿ ಕಳುಹಿಸಿದವನಲ್ಲ. ವಿಶೇಷವಾಗಿ, ಋಷಿಮುನಿಗಳು ಮತ್ತು ಬ್ರಾಹ್ಮಣರು ರಾಜಾತಿಥ್ಯ ಅನುಭವಿಸಿ ತುಂಬು ಹೃದಯದಿಂದ ಹರಸಿ ಹೋಗುತ್ತಿದ್ದರು. ಹಾಗೆ ಸಂತೃಪ್ತನಾದ ಋಷಿಯೊಬ್ಬ ಅಪ್ಪನಿಗೆ ಒಂದು ವರ ಕೊಟ್ಟ. ಕೊಟ್ಟಿದ್ದು ಅಪ್ಪನಿಗೆ, ಆದರೆ, ಅದರಿಂದಾಗಿ ನನ್ನ ಬದುಕು ಅಂಕೆ ಮೀರಿ ಹೋಯಿತು. ‘ನಿನ್ನ ಮಗಳು ಮಾಧವಿ ಶಾಶ್ವತ ಕನ್ಯೆಯಾಗಿಯೇ ಉಳಿಯಲಿ ಮತ್ತು ನಾಲ್ಕು ಗಂಡುಮಕ್ಕಳನ್ನು ಹೆತ್ತು ನಿನ್ನ ವಂಶ ಬೆಳೆಸಲಿ’, ಎಂದು ಹೇಳಿ ಹೋದ. ಆ ಕಾಲದಲ್ಲಿ ಪುರುಷನ ದೃಷ್ಟಿಯಲ್ಲಿ ಹೆಣ್ಣಿನ ಯೋಗ್ಯತೆಯ ಮಾನದಂಡ: ಕನ್ಯತ್ವ ಮತ್ತು ಗಂಡು ಮಕ್ಕಳನ್ನು ಹೆತ್ತು ಕೊಡುವುದು. ಕೇಳದೆಯೇ ನನಗೆ ಅವೆರಡೂ ಒದಗಿಬಂತು. ಆಗ, ಅದರ ಗಾಂಭೀರ್ಯತೆ ನನಗೆ ಅರಿವಾಗಲಿಲ್ಲ. ಅದು ವರವೋ, ಶಾಪವೋ, ಹೇಗೆ ಸ್ವೀಕರಿಸಬೇಕೆಂದು ತಿಳಿಯಲಿಲ್ಲ. ಆದರೆ, ಋಷಿಗಳ ಅಥವಾ ಬ್ರಾಹ್ಮಣರ ಎದಿರು ವಾದಿಸುವಂತಿಲ್ಲ. ಅವರ ಶಾಪಕ್ಕೆ ಸಿಕ್ಕಿದರೆ, ಜೀವನ ಹಾಳಾದಂತೆ. ಹೆಚ್ಚು ಯೋಚಿಸದೆ ಹಾಗೆಯೇ ಮರೆತು ಬಿಟ್ಟೆವು.”

ನನ್ನ ಮಾತು ಗಂಟಲೊಳಗೆ ಉಳಿಯಿತು. ಕೀಲಿ ಕೊಟ್ಟ ಗೊಂಬೆಯಂತೆ ಅವಳ ಮಾತು ಕೇಳಿದೆ. ಬರೆಯುವ ಟೇಬಲ್ ಮೇಲಿದ್ದ ನೋಟ್ ಪ್ಯಾಡ್ ಮತ್ತು ಪೆನ್ ತೆಗೆದುಕೊಂಡು ಬಂದು ಅವಳ ಎದುರಾಗಿ ಕುಳಿತೆ.

“ನಾನು ದೊಡ್ಡವಳಾದೆ. ಒಂದು ದಿನ ಗಾಲವನೆಂಬ ಯುವ ಬ್ರಾಹ್ಮಣ, ಅಪ್ಪನ ಆಸ್ಥಾನಕ್ಕೆ ಬಂದ. ಜೊತೆಗೆ ಅವನ ಸ್ನೇಹಿತ ಗರುಡನೂ ಇದ್ದ. ಬಂದವನು ಕೈಮುಗಿದು ಅಪ್ಪನಲ್ಲಿ ಮನವಿ ಮಾಡಿದ, ‘ಹೇಗಾದರೂ ಮಾಡಿ ೮೦೦ ಕಪ್ಪು ಕಿವಿಯಿರುವ ಬಿಳಿ ಕುದುರೆಗಳನ್ನು ದೊರಕಿಸಿಕೊಡಿ. ವಿದ್ಯೆ ನೀಡಿದ ಗುರು ವಿಶ್ವಾಮಿತ್ರರಿಗೆ ಗುರುದಕ್ಷಿಣೆ ಕೊಡುವುದಿದೆ. ನೀವು ಸಹಾಯ ಮಾಡದಿದ್ದರೆ ಆತ್ಮಹತ್ಯೆಯೇ ಗತಿ. ಗುರುದಕ್ಷಿಣೆ ಕೊಡಲಾಗದ ಮೇಲೆ ಈ ಜೀವ ಏಕೆ?’ ಎಂದು ಗೋಳಾಡಿದ”

“ನಮ್ಮಲ್ಲಿ ಅಂತಹ ಕುದುರೆಗಳೇ ಇರಲಿಲ್ಲ. ಆದರೆ, ಅಪ್ಪನಿಗೆ ಬ್ರಾಹ್ಮಣನನ್ನು ಬರಿಗೈಯಲ್ಲಿ ಕಳುಹಿಸಲು ಇಚ್ಛೆ ಇರಲಿಲ್ಲ. ಬ್ರಾಹ್ಮಣ ಒಂದು ವೇಳೆ ಜೀವಕ್ಕೆ ಹೆಚ್ಚುಕಡಿಮೆ ಮಾಡಿಕೊಂಡು ಬಿಟ್ಟರೆ, ಆ ಪಾಪ ನಮ್ಮ ಮನೆತನಕ್ಕೆ. ಅಪ್ಪನಿಗೆ ದಿಗಿಲಾಯಿತು. ತಕ್ಷಣ ಒಂದು ಆಲೋಚನೆ ಹೊಳೆಯಿತು, ಹೇಗೂ ಮಗಳಿಗೆ ಕನ್ಯತ್ವವೆಂಬ ವಿಶೇಷ ವರವಿದೆ. ಹಾಗಾಗಿ, ಅವಳನ್ನು ಗಾಲವನೊಂದಿಗೆ ಕಳುಹಿಸಿ ಇಂತಹ ಕುದುರೆಗಳಿರುವ ಯಾವುದಾದರೂ ರಾಜನಿಗೆ ಮದುವೆ ಮಾಡಿಸಿ ಗಂಡು ಸಂತಾನ ಪ್ರಾಪ್ತಿ ಮಾಡಿಸಿದರೆ, ಬದಲಿಗೆ ಕುದುರೆಗಳನ್ನು ಪಡೆಯಬಹುದು. ಹೀಗೆ, ಗಾಲವನಿಗೆ ೮೦೦ ಬಿಳಿ ಕುದುರೆ ಸಿಕ್ಕ ಮೇಲೆ ಮಗಳನ್ನು ಪುನಃ ವಾಪಸ್ಸು ಕರೆಸಿಕೊಂಡು, ಸ್ವಯಂವರ ಏರ್ಪಡಿಸಿ ಮದುವೆ ಮಾಡಬಹುದು. ಈಗ ಹೇಗೂ ಚಿಕ್ಕವಳು, ಜೊತೆಗೆ ಚಿರಕನ್ಯೆ ಬೇರೆ. ಬ್ರಾಹ್ಮಣನ ಶಾಪಕ್ಕಿಂತ ಇದು ಮೇಲೆನಿಸಿತು ಅಪ್ಪನಿಗೆ.”

“ಅಪ್ಪ ನಿನ್ನ ಹತ್ತಿರ ಒಂದು ಮಾತು ಕೇಳದೆ ನಿರ್ಧಾರ ತೆಗೆದುಕೊಂಡರೆ?”

“ಆಗ ನನಗೆ ಬಹಳ ಚಿಕ್ಕ ವಯಸ್ಸು. ಜನ್ಮ ನೀಡಿದ ಅಪ್ಪ ಹೇಳಿದ್ದನ್ನು ಕೇಳುವುದು ಬಿಟ್ಟರೆ, ಮತ್ತೇನೂ ಅರಿಯದು. ನನ್ನ ಹೆತ್ತ ಅಪ್ಸರೆ, ಎಂದೋ ಸ್ವರ್ಗಕ್ಕೆ ವಾಪಸ್ಸಾಗಿದ್ದಳು. ಅಪ್ಪ ಬೆಳೆಸಿದ ಮಗಳು ನಾನು. ಬಹುಶಃ, ಅಪ್ಪನಿಗೆ ತನ್ನ ದಾನಶೂರತ್ವ ಬಿರುದು ಉಳಿಸಿಕೊಳ್ಳುವುದು ಹೆಚ್ಚಾಯಿತೇ ಹೊರತು ನನ್ನ ಇಚ್ಛೆಯಲ್ಲ. ಒಂದು ವೇಳೆ ಕೇಳಿದ್ದರೂ, ನಂಗೆ ಸ್ವಂತವಾಗಿ ನಿರ್ಧರಿಸುವಷ್ಟು ಬುದ್ಧಿಶಕ್ತಿ ಇತ್ತೋ ಇಲ್ಲವೋ, ಸ್ಪಷ್ಟವಾಗಿ ನೆನಪಿಲ್ಲ. ಒಟ್ಟಿನಲ್ಲಿ, ಅಪ್ಪ ನನ್ನ ಗಾಲವನೊಂದಿಗೆ ಕಳುಹಿಸಿದರು.”

“ಹೋಗಲಿ ಬಿಡು. ಆ ಗಾಲವ ನಾನು ರಾಜಪುತ್ರಿ ಎಂದು ಒಂದಿಷ್ಟು ಗೌರವ ಕೊಡದೆ ನಡೆಸಿಕೊಂಡೆ ಬಿಳಿ ಕುದುರೆ ಮಾಲೀಕನ ಹುಡುಕುತ್ತಾ ಊರೂರು ಸುತ್ತಿದ. ಅಂತೂ ಅಯೋಧ್ಯೆ ತಲುಪಿದೆವು. ಅಲ್ಲಿನ ರಾಜ ಹರಿಯಸ್ವನಿಗೆ ಗಂಡು ಮಕ್ಕಳಿಲ್ಲದ ಚಿಂತೆ ಕಾಡುತ್ತಿತ್ತು. ಆದರೆ, ಅವನಲ್ಲಿ ಬರಿ ೨೦೦ ಬಿಳಿ ಕುದುರೆಗಳಿದ್ದವು. ಅವನಿಗೆ ಗಂಡು ಸಂತಾನಕ್ಕಾಗಿ ನನ್ನ ಮದುವೆಯಾಗುವ ಇಚ್ಛೆಯಾಯಿತು. ಅವನು ಗಾಲವನಲ್ಲಿ ಒಂದು ಒಪ್ಪಂದ ಮಾಡಿಕೊಂಡ- ‘ನಾನು ಒಂದು ಗಂಡು ಮಗು ಹೆತ್ತ ತಕ್ಷಣ ನನ್ನ ಬಿಡುಗಡೆ ಮಾಡುತ್ತೇನೆ. ಜೊತೆಗೆ ೨೦೦ ಕುದುರೆಗಳನ್ನು ಕೊಡುತ್ತೇನೆ’. ಗಾಲವನಿಗೆ ಒಪ್ಪಿಗೆಯಾಯಿತು. ನನಗೆ ಊರೂರು ಅಲೆದೂ ಅಲೆದೂ ಸುಸ್ತಾಗಿತ್ತು. ಹಾಗಾಗಿ, ಇಲ್ಲಿ ಅರಮನೆಯಲ್ಲಿ ಸ್ವಲ್ಪ ಸಮಯ ಉಳಿಯಲಿಕ್ಕಿದೆಯೆಂದು ತಿಳಿದು ತಕ್ಷಣ ಒಪ್ಪಿಕೊಂಡೆ.”

“ಹರಿಯಸ್ವ ಚೆನ್ನಾಗಿಯೇ ನೋಡಿಕೊಂಡ. ವರ್ಷ ಕಳೆದ ಮೇಲೆ ಹುಟ್ಟಿದ ಗಂಡು ಮಗುವಿಗೆ ವಸುಮಾನಸ ಎಂದು ಹೆಸರಿಟ್ಟರು. ನಾನು ನನ್ನ ಮಗುವಿಗೆ ಅಂಟಿಕೊಂಡುಬಿಟ್ಟೆ. ಬಿಟ್ಟುಕೊಡಲು ಮನಸ್ಸಾಗಲಿಲ್ಲ. ಆದರೆ, ಕರೆದುಕೊಂಡು ಹೋಗಲು ಗಾಲವ ಬಂದ. ಹರಿಯಸ್ವನನ್ನು ದಯನೀಯವಾಗಿ ನೋಡಿದೆ. ಆದರೆ, ಅವನು ನನ್ನ ತಡೆಯಲಿಲ್ಲ, ಮಗುವನ್ನು ಮಾತ್ರ ಕೈಗೆತ್ತಿಕೊಂಡ. ನನಗೆ ಮಗನನ್ನು ಬಿಟ್ಟುಬರಲು ಬಹಳ ಕಷ್ಟವೆನಿಸಿತು. ಆದರೆ, ಬೇರೆ ದಾರಿ ಇರಲಿಲ್ಲ, ನಿರ್ಧರಿಸುವವರು ಬೇರೆಯವರು. ಹೃದಯ ಖಾಲಿಯೆನಿಸಿ, ಮೌನವಾಗಿ ಗಾಲವನನ್ನು ಹಿಂಬಾಲಿಸಿದೆ. ಅವನಿಗೆ ಮೊದಲ ಕಂತಿನ ೨೦೦ ಕುದುರೆಗಳು ಸಿಕ್ಕಿದವು.”

“ಯಾರೋ ಹೇಳಿದರು, ಕಾಶಿಯ ರಾಜನಲ್ಲಿ ಬಿಳಿ ಕುದುರೆಗಳಿವೆಯೆಂದು. ಹಾಗಾಗಿ, ಗಾಲವ ನನ್ನ ಕಾಶಿಗೆ ಕರೆತಂದ. ಅಲ್ಲಿನ ರಾಜ ದಿವೋದಾಸನಲ್ಲಿ ೨೦೦ ಬಿಳಿ ಕುದುರೆಗಳಿದ್ದವು. ಅವನಿಗೂ ಗಂಡು ಮಗು ಬೇಕಿತ್ತು. ಗಾಲವ ಪುನಃ ಒಪ್ಪಂದ ಮಾಡಿಕೊಂಡ. ನನಗೆ ಈ ಬಾರಿ ಏನು ಅನ್ನಿಸಲಿಲ್ಲ. ಮನಸ್ಸು ಮತ್ತು ಹೃದಯಗಳೆರಡೂ ಹೆಪ್ಪುಗಟ್ಟಿದ್ದವು. ವರ್ಷ ಕಳೆಯೋದರಲ್ಲಿ ಮಗ ಪ್ರತಾರ್ಧನ ಹುಟ್ಟಿದ. ಆದರೆ, ಈ ಬಾರಿ ಮಗುವಿನೊಂದಿಗೆ ಯಾವುದೇ ವ್ಯಾಮೋಹ ಬೆಳೆಸಿಕೊಳ್ಳಲಿಲ್ಲ. ಪುನಃ ಗಾಲವ ಬಂದ. ೨೦೦ ಕುದುರೆಗಳೊಂದಿಗೆ ನನ್ನ ಕರೆದುಕೊಂಡು ಮುಂದಿನ ಪ್ರಯಾಣಕ್ಕೆ ಸಿದ್ಧತೆ ನಡೆಸಿದ. ನಾನು ಎರಡನೇ ಗಂಡ ಮತ್ತು ಮಗನತ್ತ ತಿರುಗಿ ನೋಡದೆ ಮುನ್ನಡೆದೆ.”

“ಅಲ್ಲಿಂದ ಭೋಜನಗರಿಯ ರಾಜ ಉಶೀನಾರನ ಆಸ್ತಾನಕ್ಕೆ ಹೋದೆವು. ಅವನಿಗೂ ಗಂಡು ಮಗ ಬೇಕಿತ್ತು. ಆದರೆ ಅವನಲ್ಲಿಯೂ ಬರಿ ೨೦೦ ಬಿಳಿ ಕುದುರೆಗಳಿದ್ದವು. ಪುನಃ, ಗಾಲವ ಮತ್ತು ಉಶೀನಾರ ನಡುವೆ ಒಪ್ಪಂದ. ಅವನೂ ಕೂಡ ನನ್ನಿಂದ ಗಂಡು ಮಗು ಪಡೆಯುವುದಕ್ಕಾಗಿ ೨೦೦ ಬಿಳಿ ಕುದುರೆಗಳನ್ನು ಕೊಡಲು ಸಿದ್ಧನಿದ್ದ. ಹೀಗೆ ವರ್ಷ ಕಳೆದ ಮೇಲೆ, ಮಗ ಸಿಬಿ ಹುಟ್ಟಿದ.”

“ಅಲ್ಲಿಂದ ಮುಂದೆ ಹೋಗಲು ಏನೂ ಉಳಿದಿರಲಿಲ್ಲ. ಯಾಕೆಂದರೆ, ಇಷ್ಟು ಹೊತ್ತಿಗೆ ಗಾಲವನಿಗೆ ಒಂದು ವಿಷಯ ಮನದಟ್ಟಾಗಿತ್ತು. ಅದೇನೆಂದರೆ, ಈಗ ಪ್ರಪಂಚದಲ್ಲಿ ಕೇವಲ ೬೦೦ ಬಿಳಿ ಕುದುರೆಗಳಿವೆ. ಯಾಕೆಂದರೆ, ಇದ್ದ ಒಟ್ಟು ೧೦೦೦ ಕುದುರೆಗಳಲ್ಲಿ ೪೦೦ ಕುದುರೆಗಳು ಬೀಸ್ ನದಿ ದಾಟುವಾಗ ಮುಳುಗಿ ಸತ್ತಿದ್ದವು. ಹಾಗಿದ್ದಲ್ಲಿ, ವಿಶ್ವಾಮಿತ್ರರು ಯಾಕೆ ೮೦೦ ಕುದುರೆ ಬೇಕೆಂದರು? ಗಾಲವ ಅಂದುಕೊಂಡಂತೆ, ಅವನ ಗುರುಭಕ್ತಿ ಪರೀಕ್ಷಿಸಲೋ? ಅಥವಾ ನಾನು ಅಂದುಕೊಂಡಂತೆ, ನನ್ನ ದೇಹ ಅನುಭವಿಸಲೋ? ಋಷಿಗಳಾದವರು ಇಂದ್ರಿಯ ನಿಗ್ರಹ ಹೊಂದಿರಬೇಕು. ಆದರೆ, ಹೆಚ್ಚಿನ ಇಂತಹ ವ್ಯವಹಾರಗಳು ಆಶ್ರಮದ ಉಸ್ತುವಾರಿಯಲ್ಲಿಯೇ ನಡೆಯುತ್ತವೆ. ಅವರು ಆಡುವ ಈ ಚದುರಂಗಕ್ಕೆ ದೇವರ ಇಚ್ಛೆ ಎಂದು ಹೆಸರಿಡುತ್ತಾರೆ.”
ನಾನು ನಿಟ್ಟುಸಿರು ಬಿಟ್ಟೆ. ಮಾಧವಿ ನಿರ್ವಿಕಾರವಾಗಿ ಮುಂದುವರಿಸಿದಳು.

“ಗಾಲವ ನನ್ನಲ್ಲಿ ಹೇಳಿದ- ‘ನಾನು ಆಶ್ರಮಕ್ಕೆ ೬೦೦ ಕುದುರೆಗಳ ಜೊತೆಗೆ ಹೋಗಿ ಗುರುಗಳ ಕಾಲಿಗೆ ಬಿದ್ದು ಹೇಳುತ್ತೇನೆ, ‘ಇನ್ನು ೨೦೦ ಕುದುರೆಗಳನ್ನು ಹೊಂದಿಸಲು ನನ್ನಿಂದ ಅಸಾಧ್ಯ. ಕ್ಷಮಿಸಿ ಬಿಡಿ. ನೀವು ಕೊಡುವ ಶಿಕ್ಷೆಗೆ ನಾನು ಬದ್ಧ.’ ಒಂದುವೇಳೆ, ಗುರುಗಳ ನಿರ್ಧಾರದಲ್ಲಿ ನಿನ್ನ ಪಾಲ್ಗೊಳ್ಳುವಿಕೆ ಅಗತ್ಯವಿದ್ದರೆ ನೀನು ಸಹಕರಿಸಬೇಕು. ವಿಶ್ವಾಮಿತ್ರ ೬೦೦ ಕುದುರೆಗಳನ್ನು ಸ್ವೀಕರಿಸಿದ, ಜೊತೆಗೆ ನನ್ನ ದೀರ್ಘವಾಗಿ ನೋಡಿದ. ಗಾಲವನ ಬಿಗಿದಪ್ಪಿ ಹೇಳಿದ, ‘ಭೇಷ್, ಗಾಲವ. ನೀನು ಅಸಾಧ್ಯವಾದುದನ್ನು ಸಾಧಿಸಿದೆ. ಶಿಷ್ಯನೆಂದರೆ ನೀನೆ ಸರಿ. ನೆಮ್ಮದಿಯಿಂದ ಹೋಗು. ನಿನ್ನನ್ನು ಗುರುದಕ್ಷಿಣೆಯ ಋಣದಿಂದ ಮುಕ್ತಗೊಳಿಸಿದ್ದೇನೆ. ಮಾಧವಿಯನ್ನು ಇಲ್ಲಿಯೇ ಬಿಟ್ಟು ಹೋಗು. ಅವಳಿಗಿನ್ನೂ ಒಂದು ಗಂಡು ಮಗುವಿನ ಭಾಗ್ಯವಿದೆ. ಅಲ್ಲದೆ, ಇನ್ನೂ ೨೦೦ ಕುದುರೆಗಳು ಬಾಕಿ ಇದೆ.’ ಎಂದ. ಗಾಲವ ಹಿಗ್ಗಿದ. ಗುರುವಿನ ಕಾಲಿಗೆ ಬಿದ್ದ. ಆಶೀರ್ವಾದ ಪಡೆದು ಕಾಡಿನತ್ತ ಹೆಜ್ಜೆ ಹಾಕಿದ, ತನ್ನದೇ ಆಶ್ರಮ ಸ್ಥಾಪಿಸಲು. ನನಗೆ ಅರ್ಥವಾಗಲಿಲ್ಲ. ಗಾಲವ ಮಾಡಿದ್ದಾದರೂ ಏನು? ಅಪರಿಚಿತ ಮೂರು ಪುರುಷರೊಂದಿಗೆ ಸಂಸಾರ ಮಾಡಿದ್ದು ನಾನು. ಮೂರು ಮಕ್ಕಳ ಹೆತ್ತೆ. ಈಗ ಏನು ಇಲ್ಲದೆ ಖಾಲಿಯಾಗಿ ನಿಂತಿದ್ದೇನೆ. ಇದು ಹೇಗಿದೆಯೆಂದರೆ, ಮಾಡಿದ ಪ್ರಾಣಿಬಲಿಗೆ ಮೆಚ್ಚಿ ದೇವರು ಮನುಷ್ಯನಿಗೆ ವರಕೊಟ್ಟಂತೆ.”

“ವಿಶ್ವಾಮಿತ್ರ ನನ್ನ ಸ್ವೀಕರಿಸಿದ. ನನ್ನ ಅಪ್ಪನಿಗಿಂತ ಹೆಚ್ಚಿನ ಪ್ರಾಯ ಅವನಿಗೆ. ವರ್ಷ ಕಳೆದು ಮಗ ಅಷ್ಟಕ ಹುಟ್ಟಿದ. ಮಗುವನ್ನು ತಾನು ಇಟ್ಟುಕೊಂಡು ನನ್ನನ್ನು ಅಪ್ಪನ ಅರಮನೆಗೆ ಕಳುಹಿಸಿದ. ಮಗ ಅಷ್ಟಕನಿಗೆ ಈ ಎಲ್ಲಾ ೬೦೦ ಕುದುರೆಗಳ ವಾರಸುದಾರನನ್ನಾಗಿ ಮಾಡುವುದಾಗಿ ಹೇಳಿದ. ನಂಗೆ ಕುದುರೆಗಳ ವ್ಯವಹಾರದಲ್ಲಿ ಆಸಕ್ತಿ ಇರಲಿಲ್ಲ.”

“ದಿಗ್ವಿಜಯ ಸಾಧಿಸಿ ಬಂದವಳಂತೆ ಅಪ್ಪ, ನನ್ನ ಅರಮನೆಯಲ್ಲಿ ಬರಮಾಡಿಕೊಂಡ. ನಾನು ಮೌನವಾಗಿ ಅಂತಃಪುರ ಸೇರಿದೆ. ನನ್ನ ಮದುವೆ ಮಾಡಲು ಸ್ವಯಂವರ ಏರ್ಪಡಿಸಿದ. ಆಶ್ಚರ್ಯವೆಂದರೆ, ಸ್ವಯಂವರಕ್ಕೆ ನನ್ನ ಮೂವರು ಗಂಡಂದಿರೂ ಬಂದಿದ್ದರು. ಒಂದು ಸುತ್ತು ಹಾರ ಹಿಡಿದು ಎಲ್ಲರ ಗಮನಿಸಿದೆ. ಅಲ್ಲಿಯೇ ಮಧ್ಯದಲ್ಲಿ ನಿಂತು ಬಿಟ್ಟೆ. ಕಣ್ಣು ಕತ್ತಲೆ ಬಂದು ಕುಸಿದು ಬಿಟ್ಟೆ. ದಾಸಿಯರು ಬಂದು ಆರೈಕೆ ಮಾಡಿದರು. ಕಣ್ಣು ತೆರೆದಾಗ ಅಪ್ಪ ಎದುರು ನಿಂತಿದ್ದ. ಕೈ ಹಿಡಿದು, ‘ಮಗಳೇ ಏನಾಯಿತು?’ ಎಂದ. ‘ಅಪ್ಪ, ನಾನು ನನಗೆ ಗಂಡ, ಮಕ್ಕಳು, ಸಂಸಾರದಲ್ಲಿ ಆಸಕ್ತಿ ಹೊರಟು ಹೋಗಿದೆ. ಯಾರನ್ನೂ ನಾನು ಮದುವೆಯಾಗುವುದಿಲ್ಲ. ನಾನು ಇನ್ನು ನಿನ್ನ ಅರಮನೆಯಲ್ಲಿಯೂ ಇರುವುದಿಲ್ಲ. ಕಾಡಿನಲ್ಲಿ ವಾಸವಾಗಿರುತ್ತೇನೆ. ವ್ಯವಹಾರದ ಮನುಷ್ಯ ಜಗತ್ತು ಉಸಿರು ಕಟ್ಟಿಸುತ್ತಿದೆ. ನನ್ನನ್ನು ಬಿಟ್ಟುಬಿಡು.’ ಎಂದು ಕೈಮುಗಿದೆ. ಅಪ್ಪ ಉಸಿರೆತ್ತಲಿಲ್ಲ. ಮೌನವಾಗಿ ಬದಿಗೆ ಸರಿದ. ಅಂತಃಪುರಕ್ಕೆ ನಡೆದು ಎಲ್ಲ ಆಭರಣ ಕಳಚಿಟ್ಟು ಹೊರಬಂದು, ಎಲ್ಲರಿಗೂ ಒಂದು ಸುತ್ತು ನಮಸ್ಕರಿಸಿ, ಕಾಡಿಗೆ ತೆರಳಿದೆ. ಮನುಷ್ಯರೊಂದಿಗೆ ಇರುವುದಕ್ಕಿಂತ ಕಾಡಿನಲ್ಲಿ ಜಿಂಕೆಯಂತೆ ಸ್ವಚ್ಚಂದವಾಗಿ ಇರುವುದು ಉತ್ತಮ. ಪ್ರಕೃತಿ ಎಂದಿಗೂ ನಿರಾಸೆ ಮಾಡುವುದಿಲ್ಲ, ಬದಲಿಗೆ ಶಾಂತಿ ನೆಮ್ಮದಿ ಕೊಡುತ್ತದೆ. ಅದೇ ನನ್ನ ಜೀವನಾನುಭವ.”

“ಮಾಧವಿ, ನಿನ್ನ ಕಥೆ ನನಗೆ ಜಿಗುಪ್ಸೆ ಹುಟ್ಟಿಸುತ್ತಿದೆ. ನಿನಗೆ ಏನೂ ಅನ್ನಿಸಲಿಲ್ಲವೇ?”

“ಹಾಗೆ ನೋಡಿದರೆ, ಬಹುಶಃ ಬಾಡಿಗೆ ತಾಯಿತನ ಅನುಭವಿಸಿದ ಮೊದಲ ಮಹಿಳೆ ನಾನೇ ಇರಬೇಕು. ನಂಗೇನು ಆರ್ಥಿಕ ತೊಂದರೆ ಇರಲಿಲ್ಲ. ರಾಜ ಪುತ್ರಿ ನಾನು. ಎಲ್ಲ ನನ್ನ ವಸ್ತುವಿನಂತೆ ಉಪಯೋಗಿಸಿ ಮುಂದಕ್ಕೆ ಕಳುಹಿಸಿದರು. ನಾಲ್ಕು ಮಕ್ಕಳ ಹೆತ್ತೆ. ನನ್ನ ಕೈಗೆ ಒಂದೂ ಸಿಗಲಿಲ್ಲ. ಎಷ್ಟಾದರೂ ಗಂಡು ಮಕ್ಕಳು ಅಪ್ಪನ ಹಕ್ಕು ಅಲ್ಲವೇ? ಎಲ್ಲರೂ ನನ್ನ ಉಪಯೋಗಿಸಿ ಒಂದಲ್ಲ ಒಂದನ್ನು ಪಡೆದರು- ಯಯಾತಿ ಕಷ್ಟದಲ್ಲಿದ್ದ ಬ್ರಾಹ್ಮಣ ಗಾಲವನಿಗೆ ಸಹಾಯ ಮಾಡಿ ದಾನಿಯೆನಿಸಿಕೊಂಡ, ಮಕ್ಕಳಿಲ್ಲದ ೩ ರಾಜರಿಗೆ ಗಂಡು ಮಕ್ಕಳು ಸಿಕ್ಕಿತು, ವಿಶ್ವಾಮಿತ್ರನಿಗೆ ೬೦೦ ಕುದುರೆ ಮತ್ತು ಗಂಡು ಮಗ, ಗಾಲವನಿಗೆ ಗುರುದಕ್ಷಿಣೆಯಿಂದ ಮುಕ್ತಿ ಸಿಕ್ಕಿತು. ಆದರೆ, ನನಗೆ ಮಾತ್ರ ಮೌನ, ಒಂಟಿತನ. ಸೇಡು ತೀರಿಸಿಕೊಳ್ಳಲು ಇದು ನನ್ನೊಬ್ಬಳೇ ಕಥೆಯೇ. ಎಲ್ಲ ಹೆಣ್ಣುಮಕ್ಕಳ ಕಥೆ.”

ಅವಳ ನಿರ್ಲಿಪ್ತತನ ನನ್ನ ಅವಕ್ಕಾಗಿಸಿತು.

“ಹೋಗಲಿ… ನೀನ್ಯಾಕೆ ಈಗ ಬಂದು ನಿನ್ನ ಕಥೆ ಹೇಳುತ್ತಿದ್ದಿಯೇ. ನಿನ್ನ ಕಥೆ ಯಾಕೆ ನಾವು ಓದಬೇಕು?”

ಅವಳು ನಿಟ್ಟುಸಿರು ಬಿಟ್ಟು ಹೇಳಿದಳು, ಸುನೀತಾ.. ಆಗಿ ಹೋಗಿರುವುದನ್ನು ತಿದ್ದಲಾಗದು.. ಆದರೆ, ಪಾಠ ಕಲಿತು ಮರುಕಳಿಸದಂತೆ ಬದುಕಲು ಸಾಧ್ಯ. ಆದರೆ, ಇನ್ನೂ ಮನುಷ್ಯ ಸುಧಾರಿಸಿಕೊಂಡಿಲ್ಲ. ಅದಕ್ಕೆ ನನ್ನಂತವರ ಕಥೆಗಳ ಪುನಃ ಓದಿ, ಪೂರ್ವದ ಸಂಗತಿಗಳಿಗೆ ವರ್ತಮಾನದ ಕನ್ನಡಿ ಹಿಡಿದು ಭವಿಷ್ಯವನ್ನು ಸರಿಪಡಿಸಲು ಪ್ರಯತ್ನಿಸುತ್ತಿರಬೇಕು. ಅಷ್ಟೇ… ಸೇಡಿನಿಂದ ಪ್ರಯೋಜನವಿಲ್ಲ…. ಮನಪರಿವರ್ತನೆ ಮುಖ್ಯ….

ಮಾಧವಿ ತಕ್ಷಣ ಕಣ್ಮರೆಯಾದಳು. ರೂಮ್ ಹಾಗೆಯೇ ಇತ್ತು. ನಾನು ಒಂಟಿಯಾಗಿ ಹಾಸಿಗೆಯಲ್ಲಿ ಕುಳಿತಿದ್ದೆ… ಅಂದರೆ… ನಾನಿಷ್ಟು ಹೊತ್ತು ಅವಳೊಂದಿಗೆ ಮಾತನಾಡಿದ್ದು ಭ್ರಮೆಯೇ?..