ಸಾಮಾನ್ಯ ಜನರು ಮಾರ್ಕೋನಿ ರಿಸೀವರ್‌ಗಳನ್ನು ಕೊಂಡು ಬೇರೆ ಬೇರೆ ತರಂಗಗಳನ್ನು ಕೈಯಲ್ಲಿ ಕಟ್ಟಿ ಹಾಕಿ ಆಲಿಸುವ ತಂತ್ರಜ್ಞಾನ ಹುಟ್ಟಿದ್ದು ಇಲ್ಲೇ, ಈ ವೆಲ್ಫ್ಲೀಟ್ ಎಂಬ ಚಿಕ್ಕ ಊರಿನಲ್ಲಿ. ರೇಡಿಯೋ ತರಂಗಗಳು ಹುಟ್ಟುಹಾಕಿದ ಕ್ರಾಂತಿ ಅದೆಷ್ಟು ಬೇಗ ಹಬ್ಬಿತೆಂದರೆ ಎಲ್ಲ ಹಡಗುಗಳಲ್ಲೂ ಮಾರ್ಕೋನಿ ಉಪಕರಣವಿತ್ತು. ಸುಪ್ರಸಿದ್ಧ ಟೈಟಾನಿಕ್ ಹಡಗು ಕೂಡ ಮುಳುಗುವ ಮೊದಲು ಮಾರ್ಕೊನಿ ಉಪಕರಣದ ಮೂಲಕ “SOS” ಸಂದೇಶ ಕಳಿಸಿತ್ತು, ಆ ಸಂದೇಶ ಬಹಳಷ್ಟು ಜನರ ಪ್ರಾಣ ಉಳಿಸಿತ್ತು. ಹೀಗೆ ಆರಂಭವಾದ ಇಪ್ಪತ್ತನೇ ಶತಮಾನದ ಆದಿ ಹೊಸ ಹಾತೊರಿಕೆಗಳಿಗೆ ನಾಂದಿಯಾಯಿತು.
ವೈಶಾಲಿ ಹೆಗಡೆ ಬರೆಯುವ ʻಜಗದ ಜಗಲಿಯಲಿ ನಿಂತುʼ ಪ್ರವಾಸ ಲೇಖನ ಮಾಲೆಯಲ್ಲಿ ಹೊಸ ಬರಹ

ನಾನಿರುವ ಮೆಸಾಚುಸೆಟ್ಸ್ ರಾಜ್ಯದ ಕೇಪ್ ಕಾಡ್, ಅಟ್ಲಾಂಟಿಕ್ ಸಮುದ್ರದೊಳಗೆ ನಾಲಗೆಯಂತೆ ಚಾಚಿಕೊಂಡ ತೆಳ್ಳನೆಯ ಭೂಪ್ರದೇಶದ ಜಾಗ. ನಲವತ್ತು ಮೈಲಿಗಳ ಸ್ವಚ್ಛ ಸುಂದರ ಮರಳ ತೀರ. ಅಲ್ಲಲ್ಲಿ ತಾಗಿ ಬೆಳೆದ ಕ್ರ್ಯಾಂಬೆರಿ ಜೌಗು, ದಿಬ್ಬಗಳ ಮೇಲೆ ಬಂದು ಮಲಗುವ ಡಾಲ್ಫಿನ್, ಸೀಲ್‌ಗಳ ತವರು. ತಾಜಾ ಮೀನೂಟದ ಊರುಗಳ ಸಾಲು. ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಹಿತ್ತಲಲ್ಲೇ ಇರುವ ಈ ಸುಂದರ ಸಮುದ್ರತೀರಕ್ಕೆ ಭೇಟಿ ನೀಡುವವರು ಬಹು ವಿರಳ. ಇಲ್ಲಿಯೇ ಇರುವ ಬಹಳಷ್ಟು ಜನರೆಲ್ಲಾ ಕೇಪ್ ಕಾಡ್ ಪ್ರದೇಶಕ್ಕೆ ಅಸಂಖ್ಯ ಬಾರಿ ಭೇಟಿ ನೀಡಿದರೂ ಮಾರ್ಕೋನಿ ಬೀಚಿಗೆ ಹೋಗಿ ಬಂದವರು ಸಿಗುವುದಿಲ್ಲ.

ಆದರೆ ಈ ಸುಂದರ ತೀರದ ನಡುವೆ ನಮ್ಮ ಬದುಕಿನ ರೀತಿಯನ್ನೇ ಬದಲಿಸಿದ ಜಾಗವೊಂದಿದೆ. ಸಮುದ್ರದಂಚಲ್ಲೊಂದು ಕೊರೆಯುತ್ತಾ ಕಾಣೆಯಾಗುತ್ತಿರುವ ಗುಡ್ಡವೊಂದಿದೆ. ಇಲ್ಲೊಂದು ಎತ್ತದರ ಮರಳ ದಿಬ್ಬದಂತ ಜಾಗವಿದೆ. ಅಲ್ಲಿ ಕಿವಿ ತೆರೆದು ಕುಳಿತುಕೊಳ್ಳಿ. ಎದುರಿಗೆ ತಗ್ಗಲ್ಲಿ ಭೋರ್ಗರೆವ ಹಸಿರು ನೀಲ ಕಡಲು. ಅಲೆಯೊಂದಿಗೆ ಈಜಿ ಬರುವ ಸೀಲ್ ಸಾಲು. ಕಣ್ಮುಚ್ಚಿ ಊಹಿಸಿಕೊಳ್ಳಿ, ಬಹುಶಃ ನೂರಾರು ವರ್ಷಗಳ ಹಿಂದೆಯೂ ಇದೇ ಅಲೆಗಳ ಹಿಂಡು ಹೀಗೆಯೇ ಭೋರಿಡುತ್ತಿತ್ತು. ಬೆನ್ನ ಹಿಂದಿನ ಜಾಗದಲ್ಲಿದ್ದ ಬೃಹದಾಕಾರದ ಗೋಪುರವೊಂದು ಕಟ್ಟ ಕಡ ಕಟ್ಟ ಎಂದು ಗಾಳಿಯಲೆಯೊಡನೆ ನೀರ ಅಲೆಯ ಮೇಲೆ ಸಂದೇಶ ರವಾನಿಸುತ್ತಿತ್ತು. ಅಲ್ಲಿ ಆಗ ಆ ಊರಲ್ಲಿ ಮೀನು ಹುರಿಯುತ್ತ ಕುಳಿತವರಿಗಾಗಲೀ, ಇಂದು ಹಾದಿ ತಪ್ಪುವ ವಲಸೆ ಹಕ್ಕಿಗಳ ಅಮ್ಮಂದಿರಿಗಾಗಲೀ, ಎದುರಿಗೆ ಆಡುತ್ತಿರುವ ಸೀಲ್‌ಗಳ ಅಜ್ಜಂದಿರಿಗಾಗಲೀ, ಮುಂದೊಂದು ದಿನ ಆಗಸದೆತ್ತರಕ್ಕೂ, ಸಾಗರದಾಳಕ್ಕೂ, ಸುತ್ತಲಿನ ಗಾಳಿಯೊಳಗೆಲ್ಲ ಸದಾ ಹರಿದಾಡುವ ನಿಸ್ತಂತು ಅಲೆಗಳ ರಾಶಿಯನ್ನು ಹರಿಬಿಡುತ್ತೇವೆಂಬ ಅರಿವು ಖಂಡಿತ ಇರಲಿಲ್ಲ.

ಜಗತ್ತಿನ ಮೊತ್ತ ಮೊದಲ ರೇಡಿಯೋ ಸಂದೇಶ, ವೈರ್‌ಲೆಸ್‌ ಸಂದೇಶ ಹೊತ್ತ ಅಲೆಯೊಂದು ಹೊರಟ ಜಾಗವಿದು. ನಾನಿಲ್ಲಿ ಟಂಕಿಸುವ ಈ ಎಲ್ಲ ಶಬ್ದಗಳು ನಿಮ್ಮ ಕೈಬೆರಳ ತುದಿಯಲ್ಲಿ ಓದಿಸಿಕೊಳ್ಳುವ ತಂತ್ರಜ್ಞಾನದ ಬುನಾದಿಯ ಜಾಗವಿದು. ರೇಡಿಯೋ, ಟೆಲಿವಿಷನ್, ಇಂಟರ್ನೆಟ್ ಎಲ್ಲದಕ್ಕೂ ಮುಂಚೆ ಹುಟ್ಟಿದ ವೈರ್ಲೆಸ್ ಟೆಲೆಗ್ರಾಫ್ ಕಂಡುಹಿಡಿದ ಗೂಲೆಲ್ಮೊ ಮಾರ್ಕೋನಿ ಕುಳಿತಿದ್ದ ಜಾಗವಿದು, “ಮಾರ್ಕೋನಿ ಬೀಚ್”.

ಕೇಪ್ ಕಾಡ್ ಪ್ರದೇಶದ ಸಮುದ್ರ ದಡದಲ್ಲಿ ತಲೆಯೆತ್ತಿದ ಮಾರ್ಕೋನಿ ರೇಡಿಯೋ ಕಂಪನಿ ಇದ್ದ ಚಿಕ್ಕ ಊರು ವೆಲ್ ಫ್ಲೀಟ್. ಇಂದು ಇದೆಲ್ಲ ಇಲ್ಲಿ ಇದ್ದಿದ್ದು ನಿಜವೋ ಸುಳ್ಳೋ ಎಂಬಂತೆ ತೋರುವ, ಯಾವ ಹಳೆಯ ಹಮ್ಮಿಲ್ಲದ, ಪ್ರಕೃತಿ ಸೌಂದರ್ಯದ ತವರಾಗಿರುವ ತನ್ನಷ್ಟಕ್ಕೆ ತಾನು ಇರುವ ಊರಿದು. ಜನ ಈಗ ಈ ಊರಿಗೆ ಮುಗಿ ಬೀಳುವುದು ಇಲ್ಲಿ ಸಿಗುವ ಪ್ರಶಾಂತ ಸೌಂದರ್ಯಕ್ಕೆ, ರುಚಿಕರ ಮೃದ್ವಂಗಿ ಸೂಪು “ಕ್ಲೆಮ್ ಚೌಡರ್” ಗೆ. ಊರಿನ ಇತಿಹಾಸ ಮಾತ್ರ ಬಗೆದರಷ್ಟೇ ಸಿಗುವಂಥದ್ದು.

ಇಟಾಲಿಯನ್ ವಿಜ್ಞಾನಿ ಮಾರ್ಕೋನಿ ಮೊಟ್ಟಮೊದಲು ರೇಡಿಯೋ ಅಲೆಗಳನ್ನು ಯಶಸ್ವಿಯಾಗಿ ದೂರದೂರದವರೆಗೆ ಯಾವುದೇ ತಂತಿಗಳಿಲ್ಲದೆ ರವಾನಿಸಲು ಸಾಧ್ಯ ಎಂದು ಸಾಬೀತುಪಡಿಸಿದ್ದು ಈ ಪುಟ್ಟ ಊರಿನ ತೀರದಲ್ಲಿ. ೧೯೦೧ ರಲ್ಲಿ ನಡೆದ ಯಶಸ್ವೀ ಪ್ರಯೋಗದ ನಂತರ ರೇಡಿಯೋ ತಂತ್ರಜ್ಞಾನ ಸ್ಫೋಟಕವಾಗಿ ಬೆಳೆಯಿತು ಎನ್ನಬಹುದು. ಅಂದು ಮಾರ್ಕೋನಿ ತನ್ನ ಉಪಕರಣದ ಮೂಲಕ ಸುಮಾರು ೨ ಮೇಲಷ್ಟು ದೂರದವರೆಗೆ ನಿಸ್ತಂತು ತರಂಗಗಳನ್ನು ರವಾನಿಸಿದ್ದಷ್ಟೇ ಅಲ್ಲದೆ, ಅದನ್ನು ಸೆರೆಹಿಡಿದು ಸಂಸ್ಕರಿಸಿದ್ದ. ಸಂದೇಶವನ್ನು ಸ್ಪಷ್ಟವಾಗಿ ಕಲಿಸುವ, ಕಲೆಹಾಕ್ವ ವಿದ್ಯೆಯನ್ನು ಸಾಧಿಸಿದ್ದ. ಮುಂದೆ ಅಲ್ಲಿ ಸಾಗರೋತ್ತರ ಸಂದೇಶಗಳಿಗಾಗಿ ಬೃಹತ್ ಗೋಪುರವೊಂದನ್ನು ನಿರ್ಮಿಸಿದ. ಅಮೆರಿಕಾದ ಅಧ್ಯಕ್ಷರ ಸಂದೇಶ ಎನಗಿಂದಿನ ರಾಜನಿಗೆ ತಲುಪಿಸಿದ್ದ. ಜಾಗತಿಕೆ ಸಂವಹನಕ್ಕೆ ಹೊಸ ಕ್ರಾಂತಿ ಆರಂಭವಾಗಿತ್ತು. ಮುಂದೆ ಈ ಗೋಪುರ, ತಂತ್ರಜ್ಞಾನವೆಲ್ಲ ಮೊದಲನೇ ಮಹಾಯುದ್ಧದಲ್ಲಿ ಅತಿ ವೇಗದಲ್ಲಿ ಬಳಕೆಯಾದವು.

ಕೆನಡಾದ ರೇಡಿಯೋ ಸ್ಟೇಷನ್ ಒಂದು ಮಾರ್ಕೋನಿ ತಂತ್ರಜ್ಞಾನ ಬಳಸಿ ೧೯೦೪ರಲ್ಲಿ ಸುದ್ದಿ ಬಿತ್ತರಿಸಲಾರಂಭಿಸಿತು. ಸಾಮಾನ್ಯ ಜನರು ಮಾರ್ಕೋನಿ ರಿಸೀವರ್‌ಗಳನ್ನು ಕೊಂಡು ಬೇರೆ ಬೇರೆ ತರಂಗಗಳನ್ನು ಕೈಯಲ್ಲಿ ಕಟ್ಟಿ ಹಾಕಿ ಆಲಿಸುವ ತಂತ್ರಜ್ಞಾನ ಹುಟ್ಟಿದ್ದು ಇಲ್ಲೇ, ಈ ವೆಲ್ಫ್ಲೀಟ್ ಎಂಬ ಚಿಕ್ಕ ಊರಿನಲ್ಲಿ. ರೇಡಿಯೋ ತರಂಗಗಳು ಹುಟ್ಟುಹಾಕಿದ ಕ್ರಾಂತಿ ಅದೆಷ್ಟು ಬೇಗ ಹಬ್ಬಿತೆಂದರೆ ಎಲ್ಲ ಹಡಗುಗಳಲ್ಲೂ ಮಾರ್ಕೋನಿ ಉಪಕರಣವಿತ್ತು. ಸುಪ್ರಸಿದ್ಧ ಟೈಟಾನಿಕ್ ಹಡಗು ಕೂಡ ಮುಳುಗುವ ಮೊದಲು ಮಾರ್ಕೊನಿ ಉಪಕರಣದ ಮೂಲಕ “SOS” ಸಂದೇಶ ಕಳಿಸಿತ್ತು, ಆ ಸಂದೇಶ ಬಹಳಷ್ಟು ಜನರ ಪ್ರಾಣ ಉಳಿಸಿತ್ತು. ಹೀಗೆ ಆರಂಭವಾದ ಇಪ್ಪತ್ತನೇ ಶತಮಾನದ ಆದಿ ಹೊಸ ಹಾತೊರಿಕೆಗಳಿಗೆ ನಾಂದಿಯಾಯಿತು. ತಂತ್ರಜ್ಞಾನದ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿತು. ರೇಡಿಯೋ, ರೇಡಾರ್, ಮೈಕ್ರೋವಾವ್, ಸೆಲ್ಯೂಲರ್ ಕಮ್ಯೂನಿಕೇಷನ್ ಎಂದು ಮಾರ್ಕೋನಿ ತೋರಿದ ಹಾದಿಯನ್ನು ಹೆದ್ದಾರಿಯಾಗಿಸಿ ಸಾಗಿತ್ತು ತಂತ್ರಜ್ಞಾನ. ಇದೆಲ್ಲಕ್ಕೂ ಸಾಕ್ಷಿಯಾಗಿ ಮಲಗಿತ್ತು ಕೇಪ್ ಕಾಡ್ ನ್ಯಾಷನಲ್ ಸೀ ಶೋರ್.

ಬಾಸ್ಟನ್ ನಗರ ಪ್ರದೇಶದಿಂದ ಸುಮಾರು ಎರಡು ತಾಸಿನ ಕಾರು ಪ್ರಯಾಣದಲ್ಲಿ ನೀವು ಕೇಪ್ ಕಾಡ್ ತಲುಪಬಹುದು. ಬೇಸಿಗೆಯಲ್ಲಾದರೆ, ಬೆಂಗಳೂರಿನ ಟ್ರಾಫಿಕ್‌ಅನ್ನು ಮೀರಿಸುವಂಥ ಟ್ರಾಫಿಕ್ ಜಾಮಲ್ಲಿ ಸಿಲುಕಿ, ಮುಖ್ಯ ಭೂ ಪ್ರದೇಶವನ್ನು ಕೆಪಿಕಾಡ್‌ನ ಮುಖಜಭೂಮಿಗೆ ಜೋಡಿಸುವ ಒಂದೇ ಒಂದು ಸೇತುವೆಯನ್ನು ದಾಟಲು ಮೂರುಗಂಟೆ ತಗಲುವ ಸಮಯವನ್ನು ಲೆಕ್ಕ ಹಾಕಿದರೆ, ಒಂದು ಇಡೀ ದಿನದ ಗೋಳು. ಒಮ್ಮೆ ಕೇಪ್ ಕಾಡ್ ಕೊಂಡಿಯನ್ನು ಸೇರಿಕೊಂಡಿರೋ, ಎಲ್ಲ ಮರೆತು ಹೊಸದೊಂದು ಲೋಕ ಎದುರುಗೊಳ್ಳುವುದು. ಕೇಪ್ ಕಾಡ್ ನ್ಯಾಷನಲ್ ಸೀಶೋರ್ ರಾಷ್ಟ್ರೀಯ ಉದ್ಯಾನದ ಭಾಗ. ಈ ತೀರದ ಉದ್ದಕ್ಕೂ ಕಾಲುಹಾದಿಯ ಅಥವಾ ಸೈಕಲ್ಲು ಓಡಿಸಲು ಬರುವಂಥ ಟ್ರೇಲ್ ಗಳಿವೆ. ಸುಂದರ ತೀರ, ಜೌಗು, ಪೊದೆಗಳ ಮೂಲಕ ಹಾದು ಸಾಗುವ ಈ ಟ್ರೇಲ್ ಒಂದು ವಿಶಿಷ್ಟ ಹಾದಿ. ಬೆಳಗ್ಗೆ ಒಂದು ತುದಿಯಿಂದ ಹೊರಟರೆ, ಕೋಸ್ಟ್ ಗಾರ್ಡ್ ಬೀಚ್, ನಾಸಾನ್ಟ್ ಲೈಟ್ ಹೌಸ್ ಎಂದು ಹೀಗೆ ಹಲವು ಜಾಗಗಳಲ್ಲಿ ಅಲ್ಲಲ್ಲಿ ಸೈಕಲ್ ನಿಲ್ಲಿಸಿ, ಅಲೆಗಳಲ್ಲಿ ಮುಳುಗೇಳಿ, ಮತ್ತೆ ಇನ್ನೊಂದು ತೀರದಲ್ಲೊ, ಹತ್ತಿರದ ಚಿಕ್ಕ ರೆಸ್ಟೋರೆಂಟಿನಲ್ಲೋ ಇಳಿದು, ತಿಂದು ಮುಂದೆ ಸಾಗಬಲ್ಲಂತ ಹಾದಿ ಇದು. ಈ ಹಾದಿಯ ನಟ್ಟ ನಡುವೆ ಎಡಭಾಗದಲ್ಲೊಂದು ಪುಟ್ಟ ಚಂದದ ದೀಪಸ್ತಂಭವಿದೆ. ಅದರ ಎದುರಲ್ಲೊಂದು ಚಿಕ್ಕಹಾದಿ ಮಾರ್ಕೋನಿ ಬೀಚಿಗೆ ದಾರಿ ಎಂದು ಬೋರ್ಡ್ ತಗಲಿಸಿಕೊಂಡು ನಿಂತಿದೆ. ಬಹಳಷ್ಟು ಜನರ ಕಣ್ಣಿಗೆ ಈ ಬೋರ್ಡ್ ಕಾಣುವುದಿಲ್ಲ. ಇದೂ ಒಂದು ಇಲ್ಲಿನ ಹತ್ತಾರು ಬೀಚ್‌ಗಳಲ್ಲಿ ಮತ್ತೊಂದು ಎಂದುಕೊಂಡು ಮುಂದೆ ಸಾಗಿದರೆ ನೀವು ಕಳಕೊಳ್ಳುವಂಥದ್ದೇನೂ ಇಲ್ಲ ಇಲ್ಲಿ. ನಿಜ, ಇತಿಹಾಸದ ಅರಿವಿಲ್ಲದಿದ್ದರೆ ಇದು ಇಲ್ಲಿನ ಹಲವು ಬೀಚ್‌ಗಳಂತೆಯೇ ಒಂದು ಸುಂದರ ಬೀಚ್.

(ಫೋಟೋಗಳು: ಲೇಖಕರವು)

ನಾನಿಲ್ಲಿ ಟಂಕಿಸುವ ಈ ಎಲ್ಲ ಶಬ್ದಗಳು ನಿಮ್ಮ ಕೈಬೆರಳ ತುದಿಯಲ್ಲಿ ಓದಿಸಿಕೊಳ್ಳುವ ತಂತ್ರಜ್ಞಾನದ ಬುನಾದಿಯ ಜಾಗವಿದು. ರೇಡಿಯೋ, ಟೆಲಿವಿಷನ್, ಇಂಟರ್ನೆಟ್ ಎಲ್ಲದಕ್ಕೂ ಮುಂಚೆ ಹುಟ್ಟಿದ ವೈರ್ಲೆಸ್ ಟೆಲೆಗ್ರಾಫ್ ಕಂಡುಹಿಡಿದ ಗೂಲೆಲ್ಮೊ ಮಾರ್ಕೋನಿ ಕುಳಿತಿದ್ದ ಜಾಗವಿದು, “ಮಾರ್ಕೋನಿ ಬೀಚ್”.

ನಾವು ಬೆಳಗಿನಿಂದ ಸೈಕಲ್ ಹತ್ತಿ ಇಳಿಯುತ್ತ ತಣ್ಣಗೆ ಕೊರೆವ ಅಟ್ಲಾಂಟಿಕ್ ಸಮುದ್ರದಲ್ಲಿ ಮುಳುಗೇಳುತ್ತಾ ಮಾರ್ಕೋನಿ ಬೀಚಿಗೆ ಬರುವಷ್ಟರಲ್ಲಿ ಉರಿಬಿಸಿಲು ಏರಿತ್ತು. ನಮ್ಮ ನಮ್ಮ ಸವಾರಿಗಳನ್ನು ಅಲ್ಲೊಂದು ಬೇಲಿಗೆ ಒರಗಿಸಿದ ಮೇಲೆ ಚಿಕ್ಕ ಕಾಲುಹಾದಿಯೊಂದು ಮರಳಲ್ಲಿ ಮುಳುಗೇಳುತ್ತಾ ಕುರುಚಲುಗಳ ಬಳಸಿ ಕರೆದೊಯ್ಯುತ್ತಲಿತ್ತು. ನಡೆಯುತ್ತಾ ನಡೆಯುತ್ತಾ ಇನ್ನೇನು ಈ ಎತ್ತರದ ಗುಡ್ಡ ಕೊನೆಗೊಳ್ಳುತ್ತಿದೆ ಎನ್ನುವಷ್ಟರಲ್ಲಿ ಎದುರಿಗೆ ತೆರೆದುಕೊಳ್ಳುವುದು ಮಾರ್ಕೋನಿ ರೇಡಿಯೋ ಟವರ್ ಸೈಟ್. ಅಲ್ಲಿ ಆ ಗೋಪುರವಾಗಲೀ, ಸುತ್ತಲೂ ಇದ್ದ ರಿಸೀವರ್ ಕಂಬಗಳಾಗಲೀ ಯಾವುದೂ ಇಲ್ಲ. ಟವರ್ ಇದ್ದ ಜಾಗದಷ್ಟೇ ಅಗಲದ ಒಂದು ದೊಡ್ಡ ಡೆಕ್ ಆ ಜಾಗವನ್ನು ಆವರಿಸಿಕೊಂಡು, ಆ ಗೋಪುರ ಇದ್ದಿರಬಹುದಾದ ಅಗಾಧತೆಯ ಅಳತೆ ಕೊಡುತ್ತದೆ. ಪಕ್ಕದಲ್ಲೊಂದು ಪಳೆಯುಳಿಕೆ, ಸಿಮೆಂಟು ಕಲ್ಲಿನ ಮೇಲೆ ಮೂಲ ಸ್ಥಾವರದ ಗುರುತಿದೆ. ೧೯೦೧ರಲ್ಲಿ ಅಮೆರಿಕಾದ ಅಧ್ಯಕ್ಷ ಥಿಯೊಡೊರ್ ರೂಸವೆಲ್ಟ್, ಇಂಗ್ಲೆಂಡಿನ ರಾಜ ಕಿಂಗ್ ಜಾರ್ಜ್ ಗೆ ಕಳುಹಿಸಿದ ಸಂದೇಶದ ಐತಿಹಾಸಿಕ ಸಾಕ್ಷಿಯಾಗಿ, ಯಾವುದೇ ಬಿಂಕವಿಲ್ಲದೆ ಸಿಮೆಂಟಿನ ಗಟ್ಟಿಯೊಂದು ಲೋಹದ ಫಲಕವನ್ನು ಬಡಿಸಿಕೊಂಡು ಬಿದ್ದುಕೊಂಡಿದೆ. ಅಲ್ಲಲ್ಲಿ ಇಟ್ಟಿಗೆ, ಸಿಮೆಂಟು, ಕಬ್ಬಿಣದ ಅಡಿಪಾಯದ ಕುರುಹುಗಳಿವೆ. ಮತ್ತೆಲ್ಲವನ್ನು ಕೊರೆವ ಸಮುದ್ರ, ಕುರುಚಲು ಆವರಿಸಿಕೊಂಡಿದೆ.

ನಡೆಯುತ್ತಾ ಹಾಗೆ ದಿಬ್ಬದ ಅಂಚಿಗೆ ಬಂದರೆ ಅದೊಂದು ಅಗಾಧ ಕೊರಕಲು. ಕೊಂಚ ಕೊಂಚವೇ ಸವೆಯುತ್ತಾ ಸಾಗರಕ್ಕೆ ಜಾರುತ್ತಿರುವ ಮರಳ ದಿಬ್ಬ. ಸಮುದ್ರದ ಅಲೆಯ ಹೊಡೆತ ಸಣ್ಣಗೆ ಎಲ್ಲವನ್ನೂ ತಿನ್ನುತ್ತಾ ಒಳನುಗ್ಗುತ್ತಿದೆ. ಅಡ್ಡ ಬೀಸುವ ಗಾಳಿಗೆ ಹಾರುವ ಮರಳ ದಿಬ್ಬ ಹೈರಾಣಾಗಿ ಉದುರಿ ಬೀಳುತ್ತಿದೆ. ಈ ಸವೆತದ ಕಾರಣವಾಗಿಯೇ ಮಾರ್ಕೋನಿ ಗೋಪುರ ಇಲ್ಲಿ ಬಹಳ ದಿನ ಉಳಿಯಲಿಲ್ಲ. ೧೯೦೧ರಲ್ಲಿ ಕಟ್ಟಿದ ಗೋಪುರಗಳನ್ನು ಮೊದಲನೇ ಮಹಾಯುದ್ಧದ ನಂತರ, ೧೯೧೭ರಲ್ಲಿ ಅಮೇರಿಕನ್ ನೇವಿ ಎಷ್ಟು ಸಾಧ್ಯವೋ ಅಷ್ಟು ಭಾಗಗಳನ್ನು ಉಳಿಸಿಕೊಂಡು ಸ್ಥಳಾಂತರಿಸಿ, ಉಳಿದ ಭಾಗವನ್ನು ಕೆಡವಿತ್ತು. ದಿನೇ ದಿನೇ ಸವೆಯುತ್ತಿದ್ದ ಮಾರ್ಕೋನಿ ಬೀಚ್, ಕಾಯ್ದಿಟ್ಟ ಪ್ರದೇಶವಾಯಿತು. ನ್ಯಾಷನಲ್ ಸೀ ಶೋರ್ ನಲ್ಲಿನ ಹಲವು ಬೀಚ್‌ಗಳನ್ನು ಕಾಯ್ದಿಟ್ಟ ತೀರಗಳೆಂದು ಘೋಷಿಸಲಾಗಿದೆ. ಮಾರ್ಕೋನಿ ಬೀಚಿನ ಬಹುಪ್ರದೇಶ ಕೂಡ ಇಂಥ ಕಾಯ್ದಿಟ್ಟ ಪ್ರದೇಶದಲ್ಲಿದೆ.

ಇಂದು ಎದುರಿಗೆ ಕಾಣುವ ಸಮುದ್ರದಲೆಗಳಿಗಿಂತಲೂ ದಟ್ಟವಾಗಿ ರೇಡಿಯೋ ಅಲೆಗಳು ನಮ್ಮ ಸುತ್ತಲೂ ಇವೆ, ಆದರೆ ಇಲ್ಲೀಗ ರೇಡಿಯೋ ಟವರ್‌ಗಳ ಅಬ್ಬರವಿಲ್ಲ. ಮಾರ್ಕೋನಿ ಬೀಚ್ ಇಂದು ನಯನ ಮನೋಹರ ಸಮುದ್ರದಲೆಗಳ ಜೊತೆಗೆ ಸೀಲ್ ಕೇಕೆಗಳ ತಾಣವಾಗಿದೆ. ಮರಳಂಚಲ್ಲಿ ಏಡಿಗಳು ಆಡುತ್ತವೆ. ಕಾಡು ಕ್ರಾನ್ ಬೆರಿ ಕುರುಚಲುಗಳು ಸುತ್ತಲೂ ಇವೆ. ಮನುಷ್ಯ ಸಂಚಾರವಿಲ್ಲದ ತೀರದಲ್ಲಿ ಪ್ರಕೃತಿ ತನ್ನ ಹಕ್ಕು ಸ್ಥಾಪಿಸಿದೆ. ವಿಪರ್ಯಾಸವೆಂದರೆ ಅಟ್ಲಾಂಟಿಕ್ ಸಾಗರೋಲ್ಲಂಘನ ಮಾಡಿ ಖಂಡಾಂತರ ಸಂದೇಶ ರವಾನಿಸಿದ ಮಾರ್ಕೋನಿ ಬೀಚ್‌ನಲ್ಲಿ, ನಿಮಗೀಗ ಮೊಬೈಲ್ ಸಿಗ್ನಲ್ ಸಿಗುವುದಿಲ್ಲ. ಜಗತ್ತಿನ ಆಧುನಿಕ ಸಂವಹನಕ್ಕೆ ನಾಂದಿ ಹಾಡಿದ ಮಾರ್ಕೋನಿ ಕೊನೆಯುಸಿರು ಎಳೆದ ದಿನ ಮಾರ್ಕೋನಿಯ ಗೌರವಾರ್ಥವಾಗಿ, ಇಡೀ ಜಗತ್ತಿನ ಎಲ್ಲ ವೈರಲೆಸ್, ರೇಡಿಯೋ ಸ್ಥಾವರಗಳು ಕೆಲಸಮಯ ಯಾವುದೇ ತರಂಗಗಳನ್ನು ಬಿತ್ತರಿಸದೆ ತಣ್ಣಗೆ ನಿಂತಿದ್ದವು. ಇಂಥದ್ದೊಂದು ಗೌರವ ಇಂದಿನವರೆಗೂ ಯಾವ ವಿಜ್ಞಾನಿಗೂ ದೊರೆತಿಲ್ಲ. ಆಧುನಿಕ ಜೀವನದ ಮೇಲೆ ಅದರಲ್ಲೂ ಸ್ವಚ್ಛ ನೀರು, ಬೆಳಕು ಸಿಗದ ಕಡೆಯಲ್ಲೂ ಮೊಬೈಲ್ ಸಿಗ್ನಲ್ ಸಿಗುವ ಇಂದಿನ ದಿನಗಳಲ್ಲಿ, ಮಾರ್ಕೋನಿ ಕೊಟ್ಟ ಕೊಡುಗೆ ಊಹೆಗೂ ಮೀರಿದ್ದು.

ಬನ್ನಿ ಸುಮ್ಮನೆ ದಿಬ್ಬದಂಚಿಗೆ ಕುಳಿತುಕೊಳ್ಳಿ, ಸೀಲ್ ಕೇಕೆ ಕೇಳಿ ತೆರೆಯ ಅಬ್ಬರ ಆಲಿಸಿಕೊಳ್ಳಿ. ಇವೆಲ್ಲದರ ನಡುವೆ ಕಣ್ಮುಚ್ಚಿ ನೂರಾ ಇಪ್ಪತ್ತು ವರ್ಷಗಳ ಹಿಂದೆ ಹೊರಟ ಕಟ್ಟ ಕಡೆಯ ಕಟ್ಟಾ ರೇಡಿಯೋ ತರಂಗ ಕೇಳಿಸೀತೋ ನೋಡಿ. ಹುಡುಕಿ, ನಿಮಗಾಗಿ ಹೊರಟ ಸಂದೇಶವೊಂದು ಅಸಂಖ್ಯ ಅಲೆಗಳ ನಡುವೆ ಗಾಳಿಯಲ್ಲಿ ಕಳೆದು ಹೋಗದಂತೆ ಹೆಕ್ಕಿಕೊಳ್ಳಿ.