ಒಂದು ರಾತ್ರಿಯ ತಪಸ್ಸು

ಕಾಡಂಚಿನ ಮುಕ್ಕಾದ ಮಂಟಪದಲ್ಲಿ
ನೂರು ಕಥೆ ಸಾರುವ ಜೇಡರಬಲೆ
ನನ್ನ ಹಾಗೆ ಆಯಾಸಗೊಂಡ
ಅದೆಷ್ಟೋ ತರಗೆಲೆಗಳು
ಮೊಕ್ಕಾಮ್ ಹೂಡಿದ
ಪಲ್ಲಿ ಚೇಳು ಹಾವರಾಣಿಗಳ ಪರಿವಾರಗಳ ನಿಶ್ಯಬ್ದವಾದ ಗದ್ದಲದ ನಡುವಲ್ಲಿ
ಕೂತು ತಪಸ್ಸು ಮಾಡಬೇಕಿದೆ

ಕೃಷ್ಣಪಕ್ಷದ ಹದಿನೈದನೇ ದಿನ
ನನಗಲ್ಲಿ ಕಾಣುವುದು
ಕದ್ದಿಂಗಳ ಬೆಳಕು
ಕವಿಗಳ ಪುಸ್ತಕ ಸೇರಿಕೊಂಡ ನಕ್ಷತ್ರಗಳು
ಊಳಿಡುವ ಮರಗಳು
ಕವಿಮಿತ್ರನೊಬ್ಬ ಹೇಳಿದ್ದ
“ಹೋದ ಜನ್ಮದಲಿ ಹೆಣ್ಣಾಗಿ ಹುಟ್ಟಿದವರು
ಈ ಜನ್ಮದಲಿ ಮರವಾಗಿ ಬರುತ್ತಾರೆ”
ಅದಕ್ಕೆ ನನಗೆ ಕಂಡ ಮರಗಳ
ಕದಪುಗಳಲ್ಲಿ ಬರೀ ಕಣ್ಣೀರ ಕಲೆಗಳು

ಮಾಡಬೇಕಿದೆ ಒಂದೇ ರಾತ್ರಿಯ ತಪಸ್ಸು
ಮನಸ್ಸಿನ ತಪಸ್ಸು ದೇಹದ ತಪಸ್ಸು
ವಿಷ್ಣುವಿನ ಏಕಾಂತಕ್ಕೂ ದಕ್ಕೆ ತರಲಿ
ಒಳಗೆ ಸುಡುವ ಬೆಂಕಿಗೆ
ಹಸಿಮಾಂಸ ಹದವಾಗಿ ಬೇಯಲಿ
ಕುದಿವ ರಕ್ತ ಮತ್ತಷ್ಟು ಮಗದಷ್ಟು ಕುದ್ದು
ಶಾಂತವಾಗಿಬಿಡಲಿ
ಒಳಗಣ್ಣು ದಗದಗ ಉರಿವಾಗ
ಹೊರಗಣ್ಣು ಮೃದುವಾಗಿ ಮುಗುಳ್ನಗಲಿ

ಮಾಲತಿ ಶಶಿಧರ್ ಚಾಮರಾಜನಗರದವರು
ಗಣಿತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಬರೆಯುವುದು ಮತ್ತು ಓದುವುದು ಇವರ ಹವ್ಯಾಸಗಳು