ಮಣ್ಣಿನ ಮಾಡಣಿ

ಬದುಕಿರುವವರೆಗೂ ಎತ್ತರೆತ್ತರ
ಹಾರಿ ಆಕಾಶದ ಪದರ
ಹೊಕ್ಕೆನೆಂಬ ಹಕ್ಕಿಯ ಸೊಕ್ಕು
ವಿಶಾಲ ರೆಕ್ಕೆಗಳು ಬಲಿಷ್ಠ
ಹಾರಿತು ತನ್ನೊಡಲ ಶಕ್ತಿಮೀರಿ

ನೋಡಿದೆ, ಬರೆದೆ, ಹಾಡಿದೆ
ಕುಣಿದೆ, ಅನುಭವಿಸಿದೆ, ಸುಖಿಸಿದೆನೆಂಬ
ಉನ್ಮಾದಗಳಲ್ಲಿ ಲೀನ
ಕಾರ್ಮೋಡ, ಅಮಾವಾಸ್ಯೆಯ ವಾಸನೆಯಿಲ್ಲ
ಹೊನ್ನಿನ ಬೆಳದಿಂಗಳು ಜೀವನ

ಕಳೆದ ದಿನಗಳ ಸುಖದ
ಹೋಳಿಗೆಯನ್ನುನ್ನುತ್ತ ಕ್ಷಣ
ಮರೆವ ಅನಿವಾರ್ಯ ಸಾವು
ಬೇಡದ ಪ್ರಸಾದ ಅದು
ಸರದಿಯಲ್ಲಿ ನಿಲ್ಲದೆಯೂ ಸಿಗುವುದು

ವ್ಯತ್ಯಾಸ ಸೃಷ್ಟಿಯ
ನಿಸ್ಸೀಮ ದೇವರು ಯಾಕೊ
ಸಾವಲ್ಲಿ ಒಂದೇ ನೀತಿ ನೇಮ
ಬಡವ, ಶ್ರೀಮಂತ, ಮಗು, ಯುವಕ, ಮುದಿ
ಮೇಲಿನಕೇರಿ ಕೆಳಕೇರಿ ಒಂದೇ

ಹೊತ್ತ ಆರೆಂಟು ಜನಕ್ಕೆ
ಎನಿಸಿಲ್ಲ ಸತ್ತ ದೇಹ ಭಾರ
ಯಾವ ವಿಧಿ ವಿಧಾನ ಯಾರಿಗೆ
ಒಂಭತ್ತು ತೂತೂ ನಿಷ್ಕ್ರೀಯ
ಅನಾಥ ದೇಹ ಮಣ್ಣಿನ ಮಾಡಣಿಯೊಳಗೆ

ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.
ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ.
ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ