ಮತ್ತೊಂದು ವರ್ಷ ಮುಗಿದಿದೆ. ಎಷ್ಟೋ ಜನ ಹರೆಯದವರು ಹನ್ನೆರಡು ವರ್ಷದ ಶಾಲೆಯ ಓದು ಮುಗಿಸಿ, ಕೆಲಸಕ್ಕೋ, ಅಪ್ರೆಂಟೀಸಿಗೋ, ವಿಶ್ವವಿದ್ಯಾಲಯಕ್ಕೋ ಲಗ್ಗೆ ಇಡಲು ತಯಾರಾಗಿದ್ದಾರೆ. ಇನ್ನೊಂದೆರಡು ವಾರದಲ್ಲಿ ಅವರಲ್ಲಿ ಹಲವರು ಇದರಲ್ಲಿ ಯಾವುದಾದರೂ ಒಂದಕ್ಕೆ ಸೇರಿಕೊಳ್ಳುತ್ತಾರೆ. ಕೆಲವರು ಎಲ್ಲ ದೇಶಗಳಲ್ಲಿರುವಂತೆ ಇಲ್ಲಿಯೂ ಗೊಂದಲದಲ್ಲಿರುತ್ತಾರೆ. ಅಂತಹವರಲ್ಲಿ ಕೆಲವರು ಏನೂ ಮಾಡದೆ ಸುಮ್ಮನೆ ಇರುತ್ತಾರೆ. ಇನ್ನು ಕೆಲವರು ಸರಿಯಾದ ಬೆಂಬಲವಿಲ್ಲದೆ ಬೀದಿಗೆ ಬೀಳುತ್ತಾರೆ. ಇದರ ಬಗ್ಗೆ ಆಸ್ಟ್ರೇಲಿಯದ ಅಂಕಿ-ಅಂಶ ನನಗೆ ಗೊತ್ತಿಲ್ಲ. ಆದರೆ ಹೀಗೆಲ್ಲ ಇರುತ್ತಾರೆ ಎಂಬುದಂತೂ ಹೌದು.

ನಮ್ಮ ಇಂಡಿಯದ ಹರೆಯದವರ ಕತೆಯೂ ಅಷ್ಟೆ. ಅತಿ ಹೆಚ್ಚಿನವರು ವಿಶ್ವವಿದ್ಯಾಲಯಕ್ಕೆ ಹೋಗುತ್ತಾರೆ. ಕುತ್ತಿಗೆ ಹಿಸುಕುವಷ್ಟು ಒತ್ತಾಯಿಸಿ ಓದಿಸುವ ಅತಿರೇಕದ ನಮ್ಮವರಲ್ಲಿ ಬೆಂಬಲವಿಲ್ಲದ ಮಕ್ಕಳು ಕಡಿಮೆ. ಇಲ್ಲಿನ ಇಂಡಿಯದವರಲ್ಲಿ ಮಾತ್ರ ಅತ್ಯಂತ ರಕ್ಷಿತ ಮಕ್ಕಳಿರಬೇಕು ಅಂದುಕೊಳ್ಳಬೇಡಿ. ಬಡದೇಶಗಳಿಂದ ಬಂದ, ಸಾಂಪ್ರದಾಯಿಕ ಸಮಾಜದಿಂದ ಬಂದ, ಆರ್ಥಿಕ ಕಾರಣಕ್ಕೆ ಬಂದ ಬಹುಪಾಲು ಕುಟುಂಬಗಳಲ್ಲೂ ಇದು ದಿಟ.

ಇದೆಲ್ಲಕ್ಕೂ ಒಂದು ನಾಟಕೀಯ ತಿರುವು ಬರುವುದು ಮಕ್ಕಳು ಹದಿನೆಂಟು ವಯಸ್ಸು ಮುಟ್ಟಿದಾಗ. ಆಸ್ಟ್ರೇಲಿಯಾದಲ್ಲಿ ಆಗ ಅವರನ್ನು ವಯಸ್ಕರೆಂದು ಪರಿಗಣಿಸುತ್ತಾರೆ. ಜತೆಗೆ ಅವರ ವ್ಯವಹಾರದಲ್ಲಿ ಸಮಾಜ ಹಾಗು ಕಾನೂನು ತಂದೆತಾಯಿಯರನ್ನು ಹೊರಗಿಡುತ್ತದೆ. ಮಕ್ಕಳೂ ತಾವು ವಯಸ್ಕರಾದಾಗ ಸ್ವಂತ ನಿರ್ಣಯಗಳಿಗೆ ತೆರೆದುಕೊಳ್ಳುತ್ತಾರೆ. ತೆರೆದುಕೊಳ್ಳಬೇಕಾಗುತ್ತದೆ.

ಶಾಲೆ ಮುಗಿಸಿ ಬೇರೆ ಬೇರೆ ದಾರಿಹಿಡಿಯುವ ಗೆಳೆಯರು ಕಡೆಯ ಬಾರಿಗೆಂಬಂತ ಪಾರ್ಟಿ ಮಾಡುವುದು ಸಾಮಾನ್ಯ. ಹದಿನೆಂಟು ದಾಟಿದ ಇವರು ತಾವೇ ಮೊದಲ ಬಾರಿಗೆ ಹೋಗಿ ರಾಜಾರೋಷವಾಗಿ ಆಲ್ಕೋಹಾಲ್ ಕೊಳ್ಳಬಹುದಾದ್ದರಿಂದ ಈ ಪಾರ್ಟಿಗಳಿಗೆ ರಂಗೇರುತ್ತದೆ. ಇಂಡಿಯದ ಮಕ್ಕಳ ಇಂತಹ ಪಾರ್ಟಿಗಳು ಸಾಮಾನ್ಯವಾಗಿ ತಂದೆತಾಯಿಯರ ಬೆನ್ನ ಹಿಂದೆ ನಡೆಯುತ್ತದೆ. ಬೇರೆಯವರಲ್ಲಾದರೋ ತಂದೆತಾಯಿಯರಿಗೆ ತಮ್ಮ ಮಕ್ಕಳು ಕುಡಿಯುತ್ತಾರೆ, ಮೋಜು ಮಾಡುತ್ತಾರೆ ಎಂದು ಗೊತ್ತಿರುತ್ತದೆ. ಈ ಪಾರ್ಟಿಗಳು ಅವರ ಸಮ್ಮುಖದಲ್ಲಿ ನಡೆಯದಿದ್ದರೂ ಮುಚ್ಚಿಡುವಂತಹದಾಗಿರುವುದಿಲ್ಲ. ಆದರೆ ಮುಚ್ಚಿಡುವುದನ್ನೇ ಒಳ್ಳೆಯತನ ಅಂದುಕೊಳ್ಳುವ ಇಂಡಿಯದ ಹೆತ್ತವರಿಗೆ ಅನುಮಾನ ಮಾತ್ರ ಕಾಡುತ್ತಿರುತ್ತದೆ.

ಇತ್ತೀಚೆಗೆ ನಡೆದ ಇಂಡಿಯದ ಹುಡುಗನೊಬ್ಬನ ಪಾರ್ಟಿಯ ಬಗ್ಗೆ ಹೇಳುತ್ತೇನೆ. ನನಗೆ ಹೇಗೆ ಗೊತ್ತಾಯಿತು ಎಂದು ಕೇಳಬೇಡಿ. ಹಾಗೇನೆ, ನಾನು ಹೇಳಿದೆ ಎಂದು ದಯವಿಟ್ಟು ಯಾರಿಗೂ ಹೇಳಬೇಡಿ.

ಮಗ ಹಾಳಾಗಿಹೋಗುತ್ತಾನೆ ಎಂದು ಹೆದರಿದ ಇಂಡಿಯದ ಹೆತ್ತವರು, ಬೇರೆಲ್ಲೋ ಪಾರ್ಟಿ ಮಾಡಬೇಡ ಎಂದು ತಾವೇ ಒಂದು ಸಣ್ಣ ಹಾಲು ಬುಕ್ಕು ಮಾಡಿಸಿಕೊಟ್ಟಿದ್ದರು. ಹತ್ತು ಹದಿನೈದು ಜನ ಗೆಳೆಯರ ಜತೆ ಸಂಗೀತ ಹಾಕಿಕೊಂಡು ಒಂದು ಸಂಜೆ ಕಳೆಯಲಿ ಎಂದು ಹರಸಿದ್ದರು. ಮಗ ತಾನೇ ಪಿಜ್ಜಾ ತರಿಸಿಕೊಡುತ್ತೇನೆ ಅಂದದ್ದರಿಂದ ಆ ತಾಯಿ ಅಡುಗೆ ಮಾಡಿರಲಿಲ್ಲ. ರಾತ್ರಿ ಹನ್ನೆರಡಕ್ಕೆ ಹಾಲಿನ ಬುಕಿಂಗ್ ಮುಗಿಯುತ್ತದೆ. ನೀವು ಪಾರ್ಟಿ ಮುಗಿಸಬೇಕು ಎಂದು ತಾಕೀತು ಮಾಡಿ ಹೋದರು.

ಆ ಮಗ ಅಲ್ಲಿಲ್ಲಿ ಪಾರ್ಟ್ ಟೈಂ ಕೆಲಸ ಮಾಡಿ ಒಂದಷ್ಟು ದುಡ್ಡು ಕೈಗೂಡಿಸಿಕೊಂಡಿದ್ದ. ಗೆಳೆಯರೆಲ್ಲಾ ಸೇರಿ ಬೇಕಷ್ಟು ಆಲ್ಕೋಹಾಲ್ ತರಿಸಿಕೊಂಡರು. ಹದಿನೈದು, ಇಪ್ಪತ್ತು ಜನರ ಪಾರ್ಟಿ, ಗೆಳೆಯರ ಗೆಳೆಯರು ಎಂದು ಬೆಳೆದು ಎಂಬತ್ತಕ್ಕೆ ಮುಟ್ಟಿತ್ತು! ಅವರಲ್ಲಿದ್ದ ಕೆಲವು ಜಾಣ ಇಂಡಿಯನ್ ಹುಡುಗರು, ಬೇಗ ಬೇಗನೇ ಬೇಕಷ್ಟು ಕುಡಿದು, ರಾತ್ರಿ ಹನ್ನೆರಡರ ಒಳಗೆ ಮನೆಗೆ ಹೊರಟು ಹೋದರು. ಉಳಿದವರು ಚೆನ್ನಾಗಿ ಕುಡಿದು ಕುಣಿದು ಸಂತಸಪಟ್ಟರು. ಆ ಹರೆಯದವರಿಗೆ ಹೊತ್ತು ಹೋದದ್ದೇ ಗೊತ್ತಾಗಿಲ್ಲ. ಪಿಜ್ಜಾವೂ ಮರೆತು ಹೋಗಿದೆ. ಆ ಹಾಲ್‌ನ ಪಕ್ಕದ ಪಾರ್ಕಿನ ತುಂಬಾ ಇವರು ಕುಡಿದು ಬಿಸುಟ ಬಾಟಲಿಗಳು. ಇದ್ದಕ್ಕಿದ್ದಂತೆ ಕಂಡುಕೊಂಡ ಸ್ವಾತಂತ್ಯ್ರವನ್ನು “ಮಿಕ್ಕಿ ಮೀರಿ” ಅನುಭವಿಸಿದರು! ಹೀಗಿರುತ್ತಾ ಸಂಭವಿಸಬಾರದ್ದು ಸಂಭವಿಸಿಯೇ ಬಿಟ್ಟಿತು.

ಆ ಇಂಡಿಯನ್ ಮಗನ ಇಂಡಿಯನ್ ತಂದೆ ತಾಯಿ ಧುತ್ತಂದೆ ಪ್ರತ್ಯಕ್ಷವಾದರು. ರಾತ್ರಿ ಎರಡು ಗಂಟೆ ಕಳೆದಿದೆ. ಇಲ್ಲಿನ್ನೂ ಪಾರ್ಟಿ ಮುಗಿದಿಲ್ಲದಿರುವುದು ನೋಡಿ ಕಿಡಿಕಿಡಿಯಾದರು. ಮಗನನ್ನು ತರಾಟೆಗೆ ತೆಕ್ಕೊಂಡರು. ಕೂಡಲೆ ಪಾರ್ಟಿ ಮುಗಿಸು ಎಂದು ಅಬ್ಬರಿಸಿದರು. ಬಿಸಿಬಿಸಿ ಮಾತುಗಳು ಹಾರಾಡಿದವು. ಕಡೆಗೂ ಒಲ್ಲದ ಮನಸ್ಸಿನಿಂದ ಹುಡುಗರೇ ಪಾರ್ಕನ್ನೆಲ್ಲಾ ಕ್ಲೀನ್ ಮಾಡಿದರು. ಅವನ ಗೆಳೆಯರೆಲ್ಲಾ “ಇಂಡಿಯನ್ ಪೇರೆಂಟ್ಸೇ ಇಷ್ಟು” ಎಂದು ಗೊಣಗಿಕೊಳ್ಳುತ್ತಾ, ಬೈದುಕೊಳ್ಳುತ್ತಾ ಚದುರಿದರು. ಹೆತ್ತವರು ಒಲ್ಲದ ಮನಸ್ಸಿನ ಮಗನನ್ನು ಮನೆಗೆ ಎಳೆದುಕೊಂಡು ಹೋದರು. ಇತ್ತ ಪಾರ್ಟಿಗೆ ಬಂದಿದ್ದ ಹಲವರು ಗುಂಪಾಗಿ ಇಷ್ಟುದಿನ ಅವರಿಗೆ ಪ್ರವೇಶವಿರದಿದ್ದ ಕಿಂಗ್ಸ್ ಕ್ರಾಸ್ ಎಂಬ ಕ್ಯಾಬರೆ, ಸೆಕ್ಸ್ ಅಂಗಡಿಗಳ ಕಡೆ ಹೊರಟದ್ದು ಆ ತಂದೆ ತಾಯಿಯರಿಗೆ ಗೊತ್ತಾಗುವುದು ಸಾಧ್ಯವೇ ಇರಲಿಲ್ಲ!

ಬೇಸಿಗೆಯಲ್ಲಿ ಬಹು ಬೇಗ ಬೆಳಗಾಗುವ ಆಸ್ಟ್ರೇಲಿಯದಲ್ಲಿ – ತುಸು ಹೊತ್ತಿಗೆ ಆಕಾಶ ಮೆಲ್ಲಗೆ ಬೆಳಕಾಗಲು ತೊಡಗುತ್ತದೆ. ಮನೆಯಲ್ಲಿ ಆ ಮಗನಿಗೆ ಕಣ್ಣಿಗೆ ನಿದ್ದೆ ಹತ್ತುವ ಮೊದಲೆ ಹೊರಗಿನ ಮರಗಳಲ್ಲಿ ಹಕ್ಕಿಗಳಿಗೆ ಬೆಳಗಿನ ಸೂಚನೆ ಬಂದಿರುತ್ತದೆ. ಪೂರ್ವದಲ್ಲಿ ಮರಗಳ ಹಾಗು ಬೆಟ್ಟಗಳ ಹಿಂದೆ ಸೂರ್ಯ ಹೊಂಚುತ್ತಿರುತ್ತಾನೆ.

ದುರ್ಗತಿಯ ಸಂಸ್ಕೃತಿ, ಸ್ವೇಚ್ಛಾಚಾರ ಎಂದು ನೀವೆಲ್ಲಾ ರಾದ್ಧಾಂತ ಮಾಡಿಕೊಳ್ಳುವ ಮೊದಲು ಒಂದೆರಡು ವಿಷಯ ಹೇಳಿ ಬಿಡುತ್ತೇನೆ. ಈ ಹುಡುಗರಲ್ಲಿ ಹಲವರು ಮುಂದೆ ಡಾಕ್ಟರು, ಇಂಜಿನಿಯರು, ಪ್ರೊಫೆಸರುಗಳು ಆಗುತ್ತಾರೆ. ಇವರಷ್ಟೇ ಅಲ್ಲ, ಈಗ ದೊಡ್ಡ ಪಟ್ಟದಲ್ಲಿರುವವರೆಲ್ಲಾ ಹೀಗೇ ಬೆಳೆದು ಬಂದವರೇ. ಸ್ವೇಚ್ಛೆಯ ಅಂಚಲ್ಲಿ ತಮ್ಮ ಜವಾಬ್ದಾರಿ ಅರಿತವರು. ಪ್ರಾಮಾಣಿಕವಾಗಿ ಮುಂದೆ ಸುತ್ತಲಿನವರ ಒಳಿತಿಗೆ ದುಡಿದವರು. ಮಿಕ್ಕಿ ಮೀರಿ ಹೋಗಿ, ಹಿಂತಿರುಗಿ, ನೈತಿಕತೆ ಹೇರವಂತಹುದಲ್ಲ ಎಂದು ಕಂಡುಕೊಂಡವರು. ಎಲ್ಲರಿಗೂ ತಮ್ಮ ತಮ್ಮ ನೈತಿಕತೆಯನ್ನು ಕಂಡುಕೊಳ್ಳುವ ಅವಕಾಶ ಇರುವಂತೆ ಎದೆಗುಂದದೆ ನೋಡಿಕೊಂಡವರು. ಇವೆಲ್ಲಾ ಇಲ್ಲಿ ಪ್ರಾಮಾಣಿಕತೆ ಮತ್ತು ನಿಯತ್ತು ಇರಲು ಬಹು ದೊಡ್ಡ ಕಾರಣವೇನೋ ಅನಿಸಿತು. ಆ ಇಂಡಿಯನ್ ಹುಡುಗನ ಅವಾಂತರಕ್ಕೆ ಒಳಗೊಳಗೇ ನಗು ಬಂತು.