ಬಹುಶಃ ಸುಮಾರು ಹೊತ್ತಿನಿಂದ ಒಂದೇ ಕಡೆ ಕೂತಿದ್ದರಿಂದ ಕೈಕಾಲು ಜೋಮು ಹಿಡಿದಂತೆನಿಸಿ ಅಧಿಕಾರಿಗೂ ಸ್ವಲ್ಪ ವಿರಾಮ ಬೇಕೆನ್ನಿಸಿರಬಹುದು. ನನ್ನ ದೈಹಿಕ ಪರೀಕ್ಷೆಯ ಕಡೆಯ ಹಂತದಲ್ಲಿ ವಾರೆಂಟ್ ಆಫೀಸರ್ ಮುಂದೆ ನಿಂತೆ. ಆತನ ಮುಂದಿದ್ದ ಮೇಜಿನಲ್ಲಿ ಪೇರಿಸಿಟ್ಟ ಅರ್ಜಿಗಳಿದ್ದವು. ಆತ ನನ್ನನ್ನು ತೀಕ್ಷ್ಣವಾಗಿ ನೋಡಿನಿನ್ನಿಂದ ಮಿಲಿಟರಿ ಸೇವೆಗೆ ಏನೂ ಆಗಬೇಕಾದ್ದಿಲ್ಲಎಂದರು. ಅದು ನಿಜ ಕೂಡ ಆಗಿತ್ತು. ಫೆಸಿಫಿಕ್ ಯುದ್ಧದಲ್ಲಿ ಜಪಾನ್ ಸೋಲುವವರೆಗೂ ನನ್ನನ್ನು ಸೇನೆಗೆ ಸೇರಲು ಆಹ್ವಾನಿಸಿರಲಿಲ್ಲ. ಟೊಕಿಯೊ ನಗರವು ಅಮೆರಿಕನ್ ವಾಯುದಾಳಿಗೆ ಸಿಲುಕಿ ಸರ್ವನಾಶವಾಗಿ ಹೋಗಿತ್ತು.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವ ಆತ್ಮಕತೆಯ ಅಧ್ಯಾಯ.

 

1930 ರಲ್ಲಿ ನನಗಾಗ ಇಪ್ಪತ್ತು ವರ್ಷ. ಸೇನೆಗೆ ನೇಮಿಸುವ ಮೊದಲು ಸೇನೆಯ ದೈಹಿಕ ಪರೀಕ್ಷೆಗೆ ಹಾಜರಾಗುವಂತೆ ನನಗೆ ಪತ್ರ ಬಂದಿತು. ಈ ಪರೀಕ್ಷೆ ಉಶಿಗೋಮಾದ ಪ್ರಾಥಮಿಕ ಶಾಲೆಯಲ್ಲಿ ನಿಗದಿಪಡಿಸಲಾಗಿತ್ತು.

ಅಲ್ಲಿನ ಅಧಿಕಾರಿಯ ಎದುರು ನೆಟ್ಟಗೆ ಅಟೆಂಶನ್ ಭಂಗಿಯಲ್ಲಿ ನಿಂತೆ. “ನೀನು ಟೊಯಾಮ ಅಕಾಡಮಿಯಿಂದ ಪದವಿ ಪಡೆದು ಶಾಲೆಯಲ್ಲಿ ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕುರೊಸೊವ ಯುಟಾಕ ಅವರ ಮಗನಾ?” ಎಂದು ಕೇಳಿದರು. “ಹೌದು ಸರ್” ಎಂದೆ. “ನಿಮ್ಮ ತಂದೆ ಚೆನ್ನಾಗಿದ್ದಾರಾ?” ಎಂದು ಕೇಳಿದರು. “ಹೌದು ಸರ್”. “ನಾನು ನಿಮ್ಮ ತಂದೆಯ ವಿದ್ಯಾರ್ಥಿಯಾಗಿದ್ದೆ. ಅವರಿಗೆ ನನ್ನ ನಮಸ್ಕಾರ ತಿಳಿಸು” “ಸರಿ ಸರ್” “ನೀನು ಏನು ಮಾಡಬೇಕು ಅಂತಿದ್ದೀಯಾ?” “ನಾನು ಚಿತ್ರಕಲಾವಿದ ಸರ್” (ಪ್ರಗತೀಶೀಲ ಕಲಾವಿದ ಅಂತ ಹೇಳಲಿಲ್ಲ). “ಓ ಸರಿ” “ ಮಿಲಿಟರಿ ಸೇವೆಯ ಹೊರತಾಗಿಯೂ ದೇಶಕ್ಕಾಗಿ ಸೇವೆ ಸಲ್ಲಿಸಲು ಹಲವು ದಾರಿಗಳಿವೆ. ಅವುಗಳನ್ನು ಮಾಡು” ಎಂದು ಹೇಳಿದರು “ಸರಿ ಸರ್” ಎಂದೆ.

“ಆದರೆ ನೀನು ತುಂಬಾ ವೀಕ್ ಆಗಿದೀಯ. ನಿನ್ನ ದೇಹದ ಭಂಗಿ (posture) ಸರಿಯಿಲ್ಲ. ಸ್ವಲ್ಪ ದೈಹಿಕ ವ್ಯಾಯಾಮಗಳನ್ನು ಮಾಡಬೇಕು. ಈ ರೀತಿಯ ವ್ಯಾಯಾಮಗಳು ನಿನ್ನ ಬೆನ್ನೆಲುಬನ್ನು ನೆಟ್ಟಗೆ ಮಾಡಿ ನಿನ್ನ ಭಂಗಿಯನ್ನು ಸರಿಮಾಡುತ್ತೆ” ಎಂದು ಹೇಳಿ ಆತ ಎದ್ದು ನಿಂತು ಒಂದಷ್ಟು ವ್ಯಾಯಾಮಗಳನ್ನು ಮಾಡಿ ತೋರಿಸಿದರು. ಆ ವಯಸ್ಸಿನಲ್ಲೂ ನಾನು ದುರ್ಬಲನಾಗಿದ್ದೆ.

ಬಹುಶಃ ಸುಮಾರು ಹೊತ್ತಿನಿಂದ ಒಂದೇ ಕಡೆ ಕೂತಿದ್ದರಿಂದ ಕೈಕಾಲು ಜೋಮು ಹಿಡಿದಂತೆನಿಸಿ ಆ ಅಧಿಕಾರಿಗೂ ಸ್ವಲ್ಪ ವಿರಾಮ ಬೇಕೆನ್ನಿಸಿರಬಹುದು. ನನ್ನ ದೈಹಿಕ ಪರೀಕ್ಷೆಯ ಕಡೆಯ ಹಂತದಲ್ಲಿ ವಾರೆಂಟ್ ಆಫೀಸರ್ ಮುಂದೆ ನಿಂತೆ. ಆತನ ಮುಂದಿದ್ದ ಮೇಜಿನಲ್ಲಿ ಪೇರಿಸಿಟ್ಟ ಅರ್ಜಿಗಳಿದ್ದವು. ಆತ ನನ್ನನ್ನು ತೀಕ್ಷ್ಣವಾಗಿ ನೋಡಿ “ನಿನ್ನಿಂದ ಮಿಲಿಟರಿ ಸೇವೆಗೆ ಏನೂ ಆಗಬೇಕಾದ್ದಿಲ್ಲ” ಎಂದರು. ಅದು ನಿಜ ಕೂಡ ಆಗಿತ್ತು. ಫೆಸಿಫಿಕ್ ಯುದ್ಧದಲ್ಲಿ ಜಪಾನ್ ಸೋಲುವವರೆಗೂ ನನ್ನನ್ನು ಸೇನೆಗೆ ಸೇರಲು ಆಹ್ವಾನಿಸಿರಲಿಲ್ಲ. ಟೊಕಿಯೊ ನಗರವು ಅಮೆರಿಕನ್ ವಾಯುದಾಳಿಗೆ ಸಿಲುಕಿ ಸರ್ವನಾಶವಾಗಿ ಹೋಗಿತ್ತು. ಆಮೇಲೆ ನಾನು ಸಿನೆಮಾ ನಿರ್ದೇಶಕನಾದೆ. ಮಿಲಿಟರಿ ಸೇವೆಯೊಂದಿಗೆ ಇದೊಂದೇ ನನ್ನ ಅನುಭವ. ಹಾಗಾಗಿ ಅದನ್ನಿಲ್ಲಿ ವಿವರಿಸಿದೆ.

ಆ ಸಮಯದಲ್ಲಿ ಸೇನೆಗೆ ಬಲವಂತವಾಗಿ ಸೇರಿದವರು ಅಂಗವಿಕಲರಾದರು ಇಲ್ಲವೇ ಹುಚ್ಚರಾಗಿಬಿಟ್ಟರು. ನಾವೆಲ್ಲರೂ ನಮ್ಮ “ಸರ್ವೀಸ್ ಚೀಲ”ಗಳನ್ನು (ಮಿಲಿಟರಿ ಸೇವೆಗೆ ಹಾಜರಾಗಲು ಅಗತ್ಯವಾದ ಸಾಮಾನುಗಳನ್ನು ಹೊಂದಿದ್ದ ಚೀಲ) ಸದಾ ತಯಾರಾಗಿಟ್ಟುಕೊಂಡಿದ್ದು ಯಾವಾಗ ಕರೆದರೂ ಹಾಜರಾಗಬೇಕಿತ್ತು. ಈ ಚೀಲಗಳನ್ನು ತಪಾಸಣೆ ಮಾಡುತ್ತಿದ್ದರು. ನನ್ನ ಚೀಲದ ತಪಾಸಣೆ ಮಾಡಿದ ಅಧಿಕಾರಿ “ಈತ ಎಲ್ಲವನ್ನೂ ಇಟ್ಟುಕೊಂಡಿದ್ದಾನೆ” ಎಂದರು. ಚೀಲದಲ್ಲಿ ಎಲ್ಲವೂ ಇರಲೇಬೇಕಿತ್ತು ಏಕೆಂದರೆ ಅದನ್ನು ಸಿದ್ಧಮಾಡಿದ್ದು ನನ್ನ ಸಹಾಯಕ ನಿರ್ದೇಶಕ. ಆತ ಆ ವೇಳೆಗಾಗಲೇ ಮಿಲಿಟರಿ ಸೇವೆಗೆ ಹೋಗಿಬಂದಿದ್ದ. ಇದನ್ನೇ ಯೋಚಿಸುತ್ತಾ ನಿಂತಿದ್ದಾಗ ಅಲ್ಲಿದ್ದ ತನಿಖಾಧಿಕಾರಿ “ಸಲ್ಯೂಟ್! ಸಲ್ಯೂಟ್!” ಎಂದು ಪಿಸುಗುಟ್ಟಿದ. ತಕ್ಷಣ ಎಚ್ಚೆತ್ತುಕೊಂಡು ಆತನಿಗೆ ಸಲ್ಯೂಟ್ ಮಾಡಿದೆ. ಆತ ಪ್ರತಿನಮಸ್ಕಾರ ಹೇಳಿ ಸಾಲಿನಲ್ಲಿ ನನ್ನ ಪಕ್ಕದಲ್ಲಿದ್ದ ವ್ಯಕ್ತಿಯತ್ತ ಹೋದ. ನನ್ನ ಸರ್ವೀಸ್ ಬ್ಯಾಗ್ ನೋಡಿ ಹೊಗಳಿದ ಮರುಕ್ಷಣವೇ ಬೈಯುತ್ತಾರಲ್ಲ ಅಂತಂದುಕೊಂಡೆ. ಅದನ್ನೇ ಯೋಚಿಸುತ್ತಾ ನಿಂತಿದ್ದಾಗಲೇ ಆತ ಜೋರಾಗಿ ಬೈಯುತ್ತಿರುವುದು ಕೇಳಿಸಿತು.

“ನಿನ್ನ ಸರ್ವೀಸ್ ಬ್ಯಾಗಿಗೇನಾಯಿತು?”. ಕುಡಿಗಣ್ಣಲ್ಲೇ ಅತ್ತ ನೋಡಿದೆ. ಆ ತನಿಖಾಧಿಕಾರಿ ನನ್ನ ಪಕ್ಕದಲ್ಲಿ ನಿಂತಿದ್ದವನನ್ನು ನೋಡುತ್ತಿದ್ದ. ಆ ವ್ಯಕ್ತಿ ಹರಿದುಹೋಗಿದ್ದ ಎರಡು ಜೊತೆ ಚಡ್ಡಿಗಳನ್ನು ಸೇರಿಸಿ ಗಂಟುಹಾಕಿ ತಂದಿದ್ದ. ಆತ ಹಾಕಿದ್ದ ಗಂಟು ಮೊಲದ ಬಾಲದ ತರಹ ಕಾಣಿಸುತ್ತಿತ್ತು. ಆತ ತನಿಖಾಧಿಕಾರಿಯನ್ನೇ ಮುಗ್ಧವಾಗಿ ನೋಡುತ್ತಾ “ಸರ್ವೀಸ್ ಬ್ಯಾಗ್ ಅಂದರೇನು?” ಅಂತ ಕೇಳಿದ. ತನಿಖಾಧಿಕಾರಿಯ ಹಿಂದೆ ನಿಂತಿದ್ದ ಮಿಲಿಟರಿ ಅಧಿಕಾರಿ ಮುನ್ನುಗ್ಗಿ ಬಂದು ಆ ಮೊಲದ ಬಾಲದ ವ್ಯಕ್ತಿಗೆ ಹೊಡೆದ.

ಅದೇ ಸಮಯಕ್ಕೆ ಸರಿಯಾಗಿ ವಾಯುದಾಳಿಯ ಸೈರನ್ ಗಳನ್ನು ಕೂಗಲಾರಂಭಿಸಿತು. ಯೊಕೊಹಾಮದಲ್ಲಿ (Yokohama) ಬಾಂಬಿನ ದಾಳಿ ಆರಂಭವಾಗಿತ್ತು. ಅದೇ ನನ್ನ ಮಿಲಿಟರಿ ಸೇವೆಯ ಕೊನೆಯಾಗಿತ್ತು.

ಒಂದು ವೇಳೆ ನಾನು ಆಯ್ಕೆಯಾಗಿಬಿಟ್ಟಿದ್ದರೆ ಏನಾಗುತ್ತಿತ್ತು ಅಂತ ಯೋಚಿಸುತ್ತೇನೆ. ಮಾಧ್ಯಮಿಕ ಶಾಲೆಯಲ್ಲೀ ಮಿಲಿಟರಿ ತರಬೇತಿಯಲ್ಲಿ ಅನುತ್ತೀರ್ಣನಾಗಿದ್ದೆ. ನನ್ನ ಹತ್ತಿರ ಪ್ರಮಾಣಪತ್ರ ಕೂಡ ಇರಲಿಲ್ಲ. ಸೈನ್ಯದಲ್ಲಿರಲು ಯಾವುದೇ ಅವಕಾಶವಿರಲಿಲ್ಲ. ಅಕಸ್ಮಾತ್ ಎಂದಾದರೂ ಕೆಕಾ ಮಾಧ್ಯಮಿಕ ಶಾಲೆಯಲ್ಲಿದ್ದ ಮಿಲಿಟರಿ ಅಧಿಕಾರಿಯನ್ನು ಸಂಧಿಸಿದ್ದಲ್ಲಿ ನನ್ನ ಕತೆ ಮುಗಿದೇಹೋಗಿರುತ್ತಿತ್ತು. ನನ್ನ ದೈಹಿಕ ಪರೀಕ್ಷೆ ನಡೆಸಿದ ಅಧಿಕಾರಿಗೆ ಅಭಾರಿಯಾಗಿರಬೇಕು ಅಥವ ನನ್ನ ತಂದೆಗೆ ಆಭಾರಿಯಾಗಿರಬೇಕು.