ಇವತ್ತು ರಾತ್ರಿ, ಮಲಗುವ ಮೊದಲು, ಸ್ವಲ್ಪ ಹೊತ್ತು ಹೊರಗೆ ಸುತ್ತಾಡಬೇಕು ಅನಿಸಿತು. ಮನೆಯೊಳಗೆ ನಚ್ಚಗೆ ಹಿತವಾಗಿತ್ತು, ಹಳಸಲು ಗಾಳಿ ಅನಿಸಿತು.ಬಾಗಿಲು ಮುಚ್ಚಿಕೊಂಡೇ ಇತ್ತು. ಬಿಳಿಯ, ಸಾದಾ, ಖಾಲಿ ಬಾಗಿಲು, ಒಗಟಿನ ಹಾಗೆ. ತಲೆ ಎತ್ತಿ ನೋಡಿದೆ. ಬಾಗಿಲಿನಲ್ಲಿ, ಮೇಲೆ ಇದ್ದ ಗಾಜಿನ ಚೌಕದಲ್ಲಿ ಇಷ್ಟಗಲ ಆಕಾಶ ಕಂಡಿತು. ಬೀದಿಯ ಆಚೆ ಬದಿಯಲ್ಲಿದ್ದ ಪೈನ್ ಮರಗಳ ಮೊನಚು, ಕಪ್ಪು ತುದಿಗಳು ಆಕಾಶಕ್ಕೆ ಚುಚ್ಚಿಕೊಂಡಿದ್ದವು.
ಪ್ರೊಫೆಸರ್ ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಸಿಲ್ವಿಯಾ ಪ್ಲಾತ್ ದಿನಚರಿ ಬರಹಗಳ ನಾಲ್ಕನೆಯ ಕಂತು.

12.
ಒಂದೊಂದು ಸಲ ‘ಇಗೋ, ಇಗೋ’ ಅನ್ನುವಂಥ ನಿರೀಕ್ಷೆಯ ಭಾವ ಇರುತ್ತದೆ. ನನ್ನ ತಿಳಿವಳಿಕೆಯ ಪಾತಳಿಯ ಕೆಳಗೆ ಏನೋ ಇದೆ, ನಾನು ಕೈ ಹಾಕಿ ಹಿಡಿಯಲಿ ಅಂತ ಕಾಯುತ್ತಿದೆ ಅನ್ನುವ ಹಾಗೆ. ಯಾರದೋ ಹೆಸರು, ಯಾವುದೊ ಪದ ಇನ್ನೇನು ನೆನಪಿಗೆ ಬಂತು, ಬಂತು ಅನ್ನಿಸಿ, ಬರದೆ ಚಡಪಡಿಕೆಯಾಗುತ್ತದಲ್ಲ—ಹಾಗೆ. ಮನುಷ್ಯರ ವಿಸ್ಡಂ ಟೀತನ್ನು, ಒರಟಾದ ಆಹಾರ ಅಗೆಯುವುದಕ್ಕೆ ಬೇಕಾಗಿಲ್ಲ ಎಂದು ತೆಗೆಸಿ ಹಾಕುತ್ತೇವಲ್ಲ, ಮನುಷ್ಯರ ಮೈಮೇಲಿನಿಂದ ಅಪಾರ ಸಾವಕಾಶವಾಗಿ ಕಣ್ಮರೆಯಾಯಿತಲ್ಲ, ಇಪ್ಪತ್ತನೆಯ ಶತಮಾನದ ಸಣ್ಣ ಅಕ್ಷರ ಓದುವುದಕ್ಕೆ, ಚುರುಕಾದ, ಬಣ್ಣದ ಚಲನೆಯನ್ನು ಗ್ರಹಿಸುವುದಕ್ಕೆ ಕಣ್ಣು ಹೊಂದಿಕೊಂಡಿತಲ್ಲ, ಇಂಥವೆಲ್ಲ ಮನುಷ್ಯ ವಿಕಾಸದ ಸೂಚನೆಗಳು. ನಮ್ಮ ಮನುಷ್ಯ ಕುಲದ ನಿಡಿದಾದ ಹರೆಯ, ಹುಟ್ಟು, ಮದುವೆ, ಸಾವಿನ ಆಚರಣೆಗಳು—ಆಧುನಿಕ ಕಾಲಕ್ಕೆ ಹೊಂದಿಸಿಕೊಂಡ ಪ್ರಾಚೀನ ಬರ್ಬರ ಆಚರಣೆಗಳು: ವಿಚಾರದ ಸೋಂಕಿರದ, ಶುದ್ಧ ಮೃಗೀಯ ಆಚರಣೆಗಳು ಅನಿಸುತ್ತವೆ.

ಓಹ್… ಅಲ್ಲೇನೋ ಇದೆ, ನನಗಾಗಿ ಕಾಯುತ್ತಾ. ಇವತ್ತಲ್ಲ ನಾಳೆ ಅದೇನು ಅನ್ನುವುದು ಅರಿವಿಗೆ ಸ್ಪಷ್ಟವಾಗುತ್ತದೆ. ಆಗ ಬದುಕೆಂಬ ದೊಡ್ಡ ಸ್ಮರಣಿಕೆಯಂಥ ಜೋಕು ತಿಳಿಯುತ್ತದೆ, ನಗುತೇನೆ. ಬದುಕೆಂದರೆ ಏನೆನ್ನುವುದು ಆಗ ನನಗೆ ತಿಳಿಯುತ್ತದೆ.

13.
ಇವತ್ತು ರಾತ್ರಿ, ಮಲಗುವ ಮೊದಲು, ಸ್ವಲ್ಪ ಹೊತ್ತು ಹೊರಗೆ ಸುತ್ತಾಡಬೇಕು ಅನಿಸಿತು. ಮನೆಯೊಳಗೆ ನಚ್ಚಗೆ ಹಿತವಾಗಿತ್ತು, ಹಳಸಲು ಗಾಳಿ ಅನಿಸಿತು. ಪೈಜಾಮ ತೊಟ್ಟಿದ್ದೆ, ಆಗತಾನೇ ತೊಳೆದುಕೊಂಡು ಬಂದಿದ್ದ ತಲೆಗೂದಲು ಗುಂಗುರಾಗಲೆಂದು ರೋಲರ್ ಗಳಿಗೆ ಸುತ್ತಿಕೊಂಡಿದ್ದೆ. ಬಾಗಿಲು ತೆರೆಯಲು ನೋಡಿದೆ. ಹಿಡಿ ತಿರುಗಿಸುತಿದ್ದ ಹಾಗೆ ಬೀಗ ಬಿತ್ತು. ಹ್ಯಾಂಡಲ್ ತಿರುಗಿಸಿದೆ. ಬಾಗಿಲು ತೆರೆಯಲಿಲ್ಲ. ಹೆದರಿ, ಇನ್ನೊಂದು ದಿಕ್ಕಿಗೆ ತಿರುಗಿಸಿದೆ ಹ್ಯಾಂಡಲನ್ನು. ಉಹೂಂ. ಬೀಗ ಹಿಡಿದು ತಿರುಚಿದೆ. ಬೀಗ ಮತ್ತು ಹ್ಯಾಂಡಲನ್ನು ನಾಲ್ಕು ಥರ ಮಾತ್ರ ತಿರುಗಿಸಿ, ಅಲ್ಲಾಡಿಸಿ ನೋಡಬಹುದಾಗಿತ್ತು. ಬಾಗಿಲು ಮುಚ್ಚಿಕೊಂಡೇ ಇತ್ತು. ಬಿಳಿಯ, ಸಾದಾ, ಖಾಲಿ ಬಾಗಿಲು, ಒಗಟಿನ ಹಾಗೆ. ತಲೆ ಎತ್ತಿ ನೋಡಿದೆ. ಬಾಗಿಲಿನಲ್ಲಿ, ಮೇಲೆ ಇದ್ದ ಗಾಜಿನ ಚೌಕದಲ್ಲಿ ಇಷ್ಟಗಲ ಆಕಾಶ ಕಂಡಿತು. ಬೀದಿಯ ಆಚೆ ಬದಿಯಲ್ಲಿದ್ದ ಪೈನ್ ಮರಗಳ ಮೊನಚು, ಕಪ್ಪು ತುದಿಗಳು ಆಕಾಶಕ್ಕೆ ಚುಚ್ಚಿಕೊಂಡಿದ್ದವು.

ಮರಗಳ ಹಿಂದೆ ಚಂದ್ರ, ಬಲುಮಟ್ಟಿಗೆ ಪೂರ್ಣ, ಹೊನ್ನ ಬಣ್ಣದಲ್ಲಿ ಹೊಳೆಯುತಿದ್ದ. ಉಸಿರಾಡಲು ಆಗದು ಅನಿಸಿತು. ಉಸಿರು ಕಟ್ಟಿತು ಅನಿಸಿತು ನನ್ನ ಮೇಲೆ ಇದ್ದ ಆಸೆ ಕೆರಳಿಸುವ ಆಕಾಶ, ನನ್ನನ್ನು ಭದ್ರವಾಗಿ, ಬೆಚ್ಚಗೆ ಆವರಿಸಿಕೊಂಡಿರುವ ಮನೆಯ ಹೆಣ್ಣು ವಾತಾವರಣದ, ರೆಕ್ಕೆತುಪ್ಪುಳದಷ್ಟು ನಯವಾದ ದಟ್ಟವಾದ ಅಪ್ಪುಗೆ…

14.
ಇವತ್ತು ಬೆಳಗ್ಗೆ ಮನಸ್ಸು ಕುಗ್ಗಿದೆ. ರಾತ್ರಿ ಚೆನ್ನಾಗಿ ನಿದ್ದೆ ಮಾಡಲಿಲ್ಲ. ಎಚ್ಚರವಾಗುತಿತ್ತು. ಹೊರಳಾಡುತಿದ್ದೆ. ಹೊಲಸು, ಅಸಂಬದ್ಧ, ಕಿರು ಕನಸುಗಳು. ಎಚ್ಚರವಾಯಿತು. ತಲೆಭಾರ. ಬೆಚ್ಚನೆಯ ಕೊಳಕು ನೀರಿನಲ್ಲಿ ಈಜಿ ಎದ್ದು ಬಂದ ಹಾಗೆ. ಮೈಯೆಲ್ಲ ಎಣ್ಣೆಣ್ಣೆ. ಕೂದಲು ಗಡುಸು, ಎಣ್ಣೆ ಮೆತ್ತಿದ ಹಾಗೆ. ಕೊಳಕಾದ, ಕೆಸರಿನಂಥದು ಮುಟ್ಟಿದ ಹಾಗೆ ಅನಿಸುತ್ತಿದೆ ಕೈಗೆ. ಆಗಸ್ಟ್ ತಿಂಗಳ ಸೆಖೆ. ಮುದ್ದೆಯಾಗಿ ಮುದುರಿ ಕೂತೆ. ಕತ್ತು ನೋವು. ತಣ್ಣನೆಯ ಸ್ವಚ್ಛ ನೀರಿನಲ್ಲಿ ಇಡೀ ದಿನ ಸ್ನಾನ ಮಾಡಿ ಬಂದರೂ ಮೈಗೆ ಸುತ್ತಿಕೊಂಡಿರುವ ಕೊಳಕಿನ ಪರದೆ ಹರಿಯುವುದಿಲ್ಲ, ಬಾಯಲ್ಲಿರುವ ಉಜ್ಜದ ಹಲ್ಲುಗಳ ಕೆಟ್ಟ ರುಚಿ ಹೋಗುವುದಿಲ್ಲ.

15.
ಇವತ್ತು ರಾತ್ರಿ ನನ್ನೊಳಗೆಲ್ಲ ಸಮಾಧಾನ ತುಂಬಿತ್ತು. ಬೀದಿಯಾಚೆಯ ಎದುರು ಮನೆಯಿಂದ ರಾತ್ರಿ ಹನ್ನೆರಡಕ್ಕೆ ಸ್ವಲ್ಪ ಮೊದಲು ವಾಪಸು ಬಂದೆ. ಈಡೇರದ ಆಸೆಯಲ್ಲಿ ನರಳುತ್ತ, ನನ್ನನ್ನೇ ಬೈದುಕೊಳ್ಳುತ್ತ ಒಬ್ಬಳೇ ಬಂದೆ. ಆಗಸ್ಟ್ ತಿಂಗಳ ಪವಾಡದಂಥ ರಾತ್ರಿ. ಆಗ ತಾನೇ ಮಳೆ ಬಂದು ನಿಂತಿತ್ತು. ಮಸುಕು ಕಾವಳ. ಬೆಚ್ಚನೆಯ ಗಾಳಿ. ತುಂಬು ಚಂದಿರ, ಬಸುರಿಯ ಹಾಗೆ. ಮತ್ತೆ ಮತ್ತೆ ಮುಸುಕುವ ತುಣುಕು ಮೋಡಗಳ ಆಚೆ ವಿಚಿತ್ರವಾಗಿ ಕಾಣುತಿದ್ದ. ಮುರಿದ ಚಿತ್ರದ ಪಝಲ್ ತುಣುಕುಗಳ ಹಿಂಬದಿಯಿಂದ ಬೆಳಕು ಚೆಲ್ಲಿದ ಹಾಗೆ. ಗಾಳಿ ಇರಲಿಲ್ಲ. ಆದರೂ ಬೀದಿ ಮರದ ಎಲೆ ಅಲುಗಾಡುತಿದ್ದವು, ದೊಡ್ಡ ದೊಡ್ಡ ಹನಿ ಕಲ್ಲು ಕೂರಿಸಿದ ಫುಟ್ ಪಾತಿನ ಮೇಲೆ ಬೀಳುತಿದ್ದವು. ಜನ ಓಡಾಡಿದಾಗ ಬರುವಂಥ ಸದ್ದು ಬರುತಿತ್ತು. ವದ್ದೆ ಮಣ್ಣಿನ, ಸತ್ತ, ಕೊಳೆತ ಎಲೆಗಳ ವಿಚಿತ್ರ ವಾಸನೆ. ಮನೆಯ ಮೆಟ್ಟಿಲ ಮೇಲೆ ಬೆಳಕು ಬೀರುತ್ತ ಇದ್ದ ಎರಡು ಬಲ್ಬುಗಳು. ಅವುಗಳ ಸುತ್ತ ಮಂಜುಮುಸುಕಿದ ಪ್ರಭೆ, ಬೆಳಕಿನ ಪ್ರಖರತೆಗೆ ಮರುಳಾಗಿ ಬಲ್ಬುಗಳ ಮೇಲೆ ಎರಗುತ್ತ ಬೀಳುವ ತೆಳ್ಳನೆಯ ರೆಕ್ಕೆಯ ಹುಳುಗಳು. ಮಿಂಚುವ, ಫಳಕ್ಕನೆ ಮರೆಯಾಗುವ, ರಂಗಭೂಮಿಯ ಲೈಟುಗಳ ಸ್ವಿಚ್ಚಿನ ಜೊತೆಗೆ ಯಾರೋ ಹುಡುಗ ಆಡುತಿದ್ದಾನೆ ಅನಿಸುವಂಥ ಮಿಂಚುಗಳು. ಕಲ್ಲು ಮೆಟ್ಟಿಲ ಬಿರುಕಿನಲ್ಲಿ ಅಡಗಿ ಕೂತು ಮಧುರವಾಗಿ ಕಿಟಿಕಿಟಿ ಸದ್ದು ಮಾಡುವ ಎರಡು ಮಿಡತೆ…ಇದು ನನ್ನ ಮನೆಯಾದ್ದರಿಂದ ಎಲ್ಲದರ ಮೇಲೆ ಪ್ರೀತಿ. ಕಾಕಂಬಿಯಂಥ ಗಾಳಿ, ಬೆಳದಿಂಗಳು, ಜೊತೆಗೆ ಬೀದಿ ದೀಪಗಳು ಮೂಡಿಸಿದ್ದ ಸ್ಕ್ರಿಜೊಫ್ರೇನಿಯದ ಹಾಗೆ ಸೀಳಿಕೊಂಡಿರುವ ವಿಕಾರವಾದ, ರಿಪೀಟ್ ಆಗುವ ನೆರಳುಗಳು…

ಅಂಚು

ಹೆಣ್ಣು ಪೂರ್ಣಳಾಗಿದ್ದಾಳೆ—
ಸತ್ತ ಮೈಯಲ್ಲಿ

ಸಿದ್ಧಿಯ ನಗು
ಗಂಡನ ಮೇಲಿನ ಸೇಡಿಗೆ ಮಕ್ಕಳನ್ನು ಕೊಂದ ಮೀಡಿಯಾಳ ನಗುವಿನ ಹಾಗೆ

ಭ್ರಮೆ ಅನ್ನುವುದು ಅವಳ ಉಡುಪಿನ ಒಂದೊಂದೂ ನಿರಿಗೆಯಲ್ಲೂ
ಮಾಯವಾಗಿ ಹರಿದಿದೆ.

ಬೋಳು ಪಾದ ಹೇಳುತಿವೆ:
ನಡೆದೆವು ಇಷ್ಟು ದೂರ, ಮುಗಿಯಿತು ಈಗ.

ಸತ್ತ ಮಕ್ಕಳು, ಬಿಳಿಯ ಹಾವಿನ ಹಾಗೆ
ಈಗ ಖಾಲಿಯಾದ ಹಾಲಿನೊಂದೊಂದು ಮಡಕೆಗೆ ಸುತ್ತಿ ಮಲಗಿವೆ

ಇರುಳಿನಲ್ಲಿ, ರಾತ್ರಿಯ ಹೂವು ಅರಳಿ
ಸುಗಂಧದ ಅತ್ತರು-ನೆತ್ತರು ಹರಿಸುವಾಗ

ಸೆಟೆದು ದಳಗಳನೆಲ್ಲ ಮುದುರಿ ಒಳಗೆಳೆದುಕೊಳ್ಳುವ
ತೋಟದ ಗುಲಾಬಿಯ ಹಾಗೆ

ಎಳಕೊಂಡಿದ್ದಾಳೆ ಅಪ್ಪಿ ಅವರನ್ನು
ಗುಲಾಬಿ ಪಕಳೆ ಮುಚ್ಚಿಕೊಳ್ಳುವ ಹಾಗೆ

ಚಂದ್ರನಿಗೆ ಬೇಸರವಿಲ್ಲ, ದುಃಖವಿಲ್ಲ
ಇಂಥವೆಷ್ಟೆಷ್ಟೋ ನೋಡಿ ನೋಡಿ ಅಭ್ಯಾಸವಾಗಿದೆ.

ಚಂದ್ರಛಾಯೆ ಚಟಪಟಗುಟ್ಟುತ್ತ
ತೆವಳಿ ಸಾಗಿದೆ

 

[ಇದು ಫೆಬ್ರವರಿ 5, 1963ರಂದು ಸಿಲ್ವಿಯಾ ಬರೆದ ಕವಿತೆ. ಇದನ್ನು ಬರೆದ ಒಂದು ವಾರಕ್ಕೆ ಆತ್ಮಹತ್ಯೆ ಮಾಡಿಕೊಂಡಳು. ಅವಳ ಮರಣ ಪತ್ರ ಎಂದು ಅನೇಕರು ಪರಿಗಣಿಸುವ ಈ ಕವಿತೆಯಲ್ಲಿ ಕಲೆ-ಬದುಕು-ಸಾವುಗಳ ಸೂಕ್ಷ್ಮ ನೋಟವಿದೆ.
ಮುಕ್ತಛಂದಸ್ಸಿನಲ್ಲಿರುವ ಇಪ್ಪತ್ತು ಜೋಡಿಸಾಲುಗಳ ಕವಿತೆ ಇತು. ಹೆಣ್ಣು ಪೂರ್ಣವಾಗಿದ್ದಾಳೆ, ಸಾಯುವ ಮೂಲಕ. ಈಗ ಅವಳು ಪೂರ್ಣಳು-ಕಲಾಕೃತಿಯ ಹಾಗೆ. ಅವಳ ಸುತ್ತ ದುರಂತದ ಪ್ರಭಾವಳಿ ಇದೆ, ಅವಳು ಇನ್ನೇನೋ ಆಗಿದ್ದಾಳೆ.
ಅವಳುಟ್ಟಿರುವ (ಗ್ರೀಕರ) ಟೋಗಾ ಉಡುಪಿನ ನಿರಿಗೆಗಳೆಲ್ಲ ಗ್ರೀಕ್ ಕಾವ್ಯನಾಟಕಗಳಲ್ಲಿ ಚರ್ಚೆಗೊಂಡಿರುವ ವಿಧಿಯ, ಅಗತ್ಯತೆ, ಅನಿವಾರ್ಯತೆಗಳ ಬರಹವನ್ನು ಒಳಗೊಂಡಿರುವ ಕಾಗದ ಸುರುಳಿಗಳ ಹಾಗಿವೆ. ಇಷ್ಟು ದೂರ ಬಂದಿದ್ದೇವೆ, ಇನ್ನು ಮುಗಿಯಿತು ಅನ್ನುತಿವೆ ಪಾದಗಳು.

ಅವಳ ಜೊತೆಯಲ್ಲಿವೆ ಸತ್ತ ಮಕ್ಕಳು. ಒಂದೊಂದೂ ಬಿಳಿಯ ಹಾವಿನ ಹಾಗೆ ಸುರುಳಿ ಸುತ್ತಿಕೊಂಡಿವೆ. ಅವಳು ತನ್ನ ಬದುಕಿನ ಮೂಲಕ ಮರಣದ ಕಲಾಕೃತಿ ರಚಿಸಿರುವ ಹಾಗಿದೆ. ಖಾಲಿಯಾದ ಹಾಲಿನ ಕುಡಿಕೆ ಹಿಡಿದಿರುವ ಮಕ್ಕಳನ್ನು ಗುಲಾಬಿಯ ಹೂ ಪಕಳೆಗಳನ್ನೆಲ್ಲ ಮುದುಡಿ ಮುಚ್ಚಿಕೊಳ್ಳುವ ಹಾಗೆ ಅಪ್ಪಿದ್ದಾಳೆ. ಇಂಥವೆಷ್ಟೋ ಸಂಗತಿ ನೋಡಿರುವ ಚಂದ್ರನಿಗೆ ದುಃಖವಿಲ್ಲ, ವಿಷಾದವಿಲ್ಲ.]

Edge
BY SYLVIA PLATH
The woman is perfected.
Her dead
Body wears the smile of accomplishment,
The illusion of a Greek necessity
Flows in the scrolls of her toga,
Her bare
Feet seem to be saying:
We have come so far, it is over.
Each dead child coiled, a white serpent,
One at each little
Pitcher of milk, now empty.
She has folded
Them back into her body as petals
Of a rose close when the garden
Stiffens and odors bleed
From the sweet, deep throats of the night flower.
The moon has nothing to be sad
about,
Staring from her hood of bone.
She is used to this sort of thing.
Her blacks crackle and drag.