ಏನೋ ತೀರ್ಮಾನಿಸಿದವಳಂತೆ, ಮೆಟ್ಟಿಲಿಳಿದು ರಸ್ತೆಗೆ ಬಂದಳು. ನಿಡು ದೂರದಲ್ಲಿ ಕುತೂಹಲ ಹುಟ್ಟಿಸುವ ಆ ಎರಡನೇ ಅಡ್ಡ ರಸ್ತೆ. ಒಮ್ಮೆ ಉರಿದು ಮತ್ತೆ ನಂದುತ್ತಿರುವ ದಾರಿದೀಪ. ಸಾಲದ್ದಕ್ಕೆ ಲೈಟು ಕಂಬದಿಂದ “ಟ್ರೀ” ಎಂಬ ಶಾರ್ಟ್ ಸರ್ಕ್ಯೂಟಿನ ಸದ್ದು. ಬೆಳಕು ನಂದಿ ಹೊತ್ತುವಷ್ಟರಲ್ಲೇ ಕತ್ತಲ ಮಧ್ಯೆ ರಪ್ಪನೆ ಯಾರೋ ನುಗ್ಗಿದಂತಾಗಿ ಇವಳೆದೆಯ ತುಂಬಾ ಹಾಲಿನವನ ಪ್ರೇತ. ಮತ್ತೆ ಮತ್ತೆ ನಡೆದಳು. ಹತ್ತಿರವಾದಷ್ಟು ವಯರಗಳು ಸುಡುವ “ಟ್ರೀ.” ಸದ್ದು ಅಧಿಕವಾಯಿತು. ಬೆಳಕು ಸುತ್ತುವರಿದ ರಾಶಿ ಹಾತೆಗಳ ಆತ್ಮಹತ್ಯೆ ವಿಚಿತ್ರ ಬೆರಗು ಹುಟ್ಟಿಸುತ್ತಿತ್ತು. ಒಮ್ಮೆಲೆ ಸಣ್ಣ ಮಗು ಅಳುವಂತಹ ಸದ್ದು.
ಮುನವ್ವರ್ ಜೋಗಿಬೆಟ್ಟು ಬರೆದ ಸಣ್ಣ ಕತೆ “ಎರಡನೇ ತಿರುವು” ನಿಮ್ಮ ಭಾನುವಾರದ ಓದಿಗೆ

 

ಬಾಲ್ಕನಿಯಲ್ಲಿ ಪುಸ್ತಕ ಹಿಡಿದು ಕುಳಿತಿದ್ದವಳಿಗೆ ನಾಳೆ “ಬಿಸಿನೆಸ್ ಲಾ” ಪರೀಕ್ಷೆ. ಕಡು ಕಷ್ಟದ ವಿಷಯ. ಯಾವ ಪ್ರಶ್ನೆ ಬರಬಹುದೆಂದು ನಿರೀಕ್ಷಿಸುವಂತೆಯೂ ಇಲ್ಲ. ‘ಡಿಗ್ರಿ ಪಾಸು ಮಾಡಲು ಇದೊಂದು ಪತ್ರಿಕೆ ತೊಡರಾಗುತ್ತದಲ್ವಾ’ ಎಂದು ಚಿಂತಿಸುತ್ತಿದ್ದವಳಿಗೆ, ಈ ಮಧ್ಯ ರಾತ್ರಿ ಪರೀಕ್ಷೆಗೆ ಓದಬೇಕೆನಿಸುತ್ತಲೇ ಇಲ್ಲ. ಬೀಸಿ ಬರುವ ಗಾಳಿಯೊಂದಿಗೆ ಮಂಗಳೂರು ಸಮುದ್ರದ ಉಚ್ವಾಸ-ನಿಶ್ವಾಸಗಳು ಮೊರೆತಗಳು ಕೇಳಿಸಿಕೊಳ್ಳುವುದು ಬಿಟ್ಟರೆ ಪ್ರಶಾಂತ ಮೌನ. ಮನೆಯೊಂದರ ಮೂಲೆಯಲ್ಲಿ ಕಟ್ಟಿ ಹಾಕಿ ಎಸೆದಿದ್ದ ಕಸದ ಮೂಟೆಯಲ್ಲಿ ಕೂಳು ಹುಡುಕಲು ಬಂದ ಅಬ್ಬೇಪಾರಿ ಬೀದಿ ನಾಯಿಗಳ ಗುಂಪು. ಬಿಳಿ, ಕಂದು, ಕಪ್ಪು ಅವುಗಳ ಚರ್ಮಕ್ಕೆಷ್ಟು ಬಣ್ಣಗಳು…. ‘ಹಸಿವಿಗೆ ಬೇಧ, ಮಡಿ, ಮೈಲಿಗೆಯುಂಟೇ?’ ಎಂದನಿಸಿತವಳಿಗೆ.

ರಸ್ತೆಯ ಕೊನೆಯಲ್ಲಿ ಆ ನಿಗೂಢ ತಿರುವು. “ಛೇ… ಬೇಡ ಬೇಡವೆಂದರೂ ಆ ಎರಡನೇ ತಿರುವಿಗೆ ಕಣ್ಣೇಕೆ ಹೊರಳುತ್ತದೆ. ಎಷ್ಟೊಂದು ಭಯಾನಕವದು. ಮೊನ್ನೆ ಮೊನ್ನೆ ಹಾಲು ತರುವವನು ಬೈಕ್ ಸ್ಕಿಡ್ಡಾಗಿ ಬಿದ್ದು ಬಿಟ್ಟವ ಅಲ್ಲೇ ನರಳುತ್ತಾ ಸತ್ತು ಹೋದನಂತೆ. ಬಿಳಿಯ ಹಾಲೆಲ್ಲ ಕೆಂಪು ಕೆಂಪು. ಅಬ್ಬಾ?!” ಮನಸ್ಸಿನಲ್ಲೇ ಮಾತಾಡಿಕೊಂಡವಳು ಹೆದರಿಕೊಂಡೇ ಆ ತಿರುವಿನೆಡೆಗೆ ಮತ್ತೆ ಕಣ್ಣು ನೆಟ್ಟಳು.

ಅದು ವೆಲೆನ್ಸಿಯಾ ಎರಡನೇ ಅಡ್ಡ ರಸ್ತೆ. ಪಿಳಿ ಪಿಳಿ ಉರಿಯುವ ಬೀದಿ ದೀಪ. ತಿರುವು ಸರಿಯಾಗಿ ಕಾಣಿಸದಷ್ಟು ಅಡ್ಡಲಾದ ಆಲದ ಮರ. ನಿರ್ಜನವಾದ ಆ ರಸ್ತೆ ಏನೋ ಕುತೂಹಲ ಕೆರಳಿಸುತ್ತಿದೆ. ಎಷ್ಟೋ ಬಾರಿ ಅದೇ ತಿರುವು ನೋಡಿಕೊಂಡು ಕವಿತೆ ಬರೆಯಬೇಕು ಅನಿಸಿದ್ದಿದೆ. ಬಾಲ್ಕನಿ ಇಳಿದು ಹೋದರೆ ಹೇಗೆ?. “ಬೇಡ ಹಾಲಿನವನ ಪ್ರೇತ ಬಂದರೆ? ನಾನು ಹೀಗೆಲ್ಲಾ ನೋಡುವಾಗಲೂ ಅಲ್ಲಿಗೆ ಸೆಳೆಯುವುದೆಂದರೆ? ಏನೋ ಇರಬೇಕು. ಯಾವುದೋ ಪ್ರೇತಾತ್ಮವೇ ಕರೆಯುತ್ತಿರಬೇಕು”.

“ಆದದ್ದಾಗಲಿ”. ಪುಸ್ತಕ ಕೆಳಗಿಟ್ಟು ಅವಳು ಮೆಲ್ಲಗೆ ಮೆಟ್ಟಿಲಿಳಿಯತೊಡಗಿದಳು. ಎದೆಯಲ್ಲಿ ಅವಿಲ್ ಮಿಲ್ಕ್ ಶರಬತ್ತು ಮಾಡಿದಂತೆ. ಆದರೂ ಆ ತಿರುವು ನೋಡಲೇ ಬೇಕೆನಿಸುವ ಜಿಜ್ಞಾಸೆ. “ಪರೀಕ್ಷೆಗಿನ್ನೂ ಓದಲೇ ಬೇಕಾ?” ಧ್ವಂದ್ವ ನಿಲುವುಗಳು. ಏನೋ ತೀರ್ಮಾನಿಸಿದವಳಂತೆ, ಮೆಟ್ಟಿಲಿಳಿದು ರಸ್ತೆಗೆ ಬಂದಳು. ನಿಡು ದೂರದಲ್ಲಿ ಕುತೂಹಲ ಹುಟ್ಟಿಸುವ ಆ ಎರಡನೇ ಅಡ್ಡ ರಸ್ತೆ. ಒಮ್ಮೆ ಉರಿದು ಮತ್ತೆ ನಂದುತ್ತಿರುವ ದಾರಿದೀಪ. ಸಾಲದ್ದಕ್ಕೆ ಲೈಟು ಕಂಬದಿಂದ “ಟ್ರೀ” ಎಂಬ ಶಾರ್ಟ್ ಸರ್ಕ್ಯೂಟಿನ ಸದ್ದು. ಬೆಳಕು ನಂದಿ ಹೊತ್ತುವಷ್ಟರಲ್ಲೇ ಕತ್ತಲ ಮಧ್ಯೆ ರಪ್ಪನೆ ಯಾರೋ ನುಗ್ಗಿದಂತಾಗಿ ಇವಳೆದೆಯ ತುಂಬಾ ಹಾಲಿನವನ ಪ್ರೇತ. ಮತ್ತೆ ಮತ್ತೆ ನಡೆದಳು. ಹತ್ತಿರವಾದಷ್ಟು ವಯರಗಳು ಸುಡುವ “ಟ್ರೀ.” ಸದ್ದು ಅಧಿಕವಾಯಿತು. ಬೆಳಕು ಸುತ್ತುವರಿದ ರಾಶಿ ಹಾತೆಗಳ ಆತ್ಮಹತ್ಯೆ ವಿಚಿತ್ರ ಬೆರಗು ಹುಟ್ಟಿಸುತ್ತಿತ್ತು. ಒಮ್ಮೆಲೆ ಸಣ್ಣ ಮಗು ಅಳುವಂತಹ ಸದ್ದು. ಅರೇ! ಈ ಅಪ ರಾತ್ರಿಯಲ್ಲಿ ಇಷ್ಟು ಸಣ್ಣ ಮಗು?!. ಹೇಗೆ ಸಾಧ್ಯ!?. ಅವಳು ಮೆಲ್ಲಗೆ ಬೆವರತೊಡಗಿದಳು. ನಿಂತಳು.

ಒಂದೊಂದೇ ಹೆಜ್ಜೆ ಮುಂದಿಡತೊಡಗಿದಳು. ಮಗುವಿನ ಕಿರುಚಾಟ ವಿಚಿತ್ರವಾಗಿತ್ತು. ಅಷ್ಟರಲ್ಲೇ ಹಿಂದಿನಿಂದ ಯಾರೋ ಹಿಂಬಾಲಿಸಿದಂತಹ ಅನುಭವ! ಬೆಚ್ಚಿ ಒಮ್ಮೆಲೆ ಹಿಂತಿರುಗಿದಳು. ಅಬ್ಬಾ… ಖಾಲಿ ರಸ್ತೆ!.

ಮೆಲ್ಲಗೆ ಮುಂದಡಿಯಿಟ್ಟಳು. ತಟ್ಟನೆ ಬೆವರ ಹನಿಯೊಂದು ಕುತ್ತಿಗೆಯಿಂದ ಜಾರಿತು. ಹೆದರಿಕೆ ಮತ್ತಷ್ಟು ಗಾಢವಾಯಿತು. ಮಗುವಿನ ಸದ್ದು ಕ್ಷೀಣವಾದಂತಾಯಿತು. ಅವಳೀಗ ನೇರ ಅರೆ ಬರೆ ಉರಿಯುವ ದೀಪದ ಕೆಳಗೆ ನಿಂತಿದ್ದಾಳೆ. ಮೌನವಾಗಿ ನಿಂತ ಆ ಆಲದ ಮರ. ಭಯ ಮಿಶ್ರಿತ ಕುತೂಹಲ. ಅವಳಿಗೀಗ ತಾನು ನೆನೆದ ತಿರುವಿನಲ್ಲೇ ನಿಂತ ಖುಷಿ. ಕಲ್ಲಾಗಿ ನಿಂತು ಆ ಕತ್ತಲು ಬೆಳಕಿನಾಟವನ್ನು ಮನದಣಿಯೆ ಆಸ್ವಾದಿಸುತ್ತಿದ್ದಾಳೆ. ಬೆಳಕಿಗೊಮ್ಮೆ ಹೊಳೆಯುತ್ತಾಳೆ, ಮತ್ತೆ ದೀಪ ನಂದಿದರೆ ಮಾಸುತ್ತಾಳೆ. ಅಷ್ಟರಲ್ಲೇ ಆ ನಿರ್ಜನ ದಾರಿಯಲ್ಲಿ ಶರ ವೇಗದಲ್ಲಿ ಬೈಕೊಂದು ಹಾದು ಬಂತು. ಬೆಳಕು, ಕತ್ತಲಿನಾಟದಲ್ಲಿ ಮಿಣುಗುತ್ತಿರುವ ಇವಳ ಕೆಂಪು ಚೂಡಿದಾರ್.

ಬೈಕಿನಲ್ಲಿದ್ದವರಿಬ್ಬರು ಇವಳನ್ನು ನೋಡಿದ್ದಾರೆ. ಹೆದರಿದ್ದಾರೆ, ಯದ್ವಾ ತದ್ವಾ ಬೈಕು ಅನಿಯಂತ್ರಿತಗೊಂಡಂತಿದೆ. ಅವರ ಸಮತೋಲನ ತಪ್ಪಿದೆ. ವೇಗ ಹೆಚ್ಚಿದೆ. ರಪ್ಪೆಂದು ಹಿಂಬದಿ ಸವಾರನ ಕೈಯಲ್ಲಿದ್ದ ಆ ಪೇಪರ್ ಗಾಳಿಯಲ್ಲಿ ಹಾರಿತು. ಹಾಗೂ ಹೀಗೂ ಬೈಕ್ ಕಂಟ್ರೋಲ್ಗೆ ತಗೆದುಕೊಂಡು ಅವರು ತಿರುವಿನಲ್ಲಿ ವೇಗದಲ್ಲೇ ಮಾಯವಾದರು. ಅರೆಕ್ಷಣದಲ್ಲಿ ಮುಗಿದ ಈ ಪ್ರಕ್ರಿಯೆಯನ್ನು ನೋಡುತ್ತಿದ್ದಾಳೆ.

ಅಷ್ಟರಲ್ಲೇ ಮತ್ತೆ ಆ ವಿಚಿತ್ರ ಮಗು ಅಳುವ ಸದ್ದು ಇನ್ನಷ್ಟು ಸ್ಪಷ್ಟವಾಗಿ ಅಲ್ಲೇ ತಿರುವಿನ ಮೋರಿ ಬಳಿಯಿಂದ ಕೇಳಿಸುತ್ತಿದೆ. ಧೈರ್ಯ ತಂದುಕೊಂಡವಳು ಮೆಲ್ಲಗೆ ಮೋರಿ ಕಡೆಗೆ ಬಂದಳು. ನೋಡಿದರೆ ಕತ್ತಲಲ್ಲಿ ಆ ಕಣ್ಣುಗಳೆರಡು ಮಿನುಗುತ್ತಿದೆ. ಬಹುಶಃ ಯಾವುದೋ ಅನಾಥ ಬೆಕ್ಕೊಂದು ಸ್ವರ ಕೆಟ್ಟು ಅಳುತ್ತಿದೆ. ಈಗ ಸ್ವಲ್ಪ ನಿರಾಳ. ಬೀಸಿ ಬರುವ ತಂಗಾಳಿಯಲ್ಲಿ ಹೊಸ ಉನ್ಮಾದವಿದೆ. ಈ ತಿರುವಿನ ಭಯವು ಮೆಲ್ಲನೆ ಸರಿಯುತ್ತಿದೆ. ಹೊತ್ತಿ, ನಂದುವ ಆ ಬೀದಿ ದೀಪದ ವಿಚಿತ್ರ ಸದ್ದು ಪರಿಚಿತ ಅನಿಸುತ್ತಿದೆ. ದೂರದಲ್ಲೇ ಬೈಕಿನವನ ಕೈಯಿಂದ ಬಿದ್ದಿದ್ದ ಆ ಹಾಳೆ ಜೋರು ಗಾಳಿಯ ಜೊತೆ ಹಾರಿ ಇವಳತ್ತಲೇ ಬರುತ್ತಿದೆ. ಅವಳ ಕಾಲ ಕೆಳಗೆ ಬಂದು ನಿಂತಾಗ ಮೆಲ್ಲಗೆ ಅವಳೆತ್ತಿಕೊಂಡಿದ್ದಾಳೆ. ಅಬ್ಬಾ! “ಬ್ಯುಸಿನೆಸ್ ಲಾ- ೬ ಸೆಮಿಸ್ಟರ್” ಎಂದು ಬರೆದ ನಾಳಿನ ಪರೀಕ್ಷೆ ಪತ್ರಿಕೆ ಇಂದೇ ಕೈಯಲ್ಲಿದೆ.

ಒಮ್ಮೆಲೆ ಪರೀಕ್ಷಾ ಕೊಠಡಿ ಆವರಿಸಿದಂತಾಯಿತವಳಿಗೆ. ಕೊಠಡಿಯ ಬಲ್ಬ್ ಕೂಡಾ ತಿರುವಿನ ದಾರಿದೀಪದಂತೆ ಉರಿಯುತ್ತಿದೆ ಮತ್ತೆ ನಂದುತ್ತಿದೆ. “ಕೆಲವೊಂದು ಉತ್ತರಗಳನ್ನು ಹುಡುಕುತ್ತಾ ಹೊರಟರೆ, ಪ್ರಶ್ನೆಗಳು ಸಿಗಬಹುದು” ಅಂತ ಅನಿಸಿತವಳಿಗೆ.