ಬೀದಿಚಿತ್ರ ಕಲಾವಿದನ ಕಲೆ ಕಲ್ಪನೆಗೆ ಯಾವ ರಕ್ಷಣೆ ಆವರಣ ಇದ್ದರೂ, ಎಷ್ಟು ಜನರು ಬಂದು ಫೋಟೋ ತೆಗೆದರೂ, ಪತ್ರಿಕೆಗಳಲ್ಲಿ ಚರ್ಚೆ ಆದರೂ ಕಾಲಾನುಕ್ರಮದಲ್ಲಿ ಎಲ್ಲವೂ ಮರೆವಿಗೆ ಸರಿಯಬಹುದು. ಕೋವಿಡ್ ಕಾಲಕ್ಕೆಂದೇ ಕಟ್ಟಿದ ರೂಪಕ ಮತ್ತೆ ಹುಟ್ಟಿಸಿದ ಚರ್ಚೆ ಹೊಳಹುಗಳು ಕೆಲವು ದಿನಗಳಲ್ಲಿ ತಟಸ್ಥವಾಗಬಹುದು. ಬೀದಿಬದಿಯಲ್ಲಿ ಮುರಿದು ಬಿದ್ದಿರುವ ನಿಷ್ಪ್ರಯೋಜಕ ಸೈಕಲ್ಲನ್ನು ಸರಪಳಿ ಬೀಗ ಸಮೇತ ಯಾರೋ ಕಸದ ಬುಟ್ಟಿಗೆ ಎಸೆಯಬಹುದು, ಉಲ್ಲಾಸದಲ್ಲಿ ಕುಣಿಯುತ್ತಿರುವ ಹುಡುಗಿಯ ಗೋಡೆಚಿತ್ರವೂ ನಿತ್ಯದ ಧೂಳು ಬಿಸಿಲು ಗಾಳಿ ಮಳೆಗಳಲ್ಲಿ ಮಾಸಬಹುದು.
ಯೋಗೀಂದ್ರ ಮರವಂತೆ ಬರೆಯುವ ‘ಇಂಗ್ಲೆಂಡ್‌ ಲೆಟರ್‌ʼ

 

ನಾಟಿಂಗ್ಹ್ಯಾಮ್ ನಗರದ ಹೆಸರು ನೀವು ಕೇಳಿರಬಹುದು. ಕೇಳಿರದಿದ್ದರೂ ಈ ನಗರದ ಗುರುತು ಮಾಡಿಕೊಳ್ಳಲು ಇಲ್ಲಿಗೇ ಭೇಟಿ ನೀಡಿ ಓಡಾಡಿರಬೇಕೆಂದಿಲ್ಲ. ನಾವು ನಾವು ಇರುವಲ್ಲಿಂದಲೇ ಇಲ್ಲಿಗೊಂದು ಅಜ್ಞಾತ ಸೇತುವೆ ನಮಗೇ ತಿಳಿಯದಂತೆ ಈಗಾಗಲೇ ನಿರ್ಮಾಣ ಆಗಿರುವ ಸಾಧ್ಯತೆಯೂ ಇದೆ. ಇಂಗ್ಲಿಷ್ ಜಾನಪದ ಕತೆಗಳ ಪುಸ್ತಕವನ್ನು ತಿರುವಿ ಹಾಕಿದವರಿಗೆ “ರಾಬಿನ್ ಹುಡ್” ಎನ್ನುವ ವ್ಯಕ್ತಿಯ ಅಥವಾ ಪಾತ್ರದ ಪರಿಚಯ ಇರುತ್ತದೆ. ಸಿರಿವಂತರಿಂದ ಕಸಿದು ಬಡವರಿಗೆ ಹಂಚುವುದು, ದುರಾಡಳಿತವನ್ನು ವಿರೋಧಿಸಿ ಎದುರಿಸುವುದು, ನ್ಯಾಯ ಸಿಗಬೇಕಾದ ಅಸಹಾಯಕರಿಗೆ ದೊರಕಿಸುವುದು ರಾಬಿನ್ ಹುಡ್ ಮತ್ತವನ ಬಂಡುಕೋರ ಪಡೆಯ ದೈನಿಕವಾಗಿತ್ತು. ಅಂತಹ ರಾಬಿನ್ ಹುಡ್ ಇದ್ದದ್ದು ನಾಟಿಂಗ್ಹ್ಯಾಮ್ ನಲ್ಲಿ.

ಇಂಗ್ಲಿಷ್ ಜಾನಪದ ಲೋಕದ ಜನಜನಿತ ಪ್ರಭಾವಿ ಆಕರ್ಷಕ ಪಾತ್ರ ಅವನಾದರೂ ಅಂತಹವನೊಬ್ಬ ನಿಜವಾಗಿಯೂ ಇದ್ದನೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಕಳೆದ ಹಲವು ಶತಮಾನಗಳಿಂದ ಇಲ್ಲಿ ಚರ್ಚೆಗಳು ನಡೆದಿವೆ. ತೀರ್ಮಾನ ಆಗದ ಅಂತಹ ಚರ್ಚೆ ಜಿಜ್ಞಾಸೆಗಳು ಈಗಲೂ ಜೀವಂತವಾಗಿದ್ದರೂ ಆತನನ್ನು ಓದಲು ತಿಳಿಯಲು ಅವನ ಸುತ್ತಲಿನ ಊಹೆ ಸಂಶಯ ವಾದಗಳು ಎಂದೂ ಅಡ್ಡಿ ಬರುವುದಿಲ್ಲ. ಮತ್ತೆ ಆತನ ಜನಪ್ರಿಯತೆಗೆ ಸಾಕ್ಷಿಯಾಗಿ ಅವನ ಹೆಸರಿನಲ್ಲಿ ನಿರ್ಮಿತವಾದ ಚಲನಚಿತ್ರಗಳ, ಬರೆಯಲ್ಪಟ್ಟ ಪುಸ್ತಕಗಳ ಉದ್ದವಾದ ಪಟ್ಟಿಯೇ ಇದೆ. ಇಂಗ್ಲಿಷ್ ಪುಸ್ತಕಗಳು ಚಲನಚಿತ್ರಗಳು ಮಾತ್ರ ಅಲ್ಲದೆ ಜಗತ್ತಿನ ಇತರ ಭಾಷೆಗಳಲ್ಲಿಯೂ ಭಾರತೀಯ ಭಾಷೆಗಳಲ್ಲಿಯೂ ಇವನ ವ್ಯಕ್ತಿತ್ವವನ್ನೂ ವೈಖರಿಯನ್ನೂ ಹೋಲುವ ಪಾತ್ರಗಳು ಕತೆಗಳು ಬಂದಿವೆ.

ಇವನ ಕತೆಗಳ ಮೂಲವನ್ನು ಹುಡುಕುತ್ತ ಹೊರಟರೆ ಹದಿಮೂರು ಹದಿನಾಲ್ಕನೆಯ ಶತಮಾನದ ನಾಟಿಂಗ್ಹ್ಯಾಮ್ ಮತ್ತು ಆಸುಪಾಸಿನ ಕಾಡುಮೇಡುಗಳಲ್ಲಿ ಸುತ್ತಾಡಬೇಕಾದೀತು, ಗುಡ್ಡ ಬೆಟ್ಟಗಳನ್ನು ಹತ್ತಿಳಿಯಬೇಕಾದೀತು ಮತ್ತೆ ಈತ ಹೊಕ್ಕಿ ಹೊರಬಂದ ಬಿಡಾರ ಹೂಡಿದ ಗುಹೆಗಳನ್ನೂ ಇಣುಕಿ ನೋಡಬೇಕಾದೀತು. ಇಲ್ಲಿನ ದಂತಕತೆಗಳು, ಕವನಗಳು, ಲಾವಣಿಗಳು ಹೀಗೆ ಬಗೆಬಗೆಯ ಮಾಧ್ಯಮ ಮಾದರಿಗಳಲ್ಲಿ ಬಾಯಿ ಕಿವಿಗಳ ನಡುವೆ ಹಬ್ಬುತ್ತ ಹರಡುತ್ತಾ ಬೆಳೆದ ಉಳಿದ ರಾಬಿನ್ ಹುಡ್ ಎಲ್ಲ ಕಾಲಕ್ಕೂ ಜನಪ್ರಿಯ ಜನಪದ ನಾಯಕನಾಗಿಯೇ ಉದ್ದಾಮ ಚೋರನಾಗಿಯೇ ಮುಂದುವರಿಯಬಹುದು, ನಾಟಿಂಗ್ಹ್ಯಾಮ್ ಇಂದ ದೂರ ಇರುವವರನ್ನು ಅವರಿಗೆ ಗೊತ್ತಿಲ್ಲದೇ ಕಟ್ಟಿಕೊಂಡ ಸೇತುವೆಯ ಮೇಲೆ ನಡೆಸಿ ಕರೆತಂದು ಇಲ್ಲೆಲ್ಲ ಸುತ್ತಾಡಿಸಬಹುದು.

ನಾಟಿಂಗ್ಹ್ಯಾಮ್ ಅನ್ನು ಇಂಗ್ಲೆಂಡ್ ನ ಹೊರಗೆ ಪರಿಚಯಿಸಿದ ವಸ್ತು ವಿಷಯ ವ್ಯಕ್ತಿಗಳಲ್ಲಿ ರಾಬಿನ್ ಹುಡ್ ನ ಪಾತ್ರ ಬಲುದೊಡ್ಡದಾದರೂ ಇದೇ ಊರಲ್ಲಿ ತಯಾರಾಗುವ ರ್ಯಾಲಿ ಸೈಕಲ್ಲುಗಳು ಕೂಡ ನಾಟಿಂಗ್ಹ್ಯಾಮ್ ಅನ್ನು ಹೊರಜಗತ್ತಿನ ಜೊತೆಗೆ ಗಾಢವಾಗಿ ಬೆಸೆದಿವೆ. ಹತ್ತೊಂಭತ್ತನೆಯ ಶತಮಾನದ ಕೊನೆಯಲ್ಲಿ ನಾಟಿಂಗ್ಹ್ಯಾಮ್ ಅಲ್ಲಿ ಆರಂಭಗೊಂಡ ರ್ಯಾಲಿ ಸೈಕಲ್ ಫ್ಯಾಕ್ಟರಿ ದೇಶ ವಿದೇಶಗಳಿಗೆ ತನ್ನ ಗಟ್ಟಿ ಮೈಕಟ್ಟಿನ ದೀರ್ಘ ಆಯುಸ್ಸಿನ ಸೈಕಲ್ಲುಗಳನ್ನು ಕಳುಹಿಸಿದೆ. ಜಗತ್ತಿನ ಪುರಾತನ ಸೈಕಲ್ ತಯಾರಕರಲ್ಲಿ ಒಂದು ಎನ್ನುವ ಬಿರುದು ಇರುವ ರ್ಯಾಲಿ ಸೈಕಲ್ಲುಗಳ ಅನುಭವ ಭಾರತೀಯರಿಗೂ ಇದೆ. ನಾಟಿಂಗ್ ಹ್ಯಾಮ್ ನ ಜೊತೆಗೆ ಹೊರಜಗತ್ತಿಗಿರುವ ಹಳೆಯ ನಂಟಿನ ಪ್ರಸ್ತಾವನೆಗೆ ಇಷ್ಟು ಸಾಕೇನೊ.

ಈ ಹಿನ್ನೆಲೆಯ ನಾಟಿಂಗ್ಹ್ಯಾಮ್ ನಗರ ಇರುವುದು ಇಂಗ್ಲೆಂಡ್ ನ ಮಧ್ಯಭಾಗದಲ್ಲಿ. ಆಂಗ್ಲರು ತಮ್ಮ ದೇಶದ ಮಧ್ಯಭಾಗವನ್ನು “ಮಿಡ್ ಲ್ಯಾಂಡ್ಸ್” ಎಂದು ಕರೆಯುತ್ತಾರೆ. ಇದು ಇವರ ದೇಶದ ಉತ್ತರ ದಕ್ಷಿಣ ಪೂರ್ವ ಪಶ್ಚಿಮಗಳು ಅಲ್ಲದ ಭೂಭಾಗ. ಬರ್ಮಿಂಗ್ಹ್ಯಾಮ್, ಡಾರ್ಬಿ, ಲೆಸ್ಟರ್, ಶೆಫೀಲ್ಡ್ ಗಳೂ ಈ ಮಿಡ್ ಲ್ಯಾಂಡ್ಸ್ ಕುಟುಂಬದ ಸದಸ್ಯ ನಗರಗಳೇ. ನಾಟಿಂಗ್ಹ್ಯಾಮ್ ನ ಚರಿತ್ರೆ ಕುತೂಹಲದಾಯಕವಾಗಿದ್ದರೂ ಸದ್ಯದ ಮಟ್ಟಿಗೆ ಈ ನಗರ ಸುದ್ದಿಯಲ್ಲಿರುವುದು ಕೋವಿಡ್ ಸೋಂಕು ವೇಗವಾಗಿ ಏರುತ್ತಿರುವ ಕಾರಣಕ್ಕೆ.

ಒಂದು ಲಕ್ಷ ಜನರಲ್ಲಿ ಎಷ್ಟು ಜನರಿಗೆ ಸೋಂಕು ಇದೆ ಎನ್ನುವ ಆಧಾರದಲ್ಲಿ ನಿರ್ಧರಿತವಾಗುವ ತೀವ್ರತೆಯ ಅಳತೆಯಲ್ಲಿ ನಾಟಿಂಗ್ಹ್ಯಾಮ್ ಇದೀಗ ದೇಶದಲ್ಲಿ ಅತಿಹೆಚ್ಚು ಸೋಂಕು ಇರುವ ನಗರಗಳಲ್ಲಿ ಮತ್ತೆ ಸರಕಾರದ ಆರೋಗ್ಯ ಇಲಾಖೆಗಳ ನಿಗಾದಲ್ಲಿ ಇರುವ ಪ್ರದೇಶಗಳಲ್ಲಿ ಒಂದು.

ಇಂತಹ ಅಂತಹ ನಾಟಿಂಗ್ಹ್ಯಾಮ್ ನ ಬೀದಿಯೊಂದರ ಬದಿಯ ಕಂಬಕ್ಕೆ ಕೆಲವಾರಗಳ ಹಿಂದೆ ಮುರಿದ ಸೈಕಲ್ಲೊಂದನ್ನು ಯಾರೋ ಬೀಗ ಹಾಕಿ ಬಂಧಿಸಿದ್ದು ಕಂಡುಬಂದಿತ್ತು. ಸರಿ ಇದ್ದ ಸೈಕಲ್ಲನ್ನು ಕಂಬಕ್ಕೊ ಗೇಟಿಗೊ ಅದರ ಯಜಮಾನರು ಲಾಕ್ ಮಾಡಿ ಹೋದರೆ, ಅವರು ಬರುವುದರೊಳಗೆ ಸೈಕಲ್ ಕಾಣೆಯಾಗುವುದು ಈ ದೇಶದಲ್ಲಿ ಸಾಮಾನ್ಯ. ಎಂತಹ ಭದ್ರತೆಯ ಬೀಗ ಸರಪಳಿಯನ್ನೂ ಕ್ಷಣಮಾತ್ರದಲ್ಲಿ ಭಂಗಿಸಿ ಸೈಕಲ್ ನಾಪತ್ತೆ ಮಾಡುವ ಮಹಾನ್ ಕಸುಬಿಗಳು ಈ ದೇಶದಲ್ಲಿ ಎಲ್ಲೆಲ್ಲೂ ಇದ್ದಾರೆ. ಅವರ್ಯಾರೂ ರಾಬಿನ್ ಹುಡ್ ನ ವಂಶಸ್ಥರು ಇರಲಿಕ್ಕಿಲ್ಲ, ಮತ್ತೆ ತಾವು ಸೈಕಲ್ಲನ್ನು ಕದ್ದು ಮಾರಿ ಇನ್ನೊಬ್ಬರ ಕಷ್ಟವನ್ನು ನಿವಾರಿಸುವ ಸೈದ್ಧಾಂತಿಕ ಕಳ್ಳರೂ ಅವರಲ್ಲ ಬಿಡಿ. ಕಂಬಕ್ಕೆ ಬಂಧಿಯಾದ ನುಜ್ಜುಗುಜ್ಜಾದ ಆ ಸೈಕಲ್ಲನ್ನು ಗಮನಿಸಿದರೆ ಅದೊಂದು ವೈಚಿತ್ಯ್ರ ಅಥವಾ ಕುಚೋದ್ಯ ಅಂದುಕೊಳ್ಳುವ ಹಾಗಿತ್ತು.

ತೀರ್ಮಾನ ಆಗದ ಅಂತಹ ಚರ್ಚೆ ಜಿಜ್ಞಾಸೆಗಳು ಈಗಲೂ ಜೀವಂತವಾಗಿದ್ದರೂ ಆತನನ್ನು ಓದಲು ತಿಳಿಯಲು ಅವನ ಸುತ್ತಲಿನ ಊಹೆ ಸಂಶಯ ವಾದಗಳು ಎಂದೂ ಅಡ್ಡಿ ಬರುವುದಿಲ್ಲ. ಮತ್ತೆ ಆತನ ಜನಪ್ರಿಯತೆಗೆ ಸಾಕ್ಷಿಯಾಗಿ ಅವನ ಹೆಸರಿನಲ್ಲಿ ನಿರ್ಮಿತವಾದ ಚಲನಚಿತ್ರಗಳ, ಬರೆಯಲ್ಪಟ್ಟ ಪುಸ್ತಕಗಳ ಉದ್ದವಾದ ಪಟ್ಟಿಯೇ ಇದೆ.

ಸೈಕಲ್ ನ ಮುಂದಿನ ಚಕ್ರ ಸೊಟ್ಟೆಯಾಗಿದೆ. ಸೀಟಿಗೆ ತೇಪೆ ಹಚ್ಚಲಾಗಿದೆ. ಮತ್ತೆ ಮುಖ್ಯವಾಗಿ, ಹಿಂದಿನ ಚಕ್ರವೇ ಇದಕ್ಕಿಲ್ಲ. ಹೀಗೆ ಎಲ್ಲಿಗೂ ಹೋಗಲಾಗದ ಮತ್ತೆ ಎಲ್ಲಿಂದಲೂ ಇಲ್ಲಿಗೆ ತನ್ನ ಚಕ್ರಕಾಲುಗಳ ಬಲದಲ್ಲಿ ಬಂದಿರಲಾಗದ ಸೈಕಲ್ ಅದಾಗಿತ್ತು. ಭಗ್ನಸ್ಥಿತಿಯಲ್ಲಿ ಬಂಧಿಯಾಗಿರುವ ಸೈಕಲ್, ಆ ಬೀದಿಯನ್ನು ಬಳಸುವವರಲ್ಲಿ ಆಸುಪಾಸಿನ ಅಂಗಡಿಯವರಲ್ಲಿ ಯಾವುದೇ ವಿಶೇಷ ಆಸಕ್ತಿಯನ್ನು ಹುಟ್ಟಿಸಲಿಲ್ಲ. ಇದ್ಯಾವುದೋ ಪುಂಡಪೋಕರಿಗಳ ತಲೆಹರಟೆ ಕೆಲಸ ಇರಬೇಕು ಎಂದು ಮೂಗುಮುರಿದು ಸಾಗಿದವರೇ ಬಹಳ ಮಂದಿ. ಈ ಅಲಕ್ಷ್ಯಕ್ಕೆ ಒಂದು ಅಚಾನಕ್ ತಿರುವು ನೀಡುವಂತೆ ಬೀದಿಬದಿಯಲ್ಲಿ ಸೈಕಲ್ ಕಾಣಿಸಿಕೊಂಡ ಮರುದಿನದ ಬೆಳಿಗ್ಗೆ, ಬೀದಿ, ಸೈಕಲ್, ಕಂಬಗಳ ಹಿನ್ನೆಲೆಯಲ್ಲಿರುವ ಕೆಂಪು ಇಟ್ಟಿಗೆಯ ಗೋಡೆಯ ಮೇಲೆ ಕಪ್ಪು ಬಿಳಿ ಬಣ್ಣಗಳ ಒಂದು ಚಿತ್ರ ಪ್ರತ್ಯಕ್ಷವಾಗಿತ್ತು.

ಒಬ್ಬಳು ಬಾಲೆ, ತನ್ನ ಎರಡೂ ಕೈಗಳನ್ನು ಸ್ವಚ್ಛಂದವಾಗಿ ಚಾಚಿರುವುದು ಮತ್ತೆ ಸೊಂಟದ ಸುತ್ತ ಸೈಕಲ್ ಟೈಯರ್ ಅನ್ನೇ ಬಳೆಯಂತೆ ಧರಿಸಿರುವುದು ತಿರುಗಿಸುತ್ತಿರುವುದು. ನುಜ್ಜುಗುಜ್ಜಾದ ಸೈಕಲಿನಲ್ಲಿ ಇಲ್ಲದ ಹಿಂದಿನ ಚಕ್ರ ಭಿತ್ತಿಚಿತ್ರದಲ್ಲಿರುವ ಪೋರಿಯ ಸೊಂಟದಲ್ಲಿ “ಹುಲಾ ಹೂಪ್” ನಂತೆ ನಲಿಯುತ್ತಿದೆಯೇನೋ ಅನಿಸುತ್ತಿತ್ತು. ಹುಲಾ ಹೂಪ್ ಎಂದು ಕರೆಯಲ್ಪಡುವ ಟೊಳ್ಳು ಪ್ಲಾಸ್ಟಿಕ್ ಚಕ್ರವನ್ನು ಸೊಂಟದ ಸುತ್ತ ತಿರುಗಿಸುವುದು, ಯಾರು ಎಷ್ಟು ಹೊತ್ತು ಸೊಂಟದಲ್ಲೇ ನಿಲ್ಲಿಸುತ್ತಾರೆಂದು ಪಂಥ ಹಾಕಿಕೊಳ್ಳುವುದು ಇಲ್ಲಿನ ಬಾಲ್ಯದ ಆಟಗಳಲ್ಲಿ ಸಾಮಾನ್ಯ. ಇನ್ನು ಹುಲಾ ಹೂಪ್ ಅನ್ನು ಕ್ರೀಡೆ, ಅಂಗಸಾಧನೆ, ವ್ಯಾಯಾಮ, ಸರ್ಕಸ್, ಇನ್ನೇನೋ ಚಮತ್ಕಾರಗಳಲ್ಲಿ ತುಸು ಗಂಭೀರ ಸ್ವರೂಪದಲ್ಲಿ ಬಳಸುವುದೂ ಇದೆ. ಮತ್ತೆ ಅಂಗಡಿಗಳಲ್ಲಿ ವಿವಿಧ ಗಾತ್ರಗಳಲ್ಲಿ ದೊರೆಯುವ ಸಿದ್ಧಮಾದರಿಯ ಹುಲಾ ಹೂಪ್ ತುರ್ತಾಗಿ ಆ ಕ್ಷಣಕ್ಕೆ ದೊರೆಯದಿದ್ದರೆ ಕಣ್ಣೆದುರು ಸಿಗುವ ವೃತ್ತಾಕೃತಿಯ ಅಂತಹ ಯಾವುದೇ ವಸ್ತುವನ್ನು ಬದಲಿಯಾಗಿ ಉಪಯೋಗಿಸುವ ಸಂದರ್ಭಗಳೂ ಇವೆ. ಇಲ್ಲೂ ಮುರಿದ ಸೈಕಲ್ಲಿನ ಕಳಚಿದ ಟೈಯರ್ ಗೋಡೆಚಿತ್ರದ ಹುಡುಗಿಯ ಆಟದ ವಸ್ತುವಾಗಿದೆ.

ಗೋಡೆಯ ಮೇಲೆ ವಿಶೇಷವಾದುದನ್ನೇನೋ ಹೇಳುವ ಚಿತ್ರಗಳನ್ನು ಬರೆಯುವವರ ಪರಂಪರೆ ಜಗತ್ತಿನ ಇತರ ಕಡೆಗಳಲ್ಲಿ ಇರುವಂತೆ ಇಲ್ಲಿಯೂ ಇದೆ. ಬ್ರಿಟನ್ನಿನ ಪ್ರತಿ ನಗರದಲ್ಲೂ ಭಿತ್ತಿಚಿತ್ರಗಳು ಕಾಣಿಸುತ್ತವೆ ಮತ್ತೆ ಅಂತಹ ಭಿತ್ತಿಚಿತ್ರಗಳನ್ನೇ ಅರಸುತ್ತ ಅವುಗಳನ್ನು ತಿಳಿಯುತ್ತ ಊರು ತಿರುಗುವವರೂ ಇಲ್ಲಿದ್ದಾರೆ. ಇಲ್ಲಿನ ಗ್ರಾಫಿಟಿ ಚಿತ್ರಕಾರರಲ್ಲಿ ವಿಶೇಷ ಚರ್ಚೆಗೊಳಗಾದವನು ಕುತೂಹಲಕರವಾದ ವ್ಯಕ್ತಿತ್ವವನ್ನು ಹೊಂದಿದವನು “ಬ್ಯಾಂಕ್ಸಿ” ಎನ್ನುವಾತ. ಈತನ ನಿಜನಾಮ ಅದಲ್ಲವಾದರೂ ಆತ ಜನರಿಗೆ ಪರಿಚಿತನಾಗುವುದು ಆ ಹೆಸರಿನಿಂದಲೇ.

ಕಳೆದ ಮೂವತ್ತು ವರ್ಷಗಳಲ್ಲಿ ಇಲ್ಲಿನ ಬೇರೆ ಬೇರೆ ನಗರಗಳ ಕಟ್ಟಡಗಳ ಗೋಡೆ, ಸೇತುವೆ, ಪಾಗಾರಗಳ ಮೇಲೆ ಆಯಾ ಸಮಯದ ರಾಜಕೀಯ ಸಾಮಾಜಿಕ ಸಂಧಿಗ್ಧತೆ ಪ್ರಕ್ಷುಬ್ಧತೆಗಳ ಬಗ್ಗೆ ಎಚ್ಚರ ವಿಶ್ಲೇಷಣೆ ಪ್ರಶ್ನೆಗಳನ್ನು ಕಣ್ಣಿಗೆ ಕಟ್ಟುವಂತೆ ತನ್ನ ಭಿತ್ತಿಚಿತ್ರಗಳ ಮೂಲಕ ಹೇಳುತ್ತಲೇ ಬಂದಿದ್ದಾನೆ. ಯಾರ ಕಣ್ಣಿಗೂ ಕಾಣದ ಮಾತಿಗೂ ಸಿಗದ ಅಜ್ಞಾತ ಬದುಕನ್ನು ನಡೆಸುವ ಬ್ಯಾಂಕ್ಸಿ ಮೂಲತಃ ಇಂಗ್ಲೆಂಡ್ ನ ನೈರುತ್ಯಕ್ಕಿರುವ ಬ್ರಿಸ್ಟಲ್ ನವನು ಎಂದು ಹೇಳುತ್ತಾರೆ. ಅನಾಮಿಕನಾಗಿದ್ದರೂ ಯಾರೊಡನೆಯೂ ನೇರಾನೇರ ಸಂವಾದಕ್ಕೆ ಇಳಿಯದಿದ್ದರೂ ತನ್ನ ಭಿತ್ತಿಚಿತ್ರಗಳ ವಿನ್ಯಾಸ ಭಾವ ಸಂಕೇತ ಅಭಿವ್ಯಕ್ತಿಗಳ ಮೂಲಕ ತೀವ್ರವಾದ ಸಂದೇಶವನ್ನು ನೀಡುವ ಮತ್ತೆ ಗಹನವಾದ ಚರ್ಚೆಯನ್ನು ಹುಟ್ಟುಹಾಕುವ ಸಾಮರ್ಥ್ಯ ಇರುವವನು.

ಇವನ ಗ್ರಾಫಿಟಿಗಳಿಗೆ ಅಪಾರ ಬೇಡಿಕೆ ಜನಾಕರ್ಷಣೆ ಇದೆ. ಮುರಿದ ಸೈಕಲ್ ಮತ್ತು ಅದರ ಹಿನ್ನೆಲೆಯ “ಹುಲಾ ಹೂಪ್ ಹುಡುಗಿ”ಯೂ ಇವನದೇ ಕೃತಿ. ಇದು ತನ್ನದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಬ್ಯಾಂಕ್ಸಿ ಘೋಷಣೆಮಾಡಿಕೊಂಡ ಕೂಡಲೇ ನಾಟಿಂಗ್ಹ್ಯಾಮ್ ನ ಈ ಬೀದಿಗೆ ಜನರು ಬರುವುದು, ಸರತಿ ಸಾಲಿನಲ್ಲಿ ನಿಂತು ಫೋಟೋ ತೆಗೆಯುವುದು ತೆಗೆಸಿಕೊಳ್ಳುವುದು ಶುರು ಆಗಿತ್ತು.

ಬ್ಯಾಂಕ್ಸಿ ಯ ಭಿತ್ತಿಚಿತ್ರಗಳ ಓದಿನಲ್ಲಿ ಪರಿಣಿತರಾದ ಪ್ರೊಫೆಸರ್ ಒಬ್ಬರು, ನಾಟಿಂಗ್ ಹ್ಯಾಮ್ ನಲ್ಲಿ ಕಂಡುಬಂದಿರುವ ಚಿತ್ರವನ್ನೂ ವಿಶ್ಲೇಷಿಸಿಸುವ ಪ್ರಯತ್ನ ಮಾಡಿದರು. ಬ್ಯಾಂಕ್ಸಿಯ ಈ ಹಿಂದಿನ ನಾಲ್ಕೈದು ಭಿತ್ತಿಚಿತ್ರಗಳು ಕೋವಿಡ್ ಕಾಲದ ಬಗೆಗಿನ ವಿಶೇಷ ಟಿಪ್ಪಣಿಯಾಗಿರುವಂತೆ ಈ ಚಿತ್ರವೂ ಸದ್ಯದ ಪರಿಸ್ಥಿತಿಯ ವ್ಯಾಖ್ಯಾನವೇ ಇರಬಹುದು. ಈಗಿನ ಬದುಕು, ಮುರಿದ ಸೈಕಲ್ಲಿನಂತಿದೆ. ಅದೇ ಮುರಿದ ಬದುಕಿನೊಳಗಿನಿಂದ ಒಂದು ಸರಳ ಸಾಮಾನ್ಯ ನಿರುಪಯೋಗಿ ಎಂದು ಕಾಣುವ ವಸ್ತುವನ್ನು ತೆಗೆದು ಆಟಿಕೆಯಂತೆ ಬಳಸಿ ಉಲ್ಲಾಸದಲ್ಲಿರುವ ಬಾಲಕಿಯಂತೆ ನಾವೂ ಇರೋಣ ಎನ್ನುವ ಅರ್ಥ ಇದಾಗಿರಬಹುದು ಎಂದು ಅಭಿಪ್ರಾಯಪಟ್ಟರು. ಕಾಲವೇ ಸೋತು ಮುರಿದು ಬಿದ್ದಿರುವಾಗ, ಅದೇ ಕಾಲದೊಳಗಿನ ಒಂದು ಸಣ್ಣ ವಸ್ತು ವಿಚಾರ ನಮ್ಮ ಉತ್ಸಾಹವನ್ನು ಹೆಚ್ಚಿಸಲಿ ಎಂದೂ ಹೇಳುತ್ತಿರಬಹುದು.

ತನ್ನ ಹೆಚ್ಚಿನ ಚಿತ್ರಗಳಲ್ಲಿ ಅಧಿಕಾರಶಾಹಿಯನ್ನೋ ದೊಡ್ಡ ಕಂಪೆನಿಗಳನ್ನೋ ವಿಮರ್ಶೆಗೆ ಒಡ್ಡುವ ಬ್ಯಾಂಕ್ಸಿ, ಸದ್ಯದ ಕುಸಿತವನ್ನು ಅಸಹಾಯಕತೆಯನ್ನು ಹೇಗೆ ಸ್ವೀಕರಿಸಬಹುದು ಎನ್ನುವ ಯೋಚನೆಗಳನ್ನು ಬಿತ್ತಿದ್ದಾನೆ. ಭಿತ್ತಿಚಿತ್ರದ ಮೂಲಕ ಮಾಡಿದ ಟಿಪ್ಪಣಿ ಯಾರಲ್ಲಿ ಎಷ್ಟು ವಿಮರ್ಶೆಯನ್ನು ಅವಲೋಕನವನ್ನು ಹುಟ್ಟಿಸಿತೋ ಗೊತ್ತಿಲ್ಲ ಆದರೆ ಇಂತಹ ಗ್ರಾಫಿಟಿ ಚಿತ್ರಗಳನ್ನುನೋಡಿ ಅರ್ಥೈಸಿಕೊಳ್ಳಲಾಗದವರೂ ಹಿರಿಯರೂ ಎಳೆಯರೂ ದುಂಬಾಲು ಬಿದ್ದು ಗೋಡೆಯ ಮೇಲಿನ ಬಾಲೆಯನ್ನು ನೋಡಲು ಅವಳ ಬಳಿ ನಿಂತು ಫೋಟೋ ತೆಗೆಯಲಂತೂ ಬರುತ್ತಿದ್ದಾರೆ.

ಮತ್ತೆ ಕೋವಿಡ್ ಕಾಲದಲ್ಲಿ ಬರೇ ಕೆಡುಕಿನ ಕಾರಣಗಳಿಗೆ ಸುದ್ದಿಯಾಗುತ್ತಿರುವ ತಮ್ಮ ಊರು ವಿಮರ್ಶೆ ವಿವೇಚನೆಗಳನ್ನು ಹುಟ್ಟಿಸುತ್ತಿರುವುದನ್ನು ನಾಟಿಂಗ್ಹ್ಯಾಮ್ ವಾಸಿಗಳು ಸ್ವಾಗತಿಸಿದ್ದಾರೆ. ಅಲ್ಲದೇ ನಗರಸಭೆಯವರು ಗೋಡೆಚಿತ್ರದ ಮೇಲೆ ಯಾರೂ ಗೀಚದಂತೆ ಪಾರದರ್ಶಕ ಪ್ಲಾಸ್ಟಿಕ್ ಕವಚವನ್ನು ಅಂಟಿಸಿ ಕಾಪಾಡುವ ಪ್ರಯತ್ನವನ್ನೂ ಮಾಡಿದ್ದಾರೆ.

ಬೀದಿಚಿತ್ರ ಕಲಾವಿದನ ಕಲೆ ಕಲ್ಪನೆಗೆ ಯಾವ ರಕ್ಷಣೆ ಆವರಣ ಇದ್ದರೂ, ಎಷ್ಟು ಜನರು ಬಂದು ಫೋಟೋ ತೆಗೆದರೂ, ಪತ್ರಿಕೆಗಳಲ್ಲಿ ಚರ್ಚೆ ಆದರೂ ಕಾಲಾನುಕ್ರಮದಲ್ಲಿ ಎಲ್ಲವೂ ಮರೆವಿಗೆ ಸರಿಯಬಹುದು. ಕೋವಿಡ್ ಕಾಲಕ್ಕೆಂದೇ ಕಟ್ಟಿದ ರೂಪಕ ಮತ್ತೆ ಹುಟ್ಟಿಸಿದ ಚರ್ಚೆ ಹೊಳಹುಗಳು ಕೆಲವು ದಿನಗಳಲ್ಲಿ ತಟಸ್ಥವಾಗಬಹುದು. ಬೀದಿಬದಿಯಲ್ಲಿ ಮುರಿದು ಬಿದ್ದಿರುವ ನಿಷ್ಪ್ರಯೋಜಕ ಸೈಕಲ್ಲನ್ನು ಸರಪಳಿ ಬೀಗ ಸಮೇತ ಯಾರೋ ಕಸದ ಬುಟ್ಟಿಗೆ ಎಸೆಯಬಹುದು, ಉಲ್ಲಾಸದಲ್ಲಿ ಕುಣಿಯುತ್ತಿರುವ ಹುಡುಗಿಯ ಗೋಡೆಚಿತ್ರವೂ ನಿತ್ಯದ ಧೂಳು ಬಿಸಿಲು ಗಾಳಿ ಮಳೆಗಳಲ್ಲಿ ಮಾಸಬಹುದು. ಹಾಗಂತ ಮುರಿದ ಸೈಕಲ್ ನಾಟಿಂಗ್ಹ್ಯಾಮ್ ನ ಬೀದಿಯಲ್ಲಿ ಮಾತ್ರವಲ್ಲದೇ ಎಲ್ಲೆಲ್ಲೂ ಕಾಣಿಸುತ್ತಲೇ ಇರುವಂತಹದ್ದು. ಈ ಹಿಂದೆಯೂ ಇನ್ನು ಮುಂದೆಯೂ.

ಮತ್ತೆ ಸೈಕಲ್ ಅನ್ನು ಮುರಿದು ಬೀಳುವುದರಿಂದ ತಪ್ಪಿಸುವುದಂತೂ ಯಾರಿಂದಲೂ ಸಾಧ್ಯ ಆಗಲಿಕ್ಕಿಲ್ಲ. ಸಾಧ್ಯ ಆಗುವುದಿದ್ದರೆ, ಕಣ್ಣೆದುರಿಗಿರುವ ಕಾಲದೊಳಗಿಂದ ಉಲ್ಲಾಸದ ಒಂದು ಕ್ಷಣವನ್ನು ಹೆಕ್ಕಿ ಆಸ್ವಾದಿಸುವುದು, ಕೆಲಘಳಿಗೆಗಳ ಮಟ್ಟಿಗಾದರೂ ಹುಲಾ ಹೂಪ್ ಹುಡುಗಿಯಂತೆ ನಲಿಯುವುದು ಮಾತ್ರ.