ಡ್ರೈವರ್ ಸೀಟಿನಿಂದ ಡ್ರೈವರ್ ಕೆಳಗೆ ಧುಮುಕಿ, ನಮ್ಮ ಗಾಡಿಯ ಹತ್ತಿರ ಬಂದು ಕುದುರೆಯನ್ನು ತಬ್ಬಿಕೊಂಡು, ‘ಬೇಟ, ಬೇಟ’ ಎಂದು ಅಳಲಾರಂಭಿಸಿದ. ಅವನು ಬರುತ್ತಿಂದೆತೆಯೇ ಕುದುರೆಯೂ ಅವನನ್ನು ಗುರ್ತಿಸಿ, ಘೊರ್, ಘೊರ್ ಶಬ್ಧ ಮಾಡಿ ನಾಲಿಗೆಯಿಂದ ಅವನನ್ನು ನೆಕ್ಕಲು ಶುರು ಮಾಡಿತು. ಇನ್ನೊಂದು ನಿಮಿಷದಲ್ಲಿ, ಅವನು ಗಾಡಿಯಿಂದ ಕುದುರೆಗೆ ಹುಲ್ಲು ತಿನ್ನಿಸಿ, ಕಣ್ಣೊರೆಸಿಕೊಂಡು ಬಸ್ಸನ್ನು ಬಿಟ್ಟುಕೊಂಡು ಹೊರಟುಹೋದ. ಇದನ್ನು ಸುತ್ತಲೂ ನೆರೆದಿದ್ದ ಜನ, ಬಸ್ಸಿನಲ್ಲಿ ಮುಂದೆ ಕೂತವರು, ನಾವು ಮೂಕರಾಗಿ ನೋಡುತಿದ್ದೆವು.
ಇ.ಆರ್.ರಾಮಚಂದ್ರನ್ ಲೇಖನ

 

ಬಹಳ ವರ್ಷದ ಹಿಂದಿನ ಮಾತು. ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದೆನೋ ಏನೋ… ನಮ್ಮ ಮನೆಯಲ್ಲಿ ಒಂದು ನಾಯಿ ಸಾಕಿದ್ದೆವು. ಹಾಗೆ ನೋಡಿದರೆ ನಮ್ಮ ಮನೆಯಲ್ಲಿ ನಾಯಿಗಳಿದ್ದು ಅವರ ಜೊತೆಗೇ ನಾವೂ ದೊಡ್ಡವರಾದೆವು. ಅವುಗಳ ಜೊತೆಯಿದ್ದರೆ ಬೇರೇ ಯಾರೂ ಸ್ನೇಹಿತರು ಬೇಕಿಲ್ಲ ಅನ್ನಿಸುವುದು ಎಷ್ಟೋ ಸಲ. ಅದಕ್ಕೆ ನಾವು ರಾಜು ಎಂದು ಹೆಸರಿಟ್ಟಿದ್ದೆವು.

ರಾಜು ಮರಿಯಾಗಿದ್ದಾಗಲೇ ಬಹಳ ಹುರುಪುನಿಂದ ಮನೆಯೆಲ್ಲಾ ಸುತ್ತಾಡಿ, ಕುಣಿದು ಕುಪ್ಪಳಿಸುತ್ತಿತ್ತು. ಮನೆಯೆಲ್ಲಾ ಗಲೀಜು ಮಾಡುತ್ತೇ ಅಂತ ನಮ್ಮ ತಾಯಿ ಗೊಣಗಿದರೂ ಅದರ ಆಟ, ಓಟ ಮನೆಯಲ್ಲಿ ಎಲ್ಲರಿಗೂ ಬಹಳ ಹಿಡಿಸುತ್ತಿತ್ತು. ಸ್ಕೂಲು, ಕಾಲೇಜಿನಿಂದ ಬರುತ್ತಲೇ ಎಲ್ಲರೂ ರಾಜುವಿನ ಜೊತೆ ಮೊದಲು ಆಟವಾಡಿ, ಅದನ್ನು ಮುದ್ದಾಡಿ ಆಮೇಲೆಯೇ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ಹೋಗುತ್ತಿದ್ದರು. ನನಗೂ ನನ್ನ ಅಣ್ಣ ಕೃಷ್ಣನಿಗೂ ರಾಜುವನ್ನು ಬೆಳಿಗ್ಗೆ ಸಂಜೆ ಹೊರಗಡೆ ಕರೆದುಕೊಂಡು ಹೋಗುವ ಕೆಲಸ ಬಿತ್ತು. ನಾವಿಬ್ಬರೂ ಖುಷಿಯಾಗೇ ಆ ಜವಾಬ್ದಾರಿಯನ್ನು ಹೊತ್ತಿದ್ದೆವು.

ಒಂದು ಸರ್ತಿ ಮನೆಯಲ್ಲೇ ನನ್ನ ಅಜಾಕರೂಕತೆಯಿಂದ ರಾಜುವನ್ನು ಹಿಡಿದಿದ್ದವನು ಅದು ಹೇಗೋ ಅದನ್ನು ಕೆಳಗೆ ಹಾಕಿಬಿಟ್ಟೆ. ನೋವಿನಿಂದ ಅದು ಕೂಗಿಕೊಂಡಾಗ, ಯಾತನೆಯಿಂದ ನನ್ನ ಅಮ್ಮ, ‘ಎಂತಹ ಕೆಲಸ ಮಾಡಿದೆ!’ ಅನ್ನುವ ದೃಷ್ಟಿಯಿಂದ ನನ್ನನ್ನು ನೋಡಿದ ದೃಶ್ಯ ಈಗಲೂ ನನಗೆ ಕಣ್ಣಿಗೆ ಕಟ್ಟಿದ ಹಾಗಿದೆ. ನನಗೂ ಬೇಸರವಾಗಿ ನಾನೂ ಅಳುವುದಕ್ಕೆ ಶುರು ಮಾಡಿದೆ. ತಕ್ಷಣವೇ ನಾವೆಲ್ಲ ಬಹಳ ಜಾಗರೂಕವಾಗಿ ಅದರ ಕಾಲಿಗೆ ಮದ್ದು ಹಾಕಿ ಬಟ್ಟೆ ಕಟ್ಟಿ ಉಪಚಾರ ಮಾಡಿದೆವು. ಆದರೂ ರಾಜು ಕುಂಟುತ್ತಲೇ ಮೂಲೆಯತ್ತ ಹೋಗಿತ್ತು. ಕಾಲು ಮುರುದಿರಬಹುದು ಎಂದು ಶಂಕಿಸಿ ಅದನ್ನು ಪ್ರಾಣಿಗಳ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಒಳ್ಳೆದು ಅಂತ ಎಲ್ಲರಿಗೂ ತೋರಿತು.

ಆವಾಗ ಇನ್ನೂ ಜಟಕಾಗಾಡಿಯ ಕಾಲ. ಆಟೋ ‘ರಾಕ್ಷಸ’ ಹುಟ್ಟಿಕೊಂಡಿರಲಿಲ್ಲ. ಟೆಲಿಫೋನೂ ಬಹಳ ಮನೆಗಳಲ್ಲಿ ಇರಲಿಲ್ಲ. ಮನೆಯ ಹತ್ತಿರ ಜಟಕ ಗಾಡಿ ಸ್ಟ್ಯಾಂಡ್ ಇತ್ತು. ಆಗಾಗ್ಗೆ ಗಾಡಿಗಳನ್ನು ಯಾವುದಾದರೂ ಕೆಲಸಕ್ಕೆ ಬಾಡಿಗೆಗೆ ತೊಗೊಂಡು ಹೋಗಿ ಅದನ್ನು ಓಡಿಸುವವರ ಪರಿಚಯ ಇತ್ತು. ಮುನಿಯಪ್ಪ, ಯಾಕೂಬ್, ಜಲೀಲ್ ಅವರುಗಳು ಜಟಕಾ ಗಾಡಿಯ ಜೊತೆ ಸ್ಟ್ಯಾಂಡಿನಲ್ಲಿ ಇರುತ್ತಿದ್ದರು.

ಆವತ್ತು ನಾನು ಸ್ಟ್ಯಾಂಡಿಗೆ ಓಡಿ ಹೋದಾಗ ಯಾಕೂಬ್ ನ ಗಾಡಿ ಇತ್ತು. ಅವನಿಗೆ ಬೇಗ ವಿಚಾರ ಹೇಳಿ ಜಟಕಾ ಗಾಡಿಯನ್ನು ಮನೆಗೆ ಕರೆದುಕೊಂಡು ಹೋದೆ. ಅಷ್ಟರಲ್ಲಿ ನಮ್ಮ ತಾಯಿ ಅಣ್ಣ ರಾಜುವನ್ನು ಎತ್ತಿಕೊಂಡು ತಯಾರಾಗಿದ್ದರು. ಬಸವನಗುಡಿಯ ನ್ಯಾಷನಲ್ ಕಾಲೇಜಿನ ಹತ್ತಿರ ಇರುವ ನಮ್ಮ ಮನೆಯಿಂದ ಮೈಸೂರ್ ರೋಡಿನಲ್ಲಿರುವ ಪ್ರಾಣಿಗಳ ಆಸ್ಪತ್ರೆಗೆ ಹೊರಟೆವು. ಹೋಗಿ ಬರುವುದಕ್ಕೆ ಬಾಡಿಗೆ ಒಂದು ರೂಪಾಯಿಯೆಂದು ನಿಷ್ಕರ್ಷೆ ಆಯಿತು. ಯಾಕೂಬ್ ನಮ್ಮನ್ನು ಇನ್ನು ಮುಂದೆ ಬನ್ನಿಯೆಂದು ಹೇಳುತ್ತಾ.. ಚಾವಟಿಯಿಂದ ಕುದರೆಯಮೇಲೆ ತಾಕಿಯೂ ತಾಕದಂತೆ ತಾಕಿಸಿ, ಬಾಯಲ್ಲಿ ಅದಕ್ಕೆ ಹುರುಪುಗೊಡುತ್ತಾ ನಾಗಾಲೋಟದಿಂದ ಓಡಿಸಲು ಶುರು ಮಾಡಿದ. ಆಗ ದಾರಿಯಲ್ಲಿ ಟ್ರಾಫಿಕ್ ಬಹಳ ಕಡಿಮೆ. ಬರೀ ಸೈಕಲ್ ಗಳೆ! ಅಲ್ಲಿಲ್ಲಿ ಒಂದೆರೆಡು ಕಾರುಗಳು. ಅವುಗಳುಕೂಡ ಬಹಳ ನಿಧಾನವಾಗಿ ಚಲಾಯಿಸುತ್ತಿದ್ದರು. ಆಗ ತಾನೆ ‘ಬಿಟ್ರೆ ಸಿಗೊಲ್ಲ’ಅಂತ ಹೆಸರುವಾಸಿಯಾದ ಬಿಟಿಎಸ್ ಬಸ್ಸುಗಳು ಹೊಗೆ ತುಂಬಿಕೊಂಡು ಓಡಾಡುತ್ತಿದ್ದವು.

ಶಂಕರ ಮಠದ ರಸ್ತೆಯಲ್ಲಿ ಹೋಗಿ, ಚಾಮರಾಜಪೇಟೆಯಲ್ಲಿನ ಚರ್ಚಿನ ಮುಂದೆ ಹೋದರೆ ಮೈಸೂರು ರಸ್ತೆ ಶುರು. ಅಲ್ಲಿ ಪೋಲೀಸರ ತರಬೇತಿ ಕೇಂದ್ರವಿತ್ತು. ಪೋಲಿಸರಿಗೆ ಬೆಳಿಗ್ಗೆ ‘ಲೆಫ್ಟ್, ರೈಟ್’ ಮಾಡಿಸುತ್ತಿದ್ದರು. ಮಿಕ್ಕಿದ್ದು ಅವರಿಗವರೇ ಕಲಿಯುತ್ತಿದ್ದರು ಅನ್ನಿಸುತ್ತೆ!

ಯಾತನೆಯಿಂದ ನನ್ನ ಅಮ್ಮ, ‘ಎಂತಹ ಕೆಲಸ ಮಾಡಿದೆ!’ ಅನ್ನುವ ದೃಷ್ಟಿಯಿಂದ ನನ್ನನ್ನು ನೋಡಿದ ದೃಶ್ಯ ಈಗಲೂ ನನಗೆ ಕಣ್ಣಿಗೆ ಕಟ್ಟಿದ ಹಾಗಿದೆ. ನನಗೂ ಬೇಸರವಾಗಿ ನಾನೂ ಅಳುವುದಕ್ಕೆ ಶುರು ಮಾಡಿದೆ. ತಕ್ಷಣವೇ ನಾವೆಲ್ಲ ಬಹಳ ಜಾಗರೂಕವಾಗಿ ಅದರ ಕಾಲಿಗೆ ಮದ್ದು ಹಾಕಿ ಬಟ್ಟೆ ಕಟ್ಟಿ ಉಪಚಾರ ಮಾಡಿದೆವು. ಆದರೂ ರಾಜು ಕುಂಟುತ್ತಲೇ ಮೂಲೆಯತ್ತ ಹೋಗಿತ್ತು.

ಡಾಕ್ಟರ್ ಎಕ್ಸ್-ರೆ ತೆಗೆದು ಕಾಲು ಒಡೆದಿದೆ ಎಂದರು. ಅದಕ್ಕೆ ಬ್ಯಾಂಡೇಜ್ ಕಟ್ಟಿ ನಾವು ದಿನಬಿಟ್ಟು ದಿನ ಆಸ್ಪತ್ರೆಗೆ ರಾಜುವನ್ನು ಕರೆದುಕೊಂಡು ಬರಬೇಕು ಎಂದರು. ಹತ್ತು ದಿನದಲ್ಲಿ ಸರಿಯಾಗಬಹುದೆಂದು ಭರವಸೆ ಕೊಟ್ಟರು. ಯಾಕೂಬಿಗೆ ಹೇಳಿ 10 ಗಂಟೆಗೆ ನಾನು ಮತ್ತು ನನ್ನ ತಾಯಿ ದಿನಾ ಬೆಳಿಗ್ಗೆ 10 ಘಂಟೆಗೆ ಹೋಗುತ್ತಿದ್ದೆವು. ಯಾಕೂಬಿಗೆ ವಯಸ್ಸಾಗಿತ್ತು. ಪಳಗಿದ ಕೈ. ಗಾಡಿಯನ್ನೂ, ಕುದುರೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು.  ಕ್ರಮೇಣ ರಾಜುವಿನ ಕಾಲಿನ ಗಾಯ ವಾಸಿಯಾಗುತ್ತಾ ಬಂತು. ನಾನು ಮನೆಗೆ ವಾಪಸ್ಸಾದಾಗ, ಗಾಡಿಯಲ್ಲಿ ಹಾಸಿದ ಜಮಖಾನದ ಕೆಳಗಿನಿಂದ ಕುದುರೆಗೆ ಹಸಿ ಹುಲ್ಲು ಕೊಡುತ್ತಿದ್ದೆ. ಅದು ಯಾಕೂಬನಿಗೂ ಇಷ್ಟವಾಯಿತು. ಅದು ‘ತ್ಯಾಂಕ್ಸ್ ಗೀವಿಂಗ್’ ಅನ್ತಾರಲ್ಲಾ ಹಾಗೆ. ಒಂದು ಪ್ರಾಣಿಯ ಸಹಕಾರದಿಂದ ಸಹಾಯದಿಂದ ಇನ್ನೊಂದು ಪ್ರಾಣಿಗೆ ಗುಣವಾಗ್ತಿದೆ.

ಒಂದು ಸಲ ಮೈಸೂರು ರಸ್ತೆಯಲ್ಲಿ ಹೋಗುತ್ತಿದ್ದಾಗ, ನಮ್ಮೆದುರುಗೆ ಬರುತ್ತಿದ್ದ ಬಿ.ಟಿ.ಎಸ್ ನಮ್ಮೆದುರಿಗೆ ಹಠಾತ್ತನೆ ಬ್ರೇಕ್ ಹಾಕಿ ಮಧ್ಯ ರಸ್ತೆಯಲ್ಲೇ ನಿಂತಿತು. ಆಫೀಸಿಗೆ ಅಂಗಡಿಗೆ ಹೋಗುವವರು ಇತ್ಯಾದಿ ಜನ ಬಸ್ಸಿನಲ್ಲಿ ಕಿಕ್ಕಿರಿದು ತುಂಬಿದ್ದರು.

ಡ್ರೈವರ್ ಸೀಟಿನಿಂದ ಡ್ರೈವರ್ ಕೆಳಗೆ ಧುಮುಕಿ, ನಮ್ಮ ಗಾಡಿಯ ಹತ್ತಿರ ಬಂದು ಕುದುರೆಯನ್ನು ತಬ್ಬಿಕೊಂಡು, ‘ಬೇಟ, ಬೇಟ’ ಎಂದು ಅಳಲಾರಂಭಿಸಿದ. ಅವನು ಬರುತ್ತಿಂದೆತೆಯೇ ಕುದುರೆಯೂ ಅವನನ್ನು ಗುರ್ತಿಸಿ, ಘೊರ್, ಘೊರ್ ಶಬ್ಧ ಮಾಡಿ ನಾಲಿಗೆಯಿಂದ ಅವನನ್ನು ನೆಕ್ಕಲು ಶುರು ಮಾಡಿತು. ಇನ್ನೊಂದು ನಿಮಿಷದಲ್ಲಿ, ಅವನು ಗಾಡಿಯಿಂದ ಕುದುರೆಗೆ ಹುಲ್ಲು ತಿನ್ನಿಸಿ, ಕಣ್ಣೊರೆಸಿಕೊಂಡು ಬಸ್ಸನ್ನು ಬಿಟ್ಟುಕೊಂಡು ಹೊರಟುಹೋದ. ಇದನ್ನು ಸುತ್ತಲೂ ನೆರೆದಿದ್ದ ಜನ, ಬಸ್ಸಿನಲ್ಲಿ ಮುಂದೆ ಕೂತವರು, ನಾವು ಮೂಕರಾಗಿ ನೋಡುತಿದ್ದೆವು.


ಗಾಡಿ ಮುಂದೆ ಹೋಗುತ್ತಾ ಇರುವಾಗ ಸ್ವಲ್ಪ ಹೊತ್ತಾದ ಮೇಲೆ ಯಾಕೂಬ್ ಹೇಳಿದ. ಸಲೀಮನ ಮಗನಿಗೆ ಲಕ್ವ ಹೊಡೆದು ಆಸ್ಪತ್ರೆ ಖರ್ಚಿಗೆ ಅವನು ದಂಧೆ ಗಾಡಿ ಎರಡೂ ಮಾರಬೇಕಾಯಿತು. ಅದನ್ನೇ ನನಗೆ ಮಾರಿದ. ಅದನ್ನು ಬಿಟ್ಟು ಅವನು ಡ್ರೈವರ್ರಾದ. ಆದರೂ ದಾರಿಯಲ್ಲಿ ನಮ್ಮ ಗಾಡಿ ಎದುರಿಗೆ ಬಂದಾಗ, ಹೀಗೆ ಮಾಡ್ತಾನೆ. ಅವನ ಕುದುರೆಯೂ ಅವನನ್ನ ನೋಡಿದಾಗ ಅವನ ಮುಖವನ್ನ ನೆಕ್ಕಿ ತನ್ನ ಪ್ರೀತಿ ತೋರ್ಸುತ್ತೆ…..