ಅಲ್ಲಿಂದ ಮುಂದೆ ದನದ ‘ಫ್ಯಾಕ್ಟರಿ’ ನೋಡುವ ಕಾರ್ಯಕ್ರಮ. ಅಂದರೆ ದನಗಳನ್ನು ಸಿದ್ಧಪಡಿಸುವ ಫ್ಯಾಕ್ಟರಿ. ನಮ್ಮ ಸಿನಿಮಾ ಮಂದಿರಗಳ ಟಿಕೆಟ್‌ ಕೌಂಟರ್‌ಗಳ ಎದುರು ಕ್ಯೂ ನಿಲ್ಲಲು ಎರಡೂ ಕಡೆ ಅಡ್ಡಗಟ್ಟೆ ಕಟ್ಟಿದ ಹಾಗೆ, ಅಮೆರಿಕದ ದನಗಳ ಫ್ಯಾಕ್ಟರಿಯ ಎದುರು ಆಳೆತ್ತರದ ಒಂದರ್ಧ ಕಿ.ಮೀ. ಉದ್ದದ ಬೇಲಿಯಂಥ ಕಟ್ಟೆ ಕಟ್ಟಿರುತ್ತಾರೆ. ಹುಟ್ಟಿ ಎರಡು ತಿಂಗಳುಗಳಷ್ಟೇ ಆದ ಮುದ್ದು ಎಳೆಗರುಗಳನ್ನು ಎಲ್ಲಿಂದಲೋ ಸಾವಿರ ಸಂಖ್ಯೆಯಲ್ಲಿ ಖರೀದಿಸಿ ತಂದು ಇಲ್ಲಿನ ಕಟ್ಟೆಗಳ ಮಧ್ಯೆ ಸಾಲಾಗಿ ಸಾಗಿಸುತ್ತಾರೆ.
ನಾಗೇಶ್ ಹೆಗಡೆ ಅವರು ಬರೆದ ಗಗನ ಸಖಿಯರ ಸೆರಗ ಹಿಡಿದು ಕೃತಿಯ ಮತ್ತೊಂದು ಅಧ್ಯಾಯ ಇಂದಿನ ಓದಿಗೆ.

ಹಾಂಗ್‌ಕಾಂಗ್‌ನ ಜನನಿಬಿಡ ಕೌಲೂನ್‌ ಪ್ರದೇಶದ ಗೇಟ್‌ವೇ ಹೊಟೆಲ್‌ನಲ್ಲಿ ನಮ್ಮ ಎಂಟು ಜನರ ತಂಡಕ್ಕೆ ಊಟದ ಏರ್ಪಾಟಾಗಿತ್ತು. ಅದು ಭಾರೀ ಜನಪ್ರಿಯ ಹೊಟೆಲ್‌ ಆಗಿದ್ದರಿಂದ ಎರಡು ದಿನ ಮೊದಲೇ ನಮ್ಮ ಟೇಬಲ್‌ ಬುಕ್‌ ಮಾಡಿಟ್ಟಿದ್ದರು. ನಾನೊಬ್ಬನೇ ಭಾರತೀಯ ಆ ತಂಡದಲ್ಲಿ ಇದ್ದುದರಿಂದ, ಈತ ಗೋಮಾಂಸ ತಿನ್ನುವುದಿಲ್ಲ ಎಂಬುದು ನನ್ನ ಬಯೋಡೇಟಾ ಮೂಲಕ ಗೊತ್ತಾಗಿದ್ದರಿಂದ, ಇಡೀ ತಂಡಕ್ಕೆ ಬದಲೀ ಊಟದ ವ್ಯವಸ್ಥೆಯಾಗಿತ್ತು. ಭಾರೀ ಪ್ರತಿಷ್ಠಿತ ಹೊಟೆಲ್‌ ಆಗಿದ್ದರಿಂದ ನಾವು ಕೂತ ಕೇವಲ ನಾಲ್ವತ್ತು ನಿಮಿಷಗಳಲ್ಲಿ ಊಟದ ಟ್ರಾಲಿ (ಥಾಲಿ ಅಲ್ಲ ಟ್ರಾಲಿ) ಬಂತು.

ಮಬ್ಬು ಬೆಳಕು. ಟ್ರಾಲಿಯ ಮೇಲೆ ಏನೋ ಮೊಳಕೈ ಎತ್ತರದ ಮುದ್ದೆ ಕೂತಂತಿತ್ತು. ರಾಗಿ ಮುದ್ದೆ ಇರಬಹುದೆ? ಬಣ್ಣವೇನೋ ಅದೇ ಥರಾ ಇತ್ತು. ಸಮೀಪ ಬಂದಾಗ ಅದಕ್ಕೆ ಕಾಲು, ಬಾಲ, ಮೂತಿ ಎಲ್ಲ ಇರುವುದು ಅಸ್ಪಷ್ಟವಾಗಿ ಗೋಚರಿಸಿತು. ದಿಲ್ಲಿಯ ಗಣತಂತ್ರದ ಪರೇಡಿನಲ್ಲಿ ಟ್ಯಾಬ್ಲೊ ಮೇಲೆ ಕಾಲು ಮುದುರಿ ಕೂತ ಕಾಝಿರಂಗಾ ಘೇಂಡಾ ಥರಾ ಕಂಡಿತು. ಅದೊಂದು ವಿನೂತನ ವಿನ್ಯಾಸದ ಮಧುಪಾತ್ರೆ ಇರಬಹುದೆ? ಆಗಲೇ ಒಂದೊಂದು ರೌಂಡ್‌ ಮುಗಿಸಿದ್ದರಿಂದ, ಅದೇನೆಂಬುದು ಸ್ಪಷ್ಟವಾಗಿ ಕಾಣಲೇ ಇಲ್ಲ.

ಟ್ರಾಲಿ ಬಂದು ನನ್ನ ಬಳಿಯೇ ನಿಂತಿತು. ಕಕ್ಕಾವಿಕ್ಕಿಯಾಗಿ ನಾನು ನೋಡುತ್ತಿದ್ದ ಹಾಗೆ ಅದನ್ನು ತಳ್ಳಿ ತಂದ ಚೀನೀ ಮಾಣಿ ಎಂಥದೋ ಮಣಮಣಮಣ ಮಂತ್ರ ಹೇಳಿದಂತೆ ಮಾಡಿ, ಹಠಾತ್‌ ದನಿಯೇರಿಸಿ ಕುಂಗ್‌ಫೂ ಯೋಧನ ಹಾಗೆ ಮೈಕೈ ಬಗ್ಗಿಸಿ ‘ಹಿಚೀಕಿಸ್ತ್‌’ ಎಂದೇನೋ ಕೂಗಿ ಕುಪ್ಪಳಿಸಿ, ಕಡ್ಡಿ ಗೀರಿ ಆ ಮುದ್ದೆಗೆ ತಾಕಿಸಿದ್ದೇ ತಡ – ಭುಗ್ಗೆಂದು ಜ್ವಾಲೆ ಆವರಿಸಿ, ಮುದುರಿ ಕೂತಿದ್ದ ಆ ದೇಹ ಕರ್ಪೂರವಾಗಿ ಹತ್ತು ಸೆಕೆಂಡ್‌ಗಳಲ್ಲಿ ಜ್ವಾಲೆ ಆರಿತು.

ನಾನು ಶಾಕ್‌ ಹೊಡೆಸಿಕೊಂಡವನ ಹಾಗೆ ಛಂಗನೆ ದೂರ ಚಿಮ್ಮಿ ನೋಡುತ್ತಿದ್ದಂತೆ ಮಾಣಿ ಮತ್ತೊಂದು ಪಟ್ಟು ಕುಂಗ್‌ಫೂ ಕುಣಿತ ಮಾಡಿ ಕಿಸೆಯಿಂದ ಎರಡು ಪುಟ್ಟ ಖಡ್ಗಗಳನ್ನು ಹೊರತೆಗೆದು ಕಿಚಿಕ್‌ ಪಿಚಿಕ್‌ ಎಂದು ಒಂದರ ಮೇಲೊಂದನ್ನು ಉಜ್ಜಿದ. ನಂತರ ಕಛಾಕ್‌ ಕಛಾಕ್‌ ಎಂದು ಕೇಕ್‌ ಕತ್ತರಿಸುವಂತೆ ಅದರ ಬೆನ್ನಿನ ಮೇಲೆ ಎಂಟು ಗೀರು ಹಾಕಿದ. ಕಲ್ಲಂಗಡಿ ಹೋಳುಗಳನ್ನು ಎತ್ತುವ ಹಾಗೆ ಸಲೀಸಾಗಿ ಒಂದೊಂದು ಹೋಳನ್ನು ಖಡ್ಗದ ಮೊನೆಯಲ್ಲಿ ತಿವಿದು ಹಿಡಿದೆತ್ತಿ ನಮ್ಮ ನಮ್ಮ ಪ್ಲೇಟ್‌ಗಳಲ್ಲಿಟ್ಟ. ಮತ್ತೆ ಅತ್ತ ತಿರುಗಿ ಇನ್ನೆಂಥದೋ ಚಿತ್ರ ವಿಚಿತ್ರ ಆಕೃತಿಯ ಹೋಳುಗಳನ್ನು ಆ ಪ್ರಾಣಿಯ ಬೆನ್ನು, ತೊಡೆ, ಕಿಬ್ಬೊಟ್ಟೆ ಕುತ್ತಿಗೆಗಳಿಂದ ಕೊರೆ ಕೊರೆದು ತೆಗೆದು ಎಲ್ಲರ ಪ್ಲೇಟಿಗೆ ಹಂಚಿ ಕೆಚಪ್‌ ಸುರಿದ. ಎಲ್ಲ ಏಳೂ ಮಂದಿ ಬಲಗೈಯಲ್ಲಿ ಚಾಕು, ಎಡಗೈಯಲ್ಲಿ ಮುಳ್ಳು ಚಮಚ ಹಿಡಿದು ‘ಸಹನೌ ಭುನಕ್ತು’ ಮಾಡುವಷ್ಟರಲ್ಲಿ ಟ್ರಾಲಿಯ ಮೇಲೆ ಹಂದಿಯ ಬರೀ ಅಸ್ಥಿಪಂಜರ ಮಾತ್ರ ಉಳಿದಿತ್ತು.

ಹಂದಿಯ ಇಡೀ ದೇಹವನ್ನು ಅಡುಗೆ ಮನೆಯ ಅಗ್ಗಿಷ್ಟಿಕೆಯಲ್ಲಿ ಬೇಯಿಸಿ ಮೇಲೆ ಬೆಣ್ಣೆ ಲೇಪಿಸಿ ಅದನ್ನು ಇಡಿದಾಗಿ ತಂದು ಗಿರಾಕಿಯ ಎದುರೇ ಒಗ್ಗರಣೆ (Saute) ಕೊಟ್ಟು ಬಡಿಸುವ ಬ್ರಿಟಿಷ್‌ ಸಂಪ್ರದಾಯ ಇಲ್ಲಿ ಯಥಾವತ್ತಾಗಿ ಜಾರಿಗೆ ಬಂದಿತ್ತು. ಸೌಟ್‌ ಎಂದರೆ ಲ್ಯಾಟನ್ನಿನಲ್ಲಿ ‘ಕುಣಿ’, ‘ಕುಪ್ಪಳಿಸು’ ಎಂಬ ಅರ್ಥವಿದ್ದುದರಿಂದ, ಕುಣಿಯುತ್ತಲೇ ಮಾಣಿ ರೋಸ್ಟ್‌ಪೋರ್ಕ್‌ ಒಗ್ಗರಣೆ ಹಾಕಿದನೇನೊ.

ಗೋಮಾಂಸವನ್ನಷ್ಟೇ ಅಲ್ಲ ನಾಲ್ಕು ಕಾಲಿನ ಏನನ್ನೂ ತಿನ್ನುವುದಿಲ್ಲವೆಂದು ಹೇಳಿ ನಾನು ಆ ಕ್ಷಣದಲ್ಲಿ ಬಚಾವಾದೆ. ‘ಸೀ ಫುಡ್‌ ತಗೊಳ್ಳಿ ಚೆನ್ನಾಗಿರುತ್ತದೆ’ ಎಂದು ಒಂದಿಬ್ಬರು ಅನುಕಂಪದಿಂದ ಅದೆಂಥದೋ ಚೌ ಮೀನ್‌ಗೆ ಆರ್ಡರ್‌ ಮಾಡಿದರು. ಅದರಲ್ಲಿ ನಾಲ್ಕು ಕಾಲುಗಳ ಪ್ರಾಣಿ ಇರಲಿಲ್ಲ. ಬದಲಿಗೆ ಎಂಟು ಕಾಲುಗಳ ಅಷ್ಟಪಾದಿ ( ಒಕ್ಟೊಪಸ್‌) ಇದ್ದವು. ಚಮಚದಲ್ಲಿ ಆವುಗಳನ್ನು ದೂರ ಸರಿಸಿ, ಅನ್ನ ಕೆದಕಿದರೆ 38 ಕಾಲುಗಳ ಸೀಗಡಿ ಕೂಡಾ ಇತ್ತು!

ಊಟ ಮುಗಿಸಿ, ಪರಸ್ಪರ ಬೀಳ್ಕೊಡುವಾಗ ಅವರೆಲ್ಲ (ನಾನೇ ಕಲಿಸಿದ್ದ) ‘ಶುಭ ರಾತ್ರಿ !’ ಎಂದು ಹಾರೈಸಿ ಹೊರಟರು. ಅವರಿಗೆಲ್ಲ ಶುಭರಾತ್ರಿಯಾದದ್ದು ನನ್ನ ಪಾಲಿಗೆ ಶಿವರಾತ್ರಿಯಾಗಿತ್ತು.

ಈ ನಾಲ್ಕು ಕಾಲು, ಎಂಟು ಕಾಲು, ಮೂವತ್ತೆಂಟು ಕಾಲುಗಳ ಸಂಬಂಧ ನಾನು ಹೋದ ದೇಶಗಳಲ್ಲೆಲ್ಲ ನನ್ನ ಬೆನ್ನಿಗೆ ಅಂಟಿಕೊಂಡೇ ಬರುತಿತ್ತು. ಅಮೆರಿಕದ ಡಿಮಾಯ್ನ್‌ ನಗರದ ಆಚೆ ಜೋಳ ಬೆಳೆಯುವ ವೈಖರಿಯನ್ನು ನೋಡುವ ಭಾಗ್ಯ ಬಂದಿತ್ತು. ಎಂಟು, ಹತ್ತು ಹನ್ನೆರಡು ಕಿಲೊ ಮೀಟರ್‌ ಹೋದರೂ ದಾರಿಯುದ್ದಕ್ಕೂ ಒಂದೇ ವ್ಯಕ್ತಿಯ ಜೋಳದ ಹೊಲ ಕಾಣುತ್ತಿತ್ತು. ಕೊನೆಗೂ ಆತನ ಹೊಲದ ಕೇಂದ್ರ ಭಾಗವನ್ನು ತಲುಪಿ, ಆತನ ಫಾರ್ಮ್‌ ಹೌಸ್‌ ತಲುಪಿದಾಗ ಅದೊಂದು ಕಾರ್ಖಾನೆಯ ಥರಾ ಕಾಣುತ್ತಿತ್ತು. ಜೀಪ್‌, ಟ್ರಾಕ್ಟರ್‌, ಟಿಲ್ಲರ್‌, ಅರ್ಥ್‌ ಮೂವರ್‌ಗಳ ಫ್ಯಾಕ್ಟರಿ ಇರಬಹುದೇನೋ ನೋಡಿದರೆ, ಅಲ್ಲ. ಅದರ ಪಕ್ಕದಲ್ಲಿ ಜೋಳದ ತೆನೆ ಬಿಡಿಸಿ ಒಣಗಿಸಿ ಹಿಟ್ಟು ಮಾಡಿ, ಪ್ಯಾಕ್‌ ಮಾಡುವ ಕಾರ್ಖಾನೆಯೂ ಇತ್ತು. ಮತ್ತೆ ಚಪಾತಿ, ಪೀಟ್ಸಾ, ಬ್ರೆಡ್‌ ಫ್ಯಾಕ್ಟರಿ ಇಲ್ಲವೆ? ಜೋಳದ ಹಿಟ್ಟಿನಿಂದ ‘ಗ್ಯಾಸೊಹಾಲ್‌’ (ಪೆಟ್ರೋಲಿನಂಥ ಇಂಧನ) ತಯಾರಿಸುವ ಫ್ಯಾಕ್ಟರಿ ಇಲ್ಲವೇ ಎಂದು ಕೇಳಿದಾಗ – ‘ಇಲ್ಲ ಈ ಎಲ್ಲ ಜೋಳವೂ ಪಶು ಆಹಾರ ತಯಾರಿಕೆಗೇ ಹೋಗುತ್ತದೆ’ ಎಂದು ಜಾನ್‌ ಹೇಳಿದ್ದ. ಅಮೆರಿಕದಲ್ಲಿ ಉತ್ಪಾದನೆಯಾಗುವ ಆಹಾರ ಧಾನ್ಯಗಳಲ್ಲಿ ಶೇಕಡಾ 80 ಭಾಗ ದನಗಳ ಹೊಟ್ಟೆಗೇ ಹೋಗುತ್ತದೆ. ದನದ ಮಾಂಸದ ಮೂಲಕ ಅದು ಮನುಷ್ಯರ ಹೊಟ್ಟೆಗೆ ಬರುತ್ತದೆ.

ಅಲ್ಲಿಂದ ಮುಂದೆ ದನದ ‘ಫ್ಯಾಕ್ಟರಿ’ ನೋಡುವ ಕಾರ್ಯಕ್ರಮ. ಅಂದರೆ ದನಗಳನ್ನು ಸಿದ್ಧಪಡಿಸುವ ಫ್ಯಾಕ್ಟರಿ. ನಮ್ಮ ಸಿನಿಮಾ ಮಂದಿರಗಳ ಟಿಕೆಟ್‌ ಕೌಂಟರ್‌ಗಳ ಎದುರು ಕ್ಯೂ ನಿಲ್ಲಲು ಎರಡೂ ಕಡೆ ಅಡ್ಡಗಟ್ಟೆ ಕಟ್ಟಿದ ಹಾಗೆ, ಅಮೆರಿಕದ ದನಗಳ ಫ್ಯಾಕ್ಟರಿಯ ಎದುರು ಆಳೆತ್ತರದ ಒಂದರ್ಧ ಕಿ.ಮೀ. ಉದ್ದದ ಬೇಲಿಯಂಥ ಕಟ್ಟೆ ಕಟ್ಟಿರುತ್ತಾರೆ. ಹುಟ್ಟಿ ಎರಡು ತಿಂಗಳುಗಳಷ್ಟೇ ಆದ ಮುದ್ದು ಎಳೆಗರುಗಳನ್ನು ಎಲ್ಲಿಂದಲೋ ಸಾವಿರ ಸಂಖ್ಯೆಯಲ್ಲಿ ಖರೀದಿಸಿ ತಂದು ಇಲ್ಲಿನ ಕಟ್ಟೆಗಳ ಮಧ್ಯೆ ಸಾಲಾಗಿ ಸಾಗಿಸುತ್ತಾರೆ. ಸರಸರ ಓಡಿ ಬರುವ ಈ ಎಳೆಗರುಗಳ ಮಂದೆಯಲ್ಲಿ ಕೊಂಚ ನಿಧಾನ ಸಾಗುವ ಕರು ಇದ್ದರೆ, ಅದಕ್ಕೆ ಇಲೆಕ್ಟ್ರಿಕ್‌ ಬಾರುಕೋಲಿನಿಂದ ಚುರುಕು ಮುಟ್ಟಿಸುತ್ತಾರೆ. ಅವೆಲ್ಲವೂ ಮಿಲಿಟರಿ ಶಿಸ್ತಿನಲ್ಲಿ ಬಂದ ಮೇಲೆ ಒಂದು ತಾಣದಲ್ಲಿ ಇಲೆಕ್ಟ್ರಿಕ್‌ ಅಚ್ಚಿನಿಂದ ಐಎಸ್‌ಐ ಮುದ್ರೆ ಥರಾ ತಮ್ಮ ಕಂಪನಿಯ ಚಿಹ್ನೆಯನ್ನು ಅಚ್ಚೊತ್ತುತ್ತಾರೆ. ಕಾದ ಕಬ್ಬಿಣದ ಛಾಪು ಹೊಡೆಸಿಕೊಂಡ ಕರುಗಳು ಉರಿ ಹತ್ತಿ, ಬಾಲ ನಿಮಿರಿಸಿ, ಅದೇ ಇಕ್ಕಟ್ಟಿನ ಓಣಿಯಲ್ಲಿ ನಾಗಾಲೋಟ ಕೀಳುವಾಗ ತಗೋ ಮತ್ತೊಂದು ದಣಪೆ (ಗೇಟ್‌) ಬರುತ್ತದೆ. ಅಲ್ಲಿ ಈ ಬಾರಿ ರೋಗ ನಿರೋಧಕ ವ್ಯಾಕ್ಸಿನಿನ ದಬ್ಬಳ. ಬರೆಯ ಮೇಲೆ ಗಾಯವಾದಂತೆ ಕರುಗಳು ಕುಟ್ಟೆದ್ದು ಮತ್ತೆ ಅದೇ ಓಣಿಯಲ್ಲಿ ಓಡುತ್ತಿರುವಾಗ ಇನ್ನೊಂದು ದಣಪೆಯ ಎದುರು ಮತ್ತೊಂದು ಯಾಂತ್ರಿಕ ತೋಳು ಬರುತ್ತದೆ: ಈ ಬಾರಿ ಅದೆಂಥದೋ ಹಾರ್ಮೋನಿನ ಚುಚ್ಚುಮದ್ದು. ಕರು ಶೀಘ್ರವಾಗಿ ದಷ್ಟಪುಷ್ಟವಾಗಿ ಬೆಳೆಯುವಂತಹ ಚೋದಕ ಇಂಜೆಕ್ಷನ್‌.

ಸುಸ್ತಾಗಿ ತಲೆ ಸುತ್ತಿದಂತಾಗಿ, ಈ ಯಾಂತ್ರಿಕ ಪಶು ಸಂಗೋಪನೆಯನ್ನು ನೋಡಲಾಗದೆ ನಾವು ಹೊರಟು ಡಿಮಾಯ್ನ್ ನಗರದ ಹೊರ ವಲಯದಲ್ಲಿನ ಒಂದು ಹೊಟೆಲ್‌ಗೆ ಬಂದೆವು. ಹೊಟ್ಟೆ ಚುರುಗುಡುತ್ತಿತ್ತು. ಒಳಹೊಕ್ಕು ಊಟಕ್ಕೆ ಆರ್ಡರ್‌ ಮಾಡಿದಾಗ ಮಾಣಿ ತಂದ ಮೊದಲ ಐಟಮ್‌ ಏನು ಗೊತ್ತೆ ?
ಖಾಲಿ ಥಾಲಿ, ಒಂದು ಚಾಕು, ಜತೆಗೆ ಒಂದು ಸುತ್ತಿಗೆ !

ನಾನು ಬೆಚ್ಚಿದೆ. ಈ ಜನರು ಮೊದಲು ಜೋಳ ತೋರಿಸಿದರು; ನಂತರ ಜೋಳವನ್ನು ತಿಂದು ದಷ್ಟಪುಷ್ಟ ಬೆಳೆಯುವ ದನಗಳನ್ನು ತಿಂದು ದಷ್ಟಪುಷ್ಟವಾಗುವ ಜನಗಳನ್ನು ತೋರಿಸಿದರು. ಈ ಜನರೋ ನಮಗೆ ಊಟಕ್ಕೆ ಸುತ್ತಿಗೆ ಬಡಿಸುತ್ತಾರೆಯೆ ? ಬಡಿಯುತ್ತಾರೆಯೆ?

ಮೆಲ್ಲಗೆ ಸುತ್ತಿಗೆ ಎತ್ತಿ ಪಿಂಗಾಣಿ ತಾಟಿನ ಅಂಚಿಗೆ ಠಣ್ಣೆಂದು ಬಡಿದೆ. ಹಗುರು ಕಟ್ಟಿಗೆಯಿಂದ ಮಾಡಿದ ಅಪ್ಪಟ ಸುತ್ತಿಗೆ ಅದಾಗಿತ್ತು. ನ್ಯಾಯಾಲಯಗಳಲ್ಲಿ ಜಡ್ಜ್‌ಗಳು ಬಳಸುವಂಥ ಹತ್ಯಾರ, ಸಂಶಯವಿಲ್ಲ. ಆದರೆ ಈವರೆಗೆ ಲಟ್ಟಣಿಗೆಯ ರುಚಿಯನ್ನೂ ನೋಡಿರದ ನನಗೆ ಈ ಹ್ಯಾಮರನ್ನು ನೋಡಿ ಮೆಲ್ಲಗೆ ಕೈಕಾಲು ಕಂಪಿಸತೊಡಗಿತ್ತು.
ಬೇರಾಮಾಣಿ ಇನ್ನೊಂದು ದೊಡ್ಡ ಬಾಣಲೆಯನ್ನೇ ಹೊತ್ತು ತಂದ. ಅದರೊಳಗಿಂದ ಒಂದೊಂದಾಗಿ ಕೆಂಪು ಹಳದಿ ಮಿರುಗುವ ಭಯಾನಕ ಕಣ್ಣುಗಳ ಲಾಬ್‌ಸ್ಟರ್‌ಗಳನ್ನು ಎರಡೆರಡು ಕೈಗಳಿಂದ ಎತ್ತಿ ತಟ್ಟೆಯ ಮೇಲಿಟ್ಟ. ಲಾಬ್‌ಸ್ಟರ್ ಗೊತ್ತಲ್ಲ? ಎಂಟು ಕಾಲುಗಳ, ಬೃಹತ್‌ ಗಾತ್ರದ ಕಡಲ ಏಡಿಗಳು? ಅರ್ಥ್‌ ಮೂವರ್‌ನ ಯಾಂತ್ರಿಕ ತೋಳುಗಳಂಥ ಬಲಿಷ್ಠ ಎರಡೆರಡು ಕೊಂಬುಗಳು; ಕಾಲು, ತೊಡೆಗಳ ಸುತ್ತ ದಪ್ಪ ಕವಚ.

ಈ ಕೊಂಬುಗಳ ಮೇಲೆ ಚಾಕು ಇಟ್ಟು ಅದರ ಮೇಲೆ ಸುತ್ತಿಗೆಯಿಂದ ಹೊಡೆಯಬೇಕು! ನಾನು ಅತ್ತ ಇತ್ತ ನೋಡಿದೆ. ಎಲ್ಲರೂ ಕೊಂಬು ಕವಚಗಳ ಮೇಲೆ ಹೊಡೆತ ಹಾಕುವುದರಲ್ಲಿ ತಲ್ಲೀನರಾಗಿದ್ದರು. ಕಲ್ಲುಗಣಿಗಳ ಸುತ್ತ ಲಂಬಾಣಿ ಹೆಣ್ಣುಮಕ್ಕಳು ಸಾಲಾಗಿ ಕೂತು ಜಲ್ಲಿ ಕಲ್ಲುಗಳನ್ನು ಒಡೆಯುವ ದೃಶ್ಯ ನೆನಪಾಯಿತು. ಸೀಳು ಬಿಟ್ಟ ಕವಚದ ಮಧ್ಯೆ ಉಕ್ಕಿನ ಮುಳ್ಳು ತೂರಿಸಿ, ಆಗಲೇ ಕೆಲವರು ಏಡಿಯ ಬಾಡಿಯ ಒಳಗಿನ ಮಿದು ಮಾಂಸವನ್ನು ಕಿತ್ತು ತಿನ್ನಲು ತೊಡಗಿದ್ದರು. ಡೋಲು ಬಾರಿಸಲು ಈ ಸುತ್ತಿಗೆ ಉತ್ತಮವೆಂದು ನಾನು ಯೋಚಿಸುತ್ತಿದ್ದಾಗ ಹೊಟ್ಟೆ ತಾಳ ಹಾಕುತ್ತಿತ್ತು..

ನಮ್ಮ ತಂಡದ ಮಾರ್ಗದರ್ಶಿ ಐಲೀನ್‌ ನನ್ನತ್ತ ನೋಡಿದಳು. ನಾನು ‘ಈ ಸುತ್ತಿಗೆಯನ್ನು ಮನೆಗೆ ಒಯ್ಯಬಹುದೇ’ ಕೇಳಿದೆ. ‘ವೈ ನಾಟ್‌? ಬೇಕಿದ್ದರೆ ನಾವೆಲ್ಲರೂ ಒಂದೊಂದು ಕೊಡುತ್ತೇವೆ’ ಎನ್ನುತ್ತ ಆಕೆ ಮಾಣಿಯನ್ನು ಕರೆದು ಊಟದ ನಂತರ ನನ್ನ ಸುತ್ತಿಗೆಯನ್ನು ಪ್ಯಾಕ್‌ ಮಾಡಲು ಹೇಳಿದಳು. ತರಿಸಿದ್ದ ಊಟವನ್ನು ಪೂರ್ತಿ ಮುಗಿಸಲಾಗದಿದ್ದರೆ, ಉಳಿದ ಎಂಜಲನ್ನು ಪ್ಯಾಕ್‌ ಮಾಡಿಸಿ ಒಯ್ಯುವ ಸೌಲಭ್ಯ ಅಮೆರಿಕದ ಹೊಟೆಲ್‌ಗಳಲ್ಲಿ ಇದೆ. ಮೊರದಗಲದ ಲಾಬ್‌ಸ್ಟರಗಳನ್ನು ಪೂರ್ತಿ ಮುಗಿಸಲಾಗದೆ ಮಿಕ್ಕಿದ್ದನ್ನು ಪಾರ್ಸಲ್‌ ಒಯ್ಯುವುದಂತೂ ಇಲ್ಲಿ ತೀರಾ ಸಾಮಾನ್ಯವಂತೆ. ಮೊದಲ ಬಾರಿಗೆ ಏಡಿ ಕಾಲುಗಳ ಬದಲಿಗೆ, ಕಸದ ತೊಟ್ಟಿಗೆ ಹೋಗಬೇಕಿದ್ದ ಸುತ್ತಿಗೆಯನ್ನು ಪ್ಯಾಕ್‌ ಮಾಡುವ ಕೆಲಸ ಈ ಹೊಟೆಲ್ಲಿನ ಮಾಣಿಗೆ ಬಂದಿತ್ತು.

ಸ್ವಿತ್ಸರ್ಲೆಂಡಿನಲ್ಲಿ ಆಲ್ಪ್ಸ್‌ ಪರ್ವತದ ಹಾದಿಯಲ್ಲಿದ್ದ ‘ಫಾನಾಸ್‌’ ಎಂಬ ಹಳ್ಳಿಗೆ ಹೋಗಿದ್ದಾಗ ಕೂಡಾ ಇದೇ ಬಗೆಯ ಪಾರ್ಸೆಲ್‌ ಫಜೀತಿ ಕಾಲಿಗೆ ಸುತ್ತಿಕೊಂಡಿತ್ತು. ಫಾನಾಸ್‌ ಹಳ್ಳಿಯಲ್ಲಿ ಕರಗಿಸಿದ ಗಿಣ್ಣದ (ಚೀಸ್‌) ‘ಫೋಂಡ್ಯೂ’ ಎಂಬ ತಿಂಡಿ ತುಂಬಾ ವಿಶಿಷ್ಟವಾಗಿರುತ್ತದೆಂದು ಸೂಸಾನ್‌ ಹೇಳಿ ನನ್ನ ಬಾಯಲ್ಲಿ ನೀರೂರಿಸಿದ್ದಳು. ನಾವು ಅಲ್ಲಿನ ಪಂಚಾಯ್ತಿ ‘ಹಿತ್ಸ್’ ಹುಉಸ್‌ (Hitsch-huus)ನ ಅಧ್ಯಕ್ಷರ ಮನೆಗೆ ಆ ದಿನ ಊಟಕ್ಕೆ ಹೋಗುವ ಪ್ರೋಗ್ರಾಮು ಒಂದು ವಾರದ ಮೊದಲೇ ನಿಶ್ಚಿತವಾಗಿತ್ತು. ಸ್ವಿತ್ಸರ್ಲೆಂಡಿನಲ್ಲಿ ಹೇಗೆ ಹಳ್ಳಿ ಮಟ್ಟದಲ್ಲೇ ಇಡೀ ರಾಷ್ಟ್ರದ ವಿದೇಶಾಂಗ ನೀತಿ ಕೂಡಾ ನಿರ್ಧರಿತವಾಗುತ್ತದೆ ಎಂಬುದನ್ನು ವಿವರಿಸುತ್ತ, ಅಲ್ಲಿನ ಪಂಚಾಯ್ತಿ (ಕ್ಯಾಂಟನ್‌) ಪದ್ಧತಿಯ ಗುಣ ವಿಶೇಷಗಳನ್ನು ಹಿರಿಯರು ಚರ್ಚಿಸುತ್ತ ಕೂತಾಗ, ಒಳಗೆ ಅಡುಗೆ ಮನೆಯಿಂದ ಎಂಥದೋ ಕಟುವಾದ ವಾಸನೆ ಬರತೊಡಗಿತ್ತು. ಬೆಣ್ಣೆ ಕಾಯಿಸುವ ಪರಿಮಳದೊಂದಿಗೆ ಕರಗಿದ ಪ್ಲಾಸ್ಟಿಕ್ಕಿನ ಕಮಟು ವಾಸನೆಯೂ ಸೇರಿ ಅವರ್ಣನೀಯ ಘಮಲು. ಎಲ್ಲರೂ ಮೂಗರಳಿಸಿ ‘ಮಮ್‌’ ಎಂದು ಖುಷಿಪಡುತ್ತ ಫಾಂಡ್ಯೂ ಪರಿಮಳ ಆಘ್ರಾಣಿಸುತ್ತ ಬಾಯಲ್ಲಿ ನಿರೂರಿಸಿಕೊಂಡು ಊಟದ ಆಹ್ವಾನಕ್ಕೆ ಕಾಯತೊಡಗಿದರು.

ಊಟದ ಮೇಜಿಗೆ ಬಂದ ತಟ್ಟೆಗಳ ಮಧ್ಯೆ ಪುಟ್ಟ ಪುಟ್ಟ ಒಂದೊಂದು ಕಪ್‌ ಇತ್ತು. ದಪ್ಪ ಅಂಚಿನ ಆ ಪಿಂಗಾಣಿ ಕಪ್ಪಿನಲ್ಲಿ ಎಂಥದೊ ಇತ್ತು. ಕಪ್ಪಿನ ಪಕ್ಕದಲ್ಲಿ ಕಡ್ಡಿಯಂಥ ಇನ್ನೇನನ್ನೋ ಇಟ್ಟಿದ್ದರು. ಊಟಕ್ಕೆ ಮತ್ತೇನೂ ಇರಲಿಲ್ಲ. ಇತರರು ಹೇಗೆ ಆರಂಭಿಸುತ್ತಾರೆಂದು ಕುತೂಹಲದಿಂದ ನಾನು ಕಾಯುತ್ತ ಕೂತೆ. ಎಂದಿನಂತೆ ವೈನಿನ ಸ್ವಸ್ತಿಪಾನ ಮುಗಿದ ನಂತರ ಎಲ್ಲರೂ ಕಡ್ಡಿಯನ್ನು ಕಪ್ಪಿನಲ್ಲಿ ಅದ್ದಿ ಎತ್ತಿದರು. ನಾನೂ ಯತ್ನಿಸಿದೆ.

ಕಡ್ಡಿಯನ್ನು ಎತ್ತಿದಾಗ ರಬ್ಬರಿನ ರಸದಂತೆ ಅಂಟು ದ್ರವವೊಂದು ದಾರದಂತೆ ಬಂತು. ಅದನ್ನು ಹಾಗೆಯೇ ಅದೇ ಕಡ್ಡಿಗೆ ಸುತ್ತಿ ಸುತ್ತಿ ಅವರೆಲ್ಲನಾಜೂಕಾಗಿ ಬಾಯಿಗೆ ಇಡುತ್ತಿದ್ದರು. ನಾನು ಅದನ್ನೆತ್ತಿ ಬಾಯಿಗೆ ಇಡಲು ಹೊರಟರೆ, ದಾರ ಕೊನೆಗೂ ತುಂಡಾಗದೆ ತುಟಿ, ಗಲ್ಲ, ಎದೆ, ಮೇಜು, ತಟ್ಟೆ, ಕಪ್ಪಿನವರೆಗೂ ಮುಂದುವರೆಯುತ್ತಿತ್ತು. ದಾರವನ್ನು ಕತ್ತರಿಸಲೆಂದು ಇನ್ನೊಂದು ಕಡ್ಡಿಯನ್ನು ಕಪ್ಪಿನ ಅಂಚಿಗೆ ಒತ್ತಿ ಎತ್ತಿದರೆ ಇನ್ನೂ ಫಜೀತಿ : ದಾರ ಈಗ ಡಬಲ್‌ ಎಳೆಗಳ ಸರವಾಗಿ ಬರುತ್ತಿತ್ತು. ಹಾಗೂ ಹೀಗೂ ಬಾಗಿ ಬಾಯಿಯನ್ನೇ ತಟ್ಟೆಯವರೆಗೆ ಒಯ್ದು ತುಟಿಯನ್ನು ತಗಲಿಸಿದರೋ, ಹತ್ತಿಪ್ಪತ್ತು ಎಳೆಗಳು ಒಟ್ಟಾಗಿ ಹೊರಬರುತ್ತ, ತಲೆ ಎತ್ತಿದರೆ ಮುಖ, ಮೈ ಕೈ, ಕುತ್ತಿಗೆ, ಟೈಗೆಲ್ಲ ದಾರಗಳು.

ಮತ್ಸ್ಯ, ಕೂರ್ಮ, ವರಾಹಗಳನ್ನೆಲ್ಲ ಡೈನಿಂಗ್‌ ಟೇಬಲ್ಲುಗಳ ಮೇಲೆ ನೋಡಿದ್ದ ನಾಗೇಶ ಹೆಗಡೆ ಈಗ ಸ್ವತಃ ನಾರಸಿಂಹ ಅವತಾರ ತಳೆದಿದ್ದ. ಕಪ್ಪಿನಲ್ಲಿದ್ದ ಮೆಲ್ಟೆಡ್‌ ಚೀಸ್‌ (ಕರಗಿದ ಗಿಣ್ಣ) ಸುತ್ತೆಲ್ಲ ದಾರದ ಎಳೆಗಳಾಗಿ ಕಪ್ಪು ಖಾಲಿಯಾಗಿತ್ತು. ಇತರರು ಕಪ್ಪಿನ ತಳಭಾಗವನ್ನು ಆಗಲೇ ಕಡ್ಡಿಯಿಂದ ಕೆರೆಸಿ ಕೆರೆಸಿ ಮೇಲೆತ್ತಿ ನೆಕ್ಕುತ್ತಿದ್ದರು.

ನೋಡಲು ಪಿಂಗಾಣಿಯಂತೆ ಕಾಣುವ ಆ ಪುಟ್ಟ ಕಪ್ಪಿನ ಅಂಚು ಕೊಂಚ ಅಂಕುಡೊಂಕಾಗಿ ವಿಶಿಷ್ಟ ರೂಪದ್ದಾಗಿತ್ತು. ‘ಏನಿದು ?’ ಕೇಳಿದೆ. ‘ಓ ಅದಾ? ವಿಶೇಷ ಅತಿಥಿಗಳು ಬಂದಾಗ, ನಾವೇ ತಯಾರಿಸುವ ಅಪರೂಪದ ಐಟಮ್‌ ಅದು. ಎಳೆಗರುವಿನ ಮೊಣಕಾಲಿನ ಮೂಳೆಯನ್ನು ಉಂಗುರದಂತೆ ಕಲಾತ್ಮಕವಾಗಿ ಕತ್ತರಿಸಿ ತಯಾರಿಸಿದ್ದು’ ಎಂದು ಅತಿಥೇಯ ಪಟೇಲ, ರಿಯೂಡಿ ಅಲ್ಟೊನಿಕೊ ವಿವರಿಸಿದ.

ನನಗೆ ಉಸಿರು ಕಟ್ಟಿತ್ತು. ಇವೊತ್ತಿನ ಮೇಜುವಾನಿಗೆಂದೇ ಒಂದು ಎಳೆಗರುವನ್ನು ಕತ್ತರಿಸಿ, ಅದರ ಮೊಣಕಾಲುಗಳನ್ನು ಪುಟ್ಟ ಪಾತ್ರೆಯನ್ನಾಗಿ ಮಾಡಿ, ಅದನ್ನೇ ಬೇಯಿಸಿ, ಅದರೂಳಕ್ಕೆ ಮೆಲ್ಟೆಡ್‌ ಚೀಸ್‌ ತುಂಬಿಸಿ, ಅತ್ಯಂತ ಶ್ರಮದಿಂದ ಅತಿಥಿಗಳಿಗೆ ಉಣ ಬಡಿಸಿದ ಈ ಗ್ರಾಮೀಣ ಪ್ರಜೆಗಳ ಬಗ್ಗೆ ಹೃದಯ ತುಂಬಿ ಬರಬೇಕಿತ್ತು. ಆದರೆ ನನಗೆ ಹೊಟ್ಟೆ ತೊಳೆಸಿ ಬರುವಂತಾಗಿತ್ತು.

‘ತೊಳೆದು ಪಾರ್ಸೆಲ್‌ ಮಾಡಿ ಕೊಡಲೆ? ಅನೇಕರು ಈ ಉಂಗುರವನ್ನು ಫಾನಾಸ್‌ ಹಳ್ಳಿಯ ಸ್ಮರಣಾರ್ಥ ತಮ್ಮ ಜತೆಗೆ ಒಯ್ಯುತ್ತಾರೆ’ ಎಂದು ಪಂಚಾಯ್ತಿ ಅಧ್ಯಕ್ಷ ಕೇಳಿದ.
ಗೋಪೂಜೆಯ ದಿನ ಎಳೆಗರುವಿನ ಕಾಲಿಗೆ ಗೆಜ್ಜೆ ಕಟ್ಟಿ ಅದರ ಮುಂಗಾಲುಗಳಿಗೆ ಗೋಟಡಿಕೆಯ ಹೂ ಮಾಲೆ ಕಟ್ಟಿ ಸಿಂಗರಿಸಿ ಖುಷಿ ಪಡುತ್ತಿದ್ದ ಬಾಲ್ಯದ ದಿನಗಳು ನೆನಪಾದವು.

ಸ್ವಿಸ್‌ ಜನರೆಂದರೆ ಕೊಡುಗೈ ದೊರೆಗಳು. ಹಿತ್ಸ್-ಹುಉಸ್‌ ಹಳ್ಳಿಯಲ್ಲಿ ‘ಮೊಣಕಾಲುಂಗರ’ವನ್ನು ದಾನವಾಗಿ ಪಡೆದ ನಾನು, ಝೂರಿಕ್‌ ನಗರಕ್ಕೆ ಮರಳಿ ಅಲ್ಲಿನ ಪೀಟರ್‌ ಮುಲ್ಲರ್‌ ಎಂಬವರ ಮನೆಗೆ ಅತಿಥಿಯಾಗಿ ಹೋದೆ. ಆತ ಕಟ್ಟಾ ಪರಿಸರವಾದಿ ಹಾಗೂ ಭಾರತದ ಅಭಿಮಾನಿ. ನಮ್ಮ ಹಳ್ಳಿಗಳಲ್ಲಿ ಗೋಬರ್‌ ಗ್ಯಾಸ್‌ ಪ್ಲಾಂಟ್‌ನ ಜಾದೂಶಕ್ತಿಯ ಬಗ್ಗೆ ಅಪಾರ ಕುತೂಹಲ ತಾಳಿದ್ದ. ಅದರ ವಿವರಗಳನ್ನೆಲ್ಲ ಕೇಳಿ ತಿಳಿದ ಆತ ‘ಪ್ರತಿ ಹಳ್ಳಿಯಲ್ಲೂ ಯಾಕೆ ಅದನ್ನು ಸ್ಥಾಪಿಸಬಾರದು?’ ಕೇಳಿದ. ಒಂದೊಂದಕ್ಕೆ ಸುಮಾರು ಒಂದು ಸಾವಿರ ಸ್ವಿಸ್‌ ಫ್ರಾಂಕ್‌ ಆದೀತೆಂದೂ ಅಷ್ಟು ಹಣ ನಮ್ಮ ಹಳ್ಳಿಗರ ಬಳಿ ಇಲ್ಲವೆಂದೂ ಹೆಳಿದೆ.

‘ಓ! ಅಷ್ಟೇನಾ ? ಒಂದು ಸಾವಿರ ಫ್ರಾಂಕ್‌ ? ತಗೋ ನಾನು ಐದು ಗ್ಯಾಸ್‌ ಪ್ಲಾಂಟ್‌ಗೆ ಹಣ ಈಗಲೇ ಕೊಡುತ್ತೇನೆ’ ಎಂದು ಚೆಕ್‌ಬುಕ್‌ ತರಲು ಎದ್ದು ಹೊರಟ. ನಾನು ತಡೆದೆ. ‘ಮೊದಲನೆಯದಾಗಿ ಸ್ವಿಸ್‌ ಬ್ಯಾಂಕ್‌ ಎಂದರೆ ನನಗೆ ಅಲರ್ಜಿ. ಎರಡನೆಯದಾಗಿ, ಹೀಗೆ ನಗದು ಹಣವನ್ನು ಹಳ್ಳಿಯ ಜನಕ್ಕೆ ಕೊಟ್ಟರೆ ಅವರು ಅಂದೇ ಮಗಳ ವರದಕ್ಷಿಣೆಗೆಂದು ಖರ್ಚು ಮಾಡಿಬಿಡುತ್ತಾರೆ. ಮೂರನೆಯದಾಗಿ ಇಷ್ಟೆಲ್ಲ ಹಣ ಒಯ್ದರೆ ಇನ್‌ಕಮ್‌ ಟ್ಯಾಕ್ಸಿನವರು ನನ್ನ ಮನೆಗೆ ದಾಳಿ ಮಾಡುತ್ತಾರೆ’ ಎಂದು ಹೇಳಿ ಹಣ ನಿರಾಕರಿಸಿದೆ.

ಅಡುಗೆ ಅನಿಲದ ಮಾತುಕತೆ ನಡೆಸುತ್ತಲೇ ಬ್ರಹ್ಮಚಾರಿ ಪೀಟರ್‌ ಅಡುಗೆ ಮಾಡಿ ಮುಗಿಸಿದ್ದ. ʼನೀನು ಬೀಫ್‌ (ಗೋಮಾಂಸ) ತಿನ್ನುವುದಿಲ್ಲವೆಂದೇ ವಿಶೇಷ ಅಡುಗೆ ಮಾಡ್ದಿದೇನೆʼ ಎಂದ. ತುತ್ತು ಎತ್ತಿ ಬಾಯಿಗೆ ಇಡುವವರೆಗೂ ಅಡುಗೆಯ ಗುಟ್ಟು ಬಿಟ್ಟಿರಲಿಲ್ಲ.

ಅದು ಮೌಂಟನ್‌ ಗೋಟ್‌. ಅಂದರೆ ಗುಡ್ಡದ ಮೇಕೆ ಎಂಬ ವನ್ಯಪ್ರಾಣಿ. ಆಲ್ಫ್ಸ್‌ ಪರ್ವತಗಳ ಇಳಿಜಾರಿನಲ್ಲಿ ಕಡಿದಾದ ಬೆಟ್ಟಗಳಲ್ಲಿ ಇವು ಮೇಯುತ್ತವೆ. ವರ್ಷಕ್ಕೆ ಎರಡು ತಿಂಗಳ ಕಾಲ, ಕೆಲವರಿಗೆ ಮಾತ್ರ ಕೆಲವು ಮೇಕೆಗಳನ್ನು ಬೇಟೆಯಾಡುವ ‘ಪರ್ಮಿಟ್‌’ ಸಿಗುತ್ತವೆ. ಈ ಪರ್ಮಿಟ್ಟನ್ನು ದಕ್ಕಿಸುವುದೇ ಭಾರೀ ಸಾಹಸದ ಕೆಲಸ (ಸ್ವಿಸ್‌ ಜನ ಏನೆಲ್ಲ ತಿನ್ನುತ್ತಾರೆ, ಆದರೆ ಲಂಚ ಮಾತ್ರ ತಿನ್ನುವುದಿಲ್ಲ). ಪರ್ಮಿಟ್‌ ಸಿಕ್ಕ ಮೇಲೆ ಈ ಚಾಣಾಕ್ಷ ಪ್ರಾಣಿಯನ್ನು ಬೇಟೆಯಾಡುವುದು ಇನ್ನೂ ದೊಡ್ಡ ಸಾಹಸದ ಕೆಲಸ. ಅದರ ಮಾಂಸ ತುಂಬಾ ರುಚಿಕಟ್ಟೆಂಬ ಪ್ರತೀತಿ ಇರುವುದರಿಂದ ಮನೆಗೆ ಊಟಕ್ಕೆ ಬರುವ ಅತಿಥಿಗಳನ್ನು ನಿಯಂತ್ರಿಸುವುದು ಮತ್ತೂ ದೊಡ್ಡ ಸಾಹಸದ ಕೆಲಸ.

ಊಟ ಮುಗಿದ ಮೇಲೆ ಪೀಟರ್‌ ಎಂಥದೋ ಸುರುಳಿ ಸುತ್ತಿ ತಂದ. ‘ಇದು ನನ್ನ ಪುಟ್ಟ ಕಾಣಿಕೆ, ನಿರಾಕರಿಸಬಾರದು; ಇದನ್ನು ಬಿಟ್ಟರೆ ಬೇರೆ ಯಾವ ಅಮೂಲ್ಯ ವಸ್ತುವೂ ನನ್ನಲ್ಲಿಲ್ಲ’ ಎಂದ.

ತೆರೆದು ನೋಡಿದರೆ ಅದೇ ಕಾಡುಕುರಿಯ ಚರ್ಮ; ಮಂದ ಬೆಳಕಿನಲ್ಲಿ ಅದರ ನವಿರಾದ ಉಣ್ಣೆ ಮಿರಿ ಮಿರಿ ಮಿಂಚುತ್ತಿತ್ತು. ‘ಮೈ ಗಾಡ್‌!’ ಎಂದೆ.
‘ಇಷ್ಟವಾಯಿತು ತಾನೆ ? ಇನ್ನೂ ಚೆನ್ನಾಗಿ ಪ್ಯಾಕ್‌ ಮಾಡಿ ಕೊಡುತ್ತೇನೆ’ ಎಂದು ಉತ್ಸಾಹದಿಂದ ಪೀಟರ್‌ ಹಗ್ಗ ತರಲು ಹೊರಟ. ನಾನು ತಡೆದೆ. ‘ಭಾರತಕ್ಕೆ ಇದನ್ನು ಒಯ್ದರೆ ವನ್ಯ ರಕ್ಷಣಾ ಕಾನೂನಿನ ಪ್ರಕಾರ ನಾನು ಜೈಲಿಗೆ ಹೋಗುತ್ತೇನೆ. ಅವರ ಕಣ್ಣು ತಪ್ಪಿಸಿ ಇದನ್ನು ಊರಿಗೆ ಒಯ್ದರೂ ನಮ್ಮಪ್ಪ ನನ್ನದೇ ಚರ್ಮ ಸುಲಿದು ಬಿಡುತ್ತಾರೆ’ ಎಂದು ಪೀಟರ್‌ನ ಉಡುಗೊರೆಯನ್ನು ಆದಷ್ಟು ನಯವಾಗಿ ನಿರಾಕರಿಸಿ ಕೈ ತೊಳೆಯಲೆಂದು ವಾಶ್‌ಬೇಸಿನ್‌ಗೆ ಹೋದೆ.

ವಾಶ್‌ಬೇಸಿನ್ನಿನಲ್ಲಿ ಕೈ ತೊಳೆಯುವಾಗ ಅದೇ ದೇಶದ ಗಾಸ್ಗೆನ್‌ ಪಟ್ಟಣದಲ್ಲಿನ ಪರಮಾಣು ಸ್ಥಾವರದ ಕೆಫೆಟೇರಿಯಾದಲ್ಲಿ ಕಂಡ ವಾಶ್‌ಬೇಸಿನ್‌ ನೆನಪಾಗುತ್ತದೆ. ಅಲ್ಲಿನ ಎಂದೂ ಮರೆಯಲಾಗದ ಊಟ ನೆನಪಾಗುತ್ತದೆ.

ಸ್ವಿತ್ಸರ್ಲೆಂಡಿನ ಏಕೈಕ ಪರಮಾಣು ಸ್ಥಾವರದ ಕೆಫೆಟೇರಿಯಾದಲ್ಲಿ ವಿಶೇಷ ಅತಿಥಿಗಳಿಗೆ ವಿಶೇಷ ಊಟದ ಏರ್ಪಾಡು ಮಾಡುತ್ತಾರೆ. ನಾಲ್ಕು ಗಂಟೆಗಳ ಕಾಲ ನನಗೆ ಇಡೀ ಪರಮಾಣು ಸ್ಥಾವರನ್ನು ತೋರಿಸಿ, ನನಗೆ ಅವರೇ ತೊಡಿಸಿದ್ದ ಬೂಟು, ಕೋಟು, ಹ್ಯಾಟು, ಮುಖವಾಡ ಎಲ್ಲ ಕಳಚಿ ತೆಗೆಸಿ, ಮತ್ತೆ ಮನುಷ್ಯನನ್ನಾಗಿ ಮಾಡಿ, ನಾಲ್ಕು ಅಧಿಕಾರಿಗಳು ಊಟಕ್ಕೆ ಕರೆದೊಯ್ದರು. ಊಟಕ್ಕೆ ಮುಂಚೆ ಕೈ ತೊಳೆಯಬೇಕು. ಅದೂ ಪರಮಾಣು ಕೊಳೆಯ ಲವಲೇಶವೂ ಇಲ್ಲದಂತೆ.

ಆದರೆ ವಾಶ್‌ಬೇಸಿನ್‌ ಬಳಿ ಹೋದರೆ ನಲ್ಲಿಗೆ ‘ಕಿವಿ’ಯೇ ನಾಪತ್ತೆ! ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದ ನನಗೆ ಅಲ್ಲಿನ ಆಡಳಿತ ನಿರ್ದೇಶಕ ಶಾಂಕೆಲ್‌ ಹೇಳಿದರು: ‘ನಲ್ಲಿಗೆ ಕೈ ತಾಕಿಸಿದರೆ ನಮ್ಮ ಕೈಯ ಕೊಳೆ ನಲ್ಲಿಗೆ ತಾಗಬಹುದು. ಹಾಗಾಗಿ ಇಲ್ಲಿ ಬದಲೀ ಆಟೊಮ್ಯಾಟಿಕ್‌ ವ್ಯವಸ್ಥೆ ಇದೆ; ನಲ್ಲಿಯ ಎದುರು ಕೈ ಮುಂದು ಮಾಡಿ’ ಎಂದರು. ತಮ್ಮ ಬೇಸಿನ್‌ ಎದುರು ತಾನೂ ಕೈ ಚಾಚಿದರು.

ನಲ್ಲಿಯಲ್ಲಿ ನೀರು ಬಂತು. ಮೊದಲು ಬಿಸಿ ನೀರು. ಆಮೇಲೆ ತಣ್ಣೀರು. ನಂತರ ಅದರ ವೇಗ ಕಮ್ಮಿಯಾಗಿ, ಸಾಬೂನು ದ್ರವ ಬಂತು. ಕೈ ತಿಕ್ಕಿ ನೊರೆ ತೊಳೆಯುತ್ತಿದ್ದಾಗ ಮತ್ತೆ ಬೆಚ್ಚಗಿನ ನೀರು. ಜತೆ ಜತೆಗೇ ಯೂವಿ ಕಿರಣಗಳೂ ಬರುತ್ತಿರಬೇಕು; ಮಂದ ನೀಲಿ ಬೆಳಕು ಬಂತು. ಇದು ಮುಗಿಯುತ್ತ ಬಂದಾಗ ಗ್ಲಿಸರಿನ್‌ ಬಂತು. ಇನ್ನು ಸ್ವಲ್ಪ ಹೊತ್ತು ಕೈ ಇಟ್ಟಿದ್ದರೆ ಅಲ್ಲೇ ಊಟದ ಮುಂಚಿನ ತೀರ್ಥವೂ, ನಂತರ ಊಟವೂ ಬಂದೀತೇ ಎಂದು ಯೋಚಿಸುವಾಗ ನೀರು ನಿಂತು, ಕೈ ಒಣಗಿಸುವ ಬಿಸಿಗಾಳಿ ಬಂತು.

ಊಟದ ದುಂಡು ಮೇಜಿಗೆ ನಾವು ಐದೇ ಜನ. ಮೊದಲು ವೈನ್‌ ಬಂತು. ಅದು ಶಾಂಪೇನ್‌ ಇರಬೇಕು. ಎತ್ತರದ ಗ್ಲಾಸಿನಲ್ಲಿ ಒಂದೊಂದು ಗುಟುಕು ಮುಗಿಸಿದಾಗ ಚಿಕ್ಕ ತಟ್ಟೆಗಳಲ್ಲಿ ಬ್ರೆಡ್‌ ಮತ್ತು ಚೀಸ್‌ ಬಂತು. ಅದನ್ನು ತಂದಿಟ್ಟ ಭೂಪತಿ ಶಾಂಪೇನ್‌ ಗ್ಲಾಸನ್ನು (ಅದಿನ್ನೂ ಅರ್ಧ ಖಾಲಿಯಾಗಿರಲಿಲ್ಲ) ಎತ್ತಿ ಒಯ್ದು ಬಿಟ್ಟ. ‘ಮಹಾ ಕ್ರೂರಿ’ ಎಂದುಕೊಳ್ಳುವಾಗ, ಇನ್ನೊಬ್ಬ ಮತ್ತೊಂದು ಹಸಿರು ಬಾಟಲಿಯನ್ನು ಸುಂದರ ಪ್ಲೇಟಿನ ಮೇಲೆ ನಾಜೂಕಾಗಿ ನಿಲ್ಲಿಸಿಕೊಂಡು ಬಂದ.

ಸರದಿಯಂತೆ ಎಲ್ಲ ನಾಲ್ಕೂ ಮಂದಿ ಎಳೇ ಶಿಶುವನ್ನು ಎತ್ತಿ ಹಿಡಿದು ನೋಡುವಂತೆ ಆ ಬಾಟಲಿಯನ್ನು ಕೈಗೆತ್ತಿ ನೋಡಿ, ಅದರ ಮೇಲೆ ಬರೆದಿದ್ದ ಜರ್ಮನ್‌ ಭಾಷೆಯ ಏನನ್ನೋ ಓದಿ ‘ಅಮ್‌!’ ಎಂದು ಹುಬ್ಬೇರಿಸಿ ಮತ್ತೊಬ್ಬನಿಗೆ ದಾಟಿಸುತ್ತ ಬಂದರು. ತಮ್ಮೆದುರು ಬಂದಿದ್ದು ಎಂಥ ಅಪರೂಪದ ವೈನ್‌ ಎಂದು ಎಲ್ಲರೂ ಹೀಗೆ ನೋಡುವ ಸಂಪ್ರದಾಯವನ್ನು ನಾನು ಆವರೆಗೆ ನಾಲ್ಕಾರು ಬಾರಿ ನೋಡಿದ್ದೆ.

ನಂತರ ಬೇರಾಮಾಣಿ ಶಾಸ್ತ್ರೋಕ್ತವಾಗಿ ಬಾಟಲಿಯ ಮುಚ್ಚಳ ತೆರೆದ. ಮತ್ತೊಮ್ಮೆ ಎಲ್ಲರೂ ಶಾಸ್ತ್ರೋಕ್ತವಾಗಿ ಸರದಿಯಂತೆ ಆ ಬಾಟಲಿಯ ಮೂತಿಯನ್ನು ಮೂಗಿನ ಬಳಿ ಒಯ್ದು ‘ಆ ! ಮ್ಮ್‌ !’ ಎಂದು ಪರಿಮಳ ಆಘ್ರಾಣಿಸಿದರು. ಬೇರೊಂದು ಸೆಟ್‌ ಸುಂದರ ಗ್ಲಾಸುಗಳಲ್ಲಿ ಒಂದೊಂದು ಚಮಚೆಯಷ್ಟು ವೈನ್‌ ಸುರುವಿ ಬೇರಾ ಮಾಣಿ ಬ್ರೆಡ್‌ ಚೀಸ್‌ಗಳ ಪ್ಲೇಟನ್ನು ಎತ್ತಿ ಹೊರಟೇ ಹೋದ. ಎಲಾ ಇವನ !

ಈ ಬಾರಿ ಇನ್ನೊಂದಿಷ್ಟು ಪ್ಲೇಟ್‌ಗಳಲ್ಲಿ ಕೆನೆ (ಕ್ರೀಮ್‌) ಚಟ್ನಿ ಜೊತೆ ಚಿನ್ನದ ವರ್ಣದ ಟೋಸ್ಟ್‌ ಬಂದವು. ಜತೆಗೆ ಎಳೆ ನಿಂಬೆಯ ಎಲೆಯ ಮೇಲೆ ಕಟ್ಲೆಟ್‌ ಥರಾ ಇನ್ನೆಂಥದೋ ಇತ್ತು. ಮೀನು ಇರಬಹುದೆ ?

ಈಗ ವೈನ್‌ ಗ್ಲಾಸನ್ನೆತ್ತಿ ‘ಟೋಸ್ಟ್‌’ ಮಾಡಿದ್ದಾಯಿತು. ಅಂದರೆ ಚೀಯರ್ಸ್‌ – ಸ್ವಸ್ತಿಪಾನ. ನನಗೆ ಜಠರಾಗ್ನಿ ಕೆರಳಿತ್ತು. ಆದರೆ ತಟ್ಟೆಯಲ್ಲಿ ಬರೀ ಒಂದು ಟೋಸ್ಟ್‌, ಒಂದು ಕಟ್ಲೆಟ್‌.. ಇಷ್ಟೇನಾ?

ಯೋಚಿಸುವಷ್ಟರಲ್ಲಿ ಸೂಪ್‌ ಬಂತು. ಒಂದಿಬ್ಬರು ಸೂಪ್‌ ಬದಲು ಬಿಯರ್‌ ಬೇಕೆಂದರು. ಅದೂ ಬಂತು.

ಸೂಪ್‌ ಸುರಿದು ಮುಗಿದ ಮೇಲೆ ಸಲಾಡ್‌ ಬಂತು. ಅಂದರೆ ಹಸಿರು ಎಲೆಗಳು, ಈರುಳ್ಳಿಯ ಚಿಗುರು, ಬ್ರೆಡ್‌ ತುಣುಕು, ಬೇಯಿಸಿದ ಮೊಟ್ಟೆಯ ಚೂರು ಇವೆಲ್ಲವುಗಳ ರಾಶಿಯ ಮೇಲೆ ಕೆನೆಯ ಬಿಳಿ ರಂಗೋಲಿ ಚಿತ್ತಾರ.

ಈಗ ಜಠಾರಾಗ್ನಿಗೆ ತಂಪೆರಚಿದಂತಾಯಿತು. ಎಂದೋ ಖಾಲಿಯಾಗಿದ್ದ ಗ್ಲಾಸುಗಳಿಗೆ ಬಂತು, ಬೇಕೆಂದಷ್ಟು ವೈನ್‌ ಅಥವಾ ಬಿಯರ್‌.

ಎಲ್ಲ ಮುಗಿಯಿತು. ಇನ್ನೇನು ಕೈ ಒರಸಿಕೊಳ್ಳಬೇಕು ಎನ್ನುವಷ್ಟರಲ್ಲಿ ದೊಡ್ಡ ಅಗಲವಾದ ತಟ್ಟೆಗಳಲ್ಲಿ ಬೀಫ್‌ (ನನಗೆ ಚಿಕನ್‌) ಜತೆಗೆ ಹದವಾಗಿ ಬೇಯಿಸಿದ ಅನ್ನ ಬಂತು. ಅರೆ, ಹೊಟ್ಟೆಯಲ್ಲಿ ಸ್ಥಳವೆಲ್ಲಿ? ಇದು ‘ಮೇಯ್ನ್‌ ಕೋರ್ಸ್‌’. ಬಿಡುವ ಹಾಗೂ ಇಲ್ಲ. ಈಗ ಅರ್ಥವಾಗಿತ್ತು – ಇತರ ನಾಲ್ವರು ಯಾಕೆ ಬ್ರೆಡ್ಡು ಸಲಾಡ್‌ಗಳನ್ನೆಲ್ಲ ಚೂರು ಪಾರು ತಿಂದು ಅರ್ಧಕ್ಕರ್ಧ ಹಾಗೇ ಬಿಡುತ್ತಿದ್ದರು ಅಂತ.

ಇದನ್ನು ಮುಗಿಸಲು ನೆರವಾಗುವಂತೆ ಪ್ರತ್ಯೇಕ ಫ್ರೆಂಚ್‌ ವೈನ್‌ ಬಂತು. ಮತ್ತೆ ಎಲ್ಲರೂ ಸರದಿಯಂತೆ ಲೇಬಲ್‌ ನೋಡುತ್ತಾರೇನೋ ಎಂದುಕೊಂಡಿದ್ದೆ ಜರ್ಮನ್‌ ಭಾಷೆಯಲ್ಲಿ ಬೇರಾಮಾಣಿ ಎಲ್ಲ ವಿವರ ಕೊಟ್ಟನೆಂದು ಕಾಣುತ್ತದೆ. ಹಾಗಾಗಲಿಲ್ಲ.

ನಾವು ಕೂತಿದ್ದು ಒಂದು, ಒಂದೂ ಕಾಲು ಗಂಟೆ ಆಗಿರಬಹುದು. ಆವರೆಗೆ ಒಬ್ಬೊಬ್ಬರ ಎದುರೂ ಎಂಟೋ ಹತ್ತೋ ಪ್ಲೇಟುಗಳು, ನಾಲ್ಕೋ ಐದೋ ಗ್ಲಾಸುಗಳೂ ಇದ್ದವು. ಒಳಗೂ ಹೌಸ್‌ಫುಲ್‌, ಊಟದ ಮೇಜೂ ಹೌಸ್‌ಫುಲ್‌. ಇಬ್ಬರು ಸಮವಸ್ತ್ರಧಾರಿಗಳು ಶಿಸ್ತಾಗಿ ಬಂದು ಎಲ್ಲರ ತಟ್ಟೆ ಲೋಟಗಳನ್ನು ಖಾಲಿ ಮಾಡಿದರು.

ಈಗ ಡೆಸರ್ಟ್‌ (ಸಿಹಿ ತಿಂಡಿಯ) ಸರದಿ. ಕೆರಾಮೆಲ್‌ ಕಜ್ಜಾಯ; ಜತೆಗೆ ಅಗೋ! ಇನ್ನೊಂದು ಬಾಟಲಿ. ಈ ಬಾರಿ ವೈನಲ್ಲ, ವೋಡ್ಕಾ.

ನನಗೆ ಆಟೊಮ್ಯಾಟಿಕ್‌ ವಾಶ್‌ಬೇಸಿನ್ನಿನ ನೆನಪಾಯಿತು. ಅಲ್ಲಿ ಒಮ್ಮೆ ನೀರು, ಒಮ್ಮೆ ಸೋಪು, ಒಮ್ಮೆ ತಣ್ಣೀರು, ಒಮ್ಮೆ ಕ್ರೀಮು, ಒಮ್ಮೆ ಬಿಸಿಗಾಳಿ ಬರುತ್ತಿದ್ದ ಮಾದರಿಯಲ್ಲೇ ಇಲ್ಲಿ ಊಟ ಬಡಿಸುವ ಕೆಲಸ ಸಾಗಿತ್ತು. ನನಗೆ ಈಗ ಗಾಳಿ ಬೇಕಾಗಿತ್ತು. ಅದಕ್ಕಿಂತ ಹೆಚ್ಚಾಗಿ ಒಂದು ಹಾಸಿಗೆ ಬೇಕಾಗಿತ್ತು. ವಿಮಾನದ ಊಟದ ನೆನಪಾಯಿತು. ಅಲ್ಲಿ ಉಂಡವರು ಹಾಗೇ ಕೂತಲ್ಲೇ ಒರಗಿ ನಿದ್ದೆ ಮಾಡಬಹುದು.

ಪ್ರಧಾನ ಮಂತ್ರಿ ನರಸಿಂಹರಾಯರ ಜತೆ ಅವರ ‘ಏ-ವನ್‌’ ಉಡ್ಡಾಣದಲ್ಲಿ ರಿಯೋಕ್ಕೆ ಹೋಗುವಾಗ, ಬರುವಾಗ ಇಂಥದ್ದೇ ‘ಟೆನ್‌ ಕೋರ್ಸ್‌’ ಊಟ ಮಾಡುವ ಭಾಗ್ಯ ನಮಗೆ ಸಿಕ್ಕಿತ್ತು. (ಪ್ರಧಾನಿಗೆ ಮಾತ್ರ ಉಪ್ಪಿಲ್ಲದ ಹೆಸರು ಕಾಳು ಪಲ್ಲೆ ಮತ್ತು ಒಣ ರೊಟ್ಟಿಯ ವ್ಯವಸ್ಥೆ ಮಾಡಲು ವಿಶೇಷ ಅಡುಗೆ ಭಟ್ಟನ ನೇಮಕವಾಗಿತ್ತು). ಆದರೆ ವಿಮಾನಲ್ಲಿ ಪ್ಯಾಂಟು ಶರ್ಟಿನ ಬೇರಾಮಾಣಿಗಳಿರಲಿಲ್ಲ. ಅಥವಾ ಝೂರಿಕ್‌ನ ಸೆವಾಯ್‌ ಹೊಟೆಲ್‌ನಲ್ಲಿದ್ದಂತೆ ಸ್ಕರ್ಟ್‌ ತೊಟ್ಟ ಗಂಡು ಮಾಣಿಗಳಿರಲಿಲ್ಲ. ಇಲ್ಲಿ ಮಾಣಿಕ್ಯದಂಥ ಅಂಬರ್‌ ಇದ್ದಳು.

ಮಿಸ್‌ ಅಂಬರ್‌ ಶಂಕರ್‌ ನಾನು ನೋಡಿದ ಗಗನ ಸಖಿಯರಲ್ಲೇ ಅತ್ಯಂತ ರೂಪವತಿ (ನನ್ನ ಪತ್ನಿಯ ಅಭಿಪ್ರಾಯ ಬೇರೆ, ಆ ಮಾತು ಬೇರೆ); Ambar (ಆಕಾಶ) ಅನ್ನಿ Ember (ಬೆಚ್ಚನ್ನ, ಬೆಂಕಿ) ಅನ್ನಿ Amber (ತೈಲಸ್ಫಟಿಕ) ಅನ್ನಿ ಹೇಗೆ ಕರೆವರೂ ಅವಳು ಮಲ್ಲಿಗೆಯ ನಗೆ ಸೂಸಿ, ಹಂಸ ನಡಿಗೆಯಲ್ಲಿ ಬಳುಕಿ ಬರುವವಳು. (ವಿಮಾನ ಕೊಂಚ ಹೊಯ್ದಾಡುತ್ತಿದ್ದರೆ ಎಲ್ಲ ಸಖಿಯರ ನಡಿಗೆಯೂ ಹಂಸ ನಡಿಗೆಯಾಗುತ್ತದೆ; ಜೋರಾಗಿ ಹೊಯ್ದಾಡಿದರೆ ಪೆಂಗ್ವಿನ್‌ ನಡಿಗೆಯಾಗುತ್ತದೆ.)

ನನ್ನ ಪಕ್ಕದ ಸೀಟಿನ ಪಯಣಿಗ, ಪಿಟಿಐನ ದಢೂತಿ ಲಾಲ್‌ ಮೊದಲ ಊಟದಲ್ಲಿ ಎಲ್ಲವನ್ನೂ ಗಬಗಬ ಮುಗಿಸಿ, ತಟ್ಟೆಯ ಮೂಲೆಯಲ್ಲಿ ಪಪಾಯಾ ಬೀಜದ ಮುದ್ದೆಯಂತಿದ್ದ ‘ಕೇವಿಯರ್‌’ ಎಂಬ ಉಪ್ಪಿನಕಾಯಿಯನ್ನು ಮಾತ್ರ ಹಾಗೇ ಬಿಟ್ಟಿದ್ದ. ‘ಯಾಕೆ ಬಿಟ್ಟೆ?’ ಕೇಳಿದೆ. ‘ಅದು ಎಂಥದೋ ಗೊತ್ತಿಲ್ಲ’ ಅಂದ. ಆತ ಜೇಮ್ಸ್‌ಬಾಂಡ್‌ನ ‘ಗೋಲ್ಡ್‌ ಫಿಂಗರ್‌’ ಚಿತ್ರ ನೋಡಿರಲಿಲ್ಲವೆಂದು ಕಾಣುತ್ತದೆ. ಅದರಲ್ಲಿ ಜೇಮ್ಸ್ ಬಾಂಡ್ ಯಾವುದೋ ಕೋಟ್ಯಧೀಶನ ಮನೆಗೆ ರಾತ್ರಿ ವೇಳೆ ಕಳ್ಳನಂತೆ ನುಗ್ಗುತ್ತಾನೆ. ತಿಜೋರಿ ತೆಗೆದು, ಅದರಲ್ಲಿನ ನೋಟಿನ ಕಂತೆ, ವಜ್ರವೈಢೂರ್ಯ ಎಲ್ಲವನ್ನೂ ಕಡೆಗಣಿಸಿ ತನಗೆ ಬೇಕಿದ್ದ ರಹಸ್ಯ ಸುಳಿವಿಗಾಗಿ ಹುಡುಕುತ್ತಾನೆ, ಕೊನೆಗೆ ಫ್ರಿಜ್‌ ಬಾಗಿಲು ತೆಗೆದು, ಅಲ್ಲೂ ಏನೇನೋ ಹುಡುಕಿ ನಿರಾಶನಾಗಿ ಅಲ್ಲಿನ ಒಂದು ಪಾತ್ರೆಯಲ್ಲಿ ಏನನ್ನೋ ನೋಡಿ ‘ಆಹ್‌ ಕೇವಿಯರ್‌ !’ ಎನ್ನುತ್ತ ಒಂದೇ ಒಂದು ಚಮಚದಷ್ಟನ್ನ ಎತ್ತಿ ಬಾಯಿ ಚಪ್ಪರಿಸ್ತುತ ಮತ್ತೆ ತನ್ನ ಶೋಧ ಮುಂದುವರೆಸುತ್ತಾನೆ.

‘ಕೇವಿಯರ್‌’ ಎಂಬುದು ಭೂಮಧ್ಯ ಸಮುದ್ರದಲ್ಲಿ ಹೆಚ್ಚಾಗಿ ಕಾಣಸಿಗುವ ಸ್ಟರ್ಜನ್‌ ಎಂಬ ಮೀನಿನ ಮೊಟ್ಟೆ. ಭಾರೀ ಬೆಲೆ ಬಾಳುವ ಇದನ್ನು ಕಷ್ಟಪಟ್ಟು ಸಂಗ್ರಹಿಸಿ ಉಪ್ಪಿನಲ್ಲಿಟ್ಟು ಡಬ್ಬೀಕರಿಸುತ್ತಾರೆ. ಮೊದಲ ಬಾರಿ ಇದನ್ನು ತಿಂದರೆ, ಕೊಂಚ ಲೋಳೆಯುಳ್ಳ ಇದು ಅಷ್ಟೇನೂ ಸವಿ ಎನಿಸುವುದಿಲ್ಲ. ಆದರೆ ಲಂಡನ್‌ನಲ್ಲಿ ನಾಲ್ಕು ಗಗನಸಖಿಯರ ಜೊತೆಗೆ ಒಂದೇ ಮನೆಯಲ್ಲಿ ಮೂರು ತಿಂಗಳ ಕಾಲ ವಾಸ ಮಾಡಿದ ಏಕೈಕ ಗಂಡು ಎನ್ನಿಸಿಕೊಂಡ ನನಗೆ, ಹುಡುಗಿಯರು ತಾವು ಕೊಡುವ ಎಲ್ಲ ಕಷ್ಟ ಕೀಟಲೆಗಳನ್ನೂ ನಗುನಗುತ್ತಲೇ ನುಂಗಿಕೊಳ್ಳುವುದನ್ನು ಕಲಿಸಿದ್ದರು. ಜತೆಗೆ ಕೇವಿಯರ್‌ ಸ್ವಾದವನ್ನೂ.

‘ನಾಗೇಶ್‌ ! ಇವೊತ್ತು ನಿಮಗೆ ಡಿನ್ನರ್‌ ಇಲ್ಲ’ ಎಂದು ಕತ್ತು ಕೊಂಕಿಸುತ್ತ ಬಂದ ಅಂಬರ್‌ ಕಿಲಕಿಲ ನಕ್ಕಳು.

‘ಯಾಕೆ ಮಿಸ್‌ ? ನಾನೇನು ತಪ್ಪು ಮಾಡಿದೆ ?’ ಕೇಳಿದೆ.

‘ಮತ್ತೆ, ಕೇವಿಯರ್‌ ಎಷ್ಟು ಸ್ವಾದಿಷ್ಟ ಅನ್ನೋದನ್ನ ವಿಮಾನದಲ್ಲಿದ್ದ ಎಲ್ಲರಿಗೂ ಹೇಳಿಬಿಟ್ರಾ ? ನಿಮ್ಮ ಪತ್ರಕರ್ತ ಸಹೋದ್ಯೋಗಿಗಳು ಒಬ್ಬೊಬ್ಬರಾಗಿ ಪ್ಯಾಂಟ್ರಿಗೆ ಬಂದು ಒಂದೊಂದೇ ಚಮಚ ರುಚಿ ನೋಡಿ ಎಲ್ಲವನ್ನೂ ಖಾಲಿ ಮಾಡಿಬಿಟ್ಟಿದ್ದಾರೆ. ನಿಮಗೆ ಶಿಕ್ಷೆ ಆಗಲೇಬೇಕು. ನೋ ಡಿನ್ನರ್‌ ಫಾರ್‌ ಯೂ !’ ಎಂದು ಹುಸಿಕೋಪ ನಟಿಸಿದಳು.

ನಾನು ಕಿಸೆಯಿಂದ ಒಂದು ಪೆನ್‌ ತೆಗೆದೆ. ‘ನೀನು ಊಟ ಕೊಡದಿದ್ದರೆ ಇದನ್ನೇ ತಿಂದು ಬದುಕಿಕೊಳ್ಳುತ್ತೇನೆ!’ ಎಂದೆ. ರಿಯೋದಲ್ಲಿ ನೆನಪಿನ ಕಾಣಿಕೆಯಾಗಿ ಪಡೆದ ಜೋಳದ ಹಿಟ್ಟಿನಿಂದ ತಯಾರಾದ ಬಯೊಡಿಗ್ರೇಡಬಲ್‌ ಪೆನ್ ಅದು.
ಪತ್ರಕರ್ತನ ಹೊಟ್ಟೆ ತುಂಬಿಸುವುದೇ ಪೆನ್ನು ತಾನೆ ?