”ಈ ಮನೆಯಲ್ಲಿ ಮಾತಾಡದೇ ಹಾಗೇ ನಿಂತಿರೋಣ ಅನ್ನಿಸಿ ಜಗಲಿಯಲ್ಲಿ ಸುಮ್ಮನೇ ನಿಂತೆ, ಹೊರಗೆ ತಣ್ಣಗೇ ಇರುಳು, ಎಲ್ಲೋ ಕೇಳುವ ಗಾಳಿಯ ಸದ್ದು, ಸ್ನಾನದ ಕೋಣೆಯಲ್ಲಿ ದಬ್ಬೆ ನೀರು ಬೀಳುವ ಸದ್ದು, ಕಾಡಿನ ವಿಚಿತ್ರ ಹುಳಗಳು ತಮ್ಮಷ್ಟಕ್ಕೆ ಪಂಚಾತಿಕೆ ಹೊಡೆಯುವ ಸದ್ದು, ನವಿಲೊಂದು ಕೀ ಕೀ ಎಂದು ಕೂಗಿ ದೊಡ್ಡ ರೆಕ್ಕೆ ಬಡಿದು ಹಾರಿದ ಸದ್ದು, ಮರವೊಂದರ ತರಗೆಲೆಗಳು ಹಾರಿ ಹಂಚಿನ ಮೇಲೆ ಉದುರಿದ ಸದ್ದು, ಆ ಪುಟ್ಟ ಮಗು ನಿಟ್ಟುಸಿರಿಟ್ಟ ಸದ್ದು, ಅಡಿಕೆ ಮಡಲೊಂದು ಬಿದ್ದ ಸದ್ದು, ಅಬ್ಬಾ ಸುಮ್ಮನಿದ್ದರೆ ಅದೆಷ್ಟು ಸದ್ದುಗಳನ್ನು ಕೇಳಬಹುದು. ಮೇಲೆ ಚುಕ್ಕಿಗಳು, ಈ ಮನೆಯನ್ನೇ ನೋಡಿ ಮರಾಠೆಯವರನ್ನು ಈ ಮನೆಯಿಂದ ಬೀಳ್ಕೊಡಲು ತಯಾರಾದವರಂತೆ ಹೊಳೆಯುತ್ತಿದ್ದವು”
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಹತ್ತನೆಯ ಕಂತು.

 

“ಅಲ್ಲಿ ದೂರದಲ್ಲಿ ಕಾಣಿಸುತ್ತಿದೆಯಲ್ವಾ ಅದರ ಹೆಸರು ಅಜ್ಜಿಕುಂಜ ಬೆಟ್ಟ, ಅಲ್ಲೇ ಬುಡದಲ್ಲೊಂದು ಶಾಲೆಯಿದೆ, ನಾನು ಮೊದಲು ನನ್ನ ಸರ್ವೀಸು ಶುರುಮಾಡಿದ್ದು ಅದೇ ಶಾಲೆಯಲ್ಲಿ” ರಾಧಾಕೃಷ್ಣ ಜೋಶಿಯವರು ದೂರದಲ್ಲಿ ಮೋಡಗಳ ಜೊತೆಗೆ ತೇಲುತ್ತಿದ್ದ ದೊಡ್ಡ ಬೆಟ್ಟವೊಂದನ್ನು ತೋರಿಸಿ ಹೊಳಪಾದರು. ಆ ಸಂಜೆ ಆಕಾಶ ನೋಡಿದರೆ ನಿಭಿಡ ಕಾಡುಗಳ ನಡುವೆ ಉದ್ದಕ್ಕೆ ಹರಡಿರುವ ಪ್ರತಿಮೆಗಳು, ನೀಲಿಯಂತೆ ಕಾಣುವ ಹಸಿರ ಬೆಟ್ಟವೋ, ಹಸಿರಂತೆಯೇ ಕಾಣುವ ಮೋಡಗಳ ಗುಂಪೋ ಗೊತ್ತಾಗುತ್ತಿರಲಿಲ್ಲ. ದೂರದಿಂದ ನಮ್ಮನ್ನೇ ನೋಡುತ್ತಿದ್ದ ಅಜ್ಜಿಕುಂಜವನ್ನು ನಾವೂ ದಿಟ್ಟಿಸಿದೆವು. ಅದು ಹೆಬ್ರಿ-ಸೋಮೇಶ್ವರ-ಆಗುಂಬೆ ಕಾಡುಗಳ ಹಸಿರ ರಗ್ಗು ಹೊದ್ದುಕೊಂಡಿತ್ತು. ಮಿನುಗುವ ಮುಖವನ್ನಷ್ಟೇ ಹೊರಹಾಕಿ, ಮತ್ತೆ ಮುಸುಕೆಳೆದು ನಾಚಿ, ಮತ್ತೆ ಹಗೂರನೇ ಮುಸುಕು ಮೇಲೆ ಸರಿಸಿ, ಅಮ್ಮನನ್ನು ನೋಡುವ, ಹಾಸಿಗೆಯಲ್ಲೇ ಕೂತು ಆಚೀ.. ಕೂಕೀ.. ಅಂತ ಕಣ್ಣಾಮುಚ್ಚಾಲೆ ಆಡುವ ಪುಟ್ಟ ಹುಡುಗನ ಹಾಗೇ ಆ ಬೆಟ್ಟ ನಾಟಕ ಮಾಡುತ್ತಿತ್ತು.

“೨೪ ವರ್ಷಗಳ ಹಿಂದೆ ನಾನು ಶಿಕ್ಷಕನಾಗಿ ಸೇರಿದ್ದು ಇದೇ ದಿನ. ನೋಡಿ ಈ ದಿನಕ್ಕೆ ಬರೋಬ್ಬರಿ ೨೪ ರ ತರುಣಪ್ರಾಯ ನನ್ನ ಶಿಕ್ಷಕ ವೃತ್ತಿಗೆ” ಎಂದ ಜೋಶಿಯವರು ಆ ಬೆಟ್ಟದತ್ತ ನೋಡುತ್ತಲೇ ನಿಂತರು, ಅವರಿಗೆ ತಾವು ಮೊದಲು ವೃತ್ತಿ ಶುರುಮಾಡಿದ ಆ ಶಾಲೆಯ ಗೋಡೆಗಳು, ಬೆಟ್ಟದ ನೆರಳಿನಿಂದ ಹೊಳೆಯುತ್ತಿದ್ದ ಹಂಚುಗಳು, ಸೀತಾನದಿಯ ಜೊತೆಗೆ ಹೊಸದೊಂದು ರಾಗವಾಗಿ ಸೇರುತ್ತಿದ್ದ ಶಾಲೆಯ ಬೆಳಗಿನ ಪ್ರಾರ್ಥನೆ ಎಲ್ಲವೂ ನೆನಪಾಯಿತೆಂದು ತೋರುತ್ತದೆ, ಅಮ್ಮನ ಸೆರಗ ಮರೆಯಲ್ಲಿ ನಾಚಿ ನಾಚಿ ಕೊನೆಗೆ ಸಣ್ಣದಾಗಿ ಮುಖ ತೋರಿಸುವ ಮಗುವಿನಂತಿರುವ ಆ ಬೆಟ್ಟದ ತುದಿಯಿಂದ ಜೋಶಿಯವರ ಪಾಠ ಕೇಳಿದಂತೆ, ಮಕ್ಕಳ ಪ್ರಾರ್ಥನೆಯ ಸೊಲ್ಲು ಕೇಳಿಸಿದಂತೆ, ಆಗುಂಬೆಯ ಸಿಂಗಳೀಕಗಳು ಗುಗ್ಗುರು ಧ್ವನಿಯಲ್ಲಿ ಮಾತನಾಡಿದಂತೆಲ್ಲಾ ಅನ್ನಿಸಿ ಮೈಯೆಲ್ಲಾ ತಣ್ಣಗಾಗಿ ಹೋಯ್ತು. ಶಾಲೆಯ ಹತ್ತಿರ ಕರೆದುಕೊಂಡು ಹೋಗಿ “ನೋಡಿ ಇದು ನನ್ನ ಶಾಲೆ” ಅಂತ ಶಾಲೆಯ ಮೆಟ್ಟಿಲಲ್ಲೇ ನಿಂತುಕೊಂಡು ಹೇಳುವುದಕ್ಕಿಂತ, ಕಾಡಿಗೆ ಕರೆದುಕೊಂಡು ಹೋಗಿ “ಅಗೋ ಅಲ್ಲೊಂದು ಬೆಟ್ಟ ಕಾಣಿಸುತ್ತಿದೆಯಲ್ವಾ? ಅದರ ಕೆಳಗೊಂದು ಶಾಲೆ ಇದೆ, ನಿಮ್ಗೆ ಇಲ್ಲಿಂದ ಕಾಣಿಸುದಿಲ್ಲ, ಸುಮ್ಮನೇ ಕಲ್ಪನೆ ಮಾಡ್ಕೊಳ್ಳಿ, ಅಲ್ಲೇ ಸೀತಾ ನದಿ ಹರಿಯೋದು, ಅದೂ ಇಲ್ಲಿಂದ ಕಾಣಿಸುವುದಿಲ್ಲ, ಅದನ್ನೂ ಸುಮ್ಮನೇ ಕಲ್ಪನೆ ಮಾಡ್ಕೊಳ್ಳಿ, ಅದು ನಮ್ಮ ಶಾಲೆ, ಆ ಸೀತಾನದಿಯೇ ಅಲ್ಲಿನ ಜೀವಸೆಲೆ” ಅಂತ ನಾವಿನ್ನೂ ಕಾಣದ ನೋಟಗಳನ್ನು ವಿವರಿಸೋದು ಎಷ್ಟೊಂದು ಚಂದ ಅಲ್ವಾ? ಕಾಣುವ ಲೋಕಕ್ಕಿಂತ ಕಾಣದ ಲೋಕವೇ ಚಂದ ಅನ್ನಿಸುತ್ತದೆ ಕೆಲವೊಮ್ಮೆ. ಆದರೆ ಜೋಶಿಯವರು ನಾವು ಕಾಣದ ಲೋಕವನ್ನು ಕಾಣಿಸುತ್ತಿದ್ದರು, ಹಾಗೇ ತಾವು ಆ ಬೆಟ್ಟದ ತಡಿಯಲ್ಲಿ ಅನುಭವಿಸಿದ ದಿನಗಳನ್ನು ನಮಗೆ ವಿವರಿಸುವಾಗ ಅವರಲ್ಲೊಂದು ಅರ್ಥವಾಗದ ಬೆರಗು ಮೂಡುತ್ತಿತ್ತು. ಮಾಳದ ಕಾಡುಗಳೂ ಜೋಶಿಯವರ ಅನುಭವಗಳನ್ನು ಕಿವಿಗೊಟ್ಟು ಕೇಳಿದಂತೆ ಅನ್ನಿಸಿತು.

ಇರುಳಾಗುವ ಮೊದಲು ಮಾಳದ ಕಾಡಿನ ತುದಿಯಲ್ಲಿದ್ದ ಎತ್ತರದ ಮನೆಯೊಂದಕ್ಕೆ ಹೋಗಬೇಕಿದ್ದರಿಂದ ಜೋಶಿಯವರು “ನಡೀರೀ ಹೊತ್ತಾಗುತ್ತದೆ. ದಾರಿಯಲ್ಲಿ ಚಂದ ಚಂದ ಬೆಟ್ಟದ ಸೆರಗು ಕಾಣಿಸುತ್ತದೆ, ಅಡಿಕೆ ತೋಟಗಳು ಉಂಟು. ಹೋಗುತ್ತ ಅಲ್ಲಲ್ಲಿ ಬೇಕಾದರೆ ಬೈಕ್ ನಿಲ್ಲಿಸಿ, ಅವನ್ನೆಲ್ಲಾ ನೋಡುವ” ಎಂದರು. ಹಾಗೇ ಅವರು ಬೈಕೇರಿ ಹೋದಂತೆಲ್ಲಾ ಸುತ್ತಲೂ ಇಡೀ ಮಾಳವನ್ನು ಕಾಯುತ್ತಿದ್ದ ಕುರಿಂಗೆಲ್ ಪರ್ವತದ ಮೇಲೆ ಸಾಯಂಕಾಲದ ಎಳೆ ಬಿಸಿಲು ಹ್ಯಾಗೋ ಹತ್ತಿ ಕುಳಿತು ಮೊದಲೇ ಹಸಿರಿಂದ ಲಕಲಕಿಸುತ್ತಿದ್ದ ಆ ಬೆಟ್ಟಕ್ಕೊಂದು ಸ್ಪರ್ಶ ಕೊಟ್ಟು ಉದ್ವೇಗ ಬರುವಂತೆ ಮಾಡುತ್ತಿದ್ದುದು ಬಹಳ ಮಜವಾಗಿ ತೋರುತ್ತಿತ್ತು. ಅಷ್ಟೊತ್ತಿಗೆ ಅಲ್ಲೇ ಎಡಬದಿಯಲ್ಲಿ ಬಿಮ್ಮೆಂದು ನಿಂತಿದ್ದ ಕುರಿಗೆಂಲ್ ಬೆಟ್ಟ, ಥಟ್ ಅಂತ ಕಣ್ಣಿಗೆ ಹತ್ತಿರವಾದಂತಾಗಿ ಇನ್ನೇನು ಕವಿಯಲಿರುವ ಇರುಳಿಗೆ ಹಂಬಲಿಸುತ್ತಿದ್ದಂತೆ ಕಾಣುತ್ತಿತ್ತು.

ಮತ್ತೆ ಜೋಶಿಯವರು ಬೈಕ್ ನ್ನು ತೀರಾ ಇಳಿಜಾರಾಗಿದ್ದ ದಾರಿಯಲ್ಲಿ ಇಳಿಸಿದರು, ಆಚೀಚೆ ಅಡಿಕೆ ತೋಟದ ನೆರಳು, ಅದರ ನಡುವಲ್ಲೇ ಜಾಗ ಮಾಡಿಕೊಂಡು ಬಂದು ಸ್ವರ್ಣೆಯನ್ನು ಕಾಣಲು ಆಸೆಯಿಂದ ಹೊರಟ ತೊರೆ, ಬೆಟ್ಟಗಳ ಮರೆಯ ಮರದಲ್ಲೊಂದು ಒಂಟಿ ಬೆಳ್ಳಕ್ಕಿ, ಇವೆಲ್ಲ ಎಷ್ಟು ಚಂದ ಇತ್ತೆಂದರೆ ಸುಮ್ಮನೇ ಇವೆಲ್ಲವನ್ನು ನೋಡಿಕೊಂಡು ರಾತ್ರಿ ಕರಗುವವರೆಗೂ ನಿಶ್ಚಲವಾಗಿ ಕೂರೋಣ ಅನ್ನಿಸುತ್ತಿತ್ತು.

ಅಮ್ಮನ ಸೆರಗ ಮರೆಯಲ್ಲಿ ನಾಚಿ ನಾಚಿ ಕೊನೆಗೆ ಸಣ್ಣದಾಗಿ ಮುಖ ತೋರಿಸುವ ಮಗುವಿನಂತಿರುವ ಆ ಬೆಟ್ಟದ ತುದಿಯಿಂದ ಜೋಶಿಯವರ ಪಾಠ ಕೇಳಿದಂತೆ, ಮಕ್ಕಳ ಪ್ರಾರ್ಥನೆಯ ಸೊಲ್ಲು ಕೇಳಿಸಿದಂತೆ, ಆಗುಂಬೆಯ ಸಿಂಗಳೀಕಗಳು ಗುಗ್ಗುರು ಧ್ವನಿಯಲ್ಲಿ ಮಾತನಾಡಿದಂತೆಲ್ಲಾ ಅನ್ನಿಸಿ ಮೈಯೆಲ್ಲಾ ತಣ್ಣಗಾಗಿ ಹೋಯ್ತು.

“ಪ್ರತೀ ಸಲವೂ ಹಕ್ಕಿಯ ಹಾಡು, ನದಿಯ ಮೊರೆತ, ಬೆಟ್ಟದ ಅಚಲ ನೋಟ, ಹಸಿರು ಇವೆಲ್ಲ ಇದ್ದದ್ದೇ ಅಲ್ವಾ? ಬೇರೇನಿಲ್ವಾ ಕಾಡಲ್ಲಿ?” ಅಂತ ಬೇಜಾರಾಗಿ ಕೇಳುವವರಿರಬಹುದು. ಆದರೆ, “ನಾವು ಮನುಷ್ಯರು ಪ್ರತಿದಿನ ಬೊಗಳಿದ್ದನ್ನೇ ಬೊಗಳಬಹುದು, ಹಾಡಿದ್ದನ್ನೇ ಮತ್ತೆ ಮತ್ತೆ ಹಾಡಬಹುದು. ಆದರೆ ಕಾಡು ಹಾಗಲ್ಲ, ಪ್ರತೀ ನಿಮಿಷಕ್ಕೂ ಇಲ್ಲೊಂದು ಹೊಸ ಮೌನ ಆವರಿಸುತ್ತದೆ, ಆ ಮೌನಕ್ಕೆ ಹಕ್ಕಿ ಹೊಸತಾಗೇ ಹಾಡುತ್ತದೆ, ಯಾವತ್ತೂ ಒಂದೇ ತರ ಹರಿಯುವ ಹಳ್ಳ ಬೆಟ್ಟದಂಚಿನಿಂದ ಬೀಸುವ ಗಾಳಿಯ ಪಿಸುಮಾತಿಗೆ ಸ್ಪಂದಿಸಿ ತಾನೂ ಹೊಸತಾಗಿ ಮಾತಾಡುತ್ತದೆ. ದೂರದಿಂದ ವಿಚಿತ್ರ ಸದ್ದಲ್ಲಿ ಕೂಗುವ ಸಣ್ಣಗಿನ ಹಕ್ಕಿ ಧ್ವನಿ ಕೇಳಿ, ಎಷ್ಟೋ ಮೈಲು ದೂರವಿರುವ ಮತ್ತೊಂದು ಹಕ್ಕಿಯೂ ಕೂಗುತ್ತದೆ, ಕೀಟಗಳೂ, ಜೀರುಂಡೆಗಳೂ ಹೀಗೆ ಎಲ್ಲೆಲ್ಲೋ ಕೂತು ಮಾತಾಡುತ್ತಲೇ ಇರುತ್ತದೆ. ಇವೆಲ್ಲ ನಮಗೆ ಕೇಳಬೇಕಿದ್ದರೆ ನಾವು ತೆಪ್ಪಗಿರಬೇಕು. ಮೌನವಾಗಿರುವುದನ್ನು ಕಲಿಯದಿದ್ದರೆ, ಯಾವ ಸ್ವರಗಳೂ ಕೇಳಿಸುವುದಿಲ್ಲ, ಕಾಡು ಕಾಡುವುದೇ ಇಲ್ಲ”.

ನಾವೀಗ ಮುಂದೆ ದಾರಿಯೇ ಇಲ್ಲವೇನೋ ಅನ್ನಿಸುವ ಜಾಗದಲ್ಲಿದ್ದೆವು. ಏರು ಏರಾಗಿದ್ದ ಆ ದಾರಿಯಲ್ಲಿ ನಿಂತರೆ ನಮ್ಮ ತಲೆ ಮೇಲೆಯೇ ನಿಂತಂತಿದ್ದ ದೊಡ್ಡ ಬೆಟ್ಟ ನೀಳವಾಗಿಯೂ, ಮನೋಹರವಾಗಿಯೂ ಕಾಣುತ್ತಿತ್ತು. ಕೆಳಗೆ ಆಳವಾದ ಪ್ರಪಾತದಲ್ಲಿ ಹರಿಯುತ್ತಿದ್ದ ಹಳ್ಳ, ಹಾಗೇ ಕೇರೆ ಹಾವಿನಂತಿದ್ದ ದಾರಿಯನ್ನು ಸಾಗುತ್ತ, ಎಲ್ಲೋ ಮೇಲಕ್ಕೆ, ಆಕಾಶದ ನೇರಕ್ಕೆ ಚಲಿಸುತ್ತಿದ್ದಂತೆ ಅನ್ನಿಸುತ್ತಿತ್ತು. ಕೊನೆಗೆ ಜೋಶಿಯವರು ಅಲ್ಲೊಂದು ತಿರುವಲ್ಲಿ ಹೋಗಿ ನಿಂತುಬಿಟ್ಟರು.
“ನೋಡಿ ಅಲ್ಲಿ ಕಾಣ್ತಾ ಇರೋದೇ ಕಜೆ ಮನೆ, ನಿಮಗೆ ಗೊತ್ತಾ, ಈ ಮನೆಯಲ್ಲಿ ಇರುವ ಸಣ್ಣ ಕುಟುಂಬ ನಾಳೆಯೇ ಈ ಮನೆ ಖಾಲಿ ಮಾಡುತ್ತದೆ. ಇಡೀ ತೋಟ ಮತ್ತು ಮನೆ ಮಾರಿ ಬೇರೆ ಕಡೆ ಹೋಗ್ತಿದ್ದಾರೆ, ಇವತ್ತು ಆ ಮನೆಯಲ್ಲಿ ಅವರಿಗೆ ಕೊನೆಯ ದಿನ, ನಾಳೆ ಬಂದರೆ ಅವರು ಸಿಗ್ತಿರಲಿಲ್ಲ” ತಣ್ಣಗೇ ಹೇಳಿದರು ಜೋಶಿಯವರು.

ನಾವಲ್ಲಿ ನಿಂತ ಆ ತಿರುವು ಎಷ್ಟು ಚೆನ್ನಾಗಿತ್ತೆಂದರೆ ಅಲ್ಲಿ ಬೆಟ್ಟ, ನಮ್ಮ ಮುಖಕ್ಕೆ ಮುಖ ನೋಡಿ ಮಾತನಾಡುತ್ತಿದ್ದಂತೆ ಅನ್ನಿಸುತ್ತಿತ್ತು. ಆಕಾಶದ ನೀಲಿ ಮೋಡಗಳು ಏದುಸಿರು ಬಿಟ್ಟು ಓಡುತ್ತ ಓಡುತ್ತ, ಕೊನೆಗೆ ಅಚಾನಕ್ಕಾಗಿ ನಿಂತು, ನಮ್ಮನ್ನೇ ನೋಡುತ್ತಿದ್ದಂತೆ ಅನ್ನಿಸಿ ಮನಸ್ಸು ಶಾಂತವಾಗುತ್ತಿತ್ತು.

ಕಜೆಮನೆ ಒಂದು ದೊಡ್ಡ ಮನೆ, ವಿಶಾಲವಾದ ಅಂಗಳ, ಅಂಗಳದ ಪಕ್ಕದಲ್ಲಿ ಒಂದೇ ಸಮನೆ ಉಕ್ಕುತ್ತಿದ್ದ ಝರಿಯ ನೀರಿನ ತಣ್ಣಗಿನ ಪಸೆ ಅಂಗಳಕ್ಕೂ ಬಂದು ಆಟವಾಡುತ್ತಿತ್ತು. ನಾವು ಸುಮ್ಮನೇ ಹೋಗಿ ಅಂಗಳದಲ್ಲಿ ನಿಂತಿದ್ದೇ, ಬರ್ಮುಡಾ ಹಾಕಿಕೊಂಡ ಸಾದಾ ಸೀದಾ ವ್ಯಕ್ತಿಯೊಬ್ಬರು ನಾವು ಯಾವತ್ತಿನಿಂದಲೋ ಅವರಿಗೆ ಪರಿಚಯ ಇರುವಂತೆ ಚಂದವಾಗಿ ನಕ್ಕು ಬಳಿ ಬಂದರು. ಜೋಶಿಯವರು ನಮ್ಮ ಪರಿಚಯ ಮಾಡಿಕೊಟ್ಟರು. ಅವರು ಆ ಮನೆ ಯಜಮಾನ ಸತೀಶ ಮರಾಠೆಯವರು.

“ಎಷ್ಟು ಚಂದ ಮನೆ ಮಾರಾರ್ರೆ, ಇಂತಹ ಮನೆಯನ್ನು ಬಿಟ್ಟು ಹೋಗುತ್ತಿದ್ದೀರಂತೆ, ಯಾಕೆ” ನಾನಂದೆ ನಗುವಿನಲ್ಲೇ.
“ಚಂದ ಚಂದವೇ, ಆದ್ರೆ ನೋಡಿ ನನಗೀಗ ೫೬ ವರ್ಷವಾಯಿತು. ಸುಮಾರು ೧೨ ಎಕ್ರೆ ಜಾಗ ಇದೆ. ಅಡಿಕೆ ತೋಟವೂ ಇದೆ. ಇಷ್ಟು ವರ್ಷ ಇಲ್ಲೇ ಕಷ್ಟ ಪಟ್ಟು ತೋಟ ಮಾಡಿದೆ, ಹರೆಯದಲ್ಲಿ ಬೇಕಾದಷ್ಟು ಮರ ಹತ್ತುತ್ತಿದ್ದೆ, ಆದ್ರೆ ಈಗ ಅಷ್ಟೆಲ್ಲಾ ಆಗ್ತಿಲ್ಲ, ಹತ್ತುವಷ್ಟು ಮರವಿದೆ. ಒಬ್ಬನೇ ಇಷ್ಟನ್ನೆಲ್ಲಾ ನೋಡಿಕೊಳ್ಳೋಕೆ ಸಾಧ್ಯವೇ ಇಲ್ಲ. ಮೂರು ಮಕ್ಕಳೂ ಹುಡುಗೀಯರು, ಇಬ್ಬರಿಗೆ ಮದ್ವೆಯಾಗಿದೆ, ಈ ಸಲ ಕೊಳೆ ರೋಗ ಬಂದು ಅಡಿಕೆ ಎಲ್ಲಾ ಕೊಚ್ಚಿ ಹೋಗಿದೆ. ಒಬ್ಬನೇ ಇದನ್ನು ನೋಡಿಕೊಂಡ್ರೆ ಮರಗಳನ್ನು ನಾನೇ ಬಲಿಕೊಟ್ಟ ಹಾಗೇ. ಅದ್ಕೆ, ತೋಟ ನೋಡಿಕೊಳ್ಳುವ ಜನರೊಬ್ಬರಿಗೆ ಈ ಮನೆಯನ್ನೂ, ತೋಟವನ್ನೂ ಮಾರಿದೆ, ಬೇರೆ ದಾರಿಯಿಲ್ಲ ನಂಗೆ. ಈ ಮನೆಯಲ್ಲಿ ಇವತ್ತು ನಮ್ಮ ಕೊನೆಯ ದಿನ, ನೀವು ಬಂದಿದ್ದು ಖುಷಿಯಾಯ್ತು” ಎಂದರು ಸತೀಶ್ ಮರಾಠೆ.

ಹಾಗೇ ಮಾತಾಡುತ್ತ, ಅಲ್ಲೇ ಅಂಗಳದಲ್ಲಿದ್ದ ಉರುಟಾದ ಚಂದ ಚಂದ ಕಲ್ಲುಗಳನ್ನು ತೋರಿಸಿ, “ಇದು ಜಲಪಾತದ ಬಳಿ ತುಂಬಾ ಹಿಂದೆ ಸಿಕ್ಕ ಕಲ್ಲುಗಳು, ಎಷ್ಟು ಭಾರವಾಗಿ ಚಂದಾಗಿದೆ ನೋಡಿ” ಎಂದರು. ಆ ಕಲ್ಲುಗಳಲ್ಲಿ ಜಲಪಾತದ ನೀರಿನ ನೆನಪಿತ್ತು. ಆ ಮನೆ, ಆ ಕಾನು, ಆ ಅಂಗಳ ನೋಡಿದ್ದೇ ನಂಗೇನೋ ಅನ್ನಿಸಿತು.
“ಎಷ್ಟು ಬೇಜಾರಾಗಿರ್ಬೇಕು ಅಲ್ವಾ ನಿಮ್ಗೆ, ಈ ಜಾಗ ಬಿಟ್ಟು ಹೋಗ್ಲಿಕ್ಕೆ”ಎಂದೆ.
“ಹ ಹ ಅದಕ್ಕೆಲ್ಲಾ ರೆಡಿಯಾಗಿ ಆಗಿದೆ ನಾನು, ಕೆಲ ತಿಂಗಳ ಮೊದಲೇ ಅತ್ತುಬಿಟ್ಟೂ ಆಗಿದೆ. ಇನ್ನು ಮತ್ತೆ ಬೇಜಾರ್ ಆಗಲ್ಲ. ಪೇಟೆಗೆ ಹತ್ತಿರಿರುವ ಜಾಗ ಒಂದು ಸಿದ್ಧವಿದೆ. ಅಲ್ಲಿ ಹೋಗಿ ನಿಲ್ಲೋದಷ್ಟೆ” ಎಂದರು.
“ಈಗ ಮತ್ತೆ ಬೇಜಾರಾಗಲ್ಲ” ಎನ್ನುವ ಅವರ ಮಾತಲ್ಲೇ ರಾಶಿ ರಾಶಿ ಬೇಸರವಿತ್ತು. ನುಂಗಿಕೊಂಡ ದುಃಖವಿತ್ತು. ದುಃಖ ನುಂಗಿಕೊಂಡರೂ ಜಲಪಾತದಂತಿರುವ ಅವರ ಕಣ್ಣಲ್ಲಿ ದುಃಖದ ಬೆಳಕು ಆಗಾಗ ಕಾಣುತ್ತಲೇ ಇತ್ತು.
“ಬನ್ನಿ ಒಳಗೋಗುವ” ಎಂದರು ಮನೆಯ ಒಳಬಾಗಿಲನ್ನು ಸರಿಸಿ. “ದುಬೈಯಿಂದ ಮಗಳು ಬಂದಿದ್ದಾಳೆ. ಮೊಮ್ಮಗನೊಟ್ಟಿಗೆ, ಈ ಮನೆ ಬಿಡುವ ಪುಟ್ಟ ಮಗು ಜೊತೆ ಮೊದಲು ತುಂಬಾ ಆಟವಾಡಬಹುದಲ್ಲ” ಎಂದು ನುಣ್ಣಗೇ ನಕ್ಕರು. ಕಾಡಿನ ಇಡೀ ಚಳಿಯೆಲ್ಲಾ ಆ ಮನೆಯಲ್ಲೇ ತುಂಬಿಕೊಂಡಂತೆ, ಮೌನವೆಲ್ಲಾ ಅಲ್ಲೇ ಅಷ್ಟೊತ್ತು ಮಲಗಿದಂತೆ ಅನ್ನಿಸುತ್ತಿತ್ತು. ಅಬ್ಬಾ ಎಷ್ಟು ಚಂದ ಮನೆ, ಮಕ್ಕಳಂತೆ ಕಾಪಾಡಿದ್ದ ಮನೆ ಅದು. ಸುತ್ತಮುತ್ತಲಿನ ಚಾವಡಿ, ಮಧ್ಯದಲ್ಲೊಂದು ತುಳಸೀ ಕಟ್ಟೆ, ಅಂಗಳದಲ್ಲಿ ನಿಂತರೆ ಆಕಾಶ ಬೊಗಸೆಯಲ್ಲಿ.

“ಬನ್ನಿ ಮನೆ ನೋಡ್ವ ಮೊದಲು, ಎಂದು ಇಡೀ ಮನೆ ಸುತ್ತಿಸಲು ಅಣಿಯಾದರು ಮರಾಠೆಯವರು.
ಮೊದಲು ತೋರಿಸಿದ ದೇವರ ಕೋಣೆಯ ಶಾಂತತೆಯಲ್ಲಿ ನಿಜವಾದ ದೇವರಿದ್ದಂತೆ ಅನ್ನಿಸಿತು. ಮತ್ತೆ ಮಹಡಿಗೆ ಕರೆದೊಯ್ದರು, “ಅಬ್ಬಾ ಎಂತ ಚಂದ ಮಹಡಿ, ಅಲ್ಲೇ ಒಂದು ಅಡಿಕೆ ಹಾಕಲು ಚಂದದ ಕೋಣೆ, ಆ ಕೋಣೆಗೊಂದು ಹಿತವಾದ ಪರಿಮಳ, ಮತ್ತೆ ಅಡಿಗೆ ಕೋಣೆ, ಅದು ಇದು ಆದ ಮೇಲೆ ಸ್ನಾನದ ಕೋಣೆಗೆ ಬಂದುಬಿಟ್ಟೆವು, ಎಂಥಾ ಚಂದ ಆ ಹಳೆಯ ಸ್ನಾನ ಗೃಹ, ಉದ್ದಕ್ಕಿದ್ದ ಆ ಸ್ನಾನದ ಕೋಣೆಯ ಹಂಡೆಯೊಂದಕ್ಕೆ ಬೆಟ್ಟದಿಂದ ಹರಿಯುವ ನೀರು ದಬ್ಬೆಯ ಮೂಲಕ ಸುರಿಯುತ್ತಿತ್ತು. “ಇದು ಶುದ್ಧ ನೀರು ಎಷ್ಟು ತಂಪಾಗಿದೆ ನೋಡಿ, ಬೇಕಿದ್ದರೆ ಕುಡಿಯಬಹುದು ಎಂದರು.

ಕಾಡಿನ ಇಡೀ ಚಳಿಯೆಲ್ಲಾ ಆ ಮನೆಯಲ್ಲೇ ತುಂಬಿಕೊಂಡಂತೆ, ಮೌನವೆಲ್ಲಾ ಅಲ್ಲೇ ಅಷ್ಟೊತ್ತು ಮಲಗಿದಂತೆ ಅನ್ನಿಸುತ್ತಿತ್ತು. ಅಬ್ಬಾ ಎಷ್ಟು ಚಂದ ಮನೆ, ಮಕ್ಕಳಂತೆ ಕಾಪಾಡಿದ್ದ ಮನೆ ಅದು. ಸುತ್ತಮುತ್ತಲಿನ ಚಾವಡಿ, ಮಧ್ಯದಲ್ಲೊಂದು ತುಳಸೀ ಕಟ್ಟೆ, ಅಂಗಳದಲ್ಲಿ ನಿಂತರೆ ಆಕಾಶ ಬೊಗಸೆಯಲ್ಲಿ.

ನಾನು ಬೊಗಸೆಯೊಡ್ಡಿ ಕುಡಿದ ಆ ನೀರು ಅದೆಷ್ಟು ರುಚಿಯಿತ್ತೆಂದರೆ ಅಷ್ಟು ಚಂದ ನೀರು ಬೇರೆಲ್ಲಿಯೂ ಸಿಗಲಾರದು, ಪರಿಸರದ ತಂಪೆಲ್ಲವೂ ಅದರಲ್ಲಿತ್ತು. ನೀರು ಕುಡಿದು ಅರ್ಧ ಹೊಟ್ಟೆ ತುಂಬಿತ್ತು. ಮತ್ತೆ ಹೋಗಿದ್ದು ಮನೆಯ ಹಿಂಬಾಗಿಲಲ್ಲಿರುವ ದೊಡ್ಡ ಕೋಣೆಗೆ, ಅಲ್ಲಿ ಆ ಮನೆಯ ಜೀವಂತ ನೆನಪುಗಳಿದ್ದವು, ಅಡಿಕೆ ಹಾಕುವ ಬುಟ್ಟಿ, ನೀರು ಕಾಯಿಸುವ ಹಳೆ ಹಂಡೆ, ಹಿಂದೆ ಏನನ್ನೋ ಹೊತ್ತುಕೊಂಡಿದ್ದ ಪಾತ್ರೆ, ಅಜ್ಜನ ಕಾಲದ ಟ್ರಂಕು, ಅರ್ಧದಲ್ಲೇ ಬಿಡಿಸಿಟ್ಟ ಯಾವುದೋ ಚಿತ್ರ, ಎಲ್ಲವೂ ಅಲ್ಲಿ “ನೀವು ನಮ್ಮನ್ನೆಲ್ಲಾ ಬಿಟ್ಟು ಹೋಗ್ತೀರಾ?” ಅಂತ ಮರಾಠೆಯವರನ್ನೇ ಮತ್ತೆ ಮತ್ತೆ ಮೂಕರಾಗಿ ಕೇಳುವಂತೆ ಕೂತಿದ್ದವು. “ಇವನ್ನೆಲ್ಲಾ ಇಲ್ಲೇ ಬಿಟ್ಟುಹೋಗ್ತೀರಾ” ಎಂದು ಕೇಳಿದೆ. “ಹೌದು ಇವ್ಯಾವುದೂ ಬೇಡ, ಇವೆಲ್ಲ ಹೊತ್ತೊಯ್ದರೆ ಮತ್ತೆ ತೋಟ ಎಲ್ಲಾ ನೆನಪಾಗಿ ಇಲ್ಲೇ ಬರ್ಬೇಕು ಅಂತ ಅಳಬಹುದು ನಾನು ಅದಕ್ಕೆ ಇವನ್ನೇ ನೋಡದಿದ್ದರೆ ಆಯ್ತಲ್ಲಾ ಬೇಡ ಅದು ನಂಗೆ” ಮರಾಠೆಯವರು ಕೊಂಚ ನಗುತ್ತ ಹೇಳಿದರೂ ಒಳಗೊಳಗೇ ಕುಸಿಯುತ್ತಿದ್ದಂತೆ ಅನ್ನಿಸಿತು. ಅವರಿಗೆ ಆ ಎಲ್ಲಾ ವಸ್ತುಗಳ ಬಗ್ಗೆ ಎಷ್ಟು ಪ್ರೀತಿಯಿತ್ತು ಅಂತ ಅದರಲ್ಲೇ ಗೊತ್ತಾಗುತ್ತಿತ್ತು. “ಸುಮ್ಮನೇ ಇಲ್ಲಿ ಇವನ್ನೆಲ್ಲಾ ಬಿಟ್ಟರೆ ಮಣ್ಣುಪಾಲಾಗುತ್ತದಷ್ಟೆ, ಜೋಶಿಯವರೇ, ನೀವಾದರೂ ಬಳಸಬಹುದಲ್ವಾ” ಎಂದೆ. “ಹೌದು, ಜೋಶಿಯವರೇ, ಈ ನೀರು ಸರಿಸುವ ಮರದ ಹಾಳೆ ನಿಮಗಿರಲಿ, ಯಾವುದಕ್ಕೂ ಉಪಯೋಗ ಬೀಳುತ್ತದೆ” ಎಂದರು ಮರಾಠೆಯವರು.
“ಜೋಶಿಯವರು ಇವತ್ತು ಕೆಲಸಕ್ಕೆ ಸೇರಿ ಬರೋಬ್ಬರಿ ೨೪ ವರ್ಷ ಆಯ್ತು, ಆ ನೆನಪಲ್ಲಿ ಅವರಿಗೆ ಹಸ್ತಾಂತರ ಮಾಡಿ” ಎಂದೆ.

ಜೋಶಿಯವರು ಸಂಕೋಚದಿಂದಲೇ ಆ ಮರದ ಹಾಳೆಯನ್ನು ಸ್ವೀಕರಿಸಿದರು. ಮರಾಠೆಯವರ ಪ್ರೀತಿಯ ನೆನಪುಗಳಿರುವ ಆ ವಸ್ತು, ನಿಜವಾದ ಅಭಿರುಚಿಯಿರುವ ಜೋಶಿಯವರ ಕೈಗೆ ಹಸ್ತಾಂತರವಾಗಿದ್ದು ಅತ್ಯಂತ ರಮ್ಯ ಗಳಿಗೆ ಅನ್ನಿಸಿತು ನಂಗೆ. ಅಲ್ಲಿಂದ ಹೊರ ಬಂದು ಮನೆಯ ಮಧ್ಯದ ಅಂಗಳದಲ್ಲಿ ನಿಂತೆ. ಕೆಲವೇ ಹೊತ್ತಲ್ಲಿ ಮನೆಯ ಮೇಲೆ ಪ್ರೀತಿಯಾಗಿತ್ತು. ಯಾಕೋ ಮನೆಯನ್ನು ಬಿಟ್ಟು ಹೋಗಲು ಮನಸ್ಸೇ ಆಗಲಿಲ್ಲ. ನಂಗೇ ಹೀಗಾಗಿರಬೇಕಾದರೆ, ಎಷ್ಟೋ ಕನಸುಗಳನ್ನು, ಕಷ್ಟಗಳನ್ನು, ಸುಖಗಳನ್ನು ಈ ಮನೆಯಲ್ಲೇ ಕಳೆದ ಮರಾಠೆಯವರಿಗೆ ಹೇಗಾಗಬೇಡ? ಎಂದು ಯೋಚಿಸಿದೆ. ಹೊರಗಿನಿಂದ ಖುಷಿಯಲ್ಲೇ ಇದ್ದ ಮರಾಠೆಯವರ ಮನಸ್ಸಿನ ಆಳಕ್ಕೆ ಹೋಗಲು ಪ್ರಯತ್ನಿಸಿದೆ. ಅಲ್ಲಿ ಮನೆಯನ್ನು ಬಿಡಬೇಕಾದ ವಿದಾಯದ ನೋವಿದ್ದರೂ ಅದು ಧೃಡತೆಯ ಎದುರು ಮುಚ್ಚಿಹೋದಂತಿತ್ತು. ಪೂರ್ಣ ಚಂದಿರನ ಬೆಳಕು ಮನೆಯ ಜಗುಲಿಗೆ ಬಿದ್ದು ಮನೆಯೆಲ್ಲಾ ಹೊಳೆಯುತ್ತಿತ್ತು. ಅಲ್ಲೇ ಜಗಲೀಲಿ ಆಟವಾಡುತ್ತಿದ್ದ ಮರಾಠೆಯವರ ಮೊಮ್ಮಗನೂ ಚಂದ್ರನಂತೆ ಹೊಳೆಯುತ್ತಿದ್ದ.

ಈ ಮನೆಯಲ್ಲಿ ಮಾತಾಡದೇ ಹಾಗೇ ನಿಂತಿರೋಣ ಅನ್ನಿಸಿ ಜಗಲಿಯಲ್ಲಿ ಸುಮ್ಮನೇ ನಿಂತೆ, ಹೊರಗೆ ತಣ್ಣಗೇ ಇರುಳು, ಎಲ್ಲೋ ಕೇಳುವ ಗಾಳಿಯ ಸದ್ದು, ಸ್ನಾನದ ಕೋಣೆಯಲ್ಲಿ ದಬ್ಬೆ ನೀರು ಬೀಳುವ ಸದ್ದು, ಕಾಡಿನ ವಿಚಿತ್ರ ಹುಳಗಳು ತಮ್ಮಷ್ಟಕ್ಕೆ ಪಂಚಾತಿಕೆ ಹೊಡೆಯುವ ಸದ್ದು, ನವಿಲೊಂದು ಕೀ ಕೀ ಎಂದು ಕೂಗಿ ದೊಡ್ಡ ರೆಕ್ಕೆ ಬಡಿದು ಹಾರಿದ ಸದ್ದು, ಮರವೊಂದರ ತರಗೆಲೆಗಳು ಹಾರಿ ಹಂಚಿನ ಮೇಲೆ ಉದುರಿದ ಸದ್ದು, ಆ ಪುಟ್ಟ ಮಗು ನಿಟ್ಟುಸಿರಿಟ್ಟ ಸದ್ದು, ಅಡಿಕೆ ಮಡಲೊಂದು ಬಿದ್ದ ಸದ್ದು, ಅಬ್ಬಾ ಸುಮ್ಮನಿದ್ದರೆ ಅದೆಷ್ಟು ಸದ್ದುಗಳನ್ನು ಕೇಳಬಹುದು. ಮೇಲೆ ಚುಕ್ಕಿಗಳು, ಈ ಮನೆಯನ್ನೇ ನೋಡಿ ಮರಾಠೆಯವರನ್ನು ಈ ಮನೆಯಿಂದ ಬೀಳ್ಕೊಡಲು ತಯಾರಾದವರಂತೆ ಹೊಳೆಯುತ್ತಿದ್ದವು.

“ಮೊದಲ ಮಿಂಚು ಹೊಳೆದ ಮನೆ.. ಮೊದಲ ಗುಡುಗು ಕೇಳಿದ ಮನೆ.. ಮೊದಲ ಮಳೆಯು ಕರೆದು ಕರೆದು ಹೆಂಚ ಮೇಲೆ ನೀರ ಸುರಿದು.. ಬೆರಗನ್ನಿತ್ತ ನನ್ನ ಮನೆ.. ಮನೆ ಮುದ್ದು ಮನೆ..” ಕುವೆಂಪು ಅವರ ಮುದ್ದು ಮನೆ ಕವನವನ್ನು ನನ್ನೊಳಗೆ ಹಾಡಿಕೊಂಡೆ. ಕಣ್ಣಲ್ಲಿ ಗೊತ್ತಾಗದೇ ರೋಮಾಂಚನದ ನೀರು ಹನಿಯಿತು. ಮರಾಠೆಯವರಲ್ಲಿ ಈ ಕಾಡಿನ ಮನೆ ಬಿಡುವಾಗ ಅದೆಷ್ಟು ಹನಿ ಜಿನುಗಬಹುದು ಅಂದಾಜಾಗಲಿಲ್ಲ. ಅಷ್ಟೊತ್ತಿಗೆ ಮರಾಠೆಯವರ ಹೆಂಡತಿ ತಿಂಡಿಗೆ ಕರೆದರು, ಅಲ್ಲೇ ಜಗುಲಿ ನೆಲದ ಮೇಲೆ ತಟ್ಟೆ ತುಂಬಾ ಹಲಸಿನ ಕಾಯಿ ಹಪ್ಪಳ, ಪೋಡಿ, ಮಾವಿನ, ಹಲಸಿನ ಮಾಂಬಳ, ಚಕ್ಕುಲಿ, ಇವೆಲ್ಲದ್ದರ ಓರ್ವ ಗಂಡನಂತಿದ್ದ ಒಂದು ಲೋಟ ಚಹಾ, ಆಹಾ ಎಂತಹ ರುಚಿ.

ಅಲ್ಲಿ ಮನೆಯನ್ನು ಬಿಡಬೇಕಾದ ವಿದಾಯದ ನೋವಿದ್ದರೂ ಅದು ಧೃಡತೆಯ ಎದುರು ಮುಚ್ಚಿಹೋದಂತಿತ್ತು. ಪೂರ್ಣ ಚಂದಿರನ ಬೆಳಕು ಮನೆಯ ಜಗುಲಿಗೆ ಬಿದ್ದು ಮನೆಯೆಲ್ಲಾ ಹೊಳೆಯುತ್ತಿತ್ತು. ಅಲ್ಲೇ ಜಗಲೀಲಿ ಆಟವಾಡುತ್ತಿದ್ದ ಮರಾಠೆಯವರ ಮೊಮ್ಮಗನೂ ಚಂದ್ರನಂತೆ ಹೊಳೆಯುತ್ತಿದ್ದ.

ಮರಾಠೆಯವರು, ಅವರ ಹೆಂಡತಿ, ಮಗಳು ಎಲ್ಲರೂ ಅಲ್ಲೇ ಕೂತು ತಿಂಡಿ ತಿನ್ನುತ್ತಾ ಚಹಾ ಕುಡಿಯುತ್ತ ಮಧ್ಯೆ ಮಧ್ಯೆ ಅವರ ಮನೆಯನ್ನು ಅವರೇ ನೋಡುತ್ತ ಮಾತನಾಡುತ್ತಿದ್ದರು. “ನಾವು ಯಾವ ತಿಂಡಿಯನ್ನೂ ಪೇಟೆಯಿಂದ ತರುವುದಿಲ್ಲ, ಹೆಂಡತಿಯೇ ಪೇಟೆ, ಎಲ್ಲವನ್ನೂ ಅವಳೇ ಮಾಡ್ತಾಳೆ” ಹೆಮ್ಮೆಯಿಂದ ನುಡಿದರು ಮರಾಠೆಯವರು. ಆ ಹಳೆ ಮನೆಯ ಜಗಲಿಯಲ್ಲಿ ದಿವ್ಯ ಬೆಳಕಿನಂತೆ ಕೂತಿದ್ದ ಅವರ ಹೆಂಡತಿ, ಮಗಳು ಜೋರಾಗಿ ನಕ್ಕರು. ಅವರು ಮಾಡಿಕೊಟ್ಟ ಆ ಹಪ್ಪಳ, ಮಾಂಬಳದಲ್ಲಿ ಎಷ್ಟೊಂದು ರುಚಿಯಿತ್ತೆಂದರೆ, ಅಮ್ಮ ಪ್ರೀತಿಯಿಂದ ಮಾಡಿಕೊಟ್ಟ ತಿಂಡಿಯ ಹಾಗೆ ಅದು ಬಾಯಲ್ಲಿ ಇಳಿದದ್ದೇ ಗೊತ್ತಾಗಲಿಲ್ಲ. “ಈ ಮನೆಯಲ್ಲಿ ನಾವು ಕೊನೆಯ ದಿನ ಕಳೆಯುವುದು ಅಂತ ಗೊತ್ತಿದ್ದರೂ ಮರಾಠೆಯವರ ಕುಟುಂಬ ನಿರಾಳವಾಗಿಯೇ ಇತ್ತು. ಮತ್ತೊಮ್ಮೆ ಆ ಇರುಳಲ್ಲಿ ತಣ್ಣಗೇ ಕೂತಿದ್ದ ಮನೆಯನ್ನು ನಿಟ್ಟಿಸಿದೆ. “ಇಷ್ಟು ಚೆಂದವಾಗಿದ್ದ ಈ ಹಳೆಮನೆಯನ್ನು ಬಿಡುವುದಕ್ಕಾದರೂ ಇವರಿಗೆ ಮನಸ್ಸು ಹೇಗೆ ಬಂತು?” ಅಂತ ಯೋಚಿಸುತ್ತಿದ್ದಾಗ ಬೆಳ್ಳಕ್ಕಿಯ ನೆರಳೊಂದು ತಾರೆಗಳ ಹಿನ್ನೆಲೆಯಲ್ಲಿ ನಿಧಾನವಾಗಿ ಮನೆ ಮಾಡಿನ ಮೇಲಿಂದ ತೇಲಿಹೋಯ್ತು. ದಬ್ಬೆ ನೀರಿನ ಜುಳುಕು ಕೇಳಿತು, ಮತ್ತೆ ಕಾಡಲ್ಲಿ ಕಾಡುಕೋಣವೋ, ಕಾಡುಬೆಕ್ಕೋ ಪರ ಪರ ಮಾಡಿದ ಸದ್ದು, ಅಂಗಳದಲ್ಲಿ ಸಣ್ಣಗಿನ ಹೆಜ್ಜೆಯೊಂದು ನಡೆದುಕೊಂಡು ಬರುತ್ತಿರುವ ಹಾಗೆ ಸದ್ದೆಲ್ಲಾ ಕೇಳಿ ಕೊನೆಗೆ ಎಲ್ಲವೂ ಒಮ್ಮೆ ಮೌನವಾಯಿತು.

“ಇಲ್ಲಿ ಕಡೆಯ ಮನೆ ನಮ್ಮದು, ಈ ಮನೆಯಲ್ಲಿದ್ದರೆ ಸಾವಿರಾರು ಸದ್ದುಗಳು ಕೇಳುತ್ತಲೇ ಇರುತ್ತದೆ, ಕೆಲವೊಂದು ಸದ್ದು ವಿಚಿತ್ರವಾಗಿರುತ್ತದೆ. ರಾತ್ರಿ ಎಲ್ಲಾ ಸದ್ದುಗಳು ಅಡಗಿರುವಾಗ ಯಾರೋ ಬಾಗಿಲು ಬಡಿದ ಸದ್ದು ಕೇಳಿದರೆ ಮೈ ಒಮ್ಮೆ ಕಂಪಿಸುತ್ತದೆ. ಕೆಲವೊಂದು ಸದ್ದುಗಳನ್ನು ಧೈರ್ಯದಿಂದ ಎದುರಿಸಿದ್ದೇನೆ, ಆದರೆ ಕೆಲವರಿಗೆ ರಾತ್ರಿ ದಬ್ಬೆ ನೀರಿನ ಸದ್ದು ಒಮ್ಮೆಲೇ ನಿಂತಂತೆ ಅನುಭವ ಆಗಿದೆಯಂತೆ, ದಬ್ಬೆಯಿಂದ ಬಚ್ಚಲಿಗೆ ಸುರಿವ ನೀರು ಕೆಂಪು ಕೆಂಪಾಗಿ ಅವರು ನಡುಗಿದ್ದೂ ಉಂಟು, ತೋಟದಲ್ಲಿ ಹಂದಿ ರಾಡಿ ಮಾಡಿದರೆ, ದಬ್ಬೆಗೆ ಇಳಿಯುವ ನೀರಿಗೆ ಅಡ್ಡ ಬಂದರೆ ಹೀಗೆಲ್ಲಾ ಆಗುತ್ತದಷ್ಟೇ,. ಅದೇನು ಭೂತದ ಉಪದ್ರವ ಅಲ್ಲ” ಅಂದರು ಮರಾಠೆಯವರು. ಇಷ್ಟು ವರ್ಷ ಕಾಡಿನ ವಿಚಿತ್ರ ಸದ್ದುಗಳಲ್ಲಿ ರಾತ್ರಿ ಕಳೆದ ಇವರಿಗೆ ಪೇಟೆಗೆ ಹೋದ ಮೇಲೆ “ಏನನ್ನೋ ಕಳೆದುಕೊಂಡೆವಲ್ವಾ, ಅನ್ನಿಸಲಿಕ್ಕಿಲ್ವಾ” ಅನ್ನಿಸಿತು. “ಇವೆಲ್ಲವೂ ನಂಗಿಷ್ಟ, ಆದ್ರೆ ಏನು ಮಾಡೋದು ಅನಿವಾರ್ಯತೆ” ಎಂದರು ಮರಾಠೆಯವರು.

(ಚಿತ್ರಗಳು: ಪ್ರಸಾದ್ ಶೆಣೈ)

“ನಾವು ಜೋರಾಗಿ ಮಳೆ ಸುರಿವಾಗ ಇಲ್ಲಿಗೇ ಬರಬೇಕಿತ್ತು, ಸುಮ್ಮನೇ ಇಲ್ಲಿ ಕೂತು ಮಳೆ ನೋಡುವುದು ಎಷ್ಟು ಚೆಂದ” ಅಷ್ಟೊತ್ತು ತಣ್ಣಗೇ ಕೂತಿದ್ದ ಜೋಶಿಯವರು ಮೌನದಲ್ಲೇ ಪಿಸುನುಡಿದರು. ಯಾಕೋ ಮನೆ ಬಗ್ಗೆ ಎಷ್ಟು ಮಾತಾಡಿದರೂ ಮರಾಠೆಯವರಿಗೆ ಬೇಸರ ಬರುವಂತೆ ಕಾಣಲಿಲ್ಲ, ನೀವು ಎಷ್ಟು ಮಾತಾಡಿದರೂ ಖುಷಿಯೇ, ಹೇಗಿದ್ದರೂ ನಾವಿವತ್ತು ಈ ಮನೆಯಲ್ಲಿ ಕೊನೆಯ ರಾತ್ರಿ ಕಳೆಯುತ್ತಿದ್ದೇವೆ, ನೀವು ಮಾತಾಡಿದ್ದೂ ನೆನಪಿರುತ್ತದೆ” ಎಂದರು. ಅರಬ್ಬಿಯ ನಾಡಿಂದ ಮನೆಗೆ ಬಂದ ಅವರ ಮೊಮ್ಮಗ ಅರ್ಧ ಅರಬ್ಬಿಯ ಕಡಲಂತೆಯೂ, ಅರ್ಧ ಮಾಳದ ಕಾಡಿನ ಹಸಿರಂತೆಯೂ ಕಂಡ. ಆದರೂ ಇಂತಹ ಹಳೆಮನೆಯ ಸೊಗಸನ್ನು, ಇಲ್ಲಷ್ಟೇ ಆಡುವ ಆಟದ ಸೊಗಸು ತುಸು ದೊಡ್ಡವನಾಗುವ ಕಾಲಕ್ಕೆ ಅವನಿಗೆ ಸಿಗುವುದಿಲ್ಲವಲ್ಲ ಅನ್ನಿಸಿತು. ಆ ಇರುಳಲ್ಲಿ ನಮ್ಮ ಮನೆಯಂತೆಯೇ ಆಪ್ತವಾಗಿದ್ದ ಆ ಮುದ್ದು ಮನೆ, ನಮ್ಮದೇ ಮನೆಯವರಂತೆ ಕಾಡಿದ ಮರಾಠೆಯವರ ಮನೆ ಮಂದಿಯನ್ನು ಬಿಟ್ಟು ಹೋಗಲು ನಿಜವಾಗಲೂ ಯಾಕೋ ಮನಸ್ಸಾಗಲಿಲ್ಲ. ಆದರೆ ಆ ಮನೆಯನ್ನು ಬಿಟ್ಟು ಅವರೇ ನಾಳೆ ಹೋಗುತ್ತಿದ್ದಾರೆಂದ ಮೇಲೆ ನಾವಲ್ಲಿ ಏನು ಮಾಡುವುದು? ರಾತ್ರಿ ಕವಿಯುತ್ತಿದ್ದುದುರಿಂದ ಬೇಗ ಮರಳಿ ಹೋಗಲೇಬೇಕಿತ್ತು. ಮೌನದಲ್ಲೇ ಅಂಗಳಕ್ಕೆ ಬಂದೆವು. ನಮ್ಮನ್ನು ಬೀಳ್ಕೊಡಲು ಅವರೂ ಅಂಗಳಕ್ಕೆ ಬಂದರು.


ಅಷ್ಟೊತ್ತಿಗೆ ಪುಟ್ಟ ಬಟ್ಟಲು ಹಿಡಿದುಕೊಂಡು ರಾಮನಂತಹ ಪುಟ್ಟನ ಜೊತೆ ಆ ಮನೆ ಮಗಳೂ ಅಂಗಳಕ್ಕೆ ಬಂದಳು. “ಮಗುವಿಗೆ ಚಂದ್ರನ ತೋರಿಸಿದರೆ ಮಗು ಬೇಗ ಊಟ ಮಾಡುತ್ತದಲ್ವಾ” ಅಂದೆ, ಆಕೆ ನಕ್ಕು “ನೋಡು ಚಂದಮಾಮ” ಎಂದು ಆಕಾಶ ತೋರಿಸಿದಳು. ಪುಟ್ಟನ ಕಂಗಳಲ್ಲಿ ಈಗ ಸ್ನಿಗ್ಧ ಹೊಳಪು ಮೂಡಿ ಅನ್ನದ ಅಗುಳು ಅವನ ಬಾಯಿಗಿಳಿಯಿತು. ಮರಾಠೆಯವರ ಮನೆಯವರಿಗೆಲ್ಲಾ ಕೃತಜ್ಞತೆ ಹೇಳಿ ಮನೆದಾರಿ ಹಿಡಿದೆವು. ಮನಸ್ಸಿನೊಳಗೆ ಈ ಮನೆಗೆ ಮತ್ತೆ ಬಂದರೆ ಮರಾಠೆಯವರ ಪ್ರೀತಿ ಸಿಗುವುದಿಲ್ಲವಲ್ಲ ಎನ್ನುವ ವಿದಾಯದ ನೋವು ತುಂಬಿತ್ತು. ರಾತ್ರಿಯ ನೀರವದಲ್ಲಿ ಸ್ವರ್ಣೆಯ ಹಾಡು ಕೇಳುತ್ತ ಹೊರಟಾಗ ದಾರಿಯಲ್ಲಿ ಬಿದ್ದ ಬೆಳುದಿಂಗಳೇ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಂತೆ ಅನ್ನಿಸುತ್ತಿತ್ತು. ಮೇಲೆ ನೋಡಿದರೆ, ಆಹಾ, ಬೆಟ್ಟವೆಲ್ಲಾ ಬೆಳದಿಂಗಳಲ್ಲೇ ಅದ್ದಿ ಹೋಗಿ ನಿದ್ದೆ ಇಲ್ಲದೇ ಜಾಗರಣೆ ಮಾಡಿದಂತಿತ್ತು.

“ನೋಡಿ ಆ ನಕ್ಷತ್ರವೊಂದು ಎಷ್ಟು ಬಣ್ಣಗಳಿಂದ ಹೊಳೆಯುತ್ತಿದೆ, ಒಮ್ಮೆ ಕೆಂಪಂತೆ, ಒಮ್ಮೆ ನೀಲಿಯಂತೆ ಮತ್ತೊಮ್ಮೆ ಬಿಳಿಯಂತೆ” ಎನ್ನುತ್ತಾ ಜೋಶಿಯವರು ಬೈಕ್ ನಿಲ್ಲಿಸಿ ಬೆಟ್ಟದಂಚಿನ ಆಕಾಶ ತೋರಿಸಿದರು. ಕಾನಲ್ಲಿ ಬಾನು, ಬಾನಲ್ಲಿ ಕಾನು ಒಂದಾಗಿತ್ತು.