ವಿಶೇಷ ಸಾಮರ್ಥ್ಯರಿಗೆ ಕಷ್ಟಗಳಿಗಿಂತ ಸವಾಲುಗಳೇ ಹೆಚ್ಚು. ಹೆಚ್ಚಿನಪಾಲು ಸಮಾಜ ಅವರನ್ನು, ಅವರ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸೋತಿದೆ ಅನಿಸುತ್ತದೆ. ನನ್ನ ಪಕ್ಕ ಸ್ಕೂಟರಿನಲ್ಲಿ ಸಾಗಿದ್ದ ಅವರಿಬ್ಬರೂ ರಸ್ತೆಯ ಏರುತಗ್ಗುಗಳ ಪ್ರಕಾರ ವೇಗವನ್ನು ನಿಯಂತ್ರಿಸುತ್ತಿದ್ದರು. ಅವನ, ಅವಳ ಅಂದಿನ ದಿನದಲ್ಲಿ ಅದೇನೆಲ್ಲಾ ಏರುತಗ್ಗುಗಳಿದ್ದವೋ ಯಾರು ಬಲ್ಲರು? ಇಬ್ಬರಿಗೂ ಆ ದಿನ ಎರಡು ಹೊತ್ತಿನ ಪೂರ್ತಿ ಊಟ ಸಿಕ್ಕಿತ್ತೇ? ಆರೋಗ್ಯ ಹೇಗಿತ್ತು? ಇದನ್ನು ಕೇಳಲು ಮನೆಮಂದಿ, ಸ್ನೇಹಿತರು ಇದ್ದಾರೆಯೇ? ಅವನ ಮ್ಲಾನಮುಖದಲ್ಲಿ ಅದೇನೋ ನೋವಿತ್ತು. ಅವಳ ಏರುದನಿಯ ಸಿಡುಕಿನಲ್ಲಿ ಆತಂಕವಿತ್ತು.
ಡಾ.ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಇಪ್ಪತೈದು ನಿಮಿಷಗಳ ನಡಿಗೆಯಲ್ಲಿ ಆಗಲೇ ಮೊದಲ ಹತ್ತು ನಿಮಿಷಗಳು ಕಳೆದಿತ್ತು. ಸಂದುಗೊಂದುಗಳನ್ನು ದಾಟಿ ನಿರ್ವಾಹವಿಲ್ಲದೆ ನಗರದ ಒಂದು ಮುಖ್ಯರಸ್ತೆಯನ್ನು ತಲುಪಿದ್ದೆ. ಏರಿಳಿತಗಳು ತುಂಬಿದ್ದ, ವಾಹನ ಸಂದಣಿಯಿದ್ದ ಈ ಉದ್ದಾನುದ್ದದ ರಸ್ತೆಯ ಮೈಯನ್ನು ನಡುನಡುವೆ ಸೀಳುತ್ತಿದ್ದದ್ದು ಗೆರೆ ಎಳೆದು ಬಿಡಿಸಿದ್ದ ಅಡ್ಡ ರಸ್ತೆಗಳು. ಹಚ್ಚೆ ಹಾಕಿಸಿಕೊಂಡಂತೆ… ನಾಲ್ಕು ರಸ್ತೆಗಳು ಸಂಧಿಸುವ ಈ ಭಾಗಗಳಲ್ಲಿ ಸದಾ ಜನಸಂದಣಿಯಿದ್ದೇ ಇರುತ್ತದೆ. ಪಾದಚಾರಿಗಳು ಅವನ್ನು ಸುಗಮವಾಗಿ ದಾಟಿ ಮುಂದುವರೆಯಲು ಎಲ್ಲ ಕಡೆಯೂ ಟ್ರಾಫಿಕ್ ಸಿಗ್ನಲ್ ಇತ್ತು. ಅಕಸ್ಮಾತ್ ನಾವು ತಲುಪುವ ಹೊತ್ತಿಗೆ ಸರಿಯಾಗಿ ಸಿಗ್ನಲ್ ಪಾಯಿಂಟ್ ನಲ್ಲಿ ಕೆಂಪು ದೀಪ ಬಂದುಬಿಟ್ಟರೆ ತಮ್ಮ ನಡಿಗೆಗೆ ಬ್ರೇಕ್ ಹಾಕಿದ ಸಿಗ್ನಲ್ ಮತ್ತು ನಗರಪಾಲಿಕೆಯ ಬಗ್ಗೆ ಸಿಡಿಮಿಡಿಗೊಂಡ ಜನರನ್ನು ನೋಡುವ ಅವಕಾಶ ಸಿಗುತ್ತದೆ.

ನಗರವಾಸಿಗಳಲ್ಲವೇ, ಎಲ್ಲರಿಗೂ ಓಡುವ, ಓಡಲೇಬೇಕಾದ ಅನಿವಾರ್ಯತೆ. ಮಿಕ್ಕ ಮೂರು ಕಡೆ ಹಸಿರು ದೀಪ ಬಂದು, ಜನರು ರಸ್ತೆ ದಾಟಿ ಇನ್ನು ನಾವು ನಿಂತಿರುವ ಸಿಗ್ನಲ್ ದೀಪ ಹಸಿರಾಗುವಷ್ಟರ ಆ ನಿಮಿಷಗಳು ಕೆಲವರಿಗೆ ಅಬ್ಬಾ ಎಂದು ಉಸಿರೆಳೆದುಕೊಳ್ಳುವ ಸದಾವಕಾಶವೂ ಆಗಬಹುದು. ಪುಟ್ಟ ಮಗುವಿದ್ದ ಪ್ರಾಮ್ ತಳ್ಳುತ್ತಾ ಬಂದು ಅಲ್ಲಿಗೆ ತಲುಪುವ ಹೆಂಗಸರಿಗೆ ಅದು ವರದಾನವೇನೋ. ಆದರೆ ವರವಾಗುವುದಕ್ಕೆ ಬಿಡದಂಥ ವಾತಾವರಣವದು. ವಾಹನಗಳಿಂದ ಬರುವ ಇಂಧನಹೊಗೆ, ವಾಸನೆ, ರಸ್ತೆಯ ಧೂಳು ಮಕ್ಕಳುಮರಿ, ದೊಡ್ಡವರು ಎಲ್ಲರಿಗೂ ಕೆಟ್ಟದ್ದೇ.

ಉದ್ದನೆ ರಸ್ತೆಯನ್ನು ಸೀಳಿದ್ದ ಮೊದಲ ಟ್ರಾಫಿಕ್ ಲೈಟ್ಸ್ ಸ್ಥಳವನ್ನು ತಲುಪಿ ಹಸಿರುದೀಪ ಬರಲು, ದೀಪದೊಡನೆ ಫಳಕ್ಕನೆ ಕಾಣಿಸಿಕೊಂಡು ‘ನಡೆ ಮುಂದೆ’ ಎನ್ನುವ ಭಂಗಿಯಲ್ಲಿ ನಿಂತ ಹಸಿರು ನಡಿಗೆ ಮನುಷ್ಯನನ್ನು ಕಾಯುತ್ತ ನಿಂತೆ. ಪಕ್ಕದಲ್ಲಿ ಒಂದು ಮೊಬೈಲ್ ಸ್ಕೂಟರ್ ಬಂದು ನಿಂತಿತು. ಸ್ಕೂಟರ್ ಚಲಾಯಿಸುತ್ತಿದ್ದ ಗಂಡಸಿನ ವಯಸ್ಸು ಐವತ್ತರೊಳಗೆ ಇರಬಹುದೇನೋ. ಯಾಕೋ ಏನೋ ಅವನ ಮುಖ ಗಂಟಿಕ್ಕಿತ್ತು. ಕ್ಷಣದಲ್ಲೇ ಅವನ ಹಿಂದೆ ಮತ್ತೊಂದು ಮೊಬೈಲ್ ಸ್ಕೂಟರ್ ಬಂದು ನಿಂತಿತು. ಅದರಲ್ಲಿದ್ದದ್ದು ಹೆಂಗಸು. ಸಿಡುಕುಮುಖದಿಂದ ಮಾತು ಸಿಡಿಯಿತು, ‘ಯೂ ಅಪ್ಸೆಟ್ ಮೀ ಫಸ್ಟ್’ – ಇದನ್ನ ಶುರುಮಾಡಿದ್ದು ನೀನೇ- ಅನ್ನೋ ಧಾಟಿಯಿತ್ತು. ಯಾಕೋ ಸರಿಯಿಲ್ಲ ಅನ್ನಿಸಿ ಇನ್ನೂ ಕೆಂಪೇ ಇದ್ದ ಸಿಗ್ನಲ್ ದೀಪದ ಕಡೆ ಮುಖ ಮಾಡಿದೆ.

ಹೆಂಗಸು ‘ಮಾತನಾಡುತ್ತಿಯೋ ಇಲ್ಲವೋ’ ಎಂದು ಅವನನ್ನು ಗದರಿದಳು. ಕಿವಿಯಲ್ಲಿ ಅಗೋಚರ ಇಯರ್ ಫೋನ್ ಇಲ್ಲದ, ಮುಖವನ್ನು ಫೋನಿನಲ್ಲಿ ಹುದುಗಿಸದೆ ಇದ್ದ ಅಪರೂಪದ ಕೆಲವರು ಅವಳತ್ತ ನೋಡಿದರು. ಅವರ ನೋಟ ಯಾಂತ್ರಿಕವಾಗಿತ್ತು. ನಾನು ಅವನತ್ತ ನೋಡಿದೆ. ಆ ಕ್ಷಣದಲ್ಲೇ ನಮ್ಮೆದುರಿದ್ದ ರಸ್ತೆಯ ಬಲಗಡೆಗೆ ಕಾರೊಂದು ಬಂದು ನಿಂತಿತು. ಬಹುಶಃ ಅವರು ಹಳದಿ ‘ನಿಧಾನ, ನಿಲ್ಲು’ ದೀಪವನ್ನು ನೋಡಿರಬೇಕು. ಅಂದರೆ ಇನ್ನೇನು ನಮಗೆ ‘ನಡೆ ಮುಂದೆ’ ಹಸಿರು ಮನುಷ್ಯ ಕಾಣಿಸಿಕೊಳ್ಳುವ ಕ್ಷಣವದು. ಕಾರಿನ ತೆರೆದ ಕಿಟಕಿಯಿಂದ ಮಗುವೊಂದು ‘ಅಮ್ಮ, ನೋಡು ಆ ಜನರ ಬಳಿ ಸ್ಪೆಷಲ್ ಸ್ಕೂಟರಿದೆ’, ಅಂತ ಬಲೇ ಉತ್ಸಾಹದಿಂದ ಕಿರುಚಿಕೊಂಡು ಹೇಳಿತು. ಅದೇ ಕ್ಷಣದಲ್ಲಿ ಕ್ಷಮೆ ಕೇಳಿದ ಅವನು ‘ನಿನ್ನನ್ನ ನೋಯಿಸುವ ಉದ್ದೇಶ ನನಗಿರಲಿಲ್ಲ’, ಎಂದ. ಹಸಿರುದೀಪ ಬಂದೇಬಿಟ್ಟಿತು.

ಅವರಿಬ್ಬರೂ ನನ್ನಂತೆಯೇ ಉದ್ದಾನುದ್ದದ ರಸ್ತೆಗುಂಟ ಹೊರಟವರಿರಬೇಕು. ಅವನು ಮುಂದೆ ಹೊರಟ. ಪ್ರಪಂಚದ ಬೇಸರವೆಲ್ಲಾ ಅವನ ಮುಖದಲ್ಲಿತ್ತು. ಸಿಡುಕೇಶಿ ಅವಳು ‘ಅಲ್ಲಿ ಭೇಟಿಯಾಗಲು ಮುಂಚೇನೇ ಅಂದುಕೊಂಡಿದ್ದೆವಲ್ಲಾ, ನೀನ್ಯಾಕೆ ಮರೆತಿದ್ದು?’ ಅಂದಳು. ನಾವು ಮೂವರು ನಡೆಯುತ್ತಲೇ ಸಾಗಿದ್ದೆವು. ಅವನು ‘ಮರೆತೆ ಹೌದು, ನಾನೂ ಕೂಡ ಮನುಷ್ಯನಲ್ಲವೇ,’ ಅಂದ. ಇನ್ನೂ ಸಿಟ್ಟಿನಲ್ಲೇ ಇದ್ದ ಅವಳು ‘ನಾನು ಮನೆಯಿಂದ ಹೊರಡಲು, ಅಲ್ಲಿಗೆ ತಲುಪಲು ನನಗೆ ಅದೆಷ್ಟು ತಯಾರಿ ಬೇಕೆಂದು ನಿನಗೆ ಗೊತ್ತಿದೆಯಲ್ಲವೇ,’ ಅಂದಳು. ಅವನೊಮ್ಮೆ ನನ್ನ ಕಡೆ ತಿರುಗಿ ಸಾರಿ ಅಂದ. ಅವಳು ಕೂಡಲೇ ‘ಫ- ಯೂ’ ಅಂದಳು. ನನ್ನ ಮೆದುಳಲ್ಲಿ ಹಿಂದಿನ ಕೆಲ ಅನುಭವಗಳ ಬುಗ್ಗೆ ಚಿಮ್ಮಿತು.

ನಾವು ಮೆಲ್ಬೋರ್ನ್ ನಗರದಲ್ಲಿದ್ದಾಗ ಎದುರು ಮನೆಯಲ್ಲಿದ್ದಾತ ಮೊಬೈಲ್ ಸ್ಕೂಟರ್ ಬಳಸುತ್ತಿದ್ದ. ಮನೆಗೆ ಹೋದ ಹೊಸದರಲ್ಲೇ ಒಮ್ಮೆ ಆತನ ‘ಹೆಲ್ಪ್ ಹೆಲ್ಪ್ ಮೀ’ ಅನ್ನೋ ಕ್ಷೀಣ ದನಿ ಮನೆಮುಂದೆ ನಿಂತಿದ್ದ ನಮ್ಮನ್ನು ತಲುಪಿತ್ತು. ಆತ ಕೆಳಗೆ ಬಿದ್ದುಬಿಟ್ಟಿದ್ದರು. ಬಹುಶಃ ಸ್ಕೂಟರನ್ನು ಹತ್ತಿ ಕುಳಿತುಕೊಳ್ಳುವ ಲೆಕ್ಕಾಚಾರದಲ್ಲಿ ತಪ್ಪಾಗಿತ್ತು. ಅವರನ್ನು ಜೀಬಿ ಎತ್ತಿ ನಿಲ್ಲಿಸಿದಾಗ ನಮಗೆ ಅರಿವಾಗಿದ್ದು ಆತನಿಗೆ ನಿಲ್ಲಲೂ ಕೂಡ ಆಗುತ್ತಿರಲಿಲ್ಲ. ಸ್ಕೂಟರಿನಲ್ಲೇ ಕೂತು ಅದನ್ನು ಚಲಾಯಿಸುತ್ತಾ ಗ್ಯಾರೇಜಿನಿಂದ ಹೊರಗೆ ಬಂದಿದ್ದರು. ಏನೋ ಕಾರಣಕ್ಕೆ ಸ್ವಲ್ಪ ಮುಂದಕ್ಕೆ ಬಗ್ಗಿದಾಗ ಸಮತೋಲನ ತಪ್ಪಿ ಕೆಳಬಿದ್ದಿದ್ದರು. ಹೆಂಡತಿಯನ್ನು ಕಳೆದುಕೊಂಡ ಅವರು ಒಬ್ಬಂಟಿಯಾಗಿ ಬದುಕುತ್ತಿದ್ದರು. ಅವರ ಮಗ ವಾರಕ್ಕೊಮ್ಮೆ ಬಂದು ಯೋಗಕ್ಷೇಮವನ್ನು ವಿಚಾರಿಸುತ್ತಿದ್ದ. ವಾರಕ್ಕೊಮ್ಮೆ ಒಬ್ಬ ನರ್ಸ್, ಫಿಸಿಯೋಥೆರಪಿಸ್ಟ್ ಬರುತ್ತಿದ್ದರು. ಆಗಾಗ ವಿಶೇಷ ಸಾಮರ್ಥ್ಯರಿಗಾಗೇ ನಿರ್ಮಿಸಿದ್ದ ದೊಡ್ಡದೊಂದು ವಾಹನವೊಂದು ಬಂದು ಅವರನ್ನು ಏರಿಸಿಕೊಂಡು ಪಿಕ್ನಿಕ್, ಗುಂಪುಚಟುವಟಿಕೆಗಳು ಮುಂತಾದವಕ್ಕೆ ಅವರು ಹೋಗುತ್ತಿದ್ದರು. ಒಬ್ಬಂಟಿಯಾಗಿದ್ದರೂ ಸಹ ಸಮುದಾಯ ಮತ್ತು ಸರಕಾರದ ಸೇವೆಗಳು, ಆಸರೆ, ಬೆಂಬಲ ಅವರಿಗಿತ್ತು.

ಸಿಡುಕೇಶಿ ಅವಳು ‘ಅಲ್ಲಿ ಭೇಟಿಯಾಗಲು ಮುಂಚೇನೇ ಅಂದುಕೊಂಡಿದ್ದೆವಲ್ಲಾ, ನೀನ್ಯಾಕೆ ಮರೆತಿದ್ದು?’ ಅಂದಳು. ನಾವು ಮೂವರು ನಡೆಯುತ್ತಲೇ ಸಾಗಿದ್ದೆವು. ಅವನು ‘ಮರೆತೆ ಹೌದು, ನಾನೂ ಕೂಡ ಮನುಷ್ಯನಲ್ಲವೇ,’ ಅಂದ. ಇನ್ನೂ ಸಿಟ್ಟಿನಲ್ಲೇ ಇದ್ದ ಅವಳು ‘ನಾನು ಮನೆಯಿಂದ ಹೊರಡಲು, ಅಲ್ಲಿಗೆ ತಲುಪಲು ನನಗೆ ಅದೆಷ್ಟು ತಯಾರಿ ಬೇಕೆಂದು ನಿನಗೆ ಗೊತ್ತಿದೆಯಲ್ಲವೇ,’ ಅಂದಳು.

ಇನ್ನೊಂದು ಸಂದರ್ಭದಲ್ಲಿ ಅವರ ‘ಹೆಲ್ಪ್’ ಕೂಗು ಕೇಳಿ ನಾನು ಹೋಗಿ ಅವರನ್ನು ಎತ್ತಿ ಸ್ಕೂಟರಿನಲ್ಲಿ ಕೂಡಿಸಬೇಕಾಯ್ತು. ಆಗ ಅಲ್ಲಿ ಅಂಥದ್ದೇ ಇನ್ನೊಂದು ಸ್ಕೂಟರಿನಲ್ಲಿ ಅವರ ಸ್ನೇಹಿತೆ ಕೂತಿದ್ದರು. ಅವರಿಬ್ಬರೂ ಸಿನಿಮಾ ನೋಡಲು ಹೊರಟಿದ್ದರು. ನಾನಲ್ಲಿದ್ದಷ್ಟೂ ಹೊತ್ತು ಆಕೆ ಆತನನ್ನು ಪ್ರಶ್ನಿಸುತ್ತಿದ್ದರು – ‘ಅದನ್ನ ಪ್ಯಾಕ್ ಮಾಡಿದ್ದೀಯಾ? ಎರಡೆರಡು ಬಾರಿ ಫೋನ್ ಮಾಡಿ ಸರಿಯಾದ ಸಮಯ ನೋಟ್ ಮಾಡಿದ್ದೀಯ ತಾನೇ? ನಿನ್ನೆ ಡಿನ್ನರಿಗೆ ಏನು ಮಾಡಿದೆ? ಅದೇ ಇನ್ನೂ ಉಳಿದಿದ್ದರೆ ಈ ಸಂಜೆ ನಾವಿಬ್ಬರೂ ತಿನ್ನಬಹುದು. ಅಂದಹಾಗೆ ಹೋದಬಾರಿ ಪಿಕ್ನಿಕ್ ಹೇಗಿತ್ತು?’ ಇಷ್ಟೆಲ್ಲಾ ಪ್ರಶ್ನೆಗಳಿಗೆ ಆತ ತಮ್ಮ ಗೊರಗೊರ ಗಂಟಲಿನಲ್ಲಿ ನಿಧಾನವಾಗಿ ತಡವರಿಸುತ್ತಾ ಉತ್ತರಿಸುತ್ತಿದ್ದರು. ಆಕೆ ಅವರನ್ನೇ ನೋಡುತ್ತಾ ಒಮ್ಮೊಮ್ಮೆ ಅಸಹನೆ ತೋರುತ್ತಿದ್ದಳು. ಈ ಸಂದರ್ಭ ನನಗೆ ಆಶ್ಚರ್ಯ ತಂದಿತ್ತು. ಆಕೆ ಮೊಬೈಲ್ ಸ್ಕೂಟರಿನಲ್ಲಿದ್ದರೂ (ಅಂಗನ್ಯೂನತೆಯಿದ್ದು) ಮನೆವಾರ್ತೆಯಲ್ಲಿ ಪಳಗಿದ ಪಕ್ಕಾ ನುರಿತ ನಡವಳಿಕೆ ತೋರಿದ್ದರು. ಅಥವಾ ಅದು ಹೆಂಗಸರಿಗೆ ಸಹಜವಾದ ‘ಕೇರಿಂಗ್’ ಸ್ವಭಾವವಾಗಿತ್ತೇ? ನನ್ನೊಡನೆ ಆಕೆ ಒಂದು ಮಾತು ಕೂಡ ಆಡಲಿಲ್ಲ.

ಆತ ನನಗೆ ಥ್ಯಾಂಕ್ಸ್ ಹೇಳಿದಾಗ ಆಕೆ ಅತ್ತಕಡೆ ಮುಖ ತಿರುವಿದರು. ಹೊಟ್ಟೆಕಿಚ್ಚಾಗಿತ್ತೇ? ಆಕೆ ಆತನ ಸಂಗಾತಿಯಾಗ ಬಯಸಿದ್ದರೇ? ಅವರಿಬ್ಬರ ದೈಹಿಕ ಸ್ಥಿತಿ ಅವರನ್ನು ದೂರವಿಟ್ಟಿತ್ತೇ? ಆತ ನನಗೆ ಥ್ಯಾಂಕ್ಸ್ ಹೇಳಿದ ಪರಿ ಆಕೆಗೆ ಇಷ್ಟವಾಗಲಿಲ್ಲವೇ, ಯಾಕೆ? ಮುಚ್ಚಿಟ್ಟಿದ್ದ ಅದ್ಯಾವ ಭಾವನೆಯನ್ನು ಅದು ಕೆಣಕಿತ್ತು? ತಮ್ಮ ಅಂಗಗಳ ಮೇಲೆ ಸ್ವಾಧೀನವಿರದೆ ಇರುವ ವಿಶೇಷ ಸಾಮರ್ಥ್ಯರಿಗೆ ಇರುವ ಸಂವೇದನೆಯ ಮಟ್ಟ ಸಾಮಾನ್ಯರಿಗಿಂತಲೂ ಹೆಚ್ಚಿನದಂತೆ.

ಭಾರತದಲ್ಲಿದ್ದಾಗ ದೈಹಿಕ ಅಂಗವಿಕಲತೆ, ನ್ಯೂನತೆ ಇರುವವರ ಪರಿಸ್ಥಿತಿಯನ್ನು ನೋಡಿ ನನಗೆ ಬೇಸರವಾಗುತ್ತಿತ್ತು. ಕಾಲುಗಳ ಬಳಕೆಯಲ್ಲಿ ಸಮಸ್ಯೆಯಿದ್ದ ಜನರೇ ಹೆಚ್ಚಿನವರು. ಅಂತಹವರಿಗೆ ಒಂದು ಜೊತೆ ಕೃಚಸ್ (crutches), ಚಕ್ರಗಳಿರುವ walker, ಕೈಯಿಂದ ತಳ್ಳುವ wheelchair ಗಳ ಸೌಲಭ್ಯವಿದ್ದರೆ ಅವರು ಸ್ವತಂತ್ರರಾಗಿ, ಸಶಕ್ತರಾಗಿ ತಮ್ಮ ಸಾಮರ್ಥ್ಯವನ್ನು ಬಳಸುತ್ತಿದ್ದರೇನೋ. ಇಪ್ಪತೈದು ವರ್ಷಗಳ ಹಿಂದಿನ ಬೆಂಗಳೂರಿನಲ್ಲಿ ಅಂಗನ್ಯೂನತೆ ಇದ್ದವರಿಗೆ ಅತ್ಯವಶ್ಯಕವಾಗಿದ್ದ ಮೊಬಿಲಿಟಿ ಸಾಧನಗಳು ಎಟುಕುವುದು ಗಗನಕುಸುಮವಾಗಿತ್ತು. ಆದರೂ ಕೂಡ ಅಲ್ಲೊಂದು ಇಲ್ಲೊಂದು ಅಪರೂಪದ ಸ್ವಯಂಸೇವಾ ಸಂಸ್ಥೆಗಳು (APD, Mobility India) ಆ ಅಗಾಧ ಕೊರತೆಯನ್ನು ತುಂಬಲು ಶ್ರಮವಹಿಸಿ, ಶಕ್ತಿಮೀರಿ ಕೆಲಸ ಮಾಡುತ್ತಿದ್ದವು. ಅಂಗನ್ಯೂನತೆ ಇದ್ದವರಿಗೆ ವೃತ್ತಿಪರ ತರಬೇತಿ ಕೊಟ್ಟು ಅವರನ್ನು ಸ್ವತಂತ್ರರನ್ನಾಗಿ, ವಿಶೇಷ ಸಾಮರ್ಥ್ಯವುಳ್ಳವರನ್ನಾಗಿ ಪರಿವರ್ತಿಸಲು ಆ ಕೆಲವೇ ಕೆಲವು ಸ್ವಯಂಸೇವಾ ಸಂಸ್ಥೆಗಳು ಹೆಣಗಾಡುತ್ತಿದ್ದವು. ಸ್ಥಳೀಯವಾಗಿಯೇ ಸಾಧನಗಳನ್ನು ತಯಾರಿಸಲು ಬೇಕಾದ ತಾಂತ್ರಿಕತೆ, ನೈಪುಣ್ಯತೆ, ಕುಶಲತೆ, ಹಣ, ಮತ್ತು ಮುಖ್ಯವಾಗಿ ಸಮಾಜ ಮತ್ತು ಸರಕಾರಗಳ ಬೆಂಬಲ ಅಷ್ಟೇನೂ ಇರಲಿಲ್ಲ. ಆದರೆ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಇವೆಲ್ಲವೂ ಭಾರತದಲ್ಲಿ ಈಗ ಲಭ್ಯವಿದೆ.

ಆಸ್ಟ್ರೇಲಿಯಾದಲ್ಲಿರುವುದು welfare ವ್ಯವಸ್ಥೆ. ಸೇವೆ, ಸೌಲಭ್ಯ ಬೇಕೆಂದರೂ ಅದು ತಾನೇತಾನಾಗಿ ಸಿಕ್ಕುವುದಿಲ್ಲ. ಹಾಗಾಗಿ ಇಡೀ ವ್ಯವಸ್ಥೆ ಸ್ವಲ್ಪ ಎಡಬಿಡಂಗಿಯಾಗಿದೆ. ಉದಾಹರಣೆಗೆ ಮೊಬೈಲ್ ಸ್ಕೂಟರ್ ಬೇಕಿರುವವರು (ಹೆಚ್ಚಿನಮಂದಿಗೆ) ತಮ್ಮದೇ ಹಣವನ್ನು ಬಳಸಿ ಸ್ಕೂಟರ್ ಕೊಳ್ಳಲು ಸಾಧ್ಯವಿಲ್ಲ. ಬೇರೆಲ್ಲಾ ದೇಶಗಳಲ್ಲಿ ಇರುವಂತೆ ಇಲ್ಲೂ ಕೂಡ ಅನೇಕ ಅಸಮಾನತೆಗಳಿವೆ. ಮಧ್ಯಮವರ್ಗದ (ಆದಾಯವನ್ನಾಧರಿಸಿ) ಜನರಿಗೆ ಮೊಬೈಲ್ ಸ್ಕೂಟರ್ ಅನ್ನೋದು ಬಿಸಿತುಪ್ಪ. ಸಹಾಯಕ್ಕೆಂದು ಸರ್ಕಾರಕ್ಕೆ ಅರ್ಜಿ ಹಾಕಿಕೊಂಡು, ತಮಗಿರುವ ಅವಶ್ಯಕತೆ ಮತ್ತು ಅರ್ಹತೆಗಳನ್ನು ಸಾಬೀತು ಮಾಡಲು ಹೆಣಗಾಡಬೇಕು, ಸಾಕಷ್ಟು ಬೆವರು ಸುರಿಯುತ್ತದೆ. ಏನೇ ಸರ್ಕಸ್ ಮಾಡಿದರೂ ಸರಕಾರ ಮಧ್ಯಮ ಮತ್ತು ಕೆಲವರ್ಗದವರನ್ನ ‘ಬಿಟ್ಟಿ ಕೇಳುತ್ತಿದ್ದಾರೆ’ ಅನ್ನೋ ಅನುಮಾನದಿಂದಲೇ ನೋಡುತ್ತದೆ. ಹಾಗಾಗಿ ಅರ್ಜಿದಾರರ ಆದಾಯ ಮತ್ತು ಅವರ ಬಳಿ ಇರುವ ಎಲ್ಲಾ ರೀತಿಯ ಆಸ್ತಿಯನ್ನು (ಕಾರನ್ನೂ ಕೂಡ ಸೇರಿಸಿ) ಕೂಲಂಕುಶವಾಗಿ ಪರಿಶೀಲಿಸಿ, ಅಳೆದು ತೂಗಿ ನೋಡಿದ ಮೇಲೆಯೇ ಸೌಲಭ್ಯಗಳು ಸಿಕ್ಕುವುದು.

ಒಬ್ಬ ಆದಾಯರಹಿತ ವ್ಯಕ್ತಿಗೆ ಒಂದು ಮೊಬೈಲ್ ಸ್ಕೂಟರ್ ದಕ್ಕುವುದೆಂದರೆ ಅದು ದೊಡ್ಡ ವಿಷಯವೇ ಸರಿ. ದಕ್ಕಿದರೂ ಅದನ್ನು ಜೋಪಾನವಾಗಿ ನೋಡಿಕೊಳ್ಳಬೇಕು ಇಲ್ಲವೆಂದರೆ ಅದು ಸರ್ಕಾರಿ ವಿಭಾಗಕ್ಕೆ ವಾಪಸಾಗುತ್ತದೆ. ಪರಾವಲಂಬಿಯಾಗಬೇಕು. ಸರಕಾರದಿಂದ ಸೌಲಭ್ಯಗಳನ್ನು ಪಡೆಯುತ್ತಾ ಬದುಕುವವರಿಗೆ ಅನೇಕ ಭಯಗಳು ಕಾಡುತ್ತಿರುತ್ತವೆ.

ವಿಶೇಷ ಸಾಮರ್ಥ್ಯರಿಗೆ ಕಷ್ಟಗಳಿಗಿಂತ ಸವಾಲುಗಳೇ ಹೆಚ್ಚು ಎನಿಸುತ್ತದೆ. ಹೆಚ್ಚಿನಪಾಲು ಸಮಾಜ ಅವರನ್ನು, ಅವರ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸೋತಿದೆ ಅನಿಸುತ್ತದೆ. ನನ್ನ ಪಕ್ಕ ಸ್ಕೂಟರಿನಲ್ಲಿ ಸಾಗಿದ್ದ ಅವರಿಬ್ಬರೂ ರಸ್ತೆಯ ಏರುತಗ್ಗುಗಳ ಪ್ರಕಾರ ವೇಗವನ್ನು ನಿಯಂತ್ರಿಸುತ್ತಿದ್ದರು. ಅವನ, ಅವಳ ಅಂದಿನ ದಿನದಲ್ಲಿ ಅದೇನೆಲ್ಲಾ ಏರುತಗ್ಗುಗಳಿದ್ದವೋ ಯಾರು ಬಲ್ಲರು? ಇಬ್ಬರಿಗೂ ಆ ದಿನ ಎರಡು ಹೊತ್ತಿನ ಪೂರ್ತಿ ಊಟ ಸಿಕ್ಕಿತ್ತೇ? ಆರೋಗ್ಯ ಹೇಗಿತ್ತು? ಇದನ್ನು ಕೇಳಲು ಮನೆಮಂದಿ, ಸ್ನೇಹಿತರು ಇದ್ದಾರೆಯೇ? ಅವನ ಮ್ಲಾನಮುಖದಲ್ಲಿ ಅದೇನೋ ನೋವಿತ್ತು. ಅವಳ ಏರುದನಿಯ ಸಿಡುಕಿನಲ್ಲಿ ಆತಂಕವಿತ್ತು.


ಅವಳ ಅಗತ್ಯಗಳನ್ನು ಗಮನಿಸಲು ಅವಳಿಗೆ ಬೇರೆಯವರ ಸಹಾಯ ಬೇಕಿತ್ತೇನೋ? ಅವನ ಸಹಚರ್ಯೆ ಅವಳಿಗೆ ಬೇಕಿತ್ತೇನೋ? ಮುಂದುವರೆದ ಈ ದೇಶಗಳಲ್ಲಿ ಅದನ್ನೆಲ್ಲಾ ಕೇಳುವುದಕ್ಕೆ ಮತ್ತು ಹೇಳಿಕೊಳ್ಳುವುದಕ್ಕೆ ಸಾಧ್ಯವಿರುವುದು ನಿಗದಿತ ಸ್ಥಳದಲ್ಲಿ, ಸಮಯದಲ್ಲಿ, ವೃತ್ತಿಪರ ಸಂದರ್ಭದಲ್ಲಿ ಅಥವಾ ಸಮುದಾಯ ಭೇಟಿಗಳಲ್ಲಿ. ಎಲ್ಲವೂ ನಿಯಂತ್ರಣಕ್ಕೆ ಒಳಪಟ್ಟ ನಿಯಂತ್ರಿತ ನಗರಜೀವನದಲ್ಲಿ ನಾವೆಲ್ಲಾ ಯಾಂತ್ರಿಕ ಯಾತ್ರಿಗಳು.