ಕಿಕ್ಕಿರಿದಿದ್ದ ಗುಡಾರದಲ್ಲಿ ಬೆವರಿನಿಂದ ತೊಪ್ಪೆಯಾಗಿದ್ದ ದೇಹಗಳಿಂದ ಬರುವ ವಾಸನೆಯಿಂದ ಹೊಟ್ಟೆಯಲ್ಲಿ ತೊಳೆಸಿದಂತಾಗಿ, ನನಗೆ ನಿದ್ದೆ ಹತ್ತಲಿಲ್ಲ. ಮರುದಿನ ಪವಿತ್ರ ಸಂಗಮಸ್ನಾನದ ನೆನಪಿನಲ್ಲಿ ಪುಳಕಿತಳಾದ ಅಮ್ಮ ಪ್ರಶಾಂತವಾಗಿ ನಿದ್ದೆ ಮಾಡಿದಳು; ಆ ಸ್ನಾನ ತನ್ನ ಪಾಪಗಳನ್ನು ತೊಳೆದು, ಮುಂದಿನ ಜೀವನದಲ್ಲಿ ಸುಖಜೀವನವನ್ನು ಪ್ರಸಾದಿಸುತ್ತದೆಯೆಂಬುದು ಅವಳ ನಂಬಿಕೆ. ಕಪ್ಪಗಿನ ಕತ್ತಲನ್ನು ಸೀಳಿಕೊಂಡು ಬರುವ ಸೂರ್ಯೋದಯಕ್ಕಾಗಿ ಎದುರುನೋಡುತ್ತ, ನಾನು ಹೊರಳಾಡುತ್ತ ಕಳೆದೆ. 
ಎಂ.ಜಿ. ಶುಭಮಂಗಳ ಅನುವಾದಿಸಿದ ಆರ್.ಪಿ. ಸಿಸೋಡಿಯಾ ಬರೆದ ಇಂಗ್ಲಿಷ್ ಕತೆ ‘ಮೋಕ್ಷ ಸ್ನಾನ’, ಈ ಭಾನುವಾರದ ನಿಮ್ಮ ಓದಿಗೆ

 

ನಲವತ್ತು ವರ್ಷಗಳ ಹಿಂದಿನ ಮಾತು, ಹರಿಯಾಣ ಉತ್ತರ ಭಾಗದಲ್ಲಿ ಇರುವ ರೇವಾರಿ ಒಂದು ಕುಗ್ರಾಮ; ಅದರಲ್ಲಿ 400 ಕುಟುಂಬಗಳಿದ್ದವು. ಮಳೆಗಾಲದ ಒಂದು ರಾತ್ರಿ. ದಿನವಿಡೀ ಕೆಲಸ ಮಾಡಿ ದಣಿದಿದ್ದ ಮೋತಿಬಾಯಿಗೆ ಕಣ್ಣೆಳೆದಂತಾಗಿ, ಒಂದು ಮೂಲೆಯಲ್ಲಿ ಚಾಪೆ ಹಾಸಿ, ಸೊಂಟ ನೆಲಕ್ಕೆ ಹಾಕಿ ಮಲಗಿದ್ದೇತಡ, ಕ್ಷಣದಲ್ಲೇ ಗಾಢನಿದ್ರೆ ಆವರಿಸಿತು. ಆಕೆಯ ಎದೆಗೊತ್ತಿಕೊಂಡು ಆರು ತಿಂಗಳ ಮಗು ನಿದ್ದೆ ಮಾಡುತ್ತಿದೆ. ಎದುರಿಗೆ ಹಾಸಿದ ಮತ್ತೊಂದು ಚಾಪೆಯ ಮೇಲೆ ಆಕೆಯಗಂಡ ಬಾಬೂಲಾಲ್ ಮತ್ತು ದೊಡ್ಡ ಮಗ ಮಲಗಿದ್ದಾರೆ. ಆಕಾಶದಲ್ಲಿ ಚಲಿಸುತ್ತಿದ್ದ ಮೋಡ ಅಕಸ್ಮಾತ್ತಾಗಿ ಸೀಳಿ ದ್ವೇಷದಿಂದ ಆ ಗ್ರಾಮದ ಮೇಲೆ ಬಿದ್ದಂತೆ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು.

ಆ ಚಿಕ್ಕ ಹೆಂಚಿನ ಮನೆ ಆ ಕುಂಬರಿಸುವ ಮಳೆಗೆ ತಡೆಯುವಂತಹದ್ದಲ್ಲ. ಹೆಂಚಿನ ಹೊದಿಕೆಯ ಸಂದಿಯಲ್ಲಿ ಮಳೆ ನೀರು ಸೇರಿಕೊಳ್ಳಲಾರಂಭಿಸಿತು. ತೊಟಕ್ ತೊಟಕ್ ಎಂದು ತೊಟ್ಟಿಕ್ಕುತ್ತಿದ್ದ ಹನಿ ಸ್ವಲ್ಪ ಸಮಯದಲ್ಲೆ ಜೋರಾಗಿ ಜಿನುಗತೊಡಗಿತು. ಅಮ್ಮನನ್ನು ಅಪ್ಪಿ ಮಲಗಿದ್ದ ಮಗು ಎಚ್ಚರಗೊಂಡು, ಸಣ್ಣಗೆ ಅಳು ಶುರು ಮಾಡಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿತು. ಥಟ್ಟನೆಎಚ್ಚರಗೊಂಡ ಮೋತಿಬಾಯಿಗೆ ಮಗು ನೆನೆದಿರುವುದು ಅರಿವಾದಕೂಡಲೆ, ಒಲೆಯ ಮೇಲಿನ ಗೂಡಿನಲ್ಲಿದ್ದ ಸೀಮೆಎಣ್ಣೆ ಬುಡ್ಡಿಯನ್ನು ಕಡ್ಡಿಗೀರಿ ಹಚ್ಚಿ, ನೆಲವನ್ನು ಪರೀಕ್ಷಿಸಿದಳು. ಒಂದು ಮೂಲೆಯಲ್ಲಿ ತೇವವಿರದ ಸ್ವಲ್ಪಜಾಗದಲ್ಲೇ ಚಾಪೆಹಾಸಿ, ಪುಟ್ಟ ಕಂದನ ಬಟ್ಟೆ ಬದಲಿಸಿ ತಟ್ಟಿ ಮಲಗಿಸಿದಳು. ಉಳಿದ ಕಡೆಯೆಲ್ಲ ಸೋರುತ್ತಿದ್ದುದರಿಂದ ಇವಳ ಬೆನ್ನ ಮೇಲೆ ಹನಿ ಸುರಿಯುತ್ತಿದ್ದರೂ, ಮಗುವನ್ನುತನ್ನ ಮೈ ಶಾಖದಿಂದ ಬೆಚ್ಚಗೆ ಮಾಡತೊಡಗಿದಳು ಮೋತಿಬಾಯಿ. ಆಕೆಯ ಗಂಡ, ದೊಡ್ಡ ಮಗ ನೆನೆಯುತ್ತಿರುವ ಪರಿವೆಯಿಲ್ಲದೆ ಗಾಢ ನಿದ್ರೆಯಲ್ಲಿದ್ದಾರೆ.

ಸುರಿಯುತ್ತಿರುವ ಮಳೆ ಬಿಡದೆ ಆಕೆಯನ್ನು ನೆನೆಸುತ್ತಲೇ ಇದೆ. ಚಳಿಗೆ ನಡುಕ ಬರುತ್ತಿದ್ದರೂ, ಮಗನಿಗೆ ಆ ಸ್ವಲ್ಪಜಾಗ ಸಿಕ್ಕಿದ್ದುದಕ್ಕೆ ಆಕೆಗೆ ಸಂತೋಷ. ಸ್ವಲ್ಪ ಹೊತ್ತಿಗೆ ದೀಪ ಅದಷ್ಟಕ್ಕದೇ ಆರಿತು. ಮನೆಯ ಹೊದಿಕೆಯ ಮೇಲೆ ಸುರಿಯುತ್ತಿದ್ದ ಮಳೆಯ ಶಬ್ದ ಬಿಟ್ಟರೆ ಎಲ್ಲೆಡೆ ನಿಶ್ಯಬ್ದ.

ಬೆಳಗಾದ ಕೂಡಲೇ ಎಂದಿನಂತೆ ಮನೆ ಸ್ವಚ್ಛಗೊಳಿಸಿ, ಅಡುಗೆ ಮಾಡಿ, ಬಟ್ಟೆ ಒಗೆದಳು. ರಾತ್ರಿ ಸುರಿದ ಮಳೆಯಿಂದ ನೆನೆದಿದ್ದ ಅವಳಿಗೆ ಜ್ವರಬಂದು ಮೈ ಸುಡುತ್ತಿದ್ದರೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾಳೆ, ಹಾಗೆ ಮಾಡದೆ ಅವಳಿಗೆ ವಿಧಿಯಿಲ್ಲ. ಆಕೆಯ ಜೀವನದಲ್ಲಿ ರಜೆಗಳಿಲ್ಲ. ವಿಧಿಯ ಗಡಿಯಾರ ಟಿಕ್ ಟಿಕ್ ಎಂದು ಮುಂದೆ ಸಾಗುತ್ತಿದೆ; ದಿನದಿನಕ್ಕೆ ಮುದುಕಿಯಾದಳು ಆಕೆ.

********

ನಲವತ್ತು ವರ್ಷಗಳ ನಂತರ, ನಡು ಚಳಿಗಾಲದ ಒಂದು ಮುಂಜಾನೆ. ರೇವಾರಿ ಪಟ್ಟಣವಿಡೀ ಗಾಢ ನಿದ್ರೆಯಲ್ಲಿ ಮುಳುಗಿದೆ. ಅರೆ-ಗ್ರಾಮೀಣ ಮನೆಯೊಂದು ಮುದುಕಿಯ ಸೀನು, ಕೆಮ್ಮುಗಳಿಂದ ಪ್ರತಿಧ್ವನಿಸುತ್ತಿದೆ. ಇಂದ್ರಿಯ ಸುಖಭೋಗ ಅನುಭವಿಸಿ ಮತ್ತೆ ನಿದ್ರೆಗೆಜಾರಿ ಹಗಲುಗನಸು ಕಾಣುತ್ತಿದ್ದ ಮಧ್ಯವಯಸ್ಸಿನ ದೇಹವೊಂದು ಈ ಸದ್ದಿನಿಂದ ಎಚ್ಚರಗೊಂಡು ಕಟುಮಾತುಗಳಾಡಲಾರಂಭಿಸಿತು.

“ಏನು ದರಿದ್ರ ತಾಯಿ! ನಿನ್ನನ್ನು ಮದುವೆ ಮಾಡಿಕೊಳ್ಳುವ ಮೊದಲೇ ನನಗೆ ತಿಳಿಯಬೇಕಿತ್ತು- ಇಂತಹ ನಿದ್ರೆಗೆ ಭಂಗತರುವ ಭವಿಷ್ಯತ್ತಿಗೆ ಹೆಜ್ಜೆಯಿಡುತ್ತಿದ್ದೇನೆಂದು. ಅಬ್ಬಾ ಈ ಕೊಂಪೆಯಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ದಿನವಿಡೀ ಕತ್ತೆಯಂತೆ ಚಾಕರಿ ಮಾಡಿ, ಸ್ವಲ್ಪ ನಿದ್ದೆ ಮಾಡೋಣವೆಂದರೂ ಆಗುವುದಿಲ್ಲ. ಮದುವೆಯಲ್ಲಿ ಅಗ್ನಿಸಾಕ್ಷಿಯಾಗಿ ಜೀವನಪರ್ಯಂತ ನನ್ನನ್ನು ಸುಖವಾಗಿಟ್ಟುಕೊಳ್ಳುತ್ತೇನೆಂದು ಎಲ್ಲರೆದುರು ಮಾತುಕೊಟ್ಟಿದ್ದೀಯಲ್ಲವಾ, ಏನಾಯಿತು?” ಕಟುವಾದ ಮಾತುಗಳು ನನ್ನ ಕಿವಿಗೆ ತಾಕಿತು. ಆ ಮಾತುಗಳು ನನ್ನ ಕಿವಿ ಆಲಿಸಿತೋ ಇಲ್ಲವೋ, ಅದು ನನ್ನ ತಲೆಗೆ ಹತ್ತಿದೆಯೋ ಇಲ್ಲವೋಎಂದು ತಿಳಿದುಕೊಳ್ಳಲು ತೊಡೆ ಚಿವುಟಿತು.

ಅಸ್ತವ್ಯಸ್ತವಾಗಿ ನಿದ್ದೆಮಾಡುತ್ತಿರುವಂತೆ ಇರುವ ಪಟ್ಟಣ ರೇವಾರಿ. ರಾಜಧಾನಿ ದೆಹಲಿಗೆ ಕೆಲವು ಮೈಲಿ ದೂರ, ಪ್ರಿಯಕರನ ಮೇಲೆ ಗಾಢ ಪ್ರೀತಿಯಿದ್ದರೂ, ಗಂಡನನ್ನು ಬಿಟ್ಟು ಹೋಗಲಾರದ ಮನಸ್ಸುಳ್ಳ ಹೆಣ್ಣಿನಂತಿದೆ. ಗ್ರಾಮೀಣತೆ ಮತ್ತು ಮೋಹಕತೆಯ ಸಮ್ಮಿಲನ ಇಲ್ಲಿದೆ. ಈ ಪಟ್ಟಣದಲ್ಲಿ ವಿಲಾಸಿ ಬಂಗಲೆಗಳು ಧೂಳು ತುಂಬಿ ರಸ್ತೆ ಬದಿಯಲ್ಲಿ ತಮ್ಮ ಅಹಂಕಾರಪೂರಿತ ಅಸ್ತಿತ್ವವನ್ನು ಮೆರೆಯುತ್ತವೆ. ಒಂದು ಕಡೆ ರೈತರು ತಮ್ಮ ಹೊಲದಲ್ಲಿ ದುಡಿಯಲು ಸಿದ್ಧರಾಗುತ್ತಿದ್ದರೆ ಮತ್ತೊಂದು ಕಡೆ ಟೊಯೊಟಾ, ಸಿಯಲೋಗಳು ದೆಹಲಿಯಲ್ಲಿ ತಮ್ಮ ಬೆಳಗಿನ ವ್ಯವಹಾರಗಳಲ್ಲಿ ತೊಡಗಲು ಸ್ಪರ್ಧಿಸತೊಡಗುತ್ತವೆ.

ಅಲ್ಲಿ ಆದರ್ಶ ಮಧ್ಯಮವರ್ಗದವರಿದ್ದಾರೆ. ದೆಹಲಿಯ ವರ್ಗೀಕರಿಸಲಾಗದ ವಿವಿಧ ಕಚೇರಿಗಳಲ್ಲಿ ಕೆಲಸ ಮಾಡುವ ಗುಮಾಸ್ತರು, ಸಹಾಯಕರಾಗಿ ಇಲ್ಲವೇ ದೆಹಲಿಯ ಪೊಲೀಸ್ ಕಚೇರಿಯಲ್ಲಿ ಕಾನ್ಸ್ಟೇಬಲ್ ಗಳಾಗಿ, ಇಲ್ಲವೇ ಡಿಟಿಸಿ ಬಸ್ ಗಳಲ್ಲಿ ಕಂಡಕ್ಟರ್ ಗಳಾಗಿ ಕೆಲಸ ಮಾಡುತ್ತಾರೆ. ಅವರೆಲ್ಲರೂ ಮನೆ ಬಿಟ್ಟುಚಲಿಸುವ ರೈಲುಗಳನ್ನು ಹತ್ತಿ, ತಮ್ಮ ಕಲ್ಪನೀಯ ಆಸನಗಳನ್ನು ಆಕ್ರಮಿಸಲು ಹಿಂಡುಹಿಂಡಾಗಿ, ರೈಲ್ವೆಸ್ಟೇಷನ್ ನತ್ತ ಧಾವಿಸುತ್ತಾರೆ. ದೆಹಲಿಗೆ ಹೋಗುವ ಯಾವ ರೈಲಾದರೂ, ರಿಸರ್ವ್ ಕಂಪಾರ್ಟ್ಮೆಂಟ್ ಇರಲಿ, ಜನರಲ್ ಬೋಗಿಯಿರಲಿ… ಹತ್ತಿ ಸಹ ಪ್ರಯಾಣಿಕರ ಬಾಧೆಯನ್ನು ಲೆಕ್ಕಿಸದೆ ದೊರೆತ ಜಾಗ ಆಕ್ರಮಿಸಿ ಕುಳಿತುಬಿಡುತ್ತಾರೆ. ಅವ್ಯವಸ್ಥಿತತೆಗೆ ಜಗ್ಗದ ಸಾಮಾನ್ಯಜೀವನ ಎಂದಿನಂತೆ ಅಚಲವಾಗಿ ಸಾಗುತ್ತಿದೆ.

ನನ್ನ ಹುಟ್ಟೂರು ರೇವಾರಿ. ದೆಹಲಿ ಈಗಿನಂತೆ ಅಲ್ಲದೆ ಬಹುದೂರವಾಗಿದ್ದ ದಿನಗಳು, ನಮ್ಮ ಅಪ್ಪ ಒಬ್ಬ ಚಿಕ್ಕ ರೈತ. ಆಗಿನ್ನೂ ದಯಾರಹಿತ ನಾಗರಿಕತೆಯ ದಾಳಿ ಗ್ರಾಮದ ಬಾಗಿಲುಗಳನ್ನು ತಟ್ಟಿರಲಿಲ್ಲ; ಅಂದಿಗೆ ನಾಲ್ಕು ನೂರು ಕುಟುಂಬಗಳು ವಾಸಿಸುತ್ತಿದ್ದ ಚಿಕ್ಕ ಹಳ್ಳಿ. ಆಗಿನ್ನು ಎತ್ತಿನ ಗಾಡಿಯಲ್ಲಿ ದೆಹಲಿ ಪ್ರಯಾಣ ಊಹಿಸಲಾಗದಷ್ಟು ತ್ರಾಸದಾಯಕವಾಗಿತ್ತು. ನನ್ನ ಬಾಲ್ಯದ ದಿನಗಳು ನನಗಿನ್ನೂ ಚೆನ್ನಾಗಿ ನೆನಪಿದೆ; ಬಹಳ ಸ್ವಚ್ಛಂದವಾಗಿ ಬಿಸಿಲು, ಗಾಳಿ, ಮಳೆಯನ್ನು ಲೆಕ್ಕಿಸದೆ ಓಡಾಡುತ್ತಿದ್ದೆವು, ಬೆಲೆಗಳ ಬಾರವಿಲ್ಲದ ಗ್ರಾಮೀಣ ಜೀವನ; ಊರಕೆರೆಯಲ್ಲಿ ಗಂಟೆಗಟ್ಟಲೆ ಸ್ನಾನ ಮಾಡುವುದು ಆಗ ವಿಲಾಸಿಯಾಗಿರಲಿಲ್ಲ; ಶಿಕ್ಷಕರು ಆಗಿನ್ನೂ ಹೋಂವರ್ಕ್ ಕಂಡುಹಿಡಿದಿರಲಿಲ್ಲ. ನನ್ನಅಪ್ಪ ಹಠಾತ್ತನೆ ಇಹಲೋಕ ತ್ಯಜಿಸಿದ. ಸಂಸಾರದ ನೊಗ ಅಮ್ಮನ ಹೆಗಲೇರಿ ವಯಸ್ಸಿಗೆ ಮೀರಿದ ಮುಪ್ಪು ಅವಳನ್ನು ಆವರಿಸಿತು. ಅಪ್ಪ ಸತ್ತಾಗ ಅಣ್ಣನಿಗೆ ಹದಿನೆಂಟು ವರ್ಷ. ಅವನು ಮರು ವರ್ಷವೇ ಮದುವೆ ಮಾಡಿಕೊಂಡು, ಆಸ್ತಿಯನ್ನು ಅರ್ಧ ಭಾಗ ಮಾಡಿ ಬೇರೆಯಾದನು. ಸಹಜವಾಗಿಯೇ ಮಧ್ಯೆಗೋಡೆಯೆದ್ದು ಮನೆ ಇಬ್ಬರಿಗೂ ಸಮ ಭಾಗವಾಯಿತು. ಆಗ ನನ್ನ ಅತ್ತಿಗೆಯ ಕಣ್ಣಿನಲ್ಲಿ ಹೊಳೆದ ತಿರಸ್ಕೃತ ಸಂತೋಷ, ಮೇಸ್ತ್ರಿ ಇಟ್ಟಿಗೆಯ ಮೇಲೆ ಇಟ್ಟಿಗೆ ಪೇರಿಸುತ್ತಿದ್ದಾಗ ಅಸಹಾಯಕಳಾಗಿ ನೋಡುತ್ತಿದ್ದ ನಮ್ಮ ಅಮ್ಮನ ಚಿತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ನಮ್ಮಿಬ್ಬರಿಗೆ ಎರಡು ಕೋಣೆಗಳು, ಒಂದು ಅಡುಗೆ ಮನೆ, ಅರ್ಧ ಆವರಣ ಸಿಕ್ಕಿತು. ಅಮ್ಮ ನನ್ನ ಬಳಿಯೇ ಇರಲು ಇಷ್ಟಪಡುತ್ತಿದ್ದಳು. ನಮ್ಮಅತ್ತಿಗೆಯಾಡುವ ತೀಕ್ಷ್ಣ ಮಾತುಗಳನ್ನು ತಾನು ಸಹಿಸಲಾರೆನೆಂದು ಆಕೆಗೆ ಗೊತ್ತು, ಅದಕ್ಕೂ ಮೇಲಾಗಿ ನಾನಿನ್ನೂ ಆಗ ಬ್ರಹ್ಮಚಾರಿ.

********

ಬೆಳಗ್ಗೆ ಅಮ್ಮನನ್ನು ನೋಡಿದೆ. ವಯೋಸಹಜವಾಗಿ ಆಕೆಯ ಸೊಂಟ ಬಾಗಿದೆ. ಮನೆಯ ಕಾಂಪೌಂಡಿನಲ್ಲೇ ಅವಳಿರಲು ಒಂದು ತಾತ್ಕಾಲಿಕ ಗುಡಿಸಲನ್ನು ಏರ್ಪಾಟು ಮಾಡಿದ್ದೆ. ಇಟ್ಟಿಗೆಯಿಂದ ಎದ್ದಿದ್ದ ಅರ್ಧಗೋಡೆ ಮೇಲೆ, ದಪ್ಪವಾಗಿ ಟಾರ್ಪಾಲಿನ್ ಹಾಕಿ ಮೇಲ್ಚಾವಣಿ ಹಾಕಿಸಿದ್ದೆ. ಕೆಮ್ಮುತ್ತ, ನಿಧಾನವಾಗಿ ತನ್ನ ಗುಡಿಸಲಿಗೆ ಹೋಗುತ್ತಿದ್ದಳು ಅಮ್ಮ. ಅಮ್ಮ ಕ್ಷಯ ವ್ಯಾಧಿಯಿಂದ ಬಳಲುತ್ತಿದ್ದಾಳೆ. ಆ ಭಯಂಕರ ವ್ಯಾಧಿ ತನ್ನ ಮಗನಿಗೆ ಎಲ್ಲಿ ಸೋಕುತ್ತದೆಯೋ ಎಂಬುದು ನನ್ನಾಕೆಯ ಭಯ. ಅದಕ್ಕೇ ಅಮ್ಮನನ್ನು ಆಕೆಯ ಮನೆಯೊಳಗೆ ಬರಗೊಡುವುದಿಲ್ಲ.

ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದ ನನ್ನತ್ತ ನಿರಾಸಕ್ತಿಯಿಂದ ನೋಡಿ, ಬೆನ್ನು ಮಾಡಿ ಗುಡಿಸಲೊಳಗೆ ಹೋದಳು. ಗಂಭೀರ ಗೊಣಗಾಟದಲ್ಲಿ ತೊಡಗಿ, ಅರ್ಥವಿಲ್ಲದ ಶಾಪ ಹಾಕುತ್ತ ನನ್ನ ಹೆಂಡತಿ ಭಾರತಿ ಒಂದು ಕಡೆ ಪಾತ್ರೆ ತೊಳೆಯುತ್ತಿದ್ದಾಳೆ. ಆಕೆಯ ಶಾಪಗಳು ನನ್ನನ್ನೋ, ನಮ್ಮ ಅಮ್ಮನನ್ನೋ ಉದ್ದೇಶಿಸಿರುವುವಾಗಿರುತ್ತದೆ.

“ನಿಮ್ಮ ಕೆಲಸಕ್ಕೆ ಬಾರದ ಅಮ್ಮನನ್ನು ಸ್ವಲ್ಪ ದಿನವಾದರೂ ಭರಿಸುವ ಪುಣ್ಯ ಕಟ್ಟಿಕೊಳ್ಳುವಂತೆ ನಿಮ್ಮ ಅಣ್ಣನಿಗೆ ಏಕೆ ಕೇಳುವುದಿಲ್ಲ? ನಿಮ್ಮ ಪೊಲೀಸ್ ಕಾನ್ಸ್ಟೇಬಲ್ ಉದ್ಯೋಗದಿಂದ ನಮಗೆ ಮೂರು ಹೊತ್ತು ಕಳೆಯುವುದೇ ಕಷ್ಟವಾಗಿದೆ. ರಘು ಶಾಲೆಗೆ ಹೋಗುವ ವಯಸ್ಸಿಗೆ ಬಂದಿದ್ದಾನೆ. ನನಗೇನೋ ತಿಂಗಳು ತುಂಬುತ್ತಿದೆ. ಮುಂದೆ ಖರ್ಚುಗಳು ಇನ್ನೂ ಹೆಚ್ಚಾಗುತ್ತವೆ. ನಿಮ್ಮ ಅಮ್ಮ ಇನ್ನೂ ನಮ್ಮ ಬಳಿಯೇ ಇದ್ದರೆ ನನ್ನ ಮಗನಿಗೆ ಹೊಟ್ಟೆತುಂಬಾ ಅನ್ನಕೊಡುವುದೇ ಕಷ್ಟವಾಗುತ್ತದೆ.” ನಾನು ಸಂಜೆ ಕೆಲಸ ಮುಗಿಸಿ ಮನೆಗೆ ಬಂದಮೇಲೆ ಭಾರತಿ ಎಂದಿನ ಗೊಣಗಾಟ ಮೊದಲಿಟ್ಟಳು. ನನ್ನಣ್ಣ ಅಮ್ಮನನ್ನು ಸಾಕುತ್ತಿಲ್ಲ ಎಂದು ನನ್ನನ್ನು ಇಕ್ಕಟ್ಟಿಗೀಡು ಮಾಡುತ್ತಿದ್ದಳು. ನನ್ನಣ್ಣನ ಪರಿಸ್ಥಿತಿ ನನಗಿಂತಲೂ ದಾರುಣವೆಂದು ಅವಳಿಗೂ ತಿಳಿದಿದೆ.

ಜೀವನದಲ್ಲಿ ಏರುಗತಿಕಾಣದೆ ನಮ್ಮ ತಂದೆಕೊಟ್ಟ ಹೊಲದ ದುಡಿಮೆಯಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದಾನೆ. ಅವನಿಗೆ ಮೂವರು ಹೆಣ್ಣು ಮಕ್ಕಳು. ಅವರ ಮದುವೆಗಳಿಗೆ ವರದಕ್ಷಿಣೆಗೆ ಹಣ ಹೊಂದಿಸಬೇಕಾಗಿದೆ. ದೊಡ್ಡ ಮಗಳು ಈಗಾಗಲೇ ಮದುವೆ ವಯಸ್ಸಿಗೆ ಬಂದಿದ್ದಾಳೆ. ಅವನು ನನ್ನ ಜೊತೆ ಮಾತನಾಡುವುದು ಬಿಟ್ಟು ಯಾವ ಕಾಲವೋ ಆಗಿದೆ, ಆದರೂ ಅವನ ಪರಿಸ್ಥಿತಿಯ ಕುರಿತು ನನಗೆ ಮರುಕವಿದೆ. ಅವನನ್ನು ಹಣ ಕೇಳುವ ಮನಸ್ಸು ನನಗಿಲ್ಲ.

ಅಡುಗೆ ಸಿದ್ಧವಾಗಿದೆ, ಭಾರತಿ ಎರಡು ರೊಟ್ಟಿಗಳ ಮೇಲೆ ಒಂದು ಈರುಳ್ಳಿ ಇಟ್ಟು, ನಮ್ಮ ಮಗ ರಘುವನ್ನುಕರೆದು, “ಏಯ್, ಇದನ್ನು ನಿಮ್ಮ ಅಜ್ಜಿಗೆ ಕೊಟ್ಟು ಬಾ. ಅಲ್ಲಿ ಕೂತು, ಅವಳು ಹುಟ್ಟಿಸಿಕೊಂಡು ನಿನಗೆ ಹೇಳುವ ಕಥೆಗಳನ್ನು ಕೇಳುತ್ತ ಕುಳಿತುಕೊಳ್ಳಬೇಡ. ನಿಮ್ಮಂತ ಚಿಕ್ಕವರಿಗೆ ಅದು ಕೇಳುವುದು ಒಳ್ಳೆದಲ್ಲವೇ ಅಲ್ಲ. ಕೂಡಲೇ ಬಂದುಬಿಡು. ತಿಂದಮೇಲೆ, ತಟ್ಟೆಯನ್ನು ನೀಟಾಗಿ ಬೂದಿ ಹಾಕಿ ಉಜ್ಜಿ ತೊಳೆಯುವಂತೆ ಹೇಳು, ಮರೆಯಬೇಡ”ಎಂದು ಹೇಳಿದಳು. ನಂತರ ನನ್ನತ್ತ ಗುರ್ರ್ ಎಂದು ನೋಡುತ್ತ, “ನನ್ನ ಮಕ್ಕಳಿಗೆ ಕ್ಷಯದ ಸೋಂಕು ನಾನು ಸಹಿಸಲಾರೆ” ಎಂದಳು. ನಂತರ ಏನೋ ಮುಳುಗಿಹೋಗುತ್ತಿದೆಯೆಂಬಂತೆ ನನ್ನ ಪ್ಲೇಟಿಗೂ ಒಂದುರೊಟ್ಟಿ ಬಡಿದಳು.

ನನ್ನ ಊಟವಾದಮೇಲೆ, ಭಾರತಿ ನನ್ನ ತಟ್ಟೆ ತೆಗೆದುಕೊಂಡು, ನನ್ನ ಸ್ನೇಹಿತ ಮೊನ್ನೆ ತಂದುಕೊಟ್ಟಿದ್ದ ತುಪ್ಪವನ್ನು ಧಾರಾಳವಾಗಿ ಸುರಿದುಕೊಂಡು ತಿನ್ನಲಾರಂಭಿಸಿದಳು. ಮೋಹನ ಹಸುಗಳನ್ನು ಸಾಕಿದ್ದಾನೆ. ದೆಹಲಿಯಲ್ಲಿ ಹಾಲು, ಬೆಣ್ಣೆ, ತುಪ್ಪ ಮಾರುತ್ತ ರಾತ್ರಿ ಬೆಳಗಾಗುವುದರಲ್ಲಿ ಸಿರಿವಂತನಾದನು. ಆಧುನಿಕ ಪ್ರಪಂಚದಲ್ಲಿ ಹೇಗೆ ಇರಬೇಕೆಂಬುದನ್ನು ಬಹಳ ಚೆನ್ನಾಗಿ ಅರಿತಿದ್ದನು. ಸಣ್ಣ ಪ್ಲಾಸ್ಟಿಕ್ ಕವರುಗಳಲ್ಲಿ ತುಂಬಿ, ಮನೆಗೆ ಬಂದ ಅತಿಥಿಗಳಿಗೂ, ಅಪರಿಚಿತರಿಗೆ ಕೂಡ ಧಾರಾಳವಾಗಿ ಕೊಡುವಂತಹ ಆ ಮಜ್ಜಿಗೆಯನ್ನು ಲಾಭದಾಯಕ ವ್ಯಾಪಾರಿ ಸರಕಾಗಿ ಮಾಡುತ್ತಾನೆಂದು ನಾನೆಂದಿಗೂ ಊಹಿಸಿರಲಿಲ್ಲ. ಪ್ರತಿ ತಿಂಗಳು ಒಂದು ಕೆ.ಜಿ. ತುಪ್ಪ ಹಣ ತೆಗೆದುಕೊಳ್ಳದೆ ಕಾಣಿಕೆ ಎಂಬಂತೆ ಕೊಡುತ್ತಿದ್ದಾನೆ. ಭಾರತಿ ಮತ್ತಷ್ಟು ಶ್ರದ್ಧೆಯಿಂದ ಪ್ರತಿ ತಿಂಗಳು ಅದನ್ನು ಕರಗಿಸುತ್ತಿದ್ದಾಳೆ.

ನಲವತ್ತು ವರ್ಷಗಳ ನಂತರ, ನಡು ಚಳಿಗಾಲದ ಒಂದು ಮುಂಜಾನೆ. ರೇವಾರಿ ಪಟ್ಟಣವಿಡೀ ಗಾಢ ನಿದ್ರೆಯಲ್ಲಿ ಮುಳುಗಿದೆ. ಅರೆ-ಗ್ರಾಮೀಣ ಮನೆಯೊಂದು ಮುದುಕಿಯ ಸೀನು, ಕೆಮ್ಮುಗಳಿಂದ ಪ್ರತಿಧ್ವನಿಸುತ್ತಿದೆ. ಇಂದ್ರಿಯ ಸುಖಭೋಗ ಅನುಭವಿಸಿ ಮತ್ತೆ ನಿದ್ರೆಗೆಜಾರಿ ಹಗಲುಗನಸು ಕಾಣುತ್ತಿದ್ದ ಮಧ್ಯವಯಸ್ಸಿನ ದೇಹವೊಂದು ಈ ಸದ್ದಿನಿಂದ ಎಚ್ಚರಗೊಂಡು ಕಟುಮಾತುಗಳಾಡಲಾರಂಭಿಸಿತು.

“ಅಪ್ಪಾ! ಮುಂದಿನ ವಾರ ಅಲಹಾಬಾದಿನಲ್ಲಿ ಕುಂಭಮೇಳ ಶುರುವಾಗುತ್ತದೆಂದು ಅಜ್ಜಿ ಹೇಳಿದರು. ಅಜ್ಜಿ ಕುಂಭಮೇಳದ ಒಂದು ಶುಭದಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಬೇಕಂತೆ. ತಾನು ಪರಲೋಕಕ್ಕೆ ಹೋಗುವ ಮೊದಲು ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಂತೆ. ಪರಲೋಕ ಎಲ್ಲಿದೆ ಅಪ್ಪಾ? ಇಲ್ಲಿನಂತೆ ಅಲ್ಲಿಯೂ ಚೆನ್ನಾಗಿ ಮತ್ತು ದೊಡ್ಡದಾಗಿ ಇದೆಯಾ? ಅಲ್ಲಿಕೂಡ ಹಸುಗಳು, ನಾಯಿಗಳು ಇರುತ್ತವಾ? ಅಜ್ಜಿ ಯಾಕೆ ಪರಲೋಕಕ್ಕೆ ಹೋಗಬೇಕು ಎನ್ನುತ್ತಿದ್ದಾರೆ? ನೀನು ಅಜ್ಜಿಯನ್ನು ಮಾತನಾಡಿಸುವುದಿಲ್ಲ; ನೀನು ಇಲ್ಲದಿರುವಾಗ ಅಮ್ಮ ಅಜ್ಜಿಯ ಮೇಲೆ ಜೋರಾಗಿ ಕಿರುಚಾಡುತ್ತಿರುತ್ತಾಳೆ. ಅದಕ್ಕೇ ಹೋಗುತ್ತೇನೆನ್ನುತ್ತಿದ್ದಾಳಾ?” ಒಂದು ದಿನ ಸಂಜೆ ರಘು ನನ್ನ ಬಳಿ ಬಂದು, ನಮ್ಮ ಅಮ್ಮ ಕುಂಭಮೇಳಕ್ಕೆ ಹೋಗಬೇಕೆಂದುಕೊಳ್ಳುತ್ತಿರುವ ಕೋರಿಕೆಯನ್ನು ನನಗೆ ಕೇಳಿಸುವುದರೊಂದಿಗೆ, ಹಾಗೆ ಅಮಾಯಕ, ನಿಗೂಢ ಪ್ರಶ್ನೆಗಳೊಂದಿಗೆ ನನ್ನ ಬಳಿ ಬಂದನು.

ಅವನ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿಲ್ಲ. ನಾನು ಮೌನವಾಗಿದ್ದೆನು. ಭಾರತಿಯ ಒಪ್ಪಿಗೆಯಿಲ್ಲದೆ ಅಂತಹ ವಿಷಯಗಳಲ್ಲಿ ತಕ್ಷಣ ನಿರ್ಧಾರ ತೆಗೆದುಕೊಳ್ಳುವ ಧೈರ್ಯವಿಲ್ಲ ನನಗೆ.

“ಸರಿ ಬಿಡೋ, ನಿಮ್ಮ ಅಮ್ಮನೊಂದಿಗೆ ನಾನು ಈ ವಿಷಯ ಮಾತನಾಡುತ್ತೇನೆ. ಅಮ್ಮ ಒಪ್ಪಿದರೆ ನಿಮ್ಮ ಅಜ್ಜಿಯನ್ನು ಕರೆದುಕೊಂಡು ಹೋಗೋಣ” ನಿಧಾನವಾಗಿ ಹೇಳಿದೆ. ತನ್ನ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲವೆಂದು ಅವನಿಗೆ ಗೊತ್ತು, ಅದಕ್ಕೆ ಕಾಯದೆ ಅವನು ಹೊರಟುಹೋದನು.

“ನಿನಗೆ ಗೊತ್ತಾ–ಅಮ್ಮ ಕುಂಭಮೇಳಕ್ಕೆ ಹೋಗಬೇಕೆಂದುಕೊಳ್ಳುತ್ತಿದ್ದಾಳಂತೆ!”ಅವಳು ಅಡುಗೆ ಮಾಡುತ್ತಿದ್ದಾಗ ವಿಷಯ ಪ್ರಸ್ತಾಪಿಸಿದೆನು. ಆ ಸಮಯದಲ್ಲಿ ಸ್ವಲ್ಪ ಶಾಂತವಾಗಿರುತ್ತಾಳೆ, ಬಹುಶಃ ಅಡುಗೆ ಕೆಲಸದಲ್ಲಿ ತಲ್ಲೀನಳಾಗಿರುವುದರಿಂದ ಇರಬಹುದು. ಹಾಗೆ ಹೇಳಿ, ಆಕೆಯ ಉತ್ತರಕ್ಕಾಗಿ ನಿರೀಕ್ಷಿಸಿದೆ. ಆದರೆ, ಭಾರತಿ ಒಲೆಯಲ್ಲಿದ್ದ ಇದ್ದಿಲಿನ ಕೆಂಡವನ್ನು ವಿಚಿತ್ರವಾಗಿ ನೋಡುತ್ತ, ಏನೂ ಮಾತನಾಡಲಿಲ್ಲ. ಹಾಗೆ ಮಾತನಾಡದಿರುವುದು ಅವಳ ಸ್ವಭಾವಕ್ಕೆ ವಿರುದ್ಧ. ಬಹುಶಃ ಬರಲಿರುವ ಖರ್ಚು ವೆಚ್ಚದ ಆತಂಕವಿರಬಹುದು, ಆ ದಿಗ್ಭ್ರಮೆಯಲ್ಲಿ ಮಾತುಗಳು ಸಿಗದೆ ಮಾತನಾಡದಿರಬಹುದು. ಹಾಗೆ ಬಯಸಿದ ಅಮ್ಮನ ದುಸ್ಸಾಹಸದ ಕುರಿತಾಗಿಯೂ ಆಕೆಗೆ ಕೋಪ ಬಂದಿರಬಹುದು.

“ನೀನು ಕೂಡ ಇತ್ತೀಚೆಗೆ ಯಾವ ತೀರ್ಥಯಾತ್ರೆ ಮಾಡಿಲ್ಲ. ನಮ್ಮ ಅಮ್ಮನ ಬಯಕೆಯನ್ನು ಈಡೇರಿಸುವ ನೆಪದಲ್ಲಿ ನಿನ್ನನ್ನೂ ಕುಂಭಮೇಳಕ್ಕೆ ಕರೆದುಕೊಂಡು ಹೋಗುವ ಅವಕಾಶ ಸಿಗುತ್ತದೆ ನನಗೆ. ಅದು ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮೇಳ” ಹಾಗೆ ಆಕೆಯನ್ನು ಉತ್ತೇಜಿಸುವ ಪ್ರಯತ್ನ ಮಾಡುತ್ತ, ಆಕೆಯ ಅನುಗ್ರಹ ಸಂಪಾದಿಸುವ ಅಸ್ತ್ರ ಪ್ರಯೋಗ ಮಾಡಿದೆ.

ಆಕೆ ಆಗಲೂ ಮಾತನಾಡಲಿಲ್ಲ. ನನಗೆ ಬಡಿಸಿ, ತಾನೂ ಊಟ ಮಾಡಿದಳು. ಆಕೆಯ ಮೌನ ನನಗೆ ಎಷ್ಟು ಭಯ ಮೂಡಿಸಿತೆಂದರೆ, ಮತ್ತೊಮ್ಮೆ ಆ ಪ್ರಸ್ತಾಪವನ್ನು ಮಾಡುವ ಧೈರ್ಯ ಇಲ್ಲದೆ ಹೋಯಿತು. ಎಂದಿಗಿಂತ ನಿಧಾನವಾಗಿ ನಿದ್ದೆ ಮಾಡಿದಳು. ಬಹಳ ಹೊತ್ತು ಅತ್ತಿತ್ತ ಹೊರಳಾಡುತ್ತ ಕಳೆದಳು. ಆಕೆಯ ಮನಸ್ಸಿನ ನೆಮ್ಮದಿ ಹಾಳು ಮಾಡಿದೆನೇನೋ ಎಂದು ನಾನಂದುಕೊಂಡೆ.

ಆಶ್ಚರ್ಯಕರವಾಗಿ, ಮರುದಿನ ಆಕೆ ಅದಕ್ಕೆ ಅಂಗೀಕರಿಸಿದಳು.

“ನಿಮ್ಮಅಮ್ಮನನ್ನು ಕುಂಭಮೇಳಕ್ಕೆ ಕರೆದುಕೊಂಡುಹೋಗಬೇಕೆಂದೇನೋ ಹೇಳಿದಿರಿ, ನಿಜಕ್ಕೆ ಈಗ ಈ ಖರ್ಚುಗಳು ದುಬಾರಿಯಾಗಬಹುದು, ಆದರೂ ಏನೂ ಮಾಡಲಾಗುವುದಿಲ್ಲ. ಪರಲೋಕಕ್ಕೆ ಹೋಗುವ ಮೊದಲು ಪವಿತ್ರಸಂಗಮ ಸ್ನಾನ ಅತ್ತೆಗೂ ಒಳ್ಳೆಯದೇ. ಹಾಗೇ ಮಾಡೋಣ, ರಘೂನ್ನ ನಮ್ಮಅಪ್ಪ-ಅಮ್ಮನ ಬಳಿ ಬಿಟ್ಟು ಹೋಗೋಣ.” ಬೆಳಗ್ಗೆ ನಾನು ಸ್ನಾನ ಮಾಡಿ, ಕೆಲಸಕ್ಕೆ ಹೊರಡುವ ಮೊದಲು ಬಹಳ ಖುಷಿಯಿಂದ ಆಕೆ ಆ ವಿಷಯ ಹೇಳಿದಳು. ಆಕೆಯ ಉತ್ಸಾಹಕ್ಕೆ ಕಾರಣ ತಿಳಿದುಕೊಳ್ಳಲಾಗಲಿಲ್ಲ, ಅದಕ್ಕೆ ಆಶ್ಚರ್ಯಗೊಂಡೆನು.

********

ಉತ್ತರ ಭಾರತದ ಜನವರಿ ಚಳಿ ಅಲಹಾಬಾದಿನಲ್ಲಿ ಜೋರಾಗಿಯೇ ಇತ್ತು. ನಾವು ಮಧ್ಯಾಹ್ನ ಬಸ್ ಇಳಿಯುವ ವೇಳೆಗೆ, ಮರುದಿನ ಬೆಳಗ್ಗೆ ಮಂಜುಗಟ್ಟುವ ಆ ಗಂಗೆಯಲ್ಲಿ ಮುಳುಗೇಳಬೇಕೆಂಬುದನ್ನು ನೆನೆಸಿಕೊಂಡೇ ನಾನು ನಡುಗಿದೆ. ಅಮ್ಮನಿಗೆ ಬಹಳ ಸಂತೋಷವಾದಂತೆನಿಸುತ್ತಿದೆ. ಅಲಹಾಬಾದಿಗೆ ಕರೆದುಕೊಂಡು ಬಂದುದಕ್ಕೆ ಭಾರತಿಯನ್ನು, ನನ್ನನ್ನೂ ಹೊಗಳುತ್ತಿದ್ದಾಳೆ. ನಾವು ನಿಧಾನವಾಗಿ ತ್ರಿವೇಣಿ ಸಂಗಮಕ್ಕೆ ಹೊರಟೆವು. ಲಗ್ಗೇಜನ್ನು ನಮ್ಮ ಬಳಿಯೇ ಇಟ್ಟುಕೊಂಡು ಅಲ್ಲಿಯೇ ಕಳೆಯಲು ನಿರ್ಧರಿಸಿದೆವು. ಅದರಿಂದ ಹಣ ಉಳಿತಾಯವಾಗುತ್ತದೆ.

ಅರೆನಗ್ನ ಸಾಧುಗಳು ಆ ಪ್ರದೇಶವನ್ನು ನಿಜವಾಗಿಯೂ ಆಕ್ರಮಿಸಿದ್ದಾರೆ; ಬಹುತೇಕರು ಸಂಗಮದ ತೀರದಲ್ಲಿ ಮೈ ಚಾಚಿ ಮಲಗಿದ್ದಾರೆ. ವಿಶಾಲವಾದ ಆ ತೀರ ವಿಭಿನ್ನ ಸಾಧುಗಳಿಂದ ತುಂಬಿಹೋಗಿದೆ; ಅವರು ಗಾಂಜಾ ಸೇವನೆಯಲ್ಲಿ ಮುಳುಗಿದ್ದಾರೆ; ಅವರ ಕಾಮವಾಂಛೆಯ ಕಣ್ಣುಗಳು ಕನ್ನಿಕೆಯರಿಗಾಗಿ ಹುಡುಕಾಡುತ್ತಿವೆ. ದೇಹಬಾಧೆ ತೀರಿಸಿಕೊಳ್ಳಲು, ತೇವದ ಬಟ್ಟೆ ಬದಲಾಯಿಸಲು ತಕ್ಕಜಾಗವನ್ನು ಹುಡುಕುತ್ತಿದ್ದ ಹೆಂಗಸರ ಮೇಲೆ ಓರೆಗಣ್ಣಿನಿಂದ ದೃಷ್ಟಿ ಹಾಯಿಸುತ್ತಿದ್ದಾರೆ. ಮತ್ತೆ ಕೆಲವರ ದೃಷ್ಟಿ ಚಿಕ್ಕಹುಡುಗರ ಮೇಲೆ, ಯುವಕರ ಮೇಲೆ ಆಸಕ್ತಿ ತೋರುತ್ತಿವೆ. ಸುಂದರವಾದ ಹುಡುಗ ಕಂಡರೆ ತಮ್ಮ ವಾಂಛೆಪೂರಿತ ಕಾಮುಕತೆಯನ್ನು ಮುಚ್ಚಿಡಲು ಪ್ರಯತ್ನಿಸದೆ ನೋಡುತ್ತಲೇಇದ್ದಾರೆ. ಆ ನಿರ್ಲಜ್ಜ, ನೀಚ ನಡವಳಿಕೆಯಿಂದ ಅವರ ಕುರಿತು ನನಗೆ ಅಸಹ್ಯವಾಗುತ್ತಿದೆ.

ನಮ್ಮಂತಹ ದುರುದೃಷ್ಟ ಜೀವಿಗಳಿಗಾಗಿ ಒಂದು ಜನ ಹಿತೈಷಾ ಸಂಸ್ಥೆ ನಿರ್ಮಿಸಿದ ಒಂದು ದೊಡ್ಡ ಷೆಡ್ ಅಲ್ಲಿ ಕಾಣಿಸಿತು. ನಾಲ್ಕು ರುಪಾಯಿ ನೆಪಮಾತ್ರದ ಬಾಡಿಗೆ ಸಲ್ಲಿಸಿ ನಾವು ಒಳಗೆ ಪ್ರವೇಶ ಗಿಟ್ಟಿಸಿದೆವು. ಊಟ ಉಚಿತ ಎಂದು ಹೇಳಿದರು.

ಹಾಗೆ ನಾವು ವಿಶ್ರಾಂತಿ ಮಂದಿರದಲ್ಲಿ, ಸ್ವಲ್ಪಜಾಗದಲ್ಲಿ ವಸತಿ ಸಿಕ್ಕ ಮೇಲೆ, ತಂದಿದ್ದ ಚಾಪೆಯನ್ನು ಹಾಸಿ ನಾನು, ಭಾರತಿ, ಅಮ್ಮ ಮಲಗಿದೆವು. ಕಿಕ್ಕಿರಿದಿದ್ದ ಗುಡಾರದಲ್ಲಿ ಬೆವರಿನಿಂದ ತೊಪ್ಪೆಯಾಗಿದ್ದ ದೇಹಗಳಿಂದ ಬರುವ ವಾಸನೆಯಿಂದ ಹೊಟ್ಟೆಯಲ್ಲಿ ತೊಳೆಸಿದಂತಾಗಿ, ನನಗೆ ನಿದ್ದೆ ಹತ್ತಲಿಲ್ಲ. ಮರುದಿನ ಪವಿತ್ರ ಸಂಗಮಸ್ನಾನದ ನೆನಪಿನಲ್ಲಿ ಪುಳಕಿತಳಾದ ಅಮ್ಮ ಪ್ರಶಾಂತವಾಗಿ ನಿದ್ದೆ ಮಾಡಿದಳು; ಆ ಸ್ನಾನ ತನ್ನ ಪಾಪಗಳನ್ನು ತೊಳೆದು, ಮುಂದಿನ ಜೀವನದಲ್ಲಿ ಸುಖಜೀವನವನ್ನು ಪ್ರಸಾದಿಸುತ್ತದೆಯೆಂಬುದು ಅವಳ ನಂಬಿಕೆ. ಕಪ್ಪಗಿನ ಕತ್ತಲನ್ನು ಸೀಳಿಕೊಂಡು ಬರುವ ಸೂರ್ಯೋದಯಕ್ಕಾಗಿ ಎದುರುನೋಡುತ್ತ, ನಾನು ಹೊರಳಾಡುತ್ತ ಕಳೆದೆ. ಬೆಳಿಗ್ಗೆ ಗಂಗೆಯಲ್ಲಿ ಮುಳುಗಿ, ಮತ್ತೆ ಮನೆಗೆ ಪ್ರಯಾಣ ಬೆಳೆಸಬೇಕೆಂದು ನನ್ನ ಆತುರ, ಈಗ ನನಗೆ ನಮ್ಮ ಮನೆ ಒಂದು ಇಂದ್ರಭವನವೆನಿಸಿತು.

ಎರಡು ಗಂಟೆ ನಂತರ, ನಿದ್ದೆ ಹತ್ತುವ ವೇಳೆಗೆ ಯಾರೋ ನನ್ನ ಭುಜವನ್ನು ಹಿಡಿದು ಎಳೆದಂತಾಯಿತು. ಎಲ್ಲ ಕತ್ತಲುಮಯ. ನನಗೇನೂ ಕಾಣಿಸುತ್ತಿಲ್ಲ. ಅದನ್ನು ಲೆಕ್ಕಿಸದೆ, ನಾನು ನಿದ್ದೆ ಮಾಡಲು ಪ್ರಯತ್ನಿಸಿದೆ. ಆದರೆ, ಆ ಎಳೆತ ನಿಲ್ಲಲಿಲ್ಲ. ಕೂಡಲೇ ತಾನು ಏನೋ ಮಾತನಾಡಬೇಕೆಂದು ಭಾರತಿ ಪಿಸುಗುಟ್ಟಿದಳು. ನನ್ನನ್ನು ಎಬ್ಬಿಸಿ, ನನ್ನ ಕೈ ಹಿಡಿದುಕೊಂಡು ಹೊರಗೆ ಕರೆದೊಯ್ದಳು. ಹೊರಗೆ ಆಕಾಶ ನಿರ್ಮಲವಾಗಿದೆ. ಹೊರಗೆ ಬೆಳದಿಂಗಳ ಕಾಂತಿಯಲ್ಲಿ, ಬೆಳಗಿನವರೆಗೆ ಕಾದು ನೋಡಲಾರದಂತಹ ಅವಸರದ ವಿಷಯವೇನೆಂದು ತಿಳಿಯದೆ ಆಶ್ಚರ್ಯದಿಂದ ಆಕೆಯತ್ತ ನೋಡಿದೆನು.

“ನಾವು ಕೂಡಲೇ ರೇವಾರಿಗೆ ಹೊರಟುಹೋಗಬೇಕು. ಈ ಚಳಿಗೆ ನಾನು ಇಲ್ಲಿ ಇರಲಾರೆ. ನನಗೆ ತುಂಬಾ ಆಯಾಸವಾಗಿದೆ. ಜ್ವರ ಬರುವಂತಿದೆ. ಆದಷ್ಟು ಬೇಗ ನಾವು ಮನೆಗೆ ಹೊರಟುಹೋಗಬೇಕು”ಆತುರಾತುರವಾಗಿ ನನಗೆ ಮಾತ್ರ ಕೇಳಿಸುವಂತೆ ಹೇಳಿದಳು ಭಾರತಿ.

“ಆದರೆ, ಹೇಗೆ? ಬೆಳಗಿನವರೆಗೂ ತಡೆದರೆ ಏನಾಗುತ್ತದೆ? ನದಿಯಲ್ಲಿ ಸ್ನಾನ ಮಾಡಲು ನಿನಗಿಷ್ಟವಿಲ್ಲದಿದ್ದರೆ ಬೇಡ ಬಿಡು, ಕೊರೆಯುವ ನೀರಿನಲ್ಲಿ ಮುಳುಗಲು ನನಗೂ ಧೈರ್ಯ ಸಾಲುತ್ತಿಲ್ಲ. ಆದರೆ ಅಮ್ಮನ ಬಯಕೆ ತೀರಿಸಿಕೊಳ್ಳಲು ಬಿಡು. ರೇವಾರಿಯಿಂದ ಇಷ್ಟುದೂರ ನಾವು ಬಂದಿರುವುದು ಅದಕ್ಕೇ ಅಲ್ಲವಾ?” ಎಂದೆ ನಾನು, ಅತಿದಾರುಣ ಪ್ರಸ್ತಾಪದ ತಲ್ಲಣವನ್ನು ತೋರ್ಪಡಿಸಿಕೊಳ್ಳದೆ.

“ನಿಜ, ನಿಮ್ಮ ಅಮ್ಮನನ್ನು ಕರೆದುಕೊಂಡು ಹೊರಟುಹೋಗೋಣವೆಂದು ನಾನು ಹೇಳುತ್ತಿಲ್ಲ. ತನಗಿಷ್ಟವಿರುವಷ್ಟು ದಿನ ಆಕೆ ಇಲ್ಲಿ ಇರಬಹುದು. ಆಕೆಗೆ ಹೇಳದೆ ನಾವು ಹೊರಟುಹೋಗೋಣ. ಆಕೆಗೀಗ ನಿದ್ರಾ ಭಂಗ ಮಾಡುವುದು ಒಳ್ಳೆಯದಲ್ಲ”ಆಕೆಯ ಮಾತುಗಳು ರಾತ್ರಿಯ ಕೊರೆಯುವ ಚಳಿಗಾಳಿಗಿಂತಲೂ ತಣ್ಣಗಿದೆ.

“ಆದರೆ, ಆಕೆಯನ್ನು ಯಾರು ನೋಡಿಕೊಳ್ಳುತ್ತಾರೆ? ಮತ್ತೆ ಬಂದಾಗ, ಆಕೆಯನ್ನು ನಾನು ಎಲ್ಲಿಅಂತ ಹುಡುಕುವುದು? ಆಕೆಗೆ ಇಲ್ಲಿ ಇರಲು ಕಷ್ಟವಾಗುತ್ತದೆ.” ಆಕೆಯ ಮಾತಿನ ಉದ್ದೇಶ ನನಗೆ ಅರ್ಥವಾಯಿತಾದರೂ, ಈ ಮೂರ್ಖ ಪ್ರಶ್ನೆ ಹಾಕದಿರಲಾಗಲಿಲ್ಲ.

“ಆಕೆಯನ್ನು ಕರೆದುಕೊಂಡು ಹೋಗಲು ನೀನು ಮತ್ತೆ ಬರುವ ಅಗತ್ಯವಿಲ್ಲ. ಆಕೆ ಇಲ್ಲಿಯೇ ಇರಲಿ, ಇಂತಹವರಿಗೆ ಅದ್ಭುತವಾಗಿ ಸೇವೆ ಮಾಡುವ ದಯಾಪರ ಸಂಸ್ಥೆಗಳು ಇಲ್ಲಿ ಸಾಕಷ್ಟಿವೆ. ಆಕೆಯೂ ತನ್ನನ್ನು ಸಂಭಾಳಿಸುವವರನ್ನು ಹುಡುಕಿಕೊಳ್ಳುತ್ತಾಳೆ. ಅವಳು ಇಲ್ಲಿಯೇ ಉಳಿದುಕೊಳ್ಳಬಹುದು ತನ್ನ..” ಭಾರತಿ ಒಮ್ಮೆಗೇ ಮಾತು ನಿಲ್ಲಿಸಿದಳು. ಮಾತಿನಲ್ಲಿ ತನ್ನ ಅಭಿಪ್ರಾಯ ಪೂರ್ತಿ ವ್ಯಕ್ತಪಡಿಸುವ ಅಗತ್ಯವಿಲ್ಲ, ಆಕೆಯ ಅಭಿಪ್ರಾಯವೇನೋ ನನಗೆ ಸುಲಭವಾಗಿಯೇ ಅರ್ಥವಾಯಿತು. “ನಮ್ಮ ಸಾಮಾನುಗಳನ್ನು ಗಂಟುಕಟ್ಟಿ ಕೂಡಲೇ ಹೊರಡೋಣ. ಚಾಪೆ, ರಜಾಯಿ ಆಕೆಗೇ ಬಿಟ್ಟು ಹೋಗೋಣ. ನಮಗೆ ತಂದಿರುವ ಊಟದ ಪೊಟ್ಟಣಗಳನ್ನು ಕೂಡ ಇಲ್ಲಿಯೇ ಬಿಡೋಣ” ಸಾಧ್ಯವಾದಷ್ಟು ಭಾರತಿ ತನ್ನ ಉದಾರತೆ ಮತ್ತು ಹೃದಯ ವೈಶಾಲ್ಯವನ್ನು ಮೆರೆಯಲು ಪ್ರಯತ್ನಿಸಿದಳು.

ಆತುರಾತುರವಾಗಿ ನಾವು ಆ ವಿಶಾಲವಾದ ಮರಳು ರಾಶಿಯ ಭೂಭಾಗವನ್ನು ಹಾದು, ಬಸ್ ಸ್ಟ್ಯಾಂಡ್ ತಲುಪಿದೆವು. ಅಮ್ಮ ಮೋತಿಬಾಯಿಯನ್ನು ದೇವರು ಮತ್ತು ದಯಾಳು ಗಂಗಾಮಾತೆಯ ರಕ್ಷಣೆಯಲ್ಲಿ ಬಿಟ್ಟು ಬಂದೆವು. ಬೆಳದಿಂಗಳ ಬೆಳಕಿನಲ್ಲಿ ನಾನು ಭಾರತಿಯ ಮುಖ ನೋಡಿದೆ. ನನಗೆ ಆಕೆಯ ಮುಖದಲ್ಲಿ ಸಂಪೂರ್ಣ ಬಿಡುಗಡೆಯ ಸಂತಸದ ಹೊಳಪು ಎದ್ದು ಕಾಣಿಸಿತು.

**********************

ಆರ್.ಪಿ. ಸಿಸೋಡಿಯಾ:
ಆರ್.ಪಿ. ಸಿಸೋಡಿಯಾ 1968ರಲ್ಲಿ ರಾಜಸ್ತಾನದ ಉದಯಪುರದಲ್ಲಿ ಜನಿಸಿದರು.
1991ರಲ್ಲಿ ಆಂಧ್ರ ಪ್ರದೇಶದ ಐಎಎಸ್ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭ.
ಇವರ ಹಿಂದಿ ಮತ್ತು ಇಂಗ್ಲಿಷ್ ಕವನ ಸಂಕಲನಗಳು, ಇಂಗ್ಲಿಷ್ ಸಣ್ಣ ಕಥೆಗಳ ಸಂಕಲನ ಪ್ರಕಟಣೆಗೊಂಡಿವೆ.
ಅವರ ಕಥೆಗಳಲ್ಲಿ ಜೀವನದ ವಿಭಿನ್ನ ದೃಷ್ಟಿಕೋನಗಳು ಚಿತ್ರಣವಾಗಿವೆ.
ಪ್ರಸ್ತುತ ಈ ಅನುವಾದಿತ ಇಂಗ್ಲಿಷ್ ಮೂಲ ಕಥೆ ‘ದಿ ಲಾಸ್ಟ್ ಸಾಲ್ವೇಶನ್’ ಹಲವು ವಿಶ್ವವಿದ್ಯಾಲಯದ ಪಠ್ಯ ಪುಸ್ತಕದ ಪಠ್ಯದಲ್ಲಿ ಸೇರಿದೆ.