ಇವರ ಕಥೆಯನ್ನು ಕೇಳಿಸಿಕೊಂಡ ನಾನು ಅವರಿಗೆ ಬೇಕಾಗಿ ನಕ್ಕು ಸುಮ್ಮನಾಗುತ್ತೇನೆ. ಎಲ್ಲಿಂದ ಎಲ್ಲಿಗೋ ಹೊರಟಿದ್ದ ಉಕ್ಕಿನ ನೌಕೆಯೊಂದು ಯಾರದೋ ಹುಚ್ಚು ಮೋಹದಿಂದಾಗಿ ಇಲ್ಲಿ ತುಕ್ಕು ಹಿಡಿದು ಸಾಯಬೇಕಾಗಿ ಬಂದಿರುವುದು ಇವರಿಗೆ ನಗುವಿನ ವಿಷಯ. ಆದರೆ ಒಂದು ಮೋಹಕ್ಕೆ ಸಿಲುಕಿ ಘಾಸಿಗೊಂಡ ನಡು ವಯಸ್ಕನಾದ ನಾನು ಹಳೆಯ ಜನ್ಮದ ಎಲ್ಲವನ್ನೂ ಕಳಚಿಕೊಂಡು ಈ ದ್ವೀಪವಾಸಿಯಾಗಿ ಈ ದ್ವೀಪದ ಮೂಗಿನಂತಹ ಈ ಮೋಹಕ ತುದಿಯಲ್ಲಿ ಕೊನೆಯಾಗಬೇಕೆಂದುಕೊಂಡಿರುವೆ ಎಂಬುದು ನಿಮಗೇನು ಗೊತ್ತು ಎಂದು ಮನಸಿನಲ್ಲೇ ಗೊಣಗುತ್ತೇನೆ.
ಅಬ್ದುಲ್ ರಶೀದ್ ಬರೆದ ಹೊಸ ಕಥೆ ನಿಮ್ಮ ಈ ಭಾನುವಾರದ ಓದಿಗೆ

ಅಲ್ಲಿ ಯಾರೋ ಕಟುಕನೊಬ್ಬ
ಕೈ ಎತ್ತಿ ಆರ್ತನಾಗುತ್ತಿದ್ದಾನೆ.
ಇಲ್ಲಿ ಆಕಾಶವು ಜಗ್ಗನೆ ಮಿನುಗುತ್ತಿದೆ.
ಅಲ್ಲಿ ನಿನಗೇನೂ ಆಗುತ್ತಿಲ್ಲ
ಯಾಕೆಂದರೆ ನಾನು ಅಲ್ಲೇ ಬಂದಿರುವೆ.
(ನಾಗಶ್ರೀ ಶ್ರೀರಕ್ಷ : ನಕ್ಷತ್ರ ಕವಿತೆಗಳು)

ಮುಖ ಸಿಂಡರಿಸಿಕೊಂಡಿರುವ ಸುಂದರಿಯ ಹಾಗಿರುವ ಈ ಮೋಹಕ ದ್ವೀಪದ ಮೂಗಿನಂತಹ ಈ ತುದಿಯಲ್ಲಿ ಕಡಲು ಯಾವಾಗಲೂ ಅಬ್ಬರಿಸುತ್ತಲೇ ಇರುತ್ತದೆ. ಈ ಅಬ್ಬರಕ್ಕೆ ವರುಷಾನು ವರುಷಗಳಿಂದ ತತ್ತರಿಸುತ್ತಲೇ ಮಲಗಿರುವ ತುಕ್ಕು ಹಿಡಿದು ಹಾಳಾದ ಸರಕಿನ ಹಡಗು. ಎಲ್ಲಿಂದಲೋ ಎಲ್ಲಿಗೋ ಹೊರಟಿದ್ದ ಈ ಸರಕು ಹಡಗು ಇರುಳು ಲಂಗರು ಹಾಕಿದ ಹೊತ್ತಲ್ಲಿ ಬಿರುಗಾಳಿಗೆ ಸಿಲುಕಿ, ಹಾದಿ ತಪ್ಪಿ ಈ ತೀರಕ್ಕೆ ಡಿಕ್ಕಿ ಹೊಡೆದು ಮಗುಚಿಕೊಂಡು ಅಬ್ಬೇಪಾರಿಯಂತೆ ವರುಷಗಳಿಂದ ಹಾಗೇ ಮಲಗಿಕೊಂಡಿದೆ. ಕಡಲ ಉಪ್ಪುಗಾಳಿಗೆ ಅದರ ಮೈಬಣ್ಣ ಕಡಲ ಬಣ್ಣಗಳೊಂದಿಗೆ ಬೆರೆತು ಶತಮಾನಗಳಿಂದ ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಇಲ್ಲೇ ವೃದ್ಧಾಪ್ಯದಿಂದ ತೀರಿ ಹೋಗಿರುವ ಬೃಹತ್ ಪುರಾತನ ಮತ್ಸ್ಯವೊಂದರಂತೆ ಅದು ಕಾಣಿಸುತ್ತದೆ.

ಕಪ್ತಾನನೊಬ್ಬನ ತಪ್ಪಿನಿಂದಾಗಿ ಇನ್ನು ಆಯುಷ್ಯಪೂರ್ತಿ ಇಲ್ಲೇ ಸಿಲುಕಿಕೊಂಡಿರಬೇಕಾದ ಈ ಉಕ್ಕಿನ ನೌಕೆಯ ಕುರಿತು ಈ ದ್ವೀಪವಾಸಿಗಳ ಬಾಯಲ್ಲಿ ಹಲವು ಕಥೆಗಳು ಹರಿದಾಡುತ್ತವೆ. ಅದರಲ್ಲಿ ಒಂದು ಕಥೆಯಂತೂ ಬಹಳ ರೋಮಾಂಚನಕಾರಿಯಾಗಿದೆ. ಹೊಸತಾಗಿ ಮದುವೆಯಾಗಿದ್ದ ಈ ದ್ವೀಪವಾಸಿ ಕಪ್ತಾನ ಎಲ್ಲಿಂದ ಎಲ್ಲಿಗೋ ಸಾಗರದಲ್ಲಿ ಹೊರಟಿದ್ದ ತನ್ನ ಸರಕು ಹಡಗನ್ನು ಒಂಚೂರು ದಾರಿ ಬದಲಿಸಿ ಈ ದ್ವೀಪದ ಬಳಿಗೆ ತಂದನಂತೆ. ಒಂದಿರುಳನ್ನಾದರೂ ತನ್ನ ಮಡದಿಯ ಬಳಿ ಕಳೆಯುವ ಅವನ ಹಾಳು ಬಯಕೆಯಿಂದಾಗಿ ಈ ಹಡಗು ಜೀವಮಾನ ಪೂರ್ತಿ ಇಲ್ಲಿ ಕಳೆಯುವಂತಾಯಿತು ಎಂದು ಅವರು ಆಡಿಕೊಳ್ಳುತ್ತಾರೆ.

ಕೋಟ್ಯಾಂತರ ಮೌಲ್ಯದ ಸಿಮೆಂಟು ಚೀಲಗಳನ್ನು ತುಂಬಿಕೊಂಡಿದ್ದ ಈ ಹಡಗು ಕಡಲಿಗೆ ಮಗುಚಿಕೊಂಡು ಆ ನಷ್ಟ ತಡೆಯಲಾರದೆ ಮುಂಬೈಯಲ್ಲಿರುವ ಅದರ ಮಾಲೀಕನೂ ದೇಶಾಂತರ ಪರಾರಿಯಾಗಿ, ಈ ಅವಮಾನ ಸಹಿಸಲಾರದೆ ಆ ಪ್ರಣಯ ಸಾಹಸಿ ಕಪ್ತಾನನು ಜೇಲಿಗೆ ಹೋಗುವ ಹಾದಿಯಲ್ಲಿ ಕೊಚ್ಚಿ ನಗರದಲ್ಲಿ ತನ್ನನ್ನು ತಾನು ಕೊಂದುಕೊಂಡನೆಂದೂ ಅವನ ಹೆಂಡತಿಯಾದವಳು ಇದೇ ದ್ವೀಪದಲ್ಲಿ ಏಕಾಂಗಿಯಾಗಿ ಆಡು ಸಾಕುತ್ತ, ಅವರಿವರಿಗೆ ಅಡುಗೆ ಮಾಡಿ ಬಡಿಸುತ್ತ ಬದುಕುತ್ತಿರುವಳೆಂದೂ ಕಥೆ ಹೇಳುತ್ತಾರೆ. ಪ್ರೇಮ ದಾಂಪತ್ಯ ಮತ್ತು ಪ್ರಣಯಗಳ ಕುರಿತು ಅಷ್ಟೇನೂ ಭಾವಾಸಕ್ತರಲ್ಲದ ಈ ದ್ವೀಪವಾಸಿಗಳಿಗೆ ಆ ಕಪ್ತಾನನದು ಹುಚ್ಚುತನವಾಗಿಯೂ, ಅವನ ಹೆಂಡತಿಯದು ವಿಧಿಲಿಖಿತವಾಗಿಯೂ ಎಲ್ಲಕ್ಕಿಂತ ಹೆಚ್ಚಾಗಿ ಆ ಸಿಮೆಂಟು ಹಡಗಿನದು ದುರಾದೃಷ್ಟವಾಗಿಯೂ ಕಾಣಿಸುತ್ತದೆ.

ಇವರ ಕಥೆಯನ್ನು ಕೇಳಿಸಿಕೊಂಡ ನಾನು ಅವರಿಗೆ ಬೇಕಾಗಿ ನಕ್ಕು ಸುಮ್ಮನಾಗುತ್ತೇನೆ. ಎಲ್ಲಿಂದ ಎಲ್ಲಿಗೋ ಹೊರಟಿದ್ದ ಉಕ್ಕಿನ ನೌಕೆಯೊಂದು ಯಾರದೋ ಹುಚ್ಚು ಮೋಹದಿಂದಾಗಿ ಇಲ್ಲಿ ತುಕ್ಕು ಹಿಡಿದು ಸಾಯಬೇಕಾಗಿ ಬಂದಿರುವುದು ಇವರಿಗೆ ನಗುವಿನ ವಿಷಯ. ಆದರೆ ಒಂದು ಮೋಹಕ್ಕೆ ಸಿಲುಕಿ ಘಾಸಿಗೊಂಡ ನಡು ವಯಸ್ಕನಾದ ನಾನು ಹಳೆಯ ಜನ್ಮದ ಎಲ್ಲವನ್ನೂ ಕಳಚಿಕೊಂಡು ಈ ದ್ವೀಪವಾಸಿಯಾಗಿ ಈ ದ್ವೀಪದ ಮೂಗಿನಂತಹ ಈ ಮೋಹಕ ತುದಿಯಲ್ಲಿ ಕೊನೆಯಾಗಬೇಕೆಂದುಕೊಂಡಿರುವೆ ಎಂಬುದು ನಿಮಗೇನು ಗೊತ್ತು ಎಂದು ಮನಸಿನಲ್ಲೇ ಗೊಣಗುತ್ತೇನೆ.

ಆ ಕಪ್ತಾನನ ಮೋಹದ ಮಡದಿಯ ಮೇಲಿನ ಹುಚ್ಚು ಹಂಬಲ ಮತ್ತು ಅಷ್ಟೇನೂ ಸಹಜವಲ್ಲದ ನನ್ನ ನಡುವಯಸ್ಸಿನ ದುರಂತ ಅನುರಾಗ. ಎರಡೂ ಸಂಭವಿಸಿದ ದೇಶ ಕಾಲ ಮತ್ತು ವಿಧಿವಿಹಿತಗಳು ಬೇರೆಬೇರೆಯಾದರೂ ಅವು ತಂದೊಡ್ಡಿದ ಅವಾಂತರಗಳು ಕಣ್ಣಿಗೆ ಕುಕ್ಕುವಂತಿವೆ. ನಾನೋ ಎಲ್ಲವನ್ನೂ ಕಳಚಿಕೊಂಡು ಕೊನೆಗಾಲವನ್ನು ಈ ಮೋಹಕ ತುದಿಯಲ್ಲಿ ಲಂಗರು ಹಾಕಿ ಪರಿಸಮಾಪ್ತಿಗೊಳ್ಳಬೇಕೆಂದು ಇಲ್ಲಿಗೆ ಬಂದರೆ ಇಲ್ಲಿ ಹಾಳಾಗಿ ಬಿದ್ದಿರುವ ಈ ಹಡಗಿನ ಅವಸ್ಥೆ ನನ್ನ ಅಣಕಿಸುವಂತಿದೆ ಮತ್ತು ದ್ವೀಪದ ಮೂಗಿನ ತುದಿಯ ಈ ಅಸಾಧಾರಣ ಸೌಂದರ್ಯ ಮತ್ತೆ ಹಲವು ಮೋಹಗಳಲ್ಲಿ ಮುಳುಗಿಸುವಂತೆ ತೋರುತ್ತಿದೆ. ನೆಲವೂ, ಕಡಲೂ ಐಕ್ಯಗೊಳ್ಳುವ ದ್ವೀಪದ ತುದಿಯ ಬಿಳಿಯ ಮರಳು ಹಗಲಿಡೀ ಹೊಳೆಯುತ್ತಿರುತ್ತದೆ. ರಾತ್ರಿ ನಕ್ಷತ್ರಗಳ ಬೆಳಕಿನಲ್ಲಿ ತಾನೂ ಮಿನುಗುತ್ತಿರುತ್ತದೆ.

ಹುಣ್ಣಿಮೆಯ ಚಂದ್ರಿಕೆಯ ಇರುಳು ಈ ಬಿಳಿಯ ಮರಳಿನ ಮೇಲೆ ಚಾಚಿಕೊಂಡಿರುವ ಒಂಟಿ ತೆಂಗಿನ ಮರದ ನೆರಳಲ್ಲಿ ಕುಳಿತು ನಾನು ಕಡಲನ್ನು ನೋಡುತ್ತೇನೆ. ಪುರಾತನ ಸಂಕಟವೊಂದನ್ನು ಹೊತ್ತುಕೊಂಡಿರುವ ಆತ್ಮದಂತೆ ಬೆಳದಿಂಗಳಿನಲ್ಲಿ ನಿಟ್ಟುಸಿರಿಡುತ್ತಿರುವ ತುಕ್ಕು ಹಿಡಿದ ಸರಕು ಹಡಗಿನ ಮೇಲೆ ಲಾಸ್ಯವಾಡುತ್ತಿರುವ ಕಡಲಿನ ಬೆಳ್ಳಿ ಅಲೆಗಳು. ಕಣ್ಣು ಕಾಣಿಸುವಷ್ಟೂ ದೂರ ಬೆಳ್ಳನೆಯ ಬೆಳಕಲ್ಲಿ ಅನುರಾಗವೇರಿದ ಮೋಹಿನಿಯಂತೆ ಸೆರಗು ಕಿತ್ತೆಸೆದು ಮಲಗಿರುವ ಕಡಲು. ಬೆಳದಿಂಗಳಲ್ಲಿ ಕೆಲವೊಮ್ಮೆ ಚಿಮ್ಮುವ ಹಾರುಮೀನುಗಳು. ಆ ಬೆಳಕನ್ನೂ ಭೇದಿಸಿ ಹಾಲಿನಂತಹ ಆಕಾಶದಲ್ಲಿ ಹೊಳೆಯುತ್ತಿರುವ ನಕ್ಷತ್ರರಾಜ್ಯ. ಆಕಾಶದಲ್ಲಿ ನಕ್ಷತ್ರಗಳು ಒಂಟಿ ಅಂದುಕೊಂಡಿದ್ದ ನನಗೇ ಅಚ್ಚರಿಯಾಗುವಂತೆ ಅವುಗಳ ನಡುವಿನ ಸಾಂಗತ್ಯ ಗೋಚರಿಸುತ್ತವೆ. ಒಂದೇ ರೇಖೆಯಲ್ಲಿ, ಒಂದೇ ಒಂದು ವಿನ್ಯಾಸದಲ್ಲಿ ಅಡಗಿಕೊಂಡು ಆದರೆ ಒಂದಷ್ಟು ಅಂತರವನ್ನೂ ಕಾದುಕೊಂಡು ಕೋಟ್ಯಾನುಶತಕೋಟಿ ವರ್ಷಗಳಿಂದ ಹಾಗೆಯೇ ಮಿನುಗುತ್ತಿರುವ ಅವುಗಳ ಗೆಳೆತನ. ಒಂದೇ ಒಂದು ಕ್ಷೀರಪಥದಲ್ಲಿ ಒಟ್ಟಾಗಿ ಬಾಳುತ್ತಿರುವ ಸಹಸ್ರ ಸಹಸ್ರ ತಾರೆಗಳು. ಹಾಗೆ ನೋಡಿದರೆ ತಾರೆಗಳೂ ಮನುಷ್ಯನಷ್ಟು ಒಂಟಿಯಾಗಿರಲಿಕ್ಕಿಲ್ಲ ಎಂದು ಸ್ವಮರುಕದಲ್ಲಿ ಮುಳುಗುತ್ತೇನೆ.

ದೂರದಲ್ಲಿ ಕಡಲ ಹಾಲುಬೆಳಕಿನಲ್ಲಿ ಒಟ್ಟಾಗಿ ಈಸುತ್ತಿರುವ ಡಾಲ್ಫಿನ್ ಮೀನುಗಳ ಮೈಯ್ಯ ಮಿಂಚು ಸಳಕ್ಕನೆ ಹೊಳೆದು ಮರೆಯಾಗುತ್ತವೆ. ಅವುಗಳು ಕುಟುಂಬ ಸಮೇತ ಈಸುತ್ತ ಬೆಳದಿಂಗಳನ್ನು ಸವಿಯುತ್ತಿರಬಹುದು ಎಂದು ಈರ್ಷ್ಯೆಯಾಗುತ್ತದೆ. ಮಗುವನ್ನು ತೆಕ್ಕೆಯಲ್ಲಿಟ್ಟುಕೊಂಡು ಈಸುತ್ತಿರಬಹುದಾದ ತಾಯಿ ಡಾಲ್ಫಿನ್, ತನ್ನದೇ ಕೀಚಲು ಭಾಷೆಯಲ್ಲಿ ಏನನ್ನೋ ಆದೇಶಿಸುತ್ತಿರುವ ತಂದೆ ಡಾಲ್ಪಿನ್ನಿನ ಸದ್ದು. ಇದೆಲ್ಲಾ ನಿಜವೋ ಅಥವಾ ನನ್ನದೇ ಮರಳೋ ಎಂದು ಆಕಾಶ ನೋಡುತ್ತೇನೆ. ಅಲ್ಲಾಡುವ ತೆಂಗಿನ ಗರಿಗಳ ಮೇಲೂ ಹೊಳೆಯುತ್ತಿರುವ ನಿಹಾರಿಕೆಗಳ ಬೆಳಕು. ಇಲ್ಲೇ ಈ ಮರಳಿನಲ್ಲೇ ಈ ತೆಂಗಿನ ನೆರಳಿನಲ್ಲೇ ಕೊನೆಯಾಗಬೇಕೆಂದು ಬಂದು ಕುಳಿತವನಿಗೆ ಬೇಡದ ಪುಳಕಗಳನ್ನು ತೋರಿಸುತ್ತಿರುವ ಮಾಯಾವಿ ಸೌಂದರ್ಯ ಮತ್ತು ಅಣಕಿಸುತ್ತಿರುವ ಈ ಹಾಳಾದ ಹಡಗು. ಈ ಹೊತ್ತಲ್ಲಿ ಅವಳು ಇಲ್ಲಿ ಇದ್ದಿದ್ದರೆ ಎಂಬ ಆಶೆಯಾಗುತ್ತದೆ. ಸಾಧಾರಣ ಬೆಳದಿಂಗಳು ಎಂದರೇ ಜೀವ ಹೋಗುವಷ್ಟು ಸಾಯುತ್ತಿದ್ದ ಅವಳ ಕಣ್ಣುಗಳು. ಅವಳು ಇದ್ದಿದ್ದರೆ ಈ ದೈವಿಕ ಬೆಳಕಲ್ಲಿ ಎಷ್ಟು ಹೊಳೆಯುತ್ತಿದ್ದಿರಬಹುದು ಎಂದು ಆಶೆಯಾಗುತ್ತದೆ. ಆಗದ ಹೋಗದ ವಿಷಯಗಳಿಗೆ ಹಾಗೆಲ್ಲ ಆಶೆ ಪಡಬಾರದು ಎಂದು ಮೈಯ್ಯನ್ನು ಜಿಗುಟಿಕೊಂಡು, ಮೈಗಂಟಿಕೊಂಡಿರುವ ಮರಳನ್ನು ಕೊಡವಿಕೊಂಡು ಎದ್ದು ನಿಲ್ಲುತ್ತೇನೆ.

ಎದೆಯೊಳಗೆ ಹಾಲಾಹಲವೊಂದು ಹರಿದಾಡಿದಂತಾಗುತ್ತದೆ. ಈ ದ್ವೀಪದ ಮೂಗಿನ ತುದಿಯಲ್ಲಿ ತೀರಿಹೋಗಬೇಕು ಎಂದುಕೊಂಡು ಬಂದರೆ ದೂರದಲ್ಲಿ ದಕ್ಷಿಣದ ತುದಿಯಲ್ಲಿ ನತ್ತಿನಂತೆ ಹೊಳೆಯುವ ನಕ್ಷತ್ರವೊಂದು ನಕ್ಕಂತಾಗುತ್ತದೆ. ಬಹುಶಃ ಅವಳೇ ಹೇಳುತ್ತಿದ್ದ ತ್ರಿಶಂಕು ನಕ್ಷತ್ರವಿರಬೇಕು ಇದು. ಅವಳು ಇದ್ದಿದ್ದರೆ ಇದೂ ನಿನ್ನ ಹಾಗೆಯೇ ತ್ರಿಶಂಕು ಎಂದು ಸಣ್ಣಗೆ ನಗುತ್ತಿದ್ದಳು. ತುಕ್ಕು ಹಿಡಿದಿರುವ ಈ ಹಳೆಯ ಹಡಗು ನಿನ್ನ ಹಾಗೆ ಕಾಣಿಸುತ್ತಿದೆಯಲ್ಲೋ ಹಾಳಾದವನೇ ಎಂದು ಹಂಗಿಸುತ್ತಿದ್ದಳು.

‘ಹಂಗಿಸಿಕೊಂಡಾದರೂ ನೀನು ಇರಬೇಕಿತ್ತು. ನಿನ್ನ ಹುಚ್ಚು ಹಿಡಿಸುವ ಮೋಹವಾದರೂ ನಡುವಯಸ್ಕನಾದ ನನ್ನನ್ನ ಬದುಕಿಸುತ್ತಿತ್ತು, ಹಾಳಾದವಳು ಹೋಗೇಬಿಟ್ಟೆಯಲ್ಲೇ’ ಎಂದು ಹಾಲು ಉಸುಕಿನಲ್ಲಿ ಪಾದಗಳ ಮುಳುಗಿಸುತ್ತಾ ನಡೆಯತೊಡಗುತ್ತೇನೆ.

*********

ಈ ದ್ವೀಪದ ಮೂಗ ತುದಿಯಿಂದಲೇ ಆರಂಭವಾಗಿರುವ ಹವಳದ ಗೋಡೆ ಅರ್ಧ ಚಂದ್ರಾಕೃತಿಯಲ್ಲಿ ಈ ದ್ವೀಪವನ್ನು ಮಣಿಹಾರದಂತೆ ಸುತ್ತಿಕೊಂಡಿದೆ . ಈ ಗೋಡೆಯ ನಡುವೆ ತುಂಬಿಕೊಂಡಿರುವ ನೀಲ ನೀಲ ಸ್ಫಟಿಕ ಸರೋವರ ಈ ದ್ವೀಪವನ್ನು ಕಡಲ ಭೋರ್ಗರೆತದಿಂದ ಕಾಪಾಡುತ್ತದೆ. ತಿಂಗಳಿಗೆರಡು ಬಾರಿ ಅಮವಾಸ್ಯೆ ಮತ್ತು ಹುಣ್ಣಿಮೆಯ ಹಗಲಿನಲ್ಲಿ ಒಂದೆರೆಡು ತಾಸು ಹೊತ್ತು ಈ ಸರೋವರ ಅಷ್ಟು ದೂರ ಬೆತ್ತಲಾಗಿ ಬರಿದಾಗುತ್ತದೆ. ಆಗ ನಾನೂ ಈ ಜುಬೇದಾಳ ಜೊತೆ ನೀರಿಗಿಳಿದು ಅಕ್ಟೋಪಸ್ ಬೇಟೆಗೆ ಹೊರಡುತ್ತೇನೆ. ತುಂಬ ಪಾಪದವಳ ಹಾಗೆ ತೋರುವ ಈ ಜುಬೇದಾ ಮಹಾ ಅಕ್ಟೋಪಸ್ ಬೇಟೆಗಾರ್ತಿ. ಭಯಂಕರ ಆಕ್ರಮಣಕಾರಿಯಂತೆ ತೋರುವ ಈ ಅಕ್ಟೋಪಸ್ ನಿಜದಲ್ಲಿ ಒಂದು ಪಾಪದ ಜೀವಿ. ಕಡಲ ನೀರು ಬರಿದಾದಾಗ ಕಲ್ಲಿನ ಪೊಟರೆಯೊಳಗೆ ಉಳಿದ ನೀರಲ್ಲಿ ತಾನು ಅಡಗಿಕೊಂಡಿರುವುದು ಗೊತ್ತಾಗಬಾರದೆಂದು ಪೊಟರೆಯ ಪ್ರವೇಶದ್ವಾರಕ್ಕೆ ಪುಟ್ಟ ಕಲ್ಲೊಂದನ್ನು ಎಳೆದು ಮುಚ್ಚಿಟ್ಟು ನೀರು ಮತ್ತೆ ಏರುವುದನ್ನೇ ಕಾಯುತ್ತಿರುತ್ತದೆ.

ಕೈಯಲ್ಲಿ ಕಬ್ಬಿಣದ ಎರಡು ಈಟಿಗಳನ್ನು ಹಿಡಿದು ಬೇಟೆಗೆ ಹೊರಟ ಜುಬೇದಾಳಿಗೆ ಅಕ್ಟೋಪಸ್ಸುಗಳ ಈ ಆಟ ವರುಷಗಳಿಂದ ಗೊತ್ತು. ಎಲ್ಲಿ ಪೊಟರೆಯ ಬಾಗಿಲು ಸಣ್ಣ ಕಲ್ಲೊಂದರಿಂದ ಮುಚ್ಚಲಾಗಿದೆಯೋ ಅಲ್ಲಿಗೆ ಈಟಿಯಿಂದ ಮೆಲ್ಲಗೆ ಮಮತೆಯಿಂದ ಚುಚ್ಚುತ್ತಾಳೆ. ಮೃದುಲ ಮಾಂಸದ ಅಕ್ಟೋಪಸ್ ಈಕೆಯ ಈಟಿಯ ಇರಿತಕ್ಕೆ ಒಮ್ಮೆ ಸಣ್ಣಗೆ ಅಲುಗಾಡುತ್ತದೆ.

‘ಸುಂದರನಾದ ಮಾರಾಯ ಇದೋ ಇಲ್ಲಿ ಅಡಗಿಕೊಂಡಿದೆ’ ಎಂದು ಆಕೆ ಬಲವಾಗಿ ಇರಿಯುತ್ತಾಳೆ.

‘ಸುಂದರನೇ ಯಾಕಾಗಬೇಕು ಸುಂದರಿಯೂ ಆಗಿರಬಹುದು’ ಎಂದು ತುಳುವಿನಲ್ಲಿ ಅಂದು ನೀರೊಳಗೆ ಬಗ್ಗಿ ನೋಡುತ್ತೇನೆ.

ಅದು ಸುಂದರನೋ ಸುಂದರಿಯೋ ಗೊತ್ತಾಗದ ಹಾಗೆ ಕಡಲ ನೀರಿನಲ್ಲಿ ನೇರಳೆ ಬಣ್ಣದ ಸಣ್ಣದೊಂದು ವ್ಯರ್ಥ ಕಾರ್ಮೋಡ ಸೃಷ್ಟಿಯಾಗುತ್ತದೆ. ಅಕ್ಟೋಪಸ್ಸಿನ ಕೊರಳಲ್ಲಿರುವ ನೇರಳೆ ಬಣ್ಣದ ಶಾಯಿ ತುಂಬಿಕೊಂಡಿರುವ ಆ ಚೀಲದಿಂದ ಹೊಮ್ಮಿದ ಶಾಯಿಯ ಬಣ್ಣವದು.

‘ಪ್ರಾಣ ಉಳಿಸಲು ಪಡೆದವನು ಅವುಗಳಿಗೆ ಕರುಣಿಸಿದ ಬಣ್ಣದ ಚೀಲ ಅದು’ ಎಂದು ಜುಬೇದಾ ನಗುತ್ತಾಳೆ.
‘ಪಡೆದವನ ಯಾವ ಬಣ್ಣದ ಚೀಲಗಳೂ ಈ ಪಾಪದ ಜೀವಿಯನ್ನು ನಿನ್ನ ಈಟಿಯಿಂದ ರಕ್ಷಿಸುವುದಿಲ್ಲವಲ್ಲವಾ ಜುಬೇದಾ’ ನಾನು ಮೆಲ್ಲಗೆ ಗೊಣಗುತ್ತೇನೆ.

ಜುಬೇದಾ ಇರಿತಕ್ಕೊಳಗಾದ ಅಕ್ಟೋಪಸ್ಸನ್ನು ಈಟಿಯ ತುದಿಯಿಂದ ಮೇಲಕ್ಕೆ ಎತ್ತುತ್ತಾಳೆ ಎತ್ತಿ ಅದರ ಕೊಡೆಯ ಬಟ್ಟೆಯಂತಿರುವ ತಲೆಯನ್ನು ಮಿಂಚಿನ ವೇಗದಲ್ಲಿ ಹಿಂದಕ್ಕೆ ಮಡಚುತ್ತಾಳೆ.ಅಕ್ಟೋಪಸ್ ವಿಧಿಯಿಲ್ಲದೆ ಸ್ತಬ್ದಗೊಳ್ಳುತ್ತದೆ.ಅದರ ಬಣ್ಣಗಳು ಮಂಕಾಗಿ ದೇಹ ನಿಸ್ತೇಜವಾಗುತ್ತದೆ. ಜುಬೇದಾ ಆ ಸೋತ ದೇಹವನ್ನು ಚೀಲಕ್ಕೆ ಹಾಕಿಕೊಳ್ಳುತ್ತಾಳೆ.

‘ಜುಬೇದಾ ಇಂದು ಸುಂದರನಾ ಸುಂದರಿಯಾ?” ನಾನು ಮತ್ತೆ ತುಳುವಿನಲ್ಲಿ ಕೇಳುತ್ತೇನೆ. ಆಕೆ ಮಾತನಾಡುವುದಿಲ್ಲ. ಏಕೆಂದರೆ ಅಷ್ಟು ಹೊತ್ತಿಗೆ ಬರಿದಾಗಿದ್ದ ಕಡಲು ಇಳಿತ ಮುಗಿದು ಮತ್ತೆ ತುಂಬಿಕೊಳ್ಳತೊಡಗುತ್ತಿದೆ. ನೀಲಸಾಗರದ ಬೆತ್ತಲನ್ನು ಮುಚ್ಚಿಕೊಳ್ಳಲು ಮತ್ತೆ ಮರಳುತ್ತಿರುವ ಕಡಲ ಭರತದ ನೀರು. ಅವಸರವಸರವಾಗಿ ಮರಳುತ್ತಿರುವ ಜುಬೇದಾಳನ್ನು ನಾನು ತೊಂಡು ಬಾಲಕನಂತೆ ಹಿಂಬಾಲಿಸುತ್ತೇನೆ. ಇಬ್ಬರೂ ಕಡಲುಕಳೆದು ಬಂಗಾರ ಬಣ್ಣದ ಮರಳಲ್ಲಿ ನಡೆಯತೊಡಗುತ್ತೇವೆ. ದೂರದಲ್ಲಿ ಹಂಗಿಸುವಂತೆ ಕಪ್ಪಗೆ ನಿಂತಿರುವ ಮಗುಚಿಕೊಂಡ ಹಡಗು. ಜುಬೇದಾ ತಪ್ಪಿ ಕಣ್ಣೆತ್ತಿಯೂ ಅದರ ಕಡೆ ನೋಡುವುದಿಲ್ಲ.

‘ಜುಬೇದಾ ನಿನ್ನ ಗಂಡನ ಮೋಹದಿಂದಾಗಿ ಮಗುಚಿಕೊಂಡಿರುವ ಹಡಗು’ ಎಂದು ಕಿಚಾಯಿಸಬೇಕೆನಿಸುತ್ತದೆ. ಆದರೆ ಧೈರ್ಯ ಬರುವುದಿಲ್ಲ. ಅನಿಸಿದರೆ ಅವಳು ಕೈಯಲ್ಲಿರುವ ಈಟಿಯಿಂದ ನನ್ನನ್ನು ತಿವಿಯಲೂ ಹೆದರುವುದಿಲ್ಲ.

ಉಲ್ಲಾಳದ ಒಂದು ಕಾಲದ ಸುಂದರಿ ಬ್ಯಾರಿ ಹೆಂಗಸು. ಈಗ ನೋಡಿದರೆ ಈ ದ್ವೀಪದ ಗಟ್ಟಿಗಿತ್ತಿ ಹೆಂಗಸರನ್ನೂ ಮೀರಿಸುವ ಹಾಗೆ ಅವಳಿಗಿಂತಲೂ ಎತ್ತರದ ಅಕ್ಟೋಪಸ್ಸಾದರೂ ಸರಿ ಈಟಿಯಿಂದ ಇರಿದು ಚೀಲಕ್ಕೆ ಬಿಸುಟು ಏನೂ ಆಗಿಲ್ಲವೆಂಬಂತೆ ನಡೆಯುತ್ತಿದ್ದಾಳೆ. ಉಲ್ಲಾಳದ ತನ್ನ ಮನೆಯ ಹಿತ್ತಲಲ್ಲಿ ತಾನೇ ನೀರು ಹಾಕಿ ಬೆಳೆಸಿದ ಸಾರುಸೌತೆಯನ್ನು ಕಿತ್ತು ಕೊಂಡೊಯ್ಯುವಂತೆ ಕಡಲ ಈ ಅಮಾನುಷ ಜೀವಿಯನ್ನು ಮುಲಾಜಿಲ್ಲದೆ ಎತ್ತಿಕೊಂಡು ನಡೆಯುತ್ತಿದ್ದಾಳೆ. ಒಂದು ಹಡಗಿನ ದುರಂತಕ್ಕೆ ಕಾರಣಳಾದ ಮೋಹದ ಮಡದಿ. ಅದಕ್ಕೂ ಮೊದಲು ಇನ್ನೊಬ್ಬನ ಮಡದಿಯಾಗಿದ್ದವಳು. ಅದಕ್ಕೂ ಮೊದಲು ಉಲ್ಲಾಳದ ಕಡಲ ತೀರದಲ್ಲಿ ತಲೆಗೊಂದು ಬಿಳಿಯ ಲೇಸನ್ನು ಕಟ್ಟಿ ಮದರಸಕ್ಕೆ ನಡೆದು ಹೋಗುತ್ತಿದ್ದ ಬಾಲಕಿ.

ಒಡಹುಟ್ಟಿದ ಹಿರಿಯಳ ಹಿಂದೆ ಮದರಸಕ್ಕೆ ಸಾಗುವ ಬಾಲಕನಂತೆ ನಾನು ಈಕೆಯ ಹಿಂದೆ ನಡೆಯುತ್ತೇನೆ.

*********

‘ಪಡೆದವನೇ ಇದು ಯಾವ ಗ್ರಾಚಾರ! ನನ್ನ ಊರಿನ ಕಡೆಯ ನೀನು ಎಲ್ಲಿಂದ ಅವತರಿಸಿ ಈ ದ್ವೀಪ ಬಂದು ತಲುಪಿದೆ. ಬಂದವನು ನನಗೇ ಯಾಕೆ ತಗುಲಿಕೊಂಡೆ?’ ಎಂದು ಜುಬೇದಾ ಆಗಾಗ್ಗೆ ಕೇಳುತ್ತಲೇ ಇರುತ್ತಾಳೆ. ಪೂರ್ತಿ ಮರೆತೇ ಹೋಗಿದ್ದ ಆಕೆಯ ಬಾಲ್ಯದ ತುಳುಭಾಷೆ ನನ್ನಿಂದಾಗಿ ಮತ್ತೆ ಜೀವ ಪಡೆಯುತ್ತಿದೆ. ಹತ್ತಿರದಿಂದ ಬಲಿಷ್ಟ ಗಂಡಸಿನಂತೆ ತೋರುವ ಈಕೆ ದೂರದಿಂದ ನಡೆದು ಹೋಗುತ್ತಿರುವ ಬೆಳ್ಳಕ್ಕಿಯಂತೆ ಕಾಣುತ್ತಾಳೆ. ಈ ದ್ವೀಪದ ಶೈಲಿಯಲ್ಲೇ ಸಣ್ಣ ಸಣ್ಣ ಬಣ್ಣದ ಹೂಗಳಿರುವ ಲುಂಗಿಯನ್ನೂ, ಕುಪ್ಪಸವನ್ನೂ, ತಲೆಯ ಮೇಲೊಂದು ಗುಲಾಬಿ ಬಣ್ಣದ ಬಟ್ಟೆಯನ್ನೂ ಸುತ್ತಿಕೊಂಡಿರುತ್ತಾಳೆ. ಎರಡೂ ಕಿವಿಗಳಲ್ಲಿ ಮಂಕಾಗಿ ಜೋತು ಬಿದ್ದಿರುವ ಚಿನ್ನದ ಅಲಿಕತ್ತುಗಳು, ವೀಳ್ಯದೆಲೆ ಜಗಿದು ಸುಟ್ಟಂತಾಗಿರುವ ತುಟಿಗಳು, ಅಲ್ಲಲ್ಲಿ ರಕ್ತವರ್ಣವಾಗಿರುವ ದಂತಪಂಕ್ತಿ, ಒಂದಿಷ್ಟು ಕಾಣಿಸುವ ಒಸಡು, ತಲೆಯ ಬಟ್ಟೆಯೊಳಗಿಂದ ಇಣುಕುತ್ತಿರುವ ಕಪ್ಪು ಮಿಶ್ರಿತ ಬಿಳಿ ಕೂದಲು. ಅವೆಲ್ಲವನ್ನೂ ಮರೆಸುವ ಮುಖದ ಮೇಲಿನ ಅರಸಿಯಂತಹ ಮಂದಹಾಸ. ತಾನು ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಇಲ್ಲಿಯ ಎಲ್ಲವನ್ನೂ ಅರಿತುಕೊಂಡಿರುವೆ ಎಂಬಂತಹ ಧಿಮಾಕಿನ ನಡಿಗೆ.

ಆದರೆ ನಾನು ತುಳುವಿನಲ್ಲಿ ಮಾತನಾಡಿಸಿದರೆ ಮಗುವಿನಂತಾಗುತ್ತಾಳೆ. ಕೇಳಿದಕ್ಕೆಲ್ಲ ಚಾಚೂ ತಪ್ಪದೆ ಉತ್ತರಿಸುತ್ತಾಳೆ. ಈ ದ್ವೀಪದಲ್ಲಿ ಈಗ ಯಾರಿಗೂ ನೆನಪಿಲ್ಲದಂತಿರುವ ತನ್ನ ಜನ್ಮರಹಸ್ಯವನ್ನು ಭೇದಿಸಲು ಇವನೆಲ್ಲಿಂದ ಬಂದು ತಲುಪಿದ ಎಂಬ ಇವಳ ಕೊಂಕು ವಾತ್ಸಲ್ಯ ನನಗೂ ಇಷ್ಟ ಎಂಬುದನ್ನು ಅವಳು ಅರಿತಿದ್ದಾಳೆ. ಹಾಗಾಗಿ ಕೊಂಕು ಮಾತನಾಡದೆ ಬೇಕಾದ್ದನ್ನು ಹೊಟ್ಟೆ ತುಂಬ ಉಣಿಸಿ, ಹೊರಡುವಾಗ ವೀಳ್ಯದೆಲೆಯ ಸಂಚಿಯಿಂದ ಎಲೆಯನ್ನೂ ಸುಣ್ಣದ ಕರಂಡಿಕೆಯನ್ನೂ ಹೊರತೆಗೆದು, ಒಣಗಿದ ಸುಣ್ಣವನ್ನು ಒಂದಿಷ್ಟು ನೀರಲ್ಲಿ ನೆನೆಸಿ, ಹಸಿ ಅಡಿಕೆಯನ್ನು ಕತ್ತರಿಸಿ ಹೋಳು ಮಾಡಿಕೊಟ್ಟು, ತಾನೂ ವೀಳ್ಯದೆಲೆ ಬಾಯಿಗೆ ಹಾಕಿಕೊಳ್ಳುತ್ತಾಳೆ, ಇಲ್ಲಿ ಯಾರೂ ಅರಿಯದ ತುಳುನಾಡಿನ ದಿವ್ಯ ಅಡುಗೆಗಳ ಕುರಿತು ನಾವಿಬ್ಬರೂ ಕೆಲವೊಮ್ಮೆ ಹರಟುತ್ತೇವೆ. ಒಮ್ಮೊಮ್ಮೆ ಯಾರಿಗೂ ಬಿಟ್ಟುಕೊಡದ ತನ್ನ ಕಿರಿದಾದ ಅಡುಗೆಯ ಕುಶಿನಿ ಕೋಣೆಗೆ ನನ್ನನ್ನು ಬಿಟ್ಟುಕೊಟ್ಟು ದೂರದಿಂದ ನೋಡುತ್ತಾ ನಗುತ್ತಾಳೆ. ಕೆಲವೊಮ್ಮೆ ನಾವಿಬ್ಬರೂ ಸೇರಿ ಬಸಳೆಯ ಪುಂಡಿ ಮಾಡುತ್ತೇವೆ. ಕಾಯಿಯ ಹಾಲು ಸೇರಿಸಿ ಮಾಡುವ ಆಡುಮಾಂಸದ ಸಾರಿನ ಜೊತೆಗೆ ಅಕ್ಕಿ ಅರೆದು ಮಾಡಿದ ಶ್ಯಾವಿಗೆಯನ್ನೂ.

ಇಬ್ಬರೂ ಆಕಾಶದ ಕೆಳಗೆ ಅವಳ ಹಿತ್ತಲಿನ ಕೂರುಮಣೆಯಲ್ಲಿ ಕೂತು ನಮ್ಮಿಬ್ಬರ ಬಾಲ್ಯದ ತಿನಿಸುಗಳ ಕುರಿತು ದೇಶಾವರಿ ಮಾತನಾಡುತ್ತ ಕಬಳಿಸಲು ತೊಡಗುತ್ತೇವೆ. ಅವಳ ಒಂದೆರಡು ಆಡುಗಳು ಪರಿಚಿತರಂತೆ ಬಳಿ ಬಂದು ನಮ್ಮ ತಿನಿಸುಗಳನ್ನು ಮೂಸಲು ತೊಡಗುತ್ತವೆ.

‘ನಮ್ಮ ಊರಾಗಿದ್ದರೆ ಈ ಆಡುಗಳಿಗೆ ತಿನ್ನಲು ಏನೆಲ್ಲ ಸೊಪ್ಪುಗಳು ಸಿಗುತ್ತಿತ್ತಲ್ಲವಾ?’
‘ಹೌದು ಅಷ್ಟೆಲ್ಲ ಸೊಪ್ಪುಗಳು ಸಿಕ್ಕಿದ್ದಿದ್ದರೆ ಅವುಗಳು ಇಷ್ಟು ಬೆಳ್ಳಗೆ ಇರುತ್ತಿರಲಿಲ್ಲ’.
‘ಎಂತ ಮಣ್ಣಾಂಗಟ್ಟಿ ಬೆಳ್ಳಗೆ. ಇಲ್ಲಿ ಇವು ತೆಂಗಿನ ಒಣಗರಿ ತಿಂದು ಬದುಕಬೇಕು. ಎಂತ ಸಾವು’ ಆಕೆ ಕೈಯಲ್ಲಿದ್ದ ಶ್ಯಾವಿಗೆಯನ್ನು ತಿನ್ನಿಸುತ್ತಾಳೆ.

‘ಸ್ವಲ್ಪ ಆಡು ಮಾಂಸವನ್ನೂ ಕೊಟ್ಟುಬಿಡು. ನೀನು ಯಾಕೆ ಅವುಗಳನ್ನು ಇಷ್ಟಪಟ್ಟು ಸಾಕುತ್ತಿರುವೆ ಎಂದು ಅವುಗಳಿಗೂ ಗೊತ್ತಾಗಲಿ’ ನಾನು ಕಟಕಿಯಾಡುತ್ತೇನೆ.

‘ನನ್ನ ಆಡುಗಳನ್ನು ಯಾರಿಗೂ ಕುಯ್ಯಲು ಬಿಡುವುದಿಲ್ಲ. ಒಂದೋ ನಾನು ಸಾಯಬೇಕು. ಇಲ್ಲಾ ಅವುಗಳು ಸಾಯಬೇಕು. ಅದಲ್ಲದೆ ಯಾವ ನರಮಾಣಿಯೂ ಅವುಗಳನ್ನು ತಿನ್ನಲು ಬಿಡುವುದಿಲ್ಲ’.

ಪ್ರತಿ ಮಾತುಕತೆಯ ಕೊನೆಯಲ್ಲೂ ಇವಳ ಬಾಯಿಂದ ಬರುವ ಸಾವೆಂಬ ಶಬ್ದ!

ನಾನು ಜುಬೇದಾಳ ಮುಖವನ್ನು ನೋಡುತ್ತೇನೆ. ತನ್ನ ಬಾಯಿಂದ ಬಂದ ಸಾವು ಎಂಬ ಪದಕ್ಕೂ ಅದು ಕೇಳಿದ ನನ್ನಲ್ಲಿ ಉಂಟುಮಾಡಿದ ಅರ್ಥಕ್ಕೂ ಅಂತಹ ಸಂಬಂಧವೇನೂ ಇಲ್ಲ ಎನ್ನುವಂತಹ ಅವಳ ಮುಖಭಾವ. ವರ್ಷ ಬಹುಶಃ ಅರವತ್ತು ಕಳೆದಿದ್ದರೂ ಗೊತ್ತಾಗದ ಹಾಗಿರುವ ಅವಳ ಮುಖದ ಎಂದಿನ ಮಂದಹಾಸ. ಬಹುಶಃ ಮದುವೆಯಾದ ಇಬ್ಬರು ಗಂಡಸರೂ ಇವಳ ಕಣ್ಣಮುಂದೆ ಸಾವಿಗೀಡಾಗಲಿಲ್ಲ. ತೀರಿಹೋದ ಅವರ ಮೃತದೇಹಗಳನ್ನೂ ಇವಳಿಗೆ ನೋಡಲಾಗಿಲ್ಲ. ಹಾಗಾಗಿ ಸಾವು ಎಂದರೆ ಬಹುಶಃ ಕಣ್ಣಿಂದ ಮರೆಯಾಗುವುದು ಎಂದು ಮಾತ್ರ ತಿಳಿದುಕೊಂಡ ಹಾಗಿದೆ ಇವಳು. ಬಹುಕಾಲವೇನೂ ಜೊತೆಗೆ ಇರದ ಕಟ್ಟಿಕೊಂಡ ಇಬ್ಬರು ಗಂಡಸರು ಒಬ್ಬರ ನಂತರ ಒಬ್ಬರಂತೆ ಶಾಶ್ವತವಾಗಿ ದೂರ ಹೋದರು ಎಂಬ ಒಂದು ಸಣ್ಣ ವಿಷಾದದ ಎಳೆಯೊಂದು ಮಾತ್ರ ಇವಳನ್ನು ಕೊರೆಯುತ್ತಿರಬಹುದು ಅಷ್ಟೇ ಅನಿಸಿತ್ತು.

ಒಂದು ಸಂಜೆಗತ್ತಲಲ್ಲಿ ಸಣ್ಣ ಕೂರು ಮಣೆಯಲ್ಲಿ ನಾವಿಬ್ಬರೂ ಎದುರುಬದುರಾಗಿ ಕೂತು ಹೇಳಿಕೊಂಡ ನಮ್ಮಿಬ್ಬರ ಕಥೆಗಳು. ಬೇರೆ ಯಾರದೋ ಬದುಕಲ್ಲಿ ನಡೆದ ಕಥೆಯೆಂಬಂತೆ ಇಬ್ಬರೂ ನಿರ್ಲಿಪ್ತರಾಗಿ ಹೇಳಿಕೊಂಡ ಬಗೆಯೂ ಚೆನ್ನಾಗಿತ್ತು. ಬಾಲ್ಯದಲ್ಲೇ ಕಳೆದುಹೋಗಿ ಆನಂತರ ಅಚಾನಕ್ಕಾಗಿ ಭೇಟಿಯಾದ ಒಡಹುಟ್ಟುಗಳಿಬ್ಬರು ಅದುವರೆಗೆ ನಡೆದದ್ದನ್ನು ಸಂಕ್ಷಿಪ್ತವಾಗಿ ಒಬ್ಬರಿಗೊಬ್ಬರು ಒಪ್ಪಿಸಿದಂತಿತ್ತು ಆವತ್ತಿನ ಮಾತುಗಳು.

ಈ ದ್ವೀಪದ ಮೂಗ ತುದಿಯಿಂದಲೇ ಆರಂಭವಾಗಿರುವ ಹವಳದ ಗೋಡೆ ಅರ್ಧ ಚಂದ್ರಾಕೃತಿಯಲ್ಲಿ ಈ ದ್ವೀಪವನ್ನು ಮಣಿಹಾರದಂತೆ ಸುತ್ತಿಕೊಂಡಿದೆ . ಈ ಗೋಡೆಯ ನಡುವೆ ತುಂಬಿಕೊಂಡಿರುವ ನೀಲ ನೀಲ ಸ್ಫಟಿಕ ಸರೋವರ ಈ ದ್ವೀಪವನ್ನು ಕಡಲ ಭೋರ್ಗರೆತದಿಂದ ಕಾಪಾಡುತ್ತದೆ.

‘ನೀನು ಯಾಕೆ ಉಳ್ಳಾಳದ ಕಡಲ ತೀರದಿಂದ ಇಲ್ಲಿ ಬಂದೆ?’ ನಾನು ಆವತ್ತು ಕೇಳಿದ್ದೆ
‘ಬರಬೇಕಾದಂತಹ ಸಂಗತಿಗಳು ಬದುಕಿನಲ್ಲಿ ನಡೆದವು, ಹಾಗಾಗಿ ಬಂದೆ’ ಎಂದು ಒಗಟಿನಂತೆ ಉತ್ತರಿಸಿದವಳು, ನನ್ನನ್ನೂ ಅದೇ ಪ್ರಶ್ನೆ ಕೇಳಿದ್ದಳು.
‘ನಾನು ಸರಕಾರೀ ಕೆಲಸಕ್ಕಾಗಿ ಬಂದೆ’ ಎಂದಿದ್ದೆ.
‘ಎಂತ ಮಣ್ಣಾಂಗಟ್ಟಿ. ಸರಕಾರೀ ಕೆಲಸ ಅಲ್ಲಿಯೂ ಇಲ್ಲವಾ. ಅದಕ್ಕಾಗಿ ಇಲ್ಲಿ ಬಂದು ಸಾಯಬೇಕಾ?’

‘ಹೌದು ಸಾಯಲಿಕ್ಕೇ ಬಂದಿರುವುದು’ ನಾನು ಧ್ವನಿಯಲ್ಲಿನ ಸಂಕಟವನ್ನು ಅಡಗಿಸಿಡಲಾಗದೇ ಅಂದು ಬಿಟ್ಟಿದ್ದೆ. ಜೊತೆಗೆ ಆ ಜಾಗದ ಚಿತ್ರವನ್ನೂ ಅವಳ ಮುಖದ ಮುಂದೆ ಮೊಬೈಲು ತೆರೆದಿಟ್ಟು ತೋರಿಸಿದ್ದೆ.

ದ್ವೀಪದ ಮೂಗಿನ ಹಾಗಿರುವ ತುದಿ. ಮೂಗಿಗೆ ತಾಗಿಕೊಂಡೇ ಅಬ್ಬರಿಸುತ್ತಿರುವ ಕಡಲು ಚಿತ್ರದಲ್ಲಿ ಸ್ತಬ್ದವಾಗಿತ್ತು, ಹಾಲಿನಂತೆ ಚೆಲ್ಲಿಕೊಂಡಿರುವ ಬಿಳಿಯ ಮರಳು. ಬಿಳಿಯ ಮರಳಿನ ಮೇಲೆ ಒಂಟಿ ತೆಂಗಿನ ನೆರಳು. ದೂರಕ್ಕೆ ಹಬ್ಬಿರುವ ನೀಲ ಕಡಲು. ಅದಕ್ಕಿಂತಲೂ ಕಡು ನೀಲ ವರ್ಣದಲ್ಲಿ ಹೊಳೆಯುತ್ತಿರುವ ಸ್ಫಟಿಕ ಲಗೂನ್ ಸರೋವರ. ಕಡಲೂ ಸರೋವರವೂ ಸೇರುವ ಜಾಗದಲ್ಲಿ ತುಕ್ಕು ಹಿಡಿದು ಮಗುಚಿಕೊಂಡು ನಿಂತಿರುವ ಸಿಮೆಂಟು ಸಾಗಿಸುವ ಸರಕಿನ ಹಡಗು.

ಆ ಸರಕಿನ ಹಡಗನ್ನು ನೋಡಿದ ಅವಳು ಕೊಂಚ ಮ್ಲಾನವಾಗಿದ್ದಳು. ಆಮೇಲೆ ಸುಧಾರಿಸಿಕೊಂಡಳು. “ಈ ದ್ವೀಪದವರು ಹೇಳಿದ ಆ ಹಡಗಿನ ಕತೆ ನೀನು ಕೇಳಿರಬಹುದಲ್ಲಾ’ ಎಂದು ಕೇಳಿದ್ದಳು.

‘ಅದು ಕೇಳಿದ್ದೇನೆ ಮತ್ತು ಆ ಕಪ್ತಾನನ ಮೋಹದ ಹೆಂಡತಿ ನೀನೇ ಎಂದೂ ಗೊತ್ತಿದೆ’ ಎಂದು ಹೇಳಿದ್ದೆ.

‘ಸರಿ ಇಲ್ಲಿ ಯಾರಿಗೂ ಗೊತ್ತಿಲ್ಲದ ಇನ್ನೊಂದು ಸಂಗತಿ ನಿನಗೆ ಹೇಳಲಾ?’ ಎಂದು ಕೇಳಿದ್ದಳು.

‘ಆ ಕಪ್ತಾನ ನನ್ನ ಮೊದಲ ಗಂಡನಲ್ಲ. ಅದಕ್ಕೂ ಮೊದಲು ಒಬ್ಬರಿದ್ದರು. ಅವರೂ ಹಡಗಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲೋ ದೂರದಲ್ಲಿ ಅರಬೀಸ್ತಾನದ ಬಳಿ ಕಡಲುಗಳ್ಳರು ಅವರನ್ನು ಎತ್ತಿಕೊಂಡು ಹೋದವರು ಅವರ ದೇಹವನ್ನು ಎಲ್ಲೋ ಕಡಲಲ್ಲಿ ಬಿಸಾಕಿದ್ದರು.

ಅವರ ಸಾವಿನ ವಿಷಯವನ್ನು ಹೇಳಲು ಇವರು ಉಳ್ಳಾಳಕ್ಕೆ ಬಂದಿದ್ದರು.
ಆಮೇಲೆ ನಾನು ಆರೂವರೆ ತಿಂಗಳು ಮರೆಯಲ್ಲಿದ್ದೆ.
ಆಮೇಲೆ ಆರು ತಿಂಗಳಿಗೆ ಇವರು ಪುನಃ ಬಂದರು.

ಬಂದವರು, ‘ನನ್ನನ್ನು ನಿಖಾ ಮಾಡಿಕೊಂಡು ದ್ವೀಪಕ್ಕೆ ಬರುತ್ತಾಳಾ’ ಎಂದು ನನ್ನ ತಂದೆಯವರ ಬಳಿ ಕೇಳಿಸಿದರು.
ನಾನು ಏನೂ ಹೇಳಲಿಲ್ಲ.
ತಂದೆಯವರು ‘ಆಗಲಿ’ ಎಂದರು.

ನಿಖಾ ಆದಮೇಲೆ ಮಂಗಳೂರು ಬಂದರಿನಿಂದ ಹಡಗು ಹತ್ತಿ ಒಂದು ಹಗಲು ಒಂದು ಇರುಳು ಕಡಲಲ್ಲಿ ಕಳೆದು ಇಲ್ಲಿಗೆ ಬಂದೆ.

ಹಾಗೆ ತಂದು ಬಿಟ್ಟವರು ಒಂದು ತಿಂಗಳಲ್ಲಿ ಕಪ್ತಾನನ ಕೆಲಸಕ್ಕೆ ಎಂದು ಕೊಚ್ಚಿಗೆ ಹೋದರು. ಅದಾಗಿ ಒಂದು ಮಳೆಗಾಲದ ಇರುಳು ಬಿರುಗಾಳಿಯಂತೆ ಬಂದವರು ಏನೂ ಹೇಳದೆ ತಬ್ಬಿಕೊಂಡು ಅಳಲು ಶುರುಮಾಡಿದರು. ಅವರಿಗೆ ನನ್ನನ್ನು ಬಿಟ್ಟು ಕಡಲಲ್ಲಿ ಒಬ್ಬನೇ ಸಂಚರಿಸಿಕೊಂಡಿರುವುದು ಆಗುತ್ತಿಲ್ಲವಂತೆ. ಅದನ್ನೇ ಮತ್ತೆ ಮತ್ತೆ ಹೇಳಿ ಅಳುತ್ತಿದ್ದರು.

ಬೆಳಗ್ಗೆ ಅವರನ್ನು ದ್ವೀಪದ ಪೋಲೀಸರು ಎತ್ತಿಕೊಂಡು ಕೊಚ್ಚಿಗೆ ಕರೆದುಕೊಂಡು ಹೋದರು.
ಅವರಿಂದಾಗಿ ಹಡಗು ಮುಳುಗಿತಂತೆ.
ಕೊಚ್ಚಿಯಲ್ಲಿ ಇವರೂ ತಮ್ಮನ್ನು ತಾವು ಕೊಂದುಕೊಂಡರು.
ಇವರ ದೇಹವೂ ನೋಡಲು ಸಿಗಲಿಲ್ಲ.

ನಾನು ಮತ್ತೆ ಆರೂವರೆ ತಿಂಗಳು ಮರೆಯಲ್ಲಿದ್ದೆ. ಆಮೇಲೆ ಯಾವ ಗಂಡಸರ ಮುಖವನ್ನೂ ನಾನು ನೋಡಲಿಲ್ಲ. ಈ ದ್ವೀಪದ ಗಂಡಸರೂ ಒಳ್ಳೆಯವರು. ಅವರೂ ನನ್ನ ಮುಖ ನೋಡಲಿಲ್ಲ. ಹಡಗು ಹತ್ತಿ ಊರಿಗೆ ಹೋಗಲೂ ಮನಸ್ಸು ಬರಲಿಲ್ಲ.

ಆಡು ಸಾಕಿದೆ. ಬಾಯಿಬಾರದ ಅವುಗಳು ಪ್ರೀತಿಸಿದವು. ಆಡುಗೆ ಮಾಡಿ ಹಸಿದು ಬಂದವರಿಗೆ ಊಟ ಹಾಕಿದೆ. ನಿನ್ನ ಹಾಗೆಯೇ ಅವರೂ ಇಷ್ಟಪಟ್ಟರು.

‘ಇದು ನನ್ನ ಕಥೆ. ಈಗ ನಿನ್ನ ಸಂಕಟದ ಕಥೆ ಹೇಳು’ ಅಷ್ಟೇನೂ ಆಸಕ್ತಿ ಇಲ್ಲದವಳಂತೆ ಕೇಳಿದಳು.
ನನ್ನ ಕಥೆ ಕೇಳಿದರೆ ಇವಳೂ ನಗಬಹುದು ಅನಿಸಿತು.

ನಡುವಯಸ್ಕನೊಬ್ಬನ ಅಷ್ಟೇನೂ ನೈತಿಕವಲ್ಲದ ನಡುಗಾಲದ ಅನುರಾಗ!

ಅವಳು ಬದುಕಿದ್ದಿದ್ದರೆ ಅದನ್ನು ವಿವರಿಸಲೂ ಪುರುಸೊತ್ತಿಲ್ಲದ ಹಾಗೆ ಆ ಅನುರಾಗದಲ್ಲಿ ಮುಳುಗಿರುತ್ತಿದ್ದೆ. ಈಗ ಹೇಳಿದರೆ ಅವಳು ಬದುಕಿ ಬರುವುದೂ ಇಲ್ಲ. ಒಂದು ಇರುಳಿನ ಮುಗಿಯದ ರಾಗದ ಹಾಗಿದ್ದ ಆ ಅನುರಾಗದ ಹಾಗೆ ಇನ್ನೇನಾದರೂ ಉಳಿದಿದ್ದರೆ ಅದು ಸ್ವರ್ಗವೂ ಲೋಕವೂ ಸೇರುವ ಹಾಗೆ ತೋರುವ ಈ ದ್ವೀಪದ ಮೂಗಿನ ತುದಿಯ ಹಾಗಿರುವ ಬೆಳ್ಳಗಿನ ಮರಳಹಾಸಿನ ಮೇಲೆ ಬಿದ್ದಿರುವ ತೆಂಗಿನ ನೆರಳಲ್ಲಿ ನಕ್ಷತ್ರಗಳ ನೋಡುತ್ತಾ ಒಂದು ಹುಣ್ಣಿಮೆಯ ಇರುಳು ತೀರಿಹೋಗುವುದು!

ಆದರೆ ಇದನ್ನೆಲ್ಲಾ ಈ ಅಕ್ಟೋಪಸ್ ಈಡುಗಾರ್ತಿ ಉಲ್ಲಾಳದ ಹಳೆಯ ಸುಂದರಿ ಜುಬೇದಾಳಿಗೆ ಹೇಗೆಂದು ವಿವರಿಸುವುದು.

‘ಬಿಟ್ಟಾಕು ಜುಬೇದಾ, ನನ್ನದು ನಿನ್ನ ಹಾಗೆ ಉದ್ದದ ಕಥೆಯಲ್ಲ. ತುಂಬ ಅಂದರೆ ತುಂಬಾ ಸಣ್ಣದು. ಎರಡೇ ಪದದಲ್ಲಿ ಹೇಳಬಹುದು. ಮುಂದೆ ಯಾವತ್ತಾದರೂ ಹೇಳುತ್ತೇನೆ’ ಎಂದು ಎದ್ದು ನಿಂತಿದ್ದೆ.

‘ನಿನಗೆ ಮರ್ಲು.’ ಅವಳು ಗೊಣಗಿದ್ದಳು.

‘ಹೌದು ನನಗೆ ಮರಳು, ಎಷ್ಟು ಕೂಡಿಸಿದರೂ ಎರಡೇ ಪದ’ ಎದ್ದು ನಿಂತವನು ಮೂಲೆಗೆ ನಿಲ್ಲಿಸಿದ್ದ ಸೈಕಲ್ಲು ಹತ್ತಿದ್ದೆ.

*********

ಜುಬೇದಾ ಕುದಿವ ನೀರಲ್ಲಿ ಮುಳುಗಿಸಿ ತಂದ ಆ ಅಕ್ಟೋಪಸ್ಸಿನ ದೇಹ ಅಚ್ಚರಿಯಾಗುವಂತೆ ಹೊಸಬಣ್ಣಗಳನ್ನು ಪಡೆದುಕೊಂಡಿದೆ. ಈ ಅಕ್ಟೋಪಸ್ಸುಗಳು ಕಡಲಲ್ಲಿ ಇರುವಾಗಲೂ ಬಣ್ಣಗಳನ್ನು ಬದಲಿಸಿಕೊಳ್ಳುತ್ತಲೇ ಇರುತ್ತವೆ. ತನ್ನನ್ನು ಕಬಳಿಸಲು ಬರುವ ಕಡಲಿನ ಇತರ ಜೀವಿಗಳಿಗೆ ಚಳ್ಳೆಹಣ್ಣು ತಿನ್ನಿಸಲು ನೀರಿನ ಬಣ್ಣ, ಹವಳ ಜೀವಿಗಳ ಬಣ್ಣ, ಬಂಡೆಗಳ ಬಣ್ಣ, ತಾನು ಕಬಳಿಸಲು ಹೊರಟ ಕಡಲ ಮಿಕಗಳಿಗೆ ಗೊತ್ತಾಗದ ಹಾಗೆ ಅವುಗಳದೇ ಬಣ್ಣ. ಅಚ್ಚರಿ ಎಂದರೆ ಇರುಳ ಹೊತ್ತಲ್ಲಿ ಕಡಲ ನೀರಲ್ಲಿ ಜೊಂಡಿನ ಹಾಗೆ ತೇಲುತ್ತ ಅಥವಾ ಹವಳ ಬಂಡೆಗಳನ್ನು ಮಗುವಿನ ಹಾಗೆ ಅಪ್ಪಿಕೊಂಡು ನಿದ್ದೆ ಹೋಗುವ ಇವುಗಳು ಕನಸನ್ನೂ ಕಾಣುತ್ತವಂತೆ. ಆ ಕನಸಿನ ದೃಶ್ಯಗಳಿಗನುಗುಣವಾಗಿ ನಿದ್ದೆ ಹೋಗಿರುವ ಇವುಗಳ ಮೈಯ್ಯ ಬಣ್ಣಗಳೂ ಬದಲಾಗುತ್ತಿರುತ್ತವಂತೆ. ಹಾಗೇ ಸತ್ತಮೇಲೂ ಕೂಡಾ ಅವುಗಳ ದೇಹದ ಬಣ್ಣ ಬದಲಾಗುತ್ತವೆ.

ಅದನ್ನು ನೋಡಲೆಂದೇ ನಾನು ಜುಬೇದಾಳಿಗೆ ಅದನ್ನು ಕುದಿವ ನೀರಲ್ಲಿ ಮುಳುಗಿಸಿ ತರಲು ಹೇಳಿದ್ದೆ. ಅಂದುಕೊಂಡಂತೆಯೇ ಅಕ್ಟೋಪಸ್ಸಿನ ಅರೆಬೆಂದ ದೇಹ ಹೊಸತೊಂದು ಬಣ್ಣದಿಂದ ಹೊಳೆಯುತ್ತಿತ್ತು. ಕಡಲ ತಿಳಿನೀಲಿಯೂ, ಆಕಾಶದ ಘನನೀಲಿಯೂ, ಹವಳ ದಿಬ್ಬಗಳ ನಸುಗೆಂಪೂ ಸೇರಿಕೊಂಡ ಒಂದು ಅಪೂರ್ವ ಬಣ್ಣ ಮೆಲ್ಲಗೆ ಮಂಕಾಗುತ್ತಿತ್ತು.

ಜುಬೇದಾಳು ಮುಂದಿನ ಕ್ರಿಯೆ ಶುರುಮಾಡಿದಳು. ಅಂಗಳದ ಮೂಲೆಯಲ್ಲಿ ಒರಗಿಸಿಟ್ಟಿದ್ದ ತೆಂಗಿನ ಸಿಪ್ಪೆಯಿಂದ ಬಡಿದು ನಾರು ಬಿಡಿಸುವ ಮರದ ಬಲಿಷ್ಟ ದೊಣ್ಣೆಯಿಂದ ಅದರ ಮೈಯನ್ನು ಬಡಿದು ಮೃದು ಮಾಡಲು ತೊಡಗಿದಳು. ಸೂರ್ಯ ಕಂತಿದ ಮೇಲೆ ಉಳಿದ ಸಣ್ಣಬೆಳಕಿನಲ್ಲಿ ಜುಬೇದಾ ಅದರ ದೇಹದ ಮೇಲೆ ನುರಿತ ಕಲಾವಿದೆಯಂತೆ ಬಾಯಿಂದ ಸಣ್ಣ ಸದ್ದು ಹೊರಡಿಸುತ್ತಾ ಮೆಲ್ಲಗೆ ಅದರ ದೇಹ ಛಿದ್ರವಾಗದ ಹಾಗೆ ಬಡಿಯುತ್ತಿದ್ದಳು. ಕತ್ತಲಾದಂತೆನಿಸಿ ನಾನು ಮೂಲೆಯಲ್ಲಿದ್ದ ದೀಪ ಹೊತ್ತಿಸಿದೆ. ಬಡಿಯುತ್ತಿದ್ದ ಹಾಗೆ ಆ ಬೆಳಕಿನಲ್ಲಿ ಅಕ್ಟೋಪಸ್ಸಿನ ತೀರಿ ಹೋದ ಮೈಯಲ್ಲಿ ಒಂದರ ನಂತರ ಒಂದು ಬಣ್ಣಗಳು ಬದಲಾಗುತ್ತಿದ್ದವು.

ಕನಸಿನಲ್ಲಿ ಬದಲಾಗುವ ಬಣ್ಣಗಳು ಭೇಟೆಯಾಡುವ ಹೊತ್ತಲ್ಲೂ, ಮಿಕವಾಗುವುದರಿಂದ ಬಚಾವಾಗುವ ಹೊತ್ತಲ್ಲೂ, ಈಗ ತೀರಿ ಹೋದ ದೇಹದ ಮೇಲೆ ಪ್ರಹಾರವಾಗುವ ಹೊತ್ತಲ್ಲೂ ಬಂದು ಹೋಗುತ್ತಿದ್ದವು. ಇದು ಯಾವುದನ್ನೂ ಗಮನಿಸುವ ಅಗತ್ಯವೂ ಇಲ್ಲ, ವ್ಯವಧಾನವೂ ಇಲ್ಲ, ಈ ಯಾವುದರ ಒಳಾರ್ಥಗಳನ್ನು ಅರಿಯುವುದರಿಂದ ನಯಾಪೈಸೆಯ ಉಪಯೋಗವೂ ಇಲ್ಲ, ಸತ್ತು ಹೋಗಿರುವ ಅಕ್ಟೋಪಸ್ಸಿನ ಜೀವನದಲ್ಲಿ ಈ ಯಾವುದಕ್ಕೂ ಯಾವ ಅರ್ಥವೂ ಇಲ್ಲ ಮತ್ತು ಇದು ಯಾವುದೂ ಅದನ್ನು ತನ್ನ ಈಟಿಯಿಂದ ರಕ್ಷಿಸಲೂ ಇಲ್ಲ ಎಂಬ ಭಾವದಲ್ಲಿ ಜುಬೇದಾ ಅದನ್ನು ಬಡಿಯುತ್ತಾ ಹದಗೊಳಿಸುತ್ತಿದ್ದಳು.

ನಾನು ಯಾಕೋ ಖಿನ್ನನಾಗುತ್ತಿದ್ದೆ. ಅವಳು ಬದುಕಿರಬೇಕಿತ್ತು ಅನ್ನಿಸುತ್ತಿತ್ತು. ಅವಳು ಮಗುವಾಗಿದ್ದಾಗ, ಬದುಕಿದ್ದಾಗ, ಅನುರಾಗದಲ್ಲಿದ್ದಾಗ, ಇದ್ದಕ್ಕಿದ್ದಂತೆ ನೋವು ಬಂದು ತಬ್ಬಿಕೊಂಡಾಗ, ದೇಹ ಛಿದ್ರಛಿದ್ರಗೊಂಡಾಗ, ಇನ್ನು ಬದುಕಲಾರೆ ಅನಿಸಿದಾಗ, ಮರಣ ಬಂದು ಮಗುವಿನಂತೆ ಅವಳನ್ನು ಎತ್ತಿಕೊಂಡಾಗಲೂ ಹೀಗೇ ಆಕಾಶದ ಬಣ್ಣ, ಕಡಲ ಬಣ್ಣ, ಅವಳು ಯಾವಾಗಲೂ ಹೆದರುತ್ತಿದ್ದ ಸಂಜೆಯ ಮೋಡಗಳ ಬಣ್ಣ ಕ್ರೂರ ರಾಗವೊಂದರ ಆರೋಹಣ ಅವರೋಹಣದಂತೆ ಬದಲುಗೊಳ್ಳುತ್ತಾ ಅವಳ ಮೈಯಲ್ಲಿ ಸಂಚರಿಸುತ್ತಿದ್ದಿರಬಹುದು ಅನಿಸುತ್ತಿತ್ತು.

‘ಜುಬೇದಾ, ಹೊರಡುತ್ತೇನೆ. ಸೈಕಲ್ಲು ಇಲ್ಲೇ ಇರಲಿ’ ಎಂದು ಕಡಲ ಹಾದಿಯಗುಂಟ ನಡೆಯತೊಡಗಿದೆ. ದೂರದಲ್ಲಿ ದ್ವೀಪದ ಮೂಗಿನಂತಹ ತುದಿಯ ಮೇಲೆ ಆಕಾಶದಲ್ಲಿ ಅರೆ ಬಾಗಿರುವ ಸಲಾಕೆಯಂತಹ ಚಂದ್ರ. ಅದಕ್ಕೆ ತಾಗಿಕೊಂಡಂತೆಯೇ ಒಂದು ನಕ್ಷತ್ರ. ಸಣ್ಣಗೆ ಮಂಕಾಗಿ ಕಾಣಿಸುತ್ತಿರುವ ಬಿಳಿಯ ಮರಳ ಹಾಸು ಮತ್ತು ಬಗ್ಗಿ ನಿಂತುಕೊಂಡಿರುವ ಅದೇ ಒಂಟಿ ತೆಂಗಿನ ಮರ.

(ತರಂಗ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಿತ)

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)