ಒಬ್ಬ ಕವಿ ತಾನು ಪ್ರಪಂಚವನ್ನು ನೋಡಿ ಗ್ರಹಿಸಿದ್ದು ಒಂದು ಬಗೆಯ ಜ್ಞಾನವಾದರೆ ಪ್ರಪಂಚ ಅವನಿಗೆ ಅನಿವಾರ್ಯವಾಗಿ ಕಲಿಸಿದ ಅಥವಾ ನೀಡಿದ ಜ್ಞಾನ ಮತ್ತೊಂದೇ ಬಗೆಯದು. ಕವಿ ಇದೆರೆಡರ ಸಮಪಾಕದಲ್ಲಿ ಬೆಂದು ಬರೆದಾಗ ಕವಿತೆ ಯಾರನ್ನಾದರೂ ಮುಟ್ಟಿ ತಟ್ಟಬಲ್ಲದು. ಮತ್ತೆ ಗ್ರಹಿಕೆ ಯಾವ ಬಗೆಯದ್ದೇ ಇರಲಿ ನನ್ನ ಗ್ರಹಿಕೆ ಎನ್ನುವುದು ಬಹಳ ಸೀಮಿತ ಕ್ಷಿತಿಜ. ಅದನ್ನು ಸಾಮಾನ್ಯೀಕರಿಸುವ ಹೊತ್ತಿನಲ್ಲಿ ಒಂದು ಕಾಳಜಿ ಒಂದು ಜಾಗ್ರತೆ ಬೇಕೇಬೇಕಿರುತ್ತದೆ. ಇಂತಹುದನ್ನು ನಿರ್ವಹಿಸುವ ರೀತಿಯನ್ನು ಕವಿತೆಯ ಅಚ್ಚಿಗೆ ಇಳಿಸುವ ಕಲೆಯನ್ನು ನಾವು ಜಯಂತರಂತಹ ಹಿರಿಯರಿಂದ ಕಲಿಯಲೇ ಬೇಕಿರುವುದು.
ಆಶಾಜಗದೀಶ್ ಅಂಕಣ

 

(ಮುಂದುವರಿದ ಭಾಗ)
ಮೌನ ಮಾತಗುವ ಹೊತ್ತು ಪದಗಳು ಬೇಕಿಲ್ಲ… ಮೌನಕ್ಕೆ ಮೌನವೇ ಹೊರಬರುವ ಹಾದಿಯಾದಾಗ ಪದಗಳು ಶರಣಾಗುತ್ತವೆ… “ಹೆಸರು” ಎನ್ನುವ ಜಯಂತರ ಈ ಕವಿತೆಯನ್ನು ಓದಿಯಾದ ನಂತರ ಮೌನಕ್ಕೆ ಶರಣಾಗದೆ, ಮೌನಕ್ಕೆ ಮಾತು ಕಲಿಸದೆ ವಿಧಿ ಇಲ್ಲ ಅಂತನಿಸಿಬಿಡುತ್ತದೆ…

“ಬಂದ ಕೆಲಸ ಮುಗಿಸಿ ಹೋದರಾಗದೆಸುಮ್ಮನೆ ಕೇಳುತ್ತಾರೆ
ಪಂಜರದ ಹುಡುಗಿಯ ಹೆಸರು

ಗೊತ್ತು ಅವಳಿಗೆ ಇದೆಲ್ಲ

ಹಾಗೆಂದೇ ಇಟ್ಟುಕೊಂಡಿದ್ದಾಳೆ
ಎರೆಡೇ ಗುಂಡಿಯ ಬ್ಲೌಸಿನೊಳಗೆ
ಎಷ್ಟೊಂದು ಬಗೆಯ ಹೆಸರ
ಕೇಳಿದವನ ವಯ ತೂಕ ಬಣ್ಣ ನೋಡಿ
ತೆಗೆಯುತ್ತಾಳೆ

ನಂತರ ಅವರು ನಂಬಿದವರಂತೆ
ಆ ಸುಳ್ಳು ಹೆಸರಿಂದ ಅವಳ ಕರೆಯುತ್ತ
ಒಂದು ಸಣ್ಣ ಆಟ ನಡೆಸುತ್ತಾರೆ

ತಿಳಿದವಳಂತೆ ನಕ್ಕರೆ ಯಾಕೆ ನಗುತ್ತಿದ್ದರು
ಎಂದು ಕೇಳಿಯಾರು
ಟಿಪ್ಸ್ ಸಮಯ ಹಾಗೆಲ್ಲ ಕೆರಳಿಸಿದರೆ ತರವಲ್ಲ

ರಸ್ತೆಯಲ್ಲಿ ಹೆಸರುಗಳಿಗೇನೂ ಬರವಿಲ್ಲ
ಬೇಕಾದ್ದು ಬೇಕಾದಲ್ಲಿಂದ ಹೆಕ್ಕಬಹುದು
ಚ್ಯೂಯಿಂಗ್ ಗಮ್ಮಿನಂತೆ ಜಗೆದು ಜಗೆದು
ನಂತರ ಗುಪ್ತವಾಗಿ ಎಲ್ಲೋ ಅಂಟಿಸಿ
ಹೋಗಿ ಬಿಡಬಹುದು”

ಹೆಣ್ಣಾದವಳು ಹಾಯಬೇಕಾಗಿ ಬರುವ ಅಗ್ನಿಕುಂಡಗಳು ಜೀವಂತವಾಗಿ ನಿಗಿನಿಗಿ ಹೊಳೆಯುವಾಗ ಗಂಡೊಬ್ಬನ ಈ ಬಗೆಯ ಗ್ರಹಿಕೆ ನಿಜಕ್ಕೂ ತಂಪೆನಿಸುತ್ತದೆ. ವಾಸ್ತವವನ್ನು ವಿಷಣ್ಣವಾಗಿ ತೆರೆದಿಡುವ ಕವಿತೆ ಗಾಢ ವಿಷಾದ ಹುಟ್ಟಿಸುತ್ತದೆ.

ಕಳೆದ ಲೇಖನದಲ್ಲಿ ಜಯಂತರ ಪುಸ್ತಕಗಳ ಅರ್ಪಣೆಗಳ ಬಗ್ಗೆ ಮತ್ತು ಅವುಗಳ ಮಮತೆಯ ಬಗ್ಗೆ ಹೇಳಿದ್ದೆ. ಅವರ “ಬೊಗಸೆಯಲ್ಲಿ ಮಳೆ” ಎನ್ನುವ ಲೇಖನಗಳ ಸಂಗ್ರಹಕ್ಕೆ ಅವರ ಅರ್ಪಣೆ ಹೀಗಿದೆ ನೋಡಿ…

“ಸೀಸನ್ ಪಾಸು, ಬಾಚಣಿಗೆಯಿಂದ, ಬುತ್ತಿಯ ಪುಟ್ಟ ಚಪ್ಪಟೆ ಡಬ್ಬಿಯೊಂದಿಗೆ, ಫ್ಲಾಟ್ ಫಾರ್ಮಿನ ಮೇಲೆ ಓಡೋಡುತ್ತಾ ಇಕೋ ಇಂದಿನ ದೈನಿಕದ ಲೋಕಲ್ ರೈಲೊಳಗೆ ಫಕ್ಕನೆ ಸೇರಿಕೊಂಡ ಮುಂಬಯಿಯ ಅನಾನುಕೂಲಗಳ ನಿತ್ಯಯಾತ್ರಿಗೆ ಮತ್ತು ನಾಗರಾಜ ಹುಯಿಲಗೋಳ್ ಗೆ”
ಎಂದು ಅರ್ಪಿಸುತ್ತಾರೆ. ಅವರು ಬದುಕಿಗೆ ಸಣ್ಣ ಸಣ್ಣ ಅನುಭವವಾಗಿ ದಕ್ಕುವ ಪ್ರತಿಯೊಬ್ಬರಿಗೂ ಕೃತಾರ್ಥರಾಗುವ ಪರಿ ಅನನ್ಯ.

ಇದೆ ಪುಸ್ತಕದ ಮೊದಲ ಪುಟದಲ್ಲಿ ರವಿ ಬೆಳಗೆರೆಯವರು ಜಯಂತರ ಬಗ್ಗೆ ಹೀಗೆ ಬರೆಯುತ್ತಾರೆ….

“ಜಯಂತ್ ಭಾವಜೀವಿ. ಶಂಖವನ್ನು ಕಿವಿಗೆ ಹಿಡಿದರೆ, ಅದರೊಳಗಿನ ಪುಟಾಣಿ ಹುಳುವಿನ ಹೃದಯಕ್ಕೆ ಕವಾಟಗಳೆಷ್ಟು ಎಂಬುದನ್ನು ಹೇಳಬಲ್ಲ ಸೂಕ್ಷ್ಮ ಕಲೆಗಾರ”
(ರವಿ ಬೆಳಗೆರೆ)

ಎನ್ನುವಾಗ ಜಯಂತರ ಬಗ್ಗೆ ಆಳದ ಅಕ್ಕರೆ ಅಭಿಮಾನ ಉಕ್ಕಿ ಗಂಟಲುಬ್ಬುತ್ತದೆ. ನಾಡಿ ಪರೀಕ್ಷಿಸುವ ವೈದ್ಯನಿಗೆ ಗರ್ಭಿಣಿ ಹೆಣ್ಣು ಮಗಳ ನಾಡಿ ಮಿಡಿತದಲ್ಲಿ ತಾಯಿ ಮತ್ತು ಮಗುವಿನ ಎರೆಡೂ ನಾಡಿ ಬಡಿತವು ತಿಳಿದು ಬರುತ್ತದಂತೆ. ಅದು ಅವರು ಕಲಿತ ವಿದ್ಯೆ. ಹಾಗೇ ಶಂಕುಹುಳಿವಿನ ಕವಾಟಗಳ ಬಗ್ಗೆ ತಿಳಿಯುತ್ತಾರೆ ಎಂದ ರವಿಯವರ ಮಾತಿಲ್ಲಿ ಅತಿಶಯೋಕ್ತಿ ಅನಿಸದೆ ಆ ಹುಳುವನ್ನು ಎದೆಗೆ ತಂದುಕೊಂಡು ತಮ್ಮದೇ ಭಾಗವಾಗಿಸಿಕೊಂಡುಬಿಡಬಲ್ಲ ಸೂಕ್ಷ್ಮ ಕಲೆಗಾರ ಜಯಂತರಿಗೆ ಅದು ಒಂದು ಕಷ್ಟವೇ ಅಲ್ಲ ಅನಿಸಿಬಿಡುತ್ತದೆ.

ಮತ್ತೆ ಇಲ್ಲಿ ಸುಬ್ರಾಯ ಚೊಕ್ಕಾಡಿಯವರ ಮಾತನ್ನೂ ಗಮನಿಸಬಹುದು… “ಈ ಬರಹಗಳು ಚಿಂತಕನೊಬ್ಬನ ಪ್ರತಿಕ್ರಿಯೆ ಆಗಿರದೆ, ಸೂಕ್ಷ್ಮ ಸಂವೇದನಾಶೀಲ ಕವಿಯೊಬ್ಬನ ಪ್ರತಿಸ್ಪಂದನೆಗಳಾಗಿವೆ. ಓದಿನ ಸುಖವನ್ನು ನೀಡುವ ಈ ಬರಹಗಳ ಮೂಲಕ ಕುಂತಿ, ನಾವು ಈ ತನಕ ಕಾಣದ ಅಥವಾ ಕಂಡೂ ಗಮನಿಸದ ಜಗತ್ತಿನ ತುಣುಕುಗಳು, ಓದಿ ಮುಗಿದ ಮೇಲೂ ನಮ್ಮಲ್ಲಿ ಉಳಿಯುವಂತೆ ಮಾಡುತ್ತಾರೆ.”
(ಸುಬ್ರಾಯ ಚೊಕ್ಕಾಡಿ)

ಎನ್ನುತ್ತಾರೆ. ನನಗೆ ನಿಜವಾದ ಓದಿನ ಸುಖ ಕೊಟ್ಟ (ಕುಂ.ವೀರಭದ್ರಪ್ಪನವರು, ತೇಜಸ್ವಿಯವರು, ಅನಂತಮೂರ್ತಿಯವರು,ಕುವೆಂಪು….ಹೀಗೆ ಬಹಳಷ್ಟು ಮಂದಿ) ಹಲವರ ಸಾಲಿನಲ್ಲಿ ಜಯಂತರೂ ಇದ್ದಾರೆ. ಬಹುಶಃ ಇವರ ಬರಹದ ಓದಿನಲ್ಲಿ ಕಳೆದು ಹೋಗದೆಯೂ ಉಳಿಯಬಹುದೇ ಎನ್ನುವ ಉದ್ಗಾರ ಹೊರಡಿಸದ ಯಾರಾದರೂ ಇರಲಿಕ್ಕೆ ಸಾಧ್ಯವಾ… ಅನುಮಾನ. ಅದನ್ನೇ ಬಹಳ ಚಂದ ಹೇಳಿದ್ದಾರೆ ಸುಬ್ರಾಯ ಚೊಕ್ಕಾಡಿಯವರು.

 

ಹೆಣ್ಣಾದವಳು ಹಾಯಬೇಕಾಗಿ ಬರುವ ಅಗ್ನಿಕುಂಡಗಳು ಜೀವಂತವಾಗಿ ನಿಗಿನಿಗಿ ಹೊಳೆಯುವಾಗ ಗಂಡೊಬ್ಬನ ಈ ಬಗೆಯ ಗ್ರಹಿಕೆ ನಿಜಕ್ಕೂ ತಂಪೆನಿಸುತ್ತದೆ. ವಾಸ್ತವವನ್ನು ವಿಷಣ್ಣವಾಗಿ ತೆರೆದಿಡುವ ಕವಿತೆ ಗಾಢ ವಿಷಾದ ಹುಟ್ಟಿಸುತ್ತದೆ.

ಮನುಷ್ಯರ ಕ್ಷುಲ್ಲಕ ಗುಣಗಳು ಹುಟ್ಟುತ್ತವೆ… ಬೆಳೆಯುತ್ತವೆ… ಬೇರೂರಿ ಆಳಕ್ಕೆ ಇಳಿಯುತ್ತವೆ. ಹೇಗೆ ಎಂದು ಪದೇ ಪದೇ ಅನಿಸುತ್ತಿರುತ್ತದೆ ನನಗೆ. ಯಾಕೆ ಒಂದು ಮರಕ್ಕೆ ಸ್ವಾರ್ಥ ಇರುವುದಿಲ್ಲ, ಯಾಕೆ ಒಂದು ಪ್ರಾಣಿಗೆ ಹೊಟ್ಟೆಕಿಚ್ಚಾಗುವುದಿಲ್ಲ…. ಅರೆ ಇವೆಲ್ಲ ಮನುಷ್ಯನಲ್ಲಿ ಮಾತ್ರ ಯಾಕೆ…. ಆದರೆ ಯಾವತ್ತಿಗೂ ತಾನು ತಾನಾಗಿ ಬದುಕಲಾರದ ಅಂಗವಿಕಲ ಮನುಷ್ಯನಿಗೆ ಇಂತಹವೆಲ್ಲ ಸೋಗಿನ ಮುಖವಾಡಗಳು ಬೇಕು. ಒಳಗೆ ದುಷ್ಟ ನಗುವನ್ನಿಟ್ಟುಕೊಂಡು ಹೊರಗೆ ಅಳುತ್ತಾ ಸಂತಾಪ ಸೂಚಿಸಲಿಕ್ಕೆ ಅವನಿಗೆ ಮಾತ್ರ ಸಾಧ್ಯ. ಮಡಿಲಲ್ಲಿ ಮಲಗಿಸಿಕೊಂಡು ಲಾಲಿ ಹಾಡುತ್ತಾ ಕತ್ತು ಕುಯ್ಯುವ ಜಾಯಮಾನವಿದ್ದರೆ ಅದು ಮನುಷ್ಯನದು ಮಾತ್ರ. ಆದರೆ ಇಂತಹ ಮಾತುಗಳು ಸತ್ಯ ಎಂದು ತಿಳಿದೂ ಜೀರ್ಣವಾಗದೆ ಬೇಧಿಯಾಗುತ್ತವೆಯೇ ಹೊರತು ಹೃದಯಕ್ಕೆ ಇಳಿಯುವುದಿಲ್ಲ. ಇಳಿಸಿಕೊಳ್ಳಬೇಕೆನ್ನುವವರ ಸಂಖ್ಯೆಯೂ ವಿರಳ…

ಇಂತಹ ಅದೆಷ್ಟೋ ಮೇರೆ ಮೀರಿ ಕಾದು ಕುದ್ದು ಹಾಲಿನ ದಪ್ಪ ಕೆನೆಯಂತೆ ಮಡುಗಟ್ಟಿದ ತೀವ್ರ ವಿಷಾದದ ದಂಡೆ ಕವಿತೆಗಳಾದಾಗ ನಾವು ಸೋಲಬೇಕು ಅಷ್ಟೇ… ನನಗೆ ಜಯಂತರ ಕವಿತೆಗಳನ್ನು ಓದುವಾಗ ಅಂತಹ ಅನುಭವವಾಗುತ್ತದೆ.

ಒಬ್ಬ ಕವಿ ತಾನು ಪ್ರಪಂಚವನ್ನು ನೋಡಿ ಗ್ರಹಿಸಿದ್ದು ಒಂದು ಬಗೆಯ ಜ್ಞಾನವಾದರೆ ಪ್ರಪಂಚ ಅವನಿಗೆ ಅನಿವಾರ್ಯವಾಗಿ ಕಲಿಸಿದ ಅಥವಾ ನೀಡಿದ (ಎರೆಡೂ ಬಗೆಯದೂ…) ಜ್ಞಾನ ಮತ್ತೊಂದೇ ಬಗೆಯದು. ಕವಿ ಇದೆರೆಡರ ಸಮಪಾಕದಲ್ಲಿ ಬೆಂದು ಬರೆದಾಗ ಕವಿತೆ ಯಾರನ್ನಾದರೂ ಮುಟ್ಟಿ ತಟ್ಟಬಲ್ಲದು. ಮತ್ತೆ ಗ್ರಹಿಕೆ ಯಾವ ಬಗೆಯದ್ದೇ ಇರಲಿ ನನ್ನ ಗ್ರಹಿಕೆ ಎನ್ನುವುದು ಬಹಳ ಸೀಮಿತ ಕ್ಷಿತಿಜ. ಅದನ್ನು ಸಾಮಾನ್ಯೀಕರಿಸುವ ಹೊತ್ತಿನಲ್ಲಿ ಒಂದು ಕಾಳಜಿ ಒಂದು ಜಾಗ್ರತೆ ಬೇಕೇಬೇಕಿರುತ್ತದೆ. ಇಂತಹುದನ್ನು ನಿರ್ವಹಿಸುವ ರೀತಿಯನ್ನು ಕವಿತೆಯ ಅಚ್ಚಿಗೆ ಇಳಿಸುವ ಕಲೆಯನ್ನು ನಾವು ಜಯಂತರಂತಹ ಹಿರಿಯರಿಂದ ಕಲಿಯಲೇ ಬೇಕಿರುವುದು. ನಾನು ಕವಿತೆಯ ಸಾಪಾಸಾ ಅಭ್ಯಾಸ ಶುರುಮಾಡಿದಾಗ ನನ್ನನ್ನು ಬಹಳವಾಗಿ ಕಾಡಿದ, ಕಾಡುತ್ತಲೇ ಒಳಹೊಕ್ಕ ಕವಿ ಜಯಂತರು.

ನನಗೆ ಅವರ ಬದುಕನ್ನು ನೋಡುವ ಸೂಕ್ಷ್ಮ ದೃಷ್ಟಿ ಬಹಳ ಸೋಜಿಗ ಊಂಟು ಮಾಡುತ್ತದೆ. ಬದುಕಿನ ನಿಜವಾದ ಅರ್ಥ ಇರುವುದೇ ಸಣ್ಣ ಸಣ್ಣ ವಿಚಾರಗಳಲ್ಲಿ. ಯಾವುದನ್ನೂ ಇಷ್ಟೆ ತಾನೇ.. ಇಷ್ಟೇನಾ… ಎಂದು ಸಾರಾಸಗಟಾಗಿ ತಳ್ಳಿಹಾಕಲು ನೋಡುತ್ತಿರುತ್ತೇವೋ ಅವೇ ಬದುಕಿನ ನಿಜವಾದ ಆಧಾರ ಸ್ಥಂಭಗಳಾಗಿರುತ್ತವೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವಾಗಲೂ ಒಬ್ಬರು ಇನ್ನೊಬ್ಬರ ಹುಳುಕುಗಳನ್ನು ಹುಡುಕುವಷ್ಟು ಸುಲಭವಾಗಿ ಅವರ ಒಳ್ಳೆಯತನಗಳನ್ನು ಏಕೆ ಹುಡುಕಲಾರೆವು… ಮತ್ತೆ ನಾವೆಷ್ಟು ಸಾರ್ಥಿಗಳಾಗಿರುತ್ತೇವೆಂದರೆ ನಮಗೆ ಬೇರೆಯವರು ನಮಗೆ ಮನ್ನಣೆ ನೀಡದ ಹೊರತು ಅವರನ್ನು ನಾವು ಗೌರಿವಿಸಲಾರೆವು. ಕಸುಬುದಾರನಾದವನು ಕಸುಬನ್ನು ನೋಡಬೇಕೇ ವಿನಃ ನಡುವೆ ವೈಕ್ತಿಕ ರಾಗದ್ವೇಶಗಳು ಅಡ್ಡಿಯಾಗಬಾರದು. ಆ ಮಟ್ಟಿಗಿನ ನಿಗ್ರಹ, ನಿರ್ವಹಿಸುವ ಶಕ್ತಿ ಬೇಕಿರುತ್ತದೆ. ಮತ್ತೆ ನಾವು ಪರಿಪೂರ್ಣರಲ್ಲ ಎಂದ ಮೇಲೆ ಇತರರಿಂದ ಆ ಪರಿಪೂರ್ಣತೆಯನ್ನು ಬಯಸಬೇಕು ಏಕೆ… ನಮ್ಮ ನಡವಳಿಕೆಗಳೇ ವಿಚಿತ್ರಾನಪ್ಪಾ….

ಹೀಗೆಲ್ಲ ನಮ್ಮೊಳಗೆ ನಾವು ಹೊಕ್ಕು ನೋಡಲಿಕ್ಕೆ ಶುರು ಮಾಡುವಂತೆ ಮಾಡುತ್ತವೆ ಜಯಂತರ ಕವಿತೆಗಳು. ಅವರ ಕವಿತೆಗಳು ಅಪ್ಪಟ ಅಂತಃಕರಣದಿಂದ ಸ್ಫುರಿಸಿದಂತೆ ಹುಟ್ಟುತ್ತವೆ. ಅವರ ಒಂದು ಜಿಲೇಬಿ ಕವಿತೆ ಹೀಗೆ ಪ್ರಾರಭವಾಗುತ್ತದೆ ನೋಡಿ…

“ಬಸ್ ಸ್ಟ್ಯಾಂಡ್ ತನಕ ಬಿಟ್ಟು ಬಾರೋ
ಅಂದಿದ್ದಕ್ಕೆ ಯಾಕಿಷ್ಟು ಸಿಟ್ಟು ಪೋರಾ
ನಿನ್ನ ಬೇಬಕ್ಕ ಕಣೋ ಅವಳು
ಈ ಒಂದನಿ ಮಾಮನಪ್ಪಾ ನೀನು ಎತ್ತಿಕೊಳ್ಳೋ
ಮುದ್ದು ಮಾಡೋ

ಹೋಗ್ತಾ ತಿರುವಿನ ಗೂಡಂಗಡಿಯಲ್ಲಿ
ಪೆಪ್ಪರಮಿಂಟು ಕೊಡಿಸು
ಪುಟ್ಟ ಬಳೆಗಳ ಪುಟಾಣಿ ಬೊಗಸೆಯಲ್ಲಿ
ಅವಕೆ ಇನ್ನೂ ಬಣ್ಣ ನೋಡು…”
(ಒಂದು ಜಿಲೇಬಿ)

ಎಷ್ಟು ಕಕ್ಕುಲಾತಿ ಈ ಸಾಲುಗಳಿಗೆ?! ಕಣ್ಣನ್ನು ತೇವಗೊಳಿಸಿ, ದೃಷ್ಟಿಯನ್ನು ಮಂಜಾಗಿಸುವಷ್ಟು ಆರ್ದ್ರ. ಓದಿಯಾದ ಮೇಲೆ ಎಂಥವರಿಗಾದರೂ ಆತ್ಮವಿಮರ್ಶೆಗೆ ಇಳಿಯಲೇಬೇಕೆನಿಸುವಂತೆ ಮಾಡಿಬಿಡುತ್ತವೆ. ಗಪದ್ಯದ ಮಾದರಿಯಲ್ಲಿ ಬರೆಯುವ ಜಯಂತರ ಕವಿತೆಗಳು ಇಂದಿನ ಕವಿಗಳನ್ನು ನಿಜಕ್ಕೂ ಕೈಹಿಡಿದು ನಡೆಸುತ್ತವೆ. ಕವಿತೆ ಹೆಚ್ಚು ನೈಜ ಹೆಚ್ಚು ಭಾವುಕವಾದಷ್ಟೂ ಓದುಗನ ಹೃದಯಕ್ಕೆ ನೇರವಾಗಿ ಇಳಿಯತೊಡಗುತ್ತವೆ.

“ಆ ಹನಿಯಲ್ಲಿ ಆಗ ಹೊಳೆಯುವವರು
ಶಹರದ ಬಾರುಗಳಿಂದ ಉಚ್ಛಾಟಿಸಲ್ಪಟ್ಟು
ಹೈವೇ ಟ್ರಕ್ಕುಗಳಿಗೆ ದುಂಬಾಲುಬಿದ್ದು ಬೇರೆ ಬೇರೆ
ಊರುಗಳಲ್ಲಿ ಬೇರೆ ಬೇರೆ ರೀತಿಯಿಂದ ಜಿಗಿದು
ಬೇವಿನ ಕಡ್ಡಿಯಲ್ಲಿ ಹಲ್ಲುಜ್ಜುತ್ತ ಕೂತ
ಸುರಾಸುಂದರಿಯರು”
(ಸುಂದರಿಯರ ಮುಡಿಗೆ)

ಇಂತಹ ರಚನೆಗಳು ತಾಂತ್ರಿಕ ದೃಷ್ಟಿಯಿಂದಲೂ ಹಲವಾರು ಅಂಶಗಳನ್ನು ತಿಳಿಸಿಕೊಡುತ್ತವೆ. ಇತ್ತೀಚೆಗೆ ಅನುಕರಿಸಲು ಹೋಗಿ ಅಪಸವ್ಯಗಳದಾಂಥ ಬಹಳಷ್ಟು ಉದಾಹರಣೆಗಳನ್ನು ಗಮನಿಸುತ್ತಲೇ ಅನುಕರಣೆ ಮತ್ತು ಕಲಿಕೆಗಿರುವ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸಕ್ಕಿಳಿಯಬೇಕು ಎನ್ನುವುದನ್ನು ಕೆಂಪು ಮಸಿಯಿಂದ ಗೆರೆ ಎಳೆದಿಟ್ಟುಕೊಂಡು ಮುನ್ನಡೆಯಬೇಕಿದೆ.

(ಮುಂದುವರಿಯುತ್ತದೆ..)