ತನ್ನ ಸುವಿಶಾಲವಾದ ಸಾಮ್ರಾಜ್ಯವನ್ನು ಹರ್ಷನು ದಕ್ಷತೆಯಿಂದಲೂ, ಶ್ರದ್ಧೆಯಿಂದಲೂ ಪರಿಪಾಲಿಸುತ್ತಿದ್ದನು. ದೇಶರಕ್ಷಣೆಗಾಗಿ ಚದುರಂಗ ಸೈನ್ಯವಿದ್ದಿತು. ಹರ್ಷನ ರಾಜ್ಯಭಾರ ಕ್ರಮವು ಗುಪ್ತರ ಕ್ರಮವನ್ನು ಹೋಲುತ್ತದೆ. ಪ್ರಾಂತ್ಯ, ಜಿಲ್ಲೆ, ಗ್ರಾಮಗಳ ಆಡಳಿತವನ್ನು ಆಯಾ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಹರ್ಷನು ಸ್ವತಃ ದೇಶದ ಪ್ರತಿಯೊಂದು ವಿಭಾಗವನ್ನು ಸಂದರ್ಶಿಸುತ್ತಿದ್ದನು. ರೈತರು ತಮ್ಮ ಆದಾಯದ ಅಂಶವನ್ನು ಕಂದಾಯ ರೂಪದಲ್ಲಿ ತೆರಬೇಕಾಗಿತ್ತು. ಕಠಿಣ ತೆರಿಗೆಯು ಹೇರಲ್ಪಡುತ್ತಿರಲಿಲ್ಲ. ರಾಜ್ಯದ ಆದಾಯದ ಕಾಲಂಶವನ್ನು ಸರಕಾರದ ಖರ್ಚಿಗೂ, ಇನ್ನೊಂದು ಅಂಶವನ್ನು ಅಧಿಕಾರಿಗಳ ವೇತನಕ್ಕೂ, ಮತ್ತೊಂದು ಅಂಶವನ್ನು ಸಾಹಿತ್ಯ, ಕಲೆಗಳ ಪ್ರೋತ್ಸಾಹಕ್ಕೂ, ಉಳಿದ ಅಂಶವನ್ನು ಧರ್ಮಗಳ ಪ್ರಸಾರಕ್ಕಾಗಿಯೂ ವಿನಿಯೋಗಿಸಲಾಗುತ್ತಿತ್ತು.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಮತ್ತೊಂದು ಬರಹ ಇಲ್ಲಿದೆ.

ಮೌರ್ಯರ ಕಾಲದ ಆಡಳಿತ – ಪ್ರಾಂತಿಕ ಮತ್ತು ಸ್ಥಳೀಯ

ವಿಶಾಲವಾದ ಸಾಮ್ರಾಜ್ಯವನ್ನು ಕೆಲವು ಪ್ರಾಂತ್ಯಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರಾಂತ್ಯಗಳು ರಾಜವಂಶಕ್ಕೆ ಸೇರಿದವರಿಂದ ಆಳಲ್ಪಡುತ್ತಿದ್ದವು. ದೂರ ಪ್ರಾಂತ್ಯಗಲ್ಲಿ ವೈಸ್ ರಾಯರುಗಳೂ ಸಮೀಪದ ಪ್ರಾಂತಗಳಲ್ಲಿ ಗವರ್ನರುಗಳೂ ಅಡಳಿತೆ ನಡೆಸುತ್ತಿದ್ದರು. ವೈಸ್ ರಾಯನು ರಜ್ಜುಕಾಸ್ ಎಂಬ ಕಮಿಶನರನ್ನೂ, ಪ್ರಾದೇಶಿಕರೆಂಬ ಜಿಲ್ಲಾಧಿಕಾರಿಗಳನ್ನೂ ಸಹಾಯಕ್ಕೆ ನೇಮಿಸಿಬಹುದಿತ್ತು. ರಾಜನ ಅಪ್ಪಣೆಯನ್ನು ವಹಿಸಿ, ಕಂದಾಯವನ್ನೆತ್ತಿ ವೈಸ್ ರಾಯನು ಆಳಬೇಕಿತ್ತು. ಶಾಂತಿರಕ್ಷಣೆಯೂ ಅವನ ಕೆಲಸವಾಗಿದ್ದಿತು.

ಸಾಮ್ರಾಜ್ಯದ ದಿವಾನೀ ಆಡಳಿತೆಗೆ ಸಹಾಯಕ್ಕೆ ಹಲವು ಇಲಾಖೆಗಳಿದ್ದುವು. ನೀರಾವರಿ ಇಲಾಖೆಯು ಕೃಷಿಗೆ ನೀರು ದೊರಕಿಸುವ ಯೋಜನೆಯನ್ನು ಕೈಗೊಂಡಿತ್ತು. ಆರ್ಥಿಕ ಇಲಾಖೆಯು ಭೂಕಂದಾಯವನ್ನು ಎತ್ತಬೇಕಿತ್ತು. ಸಾರ್ವಜನಿಕ ಕಾಮಗಾರಿ ಇಲಾಖೆಯು ಮಾರ್ಗಗಳನ್ನು ಮಾಡಿ, ಸಾಲುಮರಗಳನ್ನು ನೆಡಿಸಿ, ಸಾರಿಗೆ ವ್ಯವಸ್ಥೆ ಸರಿಯಾಗಿ ಇರುವಂತೆ ನೋಡಿಕೊಳ್ಳಬೇಕಿತ್ತು. ಅಲ್ಲದೆ ಪ್ರಯಾಣಿಕರಿಗೆ ಧರ್ಮಚ್ಛತ್ರಗಳನ್ನು ಕಟ್ಟಿಸಿಕೊಡಬೇಕು. ಬಲವಾದ ಸೈನ್ಯವನ್ನು ನಡೆಸಿಕೊಳ್ಳುವುದಕ್ಕೆ ಪ್ರತ್ಯೇಕ ಆಡಳಿತ ಇಲಾಖೆಯಿತ್ತು.

ನಗರಗಳ ಆಡಳಿತೆಗೆ ಈಗಿನ ನಗರಗಳ ಮುನಿಸಿಪಾಲಿಟಿಗಳ ಹಾಗೆ 30 ಜನರ ಸಭೆ ಇತ್ತು. ಸದಸ್ಯರನ್ನು ಆರು ಸಮಿತಿಗಳಾಗಿ ವಿಭಾಗಿಸಲಾಗಿತ್ತು. ಕೈಗಾರಿಕೆಯ ಕುರಿತು – ವಿದೇಶೀಯರ ಸತ್ಕಾರದ ಕುರಿತು – ಜನನ ಮರಣ ಅಂಕೆ ಸಂಕೆಗಳ ಕುರಿತು – ವ್ಯಾಪಾರಿಗಳ ತೂಕ ಅಳತೆಗಳ ಕುರಿತು – ಸಿದ್ಧವಸ್ತುಗಳ ಮಾರಾಟದ ಕುರಿತು ಇವು ನೋಡುತ್ತಿದ್ದುವು. ಆರನೆಯ ಸಮಿತಿಯು ತೆರಿಗೆಯನ್ನು ವಸೂಲು ಮಾಡುತ್ತಿತ್ತು. ರಾಜನಿಂದ ನೇಮಿಸಲ್ಪಟ್ಟ ನಗರಕನೆಂಬ ಅಧಿಕಾರಿಯು ಶಾಂತಿ ರಕ್ಷಣೆಯ ಮೇಲ್ವಿಚಾರಣೆಯನ್ನು ಮಾಡುತ್ತಿದ್ದನು.

ಗ್ರಾಮಗಳಲ್ಲಿಯೂ ಪ್ರಜಾಪ್ರಭುತ್ವವು ಆಚರಣೆಯಲ್ಲಿತ್ತು. ಗ್ರಾಮವು ಸ್ವತಂತ್ರವಾಗಿದ್ದು, ಗ್ರಾಮನಿ ಎಂಬ ಮುಖ್ಯಸ್ಥನಿಂದ ವಿಚಾರಿಸಲ್ಪಡುತ್ತಿತ್ತು. ಕೆಲವು ಗ್ರಾಮಗಳು ಗೋಪಾ ಎಂಬ ಅಧಿಕಾರಿಯ ಆಳ್ವಿಕೆಯಲ್ಲಿದ್ದುವು. ಈ ಅಧಿಕಾರಿಯು ಭೂಕಂದಾಯವನ್ನು ವಸೂಲು ಮಾಡಿ ಭೂ ಸಂಬಂಧದ ಲೆಕ್ಕಪತ್ರಗಳನ್ನು ಇಟ್ಟುಕೊಳ್ಳುತ್ತಿದ್ದನು.

ರಾಜನು ತನಗೆ ಸಲಹೆ ಕೊಡಲು ಮಹಾಮಂತ್ರಾಲಯವೆಂಬ ಮಂತ್ರಿಮಂಡಲವನ್ನು ನೇಮಿಸಿದ್ದನು. ಭೂ ಕಂದಾಯದಿಂದಲೂ, ಸುಂಕದಿಂದಲೂ, ನಾಣ್ಯಗಳ ಲಾಭದಿಂದಲೂ, ಸಮ್ಮತಿ ಪತ್ರದಿಂದಲೂ, ಜುಲ್ಮಾನೆಯಿಂದಲೂ ರಾಜನ ಖಜಾನೆಗೆ ಹಣ ಬರುತ್ತಿತ್ತು.

ಗುಪ್ತರ ರಾಜ್ಯಭರಣ

ವಿಶಾಲವಾದ ಸಾಮ್ರಾಜ್ಯವನ್ನು ‘ಭುಕ್ತಿ’ ಮತ್ತು ದೇಶಗಳಾಗಿ ವಿಭಜಿಸಲ್ಪಟ್ಟಿತ್ತು. ಈ ವಿಭಾಗಗಳನ್ನು ‘ವಿಪರಿಕ’ ಮತ್ತು ‘ಗೋಪ್ತಿ’ ಎಂಬ ಅಧಿಕಾರಿಗಳ ಮೂಲಕ ಆಳಲಾಗುತ್ತಿತ್ತು. ಜಿಲ್ಲೆಗಳನ್ನು ‘ವಿಷಯ’ ಮತ್ತು ‘ಪ್ರದೇಶ’ಗಳೆಂದು ಕರೆಯುತ್ತಿದ್ದರು. ವಿಷಯಪತಿಗಳು ಇವುಗಳ ಅಧಿಕಾರಿಗಳಾಗಿರುತ್ತಿದ್ದರು. ಜಿಲ್ಲೆಗಳನ್ನು ಗ್ರಾಮಗಳಾಗಿ ವಿಭಜಿಸಿದ್ದರು. ಅವುಗಳು ಗ್ರಾಮ ಮುಖಂಡನಿಂದ ಆಳಲ್ಪಡುತ್ತಿದ್ದುವು. ರಾಜನು ಆಡಳಿತೆಯಲ್ಲಿ ಮಂತ್ರಿಮಂಡಲದ ಸಲಹೆಯನ್ನು ಪಡೆಯುತ್ತಿದ್ದನು.

ವ್ಯಾಪಾರದಿಂದಾಗಿ ದೇಶವು ಸಂಪತ್ಸಮೃದ್ಧವಾಗಿತ್ತು. ಬಡವರಿಗಾಗಿ ಧರ್ಮಾಸ್ಪತ್ರೆಗಳು ನಡೆಸಲ್ಪಡುತ್ತಿದ್ದುವು. ರೈತರಿಂದ ಕಡಿಮೆ ಭೂ ಕಂದಾಯವು ಎತ್ತಲ್ಪಡುತ್ತಿತ್ತು. ಎಲ್ಲ ಅಧಿಕಾರಿಗಳಿಗೂ ನಿಶ್ಚಿತ ಸಂಬಳವು ನಿಶ್ಚಿತ ಸಮಯದಲ್ಲಿ ಕೊಡಲಾಗುತ್ತಿತ್ತು. ರಾಜನು ದೈಹಿಕ ಶಿಕ್ಷೆಯನ್ನು ವಿಧಿಸುತ್ತಿರಲಿಲ್ಲ. ಕೊಲೆಗಡುಕರಿಂದ ಜುಲ್ಮಾನೆಯನ್ನು ವಸೂಲು ಮಾಡುತ್ತಿದ್ದನು. ಆದರೂ ದೇಶದಲ್ಲಿ ಕಳ್ಳಕಾಕರಿರಲಿಲ್ಲ.

ಹರ್ಷನ ರಾಜ್ಯಭಾರ

ತನ್ನ ಸುವಿಶಾಲವಾದ ಸಾಮ್ರಾಜ್ಯವನ್ನು ಹರ್ಷನು ದಕ್ಷತೆಯಿಂದಲೂ, ಶ್ರದ್ಧೆಯಿಂದಲೂ ಪರಿಪಾಲಿಸುತ್ತಿದ್ದನು. ದೇಶರಕ್ಷಣೆಗಾಗಿ ಚದುರಂಗ ಸೈನ್ಯವಿದ್ದಿತು. ಹರ್ಷನ ರಾಜ್ಯಭಾರ ಕ್ರಮವು ಗುಪ್ತರ ಕ್ರಮವನ್ನು ಹೋಲುತ್ತದೆ. ಪ್ರಾಂತ್ಯ, ಜಿಲ್ಲೆ, ಗ್ರಾಮಗಳ ಆಡಳಿತವನ್ನು ಆಯಾ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದರು. ಹರ್ಷನು ಸ್ವತಃ ದೇಶದ ಪ್ರತಿಯೊಂದು ವಿಭಾಗವನ್ನು ಸಂದರ್ಶಿಸುತ್ತಿದ್ದನು. ರೈತರು ತಮ್ಮ ಆದಾಯದ ಅಂಶವನ್ನು ಕಂದಾಯ ರೂಪದಲ್ಲಿ ತೆರಬೇಕಾಗಿತ್ತು. ಕಠಿಣ ತೆರಿಗೆಯು ಹೇರಲ್ಪಡುತ್ತಿರಲಿಲ್ಲ. ರಾಜ್ಯದ ಆದಾಯದ ಕಾಲಂಶವನ್ನು ಸರಕಾರದ ಖರ್ಚಿಗೂ, ಇನ್ನೊಂದು ಅಂಶವನ್ನು ಅಧಿಕಾರಿಗಳ ವೇತನಕ್ಕೂ, ಮತ್ತೊಂದು ಅಂಶವನ್ನು ಸಾಹಿತ್ಯ, ಕಲೆಗಳ ಪ್ರೋತ್ಸಾಹಕ್ಕೂ, ಉಳಿದ ಅಂಶವನ್ನು ಧರ್ಮಗಳ ಪ್ರಸಾರಕ್ಕಾಗಿಯೂ ವಿನಿಯೋಗಿಸಲಾಗುತ್ತಿತ್ತು.

ತಪ್ಪಿತಸ್ಥರು ಕಠಿಣವಾಗಿ ದಂಡಿಸಲ್ಪಡುತ್ತಿದ್ದರು. ಸಮಾಜದ ಹಿತಕ್ಕೆ ಭಂಗ ತರುವವರಿಗೆ ಕೈಕಾಲು ಛೇದನ, ಕಾರಾಗೃಹವಾಸ, ಜೀವಾವಧಿ ಶಿಕ್ಷೆ, ಜುಲ್ಮಾನೆ ಮುಂತಾದ ದಂಡನೆಗಳನ್ನು ನೀಡಲಾಗುತ್ತಿತ್ತು. ಉತ್ತಮ ರೀತಿಯ ಆಡಳಿತವು ನಡೆಸಲ್ಪಡುತ್ತಿದ್ದುದರಿಂದ ಅಥವಾ ಸಮಾಜದ್ರೋಹಿಗಳ ಸಂಖ್ಯೆ ಕಡಿಮೆಯಾಗಿದ್ದುದರಿಂದ, ರಾಜ್ಯವು ಉತ್ತಮ ಸ್ಥಿತಿಯಲ್ಲಿ ಇತ್ತೆಂದು ಹ್ಯೂಯೆನ್‌ತ್ಸಾಂಗನು ಬರೆಯುತ್ತಾನೆ.

ಮುಸ್ಲಿಂ ರಾಜ್ಯಪದ್ಧತಿ

ಇಸ್ಲಾಂ ಪೂರ್ವದಲ್ಲಿಯೇ ಅರಬ್ ಪಂಗಡಗಳು ತಮಗೆ ಬೇಕಾದ ನಾಯಕನನ್ನು ತಾವೇ ಆರಿಸಿಕೊಳ್ಳುತ್ತಿದ್ದರು. ಇಸ್ಲಾಂ ಬಂದ ಮೇಲೆ ಎಲ್ಲಾ ಪಂಗಡಗಳು ಒಂದಾದುವು ಹಾಗೂ ಮಹಮ್ಮದ್ ಪೈಗಂಬರರು ಅವರ ಮೊದಲ ನಾಯಕರಾದರು. ದೇವನೊಬ್ಬನೇ ಪ್ರಭುವೆಂದೂ, ಉಳಿದವರೆಲ್ಲಾ ಅವನ ಸೇವಕರೆಂದೂ ಪೈಗಂಬರರು ಸಾರಿದರು. ಕುರಾನ್ ದೇವವಾಕ್ಯವಾದ್ದರಿಂದ ಎಲ್ಲರೂ ಅದಕ್ಕನುಸಾರವಾಗಿ ನಡೆಯತಕ್ಕದ್ದೆಂದು ಬೋಧಿಸಿದರು. ಅದೇ ತತ್ವವನ್ನು ಮುಂದಿನ ಖಲೀಫರು (ಖಲೀಫ ‘ಉತ್ತರಾಧಿಕಾರಿ’) ಅನುಸರಿಸಿದರು. ರಾಜ್ಯಾಧಿಕಾರವು ಜನರಲ್ಲಿ ನೆಲಸಿರುವುದಲ್ಲದೆ ಖಲೀಫರಲ್ಲಲ್ಲ; ಖಲೀಫರು ದೈವ ಸಂಕಲ್ಪವನ್ನು ನೆರವೇರಿಸುವ ಸಾಧನ ಮಾತ್ರ ಎಂದು ಈ ಖಲೀಫರು ತಿಳಿದರು. ಮೊದಲ ನಾಲ್ಕು ಖಲೀಫರು ಈ ತತ್ವದಂತೆ ಸರಳ ಜೀವನ ನಡೆಸಿ ಧರ್ಮಪೂರ್ವಕವಾಗಿ ರಾಜ್ಯಭಾರ ಮಾಡಿದರು. ಯಾವ ಆಡಂಬರವೂ ಇಲ್ಲದೆ ಗುಡಿಸಲುಗಳಲ್ಲಿ ವಾಸಿಸುತ್ತ, ಮಸೀದಿಗಳಲ್ಲಿ ಓಲಗ ಕೊಡುತ್ತ, ಜನರ ಹಿತಕ್ಕಾಗಿ ದುಡಿಯುತ್ತಿದ್ದರು. ಖಲೀಫನೇ ನ್ಯಾಯ, ಕೋಶ, ದಂಡಾಧಿಕಾರಿಯಾಗಿದ್ದನು. ಜನರು ಅವನಲ್ಲಿ ತಮ್ಮ ಸುಖ ದುಃಖಗಳ ಬಗ್ಗೆ ಅರಿಕೆ ಮಾಡಿಕೊಳ್ಳಬಹುದಾಗಿತ್ತು. ಅನಂತರದ ಖಲೀಫರು ಒಂದೊಂದಾಗಿ ಅಧಿಕಾರವನ್ನು ಗಳಿಸುತ್ತ ಬಂದರು. ತಮ್ಮ ಮಕ್ಕಳನ್ನು ಪಟ್ಟದ ಹಕ್ಕುದಾರರನ್ನಾಗಿ ಮಾಡಿದರು. ಪ್ರಾಂತಾಧಿಕಾರಿಗಳನ್ನೂ, ಬೇರೆ ಬೇರೆ ಇಲಾಖೆಗಳ ಆಡಳಿತೆಗೆ ಮಂತ್ರಿಗಳನ್ನೂ ಖಲೀಫರು ನೇಮಿಸಿದರು. ಕಾಲಕ್ರಮೇಣ ಖಲೀಫರು ನಿರಂಕುಶ ಪ್ರಭುಗಳಾದರು. ಹಲವು ರೀತಿಗಳಿಂದ ಹಣ ಮತ್ತು ಆಸ್ತಿಗಳನ್ನು ತಮ್ಮ ವಿಲಾಸ ಜೀವನಕ್ಕಾಗಿ ಅವರು ದೋಚುತ್ತಿದ್ದರು. ಅಧಿಕಾರಿಗಳನ್ನು ಮನ ಬಂದಂತೆ ತೆಗೆದುಹಾಕುತ್ತಿದ್ದರು. ಆ ಸ್ಥಾನದ ವೈಭವ, ಆಡಂಬರಗಳಿಗೆ ಪ್ರಾಧಾನ್ಯತೆ ಬಂತು.

ಭಾರತದ ಮುಸ್ಲಿಂ ಅರಸರು

ಖಲೀಫನ ಅಧಿಕಾರಕ್ಕೊಳಗಾದವರು ಸಿಂಧ್‌ನಲ್ಲಿ ಮತ್ತು ಮುಲ್ತಾನ್‌ನಲ್ಲಿ ಆಳುತ್ತಿದ್ದರು. ಘಜನಿ ಮೊಹಮ್ಮದನಿಂದ ಮೊದಲ್ಗೊಂಡು ಇಲ್ಲಿ ಆಳಿದ ಮುಸ್ಲಿಂ ಅರಸರು ನಿರಂಕುಶರಾಗಿದ್ದರು. ಅವರು ಸ್ವತಂತ್ರ ಆಲೋಚನೆಯಿಂದ ಆಳುತ್ತಿದ್ದರು. ಅವರು ಕೆಲವೊಮ್ಮೆ ವಜೀರ್ ಮತ್ತು ಸಹರಿಯಾರ್ ಎಂಬ ಅಧಿಕಾರಿಗಳನ್ನು ನೇಮಿಸುತ್ತಿದ್ದರು; ಆದರೆ ಅವರಿಗೆ ಹೆಚ್ಚಿನ ಅಧಿಕಾರವಿರಲಿಲ್ಲ. ನ್ಯಾಯಾಡಳಿತೆಗೆ ದೊಡ್ಡ ಶಹರಗಳಲ್ಲಿ ಕಾಜಿಗಳನ್ನು ನೇಮಿಸುತ್ತಿದ್ದರು. ಇವರು ಕುರಾನಿನಲ್ಲಿ ಹೇಳಿದಂತೆ ನ್ಯಾಯ ವಿತರಣೆ ಮಾಡುತ್ತಿದ್ದರು. ಆದರೂ ರಾಜನೇ ಮುಖ್ಯ ನ್ಯಾಯಾಧಿಕಾರಿಯಾಗಿದ್ದನು. ಪ್ರಜೆಗಳಿಗೆ ರಾಜನಲ್ಲಿ ನೇರವಾಗಿ ಮೊರೆಯಿಡುವ ಹಕ್ಕಿತ್ತು. ಹೆಚ್ಚಿನ ಅರಸರಿಗೂ ಸ್ಥಿರಗೊಳಿಸಿದ ಸೈನ್ಯವಿರಲಿಲ್ಲ. ಶ್ರಿಮಂತರು ನಿಶ್ಚಿತ ಸೈನ್ಯವನ್ನು ಯುದ್ಧಕಾಲದಲ್ಲಿ ರಾಜನಿಗೆ ಒದಗಿಸಬೇಕಾಗಿತ್ತು. ಸೈನ್ಯದ ಖರ್ಚಿಗೆ ರಾಜನು ಸಹಾಯ ಮಾಡುತ್ತಿದ್ದನು. ಪ್ರಾಂತ್ಯದಲ್ಲಿ ಗವರ್ನರನು ಆಳುತ್ತಿದ್ದನು. ಇವನಿಗೆ ರಾಜಾಜ್ಞೆಯನ್ನು ಕಾರ್ಯಗತಗೊಳಿಸುವುದು ಮಾತ್ರ ಕೆಲಸವಾಗಿತ್ತು.

ಕಂದಾಯ- 1. ಭೂಕಂದಾಯ; ಭೂಮಿಯನ್ನು ಆಗಾಗ ಅಳೆದು ಸರ್ವೆ ಮಾಡಿಸಿ ಕಂದಾಯವನ್ನು ಪರಿಷ್ಕರಿಸಲಾಗುತ್ತಿತ್ತು. ಇದರ ವಸೂಲಿಗೆ ಅಮಲ್ ಗುಜಾರ್ ಎಂಬ ಅಧಿಕಾರಿಗಳಿರುತ್ತಿದ್ದರು. 2. ಜಿಜಿಯಾ; ಮುಸ್ಲಿಂ ಅಲ್ಲದವರು ತೆರಬೇಕಾಗಿದ್ದ ತಲೆಗಂದಾಯ. 3. ರಾಜದರ್ಶನಕ್ಕೆ ಬರುವವರು ತರುತ್ತಿದ್ದ ಕಾಣಿಕೆ. 4. ಅಧಿಕಾರಿಗಳು ಅಥವಾ ಶ್ರೀಮಂತರು ಸತ್ತಾಗ ಕೆಲವು ಸಲ ಅವರ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕುವುದು.

ರಾಜ್ಯದ ವೆಚ್ಚ: ಆದಾಯದ ಹೆಚ್ಚಿನ ಅಂಶವೂ ಅರಮನೆ, ಸೈನ್ಯಗಳಿಗಾಗಿ ಖರ್ಚಾಗುತ್ತಿತ್ತು. ಉಳಿದುದನ್ನು ಶಾಲೆಗಳನ್ನು ನಡೆಸಲೂ, ಮಾರ್ಗ ಮೊದಲಾದ ಸಾರ್ವಜನಿಕ ಕೆಲಸಗಳಿಗಾಗಿಯೂ, ಪಂಡಿತರು, ಮೌಲ್ವಿಗಳು, ಮತ್ತು ಕಲಾವಿದರಿಗೆ ಸಂಭಾವನೆ ಕೊಡಲು ಮತ್ತು ಕಟ್ಟಡ ನಿರ್ಮಾಣಕ್ಕೆ ವ್ಯಯವಾಗುತ್ತಿತ್ತು.

ಮೂರನೆ ಭಾಗ
ಧರ್ಮ

ದ್ರಾವಿಡ ಧರ್ಮ
ಮಾರಿಯಮ್ಮನನ್ನು (‘ಮದರ್ ಗಾಡೆಸ್’ ಅರ್ಥಾತ್ ಮಾತೃದೇವತೆ) ದ್ರಾವಿಡರು ಆರಾಧಿಸುತ್ತಿದ್ದರು. ಈ ದೇವತೆಯ ಮಣ್ಣಿನ ಪ್ರತಿಮೆಗಳು ದೊರೆತಿವೆ. ಕೋಳಿ, ಕುರಿ, ಕೋಣ ಇತ್ಯಾದಿ ಪ್ರಾಣಿಗಳನ್ನು ಈ ದೇವತೆಗೆ ಬಲಿ ಕೊಡುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ನರಬಲಿ ಕೂಡ ಕೊಡಲ್ಪಡುತ್ತಿತ್ತು. ದೊರಕಿದ ಒಂದು ಇಟ್ಟಿಗೆ ಹಲಗೆಯ ಮೇಲೆ ಯೋಗಾಸನದಲ್ಲಿ ಕುಳಿತಿರುವ ಮೂರು ತಲೆಗಳ ಒಬ್ಬ ಮನುಷ್ಯ, ಅವನ ಎದುರು ಮತ್ತು ಪಕ್ಕದಲ್ಲಿ ನಾಲ್ಕು ಪ್ರಾಣಿಗಳ ಚಿತ್ರಗಳು ಬರೆಯಲ್ಪಟ್ಟಿವೆ. ಆದ್ದರಿಂದ ಪಶುಪತಿಯ ಆರಾಧನೆಯು ಪ್ರಚಲಿತವಾಗಿತ್ತೆಂದು ತೋರುತ್ತದೆ. ಇದು ಈಗಿನ ಶಿವಾರಾಧನೆಯ ಆರಂಭವಾಗಿರಬೇಕೆಂದು ಊಹಿಸುತ್ತಾರೆ. ಇದಲ್ಲದೆ ಮರಗಳನ್ನೂ ಮೃಗಗಳನ್ನೂ ಈ ಜನರು ಪೂಜಿಸುತ್ತಿದ್ದರು.

ಆರ್ಯರ ವೈದಿಕ ಧರ್ಮ
ಆರ್ಯರ ಧರ್ಮವನ್ನು ಋಗ್ವೇದದ ಮೂಲಕ ತಿಳಿಯಬಹುದು. ಮಳೆ, ವಾಯು, ಅಗ್ನಿ ಮೊದಲಾದ ಪ್ರಾಕೃತ ಶಕ್ತಿಗಳಿಗೆ ಅಧಿದೇವತೆಗಳಿರುವರೆಂದು ನಂಬಿ ಪೂಜಿಸುತ್ತಿದ್ದರು. ಇಂದ್ರ, ವರುಣ, ವಾಯು, ಅಗ್ನಿ, ಸೋಮ, ಮಿತ್ರರು ವೇದಕಾಲದ ದೇವತೆಗಳಲ್ಲಿ ಪ್ರಮುಖರು. ತಮ್ಮ ಭಾಷೆಯಾದ ಸಂಸ್ಕೃತದಲ್ಲಿ ಕಟ್ಟಿದ ಸ್ತೋತ್ರಗಳನ್ನು ಹಾಡುತ್ತಾ, ರೊಟ್ಟಿ, ತುಪ್ಪ, ಧಾನ್ಯ ಮೊದಲಾದ ಅವರ ಆಹಾರಗಳನ್ನು ಅಗ್ನಿ-ಹೋಮ-ದಲ್ಲಿ ಹಾಕಿ ಪೂಜಿಸುತ್ತಿದ್ದರು. ಈ ರೀತಿಯ ಯಜ್ಞಗಳಿಂದ ತಮ್ಮ ಇಷ್ಟದೇವತೆಗಳು ಪ್ರಸನ್ನರಾಗಿ ಸುಖ ಸಂಪತ್ತುಗಳನ್ನು ಕರುಣಿಸುವರೆಂದು ಆರ್ಯನರು ನಂಬಿದ್ದರು. ಪವಿತ್ರ ಯಾಗಾಗ್ನಿಯು ಆರ್ಯನರ ಮನೆಗಳಲ್ಲಿ ಸದಾ ಕಾಲ ಉರಿಯುತ್ತಿತ್ತು. ನಾಟಿ, ಕೊಯ್ಲು, ಪಟ್ಟಾಭಿಷೇಕ, ದಿಗ್ವಿಜಯ ಮುಂತಾದ ಸಂದರ್ಭಗಳಲ್ಲಿ ಯಾಗಗಳನ್ನು ನಡೆಸಿ, ಸೋಮರಸಪಾನ ಮಾಡುತ್ತಿದ್ದರು. ನಾಲ್ಕು ವೇದಗಳಲ್ಲಿ ಇವರ ಧರ್ಮ ಅಡಕವಾಗಿದೆ.

ರೈತರು ತಮ್ಮ ಆದಾಯದ ಅಂಶವನ್ನು ಕಂದಾಯ ರೂಪದಲ್ಲಿ ತೆರಬೇಕಾಗಿತ್ತು. ಕಠಿಣ ತೆರಿಗೆಯು ಹೇರಲ್ಪಡುತ್ತಿರಲಿಲ್ಲ. ರಾಜ್ಯದ ಆದಾಯದ ಕಾಲಂಶವನ್ನು ಸರಕಾರದ ಖರ್ಚಿಗೂ, ಇನ್ನೊಂದು ಅಂಶವನ್ನು ಅಧಿಕಾರಿಗಳ ವೇತನಕ್ಕೂ, ಮತ್ತೊಂದು ಅಂಶವನ್ನು ಸಾಹಿತ್ಯ, ಕಲೆಗಳ ಪ್ರೋತ್ಸಾಹಕ್ಕೂ, ಉಳಿದ ಅಂಶವನ್ನು ಧರ್ಮಗಳ ಪ್ರಸಾರಕ್ಕಾಗಿಯೂ ವಿನಿಯೋಗಿಸಲಾಗುತ್ತಿತ್ತು.

ಉಪನಿಷತ್ತಿನ ಧರ್ಮ
ಉಪನಿಷತ್ಕಾಲದಲ್ಲಿ ಆರ್ಯರಲ್ಲಿ ಕೆಲವರ ಧರ್ಮವು ಬದಲಾಯಿತು. ಹಲವು ದೇವತೆಗಳನ್ನು ನಂಬುತ್ತಿದ್ದ ಆರ್ಯರು ಕ್ರಮೇಣ ದೇವರು ಒಬ್ಬನೇ ಎಂದು ತಿಳಿದರು. ಈ ಕಾಲಕ್ಕಾಗುವಾಗ ಅವರು ಆತ್ಮ, ಪರಮಾತ್ಮ, ಜನ್ಮ, ಕರ್ಮಗಳ ವಿಚಾರದಲ್ಲಿ ಮುಂದರಿದಿದ್ದರು. ಹಿಂದಿನ ಯಜ್ಞಾದಿ ಕ್ರಿಯೆಗಳು ಮೋಕ್ಷ ಸಾಧನೆಯ ಮಾರ್ಗವಲ್ಲವೆಂದೂ, ತಪಸ್ಸನ್ನಾಚರಿಸಿ ಆತ್ಮಸಾಕ್ಷಾತ್ಕಾರವನ್ನು ಮಾಡಬೇಕೆಂದೂ ಉಪನಿಷತ್ತು ಬೋಧಿಸಿತು.

ಉಪನಿಷತ್ತಿನ ತತ್ವ: ಉಪನಿಷತ್ತಿನ ತತ್ವವು ‘ತತ್ವಮಸಿ’ ಎಂಬುದು. ಎಂದರೆ ಜೀವಾತ್ಮವು ಪರಮಾತ್ಮವೇ ಆಗಿದೆ. ಆದರೆ ಜೀವಾತ್ಮವು ತನ್ನ ಕರ್ಮಕ್ಕನುಸಾರವಾಗಿ ಬೇರೆ ಬೇರೆ ದೇಹವನ್ನು ಸೇರಿಕೊಂಡು ವಿವಿಧ ಜನ್ಮವನ್ನು ತಾಳುತ್ತದೆ. 1. ಜೀವನವೆಂಬುದು ದುಃಖಮಯ. 2. ಆಸೆಯು ಬದುಕಿಗೆ ಕಾರಣವಾಗಿದೆ. 3. ಬದುಕುವುದರಿಂದ ದುಃಖಕ್ಕೆ ಒಳಗಾಗುತ್ತೇವೆ. 4. ಆದ್ದರಿಂದ ದುಃಖಗಳಿಗೆ ಮೂಲವಾದ ಆಸೆಯನ್ನು ನಿರೋಧಿಸಿದರೆ ದುಃಖವು ತಾನಾಗಿ ಇಲ್ಲದಾಗುತ್ತದೆ. ಸರ್ವವೂ ಆತ್ಮ, ಆತ್ಮವೇ ಸರ್ವಸ್ವ. ಉಳಿದುದೆಲ್ಲವೂ ಮಿಥ್ಯೆಯೆಂಬ ಸರಿಯಾದ ಪ್ರಜ್ಞೆಯಿಂದ ತಪಸ್ಸನ್ನಾಚರಿಸಿ ಕರ್ಮವನ್ನು ತೊರೆದು ಆತ್ಮವನ್ನು ಪರಮಾತ್ಮನೊಂದಿಗೆ ವಿಲೀನಗೊಳಿಸುವುದರಿಂದ (ಆತ್ಮಸಾಕ್ಷಾತ್ಕಾರದಿಂದ) ಮಾತ್ರ ಇದು (ಮೋಕ್ಷ) ಸಾಧ್ಯವಾಗುತ್ತದೆ.

ಉಪನಿಷತ್ತಿನ ಈ ತತ್ವಗಳಿಂದಾಗಿ ವೈದಿಕಾಚರಣೆಗಳ ಪ್ರಾಮುಖ್ಯತೆಯೇನೂ ಕಡಿಮೆಯಾಗಲಿಲ್ಲ. ಉಪನಿಷತ್ತಿನ ಮಾರ್ಗವನ್ನು ಕೆಲವರು ಎತ್ತಿ ಹಿಡಿದರು. ಇನ್ನು ಕೆಲವರು ವೈದಿಕಾಚರಣೆಯಲ್ಲೇ ಮುಂದುವರಿದರು.

ಇತಿಹಾಸ ಕಾಲದ ಧಾರ್ಮಿಕ ಭಾವನೆಗಳು

ವೈದಿಕ ಕಾಲದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದ ಇಂದ್ರ ವರುಣಾದಿ ಹಲವಾರು ದೇವತೆಗಳ ಪ್ರಾಮುಖ್ಯತೆಯು ಇತಿಹಾಸ ಯುಗದಲ್ಲಿ ಬಹಳಷ್ಟು ಕಡಿಮೆಯಾಯಿತು. ತ್ರಿಮೂರ್ತಿಗಳು ಪ್ರಾಮುಖ್ಯತೆಯನ್ನು ಪಡೆದರು. ಮೂರು ದೇವರ ಹೆಸರಿದ್ದರೂ, ದೇವರು ಒಬ್ಬನೆ; ಮತ್ತು ಒಬ್ಬನೆ ದೇವರು ವಿವಿಧ ಹೆಸರುಗಳಿಂದ ಕರೆಯಲ್ಪಡುವನು ಎಂಬ ನಂಬಿಕೆಯು ಜನರಲ್ಲಿತ್ತು. ಮಾತ್ರವಲ್ಲದೆ ದೇವರು ವಿವಿಧಾಕಾರಗಳಿಂದ ಜಗತ್ತಿಗೆ ಅವತರಿಸಿ ಬಂದು ಲೋಕದ ದುಷ್ಟ ಶಕ್ತಿಗಳನ್ನು ನಾಶಮಾಡುತ್ತಾರೆ ಎಂದು ಭಾವಿಸಿದ್ದರು. ಭಕ್ತಿಮಾರ್ಗವು ಈ ಕಾಲದಲ್ಲಿ ಬೋಧಿಸಲ್ಪಟ್ಟಿತು; ಮತ್ತು ಪ್ರಾಮುಖ್ಯತೆಯನ್ನು ಪಡೆಯಿತು.

ಬೌದ್ಧ ಮತ

ಬೌದ್ಧ ಮತವು ಉಪನಿಷತ್ತಿನ ನಾಲ್ಕು ತತ್ವಗಳ ಮೇಲೆ ಕಟ್ಟಲ್ಪಟ್ಟಿದೆ. 1. ಜೀವನವು ದುಃಖಮಯವಾಗಿದೆ. (ಬುದ್ಧನು ಆತ್ಮಹತ್ಯೆಯನ್ನು ನಿಷೇಧಿಸುತ್ತಾನೆ.) 2. ಬದುಕಬೇಕೆಂಬ ಆಸೆಯು ದುಃಖಕ್ಕೆ ಮೂಲವಾಗಿದೆ. 3. ಆದ್ದರಿಂದ ಆಸೆಯನ್ನು ನಿರೋಧಿಸಿ ದುಃಖವನ್ನು ತಡೆಗಟ್ಟಬಹುದು. 4. ಅಷ್ಟವಿಧ ಮಾರ್ಗವನ್ನವಲಂಬಿಸುವುದರಿಂದ ಆಸೆಯನ್ನು ನಿರೋಧಿಸಬಹುದು. ಪ್ರಜ್ಞೆ, ನಿರ್ಧಾರ, ಸವಿಮಾತು, ಸಚ್ಚಾರಿತ್ರ್ಯ, ಉತ್ತಮ ಜೀವನೋಪಾಯ, ಸತ್ಪ್ರಯತ್ನ, ಸುಮನಸ್ಕತೆ, ಧ್ಯಾನ ಇವು ಎಂಟು ವಿಧ ಮಾರ್ಗಗಳು.

ಜೈನ ಧರ್ಮ

ವರ್ಧಮಾನ ಮಹಾವೀರನ ಜೈನ ಧರ್ಮತತ್ವವು ರತ್ನತ್ರಯಗಳಲ್ಲಿ ಅಡಕವಾಗಿದೆ. 1. ಸಮ್ಯಗ್ದರ್ಶನ: ಮಹಾವೀರನು ಸಂಪೂರ್ಣನು, ಸರ್ವಜ್ಞಾನಿಯು ಎಂಬ ತಿಳುವಳಿಕೆಯನ್ನು ಹೊಂದುವುದು. 2. ಸಮ್ಯಗ್ಜ್ಞಾನ; ದೇವರಾಗಲಿ, ಸೃಷ್ಟಿಕರ್ತನಾಗಲಿ ಇಲ್ಲ. ಆದರೆ ಅನೇಕ ಆತ್ಮಗಳು ಇವೆ. ಅವು ತಮ್ಮ ಕರ್ಮಗಳಿಗನುಸಾರ ಅನೇಕ ಜನ್ಮಗಳನ್ನು ತಳೆಯುವುವು. ಸನ್ಯಾಸವನ್ನು ಕೈಗೊಂಡು ಕರ್ಮವನ್ನು ನಾಶಪಡಿಸಿಕೊಂಡರೆ ಪುನರ್ಜನ್ಮದಿಂದ ಮುಕ್ತನಾಗಿ ಲೋಕದ ಕಷ್ಟಗಳಿಂದ ಪಾರಾಗಬಹುದೆಂಬ ತಿಳುವಳಿಕೆ. 3. ಸಮ್ಯಕ್ಚಾರಿತ್ರ್ಯ: ಅಹಿಂಸೆ, ಅಸ್ತೇಯ, ಅಪರಿಗ್ರಹ, ಅಸತ್ಯಪರಿತ್ಯಾಗ, ಮತ್ತು ಬ್ರಹ್ಮಚರ್ಯವನ್ನು ಮನೋವಾಕ್ಕಾಯಗಳಿಂದ ಆಚರಿಸುವುದು ಮೋಕ್ಷಸಾಧನ.

ಚಾರ್ವಾಕ ಮತ

ಭೂಮಿ, ನೀರು, ಗಾಳಿ, ತೇಜಸ್ಸುಗಳಿಂದ ದೇಹ ಉಂಟಾಗಿದೆ. ಈ ನಾಲ್ಕು ಭೂತಗಳು ಬೇರ್ಪಟ್ಟಾಗ ಮರಣ ಉಂಟಾಗುತ್ತದೆ. ದೇಹವೇ ಆತ್ಮವಾದುದರಿಂದ ಪುನರ್ಜನ್ಮವೆಂಬುದಿಲ್ಲ. ಶರೀರ ಪೋಷಣೆಯೇ ಕರ್ತವ್ಯ ಅಥವಾ ಧರ್ಮವಾಗಿರುತ್ತದೆ. ದೇಹ ಸುಖವೇ ಮೋಕ್ಷ ಸುಖ. ಪ್ರಪಂಚದಲ್ಲಿ ಸುಖದುಃಖಗಳು ಮಿಶ್ರವಾಗಿರುವುದರಿಂದ ಮತ್ತು ಸಕ್ರಮ ವ್ಯವಸ್ಥೆ ಇಲ್ಲದುದರಿಂದ ಎಲ್ಲ ವಿಧಗಳಲ್ಲೂ ನಾವು ಸುಖಿಗಳಾಗಿರುವಂತೆ ನೋಡಿಕೊಳ್ಳಬೇಕು. ಇತರರಿಗೆ ತೊಂದರೆಯುಂಟಾಗುವುದೆಂದು ನಾವು ಸುಖಪಡದಿರಬಾರದು. ಸಾಲಮಾಡಿಯಾದರೂ ತುಪ್ಪ ತಿಂದುಕೊಂಡು ಭರ್ಜರಿಯಾಗಿ ಊಟ ಮಾಡಬೇಕು. ಆತ್ಮ, ಪರಮಾತ್ಮ, ಪುನರ್ಜನ್ಮ ಇತ್ಯಾದಿಗಳು ಸುಳ್ಳು. ಯಾಗ, ಯಜ್ಞ ಖಂಡನೀಯ.

ಷಡ್ದರ್ಶನಗಳ ಮೂರು ಮತಗಳು

1. ಸಾಂಖ್ಯ ಯೋಗ. ಸಾಂಖ್ಯ ಯೋಗವು ಅತ್ಯಂತ ಪುರಾತನವಾದುದು. ಇದರ ಸ್ಥಾಪಕರು ಕಪಿಲ ಮಹರ್ಷಿಗಳು. ಪದಾರ್ಥಗಳನ್ನು ಪುರುಷ ಮತ್ತು ಪ್ರಕೃತಿ ಎಂಬುದಾಗಿ ಎರಡು ವಿಭಾಗಗಳನ್ನಾಗಿ ಮಾಡಬಹುದು. ಆತ್ಮವನ್ನು ಈ ದರ್ಶನದಲ್ಲಿ ಪುರುಷನೆಂದು ಕರೆಯಲಾಗುತ್ತದೆ. ಪುರುಷನ ಸಂಖ್ಯೆ ಅನಂತ. ಈತನು ಚೈತನ್ಯ, ಎಂದರೆ ಜ್ಞಾನಸ್ವರೂಪಿ. ಪುರುಷನು ವಿಭುವಾಗಿರುತ್ತಾನೆ. ಪ್ರಕೃತಿ ಸಂಬಂಧದಲ್ಲಿ ಮಾತ್ರ ಸುಖದುಃಖಗಳನ್ನು ಅನುಭವಿಸುವ ಯೋಗ ಪುರುಷನಿಗೆ ಆಗುವುದುಂಟು. ಪ್ರಕೃತಿಯು ಅಚೇತನ ಪದಾರ್ಥ. ಸತ್ವ, ರಜಸ್ಸು, ತಮಸ್ಸುಗಳಿಂದ ಪ್ರಪಂಚವು ಸೃಷ್ಟಿಯಾಗಿ ಭೋಗಸಾಮಗ್ರಿಗಳನ್ನು ಒದಗಿಸಿಕೊಡುತ್ತದೆ. ಪುರುಷನ ಭೋಗಗಳಲ್ಲಿ ದುಃಖವೇ ಹೆಚ್ಚಾಗಿರುವುದು. ದುಃಖವನ್ನು ಅನುಭವಿಸುವಾಗ ಪುರುಷನಿಗೆ ತನಗೂ ಪ್ರಕೃತಿಗೂ ಸಂಬಂಧವಿಲ್ಲವೆಂಬ ಅರಿವು ಉಂಟಾಗುತ್ತದೆ. ಆಗ ಮುಕ್ತಿ ಉಂಟಾಗುತ್ತದೆ. ಮುಕ್ತಿ ಅಥವಾ ಕೈವಲ್ಯಾವಸ್ಥೆಯಲ್ಲಿ ಪುರುಷನಿಗೆ ಜ್ಞಾನಾನುಭವ ಆಗಲಾರದು.

ಯೋಗದರ್ಶನದಲ್ಲಿಯೂ ಪ್ರಕೃತಿ ಮತ್ತು ಪುರುಷರ ವ್ಯಾಖ್ಯಾನವನ್ನು ಒಪ್ಪಿರುವರು. ಆದರೆ ಇದರಲ್ಲಿ ಅನುಷ್ಠಾನಕ್ಕೆ ಪ್ರಾಧಾನ್ಯತೆಯಿದೆ, ‘ಯೋಗಃ ಚಿತ್ತವೃತ್ತಿ ನಿರೋಧಃ’ ಎಂದಾಗಿರುತ್ತದೆ. ಯನನಿಯಮಾದಿ ಅಷ್ಟಾಂಗಯೋಗವನ್ನು ಸಾಧಿಸಿದರೆ ಮುಕ್ತಿ ಉಂಟಾಗುವುದು. ಈ ದರ್ಶನದ ಸ್ಥಾಪಕರು ಪತಂಜಲಿ ಮಹರ್ಷಿಗಳು.

2. ನ್ಯಾಯ ವೈಶೇಷಿಕ. ನ್ಯಾಯ ಸೂತ್ರವನ್ನು ಗೌತಮ ಮಹರ್ಷಿಗಳೂ, ವೈಶೇಷಿಕ ಸೂತ್ರವನ್ನು ಕಣಾದ ಮಹರ್ಷಿಗಳೂ ಬರೆದರು. ನ್ಯಾಯ ದರ್ಶನಕ್ಕೆ ಸಂಸ್ಕøತ ವಿದ್ಯಾಭ್ಯಾಸದಲ್ಲಿ ವಿಶೇಷವಾದ ಸ್ಥಾನವಿದೆ. ವಿಶೇಷವೆಂದರೆ ವೈಲಕ್ಷಿಣ್ಯವೆಂದರ್ಥ. ಪ್ರತಿಯೊಂದು ವಸ್ತುವಿನ ವೈಲಕ್ಷಿಣ್ಯವನ್ನರಿಯುವುದು ವೈಶೇಷಿಕ ಮತದ ತತ್ವವಾಗಿದೆ. ನ್ಯಾಯವೆಂದರೆ ಯುಕ್ತಿ ಎಂದರ್ಥ. ವಸ್ತುಗಳು ಹೇಗುಂಟಾದುವು, ಅವುಗಳ ಕಾರಣ, ಸ್ವರೂಪಗಳನ್ನು ಯುಕ್ತಿಯಿಂದ ತಿಳಿಯುವುದು ನ್ಯಾಯ ದರ್ಶನ.

ಪದಾರ್ಥಗಳು ಮೂಲಸ್ವರೂಪದಲ್ಲಿ ಅಣುಗಳಾಗಿರುತ್ತವೆ. ಆಗ ಅವು ಗೋಚರಕ್ಕೆ ಬರುವುದಿಲ್ಲ. ಪ್ರತಿಯೊಂದು ವಸ್ತುವಿನ ಅಣುವೂ ಒಂದು ವೈಲಕ್ಷಿಣ್ಯದಿಂದ ಕೂಡಿರುವುದು. ಹನಿ ಕೂಡಿ ಹಳ್ಳವಾಗುವಂತೆ ಅಣುಗಳು ಒಂದಾಗಿ ಸೇರಿ ವಸ್ತುಗಳಾಗಿ ಕಾಣುತ್ತವೆ. ಪ್ರತಿಯೊಂದು ಕಾರ್ಯಕ್ಕೆ ಒಬ್ಬ ಕಾರಣಕರ್ತನಿರುತ್ತಾನೆ. ಪ್ರಪಂಚವೆಂಬುದು ಒಂದು ದೊಡ್ಡ ಕಾರ್ಯ. ಅದರ ಕಾರಣಕರ್ತೃ ಸರ್ವಶಕ್ತನೂ, ಸರ್ವಜ್ಞನೂ ಆದ ಒಬ್ಬ ಆತ್ಮನು. ಆ ಆತ್ಮನೇ ಈಶ್ವರನು. ಈಶ್ವರನು ಸೃಷ್ಟಿಕಾಲದಲ್ಲಿ ಪರಮಾಣುಗಳನ್ನು ಒಂದಾಗಿಸೇರಿಸಿ ಪದಾರ್ಥಗಳನ್ನು ಮಾಡುವನು.

3. ಮೀಮಾಂಸ. ಇದರ ಪ್ರಚಾರದಿಂದಾಗಿ ವೈದಿಕ ಮತವು ಪುನರುಜ್ಜೀವನಗೊಂಡಿತು. ಇದರ ಪ್ರವರ್ತಕರು ಜೈಮಿನಿ ಮಹರ್ಷಿಗಳು. ಮೀಮಾಂಸವೆಂದರೆ ಗೌರವ ಪುರಸ್ಕರವಾಗಿ ಮಾಡುವ ವಿಚಾರ. ಈ ದರ್ಶನವು ವೇದವಾಕ್ಯಗಳು ನಿತ್ಯವೆಂದು ಬೋಧಿಸುವುದು. ಅವುಗಳ ಅರ್ಥಗಳನ್ನು ಸರಿಯಾಗಿ ತಿಳಿಯುವುದಲ್ಲದೆ, ಅವುಗಳಲ್ಲಿ ಪೂರ್ಣ ವಿಶ್ವಾಸವಿಟ್ಟು ಗೌರವದಿಂದ ಕಾಣಬೇಕು. ಹೀಗೆ ಭಕ್ತಿಯಿಂದ ವೇದಗಳ ಅರ್ಥವನ್ನು ತಿಳಿದು ವೇದಗಳಲ್ಲಿ ಹೇಳಿದ ಕ್ರಿಯೆಗಳನ್ನು ಮಾಡಿದರೆ ಸ್ವರ್ಗಸುಖಗಳನ್ನು ಹೊಂದಲಿಕ್ಕೂ ನರಕದಿಂದ ದೂರವಿರಲಿಕ್ಕೂ ಸಾಧ್ಯವಾಗುವುದು ಎಂದು ಮೀಮಾಂಸೆ ಹೇಳುತ್ತದೆ. ಕುಮಾರಿಲ ಭಟ್ಟ ಮತ್ತು ಪ್ರಭಾಕರರಿಂದ ಮೀಮಾಂಸ ದರ್ಶನವು ವಿಸ್ತರಿಸಲ್ಪಟ್ಟು ಇಬ್ಭಾಗವಾಯಿತು.

ಶಂಕರಾಚಾರ್ಯರ ಅದ್ವೈತ ಮತ

ಗುಪ್ತರ ಅವನತಿಯ ಬಳಿಕ ಹಿಂದೂ ಮತದಲ್ಲಿ ಅನೇಕ ಅಂಧಾಚರಣೆಗಳು ಉದ್ಭವವಾಗಿ ಮತವು ಕ್ಷೀಣಿಸಿತು. ಬೌದ್ಧ ಮತವು ಶೂನ್ಯವಾದವನ್ನು ಬೋಧಿಸುತ್ತಿತ್ತು. ಆಗ ತಿರುವಾಂಕೂರಿನ ಕಾಲಡಿ ಎಂಬಲ್ಲಿ ಜನಿಸಿದ ಶಂಕರಾಚಾರ್ಯರಿಂದ ಹಿಂದೂಮತವು ಪನರುಜ್ಜೀವನಗೊಂಡು ಬೆಳೆಯಿತು. ಶಂಕರರು ಬಾಲಸನ್ಯಾಸವನ್ನು ಸ್ವೀಕರಿಸಿ ಜೀವನವನ್ನು ಹಿಂದೂ ಧರ್ಮದ ಉದ್ಧಾರಕ್ಕಾಗಿ ಮಿಸಲಿರಿಸಿದರು. ಉಪನಿಷತ್ತಿನ ವಾಕ್ಯವಾದ ‘ತತ್ವಮಸಿ’ಯನ್ನು ಬಳಸಿ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಬಾಷ್ಯಗಳನ್ನು ಬರೆದು, ಅದ್ವೈತ ಸಿದ್ಧಾಂತವನ್ನು ಭದ್ರಗೊಳಿಸಿದರು. ವಿವೇಕ ಚೂಡಾಮಣಿ, ಬೃಹಸ್ತೋತ್ರ ರತ್ನಾಕರಗಳನ್ನು ರಚಿಸಿದರು. ಭಾರತದ ಉದ್ದಗಲ ಸಂಚರಿಸಿ, ಬೌದ್ಧ ಸನ್ಯಾಸಿಗಳನ್ನು ವಾದದಲ್ಲಿ ಸೋಲಿಸಿ, ತಮ್ಮ ತತ್ವವನ್ನು ಪ್ರತಿಪಾದಿಸಿದರು. ಈ ತತ್ವದ ಚಿರಂತನ ಪ್ರಚಾರಕ್ಕೆ ಮತ್ತು ಧಾರ್ಮಿಕ ಏಳಿಗೆಗಾಗಿ ನಾಲ್ಕು ಮಠಗಳನ್ನು ಸ್ಥಾಪಿಸಿ ಸಂಘಗಳನ್ನು ನಿರ್ಮಿಸಿದರು. ಅನೇಕ ದೇವಸ್ಥಾನಗಳನ್ನು ಕಟ್ಟಿಸಿ ಕೇದಾರನಾಥದಲ್ಲಿ ನಿಧನರಾದರು.

ಅದ್ವೈತ ತತ್ವದ ವಿವರಣೆಗೆ ಒಂದು ಸರ್ಪದ ದೃಷ್ಟಾಂತವನ್ನು ಕೊಡಬಹುದು. ದೂರದ ಒಂದು ಹಗ್ಗವನ್ನು ನೋಡಿ ಸರ್ಪವನ್ನು ಕಂಡಂತೆಯೇ ಯಾತನೆ ಪಡುತ್ತೇವೆ. ಕೊನೆಗೆ ಇತರರ ಬೋಧನೆಯಿಂದ ಅದರ ನಿಜಸ್ಥಿತಿಯನ್ನು ಅರಿಯುತ್ತೇವೆ. ಕಣ್ಣಾರೆ ಕಂಡಾಗ ನಮ್ಮ ಮನಸ್ಸಿನ ಭಯ ಭ್ರಾಂತಿಗಳು ಮಾಯವಾಗುತ್ತವೆ. ಅದೇ ರೀತಿ ವ್ಯವಹಾರದಲ್ಲಿ ನಮಗೆ ಜೀವ, ಪ್ರಪಂಚ, ಈಶ್ವರ ಇವುಗಳು ಬೇರೆ ಬೇರೆಯಾಗಿ ತೋರುತ್ತವೆ. ಸತ್ಯವಾಗಿ ಬ್ರಹ್ಮವೆಂಬುದೊಂದೇ ಇರುತ್ತದೆ. ಹಗ್ಗವನ್ನು ಹಾವೆಂದು ಭ್ರಮಿಸುವಂತೆ, ಮಾಯೆಯಿಂದ ಬ್ರಹ್ಮನಲ್ಲಿ ಜೀವ, ಪ್ರಪಂಚ, ಈಶ್ವರ ಮತ್ತಿತರ ಎಲ್ಲಾ ವಿಷಯಗಳು ತೋರುವುವು. ಜೀವ, ಪ್ರಪಂಚ, ಈಶ್ವರ ಇವು ನಿಜವಾದರೂ, ಬ್ರಹ್ಮನಂತೆಯೇ ಸತ್ಯವಲ್ಲ. ಮಾಯೆಯು ನಿವಾರಣೆಯಾಗಿ ಬ್ರಹ್ಮಜ್ಞಾನವುಂಟಾದಾಗ, ಹಗ್ಗದ ಅರಿವು ಉಂಟಾದಾಗ ಸರ್ಪವು ಸುಳ್ಳಾಗುವಂತೆ, ಪ್ರಪಂಚವು ನಿಥ್ಯೆಯಾಗಿ ಬ್ರಹ್ಮವೊಂದೇ ಸತ್ಯವಾಗಿ ಗೋಚರಿಸುತ್ತದೆ. ಇದರಿಂದ ‘ಬ್ರಹ್ಮ ಸತ್ಯಂ ಜಗನ್ಮಿಥ್ಯಂ’ ಎಂದು ಏರ್ಪಡುವುದು. ವ್ಯವಹಾರದಲ್ಲಿ ಜೀವನು, ಈಶ್ವರನು ಬೇರೆಯಾಗಿ ತೋರುವುದಕ್ಕೆ ಅವಿದ್ಯೆಯು ಕಾರಣವಾಗಿರುತ್ತದೆ. ಬ್ರಹ್ಮನನ್ನು ತಿಳಿದವನು ಜೀವನ್ಮುಕ್ತನು. ಮೋಕ್ಷದಲ್ಲಿ ಜೀವನಿಗೆ ಆನಂದಸ್ವರೂಪನಾದ ಬ್ರಹ್ಮಾನುಭವವುಂಟಾಗುವುದು.

ವಿಶಿಷ್ಟಾದ್ವೈತ

ಶ್ರೀ ಪೆರಂಬೂರಿನ ಒಂದು ವೈದಿಕ ಕುಟುಂಬದಲ್ಲಿ ಜನಿಸಿದ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತ ಸಿದ್ಧಾಂತದ ಸಂಸ್ಥಾಪಕರು. ಉಪನಿಷತ್ತು, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯಗಳನ್ನು ಬರೆದು ಅವರು ವಿಶಿಷ್ಟಾದ್ವೈತವನ್ನು ಪ್ರತಿಪಾದಿಸಿದರು.

ವಿಶಿಷ್ಟಾದ್ವೈತ. ನಮಗೆ ಗೋಚರವಾಗುವ ಜೀವ ಮತ್ತು ಪ್ರಕೃತಿ ಎರಡೂ ಈಶ್ವರನ ಶರೀರದ ರೂಪದವುಗಳು. ಅವುಗಳು ಸತ್ಯ. ಈಶ್ವರನು ಅವುಗಳ ಆತ್ಮನು. ಆತ್ಮದ ರೂಪದಲ್ಲಿ ಜೀವ, ಪ್ರಕೃತಿಗಳೊಡನೆ ಇರುವ ಈಶ್ವರನೂ ಬ್ರಹ್ಮನೂ ಒಂದೇ ಆಗಿವೆ. ಆದ್ದರಿಂದ ವಿಶಿಷ್ಟವಾದ ಅದ್ವೈತವು ಏರ್ಪಡುತ್ತದೆ. ಜ್ಞಾನದಿಂದ ಆನಂದಸ್ವರೂಪನಾದ ಬ್ರಹ್ಮನನ್ನು ಜೀವನು ಹೊಂದಬಹುದು. ಭಕ್ತಿಯು ಒಂದು ವಿಧವಾದ ಜ್ಞಾನ. ಆದ್ದರಿಂದ ಜೀವನು ಜ್ಞಾನವನ್ನು ಮತ್ತು ಭಕ್ತಿಯನ್ನು ಕೈಕೊಂಡು ಪೂಜಾದಿ ಕರ್ಮಗಳನ್ನು ಕರ್ತವ್ಯವೆಂದು ಮಾಡಬೇಕು.

ದ್ವೈತ ಮತ

ಉಡುಪಿಯ ಸಮೀಪ ಬೆಳ್ಳೆ ಎಂಬಲ್ಲಿ ಹುಟ್ಟಿದ ಮಧ್ವಾಚಾರ್ಯರು ದ್ವೈತ ಮತದ ಪ್ರವರ್ತಕರು. ಸಂಸ್ಕೃತ ಭಾಷೆಯನ್ನು ಚೆನ್ನಾಗಿ ಅಭ್ಯಾಸ ಮಾಡಿ ವೇದೋಪನಿಷತ್ತುಗಳನ್ನು ಕಲಿತರು. ಉಪನಿಷತ್ತಿನ ‘ತತ್ವಮಸಿ’ ಎಂಬ ಉಕ್ತಿಯನ್ನು ‘ಅತತ್ವಮಸಿ’ ಎಂದು ಓದಿ, ಬ್ರಹ್ಮನೂ ಆತ್ಮನೂ ಒಂದೇ ಅಲ್ಲ, ಬೇರೆ ಬೇರೆಯೆಂದೂ, ಜಗತ್ತು ಮಾಯೆಯಲ್ಲವೆಂದೂ, ಭಕ್ತಿಯಿಂದ ಕೃಷ್ಣನನ್ನು ಪೂಜಿಸಿದರೆ ಮೋಕ್ಷವನ್ನು ಸಾಧಿಸಬಹುದೆಂದೂ, ದೇಶದಾದ್ಯಂತ ಸಂಚರಿಸಿ ಮಧ್ವಾಚಾರ್ಯರು ತಮ್ಮ ದ್ವೈತ ಮತವನ್ನು ಪ್ರಚುರಪಡಿಸಿದರು. ಉಡುಪಿಯಲ್ಲಿ ಶ್ರೀಕೃಷ್ಣ ದೇವಸ್ತಾನವನ್ನು ಕಟ್ಟಿಸಿದರಲ್ಲದೆ ಅದರ ನಿರ್ವಹಣೆಗೆ ಸುತ್ತಮುತ್ತ ಅಷ್ಟಮಠಗಳನ್ನು ಸ್ಥಾಪಿಸಿದರು.