ಸೋನ್ಯಾಳನ್ನು ಅವಳ ದಿಗ್ಭ್ರಾಂತಿ, ಅಸ್ಪಷ್ಟ ಭಯಗಳಲ್ಲಿ, ಅಪಶಕುನದ ಹೆದರಿಕೆಗಳಲ್ಲಿ ಹಾಗೇ ಬಿಟ್ಟು ಅವನು ಹೊರಟು ಹೋದ. ಅವನು ಇನ್ನೊಂದು ವಿಚಿತ್ರವಾದ, ಅನಿರೀಕ್ಷಿತವಾದ ಭೇಟಿ ನೀಡಿದ್ದ ಅನ್ನುವುದು ಆನಂತರ ತಿಳಿಯಿತು. ಹನ್ನೊಂದು ಗಂಟೆಯ ನಂತರ ತಿಳಿಯಿತು. ಮಳೆ ಇನ್ನೂ ನಿಂತಿರಲಿಲ್ಲ. ಹನ್ನೊಂದೂ ಇಪ್ಪತ್ತರ ಹೊತ್ತಿಗೆ, ಮೈಯೆಲ್ಲ ವದ್ದೆಯಾಗಿ ಅವನು ತನ್ನ ಭಾವೀ ಪತ್ನಿಯ ಪುಟ್ಟ ಮನೆಗೆ ಹೋದ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

 

ಭಾಗ ಆರು: ಆರನೆಯ ಅಧ್ಯಾಯ

ಅವತ್ತು ಸಂಜೆಯಿಡೀ, ರಾತ್ರಿ ಹತ್ತು ಗಂಟೆಯವರೆಗೆ ಸ್ವಿದ್ರಿಗೈಲೋವ್ ಒಂದಾದ ಮೇಲೆ ಇನ್ನೊಂದು ಹೆಂಡದಂಗಡಿಗೆ, ಹೆಣ್ಣಂಗಡಿಗೆ ಹೋಗುತ್ತ ಕಾಲ ಕಳೆದ. ದಾರಿಯಲ್ಲಿ ಎಲ್ಲೋ ಕಾತ್ಯಾ ಸಿಕ್ಕಿದಳು. ‘ಒಬ್ಬಾನೊಬ್ಬ ದುರುಳ, ನೀಚ ಮುತ್ತಿಟ್ಟ ಮುದ್ದು ಕಾತ್ಯಾಗೆ’ ಅನ್ನುವ ಹಾಡು ಹೇಳಿದಳು.
ಕಾತ್ಯಾಗೆ, ಹಾರ್ಮೋನಿಯಂ ಹುಡುಗನಿಗೆ, ಅವರ ಜೊತೆಯಲ್ಲಿದ್ದ ಸೇವಕರಿಗೆ, ಇಬ್ಬರು ಕಾರಕೂನರಿಗೆ ಕುಡಿಯಲು ಹೆಂಡ ಕೊಡಿಸಿದ ಸ್ವಿದ್ರಿಗೈಲೊವ್. ಕಾರಕೂನರಿಬ್ಬರಿಗೂ ಮೂಗು ಸೊಟ್ಟ, ಒಬ್ಬನದು ಎಡಕ್ಕೆ, ಇನ್ನೊಬ್ಬನದು ಬಲಕ್ಕೆ ಬಾಗಿತ್ತು, ಮನಸು ಸೆಳೆದಿತ್ತು ಅನ್ನುವ ಕಾರಣಕ್ಕೆ ಅವರನ್ನು ಜೊತೆಯಲ್ಲಿ ಇರಿಸಿಕೊಂಡಿದ್ದ. ಕೊನೆಗೆ ಅವರು ಅವನನ್ನು ‘ಮನರಂಜನೆಯ ವನ’ಕ್ಕೆ ಕರಕೊಂಡು ಹೋದರು. ಅವರ ಟಿಕೆಟ್ಟಿನ ದುಡ್ಡು ಅವನೇ ಕೊಟ್ಟ. ಅಲ್ಲೊಂದು ಬಡಕಲಾದ ಮೂರು ವರ್ಷದ ಫರ್ ಮರ, ಮೂರು ಪೊದೆಗಳಿದ್ದವು. ವಾಕ್ಸ್ ಹಾಲ್ ಇತ್ತು. ಅದು ನಿಜವಾಗಿ ಹೆಂಡದಂಗಡಿ. ಟೀ ಕೂಡ ಸಿಗುತ್ತಿತ್ತು. ಒಂದಷ್ಟು ಹಸಿರು ಟೇಬಲ್ಲು, ಕುರ್ಚಿಗಳಿದ್ದವು. ಕೆಟ್ಟದಾಗಿ ಹಾಡುವ ಗಾಯಕರಿದ್ದರು. ಮ್ಯೂನಿಚ್ಚಿನಿಂದ ಬಂದಿದ್ದ ಕುಡುಕ ಜರ್ಮನ್ ಒಬ್ಬನು ಕೆಂಪು ಮೂಗಿಟ್ಟುಕೊಂಡು ಬಫೂನನ ಹಾಗೆ ಆಡುತ್ತಿದ್ದ. ಬಹಳ ವಿಷಾದದಲ್ಲಿದ್ದ. ಅವನೂ ಹಾಡುಗಾರರೂ ಸೇರಿ ಜನಕ್ಕೆ ಮನರಂಜನೆ ನೀಡುತ್ತಿದ್ದರು. ಸ್ವಿದ್ರಿಗೈಲೋವನ ಜೊತೆಯಲ್ಲಿದ್ದ ಕಾರಕೂನರಿಗೂ ಅಲ್ಲಿದ್ದ ಬೇರೆಯ ಕಾರಕೂನರಿಗೂ ಜಗಳ ಶುರುವಾಯಿತು. ಜಗಳ ಇತ್ಯರ್ಥ ಮಾಡುವುದಕ್ಕೆ ಸ್ವಿದ್ರಿಗೈಲೋವನನ್ನು ಕರೆದರು. ಕಾಲು ಗಂಟೆಯಷ್ಟು ಹೊತ್ತು ಅವರ ಮಾತು ಕೇಳಿಸಿಕೊಂಡ. ಅವರೆಷ್ಟು ಕೂಗಾಡಿ ಕಿರುಚಾಡುತ್ತಿದ್ದರೆಂದರೆ ಹೇಳುತ್ತಿದ್ದ ಒಂದು ಮಾತೂ ತಿಳಿಯುತ್ತಿರಲಿಲ್ಲ. ಏನಾಗಿತ್ತೆಂದರೆ ಇಬ್ಬರಲ್ಲಿ ಒಬ್ಬ ಕಾರಕೂನ ಏನನ್ನೋ ಕದ್ದಿದ್ದ, ಕದ್ದಿದ್ದನ್ನು ಅಲ್ಲಿದ್ದ ಒಬ್ಬ ಯಹೂದಿಗೆ ಮಾರಿದ್ದ. ಮಾರಿದ ಮೇಲೆ ಬಂದ ದುಡ್ಡನ್ನು ಗೆಳೆಯನ ಜೊತೆಗೆ ಹಂಚಿಕೊಳ್ಳಲು ಒಲ್ಲದೆ ಜಗಳ ಹುಟ್ಟಿತ್ತು. ಕದ್ದದ್ದು ಚಮಚವೆಂದು, ಅದು ಮನರಂಜನೆಯ ವನದ ರೆಸ್ಟೋರೆಂಟಿಗೆ ಸೇರಿದ್ದೆಂದೂ ತಿಳಿಯಿತು. ವ್ಯವಹಾರ ಯಾಕೋ ಅಪಾಯದ ಮಟ್ಟ ಮುಟ್ಟುತಿದೆ ಅನ್ನಿಸಿತು. ಸ್ವಿದ್ರಿಗೈಲೋವ್ ಚಮಚದ ದುಡ್ಡು ಕೊಟ್ಟ, ಎದ್ದು ಹೊರ ನಡೆದ. ರಾತ್ರಿ ಹತ್ತು ಗಂಟೆಯಾಗುತ್ತಿತ್ತು. ಅವನು ಸ್ವತಃ ಒಂದು ತೊಟ್ಟೂ ಹೆಂಡ ಕುಡಿದಿರಲಿಲ್ಲ. ಬರಿಯ ಟೀ ಕುಡಿದಿದ್ದ-ಮನರಂಜನೆಯ ತೋಟದಲ್ಲಿ. ಅದೂ ಅಲ್ಲಿಗೆ ಹೋದಮೇಲೆ ಏನಾದರೂ ಕುಡಿಯಬೇಕು ಅನ್ನುವ ಶಿಷ್ಟಾಚಾರಕ್ಕೆ.

ಮೋಡ ಕವಿದು ಸೆಕೆಯಾಗುತ್ತಿತ್ತು. ಹತ್ತು ಗಂಟೆಯ ಹೊತ್ತಿಗೆ ಆಕಾಶವೆಲ್ಲ ಮೋಡ ಕಿಕ್ಕಿರಿದು, ಗುಡುಗು ಉರುಳುರುಳಿ ಕೇಳುತ್ತ ಒಂದೇ ಸಮ ಮಳೆ ಸುರಿಯಿತು. ಮಳೆ ನೆಲಕ್ಕೆ ರಾಚುತ್ತಿತ್ತು. ಒಂದೇ ಸಮ ಮಿಂಚುತ್ತಿತ್ತು. ಒಂದೊಂದು ಮಿಂಚಿನಲ್ಲೂ ಸುತ್ತ ಇನ್ನೈದು ಮಿಂಚು ಕಾಣುತ್ತಿದ್ದವು. ಮೈಯೆಯಲ್ಲ ವದ್ದೆಯಾಗಿ ಮನೆಗೆ ಬಂದು ಮುಟ್ಟಿದ. ಒಳಕ್ಕೆ ಹೋಗಿ ಕದವಿಕ್ಕಿಕೊಂಡ. ಬೀರು ತೆಗೆದು ಅಲ್ಲಿದ್ದ ಎಲ್ಲ ದುಡ್ಡು ಜೇಬಿನಲ್ಲಿಟ್ಟುಕೊಂಡ. ಕೆಲವು ಕಾಗದ ಪತ್ರಗಳನ್ನು ಹರಿದ. ಬಟ್ಟೆ ಬದಲಾಯಿಸಬೇಕು ಅನಿಸಿತು. ಕಿಟಕಿಯಿಂದಾಚೆ ನೋಡಿ, ಮಳೆ ಕಂಡು, ಗುಡುಗು ಕೇಳಿ ಸುಮ್ಮನೆ ಹ್ಯಾಟು ಎತ್ತಿಕೊಂಡು, ಬಾಗಿಲಿಗೆ ಬೀಗ ಹಾಕದೆ ಹೊರಟ. ಸೀದಾ ಸೋನ್ಯಾಳ ಮನೆಗೆ ಹೋದ. ಅವಳು ಬಂದಿದ್ದಳು.

ಸೋನ್ಯಾ ಒಬ್ಬಳೇ ಇರಲಿಲ್ಲ. ಕಾಪೆರ್ನೌಮೋವ್‌ನ ನಾಲ್ಕು ಪುಟ್ಟ ಮಕ್ಕಳು ಅವಳ ಜೊತೆಯಲ್ಲಿದ್ದವು. ಸೋನ್ಯಾ ಅವರಿಗೆ ಟೀ ಕುಡಿಸುತ್ತಿದ್ದಳು. ಸ್ವಿದ್ರಿಗೈಲೋವ್‌ನನ್ನು ಮೌನವಾಗಿ, ಗಂಭೀರವಾಗಿ ಸ್ವಾಗತಿಸಿದಳು. ಆಶ್ಚರ್ಯಪಡುತ್ತ ಅವನ ವದ್ದೆಯಾದ ಉಡುಪು ದಿಟ್ಟಿಸಿದಳು. ಒಂದು ಮಾತೂ ಆಡಲಿಲ್ಲ. ಮಕ್ಕಳೆಲ್ಲ ಭಯಪಟ್ಟು ತಟಕ್ಕನೆ ಓಡಿ ಹೋದರು.

ಸ್ವಿದ್ರಿಗೈಲೋವ್ ಮೇಜಿನ ಹತ್ತಿರ ಕೂತು ಸೋನ್ಯಾಳನ್ನು ಹತ್ತಿರಕ್ಕೆ ಕರೆದ. ಅವಳು ಅವನ ಮಾತು ಕೇಳುವುದಕ್ಕೆ ವಿಧೇಯತೆಯಿಂದ ಸಿದ್ಧಳಾದಳು.

‘ಸೋಫ್ಯಾ ಸೆಮ್ಯೊನೋವ್ನಾ, ನಾನು ಅಮೆರಿಕಕ್ಕೆ ಹೋದರೂ ಹೋದೆ. ಇದೇ ನಮ್ಮ ಕೊನೆಯ ಭೇಟಿಯಾಗಬಹುದು. ಕೆಲವು ವ್ಯವಸ್ಥೆ ಮಾಡುವುದಕ್ಕೆ ಬಂದಿದೇನೆ. ಇವತ್ತು ಆ ಹೆಂಗಸನ್ನು ಭೇಟಿ ಮಾಡಿದೆ ಅಲ್ಲವಾ? ಅವಳೇನು ಹೇಳಿದಳು, ಅದು ಗೊತ್ತು. ನೀನು ಮತ್ತೆ ಹೇಳಬೇಕಾಗಿಲ್ಲ. (ಸೋನ್ಯಾ ನಾಚಿದಳು). ಅವರಿಗೆ ಅವರದೇ ಕ್ರಮ ಇರತ್ತೆ. ನಿನ್ನ ತಂಗಿ, ತಮ್ಮಂದಿರ ಎಲ್ಲರ ವ್ಯವಸ್ಥೆಯಾಗಿದೆ. ಕೊಡಬೇಕಾದ ದುಡ್ಡು ಕಟ್ಟಿದ್ದೇನೆ, ಎಲ್ಲಕ್ಕೂ ರಸೀದಿ ಇದೆ. ಆ ರಸೀದಿ ನೀನೆ ಇಟ್ಟುಕೊಳ್ಳುವುದು ಒಳ್ಳೆಯದು. ತಗೋ, ಇಲ್ಲಿವೆ! ಆ ಕೆಲಸ ಮುಗಿಯಿತು. ಇಲ್ಲಿ ಐದು ಪರ್ಸೆಂಟಿನ ಬಿಲ್ಲುಗಳಿವೆ, ಒಟ್ಟು ಮೂರು ಸಾವಿರ ರೂಬಲ್. ಅದು ನಿನಗೇ, ನಿನ್ನ ಸ್ವಂತ ಬಳಕೆಗೆ. ಈ ವಿಚಾರ ನಮ್ಮಲ್ಲೇ ಇರಲಿ. ಯಾರಿಗೂ ಗೊತ್ತಾಗುವುದು ಬೇಡ, ನಿನ್ನ ಕಿವಿಗೆ ಏನೇ ವಿಷಯ ಬಿದ್ದರೂ ಈ ದುಡ್ಡಿನ ವಿಷಯವನ್ನು ಮಾತ್ರ ಯಾರಿಗೂ ಹೇಳಬೇಡ. ಆ ದುಡ್ಡು ನಿನಗೆ ಬೇಕು, ಸೋಫ್ಯಾ, ಹೀಗೆ ಈಗ ಇರುವ ಹಾಗೆ ಬದುಕುವುದು ಕೆಟ್ಟದ್ದು, ಇನ್ನು ಮುಂದೆ ಹೀಗಿರುವುದು ಅಗತ್ಯವೂ ಇಲ್ಲ.

‘ನೀವು ನಮ್ಮನ್ನ ಕಾಪಾಡಿದ್ದೀರಿ ಸಾರ್. ಅನಾಥ ಮಕ್ಕಳನ್ನ, ಸತ್ತು ಹೋದ ಚಿಕ್ಕಮ್ಮನ್ನ ಕರುಣೆಯಿಂದ ನೋಡಿಕೊಂಡಿದ್ದೀರಿ,’ ಸೋನ್ಯಾ ಆತುರಾತುರವಾಗಿ ಹೇಳಿದಳು. ‘ನಿಮಗೆ ಹೇಗೆ ಥ್ಯಾಂಕ್ಸ್ ಹೇಳಬೇಕೋ ಗೊತ್ತಾಗತಿಲ್ಲ. ನೀವು..’

‘ಹ್ಞಾ, ಸಾಕು, ಸಾಕು.’

‘ಈ ದುಡ್ಡು,.. ತುಂಬ ಋಣಿ ನಾನು. ನನಗೆ ಈ ಹಣ ಬೇಡ. ನನಗೆ ಬೇಕಾದಷ್ಟು ನಾನೇ ದುಡಿಯುತ್ತೇನೆ. ಕೃತಘ್ನತೆ ಅಂತ ತಿಳಿಯಬೇಡಿ. ನೀವು ಅಷ್ಟೊಂದು ದಾನ ಮಾಡಲೇ ಬೇಕೆಂದಿದ್ದರೆ ಈ ಹಣ…’

‘ನಿನಗೇನೇ ಸೋಫ್ಯಾ. ದಯವಿಟ್ಟು ಬೇರೆ ಇನ್ನೇನೂ ಈ ವಿಚಾರವಾಗಿ ಹೇಳಬೇಡ. ನನಗೆ ಟೈಮಿಲ್ಲ. ರೋಡಿಯಾನ್ ರೊಮಾನ್ಯಿಚ್‌ಗೆ ಎರಡು ದಾರಿ ಇದೆ. ಒಂದು ಅವನ ತಲೆಗೆ ಗುಂಡಿಕ್ಕುತ್ತಾರೆ ಅಥವಾ ಸೈಬೀರಿಯಕ್ಕೆ ಕಳಿಸುತ್ತಾರೆ (ಸೋನ್ಯಾ ಹೆದರಿದ ಮೃಗದ ಹಾಗೆ ನಡುಗಿದಳು) ಚಿಂತೆ ಮಾಡಬೇಡ. ನನಗೆಲ್ಲಾ ಗೊತ್ತಿದೆ. ಅವನೇ ಹೇಳಿದ್ದಾನೆ. ನಾನು ಯಾರ ಹತ್ತಿರವೂ ಬಾಯಿ ಬಿಡಲ್ಲ. ನೀನು ಅವನಿಗೆ ಸರಿಯಾಗಿ ಹೇಳಿದೆ. ಅವನು ಹೋಗಿ ತಪ್ಪೊಪ್ಪಿಕೊಳ್ಳಬೇಕು. ಅದರಿಂದ ಅವನಿಗೇ ಒಳ್ಳೆಯದು. ಅಕಸ್ಮಾತ್ ಅವನು ಸೈಬೀರಿಯಕ್ಕೆ ಗಡೀಪಾರಾದರೆ, ನೀನೂ ಅವನ ಹಿಂದೆ ಹೋಗುತ್ತೀ, ಹೌದಲ್ಲವಾ? ಹೌದಲ್ಲವಾ? ಸರಿ. ಹಾಗಿದ್ದರೆ ನಿನಗೆ ದುಡ್ಡು ಬೇಕಾಗತ್ತೆ. ಅವನಿಗಾಗಿ ದುಡ್ಡು ಬೇಕಾಗತ್ತೆ. ಅರ್ಥವಾಯಿತಾ? ಅವನಿಗೆ ಕೊಡುವ ಬದಲಾಗಿ ನಿನಗೆ ಕೊಡುತ್ತಿದ್ದೀನಿ. ಜೊತೆಗೆ ಅಮಾಲಿಯ ಇವಾನೋವ್ನಾಳಿಗೆ ಕೊಡಬೇಕಾದ ಸಾಲ ತೀರಿಸುತ್ತೇನಿ ಅಂತ ನೀನು ಹೇಳಿದ್ದು ಕೇಳಿದ್ದೇನೆ. ದಿಢೀರಂತ ಇಂಥ ಜವಾಬ್ದಾರಿ ಯಾಕೆ ಹೊತ್ತುಕೊಂಡೆ? ಆ ಜರ್ಮನ್ ಹೆಂಗಸಿಗೆ ಸಾಲ ವಾಪಸ್ಸು ಕೊಡಬೇಕಾಗಿದ್ದದ್ದು ತೀರಿ ಹೋದ ಕ್ಯಾತರೀನ, ನೀನಲ್ಲ. ಬಿಟ್ಟಾಕು ಅದನ್ನ. ಹೀಗೆ ಇದ್ದರೆ ಜಗತ್ತಿನಲ್ಲಿ ಬದುಕಕ್ಕೆ ಆಗಲ್ಲ. ನಾಳೆಯೋ ನಾಡಿದ್ದೋ ಯಾರಾದರೂ ನನ್ನ ಬಗ್ಗೆ ನಿನ್ನ ಕೇಳಿದರೆ, (ಖಂಡಿತ ಕೇಳತಾರೆ) ನಾನು ನಿನ್ನ ನೋಡಲು ಬಂದಿದ್ದೆ ಅನ್ನುವ ವಿಚಾರ ಹೇಳಬೇಡ, ಯಾವ ಕಾರಣಕ್ಕೂ ಈ ದುಡ್ಡು ಅವರಿಗೆ ತೋರಿಸಬೇಡ, ನಿನಗೆ ನಾನು ದುಡ್ಡು ಕೊಟ್ಟೆ ಅಂತ ಯಾರಿಗೂ ಹೇಳಬೇಡ. ಗುಡ್‍ಬೈ.’ ಕುರ್ಚಿಯಿಂದ ಎದ್ದ. ‘ರೋಡಿಯಾನ್ ರೊಮಾನ್ಯಿಚ್‌ಗೆ ನನ್ನ ನಮಸ್ಕಾರ ತಿಳಿಸು. ಸದ್ಯಕ್ಕೆ ಈ ದುಡ್ಡನ್ನ ನೀನು ಯಾಕೆ ರಝುಮಿಖಿನ್‍ ಹತ್ತಿರ ಕೊಟ್ಟಿರಬಾರದು? ರಝುಮಿಖಿನ್ ಗೊತ್ತಲ್ಲವಾ ನಿನಗೆ? ನೇರವಾದ ಮನುಷ್ಯ. ನಾಳೆಯೋ, ಸಮಯ ಬಂದಾಗಲೋ ಅವನ ಕೈಗೆ ಕೊಡು, ಅಲ್ಲಿಯವರೆಗೆ ಹುಷಾರಾಗಿ ಬಚ್ಚಿಡು.’

ಸೋನ್ಯಾ ಕೂಡ ದಢಕ್ಕನೆ ಎದ್ದಿದ್ದಳು. ಭಯಪಡುತ್ತ ಅವನನ್ನೇ ನೋಡುತ್ತಿದ್ದಳು. ಏನೋ ಹೇಳಬೇಕು, ಏನೋ ಕೇಳಬೇಕು ಅನಿಸುತ್ತಿತ್ತು. ಧೈರ್ಯ ಬರಲಿಲ್ಲ, ಹೇಗೆ ಮಾತಾಡುವುದು ತಿಳಿಯಲಿಲ್ಲ.

‘ಹೇಗೆ…ಹೇಗೆ ಹೋಗತೀರಿ….ಇಷ್ಟೊಂದು ಮಳೆ?’

‘ಏನೂ! ಅಮೆರಿಕಕ್ಕೆ ಹೊರಟವನು ಮಳೆಗೆ ಹೆದರುತ್ತೇನಾ? ಹ್ಹೆಹ್ಹೇ! ಗುಡ್‌ಬೈ ಸೋನ್ಯಾ. ನೂರು ಕಾಲ ಬದುಕು. ಎಷ್ಟೋ ಜನಕ್ಕೆ ನಿನ್ನಿಂದ ಉಪಕಾರ ಆಗಬೇಕಾಗಿದೆ. ಅಂದ ಹಾಗೆ, ರಝುಮಿಖಿನ್‌ಗೆ ನನ್ನ ನಮಸ್ಕಾರ ತಿಳಿಸು. ಆರ್ಕಾಡಿ ಇವಾನೊವಿಚ್ ಸ್ವಿದ್ರಿಗೈಲೋವ್ ನಮಸ್ಕಾರ ತಿಳಿಸಿದ್ದಾರೆ ಅನ್ನು. ಮರೆಯ ಬೇಡ.’

ಸೋನ್ಯಾಳನ್ನು ಅವಳ ದಿಗ್ಭ್ರಾಂತಿ, ಅಸ್ಪಷ್ಟ ಭಯಗಳಲ್ಲಿ, ಅಪಶಕುನದ ಹೆದರಿಕೆಗಳಲ್ಲಿ ಹಾಗೇ ಬಿಟ್ಟು ಅವನು ಹೊರಟು ಹೋದ. ಅವನು ಇನ್ನೊಂದು ವಿಚಿತ್ರವಾದ, ಅನಿರೀಕ್ಷಿತವಾದ ಭೇಟಿ ನೀಡಿದ್ದ ಅನ್ನುವುದು ಆನಂತರ ತಿಳಿಯಿತು. ಹನ್ನೊಂದು ಗಂಟೆಯ ನಂತರ ತಿಳಿಯಿತು. ಮಳೆ ಇನ್ನೂ ನಿಂತಿರಲಿಲ್ಲ. ಹನ್ನೊಂದೂ ಇಪ್ಪತ್ತರ ಹೊತ್ತಿಗೆ, ಮೈಯೆಲ್ಲ ವದ್ದೆಯಾಗಿ ಅವನು ತನ್ನ ಭಾವೀ ಪತ್ನಿಯ ಪುಟ್ಟ ಮನೆಗೆ ಹೋದ. ಅದು ಇದ್ದದ್ದು ವಾಸಿಲೆಯೇವ್ಸ್ಕಿ ಐಲ್ಯಾಂಡಿನ ಮೂರನೆಯ ಬೀದಿ ಮತ್ತು ಮಲೈ ಪ್ರಾಸ್ಪೆಕ್ಟ್ ಸೇರುವಲ್ಲಿ. ಬಾಗಿಲು ತೆಗೆಸುವುದು ಕಷ್ಟವಾಯಿತು. ಮೊದಮೊದಲು ದೊಡ್ಡ ಗಲಾಟೆಯೇ ಎದ್ದಿತು. ಸ್ವಿದ್ರಿಗೈಲೋವ್ ಸಮಯ ಬಂದರೆ ಬಹಳ ಸಜ್ಜನಿಕೆಯಿಂದ ನಡೆದುಕೊಳ್ಳುವವನು. ಈಗ ತನ್ನ ಭಾವೀ ವಧುವಿನ ಜಾಣ ತಂದೆತಾಯಿಯರ ಅನುಮಾನ ಪರಿಹರಿಸಿದ. ಇವನೆಲ್ಲೋ ಕುಡಿದು ದಾರಿ ತಪ್ಪಿ ಎಲ್ಲಿಗೆ ಹೋಗುತ್ತಿದ್ದೇನೆಂದು ತಿಳಿಯದೆ ಬಂದಿದ್ದಾನೆ ಅಂದುಕೊಂಡಿದ್ದ ಅವರ ಸಂಶಯ ತನ್ನಷ್ಟಕ್ಕೇ ಕುಸಿದು ಬೀಳುವ ಹಾಗೆ ಮಾಡಿದ. ಅವನ ಭಾವೀ ಪತ್ನಿಯ ತಾಯಿ, ಸೂಕ್ಷ್ಮ ಅರಿತಿರುವ ಮೃದು ಮನಸಿನವಳು, ತನ್ನ ಗಂಡನನ್ನು ಗಾಲಿಯ ಕುರ್ಚಿಯ ಮೇಲೆ ಕೂರಿಸಿಕೊಂಡು ಬಂದು ಸ್ವಿದ್ರಿಗೈಲೋವನ ಭೇಟಿ ಮಾಡಿಸಿದಳು. ಒಳಕ್ಕೆ ಕರಕೊಂಡು ಹೋದಳು. ಎಂದಿನಂತೆ ಸುತ್ತಿ ಬಳಸಿ ಏನೇನೋ ಪ್ರಶ್ನೆ ಕೇಳಿದಳು. (ಈ ಹೆಂಗಸು ಯಾವತ್ತೂ ನೇರವಾಗಿ ಪ್ರಶ್ನೆ ಕೇಳುತ್ತಲೇ ಇರಲಿಲ್ಲ. ಉದಾಹರಣೆಗೆ, ಸ್ವಿದ್ರಿಗೈಲೋವ್ ಯಾವತ್ತು ಮದುವೆ ಇಟ್ಟುಕೊಳ್ಳುತ್ತಾನೆ ಅನ್ನುವ ಮಾಹಿತಿ ತಿಳಿಯಬೇಕಾಗಿದ್ದರೆ, ಮೊದಲು ನಕ್ಕು, ಆಮೇಲೆ ಕೈ ಹೊಸೆದು, ತನಗೆ ಇದು ಬಹಳ ಮುಖ್ಯವೇನೋ ಅನ್ನುವ ಹಾಗೆ ಪ್ಯಾರಿಸಿನ ರಾಜಾಸ್ಥಾನದ ಬದುಕಿನ ವಿವರಗಳ ಬಗ್ಗೆ ಪ್ರಶ್ನೆ ಕೇಳಿ ಆಮೇಲೆ ನಿಧನಿಧಾನವಾಗಿ ತಾವು ವಾಸವಾಗಿರುವ ಮೂರನೆಯ ಬೀದಿಯ ವಿಚಾರಕ್ಕೆ ಬರುತ್ತಿದ್ದಳು.) ಬೇರೆಯ ಹೊತ್ತಿನಲ್ಲಾಗಿದ್ದರೆ ಅವಳಿಗೆ ಬಹಳ ಗೌರವಕೊಟ್ಟು ಮಾತಾಡಿಸುತ್ತಿದ್ದನೇನೋ. ಈಗ ಸ್ವಿದ್ರಿಗೈಲೋವ್ ತೀರ ಅಹನೆಯಲ್ಲಿ ಚಡಪಡಿಸುತ್ತಿದ್ದ. ತಾನು ಮದುವೆಯಾಗಲಿರುವ ಹುಡುಗಿ ಆಗಲೇ ಮಲಗಿದ್ದಾಳೆಂದು ಅವಳ ತಾಯಿ ಹೇಳಿದ್ದರೂ ಈಗ ಒರಟು ಅನ್ನುವ ಹಾಗೆ ಹುಡುಗಿಯನ್ನು ಮಾತಾಡಿಸಬೇಕು ಅಂದ. ಭಾವೀ ವಧು ಬಂದಳು. ಸ್ವಿದ್ರಿಗೈಲೋವ್ ಅವಳಿಗೆ ನೇರವಾಗಿ ಹೇಳಿದ: ಏನೋ ಮುಖ್ಯವಾದ ಕೆಲಸ ಬಂದು ಪೀಟರ್ಸ್‌ಬರ್ಗನ್ನು ಬಿಟ್ಟು ಬಹಳ ಕಾಲ ದೂರ ಹೋಗಬೇಕಾಗಿದೆ, ಅದಕ್ಕಾಗಿಯೇ ಹದಿನೈದು ಸಾವಿರ ರೂಬಲ್‍ ಬೆಳ್ಳಿ ನಾಣ್ಯದ ರಸೀದಿ ತಂದಿದ್ದೇನೆ, ಇದನ್ನು ನಿನಗೆ ಉಡುಗೊರೆಯಾಗಿ ಮದುವೆಗೆ ಮೊದಲೇ ಕೊಡಬೇಕು ಎಂದು ಬಹಳ ದಿನದಿಂದ ಮನಸಿನಲ್ಲಿತ್ತು ತಗೋ ಅಂದ. ಈ ವಿವರಣೆಗಳಲ್ಲಿ ಉಡುಗೊರೆಗೂ ತುರ್ತಾಗಿ ಊರು ಬಿಡುವುದಕ್ಕೂ, ಹಾಗೆಯೇ ಉಡುಗೊರೆ ಕೊಡುವುದಕ್ಕೆ ಮಧ್ಯರಾತ್ರಿಯಲ್ಲಿ, ಸುರಿಯುವ ಮಳೆಯಲ್ಲಿ ಬಂದದ್ದಕ್ಕೂ ತಾರ್ಕಿಕ ಸಂಬಂಧವೇನೂ ಇರಲಿಲ್ಲ. ಆದರೂ ಎಲ್ಲ ಅಚ್ಚುಕಟ್ಟಾಗಿ ನಡೆಯಿತು. ಅಗತ್ಯವಾಗಿ ಇರಲೇಬೇಕಾದ ಓಹೋ, ಆಹಾಗಳೂ ಪ್ರಶ್ನೆ ಉತ್ತರಗಳೂ ಅತೀ ಸಂಕ್ಷಿಪ್ತವಾಗಿ ಮುಗಿದು ಹೋದವು. ಅವನ್ನೆಲ್ಲ ಸರಿದೂಗಿಸುವುದಕ್ಕೆ ಅನ್ನುವ ಹಾಗೆ ತಾಯಿಯಾದವಳು ಹೃತ್ಪೂರ್ವಕ ಕೃತಜ್ಞತೆಯ ಜೊತೆಗೆ ಕಣ್ಣೀರು ತಂದುಕೊಂಡಳು. ಸ್ವಿದ್ರಿಗೈಲೋವ್ ಎದ್ದು ನಿಂತ. ನಕ್ಕ. ಭಾವೀ ಪತ್ನಿಯ ಕೆನ್ನೆಗೆ ಮುತ್ತಿಟ್ಟ, ಮೆಲ್ಲಗೆ ಕೆನ್ನೆ ತಟ್ಟಿದ, ಬೇಗ ಬರುತ್ತೇನೆಂದ. ಅವಳ ಕಣ್ಣಿನಲ್ಲಿ ಮಗುವಿಗೆ ಇರುವಂಥ ಸಹಜವಾದ ಕುತೂಹಲವಿತ್ತು, ಜೊತೆಗೆ ಗಂಭೀರವಾದ ಪ್ರಶ್ನೆಯೂ ಇದೆ ಅನ್ನಿಸಿತು. ಒಂದು ಕ್ಷಣ ಯೋಚನೆ ಮಾಡಿದ, ಮತ್ತೆ ಮುತ್ತಿಟ್ಟ. ತಾನು ಅವಳಿಗೆಂದು ಕೊಟ್ಟ ಉಡುಗೊರೆಯನ್ನೆಲ್ಲ ಜಾಣ ತಾಯಿ ಹುಷಾರಾಗಿ ಎತ್ತಿಟ್ಟುಬಿಡುತ್ತಾಳೆಂದು ದುಃಖಪಟ್ಟ. ಎಲ್ಲರನ್ನೂ ತೀರ ಉದ್ರಿಕ್ತ ಸ್ಥಿತಿಯಲ್ಲಿಯೇ ಬಿಟ್ಟು ಹೊರನಡೆದ. ಆಮೇಲೆ ಮನೆಯಲ್ಲಿ ಹುಟ್ಟಿಕೊಂಡ ಕೆಲವು ಪ್ರಶ್ನೆಗಳಿಗೆ ಮೆದು ಮನಸಿನ ಅಮ್ಮ ಸಮಾಧಾನ ನೀಡಿದಳು. ಸ್ವಿದ್ರಿಗೈಲೋವ್ ದೊಡ್ಡ ಮನುಷ್ಯ, ಬಹಳ ಶ್ರೀಮಂತ. ನೂರಾರು ವ್ಯವಹಾರ ಇರತ್ತೆ, ಜನಗಳ ಬಳಕೆ ಇರತ್ತೆ, ಅವನ ತಲೇಲ್ಲಿ ಏನಿದೆಯೋ ದೇವರಿಗೇ ಗೊತ್ತು, ಹೋಗಬೇಕು ಅಂದುಕೊಂಡ, ಹೋದ, ದುಡ್ಡು ಕೊಡಬೇಕು ಅನ್ನಿಸಿತು, ಕೊಟ್ಟ. ಇದರಲ್ಲಿ ಆಶ್ಚರ್ಯಪಡುವಂಥದ್ದು ಏನಿಲ್ಲ. ಅವನು ಮಳೆಯಲ್ಲಿ ಬಂದಿದ್ದು ವಿಚಿತ್ರ, ನಿಜ. ಎಷ್ಟೋ ಜನ, ಉದಾಹರಣೆಗೆ ಇಂಗ್ಲಿಶಿನವರು, ಇನ್ನೂ ವಿಚಿತ್ರವಾಗಿ ಆಡತಾರೆ. ತಮ್ಮ ಬಗ್ಗೆ ಜನ ಏನನ್ನುತ್ತಾರೆ ಅದಕ್ಕೆ ಇಂಥ ದೊಡ್ಡ ಮನುಷ್ಯರು ಗಮನ ಕೊಡಲ್ಲ. ಶಿಷ್ಟಾಚಾರಕ್ಕೆ ಬೆಲೆ ಕೊಡಲ್ಲ. ಯಾರ ಭಯವೂ ಇಲ್ಲ ಅಂತ ತೋರಿಸಿಕೊಳ್ಳೋದಕ್ಕೇನೇ ಅವನು ಹೀಗೆ ಸುತ್ತಾಡತಾ ಇರಬಹುದು. ಮುಖ್ಯ ಅಂದರೆ, ಈ ವಿಚಾರ ಯಾರಿಗೂ ಹೇಳಬಾರದು. ಯಾಕೆ ಅಂದರೆ, ಇನ್ನೂ ಏನೇನಾಗತ್ತೋ ಇದರಿಂದ, ದೇವರಿಗೇ ಗೊತ್ತು. ದುಡ್ಡನ್ನ ತಕ್ಷಣ ಬೀಗ ಹಾಕಿಡಬೇಕು. ತುಂಬ ಒಳ್ಳೆಯದು ಏನಪ್ಪಾ ಅಂದರೆ ಫೆದ್ಯೋಸ್ ಇಷ್ಟು ಹೊತ್ತೂ ಅಡುಗೆ ಮನೆಯಲ್ಲೇ ಇದ್ದದ್ದು. ಮುಖ್ಯ ಏನಪ್ಪಾ ಅಂದರೆ, ಯಾವ ಕಾರಣಕ್ಕೂ, ಯಾವ ಕಾರಣಕ್ಕೂ, ಯಾವುದೇ ಕಾರಣಕ್ಕೂ ಮುದಿ ನರಿ ರೆಸ್ಸ್ಲಿಚ್‌ಗೆ ಈ ವಿಚಾರ ಏನೇನೂ ಬಾಯಿ ಬಿಡಬಾರದು—ಅಂದಳು. ರಾತ್ರಿ ಎರಡು ಗಂಟೆಯವರೆಗೆ ಹಾಗೇ ಕೂತು ಮಾತಾಡತಿದ್ದರು. ಆಶ್ಚರ್ಯಗೊಂಡಿದ್ದ, ಸ್ವಲ್ಪ ಭಯವನ್ನೂ ಪಟ್ಟಿದ್ದ ಭಾವೀ ವಧು ಹೋಗಿ ಮಲಗಿಬಿಟ್ಟಿದ್ದಳು.

ಇತ್ತ, ಮಧ್ಯ ರಾತ್ರಿಯ ಹೊತ್ತಿಗೆ ಸರಿಯಾಗಿ ಸ್ವಿದ್ರಿಗೈಲೋವ್ ಪೀಟರ್ಸ್‍ಬರ್ಗಿನ ದಿಕ್ಕಿಗೆ ಇದ್ದ ತುಚ್ಕೋವ್ ಸೇತುವೆಯನ್ನು ದಾಟುತ್ತಿದ್ದ. ಮಳೆ ನಿಂತಿತ್ತು. ಗಾಳಿ ಮಾತ್ರ ಬೀಸುತ್ತಿತ್ತು. ಚಳಿಗೆ ನಡುಗುತ್ತಿದ್ದ. ಏನೋ ಪ್ರಶ್ನೆ, ಏನೋ ಕುತೂಹಲ ಇಟ್ಟುಕೊಂಡು ಲಿಟಲ್ ನೇವಾದ ಕಪ್ಪು ನೀರನ್ನು ಒಂದು ಕ್ಷಣ ಸೇತುವೆಯಿಂದ ಬಗ್ಗಿ ನೋಡಿದ. ನದಿಯ ಮೇಲಿನ ಸೇತುವೆಯಲ್ಲಿ ನಿಂತರೆ ಬಹಳ ಚಳಿ ಅನಿಸಿ, ಅಲ್ಲಿಂದ ಹೊರಟು ಬೋಲ್‌ಶಾಯ್ ಪ್ರಾಸ್ಪೆಕ್ಟಿಗೆ ಹೋದ. ಕೊನೆಯೇ ಇರದ ಬೋಲ್‌ಶಾಯ್ ಪ್ರಾಸ್ಪೆಕ್ಟಿನಲ್ಲಿ ಸುಮಾರು ಅರ್ಧ ಗಂಟೆ ಅಲೆದ. ಮರದ ಹಲಗೆ ಜೋಡಿಸಿ ಮಾಡಿದ್ದ ಫುಟ್‌ಪಾತಿನ ಮೇಲೆ ಹೆಜ್ಜೆ ಹಾಕುತ್ತ ಕತ್ತಲಲ್ಲಿ ಹಲವು ಬಾರಿ ಎಡವಿದ. ಆದರೂ ತನ್ನ ಬಲಗಡೆಗೆ ಪ್ರಾಸ್ಪೆಕ್ಟ್ ಗಮನಿಸಿ ನೋಡುವುದನ್ನು ಮಾತ್ರ ಬಿಡಲಿಲ್ಲ. ಕೆಲವು ದಿನದ ಮೊದಲು ಗಾಡಿಯಲ್ಲಿ ಅತ್ತ ಬಂದಾಗ ಪ್ರಾಸ್ಪೆಕ್ಟಿನ ತುದಿಯಲ್ಲಿ ಹೋಟೆಲೊಂದನ್ನು ನೋಡಿದ್ದ. ಮರದ ದಿಮ್ಮಿಗಳಿಂದ ಕಟ್ಟಿದ್ದು, ಅದರ ಹೆಸರಿನಷ್ಟೇ ವಿಶಾಲವಾದದ್ದು. ಅವನಿಗೆ ನೆನಪಿದ್ದ ಮಟ್ಟಿಗೆ ಆ ಹೆಸರು ‘ದಿ ಆಡ್ರಿಯಾನ್ ಪೋಲ್.’ ಹಿನ್ನೀರಿನ ಹತ್ತಿರ ಅಷ್ಟು ವಿಶಾಲವಾದ ಕಟ್ಟಡ ಎದ್ದು ಕಾಣುತ್ತದೆ, ಕತ್ತಲಲ್ಲೂ ತಪ್ಪಿ ಹೋಗುವುದಿಲ್ಲ ಎಂದು ಅವನು ಅಂದುಕೊಂಡದ್ದು ಸರಿಯಾಗಿತ್ತು. ಮಸಿ ಹಿಡಿದ, ಉದ್ದವಾದ ಕಟ್ಟಡ; ರಾತ್ರಿ ಅಷ್ಟು ತಡವಾಗಿದ್ದರೂ ದೀಪ ಉರಿಯುತ್ತಿದ್ದವು, ಜನರ ಮಾತು ಕೇಳುತ್ತಿತ್ತು. ಒಳಕ್ಕೆ ಹೋಗಿ, ಕೊಳಕು ಬಟ್ಟೆ ತೊಟ್ಟ ಕೆಲಸದ ಹುಡುಗನನ್ನ ಕಂಡು ರೂಮು ಸಿಗುತ್ತದಾ ಎಂದು ಕೇಳಿದ. ಕೊಳಕು ಬಟ್ಟೆಯ ಹುಡುಗ ಸ್ವಿದ್ರಿಗೈಲೋವ್‌ನನ್ನು ನೋಡುತ್ತ, ಎದ್ದು ಓಣಿಯ ತುಟ್ಟ ತುದಿಯ ಮೂಲೆಯಲ್ಲಿ, ಮೆಟ್ಟಲ ಕೆಳಗಿದ್ದ, ಉಸಿರು ಕಟ್ಟಿಸುವಂಥ ರೂಮಿಗೆ ಕರಕೊಂಡು ಹೋದ. ಖಾಲಿ ಇದ್ದದ್ದು ಅದೊಂದೇ ರೂಮು. ಕೊಳಕು ಬಟ್ಟೆಯ ಹುಡುಗನ ಕಣ್ಣಲ್ಲಿ ಪ್ರಶ್ನೆ ಇತ್ತು.

‘ಟೀ ಸಿಗತ್ತಾ?’ ಸ್ವಿದ್ರಿಗೈಲೋವ್ ಕೇಳಿದ.

‘ಸಿಗತ್ತೆ, ಸಾರ್.’

‘ಇನ್ನೇನಿದೆ?’

‘ಎಳೆಯ ಕರುವಿನ ವಿಯಲ್ ಇದೆ ಸಾರ್, ವೋಡ್ಕಾ, ಲೈಟಾದ ತಿಂಡಿ ಇದೆ ಸಾರ್.’

‘ವಿಯಲ್, ಮತ್ತೆ ಟೀ ತಗೊಂಡು ಬಾ.’

‘ಇನ್ನೇನೂ ಬೇಡವಾ?’ ಕೊಳಕು ಬಟ್ಟೆಯ ಹುಡುಗ ಗೊಂದಲಕ್ಕೆ ಸಿಕ್ಕವನ ಹಾಗೆ ಕೇಳಿದ.

‘ಇನ್ನೇನೂ ಬೇಡ.’
ಕೊಳಕು ಬಟ್ಟೆಯ ಹುಡುಗ ನಿರಾಸೆಗೊಂಡವನ ಹಾಗೆ ಹೊರಟು ಹೋದ.

‘ಒಳ್ಳೆಯ ಜಾಗ ಇರಬೇಕು ಇದು. ಮೊದಲೇ ಯಾಕೆ ತಿಳಿಯಲಿಲ್ಲ ನನಗೆ? ಯಾವುದೋ ಸ್ಟಾರ್ ಹೋಟೆಲಿನಿಂದ ಏನೇನೋ ಸಾಹಸ ಮಾಡಿಕೊಂಡು ಬಂದವನ ಹಾಗೆ ಕಾಣತಿರಬೇಕು ನಾನು. ಇಲ್ಲಿಗೆ ಬಂದು ರಾತ್ರಿ ಉಳಿಯುವವರು ಯಾರಿರಬಹುದು?’

ನನಗೆಲ್ಲಾ ಗೊತ್ತಿದೆ. ಅವನೇ ಹೇಳಿದ್ದಾನೆ. ನಾನು ಯಾರ ಹತ್ತಿರವೂ ಬಾಯಿ ಬಿಡಲ್ಲ. ನೀನು ಅವನಿಗೆ ಸರಿಯಾಗಿ ಹೇಳಿದೆ. ಅವನು ಹೋಗಿ ತಪ್ಪೊಪ್ಪಿಕೊಳ್ಳಬೇಕು. ಅದರಿಂದ ಅವನಿಗೇ ಒಳ್ಳೆಯದು. ಅಕಸ್ಮಾತ್ ಅವನು ಸೈಬೀರಿಯಕ್ಕೆ ಗಡೀಪಾರಾದರೆ, ನೀನೂ ಅವನ ಹಿಂದೆ ಹೋಗುತ್ತೀ, ಹೌದಲ್ಲವಾ? ಹೌದಲ್ಲವಾ?

ಮೇಣದ ಬತ್ತಿ ಹೊತ್ತಿಸಿ ರೂಮನ್ನು ವಿವರವಾಗಿ ನೋಡಿದ. ಸ್ವಿದ್ರಿಗೈಲೋವ್ ಹಿಡಿಸುವುದೇ ಕಷ್ಟ ಅನ್ನಿಸುವಷ್ಟು ಪುಟ್ಟ ಕೋಣೆ ಅದು. ಒಂದೇ ಕಿಟಕಿ ಇತ್ತು. ಹಾಸಿಗೆ ಕೊಳಕಾಗಿತ್ತು. ಬಣ್ಣ ಬಳಿದ ಮಾಮೂಲಿ ಟೇಬಲ್ಲು, ಕುರ್ಚಿಗಳು ಉಳಿದ ಬಹಳಷ್ಟು ಜಾಗವನ್ನು ತುಂಬಿದ್ದವು. ಕತ್ತರಿಸಿದ ಹಲಗೆಗಳನ್ನು ಜೋಡಿಸಿ ಗೋಡೆಯನ್ನು ಮಾಡಿದ ಹಾಗಿತ್ತು. ಅವಕ್ಕೆ ಅಂಟಿಸಿದ್ದ ವಾಲ್‌ಪೇಪರು ಧೂಳು ಮೆತ್ತಿ ಚಿಂದಿ ಎದ್ದಿತ್ತು. ಅದರ ಬಣ್ಣ ಹಳದಿ ಇದ್ದಿರಬಹುದು ಅನ್ನುವ ಊಹೆ ಮಾಡಲು ಸಾಧ್ಯವಿದ್ದರೂ ಅದರ ಮೇಲಿದ್ದ ಚಿತ್ರ ಮಾತ್ರ ಪತ್ತೆಯಾಗುತ್ತಿರಲಿಲ್ಲ. ಹಳೆಯ ಸಾಮಗ್ರಿ ತುಂಬುವ ಅಟ್ಟದ ಕೋಣೆಗಳಲ್ಲಿರುವ ಹಾಗೆ ಇಲ್ಲೂ ರೂಮಿನ ಒಂದು ಮೂಲೆಯನ್ನು ಕತ್ತರಿಸಿ ತೆಗೆದಿದ್ದರು; ಅಲ್ಲಿ ಮಹಡಿಗೆ ಹೋಗುವ ಮೆಟ್ಟಿಲ ತಳಭಾಗ ಕಾಣುತ್ತಿತ್ತು.

ಸ್ವಿದ್ರಿಗೈಲೋವ್ ಮೇಣದ ಬತ್ತಿ ಮೇಜಿನ ಮೇಲಿರಿಸಿ ಹಾಸಿಗೆಯ ಮೇಲೆ ಕೂತು ಯೋಚನೆಯಲ್ಲಿ ಮುಳುಗಿದ. ಪಕ್ಕದ ರೂಮಿನಿಂದ ವಿಚಿತ್ರವಾದ, ನಿರಂತರವಾದ ಪಿಸುಮಾತು ಕೇಳುತ್ತಿತ್ತು. ಆಗೀಗ ಕೂಗಾಟವಾಗುತ್ತಿತ್ತು. ಸ್ವಿದ್ರಿಗೈಲೋವ್‌ನ ಗಮನ ಅತ್ತ ಹೋಯಿತು. ಅವನು ಕೋಣೆಗೆ ಬಂದ ಕ್ಷಣದಿಂದ ಪಿಸುದನಿ ನಿಂತೇ ಇರಲಿಲ್ಲ. ಕಿವಿಗೊಟ್ಟು ಕೇಳಿಸಿಕೊಂಡ. ಯಾರೋ ಯಾರನ್ನೋ ಬೈಯುತ್ತ ಕಣ್ಣೀರು ತಂದುಕೊಂಡು ನಿಂದಿಸುತ್ತ ಇದ್ದರು. ಒಂದು ದನಿ ಮಾತ್ರ ಕೇಳುತ್ತಿತ್ತು. ಸ್ವಿದ್ರಿಗೈಲೋವ್ ಎದ್ದ. ಮೇಣದ ಬತ್ತಿ ತೆಗೆದುಕೊಂಡ. ಗೋಡೆಯಲ್ಲೊಂದು ಬಿರುಕು ಕಾಣಿಸಿತು. ಅಲ್ಲಿಗೆ ಹೋಗಿ ಇಣುಕಿದ. ಆಚೆಯ ಕೋಣೆಯಲ್ಲಿ ಇಬ್ಬರಿದ್ದರು. ಅವನಿದ್ದ ಕೋಣೆಗಿಂತ ಸ್ವಲ್ಪ ದೊಡ್ಡದಾಗಿತ್ತು ಅದು. ಅವರಲ್ಲೊಬ್ಬ, ಕೋಟಿಲ್ಲದೆ, ತಲೆಯ ತುಂಬ ಗುಂಗುರು ಕೂದಲಿದ್ದು, ಕೆಂಪು ಮುಖ ಊದಿಸಿಕೊಂಡು, ಭಾಷಣಕಾರನ ಭಂಗಿಯಲ್ಲಿ ಕಾಲು ದೂರ ಇಟ್ಟು ನಿಂತು, ಮುಷ್ಠಿಯಲ್ಲಿ ಎದೆ ಗುದ್ದಿಕೊಳ್ಳುತ್ತ ಕರುಣಾಜನಕ ದನಿಯಲ್ಲಿ ಇನ್ನೊಬ್ಬನನ್ನು ತಿರುಕ, ಮಾನ ಮರ್ಯಾದೆ ಇಲ್ಲದವನು ಎಂದು ಬೈಯುತ್ತ, ನಿನ್ನನ್ನು ಕೆಸರಿನಿಂದ ಎತ್ತಿಕೊಂಡು ಬಂದೆ, ಯಾವಾಗ ಬೇಕಾದರೂ ಮತ್ತೆ ಅಲ್ಲಿಗೇ ತಳ್ಳತೀನಿ, ದೇವರು ಎಲ್ಲಾನೂ ನೋಡತಾನೆ ಅನ್ನುತಿದ್ದ. ಯಾರಿಗಾದರೂ ಜೋರಾಗಿ ಸೀನು ಬರುವಾಗ ಸೀನಲಾಗದೆ ಚಡಪಿಸಿಕೊಂಡು ಕೂತಿರುತ್ತಾರಲ್ಲ ಹಾಗೆಯೇ ಇಲ್ಲೂ ಬೈಯಿಸಿಕೊಳ್ಳುತಿದ್ದ ಗೆಳೆಯ ಕುರ್ಚಿಯ ಮೇಲೆ ಕೂತು, ಹಸುವಿನಂಥ ಕಣ್ಣುಬಿಟ್ಟುಕೊಂಡು ಮಾತುಗಾರನನ್ನು ಮಂಕಾಗಿ ನೋಡುತಿದ್ದ.

ಯಾಕೆ ಬೈಯುತ್ತಾನೆ ಅನ್ನುವುದೇ ಅವನಿಗೆ ಅರ್ಥವಾದಹಾಗೆ ಕಾಣುತ್ತಿರಲಿಲ್ಲ, ಬೈಗುಳ ಕೇಳಿಸಿಕೊಂಡ ಹಾಗೂ ಕಾಣುತ್ತಿರಲಿಲ್ಲ. ಮೇಜಿನ ಮೇಲೆ ಉರಿದು ಚಿಕ್ಕದಾಗುತ್ತಿದ್ದ ಮೇಣದ ಬತ್ತಿಯ ಪಕ್ಕದಲ್ಲಿ ಅರ್ಧ ಖಾಲಿಯಾದ ವೋಡ್ಕಾ ಬಾಟಲಿ, ವೈನ್ ಗ್ಲಾಸುಗಳು, ಬ್ರೆಡ್ಡು, ಲೋಟಗಳು, ಉಪ್ಪಿನಕಾಯಿ, ಯಾವಾಗಲೋ ಕುಡಿದು ಮುಗಿಸಿದ ಟೀ ಕಪ್ಪುಗಳು ಇದ್ದವು. ಆ ಕೋಣೆಯ ಚಿತ್ರವನ್ನು ಗಮನಿಸಿ ನೋಡಿದ ಸ್ವಿದ್ರಿಗೈಲೋವ್ ವಾಪಸ್ಸು ಬಂದು ಮತ್ತೆ ಹಾಸಿಗೆಯ ಮೇಲೆ ಕೂತ.

ಕೊಳಕು ಬಟ್ಟೆಯ ಕೆಲಸದ ಹುಡುಗ ಟೀಯ ಜೊತೆಗೆ ವಿಯಲ್ ತಂದಿಟ್ಟ. ‘ಮತ್ತಿನ್ನೇನಾದರೂ ಬೇಕಾ?ʼ ಎಂದು ಇನ್ನೊಂದು ಸಾರಿ ಕೇಳದೆ ಸುಮ್ಮನಿರಲು ಆಗಲಿಲ್ಲ ಅವನಿಗೆ. ‘ಬೇಡ’ ಎಂಬ ಉತ್ತರವನ್ನೇ ಮತ್ತೆ ಕೇಳಿ ಹೊರಟು ಹೋದ. ಸ್ವಿದ್ರಿಗೈಲೋವ್ ತಕ್ಷಣವೇ ಇಡೀ ಗ್ಲಾಸು ಟೀ ಕುಡಿದ. ವಿಯಲ್ ಮಾತ್ರ ಒಂದು ತುತ್ತೂ ತಿನ್ನುವುದಕ್ಕಾಗಲಿಲ್ಲ. ಜ್ವರ ಬರುತ್ತಿದೆ ಅನ್ನಿಸಿತು. ಕೋಟು, ಜಾಕೆಟ್ಟು ತೆಗೆದ, ರಗ್ಗು ಹೊದ್ದುಕೊಂಡು ಮಲಗಿದ. ಕಿರಿಕಿರಿಯಾಗುತಿತ್ತು. ‘ಇಂಥ ಹೊತ್ತಲ್ಲಿ ಎಚ್ಚರವಾಗಿರಬೇಕಾಗಿತ್ತು,’ ಅಂದುಕೊಂಡ, ನಕ್ಕ. ರೂಮು ಉಸಿರು ಕಟ್ಟಿಸುತಿತ್ತು. ಮೇಣದ ಬತ್ತಿ ಮಂಕಾಗಿ ಉರಿಯುತಿತ್ತು. ಹೊರಗೆ ಗಾಳಿಯ ಸದ್ದು ಇತ್ತು. ಎಲ್ಲೋ ಮೂಲೆಯಲ್ಲಿ ಇಲಿ ಕಟಕಟ ಸದ್ದು ಮಾಡುತಿತ್ತು. ಇಡೀ ರೂಮಿನ ತುಂಬ ಇಲಿಯ ವಾಸನೆ, ಒಂದು ಥರಾ ಚರ್ಮದ ವಾಸನೆ. ಕನಸು ಬಿದ್ದ ಹಾಗಿತ್ತು. ಒಂದು ಯೋಚನೆಯ ಹಿಂದೆ ಇನ್ನೊಂದು ಬರುತಿತ್ತು. ಅವನ ಕಲ್ಪನೆಯಲ್ಲಿ ಮೂಡುತ್ತಿದ್ದ ಸಂಗತಿಗಳಲ್ಲಿ ಯಾವುದನ್ನಾದರೂ ಗಟ್ಟಿಯಾಗಿ ಹಿಡಿಯಲು ಆಗಿದ್ದರೆ ಚೆನ್ನಾಗಿರುತಿತ್ತು ಅನಿಸುತಿತ್ತು. ‘ಕಿಟಕಿಯ ಆಚೆ, ಸದ್ದು. ಗಾರ್ಡನ್ನಿನಲ್ಲಿ ಗಾಳಿ ಬೀಸುತ್ತಿರಬೇಕು, ಮರಗಳ ಮರ್ಮರ ಸದ್ದು. ಈಗ ಗಾಳಿಯ ರಾತ್ರಿಯ ಕತ್ತಲಲ್ಲಿ ಈ ಮರ್ಮರ ಬೇರೆ, ಥೂ,’ ಅಂದುಕೊಂಡ. ಅವತ್ತೇ ಪೆಟ್ರೋವ್ಸ್ಕಿ ಪಾರ್ಕು ದಾಟುವಾಗಲೂ ಹೀಗೇ ಮರಗಳ ಸದ್ದು ಅಸಹ್ಯ ಅನಿಸಿತ್ತಲ್ಲ—ಅಂದುಕೊಂಡ. ತಟಕ್ಕನೆ ಪೀಟರ್ಸ್‍ಬರ್ಗ್‌ ಸೇತುವೆಯ ನೆನಪು, ಲಿಟಲ್ ನೇವಾದ ನೆನಪು ಬಂದವು. ಸೇತುವೆಯ ಮೇಲೆ ನಿಂತಾಗ ಹೀಗೇ ಚಳಿ ಚಳಿ ಅನಿಸಿತ್ತು ಅಂದುಕೊಂಡ. ‘ನನ್ನ ಜೀವನದಲ್ಲೇ ನೀರು ಕಂಡರೆ ಆಗಲ್ಲ, ಲ್ಯಾಂಡ್ ಸ್ಕೇಪು ಚಿತ್ರದಲ್ಲೂ ನೀರು ಇರಬಾರದು,’ ಅಂದುಕೊಂಡ. ವಿಚಿತ್ರವಾದ ಯೋಚನೆ ಬಂದು ನಕ್ಕ. ‘ಅಲ್ಲ, ಇಂಥ ಹೊತ್ತಲ್ಲಿ ಕಲೆ, ಸೌಂದರ್ಯ, ಆರಾಮದ ಯೋಚನೆ ಬರಬೇಕಾ? ಮಲಗುವುದಕ್ಕೆ ಸರಿಯಾದ ಜಾಗ ಹುಡುಕುವ ಪ್ರಾಣಿ ಥರ ಆಗಿದೇನೆ… ಇಲ್ಲ, ನಾನು ಪೆಟ್ರೋವ್ಸ್ಕಿ ಪಾರ್ಕಿನ ಕಡೆಗೆ ತಿರುಗಬೇಕಾಗಿತ್ತು! ಕತ್ತಲಿರುತಿತ್ತು, ಚಳಿ ಆಗತಿತ್ತು! ಹ್ಹೆಹ್ಹೇ! ಆದರೂ ಆರಾಮ ಬೇಕಲ್ಲಾ… ದೀಪ ಯಾಕೆ ಆರಿಸಬಾರದು?’ ಮೇಣದ ಬತ್ತಿಯನ್ನು ಊದಿ ಆರಿಸಿದ. ‘ಪಕ್ಕದ ರೂಮಿನವರು ಮಲಗಿದರು’ ಅಂದುಕೊಂಡ. ಬಿರುಕಿನಲ್ಲಿ ಬೆಳಕು ಕಾಣುತಿರಲಿಲ್ಲ. ‘ಮಾರ್ಫಾ ಯಾಕೆ ಬರಬಾರದು ನೀನೀಗ? ಕತ್ತಲಿದೆ, ಜಾಗ ಕರೆಕ್ಟಾಗಿದೆ, ಟೈಮು ಕೂಡ ದೆವ್ವಕ್ಕೆ ತಕ್ಕದ್ದಾಗಿದೆ. ಬಂದರೆ ಈಗ ಬರಬೇಕು ನೀನು…’

ದುನ್ಯಾ ಬಗ್ಗೆ ಹುನ್ನಾರ ಮಾಡುತ್ತ ಅವಳನ್ನು ರಝುಮಿಖಿನ್‌ನ ರಕ್ಷಣೆಗೆ ಒಪ್ಪಿಸು ಎಂದು ರಾಸ್ಕೋಲ್ನಿಕೋವ್‌ಗೆ ಹೇಳಿದ್ದು ಯಾಕೋ ಈಗ ನೆನಪಿಗೆ ಬಂದಿತ್ತು. ‘ರಾಸ್ಕೋಲ್ನಿಕೋವ್ ಊಹೆ ಮಾಡಿದ್ದು ಸರಿ. ನನಗೇ ಹಿಂಸೆ ಕೊಟ್ಟುಕೊಳ್ಳುವುದಕ್ಕೆ ಹಾಗಂದೆ ಅನ್ನಿಸತ್ತೆ. ಎಂಥಾ ರಾಸ್ಕಲ್ಲು ಈ ರಾಸ್ಕೋಲ್ನಿಕೋವ್! ಎಂಥಾದ್ದನ್ನ ಮೈಮೇಲೆ ಎಳಕೊಂಡಿದಾನೆ. ಬರತಾ ಬರತಾ ದೊಡ್ಡ ಲಫಂಗ ಆಗತಾನೆ. ಈಗ ಬದುಕುವ ಆಸೆ ತುಂಬಾ ಹುಟ್ಟಿದೆ. ಇಂಥ ವಿಚಾರದಲ್ಲಿ ಮಾತ್ರ ಅವನಂಥವರು ಸ್ಕೌಂಡ್ರಲ್‌ಗಳು. ದೆವ್ವ ಹಿಡಿಯಲಿ ಅವನನ್ನ! ಬೇಕಾದ್ದು ಮಾಡಿಕೊಳ್ಳಲಿ. ನನಗೇನೂ ಆಗಬೇಕಾಗಿಲ್ಲ.’
ನಿದ್ದೆ ಬರಲಿಲ್ಲ. ಇವತ್ತು ಅವನು ಕಂಡ ದುನ್ಯಾಳ ಚಿತ್ರ ಇಷ್ಟಿಷ್ಟಾಗಿ ಅವನ ಮನಸಲ್ಲಿ ಮೂಡಿತು. ಇದ್ದಕಿದ್ದ ಹಾಗೆ ಮೈ ನಡುಗಿತು. ‘ಇನ್ನು ಆ ವಿಚಾರ ಕೈ ಬಿಡಬೇಕು,’ ಅಂದುಕೊಂಡ. ‘ಬೇರೆ ಏನಾದರೂ ಯೋಚನೆ ಮಾಡಬೇಕು. ಎಂಥಾ ವಿಚಿತ್ರ. ಯಾರ ಬಗ್ಗೇನೂ ನನಗೆ ಅಂಥಾ ದ್ವೇಷ ಇರಲಿಲ್ಲ, ಯಾರ ಮೇಲೂ ಸೇಡು ತೀರಿಸಿಕೊಳ್ಳಬೇಕು ಅನಿಸಿರಲಿಲ್ಲ—ಕೆಟ್ಟ ಶಕುನ! ವಾದಮಾಡಬೇಕು, ಜಗಳ ಆಡಬೇಕು ಅನ್ನಿಸಿರಲಿಲ್ಲ, ಕೋಪ ಮಾಡಿಕೊಂಡಿಲ್ಲ—ಕೆಟ್ಟ ಶಕುನ ಇದೂನೂ. ಅವಳಿಗೆ ಏನೇನೆಲ್ಲ ಕೊಡತೇನೆ ಅಂದೆ! ಥೂ, ದೆವ್ವಾ! ನನ್ನ ಮಣ್ಣು ಮಾಡಿಬಿಟ್ಟಿರೋಳು…; ಮತ್ತೆ ಸುಮ್ಮನಾದ. ಹಲ್ಲು ಕಡಿದ. ಮತ್ತೆ ದುನ್ಯಾಳ ಚಿತ್ರ—ಮೊದಲ ಬಾರಿ ಗುಂಡು ಹಾರಿಸಿದ ಮೇಲೆ ಇದ್ದಳಲ್ಲ, ಯಥಾವತ್ ಹಾಗೇ. ತೀರ ಹೆದರಿದ್ದಳು, ರಿವಾಲ್ವರು ಕೆಳಗಿಳಿಸಿದ್ದಳು, ತಬ್ಬಿಬ್ಬಾಗಿ ದೈನ್ಯದಿಂದ ನೋಡಿದ್ದಳು. ಅವಳ ಬಂದೂಕನ್ನು ಸುಲಭವಾಗಿ ಕಸಿದುಕೊಳ್ಳಬಹುದಾಗಿತ್ತು, ತನ್ನನ್ನೇ ರಕ್ಷಣೆ ಮಾಡಿಕೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ ಅವಳು. ಅವಳ ಬಗ್ಗೆ ಆ ಕ್ಷಣದಲ್ಲಿ ಅಯ್ಯೋ ಪಾಪ ಅನಿಸಿತ್ತು, ಹೃದಯ ಹಿಂಡಿದ ಹಾಗೆ ಅನಿಸಿತ್ತು ಅನ್ನುವ ನೆನಪು ಬಂದಿತ್ತು… ‘ಹ್ಞಾ, ದೆವ್ವಾ ಹಿಡಿಯಲಿ! ಮತ್ತೆ ಅದೇ ಯೋಚನೆ, ಬಿಟ್ಟಾಕಬೇಕು, ಬಿಟ್ಟಾಕಬೇಕು!…’

ನಿದ್ದೆ ಹತ್ತುತಿತ್ತು. ಜ್ವರದ ನಡುಕ ಕಡಿಮೆಯಾಗಿತ್ತು. ಇದ್ದಕಿದ್ದ ಹಾಗೆ ರಗ್ಗಿನೊಳಗೆ, ಅವನ ತೋಳಿನ ಮೇಲೆ, ಕಾಲಿನ ಮೇಲೆ ಏನೋ ಓಡಾಡಿದ ಹಾಗೆ ಅನಿಸಿತು. ತಟ್ಟನೆದ್ದ. ‘ಥೂ, ದೆವ್ವಾ! ಇಲೀ!’ ಅಂದುಕೊಂಡ. ‘ಟೇಬಲ್‍ ಮೇಲೆ ವಿಯಲ್‍ ಹಾಗೇ ಬಿಟ್ಟಿದ್ದೆನ್ನಲ್ಲಾ…’ ಅನ್ನಿಸಿತು. ಹೊದಿಕೆ ತೆಗೆಯುವ ಮನಸಿರಲಿಲ್ಲ, ಹಾಸಿಗೆ ಬಿಟ್ಟೇಳುವ ಮನಸಿರಲಿಲ್ಲ. ಚಳಿ. ಇದ್ದಕಿದ್ದ ಹಾಗೆ ಕಾಲ ಮೇಲೆ ಮತ್ತೇನೋ ಓಡಾಡಿತು. ರಗ್ಗು ಕಿತ್ತೆಸೆದು ಮೇಣದ ಬತ್ತಿ ಹಚ್ಚಿದ. ಜ್ವರದ ಚಳಿಯಲ್ಲಿ ಕಂಪಿಸುತ್ತ ಹಾಸಿಗೆಯನ್ನ ನೋಡಿದ. ಏನೂ ಇರಲಿಲ್ಲ. ರಗ್ಗು ಕೊಡವಿದ. ತಟ್ಟನೆ ಇಲಿಯೊಂದು ಮಂಚದ ಮೇಲಕ್ಕೆ ಹಾರಿತು. ಹಿಡಿಯಲು ಹೋದ. ಇಲಿ ಮಂಚ ಬಿಟ್ಟಿಳಿಯದೆ ಸೊಟ್ಟ ಪಟ್ಟ ಎಲ್ಲ ದಿಕ್ಕಿಗೂ ಓಡಿ ಅವನ ಕೈಯಿಂದ ನುಸುಳಿ ತಪ್ಪಿಸಿಕೊಂಡಿತು. ಹಾಸಿಗೆಯುದ್ದಕ್ಕೂ ಓಡಿ ದಿಂಬಿನ ಕೆಳಗೆ ಅವಿತುಕೊಂಡಿತು. ದಿಂಬು ತೆಗೆದು ಪಕ್ಕಕ್ಕೆಸೆದ. ಅವನೆದೆಯ ಮೇಲೆ ಏನೋ ಹಾರಿ ಮೈಮೇಲೆಲ್ಲ ಓಡಾಡಿದ ಹಾಗೆ, ಅಂಗಿಯೊಳಗೆ, ಬೆನ್ನಿನ ಮೇಲೆ ಕೆಳಕ್ಕಿಳಿದ ಹಾಗೆ ಅನಿಸಿತು. ಮೈ ನಡುಗಿ ಎಚ್ಚರವಾದ. ಕೋಣೆ ಕತ್ತಲಾಗಿತ್ತು. ಮೊದಲಿನ ಹಾಗೇ ರಗ್ಗು ಹೊದ್ದುಕೊಂಡು ಮಂಚದ ಮೇಲೇ ಮಲಗಿದ್ದ. ಹೊರಗೆ ಗಾಳಿ ಮೊರೆಯುತಿತ್ತು. ಥೂ ಅಸಹ್ಯ… ಅಂದುಕೊಂಡ.

ಎದ್ದ. ಮಂಚದ ತುದಿಯಲ್ಲಿ ಕಿಟಕಿಗೆ ಬೆನ್ನು ಮಾಡಿ ಕೂತ. ‘ನಿದ್ದೆ ಮಾಡದಿದ್ದರೆ ಒಳ್ಳಯದು,’ ಅಂದುಕೊಂಡ. ಕಿಟಕಿಯಿಂದ ಥಂಡಿ ಗಾಳಿ ಬರುತಿತ್ತು. ಕೂತಲ್ಲಿಂದಲೇ ರಗ್ಗು ಎಳೆದುಕೊಂಡು ಮೈಗೆ ಸುತ್ತಿಕೊಂಡ. ಯಾವ ಯೋಚನೆಯನ್ನೂ ಮಾಡುವ ಮನಸ್ಸಿರಲಿಲ್ಲ. ಆದರೂ ತುಂಡು ಯೋಚನೆಗಳು ಒಂದರ ಹಿಂದೊಂದು, ಕನಸಿನ ಚಿತ್ರಗಳ ಹಾಗೆ, ಮನಸಿಗೆ ಬರುತ್ತಲೇ ಇದ್ದವು. ಕೊನೆಯೂ ಇಲ್ಲ, ಮೊದಲೂ ಇಲ್ಲ, ಒಂದಕ್ಕೊಂದು ಸಂಬಂಧವೂ ಇಲ್ಲ. ಅರೆನಿದ್ರೆಯ ಹಾಗಿತ್ತು. ಚಳಿಯೋ, ಕತ್ತಲೋ, ಥಂಡಿಯೋ, ಹೊರಗೆ ಮೊರೆಯುತಿದ್ದ ಗಾಳಿಯೋ, ತುಯ್ದಾಡುತಿದ್ದ ಮರಗಳ ಸದ್ದೋ ಅವನಲ್ಲಿ ವಿಚಿತ್ರವಾದ ಭಾವವನ್ನ, ಆಸೆಯನ್ನ ಹುಟ್ಟಿಸಿದ ಹಾಗಿತ್ತು. ಮನಸು ಹೂವುಗಳನ್ನು ಧ್ಯಾನಿಸುತಿತ್ತು. ಚೆಲುವಾದ ಲ್ಯಾಂಡ್‌ಸ್ಕೇಪು, ಹಿತವಾದ ಬಿಸಿಲು, ಬೆಚ್ಚನೆಯ ದಿನ, ಯಾವುದೋ ಹಬ್ಬ. ವಿಟ್ಸಂಡೆ. ಶ್ರೀಮಂತ, ವೈಭೋಪೇತ ಹಳ್ಳಿ ಮನೆ. ಇಂಗ್ಲಿಶ್ ಶೈಲಿಯದು. ಇಡೀ ಮನೆಯ ಸುತ್ತ ಸುಂಗಂಧ ಬೀರುವ ಹೂಗಳ ಪಾತಿ. ಮನೆಯ ಮುಂದಿನ ಪೋರ್ಟಿಕೋದ ಕಂಬಕ್ಕೆ ಹಬ್ಬಿರುವ ಹೂ ಬಳ್ಳಿ, ಮನೆಯ ಮುಂದೆ ಅರಳಿದ ಗುಲಾಬಿ ಗಿಡಗಳು. ತಣ್ಣನೆ ಮೆಟ್ಟಿಲು. ಮನೆಯೊಳಗೆ ನೆಲಕ್ಕೆ ದಪ್ಪನೆಯ ಕಾರ್ಪೆಟ್ಟು. ಕಾರ್ಪೆಟ್ಟಿನ ಅಂಚಿನಲ್ಲಿ ಅಪರೂಪದ ಹೂಗಳಿರುವ ಚೀನೀ ಜಾಡಿಗಳ ಚಿತ್ರದ ಸಾಲು.

ಕಿಟಕಿಯ ಕಟ್ಟೆಗಳ ಮೇಲೆ ನೀರು ತುಂಬಿದ ಜಾರ್‍ ಗಳಲ್ಲಿ, ಉದ್ದನೆಯ ದಪ್ಪನೆಯ ಹಸಿರು ದೇಟುಗಳಿಗೆ ಜೋತು ಗಾಢವಾದ ಪರಿಮಳ ಬೀರುತಿದ್ದ ಬಿಳಿಯ ನಾರ್ಸಿಸಸ್ ಹೂ ಗೊಂಚಲಿತ್ತು. ಅಲ್ಲಿಂದ ಕದಲುವ ಮನಸೇ ಇರಲಿಲ್ಲ. ಆದರೂ ಮೆಟ್ಟಿಲು ಹತ್ತಿ ಎತ್ತರದ ಚಾವಣಿ ಇದ್ದ ದೊಡ್ಡ ರೂಮಿಗೆ ಹೋದ ಮತ್ತೆ ಇಲ್ಲೂ, ಕಿಟಕಿಗಳಲ್ಲಿ, ಬಾಗಿಲ ಬಳಿಯಲ್ಲಿ, ಬಿಸಿಲು ಮಚ್ಚಿಗೆ ತೆರೆದುಕೊಂಡಿದ್ದ ಬಾಗಿಲಲ್ಲೂ, ಬಿಸಿಲು ಮಚ್ಚಿನಲ್ಲೂ ಎಲ್ಲೆಲ್ಲೂ ಹೂಗಳು. ಇದೀಗ ಹೂ ಬಿಡಿಸಿ ತಂದು, ಇದೀಗ ಕತ್ತರಿಸಿದ, ಹಸಿಮಣ್ಣಿನ ಹಸಿರು ಪರಿಮಳ ಬೀರುತ್ತಿರುವ ಹುಲ್ಲಿನ ಎಸಳು ಹೊಸೆದು ಮಾಡಿದ ದಾರಕ್ಕೆ ಕಟ್ಟಿದ ಹೂಗಳು. ಕಿಟಕಿ ತೆರೆದಿದ್ದವು. ತಾಜಾ ಗಾಳಿ, ಹಿತವಾದ ಬಿಸಿಲೂ ಬೆಳಕೂ ರೂಮನ್ನು ತುಂಬಿದ್ದವು. ಕಿಟಕಿಯಾಚೆ ಹಕ್ಕಿಗಳ ಚಿಲಿಪಿಲಿ. ರೂಮಿನ ನಡೂ ಮಧ್ಯದಲ್ಲಿ ಬಿಳಿಯ ಸ್ಯಾಟಿನ್ ಬಟ್ಟೆ ಹೊದಿಸಿದ ಮೇಜಿನ ಮೇಲೆ ಶವಪೆಟ್ಟಿಗೆ. ಅದಕ್ಕೆ ದಪ್ಪ ರೇಶಿಮೆಯ ಹೊದಿಕೆ. ಹೊದಿಕೆಯ ಅಂಚಿಗೆ ಬಿಳಿಯ ನಿರಿಗೆ ಸಾಲು. ಶವಪೆಟ್ಟಿಗೆಯ ಸುತ್ತಲೂ ಹೂ ಗುಚ್ಛಗಳು. ಹೂಗಳ ನಡುವೆ ಬಿಳಿಯ ಕಸೂತಿಯ ಉಡುಪು ತೊಟ್ಟ ಹುಡುಗಿ ಎದೆಯ ಮೇಲೆ ಕೈ ಜೋಡಿಸಿಕೊಂಡು ಅಮೃತಶಿಲೆಯ ಪ್ರತಿಮೆಯ ಹಾಗೆ ಮಲಗಿದ್ದಳು. ಸಡಿಲವಾದ ತಲೆಗೂದಲು ವದ್ದೆಯಾಗಿತ್ತು. ಗುಲಾಬಿಯ ಮಾಲೆ ಇರಿಸಿದ್ದರು. ಆಗಲೇ ಸೆಟೆದಿದ್ದ ಮುಖ ಅಮೃತಶಿಲೆಯಲ್ಲಿ ಕೆತ್ತಿದ ಮುಖದ ಹಾಗಿತ್ತು. ಮುಖದ ಮೇಲಿದ್ದ ನಗು ಮಾತ್ರ ಮುಗ್ಧ ಮಗುವಿನ ನಗುವಿನ ಹಾಗೆ, ಅಪಾರವಾದ ದುಃಖ ಹೊತ್ತು ದೂರು ಹೇಳುತಿರುವ ಹಾಗೆ ಇತ್ತು. ಆ ಹುಡುಗಿ ಸ್ವಿದ್ರಿಗೈಲೋವ್‌ಗೆ ಗೊತ್ತಿದ್ದವಳು. ಶವಪೆಟ್ಟಿಗೆಯ ಬಳಿ ಉರಿಯುತಿರುವ ಮೇಣದ ಬತ್ತಿಗಳಿಲ್ಲ, ದೇವರ ವಿಗ್ರಹಗಳಿಲ್ಲ, ಪ್ರಾರ್ಥನೆಯ ಸದ್ದಿಲ್ಲ. ನೀರಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿದ್ದವಳು. ಹದಿನಾಲ್ಕೇ ವರ್ಷ. ಹೃದಯ ಛಿದ್ರವಾಗಿ ತನ್ನನ್ನೇ ನಾಶಮಾಡಿಕೊಂಡಿತ್ತು, ಬರ್ಬರವಾಗಿ ಗಾಯಗೊಂಡು ತನ್ನ ಮೇಲೆ ನಡೆದ ಅತ್ಯಾಚಾರಕ್ಕೆ ಅವಳ ಎಳೆಯ ಪ್ರಜ್ಞೆ ಘಾಸಿಯಾಗಿ, ದೇವತೆಯ ಆತ್ಮದಷ್ಟು ಪರಿಶುದ್ಧವಾಗಿದ್ದ ಅವಳ ಆತ್ಮ ನರಳಿ, ಪಡಬಾರದ ನಾಚಿಕೆ ಪಟ್ಟು, ಹತಾಶಳಾಗಿ ಚೀರಿ, ಚೀರಿದ್ದು ಯಾರಿಗೂ ಕೇಳದೆ, ಕಗ್ಗತ್ತಲ ರಾತ್ರಿಯನ್ನು ಮಲಿನ ಮಾಡಿ ಚಿಲುಮೆಯ ನೀರಿನಲ್ಲಿ, ಮೊರೆಯುವ ಗಾಳಿಯಲ್ಲಿ ಕಳೆದು ಹೋಗಿತ್ತು.

ಸ್ವಿದ್ರಿಗೈಲೋವ್ ಎಚ್ಚರಗೊಂಡ. ಮಂಚದಿಂದೆದ್ದು ಕಿಟಕಿಯ ಹತ್ತಿರಕ್ಕೆ ಹೋದ. ತಡಕಿ, ಚಿಲಕ ಹುಡುಕಿ ಕಿಟಕಿ ತೆಗೆದ. ಪುಟ್ಟ ಕೋಣೆಯೊಳಕ್ಕೆ ಮೊರೆಯುತ್ತ ನುಗ್ಗಿತು ಗಾಳಿ. ಅವನ ಮುಖಕ್ಕೆ, ಬರಿಯ ಅಂಗಿ ತೊಟ್ಟಿದ್ದ ಮೈಗೆ ಮಂಜಿನ ಹೊದಿಕೆಯ ಹಾಗೆ ಮೆತ್ತಿಕೊಂಡಿತು. ಕಿಟಕಿಯ ಕೆಳಗೊಂದು ತೋಟ, ಮನರಂಜನೆಯ ತೋಟ ಇದ್ದೇ ಇರಬೇಕು. ಹಗಲಿನಲ್ಲಿ ಅಲ್ಲಿ ಹಾಡುಗಾರರು ಹಾಡುತಿದ್ದಿರಬೇಕು, ಕುಳಿತಿದ್ದ ಟೇಬಲ್ಲಿಗೇ ಟೀ ಸರಬರಾಜಾಗುತಿದ್ದಿರಬೇಕು. ಈಗ ಮಾತ್ರ ಮರ, ಪೊದೆಗಳಿಂದ ನೀರ ಹನಿಗಳು ಹಾರಿ ಕಿಟಕಿಯಿಂದ ಬಂದು ಬೀಳುತಿದ್ದವು. ಕೋಣೆ ನೆಲಮಾಳಿಗೆಯಷ್ಟು ಕಗ್ಗತ್ತಲಾಗಿತ್ತು. ಹಾಗಾಗಿ ಕತ್ತಲು ಯಾವುದು, ವಸ್ತುಗಳ ಆಕಾರ ಯಾವುದು ತಿಳಿಯುತಿರಲಿಲ್ಲ ಅವನಿಗೆ. ಕಟಿಕಿಯ ಅಂಚಿನ ಕಟ್ಟೆಯ ಮೇಲೆ ಮೊಳಕೈಯೂರಿ ಕಳಗ್ಗೆ ಬಗ್ಗಿ ಕತ್ತಲನ್ನು ದಿಟ್ಟಿಸುತ್ತಾ ಐದು ನಿಮಿಷ ಹಾಗೇ ಅಲ್ಲಾಡದೆ ನಿಂತಿದ್ದ ಸ್ವಿದ್ರಿಗೈಲೋವ್. ಕಗ್ಗತ್ತಲಿನಲ್ಲಿ ತೋಪು ಹಾರಿದ ಸದ್ದು ಕೇಳಿತು, ಇನ್ನೂ ಒಂದು ಸಾರಿ ಕೇಳಿತು.

‘ಆಹಾ, ಸಿಗ್ನಲ್ಲು! ಹೊಳೆಯ ನೀರು ಏರುತಾ ಇದೆ. ಬೆಳಗಿನ ಹೊತ್ತಿಗೆ ತಗ್ಗು ಪ್ರದೇಶಗಳೆಲ್ಲ ನೀರಲ್ಲಿ ಮುಳುಗಿರುತವೆ. ರಸ್ತೆಯೆಲ್ಲ ನೀರಾಗಿ, ನೆಲಮಾಳಿಗೆಗೆ ನುಗ್ಗಿ, ನೆಲಮಾಳಿಗೆಯ ಇಲಿಗಳೆಲ್ಲ ಸತ್ತು ಮಳೆ ನೀರಲ್ಲಿ ತೇಲುತವೆ. ಜನ ನೆನೆದು ವದ್ದೆಯಾಗಿ, ಶಾಪಹಾಕುತ್ತ ಮನೆಯ ವಸ್ತುಗಳನ್ನು ಚಾವಣಿಗೋ ಮೇಲಿನ ಮಹಡಿಗೋ ಸಾಗಿಸುತಾರೆ… ಎಷ್ಟು ಗಂಟೆಯಾಗಿದೆಯೋ ಈಗ?’ ಅಂದುಕೊಂಡ. ಅವನಿಗೆ ಹೊತ್ತಿನ ಯೋಚನೆ ಬಂದ ತಕ್ಷಣವೇ ಎಲ್ಲೋ ಹತ್ತಿರದಲ್ಲೇ ಗಂಟೆಯ ಟಿಕ್ ಟಿಕ್ ಸದ್ದು ಕೇಳಿಸಿತು, ಯಾವುದೋ ಗೋಡೆ-ಗಡಿಯಾರ ಆತುರಾತುರವಾಗಿ ಮೂರು ಗಂಟೆ ಹೊಡೆಯಿತು. ‘ಇನ್ನೊಂದು ಗಂಟೆಯಲ್ಲಿ ಬೆಳಕು ಹರಿಯತ್ತೆ! ಕಾದು ಏನುಪಯೋಗ? ಈಗಲೇ ಸೀದ ಪೆಟ್ರೋವ್ಸ್ಕಿಗೆ ಹೋಗತೇನೆ, ಅಲ್ಲೆಲ್ಲಾದರೂ ಮಳೆಯಲ್ಲಿ ನೆನೆದು ವದ್ದೆಯಾದ ದೊಡ್ಡ ಪೊದೆ ಇರತ್ತೆ, ಅದಕ್ಕೆ ತೋಳು ತಾಕಿದರೆ ಸಾಕು, ಲಕ್ಷಾಂತರ ಹನಿಗಳು ತಲೆಯ ಮೇಲೆ ಉದುರುತವೆ…’ ಕಿಟಕಿಯಿಂದ ಹಿಂದೆ ಸರಿದ, ಕಿಟಕಿಯ ಬಾಗಿಲು ಹಾಕಿದ. ಮೇಣದ ಬತ್ತಿ ಹಚ್ಚಿದ. ವೇಸ್ಟ್ ಕೋಟು, ಓವರ್‍ ಕೋಟು ತೊಟ್ಟ. ಹ್ಯಾಟು ಇಟ್ಟುಕೊಂಡ. ದೀಪ ಹಿಡಿದು, ಕೊಳಕು ಬಟ್ಟೆಯ ಕೆಲಸದ ಹುಡುಗನನ್ನು ಹುಡುಕುತ್ತ ಕಾರಿಡಾರಿನಲ್ಲಿ ನಡೆದ. ಅವನು ಎಲ್ಲೋ ಕಿರು ಕೋಣೆಯಲ್ಲಿ, ಕೆಲಸಕ್ಕೆ ಬಾರದ ವಸ್ತುಗಳ ನಡುವೆ, ಮುರುಕು ಮೇಣದ ಬತ್ತಿಗಳ ನಡುವೆ, ಮಲಗಿರಬಹುದು. ಹುಡುಕಿ, ರೂಮಿನ ಬಾಡಿಗೆ ಕೊಟ್ಟು ಹೊರಡಬೇಕು. ‘ಇದೇ ಸರಿಯಾದ ಹೊತ್ತು, ಇದಕ್ಕಿಂತ ಒಳ್ಳೆಯ ಗಳಿಗೆ ಸಿಗಲ್ಲ’ ಅಂದುಕೊಂಡ.

ಕೊನೆಯೇ ಇಲ್ಲದ ಕಿರು ಓಣಿಯಂಥ ಕಾರಿಡಾರಿನಲ್ಲಿ ಬಹಳ ಹೊತ್ತು ಅತ್ತ ಇತ್ತ ಓಡಾಡಿದ. ಯಾರ ಸುಳಿವೂ ಇರಲಿಲ್ಲ. ಯಾರನ್ನಾದರೂ ಕೂಗಿ ಕರೆಯಬೇಕು ಅನ್ನುವಷ್ಟರಲ್ಲಿ, ಹಳೆಯ ವಾರ್ಡ್‍ರೋಬು ಮತ್ತು ಬಾಗಿಲ ಮಧ್ಯೆ ಇದ್ದ ಕತ್ತಲೆಯ ಮೂಲೆಯಲ್ಲಿ, ಜೀವಂತವಾಗಿದೆ ಅನ್ನಿಸುವಂಥ ಯಾವುದೋ ವಸ್ತು ಬಿದ್ದಿತ್ತು. ದೀಪ ಹಿಡಿದೇ ಬಗ್ಗಿ ನೋಡಿದ. ಪುಟ್ಟ ಮಗು, ಸುಮಾರು ಐದು ವರ್ಷದ ಹೆಣ್ಣು ಮಗು. ಹರಕಲು ಬಟ್ಟೆ ತೊಟ್ಟಿತ್ತು. ನೆಲ ಒರೆಸುವ ವದ್ದೆ ಬಟ್ಟೆಯ ಹಾಗೆ ಮುದುರಿ ಬಿದ್ದಿತ್ತು. ನಡುಗುತ್ತ ಅಳುತಿದ್ದಳು. ಸ್ವಿದ್ರಿಗೈಲೋವ್‌ನನ್ನು ಕಂಡು ಭಯವಾಗಲಿಲ್ಲ ಅವಳಿಗೆ. ಮಂಕಾಗಿ ಆಶ್ಚರ್ಯ ಪಡುತ್ತ ದೊಡ್ಡ ಕಪ್ಪು ಕಣ್ಣು ಅರಳಿಸಿ, ಬಹಳ ಹೊತ್ತಿನಿಂದ ಅಳುತಿದ್ದ ಮಕ್ಕಳು ಈಗ ಸಮಾಧಾನವಾಗಿದ್ದರೂ ಆಗೀಗ ತಟಕ್ಕನೆ ಬಿಕ್ಕುತ್ತಾರಲ್ಲ ಹಾಗೆ ಆಗಾಗ ಬಿಕ್ಕುತ್ತ ಅವನನ್ನು ನೋಡಿದಳು. ಹುಡುಗಿಯ ಮುಖದಲ್ಲಿ ಅಪಾರ ದಣಿವಿತ್ತು. ಚಳಿಗೆ ಮೈ ಸೆಡೆತ ಹಾಗಿತ್ತು. ‘ಇಲ್ಲಿಗೆ ಹೇಗೆ ಬಂದಳು? ಇಲ್ಲಿ ಬಚ್ಚಿಟ್ಟುಕೊಂಡಿರಬೇಕು, ರಾತ್ರಿಯೆಲ್ಲ ನಿದ್ರೆ ಮಾಡಿಲ್ಲ ಅಂತ ಕಾಣತ್ತೆ,’ ಅನ್ನಿಸಿತು. ಅವಳನ್ನು ಮಾತಾಡಿಸಿದ. ಹುಡುಗಿ ತಟ್ಟನೆ ಜೀವ ಪಡೆದು ಬಾಲ ಭಾಷೆಯಲ್ಲಿ ಏನೇನೋ ಬಡಬಡಿಸಿದಳು. ‘ಅಮ್ಮ’; ಹೊಡೀತಾಳೆ,’ ‘ಕಪ್ ಮುವಿದು ಹಾಕಿದೆ’ ಅನ್ನುವಂಥ ತುಣುಕು ಅವನ ಕಿವಿಗೆ ಬಿದ್ದವು. ನಿಲ್ಲಿಸದೆ ಒಂದೇ ಸಮ ಮಾತಾಡುತ್ತಲೇ ಇದ್ದಳು. ಅವಳು ಆಡಿದ ಸೊಟ್ಟಪಟ್ಟ ಮಾತುಗಳಿಂದ ಆಕೆ ಪ್ರೀತಿ ಕಾಣದ ಮಗು, ಅವರಮ್ಮ ಸದಾ ಬೆದರಿಸುತ್ತ, ಹೊಡೆಯುತ್ತ ಇದ್ದಳು, ಅವಳಪ್ಪ ಅಡುಗೆಯವನು, ಯಾವಾಗಲೂ ಕುಡಿದಿರುತಿದ್ದ, ಇದೇ ಹೋಟೆಲಿನವನಿರಬಹುದು, ಹುಡುಗಿಯು ಅವರಮ್ಮ ಬಳಸುತಿದ್ದ ಕಪ್ ಒಡೆದು ಹಾಕಿದ್ದಳು, ಭಯವಾಗಿ ಸಂಜೆಯೇ ಓಡಿ ಹೋಗಿ ಅಂಗಳದಲ್ಲೆಲ್ಲೋ ಬಚ್ಚಿಟ್ಟುಕೊಂಡಿದ್ದಳು ಬಹಳ ಹೊತ್ತು. ಮಳೆಯಲ್ಲಿ ನೆನೆದು, ಕೊನೆಗೆ ಇಲ್ಲಿಗೆ ಬಂದು ವಾರ್ಡ್‍ರೋಬಿನ ಹಿಂದೆ ಅವಿತಿದ್ದಳು. ಆ ಮೂಲೆಯಲ್ಲೇ ಅಳುತ್ತ, ಥಂಡಿ ಗಾಳಿಗೆ ನಡುಗುತ್ತ ಇಡೀ ರಾತ್ರಿ ಕತ್ತಲಲ್ಲೇ ಕಳೆದಿದ್ದಳು, ಸಿಕ್ಕಿಬಿದ್ದರೆ ಮತ್ತೆ ಏಟು ತಿನ್ನಬೇಕಲ್ಲಾ ಎಂದು ಹೆದರಿದ್ದಳು ಅನ್ನುವುದಷ್ಟು ತಿಳಿಯಿತು. ಅವಳನ್ನೆತ್ತಿಕೊಂಡು ರೂಮಿಗೆ ಹೋದ. ಅವಳನ್ನು ಹಾಸಿಗೆಯ ಮೇಲೆ ಮಲಗಿಸಿ ಬಟ್ಟೆ ಬಿಚ್ಚಿದ. ಅವಳ ಬರಿಗಾಲಿನ ಶೂಗಳು ಇಡೀ ರಾತ್ರಿ ನೀರಿನ ತೊಟ್ಟಿಯಲ್ಲಿದ್ದ ಹಾಗೆ ನೆನೆದು ಹೋಗಿದ್ದವು. ಅವಳ ತಲೆ ಕೂಡ ಮುಚ್ಚುವ ಹಾಗೆ ರಗ್ಗು ಹೊದಿಸಿದ. ಮಗು ತಕ್ಷಣವೇ ನಿದ್ದೆ ಹೋಯಿತು. ಇಷ್ಟೆಲ್ಲ ಮಾಡಿದ ಮೇಲೆ ಮಂಕಾಗಿ ಯೋಚನೆ ಮಾಡಿದ.

‘ಯಾಕೆ ಸಿಕ್ಕಿಕೊಂಡೆ!’ ಭಾರವಾದ ಮನಸಿನಿಂದ ಕೇಳಿಕೊಂಡ. ‘ಎಂಥ ನಾನ್ಸೆನ್ಸ್!’ ಸಿಟ್ಟಿನಿಂದ ಮೇಣದ ಬತ್ತಿ ಎತ್ತಿಕೊಂಡು ಬಾಗಿಲಿಗೆ ನಡೆದ, ಏನಾದರೂ ಆಗಲಿ, ಕೊಳಕು ಬಟ್ಟೆಯ ಕೆಲಸದ ಹುಡುಗನನ್ನು ಹುಡುಕಲೇಬೇಕು, ಬೇಗ ಇಲ್ಲಿಂದ ಹೋಗಬೇಕು. ಬಾಗಿಲು ತೆರೆಯುತ್ತಿರುವಾಗ, ‘ಥೂ, ಈ ಹುಡುಗಿ!’ ಅನ್ನುವ ಯೋಚನೆ ಬಂತು. ವಾಪಸ್ಸು ಬಂದು ಮಲಗಿದ್ದಾಳೋ ಅಂತ ನೋಡಿದ. ಹುಷಾರಾಗಿ ರಗ್ಗು ಎತ್ತಿ ನೋಡಿದ. ಹುಡುಗಿ ಗಾಢವಾದ ನಿದ್ರೆಯಲ್ಲಿ ಸಂತೋಷವಾಗಿ ಮಲಗಿದ್ದಳು. ರಗ್ಗಿನೊಳಗೆ ಮೈ ಬೆಚ್ಚಗಾಗಿ ಚಿಳಿಚಿದ್ದ ಮುಖಕ್ಕೆ ಬಣ್ಣ ಬಂದಿತ್ತು. ಮಗುವಿನ ಕೆನ್ನೆ ಎಷ್ಟು ಕೆಂಪಗಿರಬಹುದೋ ಅದಕ್ಕಿಂತ ಕೆಂಪಗಿತ್ತು. .’ಜ್ವರ ಬಂದು ಮುಖ ಕೆಂಪಾಗಿರಬೇಕು,’ ಅಂದುಕೊಂಡ ಸ್ವಿದ್ರಿಗೈಲೋವ್. ವೈನು ಕುಡಿದು ಮುಖ ಕೆಂಪಾದ ಹಾಗೆ, ಯಾರೋ ಅವಳಿಗೆ ಒಂದು ಇಡೀ ಗ್ಲಾಸು ವೈನು ಕುಡಿಸಿದ್ದ ಹಾಗೆ. ಅವಳ ಕೆಂಪು ತುಟಿ ಬಿಸಿಯಾಗಿದ್ದವು—ಏನಿದೆಲ್ಲ? ಹುಡುಗಿಯ ಉದ್ದನೆಯ ರೆಪ್ಪೆ ಪಟಪಟಿಸುತಿವೆ, ಕಣ್ಣು ಮಿಟುಕಿಸುತಿದ್ದಾಳೆ, ನಾಚಿದ ನೋಟ, ಮಗುವಿನ ಹಾಗಲ್ಲ, ದೊಡ್ಡವರ ಹಾಗೆ ಕಣ್ಣು ಹೊಡೆಯುತ್ತಿದೆಯೋ, ಅವನನ್ನೇ ನೋಡುತ್ತಿದೆಯೋ? ಅವಳು ಮಲಗಿಲ್ಲ, ನಿದ್ದೆಯ ನಟನೆ ಮಾಡುತ್ತಿದ್ದಾಳೆ ಅನಿಸಿತು. ಹೌದು. ಅವಳ ತುಟಿ ಹಿಗ್ಗಿ ನಗುವಾಗುತಿವೆ, ಬಾಯಿಯ ಅಂಚು ಮೆಲ್ಲಗೆ ಕಂಪಿಸುತಿವೆ, ಭಾವನೆ ತಡೆದುಕೊಂಡಿರುವ ಹಾಗೆ. ಈಗ ಮಿತಿ ಮೀರಿದ್ದಾಳೆ. ನಗುತಿದ್ದಾಳೆ. ಉದ್ಧಟತನದ, ತಿರಸ್ಕಾರದ, ಮಗುವಿನ ನಗುವಿನ ಹಾಗೆ ಒಂದಿಷ್ಟೂ ಅನಿಸದ ನಗು, ಮಾರಾಟಕ್ಕಿರುವ ಹೆಣ್ಣಿನ ನಗುವಿನಂಥ ನಗು, ಫ್ರೆಂಚ್ ವೇಶ್ಯೆಯ ಮುಖದಲ್ಲಿ ಕಾಣುವಂಥ ನಗು. ಈಗ ಮುಚ್ಚುಮರೆಯಿಲ್ಲ. ಎರಡೂ ಕಣ್ಣು ದೊಡ್ಡದಾಗಿ ತೆರೆದು ನಾಚಿಕೆ ಇಲ್ಲದೆ ಅವನನ್ನು ನೋಡುತ್ತ ಕರೆಯುತ್ತಿದ್ದಾಳೆ. ನಗುತಿದ್ದಾಳೆ. ವಿಕೃತ ನಗು, ಅವಮಾನ ಮಾಡುವಂಥ ನಗು. ಈ ಮಗು ಮುಖದಲ್ಲಿ. ‘ಐದು ವರ್ಷದ ಮಗುವಿನಲ್ಲಿ, ಹೀಗೆ!’ ಸ್ವಿದ್ರಿಗೈಲೋವ್ ಭಯದಲ್ಲಿ ಪಿಸುಗುಟ್ಟಿದ.
‘ಇದೇನಿದು?’ ಇಷ್ಟು ಹೊತ್ತಿಗೆ ತನ್ನ ಇರಿಯುವ ಮುಖವನ್ನು ಅವನತ್ತ ಪೂರಾ ತಿರುಗಿಸಿದ್ದಳು. ಕೈ ಎತ್ತಿದಳು…‘ಅಯ್ಯೋ, ದೂರ’ ಸ್ವಿದ್ರಿಗೈಲೋವ್ ಭೀತಿಯಲ್ಲಿ ಚೀರಿದ. ಅವಳನ್ನು ಹೊಡೆಯಲು ಕೈ ಎತ್ತಿದ…ಆ ಕ್ಷಣವೇ ಎಚ್ಚರಗೊಂಡ.
ಅವನಿನ್ನೂ ಹಾಸಿಗೆಯಲ್ಲಿದ್ದ. ರಗ್ಗು ಹೊದ್ದಿದ್ದ. ಮೊದಲಿದ್ದ ಹಾಗೇ. ಮೇಣದ ಬತ್ತಿ ಹಚ್ಚಿರಲಿಲ್ಲ. ಮುಂಜಾವಿನ ನಸುಕು ಬೆಳಕು ಕಿಟಕಿಯಲ್ಲಿ ಕಾಣುತಿತ್ತು.

‘ಇಡೀ ರಾತ್ರಿ ಬರೀ ಕೆಟ್ಟ ಕನಸು!’ ಸಿಟ್ಟು ಮಾಡಿಕೊಂಡು ಎದ್ದ. ಮೈಯ ಮೂಳೆ ಮೂಳೆಯೂ ನೋಯುತಿದ್ದವು. ಹೊರಗೆ ಕಾವಳ ದಟ್ಟವಾಗಿ ಕವಿದಿತ್ತು. ಸ್ಪಷ್ಟವಾಗಿ ಏನೂ ಕಾಣುತ್ತಿರಲಿಲ್ಲ. ಐದು ಗಂಟೆಯಾಗುತ್ತಿತ್ತು. ಅವನು ಹೊತ್ತು ಮೀರಿ ಮಲಗಿಬಿಟ್ಟಿದ್ದ! ಎದ್ದ, ಇನ್ನೂ ವದ್ದೆಯಾಗಿದ್ದ ಜಾಕೆಟ್ಟು, ಓವರ್‍ ಕೋಟು ತೊಟ್ಟ. ಕೋಟಿನ ಜೇಬಿನಲ್ಲಿದ್ದ ರಿವಾಲ್ವರು ಮುಟ್ಟಿ ನೋಡಿ, ಹೊರಕ್ಕೆ ತೆಗೆದು ಕ್ಯಾಪು ಸರಿಮಾಡಿದ. ಕೂತು, ಜೇಬಿನಿಂದ ನೋಟ್‍ ಬುಕ್ಕು ತೆಗೆದ. ಅದರ ಮೊದಲ ಪುಟ್ಟದಲ್ಲೇ ಎದ್ದು ಕಾಣುವ ಹಾಗೆ ದೊಡ್ಡ ಅಕ್ಷರದಲ್ಲಿ ಕೆಲವು ಸಾಲು ಬರೆದ. ಅದನ್ನು ಓದಿ ಟೇಬಲ್ಲಿನ ಮೇಲೆ ಮುಂಗೈಯೂರಿ ಯೋಚನೆಯಲ್ಲಿ ಮುಳುಗಿದ. ರಿವಾಲ್ವರು, ನೋಟು ಬುಕ್ಕು ಅವನ ಮೊಳಕೈಯ ಪಕ್ಕದಲ್ಲೇ ಇದ್ದವು. ನಿದ್ದೆಯಿಂದೆದ್ದ ನೊಣಗಳು ಮೇಜಿನ ಮೇಲೆ ಹಿಂದಿನ ರಾತ್ರಿ ಅವನು ತಿನ್ನದೆ ಉಳಿಸಿದ್ದ ವಿಯಲ್‌ಗೆ ಮುಕುರಿದ್ದವು. ಬಹಳ ಹೊತ್ತು ನೊಣಗಳ ರಾಶಿಯನ್ನೇ ನೋಡುತಿದ್ದ. ಕೊನೆಗೆ ಕೈ ಚಾಚಿ ನೊಣ ಹಿಡಿಯಲು ಪ್ರಯತ್ನಪಟ್ಟ. ಬಹಳ ಹೊತ್ತು ಪ್ರಯ್ನಮಾಡಿ ದಣಿದರೂ ನೊಣ ಸಿಗಲಿಲ್ಲ. ಹೀಗೆ ಮೈ ಮರೆತಿದ್ದವನು ತಟ್ಟನೆ ಎಚ್ಚರಗೊಂಡು ಮೆಟ್ಟಿಬಿದ್ದ. ದೃಢ ನಿಶ್ಚಯ ಮಾಡಿ ರೂಮಿನಿಂದ ಹೊರಬಿದ್ದ. ಮರುಕ್ಷಣದಲ್ಲೇ ಬೀದಿಯಲ್ಲಿದ್ದ.

ಇಡೀ ನಗರ ಹಾಲಿನಂಥ ಮಂಜಿನೊಳಗೆ ಅದ್ದಿಕೊಂಡಿತ್ತು. ಮರದ ಹಲಗೆ ಜೋಡಿಸಿದ, ಜಾರುತಿದ್ದ, ಕೊಳಕು ಕಾಲು ಹಾದಿಯ ಮೇಲೆ ಲಿಟಲ್ ನೇವಾದ ದಿಕ್ಕಿಗೆ ನಡೆದ ಸ್ವಿದ್ರಿಗೈಲೋವ್. ಕಲ್ಪನೆಯಲ್ಲಿ ಕಾಣುತಿದ್ದ—ನಿನ್ನೆ ರಾತ್ರಿ ಏರಿದ್ದ ಲಿಟಲ್ ನೇವಾ ಹೊಳೆ, ಪೆಟ್ರೋವ್ಸ್ಕಿ ದ್ವೀಪ, ವದ್ದೆ ದಾರಿಗಳು, ವದ್ದೆ ಹಲ್ಲು, ವದ್ದೆ ಮರ, ಪೊದೆಗಳು, ಕೊನೆಗೆ ಆ ಅದೇ ಪೊದೆ… ಬೆದರಿದ. ಬೇರೆ ಏನಾದರೂ ಯೋಚನೆ ಮಾಡಬೇಕೆಂದು ಸುತ್ತಲೂ ಇದ್ದ ಮನೆಗಳನ್ನು ನೋಡಿದ. ದಾರಿಯಲ್ಲಿ ಯಾರೂ ಕಾಣಲಿಲ್ಲ, ಬಾಡಿಗೆ ಸಾರೋಟಿನವರೂ ಇರಲಿಲ್ಲ. ಹಳದಿಮರದ ಮನೆಗಳು ಬಾಗಿಲು, ಕಿಟಕಿ ಎಲ್ಲ ಮುಚ್ಚಿಕೊಂಡು ಮಂಕಾಗಿ, ಕೊಳಕಾಗಿ ಕಾಣುತಿದ್ದವು. ಚಳಿಗೆ, ಥಂಡಿಗೆ ಅವನ ಮೈ ಕೊರೆಯುತಿತ್ತು. ನಡುಕ ಹತ್ತಿತು. ಆಗೀಗ ಅಂಗಡಿಯ, ದಿನಸಿ ವ್ಯಾಪಾರಿಗಳ ಬೋರ್ಡು ಕಾಣುತಿದ್ದವು. ಒಂದೊಂದು ಬೋರ್ಡನ್ನೂ ಹುಷಾರಾಗಿ ಓದಿದ. ಬೋರ್ಡುಗಳು ಮುಗಿದವು. ದೊಡ್ಡ ಕಲ್ಲಿನ ಕಟ್ಟಡದ ಎದುರಿಗೆ ನಿಂತಿದ್ದ. ನಡುಗುತಿದ್ದ ಕೊಳಕು ಕಂತ್ರಿ ನಾಯಿ ಬಾಲವನ್ನು ಕಾಲುಗಳ ಮಧ್ಯೆ ಬಚ್ಚಿಟ್ಟುಕೊಂಡು ಅವನ ಎದುರಿಗೇ ರಸ್ತೆ ದಾಟಿ ಓಡಿ ಹೋಯಿತು. ಯಾರೋ ಕುಡಿದು ಎಚ್ಚರ ತಪ್ಪಿ ಮುಖ ಅಡಿಯಾಗಿ ಫುಟ್‌ಪಾತಿನ ಮೇಳೆ ಮಲಗಿದ್ದ. ಅವನನ್ನು ನೋಡಿ ಮುಂದೆ ಸಾಗಿದ ಸ್ವಿದ್ರಿಗೈಲೋವ್. ಅವನ ಎಡಗಡೆಗಿದ್ದ ಗಡಿಯಾರ ಗೋಪುರ ಕಣ್ಣು ಸೆಳೆಯಿತು. ‘ಹ್ಹಾ! ಇಲ್ಲೇ ಇದೆ ಜಾಗ, ಪೆಟ್ರೊವ್ಸ್ಕಿಗೆ ಯಾಕೆ ಹೋಗಬೇಕು? ಇಲ್ಲಾದರೆ ಅಧಿಕೃತ ಸಾಕ್ಷಿ ಇರುತ್ತಾರೆ…’ ಈ ಹೊಸ ಯೋಚನೆಯಿಂದ ನಗು ಬಂತು. ಈಗ ಸ್ಯೆಝಿನ್ಸ್ಕಾಯ ರಸ್ತೆಗೆ ತಿರುಗಿದ. ಗಡಿಯಾರ ಗೋಪುರವಿದ್ದ ದೊಡ್ಡ ಕಟ್ಟಡ ಬೀದಿಯಲ್ಲೇ ಇತ್ತು. ಬೀಗ ಹಾಕಿದ್ದ ದೊಡ್ಡ ಗೇಟುಗಳ ಪಕ್ಕದಲ್ಲಿ, ತೋಳನ್ನು ಗೇಟಿಗೆ ಒರಗಿಸಿಕೊಂಡು, ಸೈನಿಕನ ಓವರ್ ಕೋಟು ತೊಟ್ಟ ಕಂಚಿನ ಅಖಿಲೆಸ್ ಹೆಲ್ಮೆಟ್ಟು ಧರಿಸಿದ್ದ ಮನುಷ್ಯನೊಬ್ಬ ನಿಂತಿದ್ದ. ನಿದ್ದೆಗಣ್ಣು ಒಂದಿಷ್ಟೇ ತೆರೆದು ಹತ್ತಿರ ಬರುತಿದ್ದ ಸ್ವಿದ್ರಿಗೈಲೋವ್‌ನನ್ನು ನೋಡಿದ. ಅವನ ಮುಖದ ಮೇಲೆ ಶಾಶ್ವತ ದುಃಖದ ಗೊಣಗಾಟದ ಮುದ್ರೆ ಇತ್ತು. ಎಲ್ಲ ಯಹೂದಿಗಳ ಮುಖದ ಮೇಲೂ ಇಂಥ ಮುದ್ರೆ ಒತ್ತಿದಂತಿರುತ್ತದೆ. ಅವರಿಬ್ಬರೂ, ಸ್ವಿದ್ರಿಗೈಲೋವ್ ಮತ್ತು ಆ ಅಖಿಲಿಸ್ ಇಬ್ಬರೂ ಸ್ವಲ್ಪ ಹೊತ್ತು ಒಬ್ಬರನ್ನೊಬ್ಬರು ಪರೀಕ್ಷಿಸಿ ನೋಡಿದರು. ಕೊನೆಗೆ ಈ ಮನುಷ್ಯ, ಕುಡುಕನಲ್ಲ, ಈಗ ನನ್ನೆದುರಿಗೆ ಮೂರೇ ಹೆಜ್ಜೆ ದೂರದಲ್ಲಿ ನಿಂತು, ಏನೂ ಮಾತಾಡದೆ ಸುಮ್ಮನೆ ದಿಟ್ಟಿಸಿ ನೋಡುತಿರುವುದರಲ್ಲಿ ವಿಶೇಷವೇನೂ ಇಲ್ಲ ಎಂಬ ತೀರ್ಮಾನಕ್ಕೆ ಬಂದ ಅಖಿಲಸ್.

‘ಹಿಲ್ಲೇನು ಮಾಢುತಿದ್ದೀ?’ ಅಲ್ಲಾಡದೆ, ನಿಂತ ಭಂಗಿ ಬದಲಿಸದೆ ಕೇಳಿದ.

‘ಏನೂ ಇಲ್ಲಾ ಬ್ರದರ್, ಗುಡ್‍ ಮಾರ್ನಿಂಗ್!’ ಅಂದ ಸ್ವಿದ್ರಿಗೈಲೋವ್.

‘ಹಿಲ್ಲೆಲ್ಲ ಬರಬಾರಧು. ಶರಿಯಾದ ಜಾಗ ಅಲ್ಲ.ʼ

‘ಫಾರಿನ್ನಿಗೆ ಹೋಗತಾ ಇದೇನೆ ಬ್ರದರ್.’

‘ಫಾರಿನ್ನಿಗೆ?’

‘ಅಮೆರಿಕಕ್ಕೆ.’

‘ಅಮೆರಿಕ?’

ಸ್ವಿದ್ರಿಗೈಲೋವ್ ರಿವಾಲ್ವರ್ ತೆಗೆದ, ಕಾಕ್ ಮಾಡಿದ.
ಅಖಿಲೆಸ್ ಹುಬ್ಬೇರಿಸಿದ.

‘ಏನಿಧು? ಝೋಕಾ? ಇದು ಶರಿಯಾದ ಜಾಗ ಅಲ್ಲ!’

‘ಯಾಕೆ ಸರಿಯಾದ ಜಾಗ ಅಲ್ಲ?’

‘ಶರಿಯಾದ ಜಾಗ ಅಲ್ಲ!’

‘ಇರಲಿ ಬಿಡು, ಬ್ರದರ್. ಒಳ್ಳೆಯ ಜಾಗ ಇದು. ಯಾರಾದರೂ ನಿನ್ನ ಪ್ರಶ್ನೆ ಕೇಳಿದರೆ ಅವನು ಅಮೆರಿಕಕ್ಕೆ ಹೋದ ಅನ್ನು.’
ರಿವಾಲ್ವರನ್ನು ತಲೆಯ ಬಲಗಡೆಗೆ ಒತ್ತಿ ಹಿಡಿದ.

‘ಇಲ್ಲಿ ಹಾಗೆಲ್ಲ ಮಾಡಕ್ಕೆ ಪರ್ಮಿಶನ್ನು ಇಲ್ಲ!’ ಅಖಿಲೆಸ್ ಪೂರಾ ಎಚ್ಚರಗೊಂಡ. ಅವನ ಕಣ್ಣು ದೊಡ್ಡದಾಗಿ ಅರಳಿದವು.

ಸ್ವಿದ್ರಿಗೈಲೋವ್ ರಿವಾಲ್ವರಿನ ಕುದುರೆ ಎಳೆದ.