1932ರಲ್ಲಿ ಚರ್ಚಿಲ್ ತನ್ನ ಪೂರ್ವಜರ ಇತಿಹಾಸ ಹುಡುಕಿ ಬರೆಯಲು ಯುರೋಪ್ ತಿರುಗಾಟದಲ್ಲಿದ್ದಾಗ ಜರ್ಮನಿಯಲ್ಲಿ ಹಿಟ್ಲರ್‌ನನ್ನು ಭೇಟಿಯಾಗಲು ಬಯಸಿದ್ದರು. ಹಿಟ್ಲರ್ ಭೇಟಿಗೆ ಪೂರ್ವದಲ್ಲಿ ತಾನು ಕೇಳಬೇಕೆಂದುಕೊಂಡ ಪ್ರಶ್ನೆಗಳನ್ನು ಬರೆದೂ ತಪುಪಿಸಿದ್ದರು. ಅವುಗಳಲ್ಲೊಂದು ಯಹೂದಿ ದ್ವೇಷದ ಕುರಿತಾದ “ಯಾವುದೇ ಮನುಷ್ಯ ತಾನು ಎಲ್ಲಿ ಹುಟ್ಟುವೆ ಎಂದು ಹೇಗೆ ನಿರ್ಧರಿಸಲು ಸಾಧ್ಯ?” ಎಂಬುದಾಗಿತ್ತು. ಇಂತಹ ಪ್ರಶ್ನೆಗಳೇ ಅಂದು ಇಬ್ಬರು ನಾಯಕರ ಭೇಟಿ ರದ್ದಾಗಲು ಕಾರಣ ಆಗಿರಬೇಕು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಬ್ರಿಟನ್ನಿನ ರಾಜಕೀಯ ನಾಯಕ ವಿನ್ಸ್ಟನ್‌ ಚರ್ಚಿಲ್‌ ಕುರಿತ ಬರೆದಿದ್ದಾರೆ ಯೋಗೀಂದ್ರ ಮರವಂತೆ

ಬ್ರಿಟಿಷ್ ಸಂಸತ್ತಿನಲ್ಲಿ, 1940 ಜೂನ್ 4ರಂದು ಅನುರಣಿಸಿದ ಉತ್ಸಾಹದ, ಆವೇಶದ ಒಂದು ಸಾಲು ಹೀಗಿತ್ತು “ಕಡಲ ತಡಿಯಲ್ಲಿ ಹೋರಾಡೋಣ, ಮೈದಾನದಲ್ಲಿ ಸೆಣಸೋಣ, ಬಯಲಿನಲ್ಲಿ ಕಾದಾಡೋಣ ಮತ್ತೆ ರಸ್ತೆಯಲ್ಲೂ, ಪರ್ವತಗಳ ಮೇಲೂ ಯುದ್ಧ ಮಾಡೋಣ, ನಾವೆಂದಿಗೂ ಶರಣಾಗದಿರೋಣ”. ಮತ್ತೆ ಅದು ಎರಡನೆಯ ಮಹಾಯುದ್ಧದ ಆರಂಭದ ಕಾಲ. ಬ್ರಿಟನ್ನಿನಲ್ಲಿ ಪ್ರಧಾನಿಗಳ ಪರಂಪರೆ 1721ರಿಂದ ಆರಂಭಗೊಂಡು ಇದೀಗ 57ನೆಯ ಪ್ರಧಾನಿಯ ಕಾಲ ಚಲಾವಣೆಯಲ್ಲಿದ್ದರೂ ಅವರೆಲ್ಲರಲ್ಲಿ ಅತ್ಯಂತ ಜನಪ್ರಿಯ ಚರ್ಚಿತ ಹೆಸರು ವಿನ್ಸ್ಟನ್ ಚರ್ಚಿಲ್‌ರದು; ಜೊತೆಗೆ ಯಾರೂ ಊಹಿಸುವಂತೆ ಆ ಯುದ್ಧೋತ್ಸಾಹದ ಸಾಲುಗಳು ಕೂಡ. ಬ್ರಿಟನ್ನಿನ ನಾಯಕರಾಗಿ ಸಂಸತ್ತಿನ ಒಳಗೆ ಹೊರಗೆ ಅಸಾಮಾನ್ಯ ಶಕ್ತಿ ಸಾಮರ್ಥ್ಯ ಸ್ಪುರಿಸಿದ, ಸ್ಫೂರ್ತಿದಾಯಕ ಭಾಷಣಕ್ಕಾಗಿ ಇಂದಿಗೂ ಎಂದಿಗೂ ಸ್ಮರಣೆ ಪಡೆದ ಹೆಸರು ಕೂಡ ಅವರದೇ .

1874ರಲ್ಲಿ ಆಕ್ಸ್ಫರ್ಡ್ ಸಮೀಪದ ಬ್ಲೇನ್ಹೇಯಿಮ್ ಅರಮನೆಯಲ್ಲಿ ಹುಟ್ಟಿದ ಚರ್ಚಿಲ್, ಯೌವ್ವನದಲ್ಲಿ ಭಾರತ ಹಾಗು ಸುಡಾನ್‌ನಲ್ಲಿ ಸೈನಿಕನಾಗಿ ಕೆಲಸ ಮಾಡಿದವರು. ಹತ್ತೊಂಭತ್ತನೆಯ ಶತಮಾನದ ಕೊನೆಗೆ ಆಫ್ರಿಕಾದಲ್ಲಿ ನಡೆದ ಬೋರ್ ಯುದ್ಧದಲ್ಲಿ ಸೇನಾ ವರದಿಗಾರನಾರನಾಗಿ ದುಡಿದವರು. 1900ರಲ್ಲಿ ಲಂಡನ್ ಸಂಸತ್ತನ್ನು ಮೊದಲು ಪ್ರವೇಶಿಸಿದ್ದು ಕನ್ಸರ್ವೇಟಿವ್ ಪಕ್ಷದ ಮೂಲಕ. ಬಹುಕಾಲ ಅಲ್ಲಿ ನಿಲ್ಲದೆ ಪಕ್ಷಾಂತರ ಮಾಡಿ ಲಿಬರಲ್ ಪಕ್ಷ ಸೇರಿ ಹರ್ಬರ್ಟ್ ಆಸ್ಕಿತ್‌ರ ಮಂತ್ರಿಮಂಡಲವನ್ನು ಸೇರಿಕೊಂಡರು. ಟರ್ಕಿಯ ಗಾಲಿಪೋಲಿಯಲ್ಲಿ, 1915ರ ಮೇ ತಿಂಗಳಲ್ಲಿ ಅಂದರೆ ಮೊದಲ ಮಹಾಯುದ್ಧದ ಪೂರ್ವಭಾವಿಯಾಗಿ ನಡೆದ ಯುದ್ಧ, ಬರೇ ಸೋಲನ್ನಲ್ಲದೇ 1,50,000 ಸಾವಿರ ಬ್ರಿಟಿಷ್ ಒಕ್ಕೂಟದ ಸೈನಿಕರ ಸಾವಿಗೆ ಕಾರಣವಾಯಿತು. ಆ ನಷ್ಟಕ್ಕೆ ಸ್ವತಃ ಜವಾಬ್ದಾರ ಅಲ್ಲದಿದ್ದರೂ ಸೇನಾ ಅಧಿಕಾರಿಯ ಸ್ಥಾನದಿಂದ ಚರ್ಚಿಲ್ ರಾಜೀನಾಮೆ ಕೊಟ್ಟರು. ಆ ನಂತರ ಚರ್ಚಿಲ್ ಸೇರಿದ್ದು ಪಾಶ್ಚಾತ್ಯ ಪಡೆಯ ಒಂದು ತುಕಡಿಯ ನಾಯಕನಾಗಿ, ಒಂದು ಬಾಂಬ್ ದಾಳಿಯಲ್ಲಿ ಸಾವಿನ ಅಂಚಿನಿಂದ ಪಾರಾಗಿದ್ದರು ಎಂಬ ಕತೆ ಇದೆ.

1917ರಲ್ಲಿ ಸೇನಾ ಸಚಿವ ಸಂಪುಟಕ್ಕೆ ಮರಳಿ, ವಿವಿಧ ವಿಭಾಗದ ಎಂಟು ಮಂತ್ರಿಗಿರಿಗಳನ್ನು ನಿಭಾಯಿಸಿದರು. 1924ರಲ್ಲಿ ಕನ್ಸರ್ವೇಟಿವ್ ಪಕ್ಷಕ್ಕೆ ಮರುಸೇರ್ಪಡೆಯ ನಂತರ ವಿತ್ತಸಚಿವರಾಗಿ ಕೆಲಸ ಮಾಡಿದರು. 1930ರಲ್ಲಿ ಹಿಟ್ಲರ್‌ನನ್ನು ಖುಷಿಪಡಿಸುವ ನೀತಿಗೆ, ವಿನಾಯಿತಿ ನೀಡುವ ನೀತಿಗೆ ವಿರುದ್ಧವಾಗಿ ನಿಂತರು. 1940ರ ಮೇ ತಿಂಗಳಲ್ಲಿ ಮೊದಲ ಬಾರಿ ಪ್ರಧಾನಿಯಾದರು. 1932ರಲ್ಲಿ ಚರ್ಚಿಲ್ ತನ್ನ ಪೂರ್ವಜರ ಇತಿಹಾಸ ಹುಡುಕಿ ಬರೆಯಲು ಯುರೋಪ್ ತಿರುಗಾಟದಲ್ಲಿದ್ದಾಗ ಜರ್ಮನಿಯಲ್ಲಿ ಹಿಟ್ಲರ್‌ನನ್ನು ಭೇಟಿಯಾಗಲು ಬಯಸಿದ್ದರು. ಹಿಟ್ಲರ್ ಭೇಟಿಗೆ ಪೂರ್ವದಲ್ಲಿ ತಾನು ಕೇಳಬೇಕೆಂದುಕೊಂಡ ಪ್ರಶ್ನೆಗಳನ್ನು ಬರೆದೂ ತಪುಪಿಸಿದ್ದರು. ಅವುಗಳಲ್ಲೊಂದು ಯಹೂದಿ ದ್ವೇಷದ ಕುರಿತಾದ “ಯಾವುದೇ ಮನುಷ್ಯ ತಾನು ಎಲ್ಲಿ ಹುಟ್ಟುವೆ ಎಂದು ಹೇಗೆ ನಿರ್ಧರಿಸಲು ಸಾಧ್ಯ?” ಎಂಬುದಾಗಿತ್ತು. ಇಂತಹ ಪ್ರಶ್ನೆಗಳೇ ಅಂದು ಇಬ್ಬರು ನಾಯಕರ ಭೇಟಿ ರದ್ದಾಗಲು ಕಾರಣ ಆಗಿರಬೇಕು. ಎರಡನೆಯ ಮಹಾಯುದ್ಧದ ಮೂಲಕ ಸರ್ವಾಧಿಕಾರ ಮತ್ತು ಜನಾಂಗೀಯ ಹಿಂಸೆಯನ್ನು ಪ್ರತಿರೋಧಿಸುವ ಹೆಜ್ಜೆಯ ಪೂರ್ವತಯಾರಿಯಲ್ಲಿ ರದ್ದಾದ ಭೇಟಿಗೂ ಮಹತ್ವದ ಸ್ಥಾನ ಇದೆ. ಆ ಕಾಲಕ್ಕೆ ದೇಶದೊಳಗಿನ ಎಲ್ಲ ಪಕ್ಷಗಳ ಬೆಂಬಲ ಪಡೆಯಬಹುದಾದ ಏಕೈಕ ವ್ಯಕ್ತಿ ಚರ್ಚಿಲ್ ಆದ್ದರಿಂದ ಪ್ರಧಾನಿ ಹುದ್ದೆಯ ಸಹಜ ಆಯ್ಕೆಯಾಗಿದ್ದರು. ಲಂಡನ್‌ನ ಸಂಸತ್ತಿನ ಹೊರಗೆ ಚರ್ಚಿಲರ ಮಹತ್ವದ ಸಾಧನೆ ಎಂದರೆ ಇಡೀ ದೇಶವನ್ನು ಒಗ್ಗೂಡಿಸಿದ್ದು. ಚರ್ಚಿಲ್‌ರ ಯುದ್ಧಕಾಲದ ಮುಂದಾಳತ್ವ ಅವರನ್ನು 20ನೆಯ ಶತಮಾನದ ಅಪ್ರತಿಮ ನಾಯಕನನ್ನಾಗಿಸಿದೆ. ಫಾಶಿವಾದದ ವಿರುದ್ಧ ಪ್ರಜಾತಂತ್ರವನ್ನು ರಕ್ಷಿಸಿಕೊಳ್ಳುವಲ್ಲಿ ನಿರ್ಣಾಯಕ ನಾಯಕತ್ವ ಅವರದಾಗಿತ್ತು.

“ನಾಜಿಸಂ” ಅನ್ನು ಸೋಲಿಸಿದ್ದು ಚರ್ಚಿಲ್‌ರ ರಾಜಕೀಯ ಜೀವನದ ಸುವರ್ಣ ಘಳಿಗೆ ಎಂದು ಆಂಗ್ಲ ಇತಿಹಾಸಕಾರರು ತಿಳಿಯುತ್ತಾರೆ. ಎರಡನೆಯ ಮಹಾಯುದ್ಧದ ವಿನಾಶದ ನಂತರ ಬ್ರಿಟನ್ನನ್ನು ಬೆಳೆಸುವಲ್ಲಿಯೂ ಚರ್ಚಿಲ್‌ರದು ವಿಶೇಷ ಪಾತ್ರ. 2002ರ ಮತಸಮೀಕ್ಷೆಯ ಪ್ರಕಾರ, “ಶ್ರೇಷ್ಠ ಆಂಗ್ಲ ನಿವಾಸಿ” ಎಂದು ಚರ್ಚಿಲ್ ಆಯ್ಕೆಯಾಗಿದ್ದು ಸಮಕಾಲೀನ ಬ್ರಿಟನ್ನಿನಲ್ಲಿಯೂ ಚರ್ಚಿಲ್‌ರ ಪ್ರಭಾವದ ಜೀವಂತಿಕೆಯನ್ನು ಹೇಳುತ್ತದೆ. ಬ್ರಿಟನ್ನನ್ನು “ಸಿಂಹ ಹೃದಯಿ” ಎಂದು ಕರೆದು, ತನಗೆ ಗರ್ಜನೆ ಮಾಡುವ ಅವಕಾಶ ದೊರೆಯಿತು ಎಂದು ವಿನೀತರಾಗಿ ಹೇಳಿದ್ದಿದೆ. ಚರ್ಚಿಲ್ ಇನ್ನೊಂದು ಯಶಸ್ಸು ಮಹಾಯುದ್ಧಕ್ಕೆ ಅಮೆರಿಕದ ಬೆಂಬಲ ಪಡೆಯುವುದರಲ್ಲಿತ್ತು. ಎರಡನೆಯ ಮಹಾಯುದ್ಧದಲ್ಲಿ ಅಂತಿಮವಾಗಿ ಮೈತ್ರಿಕೂಟದ ಗೆಲುವಿಗೆ ಅಮೆರಿಕದ ಬಲ ಬೆಂಬಲ ಮೂಲಕಾರಣವಾಗಿತ್ತು. ಚರ್ಚಿಲ್ ತಾಯಿ ಅಮೆರಿಕೆಯವರು ಎಂದು ಈ ಸಂದರ್ಭದಲ್ಲಿ ಉಲ್ಲೇಖಿಸಬೇಕು. 1942ರಲ್ಲಿ “ತಾನು ಪ್ರಧಾನಿಯಾಗಿದ್ದು ದುರ್ಬಲ ಬ್ರಿಟಿಷ್ ಚಕ್ರಾಧಿಪತ್ಯದ ಅಧ್ಯಕ್ಷನಾಗಲು ಅಲ್ಲ” ಎಂದಿದ್ದ ಚರ್ಚಿಲ್‌ರಿಗೆ ಯುದ್ಧಾನಂತರದ ಮೈತ್ರಿಯಲ್ಲಿ ಬ್ರಿಟನ್ನಿಗೆ ಕಿರಿಯ ಜವಾಬ್ದಾರಿ ಕೊಟ್ಟಿದ್ದು ನಿರಾಸೆಯ ವಿಷಯವಾಗಿತ್ತು.

ಹಿಟ್ಲರ್ ಅಂತ್ಯದೊಂದಿಗೆ ಎರಡನೆಯ ಮಹಾಯುದ್ಧವನ್ನು ಗೆದ್ದರೂ 1945ರ ಸಂಸದೀಯ ಚುನಾವಣೆ ಚರ್ಚಿಲ್‌ರಿಗೆ ಸೋಲನ್ನು ತಂದಿತು. ಅಂದಿನ ಚುನಾವಣಾ ಪ್ರಚಾರದಲ್ಲಿ ಲೇಬರ್ ಪಕ್ಷವು ಚರ್ಚಿಲ್‌ರನ್ನು ದುರ್ಬಲ ಕನ್ಸರ್ವೇಟಿವ್ ಪಕ್ಷದ ಸಮರ್ಥ ನಾಯಕ ಎಂದು ಬಿಂಬಿಸಿತ್ತು. ಯುದ್ಧಾನಂತರದ ಆಂತರಿಕ ಸವಾಲುಗಳನ್ನು ಎದುರಿಸುವಲ್ಲಿ ಕನ್ಸರ್ವೇಟಿವ್ ಪಕ್ಷ ಅಸಮರ್ಥ ಎಂದು ಜನರನ್ನು ನಂಬಿಸಿತ್ತು. ಎಲೆಕ್ಷನ್ ಸೋಲಿನ ನಂತರ ಚರ್ಚಿಲ್ ಲಂಡನ್‌ನ ಹೈಡ್ ಪಾರ್ಕ್ ಗೇಟ್‌ನ 28 ನಂಬರಿನ ಮನೆಯನ್ನು ಕೊಂಡರು. ಚರ್ಚಿಲ್ ಬಯಸಿದಂತೆ ಮನೆಯನ್ನು ಅಲಂಕಾರಿಕವಾಗಿ ಅಣಿಗೊಳಿಸಲಾಯಿತು. ಒಂದು ಕೋಣೆಯನ್ನು “ಹೆಮ್ಮೆಯ ಪುಸ್ತಕಾಲಯ” ಎಂದು ನಾಮಕರಣ ಮಾಡಲಾಯಿತು. ಅಲ್ಲಿ ಚಂದದ ಬೈಂಡ್ ಹಾಕಿಸಿಕೊಂಡ ಪುಸ್ತಕಗಳನ್ನು ಜೋಡಿಸಲಾಗಿತ್ತು. ಮನೆಯ ಗೋಡೆಯ ಮೇಲೆ ಪೂರ್ವಜ ಮಹಾಮಹಿಮರ ಪಟಗಳನ್ನು ನೇತುಬಿಡಲಾಯಿತು. ಚಿತ್ರಕಾರ ಸರ್ ಜಾನ್ ಲವೆರಿ ಬಿಡಿಸಿದ ಚರ್ಚಿಲ್‌ರ ಚಿತ್ರವನ್ನೂ ಪ್ರದರ್ಶಿಸಲಾಯಿತು. ನೆರೆಯ 27 ನಂಬರಿನ ಮನೆಯನ್ನು 7000 ಪೌಂಡ್ ಕೊಟ್ಟು 1946ರಲ್ಲಿ ಖರೀದಿಸಿದರು. ಕಚೇರಿ ಮಾಡಲೆಂದು ನೆರೆಮನೆಯನ್ನು ಕೊಂಡಿದ್ದರು. ನಂತರ ಎರಡೂ ಮನೆಗಳನ್ನು ಜೋಡಿಸಿ ವಾಸಕ್ಕೆಂದೇ ಬಳಸಲಾಯಿತು. ಇದು ಲಂಡನ್‌ನಲ್ಲಿ ಚರ್ಚಿಲ್‌ರ ಅತ್ಯಂತ ದೀರ್ಘಾವಧಿ ವಾಸ್ತವ್ಯವಾಗಿತ್ತು.

ಚರ್ಚಿಲ್ ಸಂಸತ್ತಿನಲ್ಲಿ ಕೆಲಸ ಮಾಡದ ಸಮಯವನ್ನು ಯುದ್ಧದ ಬಗ್ಗೆ ಬರೆಯುವುದರಲ್ಲಿ ಕಳೆದರು, ಆರು ಅಧ್ಯಾಯಗಳ ಪುಸ್ತಕ ಪ್ರಕಟವಾಯಿತು. ಯುದ್ಧಾನಂತರದ ಜಗತ್ತು ಅವರ ಆಸಕ್ತಿಯ ವಿಷಯವಾಗಿತ್ತು. “ಸ್ಟೆಟ್ಟಿನ್ ಇಂದ ಬಾಲ್ಟಿಕ್ ತನಕ, ಟ್ರಿಸ್ಟ್ ಇಂದ ಏಡ್ರಿಯಾಟಿಕ್ ತನಕ ಉಕ್ಕಿನ ಪರದೆ ಕೆಳಗಿಳಿದಿತ್ತು” ಎಂದು “ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯ” ಒಂದೊಂದೇ ಕಡೆ ಕುಸಿಯುತ್ತಿದ್ದುದರ ಬಗ್ಗೆ ಭಾಷಣ ಮಾಡಿದ್ದರು. 1951ರ ಚುನಾವಣೆಯಲ್ಲಿ ಮತ್ತೆ ವಿಜಯಿಯಾದರು. ಸಂಸತ್ತಿನಲ್ಲಿ ಎರಡು ಅವಧಿಯ ಉಪಸ್ಥಿತಿ ಮಾತುಗಾರ ಪ್ರಧಾನಿಯಿಂದ ಆಕರ್ಷಕ ನುಡಿಗಟ್ಟುಗಳನ್ನೂ ಹುಟ್ಟಿಸಿತ್ತು. ಎರಡನೆಯ ಬಾರಿ ಪ್ರಧಾನಿಯಾದ ಮೇಲೆ ನಂಬ್ರ 10 ಡೌನಿಂಗ್ ರಸ್ತೆಯ ಮನೆ ವಾಸ್ತವ್ಯವಾಯಿತು. 1955ರಲ್ಲಿ 81 ವರ್ಷ ವಯಸ್ಸಿನಲ್ಲಿ ಬ್ರಿಟನ್ನಿನ ಮುತ್ಸದ್ದಿ ಜನಪ್ರಿಯ ನಾಯಕ ನಿವೃತ್ತಿ ಹೊಂದಿದರು. ಆದರೆ ವುಡ್ಫೊರ್ಡ್ ಕ್ಷೇತ್ರದ ಸಂಸತ್ ಪ್ರತಿನಿಧಿಯಾಗಿ ಸಾಯುವ ಒಂದು ವರ್ಷ ಮೊದಲಿನವರೆಗೂ ಮುಂದುವರಿದರು.

ಆ ಕಾಲಕ್ಕೆ ದೇಶದೊಳಗಿನ ಎಲ್ಲ ಪಕ್ಷಗಳ ಬೆಂಬಲ ಪಡೆಯಬಹುದಾದ ಏಕೈಕ ವ್ಯಕ್ತಿ ಚರ್ಚಿಲ್ ಆದ್ದರಿಂದ ಪ್ರಧಾನಿ ಹುದ್ದೆಯ ಸಹಜ ಆಯ್ಕೆಯಾಗಿದ್ದರು. ಲಂಡನ್‌ನ ಸಂಸತ್ತಿನ ಹೊರಗೆ ಚರ್ಚಿಲರ ಮಹತ್ವದ ಸಾಧನೆ ಎಂದರೆ ಇಡೀ ದೇಶವನ್ನು ಒಗ್ಗೂಡಿಸಿದ್ದು. ಚರ್ಚಿಲ್‌ರ ಯುದ್ಧಕಾಲದ ಮುಂದಾಳತ್ವ ಅವರನ್ನು 20ನೆಯ ಶತಮಾನದ ಅಪ್ರತಿಮ ನಾಯಕನನ್ನಾಗಿಸಿದೆ. ಫಾಶಿವಾದದ ವಿರುದ್ಧ ಪ್ರಜಾತಂತ್ರವನ್ನು ರಕ್ಷಿಸಿಕೊಳ್ಳುವಲ್ಲಿ ನಿರ್ಣಾಯಕ ನಾಯಕತ್ವ ಅವರದಾಗಿತ್ತು.

ಎರಡನೆಯ ಅವಧಿಯ ಪ್ರಧಾನಿಗಿರಿಯ ನಂತರದ ಅರೆನಿವೃತ್ತ ಜೀವನವನ್ನು ಮತ್ತೆ ಹೈಡ್ ಪಾರ್ಕ್ ಮನೆಯಲ್ಲಿಯೇ ಕಳೆದರು. ಪ್ರವಾಸ ನೌಕಾ ವಿಹಾರ ಮಾಡಿದರು. ವರ್ಣಚಿತ್ರ ಬಿಡಿಸಿದರು. “ಆಂಗ್ಲ ಭಾಷಿಕರ ಇತಿಹಾಸ” ಎನ್ನುವ ಪುಸ್ತಕವನ್ನು ಪರಿಷ್ಕರಿಸಿ ಮರುಮುದ್ರಿಸಿದರು. ಅವರ 90ನೆಯ ಹುಟ್ಟುಹಬ್ಬದ ದಿನ ಜನರ ಗುಂಪು ಲಂಡನ್ ಮನೆಯ ಹೊರಗೆ “ಹ್ಯಾಪಿ ಬರ್ತ್ಡೇ” ಹಾಡು ಹೇಳಿತ್ತು. ಸುಮಾರು ಅರವತ್ತು ಸಾವಿರ ಶುಭಾಶಯ ಕೋರುವ ಪತ್ರಗಳು ಅಂದು ಬಂದಿದ್ದವಂತೆ. ಪ್ರತಿ ಘಂಟೆಗೊಮ್ಮೆ ಅಂಚೆಕಾರ ಹೆಗಲ ಮೇಲೆ ಟಪ್ಪಾಲು ಚೀಲ ಹೊತ್ತು ಅವರ ಮನೆಯ ಬಾಗಿಲು ತಟ್ಟುತ್ತಿದ್ದರು. ಕೆಲವು ಪತ್ರಗಳಲ್ಲಿ ಯಾವುದೇ ಅಕ್ಷರ ಸಂದೇಶ ಇರದೇ, ಚರ್ಚಿಲ್ ವಿಜಯದ ಸಂಕೇತವಾಗಿ ಎರಡು ಬೆರಳುಗಳನ್ನು ಬಿಡಿಸಿ ತೋರಿಸುತ್ತಿದ್ದ ಬರೇ “V” ಯ ಚಿತ್ರ ಬರೆಯಲ್ಪಟ್ಟಿದ್ದವಂತೆ. ಇನ್ನು ಕೆಲವು ಸಂದೇಶಗಳಲ್ಲಿ ಚರ್ಚಿಲ್‌ರಿಗೆ ಇಷ್ಟವಾದ ಸಿಗಾರ್ ಅನ್ನು ಚಿತ್ರಿಸಲಾಗಿತ್ತಂತೆ. 89ನೆಯ ಹುಟ್ಟು ಹಬ್ಬಕ್ಕೆ ಬಂದ ಕಾರ್ಡುಗಳ ಎರಡು ಪಟ್ಟು 90ರ ಆಚರಣೆಗೆ ಬಂದಿದ್ದವು ಎಂದು “ನ್ಯೂಯಾರ್ಕ್ ಟೈಮ್ಸ್” ಪತ್ರಿಕೆ ವರದಿ ಮಾಡಿತ್ತು. ಮನೆಯ ಹೊರಗೆ ನಿಂತು ಹುಟ್ಟುಹಬ್ಬದ ಹಾಡು ಹೇಳುವವರನ್ನು ಒಮ್ಮೆ ಕಿಟಕಿಯಿಂದಲೇ ನೋಡಿ ನಡುಗುವ ಬೆರಳುಗಳನ್ನು ಮೇಲೆತ್ತಿ ಅಂದು ಕೊನೆಯ ಬಾರಿ ವಿಜಯದ ಸನ್ನೆ ಮಾಡಿದ್ದರು. ಸರಣಿ ಹೃದಯಾಘಾತಗಳ ನಂತರ ಮುಂದಿನ ಜನವರಿಯಲ್ಲಿ 91 ರ ಸಮೀಪದ ಚರ್ಚಿಲ್ ಲಂಡನ್ ಮನೆಯಲ್ಲಿ ನಿಧನರಾದರು. ಹೈಡ್ ಪಾರ್ಕ್ ಮನೆಯ ಗೋಡೆಯ ಮೇಲೆ ಇದೀಗ ನೀಲಿ ಫಲಕ ಹೊಳೆಯುತ್ತಿದೆ. “ಸರ್ ವಿನ್ಸ್ಟನ್ ಚರ್ಚಿಲ್ ಇಲ್ಲಿಯೇ ಉಳಿದರು ಮತ್ತು ಅಳಿದರು” ಎಂದೂ ಓದುತ್ತದೆ.

ಚರ್ಚಿಲ್ ವ್ಯಕ್ತಿತ್ವಕ್ಕೆ ಹಲವು ಮುಖಗಳಿದ್ದವು. ಆ ಕಾಲದ ಪ್ರಮುಖ ವ್ಯಕ್ತಿಗಳಿಗಿಂತ ಭಿನ್ನವಾಗಿ, ಸುಲಭವಾಗಿ ಸಾರ್ವಜನಿಕವಾಗಿ ಅತ್ತು ಬಿಡುತ್ತಿದ್ದರು, ತನ್ನ ಖಿನ್ನತೆಯ ಬಗ್ಗೆ ಮುಗ್ಧವಾಗಿ ಹೇಳಿಕೊಳ್ಳುತ್ತಿದ್ದರು. ಖಿನ್ನತೆಯನ್ನು “ನನ್ನ ಕಪ್ಪು ನಾಯಿ” ಎಂದೂ ಕರೆದಿದ್ದರು. ಸಿಗಾರ್ ಮತ್ತು ಬ್ರಾಂಡಿ ಪ್ರಿಯರಾಗಿ ಪ್ರಸಿದ್ಧರಾಗಿದ್ದರು. “ಆಲ್ಕೋಹಾಲ್ ನನ್ನಿಂದ ಪಡೆದುದಕ್ಕಿಂತ ಹೆಚ್ಚಿನದನ್ನು ನಾನು ಆಲ್ಕೋಹಾಲ್‌ನಿಂದ ಪಡೆದೆ” ಎನ್ನುವುದೂ ಅವರೇ ಹೇಳಿದ ಜನಜನಿತ ನುಡಿ. ಅನಾರೋಗ್ಯಕರ ಎಂದು ತೋರುವ ಜೀವನಶೈಲಿ ಆಯ್ಕೆಗಳು ಅವರದಾಗಿದ್ದರೂ 90ರ ತನಕ ಬದುಕುವುದನ್ನು ಯಾವುದೂ ತಡೆಯಲಿಲ್ಲ.

ಇನ್ನು ವಿವಿಧ ಹೊಣೆಗಾರಿಕೆಯ ಸುದೀರ್ಘ ಸರಕಾರಿ ಸೇವೆಯಲ್ಲಿ ಚರ್ಚಿಲ್‌ರ ಕೆಲವು ಹೆಜ್ಜೆಗಳು ವಿವಾದಾತ್ಮಕವಾಗಿದ್ದವು. 1910-11ರಲ್ಲಿ ವೇಲ್ಸ್‌ನಲ್ಲಿ ಮುಷ್ಕರ ನಿರತರಾದ ನೌಕರರ ಮೇಲೆ ಮಿಲಿಟರಿ ಬಲ ಪ್ರಯೋಗಿಸಿದ್ದರು. ಅನಗತ್ಯ ಅತಿಯಾದ ಬಲಪ್ರಯೋಗ ಮಾಡಿದ ಆಕ್ರಮಣಕಾರಿ ವ್ಯಕ್ತಿ ಎಂದು ಅಂದಿನ ಪತ್ರಿಕೋದ್ಯಮಿಗಳು ಸಹೋದ್ಯೋಗಿಗಳು ಟೀಕಿಸಿದ್ದರು. 1919ರಲ್ಲಿ ಐರ್ಲೆಂಡ್‌ನ ದಂಗೆಯನ್ನು ಹತ್ತಿಕ್ಕಲು ನಿಯೋಜಿಸಿದ್ದ ವಿಶೇಷ ಪೊಲೀಸ್ ದಳದ ಅಮಾನುಷ ವರ್ತನೆಯೂ ಕೆಟ್ಟ ಹೆಸರನ್ನು ತಂದಿತ್ತು. 1920ರಲ್ಲಿ ಬ್ರಿಟನ್ ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಿದ್ದು ಚರ್ಚಿಲ್ ಸಚಿವರಾಗಿದ್ದಾಗಲೇ. ಮಹಾಯುದ್ಧದ ಕಾಲದಲ್ಲಿ ಡ್ರೇಸ್ಡೆನ್ ನಂತಹ ಜರ್ಮನ್ ನಗರಗಳ ಮೇಲೆ ಬಾಂಬ್ ಹಾಕಿಸಿದ್ದು ತೀವ್ರ ಮೂದಲಿಕೆಗೆ ಒಳಗಾಗಿತ್ತು. ಇನ್ನು ಭಾರತದ ಮಟ್ಟಿಗೆ 1943ರ ಬಂಗಾಳ ಮಹಾಬರಗಾಲದ ಸಮಯ ಲಕ್ಷಾಂತರ ಜನರು ಸಾಯುವುದರ ಹಿನ್ನೆಲೆಯಲ್ಲಿ ಚರ್ಚಿಲ್‌ರ ಅಸಡ್ಡೆ ನಿಷ್ಕ್ರಿಯತೆ ಇದೆ ಎಂದು ವಿಶ್ಲೇಷಿಸುತ್ತಾರೆ. ಎರಡನೆಯ ಮಹಾಯುದ್ಧದಲ್ಲಿ ಬ್ರಿಟಿಷ್ ಸೇನೆಯ ಭಾಗವಾಗಿದ್ದು ಹೋರಾಡಿ ಮಡಿದ ಎಂಭತ್ತು ಸಾವಿರಕ್ಕಿಂತ ಹೆಚ್ಚು ಭಾರತೀಯ ಯೋಧರಿಗೆ ಬ್ರಿಟಿಷ್ ಸೈನಿಕರಿಗೆ ಸಿಕ್ಕ ಹುತಾತ್ಮ ಪಟ್ಟ, ಗೌರವ ಚರ್ಚಿಲ್‌ರಿಂದ ಸಿಗಲಿಲ್ಲ. ಭಾರತ ಮತ್ತು ಭಾರತೀಯರು ಅವರಿಗೆ ಎಂದೂ ಹಿತಕರವಾದ ವಿಷಯಗಳಾಗಿರಲಿಲ್ಲ. ಸ್ವರಾಜ್ಯದ ಹೋರಾಟಗಳಿಗೆ, ಮುಖ್ಯವಾಗಿ ಗಾಂಧಿ ನಾಯಕತ್ವದಲ್ಲಿ ನಡೆದ ಚಳವಳಿಗಳಿಗೆ ತೀವ್ರ ಪ್ರತಿರೋಧ ಒಡ್ಡುವ ಪ್ರಯತ್ನ ಮಾಡಿದ್ದರು.

ಎಲ್ಲ ಪರ ವಿರೋಧಗಳ ನಡುವೆಯೂ ವಿನ್ಸ್ಟನ್ ಚರ್ಚಿಲ್ 20ನೆಯ ಶತಮಾನದ ಅತ್ಯಂತ ಜನಪ್ರಿಯ ಬ್ರಿಟಿಷ್ ವ್ಯಕ್ತಿ ಶಕ್ತಿ. ಇಂದಿನ ಲಂಡನ್‌ನ ಪ್ರತಿ ಮೂಲೆಯಲ್ಲಿಯೂ ಚರ್ಚಿಲ್ ಸಿಗುತ್ತಾರೆ. ಕರಿಕೋಟಿನ, ಊರುಗೋಲು ಹಿಡಿದ, ಸಿಗಾರ್ ಎಳೆಯುವ ಚರ್ಚಿಲ್ ಬೇರೆ ಬೇರೆ ರೂಪ ಆಕಾರಗಳಲ್ಲಿ ಲಂಡನ್‌ನ ವಿವಿಧೆಡೆ ಕಾಣಿಸುತ್ತಾರೆ. ತಮ್ಮ ಸಕ್ರಿಯ ದಿನಗಳಲ್ಲಿ ಚರ್ಚಿಲ್ ಬ್ರಿಟನ್ನಿನ ಉದ್ದಗಲಕ್ಕೂ ಓಡಾಡಿದ್ದರೂ ಲಂಡನ್ನಿನಷ್ಟು ಅವರ ಬದುಕನ್ನು ಆವರಿಸಿದ ಊರು ನಗರ ಇನ್ನೊಂದಿರಲಿಲ್ಲ. ಶಾಲೆಗೆ ಹೋದದ್ದು, ಸಂಸತ್ತಿನಲ್ಲಿ ಕುಳಿತದ್ದು, ಮದುವೆಯಾದದ್ದು, ಸಮರದ ಜೊತೆಗೆ ಸರಸ ಆಡಿದ್ದು, ಪ್ರಧಾನಿಯಾದದ್ದು, ಎರಡನೆಯ ಮಹಾಯುದ್ಧವನ್ನು ಹೊಸೆದದ್ದು ಮತ್ತು ಕೊನೆಗೆ ಮೃತರಾದದ್ದು, ಎಲ್ಲವೂ ಲಂಡನ್‌ನಲ್ಲೇ.

“ಚರ್ಚಿಲ್ ಚರಿತ್ರೆ”ಯಲ್ಲಿ ನೆನಪಿಡಬಹುದಾದ ಚರ್ಚಿಸಬಹುದಾದ ಮಹತ್ವದ ವಿಷಯಗಳು ಹಲವಿದ್ದರೂ ಬ್ರಿಟಿಷ್ ಜನಮಾನಸದಲ್ಲಿ ಅವರು ಖಾಯಂ ನಿಲ್ಲುವುದು ಎರಡನೆಯ ಮಹಾಯುದ್ಧ ಕಾಲದ ಬ್ರಿಟನ್ನಿನ ನಿರ್ಭೀತ ಧೋರಣೆಗಾಗಿ. ಯುದ್ಧದ ಜೊತೆ ಹಾಸುಹೊಕ್ಕಾಗಿರುವ ಬ್ರಿಟನ್ನಿನ ಸಂಸ್ಕೃತಿ ಮತ್ತು ಇತಿಹಾಸಕ್ಕೆ ಚರ್ಚಿಲ್ ರಂತಹ ನಾಯಕ ಎಲ್ಲ ಕಾಲದಲ್ಲೂ ಸ್ಮರಣೀಯ ಆಗುವುದು ಸಹಜ. ಮಿಲಿಟರಿಯಲ್ಲಿ ಸೇವೆ ಮಾಡಿದ್ದ, ಓಟದ ಕುದುರೆಗಳನ್ನು ಬೆಳೆಸಿದ್ದ, 5೦೦ಕ್ಕೂ ಮಿಕ್ಕಿ ಬಣ್ಣದ ಚಿತ್ರಗಳನ್ನು ರಚಿಸಿದ್ಧ, ಇಟ್ಟಿಗೆ ಕಟ್ಟುವ ಮೇಸ್ತ್ರಿಯಾಗಿ ಕೆಲಸ ಮಾಡಿದ್ದ, ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರ ಪಡೆದಿದ್ದ, ಹೆಂಡತಿಗೆ ಪ್ರೇಮಪತ್ರ ಬರೆಯುತ್ತಿದ್ದ ಬಹುಮುಖಿ ವ್ಯಕ್ತಿ ಎನ್ನುವ ಗುರುತು ನೆನಪು ಬ್ರಿಟನ್ ಇರುವ ತನಕವೂ ಇರುತ್ತದೆ. ಇಂದಿಗೂ ಹಿಂದಿನಂತೆಯೇ ಅತ್ಯಂತ ಪ್ರಸಿದ್ಧ ಸ್ಮರಣೀಯ ಆಗಿರುವುದರ ಜೊತೆಜೊತೆಗೆ ಜಿಜ್ಞಾಸೆಗೆ ವಿಮರ್ಶೆಗೆ ಒಳಗಾಗುವ ವ್ಯಕ್ತಿಯಾಗಿಯೂ ಚರ್ಚಿಲ್ ಉಳಿದಿದ್ದಾರೆ. ಚರ್ಚಿಲ್‌ರ ಜನಪ್ರಿಯ ನುಡಿಗಟ್ಟು ಯುದ್ಧೋನ್ಮಾದದ ಭಾಷಣದ ಸಾಲು ಆಂಗ್ಲರ ಯಾವುದೊ ಸಭೆಯಲ್ಲಿ ಅನುರಣಿಸಿ ಚಪ್ಪಾಳೆ ಗಿಟ್ಟಿಸುವ ಹೊತ್ತಿನಲ್ಲಿ ಲಂಡನ್ನಿನ ಇನ್ಯಾವುದೋ ಚೌಕದಲ್ಲಿರುವ ಚರ್ಚಿಲ್ ಪ್ರತಿಮೆ, ಐತಿಹಾಸಿಕ ಕಾರಣಗಳಿಗೆ ಕೆಲವು ಆಂಗ್ಲರ ಅಲ್ಲದಿದ್ದರೆ ವಲಸಿಗರ ಆಕ್ರೋಶ ಅಸಮಾಧಾನಗಳಿಗೆ ಈಡಾಗಿ ಮಸಿ ಬಳಿಸಿಕೊಳ್ಳುವುದಿದೆ.

ಬದುಕಿದ್ದರೆ ಕರಿಕೋಟು ಧರಿಸಿ ಊರುಕೋಲನ್ನು ಹಿಡಿದು ಲಂಡನ್ ಬೀದಿಗಳನ್ನು ಸುತ್ತಿ ಸುಖಿಸುತ್ತಿದ್ದ ಚರ್ಚಿಲ್, ಪ್ರೀತಿ ದ್ವೇಷಗಳು ಒಟ್ಟಾಗಿ ಹೀಗೆ ಎದುರಾಗುವಾಗ ತಮಗಿಷ್ಟದ ದಪ್ಪ ಸಿಗಾರನ್ನು ತುಟಿಯ ಮಧ್ಯೆ ಇಟ್ಟುಕೊಂಡೆ ಕಿರುನಗೆಯ ನಡುವಿನ ಸಂಧಿಯಲ್ಲಿ ಹೊಗೆ ಬಿಡುತ್ತ ಮುನ್ನಡೆಯುತ್ತಿದ್ದರೇನೋ.