ಸಮುದ್ರತಟ ಮತ್ತು ಕಣಿವೆ ಪರಸ್ಪರ ಮುಖವನ್ನ ದೂರಮಾಡಿಕೊಂಡು ಒಂದು ಜೋಗಿಯಾಗಿ ಇನ್ನೊಂದು ಯೋಗಿಯಾಗಿರುವಂತೆ ಅನಿಸುತ್ತದೆ. ಐವತ್ತು ವರ್ಷಗಳ ಹಿಂದೆ ಸ್ಥಳೀಯ ಅಬರಿಜಿನಲ್ ಸಮುದಾಯಗಳು ಜೀವನ ಮಾಡುತ್ತಿದ್ದ ಮತ್ತು ಅಲ್ಲಲ್ಲಿ ಹರಡಿದ್ದ ನೂರಾರು ಎಕರೆ ಫಾರ್ಮ್ ಗಳನ್ನು ಬಿಟ್ಟರೆ ಹೊರಗಿನವರಿಗೆ ಇಲ್ಲಿನ ಬೆಟ್ಟಕಣಿವೆ ಪ್ರದೇಶದ ಪರಿಚಯ ಅಷ್ಟೊಂದಿರಲಿಲ್ಲವಂತೆ. ಜನ ಬೀಚುಗಳಿಗೆ ಬಂದು ಹೋಗುತ್ತಿದ್ದರು. ಇಲ್ಲಿನ ಚರಿತ್ರೆ ೧೯೭೦ರ ದಶಕದಲ್ಲಿ ಬದಲಾಯಿಸಿತೆಂದು ಹೇಳುತ್ತಾರೆ. ಯುರೋಪಿನಲ್ಲಿ ಯಾವಾಗ ಹಿಪ್ಪಿ ಸಂಸ್ಕೃತಿ ಜನಿಸಿತೋ ಅದು ಹತ್ತಿರದ ಬ್ರಿಟನ್ನಿಗೆ, ಪಕ್ಕದ ಅಮೆರಿಕಕ್ಕೆ ಮತ್ತು ಬಲು ದೂರದ ಆಸ್ಟ್ರೇಲಿಯಾಗೆ ಹರಡಿದ ಕಥೆಗಳು ಇಲ್ಲಿ ಯಥೇಚ್ಛವಾಗಿವೆ.
ಡಾ.ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ವರ್ಷಕ್ಕೊಮ್ಮೆ ಮಾತ್ರ ಬರುವ ಈ ದೀರ್ಘಾವಧಿ ರಜೆ ಕ್ರಿಸ್ಮಸ್ ಹಬ್ಬಕ್ಕೆಂದು ಡಿಸೆಂಬರ್ ಕೊನೆಯ ವಾರದಿಂದ ಆರಂಭವಾಗುತ್ತದೆ. ತುರ್ತುಸೇವೆಗಳು, ಅಂಗಡಿ, ವ್ಯಾಪಾರ, ವಹಿವಾಟು ಮಳಿಗೆಗಳನ್ನು ಹೊರತುಪಡಿಸಿ ಬೇರೆಲ್ಲವೂ ವರ್ಷದ ಕೊನೆಯ ಈ ಬೇಸಿಗೆ ರಜೆಯ ಮಜವನ್ನು ಆನಂದಿಸಲು ಬಾಗಿಲು ಹಾಕಿಕೊಂಡು ಹೊರಡುತ್ತವೆ. ವರ್ಷವಿಡೀ ಅನುಭವಿಸುವ ಯಾಂತ್ರಿಕ ಬದುಕಿನ ಚಿನ್ಹೆಗಳಾದ ಕೆಲಸದ ಒತ್ತಡ, ಸಿಡುಕು, ಬೆಳಗಿನಿಂದ ಸಂಜೆಯವರೆಗೂ ಧರಿಸಿದ್ದ ಮುಖವಾಡಗಳು ಮಾಯವಾಗುತ್ತವೆ. ಪ್ರತಿದಿನದ ಬ್ರೆಡ್ ಅಂಡ್ ಬಟರ್ ಸಂಪಾದಿಸಲು ಸದಾ ದುಡಿಯುವ ಜನ ಈ ರಜೆಯ ಅವಧಿಯಲ್ಲಿ ಜಗದ ಎಲ್ಲಾ ದುಃಖಗಳನ್ನು ಮರೆತು ಆನಂದಿಸುವ ಪ್ರತಿಕ್ಷಣವನ್ನೂ ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾರೆ.

ಹೋಟೆಲ್ಲು, ಮೋಟೆಲ್ಲು, Inn, pub, ಬೇಕರಿ, ಕೆಫೆ, ರೆಸ್ಟಾರಂಟ್ ಗಳಿಗೆ ಸುಗ್ಗಿಯೋ ಸುಗ್ಗಿ. ಜನರ ನಗು, ಕೇಕೆ, ಪ್ರೀತಿಪ್ರೇಮ, ಕೂಗಾಟ, ಜಗಳ ಆಕಾಶಕ್ಕೇರಿ ಕಿವಿಗೆ, ಕಣ್ಣಿಗೆ ಸುಸ್ತಾಗುತ್ತದೆ. ಇದೆಲ್ಲದರ ನಡುವೆ ಜೀವನೋತ್ಸಾಹ ಧಾರಾಳವಾಗಿ ವಿಜೃಂಭಿಸುತ್ತದೆ. ಎಲ್ಲರ ಮನಃಸ್ಥಿತಿ ‘let loose’ ಎಂಬಂತಾಗಿ ಹೊಸವರ್ಷದ ಆಗಮನಕ್ಕಾಗಿ ಅದೇನೋ ಒಂದು ಹೊಸ ಆಶೆ ಮೊಳಕೆಯೊಡೆಯುತ್ತದೆ. ಹೊಸದಾಗಿ ಹುಟ್ಟುವ ವರ್ಷದಲ್ಲಿ ಎಲ್ಲವೂ ಸರಿಹೋಗುತ್ತದೆ, ತಮ್ಮಾಸೆಗಳೆಲ್ಲ ಈಡೇರುತ್ತವೆ ಎಂಬ ಯಾವುದೋ ನಶೆಯ ಕನಸಿನಲ್ಲಿ ಜನ ಅದ್ದಿಕೊಂಡು, ಮುಳುಗಿ ತೇಲಾಡುತ್ತಾರೆ.

ನಾವು ಕೂಡ ರಜೆಯ ನಶ್ಯವನ್ನು ಮೂಗಿನೊಳಗೇರಿಸಿಕೊಂಡು ಬ್ರಿಸ್ಬನ್ ಬಿಸಿಲನ್ನು ಹಿಂದಿಟ್ಟು ಸ್ವಲ್ಪ ತಣ್ಣಗಿರುವ ಕಡೆ ಹೋಗೋಣ ಎಂದಪೇಕ್ಷಿಸಿ ನದಿಯೊಂದಕ್ಕೆ ಅಂಟಿಕೊಂಡಿದ್ದ ಕ್ಯಾಂಪ್ ಸೈಟನ್ನು ಮುಂಗಡ ಬುಕ್ ಮಾಡಿದ್ದರೂ ಆನಂತರ ನವೆಂಬರಿನಲ್ಲಿ ಅದು ಪೊದೆಬೆಂಕಿಗೆ ಆಹುತಿಯಾಗಿತ್ತು. ನದಿಯೇ ಬೇಕು ಎನ್ನುತ್ತಾ ಇನ್ನೊಂದು ಕಡೆ ವಿಚಾರಿಸಿದರೆ ಅಲ್ಲೂ ಕೂಡ ಪೊದೆಬೆಂಕಿ ಹಾವಳಿಯಿತ್ತು. ಇದೆಲ್ಲಾ ಬದಲಾವಣೆಗಳು ನವೆಂಬರ್ ತಿಂಗಳಿನ ಕೊನೆಯಲ್ಲಾದ್ದರಿಂದ ನಮಗೆ ಪರಿಚಯವಿದ್ದ ಬೇರೆ ಕಡೆ ವಿಚಾರಿಸಿದರೆ ಯಾವ ಕ್ಯಾಂಪ್ ಸೈಟಿನಲ್ಲೂ ಗುಲಗಂಜಿಯಷ್ಟು ಕೂಡ ಎಡೆಯಿರಲಿಲ್ಲ. ಕೆಲವು ಕಡೆಯಂತೂ ‘ನೀವು ನ್ಯೂ ಸೌತ್ ವೇಲ್ಸ್ ಕಡೆ ಬರಲೇಬೇಡಿ, ಸರ್ಕಾರ ಇಡೀ ರಾಜ್ಯವನ್ನು ಪೊದೆಬೆಂಕಿ ಅಪಾಯ ಪ್ರದೇಶವೆಂದು ಘೋಷಿಸುವ ಸಾಧ್ಯತೆಯಿದೆ. ಈ ಕಡೆ ಬಂದು, ಸಿಕ್ಕಿಹಾಕಿಕೊಂಡು ಅಪಾಯಕ್ಕೊಳಗಾಗುವುದು ಬೇಡ,’ ಎಂದುಬಿಟ್ಟರು.

ಕಡೆಗೂ ಇದೊಂದು ಸಿಕ್ಕಿಬಿಟ್ಟಿತು. ನಮಗೆ ಗೊತ್ತೇ ಇದ್ದಿಲ್ಲದ, ಕೇಳೇ ಇದ್ದಿರದ, ಊಹಿಸದಿದ್ದ ಒಂದು ವಿಚಿತ್ರವಾದ ಕ್ಯಾಂಪ್ ಸೈಟ್. ವೆಬ್ ಸೈಟ್ ನೋಡಿದರೆ ಅದು ಇದ್ದದ್ದು ಹಸಿರು ತುಂಬಿ ತುಳುಕುತ್ತಿದ್ದ ಪ್ರದೇಶದಲ್ಲಿ. ನೂರಾರು ಎಕರೆ ಪ್ರದೇಶ, ಗುಡ್ಡಗಳು, ಮನುಷ್ಯ-ನಿರ್ಮಿತ ಕೆರೆಗಳು, ನವಿಲುಗಳು ಕೂಡ ಇವೆ. ಟೆಂಟ್ ಹೂಡುವ ಜಾಗ ಸಮತಟ್ಟಾಗಿದ್ದು, ಅಕ್ಕಪಕ್ಕ ಮರಗಳಿರುವುದರಿಂದ ಅಷ್ಟೊಂದು ಬಿಸಿಲಿನ ಝಳ ತಟ್ಟುವುದಿಲ್ಲ. ದೊಡ್ಡದಾದ ಕ್ಯಾಂಪ್ ಅಡುಗೆಮನೆ ಇದೆ, ಎಂದು ಹೇಳಿಕೊಂಡಿದ್ದರು. ಭಾರಿ ಕುತೂಹಲವುಂಟಾಗಿತ್ತು.

ಅಲ್ಲಿಂದ ಪೂರ್ವಕ್ಕೆ ಅರ್ಧ ಗಂಟೆ ಕಾರುಪಯಣದಲ್ಲಿ ಸಿಕ್ಕುವ ನದಿ ಮತ್ತು ಸಮುದ್ರ. ಈ ಕಡೆ ಪಶ್ಚಿಮದಲ್ಲಿ ಮಳೆಕಾನನ. ಹೆಚ್ಚಿನ ತೊರೆಗಳಲ್ಲಿ ನೀರಿಲ್ಲದಿದ್ದರೂ ಸ್ಥಳೀಯರಿಗೆ ಮಾತ್ರ ಗೊತ್ತಿದ್ದ ಕೆಲವು ನೈಸರ್ಗಿಕ ನೀರಿನ ಹೊಂಡಗಳು. ಸಾಲುಸಾಲು ಬೆಟ್ಟಗಳೇ ತುಂಬಿರುವ ಪ್ರದೇಶ. ಮುನ್ನೂರ ಅರವತ್ತು ಡಿಗ್ರಿ ಕೋನದಲ್ಲಿ ಕತ್ತು ತಿರುಗಿಸಿ ನೋಡಿದ ಕಡೆಯೆಲ್ಲ ಕಣ್ಣಿಗೆ ರಾಚುವ ಹಸಿರು. ಅಲ್ಲಲ್ಲಿ ಸಿಗುವ ವ್ಯೂ ಪಾಯಿಂಟಿನಲ್ಲಿ ನಿಂತು ಕಣ್ಣು ಕಿರಿದಾಗಿಸಿದರೆ ಸಮುದ್ರದ ನೀಲಿ ಸೀರೆ ಹರಡಿತ್ತು. ಇದುವೇ Northern Rivers.

ಇದು ಭೂಲೋಕದ ಸ್ವರ್ಗ ಎಂದು ಹಲವರು ಹೇಳುತ್ತಾರೆ. ಬಹುಹಿಂದೆ ಅಗ್ನಿಪರ್ವತಗಳು ಇಲ್ಲಿದ್ದು, ಅವು ಸುರಿಸಿದ ಲಾವಾದಿಂದ ನಮಗೆ ಈಗ ಕಂಡುಬರುವ ಸ್ವರ್ಗವೆಂಬ ಬೆಟ್ಟಕಣಿವೆಗಳ ನಿರ್ಮಾಣವಾಗಿವೆ, ಅನ್ನುತ್ತಾರೆ. ಇಲ್ಲಿನ ಚರಿತ್ರೆ ಹೇಳುವಂತೆ ಈ ಇಡೀ ಪ್ರದೇಶ ಒಂದೊಮ್ಮೆ ಆಸ್ಟ್ರೇಲಿಯನ್ ಮೂಲನಿವಾಸಿಗಳ ಮನೆಯಾಗಿದ್ದು, ಇಲ್ಲಿನ ಅನೇಕ ಸ್ಥಳಗಳು ಈಗಲೂ ಅಬರಿಜಿನಲ್ ಶಮನ ಭೂಮಿ (aboriginal healing lands). ಕೆಲ ಬೆಟ್ಟಗಳು ಗಂಡಸರ ಶಮನ ಸ್ಥಳಗಳು, ಕೆಲವು ಹೆಂಗಸರಿಗೆ ಮಾತ್ರ ಮೀಸಲಿರುವ ಶಮನ ಬೆಟ್ಟಗಳು ಎಂದು ಸ್ಥಳೀಯರು ಹೇಳುತ್ತಾರೆ. ಅಲ್ಲಲ್ಲಿ ಹೆರಿಗೆ ನೀರಿನ ಹೊಂಡಗಳಿವೆಯಂತೆ. ಬ್ರಿಸ್ಬನ್ ನಗರದಿಂದ ನಾಲ್ಕು ಗಂಟೆ ಕಾರುಪಯಣ ಇಷ್ಟೆಲ್ಲಾ ನೈಸರ್ಗಿಕ ಸಂಪತ್ತನ್ನು, ಚರಿತ್ರೆಯನ್ನು, ರಹಸ್ಯಗಳನ್ನು ತೆರೆದಿಡುತ್ತದೆ. ಅದುವೇ ಆಸ್ಟ್ರೇಲಿಯಾದ ಗ್ರೇಟ್ ಔಟ್ ಡೋರ್ಸ್ ಅನನ್ಯತೆ.

Northern Rivers ಪ್ರದೇಶ ನಮಗೆ ಸಾಕಷ್ಟು ಪರಿಚಯವಿದ್ದದ್ದೇ. ಹಾಗಾಗಿ ಪ್ರವಾಸಿಗರಿಗೆ ಬೇಕಿರುವ ಎಲ್ಲವೂ ಇರುವ ಈ ಪ್ರದೇಶದಲ್ಲಿ ಡಿಸೆಂಬರ್ ಬಂದರೂ ಅದ್ಯಾಕೆ, ಅದು ಹೇಗೆ ಈ ಕ್ಯಾಂಪ್ ಸೈಟಿನಲ್ಲಿ ಇನ್ನೂ ಸ್ಥಳ ಲಭ್ಯವಿದೆಯಲ್ಲಾ ಎಂದು ನಮಗೆ ಗುಮಾನಿ ಹುಟ್ಟಿತ್ತು. ತಲೆಯಲ್ಲೊಂದು ಅನುಮಾನದ ಹುಳವನ್ನು ಬಿಟ್ಟುಕೊಂಡು ನಾವು ಅಲ್ಲಿಗೆ ಹೋದೆವು. ನವಿಲುಗಳಿಲ್ಲದಿದ್ದರೂ, ಹರೆಯದವರಿಗಾಗಿ ಹೇಳಿಮಾಡಿಸಿದ ಈ ಕ್ಯಾಂಪ್ ಸೈಟಿಗೆ ಅದರದೇ ಆದ ಕೆಲ ವಿಶೇಷತೆಗಳಿವೆ, ಗುಟ್ಟುಗಳಿವೆ, ಗೂಢತೆಯಿದೆ. ಕೆಲವದರ ಗುಟ್ಟುಗೋಪ್ಯಗಳನ್ನು ಬಾಯಿಬಿಟ್ಟು ಡಂಗುರ ಹೊಡೆಯುತ್ತಾ ಹೇಳಲಾಗುವುದಿಲ್ಲ. ಅವನ್ನು ಅನುಭವಿಸಿಯೇ ತಿಳಿಯಬೇಕು.

ಹೋದ ಮರುದಿನವೇ ನಾವು ಕೇಳಿದ ವಿಷಯವೆಂದರೆ ‘ಈ ಕ್ಯಾಂಪ್ ಸೈಟ್ ಮಕ್ಕಳಿರುವ ಸಂಸಾರಿಗರಿಗೆ ತಕ್ಕದ್ದಲ್ಲ. ವಯಸ್ಸಿಗೆ ಬಂದ ಮಕ್ಕಳಿದ್ದರೆ ಸ್ವಲ್ಪ ಹುಷಾರು. ಮಕ್ಕಳಿದ್ದ ಸಂಸಾರಗಳು ಬಂದು ಇಲ್ಲಿರಲಾರದೆ ಕಾಲ್ತೆಗೆದಿದ್ದಾರೆ. ನಿಮ್ಮ ಸಾಮಾನು ಸರಂಜಾಮುಗಳನ್ನು ಭದ್ರಪಡಿಸಿಕೊಳ್ಳಿ. ಏನೋಪ್ಪಾ, ನಿಮ್ಮಿಷ್ಟ, ನಿಮ್ಮನುಕೂಲ ನೋಡಿಕೊಳ್ಳಿ.’ ಬಂದಿಳಿದ ಮೊದಲ ದಿನವೇ ಕ್ಯಾಂಪ್ ಸೈಟಿನ ಹಸಿರನ್ನು ಕಂಡು ಮನಸೋತಿದ್ದ ನಾವು ಒಂದು ಕೈ ನೋಡಿಯೇ ಬಿಡೋಣ ಎನ್ನುವ ಭಂಡತನದ ಸೋಗನ್ನು ಧರಿಸಿದೆವು. ಸುತ್ತಮುತ್ತ ನಡೆಯುತ್ತಿದ್ದ ವ್ಯವಹಾರಗಳು ಅದೇನೇನಿದ್ದವೋ ಪರಶಕ್ತಿಗೆ ಗೊತ್ತು. ನಾವಂತೂ ದಿನಗಟ್ಟಲೆ ಅಲ್ಲಿದ್ದು, ಸುತ್ತಮುತ್ತ ಓಡಾಡಿ ಬೆಟ್ಟ, ಕಾಡು, ನದಿ, ಸಮುದ್ರ ಎಲ್ಲವನ್ನೂ ಯಥೇಚ್ಛವಾಗಿ ಉಸಿರಾಡಿಕೊಂಡು ಬಂದೆವು.

ನಾವು ಕೂಡ ರಜೆಯ ನಶ್ಯವನ್ನು ಮೂಗಿನೊಳಗೇರಿಸಿಕೊಂಡು ಬ್ರಿಸ್ಬನ್ ಬಿಸಿಲನ್ನು ಹಿಂದಿಟ್ಟು ಸ್ವಲ್ಪ ತಣ್ಣಗಿರುವ ಕಡೆ ಹೋಗೋಣ ಎಂದಪೇಕ್ಷಿಸಿ ನದಿಯೊಂದಕ್ಕೆ ಅಂಟಿಕೊಂಡಿದ್ದ ಕ್ಯಾಂಪ್ ಸೈಟನ್ನು ಮುಂಗಡ ಬುಕ್ ಮಾಡಿದ್ದರೂ ಆನಂತರ ನವೆಂಬರಿನಲ್ಲಿ ಅದು ಪೊದೆಬೆಂಕಿಗೆ ಆಹುತಿಯಾಗಿತ್ತು. ನದಿಯೇ ಬೇಕು ಎನ್ನುತ್ತಾ ಇನ್ನೊಂದು ಕಡೆ ವಿಚಾರಿಸಿದರೆ ಅಲ್ಲೂ ಕೂಡ ಪೊದೆಬೆಂಕಿ ಹಾವಳಿಯಿತ್ತು.

ಕಾರು ಬ್ರಿಸ್ಬನ್ ಬಿಟ್ಟು ಪೆಸಿಫಿಕ್ ಹೆದ್ದಾರಿಗೆ ಬಿದ್ದು ಭೂಪಟದಲ್ಲಿ ಕೆಳಗಿಳಿಯುತ್ತಾ ಬಂದು ಗೋಲ್ಡ್ ಕೋಸ್ಟ್ ಕಾರಿಡಾರ್ ಸವರಿ ಮುಂದುವರೆದು, Tweed ನದಿಯನ್ನು ದಾಟಿದರೆ ಭೌಗೋಳಿಕ ಚಹರೆಗಳು ಬದಲಾಯಿಸುತ್ತವೆ. ಆಗಷ್ಟೇ ನ್ಯೂ ಸೌತ್ ವೇಲ್ಸ್ ರಾಜ್ಯ ಪ್ರವೇಶವಾಗಿರುತ್ತದೆ. ನಮ್ಮ ಬಲಕ್ಕೆ ಸಿಕ್ಕುವ ಹಸಿರು ತುಂಬಿದ ಪ್ರದೇಶವನ್ನು Northern Rivers ಎಂದು ಕರೆಯುತ್ತಾರೆ. ಕಣಿವೆಯ ನೆತ್ತಿಯಲ್ಲೇ ಇದ್ದರೆ ನಮಗೆ Tweed ಮತ್ತು Brunswick ನದಿಗಳು ಹತ್ತಿರವಾಗುತ್ತವೆ. ಸಮುದ್ರದ ಅಂಚಿನಲ್ಲಿರುವ ಈ ಕಣಿವೆ ಪ್ರದೇಶಗಳನ್ನು ಬಿಟ್ಟು ಒಳನಾಡಿಗೆ ಹೋದರೆ ಕ್ಲಾರೆನ್ಸ್ ನದಿ (Clarence river) ಸಿಗುತ್ತದೆ. ಟ್ವೀಡ್ ಮತ್ತು ಕ್ಲಾರೆನ್ಸ್ ನದಿಗಳು ಬಹು ಸುಂದರ ದೊಡ್ಡ ನದಿಗಳು. ಬ್ರುನ್ಸ್ವಿಕ್ ನದಿ ಸ್ವಲ್ಪ ಚಿಕ್ಕದಾದರೂ ಕಡು ಬೇಸಗೆಯಲ್ಲೂ ಬತ್ತುವುದಿಲ್ಲ. ಹಾಗಾಗಿ ಅದೂ ಕೂಡ ದೊಡ್ಡ ನದಿಯೆಂಬ ಲೆಕ್ಕಕ್ಕೆ ಸಿಗುತ್ತದೆ. ಬ್ರುನ್ಸ್ವಿಕ್ ಮತ್ತು ಟ್ವೀಡ್ ನದಿಗಳು ಕೋರಲ್ ಸಮುದ್ರದೊಂದಿಗೆ (Pacific) ಮಿಲನವಾಗುವ ಬಿಂದುಗಳು ಜನಪ್ರಿಯ. ಸಮುದ್ರದ ಗುಂಟ ಚಿಕ್ಕಪುಟ್ಟ, ದೊಡ್ಡ ಪಟ್ಟಣಗಳು, ಪ್ರವಾಸಿ ಸ್ಥಳಗಳು ಮತ್ತು ಬಹು ಸುಂದರ ಬೀಚ್ ಗಳು. ಜಗತ್ಪ್ರಸಿದ್ಧಿ ಪಡೆದ ಬೈರನ್ ಬೇ (Byron Bay) ಇಲ್ಲಿಯೇ ಇದ್ದು ಬೆಟ್ಟ ಹತ್ತಿ ಮೇಲಿರುವ ಲೈಟ್ ಹೌಸ್ ತಲುಪಿದರೆ ನಾವು ಆಸ್ಟ್ರೇಲಿಯಾ ದೇಶದ ಪೂರ್ವದಿಕ್ಕಿನ ಕಟ್ಟಕಡೆ ತುದಿಯಲ್ಲಿ ನಿಂತಿರುತ್ತೀವಿ.

ಅಲ್ಲಿಂದ ಸಮುದ್ರ ತಟಕ್ಕೆ ಹೋದರೆ ಕಾಣುವುದು ತರಾವರಿ ಬೀಚು ಮತ್ತು ಈಜುಡುಗೆಗಳನ್ನು ಧರಿಸಿ ಓಡಾಡುತ್ತಿರುವ ಮಂದಿ. ಬೂಗೀ ಬೋರ್ಡ್, ನಿಂತು ನಡೆಸುವ paddle ಬೋರ್ಡ್, ಕೂತು ನಡೆಸುವ ಕಯಾಕ್ ವಿಧಗಳು, ಸರ್ಫ್ ಬೋರ್ಡ್, ರಾಫ್ಟ್, ಸ್ಪೀಡ್ ಬೋಟ್, ಸಾದಾ ಬೋಟ್, sail ಬೋಟ್, ಡಿಂಗಿ, ಮೀನು ಗಾಳ, ಸ್ನೋರ್ಕೆಲಿಂಗ್, ಡೈವಿಂಗ್, ಒಂದೇ ಎರಡೇ… ತಡೆಯಿಲ್ಲದ ಆಟಗಳು, ಮನರಂಜನೆ. ನೀರಿನಂಚಿನಲ್ಲೇ ನಿಂತು ಆಡುವ ಥ್ರೋ ಬಾಲ್, ನೀರಿನಾಚೆ ಮರಳಿನ ಮೇಲೆ ಕ್ರಿಕೆಟಿಗರು, ಫುಟ್ ಬಾಲ್ ಪಟುಗಳು, ಜಾಗಿಂಗ್ ಮಾಡುವವರು. ಸಾಲದು ಎಂಬಂತೆ ಅಲ್ಲಲ್ಲಿ ಯೋಗಾಸನಗಳನ್ನು ಅಭ್ಯಸಿಸುವವರು, ಪದ್ಮಾಸನ ಹಾಕಿಕೊಂಡು ಮೆಡಿಟೇಶನ್ ಮಾಡುವವರು. ಇದ್ಯಾವುದೂ ಬೇಡ ಅಂದುಕೊಂಡು ಆಲಸಿಗರಾಗಿ ಬೀಚ್ ಟವಲ್ಲಿನ ಮೇಲೆ ಮುಖವಡಿ ಮಾಡಿ ಪವಡಿಸಿರುವ ಯುವಕ-ಯುವತಿಯರು. ಅವರನ್ನು ನೋಡುತ್ತಾ ಹೊಟ್ಟೆಯುರಿ ಪಟ್ಟುಕೊಳ್ಳುತ್ತಾ ತಮ್ಮ ಪುಟಾಣಿಗಳ ಜೊತೆ ಕೈಜೋಡಿಸಿ ಮರಳು ಅರಮನೆಗಳನ್ನು ನಿರ್ಮಿಸುವ ಅಪ್ಪಅಮ್ಮಂದಿರು.

ನೂರಾರು ಕಿಲೋಮೀಟರು ಉದ್ದಗಲ ಹರಡಿರುವ ಈ ಬೆಟ್ಟಕಣಿವೆ ಪ್ರದೇಶದಲ್ಲಿ ಹಲವಾರು ನ್ಯಾಷನಲ್ ಪಾರ್ಕುಗಳಿವೆ. ಅವುಗಳಲ್ಲಿ ಹುಟ್ಟಿ ಮುಂದೆ ದೊಡ್ಡದಾಗುವ ಅನೇಕಾನೇಕ ತೊರೆಗಳಿವೆ. ಅದೆಷ್ಟೋ ಕಚ್ಚಾ ಒಳರಸ್ತೆಗಳಿಗೆ ಆ ತೊರೆಗಳ ಹೆಸರಿಟ್ಟು ಅವಿಂದಲೇ ಅಲ್ಲಿನ ಪ್ರದೇಶವನ್ನು, ಸ್ಥಳೀಯತೆಯನ್ನು ಗುರುತಿಸುತ್ತಾರೆ. ಇಡೀ ಪ್ರದೇಶದಲ್ಲಿ ಓಡಾಡುವುದಕ್ಕೆ, ಎಲ್ಲ ಸ್ಥಳ ಪುರಾಣಗಳನ್ನ ತಿಳಿದುಕೊಳ್ಳುವುದಕ್ಕೆ ವರ್ಷಗಳೇ ಬೇಕಾಗುತ್ತವೆ. ನಾವು ಪ್ರತಿಬಾರಿ ಬಂದಾಗಲೂ ಹೊಸವಿಷಯಗಳನ್ನ ಕಲೆ ಹಾಕಿದ ಹೊಸಹೊಸ ಕಥೆಗಳನ್ನ ಕೇಳುತ್ತಾ ಬಂದಿದ್ದೀವಿ.

ಸಮುದ್ರತಟ ಮತ್ತು ಕಣಿವೆ ಪರಸ್ಪರ ಮುಖವನ್ನ ದೂರಮಾಡಿಕೊಂಡು ಒಂದು ಜೋಗಿಯಾಗಿ ಇನ್ನೊಂದು ಯೋಗಿಯಾಗಿರುವಂತೆ ಅನಿಸುತ್ತದೆ. ಐವತ್ತು ವರ್ಷಗಳ ಹಿಂದೆ ಸ್ಥಳೀಯ ಅಬರಿಜಿನಲ್ ಸಮುದಾಯಗಳು ಜೀವನ ಮಾಡುತ್ತಿದ್ದ ಮತ್ತು ಅಲ್ಲಲ್ಲಿ ಹರಡಿದ್ದ ನೂರಾರು ಎಕರೆ ಫಾರ್ಮ್ ಗಳನ್ನು ಬಿಟ್ಟರೆ ಹೊರಗಿನವರಿಗೆ ಇಲ್ಲಿನ ಬೆಟ್ಟಕಣಿವೆ ಪ್ರದೇಶದ ಪರಿಚಯ ಅಷ್ಟೊಂದಿರಲಿಲ್ಲವಂತೆ. ಜನ ಬೀಚುಗಳಿಗೆ ಬಂದು ಹೋಗುತ್ತಿದ್ದರು. ಇಲ್ಲಿನ ಚರಿತ್ರೆ ೧೯೭೦ರ ದಶಕದಲ್ಲಿ ಬದಲಾಯಿಸಿತೆಂದು ಹೇಳುತ್ತಾರೆ. ಯುರೋಪಿನಲ್ಲಿ ಯಾವಾಗ ಹಿಪ್ಪಿ ಸಂಸ್ಕೃತಿ ಜನಿಸಿತೋ ಅದು ಹತ್ತಿರದ ಬ್ರಿಟನ್ನಿಗೆ, ಪಕ್ಕದ ಅಮೆರಿಕಕ್ಕೆ ಮತ್ತು ಬಲು ದೂರದ ಆಸ್ಟ್ರೇಲಿಯಾಗೆ ಹರಡಿದ ಕಥೆಗಳು ಇಲ್ಲಿ ಯಥೇಚ್ಛವಾಗಿವೆ. ಅಂತಹ ಹಿಪ್ಪಿ ಸಂಸ್ಕೃತಿ ಈ ಕಣಿವೆಗಳಲ್ಲಿ ತಳವೂರಿ ಮುಂದಿನ ಮೂರು ದಶಕಗಳ ಕಾಲ ಕುಪ್ರಸಿದ್ಧಿಯಾಗಿತ್ತು.

ಹಿಪ್ಪಿ ಸಂಸ್ಕೃತಿಯ ಅಭ್ಯಾಸಗಳನ್ನು ಅಳವಡಿಸಿಕೊಂಡ ಸದಸ್ಯರು ಸಮಾಜದಿಂದ ಬೇರ್ಪಟ್ಟಿದ್ದರು. ಇಲ್ಲಿ ನೆಲೆಸಿದ್ದು ಅವರಿಗೆ ಅನುಕೂಲವೇ ಆಗಿತ್ತು. ಕಣಿವೆಗಳಲ್ಲಿ ಸಮೃದ್ಧ ಆಹಾರವನ್ನು ಬೆಳೆಸಬಹುದಿತ್ತು. ಸುಲಭವಾಗಿ ಕಳೆದುಹೋಗಬಹುದಾದ ಬೆಟ್ಟಗಳ ಹಸಿರಲ್ಲಿ ಕೂತು, ನಿಂತು ಸಮುದ್ರವನ್ನು ನೋಡುತ್ತಾ, ನದಿಯಲ್ಲಿ ಮೀಯುತ್ತಾ ತಮ್ಮ ಸಂಗೀತಕ್ಕೆ, ಧ್ಯಾನಕ್ಕೆ ಅನುವು ಮಾಡಿಕೊಂಡಿದ್ದರು. ತಮ್ಮ ಪಾಶ್ಚಿಮಾತ್ಯ ಸಮಾಜದ ಕಟ್ಟುಪಾಡುಗಳನ್ನು, ರೀತಿರಿವಾಜುಗಳನ್ನು ತಿರಸ್ಕರಿಸಿ, ಭಾರತದ ಯೋಗವನ್ನು, ಕೃಷ್ಣನನ್ನು, ಸಾಧುಸಂತರನ್ನು ಗುರುಗಳನ್ನಾಗಿ ಸ್ವೀಕರಿಸಿ ಭಾರತದಿಂದ ತರುತ್ತಿದ್ದ ಹತ್ತಿ ಬಟ್ಟೆ ಧರಿಸಿ ಯೋಗಿಗಳಾಗುತ್ತಿದ್ದರು. ಹೊರಗಿನ ಸಮಾಜ ಇವರನ್ನು ಕಂಡರೆ ಹೌಹಾರುತ್ತಿತ್ತು. ಇಲ್ಲಿನ ಚಿಕ್ಕಚಿಕ್ಕ Nimbin, Uki, Kyogle, Tyalgum ಮುಂತಾದ ಹಳ್ಳಿಗಳು ಕುಖ್ಯಾತವಾದವು. ಟ್ವೀಡ್ ಹೆಡ್ಸ್ ಪಟ್ಟಣದಿಂದ ಹಿಡಿದು ಕೆಳಗಿನ ಲಿಸ್ಮೋರ್ ಪಟ್ಟಣದ ತನಕ ಈ ಖ್ಯಾತಿ ಹರಡಿತ್ತು.

ಸಮಾಜದ ಕುರೂಪವೇನೋ ಎಂಬಂತಿದ್ದ ಬೆಟ್ಟಕಣಿವೆ, ನದಿಸಮುದ್ರದ ಈ ಕಪ್ಪು ಕಥಾನಕದಲ್ಲಿ ಬದಲಾವಣೆ ಕಾಣಿಸಿಕೊಂಡದ್ದು ೨೦೦೦ ರ ಆಸುಪಾಸಿನಲ್ಲಿ. ಅಲ್ಲಿಯವರೆಗೂ ಸುದ್ದಿಯಾಗದೆ ತನ್ನ ಪಾಡಿಗೆ ತಾನಿದ್ದ ಸಹಜ ಕೃಷಿ, ಸಾವಯವ ಆಹಾರ, biodynamic ಕೃಷಿ ಮುಂತಾದ ಪದಗಳು ಇದ್ದಕ್ಕಿದ್ದಂತೆ ಮೈಗೆ ರಂಗೇರಿಸಿಕೊಂಡು ಹೊಳೆಯುತ್ತಾ ಆಕರ್ಷಕವಾಗಿಬಿಟ್ಟವು. ಕಣಿವೆಯ ಯೋಗಿಗಳು ತಮ್ಮ ಯೋಗ, ಧ್ಯಾನ, ಹತ್ತಿ ಬಟ್ಟೆ, ಭಾರತೀಯ ಉಡುಪು, ಕೃಷ್ಣ ಆರಾಧನೆ, ಸಂಗೀತದ ಜೊತೆಗೆ ಸಾವಯವ ಆಹಾರ ಪದ್ಧತಿ ಮತ್ತು ಕೃಷಿಯನ್ನು ಸೇರಿಸಿಕೊಂಡು ಕೆಟ್ಟ ಹೆಸರನ್ನು ಹಿಂದಕ್ಕೆ ಬಿಟ್ಟು ಒಳ್ಳೆಯ ಹೆಸರನ್ನು ಪಡೆದರು. ರಾಸಾಯನಿಕಗಳಿಲ್ಲದೆ ಬೆಳೆಯುವ ಸಾವಯವ ಆಹಾರ ತಮ್ಮೆಲ್ಲರ ಆರೋಗ್ಯಕ್ಕೆ ಅದೆಂಥ ಮಾಂತ್ರಿಕಮದ್ದು ಎಂದು ಪ್ರಚಾರವಾಯ್ತು. ಒಳ್ಳೆ ಆರೋಗ್ಯ ಮತ್ತು ಸುದೀರ್ಘ ಆಯಸ್ಸಿನ ಅಮಲು ತುಂಬಿರುವ ಸಮಾಜ ಇದಕ್ಕೆ ಮಾರುಹೋಯಿತು. ಪಾಶ್ಚಿಮಾತ್ಯರ ಕೆಟ್ಟಕನಸು ಕ್ಯಾನ್ಸರ್ ನಂತಹ ಮಾರಕರೋಗಗಳಿಗೆ ಭಾರತೀಯ ಆಯುರ್ವೇದದಲ್ಲಿ ಉತ್ತರವಿದೆ ಎಂದು ಹರ್ಷಿಸಿದರು.

ಅಷ್ಟೆಲ್ಲಾ ಕ್ರಾಂತಿಗಳಾದ ನಂತರ ಈಗಿನ ಕಥೆಯೇನಪ್ಪಾ ಅಂದರೆ ಅದೇ ಸಾವಯವ ಆಹಾರ, ಹತ್ತಿ ಬಟ್ಟೆ, ಭಾರತೀಯ ಸಂಗೀತ, ಯೋಗ, ಆಯುರ್ವೇದ, ಕೃಷ್ಣ ಆರಾಧನೆ, ‘ಮಂತ್ರ ಅಂಡ್ ಮೈಂಡ್ ಫುಲ್ ನೆಸ್’ ಎಂಬ ಹೊಸ ಅಮಲು, ಧ್ಯಾನ, ಪ್ಲಾಸ್ಟಿಕ್ ಇಲ್ಲದ ಜೀವನ, ಲೊ-ಕಾಸ್ಟ್ ಜೀವನ ಶೈಲಿ, ‘ಬನ್ನಿ, ಕನಿಷ್ಠ ಅಗತ್ಯಗಳೊಂದಿಗೆ ಬದುಕುವ ಜೀವನಕ್ರಮವನ್ನು ಅನುಸರಿಸೋಣ’ ಎಂಬುದರ ಪ್ರಚಾರ, ಇವೆಲ್ಲವೂ ಬಹು-ಮಿಲಿಯನ್ ಡಾಲರುಗಳ ವ್ಯಾಪಾರವಾಗಿದೆ. ಹಿಂದೆ ದೊಡ್ಡ ಪ್ರಮಾಣದಲ್ಲಿ ಆಹಾರ ಬೆಳೆ ಬೆಳೆಯುತ್ತಿದ್ದ ಫಾರ್ಮ್ ಗಳು ಕೈಬದಲಾಯಿಸಿ ಈಗ ಪ್ರತಿ ಕೆಲ ಕಿಲೋಮೀಟರ್ ಉದ್ದಗಲಕ್ಕೂ ಯೋಗ, ಮೆಡಿಟೇಶನ್ ಗಳ ಬಹುರೂಪಿ retreatಗಳು ಸಿಗುತ್ತವೆ. ಆರೋಗ್ಯ ಮತ್ತು ಆಯಸ್ಸು ಬಿಲಿಯನ್ ಡಾಲರ್ ಉದ್ಯಮವಾಗಿದೆ. ಇಲ್ಲಿನ ರಿಯಲ್ ಎಸ್ಟೇಟ್ ಬಗ್ಗೆ ಮಿಲಿಯನೇರ್ ಗಳು ಮಾತ್ರ ಮಾತನಾಡಬಲ್ಲರು.

ಇದೆಲ್ಲರದ ಮಧ್ಯೆ ಹಿಂದೊಮ್ಮೆ ಇಲ್ಲೆಲ್ಲ ಬಾಳುತ್ತಿದ್ದ ಅಬರಿಜಿನಲ್ ಜನರ ಗತಿಯೇನಾಯ್ತು ಎನ್ನುವ ಪ್ರಶ್ನೆಗೆ ಇದೇ, ನಾವಿದ್ದ ಕ್ಯಾಂಪ್ ಸೈಟಿನಲ್ಲೇ ಉತ್ತರಗಳ ಸರಣಿ ಉಪಕಥೆಗಳು ಸಿಕ್ಕವು. ಆ ಉಪಕಥೆಗಳಲ್ಲೇ ಅಡಗಿದ್ದ ನಮ್ಮ ಕ್ಯಾಂಪ್ ಸೈಟಿನ ಗುಟ್ಟುಗೋಪ್ಯಗಳ ವಿರಾಟ್ ಸ್ವರೂಪದ ಕಿಂಚಿತ್ ದರ್ಶನವಾಯ್ತು.