ಅಭಾವ ಗೀತೆ

ನಸುಗಂಪು ಹೂ ಕೈಬೆರಳ ತುದಿಯಲ್ಲಿ ಅರಳಿತ್ತು
ಬೆಳಗು ಕಾಣುವ ಮೊದಲೆ ಪಕಳೆಯೆಲ್ಲ ಉದುರಿ ಹೋಯಿತು

ನಡುನೆತ್ತಿ ತಂಪಾಗಿ ಹಿತವಾದ ಧಾರೆ ಸುರಿಯುತ್ತಿತ್ತು
ಮೈಯ ಸೋಕದೆ ಬೆನ್ನಹುರಿಗುಂಟ ಹರಿದು ಹೋಯಿತು

ಕತ್ತಲೆಯಲಿ ಕೃತಿಕಾ ಪುಂಜದಂತೆ
ನಗುವು ಹೊಳೆಯುತ್ತಿತ್ತು
ಮುಖಮಾತ್ರ ಸವರಿ ಕನಸ ಸಂಧಿಸದೆ ಹಾದುಹೋಯಿತು

ಬಿಂಕದ ಬೆಳದಿಂಗಳು ಕನಸುತ್ತ ಸಂಭ್ರಮಿಸಿ ಮಲಗಿತ್ತು
ಘನವಾದ ನಿರ್ಲಕ್ಷ್ಯವು ತಬ್ಬಿ ಮಿಸುಕಾಡದಂತೆ ಹಿಡಿದಿತ್ತು

ಇನಿದಾದ ದನಿ ತನ್ಮಯದಿ ತನ್ನಷ್ಟಕ್ಕೆ ಹಾಡಿಕೊಂಡಿತ್ತು
ತಣ್ಣಗಿನ ಕೈ ಭರವಸೆಯ ಕೊರಳ ಕೊಯ್ಯುತ್ತಿತ್ತು

ಹೊಸತಾಗಿ ಹಸಿರು ಚಿಗಿಯಲು ಹಳೆಕೊಂಬೆ ಕಾಯುತ್ತಿತ್ತು ಮಳೆಭರವಸೆಯ ಕಪ್ಪುಮೋಡ
ಸುಮ್ಮನೆ ದಾಟಿಹೋಯಿತು

ಉದುರಿದ್ದು, ಹರಿದಿದ್ದು, ಹಾದುಹೋಗಿದ್ದು, ಹಿಡಿದಿದ್ದು,
ಕೊಯ್ದಿದ್ದು, ದಾಟಿದ್ದು…..
ಎಲ್ಲವೂ ಕೈ ಮುಗಿದು ನಿಂತಿದ್ದವು
ಅಶಕ್ತ ಪ್ರೇಮದ ಎದುರು

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)