ತಾನು ಕುಳಿತ ಬೆಂಚಿನ ಹಿಂದಿನಿಂದ ಸರಕ್ಕನೆ ಗಾಳಿ ಬೀಸಿದಂತಾಗಿ ಶಬ್ದವೂ ಆಯಿತು. ನೋಡಿದರೆ ನಾಯಿಯೊಂದು ಏನನ್ನೊ ಅಟ್ಟಿಸಿ ಹೋದಂತಾಯಿತು. ತನ್ನ ಪಾಲಿನ ಆಹಾರವನ್ನು ಇನ್ಯಾವುದೋ ನಾಯಿ ತಿನ್ನುತ್ತಿರುವುದನ್ನು ಕಂಡು ಕೆರಳಿದಂತಿತ್ತು. ಅದರ ನೆಗೆತದ ಓಟ ಹಾಗೂ ಗುರ್‍ಗುಟ್ಟುವ ಆಕ್ರಮಣಕಾರಿ ಶಬ್ದ ವಿರೋಧಿ ಬಣದ ನಾಯಿ ಕೇಳಿಸಿಕೊಂಡಿತು. ಪ್ಲಾಟ್ ಫಾರಂ ನಂಬರ್ ನಾಲ್ಕರಲ್ಲಿ ಮಲಗಿದ ಆ ಕುಟುಂಬದ ಹತ್ತಿರ ತಿನ್ನುತಿದ್ದ ರೊಟ್ಟಿಯನ್ನು ಬಾಯಲ್ಲಿ ಕಚ್ಚಿಕೊಂಡು ಓಡಿ ಹೋಯಿತು. ಗುಳೆ ಹೊರಟ ಕುಟುಂಬ ತಂದಿದ್ದ ಬುತ್ತಿಗಂಟು ಅದಾಗಿತ್ತು.
ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ಭಾನುವಾರದ ಕಥೆ ‘ಹೊರೆʼ

 

ಸಂದೀಪನ ಬೆರಳುಗಳು ಲ್ಯಾಪ್‌ಟಾಪಿನ ಕೀಬೋರ್ಡಿನ ಮೇಲೆ ಕುಣಿದಾಡುತ್ತಲೇ ಇದ್ದವು. ಅವುಗಳಲ್ಲಿ ಅನೇಕ ಬಾರಿ ಬೆರಳು ಡಿಲೀಟ್ ಬಟನ್ ಕಡೆಗೊ ಅಥವಾ ಬ್ಯಾಕ್‌ಸ್ಪೇಸ್ ನ ಕಡೆಗೊ ಜೋಲಿ ಹೊಡೆದು ಮತ್ತೆ ಕುಣಿತ ಮುಂದುವರೆಯುತ್ತಲೇ ಇತ್ತು. ಯಾಕೊ ಇವತ್ತಿಗಿಷ್ಟು ಸಾಕು ಎಂದೆನಿಸಿ ಸಂಜೆಯ ತಿರುಗಾಟಕ್ಕೆಂದು ಕ್ಯಾಮೆರಾ ಹೆಗಲಿಗೇರಿಸಿಕೊಂಡು ಹೊರಟ. ಹೆಗಲೇರಿದ ಕ್ಯಾಮೆರಾ ಯಾಕೊ ಇಂದು ಕೈಗೆ ಬರಲೇ ಇಲ್ಲ. ನಡೆಯುತ್ತಲೇ ಇದ್ದ. ಮನಸ್ಸಿನ ಕಳವಳದ ಸಂಗತಿಗಳಿಗೆ ಪರಿಹಾರದ ಹಂಬಲ ತುಡಿಯುತ್ತಲೇ ಇತ್ತು. ನಡೆಯುತ್ತಲೆ ಹೊಟೆಲ್ ಮಯೂರದ ಕಡೆಗೆ ತಿರುಗಿ ಬಂದ. ತಾನು ಮಾಮೂಲಿಯಾಗಿ ಕುಳಿತುಕೊಳ್ಳುವ ಕಾರ್ನರ್ ಸೀಟ್ ಖಾಲಿಯೇ ಇತ್ತು.

‘ಸೀನಣ್ಣ’ ಒಂದ್ ಕಾಫಿ ಪ್ಲೀಸ್..’ ಸಂದೀಪನ ಇವತ್ತಿನ ಆರ್ಡರ್‌ನಲ್ಲಿ ಭಾಷೆ ಕೊಂಚ ಮೃದು ಎಂದೆನಿಸಿತು ಕೌಂಟರಿನ ಸೀನುವಿಗೆ. ಅಷ್ಟೇನೂ ತಲೆಕೆಡಿಸಿಕೊಳ್ಳದವನಾಗಿ ‘ಮಲ್ಲಿ ಅಲ್ಲೊಂದು ಕಾಫಿ ಕೊಡೊ’ ಎಂದು ಮತ್ತೆ ಲೆಕ್ಕದ ಪುಸ್ತಕದ ಕಡೆಗೆ ತನ್ನ ಕನ್ನಡಕವನ್ನು ಸರಿಪಡಿಸಿಕೊಂಡ. ಗಂಭೀರಚಿತ್ತನಾಗಿ ಕುಳಿತ ಸಂದೀಪನೆಡೆಗೆ ಕಾಫಿ ಹಿಡಿದು ಬಂದ ಇಪ್ಪತ್ತೆರಡು ವರ್ಷದ ಹುಡುಗ ಮಲ್ಲಿಕಾರ್ಜುನ, ‘ಅಣೊ ನಂದೊಂದ್ ಪೋಟೊ ಹೊಡಿಯಣೋ.. ನಾನು ನೋಡಾಕೆ ಹೀರೋ ತರ ಕಾಣಲ್ವಾ’ ಅಂತ ಹೆಗಲ ಮೇಲಿದ್ದ ವಸ್ತ್ರ ಕೊಡವಿ ಸ್ಟೈಲಿನಲಿ ಮತ್ತೆ ಹಾಕಿಕೊಂಡ. ಹೀಗೆ ಪೀಡಿಸುವ ಮಲ್ಲಿಗೆ ದಿನವೂ ಒಂದಿಲ್ಲೊಂದು ಬಗೆಯ ನೆಪ ಹೇಳಿ ಸಂದೀಪ ತಪ್ಪಿಸಿಕೊಳ್ಳುತ್ತಿದ್ದ. ಸಂದೀಪನಿಗೆ ಆ ಹುಡುಗನದೊಂದು ಫೋಟೊ ತೆಗೆದುಕೊಡುವುದು ದೊಡ್ಡ ಸಂಗತಿಯೇನಲ್ಲ, ಬದಲಾಗಿ ಅದನ್ನು ಫೋಟೊಗ್ರಫಿಗೆ ಮಾತ್ರ ಬಳಸಬೇಕೆ ವಿನಃ ಹೀಗೆ ಕಂಡ ಕಂಡವರ ಫೋಟೊ ತೆಗೆದುಕೊಡುವುದಕ್ಕಲ್ಲ ಎಂಬುದು ಅವನೇ ತಗಲುಹಾಕಿಕೊಂಡಿದ್ದ ಶಾಸನ. ‘ಕ್ಯಾಮೆರಾ ಸ್ವಲ್ಪ ರಿಪೇರಿ ಇದೆ ಕಣೊ, ಸರಿ ಮಾಡಿಸಿದ ಮೇಲೆ ತೆಗೆದು ಕೊಡ್ತೀನಿ ಆಯ್ತಾ’ ಎಂದು ಕಾಫಿ ಕುಡಿಯುತ್ತಲೇ ಮಲ್ಲಿಯನ್ನು ಸಂಭಾಳಿಸಿದ. ಬಿಲ್ ಕೊಟ್ಟು ಸ್ಟೇಷನ್ ರಸ್ತೆ ಕಡೆಗೆ ಹೊರಟ.

ಇಳಿಹಗಲಿನ ಹೊತ್ತು ಬಹುಶಃ ನಾಲ್ಕು ಗಂಟೆಯ ಆಸುಪಾಸು. ಸ್ಟೇಷನ್ ಬಿಕೋ ಎನ್ನುತ್ತಲಿತ್ತು. ಯಾವ ರೈಲಿನ ಶಬ್ದವಾಗಲಿ ಚಲನವಲನವಾಗಲಿ ಇರಲಿಲ್ಲ. ಖಾಲಿ ಬೆಂಚಿಗೆ ಬೆನ್ನಾನಿಸಿ ಕೂತ. ಊರಿನ ಕೆಲವು ನಿವೃತ್ತ ನೌಕಕರು ಸಂಜೆ ಐದರ ಸುಮಾರು ಹರಟೆಗೆ, ವಾಕ್‌ಗೆ, ಆಪ್ತ ಮಾತುಕತೆಗೆ ಅಲ್ಲಿ ಸೇರುತ್ತಿದ್ದರು. ಇನ್ನೂ ಸಮಯ ನಾಲ್ಕಾಗಿದ್ದರಿಂದ ಒಬ್ಬೊಬ್ಬರೆ ಗೂಡು ತೊರೆದು ಇತ್ತ ಕಡೆ ಹೊರಟಿರಬಹುದೇನೊ?

ನಾಲ್ಕನೇ ಪ್ಲಾಟ್ ಫಾರಂನ ಮರದ ನೆರಳಿನ ಬೆಂಚಿಗೆ ವಾಕಿಂಗ್ ಸ್ಟಿಕ್ ಆನಿಸಿ ಪತ್ರಿಕೆ ಹಿಡಿದು ಒಬ್ಬರು ಕುಳಿತಿದ್ದಾರಷ್ಟೆ. ಅವರಿಗೆ ಸನಿಹದ ಪಕ್ಕದ ಬೆಂಚಿನ ಹತ್ತಿರಕ್ಕೆ ಪಾತ್ರೆ ಪಗಡೆ ಸಾಮಾನುಗಳನ್ನು ಒಟ್ಟಿಕೊಂಡು ಅದಕ್ಕಾತುಕೊಂಡು ಒಂದು ಕುಟುಂಬ ಮಲಗಿದೆ. ಅಲ್ಲಿದ್ದುದು ಬಹುಶಃ ಗಂಡ-ಹೆಂಡತಿ ಮಾತ್ರ. ಸ್ಟೇಷನ್ನಿನ ನೀರವ ಮೌನ ಅವರಿಗೆ ಒಂದಷ್ಟು ಜೋಗುಳ ಹಾಡಿರಬಹುದು ಅಥವಾ ಆಯಾಸವೆ? ಸಂದೀಪ್ ಬ್ಯಾಗಿನಿಂದ ಕ್ಯಾಮೆರಾ ಹೊರಕ್ಕೆ ತೆಗೆದು ಲೆನ್ಸ್ ಜೋಡಿಸಿಕೊಂಡ. ಒಂದಷ್ಟು ಹಳೆಯ ಕ್ಲಿಕ್‌ಗಳನ್ನು ಗಮನಿಸುತ್ತಾ ಬೇಕಾದವುಗಳನ್ನು ಇಟ್ಟುಕೊಳ್ಳುತ್ತಾ ಉಳಿದವನ್ನು ಡಿಲೀಟ್ ಮಾಡುತ್ತಾ ಕುಳಿತ. ತಾನು ಕುಳಿತ ಬೆಂಚಿನ ಹಿಂದಿನಿಂದ ಸರಕ್ಕನೆ ಗಾಳಿ ಬೀಸಿದಂತಾಗಿ ಶಬ್ದವೂ ಆಯಿತು. ನೋಡಿದರೆ ನಾಯಿಯೊಂದು ಏನನ್ನೊ ಅಟ್ಟಿಸಿ ಹೋದಂತಾಯಿತು. ತನ್ನ ಪಾಲಿನ ಆಹಾರವನ್ನು ಇನ್ಯಾವುದೋ ನಾಯಿ ತಿನ್ನುತ್ತಿರುವುದನ್ನು ಕಂಡು ಕೆರಳಿದಂತಿತ್ತು. ಅದರ ನೆಗೆತದ ಓಟ ಹಾಗೂ ಗುರ್‍ಗುಟ್ಟುವ ಆಕ್ರಮಣಕಾರಿ ಶಬ್ದ ವಿರೋಧಿ ಬಣದ ನಾಯಿ ಕೇಳಿಸಿಕೊಂಡಿತು. ಪ್ಲಾಟ್ ಫಾರಂ ನಂಬರ್ ನಾಲ್ಕರಲ್ಲಿ ಮಲಗಿದ ಆ ಕುಟುಂಬದ ಹತ್ತಿರ ತಿನ್ನುತಿದ್ದ ರೊಟ್ಟಿಯನ್ನು ಬಾಯಲ್ಲಿ ಕಚ್ಚಿಕೊಂಡು ಓಡಿ ಹೋಯಿತು. ಗುಳೆ ಹೊರಟ ಕುಟುಂಬ ತಂದಿದ್ದ ಬುತ್ತಿಗಂಟು ಅದಾಗಿತ್ತು. ಚಾಲಾಕಿ ನಾಯಿ ಅದಕ್ಕೆ ನೇರ ಬಾಯಿ ಹಾಕದೆ ಅದನ್ನು ಉಪಾಯದಿಂದ ಕಚ್ಚಿಕೊಂಡು ಸ್ವಲ್ಪ ದೂರ ಕೊಂಡೊಯ್ದು ತಿನ್ನುತ್ತಾ ಕುಳಿತಿತ್ತು.

ಸಂದೀಪನಿಗೆ ಇದೊಂದು ಇಂಟ್ರೆಸ್ಟಿಂಗ್ ಸಂಗತಿ ಎಂದೆನಿಸಿ ಜೂಮ್ ಇನ್ ಮಾಡುತ್ತಾ ಚಕ್ ಚಕ್ ಚಕ್ ಎಂದು ಕ್ಲಿಕ್ಕಿಸುತ್ತಲೆ ಇದ್ದ. ಅಟ್ಟಿಸಿಕೊಂಡು ಓಡಿಹೋದ ನಾಯಿ ತನ್ನ ಪಾಲಿಗೆ ಏನು ಉಳಿದಿದೆ ಎಂಬ ಶೋಧ ಆರಂಭಿಸಲು ಪ್ಲಾಸ್ಟಿಕ್ ಕವರಿನೊಳಗೆ ತಲೆ ತೂರಿಸಿತು. ಸಿಕ್ಕ ರೊಟ್ಟಿಯೊಂದನ್ನು ಕಚ್ಚಿ ಹೊರಟಿತು. ಈ ಸಂಗತಿಯನ್ನು ಕುತೂಹಲದಿಂದ ನೋಡುತ್ತಾ ಕುಳಿತಿದ್ದ ಪಕ್ಕದ ಬೆಂಚಿನ ವ್ಯಕ್ತಿ ನಾಯಿ ತನ್ನತ್ತ ಬರುವುದನ್ನು ಕಂಡು ಪತ್ರಿಕೆಯನ್ನ ಬದಿಗಿಟ್ಟು ತನ್ನ ವಾಕಿಂಗ್ ಸ್ಟಿಕ್ಕಿನಿಂದ ಅದನ್ನು ಬೆದರಿಸಿ ಓಡಿಸಿದ. ಸಂದೀಪ್ ಅಲ್ಲಿನ ಹಲವು ಚಿತ್ರಗಳನ್ನು ಸರಣಿಯಂತೆ ಕಲಾತ್ಮಕವಾಗಿ ಸೆರೆಹಿಡಿಯುತ್ತಲೆ ಇದ್ದ. ಡೊಂಕು ಬಾಲದೊಳಕ್ಕೆ ಸಂಜೆ ಸೂರ್ಯನನ್ನ ಸಿಕ್ಕಿಸಿಕೊಂಡು ರೊಟ್ಟಿ ಕಚ್ಚಿಹಿಡಿದ ನಾಯಿಯ ಚಿತ್ರ ರೂಪಕಾತ್ಮಕವಾಗಿ ಸೆರೆಯಾಗಿದ್ದನ್ನು ಕಂಡು ಖುಷಿಗೊಂಡ. ಇದೇ ಖುಷಿಗೆ ಇನ್ನಷ್ಟು ಚಿತ್ರಗಳನ್ನು ಕ್ಲಿಕ್ಕಿಸಿದ. ‘ವಾಹ್! ಇಂದಿನ ಸಂಜೆ ಅರ್ಥಪೂರ್ಣ..’ ಸಂದೀಪ್ ಖುಷಿಗೆ ದೀರ್ಘ ಉಸಿರೆಳೆದುಕೊಂಡು ಹೊರಟ.

ಸಂಜೆ ಗೂಡ್ಸ್ ರೈಲು ಬರುವ ಶಬ್ದಕ್ಕೆ ಎಚ್ಚರಗೊಂಡ ಗಂಡ ಕಣ್ಣುಜ್ಜಿಕೊಳ್ಳುತ್ತಾ ಸಾಮಾನುಗಳು ಜೋಪಾನವಾಗಿವೆಯೆ ಎಂದು ಖಾತರಿಪಡಿಸಿಕೊಳ್ಳುತ್ತ ಹೆಂಡತಿಯೆಡೆಗೆ ನೋಡಿದ. ಸೆರಗಿನೊಳಕ್ಕೆ ಮಗುವನ್ನು ಎದೆಗವಚಿಕೊಂಡು ಹಾಲುಣಿಸುತ್ತಿದ್ದ ಆಕೆ ಇನ್ನೂ ನಿದ್ರೆಯಲ್ಲಿದ್ದಳು. ಮಗು ನಿರಾತಂಕವಾಗಿ ಹಾಲುಣುತ್ತಾ ಅಂಗಾಲುಗಳಿಂದ ಚಿನ್ನಾಟವಾಡುತ್ತಲೇ ಇತ್ತು. ತಮ್ಮದೆ ಬುತ್ತಿಗಂಟಿನ ಕವರೊಂದನ್ನು ಗಮನಿಸುತ್ತ ಅದು ಅಲ್ಲಿ ಹೇಗೆ ಹೋಯಿತೆಂಬ ಆಶ್ಚರ್ಯಕ್ಕೆ ಒಳಗಾದ. ಉಳಿದ ಸಾಮಾನುಗಳೆಡೆಗೆ ಮತ್ತೆ ಸರಿಯಾಗಿ ಕಣ್ಣಾಯಿಸಿದ. ಉಳಿದೆಲ್ಲ ಸಾಮಾನುಗಳು ಇದ್ದಲ್ಲೆ ಇದ್ದವು. ‘ಬುತ್ತಿಗಂಟ್ ನೋಡೆ ಅಲ್ಲಿ’ ಎಂದು ಹೆಂಡತಿಯನ್ನು ತಿವಿದ. ಆಕೆ ‘ಏ ಕೋಡಿ ಮಗಾ ಮಲಿ ಕುಡಿಯಕತ್ತತಿ ಕಾಣವಲ್ದೇನ್ ಅರುವ್‌ಗೇಡಿ ತಂದ್..’ ಎಂದು ಗಂಡನನ್ನು ಗದರಿಸಿದಳು. ಅವಳ ಈ ಮಾತಿಗೆ ಪತ್ರಿಕೆ ಹಿಡಿದು ಕೂತ ವ್ಯಕ್ತಿ ಒಮ್ಮ ಇತ್ತ ಕಡೆ ಕಣ್ಣಾಯಿಸಿ ಮತ್ತೆ ಪತ್ರಿಕೆಯೊಳಕ್ಕೆ ಹೊಕ್ಕ.

ಗಂಡ ಎದ್ದು ಬುತ್ತಿಗಂಟಿನ ಕಡೆಗೆ ಹೋದ. ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ರೊಟ್ಟಿಯ ತುಣುಕುಗಳನ್ನು ಕಂಡು ಏನನ್ನೊ ಗೊಣಗುತ್ತ ಗಮನಿಸತೊಡಗಿದ. ಆಗ ಪತ್ರಿಕೆಯ ಒಳಕ್ಕೆ ಹೊಕ್ಕ ವ್ಯಕ್ತಿ ಹೊರಕ್ಕೆ ಬಂದು ‘ಏನು ಹುಡುಕುತ್ತಾ ಇದೀಯಪ್ಪ..?’ ಎಂದು ಕೇಳಿದ. ‘ಇಲ್ರಿ ನಾ ಮಕ್ಕೊಳ್ಳೊ ಮುಂದ ಈ ಗಂಟ್ ಅಲ್ಲೆ ನಮ್ ಹತ್ರನಾ ಇತ್ತು. ಈಗ ಇಲ್ಲೈತಿ. ಹೆಂಗ್ ಬಂತ್ ಅಂತ ಗೊತ್ತಾಗವಲ್ದರಿ’ ಎಂದ. ‘ಹೇ ಅದಾ? ಎರಡು ನಾಯಿ ಬಂದಿದ್ವು, ಅವೆ ತಗೊಂಡು ಹೋದವು. ಒಂದು ನಾಯಿ ನನ್ನ ಹತ್ತಿರ ಬರ್ತಾಯಿತ್ತು ನಾನೇ ಓಡಿಸಿದೆ’ ಏನೊ ಮಹೋಪಕಾರಿಯಂತೆ ನುಡಿದ. ‘ಅಲ್ರಿ ಅಣ್ಣರಾ ನೀವ್ ನೋಡಿದ್ರ ನಾಯಿನರಾ ಓಡಸಬಕಾ ಇಲ್ರಿ ಇಲ್ಲಾಂದ್ರ ನಮಗರಾ ಎಬ್ಬಸಬಕ್ ಇಲ್ರಿ.. ಸುಮ್ನಾ ಬಾಯಿ ಮಾಡಿದ್ರ ಸಾಕಿತ್ ಓಡಿ ಹೊಕಿದ್ವವು.. ಎಂಥಾ ಕೆಲಸ ಮಾಡಿದ್ರಿ ಹೊಟ್ಟಿಗೆ ಮಣ್ಣ ಹಾಕಿದ್ರೆಲ್ರಿ..’ ಎಂದ.

‘ಅರೆ! ಇದೆಂತಾ ಉಸಾಬರಿ ಮಾರಾಯಾ? ನೀವೇನು ನನ್ನ ಸೆಕ್ಯೂರಿಟಿ ಮಾಡೀರೇನು? ಏನೋ ಪಾಪ ಹೋಗಲಿ ಅಂತ ನೋಡಿದ್ದನ್ನ ಹೇಳಿದ್ರೆ ನನ್ನನ್ನೆ ಆರೋಪಿ ತರ ನೋಡ್ತಿಯಲ್ಲಯ್ಯಾ? ಹಾದೀಲಿ ಹೋಗೊ ಮಾರಿನ ಮೈಮೇಲೆ ಹಾಕಿಕೊಂಡಂತಾಯ್ತಪ್ಪಾ ಇದು’ ಎಂದು ಗಾದೆ ಉದುರಿಸಿದ. ‘ಅಲ್ರಿ ಅಣ್ಣರಾ..’ ಎಂದು ಆತ ಎನ್ನುತ್ತಿದ್ದಂತೆಯೆ ‘ಬಾಯಿ ಮುಚ್ಚಯ್ಯಾ ಸಾಕು.. ನಾನೊಬ್ಬ ರಿಟೈರ್ಡ್ ಮೇಷ್ಟ್ರು, ನನ್ನ ವಯಸ್ಸಿಗೆ ಮಾರ್ಯಾದೆ ಇಲ್ವೆ? ಇದೇನು ನಿಮ್ಮ ಮನೆನೆ, ಯಾವ ಚಿಂತೆಯಿಲ್ಲದೆ ಮಲಗಿದ್ದೀರಲ್ಲ? ಓದಿಲ್ವೆ ಬೋರ್ಡ್‌ನಾ ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮ ಸಾಮಾನುಗಳಿಗೆ ನೀವೇ ಜವಾಬ್ದಾರಿ ಅಂತ?ʼ

‘ಏನ್ರಿ ಡೇವಿಡ್ ಸರ್ ಯಾರದೊ ಜೊತೆಗೆ ಪಾಠ ಶುರು ಮಾಡಿಬಿಟ್ಟಿದೀರಲ್ಲರಿ. ನೀವು ರಿಟೈರ್ಡ್ ಕಣ್ರಿ. ರಿಟೈರ್ಡ್.. ಪಾಠ ಮಾಡೊ ಸಮಯ ಮುಗ್ದೋಯ್ತು..’ ಎಂದೆನ್ನುತ್ತಾ ಮೇಷ್ಟ್ರಿಗೆ ಜುಡಾಯಿಸುತ್ತಾ ಡೇವಿಡ್‍ ರ ಸ್ನೇಹಿತನೊಬ್ಬ ವಾಕ್ ಮಾಡುತ್ತಾ ಹಾಯ್ದುಹೋದ. ‘ಓ ಮೂರ್ತಿ ಎಲ್ಲೊ ಹೊರಟೆ ನಿಲ್ಲೊ..’ ಡೇವಿಡ್ ಮೇಷ್ಟ್ರು ಕರೆದರು. ʼಒಂದ್ ರೌಂಡ್ ಹಾಕೊಂಡ್ ಬರ್ತಿನಿ, ನೀವ್ ಪಾಠ ಮುಗಿಸಿ’ ಎಂದು ಮೂರ್ತಿ ಮತ್ತೆ ಜುಡಾಯಿಸುತ್ತ ತನ್ನ ಇಯರ್‍ಫೋನ್ ಕಿವಿಗೆ ತುರುಕಿಕೊಂಡು ವಾಕ್ ಮುಂದುವರೆಸಿದ. ಅವನ ಹೆಂಡತಿ ಈ ಮಾತುಗಳನ್ನೆ ಕೇಳಿಸಿಕೊಂಡು ‘ಯೇಯ್ ಬಾಯಿಲ್ಲೆ ಅವರ್‍ಕೂಡ ಏನ್ ಹೋಯ್ಕಾಡಕೆಂತೀ’ ಎಂದು ಕರೆದಳು. ಅವಳ ಮಾತಿಗೆ ಓಗೊಟ್ಟು ಗಂಡ ಅಲ್ಲಿಂದ ಹೊರಟುಹೋದ.

“ಅಲ್ಲಾ ನೀ ಹಿಂಗ್ ಹೇಣ್ತಿ ಮಕ್ಳು ಸಾಮಾನಾ ಯಾವ್ದ್ರ ಖಬರ್‍ಗೆಟ್ಟು ಮಕ್ಕೊಂಡು ಮಂದಿಗೆ ಅಂದ್ರ ಏನ್ ಬಂತ್. ಬರೇ ಇದಾ ಆತ್‌ಬಿಡ್ ನಿಂದ್. ಹೋಗ್ ರೈಲ್ ಎಟ್ಟತ್ತಗೈತಿ ಕೆಳಕೆಂಡ್‍ಬಾ ಹೋಗ್..” ಹೆಂಡತಿ ಗಂಡನಿಗೆ ಕುಕ್ಕಿದಳು.

ಸಂದೀಪ್ ಅಲ್ಲಿನ ಹಲವು ಚಿತ್ರಗಳನ್ನು ಸರಣಿಯಂತೆ ಕಲಾತ್ಮಕವಾಗಿ ಸೆರೆಹಿಡಿಯುತ್ತಲೆ ಇದ್ದ. ಡೊಂಕು ಬಾಲದೊಳಕ್ಕೆ ಸಂಜೆ ಸೂರ್ಯನನ್ನ ಸಿಕ್ಕಿಸಿಕೊಂಡು ರೊಟ್ಟಿ ಕಚ್ಚಿಹಿಡಿದ ನಾಯಿಯ ಚಿತ್ರ ರೂಪಕಾತ್ಮಕವಾಗಿ ಸೆರೆಯಾಗಿದ್ದನ್ನು ಕಂಡು ಖುಷಿಗೊಂಡ.

ಒಂದು ಕ್ಷಣಕ್ಕೆ ಎಲ್ಲರೂ ಜೊತೆಗಿದ್ದಂತಾಗಿ ಮತ್ತೊಂದು ಕ್ಷಣಕ್ಕೆ ಎಲ್ಲರೂ ದೂರವಾದ ಅನಾಥಭಾವ ಡೇವಿಡ್‍ಗಾಯಿತು. ನಿವೃತ್ತ ಜೀವನದಲ್ಲಿ ಎಲ್ಲ ಇದ್ದೂ ಇಲ್ಲದ ಭಾವ ಆತನದು. ಇನ್ನೇನು ಇಳಿಗಾಲದಲ್ಲಿ ಒಂದು ಗೂಡು ಕಟ್ಟುವ ಕನಸು ಮುಗಿಯಿತು. ಓಪನಿಂಗ್ ಸೆರಮನಿ ಹತ್ತಿರದಲ್ಲಿದೆ. ಇದ್ದ ಖಾಲಿತನಕ್ಕೆ ಇನ್ನೊಂದು ಶೂನ್ಯತ್ವ ಆವರಿಸಿದಂತಾಯಿತು. ಡೇವಿಡ್ ಸ್ವಗತದ ಲಹರಿಗೆ ಜಾರಿದ. ಅವನು ಹೇಳಿದ್ದು ನಿಜವೆ? ಅವರ ಅನ್ನಕ್ಕೆ ನಾನು ಕಲ್ಲು ಹಾಕಿದೆನಾ? ನಾನು ನನ್ನೊಳಗಿರುವುದನ್ನೂ ಸಮಾಜ ಸಹಿಸುವುದಿಲ್ಲವೆ? ಅಲ್ಲಾ ನಾನು ನನ್ನ ಪಾಡಿಗೆ ಪೇಪರ್ ಓದುತ್ತಿದ್ದೆ. ನಾಯಿ ರೊಟ್ಟಿ ತಿಂದದ್ದನ್ನು ನೋಡಿದೆ, ನಿಜ. ಹಾಗಂತ ನೋಡಿದ್ದೆ ಅಪರಾಧವಾಯಿತೆ. ಅವನು ‘ಹೊಟ್ಟಿಗೆ ಮಣ್ಣ ಹಾಕಿದ್ರೆರ್ಲಿ’ ಅಂದನಲ್ಲ. ಹಾಗೆ ನೋಡಿದರೆ ಆ ನಾಯಿಯದೂ ಹೊಟ್ಟೆ ಪಾಡು ಅಲ್ವೆ. ಹಸಿವು ನಾಯಿಗಾದರೇನು? ಮನುಷ್ಯನಿಗಾದರೇನು? ಎಲ್ಲರಿಗೂ ಒಂದೇ ತಾನೆ? ಅವನು ಹೇಳಿದಂತೆಯೆ ಬುತ್ತಿ ಅವನಿಗೆ ಸಿಗುವಂತೆ ಮಾಡಿದ್ದರೆ, ನಾನು ಆ ನಾಯಿಯ ಹೊಟ್ಟೆ ಮೇಲೆ ಹೊಡೆಯುತ್ತಿದ್ದೆನಲ್ಲ? ಇವನಿಗೊ ಬಾಯಿ ಇದೆ. ಬುದ್ಧಿ ಇದೆ. ಶಕ್ತಿ ಇದೆ ಹುಡುಕಿಕೊಳ್ಳುತ್ತಾನೆ. ಆದರೆ ನಾಯಿಗೆ? ಎಂದು ತನ್ನ ತರ್ಕಕ್ಕೆ ತಾನೆ ಸಮಾಧಾನ ಪಟ್ಟುಕೊಳ್ಳುತ್ತಲಿದ್ದ. ಮೂರ್ತಿ ‘ನಾನೊಬ್ಬ ರಿಟೈರ್ ಮೇಷ್ಟ್ರು. ರಿಟೈರ್ಡ್ ಆದ ಮೇಲೂ ಸಿಕ್ಕ ಸಿಕ್ಕವರಿಗೆ ಪಾಠ ಮಾಡುತ್ತೇನೆಂದು ಚುಡಾಯಿಸುತ್ತಾನಲ್ಲ. ಅಲ್ಲಾ ಅಷ್ಟಕ್ಕೂ ನಾನು ಮೇಷ್ಟ್ರು. ಜೀವನಪರ್ಯಂತ ಕಲಿಯುತ್ತಾ ಕಲಿಸುತ್ತಾ ಇರಬೇಕಾದವ. ನನಗೆ ಖಾಸಗಿ ಜೀವನ, ಸಾಮಾಜಿಕ ಜೀವನ ಅಂತ ಎರಡೆರಡು ಜೀವನ ಇಲ್ಲವಲ್ಲ. ನಾನು ಮೇಷ್ಟ್ರು ಒಳಗೂ ಹೊರಗೂ ಒಂದೇ ತರ ಕಾಣಬೇಕು. ರಿಟೈರ್ ಆಯ್ತು ಇನ್ನು ಈ ಕೆಲಸ ಮಾಡೊಲ್ಲ ಅಂತ ಶಪಥ ತಗೊಳ್ಳೊಕೆ ನಂದೇನು ಬೇರೆ ಕೆಲಸವೆ? ನಾಲ್ಕು ಅಕ್ಷರ ಕಲಿಸೊ ಕೆಲಸ ಅಂದರೆ ಅಷ್ಟು ಹಗುರವೇನು? ರಿಟೈರ್‍ಮೆಂಟ್ ಸರ್ಕಾರ ಕೊಟ್ಟಿರಬಹುದು ಕಣಯ್ಯ, ನಾನಿನ್ನು ತಗೊಂಡಿಲ್ಲ. ಹ್ಹ ಹ್ಹ ಹ್ಹ ನೆವರ್.. ನಾನು ತಗೊಳ್ಳೊದೇ ಇಲ್ಲ. ನೀನ್ ತಗೊ ಬೇಕಾದ್ರೆ…’ ಡೇವಿಡ್ ಮುಖದಲ್ಲಿ ಏನನ್ನೊ ಗೆದ್ದೆನೆಂಬ ಖುಷಿ ನೂರ್ಮಡಿಯಾಗಿತ್ತು.

ಮುಂಜಾನೆ ಎಂಟರ ಸಮಯ. ಸಂದೀಪನ ಫೋನು ಒಂದೇ ಸಮನೆ ರಿಂಗಣಿಸುತ್ತಲಿತ್ತು. ಅವನು ಸ್ನಾನದ ಕೋಣೆಯಲ್ಲಿದ್ದರಿಂದ ಕೇಳಿಸಿರಲಿಲ್ಲ. ಮತ್ತೆ ಸ್ವಲ್ಪ ಹೊತ್ತು ಇನ್ನೆರಡು ಬಾರಿ ರಿಂಗಣಿಸಿ ಮೌನವಾಯಿತು. ಸ್ನಾನ ಮುಗಿಸಿ ಬಂದ ಸಂದೀಪ್ ಊರಿಗೆ ಹೊರಡುವ ತಯಾರಿಯಲ್ಲಿದ್ದ. ಮತ್ತೆ ಫೋನ್ ರಿಂಗಣಿಸಿತು. ಮೊಬೈಲ್ ಸ್ರ್ಕೀನ್ ಮೇಲೆ ಎಡಿಟರ್ ಯು.ಕೆ. ಎಂದಿತ್ತು.

ರಿಸೀವ್ ಮಾಡಿ ‘ಮಾರ್ನಿಂಗ್ ಸರ್’ ಎಂದ.

‘ಅಯ್ಯೊ ನಿನ್ನ ಮಾರ್ನಿಂಗ್ ನೀನೇ ಇಟ್ಕೊಳಪ್ಪ. ನಂಗೆ ಸಧ್ಯಕ್ಕೆ ಫೋಟೋಸ್ ಕಳ್ಸು, ಬೇಗ. ಎಷ್ಟು ಸರ್ತಿನೊ ಕಾಲ್ ಮಾಡೋದು?’ ಯು.ಕೆ ಮಾಗ್‍ಜೀನ್ ಎಡಿಟರ್ ಗೊಣಗಿದ.

‘ಇನ್ನೇನ್ ಸರ್ ಆಫೀಸಿಗೆ ಬಂದು ಹಾಗೆ ಕೊಟ್ಟು ಹೊಗ್ತೀನಿ, ಒಂದೈದು ನಿಮಿಷ’ ಊರಿನ ತಯಾರಿಯಲ್ಲಿದ್ದರೂ ಗಡಿಬಿಡಿಯಲ್ಲಿದ್ದವಂತೆ.

‘ಬರೋದೇನೂ ಬೇಡ, ಫೋಟೋಸ್ ಮೇಲ್ ಮಾಡು ಮಾರಾಯ ಸಾಕು’

ಸಂದೀಪ್ ಎಡಿಟರ್‌ಗೆ ಫೋಟೋಸ್ ಮೇಲ್ ಮಾಡಿದ. ಕೈಗೆ ಸಿಕ್ಕ ಕೆಲವನ್ನು ಬ್ಯಾಗಿಗೆ ತುರುಕಿಕೊಂಡು ತನ್ನ ಸ್ಪ್ಲೆಂಡರ್ ಬೈಕ್ ಹತ್ತಿ ಊರಿನ ಕಡೆಗೆ ಹೊರಟ. ಸಂಜೆ ಐದರ ಹೊತ್ತಿಗೆ ಮ್ಯಾಗ್‌ಜಿನ್‌ನಲ್ಲಿ ಫೋಟೊ ವೆಬ್‌ಸೈಟಿಗೆ ಅಪ್‍ಲೋಡಾಗಿತ್ತು. ಒಂದು ರೊಟ್ಟಿಯ ಕತೆ-ವ್ಯಥೆ ಶೀರ್ಷಿಕೆಯಡಿಯ ಸಂದೀಪ್ ಅರಸ್ ಹೆಸರಿನಲ್ಲಿ ತಾನು ರೈಲ್ವೆ ಸ್ಟೇಷನ್ನಿನಲ್ಲಿ ಕ್ಲಿಕ್ಕಿಸಿದ ಸರಣಿ ಫೋಟೋಗಳು ಅಚ್ಚಾಗಿದ್ದವು. ‘ವೆಲ್‌ಡನ್ ಮೈ ಬಾಯ್, ಯು ಹ್ಯಾವ್ ಅ ಬ್ರೈಟ್ ಫ್ಯೂಚರ್. ಆಲ್ ದಿ ಬೆಸ್ಟ್’ ಎಡಿಟರ್‌ನ ಅಭಿನಂದನೆ ವಾಟ್ಸ್‍ಆಪಿನಲ್ಲಿ ಸದ್ದು ಮಾಡಿತು. ಈ ಸಂದೇಶ ಹಾಗೂ ತನ್ನ ಫೋಟೊಗಳನ್ನು ಒಳಗೊಂಡು ಸಂದೀಪ್ ಅದನ್ನು ತನ್ನ ವಾಟ್ಸ್‍ಆಪಿನ ಸ್ಟೇಟಸ್‌ ಗೆ ಹಾಕಿಕೊಂಡ. ಕಾಮೆಂಟ್ ಹಾಗೂ ರಿಪ್ಲೈಗಳಲ್ಲಿ ಇನ್ನಷ್ಟು ಅಭಿನಂದನೆ, ಇಮೊಜಿಗಳ ಸುರಿಮಳೆ. ಸಂದೀಪ ಸಂತೋಷಕ್ಕೆ ಮಿತಿಯೆ ಇಲ್ಲದಂತೆ ಹಿಗ್ಗತೊಡಗಿದ.
ರಾತ್ರಿ ಸಂದೀಪನಿಗೆ ಬಹಳ ಸಮಯದವರೆಗೆ ನಿದ್ದೆ ಬರಲಿಲ್ಲ. ಮತ್ತದೆ ಅಭಿನಂದನೆಗಳ ರಿವ್ಯೂವ್‌ಗಳನ್ನು ನೋಡುತ್ತಲಿದ್ದ. ಅನಾಮಿಕ ಸಂಖ್ಯೆಯಿಂದ ಒಂದು ಮೆಸೇಜ್ ಬಂದಿತು. ಕುತೂಹಲದಿಂದ ಆ ಮೆಸೇಜ್ ತೆರೆದ. ದಕ್ಷಿಣ ಆಫ್ರಿಕಾದ ಛಾಯಾಚಿತ್ರಕಾರ ಕೆವಿನ್ ಕಾರ್ಟರ್ ತಾನು ಕ್ಲಿಕ್ಕಿಸಿದ ಫೋಟೊದಿಂದಾಗಿ ಪಶ್ಚಾತಾಪದಿಂದ ಆತ್ಮಹತ್ಯೆ ಮಾಡಿಕೊಂಡದ್ದರ ಕುರಿತ ಮಾಹಿತಿಯೊಂದಿಗೆ ಆ ಫೋಟೊ ಟ್ಯಾಗ್ ಮಾಡಿದ್ದರು. ಸಂದೀಪ್ ಅದರ ವಿವರಗಳನ್ನು ಓದುತ್ತಾ ಓದುತ್ತಾ ತಾನೂ ಇಂತಹ ಸಣ್ಣದೊಂದು ತಪ್ಪು ಮಾಡಿದೆನೆಂದು ಯೋಚಿಸತೊಡಗಿದ. “ಮೇ ಐ ನೋ ಹೂ ಇಸ್ ದಿಸ್?” ಎಂದು ಅನಾಮಿಕ ಸಂಖ್ಯೆಗೆ ಮರು ಪ್ರಶ್ನಿಸಿದ. ಆ ಕಡೆಯಿಂದ ಉತ್ತರ “ಐ ಥಿಂಕ್ ಐ ಡನ್ ಮೈ ವರ್ಕ್. ನೋ ನೀಡ್ ಟು ಟೆಲ್. ಬಾಯ್” ಎಂದಿತ್ತು.

ಸಂದೀಪ್ ತನ್ನೊಳಗೆ ಮಾತಾಡಿಕೊಳ್ಳಲು ಆರಂಭಿಸಿದ. ಇಲ್ಲಿ ನಾನು ಯಾರ ಸಾವಿಗೂ ಕಾರಣನಲ್ಲ. ಅಷ್ಟಕ್ಕೂ ಸಾವಿನ ಮಾತೆಲ್ಲಿ? ಇದು ಬರೀ ಒಂದು ಹೊತ್ತಿನ ರೊಟ್ಟಿಯ ಸಂಗತಿ. ಆದರೆ ಆ ನಾಯಿಯನ್ನು ಓಡಿಸಬಹುದಿತ್ತೇನೊ? ನನ್ನ ಹವ್ಯಾಸದ ವೃತ್ತಿಯೇ ಫೋಟೊಗ್ರಫಿ. ನನ್ನ ಕೆಲಸವನ್ನಷ್ಟೆ ನಾನು ಶ್ರದ್ಧೆಯಿಂದ ಮಾಡಿದ್ದೇನೆ. ಒಂದು ವೇಳೆ ಆ ಅನಾಹುತವನ್ನು ತಡೆದಿದ್ದರೆ ನನ್ನ ಕೆಲಸಕ್ಕೆ ನಾನು ಕಲ್ಲು ಹಾಕಿಕೊಳ್ಳುತ್ತಿದ್ದೆನಲ್ಲ? ಇಲ್ಲದಿರೆ ಎಡಿಟರ್ ಸ್ವಲ್ಪದಿನ ರಜೆ ತಗೊಳ್ಳಿ ಎಂದು ನಾಜೂಕಾಗಿ ಕೆಲಸದಿಂದ ಕಿತ್ತುಹಾಕುತ್ತಿದ್ದ. ಇಂತಹದ್ದೊಂದು ಫೋಟೊ, ಎಡಿಟರ್‌ನ ಪ್ರೋತ್ಸಾಹ, ಅಭಿನಂದನೆಗಳು ಯಾವುದನ್ನು ಅದು ನನಗೆ ಕೊಡುತ್ತಿರಲಿಲ್ಲವಲ್ಲ. ಅವರ ನಿರ್ಲಕ್ಷ್ಯಕ್ಕೆ ನಾನು ಹೇಗೆ ಹೊಣೆ? ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿರುವಾಗಲು ಸಹ, ಅಂತರಂಗ ನೀನು ಮಾಡಿದ್ದು ತಪ್ಪು.. ತಪ್ಪು.. ತಪ್ಪು.. ಎಂದು ನಗಾರಿ ಬಡಿದುಕೊಳ್ಳುತ್ತಿತ್ತು. ಕೆವಿನ್ ಕಾರ್ಟರ್ ಕೂಡ ಒಬ್ಬ ಫೋಟೋಗ್ರಾಫರ್ ಅವನೆಲ್ಲಿ ನೀನೆಲ್ಲಿ? ತಾನೆ ಹೋಲಿಕೆ ಮಾಡಿಕೊಳ್ಳತೊಡಗಿದ. ತಲೆ ಚಿಟ್ಟುಹಿಡಿದಂತಾಯಿತು. ರಾತ್ರಿಯ ವಟಗುಡುವ ಕಪ್ಪೆಗಳು, ಚಿಟರ್ರೆನೆ ಚೀರುವ ಕೀಟಗಳು, ಗಡಿಯಾರದ ಸೆಕೆಂಡಿನ ಮುಳ್ಳು ಎಲ್ಲ ಶಬ್ಧದ ಅರ್ಥವೂ ಮೋಸ.. ಮೋಸ.. ಮೋಸ.. ಎಂದೇ ಸಂದೀಪನ ಕಿವಿಗೆ ಬಂದು ಅಪ್ಪಳಿಸುತ್ತಿದ್ದವು. ‘ಇಲ್ಲಾ…’ ಕಿಟಾರನೆ ಕಿರುಚಿದ.

ರಾತ್ರೋ ರಾತ್ರಿ ಧಾರವಾಡಕ್ಕೆ ಹೊರಟ. ದಾರಿಯುದ್ದಕ್ಕೂ ತಾನು ತಪ್ಪು ಮಾಡಿಬಿಟ್ಟೆ, ಕನಿಷ್ಟ ಎಡಿಟರ್ ಆದರೂ ತಡೆಯಬಹುದಿತ್ತು. ಆದರೂ ಮೊದಲ ತಪ್ಪು ನನ್ನದೆ. ಎಡಿಟರ್‌ಗೆ ಕೆವಿನ್ ಕಾರ್ಟರ್ ಕಥೆ ಗೊತ್ತಾ, ಗೊತ್ತಿಲ್ಲವಾ ಅಥವಾ ಗೊತ್ತಿದ್ದೂ ನನ್ನಿಂದ ಮುಚ್ಚಿಟ್ಟನೆ? ಅವನಿಗೆ ಬರೀ ಜನಪ್ರಿಯತೆ ಸಾಕಾ? ಸೋಶೀಯಲ್ ರೆಸ್ಪಾನ್ಸಿಬಿಲಿಟಿ? ಹೀಗೆ ಮನಸ್ಸಿನ ತುಂಬ ಯೋಚನೆಯ ಪ್ರವಾಹ ಹರಿದು ಬರುತ್ತಿರುವಾಗಲೆ ರಸ್ತೆ ಗುಂಡಿಗೆ ಬೈಕ್ ಕುಸಿದು ಅಪಘಾತವಾಯಿತು. ಬಿದ್ದ ರಭಸಕ್ಕೆ ಸರ್ರನೆ ಡಾಂಬರಿನ ಮೇಲೆ ಗೀರಾಯಿತು. ಅಂಗೈ ಮೊಣಕೈ ರಸ್ತೆಗೆ ತೆರೆದು ರಕ್ತ ಸೋರಿತು. ಮೊಣಕಾಲಿಗೆ ಪೆಟ್ಟಾಗಿತು. ಬೈಕ್ ಇನ್ನೂ ಶಬ್ದ ಮಾಡುತ್ತಲೆ ಇತ್ತು. ನಿರ್ಜನ ಪ್ರದೇಶ ರಾತ್ರಿ ಹೊತ್ತು. ಸಮಾಧಾನಿಸಲು ಅಲ್ಲಿ ಯಾರೂ ಇಲ್ಲ. ಸ್ವಲ್ಪ ಹೊತ್ತು ಸುಧಾರಿಸಿಕೊಂಡ. ನಿಧಾನವಾಗಿ ಸಪ್ತಾಪೂರದ ತನ್ನ ರೂಮಿಗೆ ಬಂದು ಕೈ ಕಾಲು ತೊಳೆದುಕೊಂಡು ಗಾಯಕ್ಕೆ ಕ್ರೀಮ್ ಹಚ್ಚಿ ನೋಡಿಕೊಂಡ. ಗೀರಿದ ಗಾಯಗಳು, ಪರಚಿದ ಗೆರೆಗಳನ್ನು ನೋಡಿಕೊಂಡಾಗ ಇದು ಪ್ರಾಯಶ್ಚಿತವೆ ಅನುಮಾನ ಮೂಡಿತು.

ಬೆಳಗಾಯಿತು. ಅಕ್ಕ ಪಕ್ಕದ ಮನೆಯ ಸ್ತೋತ್ರಗಳು, ಪಠಣಗಳು ಕಿವಿಗೆ ಎಡತಾಕಿ ಸಂದೀಪನಿಗೆ ಎಚ್ಚರವಾಯಿತು. ಮನೆಯ ಬಾಗಿಲಿಗೆ ಬಿಟ್ಟ ಚಪ್ಪಲಿಗಳನ್ನು ಗಮನಿಸಿದ ಪಕ್ಕದ ಮನೆಯ ಹರೀಶ್ ಬಾಗಿಲು ಬಡಿಯುತ್ತ ‘ಸ್ಯಾಂಡಿ ಯಾವಾಗ ಬಂದ್ಯೋ ಹಿಂಗ್ ಹೋಗಿ ಹಂಗ್ ಬಂದೀ..’ ಪ್ರಶ್ನಿಸಿದ. ಮರು ಉತ್ತರ ದೊರಕದೆ ಹರೀಶ ಸುಮ್ಮನಾದ. ಸಂದೀಪ್ ಎದ್ದು ಸಣ್ಣ ನೋವಿನಲ್ಲಿಯೆ ಆಫೀಸ್ ಕಡೆಗೆ ಹೊರಡಲು ಅಣಿಯಾದ. ಹಾಗೆ ಹೋಗುತ್ತ ಮಯೂರದಲ್ಲಿ ತಿಂಡಿ ತಿಂದರಾಯಿತೆಂದು ಹೊರಟ.

‘ಓಯ್ ಸಂದೀಪ.. ಬಾ ಮಾರಾಯ.. ನೋಡಿದೆ ನಿನ್ನ ಕೈಚಳಕದ ಚಿತ್ರವ.. ಚಂದವುಂಟು ಮಾರ್ರೆ..’ ಸೀನಣ್ಣ ನಕ್ಕ. ಸಂದೀಪನ ಮುಖ ಮ್ಲಾನವಾಗಿತ್ತು. ಹುಸಿನಗೆ ನಕ್ಕು ‘ಒಂದು ದೋಸೆ ಹೇಳಿ ಸೀನಣ್ಣ’ ಎಂದು ಮುಂದೆನಡೆದ. ಮಯೂರ ಹೊಟೇಲಿನ ತನ್ನ ಮಾಮೂಲಿ ಕಾರ್ನರ್ ಸೀಟಿನಲ್ಲಿ ಯಾರೊ ಕುಳಿತಿದ್ದರು. ಅನಿವಾರ್ಯವಾಗಿ ಖಾಲಿಯಿದ್ದಲ್ಲಿ ಕೂತ.

‘ಅನ್ಯಾಯವಾಗಿ ಇವತ್ ಒಂದು ಕೊಲೆ ಆಗುತ್ತೆ ಅಣೊ’ ಎನ್ನುತ್ತಾ ಮಲ್ಲಿ ಸಂದೀಪನ ಮುಂದೆ ದೋಸೆ ಇಟ್ಟ. ‘ಯಾಕಪ್ಪ? ಅಷ್ಟು ದೊಡ್ಡವನಾಗಿಬಿಟ್ಟೆಯಾ ಕೊಲೆ ಮಾಡುವಷ್ಟು..’ ‘ಮತ್ತೇನಣಾ ನಂದ್ ಒಂದ್ ಫೋಟೊ ಹೊಡಿಲಾರದೆ ದಿನಾ ಏನಾರ್ ಒಂದ್ ಹೇಳಿ ತಪ್ಪಿಸಿಕೊಂಡ್ ಹೋಗ್ತಿ. ಈ ದೋಸೆ ತಿಂದು ನನ್ನ ಫೋಟೊ ಹೊಡಿಲೇಬೇಕ್ ನಿ..’ ಎಂದು ಹೊರಟೆಹೋದ. ದೋಸೆ ತಿನ್ನುತ್ತ ಸಂದೀಪ ಯೋಚಿಸಿದ. ಅಂತಹ ಫೋಟೊ ತೆಗೆದು ಇಷ್ಟೊಂದು ಕಳವಳ ಪಟ್ಟಿದ್ದು ಸಾಕು. ಈ ಹುಡುಗನ ಒಂದು ಫೋಟೊ ಕ್ಲಿಕ್ಕಿಸಿ ಅವನ ಮುಖದಲ್ಲಿನ ಸಣ್ಣ ನಗುವಿಗೆ ನಾನು ಕಾರಣವಾಗಬಾರದೇಕೆ? ಸಂದೀಪ ದೋಸೆ ತಿಂದು ಕೈ ತೊಳೆಯುತ್ತಿದ್ದಂತೆಯೆ ಮಲ್ಲಿ ಪ್ರತ್ಯಕ್ಷನಾಗಿ ‘ಅಣಾ ಈ ಗೆಟಪ್ ಸಾಕಾ..’ ಎಂದು ಪೋಸ್ ಕೊಟ್ಟ. ನಗು ಕ್ಲಿಕ್ಕಿಸಿತು.

ಒಂದು ವಾರದ ತರುವಾಯ ನಿವೃತ್ತ ಡೇವಿಡ್ ಮೇಷ್ಟ್ರ ಹೊಸ ಮನೆಗೆ ಹೊಸ ಕಳೆಯೆ ಬಂದು ಸೇರಿತ್ತು. ಪಕ್ಕದ ಬೀದಿಯ ಜೋಪಡಿ ಮಕ್ಕಳಿಗೆ ತಮ್ಮ ಮನೆಯ ಛಾವಣಿಯಲ್ಲಿ ಸಂಜೆ ಮಕ್ಕಳಿಗೆ ಪಾಠ ಹೇಳಿಕೊಡುವುದು ಈಗ ಪರಿಪಾಠ. ಪಾಠದಲ್ಲಿ ಮಗ್ನರಾಗಿದ್ದರು. ಒಂದಷ್ಟು ಹಕ್ಕಿಗಳು ಪುರ್ರನೆ ಹಾರಿ ಬಂದು ಛಾವಣಿಯ ತಂತಿಗೆ ಬಂದು ಕೂತವು. ಛಾವಣಿಯಲ್ಲಿ ಸಣ್ಣ ಹಂದರ ಅದರ ಸುತ್ತ ಸಾಲುಗಟ್ಟಿದ ಹೂಕುಂಡಗಳು. ಬಣ್ಣ ಬಣ್ಣದ ಹೂಗಳು ಮತ್ತು ಪುಟ್ಟ ಪುಟ್ಟ ಮಕ್ಕಳು ಎಲ್ಲ ಸೇರಿ ಅದೊಂದು ಸಣ್ಣ ಸ್ವರ್ಗ ನೆರೆದಂತೆಯೆ ಭಾಸವಾಗಿತ್ತು. ಡೇವಿಡ್‍ ರ ಸ್ನೇಹಿತ ಮೂರ್ತಿ ಮೆಟ್ಟಿಲೇರಿ ಛಾವಣಿಗೆ ಬಂದ. ಇದನ್ನು ಗಮನಿಸಿದ ಡೇವಿಡ್ ಮೇಷ್ಟ್ರು ‘ನೋಡು ಮೂರ್ತಿ ನೀನಿನ್ನು ನನ್ನನ್ನು ರಿಟೈರ್ಡ್ ಮೇಷ್ಟ್ರು ಅನ್ನೊ ಹಾಗಿಲ್ಲ. ಯಾಕಂದ್ರೆ ನಾನು ನನ್ನ ಕೆಲಸ ನಿಲ್ಲಿಸಿಯೇ ಇಲ್ಲ ನೋಡು.. ಇಲ್ನೋಡು ಈ ಮಕ್ಕಳನ್ನ.. ನನಗೆ ಹೊಸ ಕೆಲಸ ಸಿಕ್ಕಿದೆ. ನಾನು ಇನ್ಮೇಲೆ ಸಂಜೆ ವಾಕ್ ಬರೊಲ್ಲಪಾ. ಬೇಕಾದ್ರೆ ಬೆಳಗ್ಗೆ ಬರ್ತಿನಿ. ಏನು..? ಎಂದು ಮುಗುಳು ನಗೆ ನಕ್ಕರು. ನೋಡಿ ಮಕ್ಕಳಾ ‘ನಾನು ಸ್ವಲ್ಪ ಹಕ್ಕಿಗಳ ಬಟ್ಟಲಿಗೆ ಕಾಳು, ನೀರು ಹಾಕಿ ಬರ್ತಿನಿ, ಅಲ್ಲಿಯವರೆಗೆ ನೀವೆಲ್ಲ ಮೊನ್ನೆ ಬರೆಸಿದ ಗಾದೆ ಮಾತುಗಳನ್ನ ಜೋರಾಗಿ ಓದಿ ಮಕ್ಕಳಾ..’ ಎಂದು ಮೇಷ್ಟ್ರು ಸ್ನೇಹಿತ ಮೂರ್ತಿಯನ್ನು ಕರೆದುಕೊಂಡು ಹಕ್ಕಿಗಳ ಹಸಿವಿಗೆ ಆಹಾರವಿಡುವಲ್ಲಿ ಮಗ್ನರಾದರು. ಮಕ್ಕಳು ಗಟ್ಟಿ ಧ್ವನಿಯಲ್ಲಿ ಒಕ್ಕೊರಲಿನಲ್ಲಿ ಓದಲು ಆರಂಭಿಸಿದರು.

‘ಕೈ ಕೆಸರಾದರೆ ಬಾಯಿ ಮೊಸರು’

‘ಒಬ್ಬರ ಕೂಳು ಇನ್ನೊಬ್ಬರಿಗೆ ಕುತ್ತು..’

ಸ್ವಾರ್ಥ ಉಳಿಸಿದವ ಪಾಪಾತ್ಮ, ನಿಸ್ವಾರ್ಥ ಉಳಿಸಿದವ ಪುಣ್ಯಾತ್ಮ’