ದೊಡ್ಡ ಮನೆ, ಐದೆಕರೆ ಫಲವತ್ತಾದ ಕೃಷಿಭೂಮಿ, ಅಡಕೆ ತೋಟ ಮೇಲಾಗಿ ಅತ್ತೆ ನಾದಿನಿಯರ ಕಾಟವಿಲ್ಲದ ಎಲ್ಲರೂ ಬಯಸುವ ಕನಸಿನ ಸಂಸಾರ! ಏನು ಕೊರತೆ ಇತ್ತು ಸುಖಕ್ಕೆ? ಆದರೆ ಯಾಕೋ ಅಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಯಾವುದೇ ಸಂಭ್ರಮ ಕಾಣದೇ ನಿಧಾನವಾಗಿ ಸಂಸಾರದೊಳಗೇ ಅಸಮಾಧಾನದ ಕಿಚ್ಚು ಹೊತ್ತಿಕೊಂಡದ್ದು ಅಷ್ಟು ಬೇಗನೇ ಯಾರ ಅರಿವಿಗೂ ಬರಲಿಲ್ಲ. ಆದರೆ ಎಲ್ಲರ ಅರಿವಿಗೆ ಬರುವ ಹೊತ್ತಿಗೆ ಬಹಳ ತಡವಾಗಿ ಹೋಗಿತ್ತು. ಮದುವೆಯಾದ ಎರಡು ವರ್ಷಕ್ಕೇ ನಿಂತ ದಂಪತಿಗಳ ನಡುವಿನ ಮಾತುಕತೆ ಈಗಲೂ ಶುರುವಾಗಿಲ್ಲ.
ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಬರೆದ ಕತೆ “ಶಿಕ್ಷೆ” ನಿಮ್ಮ ಈ ಭಾನುವಾರದ ಓದಿಗೆ

ಬಿಸಿಬಿಸಿ ಟೀ ಕುಡಿಯುತ್ತಾ ಗೇಟ್‌ಗೆ ಸಿಕ್ಕಿಸಿದ್ದ ಪೇಪರನ್ನು ತೆಗೆದು ಎಂದಿನಂತೆ ಇಂದು ಕೂಡಾ ಮನೆಯ ಮೆಟ್ಟಿಲಿನ‌ ಮೇಲೆ‌ ಕುಳಿತು ಪೇಪರನ್ನು ತಿರುವತೊಡಗಿದ ಶೇಖರ್. ರಾಜಕೀಯದ ವಿಷಯಗಳಲ್ಲಿ ಎಳ್ಳಷ್ಟೂ ಅಭಿರುಚಿಯಿಲ್ಲದ ಶೇಖರ್ ಯಾವತ್ತೂ ಮೊದಲು ಓದುವುದು ಕ್ರೀಡಾ ಸುದ್ದಿಗಳನ್ನು. ಆದಿತ್ಯವಾರವಾದ್ದರಿಂದ ಮ್ಯಾಗಜೀನ್‌ನ ಯಾವುದೋ ಒಂದು ಕತೆಯನ್ನು ಓದತೊಡಗಿದ ಬೆನ್ನಲ್ಲೇ ಅವನ ಮೊಬೈಲ್ ಎರಡು ಸಾರಿ ರಿಂಗ್ ಆಗಿತ್ತು. ನೋಡಿದರೆ ಫೋನ್ ಮಾಡಿದ್ದು ಅವನ‌ ಮಾವನ ಮಗಳು. ಹೇಳಿದ್ದು ಹಠಾತ್ತಾಗಿ ಎದೆನೋವು ಕಾಣಿಸಿಕೊಂಡದ್ದರಿಂದ ಮಾವನನ್ನು ಆಸ್ಪತ್ರೆಗೆ ಸೇರಿಸಿದ್ದ ವಿಷಯ. ಹೇಗೂ ಮಮತ ನಿನ್ನೆಯೇ ತವರು ಮನೆಗೆ ಹೋಗಿದ್ರಿಂದ ಏನೂ ಕೆಲಸಗಳಿರಲಿಲ್ಲ. ಹಾಗಾಗಿ ಹೆಚ್ಚಿನ ಯೋಚನೆಗಳಿಲ್ಲದೇ ತನ್ನ ಸ್ವಿಫ್ಟ್ ಕಾರಿನಲ್ಲಿ ಕಾರ್ಕಳಕ್ಕೆ ಹೊರಟ.

ಮಂಗಳೂರಿನಿಂದ ಕಾರ್ಕಳಕ್ಕೆ ಕಾರಿನಲ್ಲಿ ಬರೇ ಒಂದು ಗಂಟೆಯ ದಾರಿ. ಹೊರಗಿನ ಧೂಳು ಜೊತೆಗೆ ವಾಹನಗಳ ಕರ್ಕಶ ಶಬ್ದವೆಂದರೆ ಶೇಖರನಿಗೆ ಮೊದಲಿಂದಲೂ ಆಗುವುದೇ ಇಲ್ಲ. ಇಲ್ಲದ ತಲೆನೋವು ಪ್ರತ್ಯಕ್ಷವಾಗಿ ಬಿಡುತ್ತದೆ. ಗ್ಲಾಸ್ ಮೇಲೆ ಮಾಡಿ ಎ.ಸಿ. ಹಾಕಿದ. ಕಾರು ಕೂಳೂರು ಸೇತುವೆ ಬಿಡುತ್ತಲೇ ನೂರಾರು ಯೋಚನೆಗಳು ಮುತ್ತಿಕೊಂಡವು. ಅಪ್ಪ ಬೇಗ ತೀರಿಕೊಂಡು ಮನೆಯ ಸಮಸ್ತ ಜವಾಬ್ದಾರಿಯನ್ನೂ ತನ್ನ ಹೆಗಲ‌ಮೇಲೆ ಹೊತ್ತುಕೊಂಡಾಗ ಮಾವನದ್ದು ಕೇವಲ ಇಪ್ಪತೈದು ವರ್ಷ‌ ಅಂತ ಅಮ್ಮ ಆಗಾಗ ಹೇಳುವ ಮಾತು. ಜೊತೆಗೆ ಮೂವರು ತಂಗಿಯರ ಮದುವೆ, ಬಾಣಂತ ಆಂತ ಖರ್ಚುಗಳ ಮೇಲೆ ಖರ್ಚು. ಎಲ್ಲರ ಮದುವೆ ಆಗಿ ತನ್ನ ಮದುವೆ ಆಗುವಾಗ ಮಾವನಲ್ಲೂ, ಮನೆಯಲ್ಲೂ ಬಹಳಷ್ಟು ಬದಲಾವಣೆಗಳಾಗಿದ್ದವು ಮತ್ತು ಮದುವೆ ಆಗುವಾಗ ಮಾವನ ವಯಸ್ಸು ಮೂವತ್ತೆಂಟು ದಾಟಿತ್ತು. ಅಜ್ಜ ಅಜ್ಜಿ ಇದ್ದ ದಿನಗಳಲ್ಲಿ ಸದಾ ಬಂಧುಬಾಂಧವರಿಂದ ಗಿಜಿಗುಟ್ಟುತ್ತಿದ್ದ ಮನೆ ಅದು. ಅಜ್ಜನನ್ನು ನೋಡಿದ ನೆನಪು ನನಗಿಲ್ಲ. ಯಕ್ಷಗಾನ ಕಲಾವಿದರಂತೆ ಅವರು. ಹಾಗಾಗಿ ಮನೆಯಲ್ಲಿ ಯಕ್ಷಗಾನದ್ದೇ ವಾತಾವರಣ. ಹಾಲ್‌ನಲ್ಲಿ ದೊಡ್ಡದೊಂದು ಕಾಳಿಂಗ ನಾವಡರ ತಲೆಗೆ ಕೆಂಪು ಮುಂಡಾಸು ಸುತ್ತಿಕೊಂಡು ನಗುತ್ತಿದ್ದ ಫೋಟೋ. ನನಗೂ ಕಾಳಿಂಗ ನಾವಡರ ಮೇಲೆ, ಯಕ್ಷಗಾನದ ಮೇಲೆ ಪ್ರೀತಿ ಆಸಕ್ತಿ ಬೆಳೆಯಲು ಕಾರಣವಾಗಿದ್ದು ಇದೇ ಫೋಟೋ. ಈಗಲೂ ಇರಬಹುದಾ ಅದೇ ಫೋಟೋ? ಇವತ್ತು ಮನೆಗೆ ಹೋದಾಗ ನೋಡ್ಬೇಕು ಅಂದುಕೊಂಡ ಶೇಖರ್.

ರಸ್ತೆ ಬಹಳ ಚೆನ್ನಾಗಿದ್ದರೂ ಮಳೆಗಾಲದ ಹೊಡೆತಕ್ಕೆ ಅಲ್ಲಲ್ಲಿ ಒಂದೊಂದು ಹೊಂಡ ಬಿದ್ದಿವೆ. ಹಾಗಾಗಿ ತನ್ನ ಎಂದಿನ ವೇಗದಲ್ಲಿ ಕಾರು ಚಲಾಯಿಸಲು ಶೇಖರನಿಗೆ ಸಾಧ್ಯವಾಗಲಿಲ್ಲ. ಲಾಂಗ್ ಡ್ರೈವ್ ಹೋಗುವುದೆಂದರೆ ಶೇಖರನಿಗೆ ಬಹಳ ಇಷ್ಟ. ಆದರೆ ಎಂಜಾಯ್ ಮಾಡುವ ಮೂಡ್‌ನಲ್ಲಿ ಇರಲಿಲ್ಲ. ಸುರತ್ಕಲ್ ಟೋಲ್ ಗೇಟ್‌ನಲ್ಲಿ ಹಣ ಕಟ್ಟಿ ಮುಕ್ಕ ಬರುವಷ್ಟರಲ್ಲಿ ಮಳೆಯ ದಪ್ಪ ದಪ್ಪ ಹನಿಗಳು ಕಾರಿನ ಗ್ಲಾಸ್ ಮೇಲೆ ಬೀಳಲಾರಂಭಿಸಿ ಕ್ರಮೇಣ ಗಾಳಿ ಮಳೆ ಬಿರುಸಾಯಿತು. ವೈಪರ್ ಆನ್ ಮಾಡಿ ಕಾರಿನ ವೇಗವನ್ನು ತಗ್ಗಿಸಿದ.

ಆ ದಿನವಿನ್ನೂ ನನಗೆ ಚೆನ್ನಾಗಿ ನೆನಪಿದೆ. ಬಹುಶಃ ನಾನಾಗ ಪಿಯುಸಿಯಲ್ಲಿದ್ದೆ. ಅಮ್ಮ ಎಂದಿನ ಹಾಗೆ ಬುಟ್ಟಿಯಲ್ಲಿ ಮನೆಯಲ್ಲಿ ಬೆಳೆದ ತರಕಾರಿಯನ್ನೆಲ್ಲಾ ತಲೆಯ ಮೇಲೆ ಹೊತ್ತುಕೊಂಡು ಬೆಳಿಗ್ಗೆ ಬೇಗ ಮನೆ ಬಿಟ್ಟಿದ್ರು. ಹೆಚ್ಚಾಗಿ ಅವರು ಈ ತರಕಾರಿಗಳನ್ನೆಲ್ಲಾ ಪೇಟೆಯಲ್ಲಿ ಮನೆಮನೆಗೂ ಸುತ್ತಿ ಮಾರಾಟ ಮಾಡ್ತಾರೆ. ಎಲ್ಲಾ ಮಾರಾಟವಾದ ನಂತರ ಅದೇ ಹಣದಲ್ಲಿ ಮನೆಗೆ ಬೇಕಾದುದನ್ನೆಲ್ಲಾ ತೆಗೆದುಕೊಂಡು ಮಧ್ಯಾಹ್ನದ ಊಟದ ಹೊತ್ತಿಗೆ ಮನೆಗೆ ಬರುತ್ತಾರೆ. ಆದರೆ ಆ ದಿನ ಪೇಟೆಗೆ ಹೋದವರಿಗೆ ಆಘಾತ ಕಾದಿತ್ತು. ಅಮ್ಮನಿಗೆ ತೀವ್ರ ಹೃದಯಾಘಾತವಾಗಿದೆ, ಕೂಡಲೇ ಬರಬೇಕು ಅಂತ ಮಾನವನಿಂದ ಕರೆ ಬಂದಿತ್ತು. ತರಕಾರಿ ಬುಟ್ಟಿಯನ್ನು ಹೊತ್ತುಕೊಂಡೇ ಬಸ್ಸು ಹತ್ತಿ ತವರಿಗೆ ಹೋದರೂ ತನ್ನ ಅಮ್ಮನನ್ನು ಜೀವಂತ ನೋಡುವ ಭಾಗ್ಯ ನನ್ನ ಅಮ್ಮನಿಗೆ ಇರಲಿಲ್ಲ. ಅದೇನೂ ಸಾಯುವ ವಯಸ್ಸಾಗಿರಲಿಲ್ಲ. ಸಂಜೆ ಎದೆನೋವು ಅಂದಾಗ ಗ್ಯಾಸ್ಟ್ರಿಕ್‌ ಇರಬಹುದು ಅಂತ ವಾಯುಮಾತ್ರೆ ಕೊಟ್ಟಿದ್ರಂತೆ. ಸ್ವಲ್ಪ ಸರಿ ಆಯ್ತು ಅಂತ ರಾತ್ರಿ ಊಟದ ಹೊತ್ತಿಗೆ ಹೇಳಿಯೂ ಇದ್ದರು. ಆದರೆ ಬೆಳಿಗ್ಗೆ ಎದ್ದ ಕೂಡಲೇ ಮಗನ ಕೈಯಿಂದ ಕಾಫಿಯನ್ನು ಕೇಳಿ ಕುಡಿದಿದ್ದಾರೆ. ನಂತರ ಗೋಡೆಗೆ ಒರಗಿದವರು ಅಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಇದ್ದಾಗ ಎಲ್ಲರೊಂದಿಗೂ ನಗ್ತಾ ನಗ್ತಾ ಇದ್ದ ಅಜ್ಜಿ ಹೋಗುವ ಕಾಲಕ್ಕೆ ಯಾರಿಂದಲೂ ಚಾಕರಿ ಮಾಡಿಸಿಕೊಳ್ಳದ ಜೀವ. ಬಹಳ‌ ಒಳ್ಳೆಯ ಸಾವು. ಆದರೆ ಅದರ ಪರಿಣಾಮ ಅತೀ ಹೆಚ್ಚಾಗಿ ಆದದ್ದು ಮಾವನ ಮೇಲೆ. ಆಗಲೇ ಅಪ್ಪನನ್ನೂ ಕಳೆದುಕೊಂಡಿದ್ದ ಮಾವ ಈಗ ಅಮ್ಮನನ್ನೂ ಕಳೆದುಕೊಂಡು ಅನಾಥರಾಗಿಹೋದ್ರು. ಎಲ್ಲರೂ ಬಹಳ ಇಷ್ಟಪಟ್ಟು ಆ ಮನೆಗೆ ಹೋಗುವುದಕ್ಕಾಗಿಯೇ ಕಾರಣವಾಗಿದ್ದ ಕೊಂಡಿಯೊಂದು ಅಂದು ಕಳಚಿಕೊಂಡಿತ್ತು.

ಹೊರಗೆ ಮಳೆ ನಿಂತಿತ್ತು. ಆಗಲೇ ಕಾರು ಪಡುಬಿದ್ರೆಯಿಂದ ಕಾರ್ಕಳಕ್ಕೆ ಹೋಗುವ ರಸ್ತೆಯಲ್ಲಿತ್ತು. ಮಳೆ ಬಿದ್ದ ಮಣ್ಣಿನ ಪರಿಮಳದ ಆಸೆಯಿಂದ ಕಾರ್‌ನ ಗ್ಲಾಸನ್ನು ಕೆಳಗೆ ಮಾಡಿದ. ಇನ್ನೂ ಸಣ್ಣಗೆ ಹನಿಯುತ್ತಿರುವ ಮಳೆಯ ಹಿತವಾದ ಗಾಳಿ ಕಾರಿನೊಳಗೆ ನುಗ್ಗಿತು. ಒಮ್ಮೆ ಜೋರಾಗಿ ಉಸಿರೆಳೆದುಕೊಂಡ ಶೇಖರ್ ಮಳೆಯಲ್ಲಿ ನೆನೆದ ಪ್ರಕೃತಿಯನ್ನು ನೋಡತೊಡಗಿದ. ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಷ್ಟಾಗಿ ಇಲ್ಲದಿದ್ದರೂ ವೇಗ ಹೆಚ್ಚು ಮಾಡುವ ಮನಸ್ಸು ಮಾಡಲಿಲ್ಲ‌.

ಲಾಂಗ್ ಡ್ರೈವ್ ಹೋಗುವುದೆಂದರೆ ಶೇಖರನಿಗೆ ಬಹಳ ಇಷ್ಟ. ಆದರೆ ಎಂಜಾಯ್ ಮಾಡುವ ಮೂಡ್‌ನಲ್ಲಿ ಇರಲಿಲ್ಲ. ಸುರತ್ಕಲ್ ಟೋಲ್ ಗೇಟ್‌ನಲ್ಲಿ ಹಣ ಕಟ್ಟಿ ಮುಕ್ಕ ಬರುವಷ್ಟರಲ್ಲಿ ಮಳೆಯ ದಪ್ಪ ದಪ್ಪ ಹನಿಗಳು ಕಾರಿನ ಗ್ಲಾಸ್ ಮೇಲೆ ಬೀಳಲಾರಂಭಿಸಿ ಕ್ರಮೇಣ ಗಾಳಿ ಮಳೆ ಬಿರುಸಾಯಿತು. ವೈಪರ್ ಆನ್ ಮಾಡಿ ಕಾರಿನ ವೇಗವನ್ನು ತಗ್ಗಿಸಿದ.

ಅಂದ ಹಾಗೆ ಮನುಷ್ಯ ಯಾವಾಗ ಹೆಚ್ಚು ಖುಷಿಯಿಂದ ಇರುತ್ತಾನೆ? ಮದುವೆಯ ಮೊದಲೋ ಅಥವಾ ಮದುವೆಯ ನಂತರವೊ? ಇದೆಂತಹ ಪ್ರಶ್ನೆ ಎಂದು ತಲೆ ಕೊಡವಿಕೊಂಡ ಶೇಖರ್. ಅಷ್ಟಕ್ಕೂ ಬದುಕಿನ‌ ಸಂತೋಷಗಳಿಗೂ ಈ ಮದುವೆಗೂ ಯಾವ ಸಂಬಂಧ? ಆದರೆ ಯಾಕೋ ಮಾವನ ಬದುಕನ್ನು ನೋಡುವಾಗ ಸಂತೋಷ ಮತ್ತು ಮದುವೆಯ ನಡುವೆ ಬಹಳ ಅಂತರವಿದೆ ಅಂತ ಅನ್ನಿಸಿತು. ಎಲ್ಲಾ ತಂಗಿಯರ ಮದುವೆಯ ನಂತರ ಒಂಟಿಯಾದ ಎಷ್ಟೋ ವರ್ಷಗಳ‌ ಬಳಿಕ ಮಾವನ‌ ಮದುವೆಯಾದದ್ದು. ದೊಡ್ಡ ಮನೆ, ಐದೆಕರೆ ಫಲವತ್ತಾದ ಕೃಷಿಭೂಮಿ, ಅಡಕೆ ತೋಟ ಮೇಲಾಗಿ ಅತ್ತೆ ನಾದಿನಿಯರ ಕಾಟವಿಲ್ಲದ ಎಲ್ಲರೂ ಬಯಸುವ ಕನಸಿನ ಸಂಸಾರ! ಏನು ಕೊರತೆ ಇತ್ತು ಸುಖಕ್ಕೆ? ಆದರೆ ಯಾಕೋ ಅಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಯಾವುದೇ ಸಂಭ್ರಮ ಕಾಣದೇ ನಿಧಾನವಾಗಿ ಸಂಸಾರದೊಳಗೇ ಅಸಮಾಧಾನದ ಕಿಚ್ಚು ಹೊತ್ತಿಕೊಂಡದ್ದು ಅಷ್ಟು ಬೇಗನೇ ಯಾರ ಅರಿವಿಗೂ ಬರಲಿಲ್ಲ. ಆದರೆ ಎಲ್ಲರ ಅರಿವಿಗೆ ಬರುವ ಹೊತ್ತಿಗೆ ಬಹಳ ತಡವಾಗಿ ಹೋಗಿತ್ತು. ಮದುವೆಯಾದ ಎರಡು ವರ್ಷಕ್ಕೇ ನಿಂತ ದಂಪತಿಗಳ ನಡುವಿನ ಮಾತುಕತೆ ಈಗಲೂ ಶುರುವಾಗಿಲ್ಲ. ಭಾರೀ ಒಳ್ಳೆಯ ಹುಡುಗ, ಒಳ್ಳೆಯ ಮನೆತನ, ಆಸ್ತಿ ಇದೆ, ಅದಿದೆ ಇದಿದೆ ಅಂತ ಹೇಳಿ ಎಲ್ಲಾ ಸೇರಿ ನನ್ನ ತಲೆಯ ಮೇಲೆ ಕಲ್ಲು ಚಪ್ಡಿ ಎತ್ತಿ ಹಾಕಿದ್ರು ಇವನಿಗೆ ಕಟ್ಟಿಹಾಕಿ ಅಂತ ಮಾಮಿ ಹೇಳುತ್ತಿದ್ದುದನ್ನು ಎಷ್ಟೋ ಸಾರಿ ಕೇಳಿದ್ದೇನೆ. ಆದರೆ ನನ್ನ ಕಣ್ಣಿಗೆ ಮಾತ್ರ ಅಂದಿಗೂ ಇಂದಿಗೂ ಮಾವನಲ್ಲಿ ಯಾವುದೇ ದೋಷವೂ ಕಾಣಲೇ ಇಲ್ಲ. ಅದು ಯಾವ ರೀತಿಯಲ್ಲಿ ನೋಡಿದರೂ… ಮಾವನೂ ಮಾಮಿಗೆ ಅದೆಷ್ಟೋ ಸಾರಿ ಬುದ್ದಿ ಹೇಳಿ ನೋಡಿದ್ರು, ಬೇರೆಯವರ ಹತ್ರ ಹೇಳಿಸಿದ್ರು, ಕೊನೆಗೆ ಪಂಚಾಯತಿ ಕೂಡಾ ಕರೆಸಿ ಮಾತನಾಡಿಸಿದ್ರು. ಆದರೂ ಮಾಮಿ ಸರಿಯಾಗಲೇ ಇಲ್ಲ. ಇದೆಲ್ಲದರ ಪರಿಣಾಮ‌ ಮಾತ್ರ ಆದದ್ದು ಮಾವನ ಮೇಲೆ. ಬದುಕು ಮೊದಲಿಗಿಂತಲೂ ಕಷ್ಟವಾಯ್ತು. ಸಮಯಕ್ಕೆ ಸರಿಯಾಗಿ ಅಡುಗೆ ಮಾಡದೇ, ರಾತ್ರಿ ಸ್ವಲ್ಪ ತಡವಾಗಿ ಬಂದರೂ ಮನೆ ಬಾಗಿಲು ತೆರೆಯದೇ, ಮನೆಗೆ ಬಂದವರೊಡನೆ ಸರಿಯಾಗಿ‌ ಮುಖ ಕೊಟ್ಟು ಮಾತಾಡದೇ ಮಾವನಿಗೆ ಕಗ್ಗಂಟಾಗಿಯೇ ಉಳಿದಳು. ತುಂಬಾ ಸಲ‌ ಯೋಚಿಸಿದ್ದೇನೆ ಯಾಕೆ ಹೀಗೆ ಅಂತ? ಗಂಡು ಹೆಣ್ಣಿನ‌ ನಡುವಿನ‌ ಆರಂಭದ ಆಕರ್ಷಣೆ ಅಷ್ಟು ಬೇಗೆ ಕರಗಲು ಕಾರಣವೇನು? ಜೀವಮಾನವಿಡೀ‌ ಅನ್ಯೋನ್ಯವಾಗಿರುವ ದಂಪತಿಗಳ‌ ನಡುವಿನ ಆ ಗುಟ್ಟೇನು? ಅರ್ಥವೇ ಅಗುವುದಿಲ್ಲ. ನನಗಿನ್ನೂ ಚೆನ್ನಾಗಿ ನೆನಪಿದೆ. ಯಾವುದೋ ಒಂದು ಪಂಚಾಯತಿಯಲ್ಲಿ, “ನನ್ನನ್ನೇನು ಹಂಗಿಸೋದು? ನಾನಲ್ಲ, ಇದಕ್ಕೆಲ್ಲಾ ಕಾರಣ.. ಓ ಇವರಿದ್ದಾರಲ್ಲ… ಇವರು. ದುಡಿದದ್ದನ್ನೆಲ್ಲಾ ಆ ರಂಡೆಗೇ ಹೋಗಿ ಸುರೀಲಿ ಮತ್ತು ಅಲ್ಲಿಯೇ ಹೋಗಿ ಮಲಗ್ಲಿ. ಮನೆ ಉದ್ಧಾರ ಆಗ್ತದೆ… ಎಲ್ಲಾ ನನ್ಗೇ ಹೇಳ್ಲಿಕ್ಕೆ ಬಂದ್ರು, ಹೋಗಿ ಹೋಗಿ…” ಅಂತ ಮಾಮಿ ಹೇಳಿದ ಮಾತಿಗೆ ಎಲ್ಲರೂ ಬೆಚ್ಚಿ ಬಿದ್ದಿದ್ರು! ಮಾಮಿ ಹಚ್ಚಿದ ಆ ಕಿಡಿ ಮತ್ತೆ ನಂದಿಹೋಗಲೇ ಇಲ್ಲ. ನನಗೆ ಗೊತ್ತಿದ್ದ ಹಾಗೆ ಮತ್ತೆ ಯಾರೂ ಇವರ ಪಂಚಾಯತಿಗೆ ಹೋಗಲೇ ಇಲ್ಲ.

ಬೆಳ್ಮಣ್‌ನಲ್ಲಿ ಕಾರು ಬದಿಗೆ ನಿಲ್ಲಿಸಿ ಸಿಗರೇಟ್ ಹಚ್ಚಿದ ಶೇಖರ್. ರಸ್ತೆ ಅಗಲೀಕರಣದ ಕೆಲಸ ನಡೀತಾ ಇತ್ತು. ಪರಿಚಿತವಿದ್ದ ದ್ವಾರಕಾ ಹೋಟೇಲ್ ಅರ್ಧ ಗೋಡೆಗಳನ್ನು ಕೆಡವಿಕೊಂಡು ನಿಂತಿತ್ತು. ಮುಂದಿನ ಸಾರಿ ಬರುವಾಗ ಖಂಡಿತವಾಗಿಯೂ ಇದರ ಕುರುಹುಗಳು ಸಿಗಲಿಕ್ಕಿಲ್ಲ. ಇಂದು ನಾನು ನೋಡಿದ್ದು ಒಂದು ರೀತಿಯಲ್ಲಿ ಅಂತಿಮ ದರ್ಶನ ಅನ್ನುವ ಒಳ ಸುಳಿವು ಬಂದು ಮನಸ್ಸಿಗೆ ಹೇಗೇಗೋ ಅನ್ನಿಸಿತು ಒಂದು ಕ್ಷಣ. ಬೇರೆಲ್ಲಿ ಹೋಟೆಲ್ ಇಟ್ಟಿದ್ದಾರೋ ವಿಚಾರಿಸಬೇಕು ಅಂದುಕೊಂಡ. ಬಹುಶಃ ಬೆಳ್ಮಣ್‌ನ ಸಂತೆ ಇರಬೇಕು. ಲಾರಿಯಿಂದ ತರಕಾರಿಗಳನ್ನು ಇಳಿಸುವಲ್ಲಿ ನಿರತರಾಗಿದ್ದ ಜನರನ್ನು ಒಂದು ಕ್ಷಣ ದಿಟ್ಟಿಸಿ ನೋಡಿ ಬೆರಳಿಗೆ ಬಿಸಿ ತಾಗಲು ಆರಂಭವಾಗಿದ್ದ ಸಿಗರೇಟ್ ತುಂಡನ್ನು ನೆಲಕ್ಕೆಸೆದು ಚಪ್ಪಲಿಯಿಂದ ಹೊಸಕಿ ಕಾರ್ ಸ್ಟಾರ್ಟ್ ಮಾಡಿದ.

“ಹುಡುಗಿ ಚೆನ್ನಾಗಿದ್ದಾಳೆ, ಓದಿದ್ದಾಳೆ ಎಲ್ಲಾ ಸರಿ. ಆದರೂ ಚೆನ್ನಾಗಿ ವಿಚಾರಿಸು. ಅವಳಿಗೆ ಈ ಮೊದಲು ಯಾರ ಜೊತೆ ಕೂಡಾ ಒಡನಾಟ ಇರಲಿಲ್ಲ ಅನ್ನೋದನ್ನ ಮೊದಲು ಖಾತ್ರಿ ಮಾಡಿ ಮುಂದಿನ ಸಿದ್ಧತೆಗೆ ಮಾತು ಕೊಡು… ಯಾರನ್ನೂ ನಂಬೋಕಾಗಲ್ಲ. ಆಮೇಲೆ ನಮ್ಮ ತಲೆ ಮೇಲೆ ನಮ್ಮ ಕೈ…”
ನನ್ನ ಮದುವೆಯ ಸಂದರ್ಭದಲ್ಲಿ ಮಾಮ ಹೇಳಿದ ಮಾತುಗಳನ್ನು ಹಲವಾರು ಬಾರಿ ಮೆಲುಕು ಹಾಕಿದ್ದೇನೆ. ಅದು ನನ್ನನ್ನು ಉದ್ದೇಶಿಸಿ ಹೇಳಿದ್ದರೂ ನಿಜವಾಗಿಯೂ ಅಂದು ಮಾವ ಆಡಿದ್ದು ಅವರಿಗೇ ಹೇಳುತಿದ್ದ ಸ್ವಗತವೆಂಬತ್ತಿತ್ತು.

ಹಾಗಾದ್ರೆ ಮಾಮಿಗೆ ಮದುವೆಯ ಮೊದಲು ಬೇರೆಯವರ ಜೊತೆ ಒಡನಾಟವಿತ್ತೇ? ಅದು ಗೊತ್ತಿಲ್ಲದೇ ಮಾವ ಮದುವೆಯಾದರೆ? ಇದ್ದರೂ ಮಾಮಿ ಯಾಕೆ ಹೇಳಲಿಲ್ಲ? ಯಾವ ಒತ್ತಡ ಅವರನ್ನು ಸುಮ್ಮನಿರುವಂತೆ ಮಾಡಿತು? ಯಾರನ್ನು ಕೇಳುವುದು? ಉತ್ತರವಿಲ್ಲದ ಪ್ರಶ್ನೆಗಳು. ಇನ್ನು ಮಾವನ ಮೇಲೆ ಮಾಡಿದ್ದ ಅರೋಪದಲ್ಲಿ ಎಷ್ಟು ನಿಜ? ಅದರ ಸೆರಗನ್ನು ಹಿಡಿದು ಹೊರಟರೆ ಆ ಹೆಂಗಸಿನ‌ ಜೊತೆ ನಿಂತು ಮಾತಾಡಿದ್ದು, ಅವರ ಗದ್ದೆಯನ್ನು ಉಳುಮೆ ಮಾಡಿ ಕೊಟ್ಟದ್ದು, ಅವರ ಅಂಗಳದಲ್ಲಿ ಚಪ್ಪರ ಹಾಕಿದ ವಿಷಯಗಳಷ್ಟೇ ಸಿಗುತ್ತವೆ. ಹಾಗಾದರೆ ಮಾಮಿ ಮಾಡಿದ ಆರೋಪದಲ್ಲಿ ನಿಜವಾಗಿಯೂ ಕಂಡದ್ದೆಷ್ಟು? ಅಥವಾ ಸಂಸಾರ ಸುಖ ಸಿಗದ ಹತಾಶೆಯಲ್ಲಿ ಆಡಿದ ಮಾತುಗಳಾಗಿದ್ದಿರಬಹುದು ಮಾಮಿ ಹೇಳಿದ್ದ ಮಾತುಗಳು ಅಂತ ನನಗೆ ಎಷ್ಟೋ ಸಾರಿ ಅನ್ನಿಸಿದೆ. ಆ ಹೇಳಿಕೆಯಲ್ಲಿ ಎಷ್ಟು ನಿಜವಿರಬಹುದು? ಒಂದು ವೇಳೆ ನಿಜವೇ ಆಗಿದ್ದರೂ ನನ್ನ ಮನಸ್ಸು ಈಗಲೂ ಮಾವನ ಪರವೇ ನಿಲ್ಲುತ್ತದೆ. ಯಾವ ಸುಖ ಇತ್ತು ಮಾವನಿಗೆ? ಎಷ್ಟೇ ದುಡಿದು ಏನೆಲ್ಲಾ ಗಳಿಸಿದರೂ ಕೊನೆಗೆ ಮರಳುವುದು ಮನೆಗೇ ತಾನೆ? ಅಲ್ಲಿ ಮುಖ್ಯವಾಗಿ ಅವನಿಗೆ ಮನಃಶ್ಯಾಂತಿ ಇಲ್ಲದೇ ಹೋದರೆ ಸುಖವನ್ನು ಹೊರಗೆ ಅರಸಿದ್ದರಲ್ಲಿ ತಪ್ಪೇನು? ಹಾಗೇಯೇ ಆಗಿದ್ದರೂ ಮಾಮಿಯೇ ತಪ್ಪಿತಸ್ಥಳು ಅನ್ನಿಸುತ್ತದೆ ಈ ವಿಷಯದಲ್ಲಿ. ಸಂಸಾರದಲ್ಲಿ ಸಂಗಾತಿಗೆ ಸುಖವನ್ನು ನಿರಾಕರಿಸುವುದು ಅಪರಾಧವಾಗುತ್ತದೆ. ಇದನ್ನು ಕೋರ್ಟ್ ಕೂಡಾ ಒಪ್ಪುತ್ತದೆ. ಅಷ್ಟಾಗಿಯೂ ಯೌವನ ಕಳೆದು ಮುಪ್ಪಿನ ಬಾಗಿಲನ್ನು ತಟ್ಟುವಾಗ ಎಷ್ಟೇ ಬಿಗಿಯಾದ ಮನುಷ್ಯ ಕೂಡಾ ಮೆತ್ತಗಾಗುತ್ತಾನಂತೆ. ಆದರೆ ಇಲ್ಲಿ ಅದೂ ಕಾಣುತ್ತಿಲ್ಲ. ಯಾವುದೇ ಬದಲಾವಣೆಯಿಲ್ಲದ, ಮಾತಿಲ್ಲದ ಬಲವಂತಕೆ ಕಟ್ಟಿಬಿದ್ದ ಸಂಸಾರ ಇದು. ಹದವಾಗಲೇ ಇಲ್ಲ ಇನ್ನೂ. ಮಳೆಯಿರದೇ ಸದಾ ಬಿರುಕು ಬಿಟ್ಟ ನೆಲ.

ಕಾರು ಪಾರ್ಕ್ ಮಾಡಿ ಆಸ್ಪತ್ರೆಗೆ ಹೋದಾಗ ಆಗಲೇ ಅಪ್ಪ ಅಮ್ಮ ಅಲ್ಲಿ ಬಂದಾಗಿತ್ತು. ಮತ್ತು ಅಮ್ಮನ ದುಃಖ ಕಟ್ಟೆಯೊಡೆದ ರೀತಿಯಲ್ಲಿಯೇ ಗೊತ್ತಾಯಿತು ಶೇಖರನಿಗೆ ಅಲ್ಲಿನ ಸ್ಥಿತಿ. ಒಮ್ಮೆ ಮಾವನ ಮುಖ ನೋಡಿ ಬಂದು ಮಾವನ ಮಗಳನ್ನು ಸಂತೈಸತೊಡಗಿದ. ಮಾಮಿಯ ಸುಳಿವಿರದಿದ್ದರೂ ಕೇಳುವ ಮನಸ್ಸು ಮಾಡಲಿಲ್ಲ. ನನ್ನನ್ನು ಈ ರೀತಿ ನರಳಿಸಿದ ಅವಳಿಗೆ ತಕ್ಕ ಶಾಸ್ತಿ ಮಾಡ್ತೇನೆ ಅಂತ ಮಾವ ಆಗಾಗ ಹೇಳುವುದಿತ್ತು ಮತ್ತು ಇದಕ್ಕಿಂತ ದೊಡ್ಡ ಶಿಕ್ಷೆ ಕೊಡಲು ಮಾನವನಿಂದ ಖಂಡಿತವಾಗಿಯೂ ಸಾಧ್ಯವಾಗುತ್ತಿರಲಿಲ್ಲ. ಚಿರನಿದ್ರೆಯಲ್ಲೂ ಮಾವನ ಮುಖದ ಮೇಲೆ ಒಂದು ವಿಚಿತ್ರ ಸಮಾಧಾನದ ಕಳೆಯಿದ್ದದ್ದು ತನ್ನ ಭ್ರಮೆಯಿರಲಿಕ್ಕಿಲ್ಲ ಎಂದುಕೊಂಡ ಶೇಖರ್.