ಇವರ ಕತೆಗಳಲ್ಲಿ ಬರುವ ಪಾತ್ರಗಳು ಹೆಚ್ಚು ಸಾಚಾ ಆಗಿ, ರೊಮ್ಯಾಂಟಿಸಂ ಇಲ್ಲದ ಒರಟುತನದಿಂದ, ಒಬ್ಬ ಹಳ್ಳಿಗನ ಇವಿಲ್ ಕೂಡ ಸಹಜ ಎಂದು ಅನಿಸುವಂತೆ ಮೂಡಿ ಬರುತ್ತವೆ. ಇಲ್ಲಿ ಕೊಲೆ ಮಾಡಬಲ್ಲ ಭಾವ, ಮೈದುನರು, ಯಕ್ಷಗಾನ ಬಯಲಾಟದ ಟೆಂಟಿಗೆ ಬೆಂಕಿ ಹಚ್ಚಬಲ್ಲ ಕಟ್ಟಾ ಜಿದ್ದಿನ ಊರ ಮಂದಿ, ಕಳ್ಳನಾಟ ಸಾಗಿಸುವ ದಂಧೆಯನ್ನು ಹೊಟ್ಟೆಪಾಡಿನ ಅನಿವಾರ್ಯ ಎಂದು ಕಂಡುಕೊಳ್ಳುವ ಮತ್ತು ಆದರ್ಶದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವ ಯಕಃಶ್ಚಿತ್ ಮನುಷ್ಯರು ಕಾಣಸಿಗುತ್ತಾರೆ. ಇವರು ಎಕ್ಸ್ಟ್ರಾ ಮ್ಯಾರಿಟಲ್ ಸಂಬಂಧವನ್ನು, ಸೆಕ್ಸನ್ನು, ಕುಡಿತವನ್ನು ಒಂದು ಬೇರೆಯೇ ನೆಲೆಯಲ್ಲಿ ಸಂಭ್ರಮಿಸಬಲ್ಲ ಮನುಷ್ಯರು.
ರಾಜು ಹೆಗಡೆ ಅವರ “ಜಾಂಬ್ಳಿ ಟುವಾಲು” ಕಥಾ ಸಂಕಲನಕ್ಕೆ ನರೇಂದ್ರ ಪೈ ಬರೆದ ಮುನ್ನುಡಿ

 

ಉತ್ತರ ಕನ್ನಡದ ಸಣ್ಣ ಕಥೆಗಾರರ ಒಂದು ದೊಡ್ಡ ಪರಂಪರೆಯೇ ನಮ್ಮ ಸಣ್ಣ ಕಥೆಗಳ ಜಗತ್ತಿಗಿದೆ. ವಿ.ಜಿ. ಶ್ಯಾನಭಾಗರಿಂದ ತೊಡಗಿ ಚಿತ್ತಾಲ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ ಮುಂತಾದ ಖ್ಯಾತನಾಮರ ಜೊತೆ ಹೊಸ ತಲೆಮಾರಿಗೆ ಸೇರಿದ ಬಹುದೊಡ್ಡ ಕಥೆಗಾರರ ಪಡೆಯೇ ಉತ್ತರಕನ್ನಡದ ಸೊಗಡನ್ನು ಕನ್ನಡ ಸಣ್ಣಕತೆಗೆ ಧಾರೆ ಎರೆದಿದೆ. ಶ್ರೀಧರ ಬಳಗಾರ, ಅಶೋಕ ಹೆಗಡೆ, ಚಿಂತಾಮಣಿ ಕೊಡ್ಲೆಕೆರೆ, ಸುನಂದಾ ಪ್ರಕಾಶ ಕಡಮೆ, ಸಂದೀಪ ನಾಯಕ, ಅನುಜಯಾ ಎಸ್.ಕುಮಟಾಕರ್, ಕಾವ್ಯಾ ಕಡಮೆ, ಪದ್ಮನಾಭ ಭಟ್ ಶೇವ್ಕಾರ, ಪ್ರಕಾಶ ನಾಯಕ, ಭಾಸ್ಕರ ಹೆಗಡೆ, ಸಚ್ಚಿದಾನಂದ ಹೆಗಡೆ ಮುಂತಾದವರಲ್ಲದೆ ಇನ್ನೂ ಹಲವರು ಸಣ್ಣಕತೆಗಳ ಕ್ಷೇತ್ರದಲ್ಲಿ ಸಾಕಷ್ಟು ಗಮನಾರ್ಹ ಕೊಡುಗೆಯನ್ನಿತ್ತಿದ್ದಾರೆ. ಇವರುಗಳು ನಮಗೆ ದಕ್ಕಿಸಿದ ಹನೇಹಳ್ಳಿ, ಗೋಕರ್ಣ, ಹೊನ್ನಾವರ, ಶಿರಸಿ, ಅಂಕೋಲೆ, ಶರಾವತಿ, ಗಂಗಾವಳಿ, ಪಾಪನಾಶಿನಿ, ಅಘನಾಶಿನಿ, ಅಳಿವೆ ಬಾಗಿಲು, ಯಕ್ಷಗಾನ, ಬಯಲಾಟ, ದೋಣಿ-ಲಾಂಚುಗಳ ಪ್ರಯಾಣ ಎಲ್ಲ ಸೇರಿ ನಮಗೆ ಉತ್ತರ ಕನ್ನಡ ಎಂದರೆ ಇದು ಎಂಬಂಥ ಏನು ಒಂದು ಚಿತ್ರ ಮನಸ್ಸಿನಲ್ಲಿ ನೆಲೆಯಾಗಿದೆ, ಅದು ನಿಜವಾದ ಉತ್ತರ ಕನ್ನಡವೇ ಎನ್ನುವ ಪ್ರಶ್ನೆ ಇದೆ.

ಭಾರತೀಯ ಇಂಗ್ಲೀಷ್ ಸಾಹಿತ್ಯ ಸೃಷ್ಟಿಸಿದ ಒಂದು ಭಾರತ ನಿಜವಾದ ಭಾರತವಾಗಿರದೆ, ಸಾಮಾನ್ಯವಾಗಿ ಹೊರದೇಶಗಳಲ್ಲೆ ನೆಲೆಯಾದ ಭಾರತೀಯ ಮೂಲದ ಇಂಗ್ಲೀಷ್ ಸಾಹಿತಿಗಳ ಅರೆಬರೆ ನೆನಪು ಮತ್ತು ಕಲ್ಪನೆಯ ಒಂದು ಒಂದು ಭಾರತವಾಗಿದೆ ಎನ್ನುವ ಆರೋಪವಿದೆ. ಭಾರತೀಯ ಭಾಷೆಯಲ್ಲಿ ನಮಗೆ ಸಿಗುವ ಭಾರತದ ಚಿತ್ರವೇನಿದೆ ಅದು ಭಾರತದ ಕತೆಗಳನ್ನು ಹೇಳುವ ಇಂಗ್ಲೀಷ್ ಸಾಹಿತ್ಯದಲ್ಲಿ ಸಿಗುವ ಭಾರತಕ್ಕೆ ಹೋಲಿಸಲಾಗದಷ್ಟು ಭಿನ್ನವಾಗಿರುವುದು ಕೂಡ ನಿಜ, ಇಲೈಟ್ ವರ್ಗಕ್ಕೆ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗೆ ಸರಿಯಾದ ಐಷಾರಾಮಿ ಭವ್ಯ ಬಂಗಲೆಯಲ್ಲಿ ವಾಸವಿರುವ ಭಾರತದ ಮಧ್ಯಮವರ್ಗದ ಕೌಟುಂಬಿಕ ಕತೆಗಳನ್ನು ಹೇಳುವ, ವಿದೇಶದಲ್ಲಿ ಡ್ಯುಯೆಟ್ಟುಗಳ ಚಿತ್ರೀಕರಣ ಮಾಡುವ ಬಾಲಿವುಡ್ ಸಿನಿಮಾಗಳ ಹಾಗೆಯೇ ‘ಹೊರಗಿನ’ವರಿಗೆ ಹೊರಗಿನವರ ಭಾಷೆಯಲ್ಲಿ ಕಟ್ಟಿಕೊಡುವ ಭಾರತ ಮತ್ತು ನಮ್ಮದೇ ಕನ್ನಡ, ಹಿಂದಿ, ಬಂಗಾಳಿ, ಗುಜರಾತಿ, ತಮಿಳು, ತೆಲುಗು ಭಾಷೆಯ ಕೃತಿಗಳಲ್ಲಿ ನಮಗೆ ಸಿಗುವ ಭಾರತ ಏತಕೆ ಭಿನ್ನ? ವಿದೇಶದಲ್ಲೇ ನೆಲೆನಿಂತ ಸಲ್ಮಾನ ರಶ್ದಿ, ನೈಪಾಲರುಗಳಿಗೆ ದಕ್ಕುವ/ದಕ್ಕದ ಭಾರತ ಯಾವುದು?

ಇವೇ ಪ್ರಶ್ನೆಗಳನ್ನು ನಾವು ನಗರದಲ್ಲಿ ನೆಲೆನಿಂತ ನಮ್ಮ ಪ್ರಾದೇಶಿಕ ಬಾಲ್ಯ, ತಾರುಣ್ಯಗಳನ್ನು ನೆಚ್ಚಿ ಬರೆಯುತ್ತಿರುವ ಹೊಸ ತಲೆಮಾರಿನ ಕತೆಗಾರರ ವಿಷಯದಲ್ಲಿಯೂ ಎತ್ತುವುದು ಸಾಧ್ಯವಿದೆ. ಗಿರೀಶ್ ಕಾರ್ನಾಡ್ ಅವರು ಬೆಂಗಳೂರನ್ನೇ ಕೇಂದ್ರವಾಗಿರಿಸಿಕೊಂಡ ಒಂದೇ ಒಂದು ಕಾದಂಬರಿ ಕನ್ನಡದಲ್ಲಿ ಬಂದಿಲ್ಲ ಎಂದಿರುವುದರ ಹಿನ್ನೆಲೆ ಬಹುಶಃ ಇದೂ ಆಗಿರುವುದು ಸಾಧ್ಯವಿದೆ.

ಇಲ್ಲಿ ಸಾಮಾನ್ಯೀಕರಣದ ಅಪಾಯ ಮತ್ತು ಮಿತಿಗಳನ್ನು ಮರೆಯದೇ, ಒಂದು ಸೀಮಿತ ನೆಲೆಯಲ್ಲಿ ಕೆಲವೊಂದು ಅಂಶಗಳನ್ನು ಗುರುತಿಸುವ ಉದ್ದೇಶದಿಂದಷ್ಟೇ ಮುಂದಿನ ಮಾತುಗಳನ್ನಾಡುತ್ತಿದ್ದೇನೆ. ಪ್ರತಿಯೊಬ್ಬ ಲೇಖಕನೂ ಅನನ್ಯ ಮತ್ತು ಅಸ್ಮಿತೆಯ ಪ್ರತಿರೂಪ ಎನ್ನುವುದನ್ನು ಗೌರವಪೂರ್ವಕ ಒಪ್ಪಿಕೊಂಡೇ ಈ ಮಾತುಗಳನ್ನು ಆಡುತ್ತಿದ್ದೇನೆ. ಸ್ಥೂಲವಾಗಿ ಹೇಳುವುದಾದರೆ, ಮೊದಲನೆಯದಾಗಿ, ಈ ಯಾವತ್ತೂ ಕತೆಗಾರರು ಕತೆ ಬರೆಯುವ ಕಾಲಕ್ಕೆ ಉತ್ತರಕನ್ನಡದಿಂದ ದೂರವಾಗಿ ಮುಂಬಯಿ, ಬೆಂಗಳೂರು, ಧಾರವಾಡ ಮುಂತಾದ ಕಡೆ ನೆಲೆಯಾದವರು ಎನ್ನುವುದು. ಹಾಗಿದ್ದೂ ಇವರು ತಮ್ಮ ಬಾಲ್ಯ, ತಾರುಣ್ಯದ ಉತ್ತರ ಕನ್ನಡದ ಸ್ಮೃತಿಯನ್ನೇ ನೆಚ್ಚಿಕೊಂಡು ಕಥಾಜಗತ್ತನ್ನು ಕಟ್ಟುತ್ತ ಬಂದಿದ್ದಾರೆ. ಆದರೆ ಬಹುಶಃ ಶ್ರೀಧರ ಬಳಗಾರ ಒಬ್ಬರನ್ನು ಬಿಟ್ಟರೆ ಪೂರ್ತಿಯಾಗಿ ಉತ್ತರ ಕನ್ನಡದ ಗಡಿರೇಖೆಯ ಒಳಗೇ ತಮ್ಮ ಕಥಾಜಗತ್ತನ್ನು ಸೃಜಿಸಿಕೊಂಡ (ಮತ್ತು ಸ್ವಂತ ನೆಲೆಯಾದ) ಇನ್ನೊಬ್ಬ ಕತೆಗಾರ ಇಲ್ಲಿಂದ ಬಂದಿಲ್ಲ. ಉತ್ತರಕನ್ನಡದ ಕತೆಗಾರರು ಸ್ಪಷ್ಟವಾಗಿ ತಮ್ಮ ಕತೆಗಳಲ್ಲಿ ಪಡಿಮೂಡಿಸಿದ ಕಥಾಜಗತ್ತು ಉತ್ತರ ಕನ್ನಡದ ಗಡಿರೇಖೆಗಳ ಋಣ ಕಟ್ಟಿಕೊಂಡೇ ಹುಟ್ಟಿರುವುದು ಎನ್ನುವುದು ನಿಜವಾಗಿದ್ದೂ ಅದು ಬೇರೆ ಬೇರೆ ಕಾರಣಗಳಿಂದಾಗಿ ಅವರ ಕಲ್ಪನೆ, ಆಸೆ, ನಿರೀಕ್ಷೆಗಳ ಒಂದು ಕಥಾಜಗತ್ತೇ ಹೊರತು ವಾಸ್ತವದ ಉತ್ತರಕನ್ನಡ ಅಲ್ಲ.

ಬಾಲ್ಯ ತಾರುಣ್ಯದಾಚೆ ಪ್ರಬುದ್ಧನಾದ ಗ್ರಹಸ್ಥ ಜೀವನವನ್ನು ಇಲ್ಲಿಯೇ ಇದ್ದು, ವೃತ್ತಿಗಾಗಿಯೋ ಕೃಷಿಗಾಗಿಯೋ ಇಲ್ಲಿಯೇ ನೆಲೆಯಾಗಿ ತಮ್ಮ ಅನುಭವದ ಕಥಾಜಗತ್ತನ್ನು ಕಟ್ಟಿಕೊಡಬಲ್ಲ ಅವಕಾಶ ಹೆಚ್ಚಿನ ಕತೆಗಾರರಿಗೆ ಇರಲೇ ಇಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಕತೆಗಾರ ಫಿಕ್ಷನಲೈಸ್ಡ್ ವಾಸ್ತವವನಲ್ಲದೆ (ಕಲ್ಪಿತ ವಾಸ್ತವ) ಬೇರೆ ವಾಸ್ತವವನ್ನು ಚಿತ್ರಿಸುವಾಗ ಅದು ವರದಿಯ ಧಾಟಿ ಪಡೆದುಕೊಳ್ಳುವುದಿಲ್ಲವೆ ಎನ್ನುವ ಜಿಜ್ಞಾಸೆಯಿದೆ. ತನ್ನ ನೇರ ಅನುಭವದಾಚೆಯ ಏನನ್ನೂ ಬರೆಯಲಾರೆ ಎನ್ನುವ ಬರಹಗಾರ ಕಂಫರ್ಟ್ ಜೋನ್ ಬಿಟ್ಟು ಬರೆಯುವುದು ಸಾಧ್ಯವಾಗುವುದಿಲ್ಲ ಎನ್ನುವ ಇನ್ನೊಂದು ಜಿಜ್ಞಾಸೆಯೂ ಇದೆ. ಈ ಚರ್ಚೆಗಳನ್ನೆಲ್ಲ ಇಲ್ಲಿ ಬೆಳೆಸದೆ, ಇದಕ್ಕೆ ಬಹುಶಃ ಸೂಕ್ತವಾದ ಉತ್ತರವನ್ನು ಈಗಾಗಲೇ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಕತೆ-ಕಾದಂಬರಿಗಳ ಮೂಲಕವೇ ಕೊಟ್ಟಿದ್ದಾರೆ ಎಂದಷ್ಟೇ ಸೂಚಿಸಬಯಸುತ್ತೇನೆ.

ಎರಡನೆಯದಾಗಿ, ಇವರು ಚಿತ್ರಿಸುವ ಉತ್ತರ ಕನ್ನಡದ ನೆಲ ಜಲ ಮಂದಿ ಒಂದು ಬಗೆಯ ಫಿಕ್ಶನಲೈಸ್ಡ್ ರೊಮಾಂಟಿಸಿಸಮ್ ಗೆ ಒಳಪಟ್ಟಿದ್ದು ಎನ್ನುವುದು ಸೂಕ್ಷ್ಮವಾಗಿ ಗಮನಿಸಿದರೆ ಉತ್ತರಕನ್ನಡದ ಕತೆಗಾರರು ಸೃಷ್ಟಿಸುವ ಪಾತ್ರಗಳು, ಮನುಷ್ಯ ಸಂಬಂಧಗಳು, ಕುಟುಂಬಗಳು, ಅಲ್ಲಿನ ಸಂಘರ್ಷಗಳು ನವ್ಯ, ದಲಿತ, ಬಂಡಾಯದಂಥಹ ಚೌಕಟ್ಟಿಗೆ ಸಿಲುಕುವುದೇ ಇಲ್ಲ. ಶಾಂತಿನಾಥ ದೇಸಾಯಿ ಮತ್ತು ಯಶವಂತ ಚಿತ್ತಾಲರನ್ನೂ ಸೇರಿಸಿಯೇ ಈ ಮಾತು ನಿಜ ಎನ್ನವುದನ್ನು ಗಮನಿಸಬಹುದು. ಹಾಗಾಗಿಯೇ ಅದೊಂದು ಬೇರೆಯೇ ಜಗತ್ತಿನ ಸೃಷ್ಟಿ ಎಂಬುದು ವಿಚಿತ್ರವಾದರೂ ನಿಜ. ಮತ್ತು ಇದರಿಂದಾಗಿ ನವ್ಯೋತ್ತರ ಕನ್ನಡ ಕಥಾಸಾಹಿತ್ಯಕ್ಕೆ ಉತ್ತರ ಕನ್ನಡದ ಕತೆಗಾರರೇ ಒಂದು ಮಾದರಿ ಮತ್ತು ಚೌಕಟ್ಟು ಒದಗಿಸಿದರು ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ಅಂಥ ಮಾದರಿ, ವಾಸ್ತವ ಚಿತ್ರಣದ ಸೋಗು ಹೊತ್ತಿದ್ದರೂ ಕಲ್ಪನಾವಿಲಾಸವನ್ನೇ ಹೆಚ್ಚು ಹೆಚ್ಚಾಗಿ ಪೋಷಿಸುತ್ತ ಬಂತು ಎನ್ನುವುದನ್ನು ಗುರುತಿಸುವುದು ಮುಖ್ಯ.

ಮೂರನೆಯದಾಗಿ, ಈ ಕತೆಗಾರರಲ್ಲಿ ತೊಂಬತ್ತು ಶೇಕಡಾಕ್ಕಿಂತ ಹೆಚ್ಚಿನ ಕತೆಗಾರರು ಚಿತ್ರಿಸುವ ಬದುಕಿನಲ್ಲಿ `ಇವಿಲ್’ ಕಣ್ಮರೆಯಾದಂತಿರುವುದು. ಇದನ್ನೇ ಸ್ವಲ್ಪ ಬೇರೆ ರೀತಿ ಹೇಳುವುದಾದರೆ, ನವಿರುತನ, ಭಾವುಕತೆ, ಮಾನವೀಯ ಸಂಬಂಧ, ಕಾವ್ಯಾತ್ಮಕ ನಿರೂಪಣೆ, ರೂಪಕಗಳ ಮಹತ್ವ – ಈ ಹೆಚ್ಚಿನ ಕತೆಗಳ ಸಾಮಾನ್ಯ ಲಕ್ಷಣ ಎಂದು ಸಾಮಾನ್ಯೀಕರಣಗೊಳಿಸಿ ಹೇಳಬಹುದಾದಷ್ಟು ಅತಿಯಾದ ಎದ್ದುಕಾಣುವ ಲಕ್ಷಣ ಆಗಿರುವುದು. ಈ ಮೂರೂ ಅಂಶಗಳು ಪರಸ್ಪರ ಒಂದಕ್ಕೊಂಡು ಪೂರಕವಾಗಿ, ಕೆಲವೊಮ್ಮೆ ಒಂದರಿಂದ ಇನ್ನೊಂದನ್ನು ವಿಂಗಡಿಸಿ ನೋಡಲಾಗದಷ್ಟು ಸೇರಿಹೋದಂತಿರುವುದು ನಿಜ. ಒಂದು ಪುಟ್ಟ ಉದಾಹರಣೆ ನೀಡುವುದಾದರೆ, (ಇದು ನನ್ನ ಒರಿಜನಲ್ ಚಿಂತನೆಯಲ್ಲ) ಜಯಂತ ಕಾಯ್ಕಿಣಿಯವರ `ಒಪೆರಾ ಹೌಸ್’ ಕತೆಯ ಸಿನಿಮಾ ಟಾಕೀಸಿನ ಗೇಟ್ ಕೀಪರ್ ಇಂದ್ರನೀಲ, ಸಿನಿಮಾ ನೋಡಲು ಬಂದು ಮರೆತು ಹೋಗಿರಬಹುದಾದ ಒಂದು ಫ್ಲಾಸ್ಕ್ ನೋಡುತ್ತಲೇ ಅದು ಆಸ್ಪತ್ರೆಗೆ ಹೊರಟಿರಬಹುದಾದ ಒಂದು (ಆಸ್ಪತ್ರೆಯ ನೆನಪೇ) ಮಾನವೀಯ ಸ್ಪಂದವನ್ನುಂಟು ಮಾಡಬಲ್ಲಂಥಹ ಕಲ್ಪನೆಗೆ ತುತ್ತಾಗುತ್ತಾನೆ. ಆದರೆ ಅವನಂಥಹ ಬಡವ ಯಾರೋ ಬಿಟ್ಟುಹೋದ ಫ್ಲಾಸ್ಕ್ ಕಣ್ಣಿಗೆ ಬಿದ್ದರೆ ಯಾರಿಗೂ ಗೊತ್ತಾಗದ ಹಾಗೆ ಅದನ್ನು ಒಳಹಾಕುವ ಬಗ್ಗೆ ಮಾತ್ರ ಯೋಚಿಸುತ್ತಾನೆ ಎನ್ನುವುದು ‘ಇವಿಲ್’. ಇಂಥ ಉದಾಹರಣೆ ನಮ್ಮ ಯಾವುದೇ ಉತ್ತರ ಕನ್ನಡದ ಕತೆಗಾರನ ಯಾವುದೇ ಕತೆಯನ್ನು ಕೈಗೆತ್ತಿಕೊಂಡರೂ ಸಿಗುತ್ತದೆ ಎನ್ನುವುದು ಅಪರೂಪದ ಅಪವಾದಗಳೊಂದಿಗೆ ಸತ್ಯ.

ನಾಲ್ಕನೆಯದಾಗಿ, ಹೆಚ್ಚಿನ ಎಲ್ಲಾ ಕತೆಗಾರರು ಬರೆದ ಕತೆಗಳಲ್ಲಿ ವ್ಯಕ್ತಿಗತ/ಕೌಟುಂಬಿಕ ಚಿತ್ರ ಸಿಗುತ್ತದೆಯೇ ಹೊರತು ಸಾಮಾಜಿಕ/ರಾಜಕೀಯ ಚಿತ್ರಗಳು, ಅಲ್ಲಿನ ಕೈಗಾ, ಸೀಬರ್ಡ್ , ಉಷ್ಣ ವಿದ್ಯುತ್ ಸ್ಥಾವರ ಇತ್ಯಾದಿಗಳಿಗೆ ಸಂಬಂಧಿಸಿದಂತೆ ನಡೆದ ಸಾಮಾಜಿಕ/ರಾಜಕೀಯ ಪ್ರತಿಸ್ಪಂದನವನ್ನು ತಿಳಿದುಕೊಳ್ಳಲು ಸಹಾಯ ಮಾಡುವಂಥ ಕಥಾನಕಗಳು ಇಲ್ಲಿಂದ ಬಂದಿಲ್ಲ. ಬಹುಶ; ಅಶೋಕ ಹೆಗಡೆಯವರ ‘ಅಶ್ವಮೇಧ’ ಕಾದಂಬರಿ ಇದಕ್ಕೊಂದು ಅಪವಾದ ಅನಿಸುತ್ತದೆ. ಗಮನಿಸಬೇಕಾದ ಅಂಶವೆಂದರೆ, ರಾಜು ಹೆಗಡೆಯವರ ಕತೆಗಳು ಈ ಅಂಶಗಳಿಂದ ಕಳಚಿಕೊಂಡು ನಿಲ್ಲುತ್ತವೆ ಎನ್ನುವುದು. ಇವರ ಕತೆಗಳಲ್ಲಿ ಬರುವ ಪಾತ್ರಗಳು ಹೆಚ್ಚು ಸಾಚಾ ಆಗಿ, ರೊಮ್ಯಾಂಟಿಸಂ ಇಲ್ಲದ ಒರಟುತನದಿಂದ, ಒಬ್ಬ ಹಳ್ಳಿಗನ ಇವಿಲ್ ಕೂಡ ಸಹಜ ಎಂದು ಅನಿಸುವಂತೆ ಮೂಡಿ ಬರುತ್ತವೆ. ಇಲ್ಲಿ ಕೊಲೆ ಮಾಡಬಲ್ಲ ಭಾವ, ಮೈದುನರು, ಯಕ್ಷಗಾನ ಬಯಲಾಟದ ಟೆಂಟಿಗೆ ಬೆಂಕಿ ಹಚ್ಚಬಲ್ಲ ಕಟ್ಟಾ ಜಿದ್ದಿನ ಊರ ಮಂದಿ, ಕಳ್ಳನಾಟ ಸಾಗಿಸುವ ದಂಧೆಯನ್ನು ಹೊಟ್ಟೆಪಾಡಿನ ಅನಿವಾರ್ಯ ಎಂದು ಕಂಡುಕೊಳ್ಳುವ ಮತ್ತು ಆದರ್ಶದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವ ಯಕಃಶ್ಚಿತ್ ಮನುಷ್ಯರು ಕಾಣಸಿಗುತ್ತಾರೆ. ಇವರು ಎಕ್ಸ್ಟ್ರಾ ಮ್ಯಾರಿಟಲ್ ಸಂಬಂಧವನ್ನು, ಸೆಕ್ಸನ್ನು, ಕುಡಿತವನ್ನು ಒಂದು ಬೇರೆಯೇ ನೆಲೆಯಲ್ಲಿ ಸಂಭ್ರಮಿಸಬಲ್ಲ ಮನುಷ್ಯರು.

‘ಇಲ್ಲಿ ನಾನು ಮೊದಲೇ ಟುವಾಲು ಇಟ್ಟಿದ್ದೆ’ ಎಂಬ ತಕರಾರು ತೆಗೆದು ಜಗಳ ಮಾಡಬಲ್ಲ ಸಾಮಾನ್ಯ ಮನುಷ್ಯರು ಇವರ ಕತೆಗಳಲ್ಲಿ ನಾಚಿಕೆ ಪಡದೆ ಪಾತ್ರವಹಿಸಿರುತ್ತಾರೆ. ಈ ಸಾಮಾನ್ಯತನ ಸರಳತೆ ವಸ್ತು, ವಿಷಯ ಮತ್ತು ಎರಡರ ಸಾಮಾಜಿಕ, ತಾತ್ವಿಕ ಆಯಾಮಗಳ ಮಟ್ಟದಲ್ಲಿ ಕೂಡಾ ರಾಜು ಹೆಗಡೆಯವರಿಗೆ ಕತೆಯೊಂದು ಆಹ್ವಾನವಾಗುವುದು ನಾವು ಗಮನಿಸಬೇಕಾದ ಸಂಗತಿ. ಇದು ರಾಜು ಹೆಗಡೆಯರಲ್ಲಿ ನಾನು ಗುರುತಿಸುವ ಮಹತ್ವದ ಒಂದು ಅಂಶ.

ಕಳೆದ ವರ್ಷ 2017 ರಲ್ಲಿ ಭಾರತೀಯ ಇಂಗ್ಲೀಷ್ ಬರಹಗಾರರು ಕಲ್ಕತ್ತಾದ ಅಮಿತ್ ಚೌಧುರಿಯವರ ಮುಂದಾಳ್ತನದಲ್ಲಿ Against Storytelling ಎಂಬ ವಿಚಾರ ಸಂಕಿರಣ, ಕಮ್ಮಟ ಎಲ್ಲ ಹಮ್ಮಿಕೊಂಡಿದ್ದರು. ಸಾಕಷ್ಟು ಹಿಂದಿನಿಂದಲೂ ಇಂಥ ಒಂದು ಪ್ರಕ್ರಿಯೆಯನ್ನು ಅಮಿತ್ ಚೌಧುರಿಯವರು ಪ್ರತಿಪಾದಿಸುತ್ತಲೇ ಬಂದವರು. ಈ ಬಗ್ಗೆ ಅವರು ಮತ್ತು ಅವರ ಕೃತಿಗಳ ಬಗ್ಗೆ ಬರೆದವರು ಸಾಕಷ್ಟು ಚರ್ಚೆ, ಜಿಜ್ಞಾಸೆ ನಡೆಸಿದ್ದಾರೆ. ಈ ನಿಟ್ಟಿನ ಹೆಚ್ಚು ಆಳವಾದ ಚರ್ಚೆಯಲ್ಲಿ ಆಸಕ್ತಿಯುಳ್ಳವರು ಅಮಿತ್ ಚೌಧುರಿಯವರ ಸಂಪಾದಕತ್ವದಲ್ಲಿ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ಹೊರತಂದಿರುವ Literary Activism ಎನ್ನುವ ಕೃತಿಯನ್ನು ಗಮನಿಸಬಹುದು. ಆದರೆ ಅತ್ಯಂತ ಸುಂದರವಾಗಿ ಈ ವಿಚಾರವನ್ನು ನಿರೂಪಿಸಿದ್ದು ಮಾತ್ರ ಅರವಿಂದ ಕೃಷ್ಣ ಮೆಹರೋತ್ರ ಅವರೇ. ಅವರು Against Storytelling ಕುರಿತಾಗಿಯೇ ಅಶೋಕಾ ವಿಶ್ವವಿದ್ಯಾಲಯವು ‘ದ ಯೂನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ’ದೊಂದಿಗೆ ಜಂಟಿಯಾಗಿ ಆಯೋಜಿಸಿದ್ದ ನಾಲ್ಕನೇಯ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಓದಿದ ಪ್ರಬಂಧದ ಪೂರ್ಣ ಪಠ್ಯ ‘ನನಗೆ ರೆಕ್ಕೆಗಳಿಲ್ಲ’ ಈಗಲೂ ಅಂತರ್ಜಾಲದಲ್ಲಿ ಲಭ್ಯವಿದೆ. ಅಲ್ಲಿ ಅವರು ಹಿಂದಿ ಕಥೆಗಾರ, ಕವಿ ವಿನೋದ್ ಕುಮಾರ್ ಶುಕ್ಲ ಅವರನ್ನು ಉದ್ಧರಿಸುತ್ತ ಇದೇ ಅಂಶವನ್ನು ಪ್ರತಿಪಾದಿಸಿದ ಬಗೆ ಅತ್ಯಂತ ಮನೋಜ್ಞವಾಗಿದೆ.

ನಮಗೆಲ್ಲ ದೊಡ್ಡ ದೊಡ್ಡ ಸಂಗತಿಗಳು ಇಷ್ಟ. ಸಾಮಾಜಿಕವಾಗಿ, ರಾಜಕೀಯವಾಗಿ, ತಾತ್ವಿಕವಾಗಿ ಅತ್ಯಂತ ಸುಸಂಬದ್ಧವಾದ ಅರ್ಥಪೂರ್ಣವೂ, ಸಮಕಾಲೀನವೂ, ಮಹತ್ವವುಳ್ಳದ್ದೂ ಇಶ್ಯೂಗಳ ಬಗ್ಗೆ ಮಾತ್ರ ಕತೆಗಾರರು ಬರೆಯುತ್ತಾರೆ. ಪ್ರಶಸ್ತಿ, ಪುರಸ್ಕಾರ ಎಲ್ಲ ದಕ್ಕಬೇಕಾದರೆ ಬಹುಶಃ ಇದೆಲ್ಲ ಅನಿವಾರ್ಯವೇನೊ, ನೀವು ಗಮನಿಸಿ ಇಂಥ ಬರಹಗಳಿಗೆ ಒಂದು ವಿಚಿತ್ರವಾದ ‘ಭಾರ’ – ಒಜ್ಜೆ ಇರುತ್ತದೆ. ಇವು ಹಾರುತ್ತಲೇ ಇರಬೇಕಾದ ಗರಿಯ ಲಘುತನದಿಂದ ದೂರ. ಆದರೆ ದೂರ ಗಗನದಲ್ಲಿ ಹಾರುವ ಹಕ್ಕಿ ತನಗೆ ರೆಕ್ಕೆ ಇದೆ ಎಂಬ ಕಾರಣಕ್ಕೇ ಭೂಮಿಯನ್ನು ‘ಬಿಟ್ಟು’ ದೂರವಾಗುತ್ತದೆ. ಆದರೆ ಮತ್ತೆ ಮತ್ತೆ ಅದೇ ಭೂಮಿಗೆ ಮರಳಿ ಬರಬೇಕಾಗುತ್ತದೆ. ಅದಕ್ಕೆ ತಾನು ಹೀಗೆ ನೆಲದಿಂದ ದೂರವಾಗುತ್ತಿರುವುದಾಗಲೀ, ಮತ್ತೆ ನೆಲಕ್ಕೆ ಮರಳಿ ಬರುತ್ತಿರುವುದಾಗಲೀ ಅರಿವಿದೆಯೋ ಇಲ್ಲವೊ. ಆದರೆ ಚಿಟ್ಟೆಯೊಂದಕ್ಕೆ ಅಂಥ ರೆಕ್ಕೆಗಳಿಲ್ಲ. ಅದು ಸದಾ ನೆಲಮಟ್ಟದಲ್ಲಿ ಹಾರುತ್ತ ಉಳಿಯುತ್ತದೆ. ಈ ರೂಪಕ ವಿನೋದ್ ಕುಮಾರ್ ಶುಕ್ಲ ಅವರ ಒಂದು ಕವಿತೆಯಿಂದ ಆರಿಸಿದ್ದು, ಮೆಹರೋತ್ರ ಅವರು ಶುಕ್ಲ ಅವರ ಒಂದು ಸುಂದರ ಕತೆಯನ್ನು ಅನುವಾದಿಸಿ ಅಲ್ಲಿ ಓದುತ್ತಾರೆ.

ಉತ್ತರಕನ್ನಡದ ಕತೆಗಾರರು ಸ್ಪಷ್ಟವಾಗಿ ತಮ್ಮ ಕತೆಗಳಲ್ಲಿ ಪಡಿಮೂಡಿಸಿದ ಕಥಾಜಗತ್ತು ಉತ್ತರ ಕನ್ನಡದ ಗಡಿರೇಖೆಗಳ ಋಣ ಕಟ್ಟಿಕೊಂಡೇ ಹುಟ್ಟಿರುವುದು ಎನ್ನುವುದು ನಿಜವಾಗಿದ್ದೂ ಅದು ಬೇರೆ ಬೇರೆ ಕಾರಣಗಳಿಂದಾಗಿ ಅವರ ಕಲ್ಪನೆ, ಆಸೆ, ನಿರೀಕ್ಷೆಗಳ ಒಂದು ಕಥಾಜಗತ್ತೇ ಹೊರತು ವಾಸ್ತವದ ಉತ್ತರಕನ್ನಡ ಅಲ್ಲ.

ಸಂತೆ ಮಾಳಕ್ಕೆ ಬಂದು ಎರಡೂ ಕೈಗಳಲ್ಲಿ ಎರಡು ಕೈಚೀಲ (ಒಂದು ಅಲ್ಲಲ್ಲಿ ಹರಿದಿದೆ ಕೂಡ) ಹಿಡಿದು, ಅವುಗಳಲ್ಲಿ ಒಂದಿಷ್ಟು ಬಟಾಟೆ, ಹೂಕೋಸು, ಹಸಿರು-ಕೆಂಪು ಹಸಿಮೆಣಸು, ಒಂದು ಗರಂಮಸಾಲೆಯ ಪುಟ್ಟ ಪ್ಯಾಕೆಟು ಇತ್ಯಾದಿ ತುಂಬಿಕೊಂಡು ಹೊರಟ ಒಬ್ಬ ಸಾಮಾನ್ಯನ ಕಿಸೆಯಲ್ಲಿ ಒಂದು ಹತ್ತು ರೂಪಾಯಿಯ ನೋಟು ತಾನಾಗಿರಲು ಬಯಸುತ್ತೇನೆ ಎಂದು ಶುಕ್ಲ ಬರೆಯುತ್ತಾರೆ.

ನಮ್ಮ ಬರವಣಿಗೆಗೆ ಒಂದು ವಿಚಿತ್ರವಾದ ಒತ್ತಡ ಇದೆ. ಭಾರ ಇದೆ. ಜ್ಞಾನದ ಒಜ್ಜೆಯೊ, ವಿಚಾರದ ಭಾರವೋ, ಗೊತ್ತಿದೆ ಎಂಬ ಅಹಂಕಾರದ ತೂಕವೋ ಅದರ ಅನಿವಾರ್ಯ ಎಂಬಂತೆ, ಮೂಳೆಗಂಟಿದ ಕೊಬ್ಬಿನಂತೆ ಉಳಿದು ಬಿಡುತ್ತದೆ. ಈ ಭಾರವನ್ನು ಕಳೆಯುವುದು ಒಬ್ಬ ಬರಹಗಾರನ ಗುರಿಯಾಗಬೇಕು ಎಂಬರ್ಥದ ಮಾತನ್ನು ಕೆಲ್ವಿನೊ ಆಡಿದ್ದಾನಂತೆ. ಅರ್ಥದ ಹಂಗಿನಿಂದ ಭಾಷೆಯನ್ನು ಮುಕ್ತಗೊಳಿಸುವುದು ಕಾವ್ಯ ಎನ್ನುವ ಕೀರಂ, ಬೇಂದ್ರೆ ಅದನ್ನು ಮಾಡಿದರು ಎನ್ನುತ್ತಾರೆ. ಬರಹದ ಭಾರ ನಿವಾರಿಸುತ್ತ ಕಥನದ ಬದುಕನ್ನು ಹಗುರಗೊಳಿಸುವ ಕ್ಷಣವೊಂದು ನಮ್ಮ ನಿಮ್ಮ ಬದುಕಿನಲ್ಲೇ ಇರುತ್ತದೆ. ಅದು ನಮಗೆ ಅರ್ಥವಾಗುವುದು ಮುಖ್ಯ. ಆಗ ಚಿಂತೆ-ಬಿಡಿಹೂವ ಮುಡಿದಂತೆ ಅನಿಸಬಹುದು. ಚಿಂತೆ ಬಿಡಿ, ಹೂವ ಮುಡಿದಂತೆ ಎಂದೂ ಅನಿಸಬಹುದು.

ಅಮ್ಮನ ಬಗ್ಗೆ ಬರೆಯುತ್ತ ಶುಕ್ಲ ಒಂದೆಡೆ ಹೇಳುತ್ತಾರೆ. ಕತ್ತಲಿರುವಾಗಲೇ ಎದ್ದು ಮನೆಗೆಲಸಕ್ಕೆ ತೊಡಗುತ್ತಿದ್ದ ಅಮ್ಮ ಎಲ್ಲರೂ ಮಲಗಿದ ನಂತರ ತಾನು ಚಾಪೆಗೆ ಬೆನ್ನೂರುತ್ತಾಳೆ. ಒಲೆಗೆ ತುರುಕಿದ ಸೆಗಣಿಯ ಬೆರಣಿಯ ಮೇಲೆ ಇರುವೆಯೊಂದು ಹರಿಯುತ್ತಿದ್ದರೆ ಕೈ ಸುಟ್ಟುಕೊಂಡಾದರೂ ಅವಳು ಬೆರಣಿಯನ್ನು ಒಲೆಯಿಂದ ಹೊರತೆಗೆದು ಇರುವೆಯನ್ನು ಉಳಿಸುತ್ತಾಳೆ. ಅವಳ ಕೈ ಬೆರಳ ಸುಟ್ಟುಗಾಯ ಮಾಯುವ ಮೊದಲೇ ಇನ್ನೆಲ್ಲೊ ಸುಟ್ಟುಕೊಳ್ಳುತ್ತಾಳೆ. ತನ್ನ ಕುಟುಂಬವನ್ನು ಎಲ್ಲ ಬಗೆಯ ಬೇಗೆಯಿಂದ ಕಾಪಾಡಲು ಅವಳು ಇದಕ್ಕೆಲ್ಲ ಸದಾ ಸಿದ್ಧಳಾಗಿಯೇ ಇರುತ್ತಾಳೆ. ಯಾಕೆಂದರೆ ಅವಳು ಅಮ್ಮ. ಶುಕ್ಲ ಅವರ ಬರಹಗಳನ್ನು ಓದುವುದೆಂದರೆ ನಮಗೆ ಈಗಾಗಲೇ ಗೊತ್ತಿರುವುದರ ಫಿಕ್ಷನಲೈಸ್ಡ್ ವರ್ಶನ್ ಓದಿದಂತಲ್ಲ. ಬದಲಿಗೆ ನಮ್ಮ ಸ್ಮೃತಿಯ ಮಾರ್ಜಿನ್ನುಗಳಲ್ಲಿ ನಿರಂತರವಾಗಿ ಬರೆದು-ಅಳಿಸಿ ಮಾಡಿದ ಇಂಪಾರ್ಟೆಂಟ್ ಪಾಯಿಂಟುಗಳಿರುತ್ತವಲ್ಲ. ಅವುಗಳನ್ನೇ ಮತ್ತೊಮ್ಮೆ ನೆನೆಯುವಂತೆ-ಎನ್ನುತ್ತಾರೆ ಅರವಿಂದ ಕೃಷ್ಣ ಮೆಹರೋತ್ರ.

ರಾಜು ಹೆಗಡೆಯವರ ಒಂದು ಕತೆಯಿದೆ. ಚಾವಿ ಅಂತ ಅದರ ಹೆಸರು. ಅಲ್ಲೇನಪ್ಪ ಎಂದರೆ ಗಂಡ ಹೆಂಡತಿ ಇಬ್ಬರೂ ದುಡಿಯುವವರು, ಹೆಂಡತಿಗೆ ಬೇಗ ಹೊರಡಬೇಕು ಗಂಡನಿಗೆ ನಿಧಾನವಾಗಿ ಹೋದರಾಯ್ತು. ಆದರೂ ಇಬ್ಬರೂ ಬೇಗ ಎದ್ದು ಮನೆವಾರ್ತೆಯ ಕೆಲಸಗಳನ್ನೆಲ್ಲ ಹಂಚಿಕೊಂಡು ಲಗುಬಗೆಯಿಂದಲೇ ಮಾಡುತ್ತಾರೆ. ಹೆಂಡತಿ ಮನೆಗೆ ಬೀಗ ಹಾಕಿದರೆ ಅವಳನ್ನು ಬಸ್ಸಿನ ತನಕ ಬಿಡಲು ಶೆಡ್ಡಿನಿಂದ ಗಾಡಿ ಹೊರತೆಗೆಯುವ ಕೆಲಸ ಗಂಡನದು. ಮಳೆ ಬರುತ್ತಿದೆ ಅಂತ ಬೈಕಿನ ಬದಲು ಕಾರು ಹೊರತೆಗೆದ ಗಂಡ ಕೊರಕಲು ಹಾದಿಯಲ್ಲಿ ಬಸ್ಸ್ಟ್ಯಾಂಡ್ ತಲುಪಿದಾಗ ಬಸ್ಸು ಆಗಷ್ಟೇ ಹೊರಟಿದೆ. ಸರಿ ಮುಂದಿನ ಸ್ಟಾಪಿನಲ್ಲಿ ನಿಲ್ಲುತ್ತದೆ ಎಂದು ಅದನ್ನೇ ಹಿಂಬಾಲಿಸುತ್ತಾರೆ. ಆದರೆ ಮತ್ತೆ ಬಸ್ಸು ತಪ್ಪುತ್ತದೆ. ತಮಾಶೆ ಎಂದರೆ ಬೇಕಿದ್ದ ಬಸ್ಸು ಅದಲ್ಲವೇ ಅಲ್ಲ. ಅಂತೂ ಹೆಂಡತಿಯನ್ನು ಮುಂದಿನ ಸ್ಟಾಪಿನಲ್ಲಿ ಇಳಿಸಿ ಮನೆಗೆ ಮರಳಿದರೆ ಮನೆಯ ಬೀಗದ ಕೈ ಹೆಂಡತಿಯ ಬಳಿಯೇ ಉಳಿದಿರಬೇಕೆಂಬುದು ಹೊಳೆಯುತ್ತದೆ. ಫೋನು ಕೂಡ ಮನೆಯೊಳಗಿದೆ. ಬರ್ಮುಡಾದಲ್ಲಿಯೇ ಹೊರಟಿದ್ದರಿಂದ ಡ್ರೆಸ್ಸು ಚೆಂಜ್ ಮಾಡುವುದಕ್ಕೂ ಸಾಧ್ಯವಿಲ್ಲದ ಸ್ಥಿತಿ. ಸರಿ ಮತ್ತೆ ಇಳಿಸಿದಲ್ಲಿಗೇ ಹೋದರೆ ಬಸ್ಸು ಹೊರಟುಹೋಗಿದೆ. ಎಲ್ಲೋ ರೇಂಜು ಸಿಗುತ್ತದೆ ಎಂಬ ಅಸೆಯಿಂದ ಫೋನ್ ಮಾಡುತ್ತಲೇ ಉಳಿಯುವ ಗೂಡಂಗಡಿಯವನಿಗೆ ಕೊನೆಗೂ ಇವನ ಹೆಂಡತಿ ಲೈನಿಗೆ ಸಿಗುವುದಿಲ್ಲ. ಬೇರೆ ದಾರಿಯಿಲ್ಲದೆ ಮನಗೆ ಮರಳಿದರೆ ಹೆಂಡತಿ ಕುಳಿತಲ್ಲೇ ಕಾರಿನ ಸೀಟಿನಲ್ಲಿ ಬೀಗದ ಕೈ ಬೆಚ್ಚಗೆ ಕೂತಿದೆ.

ಇಷ್ಟೇ ಕತೆ ಇದರಲ್ಲೇನಿದೆ ಅಂಥಾದ್ದು ಎಂದು ಅನಿಸುವುದು ಸಹಜವೇ. ಆದರೆ, ತನ್ನ ಮನೆಯೊಳಗೆ ತಾನೇ ಹೋಗಲಾರದ ಅಸಹಾಯಕತೆಯೊಂದಿಗೆ ನಿಂತ ಒಬ್ಬ ಮನುಷ್ಯನಿಗೆ ಇದ್ದಕ್ಕಿದ್ದಂತೆ ಕಾರಿನ ಸೀಟಿನಲ್ಲಿ ಬೀಗದ ಕೈ ಕಂಡಾಗ ತಕ್ಷಣಕ್ಕೆ ಆಗುವ ಒಂದು ಅನುಭೂತಿ ಏನಿದೆ. ಅದು ಸಣ್ಣದಲ್ಲ. ಅದೆಷ್ಟು ದೊಡ್ಡದು ಎನ್ನುವುದು ಅನುಭವಿಸಿದವರಿಗಷ್ಟೇ ಗೊತ್ತಿರುತ್ತದೆ ಎನ್ನುವುದು ಕೂಡ ಸತ್ಯ. ಕತೆ ಇರುವುದು ಆ ಒಂದು ಕ್ಷಣದ ಕುಶಿಯಲ್ಲಿ, ಸಂಭ್ರಮದಲ್ಲಿ ನಿರಾಳತೆಯಲ್ಲಿ. ಆದರೆ ಈ ಕುಶಿಗೆ ಯಾವ ಸಾಮಾಜಿಕ, ತಾತ್ವಿಕ, ರಾಜಕೀಯ ಆಯಾಮವೂ ಇಲ್ಲ. ಹಾಗಾಗಿ ಅವುಗಳ ಭಾರವಾಗಲೀ, ಕಥನದ ಒಜ್ಜೆಯಾಗಲಿ ಇಲ್ಲ. ಬೀಗದ ಕೈಯಿಲ್ಲ ಎನ್ನುವ ಒತ್ತಡವನ್ನು ಒಮ್ಮೆಗೇ ಎತ್ತುವ ನಿವಾರಿಸುವ ಕೆಲಸವನ್ನಷ್ಟೇ ಈ ಕತೆ ಮಾಡುತ್ತಿದೆ.

ರಾಜು ಹೆಗಡೆ ನನಗೆ ಮುಖ್ಯ ಎನಿಸುವುದು ಇಂಥ ಕಾರಣಗಳಿಗೆ. ಅವರು ನಮಗೆ ನಾವು ಕಾಣದೇ ಇರುವ ಉತ್ತರ ಕನ್ನಡವನ್ನು ಕಾಣಿಸಿದರು. ಅಲ್ಲಿಯ ಮನುಷ್ಯರ ಸಾಮಾನ್ಯತನವನ್ನು ಭಾರವಿಲ್ಲದ ಸಹಜತೆಯಲ್ಲಿ ಅಕ್ಷರಕ್ಕೆ ಒಗ್ಗಿಸಿದರು. ನೆಲದಿಂದ ಎತ್ತರದಲ್ಲಿ ಹಾರುತಿದ್ದ ಅದರ ಕಥಾಜಗತ್ತನ್ನು ನೆಲಮಟ್ಟದಲ್ಲಿರಿಸಿ ಹೆಚ್ಚು ಆಪ್ತಗೊಳಿಸಿದವರು. ನಮ್ಮದೇ ಜಗತ್ತಿನೊಂದಿಗೆ ಅದನ್ನು ಸಮೀಕರಿಸುವ ಉಪಕಾರ ಮಾಡಿದವರು. ನಿಜ, ಅವರ ಕತಗೆಳಲ್ಲಿ ವಿಮರ್ಶಕರ ಪಾಂಡಿತ್ಯ ಹೊರಸೂಸಲು ಅಗತ್ಯವಾದ ಘನಗಂಭೀರ ಇಶ್ಯೂಗಳೆಲ್ಲ ಸಿಗುವುದು ಕಷ್ಟ. ಅಂಥ ಕೃತಕ ನುಡಿಗಟ್ಟುಗಳಲ್ಲಿ ರಾಜು ಹೆಗಡೆಯವರನ್ನು ಕಟ್ಟಿ ಹಾಕಲು ಬರುವುದಿಲ್ಲ. ರಾಜೂ ಹೆಗಡೆಯವರ ಕಥನ ಪ್ರಕ್ರಿಯೆಯಲ್ಲಿ ಮುಖ್ಯವಾದ ಮೂರು ಘಟ್ಟಗಳನ್ನು ಗುರುತಿಸಬಹುದು. ಈ ಮೂರೂ ಘಟ್ಟದಲ್ಲಿ ಅವರು ಸಮಕಾಲೀನ ಕನ್ನಡ ಸಣ್ಣಕತೆಗಳ ಪಾರಂಪರಿಕ ಮಾದರಿಯನ್ನಾಗಲೀ, ಅದರ ಚೌಕಟ್ಟುಗಳನ್ನಾಗಲೀ ಅನುಸರಿಸಿಲ್ಲ ಎನ್ನುವುದು ಅಚ್ಚರಿ ಹುಟ್ಟಿಸುತ್ತದೆ. ಉತ್ತರ ಕನ್ನಡದ ಕತೆಗಾರನಾಗಿ ಅವರು ಇಂಥ ಆಮಿಷಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳದೇ ಉಳಿದಿದ್ದು ಸ್ಪಲ್ಪ ವಿಚಿತ್ರವಾಗಿಯೂ ಇದೆ.

ನವ್ಯೋತ್ತರ ಕನ್ನಡ ಸಣ್ಣಕತೆಗಳನ್ನು ಗಮನಿಸಿದರೆ ನಮಗೆ ಇನ್ನೊಂದು ಮಹತ್ವದ ಪಲ್ಲಟ ಕಂಡು ಬರುತ್ತದೆ. ಒಂದು ಆರಂಭ, ಬೆಳವಣಿಕೆ, ಕೇಂದ್ರ ಮತ್ತು ಪಂಚ್ ಇರುವ ಅಂತ್ಯ-ಇದು ಸಣ್ಣಕತೆಯ ಸಾಮಾನ್ಯ ಮಾದರಿಯಾಗಿದ್ದ ಕಾಲವಿತ್ತು. ಒಂದು ಕಾಲದಲ್ಲಿ ಬಹುತೇಕ ಮ್ಯಾಗಝೀನ್ ಗಳೇ ಸಣ್ಣಕತೆಗಳ ಪ್ರಧಾನ ವೇದಿಕೆಯಾಗಿದ್ದು, ಸುಧಾ, ಪ್ರಜಾಮತ, ತರಂಗದಂಥ ವಾರಪತ್ರಿಕೆಗಳು, ಮಯೂರ, ತುಷಾರದಂಥ ಮಾಸಿಕಗಳು ಮತ್ತು ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿ ಕತೆಗಾರರನ್ನು ಸೃಷ್ಟಿಸುತ್ತಿದ್ದ ದಿನಗಳವು. ದೀಪಾವಳಿ/ಯುಗಾದಿ ವಿಶೇಷ ಸಂಚಿಕೆಗಳು ವೈಶಿಷ್ಟ್ಯ ಪೂರ್ಣ ಸಣ್ಣಕತೆಗಳನ್ನು ಒದಗಿಸುತ್ತಿದ್ದವು. ಈ ಪತ್ರಿಕೆಗಳು ರೂಪಿಸಿದ ಫಾರ್ಮೆಟ್ ಏನಿದೆ, ಅದನ್ನು ದಾಟಿ ಬಂದ ಕತೆಗಳು ಹೊಸದೊಂದು ಟ್ರೆಂಡ್ ಸೃಷ್ಟಿಸಿದವು ಎಂದರೆ ತಪ್ಪಾಗಲಾರದು. ಇವು ಕಥಾನಕದ ಅಗತ್ಯ ಮತ್ತು ಅವಲಂಬನೆಯನ್ನು ಕಡಿಮೆ ಮಾಡಿ, ನಿರೂಪಣೆಯ ಸೊಗಸು ಮತ್ತು ಅನುಭವವೊಂದರ ಯಶಸ್ವಿಯಾದ ಸಂವಹನಕ್ಕೆ ಅಗತ್ಯವಾದ ಪ್ರೆಸೆಂಟೇಶನ್-ಎರಡರತ್ತ ಹೆಚ್ಚು ಒತ್ತು ನೀಡಿದವು. ಕವಿ ಭಾವ ಪ್ರತಿಮಾ ಪುನರ್ ಸೃಷ್ಟಿಯನ್ನೇ ಸಣ್ಣಕತೆಗಳ ಸಾರ್ಥಕತೆಯನ್ನಾಗಿ ಮರು ವ್ಯಾಖ್ಯಾನಿಸಿಕೊಂಡು ಇಂಥ ಕತೆಗಳು ರೂಪುಗೊಂಡವು.

ಇಂಥ ಒಂದು ಪಲ್ಲಟದ ಆರಂಭಿಕ ಹಂತವನ್ನು ಪಿ ಲಂಕೇಶರ ‘ಉಮಾಪತಿಯ ಸ್ಕಾಲರ್ ಶಿಫ್ ಯಾತ್ರೆ’ ಯಂಥ ಕತೆಯಲ್ಲೇ ನಾವು ಕಾಣಬಹುದಾಗಿದೆ ಎಂಬುದು ನಿಜವಾದರೂ ಈ ಬಗೆಯ ಕತೆಗಳನ್ನೇ ಬರೆಯುವ ಪರಿಪಾಠ ತೊಡಗಿದ್ದು ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಅಮರೇಶ ನುಗಡೋಣಿ ಮುಂತಾದವರ ಕಾಲದಲ್ಲಿ. ಮುಂದೆ ಸುಮಂಗಲಾ, ಸುನಂದಾ, ಅನುಜಯಾ, ರಘುನಾಥ ಚ.ಹ, ಸಂದೀಪ ನಾಯಕ, ಅಲಕಾ ತೀರ್ಥಹಳ್ಳಿ ಇದೇ ಪರಂಪರೆಯನ್ನು ಮುಂದುವರಿಸುತ್ತ ಕಾವ್ಯದಂಥ ಕಥೆಗಳನ್ನು ಬರೆಯುತ್ತ ಬಂದರು. ವಸುಧೇಂದ್ರರಾದಿಯಾಗಿ (ನಮ್ ವಾಜೀನೂ ಸೇರಿಸ್ಕೊಳ್ರೋ) ಸರಿಸುಮಾರು ಎಲ್ಲಾ ಕತೆಗಾರರೂ ಇಂಥ ಕತೆಗಳನ್ನು ಪ್ರಯತ್ನಿಸುವ ಆಕರ್ಷಣೆಗೆ ಬಿದ್ದಿದ್ದು ನಿಜವೇ. ಆದರೆ ಸೂಕ್ಷ್ಮ ಕತೆಗಾರನಿಗೆ ಕಟುವಾದ ವಾಸ್ತವ ಮತ್ತು ಎಲ್ಲ ಬಗೆಯ ಸೋಗಿನ ಕೃತಕ ಫ್ಯಾಂಟಸಿ ಎರಡರ ನಡುವೆ ನಿಂತಂತೆ ಕಾಣುವ ತನ್ನದೇ ಬದುಕಿನ ನಿರರ್ಥಕತೆ, ಅರ್ಥಹೀನತೆ ಮತ್ತು ಅದರ ಎಲ್ಲ ಜಂಜಾಟಗಳ ಉದ್ದೇಶ ರಾಹಿತ್ಯ ಕೂಡ ಅನುಭವಕ್ಕೆ ಬರುವ ಕ್ಷಣಗಳಿದ್ದೇ ಇರುತ್ತವೆ. ಇದೊಂದು ಬಗೆಯ ಸ್ಮಶಾನ ವೈರಾಗ್ಯವೇ ಹೌದಾದರೂ ಅದು ಕಾಣಿಸುವ ಒಂದು ದರ್ಶನ ಕೂಡ ಇದ್ದೇ ಇದೆ.

ಅಲ್ಲಿ ಕೊನೆಗೂ ಮನುಷ್ಯನ ಅಹಂಕಾರದ ವಿಸ್ತರಣೆಯಾದ, ಒಂದು ಅಸಹಜ ಪ್ರಕ್ರಿಯೆಯಾದ, ಪ್ರಸಿದ್ಧಿ-ಗುರುತಿಸುವಿಕೆ ಇತ್ಯಾದಿಯನ್ನೇ ಬಯಸುವ ಬರವಣಿಗೆ ಎಂಬ ಪ್ರಕ್ರಿಯೆಯ, ಅದರ ಬೈಪ್ರಾಡಕ್ಟ್ ಆದ ಸಾಹಿತ್ಯದ ಬಗ್ಗೆ ಹೆಚ್ಚು ಖಚಿತ ನಿಲುವುಗಳು ಮೂಡುವುದು ಸಾಧ್ಯ. ಮತ್ತು ಇದರಾಚೆಗೂ ಒಬ್ಬ ಬರಹಗಾರ ಬರವಣಿಗೆಯಲ್ಲಿ ಕ್ರಿಯಾಶೀಲನಾಗಿ ಉಳಿಯುವುದು ಕೂಡ ಸಾಧ್ಯ. ವಿನೋದ್ ಕುಮಾರ್ ಶುಕ್ಲ ಅವರು ಅಂಥ ಅಪರೂಪದ ವ್ಯಕ್ತಿಯಾಗಿದ್ದರು.

ರಾಜು ಹೆಗಡೆಯವರೂ ನವ್ಯೋತ್ತರ ಕತೆಗಾರರ ಹೊಸ ತಲೆಮಾರಿಗೆ ಸೇರಿದವರಾದರೂ ಅವರು ಯಾವುದೇ ಮಾದರಿಗೆ ಒಲಿಯಲಿಲ್ಲ ಎನ್ನುವುದನ್ನು ಗಮನಿಸಬೇಕು. ಹೀಗೆ ಕಾವ್ಯದಂಥ ಕತೆಗಳನ್ನು ಬರೆಯುವುದು ಯಾವುದೋ ಒಂದು ಕಥಾನಕದ ಎಳೆ ಹಿಡಿದು, ಕುತೂಹಲಕರವಾಗಿ ಅದನ್ನು ನಿರೂಪಿಸುತ್ತ ಅದಕ್ಕೊಂದು ಆಕೃತಿ, ಅದರಲ್ಲೊಂದು ಮೆಸೇಜು, ಅರ್ಥ ಹುಟ್ಟಿಸುವಷ್ಟು ಸುಲಭದ ಪ್ರಕ್ರಿಯೆಯಾಗಿರಲಿಲ್ಲ. ಈ ಸುಲಭದ ಪ್ರಕ್ರಿಯೆಯನ್ನು ಗಹನಗೊಳಿಸುತ್ತ, ಸಂಕೀರ್ಣಗೊಳಿಸುತ್ತ, ಕಥನದ ಮಹತ್ವವನ್ನು ಪರಾಕಾಷ್ಠೆಗೊಯ್ದ ಕತೆಗಾರರು ಆಗಲೂ ಇದ್ದರು. ಈಗಲೂ ಇದ್ದಾರೆ. ಅಲ್ಲದೆ ಭಿನ್ನ ಮಾದರಿಯನ್ನು ಪೋಷಿಸಿದ ರಾಘವೇಂದ್ರ ಖಾಸನೀಸ, ರಾಘವೇಂದ್ರ ಪಾಟೀಲ, ಆಲನಹಳ್ಳಿ, ದೇವನೂರ ಮಹದೇವ, ಕೇಶವ ಮಳಗಿಯವರಂಥ ಕತೆಗಾರರ ಮಾದರಿಗಳು ತಮ್ಮ ಆಕರ್ಷಣೆಯನ್ನೂ, ಗುರುತ್ವವನ್ನೂ ಪ್ರಖರವಾಗಿಟ್ಟುಕೊಂಡೇ ಇದ್ದ ಕಾಲವದು.

ರಾಜು ಹೆಗಡೆಯವರು ‘ಅಪ್ಪಚ್ಚಿ’ ಸಂಕಲನದಲ್ಲಿ ಪುರಾಣದ ಪುನರ್ ವ್ಯಾಖ್ಯಾನಕ್ಕೆ ಇಳಿದು ಬರೆದ ಕತೆಗಳನ್ನು ಹೊರತು ಪಡಿಸಿದರೆ ಸುದೀರ್ಘ ಕಾಲಘಟ್ಟದ ಕಥನಗಳಿಗೇ ಹೆಚ್ಚಾಗಿ ಒಲಿದಿದ್ದು ಕಂಡು ಬರುತ್ತದೆ. ‘ಅಪ್ಪಚ್ಚಿ’ ಸಂಕಲನವನ್ನು ಗಮನಿಸಿದರೆ ಎದ್ದು ಕಾಣುವುದು ಪುರಾಣಗಳನ್ನು ಅವರು ಪುನರ್ ವ್ಯಾಖ್ಯಾನಿಸಲು ಪ್ರಯತ್ನಿಸಿದ್ದು, ಅಹಲ್ಯೆಯ ಕತೆಯನ್ನು (ಮಾನಿನಿ ಮಣಿಯೆ ಬಾರೆ!), ಯಕ್ಷಪ್ರಶ್ನೆಯ ಕಥಾನಕವನ್ನು (ಕಾಡಿನ ನಡುವೆ), ಸಾಲ್ವ-ಅಂಬೆಯರ ಪ್ರಸಂಗವನ್ನು (ಸರಸಿಜಾಂಬಕಿಯರೆ ಕೇಳಿ), ಭರತ-ಬಾಹುಬಲಿಯ ಪ್ರಸಂಗವನ್ನು (ಇರುವುದೆಲ್ಲವ ಬಿಟ್ಟು) ರಾಜು ಹೆಗಡೆ ಮತ್ತೆ ಬರೆದಿರುವುದು ಈ ಸಂಕಲನದಲ್ಲಿ ಗಮನಿಸಿದರೆ ಕಥಾನಕದ ನಿರೂಪಣೆಯಲ್ಲಿ ಅವರಿಗಿರುವ ನೈಪುಣ್ಯ ಮತ್ತು ಆಸಕ್ತಿ ನಮಗೆ ಅರ್ಥವಾಗುತ್ತದೆ.

ಯಕ್ಷಗಾನ ಪ್ರಸಂಗಗಳು ಜನಸಾಮಾನ್ಯರಿಗೆ ಈಗಾಗಲೇ ಚೆನ್ನಾಗಿ ಗೊತ್ತಿರುವ ಕಥಾನಕಗಳನ್ನೇ ಆಡುತ್ತವೆ. ಆಶುಪ್ರಸಂಗದ ಒಂದು ಗುಣವೇ ಪ್ರತಿ ಪ್ರಯೋಗವನ್ನೂ ಅನನ್ಯಗೊಳಿಸುವ ಶಕ್ತಿ ಯಕ್ಷಗಾನದಲ್ಲಿ. ಹಾಗಾಗಿ ಜನ ಎಷ್ಟು ಬಾರಿ ನೋಡಿದರೂ, ಎಷ್ಟು ಚೆನ್ನಾಗಿ ಗೊತ್ತಿರುವ ಕಥಾನಕವೇ ಆದರೂ ಮತ್ತೆ ಮತ್ತೆ ಯಕ್ಷಗಾನವನ್ನು ನೋಡಲು ಹೋಗುತ್ತಿದ್ದರು. ರಾಜು ಹೆಗಡೆಯವರ ಈ ಸಂಕಲನದ ನಾಲ್ಕು ಕತೆಗಳು ಮಾಡುವುದು ಇದನ್ನೇ. ಇದನ್ನು ಹೊರತು ಪಡಿಸಿ ನೋಡಿದರೆ ಇಡೀ ಬದುಕನ್ನು ತಲೆಮಾರುಗಳನ್ನು ಕಟ್ಟಿಕೊಡುವ ‘ಅಪ್ಪಚ್ಚಿ’, ‘ಬಂಧ’, ‘ಕತ್ತಲೆ ಮೌನ ಮತ್ತು…..’, ‘ತಳಿಯ ನೆರಳು’ ಮುಂತಾದ ಕತೆಗಳನ್ನು ಇಲ್ಲಿ ಗಮನಿಸಬಹುದು. ‘ಅಪ್ಪಚ್ಚಿ’ ಸಂಕಲನದ ಉಳಿದ ಆರು ಕತೆಗಳನ್ನು ಗಮನಿಸಿದರೆ ಅವುಗಳದ್ದೇ ಎಳೆ ಈ ಸಂಕಲನದಲ್ಲಿಯೂ ನಮಗೆ ಕಾಣಿಸುವುದು ಸುಳ್ಳಲ್ಲ.

ಒಂದು ಕೊಲೆಯ ಪ್ರಸಂಗ, ಅದೂ ಭಾವನೆಂಟ-ಮೈದುನರ ಸುತ್ತ ಸುತ್ತಿಕೊಳ್ಳುವಂಥ ಕೊಲೆಯ ಕತೆ. ಹೆಗಡೆಯವರ ರಾಜಕೀಯ ಮತ್ತು ದುಂದುವೆಚ್ಚದ ಬದುಕು ಅವರ ಸಿರಿತನವನ್ನು ಕರಗಿಸುವ ಹಂತದಲ್ಲಿ ಮಗ ಮನೆಯ ವ್ಯವಹಾರವನ್ನು ಕೈಗೆತ್ತಿಕೊಂಡು ನಿಭಾಯಿಸುವ ಕತೆ. ಅಪ್ಪಚ್ಚಿಯಂಥವರ, ಜಟ್ಟಿಯಂಥವರ, ನಾಗು ಥರದವರ ಕತೆ ಎಲ್ಲಿಯೋ ಒಂದೇ ಎಳೆಯನ್ನು ಮತ್ತೆ ಮತ್ತೆ ವ್ಯಾಖ್ಯಾನಿಸುತ್ತಿರುವ ಹೊಳಹುಗಳನ್ನು ಕಾಣಿಸುವುದು ನಿಜ. ಇಲ್ಲಿ ಮಾತ್ರ ನಮಗೆ ರಾಜು ಹೆಗಡೆಯವರ ಕಥಾನಕ-ವಸ್ತು-ಆಕೃತಿ-ನಿರೂಪಣೆಯ ಪಟ್ಟುಗಳನ್ನು ಒರೆಗೆ ಹಚ್ಚಿ ನೋಡುವುದು ಸಾಧ್ಯವಾಗುತ್ತದೆ ಎನ್ನುವ ಕಾರಣಕ್ಕೆ ಈ ಕತೆಗಳು ಮುಖ್ಯವಾದರೂ ರಾಜು ಅವರಲ್ಲಿ ಮೆಚ್ಚುಗೆಯಾಗುವುದೆಲ್ಲ ಇಂಥ ಚೌಕಟ್ಟುಗಳ ಒಳಗೆ ಕೂರಲು ಹವಣಿಸುವ ಕತೆಗಾರಿಕೆಯಲ್ಲ.

‘ಅಪ್ಪಚ್ಚಿ’ ಸಂಕಲನದ ನಂತರ ಹೆಗಡೆಯವರ ಕತೆಗಳಲ್ಲಿ ಪುರಾಣದ ಪುನರ್ ವ್ಯಾಖ್ಯಾನದ ಹುಮ್ಮಸ್ಸು ಇಳಿಮುಖವಾದಂತೆಯೂ ಕಾಣುತ್ತದೆ ಮಾತ್ರವಲ್ಲ, ಸುದೀರ್ಘಾವಧಿಯ ಕಾಲಘಟ್ಟಕ್ಕೆ ಚಾಚಿಕೊಂಡ ಕತೆಗಳಿಂದಲೂ ಅವರು ಹೊರಳಿಕೊಂಡಂತೆ ಕಾಣುತ್ತದೆ. ಹೀಗಾಗಿ ಮೂರನೆಯ ಘಟ್ಟದ ಕತೆಗಳಲ್ಲಿ ಘಟ್ಟದ ಕತೆಗಳಲ್ಲಿ ವಸ್ತು. ಆಕೃತಿ, ಕಥಾನಕ ಎಂದೆಲ್ಲ ಹುಡುಕಿ ಹೊರಟರೆ ನಿರಾಶೆಯೇ ಗತಿ.

ಈ ಸಂಕಲನದ ಎಕ್ಸ್ಟ್ರಾ ಮೆರಿಟಲ್ ರಿಲೇಶನ್ನಿನ ರೊಮಾಂಟಿಕ್ ಪ್ರಸೆಂಟೇಶನ್ ಮಾಡುವ ‘ವಿಪ್ರಲಂಭ’, ಮಹಾಬಲ ಹೆಗಡೆ ಮತ್ತು ಶಂಭು ಭಟ್ಟರ ಜಿದ್ದಾಜಿದ್ದಿ, ಅದಕ್ಕಿರುವ ‘ಒಂದು ಕೊಲೆ ಪ್ರಸಂಗ’ದ ಹಿನ್ನೆಲೆ, ಟುವಾಲು ಇಟ್ಟು ಹೋದವರ ಜಗಳದ ಪ್ರಸಂಗ ಎಲ್ಲ ಬರುವ ‘ಕುರುರಾಯ ಇದನೆಲ್ಲ ಕಂಡು’, ದೈನಂದಿನದ ನಡುವೆ ಬೆಳೆಯುವ ಮನೆಗೆಲಸದ ಕಲಾವತಿಯ ಕತೆ, ಅವಳ ತಂದೆಯ ಸಾವು, ಮನೆಯಲ್ಲಿಯ ಹಳೆಯ ಪ್ರಿಜ್ಜಿನ ವಿಲೇವಾರಿ ಪ್ರಸಂಗ ಇರುವ ‘ಫ್ರಿಜ್ಜು’, ಈಗಾಗಲೇ ವಿವರಿಸಿರುವ ‘ಚಾವಿ’, ನಾರಾಯಣ ಮತ್ತು ರವಿ-ಇಬ್ಬರ ಸ್ನೇಹ ನಾರಾಯಣ ಅವರ ಕಾಯಿಲೆ, ಅದರ ಸುತ್ತಣ ಗುಟ್ಟು ಉತ್ಯಾದಿ ಬರುವ ‘ಲೌಕಿಕ’ ವಿಪ್ರಲಂಭ ಕತೆಯ ಇನ್ನೊಂದು ಅಧ್ಯಾಯದಂತೆ ಕಾಣಿಸುವ ‘ಪಾರಿಜಾತದ ಗೀರು’, ನುಡಿ ಚಿತ್ರಗಳೋ. ಪುಟ್ಟ ಪುಟ್ಟ ಪ್ರಸಂಗಗಳೋ ಎಂಬಂತಿರುವ ‘ಲಾಸ್ಟ್ ಪೆಗ್ಗು’, ‘ಎಮ್ಮೆ ಕಳೆದಿದೆ’, ‘ತೇಲುವ ಊರು’ ಮುಂತಾದ ಕಥನಗಳೇ ನಮಗೆ ಒಂದು ನೆಲದ ಜನ, ಪರಿಸರ, ಸಂಸ್ಕಾರ, ನಡವಳಿಕೆ ಇತ್ಯಾದಿಗಳೊಂದಿಗೆ ಹೆಚ್ಚು ಜೀವಂತವಾದ ಕಥಾಜಗತ್ತನ್ನು ಕಟ್ಟಿಕೊಡುತ್ತಿರುವುದು.

ರಾಜು ಹೆಗಡೆಯವರ ‘ಹಳವಂಡ’ ಸಂಕಲನದಲ್ಲಿ ಕೂಡ ನಾವು ಕಾಣುವುದು ಇಂಥವೇ ಬರಹಗಳನ್ನು ಅಥವಾ ಕತೆಗಳನ್ನು. ಇವು ನುಡಿ ಚಿತ್ರದ ಚೌಕಟ್ಟಿನ್ನು ಮೀರಿವೆ ಮತ್ತು ಶಿಷ್ಟ ಪ್ರಕಾರದ ಕತೆಗಳಾಗುವ ಮಹತ್ವಾಕಾಂಕ್ಷೆಯನ್ನೂ ತೊರೆದಿವೆ. ಪ್ರಕಾರದ ಹಂಗಿಲ್ಲದ ಈ ಕಥನಗಳನ್ನು ಬರೇ ಓದುವ ಕುಶಿಗಾಗಿ ಓದಬಹುದೆನ್ನುವುದೇ ಇವುಗಳ ಹೆಚ್ಚುಗಾರಿಕೆ. ‘ವಿಪ್ರಲಂಭ’ ಮತ್ತು ‘ಪಾರಿಜಾತದ ಗೀರು’ ಎರಡೂ ಕತೆಗಳು ‘ಅಪ್ಪಚ್ಚಿ’ ಸಂಕಲನದಲ್ಲಿಯೇ ಬರುವ ‘ಅವನು’ ಕತೆಯ ನೆಲೆಯಲ್ಲೇ ಸಾಗುತ್ತ ಆತ್ಮರತ ವಿಹಾರದಲ್ಲಿ ಹೆಚ್ಚು ಒಲವು ತೋರುತ್ತಿದೆ ಎನ್ನುವುದು ನಿಜವಾದರೂ ಇವು ಒಪ್ಪಿಕೊಳ್ಳುವ ಮುನುಷ್ಯನ ದೌರ್ಬಲ್ಯ ಕೂಡ ಶಿಷ್ಟ ಜಗತ್ತು ಸದಾ ಅಡಗಿಸಿಡಲು, ನಾಗರಿಕ ಸೋಗಿನಲ್ಲಿ ಮರೆಮಾಚಲು ಬಯಸಿದ್ದು ಎನ್ನುವ ಕಾರಣಕ್ಕಾಗಿ ಇಲ್ಲಿ ಇರಬೇಕು ಅನಿಸುತ್ತದೆ.

ಹೀಗೆ ಇಲ್ಲಿ ಪಾರಂಪರಿಕವಾದ ಬಗೆಯ ಕಥೆಗಳಿಲ್ಲ. ಹಾಗಾಗಿ ಈ ಕತೆಗಳ ಆಶಯ. ಸಾಮಾಜಿಕ-ತಾತ್ವಿಕ ಆಯಾಮ, ವಸ್ತುವಿನ ಸಮಕಾಲೀನತೆ ಹಾಗಿರಲಿ, ಮುಖ್ಯ ಮುದ್ದೆಯಾದ ವಸ್ತುವೇ ಐಡೆಂಟಿಫೈಯಬಲ್ ಮಾನದಂಡಗಳಿಗೆ ಸಿಕ್ಕಿಕೊಳ್ಳದ ಹಾಗಿವೆ. ಅಂಥ ನಿರೀಕ್ಷೆಗಳ ಚೌಕಟ್ಟು ಬಿಟ್ಟುಕೊಟ್ಟು ಸುಮ್ಮನೇ ಓದುವ ಕುಶಿಗಾಗಿ ಓದುವ ಮನಸ್ಸುಗಳಿಗೆ ಈ ಬಗೆಯ ಬರವಣಿಗೆಯ ಸೊಗಸು, ಮಹತ್ವ ಮತ್ತು ಅವು ಮನಸ್ಸನ್ನು ಸೇರಿ ನಿಲ್ಲುವ ಚೋದ್ಯ ಅರಿವಾಗದೇ ಇರದು. ಈ ಸುಮ್ಮನೇ ಓದುವ ಕುಶಿಗಾಗಿ ಓದುವ, ಓದಬೇಕನ್ನಿಸುವ ಬರಹಗಳ ಬಗ್ಗೆ ಹೇಳಿದವರು ಕೂಡ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರೇ.