ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ ಅವರು ಮಂಗಳವಾರ ಮುಂಜಾನೆ ತೀರಿಕೊಂಡಿದ್ದಾರೆ. ವಯೋಸಹಜ ಅನಾರೋಗ್ಯ ಅವರನ್ನು ಕಾಡಿತ್ತು. ರಾಜೇಶ್ವರಿ ತೇಜಸ್ವಿ ಅವರು ಕೆಂಡಸಂಪಿಗೆಯ ಮೂಲಕವೇ ಬರವಣಿಗೆ ಶುರು ಮಾಡಿದ್ದರು. ಮೂಡಿಗೆರೆ ಹ್ಯಾಂಡ್ ಪೋಸ್ಟ್ ಸರಣಿಯಲ್ಲಿ ಅವರು ತಮ್ಮ ಅನುಭವ ಕಥನಗಳನ್ನು ಬರೆಯುತ್ತಾ ಕೆಂಡಸಂಪಿಗೆ ಬಳಗದ ಬರಹಗಾರ್ತಿಯಾಗಿದ್ದರು.  ಅಗಲಿದ ಅವರಿಗೆ ಕೆಂಡಸಂಪಿಗೆಯು ನುಡಿನಮನದ ರೂಪದಲ್ಲಿ ಅವರ ಬರಹವೊಂದನ್ನು ಇಲ್ಲಿ ಪ್ರಕಟಿಸುತ್ತಿದೆ. ಕೆಂಡಸಂಪಿಗೆಯ ಆರಂಭದ ದಿನಗಳಲ್ಲಿ ಪ್ರಕಟವಾಗುತ್ತಿದ್ದ ಅವರ ಸರಣಿ ಬರಹಗಳ ಉಳಿದ ಕಂತುಗಳು ಇಂದಿನಿಂದ ಪ್ರತಿನಿತ್ಯ ಪ್ರಕಟವಾಗಲಿವೆ. 

 

 ತೇಜಸ್ವಿ ನೆನಪು ಮಧುರ – ಉದಯರವಿಯಲ್ಲಿ ಬ್ರೇಕ್‌ಫಾಸ್ಟ್

ನಮ್ಮದು ಅಂತರ್ಜಾತಿ ಸಂಬಂಧ. ನಮ್ಮ ಮದುವೆಗೆ ಯಾರ ವಿರೋಧವಿಲ್ಲ. ಯಾರ ಅಡ್ಡಿಯಿಲ್ಲ. ಮೊದಲಾಗಿ ನಾವು ಸಮಾಜದ ರೀತಿನೀತಿಯನ್ನು ಲೆಕ್ಕಿಸಿದರೆ ತಾನೆ ಅದೆಲ್ಲ. ಎಲ್ಲೋ ಒಂದು ಕಡೆ ಇದೆಲ್ಲದರ ಆಚೆಗೆ ಎನ್ನುವ ಮನೋಧರ್ಮ ನಮ್ಮದು, ತತ್ವ. ಕುವೆಂಪುರವರ ಆದರ್ಶ ಎಲ್ಲರಿಗೂ ಗೊತ್ತಿದ್ದೇ! ಅಂತೆಯೆ ಇವರದ್ದೂ.

ನಮ್ಮ ಹತ್ತಿರ ಆಗ ಇದ್ದಿದ್ದು ಸ್ಕೂಟರ್ ವಾಹನವೊಂದೇ. ನಾವು ಸ್ಕೂಟರ್‌ನಲ್ಲೇ ಮೈಸೂರಿಗೆ ಹೋಗಿ ಬರುತ್ತಿದ್ದೆವು. ಶಿವಮೊಗ್ಗೆಗೂ ಅದರಲ್ಲೇ ಹೋಗಿ ಬರುತ್ತಿದ್ದೆವು. ಇದೇನು ಮಹಾ. ಸ್ನೇಹಿತರೊಂದಿಗೆ ಗೋವಾಕ್ಕೂ ಹೋಗಿ ಬಂದಿರುವರು. ನಾವು ಶಿವಮೊಗ್ಗೆಗೆ ಹೋಗುವಾಗ ಬಯಲು ಸೀಮೆ ಟಾರು ರಸ್ತೆಯಲ್ಲಿ ಹೋಗುತ್ತಲೇ ಇರಲಿಲ್ಲ. ಕಗ್ಗಾಡಿನ ದಾರಿ ಶಾಂತವೇರಿ, ಬಾಬಾಬುಡನ್‌ಗಿರಿ, ಕೆಮ್ಮಣ್ಣು ಗುಂಡಿ ದಾರಿಯಲ್ಲೇ ಹೋಗುತ್ತಿದ್ದುದು. ಚಂದ್ರದ್ರೋಣ ಪರ್ವತ ನಮ್ಮನ್ನು ಧ್ಯಾನದಲ್ಲಿ ಮುಳುಗಿಸುತ್ತಿತ್ತು. ಆಕಾಶದಾಚೆಗೆ ಕೊಂಡೊಯ್ಯುತ್ತಿತ್ತು. ಈಗ ಆ ಕಡೆ ಸುಳಿಯಲೂ ಮನಸ್ಸಾಗುವುದಿಲ್ಲ. ಕಾವಿ ಬಣ್ಣ ರಾಚಿದೆ. ನೆನೆಸಿಕೊಂಡರೆ ವ್ಯಥೆಯಾಗುತ್ತದೆ.

ಅಣ್ಣ ಅಂದರೆ ಕುವೆಂಪುರವರು ಎಂದೂ ನನ್ನ ತಂದೆಯವರ ಉದ್ಯೋಗವನ್ನಾಗಲಿ, ನನ್ನ ಜಾತಿಯನ್ನಾಗಲಿ ಕೇಳಲಿಲ್ಲ. ಆದರೆ ಒಂದು ಸಂದರ್ಭದಲ್ಲಿ ನನ್ನ ತಂದೆಯವರು ಇದ್ದ ಉದ್ಯೋಗವನ್ನು ಹೇಳಬೇಕಾಯಿತು.

ಹೀಗೆ ಒಂದು ಸಲ ಸ್ಕೂಟರ್‌ನಲ್ಲಿ ಮೈಸೂರಿಗೆ ಹೋದೆವು. ನನಗೆ ನೆನಪಿದ್ದಂತೆ ಉದಯರವಿ ಮನೆಯಲ್ಲಿ ಬೆಳಗ್ಗಿನ ತಿಂಡಿಗೆ ಬ್ರೆಡ್ಡು ಮತ್ತು ಮೊಟ್ಟೆ. ಎಷ್ಟೋ ವರ್ಷಗಳು ಇದೇ ತಿಂಡಿ. ನಾನು ಅಲ್ಲಿಗೆ ಹೋಗುವುದಕ್ಕೆ ಮುಂಚೆ ಎಷ್ಟೋ ವರ್ಷಗಳಿಂದಲೂ ಇದೇ ಅಭ್ಯಾಸವಂತೆ. ಕೆಲವರು ಇದನ್ನು ತಿಂಡಿಯಂತಲೇ ತಿಳಿಯುವುದಿಲ್ಲವಂತೆ. ನನಗೊ, ಇದು ಇಷ್ಟವಾದ ತಿಂಡಿನೇ. ಆದರೆ ಇದನ್ನು ತಿಂದ ಸ್ವಲ್ಪ ಹೊತ್ತಿಗೇ ಹೊಟ್ಟೆ ಚುರುಚುರು ಅನ್ನುತ್ತಿತ್ತು. ಅಷ್ಟೊಂದು ಹಸಿವು. ಬಹುಶಃ ಚಿಕ್ಕಂದಿನಿಂದ ನಮ್ಮಮ್ಮ ಹೆಚ್ಚಾಗಿ ತಿನ್ನಿಸಿ ದೊಡ್ಡ ಹೊಟ್ಟೆ ಮಾಡಿದ್ದಿರಲೂಬಹುದು ಕಾರಣ. ಇದನ್ನು ಗುಟ್ಟಾಗಿ ಇವರಿಗೆ ಹೇಳಿದ್ದೆ. ಬೇರೆ ಯಾರಿಗೂ ಹೇಳಿರಲಿಲ್ಲ .ಇಲ್ಲಿ ಮನೆಯಂಗಳದಲ್ಲಿ ನಾಲ್ಕಾರು ಸಪೋಟ ಮರಗಳಿದಾವೆ. ಬಲಿತವುಗಳನ್ನು ಅಮ್ಮ ಕೀಳಿಸಿ, ತಿಕ್ಕಿಸಿ, ತೊಳೆಸಿ ಸ್ಟೋರು ರೂಂನಲ್ಲಿ ಇಟ್ಟಿರುತ್ತಿದ್ದರು. ನನಗೆ ತಡೆಯಲಾರದಷ್ಟು ಹಸಿವಾದಾಗ ಸ್ಟೋರು ರೂಂನಲ್ಲಿ ಹಣ್ಣಾದ ಏಳೆಂಟು ಸಪೋಟ ಹಣ್ಣು ಸಿಪ್ಪೆಸಮೇತ ತಿಂದುಕೊಂಡು ಬಿಡುತ್ತಿದ್ದೆ. ಸಂಕೋಚ, ಇದನ್ನೂ ಯಾರಿಗೂ ಹೇಳಲಿಲ್ಲ. ತಾರಿಣಿಗೆ ಮದುವೆಯಾಗಿ ಅವರ ಚಿದಾನಂದ ಗೌಡರು ಬರುವವರೆಗೂ ಇದೇ ರೀತಿ. ಅವರು ಇಲ್ಲಿರಲು ಬಂದ ಮೇಲೆ ದಿನಾ ತಿಂಡಿ ಶುರುವಾಯಿತು. ಉಪ್ಪಿಟ್ಟು, ದೋಸೆ, ಆಪದೋಸೆ, ಅಪ್ಪೆ, ಇಡ್ಲಿ, ರೊಟ್ಟಿ ಇತ್ಯಾದಿ. ದಿನಕ್ಕೊಂದು ಬಗೆಯದು.

ನನ್ನೊಬ್ಬಳನ್ನು ಬಿಟ್ಟು ಇವರೆಲ್ಲರೂ ಮೊಟ್ಟೆಗೆ ಈರುಳ್ಳಿ, ಹಸಿರು ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದೀನ ಇದ್ದರೆ ಹಾಕಿಕೊಂಡು ಪುಡಿಪುಡಿಯಂತೆ ಹುರುಕಲು ಮಾಡಿಕೊಂಡು ಬ್ರೆಡ್ಡಿನ ಜೊತೆ ತಿನ್ನುತ್ತಿದ್ದರು. ಅದೂ ಎರಡೇ ಕೆಂತೆ(ಸ್ಲೆ ಸ್). ಎಷ್ಟು ಬೇಕಾದರೂ ತಿನ್ನಬಹುದಿತ್ತು. ಆದರೆ ನಾನೊಬ್ಬಳೆ ಹೆಚ್ಚಾಗಿ ತಿಂದು ಹೊಟ್ಟೆಬಾಕಿ ಅಂತಾದರೆ ನನ್ನ ಮರ್ಯಾದೆ ಎಲ್ಲಿಗೆ ಹೋಗುತ್ತೆ ಹೇಳಿ. ಕಾಫಿ ಇರುತ್ತಿತ್ತು. ಅಣ್ಣನವರಂತೂ ಎರಡು ಲೋಟ ತುಂಬಾ ಬಿಸಿ ಕಾಫಿ ಕುಡಿಯುತ್ತಿದ್ದರು. ಒಂದೊಂದು ಗುಟುಕಿಗೂ ಬಾಯಿ ಚಪ್ಪರಿಸುತ್ತ ರುಚಿಯನ್ನು ಆಸ್ವಾದಿಸುತ್ತ ಕುಡಿಯುತ್ತಿದ್ದರು. ಅಮ್ಮ ಏನಾದರೂ ಮಾತು ಹೇಳುತ್ತಿದ್ದರು. ನಾನು ಉದಯರವಿಗೆ ಹೋದ ಶುರುವಿನಲ್ಲಿ ಅಮ್ಮ ಯಾವಾಗಲೂ ಶಿವಮೊಗ್ಗ ಮತ್ತು ಅವರ ತಮ್ಮಂದಿರು ಮಾಡಿದ ಶಿಕಾರಿ ಬಗ್ಗೆಯೇ ಮಾತಾಡಿದಂತಾಗುತ್ತಿತ್ತು. ಅಲ್ಲಿ ತೀರ ಹೊಸದಾಗಿದ್ದುದರಿಂದ ನನಗೆ ಹಾಗನ್ನಿಸುತ್ತಿತ್ತೇನೋ.

ಇವರೂ ಶಿವಮೊಗ್ಗೆಯಲ್ಲಿ ಇವರ ಮಾವಂದಿರ ಜೊತೆಯಲ್ಲೋ ಗೆಳೆಯರ ಜೊತೆಯಲ್ಲೋ ಶಿಕಾರಿಗೆ ಹೋದಾಗ ಹಂದಿ ಕೈಗೆ ಸಿಕ್ಕಿ ಸಾವಿನ ಬಳಿ ಹೋಗಿ ಬಂದದ್ದು, ಹೀಗೆ ಮಾತುಗಳು ನಡೆಯುತ್ತಿದ್ದವು. ಊಟದ ಮನೆ ಪಕ್ಕಕ್ಕೆ ಅಡುಗೆ ಮನೆ. ಗ್ಯಾಸ್ ಒಲೆ ಮೇಲೆ ಹಾಲಿಟ್ಟು ತಿಂಡಿಗೆ ಬರುತ್ತಿದ್ದೆವು. ಹೇಗೂ ಉಕ್ಕುವುದು ಗೊತ್ತಾಗುತ್ತೆ. ಹೋಗಿ ಆಫ್ ಮಾಡಿದರಾಯ್ತುಂತ. ಆದರೆ ಹಾಲು ಉಕ್ಕಿ ಚುಸ್‌ಸ್ ಎಂದು ಸದ್ದಾದಾಗ ನಾನು ತಾರಿಣಿ ಅಯ್ಯಯ್ಯೋ ಹಾಲು ಉಕ್ಕಿತು ಎಂದು ಓಡುತ್ತಿದ್ದೆವು. ಹಲವಾರು ಬಾರಿ ಹೀಗಾದಾಗ ಅಣ್ಣ ಹೇಳಿದರು, ಸಾಕು ಈ ನಿಮ್ಮ ನಾಟಕ ಎಲ್ಲ ಅಂತ. ಇದ್ದಕ್ಕಿದ್ದಂತೆ ಸೀರಿಯಸ್ಸಾಗಿ ಅವತ್ತಿನ ಸೆನ್‌ಸಿಟೀವ್ ಇಸ್ಯೂ ಬಗ್ಗೆ ಮಾತು ಹೊರಳುತ್ತಿತ್ತು. ಎಪ್ಪತ್ತರ ದಶಕದಲ್ಲಿ ಇವರು ಬರೆದ ಬ್ರಾಹ್ಮಣ ಯುವಕರಿಗೆ ಕವನದ ಬಗ್ಗೆ ಮಾತಾಡಿದ್ದೂ ನೆನಪಿದೆ. ಒಟ್ಟಿನಲ್ಲಿ ತಿಂಡಿ ಸೆಷನ್ ಚೆನ್ನಾಗಿರುತ್ತಿತ್ತು. ಎಲ್ಲವೂ ಸ್ಟ್ರೇಂಜ್ ಆಗಿರುತ್ತಿತ್ತು ನನಗೆ.

ಎಲ್ಲೋ ಹೋದೆ. ಎಲ್ಲಿಗೋ ಬಂದೆ. ಮೊಟ್ಟೆ ಪ್ರಕರಣಕ್ಕೆ ಬರ್ತೀನಿ. ನಾನು ಒಬ್ಬಳು ಮಾತ್ರ ಮೊಟ್ಟೆಯನ್ನು ಬಲ್ಸ್ ಐನಂತೆಯೇ ಅಂದರೆ ಎಗ್ ಫ್ರೈ ಮಾಡಿಕೊಂಡು ತಿನ್ನುತ್ತಿದ್ದೆ. ಇದು ನನಗೆ ಬಹು ಪ್ರಿಯವಾದದ್ದು. ಹೀಗೆ ತಿನ್ನುವಾಗ ಒಂದು ದಿನ ನಾದಿನಿ ತಾರಿಣಿ ಹೇಳಿದ್ರು. ನನಗೆ ಮಾತ್ರ ಈ ರೀತಿ ಹಸಿ ಬಿಸಿ ಬೇಯಿಸಿಕೊಂಡು ತಿನ್ನಕ್ಕಾಗೊಲ್ಲ ಅಂತ. ಸುತ್ತ ಬಿಳಿ ಮಧ್ಯೆ ಹಳದಿ ಸೂರ್ಯನಂತಿದ್ದ ಬಣ್ಣಕ್ಕೆ ಬೆರಗಾಗಿ ತಾರಿಣಿ ಮಗಳು ಪ್ರಾರ್ಥನೆ ಪುಟ್ಟವಳಿದ್ದಾಗ ಅತ್ತೆಮ್ಮ ತಿನ್ನುವಂತೆಯೇ ಬೇಕೆಂದು ಹಠ ಮಾಡಿ ಮಾಡಿಸಿಕೊಂಡು ತಿನ್ನುತ್ತಿದ್ದಳು. ತಾರಿಣಿಗೆ ಹೇಳಿದೆ ಬಹುಶಃ ಚಿಕ್ಕಂದಿನಿಂದಲೂ ಆ ರೀತಿ ತಿಂದು ನನಗೆ ಅಭ್ಯಾಸ. ನನಗೆ ಅದೇ ಇಷ್ಟವೆಂದೆ.

ಆಗ ತೇಜಸ್ವಿ, ‘ಹೂಂ, ಆ ಕಾಲದಲ್ಲಿ (ಅಂದರೆ ಆರು ದಶಕದ ಹಿಂದೆ) ಇವಳು ಚಿಕ್ಕಂದಿನಿಂದ ಮೊಟ್ಟೆ ತಿಂತಿದ್ಲು’ ಎಂದರು. ನನ್ನ ಸ್ವಾಭಿಮಾನಕ್ಕೆ ಸಿಟ್ಟೇರಿತು. ‘ಹೌದು. ನನ್ನ ತಂದೆಯವರು ನಾನು ಚಿಕ್ಕವಳಿದ್ದಾಗ ಅನಿಮಲ್ ಹಸ್‌ಬೆಂಡ್ರಿ ಡಿಪಾರ್ಟ್‌ಮೆಂಟಿನಲ್ಲಿ ಹೆಡ್ ಅಕೌಂಟೆಂಟ್ ಆಗಿದ್ರು. ಅದಕ್ಕೂ ಬಹಳ ಹಿಂದೆಯೇ ನಮ್ಮ ರಾಜ್ಯದಲ್ಲಿ ಇಲಾಖೆಯವರು ರೋಡ್ ಐಲೆಂಡ್ ರೆಡ್ ಮತ್ತು ವೈಟ್ ಲೆಗ್ ಹಾರನ್ ತಳಿಯ ಕೋಳಿಗಳನ್ನು ಪರಿಚಯಿಸಿದ್ದರು. ಆಗಲೆ ಈ ತಳಿ ಕೋಳಿಗಳನ್ನು ಸಾಕಲು ಅಭಿವೃದ್ಧಿಪಡಿಸಲು ವ್ಯವಸ್ಥೆಯನ್ನೂ ಮಾಡಿದ್ದರು. ಸರ್ಕಾರದ ಪ್ರಾಜೆಕ್ಟ್ ಇತ್ತು. ಹಾಗಾಗಿ ಆ ಇಲಾಖೆಯಲ್ಲಿ ಉತ್ಪತ್ತಿಯಾದ ಮೊಟ್ಟೆಯನ್ನು ಅಲ್ಲಿನ ನೌಕರರಿಗೆ ಮಾರುತ್ತಿದ್ದರು. ನಮ್ಮ ತಂದೆಯವರು ಕೊಂಡು ತರುತ್ತಿದ್ದರು. ಅಷ್ಟೇ ಅಲ್ಲದೆ ನಮ್ಮ ಮನೆಯಲ್ಲಿಯೂ ಇದ್ದ ಚಿಕ್ಕ ಅಂಗಳದಲ್ಲಿ ಅಲ್ಪಸ್ವಲ್ಪ ಜಾಗದಲ್ಲೇ ಮೆಶ್ ಹಾಕಿ ಆ ತಳಿಯ ಕೋಳಿಗಳನ್ನು ಸಾಕಿದ್ದೆವು. ಹಾಗಾಗಿ ಪ್ರತಿ ಶನಿವಾರ ಮೊಟ್ಟೆಯು ನಮ್ಮ ತಿಂಡಿಯೊಟ್ಟಿಗೆ ಇರುತ್ತಿತ್ತು’ ಎಂದೆ. ಜಂಬಕೊಚ್ಚಿದೆ. ಹ್ಞೂಂ. ಎಂದು ತುದಿಗಣ್ಣಿನಲ್ಲೇ ನನ್ನನ್ನು ನೋಡಿದರು. ಇವರು.

ನಾನೊಂದು ಕನಸ ಕಂಡೆ!

“ಎಲ್ಲರಿಗೂ ಆಯಾ ವಯಸ್ಸಿನಲ್ಲಿ ಬರಬೇಕಾದ ಖಾಯಿಲೆಗಳು ಬಂದೇ ಹೋಗಬೇಕೆನ್ನುವುದು ಒಂದು ವಿಧಿ ನಿಯಮವೋ ಏನೋ”- ತೇಜಸ್ವಿಯವರ ‘ಸುವರ್ಣ ಸ್ವಪ್ನ’ ಕಥೆ ಶುರುವಾಗುವುದೇ ಈ ಮಾತಿನಿಂದ.

ನಾನು ಸಣ್ಣವಳಿದ್ದಾಗ ಲಂಗದ ಹುಡುಗಿಯಾಗಿದ್ದಾಗ ನನ್ನ ಕೋಣೆಯಲ್ಲಿ ಖುರ್ಚಿಯಲ್ಲಿ ಕೂತು ದಿನದ ಪಾಠ ಓದಿಕೊಳ್ಳುತ್ತಿದ್ದೆ. ಜೋರಾಗಿ ಓದಿಕೊಳ್ಳುವ ಅಭ್ಯಾಸ. ಸ್ವಲ್ಪ ಹೊತ್ತಿನಲ್ಲೆ ತಲೆ ಮೆಲ್ಲಕೆ ಮೇಜಿಗೆ ಆನಿಸುತ್ತಿತ್ತು. ಶುರು ಸುವರ್ಣ ಸ್ವಪ್ನ -‘ಆಕಾಶಕ್ಕೇ ಉಯ್ಯಾಲೆ ಹಾಕಿದಂತೆ. ಆ ಉಯ್ಯಾಲೆ ಮೇಲೆ ಸರಸ್ವತಿ ಕೂತಿರುವಳು. ರಾಜಾರವಿವರ್ಮರ ಸರಸ್ವತಿಯ ರೂಪ. ಈ ಸರಸ್ವತಿಯ ಕೈಯಲ್ಲಿ ಯಾರೋ ವೀಣೆ ಕೊಟ್ಟಂತೆ- ವೀಣೆ ಹಿಡಿಯುವಳು. ಈ ವೀಣೆ ನಾನಾದರೆ ಎಂದುಕೊಳ್ಳುತ್ತಿದ್ದೆ’. ಈ ಸ್ವಪ್ನ ಕಂಡನಂತರ ಅಪ್ಪಅಮ್ಮನಿಗೆ ಕೇಳಿಸಲೆಂದು ಮತ್ತೊಮ್ಮೆ ಜೋರಾಗಿ ಚರಿತ್ರೆನೋ, ಭೂಗೋಳನೋ, ಕನ್ನಡನೋ ಯಾವುದೋ ಒಂದು ಪಾಠ ಓದಿಕೊಳ್ಳುತ್ತಿದ್ದೆ. ಅಷ್ಟೊತ್ತಿಗೆ ಊಟದ ಸಮಯವಾಯಿತೆಂದು ಎದ್ದು ಹೋಗುತ್ತಿದ್ದೆ.

ಒಂದೂರಿನ ಹುಡುಗ ಕನಸಿಗೆ ಬರುವವರೆಗೂ ವೀಣೆ ಕನಸೇ ನಾನು ಕಾಣುತ್ತಿದ್ದುದು. ಚೂರು ದೊಡ್ಡವಳಾದಂತೆ ನನಗೆ ವೀಣೆ ಕಲಿಯುವ ಆಸೆ ಬಹಳವಿತ್ತು. ಆದರೆ ಕಲಿಯಲಾಗಲಿಲ್ಲ. ಈ ಕನಸೇ ಬರಲು ಕಾರಣ ಒಂದಿತ್ತು- ಆಗ ನಲವತ್ತರ ದಶಕ. ನಾನು ಲಂಗದ ಹುಡುಗಿಯಾಗಿದ್ದಾಗ. ನಮ್ಮ ಮನೆ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆಗೆ ಹತ್ತಿರವೇ ಇತ್ತು. ನನ್ನ ತಾಯಿಯವರು ವಾರಕೊಮ್ಮೆ ಅಥವಾ ಹದಿನೈದು ದಿನಕೊಮ್ಮೆಯಾದರೂ ಈ ಪರಿಷತ್ತಿಗೆ ಹೋಗಿಬರುತ್ತಿದ್ದರು. ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು ಜೊತೆಗಿರಲೆಂದು. ಆವತ್ತಿಗೆ ಆ ರಸ್ತೆಗಳಲ್ಲಿ ಜನವೇ ಓಡಾಡುತ್ತಿರಲಿಲ್ಲ.

ಪರಿಷತ್ತಿನ ಎದುರು ಕಾಂಪೌಂಡಿನಲ್ಲಿ ಮಕ್ಕಳ ಕೂಟ ಇತ್ತು. ಜಾರೋ ಬಂಡೆ, ಉಯ್ಯಾಲೆ, ಟಕ್ಕಟಿಕ್ಕಿ ಎಲ್ಲ ಇತ್ತು. ಇದನ್ನೆಲ್ಲ ನೋಡಿಕೊಂಡೇ ಹೋಗುತ್ತಿದ್ದೆ. ಒಂದು ದಿನವೂ ಜಾರಲಿಲ್ಲ ಆ ಜಾರೋ ಬಂಡೆಮೇಲೆ. ಎಷ್ಟು ಚೆಂದ! ಅಂದುಕೊಂಡೇ ಹೋಗುತ್ತಿದ್ದೆ.

ಪರಿಷತ್ತಿನ ಗೇಟು ತಲುಪುತ್ತಿದ್ದಂತೆ ಏನೋ ಒಂದು ಭೀತಿ ಮಿಶ್ರಿತ ಗೌರವ ಬರುತ್ತಿತ್ತು. ಒಳ ಹೊಕ್ಕುತ್ತಿದ್ದಂತೆ ಎಲ್ಲ ಮೌನ. ತಾಯಿಯವರು ನಡೆದ ಸಪ್ಪಳ ಸದ್ದು ಆಗದಂತೆ ಮೆಟ್ಟಿಲು ಹತ್ತುತ್ತಿದ್ದರು. ಅಂತೆಯೇ ನಾನು. ಒಳ ಹೊಕ್ಕಿದಾಗ ಮೌನ ಹೃದಯ ತಟ್ಟುತ್ತಿತ್ತು. ದೊಡ್ಡ ಬಾಗಿಲು ದೊಡ್ಡ ಹಾಲ್. ಸಾಲಾಗಿ ದೊಡ್ಡ ಮನುಷ್ಯರ ಫೋಟೋಗಳನ್ನು ತೂಗು ಹಾಕಿದ್ದರು. ಎಷ್ಟೋ ವರ್ಷಗಳನಂತರ ಅವರು ಯಾರುಯಾರೆಂದು ತಿಳಿಯಿತು.

ಆ ದೊಡ್ಡ ಹಾಲಿನ ಮಧ್ಯೆ ಒಂದು ಕಡೆ, ಗೋಡೆ ಪಕ್ಕ ಜಮಖಾನ ಹಾಸಿರುತ್ತಿದ್ದರು. ಒಬ್ಬಳು ತರುಣಿ ಸಾಮಾನ್ಯ ಎತ್ತರ, ಗುಂಗುರು ಮುಂಗುರುಳು, ಮೋಟು ಜಡೆ, ಕಪ್ಪು ಫ್ರೇಂನ ಕನ್ನಡಕ, ಬಿಳಿ ಮುಖ, ಬಿಳಿ ಸೀರೆಯುಡುಗೆಯವರು ಚಟುವಟಿಕೆಯಿಂದ ಓಡಾಡುತ್ತಿದ್ದರು. (ಅವರು ಬನಶಂಕರಿಯೆಂದೂ ಪರಿಷತ್ತಿನ ಕಾರ್ಯದರ್ಶಿಯೆಂದೂ ನಾನು ದೊಡ್ಡವಳಾದ ಮೇಲೆ ತಿಳಿಯಿತು.) ಅಲ್ಲಿ ಒಂದು ಹತ್ತಿಪ್ಪತ್ತು ಮಹಿಳೆಯರು ಸೇರುತ್ತಿದ್ದರು. ಬ್ರಾಹ್ಮಣರೆಂದು ತೋರುತ್ತದೆ. ಎಣ್ಣೆ ಹಾಕಿ ಒತ್ತಿ ಬಾಚಿ ತುರುಬು ಹಾಕಿರುತ್ತಿದ್ದರು. ಕಚ್ಚೆ ಸೀರೆಯುಟ್ಟವರೂ ಇರುತ್ತಿದ್ದರು. ಬಹಳ ಗಂಭೀರವಾಗಿ ಮಾತಾಡುತ್ತಿರುತ್ತಿದ್ದರು. ನನಗೆ ಗೌರವ ಹುಟ್ಟುತ್ತಿತ್ತು. ಭಯವೂ ಆಗುತ್ತಿತ್ತು, ಅವರನ್ನೆಲ್ಲ ನೋಡಿದಾಗ. ನಾವು ಒಳಹೊಕ್ಕಾಗ ಬನ್ನಿಯಮ್ಮ ಕುಳಿತುಕೊಳ್ಳಿ ಎಂದು ಸ್ವಾಗತಿಸುತ್ತಿದ್ದರು. ಸದ್ದಿಲ್ಲದೆ ಕುಳಿತುಕೊಳ್ಳುತ್ತಿದ್ದರು ನನ್ನ ಅಮ್ಮ. ಪಕ್ಕದಲ್ಲಿ ನಾನು. ಅಮ್ಮ ಮಾತಾಡಿದ್ದೇ ನೆನಪಿಲ್ಲ. ಬಹುಶಃ ಅಂಜಿಕೆ. ಅನೇಕರಿಗೆ ಇಂಗ್ಲಿಷು ಗೊತ್ತಿದ್ದರೂ ಮಾತಾಡಲು ಹಿಂಜರಿಕೆ ಆಗುವಂತೆ. ಅವರೂ ಯಾರೂ ಹೆಚ್ಚಿಗೆ ಮಾತಾಡಿಸುತ್ತಿರಲಿಲ್ಲ. ಇದೆಲ್ಲ ಆವತ್ತು ಆ ಪುಟ್ಟ ಲಂಗದ ಹುಡುಗಿಯಾಗಿ ಗ್ರಹಿಸಿದ್ದು. ಆ ನೆನಪಿನಿಂದಲೇ ಬರೆಯುತ್ತಿರುವೆನು.ಆ ಮಹಿಳೆಯರು ಏನೇನೋ ಸಾಹಿತ್ಯದ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಜೈಮಿನಿ ಭಾರತವೋ, ರಾಮಾಯಣವೋ ಒಂದೂ ಗೊತ್ತಾಗಿರಲಿಲ್ಲ. ಒಂದೊಂದು ವಾರ ವೀಣಾ ವಾದನವಿರುತ್ತಿತ್ತು. ಯಾರೋ ಒಬ್ಬರು ವೀಣೆ ತಂದಿಡುತ್ತಿದ್ದರು. ಈ ವೀಣೆಯೇ ನನಗೆ ಕನಸು ಹಚ್ಚಿದ್ದು.
* * *

ಈವತ್ತಿಗೂ ‘ಉದಯರವಿ’ ಒಳಹೊಕ್ಕಿದರೆ ಮಂದಿರದ ಗಂಟೆಯ ಅಲೆ ಅಲೆ ಅಲೆ ರಿಂಗಣಿಸುತ್ತಲೇ ಇರುವಂತೆ ಭಾಸವಾಗುತ್ತದೆ. ‘ರಾಮಾಯಣ ದರ್ಶನಂ’ನ ಭವ್ಯತೆ ಧನ್ಯತೆ ರೂಪುಗೊಂಡಿರುವುದನ್ನೂ ಇಲ್ಲಿ ಕಾಣುತ್ತೇವೆ. ನಾವು ಎಲ್ಲೇ ಹೋಗಲಿ ಯಾವುದೇ ಮನೆಗೆ ಹೋಗಿ ಬರಲಿ ಇಲ್ಲಿ ಹೊಕ್ಕಿದ ಕೂಡಲೆ ದೊಡ್ಡ ನೆಮ್ಮದಿ! ಇನ್ನೆಲ್ಲೂ ಸಿಕ್ಕದ್ದು ಇಲ್ಲಿ ಸಿಕ್ಕಿತು! ಅನ್ನುವ ಭಾವನೆ. ಈ ಮನೆ ಬಾಗಿಲು, ಕಿಟಕಿ, ಹಜಾರ, ಇಲ್ಲಿನ ಗಾಳಿ, ಫೋಟೊಗಳು ಎಲ್ಲವೂ ಹಾಗೆಯೇ. ಪ್ರತ್ಯಕ್ಷ ದರ್ಶಿಗಳು. ಈ ಮನೆಯೇ ಹಾಗೆ ‘ಚೆಂದ’.

ಈ ಮನೆಯ ಇಬ್ಬರು ಸರಸ್ವತಿ ಸುಪುತ್ರರ ನಡುವೆ ನಾನು ಬದುಕಿದ್ದು ನನ್ನ ದೊಡ್ಡ ಹೆಮ್ಮೆ. ಇದು ಯಾವುದೋ ಒಂದು ವಿಶಿಷ್ಟ ಸಂದರ್ಭದ ಮಧ್ಯೆ ನಡುವೆ ನಡೆದ ಒಂದು ಅಸಾಮಾನ್ಯ ಘಟನೆ ಎಂದುಕೊಳ್ಳುತ್ತೇನೆ. ಸಾಧಾರಣವಾದ್ದೆಂದು ಅನ್ನಿಸುವುದಿಲ್ಲ ನನಗೆ. ಒಬ್ಬರು ಆಸ್ತಿಕರು ಇನ್ನೊಬ್ಬರು ನಾಸ್ತಿಕರು ಅಂತ ಹೇಳುವರು. ಇಬ್ಬರೂ ಸತ್ಯಾರ್ಥಿಗಳು. ಇಬ್ಬರೂ ಬದುಕನ್ನು ಅರ್ಥಪೂರ್ಣವಾಗಿಸಿಕೊಂಡವರು.

ಕುವೆಂಪು ಮಲೆನಾಡಿನಿಂದ ಕಾಡಿನಿಂದ ನಗರಕ್ಕೆ ಹೋದವರು. ತೇಜಸ್ವಿ ನಾಡಿನಿಂದ ನಗರದಿಂದ ಕಾಡಿಗೆ ಬಂದವರು. ‘ಕಾಡು ತೇಜಸ್ವಿಯನ್ನು ರೂಪಿಸಿತು!’ ಮೊಟ್ಟ ಮೊದಲಬಾರಿಗೆ ನಾನು ಈ ಮಾತನ್ನು ಒತ್ತುಕೊಟ್ಟು ಹೇಳಬಯಸುವೆನು. ಹೇಗೆ ರೂಪಿಸಿತು ಎಂದು ಕೇಳುವಿರಾ? ನೀವು ನೋಡಿದಂತೆ, ನನಗೆ ಹೇಳಲಿಕ್ಕೆ ಬಾರದಂತೆ. ಇವರು ತಮ್ಮ ಬದುಕನ್ನು ತೆರೆತೆರೆದುಕೊಂಡಂತೆಲ್ಲಾ ಅದು ರೂಪಿಸುತ್ತಾ ಹೋಯಿತು. ವಿಚಿತ್ರ! ಇವರು ಜಗತ್ತನ್ನು ವೀಕ್ಷಿಸಿದ ಪರಿಯನ್ನು ನೋಡ ನೋಡುತ್ತಿದ್ದಂತೆ ರೂಪಿಸುತ್ತಾ ಹೋಯಿತು. ಇಲ್ಲೆಲ್ಲೋ ಒಂದೆಳೆ ಕಂಡಂತಾಯಿತೆ. ಹೌದಾ. ಓಕೆ! ಈ ಎಳೆಯನ್ನು ನಾವು ಹಿಡಿಯಬೇಕು. ಹಿಡಿದುಕೊಳ್ಳಬೇಕು…. ಮುಂದುವರಿಯಬೇಕು….

೧೯೬೧ರಲ್ಲಿ ಕಾಡು ಮತ್ತು ಇವರ ಬದುಕು ಬೆಸೆದುಕೊಂಡಿತು. ಅಲ್ಲಿಂದ ಶುರುವಾಯಿತು ಎಲ್ಲ. ‘ಒಂದು ವಿಧಿ ನಿಯಮದಂತೆ’ ಕಾಡು ನಿಗೂಢ. ಈ ನಿಗೂಢವನ್ನು ಅರಸಿ ಭೇದಿಸಲಿಕ್ಕೆ ಇವರು ಹೊರಟಾಗ ಧಕ್ಕಿದ್ದು ಅದರ ರಹಸ್ಯ. ಕರ್ವಾಲೋ, ಚಿದಂಬರ ರಹಸ್ಯವಿರಬಹುದು. ಇಕಾಲಿಜಿಯಂತ ಆದರ್ಶ! ಇರಬಹುದು.

ನನ್ನ ತೌರಿನ ಕಾಡು ‘ಭೂತನ ಕಾಡು’ ದಟ್ಟ ಅಡವಿ. ಸೂರ್ಯ ಭೂಮಿಗೇ ತಾಗುತ್ತಿರಲಿಲ್ಲ. ಆಗ, ನೋಡಿದವರ ನೆತ್ತಿ ಕದಡುವಂತಿದೆ ಎನ್ನುತ್ತಿದ್ದರು ತೇಜಸ್ವಿ. ಈ ಅಡವಿಯಲ್ಲಿ ಕಾಡೆಮ್ಮೆ ಸಾಲು, ಕಾಡುಕುರಿ, ಕಾಡುಹಂದಿ, ಕಬ್ಬೆಕ್ಕು, ಹಾರು ಬೆಕ್ಕು, ಮುಳ್ಳುಹಂದಿ, ಚಿಪ್ಪಿಗ, ಮೊಲ, ನವಿಲು, ನರಿ, ಬಾವಲಿ ಇವೇ ಮೊದಲಾದವುಗಳನ್ನು ನೋಡಿ ನಿಬ್ಬೆರಗಾಗಿದ್ದರು ತೇಜಸ್ವಿ. ನಮಗೂ ಬೆರಗಾಯಿತು ಅದರ ಪರಿವೆ ಬಂದು.
ಈಗ ಎಲ್ಲ ಕಡೆ ಕೃಷಿ ಮಾಡಿ ಕಾಡು ಪ್ರಾಣಿಗಳ ವಾಸಯೋಗ್ಯ ಜಾಗವಾದರೂ ಎಲ್ಲಿ? ನರಿ ಕೂಗು ಕೇಳುತ್ತೆ ಅದೂ ಕಡಿಮೆ. ನವಿಲಿನ ಕೇಕೆ ಮನೆ ಪಕ್ಕದಲೇ ಕೇಳುತ್ತೆ. ಬೆಚ್ಚಿ ಬೀಳುವಷ್ಟು ಕರ್ಕಶವಾಗಿರುತ್ತೆ.

ಅಲ್ಲಿ ಎರಡು ದೊಡ್ಡ ದೊಡ್ಡ ದೂಪದ ಮರಗಳಿದ್ದವು. ತೇಜಸ್ವಿಯಂತೂ ಆ ಕಾಡಿನಲ್ಲೇ ವಾಸ. ಕಿವಿ ಸಂಗಡ, ಕೋವಿ ಹಿಡಿದು ಇಂಚಿಂಚು ಕಾಡಿನ ಬಗ್ಗೆ ‘ಅರಿವು’ ಮಾಡಿಕೊಳ್ಳುತ್ತ ಠಳಾಯಿಸಿರುತ್ತಿದ್ದರು. ಒಂದು ದಿನ ಮರ ಕೊಯ್ಯುವ ಕಾಂಟ್ರ್ಯಾಕ್ಟಿನವರು ಒಂದು ದೂಪದ ಮರಕ್ಕೆ ಕೊಡಲಿ ಕಾಣಿಸಿದರು. ತೇಜಸ್ವಿ ಮರುಗಿದರು. ಎಂತಹ ಪ್ರಮಾದವಾಯಿತೆಂದರು.

ಆ ಮರದ ಹಣ್ಣನ್ನು ತಿನ್ನಲು ಗುಮ್ಮಾಡಲು ಹಕ್ಕಿಗಳು ಬರುತ್ತಿದ್ದವು. ಇವು ದೊಡ್ಡ ಗಾತ್ರದ ಹಕ್ಕಿಗಳು. ಹಣ್ಣುಗಳೂ ಅಷ್ಟೆ. ಗುಮ್ಮಾಡಲು ಹಕ್ಕಿಗಳ ಕರುಳುಗಳು ಆ ಹಣ್ಣನ್ನು ತಿಂದು ಜೀರ್ಣಿಸಿಕೊಳ್ಳುವಂತೆ ರಚನೆಯಾಗಿರುತ್ತೆ. ‘ಎವಲ್ಯೂಷನ್’ನಲ್ಲಿ ಹಾಗೆ ಆಗುತ್ತಾ ಬಂದಿರುತ್ತೆ. ಮರವೇ ಇಲ್ಲದ ಮೇಲೆ ಅವಕ್ಕೆ ಆಹಾರವಾದರೂ ಎಲ್ಲಿ ಸಿಗಬೇಕು. ಇದು ಹಕ್ಕಿಯ ಉಳಿವಿಕೆಗೆ ಧಕ್ಕೆಯಲ್ಲವೆ. ತೇಜಸ್ವಿ ಹೇಳುತ್ತಿದ್ದರು.
ಇದೊಂದು ಪಕ್ಷಿಯ ಬಗ್ಗೆ ಮಾತ್ರ ಈ ಮಾತು ಮಾತಲ್ಲ. ಸರ್ವ ಚರಾಚರ ಜೀವಿಗಳಿಗೂ ಅನ್ವಯಿಸುತ್ತದೆ ಎನ್ನುವ ಸತ್ಯವನ್ನು ಅರಿವನ್ನು ಕಂಡುಕೊಂಡಿದ್ದರು. ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು ಎನ್ನುವ ಅರಿವು ಕೇವಲ ಮನುಷ್ಯನಿಗೆ ಮಾತ್ರ ಅನ್ವಯಿಸುವುದಂತದಲ್ಲ. ಈ ಅರಿವಿನ ಜ್ಞಾನ ದೊಡ್ಡದಾದಂತೆಲ್ಲ ವಿಸ್ತಾರವೂ ತೆರೆದುಕೊಳ್ಳುತ್ತ ಹೋಗುತ್ತೆ. ತುದಿ ಮುಟ್ಟಿದೆವು. ತಲುಪಿದೆವು ಎನ್ನುವಂತೆಯೇ ಇಲ್ಲ. ಎಲ್ಲೆಯೇ ಇಲ್ಲ. ಇವನ್ನು ಇವರು ನಿರಂತರವಾಗಿ ಚಿಂತಿಸುತ್ತಿದ್ದರು. ಅನುಭವದಿಂದ ಬಂದ ಅರಿವಾಗಿತ್ತು. ಈವತ್ತಿಗೆ ಇಕಾಲಜಿ ನಮ್ಮ ಕಣ್ಣ ಮುಂದಿರುವ ದೊಡ್ಡ ಆದರ್ಶವೆನ್ನುತ್ತಿದ್ದರು. ಬಹಳ ಸಂಕ್ಷಿಪ್ತವಾಗಿ ಹೇಳಿರುವೆನು. ಎಲ್ಲವೂ ಸುಸ್ಪಷ್ಟವೆನ್ನಿಸುತ್ತೆ ನನಗೆ.
*****

೨೦೦೭ ಏಪ್ರಿಲ್‌ನಲ್ಲಿ ಇವರು ನನಗೆ ಹೇಳಿದರು, ಈ ತುದಿಯಲ್ಲಿ ನಿಂತು ಹಿಂದಕ್ಕೆ ನೋಡಿದರೆ, ಏನೆಲ್ಲ ನಡೆಯಿತು. ಎಲ್ಲವೂ ಆಶ್ಚರ್ಯವೇ!…. ಎಂದರು.

ಇಷ್ಟ ಬೇಗ ಆ ಆಶ್ಚರ್ಯಕ್ಕೆ ತೆರೆ ಬೀಳುತ್ತೆಂದು ನಾನು ತಿಳಿದಿರಲಿಲ್ಲ. ತೆರೆ ಬಿದ್ದಿದೆ. ಇನ್ನು ಕನಸಾದರೂ ಎಲ್ಲಿಯದು?…. ನನಗೆ.

*****

ಒಬ್ಬಂಟಿಯಾಗಿದ್ದೇನೆ ಎನ್ನಿಸುತ್ತಿತ್ತು. ಓದುಗ ಮಹಾಶಯರು ನನ್ನೊಟ್ಟಿಗೆ ಇರುವರಂತೆನ್ನಿಸುವಂತೆ ಮಾಡಿದ ಕೆಂಡಸಂಪಿಗೆಗೆ ನನ್ನ ನೂರು ನಮೋನಮಃ