ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಮನಗೂಳಿಯವರಾದ ರಾಮಚಂದ್ರ ಕೊಟ್ಟಲಗಿ ಅವರು, ಕಾದಂಬರಿ, ಕಾವ್ಯ ಮತ್ತು ವಿಮರ್ಶೆಯ ಕೃತಿಗಳನ್ನು ಬರೆದಿದ್ದಾರೆ. ಅವರು ಬರೆದ ಮೊದಲ ಕಾದಂಬರಿ ದೀಪನಿರ್ವಾಣ. ‘ದೀಪ ಹತ್ತಿತು’ ಇದರ ಎರಡನೆಯ ಭಾಗ. ‘ವಿಲಾಪಿಕಾ’, ‘ವೈನಿ ಸತ್ತಾಗ ನಾನ್ಯಾ ಅತ್ತಾಗ’ ಮತ್ತು ‘ನಾನು ಬಾಳ್ಯಾ ಜೋಶಿ’ ಇನ್ನಿತರ ಕಾದಂಬರಿಗಳು. ಪಿಪಾಸೆ ಮತ್ತು ಪ್ರತಿಮಾ ಅವರು ಬರೆದ ಕವನಸಂಕಲನಗಳು. ಗೀಚುಗೆರೆ ಮತ್ತು ಚೈತ್ರ ಪಲ್ಲವ ಎಂಬ ಕಥಾ ಸಂಕಲನಗಳನ್ನೂ ಬರೆದಿದ್ದಾರೆ. ಅವರು ಬರೆದ ಕಾದಂಬರಿ ಮತ್ತು ನಾಟಕಗಳು ಮರಾಠಿ ಭಾಷೆಗೂ ಅನುವಾದಗೊಂಡಿವೆ.  ಕಾವ್ಯ ಮಾಲೆಯ ಕಾಣದ ಕುಸುಮಗಳು ಸರಣಿಯಲ್ಲಿ ಅವರು ಬರೆದ ‘ಲೀಲೆ’ ಎಂಬ ಕವನ ನಿಮ್ಮ ಓದಿಗಾಗಿ.

ಲೀಲೆ

ಬೆಳ್ಳಿಚೊಗಚಿಯ ಚಂದ್ರ, ಮುಗಿಲ ಮಂಟಪದಲ್ಲಿ
ತಾರೆಗಳ ಬಳಗದಲಿ ರಂಜಿಸಿರಲು ||
ಗಂಧವಾಹಕನಿಂದು ಕುಸುಮವತಿಯರನೆಲ್ಲ
ಚಂದಿರನ ಸ್ವಾಗತಕೆ ಬಳುಕಿಸಿರಲು ||

ಮುಗಿಲ ಮಾನಸದಲ್ಲಿ ರಾಜಹಂಸಗಳಂತೆ
ತಿಳಿಮೋಡಗಳು ಮೆಲನೆ ತೇಲುತಿರಲು ||
ಮೇದಿನಿಗೆ ಮೊದಲಾಗಿ ಹುಲ್ಲಿಗೂ ಕಡೆಯಾಗಿ
ಎದೆತುಂಬಿ ಹಿಡಿಸದಲೆ ನಗುತಲಿರಲು ||

ಹೊಚ್ಚಹೊಸ ಪಲ್ಲವದ ಬೆಚ್ಚನೆಯ ಮನೆಯಲ್ಲಿ
ಈ ಪಕ್ಷಿ ದಂಪತಿಗದೆಂಥ ನಿದ್ರೆ ||
ಮೈ ಕೊರೆವ ಮಾಗಿಯೂ ಮಧುಮಾಸವಾಗಿರಲು
ನಲ್ಲೆ -ನಲ್ಲರಿಗಾರ ಯೋಗ ಮುದ್ರೆ ||

ತಂಗದಿರ ಹೊಳೆದಾಗ ಗಾಳಿಯಲೆ ಸುಳಿದಾಗ
ಜೀವ ಕುಮುದಿನಿ ಮೆಲ್ಲನರಳುತ್ತಿತ್ತು ||
ಯಾರ ಲೀಲೆಯ ಕನಸು ಎಂಬ ಭಾವನೆ ಮೂಡಿ
ನಸುಗುಂದಿ ಕಳೆ ಹೀನವಾಗುತ್ತಿತ್ತು ||

ಎಲೆಗಾಳಿ ! ಉಡುಗಣವೆ! ಪಕ್ಷಿ ದಂಪದಿಗಳೇ
ಅರಳಿದಿರಿ ನೀವಾರ ಕನಸದಾಗಿ ||
ಒಂದು ಕ್ಷಣವಾದರೂ ಕನಸುಗಳ ಕನಸಿಗನೆ!
ಮೂಡಿಬಾ ! ಎಳೆ ಬಿದಿಗೆ ಚಂದ್ರನಾಗಿ||