ನನ್ನ ಮಗ್ಗಿಯ ಪಾಠ ಇಪ್ಪತ್ನಾಲ್ಕನ್ನೂ ಮುಟ್ಟಲಿಲ್ಲ! ಅದೆಷ್ಟು ತಿಂಗಳು ಹೀಗೆ ಆಕೆಯ ಹಿಂಬಾಲಿಸಿ ಕಳೆದಿದ್ದೆನೋ ನನಗೆ ನೆನಪಿಲ್ಲ. ಆದರೆ ನಾವು ಮನೆ ಬದಲಿಸಲಾಗಿ ಮತ್ತೆಂದೂ ರೇಖಿಯ ಭೇಟಿಯಾಗಲಿಲ್ಲ. ಈಗಲೂ ಒಮ್ಮೊಮ್ಮೆ ರೇಖಿಯಂತಹ ಪ್ರತಿಭಾವಂತೆಯ ಬಳಿ ಪಾಠ ಹೇಳಿಸಿಕೊಂಡಿದ್ದಕ್ಕೆ ಆಗಾಗ ಹೆಮ್ಮೆಯೆನಿಸುತ್ತದೆ. ಆಗ ಆಕೆ ಬದುಕಿದ್ದ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಲೆಕ್ಕ ಹಾಕಿದರೆ ಬಹುಷಃ ಹೆಚ್ಚು ಓದಿ ಕಡಿದು ಗುಡ್ಡೆ ಹಾಕಿರಲಿಕ್ಕೆ ಆಕೆಯ ಮನೆಯವರು ಬಿಟ್ಟಿರಲಿಕ್ಕಿಲ್ಲ. ನನಗೆ ಇತ್ತೀಚೆಗೆ ಹೊಳೆಯುತ್ತಿರುವುದೇನೆಂರೆ ನಮ್ಮ ನೆರೆಹೊರೆಯವರು ನನ್ನನ್ನು ನಿಲ್ಲಿಸಿ ಮಗ್ಗಿಗಳನ್ನು ಹೇಳಿಸಿ ಖುಷಿಪಟ್ಟಂತೆ ರೇಖಿಯ ಬಳಿ ಹೇಳಿಸಿ ಖುಷಿ ಪಟ್ಟದ್ದು ನಾನು ಕಂಡಿದ್ದು ನೆನಪಿಲ್ಲ.
ಶ್ರೀಹರ್ಷ ಸಾಲಿಮಠ ಬರೆವ ಅಂಕಣ

 

ನನಗೆ ಸ್ಪರ್ಧಾತ್ಮಕ ಗುಣ ಕಡಿಮೆ ಅಥವಾ ಇಲ್ಲವೇ ಇಲ್ಲವೆಂದು ಹೇಳಬಹುದು. ಅನೇಕ ಜಿಲ್ಲಾ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಗೆದ್ದಿದ್ದೇನಾದರೂ ಅದನ್ನು ಸ್ಪರ್ಧೆ ಅಂತ ನೋಡಿದ್ದಕ್ಕಿಂದ ಒಂದು ದಿನ ಶಾಲೆಯಿಂದ ಹೊರತಾದ ಚಟುವಟಿಕೆ ಅಂತ ನೋಡಿದ್ದೇ ಹೆಚ್ಚು. ಸೋತಾಗಲೆಲ್ಲಾ ಹೋಗಿ ಗೆದ್ದವನ ಕೈ ಕುಲುಕಿದ್ದಿದೆ. ಎಷ್ಟೋ ಸಾರಿ ಕಂಪನಿಯಲ್ಲಿ ಬೇರೆ ದೇಶಕ್ಕೆ ಹೋಗಲು ಅಥವಾ ಪ್ರೊಮೋಶನ್ ಗಾಗಿ ಇನ್ನೊಬ್ಬನೊಡನೆ ಸ್ಪರ್ಧಿಸುವ ಸಂದರ್ಭ ಬಂದಾಗೆಲ್ಲಾ ಅವನನ್ನೇ ಕಳಿಸಿ ಅಂತ ನಾನು ಆರಾಮಾಗಿ ಇದ್ದದ್ದಿದೆ. ನನಗಿಂತ ನನ್ನ ಗೆಳೆಯರು ಹೆಚ್ಚು ಸಂಪಾದಿಸಿದಾಗಾಗಲೀ, ಆಸ್ತಿಪಾಸ್ತಿ ಕೊಂಡುಕೊಂಡಾಗಾಗಲೀ ನನಗೆ ಅಸೂಯೆ ಹುಟ್ಟಿದ್ದಿಲ್ಲ. ಕಾಲೇಜಿನಲ್ಲಿ ಓದುವಾಗ ಯಾರಾದರೂ ಬಂದು ನನಗೆ ನಿನಗಿಂತ ಹೆಚ್ಚು ಮಾರ್ಕ್ಸ್ ಬಂದಿದೆ ಅಂತ ಹೇಳಿದಾಗೆಲ್ಲಾ ನನಗೆ ನಗು ಬಂದಿದ್ದುಂಟು. ನಾನು ರೇಸ್ ನಲ್ಲೇ ಇಲ್ಲದಿರುವಾಗ ನೀನು ಬಂದು ಗೆದ್ದೆ ಎಂದು ಬೀಗುವುದೇ ಹಾಸ್ಯಾಸ್ಪದ ಎನ್ನುತ್ತಿದ್ದೆ.

ಈ ಸ್ಪರ್ಧೆಗಳ ಕಾರಣದಿಂದಲೇ ನಾನು ಕಂಪನಿಗಳನ್ನು ಬದಲಿಸುವುದು ಕಡಿಮೆ. ಹೆಚ್ಚು ಸ್ಪರ್ಧೆಗೆ ಬಿದ್ದಷ್ಟೂ ನಾವು ನಾವಾಗಿ ಉಳಿಯುವುದಿಲ್ಲ. ಜೀವನವೆಲ್ಲಾ ಸ್ಪರ್ಧೆಯಲ್ಲಿ ಕಳೆದುಹೋಗುತ್ತದೆ. ಈ ಸ್ಪರ್ಧೆಗಾಗಿ ನಮ್ಮ ಜೀವನವನ್ನು ಇನ್ನಷ್ಟು ಸುಂದರಗೊಳಿಸುವ ಎಷ್ಟೋ ಆಸಕ್ತಿಗಳನ್ನು ತ್ಯಾಗ ಮಾಡಬೇಕು. ನಮ್ಮ ಜೀವನದ ಚೆಲುವಿನ ಕ್ಷಣಗಳನ್ನು ಅನುಭವಿಸದೇ ಕಸವಾಗಿಸಬೇಕು. ನಾನು ಬದುಕಿದ ನಿರ್ಲಿಪ್ತ ರೀತಿಯನ್ನು ಕಂಡು ಎಷ್ಟೋ ಜನ ನಾನು ಕೆಲಸಕ್ಕೆ ಬಾರದವನು ಅಂದುಕೊಂಡಿದ್ದರೂ ಅಚ್ಚರಿಯಿಲ್ಲ. ನನ್ನ ಜೀವನದ ಇಂದಿನ ಘಟ್ಟವನ್ನು ಹಿಂದಿರುಗಿ ನೋಡುವಾಗ ಇಷ್ಟು ನಿರ್ಲಿಪ್ತಮುಖಿಯಾಗಿ ಬದುಕಿದವನು ಈ ಮಟ್ಟಕ್ಕೆ ಹೇಗೆ ಬೆಳೆದುನಿಂತ ಎಂಬುದೇ ದೊಡ್ಡ ಪವಾಡವೆನಿಸುತ್ತದೆ.

ಆಸ್ತಿಕನಾಗಿದ್ದರೆ ಕಾಣದ ಕೈಯೊಂದು ಹಿಡಿದು ನಡೆಸಿತು ಅಂತ ಎಲ್ಲರೆದುರಿಗೆ ಬುರುಡೆ ಬಿಟ್ಟುಕೊಂಡು ನನ್ನ ಉದಾಹರಣೆ ಕೊಟ್ಟುಕೊಂಡು ಜೀವನ ಸವೆಸುತ್ತಿದ್ದೆನೇನೋ! ಈ ನನ್ನ ಸ್ಪರ್ಧೆಯಿಂದ ಆಚೆಗುಳಿಯುವ ಮನೋಭಾವ ನಾನು ಬೆಳೆಸಿಕೊಂಡದ್ದಲ್ಲ, ಬದಲಾಗಿ ಹುಟ್ಟಿನಿಂದ ಬಂದದ್ದು. ಯಾವ ಅಪಮಾನಗಳೂ ಹೊಡೆತಗಳೂ ಏರಿಳಿತಗಳೂ ನನ್ನಲ್ಲಿ ಅಂತಹದ್ದೊಂದು ಹಠ ಛಲ ಸ್ಪರ್ಧಾತ್ಮಕತೆಯನ್ನು ಬೆಳೆಸಲೇ ಇಲ್ಲ. ನಾನು ಅವರಿಗೆ ಸಾಧಿಸಿ ತೋರಿಸುವೆ, ಇದನ್ನು ಗೆದ್ದು ತೋರಿಸುವೆ ಎಂಬುದೇ ನನ್ನ ಬಾಯಲ್ಲಿ ಬಂದದ್ದಿಲ್ಲ. ನನ್ನ ಪಾಡಿಗೆ ನಾನು ಬದುಕುತ್ತಾ ಹೋದದ್ದಷ್ಟೇ!

ನನ್ನ ಈ ಸ್ವಭಾವಕ್ಕೆ ನನ್ನ ಇಡಿಯ ಜೀವನದ ಏಕೈಕ ಅಪವಾದವೆಂದರೆ ರೇಖಿ. ನಾನು ಅಸೂಯೆಯಿಂದ ಕಂಡ ಏಕೈಕ ಹೆಣ್ಣುಮಗಳು! ನಾನು ಎಲ್ ಕೆ ಜಿ ಮತ್ತು ಯುಕೆಜಿ ಓದಲಿಲ್ಲ. ಒಮ್ಮೆಲೇ ಒಂದನೆಯ ತರಗತಿಗೆ ಸೇರಿದ್ದು. ಒಂದನೆಯ ತರಗತಿಗೆ ಬರುವ ಹೊತ್ತಿಗೆ ನನಗಾಗಲೇ ಇಪ್ಪತ್ತರವರೆಗೆ ಮಗ್ಗಿಗಳು ಬರುತ್ತಿದ್ದವು. ಕನ್ನಡ ಚನ್ನಾಗಿ ಓದಲು ಬರೆಯಲು ಬರುತ್ತಿತ್ತು. ಇಂಗ್ಲೀಷ್ ಅಕ್ಷರಗಳನ್ನು ಬರೆಯಬಲ್ಲವನಾಗಿದ್ದೆ. ಸ್ವಭಾವತಃ ಮೆದು ಸ್ವಭಾವದ ನನ್ನಮ್ಮ ನನ್ನ ಶಿಕ್ಷಣದ ವಿಷಯ ಬಂದಾಗ ಮಾತ್ರ ತೀವ್ರ ಆಕ್ರಮಣಶೀಲತೆಯನ್ನು ತೋರುತ್ತಿದ್ದರು. ಸಾಮ ದಾನ ಬೇಧ ದಂಡಗಳನ್ನೆಲ್ಲ ಬಳಸಿ ನನ್ನಮ್ಮ ನನ್ನನ್ನು ಈ ಮಟ್ಟಿಗೆ ತಯಾರು ಮಾಡಿದ್ದರು. ಹಾಗಾಗಿ ನನ್ನ ಓರಗೆಯ ಹುಡುಗರೆಲ್ಲರಿಗಿಂತ ನಾನು ಈ ಕೆಲ ವಿಷಯಗಳಲ್ಲಿ ಮುಂದಿದ್ದೆ. ನಮ್ಮ ಓಣಿಯಲ್ಲಿ ಅಕ್ಕ ಪಕ್ಕದವರೆಲ್ಲ ನನ್ನ ಕರೆಸಿ “ಎಲ್ಲಪ್ಪೀ.. ಹದಿಮೂರೈದಲೆ ಎಷ್ಟು ಹೇಳು? ಹದಿನೇಳೆಂಟಲೆ ಎಷ್ಟು ಹೇಳು?” ಅಂತ ಕೇಳಿ ನಾನು ಹೇಳುವ ಉತ್ತರಕ್ಕೆ ಮೆಚ್ಚಿ ತಲೆದೂಗಿ ಉಗುಳು ನುಂಗಿಕೊಳ್ಳುತ್ತಿದ್ದರು. ಕೆಲವೊಮ್ಮೆ ತಮ್ಮ ನಾಲ್ಕು ಐದನೆಯ ತರಗತಿಯ ಮಕ್ಕಳು ಕನ್ನಡ ಓದಲು ತಿಣುಕುತ್ತಿರುವಾಗ ನನ್ನನ್ನು ಕರೆಸಿ ಅವರೆದುರಿಗೆ ಓದಿಸಿ ನನ್ನ ಕೈಲಿ ಅವರುಗಳ ಮೂಗು ಹಿಡಿಸಿ ಹೊಡೆಸುತ್ತಿದ್ದರು. ಒಟ್ಟಾರೆಯಾಗಿ ನನ್ನಮ್ಮ ನನ್ನನ್ನು ತಯಾರು ಮಾಡಿದ್ದ ರೀತಿಗೆ ಒಂದು ರೀತಿ ನಮ್ಮ ಓಣಿಯ ಸೆಲೆಬ್ರಿಟಿಯಾಗಿ ಹೋಗಿದ್ದೆ!

ನನಗೆ ಎದುರು ನಿಲ್ಲುವವರೇ ಇರಲಿಲ್ಲ ಆಗ! ನನ್ನಮ್ಮ ಆಗ ಅಕ್ಕಪಕ್ಕದ ಮಕ್ಕಳಿಗೆ ಟ್ಯೂಷನ್ ಮಾಡುತ್ತಿದ್ದರು. ಈ ಟ್ಯೂಷನ್ ನಲ್ಲಿ ಮಕ್ಕಳಿಗೆ ಮಗ್ಗಿ ಬಾಯಿಪಾಠ ಮಾಡಿಸುವ ಕೆಲಸ ನನ್ನದಾಗಿರುತ್ತಿತ್ತು. ಮಗ್ಗಿ ತಪ್ಪು ಹೇಳಿದವರಿಗೆ ಕೈ ಮೇಲೆ ಸ್ಕೇಲಿನಿಂದ ಬಾರಿಸುವುದು ಇನ್ನೊಬ್ಬರ ಬಳಿ ಸರಿಯಾದುದನ್ನು ಹೇಳಿಸಿ ತಪ್ಪು ಹೇಳಿದವನಿಗೆ ಕಪಾಳಕ್ಕೆ ಹೊಡೆಸುವುದು ಇತ್ಯಾದಿ ದೌರ್ಜನ್ಯಗಳನ್ನು ಎಸಗುವ ಪರಿಪಾಠಗಳನ್ನು ಇಟ್ಟುಕೊಂಡಿದ್ದೆ. ಹೀಗೆ ನನ್ನ ದರ್ಪ ಸುಖವಾಗಿ ಸಾಗುತ್ತಿರುವಾಗ ಒಂದು ದಿನ ಹುಡುಗರೆಲ್ಲ “ನಾಳೆಯಿಂದ ರೇಖಕ್ಕ ಬರ್ತಾಳಂತೆ..” ಅಂತ ಮಾತನಾಡಿಕೊಳ್ಳುತ್ತಿದ್ದರು. ಅದರಲ್ಲೊಬ್ಬ ನನ್ನ ಕಡೆಯಿಂದ ಅಸಡ್ಡೆಯಿಂದ ನೋಡುತ್ತಾ “ರೇಖಕ್ಕನಿಗೆ ಮೂವತ್ತರವರೆಗೆ ಮಗ್ಗಿ ಬರುತ್ತೆ ಗೊತ್ತಾ?” ಅಂತ ಅಂದುಬಿಟ್ಟ. ನಾನು ಒಮ್ಮೆಲೇ ಕುಗ್ಗಿಹೋಗಿಬಿಟ್ಟೆ. ಇಪ್ಪತ್ತರವರೆಗೆ ಮಗ್ಗಿ ಸರಾಗವಾಗಿ ಬರುತ್ತಿದ್ದುದೇ ನನಗೆ ಇಂತಹ ಮೇಲ್ಮಟ್ಟ ತಂದುಕೊಟ್ಟಿತ್ತು. ಒಮ್ಮೆಲೆ ನನ್ನ ಅಧಿಕಾರ ಸ್ಥಾನ ಅಲ್ಲಾಡಿಹೋದ ಅನುಭವವಾಯಿತು. ನನ್ನ ಗೌರವವೆಲ್ಲ ಮಣ್ಣುಪಾಲಾಗುವ ಸಮಯ ಬಂದಿತೆಂದುಕೊಂಡೆ. ಅದರಲ್ಲೂ ನಮ್ಮಮ್ಮ “ನೋಡು ರೇಖಕ್ಕನಿಗೆ ಮೂವತ್ತರ ತನಕ ಮಗ್ಗಿ ಬರುತ್ತದಂತೆ” ಅಂತ ನನ್ನ ಮೇಲೆ ನನ್ನನ್ನೇ ಛೂ ಬಿಟ್ಟರು!

ಮರುದಿನ ರೇಖಕ್ಕ ಟ್ಯೂಷನ್ ಗೆ ಬಂದಳು. ನಾನು ಮೂರು ದಿನ ಆಕೆಯನ್ನು ಮಾತನಾಡಿಸಲೇ ಇಲ್ಲ. ಒಂದು ಮೂಲೆಯಲ್ಲಿ ಕೂತು ಆಕೆ ತನ್ನ ಹೋಂ ವರ್ಕ್ ಮಾಡುವಳು, ತನ್ನ ಸರದಿ ಬಂದಾಗ ಪಾಠ ಹೇಳಿಸಿಕೊಳ್ಳುವಳು, ಆಮೇಲೆ ಮನೆಗೆ ಹೋಗುವಳು. ನಾನು ಮತ್ತೊಂದು ಮೂಲೆಯಲ್ಲಿ ಬೆರಗುಗಣ್ಣಿನಿಂದ ಆಕೆಯನ್ನು ನೋಡಿ ಮತ್ತೆ ನನ್ನ ಕೆಲಸದಲ್ಲಿ ತೊಡಗುತ್ತಿದ್ದೆ. ಮೂರು ದಿನ ನಾನು ಯಾರಿಗೂ ಮಗ್ಗಿ ಹೇಳಿಕೊಡಲೇ ಇಲ್ಲ. ಹೋಂ ವರ್ಕ್ ನೆಪ ಮಾಡಿಕೊಂಡು ಆಗಾಗ ಆಕೆಯನ್ನು ಬಗ್ಗಿ ನೋಡುತ್ತಿದ್ದೆ. ನಾಲ್ಕನೆಯ ದಿನ ನಿಧಾನಕ್ಕೆ ಅವಳೆದುರಿಗೆ ಹೋಗಿ ಕೂತೆ. ಆಕೆ ಒಮ್ಮೆ ಕತ್ತೆತ್ತಿ ನನ್ನ ನೋಡಿ ಮತ್ತೆ ತನ್ನ ಪುಸ್ತಕದೊಳಗೆ ತಲೆ ಹುದುಗಿಸಿದಳು.

ನಾನು “ನಿನಗೆ ಮೂವತ್ತರವರೆಗೆ ಮಗ್ಗಿ ಬರುತ್ತಂತೆ ಹೌದಾ?” ಅಂದೆ.

ಆಕೆ ತನ್ನ ಮೇಲ್ದವಡೆಯ ಮೂರೂವರೆ ಹಲ್ಲುಗಳನ್ನು ತೋರಿಸಿ “ಹೌದು” ಅಂದಳು. ಮತ್ತೆ ಪುಸ್ತಕದಲ್ಲಿ ತಲೆ ಹುದುಗಿಸಿದಳು.

ನಾನು ಬಿಡಲಿಲ್ಲ. “ಎಲ್ಲಿ ಇಪ್ಪತ್ತೇಳರ ಮಗ್ಗಿ ಹೇಳು” ಅಂದೆ.

ಆಕೆ ಕೈಕಟ್ಟಿಕೊಂಡು ಸೆಟೆದು ಕೂತು “ಇಪ್ಪತ್ಯೋಳೊಂದ್ಲೆ ಇಪ್ಪತ್ಯೋಳು, ಇಪ್ಪತ್ಯೋಳೆರಡಲೆ ಐವತ್ನಾಲ್ಕು, ಇಪ್ಪತ್ಯೋಳ್ಮೂರಲೆ ಎಂಬಾವಂದು…” ಅಂತೆಲ್ಲ ಹೇಳಿ ಕೊನೆಗೆ “ಇಪ್ಪತ್ಯೋಳ ಹತ್ತಲೆ ಇನ್ನೂರೆಪ್ಪತ್” ಅಂತ ಹೇಳಿ ಮುಗಿಸಿದಳು. ಅವಳು ಹೇಳಿದ್ದು ಸರಿಯಾ ತಪ್ಪಾ ಅಂತ ಪ್ರಮಾಣಿಸಲು ನನಗಾಗಲಿ ನನ್ನಮ್ಮನಿಗಾಗಲಿ ಇಪ್ಪತ್ತೇಳರ ಮಗ್ಗಿ ಬರುತ್ತಿರಲಿಲ್ಲ. ಆದರೆ ಆಕೆಯ ಧಾಟಿ, ಆತ್ಮವಿಶ್ವಾಸ ಕಂಡು ಆಕೆ ಹೇಳಿದ್ದು ಸರಿಯಿರಬಹುದು ಎಂದೇ ಊಹಿಸಿದೆ.

ಈಗ ಆಕೆಯ ಜ್ಞಾನ ನನಗಿಂತ ಹೆಚ್ಚಿನಮಟ್ಟದ್ದು ಅಂತ ಊರ್ಜಿತವಾದದ್ದರಿಂದ ನನ್ನ ಶಕ್ತಿಪೀಠ ಬಹುತೇಕ ಕೊನೆಗೊಂಡಿದೆ ಎಂಬುದೇ ನನ್ನ ಎಣಿಕೆಯಾಗಿತ್ತು. ಅತ್ಯಂತ ನಿರಾಶೆ ಬೇಸರಗಳಿಂದ ಮತ್ತೆ ನನ್ನ ಮೂಲೆಗೆ ಹೋಗಿ ಗೋಡೆಗೆ ಬೆನ್ನಾಯಿಸಿ ಕುಳಿತೆ.

ಮತ್ತೆ ಎರಡು ದಿನ ಕಳೆಯಿತು. ಎಷ್ಟು ದಿನ ಅಂತ ನನ್ನ ಹೆಗಲಿಗೆ ನಾನೇ ಬಿದ್ದುಕೊಂಡು ಮುಸಿಮುಸಿ ಗೋಳಾಡಿಕೊಳ್ಳುವುದು? ಮುಂದುವರೆಯಲು ನಿರ್ಧರಿಸಿದೆ. ಮರುದಿನ ಸಂಜೆ ಆಕೆ ಟ್ಯೂಷನ್ ಗೆ ಬಂದಾಗ
“ನನಗೂ ಮೂವತ್ತರವರೆಗೆ ಮಗ್ಗಿ ಕಲಿಸುತ್ತೀಯಾ?” ಅಂತ ಕೇಳಿದೆ.

ಈಗ ಆಕೆಯ ಜ್ಞಾನ ನನಗಿಂತ ಹೆಚ್ಚಿನಮಟ್ಟದ್ದು ಅಂತ ಊರ್ಜಿತವಾದದ್ದರಿಂದ ನನ್ನ ಶಕ್ತಿಪೀಠ ಬಹುತೇಕ ಕೊನೆಗೊಂಡಿದೆ ಎಂಬುದೇ ನನ್ನ ಎಣಿಕೆಯಾಗಿತ್ತು. ಅತ್ಯಂತ ನಿರಾಶೆ ಬೇಸರಗಳಿಂದ ಮತ್ತೆ ನನ್ನ ಮೂಲೆಗೆ ಹೋಗಿ ಗೋಡೆಗೆ ಬೆನ್ನಾಯಿಸಿ ಕುಳಿತೆ.

ಆಕೆ “ಹೂಂ” ಅಂತ ತಲೆಯಾಡಿಸಿ ಅವತ್ತು ಇಪ್ಪತ್ತೊಂದರ ಮಗ್ಗಿಯನ್ನು ಬರೆದುಕೊಟ್ಟಳು. ನಾನು ಬಾಯಿ ಪಾಠ ಮಾಡತೊಡಗಿದೆ. ಆಕೆಗೆ ಮಕ್ಕಳ ವಲಯದಲ್ಲಿ ಬಹಳ ಮರ್ಯಾದೆಯಿದ್ದು “ರೇಖಕ್ಕ” ಅಂತ ಕರೆಯಿಸಿಕೊಳ್ಳುತ್ತಿದ್ದರೂ ನಾನು ಮಾತ್ರ ಅತಿಯಾದ ಸೊಕ್ಕಿನಿಂದ ದೊಡ್ಡವರು ಕರೆದಂತೆ “ರೇಖಿ” ಎಂದೇ ಕರೆಯುತ್ತಿದ್ದೆ. ನನಗೆ ಮಗ್ಗಿ ಹಾಕಿಕೊಟ್ಟ ಮರುದಿನದಿಂದ ರೇಖಿ ಟ್ಯೂಷನ್ ಗೆ ಬರುವುದನ್ನು ನಿಲ್ಲಿಸಿದಳು. ಯಾಕೆ ಅಂತ ತಿಳಿಯಲಿಲ್ಲ. ಆದರೆ ನನಗೆ ಮೂವತ್ತರವರೆಗೆ ಮಗ್ಗಿ ಕಲಿಯುವ ಹಠ ಬಿಟ್ಟಿರಲಿಲ್ಲ. ಆಕೆಯ ಮನೆಯ ಬಳಿ ಹೋಗಿ “ರೇಖೀ..” ಅಂತ ಕರೆಯುತ್ತಿದ್ದೆ. ಅವಳ ಅಮ್ಮ “ಏ ರೇಖೀsss… ಹರ್ಷ ಬಂದಿದಾನೆ ನೋಡು” ಅನ್ನುವರು. ಆಕೆ ಹೊರಬಂದು “ಏನಪ್ಪೀ..?” ಅಂತ ಕೇಳುವಳು.

ನಾನು “ನನಗೆ ಇಪ್ಪತ್ಮೂರರ ಮಗ್ಗಿ ಹಾಕಿಕೊಡು” ಅಂತ ಕೇಳುತ್ತಿದ್ದೆ.

“ಈಗ ಬಟ್ಟಿ ಒಗೀತಿದಿನಿ.. ಆಮೇಲೆ ಹಾಕಿಕೊಡ್ತೀನಪ್ಪೀ..!” ಅಂತ ಅಂತ ಗಲ್ಲ ಸವರಿ ಕಳಿಸುವಳು.

ಹಿಂಗೇ ಪ್ರತೀ ಸಾರಿ ಹೋದಾಗಲೂ ತರಕಾರಿ ಹೆಚ್ಚುತ್ತಲೋ, ನೆಲ ಒರೆಸುತ್ತಲೋ, ತಮ್ಮಂದಿರಿಗೆ ಊಟ ಮಾಡಿಸುತ್ತಲೋ ಮತ್ತೊಂದಿಲ್ಲೊಂದು ಕಡೆ ನಿರತಳಾಗಿದ್ದಾಗಲೇ ಸಿಗುತ್ತಿದ್ದಳು.

ನನ್ನ ಮಗ್ಗಿಯ ಪಾಠ ಇಪ್ಪತ್ನಾಲ್ಕನ್ನೂ ಮುಟ್ಟಲಿಲ್ಲ! ಅದೆಷ್ಟು ತಿಂಗಳು ಹೀಗೆ ಆಕೆಯ ಹಿಂಬಾಲಿಸಿ ಕಳೆದಿದ್ದೆನೋ ನನಗೆ ನೆನಪಿಲ್ಲ. ಆದರೆ ನಾವು ಮನೆ ಬದಲಿಸಲಾಗಿ ಮತ್ತೆಂದೂ ರೇಖಿಯ ಭೇಟಿಯಾಗಲಿಲ್ಲ. ಈಗಲೂ ಒಮ್ಮೊಮ್ಮೆ ರೇಖಿಯಂತಹ ಪ್ರತಿಭಾವಂತೆಯ ಬಳಿ ಪಾಠ ಹೇಳಿಸಿಕೊಂಡಿದ್ದಕ್ಕೆ ಆಗಾಗ ಹೆಮ್ಮೆಯೆನಿಸುತ್ತದೆ. ಆಗ ಆಕೆ ಬದುಕಿದ್ದ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಲೆಕ್ಕ ಹಾಕಿದರೆ ಬಹುಷಃ ಹೆಚ್ಚು ಓದಿ ಕಡಿದು ಗುಡ್ಡೆ ಹಾಕಿರಲಿಕ್ಕೆ ಆಕೆಯ ಮನೆಯವರು ಬಿಟ್ಟಿರಲಿಕ್ಕಿಲ್ಲ. ಈಗ ಆಕೆಯ ಮಕ್ಕಳು ಮೂವತ್ತರವರೆಗೆ ಮಗ್ಗಿ ಕಲಿತಿರಬಹುದು! ನನಗೆ ಇತ್ತೀಚೆಗೆ ಹೊಳೆಯುತ್ತಿರುವುದೇನೆಂರೆ ನಮ್ಮ ನೆರೆಹೊರೆಯವರು ನನ್ನನ್ನು ನಿಲ್ಲಿಸಿ ಮಗ್ಗಿಗಳನ್ನು ಹೇಳಿಸಿ ಖುಷಿಪಟ್ಟಂತೆ ರೇಖಿಯ ಬಳಿ ಹೇಳಿಸಿ ಖುಷಿ ಪಟ್ಟದ್ದು ನಾನು ಕಂಡಿದ್ದು ನೆನಪಿಲ್ಲ. ಈಗಾಗಿದ್ದರೆ ಲಿಂಗ ಜಾತಿ ಆರ್ಥಿಕ ತಾರತಮ್ಯಗಳನ್ನು ಅಳೆದು ತೂಗಿ ವಿಮರ್ಶೆ ಮಾಡುತ್ತಿದ್ದನೇನೋ, ಆಗ ಮಗ್ಗಿಯ ಹೊರತಾಗಿ ಮತ್ತೇನನ್ನೂ ಕಾಣುವಷ್ಟು ಅಳವು ನನ್ನಲ್ಲಿರಲಿಲ್ಲ.

ನನಗೆ ಈಗಲೂ ಬಹುತೇಕ ಹೆಣ್ಣುಮಕ್ಕಳಲ್ಲಿ ರೇಖಿಯರೇ ಕಾಣುತ್ತಾರೆ. ಮನೆಗೆಲಸದ ಮಧ್ಯೆ ತಮ್ಮ ವಿದ್ಯೆಯನ್ನು ತ್ಯಾಗ ಮಾಡಿದ ರೇಖಿಯರು! ಸಮಾಜದ ಇಂಧನವಾಗಬಹುದಾಗಿದ್ದ ತಮ್ಮ ಪ್ರತಿಭೆಯನ್ನು ಗಂಡುಸಂಕುಲದ ಸೇವೆಗೈಯುತ್ತಾ ಕೇವಲ ಕೀಲೆಣ್ಣೆಯಾಗಿ ಬಳಕೆಯಾಗುವವರು! ಪಾರ್ಕ್ ಕಡೆಗೆ ವಾಕಿಂಗ್ ಗೆ ಹೋದಾಗ ಕೆಲವು ಮುದುಕಪ್ಪಗಳು ಸಿಗುತ್ತವೆ. ಹೆಣ್ಣುಮಕ್ಕಳಿಗೆ ಹೆಚ್ಚಿನ ಓದು ಯಾಕೆಂದೋ, ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆ ಕೆಲಸ ಮಾಡಿದರೆ ತಮ್ಮ ಮಕ್ಕಳಿಗೇ ಹೆಚ್ಚಿನ ಹೊರೆ ಎಂದೋ, ತಾವು ತಮ್ಮ ಹೆಂಡಿರೊಡನೆ ನಡೆದುಕೊಂಡದ್ದರ ಸ್ವಾನುಭವವನ್ನು ಆಧಾರವಾಗಿಟ್ಟುಕೊಂಡು ನಿರ್ಧರಿಸಿ ಬಿಟ್ಟಿರುತ್ತವೆ. ಹಾಗಾಗಿ ವಯಸ್ಸಿನವರೆಗೆ ಹೆಣ್ಣುಮಗುವನ್ನು ಮನೆಗೆ ಕೂರಿಸಿಕೊಳ್ಳಲಾಗದೆ ಶಾಲೆಗೆ ಕಾಲೇಜಿಗೆ ಕಳಿಸಿರುತ್ತವೆ. ಬೇರೆ ದೇಶದಲ್ಲಿ ನನ್ನ ಮಗಳು ಸುಖವಾಗಿರುತ್ತಾಳೆ ಎಂಬ ಕುರುಡು ನಂಬಿಕೆಯಿಂದ ವಿದೇಶದಲ್ಲಿರುವ ಹುಡುಗನಿಗೆ ಮದುವೆ ಮಾಡಿಕೊಟ್ಟಿರುತ್ತವೆ. ಮಗಳ ಮನೆಗೆ ಸಿಡ್ನಿಯಂತಹ ನಗರಕ್ಕೆ ಬಂದಾಗ ಇಲ್ಲಿನ ಹೆಣ್ಣುಮಕ್ಕಳು ಅನುಭವಿಸುವ ಸ್ವಾತಂತ್ರ, ಸ್ವಾವಲಂಬನೆ, ಸಮಾಜದಲ್ಲಿ ದಕ್ಕಿಸಿಕೊಂಡಿರುವ ಸ್ಥಾನಮಾನವನ್ನು ನೋಡಿ ಕರುಬುತ್ತವೆ. ತನ್ನ ಮಗಳನ್ನು ಓದಿಸದ ಕಾರಣ ಮನೆಯಲ್ಲೇ ಗಂಡನ ಹಂಗಿಗೆ ಬಿದ್ದು ಕೊಳೆಯುವಂತಾಯ್ತಲ್ಲ ಅಂತ ಮರುಗುತ್ತವೆ. ನನಗೆ ಈ ಅಯೋಗ್ಯರ ಕಂಡು ಯಾವ ಕರುಣೆಯೂ ಬರುವುದಿಲ್ಲ. ಇವನು ಗಂಡು ಮೇಲ್ಗಾರಿಕೆಯ ಮೂರ್ಖ ನಿರ್ಧಾರ ತೆಗೆದುಕೊಳ್ಳುವಾಗ ಈತನ ಹೆಂಡತಿ ಈತನಿಗೆ ವಿಷವನ್ನಿಕ್ಕಲಿಲ್ಲವೇಕೆ ಅಂತ ಅವನ ಹೆಂಡತಿಯ ಮೇಲೆ ಸಿಟ್ಟು ಬರುತ್ತದೆ. ಆದರೆ ಪಾಪ ಆಕೆಯಾದರೂ ಏನು ಮಾಡಿಯಾಳು? ಅವಳ ಅಪ್ಪನೂ ಸಹ ಆಕೆಯನ್ನು ಈತನ ಹಂಗಿಗೇ ಒಪ್ಪಿಸಿದ ಪರಮ ನೀಚನಲ್ಲವೇ?

ನನ್ನ ಕಂಪನಿಗಳಲ್ಲೂ ಅನೇಕ ಬಾರಿ ನನಗಿಂತ ಸಿನಿಯರ್ ಆಗಿದ್ದ ನನಗೆ ಕೆಲಸ ಹೇಳಿಕೊಟ್ಟಿದ್ದ ಹುಡುಗಿಯರು ನಡುವೆ ಮದುವೆಯಾಗಿ ಮಕ್ಕಳನ್ನು ಹಡೆಯಲು ಎರಡು ಮೂರು ವರ್ಷಗಟ್ಟಲೆ ಕೆಲಸದಿಂದ ಬಿಡುವು ತೆಗೆದುಕೊಂಡಿರುತ್ತಾರೆ. ವಾಪಸು ಕೆಲಸಕ್ಕೆ ಬರುವ ಹೊತ್ತಿಗೆ ನಾವೆಲ್ಲಾ ಮುಂದೆ ಹೋಗಿಬಿಟ್ಟಿರುತ್ತೇವೆ. ಹೀಗೆ ಬಿಡುವು ತೆಗೆದುಕೊಂಡು ಬಂದವರೆಲ್ಲ ಒಂದು ಕಾಲದ ತಮ್ಮ ಕೈಕೆಳಗಿನವರ ಕೈಕೆಳಗೆ ಮತ್ತೆ ಕೆಲಸ ಮಾಡಬೇಕಾದ ಸಂದರ್ಭವನ್ನು ಕಂಡು ನೋವೆನಿಸುತ್ತದೆ.

ಮೊನ್ನೆ ನನ್ನ ಹಳೆಯ ಗೆಳೆಯನೊಬ್ಬ ನೆನೆಸಿಕೊಂಡು ಫೋನ್ ಮಾಡಿದ್ದ. ಈತ ಕಂಪ್ಯೂಟರ್ ಸರ್ವೀಸ್ ನೀಡುತ್ತಿದ್ದ ವ್ಯಕ್ತಿ. ಪ್ರಾಮಾಣಿಕ ಕೆಲಸಗಾರನಾದ್ದರಿಂದ ಕೆಲವು ಪರಿಚಯಸ್ಥರಿಗೆ ಈತನ ಶಿಫಾರಸು ಮಾಡಿದ್ದೆ. ಆ ಪರಿಚಯಗಳಿಂದ ಕೆಲವು ತಿಂಗಳ ಮಟ್ಟಿಗೆ ಆತನ ಜಿವನ ನಡೆದು ನನ್ನ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದ. ಈ ನಡುವೆ ಆತನಿಗೆ ಸರಕಾರಿ ಕೆಲಸ ಸಿಕ್ಕಿದ್ದು ಕೆಲ ತಿಂಗಳ ಹಿಂದೆ ಇದೇ ಕೆಲಸ ಖಾಯಂ ಆದ ಸಿಹಿಸುದ್ದಿಯನ್ನು ತಿಳಿಸಲು ಕರೆ ಮಾಡಿದ್ದ. ಆತನ ಕುಶಲೋಪರಿ ಸಿಹಿ ಸುದ್ದಿ ವಿನಿಮಯದ ನಂತರ ಸಹಜವಾಗಿ
“ಎಷ್ಟಪ್ಪಾ ಮಕ್ಕಳು ಈಗ?” ಅಂತ ಕೇಳಿದೆ.
“ಮೂರ್ಸಾ.. ಮೊದಲ್ನೇದು ಎರಡು ಎಣ್ಸಾ.. ಮೂರನೇದು ಗಂಡ್ಸಾ..” ಅಂದ.

ಈ ದುಬಾರಿ ಜಗತ್ತಲ್ಲಿ ಮೂರು ಮಕ್ಕಳನ್ನು ಹಡೆಯಲು ಗಂಡಸುತನಕ್ಕಿಂತ ಎಂಟೆದೆ ಬೇಕು.

“ಮೊದಲನೇದು ಎರಡು ಹೆಣ್ಣಾಯ್ತು ಅಂತ ಮೂರನೇದು ಮಾಡ್ಕೊಂಡ್ಯೇನಪ್ಪಾ?” ಅಂದೆ.

“ಅವ್ದ್ ಸಾ… ನಮ್ಮೆಸ್ರೇಳಕೆ ಒಂದು ಬೇಕಲ್ಸಾ.. !” ಅಂದ.

ನಮ್ಮ ಹೆಸರು ಜನ ಹೇಳೋ ಅಷ್ಟು ಸಾಧನೆ ಮಾಡೋ ಯೋಗ್ಯತೆ ಇಲ್ಲದೋರು ಒಂದು ಗಂಡನ್ನು ಹಠ ಮಾಡಿ ಹಡೆದುಕೊಳ್ಳುತ್ತಾರೆ. ಅಷ್ಟಕ್ಕೂ ಎಷ್ಟು ತಲೆಮಾರುಗಳವರೆಗೆ ಈತನ ಹೆಸರು ಪ್ರಸಾರವಾಗಲು ಸಾಧ್ಯ? ಆದರೂ ಮನುಷ್ಯನಿಗೆ ತನ್ನ ಹೆಸರಿನ ಹುಚ್ಚನ್ನು ಕಂಡು ನನಗೆ ನಗು ಬಂತು! ಎಷ್ಟೆಂದರೂ ವಿಕಾಸವಾದದಲ್ಲಿ ತನ್ನ ಜೀನ್ ಗಳನ್ನು ಸಾಧ್ಯವಾದಷ್ಟು ಹೆಚ್ಚು ತಲೆಮಾರುಗಳವರೆಗೆ ಮುಂದಾಟಿಸುವುದೇ ಎಲ್ಲ ಪ್ರಾಣಿಗಳ ಸಂತಾನೋತ್ಪತ್ತಿಯ ಪರಮ ಧ್ಯೇಯವಲ್ಲವೇ?

“ಆಯ್ತಪ್ಪಾ.. ಹಂಗಂತಾ ಹೆಣ್ಣುಮಕ್ಕಳು ಯಾವತ್ತಿಗೂ ಹೊರಗೆ ಹೋಗೋರು ಬೇರೆ ಮನೆ ಚಾಕರಿ ಮಾಡೋರು ಅಂತ ಓದಿಸದಂಗೆ ಇರಬೇಡಪ್ಪಾ” ಅಂತ ಬುದ್ದಿ ಹೇಳಿದೆ.

“ವೂನ್ಸಾ.. ವೂನ್ಸಾ… ಸಾಲಿಗೆ ಕಳಿಸ್ತಿದೀನ್ಸಾ..” ಅಂದ.

“ಎಲ್ಲಿವರೆಗೂ ಓದ್ತಾರೋ ಅಲ್ಲೀವರೆಗೂ ಓದಿಸು.. ಅರ್ಧಕ್ಕೆ ನಿಲ್ಲಿಸಬೇಡ” ಎಂದೆ.

“ವೂನ್ಸಾ… ಅಷ್ಟಕ್ಕೂ ಈಗಿನ ಹುಡುಗರು ಓದಿದ ಹುಡಿಗೀನೇ ಬೇಕು ಅಂತಾರ್ ಸಾ… ಡಿಗ್ರೀ ಇಲ್ಲಾಂದ್ರೆ ಮದುವೆ ಕಷ್ಟ ಸಾ” ಅಂದ.

ನನಗೆ ತಲೆ ತಲೆ ಚಚ್ಚಿಕೊಳ್ಳುವಂತಾಯಿತು. ಹೆಣ್ಣುಮಕ್ಕಳ ಮದುವೆಯೇ ಬೇರೆ ಮನೆಯ ಚಾಕರಿಯೇ ಅವರ ಅಖೈರಾದ ವಿಧಿ ಅಂತ ಈ ಗಂಡಸುಗಳು ಯಾಕೆ ನಿರ್ಧರಿಸಿಕೊಂಡಿದ್ದಾವೋ ತಿಳಿಯದು. ಈ ಗಂಡಸು ಲೋಕದ ಸ್ಟಾಕ್ ಹೋಮ್ ಸಿಂಡ್ರೋಮ್ ಗೆ ಒಳಗಾದ ಹೆಣ್ಣುಮಕ್ಕಳೂ ಇದನ್ನೇ ಪ್ರತಿಪಾದಿಸುವುದು ಅತಿ ದೊಡ್ಡ ವಿಪರ್ಯಾಸ!