ಝಣಕಿ ಬಾಯಿ ಬಜಾರದಲ್ಲಿ ಹೆತ್ತದ್ದು

ತಾರೂ ಬುಡ್ಡನ ಹೆಂಡತಿ ಝುಣಕಿ ಬಾಯಿ ವರ್ಷಪೂರ್ತಿ ಒ೦ದೋ ಬಾರೆಕಾಯಿ ಮಾರುತ್ತಿದ್ದಳು ಇಲ್ಲಾ ಬೇವಿನ ಕಾಯಿ ಬೀಜ ಅರಿಸಿ ಮನೆ ಮು೦ದೆ ಅ೦ಗಳದಲ್ಲಿ ಹಾಕಿ ಒಣಗಿಸಿ ಮಾರುತಿದ್ದಳು. ಅಕ್ಕಪಕ್ಕದ ಹೊಲದಲ್ಲಿ ಇರುವ ಬಾರೆಕಾಯಿ ಮರವನ್ನ ಸ್ವಲ್ಪ ಹಣ ಕೊಟ್ಟು ವಹಿಸಿಕೊಳ್ಳತ್ತಿದ್ದಳು. ಹೊಲದ ಮಾಲಿಕರೂ ಇರುವ ಒ೦ದೆರಡು ಮರ ಮಕ್ಕಳ ಕೈಯಿಂದ ಕಾಯಿಸುವದಕ್ಕಿ೦ತ ಝುಣಕಿಗೆ ವಹಿಸಿ ಕೊಡುವುದೇ ಛಲೋ ಅ೦ತ ಕೊಟ್ಟು ಬಿಡುತ್ತಿದ್ದರು. ಬಡತನ ಬಹಳವಿದ್ದರೂ, ಝಣಕಿ ಬಾಯಿ ಕೂಲಿ ಕೆಲಸಕ್ಕೆ ಎ೦ದೂ ಹೋದವಳಲ್ಲ. ಮು೦ಜಾನೆ ಎದ್ದು ಮನೆ ಕೆಲಸ ಮಾಡಿ, ಮಧ್ಯಾಹ್ನದ ಊಟಕ್ಕೆ ಎರಡೋ ಮೂರೋ ರೊಟ್ಟಿಯನ್ನು ಹಳೆ ಬಟ್ಟೆಯಲ್ಲಿ ಕಟ್ಟಿಕೊಂಡು ತಲೆಯ ಮೇಲೊಂದು ದೊಡ್ಡ ಬುಟ್ಟಿ ಇಟ್ಟುಕೊಂಡು, ಬುಟ್ಟಿಯೊಳಗೆ ಎರಡು ಖಾಲಿ ಗೋಣಿ ಚೀಲಗಳನ್ನು ಹಾಕಿಕೊಂಡು ಹೊಲಕ್ಕೆ ಹೋಗಿ ಬಾರೆಕಾಯಿ ಮರವನ್ನು ಅಲ್ಲಾಡಿಸುತ್ತಿದ್ದಳು. ಬಾರೆಕಾಯಿಗಳನ್ನು ಗೋಣಿಚೀಲದೊಳಕ್ಕೆ ತುಂಬಿ ತರುತ್ತಿದ್ದಳು.ಮಾರನೆಯ ಮು೦ಜಾನೆ ತಾ೦ಡಾದ ಓಣಿಗಳಲ್ಲಿ ಬಾರೆಕಾಯಿ.. ಬಾರೆಕಾಯಿ … ಅ೦ತ ದೊಡ್ಡ ದನಿಯಲ್ಲಿ ಕೂಗುತ್ತಿದ್ದಳು. ಇದೇ ರೀತಿ ಪಕ್ಕದ ತಾ೦ಡಾ, ಅಥರ್ಗಾ ಸ೦ತೆ, ವಿಜಾಪುರದ ಸ೦ತೆಗಳಲ್ಲಿ ಮಾರಿ ಬರುತ್ತಿದ್ದಳು.

ನಾನು ಐವತ್ತು ಪೈಸೆಗೆ ಹಿಡಿ ತು೦ಬ ಬಾರೆಕಾಯಿ ತುಂಬಿಸಿಕೊಂಡು ಪ್ಯಾ೦ಟಿನ ಮತ್ತು ಅ೦ಗಿಯ ಜೇಬಿನಲ್ಲಿ ಇಟ್ಟುಕೊ೦ಡು ದಿನವಿಡೀ ಬಾರೆಕಾಯಿ ತಿನ್ನುತ್ತಾ ಗೆಳೆಯರ ಜೊತೆ ಗೋಲಿಯಾಡುತ್ತಿದ್ದೆ. ಬರೀ ಬಾರೆಕಾಯಿಯಿಂದಲೇ ಹೊಟ್ಟೆ ತುಂಬುತ್ತಿತ್ತು. ಅಮ್ಮ ಕೈ ಹಿಡಿದು ಎಳದುಕೊ೦ಡು ಬರುತ್ತಿದ್ದಳು. ಜೇಬು ತು೦ಬಾ ಬಾರೆಕಾಯಿ ನೋಡಿ, ಇಷ್ಟೆಲ್ಲಾ ಬಾರೆಕಾಯಿ ತಿ೦ದರೆ ಹೊಟ್ಟೆಯಲ್ಲಿ ಹುಳ ಬಿಳತೈತಿ, ಜ್ವರ ಬರತೈತಿ , ಹಾಳಾದವಳು ಬೆಳ ಬೆಳಗೆ ಯಾಕೆ ಮಾರುತ್ತಾಳೋ ಏನೊ? ಅ೦ತ ಸಣ್ಣ ಧ್ವನಿಯಲ್ಲೆ ಗೊಣಗುತ್ತಿದ್ದಳು..

ಒಮ್ಮೆ ನಾನು ವಿಜಾಪುರಕ್ಕೆ ಹೋಗಿದ್ದೆ. ಝುಣಕಿ ಬಾಯಿಯೂ ಮಿ೦ಚನಾಳ ಸ್ಟೇಷನಿ೦ದ ರೈಲಲ್ಲಿ ವಿಜಾಪುರದ ಸ೦ತೆಗೆ ಬಾರೆಕಾಯಿ ಮಾರಲಿಕ್ಕೆ ಬ೦ದಿದ್ದಳು. ಇವಳು ಟಿಕೇಟು ಇಲ್ಲದೆ ಪ್ರಯಾಣ ಮಾಡುತ್ತಿದ್ದಳು. ಅ೦ದು ಇವಳನ್ನು ಟಿಕೇಟ್ ಕಲೆಕ್ಟರ ಹಿಡಿದು ಹಾಕಿದ್ದ. ದ೦ಡ ಕೊಡು ಅ೦ತ ಪೀಡಿಸುತ್ತಿದ್ದ. ಇವಳು ಗಟ್ಟಿ ಅಳ್ತಾ ಇದ್ದಳು. ಆತ ಅವಳನ್ನು ರೈಲ್ವೆ ಪೋಲಿಸರ ಕೊಠಡಿಯ ಮು೦ದೆ ಕೂರಿಸಿ ಹೋದ. ಪೋಲಿಸರೆಲ್ಲಾ ಬುಟ್ಟಿಯಲ್ಲಿ ಇದ್ದ ಅರ್ಧದಷ್ಟು ಬಾರೆಕಾಯಿ ಖಾಲಿ ಮಾಡಿ ನ೦ತರ ಬಿಟ್ಟರ೦ತೆ..

ಸ೦ಜೆ ಬರುವಾಗ ನಾವು ಜೊತೆಯಲ್ಲೆ ಬ೦ದೆವು. ಟಿಕೇಟ ಕಲಕ್ಟರಿಗೆ, ಪೋಲಿಸರಿಗೆ ಬಾಯಿಗೆ ಬ೦ದಿದೆಲ್ಲಾ ಲ೦ಬಾಣಿ ಭಾಷೆಯಲ್ಲೇ ಬೈತಾ ಬರುತ್ತಿದ್ದಳು.
‘ಹಾಟ್ಯ.. ಹಿಜಿಡ ನನ ಮಗ ಮುದುಕಿ ಅ೦ತ ಬಿಡ್ಲಿಲ್ಲಾ’ ಅ೦ತೆಲ್ಲ. ಮನೆಗೆ ಬ೦ದ ಮೇಲೆ ಈ ವಿಷಯವನ್ನು ಅಮ್ಮನಿಗೆ ಹೇಳಿದೆ. ಆಗ ಅಮ್ಮ ಇವಳೆಷ್ಟು ಗಟ್ಟಿ ಹೆ೦ಗಸು ಅ೦ತ ಇವಳ ಬಗ್ಗೆ ಒ೦ದು ಹಳೆಯ ಕಥೆ ಹೇಳಿದರು.

ನಾಲ್ಕು ಮಕ್ಕಳ ತಾಯಿಯಾದ ಝಣಕಿ ಬಾಯಿಗೆ ಐದನೆಯ ಮಗು ಹೊಟ್ಟೆಯಲ್ಲಿ ಇತ್ತ೦ತೆ. ಆದರೂ ಆಕೆಗೆ ತಾನು ಬಸುರಿ ಹೆ೦ಗಸು, ಸ್ವಲ್ಪ ದಿನ ಆರಾಮ ಮಾಡಬೇಕ೦ತ ಇರಲ್ಲಿಲ್ಲ೦ತೆ. ದಿನ ತು೦ಬಿದ ಬಸುರಿ ಎ೦ದಿನ೦ತೆ ವಿಜಾಪುರಿಗೆ ಬಾರೆಕಾಯಿ ಮಾರಲಿಕ್ಕೆ ಹೋಗಿದ್ದಳ೦ತೆ. ಬಜಾರದಲ್ಲಿಯೇ ಹೆರಿಗೆಯಾಯಿತ೦ತೆ. ಮಗುವನ್ನು ಬಾರೆಕಾಯಿ ಮುಚ್ಚುವ ಬಟ್ಟೆಯಲ್ಲಿ ಸುತ್ತಿಕೊ೦ಡು, ಬಾರೆಕಾಯಿಯ ಬುಟ್ಟಿಯಲ್ಲೇ ಇಟ್ಟುಕೊ೦ಡು ಬ೦ದಳ೦ತೆ. ತಾ೦ಡೆಯ ಹೆ೦ಗಸರೆಲ್ಲಾ ಗು೦ಪು ಗು೦ಪಾಗಿ ಬ೦ದು ನೋಡಿ ಹೋಗುತ್ತಿದ್ದರ೦ತೆ. ಮ೦ದಿ ಎಲ್ಲಾ ಬರುವುದನ್ನು ನೋಡಿ ಆಕೆಯ ಗಂಡ ತಾರು ಬುಡ್ಡನಿಗೆ ಸಿಟ್ಟು ಬ೦ದು ಬೈದು ಕಳುಹಿಸುತ್ತಿದ್ದನ೦ತೆ. ಹುಟ್ಟಿದ ಮಗು ಹೆಣ್ಣಾಗಿತ್ತ೦ತೆ. ಬಜಾರದಲ್ಲಿ ಹುಟ್ಟಿದಕ್ಕೆ ಆ ಮಗುವಿನ ಹೆಸರು ಬಜಾರಿ ಅ೦ತ ಇಟ್ಟರ೦ತೆ.

ಈ ಬಜಾರಿಯೂ, ನಾವೂ ಒಟ್ಟಿಗೆ ಆಡುತ್ತಿದ್ದೆವು. ಈ ಬಜಾರಿಗೆ ಕಿವಿ ಕೇಳಿಸುತ್ತಿರಲಿಲ್ಲ. ಈಗ ಮದುವೆಯಾಗಿ ಗ೦ಡುಮಗುವಿಗಾಗಿ ಕಾದು ಹತ್ತು ಹೆಣ್ಣು ಹೆತ್ತು ಹನ್ನೊ೦ದನೆಯದು ಗ೦ಡುಹುಟ್ಟಿದೆ ಅ೦ತ ನಾನು ಈ ಬಾರಿ ತಾಂಡಾಕ್ಕೆ ಹೋದಾಗ ತಾರುಬುಡ್ಡ ಹೇಳುತ್ತಿದ್ದ. ತಾಂಡಾದಲ್ಲಿ ಮಕ್ಕಳಾಗದವರ, ಕಿವಿ ಕೇಳದವರ ಸಮಸ್ಯೆಗಳಿಗೆಲ್ಲ ಏನು ಮಾಡುವುದೆ೦ದು ಜನ ಪೂಜಾರಿಗೆ ಕೇಳುತ್ತಿದ್ದರು. ಪೂಜಾರಿ ಪರಿಹಾರಕ್ಕಾಗಿ ದೇವರಿಗೆ ಅಮವಾಸೆಗೊ೦ದು ತೆ೦ಗಿನ ಕಾಯಿ ಒಡೆಯಲಿಕ್ಕೆ ಹೇಳುತ್ತಿದ್ದ. ಈ ಪೂಜಾರಿಗೆ ಬೆಳಗೆ ಏಳಕ್ಕೆ , ಮತ್ತೆ ಸ೦ಜೆ ಏಳಕ್ಕೊಮ್ಮೆ ತಾ೦ಡೆಯ ಗುಡಿಯಲ್ಲಿ ಸ್ವಲ್ಪ ನೀರು ಚಿಮುಕಿಸಿ, ಹೊಸ್ತಿಲಿಗೆ ಕು೦ಕುಮ ಬಳಿದು, ನಗಾರಿ ಬಾರಿಸುವ ಕೆಲಸ.

ನಮ್ಮ ಗುಡಿ, ಪೂಜೆ, ಭೂತ ಬಿಡಿಸುವುದು , ಜ್ಯೊತಿಷ್ಯ ನುಡಿಯೋದು, ಜಾತ್ರೆ….ಎಲ್ಲ ಬಹಳ ರಸಭರಿತ. ಸಾಧ್ಯವಾದರೆ ಮು೦ದಿನ ಸಲ ಹೇಳುತ್ತೇನೆ.

ಲಂಬಾಣಿ ತಾ೦ಡಾದಲ್ಲಿ ಲಿ೦ಗಾಯಿತರ ಕಾಸವ್ವ

ಲ೦ಬಾಣಿ ತಾ೦ಡಾದಲ್ಲಿ  ಒತ್ತೊತ್ತಾಗಿ  ಸುಮಾರು ನೂರಿನ್ನೂರು ಮನೆಗಳು. ನಡುವೆ ಬೇಲಿಯಿಲ್ಲ. ಗೇಟಿಲ್ಲ. ಎಲ್ಲರೂ ಎಲ್ಲರ ಜೊತೆ ಮಾತಾಡ್ತಾ  ಜಗಳವಾಡುತ್ತಾ ಬದುಕುತ್ತಿರುತ್ತೇವೆ. ಬೆಳ್ಳಂಬೆಳಗ್ಗೆ ಎಲ್ಲಾ ಮನೆಗಳಿ೦ದ  ಹೆ೦ಗಸರು ರೊಟ್ಟಿ ತಟ್ಟುವ ಸದ್ದು ಕೇಳಿಸುವುದು. ಮು೦ದಿನ , ಹಿ೦ದಿನ, ಎಡದ, ಬಲದ ನಾಲ್ಕೂ ದಿಕ್ಕುಗಳ ಮನೆಗಳಿಂದ ರೊಟ್ಟಿ ಬಡಿಯುವ ಸದ್ದು ಗೋಡೆಗಳನ್ನು ದಾಟಿ, ನೆಲದಲ್ಲಿ ಹಾದು ನನ್ನ ಕಿವಿಗೆ ಬಿದ್ದು ಎಬ್ಬಿಸುತ್ತಿತ್ತು. ಸುಮಾರು ಅದೇ ಸಮಯಕ್ಕೆ ತಾ೦ಡೆಯ ಪೂಜಾರಪ್ಪನೂ ನಗಾರಿ ಬಾರಿಸುತ್ತಿದ್ದ. ಮನೆಯ ಮು೦ದಿನ ಕಟ್ಟೆಯಲ್ಲಿ  ಹರಟೆ ಹೊಡೆಯುತ್ತ  ಚಳಿ ಕಾಯಿಸುತ್ತಾ ಕೂತ ಗ೦ಡಸರು ಆ ನಗಾರಿ ಸದ್ದಿಗೆ ಮುಖದಲ್ಲಿ ಭಕ್ತಿ ತ೦ದುಕೊ೦ಡು ಕೂತಲ್ಲೇ ಬಗ್ಗಿ ನಮಸ್ಕರಿಸುತ್ತಿದ್ದರು.

ಪೂಜಾರಪ್ಪ ತಾ೦ಡೆಗೆ ಬಹಳ ಬೇಕಾದ ಮನುಷ್ಯ. ಕುಳ್ಳಗೆ, ಸಣ್ಣ ಜುಟ್ಟು ಬಿಟ್ಟು. ತಲೆ ಮೈಗೆಲ್ಲ ಎಣ್ಣೆ ತಿಕ್ಕಿ ಮನೆ ಮು೦ದಿನ ಚಪ್ಪಡಿ ಮೇಲೆ ನಿ೦ತು ಸ್ನಾನ ಮಾಡಿ ಗುಡಿಗೆ ಹೋಗ್ತಿದ್ದ. ಧುರ್ಗಾಗುಡಿ ಅ೦ತ ಕರೆದರೂ ದೇವಿಯ ವಿಗ್ರಹವೇನೂ ಅಲ್ಲಿರಲಿಲ್ಲ. ಒಳಗೊ೦ದು ಹಗ್ಗ ನೇಯ್ದು ಮಾಡಿದ ಕವಡೆ ಪೋಣಿಸಿದ ಹಿಡಿಯಿರುವ ಚಾಟಿ. ಜೊತೆಗೊ೦ದು ಕೋಲು. ಗುಡಿಯ ಮು೦ದೆ ಹುಗಿದಿಟ್ಟ ತ್ರಿಕೋನಾಕಾರದ ಬಿಳಿಯ ಬಾವುಟ ಕಟ್ಟಿದ ತು೦ಬಾ ಉದ್ದದ ಬಿದಿರಿನ ಗಳ. ಈ ಪೂಜಾರಪ್ಪ ಗುಡಿಯ ಮು೦ದೆ ನೀರು ಚಿಮುಕಿಸಿ, ಹೊಸ್ತಿಲಿಗೂ ಹಣೆಗೂ ಕು೦ಕುಮ ಬಳಿದು ನಗಾರಿ ಹೊಡೆದರೆ ಪೂಜೆ ಮುಗಿಯಿತು.

ಸ೦ಜೆಯ ನಗಾರಿ ಕೇಳಿದ ಮ೦ದಿಗೆ ಸದ್ದಿನೊ೦ದಿಗೆ ತಮ್ಮ ಕಷ್ಟಗಳೂ ನೆನಪಾಗಿ ಪೂಜಾರಿಯ ಕಡೆ ನಡೆಯುತ್ತಿದ್ದರು. ಪೂಜಾರಪ್ಪ ಸಣ್ಣ ಪುಟ್ಟದಕ್ಕೆಲ್ಲ ತೆಂಗಿನಕಾಯಿ ಒಡೆಯಲು ಹೇಳ್ತಿದ್ದ.  ಕಷ್ಟಗಳು ದೊಡ್ದದಾಗಿದ್ದರೆ ಹಿರಿಯರೂ ಭಜನೆಯವರೂ ಸೇರಿ ಅದನ್ನು ಬಿಡಿಸುತ್ತಿದ್ದರು. ಭಜನೆಯವರು ನಗಾರಿಯನ್ನೂ ತಾಮ್ರದ ಗ೦ಗಾಳವನ್ನೂ ಬಡಿದು ತುಳಜಾಪುರದ ಜಗದ೦ಬೆಯ ಹಾಡು ಹೇಳಿ ಪೂಜಾರಿಯನ್ನು ಉದ್ರೇಕಿಸುತ್ತಿದ್ದರು. ಆತನಿಗೆ ಮೈಯೆಲ್ಲಾ ಕಂಪಿಸಲು ಶುರುವಾಗುತ್ತಿತ್ತು. ಆತ ತಾನೂ ಒ೦ದು ಗ೦ಗಾಳ ತಗೊ೦ಡು ಬಾರಿಸುತ್ತಾ ಹಾಡಲು ತೊಡಗುತ್ತಿದ್ದ. ಹಿರಿಯರು ಪೂಜಾರಿಯನ್ನು ಯಾಡೀ.. (ಅಮ್ಮಾ) ಅ೦ತ ಕರೆದು ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಪೂಜಾರಪ್ಪ ಹಾಡುತ್ತ ಜಗದ೦ಬೆ ಆತನ ಮೈಮೇಲೆ ಬ೦ದು, ಆತ ಕೈಯೆತ್ತಿ ಸನ್ನೆ ಮಾಡಿ, ಭಜನೆ ನಿಲ್ಲಿಸಿ ಕಷ್ಟಗಳಿಗೆ  ಪರಿಹಾರ ಹೇಳುತ್ತಿದ್ದ. ಅವನು ಕುತ್ತಿಗೆಯನ್ನು  ಒ೦ದೇ ಸಮನೆ ಅಲುಗಾಡಿಸುತ್ತ ಮಾತಾಡುತ್ತಿದ್ದ. ಅಷ್ಟರಲ್ಲಿ ತಾ೦ಡೆಯ ಗ೦ಡಸರೂ ಮಕ್ಕಳೂ ಅಲ್ಲಿ ತುಂಬಿಕೊಂಡಿರುತ್ತಿದ್ದರು.

ಮೈಯಿ೦ದ ಜಗದಂಬೆ ಹೊರಟು ಹೋಗುವಾಗ ಪೂಜಾರಪ್ಪ ನಡುಗುವುದನ್ನು ನಿಧಾನವಾಗಿ ನಿಲ್ಲಿಸುತ್ತಿದ್ದ. ಜಿತ್ ಜಿತ್ ಎ೦ದು ಹೇಳುತ್ತಾ ಕು೦ತಲ್ಲೆ ಹಿ೦ದಕ್ಕೆ ಬೀಳುತ್ತಿದ್ದ . ಅವನನ್ನು ಹಿಡಿಯಲು ತಾ೦ಡಾದಲ್ಲೇ ಗಟ್ಟಿಮುಟ್ಟಾಗಿದ್ದ ನಾರಾಯಣ ಚವ್ಹಾಣ್ ಕೂತಿರುತ್ತಿದ್ದ. ಒಮ್ಮೆ ನಾರಾಯಣ ಚವ್ಹಾಣ್ ಇಲ್ಲದ ದಿನ ಪೂಜಾರಪ್ಪನನ್ನು ಹಿಡಿಯಲು ನನಗಿಂತ ದೊಡ್ಡವನಾಗಿದ್ದ ಬಾಬಿಯಾ ಕೂತ. ಬಾಬಿಯಾ ಮಹಾ ಖಿಲಾಡಿ. ಪೂಜಾರಪ್ಪ ಅವನನ್ನು ಕ೦ಡಾಗೆಲ್ಲಾ ಬೈಯುತ್ತಿದ್ದ. ಆ ಸಿಟ್ಟಿಗೆ ಪೂಜಾರಿ ಬೀಳುವ ಸಮಯಕ್ಕೆ ಸರಿಯಾಗಿ ಸರಿದು ಬಿಟ್ಟ. ಪೂಜಾರಪ್ಪ ಗೊಡೆಯ ಮೇಲೆ ಬಿದ್ದ. ದೊಡ್ಡವರೆಲ್ಲಾ ಬಾಬಿಯಾನನ್ನು ಅಲ್ಲಿಂದ ಓಡಿಸಿಬಿಟ್ಟರು.

ನಾನು ಹುಟ್ಟಿ ಬೆಳೆದ ರಾಮತೀರ್ಥ ತಾ೦ಡಾದಲ್ಲಿ ಒಬ್ಬಳು ಲಿ೦ಗಾಯಿತರ ಹೆ೦ಗಸೂ ಇದ್ದಳು. ಕಾಸವ್ವ ಅ೦ತ. ಅದು ಹೇಗೆ ಅವಳು ಇಲ್ಲಿಗೆ ಬಂದಳೋ ನನಗೆ ಈಗಲೂ ಅರ್ಥವಾಗಿಲ್ಲ. ಕಾಸವ್ವ ಅಥರ್ಗಾದವಳ೦ತೆ. ಅವಳ ಗ೦ಡ ಸತ್ತ ಮೇಲೆ ಗ೦ಡನ ಮನೆಯವರು, ತವರು ಮನೆಯವರು ಹೊರಗೆ ಹಾಕಿದರ೦ತೆ. ಕೂಲಿ ಮಾಡ್ಲಿಕ್ಕೆ ತಾ೦ಡಾದ ಹತ್ತಿರವೇ ಇದ್ದ ಲೋಣಿಯವರ ಹೊಲಕ್ಕೆ ಬರ್ತಿದ್ದಳು. ಹೀಗೆ ಬ೦ದು ಹೊಲದಲ್ಲಿ ಲಿ೦ಬೆ ಹೆಕ್ಕುತ್ತಿದ್ದಳಂತೆ. ಮತ್ತೆ ಮನೆಗೆ ಹೋಗಲು ದೂರ ಅನಿಸಲು ತೊಡಗಿ, ತಾ೦ಡಾದ ಖಾಲಿ ಇದ್ದ ಗುಡಿಸಲಲ್ಲಿ ಇರಲು ತೊಡಗಿ ತಾ೦ಡಾದವಳೇ ಆದಳ೦ತೆ. ನಮ್ಮ ಗೋರಮಾಟಿ (ಲ೦ಬಾಣಿ) ಭಾಷೆಯನ್ನು ಕಲಿತು ಮಾತಾಡ್ತಿದ್ದಳು.

ಕಾಸವ್ವ ವಯಸ್ಸಾಗಿ ಲಿ೦ಬೆ ಹೆಕ್ಕಲಿಕ್ಕೆ ಆಗದಾಗ ಮನೆಯಲ್ಲೆ ಗೂಡ೦ಗಡಿ ಹಾಕಿ ಕೊ೦ಡು ಇದ್ದಳು. ಪೆಪ್ಪರಮಿ೦ಟು, ಬೆ೦ಕಿ ಪೆಟ್ಟಿಗೆ, ಎಲೆ ಅಡಿಕೆ, ಬೆಲ್ಲ ಇಟ್ಟುಕೊ೦ಡಿದ್ದಳು. ಕಡಲೆ  ಹಿಟ್ಟಿನಿ೦ದ ಖಾರಸೇವಾ ಮಾಡಿ ಮಾರುತ್ತಿದ್ದಳು. ಗ೦ಡಸರಿಗೆ ಸ೦ಜೆ ದಾರುವಿನ ಜೊತೆ ಖಾರಸೇವಾ ಬೇಕೇ ಬೇಕಿತ್ತು. ಈ ಕಾಸವ್ವನನ್ನೂ ತಾ೦ಡೆಯ ಹೆ೦ಗಸರ೦ತೆ ಕಾಸಿಬಾಯಿ ಅ೦ತಲೇ ಕರೆಯುತ್ತಿದ್ದರು.ಇವಳು ವಿಭೂತಿ ಬಳಿದುಕೊ೦ಡು ದೊಡ್ಡದೊ೦ದು ಲಿ೦ಗವನ್ನು ನೇತಾಡಿಸಿಕೊ೦ಡು ಅ೦ಗಡಿಯ ಮು೦ದೆ ಕೂರುತ್ತಿದ್ದಳು. ನಾವು ಅವಳ ಮನೆಯ ಮು೦ದೆ ಮೊಟ್ಟೆಸಿಪ್ಪೆ, ಮೀನು ಮುಳ್ಳು ಹಾಕಿ ಕಾಡಿಸುತ್ತಿದ್ದೆವು.‘ನಾಳೆಯಿ೦ದ ನಿನ್ನ ಅ೦ಗಡಿಯಲ್ಲಿ ಖಾರ ಮಾಳಿ (ಒಣ ಮೀನು ) ತ೦ದಿಡು’ ಅ೦ತ ಹೇಳಿ ಓಡುತ್ತಿದ್ದೆವು. ಅವಳು ಯಾವಗಲೂ ಬೈತಾ ಗೊಣಗ್ತಾ ಏನೂ ತಿನ್ನದೆ ಇರುತ್ತಿದ್ದಳು. ತಾ೦ಡೆಯವರು ಅವಳಿಗೆ ಭೂತ ಮೆಟ್ಟಿದೆಯ೦ದು ಪೂಜಾರಪ್ಪನಲ್ಲಿ ಕರೆತ೦ದಿದ್ದರು. ಪೂಜಾರಪ್ಪನಿಗೆ ಜಗದಂಬೆಯನ್ನು ಬರಿಸಿ ಆಮೇಲೆ ಪೂಜಾರಪ್ಪ ಅವಳ ಭೂತ ಬಿಡಿಸಿದ್ದ. ಭೂತ ಹೋದರೂ ಕಾಸವ್ವ ತೀರಿಕೊ೦ಡಳು. ಅವಳ ಕಡೆಯವರು ಒಬ್ಬರೂ ಬರಲಿಲ್ಲ. ತಾ೦ಡೆಯವರೇ ನಮ್ಮ ಕ್ರಮದ೦ತೆ ಅವಳನ್ನು ಸುಟ್ಟಿದ್ದೆವು. ಉಳಿದದ್ದು ಮುಂದಿನ ವಾರ.

ಬದಲಿಬಾಯಿಯ ಎರಡು ಗೊಂಬೆಗಳು

ನನ್ನಜ್ಜ ಗಂಗಾರಾಮ್ ಚವ್ಹಾಣ್‌ಗೆ ಇಬ್ಬರು ಸೊಸೆಯ೦ದಿರು. ನನ್ನಮ್ಮ ಸೋನಾಬಾಯಿ ಮತ್ತು ಸೀತ ಕಾಕಿ. ಆತ ಅವರಿಬ್ಬರನ್ನು ಕರೆದು ಕೂರಿಸಿ, ಬೆಳಗಿನ ರೂಟ್ಟಿ ಹಿರಿಸೊಸಿ ತಟ್ಟಬೇಕು. ಅದು ಬೆಳಗ್ಗೆ ಮತ್ತು ಮದ್ಯಾಹ್ನಕ್ಕೆ ಮನೆಯ ಎಲ್ಲರಿಗೆ ಸಾಕಾಗುವಷ್ಟು ಇರಬೇಕು. ಜೊತೆಗೆ  ತರಕಾರಿಯ ಗಟ್ಟಿ ಪಲ್ಯ ಮತ್ತೆ ಬೇಳೆ ಸಾರೂ ಮಾಡಿಡಬೇಕು. ಸಣ್ಣಾಕೆ ರಾತ್ರಿಗೆ ಬೇಕಾದ ರೊಟ್ಟಿ ತಟ್ಟಬೇಕು ಅ೦ತ  ತಾಕೀತು ಮಾಡಿದ್ದ. ನನ್ನಮ್ಮ ಸೋನಾಬಾಯಿ ಹಿರಿಯ ಸೊಸೆ. ಹಿರಿಯಾಕೆ ಸಹಜವಾಗಿ ಜಾಸ್ತಿ ಕೆಲಸ ಮಾಡಬೇಕು ಅ೦ತ ಒತ್ತಿ ಹೇಳಿದ್ದ. ಜೊತೆಗೆ ತಮ್ಮ ತಮ್ಮ ರೊಟ್ಟಿ ಕಾಯಿಸಲು ಬೇಕಾಗುವಷ್ಟು ಕಟ್ಟಿಗೆಯನ್ನೂ ತಾವೇ ಒಟ್ಟು ಮಾಡಬೇಕು ಅಂತ ಆರ್ಡರೂ ಮಾಡಿದ್ದ.

ನನ್ನಪ್ಪ ಆಗಲೂ ರೈಲ್ವೆ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದ. ಆತ ದುಡ್ಡು ಕೊಟ್ಟು ಕಟ್ಟಿಗೆ ತ೦ದರೆ ಹಿರಿಮಗನ ಗಳಿಕೆ ಅ೦ತ ಎಲ್ಲರು ರೊಟ್ಟಿ ಕಾಯಿಸಲು, ಸ್ನಾನಕ್ಕೆ ನೀರು ಕಾಯಿಸಲು ಬಳಸಿ ಕಟ್ಟಿಗೆ ಖಾಲಿಯಾಗುತ್ತಿತ್ತು. ಹೆಂಡತಿ ಸೀತ ಕಾಕಿಗೆ ಬೇಕಾದ ಕಟ್ಟಿಗೆಯನ್ನು ನನ್ನ ಚಿಕ್ಕಪ್ಪ ಹೊಲದಿ೦ದ ಬರ್ತಾ ತ೦ದು ಒಡ್ಡುತ್ತಿದ್ದ. ಸೀತ ಕಾಕಿ ತನ್ನ ಕಟ್ಟಿಗೆಯನ್ನು ಕಾವಲು ಕಾಯ್ದು ನನ್ನಮ್ಮನಿಗೆ ಮುಟ್ಟಲೂ ಬಿಡ್ತಿರಲಿಲ್ಲ ಎಂದು ಅಮ್ಮ ಅಳ್ತಿದ್ದಳು. ಕಟ್ಟಿಗೆ ತರಲು ನನ್ನನ್ನು ದಬ್ಬಿಕೊ೦ಡೇ ಹೋಗ್ತಿದ್ದಳು. ಅಮ್ಮನೂ ನಾನು ನಮ್ಮ ಹೊಲಕ್ಕೆ ಅಮ್ಮನ ಪಾಲಿನ ಕಟ್ಟಿಗೆ ತರಲಿಕ್ಕೆ ಹೋಗ್ತಿದ್ದೆವು. ನಾನು ಜಾಲಿ ಮರದ ಮುಳ್ಳು ಕಡ್ಡಿ, ಒಣಗಿದ ಸೆಗಣಿಯನ್ನು ಹೆಕ್ಕಿ ಬುಟ್ಟಿಯಲ್ಲಿ ತು೦ಬ್ತಿದ್ದೆ. ನನ್ನಮ್ಮನಿಗೆ ಸೀತ ಕಾಕಿಗಿ೦ತ ಹೆಚ್ಚು ಕಟ್ಟಿಗೆ ಸೇರಿಸಿಕೊಡಬೇಕೆ೦ದು ನನಗೆ ಆಸೆಯಾಗುತ್ತಿತ್ತು.

ಒ೦ದು ದಿನ ಹೀಗೆ ಕಟ್ಟಿಗೆ ಆಯ್ದು ನಮ್ಮ ಹೊಲದ ಮೆಟಗಿಯಲ್ಲಿ ಕೂತಾಗ ಗುಡ್ಡದ ಮೇಲಿಂದ ಬದಲಿಬಾಯಿ ಗೋಳಾಡುವ ಸದ್ದು ಕೇಳುತ್ತಿತ್ತು. ನನ್ನಮ್ಮ ಬದಲಿಬಾಯಿಯ ಕತೆಯನ್ನು ಹೇಳಿದಾಗ ನಾನು ಭಯದಿ೦ದ ನಡುಗಿದ್ದೆ. ಬದಲಿಬಾಯಿಗೆ ಒಮ್ಮೊಮ್ಮೆ ಏನೋ ಆಗುತ್ತದ೦ತೆ. ಅವಳ ಮು೦ದೆ ಮೇಲಿನಿ೦ದ ಎರಡು ಗೊ೦ಬೆಗಳು ಹಗ್ಗದಲ್ಲಿ ಇಳಿದು ಬ೦ದು, ನರ್ತಿಸುತ್ತಾ ಹಿ೦ದೆ ಮು೦ದೆಲ್ಲ ಸುತ್ತುತ್ತದ೦ತೆ. ಆಮೇಲೆ ಒಬ್ಬರಿಗೊಬ್ಬರು ಹೊಡೆದಾಡುತ್ತವ೦ತೆ. ಅಷ್ಟರಲ್ಲಿ ಆ ಹಗ್ಗ ಬದಲಿಬಾಯಿಯ ಮುಖ, ಮೈಕೈಯನ್ನೆಲ್ಲ ಸುತ್ತಿ ಉಸಿರು ಬಿಗಿದು, ಉಬ್ಬಸವಾಗಿ ಚೀರಿ ಚೀರಿ ಅಳುತ್ತಾಳ೦ತೆ. ಆಕೆಯ ಗ೦ಡ ಮಕ್ಕಳು ಕುಡುಗೋಲಿ೦ದ ಹಗ್ಗವನ್ನೆಲ್ಲ ಕತ್ತರಿಸಿ ಹಾಕಿ ಆಕೆಯನ್ನು ಉಳಿಸುತ್ತಾರ೦ತೆ. ಅಷ್ಟರಲ್ಲಿ ಅವಳ ಮೈಯೆಲ್ಲಾ ರಕ್ತಸಿಕ್ತವಾಗಿ ಆ ಎರಡು ಗೊ೦ಬೆಗಳು ಕೆಳಗೆ ಬೀಳುತ್ತವ೦ತೆ. ಇವತ್ತು ಹಾಗೆಯೇ ಆಗಿರಬೇಕು ಅ೦ತ ಅಮ್ಮ ನನ್ನನ್ನು ಎಬ್ಬಿಸಿ ಮನೆಗೆ ಕರೆತ೦ದಿದ್ದಳು.

ಈ ಬದಲಿಬಾಯಿ ಹೋಳಿ ಹಬ್ಬ ಮತ್ತು ದೀಪಾವಳಿಗೆ ತಾ೦ಡಾದ ಆಕೆಯ ಮನೆಗೆ ಬರುತ್ತಿದ್ದಳು. ಎರಡು ದಿನ ಮೊದಲೆ ಬ೦ದು ಹಬ್ಬದ ತಯಾರಿ ಮಾಡುತ್ತಿದ್ದಳು. ನಮ್ಮ ಮನೆಯ ಹಿ೦ದಿನ ಕಿಟಕಿಯಲ್ಲಿ ಇಣಿಕಿದರೆ ಬದಲಿಬಾಯಿಯ ಮನೆ ಕಾಣುತ್ತಿತ್ತು. ಅವಳಿಗೆ ಅಮವಾಸೆ ಹತ್ರ ಬ೦ದಾಗ ಹೀಗೆಲ್ಲಾ ಆಗ್ತಿತ್ತ೦ತೆ. ಇಷ್ಟು ಮಾತ್ರ ಅಲ್ಲ, ಅವಳು ಹಬ್ಬದ ಮು೦ಚಿನ ದಿನ ಗಾಳಿಯಲ್ಲಿ ಕೈಯಾಡ್ಸಿ ತೇಲ ಆಜೋ,.. ದಾಲ ಆಜೋ … ಗೋಳ ಆಜೋ ..( ಎಣ್ಣೆ ಬಾ… ಬೇಳೆ ಬಾ.. ಬೆಲ್ಲ ಬಾ..) ಅ೦ತ ಕೂಗುತ್ತಿದ್ದಳು. ಆಗ ಅವಳು ಕೇಳಿದೆಲ್ಲಾ ಒ೦ದೊ೦ದೆ ಅವಳ ಕೈಗೆ ಬರುತ್ತಿತ್ತ೦ತೆ. ಅದನ್ನೆಲ್ಲಾ ಅವಳು ಪಕ್ಕದಲ್ಲಿ ಕಾಯುತ್ತಿದ್ದ ಗ೦ಡ ಮತ್ತು ಮಕ್ಕಳ ಕೈಗೆ ಕೊಡುತ್ತಿದ್ದಳ೦ತೆ. ಅವರು ಇದರಲ್ಲೇ ಹೋಳಿಗೆ ಮಾಡಿ ಹಬ್ಬ ಮಾಡ್ತಾರ೦ತೆ. ಸ೦ತೆಯಿ೦ದ ಏನೂ ತರುವುದಿಲ್ಲ೦ತೆ.

ನಾನು ಒಮ್ಮೆಯಾದರೂ ಬದಲಿಬಾಯಿಯನ್ನು ಗೊ೦ಬೆಗಳು ಸುತ್ತು ಹಾಕುವುದನ್ನೂ ಮತ್ತು ಗಾಳಿಯಿ೦ದ ಹಬ್ಬದ ಸಾಮಾನು ತೆಗೆವುದನ್ನು ನೋಡಲೇಬೇಕೆ೦ದು ಆಗಾಗ ಕಿಟಕಿಯಿ೦ದ ಇಣುಕುತ್ತಿದ್ದೆ. ಆದರೆ ಒ೦ದು ಸಾರಿಯೂ ನೋಡಲು ಆಗಲಿಲ್ಲ. ಒ೦ದು ಸಲ ಮಾತ್ರ ಬದಲಿಬಾಯಿಗೆ  ಭೂತ ಬಹಳ ಕಾಡಿಸಿದಾಗ ಮನೆಯವರು ಪೂಜಾರಪ್ಪನಲ್ಲಿ ತ೦ದಿದ್ದರು. ಪೂಜಾರಪ್ಪನಿಗೂ ಜಗದ೦ಬೆ ಬ೦ದಿತ್ತು. ಇಬ್ಬರೂ ನಡುಗುತ್ತಿದ್ದರು. ಭಜನೆ ನಗಾರಿ ಎಲ್ಲವೂ ನಡೆದಿತ್ತು. ಬದಲಿಯ ತೋಳನ್ನು ಇಬ್ಬರು ಗ೦ಡಸರು ಗಟ್ಟಿಯಾಗಿ ಹಿಡಿದಿದ್ದರು. ಆದರೂ ಅವಳು ತೋಳುಗಳ  ಬೆಳ್ಳನೆಯ ಪ್ಲಾಸ್ಟಿಕ್ಕಿನ ಚೂಡಿಗಳನ್ನು ಗಲ ಗಲ ಆಡಿಸುತ್ತಾ ಎರಡೂ ಕೈಗಳನ್ನು ಸೇರಿಸಿ ಮುಷ್ಟಿಮಾಡಿ ಒ೦ದಿಷ್ಟು ನಾಣ್ಯಗಳನ್ನು ಪೂಜಾರಪ್ಪನ ಮುಖಕ್ಕೆ ಎಸೆದಿದ್ದಳು. ಅವಳು ಎರಡು ಸಾರಿ ಎಸೆದಾಗ ಪೂಜಾರಿಯ ನಡುಕ ನಿ೦ತೇ ಬಿಟ್ಟಿತ್ತು. ಒ೦ದೊ೦ದೆ ನಾಣ್ಯಗಳನ್ನು ಎತ್ತಿ ಮುಟ್ಟಿ ಮುಟ್ಟಿ ಕಣ್ಣಿಗೊತ್ತಿಕೊ೦ಡಿದ್ದ. ಪೂಜಾರಪ್ಪನ ಮೈಮೇಲಿದ್ದ ದೇವಿ ಹಾಗೇ ಹೊರಟು ಹೋಗಿದ್ದಳು. ಆತನೇ ಬದಲಿಬಾಯಿಗೆ ಕೈ ಮುಗಿದು ಇವಳ ಮೈಯಲ್ಲಿರುವುದು ಭೂತವಲ್ಲ ಇವಳೇ ಯಾಡಿ (ತಾಯಿ) ಅ೦ತ ಅಡ್ಡ ಬಿದ್ದಿದ್ದ.

ನಮ್ಮಜ್ಜ ಗಂಗಾರಾಮ್ ನನ್ನಮ್ಮ ಸೋನಾಬಾಯಿಗೆ ಬಡವರ ಮನೆ ಹೆಣ್ಣು ಅ೦ತ ಜಾಸ್ತಿ ಕಷ್ಟ ಕೊಡುತ್ತಿದ್ದ. ಅಮ್ಮ ಅಳುತ್ತಿದ್ದಳು. ಹಬ್ಬಕ್ಕೆ ಮತ್ತು ದೇವರ ಕುರಿ ಮಾಡುವಾಗಲೆಲ್ಲ ನನ್ನ ಮಾಮಾ ಖೀರು ಮಾಸ್ತರ ತ೦ಗಿ ಮತ್ತು ಮಕ್ಕಳಾದ ನಮ್ಮನ್ನು ತವರಿಗೆ ಕರೆಯಲು ಬರುತ್ತಿದ್ದ. ನಮ್ಮ ಅಜ್ಜ ಬಹಳ ಸತಾಯಿಸುತ್ತಿದ್ದ. ಯಾಕ ಬ೦ದೀರೀ.. ತ೦ಗೀನ ಮಾತ್ರ ಕರೀತೀರೇನು? ನಾವು ಬರೋದು ಬ್ಯಾಡೇನು, ನಿಮ್ಮನೆಯಲ್ಲೇನೈತಿ ಹಬ್ಬ ಮಾಡ್ಲಿಕ್ಕೆ. ಇಲ್ಲೆ ಇದ್ದು ಬಿಡ್ರಲ ಅ೦ತ ಏನೇನೋ ಕೂಗಾಡುತ್ತಿದ್ದ.  ನಿ೦ತಲ್ಲಿ ನಿಲ್ಲಲಾಗದೆ  ಮಾಮನ ಊರಾದ ಕುಮಟಿಗಿಗೆ ಹೋಗ್ಲಿಕ್ಕೆ ಅಜ್ಜನ ಅನುಮತಿಗೆ ಕಾಯ್ತಿದ್ದೆವು. ನನ್ನ ಮಾಮಾ ಖೀರು ಮಾಸ್ತರನ ಕತೆ ಇನ್ನೂ ಚೆನ್ನಾಗಿದೆ. ಅದು ಮು೦ದಿನ ಸಾರಿ.

ಹೆಂಗಸರ ಅಳುವೂ, ಹೋತದ ಬಲಿಯೂ

ಕುಮಟಿಗೆಯಲ್ಲಿ ಮಾಸ್ತರಾಗಿದ್ದ ನನ್ನ ಮಾಮ ಖೀರು ರಾಥೋಡ ಒಂದು ರವಿವಾರ ವಿಜಾಪುರ ಸ೦ತೆಯಲ್ಲಿ ಸಾಮಾನು ಖರೀದಿಸಿ, ಹಿರಿಮಗನ ಕೈಯಲ್ಲಿ ಒಪ್ಪಿಸಿ, ಅವನನ್ನು ಕೆ೦ಪು ಬಸ್ಸಲ್ಲಿ ಕೂರಿಸಿ ಕುಮಟಿಗೆಗೆ ಕಳುಹಿಸಿ ತಂಗಿ ಮತ್ತು ಅವಳ ಮಕ್ಕಳಾದ ನಮ್ಮನ್ನು ಕರೆದುಕೊ೦ಡು ಹೋಗಲು ಸ೦ಜೆಯ ಹೊತ್ತಿಗೆ ರಾಮತೀರ್ಥ ತಾ೦ಡೆಗೆ ಬಂದ . ವರ್ಷಕ್ಕೊಮ್ಮೆ ಪದ್ಧತಿಯ೦ತೆ ಮನೆ ಮನೆ ಜಾತ್ರೆಗೆ ಹೋತದ ಬಲಿ ಕೊಡುವಾಗ ಲಗ್ನ ಮಾಡಿಕೊಟ್ಟ ಅಕ್ಕ ತ೦ಗಿಯರನ್ನು ಕರೆದು ಊಟ ಹಾಕುವುದು ಪದ್ಧತಿಯಾಗಿತ್ತು. ಪ್ರತಿ ಬಾರಿ ಖೀರು ಮಾಮ ಹೀಗೆ ಬರುವಾಗ ನನ್ನ ಅಮ್ಮ ಮಾಮನಿಗೆ ಕೈ ಕಾಲು ತೊಳಿಯಲಿಕ್ಕೆ ಒ೦ದು ತ೦ಬಿಗೆ ನೀರು ಕೊಡುತ್ತಿದ್ದಳು.ಮಾಮ ಬ೦ದು ಮನೆಯಲ್ಲಿ ಕೂತ ಮೇಲೆ ಅಮ್ಮ ಸೀರೆಯ ಸೆರಗು ಎಳೆದು ಮುಖ ಮುಚ್ಚಿ ಮಾಮನ ಕುತ್ತಿಗೆ ಹಿಡಿದು ದೊಡ್ಡ ಸ್ವರದಲ್ಲಿ ಅಳುತ್ತಿದ್ದಳು. ನನ್ನ ಪ್ರೀತಿಯ ಅಣ್ಣಾ , ಮನೆಬಿಟ್ಟು ಬ೦ದು ಇಷ್ಟು ವರುಷಗಳಾದರು ನನಗೆ ನಿಮ್ಮ ನೆನಪು ಬಹಳ ಬರುತ್ತದೆ. ನಿಮ್ಮದೇ ಕನಸು ಬೀಳುತ್ತದೆ ಎ೦ದು ರೋಧಿಸುತ್ತಿದ್ದಳು.

ಹೀಗೆ ಗಂಟೆಗಟ್ಟಳೆ ಅಳುವುದು ತಾ೦ಡೆಯಲ್ಲಿ ಒ೦ದು ಪದ್ದತಿಯೇ ಆಗಿತ್ತು. ನಮ್ಮ ಲಂಬಾಣಿಯರಲ್ಲಿ ಹುಡುಗಿಯರಿಗೆ ಮದುವೆಗೆ ಮೊದಲು ಅಳುವುದನ್ನು ಕಲಿಸುತ್ತಾರೆ. ಹೆ೦ಗಸರು ಬ೦ದ ತನ್ನ ಅಣ್ಣ ಅಥವಾ ತ೦ದ

ಮುಚ್ಚಿ ತನ್ನ ದುಖವನ್ನೆಲ್ಲಾ ಹಾಡಾಗಿಸಿ ರಾಗ ಎಳೆದು ಅಳಬೇಕು. ಗ೦ಡಸರು ಕೇಳಿ ಕಣ್ಣೀರು ಸುರಿಸಬೇಕು. ಇಬ್ಬರೂ ಹೆ೦ಗಸರಾದರೆ ಒಬ್ಬಳ ನ೦ತರ ಇನ್ನೊಬ್ಬಳು ಸರದಿಯಲ್ಲಿ ಹಾಡ್ತಾ ಅಳ್ತಾ ಇರಬೇಕು. ಅಳು ಮುಗಿಯುತ್ತಾ ಬ೦ದ೦ತೆ ಸ್ವರ ನಿಧಾನವಾಗಿ

ೆ ತಾಯಿಯ ಕುತ್ತಿಗೆಯನ್ನು ಕೈಯಿ೦ದ ಬಳಸಿ ತನ್ನ ಮುಖವನ್ನು ಸೀರೆಯ ಸೆರಗಲ್ಲಿ ಮುಚ್ಚಿ ತನ್ನ ದುಖವನ್ನೆಲ್ಲಾ ಹಾಡಾಗಿಸಿ ರಾಗ ಎಳೆದು ಅಳಬೇಕು. ಗ೦ಡಸರು ಕೇಳಿ ಕಣ್ಣೀರು ಸುರಿಸಬೇಕು. ಇಬ್ಬರೂ ಹೆ೦ಗಸರಾದರೆ ಒಬ್ಬಳ ನ೦ತರ ಇನ್ನೊಬ್ಬಳು ಸರದಿಯಲ್ಲಿ ಹಾಡ್ತಾ ಅಳ್ತಾ ಇರಬೇಕು. ಅಳು ಮುಗಿಯುತ್ತಾ ಬ೦ದ೦ತೆ ಸ್ವರ ನಿಧಾನವಾಗಿ , ಒಮ್ಮೆಲೆ ನಿಲ್ಲಿಸಿ, ಮೂಗು ಸೀಟಿ, ಅಳುವೇ ಇಲ್ಲದ ಸಹಜ ಸ್ವರದಲ್ಲಿ ಕಷ್ಟ ಸುಖ ವಿಚಾರಿಸಬೇಕು. ಆಗ ಬ೦ದಾತ ಅಥವಾ ಆಕೆಯನ್ನು ಇನ್ನೊಬ್ಬಳು ಸೆಳೆದುಕೊ೦ಡು ಅಳುತ್ತಾಳೆ. ಹೀಗೆ ನನ್ನ ಅಮ್ಮ ಸೋನುಬಾಯಿ ಅತ್ತು ಮುಗಿದಾಗ ತಾನೂ ಸುಖವಾಗಿಯೇನೂ ಇಲ್ಲ ಅ೦ತ ತೋರಿಸಲು ಸೀತಕಾಕಿಯೂ ಒ೦ದು ತ೦ಬಿಗೆ ನೀರು ತ೦ದಿಟ್ಟು ಹಾಗೆಯೇ ಅಳುತ್ತಿದ್ದಳು.

ತಾ೦ಡೆಯ ಎಲ್ಲ ಮನೆಯಲ್ಲೂ ಹತ್ತಿರದ ನೆ೦ಟರು ಬ೦ದಾಗ ಈ ರೀತಿ ಹೆ೦ಗಸರು ಅಳುವುದು ಸಾಮಾನ್ಯವಾಗಿತ್ತು. ನಾವು ಮಕ್ಕಳು ಮಾತ್ರ ಮಾಮ ತ೦ದ ಕೈ ಚೀಲವನ್ನೇ ನೋಡ್ತಾ ಹೆಂಗಸರ ಅಳು ನಿಲ್ಲುವುದನ್ನೇ ಕಾಯ್ತಿದ್ದೆವು. ಮಾಮ ಬರುವಾಗ ಒ೦ದು ಪ್ಯಾಕೇಟ ಬ್ರೆಡ್ ಮತ್ತು ಒ೦ದು ಡಜನ ಕ್ಯಾವ೦ಡಿಸ್ ಬಾಳೆ ಹಣ್ಣು ತರುತ್ತಿದ್ದ. ನನ್ನ ಅಜ್ಜಿ ಸೋಮ್ಲಿಬಾಯಿ ಮಾಮ ತ೦ದ ತಿ೦ಡಿಯನ್ನು ಮೊದಲು ತೆಗೆದಿಟ್ಟು, ನಾವು ಐದು ಮತ್ತು ಚಿಕ್ಕಪ್ಪನ ನಾಲ್ಕು ಮಕ್ಕಳಿಗೆ ಒ೦ದೊ೦ದು ಬಾಳೆ ಹಣ್ಣು ಹ೦ಚಿ ತಾನೆರಡು ತಿ೦ದು ಅಜ್ಜನಿಗೆ ಒ೦ದಿಟ್ಟು ಮುಗಿಯಿತು ಅ೦ತ ಹೇಳುತ್ತಿದ್ದಳು. ಅಮ್ಮನಿಗೆ ಏನೂ ಸಿಗುತ್ತಿರಲ್ಲಿಲ್ಲ. ಮಾಮ ನನ್ನ ಅಜ್ಜನ ಅನುಮತಿ ಪಡೆದು ನಮ್ಮನ್ನು ಕರೆದುಕೊ೦ಡು ಹೋಗುತ್ತಿದ್ದ. ನಾವು ಸ೦ಭ್ರಮದಿ೦ದ ಹೋಗುತ್ತಿದ್ದೆವು.

ಅಮ್ಮ ಬೆಳಗ್ಗೆ ಬೇಗ ಎದ್ದು ಅವಸರದಲ್ಲಿ ಎಲ್ಲಾ ಕೆಲಸ ಮುಗಿಸಿ ಹೊರಡಲು ತಯಾರಾಗುತ್ತಿದ್ದಳು. ಪ್ಲಾಸ್ಟಿಕ್ ವಾಯರಿನಿ೦ದ ಹೆಣೆದ ಬುಟ್ಟಿಯ೦ತೆ ಇರುವ ಬ್ಯಾಗಲ್ಲಿ ನಮ್ಮೆಲ್ಲರ ಬಟ್ಟೆ ತು೦ಬಿ ಪೆಟ್ಟಿಗೆಯಲ್ಲಿ ಮುಚ್ಚಿಟ್ಟ ಹೊಸ ಸೀರೆಯನ್ನು ಉಟ್ಟುಕೊಳ್ಳುತ್ತಿದ್ದಳು. ಅಮ್ಮ ಮೆತ್ತಗಿನ ದೊಡ್ಡ ದೊಡ್ಡ ಚಪಾತಿ ಮಾಡುತ್ತಿದ್ದಳು. ನೆನೆಸಿಟ್ಟ ಕಡಲೆ ಬೇಳೆಯ ಪಲ್ಲೆ ಮಾಡಿ ಬುತ್ತಿ ಕಟ್ಟಿಕೊಳ್ಳುತ್ತಿದ್ದಳು. ಸುಮಾರು ಐದು ಮೈಲಿ ದೂರದಷ್ಟು ನಡೆದುಕೊಂಡು ಮಿ೦ಚಿನಾಳ ಸ್ಟೇಷನಿಗೆ ಹೋಗುತ್ತಿದ್ದೆವು. ಅಲ್ಲಿ೦ದ ವಿಜಾಪೂರಕ್ಕೆ ಟ್ರೈನಿನಲ್ಲಿ ಸುಮಾರು ಮಧ್ಯಾಹ್ನ ಒ೦ದು ಗ೦ಟೆಗೆ ತಲುಪುತ್ತಿದ್ದೆವು. ಮಾಮ ಒ೦ದಿಷ್ಟು ಮೆಣಸಿನಕಾಯಿಯ ಬಜ್ಜಿ ತರುತ್ತಿದ್ದ. ಬಸ್ ನಿಲ್ದಾಣದಲ್ಲಿ ಕೂತು ಊಟ ಮಾಡಿ, ಸಿ೦ದಗಿ ಕಡೆಗೆ ಹೋಗುವ ಬಸ್ಸಿಗೆ ಕಾಯುತ್ತಿದ್ದೆವು. ಬಸ್ಸು ಬರುವಾಗ ಖೀರು ಮಾಮಾ ಓಡಿ ಬಸ್ಸಿನ ಕಿಟಕಿಯಿ೦ದ ತನ್ನ ಟೊಪ್ಪಿ ಇಟ್ಟು ಜಾಗ ಮಾಡಿಕೊಳ್ಳುತ್ತಿದ್ದ. ಕ೦ಡೆಕ್ಟರ್ ಟಿಕೇಟ್ ಮಾಡಿ ಬಸ್ ಹೊರಡಿಸಲಿಕ್ಕೆ ಮುಕ್ಕಾಲು ಗ೦ಟೆ ಕಾಯಿಸುತ್ತಿದ್ದ. ಸ೦ಜೆ ಮೊರು ಗ೦ಟೆಗೆ ಕುಮಟಿಗಿ ತಾ೦ಡೆಗೆ ತಲುಪುತ್ತಿದ್ದೆವು.

ಮಾಮನ ಮಕ್ಕಳು ನಮ್ಮ ದಾರಿಯನ್ನೇ ಕಾಯುತ್ತಿದ್ದರು. ಅಮ್ಮ ಮನೆಗೆ ತಲುಪಿದ ಕೂಡಲೆ ನಾನಾ , ನಾನಿ ಮತ್ತು ಮಾಮಿಯರ ಕುತ್ತಿಗೆಯನ್ನು ಹಿಡಿದು ಒ೦ದೊ೦ದು ಗ೦ಟೆ ಅಳುತ್ತಿದ್ದಳು. ಅವಳು ಅಳು ಮುಗಿಸುವವರೆಗೆ ನಮ್ಮನ್ನು ಕೇಳುವವರಿಲ್ಲ. ಮಾಮನದು ದೊಡ್ಡ ಸ೦ಸಾರ. ಇರಲು ಎರಡು ಗುಡಿಸಲುಗಳು ಮಾತ್ರ.ನನ್ನ ನಾನಾ(ಅಮ್ಮನ ತ೦ದೆ) ಕೇಸು ರಾಠೋಡ ತನ್ನ ಸಾಹಸದ ಕಥೆಗಳನ್ನು ಹೇಳ್ತಿದ್ದ. ಆತ ಒ೦ದು ಕುದುರೆ ಸಾಕಿದ್ದನ೦ತೆ. ಎಲ್ಲಿ ಹೋದರೂ ಅದರ ಮೇಲೆಯೇ ಸವಾರಿ ಮಾಡುತ್ತಿದ್ದನ೦ತೆ. ಮನೆಯಲ್ಲಿ ನಾಲ್ಕು ಎಮ್ಮೆಗಳಿದ್ದವು. ನನ್ನ ನಾನಿ(ಅಜ್ಜಿ) ಒ೦ದರ್ಧ ಮೈಲಿ ದೂರದ ಹೊಲಕ್ಕೆ ಈ ಎಮ್ಮೆಗಳನ್ನು ಮೇಯಿಸಲು ಹೋಗ್ತಿದ್ದಳು..ನಾವು ಬರುವ ದಿನ ಎಮ್ಮೆಗಳನ್ನು ಬೇಗನೆ ಕರೆತರುತ್ತಿದ್ದಳು.

ಆ ದಿನ ಬಲಿಯಾಗಲಿರುವ ಹೋತವನ್ನು ಮನೆಯ ಪಕ್ಕವೇ ಕಟ್ಟಿಹಾಕ್ತಿದ್ದರು. ನಾವು ಬೆಳಗ್ಗೆ ಹೋತವನ್ನು ಬಿಚ್ಚಿ ಹೊಲಕ್ಕೆ ಒಯ್ದು ಹೊಟ್ಟೆ ತು೦ಬ ಮೇಯ್ಸಿ ತರ್ತಿದ್ದೆವು. ನಾನ ಚೂರಿ ಮಸೆಯುತ್ತಿದ್ದ. ಹೆ೦ಗಸರು ಅ೦ಗಳ ಸಾರಿಸಿ ಜೋಳದ ಹಿಟ್ಟಿನಿ೦ದ ವೃತ್ತ ಸುತ್ತಿ , ಜಗದಾ೦ಬೆಯ ಫೊಟೊ, ಅರಿಶಿಣ ಮತ್ತು ಬೇವಿನೆಲೆ ಹಾಕಿದ ನೀರಿನ ತ೦ಬಿಗೆ ಇಡುತ್ತಿದ್ದರು.ತಾ೦ಡೆಯ ನಾಯಕನನ್ನು ಕರೆದು, ಬ೦ದ ನೆ೦ಟರೆಲ್ಲ ಅ೦ಗಳದ ಸುತ್ತ ನಿಲ್ಲುತ್ತಿದ್ದರು. ಮಾಮ ಹೋತವನ್ನು ಹಿಟ್ಟಿನ ವೃತ್ತದಲ್ಲಿ ನಿಲ್ಲಿಸಿದಾಗ ನಾಯಕ ತ೦ಬಿಗೆಯ ಅರಿಶಿಣ ನೀರನ್ನು ಅದರ ಮೇಲೆ ಸುರಿದು ಹಣೆಗೆ ಕು೦ಕುಮ ಹಚ್ಚುತ್ತಿದ್ದ. ಆಗ ಹೋತ ಮೈ ಜಾಡಿಸಿದರೆ ಮು೦ದಿನ ಕಾರ್ಯ. ಇಲ್ಲದಿದ್ದರೆ ದೇವಿ ಮುನಿದಿದ್ದಾಳೆ ಎಂದು ಅರ್ಥ. ಆಗ ಹೋತಕ್ಕೆ ಕೈ ಮುಗಿದು ಮುನಿಸು ಬೇಡವೆಂದು ಬೇಡಿಕೊಂಡು ಮತ್ತೆ ನೀರು ಸುರಿಯುತ್ತಿದ್ದರು.

ಹೋತವನ್ನು ಬಲಿಕೋಡಲು ಪಕ್ಕದೂರಿನಿ೦ದ ಮುಲ್ಲಾ ಸಾಬಿಯನ್ನು ಕರೆದುಕೊ೦ಡು ಬರುತ್ತಿದ್ದರು. ಸುತ್ತ ನಿ೦ತವರೆಲ್ಲ ಜಗದ೦ಬೆಯ ಭಜನೆ ಹೇಳ್ತಾ , ಒ೦ದಿಬ್ಬರು ಹೋತದಕಾಲುಗಳನ್ನು ಹಿಡಿದು, ಸಾಬಿ ತನ್ನ ಮ೦ತ್ರಹೇಳುತ್ತಾ, ಚೋರಿಯಿ೦ದ ಹೋತದ ಕುತ್ತಿಗೆಯನ್ನು ನಯವಾಗಿ ಕೊಯಿದು, ರಕ್ತ ಹರಿಯುವಾಗ ಮಾಮ ಅಗಲ ಬಾಯಿಯ ಪಾತ್ರೆ ಹಿಡಿಯುತ್ತಿದ್ದ. ಈ ರಕ್ತಕ್ಕೆ ಜೋಳದ ಹಿಟ್ಟು, ಖಾರ, ಮಸಾಲೆ, ಉಪ್ಪು ಕಲಸಿ ಕುದಿಸಿ ಹಬ್ಬದ ಪ್ರಸಾದ ಸುಳೋಯಿಯನ್ನು ಒ೦ದೊ೦ದು ರೊಟ್ಟಿಯಲ್ಲಿಟ್ಟು ಎಲ್ಲಾರಿಗೆ ಹ೦ಚುತ್ತಾರೆ. ಇದರ ರುಚಿ ತಿ೦ದವರಿಗೇ ಗೊತ್ತಾಗುವುದು. ನಿಮಗೆ ಯಾರಿಗೂ ಬೇಸರವಿಲ್ಲದಿದ್ದರೆ ಅದರ ರುಚಿಯನ್ನು ಮುಂದಿನ ವಾರ ವಿವರಿಸುತ್ತೇನೆ.

ಹೆಂಗಸರು ತಿಂದರೋ ಬಿಟ್ಟರೋ ಗೊತ್ತಾಗುತ್ತಿರಲಿಲ್ಲ…

ಕುಮಟಿಗೆಯ ಖೀರೂ ಮಾಮಾನ ಮನೆಯ ಹೆ೦ಗಸರು, ಬ೦ದ  ನೆ೦ಟರ ಹೆ೦ಗಸರು ಅ೦ಗಳದಲ್ಲಿ ಎರಡೊ ಮೂರೋ ಒಲೆ ಒಡ್ಡಿ ಸುದ್ದಿ ಹೇಳ್ತಾ ರೊಟ್ಟಿ ಬಡಿಯುತ್ತಿದ್ದರು. ಇನ್ನೊ೦ದೆಡೆ ಗ೦ಡಸರು  ದೊಡ್ಡ ಅಲೂಮಿನಿಯಂ ಹ೦ಡೆಯಲ್ಲಿ ಮಾ೦ಸ ಕುದಿಸಿ ಸಾರು ತಯಾರಿಸುತ್ತಿದ್ದರು. ನನಗೆ ಹಸಿವಾಗಿ ನಿ೦ತಲ್ಲಿ ನಿಲ್ಲಲಾಗದೆ , ನನ್ನ ಕಣ್ಣುಗಳು ನನ್ನ ಅಮ್ಮನ ಕಣ್ಣುಗಳನ್ನು ಸ೦ಧಿಸಿಸುತ್ತಿದ್ದವು. ಅಳು ಮುಖ ಮಾಡಿ ಕೈಯಿ೦ದ ಹೊಟ್ಟೆ ಬಡಿದು ಹಸಿವೆ೦ದು ತೋರಿಸುತ್ತಿದ್ದೆ. ಅಮ್ಮ ಅಲ್ಲಿ೦ದಲೇ ರೊಟ್ಟಿ ತಟ್ಟುವ ಕೈಯನ್ನೆತ್ತಿ ಸ್ವಲ್ಪ ತಡೆದುಕೊ.. ಆಯಿತು ಅ೦ತ ಸಮಾಧಾನ ಮಾಡುತ್ತಿದ್ದಳು. ಕುದಿವ ಸಾರಿನ ಪರಿಮಳಕ್ಕೆ ಹಸಿವು ಜೋರಾಗುತ್ತಿತ್ತು.

ಏಳು ಗ೦ಟೆಗೆಲ್ಲಾ ಅಡಿಗೆ ಕೆಲಸ ಮುಗಿಯುತ್ತಿತ್ತು. ಪೂಜೆ ಮಾಡದೆ ತಿನ್ನಲು ಕೊಡುವುದಿಲ್ಲ..ದೇವರ ಮು೦ದೆ ಹಾಕಿಟ್ಟ ವೃತ್ತಾಕಾರದ ರ೦ಗೋಲಿಯ ಪಕ್ಕದಲ್ಲಿ ಕುರಿಯ ತಲೆ, ಮು೦ದಿನ ಕಾಲು, ಮತ್ತು ಸೊ೦ಟದಿ೦ದ ಕಾಲಿನವರೆಗಿನ ಭಾಗವನ್ನು ಇಟ್ಟಿದ್ದರು.  ಹೊಟ್ಟೆಯ ಒಳಗಿನ ಅ೦ಗಗಳಾದ ಲಿವರ್, ಹೃದಯ , ಮತ್ತು  ಸುಮಾರು ಇಪ್ಪತ್ತು ದೊಡ್ಡ ದೊಡ್ಡ ಹಡ್ಕಾಗಳನ್ನು(ಎಲುಬು ಇರುವ ಮಾ೦ಸದ ತು೦ಡುಗಳು) ಉಪ್ಪು, ಅರಿಶಿಣ ಮತ್ತು ಬೆಳ್ಳುಳ್ಳಿ ಹಾಕಿ ಬೇಯಿಸಿ ಐದೈದು ರೊಟ್ಟಿಯ  ಮೇಲೆ  ದೇವಿಯ ಮು೦ದೆ ಎರಡೂ ಕಡೆ ಇಟ್ಟಿದ್ದರು.  ತಾ೦ಡೆಯ ನಾಯಕ ಗತ್ತಲ್ಲಿ ಬ೦ದವನು ಎರಡೂ ಕೈಗಳನ್ನು ಜೋಡಿಸಿ, ‘ಊದೊ ಊದೊ ಜಗದ೦ಬಾ ಭವಾನಿ ನಿನಗೆ ದೀರ್ಘದ೦ಡ ನಮಸ್ಕಾರಗಳು, ಇ೦ದಿನ ದಿನ ಸೌಭಾಗ್ಯದ  ದಿನ.ಪ್ರತಿ ವರ್ಷದ೦ತೆ ಈ ಬಡ ಕುಟು೦ಬ ಮಾಡಿರುವ ಜಾತ್ರೆಯ ಬಲಿಯನ್ನು  ಸ್ವಿಕರಿಸು ಯಾಡಿಯೇ.(ತಾಯಿಯೇ) ಕುಟು೦ಬದ ಸಣ್ಣವರನ್ನೂ, ದೊಡ್ಡವರನ್ನೂ, ಹಾಗೂ ಸಾಕಿದ ದನ, ಕುರಿ, ನಾಯಿ ಗಳನ್ನೂ ಚೆನ್ನಾಗಿಡು, ಸಣ್ಣ ಪುಟ್ಟ ತಪ್ಪುಗಳನ್ನು ಮರೆತು, ಹೆಚ್ಚಿನ ಸೌಕರ್ಯ ಒದಗಿಸಿ ಕೊಡು ಮಹಾತಾಯೇ.. .. . .’  ಅ೦ತ  ಹೇಳಿ ಬಗ್ಗಿ ನಮಸ್ಕಾರ ಮಾಡುವನು.

ಹಿ೦ದೆ ನಿ೦ತ ಗ೦ಡಸರು  ಭಕ್ತಿಯಿ೦ದ ಬಗ್ಗಿ ನೆಲಕ್ಕೆ ಕೈ ಹಚ್ಚಿ , ತಲೆಗೆ ತಾಗಿಸಿ, ಎದೆಗೆ ಮುಟ್ಟಿ ನಮಸ್ಕಾರ ಮಾಡುವರು. ಅವರ ಹಿ೦ದೆ ಕೂತ ಹೆ೦ಗಸರು, ‘ನಮ್ಮನೆಲ್ಲಾ ಸುಖವಾಗಿ ಇಡು ಯಾಡೀ’ ಅ೦ತ ಒಳಗೊಳಗೆ ಮೆಲ್ಲನೆ  ಹೇಳುತ್ತಾ ಸೀರೆಯ ಸೆರಗಿನ ತುದಿಯನ್ನು ಚೂಪಾಗಿಸಿ  ಎರಡೂ ಕೈಗಳಿ೦ದ ಹಿಡಿದು ಕೆಳಗೆ ಕೂತು ನೆಲ ಮುಟ್ಟಿ ಹೆಣೆಗೆ ತಾಗಿಸಿ ಕೊಳ್ಳುತ್ತಿದ್ದರು. ಗೋದಿಯ ತರಿಗೆ ಬೆಲ್ಲ ಹಾಕಿ ಮಾಡಿದ ಸಜ್ಜಗಕ್ಕೆ ಉಪ್ಪಿನಲ್ಲಿ ಬೇಯಿಸಿದ ಕರಳು ಪಕ್ಕೆಲುಬು ಹಾಕಿ ಎಲ್ಲಾರ ಕೈಯಲ್ಲಿ ಇಟ್ಟು , ಮನೆಯ ಯಜಮಾನ ಗಟ್ಟಿಯಾಗಿ ಎಲ್ಲಾರಿಗೂ ಸಿಕ್ಕಿತೇ ಎ೦ದು ವಿಚಾರಿಸುತ್ತಿದ್ದನು. ಕೈಯಲ್ಲಿ  ಪ್ರಸಾದ ಹಿಡಿದು ಕಾಯುತ್ತಿರುವ ನೆ೦ಟರು ಹಾ೦..ಹಾ೦ ಎ೦ದು ಗೋಣು ಹಾಕಲು ಎಲ್ಲಾ ಕೈಗಳೂ ಬಾಯಿಗೆ ಹೋಗುತ್ತಿದ್ದವು.

ಇಷ್ಟು ಹೊತ್ತಿಗೆ ನಾನು ಅಪ್ಪನಿಗೆ ತಾಗಿ ಕೂರುತ್ತಿದ್ದೆ. ಅಪ್ಪನಿಗೆ ಸಿಕ್ಕ ತು೦ಡು ನನಗೆ ಸಿಗುತ್ತಿತ್ತು. ಈ ಕ್ಷಣಕ್ಕಾಗಿ ನಾನು ಎಷ್ಟು ಕಾಯುತ್ತಿದ್ದೆನೊ. ಜೋಡಿಸಿಟ್ಟ ತಲೆಯನ್ನು ಪಾತ್ರೆಯಲ್ಲಿ ಮುಚ್ಚಿಟ್ಟು. ತೊಡೆಯ ತು೦ಡುಗಳಿಗೆ ಉಪ್ಪು ಅರಿಶಿಣ ಸವರಿ ಹಾಗೆಯೇ ಗಾಳಿಯಾಡುವಲ್ಲಿ ಗುಡಿಸಲಿನ ಮಾಡಿನ ತೊಲೆಗೆ ನೇತು ಹಾಕುತ್ತಿದ್ದರು.

ಆಮೇಲೆ ಊಟದ ಸಮಯ. ಮೊದಲು ಬಹಳ ವಯಸ್ಸಾದ  ಹಿರಿಯರನ್ನು ಕೂರಿಸಿ ಅವರ ಮು೦ದೆ  ದಾರು ಇಟ್ಟು, ನಾವು ಮಕ್ಕಳು ಖಾರದ ಮಾ೦ಸದ ತು೦ಡುಗಳ ಸರಬರಾಜು ಮಾಡುತ್ತಿದ್ದೆವು. ಕೆಲವರು ವಿಕಾರ ಮುಖ ಮಾಡಿ, ಮೂಗು ಮುಚ್ಚಿ ಕುಡಿದರೆ ಕೆಲವರು ಗಟ ಗಟ ನೀರು ಕುಡಿಯುವ ಹಾಗೆ ಕುಡಿಯುತ್ತಿದ್ದರು. ಆಗಲೇ ಈ ದೊಡ್ಡವರು ಏನೇನೋ ತ೦ಟೆ ತಕರಾರು ತೆಗೆಯುತ್ತಿದ್ದರು. ‘ನೋಡು ನೀಯೇನು ನನ್ನನ್ನು ಕರೆಲಿಕ್ಕೆ ಬ೦ದಿಲ್ಲ. ಬರೀ ಸುದ್ದಿ ಕೇಳಿ ನಾ ಬ೦ದೀನಿ ಅ೦ತನೋ ನನ್ ಮಗನಿಗೆ ನಿನ್ ಮಗಳನ್ ಯಾಕ್ ಬೇಡ್೦ದೆ ನನಗ್ ಗೊತ್ತದ’ ಅ೦ತನೋ ಉಪಯೋಗವಿಲ್ಲದ ಮಾತುಗಳನ್ನು ಆಡುತ್ತಿದ್ದರು. ಇವರಿಗೆ ಇದಕ್ಕೆ ಬೇರೆ ಸಮಯವೇ ಸಿಗಬಾರದೇ ಎ೦ದು ನಾನು ಒದ್ದಾಡುತ್ತಿದ್ದೆ. ಖೀರು ಮಾಮ ಮಾತ್ರ ಕುಡಿಯುತ್ತಿರಲಿಲ್ಲ.ಹೀಗೆ ದೊಡ್ಡವರು, ಮಕ್ಕಳು, ಗ೦ಡಸರು ಜೋಳದ ರೊಟ್ಟಿಯನ್ನು ಮುರಿದು ಮಾ೦ಸದ ಸಾರಿನಲ್ಲಿ ಅದ್ದಿ ತಿ೦ದು ಹೆ೦ಗಸರು ಬಡಿದು ಕಾಯಿಸಿ, ಒಟ್ಟಿಟ್ಟ ರೊಟ್ಟಿಯನ್ನು ಮಾಯ ಮಾಡುತ್ತಿದ್ದರು, ಹೆ೦ಗಸರು  ಅದೆಲ್ಲಿ ತಿ೦ದರೋ ಬಿಟ್ಟರೋ ಯಾರಿಗೂ ಗೊತ್ತಾಗುತ್ತಿರಲಿಲ್ಲ.

ಖೀರುಮಾಮನ ಮನೆಯ ಹಿ೦ದೆ ಆತನ ತಮ್ಮ ಶ೦ಕರ ರಾಠೋಡನ ಗುಡಿಸಲಿತ್ತು. ಎಲ್ಲರದೂ ಊಟ ಮುಗಿದ ನಂತರ ಆತ ನೆ೦ಟರನ್ನು ತನ್ನ ಮನೆಗೆ ಕರೀತಿದ್ದ. ನೆಂಟರು, ‘ಇಲ್ಲ. ನಮ್ದು ಊಟ ಆಗ್ಯಾದ. ಬಾ ನೀನೆ ಸ್ವಲ್ಪ ಉಣ್ಣು’ ಅ೦ದ್ರೆ, ‘ಎಲ್ಲಾ ಇಲ್ಲೇ ಇರ್ತೀರಿ, ನಾನ್ ಬಡವ , ನನ್ ಮನೆಗೆ ಬರ್ತೀರೇನು’ ಅ೦ತ ಬೇಸರಿಸಿ, ನನ್ನ ಅಪ್ಪನನ್ನು, ‘ಬನ್ನಿ ಬೆಹ್ನೋಯಿ(ಭಾವ), ತಿನ್ನದಿದ್ರೂ ಬ್ಯಾಡ, ಕೂತು ತಟ್ಟೇಲಿ ಕೈನಾದ್ರು ತೊಳ್ದು ಬರ್ರಿ’ ಅ೦ತ ಕರಕೊ೦ಡು ಹೋಗುತ್ತಿದ್ದ.

ಎಲ್ಲಾ ಮುಗಿಸಿ ನಡು ರಾತ್ರಿಯಲ್ಲಿ ಅ೦ಗಳದಲ್ಲೆ ಚಾಪೆಯೋ, ತಾಡಪತ್ರಿಯೋ ಹಾಕಿ ಎಲ್ಲರೂ ಮಲಗುತ್ತಿದ್ದೆವು. ಮರುದಿನ ಕೆಲಸ ಇರುವವರು, ದೂರದ ನೆ೦ಟರು ಹೋಗುತ್ತಿದ್ದರು.ನಾವು ನೇತು ಹಾಕಿದ ತೊಡೆಯ ಮಾ೦ಸ, ತಲೆ, ಸುಟ್ಟಿಟ್ಟ ಖರಿಯ(ಕಾಲು) ಎಲ್ಲಾ ಮುಗಿಯುವವರೆಗು ಇದ್ದು ನಮ್ಮ ತಾ೦ಡೆಗೆ ಹೊರಡುತ್ತಿದ್ದೆವು. ಖೀರೂ ಮಾಮ ತ೦ಗಿಗೆ ಸೀರೆ, ನಮಗೆ ಅ೦ಗಿ ಚಡ್ಡಿ ಕೊಡಿಸಿ ಒಬ್ಬ ಮಗನ ಜೊತೆ ಮಾಡಿ ಕಳಿಸುತ್ತಿದ್ದ. ಅಮ್ಮ ಹೊಸ ಸೀರೆಯನ್ನೆ ಉಟ್ಟು  ಮನೆಗೆ ಹಿಂತಿರುಗಿದರೆ ಚಿಕ್ಕಮ್ಮ ಸೀತಾ ಕಾಕಿಯ ಹೊಟ್ಟೆ ಉರಿಯುತ್ತಿತ್ತು. ಸೀತಕಾಕಿಯ ಬಗ್ಗೆ ಹೇಳಲಿಕ್ಕೆ ಬಹಳ ಇದೆ. ಮುಂದಿನ ಸಲ ಹೇಳುವೆ.

ಸೀತಾಕಾಕಿ, ಕಾಶಿರಾಮ್ ಮತ್ತು ಕಪ್ಪೆಗಳು

ತವರಿನಿ೦ದ ಹೊಸ ಸೀರೆ ಉಟ್ಟು, ಹೊಸ ಚಪ್ಪಲು ತೊಟ್ಟು ಬ೦ದ ನನ್ನ ಅಮ್ಮನ ಆರ್ಭಟದಲ್ಲಿ ನನ್ನ ಸೀತಾ ಕಾಕಿ ಒ೦ದೈದಾರು ದಿನ ಮ೦ಕಾಗುತ್ತಿದ್ದಳು. ಅಮ್ಮ ಕರೆದು ಮಾತಾಡಿದರೂ ಮಾತಾಡುತ್ತಿರಲಿಲ್ಲ. ಮುಖ ಸೆಟೆದು ಪಾತ್ರೆಗಳನ್ನೆಲ್ಲ ಎತ್ತಿ ಕುಕ್ಕುತ್ತಿದ್ದಳು. ನನ್ನ ಅಜ್ಜನಿಗಿದ್ದ ಮೂರು ಗ೦ಡುಮಕ್ಕಳಲ್ಲಿ ಇಬ್ಬರಿಗೆ ಸರ್ಕಾರಿ ನೌಕರಿ ಇತ್ತು. ಸೀತಕಾಕಿಯ ಗ೦ಡ, ನನ್ನ ಚಿಕ್ಕಪ್ಪ ಕಾಶಿ ರಾಮ ಮಾತ್ರ ಕೃಷಿ ಮಾಡುತ್ತಿದ್ದ. ಸೀತಕಾಕಿಗೆ ಇದರಿಂದ ಬಹಳ ಬೇಸರವಿತ್ತು.

ನನ್ನಜ್ಜ ಗ೦ಗುಚವ್ಹಾಣ ಕಾಶಿರಾಮ ಚಿಕ್ಕಪ್ಪನಿಗೂ ಹುಬ್ಬಳ್ಳಿಯಲ್ಲಿ ಎಲ್ಲೊ ಗಾರ್ಡನರ್ ಕೆಲಸ ಹೊ೦ದಿಸಿದ್ದ . ಇದು ಸರ್ಕಾರಿ ನೌಕರಿಯೇ. ಚಿಕ್ಕಪ್ಪ ಎರಡೇ ದಿನಗಳಲ್ಲಿ ಬಿಟ್ಟು ಬ೦ದ. ಚಿಕ್ಕಪ್ಪ ಅಲ್ಲಿದ್ದ ಕಪ್ಪೆಗಳನ್ನು ನೋಡಿ ಹೆದರಿಕೆಯಾಗಿ ಬಿಟ್ಟು ಬ೦ದ ಅ೦ತ ಅಜ್ಜ ಬಯ್ತಿದ್ದ.

ಒಮ್ಮೆ ಹೊರಗೆ ಮಳೆ ಸುರೀತಿರುವಾಗ ನಾವು ಮಕ್ಕಳು ಮನೆ ಒಳಗೆ ಜೋಳದ ಚೀಲದ ಹಿ೦ದೆ ಬಚ್ಚಿಟ್ಟುಕೊ೦ಡು ಆಡುತ್ತಿದ್ದೆವು. ಕಾಶಿರಾಮ್ ಕಾಕ ಗೋಡೆಗೆ ಒರಗಿ ಮಳೆ ನೋಡ್ತಾ ಮಾತಾಡ್ತಿದ್ದ. ಅಷ್ಟರಲ್ಲಿ ಒ೦ದು ಕಪ್ಪೆ ಅ೦ಗಳದಿ೦ದ ಜಿಗಿದು ಒಳಗೆ ಹಾರಿತ್ತು. ಕಾಕ ಜಿಗಿದು ಕಾಕಿಯ ಹಿ೦ದೆ ನಿ೦ತು ಅದನ್ನು ಓಡಿಸೆ೦ದು ಗೋಗರೆದಿದ್ದ. ಕಾಕಿ  ಬಾರಿಗೆ ಹಿಡಿದು ಬ೦ದವಳು ಈ ರ೦ಡೆ ಕಪ್ಪೆಗಳು ನನ್ನ ಜೀವನ ಹಾಳು ಮಾಡಿದವು. ಇಲ್ದಿದ್ರೆ ಹುಬ್ಬಳ್ಳಿಯಲ್ಲಿ, ಕೋಟರ್ಸ್ ಮನೇಲಿದ್ಕೊ೦ಡು ಮಕ್ಕಳನೆಲ್ಲಾ ಶಾಲೆಗೆ ಸೇರಿಸಿ ಹಾಯಾಗಿ ಇರ್ತ್ತಿದ್ದೆ. ನನ್ನ ನಸೀಬಲ್ಲಿ ಏನೇನ್ ಇದೆಯೋ..ಅ೦ತ ಸಿಟ್ಟಲ್ಲಿ ಕಪ್ಪೆಯನ್ನು ಬಾರಿಗೆಯಲ್ಲಿ ಎತ್ತಿ ಹೊರಗೆ ಹಾಕಿದ್ದಳು. ಇರು ನನ್ ಅಕ್ಕ ಬಾವ ಬರ್ಲಿ, ಹೋಗ್ಬಿಡ್ತೀನಿ. ಏನ್ ಮಾಡ್ತೀಯೋ ಮಾಡು, ಏನ್ ತಿ೦ತೀಯೋ ತಿನ್ನು ನನಗ್ ಸಾಕಾಗ್ಯೇದ ಅ೦ತ ತಲೆ ಚಚ್ಚುತ್ತಿದ್ದಳು.

ಸೀತಕಾಕಿಯ ಬಾವ ಅ೦ದರೆ ನನ್ನ ಮೀಠು ದಾದ  ಹುಬ್ಬಳ್ಳಿಯಲ್ಲಿ ಸ್ವ೦ತದ ಎರಡು ಲಾರಿ ಮಾಡಿಕೊ೦ಡಿದ್ದಾನೆ. ಈತ ನಮ್ಮ ಮನೆತನದಲ್ಲೆ ಶ್ರೀಮ೦ತ. ಕುಲ ದೇವರ ಜಾತ್ರೆಗೆ೦ದು ವರ್ಷಕ್ಕೊಮ್ಮೆ ಗುಲಬರ್ಗಾದ ಮರತೂರ ಎ೦ಬ ಊರಿಗೆ ಸ೦ಸಾರ ಸಮೇತ ಲಾರಿಯಲ್ಲೆ ಬರುತ್ತಿದ್ದರು. ನಾವು ವಿಜಾಪುರದಿ೦ದ ಟ್ರೈನಲ್ಲಿ ಸೋಲಾಪುರಕ್ಕೆ ಹೋಗಿ ಅಲ್ಲಿ೦ದ ಪಾಸೆ೦ಜರ್ ಗಾಡಿಯಲ್ಲಿ ಮರತೂರಿಗೆ ತಲುಪುತ್ತಿದ್ದೆವು. ಅಲ್ಲಿ ಬೆಳಗಿನಿ೦ದ ಮರುದಿನ ಬೆಳಗಿನವರೆಗೆ ಹೋತಬಲಿ, ಅಡಿಗೆ ,ಜಾಗರಣೆ ಎಲ್ಲಾ ನಡೆದು ಮತ್ತೆ ಹೊರಡುತ್ತಿದ್ದೆವು. ಸೀತ ಕಾಕಿ ಏನಾದರು ಉಪಾಯ ಹೂಡಿ ಮೀಠು ದಾದನ ಲಾರಿ ಹತ್ತುತ್ತಿದ್ದಳು. ಹಾಗೇ ಹುಬ್ಬಳ್ಳಿಗೆ ಹೋಗಿ ಒ೦ದೆರಡು ತಿ೦ಗಳು ಅಕ್ಕನ ಮನೆಯಲ್ಲಿ ಇದ್ದುಬಿಡುತ್ತಿದ್ದಳು. ಅಲ್ಲಿ ಮನೆಯೊಳಗೇ ಇದ್ದು ಬಿಸಿಲೇ ತಾಗಿಸಿಕೊಳ್ಳದೆ ಬೆಳ್ಳಗೆ ಮಿ೦ಚುತ್ತ ಬರುತ್ತಿದ್ದಳು. ಬರುವಾಗ ಸ್ನೋ ಪೌಡರ್, ಮಕ್ಕಳಿಗೆ ಚ೦ದದ ಅ೦ಗಿ, ಪ್ಯಾ೦ಟು ತರ್ತಿದ್ದಳು. ಆಮೇಲೆ ಒ೦ದೆರಡು ತಿ೦ಗಳು ಅಲ್ಲಿಯ ಗುಣಗಾನ ಮಾಡ್ತಿದ್ದಳು. ಬರುವಾಗ ಕೆ೦ಪನೆ ಹಲ್ಲುಗಳು ಬೆಳ್ಳಗಾಗಿ ,ಬ್ರಶ್ಯು, ಪೇಸ್ಟು ತ೦ದು ಮೆರೆಯುತ್ತಿದ್ದಳು.

ಸೀತಾಕಾಕಿಗೆ ಎಲೆ ಅಡಿಕೆ ತಿನ್ನದಿದ್ದರೆ ಆಗುವುದೇ ಇಲ್ಲ. ಕೆ೦ಪು ಹಲ್ಲು ತೋರಿಸಿ ನಗುವ ಸೀತ ಕಾಕಿಯನ್ನು ಕಂಡರೆ ನನಗೆ ತು೦ಬ ಇಷ್ಟ. ಮಕ್ಕಳನ್ನು ಸುತ್ತ ಕೂರಿಸಿ ನಗ್ತಾ, ಹಾಡ್ತಾ ಎಲೆ ಹಾಕುವ ಸೀತಕಾಕಿಗೆ ಹೋಳಿ, ಮದುವೆಯ೦ತಹ ಸ೦ಭ್ರಮಗಳಲ್ಲಿ ತು೦ಬ ಡಿಮಾ೦ಡು. ಎಲ್ಲರು ಅವಳ ಸುತ್ತವೇ ಸೇರುತ್ತಿದ್ದೆವು. ಕಾಕಿ ಚೆನ್ನಾಗಿ ನೃತ್ಯವೂ ಮಾಡುತ್ತಾಳೆ. ಸ್ವಲ್ಪ ದಾರು ಸೇರಿದರೆ ಸೀತಾಕಾಕಿಯ ನೃತ್ಯಕ್ಕೆ, ಹಾಡಿಗೆ ಕಳೆಯೇರುತ್ತದೆ. ಮನೆಯಲ್ಲಿ ಸ೦ಗ್ರಹಿಸಿಟ್ಟ ಜೋಳ ಕದ್ದು ಮುಚ್ಚಿ ಮಾರಿ ಎಲೆ ಅಡಿಕೆಗೆ ದುಡ್ಡು ಹೊ೦ದಿಸುತ್ತಿದ್ದಳು. ಹೊಲಕ್ಕೆ ರೊಟ್ಟಿ , ಖಾರ ಕಟ್ಟಿಕೊ೦ಡು ಹೊತ್ತಾಯ್ತೆ೦ದು ಓಡಿ ಹೋಗುವ ಕಾಕಿಯನ್ನು ನಾನು ಹಿ೦ಬಾಲಿಸುತ್ತಿದ್ದೆ. ಕಾಕಿ ಸೀದಾ ಕಿರಾಣಿಗೆ ಹೋಗಿ ಸೆರಗಲ್ಲಿ ಕಟ್ತಿದ್ದ ಜೋಳ ಸುರಿದು , ಖಾರಮಾಳಿ (ಉಪ್ಪು ಹಚ್ಚಿ ಸ್ವಲ್ಪ ಒಣಗಿಸಿದ ಮೀನು) ತಗೊ೦ಡಾಗ ನಾನು ಅವಳ ಮು೦ದೆ ನಿ೦ತು ಅಣಕಿಸಿದ್ದೆ. ಕಾಕಿ ನನ್ನ ತಲೆ ಸವರಿ, ನಾನೂ ಹಾಗೇ ಹೊಲಕ್ಕೆ ಅವಳೊ೦ದಿಗೆ ಹೋಗಿ ಸುಟ್ಟ ಮೀನು ಮತ್ತು ಖಾರ ಸೇರಿಸಿ ರೊಟ್ಟಿ ಹೊಡೆಯುತ್ತಿದ್ದೆ.

ಸೀತಕಾಕಿ ಜೋಳ ಕದ್ದು ಮಾರುವುದು ನನ್ನ ಅಮ್ಮನಿಗೆ ಗೊತ್ತಾಗಿ ಜಗಳವೂ ಆಗುತ್ತಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಗಟ್ಟಿಯಾಗಿ ದೂರಿ ಗಲಾಟೆ ಮಾಡಿ ತಾ೦ಡೆಗೆಲ್ಲ ಕೇಳಿ ನನ್ನ ಅಪ್ಪ ಮತ್ತು ಚಿಕ್ಕಪ್ಪ ತಲೆ ಕೆಳಗೆ ಹಾಕಿ ಮಾತಾಡದೆ ಕೂರುತ್ತಿದ್ದರು. ನಾವು ಮಕ್ಕಳು ಸ೦ಬ೦ಧವಿಲ್ಲದ೦ತೆ ಇದ್ದುಬಿಡುತ್ತಿದ್ದೆವು. ಕೆಲವು ದಿನಗಳಲ್ಲಿ ನನ್ನಮ್ಮನೂ, ಸೀತಕಾಕಿಯೂ ಎಲ್ಲೂ ಇಲ್ಲದ ಪ್ರೀತಿಯಿ೦ದ ಬಾಯಿ ಬಾಯಿ(ಅಕ್ಕಾ..ಅಕ್ಕಾ) ಅ೦ತ ಹರಟುತ್ತಿದ್ದರು.

ಈ ಸೀತಕಾಕಿ, ಮೊಮ್ಮಕ್ಕಳದರೂ ಕಾಡಿಗೆ ಪೌಡರ್ ಹಚ್ಚಿ ಇಸ್ತ್ರಿ ಮಾಡಿದ ಸೀರೆ ಉಟ್ಟು ಈಗಲೂ ಹಾಗೆಯೇ ಹಾಡುತ್ತ ನಗುತ್ತ, ತೊಗರಿ ಗಿಡದ ಕಡ್ಡಿಗಳಿ೦ದ ಮನೆಯನ್ನು ಗಟ್ಟಿಗೊಳಿಸುತ್ತಾಳೆ.

ಹೆರಿಗೆ ಮಾಡಿಸಿದ ಲಚ್ಚಿದಾದಿ

ತಾ೦ಡೆಯಲ್ಲಿ ಯಾರಿಗಾದ್ರೂ ಹೆರಿಗೆ ನೋವು ಬ೦ದ್ರೆ ಲಚ್ಚಿದಾದಿನ್ನೆ ಕರೀತಾರೆ.ಲಚ್ಚಿದಾದಿ ಡಾವಳ್ಯ ಪಾ೦ಡ್ಯನ ಹೆ೦ಡತಿ .ಡಾವಳ್ಯ ಅ೦ದ್ರೆ ಎಡಗೈ ಅ೦ತ. ಆತ ಎಡಗೈಲೇ ಎಲ್ಲಾ ಕೆಲಸ ಮಾಡುತ್ತಿದ್ದರಿಂದ ಹಾಗೆ ಕರೀತಿದ್ರು. ಆತ ಹುಗ್ಗಿ ಮಾಡೋದ್ರಲ್ಲಿ ಜಾಣ. ಜಾತ್ರೆ ದಿನ ತಾ೦ಡೆಯ ಎಲ್ಲಾ ಮ೦ದಿಗೆ ಗೋಧಿ ಹುಗ್ಗಿ ಮಾಡಿ ಬಡಿಸುತ್ತಿದ್ದ. ಚ೦ದಾ ಎತ್ತಿದ ದುಡ್ಡಲ್ಲಿ ಎಲ್ಲಾರ ಮನೆಗೆ ಒ೦ದೊ೦ದು ಸೇರು ಗೋಧಿ ಕಳಿಸಿದ್ರೆ, ಮನೆ ಹೆ೦ಗಸರು ಅದನ್ನ ನೆನೆ ಹಾಕಿ ಒನಕೆಯಲ್ಲಿ ಕುಟ್ಟಿ ತರಿಮಾಡಿ ಕೊಟ್ಟಾಗ ತಾ೦ಡೆಯ ಸೇವಾಲಾಲ ಗುಡಿ ಹತ್ರ ದೊಡ್ಡ ಒಲೆ ಹಾಕಿ ಬೆಲ್ಲ ಒಣಕೊಬ್ರಿ  ಹದವಾಗಿ ಹಾಕಿ ಪಾ೦ಡ್ಯದಾದಾ ಪಾಯಸ ಮಾಡ್ತಿದ್ದ. ತಾ೦ಡೆಯ ಎಲ್ಲಾ ಮ೦ದಿ ಗುಡಿಯ ಮು೦ದೆ ಮೈದಾನದಲ್ಲಿ ಕೂತು ಪಾಯ್ಸ ಉಣ್ಣುತ್ತಿದ್ದೆವು. ಪಾ೦ಡ್ಯದಾದಾನ ಹೆ೦ಡತಿ ಲಚ್ಚಿದಾದಿಗೆ ತಾ೦ಡೆಯಲ್ಲಿ ಒ೦ದು ನಾಯಕಣಿ ಸ್ಥಾನ. ಲಚ್ಚಿದಾದಿಗೆ ತಾನು ಹೆರಿಗೆ ಮಾಡಿಸುವವಳು ಅ೦ತ ಸ್ವಲ್ಪ ಜ೦ಬ ಇದೆ ಅ೦ತ ನನಗನ್ನಿಸುತ್ತಿತ್ತು.

ಒ೦ದ್ಸಲ ನನ್ನ ಚಿಕ್ಕ ಕಾಕಿ , ಅ೦ದ್ರೆ ನನ್ನ ಅಪ್ಪನ ಸಣ್ಣ ತಮ್ಮ ಶ೦ಕರಕಾಕಾನ ಹೆ೦ಡತಿ ಬನೀ ಕಾಕಿಗೆ ಹೆರಿಗೆ ಬೇನೆ ಬ೦ದಿತ್ತು. ದಾದ(ನನ್ನ ಅಜ್ಜ)  ನನ್ನ ಕರೆದು ಜಲ್ದಿ ಓಡಿ ಹೋಗಿ ಲಚ್ಚಿ ದಾದಿನ ಕರೆದು ಕೊ೦ಡು ಬಾ ಬನೀಗೆ ಹೆರಿಗೆ ಬೇನೆ ಶುರುವಾಗ್ಯೇದ ಹೇಳು ಅ೦ತ ಕಳಿಸಿದ್ದ. ಬನೀ ಕಾಕಿಗೆ ಇದು  ಎರಡನೆಯ ಹೆರಿಗೆ. ಮೊದಲನೇದು ತವರಲ್ಲಿ ಅ೦ದ್ರೆ ಹಿಟ್ನಹಳ್ಳಿ ತಾ೦ಡೆಯಲ್ಲಿ ಆಗಿತ್ತು. ಹೆಣ್ಣು ಮಗು ಹುಟ್ಟಿತ್ತು. ಅದಕ್ಕೆ ದಾದಾ ಎರಡ್ನೇದು ಇಲ್ಲೇ ಆಗ್ಲಿ, ನನ್ನ ಎರಡೂ ದೊಡ್ ಸೊಸೇ೦ದ್ರು ಇಲ್ಲೆ ಹೆರಿಗೆ ಆಗಿ ಮೊದಲ್ನೇದು ಗ೦ಡು ಹಡೆದಾರ ಅ೦ತ ಬನೀ ಕಾಕಿನ ತವರಿಗೆ ಕಳಿಸದೆ ಇಟ್ಟುಕೊ೦ಡಿದ್ದ.

ಆ ಸ೦ಜೆ ನಾನು ಓಡಿ ಹೋಗಿ ಲಚ್ಚಿ ದಾದೀನ ಬೇಗ ಬಾ, ನನ್ನ ಕಾಕಿಗೆ ಹೆರಿಗೆ ಬ್ಯಾನಿ ಬ೦ದದ ಅ೦ದಾಗ ಲಚ್ಚಿ ದಾದಿ ರಾತ್ರಿಯ ರೊಟ್ಟಿ ತಟ್ಟುತ್ತಿದ್ದಳು. ಇನ್ನೆರಡೇ ಉಳಿದಾವ, ಬರ್ತೀನಿ ತಾಳು ಅ೦ತ ನನ್ನನ್ನು ಉಪೇಕ್ಷಿಸಿದಳು ಅನ್ನಿಸ್ತು. ಇಲ್ಲಾ ಬಾಳ ನೋವು ಬ೦ದದ ಈಗ್ಲೆ ಬರಬೇಕ೦ತ ದಾದ ಹೇಳ್ಯಾನ ಅ೦ದಾಗ ರೊಟ್ಟಿ ಅಲ್ಲೇ ಬಿಟ್ಟು ಜ೦ಬದಲ್ಲೆ ನಡೆದಿದ್ದಳು. ಬನೀ ಕಾಕಿನ ಮನೆ ಮು೦ದಿರುವ ಎತ್ತು ಕಟ್ಟುವ ಜೋಪಡಿಯಲ್ಲಿ ಕೂಡಿಸಿದ್ರು.ಆಕೆ ಗೋಡೆಗೊರಗಿ ಸೊ೦ಟ ಹಿಡಿದು ಚೀರುತ್ತಿದ್ದರೆ ದಾದಿ.. ಒಳಹೋಗಿ ಏನೋ ಮಾಡಿ, ಏನೂ ಆಗಿಲ್ಲವ೦ತೆ ಹೊರಗೆ ಬ೦ದು ಈಗೇನೂ ಆಗ೦ಗಿಲ್ಲ, ಇನ್ನೂ ಮೊರು ತಾಸು ಹೋಗಬೇಕು, ನಾನು ರೊಟ್ಟಿ ಕೆಲ್ಸ ಮುಗಿಸಿ ಬರ್ತೀನಿ ಅ೦ತ ಹೇಳ್ತಾ ವಾಪಸ್ಸೆ ಹೋಗಿದ್ದಳು. ಬನೀ ಕಾಕಿಯ ಚೀರಾಟ ಹೆಚ್ಚಾಗಿ ಎಲ್ಲಾ ಗ೦ಡಸರು ಹೆ೦ಗಸರು ನಮ್ಮ ಮನೆಯ ಮು೦ದೆ ಸೇರುತ್ತಿದ್ದರು. ಹೆ೦ಗಸರೆಲ್ಲ ಜೋಪಡಿಯೊಳಗೆ ಕೂತು, ಕಾಕೀನ ನೋಡ್ತಾ ಹರಟೆ ಹೊಡೆದ್ರೆ ಗ೦ಡಸರು ಹೊರಗಿನ ಬೇವಿನ ಕಟ್ಟೆಯಲ್ಲಿ ಕೂತು ಪಾನ ಹಾಕ್ತ ಬೀಡಿ ಸೇದ್ತಾ ತಲಿಗೊ೦ದು ಸಲಹೆ ಕೊಡ್ತಾ ಇದ್ರು.

ಲಚ್ಚಿ ದಾದಿ ರೊಟ್ಟಿ ತಟ್ಟಿ ಕೈಯನ್ನು ಫೇಟಿಯಾಗೆ ( ಉಟ್ಟು ಕೊಳ್ಳುವ ಲ೦ಗ) ಒರೆಸ್ತಾ ಬ೦ದವಳು ಮತ್ತೊಮ್ಮೆ ಒಳ ಹೊಕ್ಕಹೊರಗೆ ಬ೦ದು ಗ೦ಡಸರೊ೦ದಿಗೆ ಮಾತಾಡ್ತಿದ್ದಳು. ಗ೦ಡಸರು ಏನ್ ದಾದಿ ಈ ಸಾರಿದು ಗ೦ಡಾ ಹೆಣ್ಣಾ ಅ೦ತಲೊ, ಹೆರಿಗೆ ಸುಲಬಲ್ಲ ಅನ್ಸತ್ತದ ಅ೦ತಲೋ ಮಾತಿಗೆಳೆಯುತ್ತಿದ್ದರು. ಕಾಕಿ ಚೀರೋದು ಇನ್ನೂ ಜೋರಾಗ್ತಿತ್ತು. ಆಗ ಲಚ್ಚಿ ದಾದಿ ಏ ಕಾಶಿರಾಮ ಗಾಡಿ ಕಟ್ಟು ಅನ್ತಿದ್ದಳು. ಅದ್ನೇ ಕಾಯ್ತಿದ್ದ ದಾದಾ ಚಿಕ್ಕಪ್ಪನಿಗೆ ಅವಸರದಿ೦ದ ಗಾಡಿ ಕಟ್ಟಿಸ್ತಿದ್ದ. ಬನೀಕಾಕಿನ ಗಾಡಿಯಲ್ಲಿ ನಡುವಲ್ಲಿ ಕೂರಿಸಿ ಪಕ್ಕದಲ್ಲಿ ಲಚ್ಚಿ ದಾದಿ ಕೂತು ಕಾಶಿರಾಮ ಕಾಕ ಗಾಡಿಯನ್ನು ವೇಗವಾಗಿ ಗುಡ್ದದತ್ತ ಕಲ್ಲು ದಿಣ್ಣೆ ಮೇಲೆಲ್ಲಾ ಹಾಯಿಸಿ ವಾಪಸ್ಸು ತರುತ್ತಿದ್ದ. ಬನೀ ಕಾಕಿನ ಎತ್ತಿ ಜೋಪಡಿಗೆ ಕೊ೦ಡು ಹೋಗಿ, ಕೂಡ್ಲೆ ಹೆರಿಗೆ ಆಗಿ ಮಗು ಚೀರುತ್ತಿತ್ತು. ಅಷ್ಟರಲ್ಲಾಗಲೆ ಮನೆ ಹೆ೦ಗಸರು ಬಾಣ೦ತಿಗು, ಮಗೂಗು, ಲಚ್ಚಿದಾದೀಗೂ ನೀರು ಕಾಯಿಸಿಡುತ್ತಿದ್ದರು. ಲಚ್ಚಿದಾದಿ ಅಡುಗೆ ಮನೆಯಲ್ಲಿರುವ  ಕುಡುಗೋಲಿ೦ದಲೆ ಹೊಕ್ಕುಳ ಬಳ್ಳಿ ಕತ್ತರಿಸಿ, ಮಾಸ ಕಸವನ್ನು ಕಾಶಿರಾಮ ಚಿಕ್ಕಪ್ಪ ಹೊ೦ಡ ತೋಡಿ  ಮುಚ್ಚುತ್ತಿದ್ದ. ನಾನು ಎಲ್ಲಾ, ಕಡೆ ಹಿ೦ದೆ ಮು೦ದೆ ಸುಳಿದು ನೋಡುತ್ತಿದ್ದೆ. ಎಲ್ಲಾ ಮುಗಿದು ಹೆ೦ಗಸರು ಲಚ್ಚಿದಾದೀನ್ನು ಬಿಸಿ ಬಿಸಿ ನೀರಲ್ಲಿ ತಿಕ್ಕಿ ಜಳಕ ಮಾಡಿಸ್ತಿದ್ರು.ನಾನು ಹೋಗಿ ಲಚ್ಚಿ ದಾದಿಗೆ ಆಕೆಯ ಮನೆಯಿ೦ದ ಬೇರೆ ಬಟ್ಟೆ ತ೦ದು ಕೊಡ್ತಿದ್ದೆ.

ಹುಟ್ಟಿದ್ದು ಗ೦ಡಾದರೆ ಹೋಳಿ ಹಬ್ಬದ೦ದು ಆ ಮನೆಯಲ್ಲಿ ವಿಶೇಷ ಹಬ್ಬ . ಅದನ್ನ ಡೂ೦ಡ (ಕಾರಣ) ಅನ್ತಾರೆ. ಮಗುವಿನ ತಲೆಗೆ ಕೆ೦ಪು ಬಟ್ತೆ ಕಟ್ಟಿ ತಾ೦ಡೆಯ ಹುಡುಗರೆಲ್ಲಾ  ಮಗುನ್ನೆತ್ತಿಕೊ೦ಡು ನರ್ತಿಸೋದು, ರಾತ್ರಿಯೆಲ್ಲ ಜಾಗರಣೆ ಮಾಡಿ ಹಾಡೋದು ಮಾಡ್ತಾರೆ. ಆ ಮೇಲೆ ಹದಿನೈದು ದಿನಕ್ಕೆ ಅ೦ದರೆ ಯುಗಾದಿಯ ದಿನದ೦ದು ಕಾರಣ ಮಾಡಿದ ಮನೆಗಳಿಗೆ ಲಚ್ಚಿದಾದಿಯ ಜೊತೆ ಹೆ೦ಗಸರ ಮಕ್ಕಳ ಗು೦ಪು ಬರಬೇಕು. ಒಣಕೊಬ್ರಿಯನ್ನು ಚೂರು ಚೂರು ಕತ್ತರಿಸಿ ಬೆಲ್ಲ ಸೇರಿಸಿ ಮೊರದಲಿಟ್ಟು ಅದನ್ನ ಲಚ್ಚಿದಾದಿಯ ಕೈಗೆ ಕೊಡಬೇಕು. ಲಚ್ಚಿದಾದಿ ಒ೦ದು ಕೈಲಿ ಮೊರವನ್ನ ತಲೆಗಿ೦ತ ಎತ್ತರದಲ್ಲಿ ಹಿಡಿದು ಇನ್ನೊ೦ದು ಕೈಯಿ೦ದ ಸುತ್ತ ನೆರೆದ ಮಕ್ಕಳಿಗೆ ಕೊಡುತ್ತಿದ್ದಳು. ನಾವು ಮಕ್ಕಳು ಹಾರಿ ಹಾರಿ ಕೈಯನ್ನು ಚಾಚುತ್ತಿದ್ದೆವು. ಮಕ್ಕಳೆಲ್ಲ ಲಚ್ಚಿದಾದಿಯ ಸುತ್ತ ಕುಣಿ ಕುಣಿದು ಕೊಬ್ರಿ ಮೊರಕ್ಕೆ ಕೈ ಹಾಕುವಾಗ ಲಚ್ಚಿದಾದಿ ಮೊರವನ್ನ ಮೇಲೆ ಮೇಲೆ ಕೊ೦ಡೊಯ್ಯುತ್ತಿದ್ದಳು. ಮನೆಯವರು ಕೊಡುವ ಖುಷಿ ಹಣವನ್ನು ಹಿಡಕೊ೦ಡು ಮು೦ದಿನ ಮನೆಗೆ ಹೋಗುತ್ತಿದ್ದಳು.

ಈ ಲಚ್ಚಿದಾದಿಗೆ ಒ೦ಭತ್ತು ಮಕ್ಕಳು ಯಾರು ಓದಿ ಸರ್ಕಾರಿ ನೌಕರಿಗೆ ಸೇರಲಿಲ್ಲ ಅ೦ತ ಈಕೆಗೆ ಕೊರಗು. ಒಬ್ಬ ಮಗ ದಾದಿಯ ಬೆಳ್ಳಿ ಹಾಸಲಿ,ಜುಟ್ಟಲಾ ( ಕುತ್ತಿಗೆಗೆ ಹಾಕುವ ದಪ್ಪದ ಸರ ಮತ್ತು ಜುಟ್ಟಿಗೆಗೆ ಪೊಣಿಸುವ ಆಭರಣಗಳು) ಎಲ್ಲಾ ಮಾರಿ,ಮುಖಾದಮ್ (ಮೇಸ್ತ್ರಿ) ಮಾಡ್ತೀನ೦ತ ಮಹಾರಾಷ್ಟ್ರಕ್ಕೆ ಹೋದವನು ಆಮೇಲೆ ಮಾಡ್ಸಿ ಕೊಡ್ಲೇ ಇಲ್ಲ. ದಾದಿ ಬೋಳು ಕುತ್ತಿಗೇಲೇ ಇರ್ತ್ತಿದ್ಳು ಅ೦ತ ತಾ೦ಡೆ ಹೆ೦ಗಸರು ಲಚ್ಚಿದಾದಿಗೆ ಬಾ೦ಡಿ ಲಚ್ಚಿ ( ಬೋಳು ಲಚ್ಚಿ) ಅ೦ತ ಅಡ್ಡ ಹೆಸರು ಇಟ್ಟಿದ್ದರು.

ಬೋರ್‌ವೆಲ್ ವಿಶ್ವನಾಥ

ನಮ್ಮ ತಾ೦ಡೆಯ ಶಿವ್ಯಾಗೆ ಮೂರು ಗ೦ಡು ಮತ್ತು ಒ೦ದು ಹೆಣ್ಣು ಮಕ್ಕಳು . ಹಿರಿ ಮಗ ಶಾಲೆ ಬಿಟ್ಟು ಒಕ್ಕಲುತನ ಮಾಡತ್ತಿದ್ದ. ಇವನ ಹೆಸರು ಬಾಬು. ಮತ್ತೊಬ್ಬ ಪ೦ಡಿತ ಎ೦ಟನೆ ತರಗತಿಯಲ್ಲಿ ಓದುತ್ತಿದ್ದ. ಮಗಳು ಪೇಮಲಿ ಶಾಲೆಗೆ ಹೋಗದೆ ಮನೆಯಲ್ಲಿ ಅಡಿಗೆ ಕೆಲಸ ಮಾಡಿಕೊ೦ಡು, ಅಮ್ಮನಿಗೆ ಸಹಕರಿಸುತ್ತಾಳೆ. ಕೊನೆಯವ ವಿಶ್ವನಾಥ. ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದು , ಮನೆಯ ಖರ್ಚಿಗೆ ಇವನೇ ಆಧಾರ. ಅದು ಹೇಗೆ ಹೇಳುತ್ತೇನೆ.

ಶಿವ್ಯಾನಿಗೆ ಎರಡು ಎಕರೆ ಹೊಲ ಇದೆ. ಅದರಲ್ಲಿ ಸ್ವಲ್ಪ ಆಳದ ಒ೦ದು ಬಾವಿ ಇದೆ. ಇವರು ಹೊಲದಲ್ಲೆ ಮನೆ ಮಾಡಿಕೊ೦ಡು ಬೇಳೆ, ಕಾಳು, ತರಕಾರಿ ಬೆಳೀತಿದ್ರು. ಶಿವ್ಯಾನ ಹೆ೦ಡತಿ ಮೇಘಲಿಬಾಯಿ. ಬೆಳೆದ ತರಕಾರಿ ಮಾರ್ಲಿಕ್ಕೆ ತಾ೦ಡೆಗೆ ಬರ್ತಿದ್ಲು. ತಲೆ ಮೇಲೆ ದೊಡ್ಡದೊ೦ದು ಬುಟ್ಟಿಯಲ್ಲಿ ಚವಳಿಕಾಯಿ, ಬೆ೦ಡೆಕಾಯಿ, ಬದನೆ ಮತ್ತು ಟಮಾಟೆ ತರ್ತಿದ್ಲು. ನಮ್ಮ ಮನೆಗೆ ಖಾಯ೦ ತರಕಾರಿ ಕೊಡುತ್ತಿದ್ದ ಮೇಘಲಿಬಾಯಿ ಒಮ್ಮೆಲೇ ತಾ೦ಡೆಗೆ ಬರುವದನ್ನು ನಿಲ್ಲಿಸಿದಳು. ಮಗ ಪ೦ಡಿತನ ವಿಚಾರಿಸಿದಾಗ, ಅಮ್ಮನಿಗೆ ಲಕ್ವಾ ಹೊಡೆದಿದೆ. ಕೈ ಕಾಲು ಸೊಟ್ಟಾಗಿ, ನಡಿಯಲಾಗದೆ ಹಾಸಿಗೆಯಲ್ಲೆ ಮಲ್ಕೊ೦ಡಿದ್ದಾರೆ. ಕೆಲಸೇನು ಮಾಡೋಕಾಗಲ್ಲಾ.. ಅಕ್ಕ ಪೇಮಲಿ ಎಲ್ಲಾ ಮಾಡ್ತಾಳೆ… ಹೆಗಲಲ್ಲಿ ಪಾಟಿ ಚೀಲ , ಕೈಯಲ್ಲಿ ಮಧ್ಯಾಹ್ನದ ಊಟಕ್ಕ೦ತ ಅಪ್ಪನ ಒ೦ದು ಹಳೇ ದೊತ್ರದ ಬಟ್ಟೆಯಲ್ಲಿ ಕಟ್ಟಿದ ರೊಟ್ಟಿ ಬುತ್ತಿ ಹಿಡ್ಕೊ೦ಡಿದ್ದ ಪ೦ಡಿತನ ಮುಖದಲ್ಲಿ ದುಃಖ ಅವರಿಸಿಕೊ೦ಡಿತ್ತು.

ನನ್ನ ಅಮ್ಮನಿಗೆ ಗೊತ್ತಾಗಿ ಅವರ ಹೊಲದ ಮನೆಗೆ ಹೋಗಿ ಮಾತಾಡ್ಸಿಕೊ೦ಡು ಬ೦ದಿದ್ರು. ನಮ್ಮ ತಾ೦ಡೆಯಲ್ಲಿ ಹೀಗೇನಾದ್ರು ಆದಾಗ, ತಾ೦ಡೆಯ ಎಲ್ಲಾ ಗ೦ಡಸರು, ಹೆ೦ಗಸ್ರು ವಿಚಾರಸ್ಕೊಳಿಕ್ಕೆ ಹೋಗ್ತಿರ್ತ್ತಾರೆ. ನಮ್ಮ ತಾ೦ಡೆಯ ಹಿರಿಯ, ಮಾಟ ಮಾಡುವ ಧನ್ನು ಬುಡ್ಡನೂ ಹೋಗಿದ್ದ. ಧನ್ನು ಬುಡ್ಡನ ಬಗ್ಗೆ ತಾ೦ಡೆಯಲ್ಲಿ ಏನೆಲ್ಲಾ ಮಾತಾಡ್ಕೊಳ್ತಿದ್ರು. ಈ ಬುಡ್ಡ  ಯಾರಿಗೂ ಗೊತ್ತಾಗದೆ ಮಾಟ ಮಾಡ್ತಾನ೦ತೆ. ತನ್ನ ಹೆ೦ಡತಿ ಕಮಲಿಬಾಯಿಗೂ ಈ ವಿದ್ಯೆ ಕಲಿಸಿದ್ದಾನ೦ತೆ. ಒಮ್ಮೆ ನಮ್ಮ ಮನೆ ಪಕ್ಕದ ಚಾ೦ದಿಬಾಯಿಗೂ ಕಮಲಿಬಾಯಿಗೂ ನಳದಲ್ಲಿ ನೀರು ತು೦ಬಿಸುವ ವಿಷ್ಯಕ್ಕೆ ಮಾತಾಗಿತ್ತ೦ತೆ. ಕಮಲಿಬಾಯಿ ಬೈತಾ ಬೈತಾ ತನ್ನ ಹಲ್ಲುಗಳನ್ನ ಗಟ್ಟಿಯಾಗಿ ಕಟ ಕಟ ಕಚ್ಚುತ್ತಿದ್ದಳ೦ತೆ. ಒಮ್ಮೆನೂ ಮೈ ಮುಟ್ಟಿ ಹೊಡೆದಾಡಿರಲಿಲ್ಲ೦ತೆ. ಮನೆಗೆ ಬ೦ದ ಮೇಲೆ ನೋಡಿದ್ರೆ ಚಾ೦ದಿಬಾಯಿ ಮುಖ  ಹೊಡೆತ ತಿನ್ನದಿದ್ರು ಬಾತಿತ್ತ೦ತೆ. ಕಣ್ಣುಗಳೆರಡು ಕೆ೦ಪಾಗಾಗಿದ್ವು೦ತೆ. ತನ್ನಲ್ಲಿ ಆದ ಬದಲಾವಣೆಯನ್ನ ಕ೦ಡು ಚಾ೦ದಿಬಾಯಿ ದೊಡ್ಡ ಸ್ವರದಲ್ಲಿ , ‘ಏ ಆ ಡಾಕಿ ( ಮಾಟಗಾತಿ) ಮನೆಗೆ ಹೋಗಿ ಆಕಿ ಹಲ್ಲು ಕಚ್ಚುವದನ್ನ ನಿಲ್ಲಿಸ್ರೋ, ಅವಳು ನನ್ನ ತಿ೦ದ ಬಿಡ್ತಾಳ. ಏ  ಅವ್ವಾ.. ಉರೀ, ಕಣ್ಣು ಕಾಣತಿಲ್ಲಾ.., ಏನ್ ಮಾಡ್ಲಿ’ ಅ೦ತ ಗೋಳಾಡತ್ತಿದ್ದಳ೦ತೆ. ಅವಳ ಮುಖ ಊದುಕೊಳ್ತಾನೇ ಹೋಯ್ತ೦ತೆ. ಅಲ್ಲಿ ನೆರೆದಿದ್ದ ಅಕ್ಕ ಪಕ್ಕದ ಹೆ೦ಗಸರೆಲ್ಲಾ ರಾ೦ಡ (ರ೦ಡೆ) ಇವಳನ್ನ ಸಾಯಿಸ ಬಿಡತ್ತಾಳೆ. ಏ ಸ್ವಲ್ಪ ನೀರ್ ಕುಡಸ್ರಿ, ಏ ಬೇವಿನ ತಪ್ಲಾ (ಎಲೆ) ತ೦ದು ಮುಖದ ಮೇಲೆ ಹಾಕಿ, ಮನೆ ದೇವರಿಗೆ ಒ೦ದು ತೆ೦ಗಿನಕಾಯಿ ಒಡೀರಿ….. ತಲೆಗೆ ಬ೦ದಿದೆಲ್ಲಾ ಮಾತಾಡತ್ತಿದ್ದ ಹೆ೦ಗಸ್ರ ಮಾತ ಕೇಳಿ ಮಗ ಪಕ್ಯಾ (ಪ್ರಕಾಶ) ಅದನ್ನೆಲ್ಲಾ ಮಾಡತ್ತಿದ್ದನ೦ತೆ. ತಾ೦ಡೆಯ ಸೇವಾಲಾಲ ಗುಡಿಯ ಕಟ್ಟೆ ಮೇಲೆ ಹರಟೆಗೆ ಕೂತ ಗ೦ಡ ಸೀತಾರಾ೦ ಸುದ್ದಿ ತಿಳಿದ ತಕ್ಷಣ ಮನೆಗೆ ಓಡಿ ಬ೦ದವನು ಹೆ೦ಡತಿಯ ಕಷ್ಟ  ನೋಡಲಾಗದೆ ಸೀದಾ ಕಮಲಾಬಾಯಿಯ ಮನೆಗೆ ಹೋಗಿ ಅವಳ ಕಾಲು ಹಿಡಿದು ಇನ್ನು ಶಾಪ ಹಾಕಬೇಡ, ಹಲ್ಲು ಕಡೀಬ್ಯಾಡಾ.. ತಪ್ಪಾಯ್ತು  ಕ್ಷಮಿಸು ಅ೦ತ ಬೇಡಿಕೊ೦ಡ ಮೇಲೆ ಚಾ೦ದಿಬಾಯಿಯ ಮುಖ ಸರಿಹೋಯ್ತು ಅ೦ತ ನನ್ನ ಅಮ್ಮ ನಮಗೆ ಕತೆ  ಹೇಳ್ತಿದ್ರು.

ಧನ್ನು ಬುಡ್ಡ ಮಾಟ ಮಾಡತಾನ೦ತ ಯಾರು ಅವನಿಗೆ ಮನೆಯಲ್ಲಿ ಸೇರ್ಸಕೊಳ್ಳತಿರಲಿಲ್ಲ ಮತ್ತು ಯಾರು ಹೆಚ್ಚು ಹೊತ್ತು ಮಾತಾಡತಿರಲಿಲ್ಲ. ಮೇಘಲಿಬಾಯಿನ ವಿಚಾರಸಲಿಕ್ಕೆ ಹೋದ ಧನ್ನು ಬುಡ್ಡ ಬರ್ತಾ ಅವರ ಹೊಲದ ಬಾವಿಗೆ ಇಳಿದು ನೀರು ಕುಡಿದಿದ್ನ೦ತೆ. ಇದನ್ನ ಕೇಳಿದ ಶಿವ್ಯಾನಿಗೆ ಬಹಳ ಭಯವೂ ಬೇಸರವೂ ಇತ್ತ೦ತೆ. ದಿನಾಲು ಮು೦ಜಾನೆ, ಸ೦ಜೆ ಬ೦ದು ಬಾವಿಯಲ್ಲಿ ನೀರು ನೋಡಿ ಹೋಗ್ತಿದನ೦ತೆ. ಅ೦ದುಕೊ೦ಡ೦ತೆಯೇ ಎರಡೇ ತಿ೦ಗಳಲ್ಲಿ  ಬಾವಿಯಲ್ಲಿ ಇದ್ದ ನೀರು ನಿಧಾನಕ್ಕೆ ಒಣಗಿ , ಹಾಕಿದ ಬೆಳೆಯು ಒಣಗಿ ಹೋಯಿತ೦ತೆ.

ಈ ಶಿವ್ಯಾನ ಕೊನೆಯ ಮಗ ವಿಶ್ವನಾಥ ದಿನಾಲೂ ಮು೦ಜಾನೆ ಎದ್ದು ದೇವರಿಗೆ ಪೂಜೆ ಮಾಡಿ, ಮನೆ ಮು೦ದಿರುವ ಒ೦ದು ಬೇವಿನ ಗಿಡಕ್ಕೆ ತ೦ಬಿಗೆಯಿ೦ದ ನೀರು ಹಾಕತ್ತಿದ್ನ೦ತೆ . ಚಿ೦ತೆಯಲ್ಲಿ ಕೂತ ಅಪ್ಪ, ತನ್ನ ಕಷ್ಟಗಳನ್ನು ಮನೆಯಲ್ಲಿ ಇದ್ದ ಹಿರಿಮಗನಿಗೆ ಹೇಳಿಕೊ೦ಡನ೦ತೆ. ಅಲ್ಲೆ ಪಕ್ಕದಲ್ಲಿ ಕೂತು ಕೇಳಿಸಿಕೊ೦ಡ ವಿಶ್ವನಾಥ ಸಣ್ಣ ಸ್ವರದಲ್ಲಿ , ‘ಬಾಪೂ.. ನಮ್ಮ ಮನೆ ಮು೦ದೆ ಇರುವ ಬೇವಿನ ಗಿಡದ ಪಕ್ಕದಲ್ಲಿ ಬೋರ್ ವೆಲ್ ಹೊಡಸಿದ್ರೆ ಖ೦ಡಿತಾ ನೀರು ಸಿಗುತ್ತೆ’ ಅ೦ದನ೦ತೆ. ತನ್ನ ವಯಸ್ಸಿನ ಉಳಿದ ಹುಡುಗರೆಲ್ಲ ಗೋಲಿಯಾಡುತ್ತ ಅಲೆದಾಡುವಾಗ ತಾನು ಮಾತ್ರ ದೇವರಿಗೆ ಕೈ ಮುಗಿಯುತ್ತಾ ಅದೇನೋ ಧ್ಯಾನ ಮಾಡುವ ಮಗ ಹೇಳಿದನೆ೦ದು ಕೂಡಲೆ ಬೋರ್ ವೆಲ್ ಹೊಡಿಸಿಯೇ ಬಿಟ್ಟ ಶಿವ್ಯಾ. ಮಗ ಹೇಳಿದ ಆಳಕ್ಕೆ ನೀರೂ ಬಿದ್ದು ಈ ಸುದ್ದಿ ಅಕ್ಕ ಪಕ್ಕ ಜನರಿ೦ದ ಹಬ್ಬಿ ,ವಿಶ್ವನಾಥ ಸುದ್ದಿಯಾದ. ಯಾರೇ ಹೊಲದಲ್ಲಿ ಬೋರ್ ವೆಲ್ ಕೊರೆಸುವ ಮೊದಲು ವಿಶ್ವನಾಥನನ್ನು ಕರಕೊ೦ಡು ಹೋಗಿ ಪಾಯಿ೦ಟು ಹಾಕಿಸಲು ತೊಡಗಿದ್ರು. ನನ್ನ ಶ೦ಕರ ಚಿಕ್ಕಪ್ಪನೂ ನಮ್ಮ ಹೊಲದಲ್ಲಿ ಬೋರ್ ವೆಲ್ ಹೊಡಿಸಬೇಕ೦ತ ನೀರಿನ ಪಾಯಿ೦ಟು ಹಾಕ್ಲಿಕ್ಕೆ ವಿಶ್ವನಾಥನನ್ನ ಕರೆದಿದ್ದ. ಈ ವಿಶ್ವನಾಥ ಬಹಳ ಗ೦ಭೀರ ಮತ್ತು ಸ೦ಭಾವಿತನ೦ತೆ ತೋರುತ್ತಿದ್ದ. ನಾನು ಅದೇಗೆ ನಿನಗೆ ಗೊತ್ತಾಗುತ್ತೆ ಅ೦ತ ಏನೇನೋ ಕೇಳಿದರೆ ಮಾತೇ ಆಡದೆ ಹೊಲದಲೆಲ್ಲಾ ಒ೦ದೇ ಸಮನೆ ಸುತ್ತುತ್ತಿದ್ದ. ಅವನ ವೇಗಕ್ಕೆ ಉಳಿದವರು ಓಡುತ್ತಿದ್ದರು. ನೀರು ಇರುವ ಸ್ಥಳದಲ್ಲಿ ಗಕ್ಕೆ೦ದು ನಿ೦ತು ಕಾಲಿನಿ೦ದ ಉಜ್ಜಿ ಗುರ್ತು ಮಾಡುತ್ತಿದ್ದ. ನಾನು ನೋಡಿದವರಲ್ಲೆಲ್ಲಾ ತು೦ಬಾ ಬುದ್ದಿವ೦ತನೂ, ಮಹಾನುಭಾವನೂ ಇವನೇ ಆಗಿದ್ದ. ಗುರ್ತು ಮಾಡಿದ ಸ್ಥಳದಲ್ಲಿ ಈ ವಿಶ್ವನಾಥ ಒ೦ದು ಕಲ್ಲು ಇಟ್ಟು, ಕು೦ಕುಮ ಹಚ್ಚಿ , ಎರಡು ತೆ೦ಗಿನಕಾಯಿ ಒಡೆಯುತ್ತಾನೆ. ಹೊಲದ ಯಜಮಾನ ಕಲ್ಲಿನ ಮು೦ದೆ ನೂರಾಹನ್ನೊ೦ದು ರೂಪಾಯಿ ಇಟ್ಟು, ಕೈ ಮುಗಿದು ನಮಸ್ಕರಿಸುತ್ತಾನೆ. ಅದನ್ನು ವಿಶ್ವನಾಥ ತನ್ನ ತ೦ದೆಗೊಪ್ಪಿಸುತ್ತಾನೆ. ಅಲ್ಲಿ ನೆರೆದವರೆಲ್ಲಾ ಎದ್ದು ನಿ೦ತು ಆ ಜಾಗಕ್ಕೆ ಕೈ ಮುಗಿದು , ಒಡೆದ ತೆ೦ಗಿನಕಾಯಿಯನ್ನು ಭಕ್ತಿಯಿ೦ದ ತಿನ್ನುತ್ತಾರೆ. ನಾನು ವಿಸ್ಮಯದಿ೦ದ ಹುಚ್ಚಾಗುತ್ತೇನೆ. ವಿಶ್ವನಾಥನ ಬೆ೦ಬಿಡದೆ ಮತ್ತೆ ಮತ್ತೆ ಕೇಳುತ್ತೇನೆ. ಕೊನೆಗೊಮ್ಮೆ ಅವನು ಹೇಳುತ್ತಾನೆ ‘ನೀರು ಸಿಕ್ಕಾಗ ನನ್ನ ಕಾಲುಗಳು ಒಮ್ಮೆಲೇ ಎಳೆದು ನಿಲ್ಲಿಸಿದ೦ತೆ ನಿ೦ತುಬಿಡುತ್ತವೆ’.

ವಿಶ್ವನಾಥನ ಮಾತು ಕೇಳಿ ನಾನೂ ಬೀಸಿ ಬೀಸಿ ನಡೆಯುತ್ತೇನೆ.

ಜನತಾ ಮನೆಗಾಗಿ ಜಗಳ

ರಾಮಕೃಷ್ಣ ಹೆಗಡೆಯವರು ಮುಖ್ಯ ಮ೦ತ್ರಿಯಾಗಿದ್ದ ಕಾಲದಲ್ಲಿ ನಮ್ಮ ತಾ೦ಡೆಗೆ ಕರ್ನಾಟಕ ಸರಕಾರದಿ೦ದ ಇಪ್ಪತ್ತು ಜನತಾ ಮನೆಗಳು ಮ೦ಜೂರಾಗಿದ್ದವು. ಸರ್ಕಾರ ಕೊಟ್ರೂ ಜನರಿಗೆ ಅವು ಬೇಕಿರ್ಲಿಲ್ಲ. ಅವರಿಗೆ ಗುಡಿಸಲೇ ಸಾಕು ಅನ್ನಿಸ್ತಿತ್ತು. ಆದರೂ ನನ್ನ ಅಜ್ಜ ಎರಡು ಮನೆಗಳನ್ನು ತನ್ನದಾಗಿಸಿಕೊ೦ಡ. ಅದನ್ನು ನನ್ನ ತ೦ದೆ ಹರಿಶ್ಚ೦ದ್ರ ಮತ್ತು ನನ್ನ ಕಾಕಾ (ಚಿಕ್ಕಪ್ಪ) ಕಾಶಿರಾಮಗೆ ಅಂತ ಕಟ್ಟುತ್ತಿರುವಾಗಲೆ ಒ೦ದೊ೦ದು ಹ೦ಚಿದ್ದ. ನಾವು ಮಕ್ಕಳು ಹೊಸ ಮನೆಗೆ ಹೋಗುವ ಕಾತುರದಲ್ಲಿದ್ವಿ.

ನಮ್ಮ ತಾ೦ಡೆಯಲ್ಲಿ ಪಿಯುಸಿ. ವಿಜ್ಞಾನದಲ್ಲಿ ಓದುತಿದ್ದ ಪ೦ಡಿತ ಪವಾರ ತನ್ನ ಮನೆಯಲ್ಲಿ ವಿಜಾಪೂರದ ರಸ್ತೆ ಬದಿಯಲ್ಲಿ ಮಾರುತ್ತಿದ್ದ ಮಿಥುನ್ ಚಕ್ರವತಿ, ಗೋವಿ೦ದಾ, ಜಯಪ್ರದಾ, ಶ್ರಿದೇವಿ ಮುಂತಾದ ತಾರೆಗಳ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನ ತ೦ದು ಗುಡಿಸಲಿನ ಗೋಡೆಗೆ ಅ೦ದವಾಗಿ ಅ೦ಟಿಸಿದ್ದ. ಜೊತೆಗೆ ಗೋವಿ೦ದನ ಹಾಗೆ ಬಟ್ಟೆಗಳನ್ನು ಹಾಕಿ ಅರ್ಧ ಹಿ೦ದಿ ಮತ್ತು ಅರ್ಧ ಊರ್ದು ಮಿಶ್ರಿತ ಭಾಷೆಯಲ್ಲಿ ಸಿನೆಮಾದ  ಡೈಲಾಗಗಳನ್ನು ಹೇಳಿ ನಟನೆ ಮಾಡ್ತಾ ಕಥೆ ಹೇಳ್ತಿದ್ದ. ಇತ್ತ ಹಿ೦ದಿ, ಊರ್ದು ಗೊತ್ತಾಗದ ನಮ್ಮ೦ತ ಹುಡುಗ್ರು ಅವನ ಬಾಯಿ೦ದ ಬರುವ  ಶಬ್ದಗಳನ್ನು ಕೇಳ್ತಾ, ಕಣ್ಣಗಳನ್ನು ಗೋಡೆ ಮೇಲೆರುವ ಪೋಸ್ಟರಗಳ ಕಡೆಗೆ ಹಾಯಿಸುತ್ತಿದ್ವಿ. ತಾ೦ಡೆ ಮ೦ದಿಯೆಲ್ಲಾ ಪವಾರನ ಮನೆಗೆ ಬ೦ದು ಪೋಸ್ಟರ್‌ಗಳನ್ನು ನೋಡಿ ಹೋಗ್ತಿದ್ರು. ನನಗೂ ನಮ್ಮ ಹೊಸ ಮನೆಗೆ ಪೋಸ್ಟರ್ ತ೦ದು ಅಂಟಿಸಬೇಕೆಂಬ ಆಸೆ ಇತ್ತು. ಆದರೆ ಅಪ್ಪನಿಗೆ ಸುತಾರಾ೦ ಇಷ್ಟವಿರಲಿಲ್ಲ. ನಾನು ಹತ್ತು ರೂಪಾಯಿ ಕೊಟ್ಟು ಎರಡು ಪೋಸ್ಟರ್ ತರಿಸಿಕೊ೦ಡಿದ್ದೆ. ತ೦ದೆ ಕೆಲಸಕ್ಕೆ ಹೋದಾಗ ಮನೆಯ ಒಳಗೆ ಹಿ೦ಬದಿ ಗೊಡೆಗೆ, ಹೊರಗಿನವರಿಗೆ ಬಾಗಿಲಿನಿ೦ದ ಕಾಣುವ ಹಾಗೆ ಅ೦ಟಿಸಿದೆ. ನಂತರ ಅಮ್ಮನಿಗೆ ತಾಕೀತು ಮಾಡ್ದೆ, ಅಪ್ಪನಿಗೆ ಹೇಳು ಇದನ್ನೇನಾದರು ತೆಗೆದು ಹಾಕಿದರೆ ನಾನು ಮನೆ ಬಿಟ್ಟು ಹೋಗ್ತೀನಿ ಅಂತ ಹೇಳಿದ್ದೆ. ಅಪ್ಪ ತೆಗೆಯಲಿಲ್ಲ. ಹೀಗೆ ನಮ್ಮ ಮನೆಯಲ್ಲಿ ಗೋವಿ೦ದ ಮತ್ತು ಶ್ರಿದೇವಿಯ ಪೋಸ್ಟರ್ ಒ೦ದು ವರ್ಷಗಳ ಕಾಲ ಇತ್ತು.

ನಮ್ಮ ಮನೆಗೆ ಬರುವ ಬುಡ್ಡ ಬುಡ್ಡಿ (ಅಜ್ಜ ಅಜ್ಜಿ) ಯರು ಇವರ ಅಂದ ಚ೦ದವನ್ನು ವರ್ಣಿಸುತ್ತಿದ್ರು. ಮನೆ ಕಟ್ಟಿ ಶಾ೦ತಿ ಮಾಡಿ ಶಾ೦ತಿಯಿ೦ದಲೇ ಒ೦ದೆರಡು ವರ್ಷಗಳು ಕಳೆದವು. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಅನ್ನುವಾಗ ತಾ೦ಡೆಯ ಢಾಲೀಯಾ ಬಸಪ್ಪ ಪೂಜಾರಿಯ ತ೦ಗಿ ಸೀತಾಬಾಯಿಯ ಗ೦ಡ ಶಿವಪ್ಪ ಕೊಡ್ಲಿ ಹಿಡಕೊ೦ಡು ನಮ್ಮ ಮನೆಗೆ ಜಗಳಕ್ಕೆ ಬ೦ದಿದ್ದ.

ಅ೦ದು ಮ೦ಗಳವಾರ ತಾ೦ಡೆಯಲ್ಲಿ ಸೀತಳಾಯಾಡಿ (ಸೀತಾಳ ಅಮ್ಮ) ನ ಜಾತ್ರೆಯ ದಿನ. ಇದೇ ದಿನ ಸ೦ಜೆ ಆರು ಗ೦ಟೆಗೆ ಢಾಲೀಯಾಗಳ ಅ೦ಗಳದಲ್ಲಿ ಕೋಣನ ಬಲಿಕೊಡುವುದಿತ್ತು. ಕೋಣನ ಬಲಿ ಕೊಡುವವರು ಅ೦ತಲೇ ಧಾಲಿಯಾಗಳನ್ನು ಉಳಿದ ಲ೦ಬಾಣಿಗಳು ಮುಟ್ಟುತ್ತಿರಲಿಲ್ಲ. ನಾವು ಮಕ್ಕಳು ಸೀತಳಾ ಯಾಡಿಯ ಜಾತ್ರೆ ಮುಗಿಸಿ ಕೋಣನ ಬಲಿ ಕೊಡುವುದನ್ನು ನೋಡಲು ತಾ೦ಡೆಯ ಮ೦ದಿಯವರೊಡನೆ ಢಾಲೀಯಾಗಳ  ಮನೆ ಮು೦ದೆ ನಿ೦ತಿದ್ವಿ. ಒ೦ದು ದೊಡ್ಡ ಕೋಣವನ್ನು ಅಲ೦ಕರಿಸಿ ಅದರ ಕೋಡಿಗೆ ಬೇವಿನ ಸೊಪ್ಪು ಕಟ್ಟಿ ಹಣೆಗೆ ಕೆ೦ಪು ಮತ್ತು ಹಳದಿ ಬಣ್ಣದ ಕು೦ಕುಮ ಹಾಕಿ ಮನೆಯ ಸುತ್ತಲೂ ಐದು ಸುತ್ತು ಸುತ್ತಿಸಿ ಮನೆಯ ಅ೦ಗಳದಲ್ಲಿ ಬಾಗಿಲು ಎದುರಿಗೆ ತ೦ದು ನಿಲ್ಲಿಸಿದ್ದರು. ಅವರದೇ ಮನೆಯ ನಾಲ್ಕು ಗ೦ಡಸರನ್ನು ಬಿಟ್ಟರೆ ಬೇರೆ ಯಾರು ಕೋಣವನ್ನು ಹಿಡಿಯುವರು ಇರಲಿಲ್ಲ. ತಾ೦ಡೆಯ ದೊಡ್ಡವರು ಚಿಕ್ಕವರು ಸೇರಿಸಿ ಸುಮಾರು ನೂರು ಇನ್ನೂರು ಮ೦ದಿ ಬಲಿಯನ್ನು ನೋಡಲು ಸೇರಿದ್ದರು. ಬಲಿ ಕೊಡಲಿರುವ ಕೋಣ ತಪ್ಪಿಸಿಕೊ೦ಡರೆ! ದೇವರೆ!  ಎಲ್ಲರ ಮುಖದಲ್ಲಿ ಭಯದ ಗೆರೆಗಳು. ಹಾಗೆನಾದರು ಆದಲ್ಲಿ ಓಡಿ ಹಿಡಿಯಲು ಒ೦ದೊ೦ದು ಹಾದಿಯನ್ನು ಹುಡುಕಿಕೊ೦ಡಿದ್ರು.

ಢಾಲೀಯಾ ಶಿವಪ್ಪ ನಮ್ಮ ಲ೦ಬಾಣಿಯನಾಗಿರಲಿಲ್ಲ. ಇವನು ನೋಡಲು ದಷ್ಟ ಪುಷ್ಟನಾಗಿದ್ದ. ಈತ ಪೈಲ್ವಾನನಾಗಿದ್ದ. ಅಥರ್ಗಾ ಅಗ್ಗಿ ಜಾತ್ರೆಗೆ ಕುಸ್ತಿ ಮಾಡಲು ಬ೦ದಿದ್ದನ೦ತೆ. ಸೀತಾಬಾಯಿ ನೋಡಲು ಹೋದವಳು ಇವನ ತಲೆ ಕೆಡಿಸಿ ಕರಕೊ೦ಡ ಬ೦ದ್ಲ೦ತ ತಾ೦ಡೆಯ ಜನರೆಲ್ಲಾ ಮಾತಾಡಕೊಳ್ಳತ್ತಿದ್ರು. ಹೀಗೆ ತಾ೦ಡೆಗೆ ಬ೦ದ ಶಿವಪ್ಪ ಮರಳಿ ಅವನ ಊರಿಗೆ ಹೋಗಲೇ ಇಲ್ಲ. ಮೊದಮೊದಲೂ ಶಿವಪ್ಪ ಕನ್ನಡವೇ ಮಾತಾಡ್ತಿದ್ದ. ನ೦ತರದ ದಿನಗಳಲ್ಲಿ ಕನ್ನಡ – ಲ೦ಬಾಣಿ ಮಿಶ್ರಣ ಮಾಡಿ ಮಾತಾಡಲು ಕಲ್ತಿದ್ದ..

ಶಿವಪ್ಪನ ಕೈಯಲ್ಲಿ ಚೂಪಾದ ಹರಿತವಾದ ದೊಡ್ಡದೊ೦ದು ಕತ್ತಿ ಹೊಳೆಯುತ್ತಿತ್ತು. ಅವನ ಮುಖದಲ್ಲಿ ರೋಷ ಇತ್ತು. ಕಣ್ಣುಗಳೆರಡು ಕೋಣದ ಮೇಲೆ. ಅಲ್ಲಿ ನೆರೆದ ಜನರ ಕಣ್ಣುಗಳು ಶಿವಪ್ಪನ ಮೇಲೆ. ಇವನೆ ಈಗ ಕೋಣನ ಬಲೆ ತಗೆದು ಕೊಳ್ಳುವವನು, ಕೋಣನ ಕಾಲಿಗೆ ಹಗ್ಗ ಕಟ್ಟಿ ಒ೦ದೇ ಸಲಕ್ಕೆ ಕೆಳಗೆ ಬೀಳಿಸಿದ್ರು. ಪಕ್ಕದಲ್ಲೆ ನಿ೦ತ ಶಿವಪ್ಪ ಹರಿತಾದ ಕತ್ತಿಯಿ೦ದ ಕೋಣದ ರು೦ಡವನ್ನು ಬೇರ್ಪಡಿಸಿದ್ದ. ಈ ದೃಶ್ಯ ಭಯಾನಕವಾಗಿತ್ತು . ಅಲ್ಲಿ ಸೇರಿದ್ದ ಜನರು ಶಿವಪ್ಪನ ಧೈರ್ಯವನ್ನು ಹೊಗಳುತ್ತಾ ಮನೆ ಕಡೆ ನಡೆದರು.

ಮಾರನೆಯ ದಿನ ಸಂಜೆಯ ಹೊತ್ತಿಗೆ ಶಿವಪ್ಪ ಕೊಡ್ಲಿ ಹಿಡಕೊ೦ಡು ನಮ್ಮ ಮನೆಗೆ ಬ೦ದು, ಈ ಮನೆ ನನ್ನದು, ನನ್ನ ಹೆ೦ಡತಿ ಸೀತಾಬಾಯಿ ಹೆಸರಿಗೆ ಬ೦ದ ಮನೆ, ಮೊಸ ಮಾಡಿ ಹಣ ಕೊಟ್ಟು ನಿಮ್ಮ ಸೀತಾಬಾಯಿಗೆ ಬದಲಾಯಿಸಿದಿರಿ, ಈಗಲೆ ಖಾಲಿ ಮಾಡಿ ಇಲ್ದಿದ್ರೆ ಒಬ್ಬೊಬ್ಬರನ್ನ ಕಡ್ದು ಬಿಡತ್ತಿನಿ, ನನ್ನ ಯಾರ ಅ೦ತ ತಿಳಕೊ೦ಡ್ರಿ, ನಾನು ಪೈಲ್ವಾನ ಶಿವಪ್ಪ. ನನ್ನ ಮು೦ದೆ ಯಾರದೂ ಆಟ ನಡಿಯಲ್ಲ ಅ೦ತೆಲ್ಲ ಏರು ಧ್ವನಿಯಲ್ಲಿ ಬೈಯಲು ಪ್ರಾರಂಭಿಸಿದ್ದ. ತು೦ಬ ಕುಡಿದಿದ್ದ. ಯಾವಾಗ್ಲೂ ಸೌಮ್ಯವಾಗಿರುವ ನನ್ನಮ್ಮ ಆವತ್ತು ತಾಳ್ಮೆ ಕಳೆದುಕೊಂಡು ದುರ್ಗಿಯ೦ತೆ ಯಾಕ್ ಎಲ್ಲಾ ಸುಮ್ಮಕಿದ್ದೀರಿ. ಹಗ್ಗ ಹಿಡ್ಕೊ೦ಡು ಬನ್ನಿ  ಇವುನನ್ನು ಹಿಡಿದು ಕಟ್ಟಿರಿ ಅ೦ತ ಗರ್ಜಿಸಿದ್ದಳು. ಏನು ಮಾಡೋದು ಅಂತ ಗೊತ್ತಾಗದೆ ಭಯದಿ೦ದ ನಿ೦ತಿದ್ದ ನನ್ನ ಅಜ್ಜ, ತ೦ದೆ ಅಮ್ಮನ ಮಾತಿನಿಂದ ಏನೋ ಶಕ್ತಿ ಬ೦ದ೦ತಾಗಿ ಹಗ್ಗ ತ೦ದು ಶಿವಪ್ಪನ ಕೂದಲು ಹಿಡಿದು ಎಳಕೊ೦ಡು ಬ೦ದು ಮನೆಯ ಮು೦ದಿನ ಬೇವಿನ ಮರಕ್ಕೆ ಕಟ್ಟಿದರು. ನ೦ತರ ಅವರ ಮನೆಯವರು ಬ೦ದು ಬಿಡಿಸಿಕೊ೦ಡು ಹೋದ್ರು.

ತಾ೦ಡೆಯ ಎಲ್ಲಾ ಜನರು ಶಿವಪ್ಪನಿಗೆ ಹೆದರುತ್ತಿದ್ದರು. ಆದರೆ ಆತ ಮಾತ್ರ ನನ್ನ ಅಮ್ಮನಿಗೆ ಹೆದರುತ್ತಿದ್ದ. ಈ ಘಟನೆಯ ನಂತರ ನನ್ನ ಅಜ್ಜ  ಬಹಳ ಹೆದರುತ್ತಿದ್ದ. ತನ್ನ ಮಗ ಅ೦ದ್ರೆ ನನ್ನ ಅಪ್ಪ  ಡ್ಯೂಟಿ ಮುಗ್ಸಿ ರಾತ್ರಿ ಒಬ್ಬನೆ ಮನೆಗೆ ಬರ್ತಾನೆ, ಶಿವಪ್ಪ ಎನಾದರು ಮಾಡಿದ್ರೆ ಅನ್ನುವುದು ಆತನ ಆತಂಕವಾಗಿತ್ತು. ಮಗ ಬರೋ ಸುಮಾರಿಗೆ ನಡೆದು ಸುಮಾರು ದೂರ ಹೋಗಿ ಮಗನನ್ನು ಕರಕೊ೦ಡು ಬರ್ತಿದ್ದ. ಇದಾದ ಐದಾರು ತಿ೦ಗಳ ನಂತರ ಶಿವಪ್ಪ ಅವನ ಹೆ೦ಡತಿ ಸೀತಾಬಾಯಿ ಜೊತೆ ಮಹಾರಾಷ್ಟ್ರಕ್ಕೆ ದುಡಿಯಲು ಹೋದ. ನಂತರ ಮರಳಿ ಬರಲೇ ಇಲ್ಲ. ಈಗ ನನ್ನ ಅಜ್ಜನೂ ಇಲ್ಲ, ಶಿವಪ್ಪನೂ ಇಲ್ಲ. ಆ ಜನತಾ ಮನೆಯಲ್ಲಿ ನನ್ನ ಸೀತಕಾಕಿ ದಿನವೂ ರೊಟ್ಟಿ ತಟ್ಟುತ್ತಾ, ಹಾಡುತ್ತಾ, ನಗುತ್ತಿರುತ್ತಾಳೆ.

ಸೊಂಟದಲ್ಲಿ ಎರಡು ಹರಳಿನ ಗಿಡ

ತಾ೦ಡೆಯಲ್ಲಿ ಒ೦ದು ವಾರದಿ೦ದ ಸ೦ಭ್ರಮದ ವಾತಾವರಣ. ಎಲ್ಲರೂ ಒ೦ದು ವಾರದಿ೦ದ ಮನೆಗಳಿಗೆ ಬಣ್ಣ ಹಚ್ಚುವುದು, ನೆಲ ಸಾರಿಸುವುದು, ಅ೦ಗಳ ಸ್ವಚ್ಛಗೊಳಿಸುವುದರಲ್ಲಿ  ನಿರತರಾಗಿದ್ರೆ, ನಾವು ಮಕ್ಕಳು ಹೊಸ ಬಟ್ಟೆ ಕೊ೦ಡುಕೊಳ್ಳುವ ಆಸೆಯಲ್ಲಿ ಗು೦ಪುಗಟ್ಟಿ ಯಾವ ಬಣ್ಣದ ಅ೦ಗಿ, ಚಡ್ಡಿ ತೆಗೆದುಕೊಳ್ಳಬೇಕು, ಯಾವಾಗ ನಮಗೆ ಬಟ್ಟೆ ಕೊಡಿಸಲು ಸ೦ತೆಗೆ ಕರೆದುಕೊ೦ಡು ಹೋಗುವರೋ ಅ೦ತ ಮಾತಾಡಿಕೊಳ್ಳುತಿದ್ವಿ. ಲ೦ಬಾಣಿಗಳ ವಿಶೇಷ ಹಬ್ಬ ಹೋಳಿ. ಈ ಹೋಳಿ ಹಬ್ಬದ ತಯಾರಿ ಇನ್ನೂ ವಿಶೇಷ. ಹೋಳಿಯ ಕಾಮ ಸುಡುವ ಮೊದಲ ದಿನ ಸ೦ಜೆ ಆರು ಗ೦ಟೆಗೆ ತಾ೦ಡೆಯ ಸೇವಾಲಾಲ ಗುಡಿಯ ಮು೦ದೆ ಜನರೆಲ್ಲ ಸೇರುತ್ತಾರೆ. ತಾ೦ಡೆಯ ನಾಯಕ ಯುವಕರಿಬ್ಬರನ್ನು ಎರಿಯಾ (ಸಹಾಯಕ ಧೂತ) ಗಳಾಗಿ ನೇಮಕ ಮಾಡುತ್ತಾನೆ. ಈ ಎರಿಯಾಗಳು ಮದುವೆಗೆ ಬ೦ದ ಯುವಕರಾಗಿರಬೇಕು. ನಮ್ಮ ತಾ೦ಡೆಯಲ್ಲಿ ಒ೦ದು ನಿಯಮವಿದೆ. ಗ೦ಡು ಮಕ್ಕಳು ಮದುವೆ ಆಗುವ ಮೊದಲು ಹೋಳಿ ಹಬ್ಬಕ್ಕೆ ಎರಿಯಾ ಆಗಿ ಕಾರ್ಯ ನಿರ್ವಹಿಸಿರಬೇಕು. ಹೆಚ್ಚಾಗಿ  ಆ ವರ್ಷ ಮದುವೆ ಆಗಲಿರುವ ಯುವಕರು ಎರಿಯಾ ಆಗ್ತಿದ್ರು. ಇವರಲ್ಲಿ ಒಬ್ಬನನ್ನು ಗ೦ಡು ಎರಿಯಾ, ಮತ್ತೊಬ್ಬನನ್ನು ಹೆಣ್ಣು ಎರಿಯಾ ಅ೦ತ ಕರೀತಿದ್ರು.

ತಾ೦ಡೆಯ ಬಸಪ್ಪ ಹಲಿಗೆ ಬಡಿಯುತ್ತಾ ನಾಯಕನೊಡನೆ ಎರಿಯಾಗಳನ್ನು ದೂರದ ಒ೦ದು ತೋಟಕ್ಕೆ ಕರೆದುಕೊ೦ಡು ಹೋಗುತ್ತಿದ್ದ. ನಾವು ಮಕ್ಕಳು ಅವರನ್ನು ಹಿ೦ಬಾಲಿಸಿ ಹೋಗ್ತಿದ್ವಿ. ಅಲ್ಲಿ ಹೋಗಿ ಹರಳಿನ ಎರಡು ಗಿಡಗಳನ್ನು ಕಿತ್ತು ಹಾಡುತ್ತಾ ಎರಿಯಾನ ಸೊ೦ಟಕ್ಕೆ ಬಿಳಿ ಟವಲು ಕಟ್ಟಿ ಅದರೊಳಗೆ ಹರಳಿನ ಗಿಡ ಸಿಕ್ಕಿಸಿ ಆ ಗಿಡವನ್ನು ಗಟ್ಟಿಯಾಗಿ ಹಿಡಿಯಲು ಹೇಳ್ತಿದ್ರು. ಗ೦ಡು ಎರಿಯಾ ಹತ್ತು ಹೆಜ್ಜೆ ಮು೦ದೆ ನಡೆದರೆ ಹೆಣ್ಣು ಎರಿಯಾ ಅವನನ್ನು ಹಿ೦ಬಾಲಿಸಬೇಕ೦ತ ತಾಂಡೆಯ ನಾಯಕ ಹೇಳಿದ್ದ. ಹಿರಿಯರೆಲ್ಲಾ ಹಾಡನ್ನು ಹಾಡುತಿದ್ರೆ, ನಮ್ಮ೦ತ ಮಕ್ಕಳು ಶಿಳ್ಳೆ ಹೊಡೆಯುತ್ತಾ , ಬೊಬ್ಬೆ ಹಾಕುತ್ತಾ, ಹಲಿಗಿ ಬಡಿಯುವ ಬಸಪ್ಪನ ಹಿ೦ಬಾಲಿಸಿಕೊ೦ಡು ಲಬೋ ಲಬೋ ಅ೦ತ ಕೈಗಳಿ೦ದ ಬಾಯಿಗೆ ಬಡಿತಾ ಬರ್ತಿದ್ವಿ.

ತಾ೦ಡೆಯ ಮು೦ದಿರುವ ದೊಡ್ದ ಬೇವಿನ ಮರಕ್ಕೆ ಹತ್ತಿ ಎರಿಯಾನ ಸೊ೦ಟದಲ್ಲಿರುವ ಹರಳಿನ ಗಿಡಗಳನ್ನು ಸಣ್ಣ ಮಕ್ಕಳ ಕೈಗೆ ಎಟುಕದ ಹಾಗೆ ಮೇಲೆ ಕಟ್ಟಿ ಹಾಕ್ತಿದ್ರು. ಅಲ್ಲಿ೦ದ ಸೇವಾಲಾಲ ಗುಡಿಯ ಮು೦ದೆ ಹೋಗಿ  ತಾ೦ಡೆಯ ನಾಯಕ ಹತ್ತು ನಿಮಿಷದ ಸಭೆ ಮಾಡುತ್ತಿದ್ದ. ಎಲ್ಲರೂ ಸೇರಿ ದೂರ ದೂರದ ತೋಟಗಳಿಗೆ ಹೋಗಿ ಕಟ್ಟಿಗೆ, ಹುಲ್ಲು, ಭರಣಿ ಇತ್ಯಾದಿ ಕದ್ದು ತರ್ತಿದ್ವಿ. ಕೆಲವು ಕಡೆ ತೋಟದ ಮಾಲಿಕರು ರಾತ್ರಿಯೆಲ್ಲಾ ಕಾಯುತ್ತಿದ್ದರು. ನಾವು ಮಕ್ಕಳು ಕಟ್ಟಿಗೆ ಗೋಳ್ಯಾ ಮಾಡುವುದನ್ನು ಬಿಟ್ಟು ಕಬ್ಬು, ಲಿ೦ಬೆ, ಪೇರಲೆ ಕದ್ದು ತ೦ದು ದೂರದ ಬಯಲಲ್ಲಿ ಬೆಳದಿ೦ಗಳಲ್ಲಿ  ಕೂತು ಹೊಟ್ಟೆ ತು೦ಬಾ  ತಿ೦ದು, ನಮ್ಮ ಗೆಳೆಯ ಬಾಬಲ್ಯಾನ ಅ೦ಗಿ ಬಿಚ್ಚಿಸಿ ಉಳಿದ ಹಣ್ಣುಗಳನ್ನು ಕಟ್ಟಿ ಮನೆಗೆ ಬರ್ತಿದ್ವಿ.

ನಮ್ಮ ಗು೦ಪಿನಲ್ಲಿರುವ ಬಾಬಲ್ಯಾನ ಯೋಜನೆಗಳೇ ಬೇರೆ. ತಾ೦ಡೆಯಲ್ಲಿ ಕೆಲವರು ಸಾಕಿದ ದನ ಕರುಗಳ ಸಗಣಿಯನ್ನು ದಪ್ಪ ದಪ್ಪ ಬಡಿದು, ಭರಣಿ ಮಾಡಿ ಕೊಠಡಿಯ ಗೋಡೆಗೆ ಅ೦ಟಿಸಿ, ಒಣಗಿಸಿ, ತು೦ಬಾ ಆದ ಮೇಲೆ ಅವುಗಳನ್ನು ತಾ೦ಡೆಯಿ೦ದ ದೂರದ ಅ೦ಗಳಕ್ಕೆ ತಗೆದುಕೊ೦ಡು ಹೋಗಿ, ಗೋಲಾಕಾರವಾಗಿ ಒ೦ದರ ಮೇಲೊ೦ದು ಜೋಡಿಸಿ, ಅದರ ಮೇಲೆ ಹಸಿ ಸಗಣಿಯಿ೦ದ ತೆಳ್ಳಗೆ ಸವರಿ ಗೂಡು ಮಾಡಿ ಇಡ್ತಿದ್ರು. ಇದನ್ನು ಮಳೆಗಾಲದಲ್ಲಿ ಸ್ವಲ್ಪ-ಸ್ವಲ್ಪ ತಗೆದು ಬಳಸ್ತಿದ್ರು. ಈ ತರಹದ ಭರಣಿಯ ಗೂಡುಗಳು ತಾ೦ಡೆಯ ಸುತ್ತಲು ಸುಮಾರು ಇರ್ತಿದ್ವು.  ತಾ೦ಡೆಯ ನಾಯಕ ಬಾಬಲ್ಯಾನನ್ನು ಉಬ್ಬಿಸ್ತಿದ್ದ. `ನೋಡು ನೀ ನಮ್ಮ ಮರ್ಯಾದಿ ಉಳ್ಸೊನು. ಬೇರ್ ಯಾರ್ ನನ್ ಮಾತ್ ಕೇಳೋಲ್ರು. ನೀ ನಿನ್ ಗೆಳೆಯನ್ ಕರ್ಕೊ೦ಡು ಎನಾರ ಮಾಡಿ ಹೋಳಿ ಕಾಮನ ಸುಡಲಿಕ್ಕೆ ಭರಣಿ ಗೋಳ್ಯಾ ಮಾಡಬೇಕ್ ನೋಡ` ಅ೦ತ ಹೇಳತ್ತಿದ್ದ.

ನಾಯಕನ ಮಾತು ಕೇಳಿದ ಬಾಬಲ್ಯಾನಿಗೆ ಎ೦ದು ಇಲ್ಲದ ಹುರುಪು ಬ೦ದು ನಮ್ಮ೦ತ ಹುಡುಗ್ರನ ಕರ್ಕೊ೦ಡು ತಾ೦ಡೆ ಸುತ್ತಿ ಸುತ್ತಿ ರಾತ್ರಿ ಹನ್ನೆರಡು ಗ೦ಟೆಗೆ ಭರಣಿಯ ನಾಲ್ಕೈದು ಗೂಡು ಒಡೆದು ಗೋಣಿ ಚೀಲದಲ್ಲಿ ತು೦ಬಿಸ್ತಿದ್ದ. ನಾವು ಅದನ್ನು ಹೊತ್ತುಕೊ೦ಡು ಶಬ್ದ ಮಾಡದೆ ಹೋಳಿಯ ಕಾಮ ಸುಡುವ ಸ್ಥಳದಲ್ಲಿ ತ೦ದು ರಾಶಿ ಮಾಡುತ್ತಿದ್ವಿ. ದೊಡ್ಡವರೆಲ್ಲಾ ಸುಮಾರು ನಾಲ್ಕೈದು ಕಡೆಯಿ೦ದ ಎತ್ತಿನ ಗಾಡಿಯಲ್ಲಿ ಗೋದಿ ಹುಲ್ಲು, ಜೋಳದ ದ೦ಟು, ತೊಗರಿ ಗಿಡದ ದ೦ಟಿನ ಕಟ್ಟುಗಳನ್ನು ತ೦ದು ತಾ೦ಡೆಯ ಶಾಲೆಯ ಮು೦ದಿನ ಅ೦ಗಳದಲ್ಲಿ ಒಟ್ಟುಗೂಡಿಸುತ್ತಿದ್ದರು. ಈ ಹಬ್ಬದ ದಿನ,  ನಮ್ಮ ತಾ೦ಡೆಯಲ್ಲಿ ಆ ವರ್ಷ ಯಾರ ಮನೆಯಲ್ಲಿ ಗ೦ಡು ಮಗು ಜನಿಸಿರುವುದೋ ಅವರ ಮನೆಗೆ ಎರಿಯಾನವರು ಹೋಗಿ ಕಣಿ ಹೇಳಿ ಅ೦ಗಳಕ್ಕೆ ಕ೦ಬಳಿಯ ಚಪ್ಪರ ಕಟ್ಟಲು ಸಹಾಯ ಮಾಡುತ್ತಾರೆ. ಈ ಕಾರ್ಯಕ್ರಮಕ್ಕೆ ಕಾರಣ ಅ೦ತ ಹೇಳ್ತಾರೆ.

ಹೋಳಿ ದಿನ ತಾ೦ಡೆಯಲ್ಲಿ ಸುಮಾರು ಐದಾರು ಕಡೆ ಕಾರಣ ಇರ್ತಿದ್ವು. ಕಾರಣ ಇರುವಾಗ ರಾತ್ರಿಯೆಲ್ಲಾ ಅಕ್ಕ ಪಕ್ಕದ ಹೆ೦ಗಸರನ್ನು, ಹುಡುಗಿಯರನ್ನು ಕರೆದು ಗೋದಿಯ ಪೂರಿ ಮಾಡಿಸುತ್ತಾರೆ. ಇದಕ್ಕೆ ಸುವಾಳಿ (ಪೂರಿ) ಅ೦ತ ಹೇಳುತ್ತಿದ್ವಿ. ಕ೦ಬಳಿ ಚಪ್ಪರದ ಕೆಳಗೆ ಮೂರು ಕಲ್ಲುಗಳೊನ್ನೊಡ್ಡಿ  ಒಲೆ ಮಾಡಿ ರಾತ್ರಿಯೆಲ್ಲಾ ಲಟ್ಟಿಸಿದ ಪೂರಿಗಳನ್ನು ಕಾಯಿಸ್ತಾರೆ. ಪೂರಿ ಕಾಯಿಸುವವರು ಮಧ್ಯ ವಯಸ್ಸಿನ ಒಬ್ಬ ಗ೦ಡಸು ಮತ್ತು ಒಬ್ಬಳು ಹೆ೦ಗಸಾಗಿರಬೇಕು. ಅವರು ಎದುರು ಬದುರು ಮುಖ ಮಾಡಿ ಕೂತರೆ ಕೆಲಸ ಮುಗಿಯುವವರೆಗೆ ಏಳಬಾರದು.

ಚಂದು ಬುಡ್ಡನ ಕಾಣದ ಕಣ್ಣುಗಳು

ಚ೦ದು ಬುಡ್ಡ ನಮ್ಮ ತಾ೦ಡೆಯ ಕುರುಡ. ನಾನು ಮೂರನೆಯ ತರಗತಿಯಲ್ಲಿ ಕಲಿಯುತ್ತಿರುವಾಗ ಇವನಿಗೆ ಸುಮಾರು ಮೂವತ್ತೈದು ವರ್ಷ ಆಗಿರಬಹುದು. ಚ೦ದು ಬುಡ್ಡನ ಮನೆ ತಾ೦ಡೆಯ ಹಿ೦ಬದಿಯಲ್ಲಿತ್ತು. ಈತ ಕುರುಡನಾದರೂ ಕಣ್ಣಿದ್ದವರಿಗಿ೦ತ ಸಲೀಸಾಗಿ ನಡೆಯುತ್ತಿದ್ದ. ದಿನಾಲು ಮು೦ಜಾನೆ ಜಳಕ ಮಾಡಿ ಎಡ ಕೈಯಲ್ಲಿ ತ೦ಬಿಗೆ ಹಿಡಿದುಕೊ೦ಡು, ಬಲ ಕೈಯಲ್ಲಿ ಉದ್ದದ ಬಿದಿರಿನ ಬಡಿಗೆ ಹಿಡಿದು, ನೆಲ ಬಡಿಯುತ್ತಾ, ಅಕ್ಕ ಪಕ್ಕದ ಮನೆಯ ಗೋಡೆಗಳಿಗೆ ಹೊಡೆಯುತ್ತಾ ಟಪ್ ಟಪ್ ಶಬ್ದ ಮಾಡುತ್ತಾ ತಾ೦ಡೆಯ ಮು೦ದಿರುವ ಬಾವಿಗೆ ನಡೆದುಕೊ೦ಡು ಹೋಗಿ, ಬಾವಿಗೆ ನೀರು ತು೦ಬಲು ಬರುವ ಜನರ ಮಾತನ್ನು ಕೇಳಿಸಿಕೊಂಡು, ತ೦ಬಿಗೆಯಲ್ಲಿ ನೀರು ತು೦ಬಿಸಿಕೊ೦ಡು ಯಾರ ಜೊತೆಗೂ ಮಾತನಾಡದೆ ಸೀದಾ ದುರ್ಗಾಗುಡಿಗೆ ಹೋಗಿ ದೇವಿಗೆ ಪೂಜೆ ಮಾಡುತ್ತಿದ್ದ.

ಚ೦ದು ಬುಡ್ಡ ನೀರು ತುಂಬಲು ಬರುವಾಗ ಯಾರೂ ಇರದಿದ್ದರೆ ಹೆದರುತ್ತಿದ್ದ. ನೀರು ತು೦ಬಿದ ಕೊಡ ಎಳೆಯುವಾಗ ರಾಟೆಯ ಶಬ್ದ ಕೇಳಿ ದೂರದಿ೦ದಲೇ ಏ ಯಾರ್ ಅದಿರೋ? ದೇವ್ರ ಪೂಜೆಗೆ ಒ೦ದ್ ಚರಿಗೆ (ತ೦ಬಿಗೆ) ನೀರು ಕೊಡ್ರ್ಯೊ ಅ೦ತ ಗೋಗರೆಯುತ್ತಿದ್ದ. ಚ೦ದು ಬುಡ್ಡ ಪೂಜೆ ಮಾಡುವ ರೀತಿಯೇ ಬೇರೆ. ಬಾವಿಯಿ೦ದ ತ೦ದ ನೀರನ್ನು ಗುಡಿಯ ಪ್ರವೇಶ ದ್ವಾರಕ್ಕೆ ಚೆಲ್ಲಿ, ಕೈ ಆಡಿಸುತ್ತಾ ಗೋಡೆಯ ಸಹಾಯದಿ೦ದ ಒಳಗೆ ನುಸುಳಿ ಕು೦ಕುಮ ಪಡೆದು ಕಾಟಿ (ಉದ್ದದ ಕೋಲು) ಗೆ ಹಚ್ಚಿ, ಹೊರಗೆ ಬ೦ದು ಪ್ರವೇಶ ದ್ವಾರದಿ೦ದ ಐದು ಗಜ ದೂರದಲ್ಲಿ ಒ೦ಟಿಕಾಲಲ್ಲಿ ಹತ್ತು, ಹದಿನೈದು ನಿಮಿಷ ನಿಲ್ಲುತ್ತಿದ್ದ.

ಅವನಿಗೆ ಯಾರೋ ಒಬ್ಬ ಶಾಣ್ಯ ಹೇಳಿದ್ದನ೦ತೆ. ಹೀಗೇ ಹತ್ತು ವರುಷಗಳ ಕಾಲ ಜಳಕ ಮಾಡಿ, ಸೀದಾ ಬಾವಿಗೆ ಹೋಗಿ ನೀರು ತ೦ದು ದುರ್ಗಾಗುಡಿಯ ಪೂಜೆ ಮಾಡಿದ್ರೆ ಕಣ್ಣುಗಳು ಸರಿ ಹೋಗಿ ನೀನು ಎಲ್ಲವನ್ನೂ ನೋಡಬಹುದೆಂದು. ಶಾಣ್ಯನ ಮಾತು ಕೇಳಿ ಚ೦ದು ಬುಡ್ಡ ತಪ್ಪದೆ ಈ ಕೆಲಸ ಮಾಡುತ್ತಿದ್ದ. ದಿನಾಲು ಹೀಗೆ ಮಾಡಿ ಮಾಡಿ ಚ೦ದು ಬುಡ್ಡನಿಗೆ ಅಭ್ಯಾಸವಾಗಿತ್ತೇನೊ. ಕಣ್ಣು ಬರುತ್ತವೆ೦ಬ ಆಸೆಯಲ್ಲಿ ಅವನಿದ್ದ ಹಾಗೆ ನಮಗೆ ಅನ್ನಿಸುತ್ತಿರಲಿಲ್ಲ. ತಾ೦ಡೆಯಲ್ಲಿ ಕೆಲವರು ಮಾತಾಡಿಕೊಳ್ಳುತ್ತಿದ್ದರು `ಈ ಅಜ್ಜ ನಾಟಕ ಮಾಡತಾನ. ಇವನ್ಗೆ ಕಣ್ಣು ಕಾಣಿಸ್ತೈತಿ. ಇಲ್ಲದಿದ್ರ ಎಷ್ಟೋ ಸರಿ ಬೀಳತ್ತಿರಲಿಲ್ಲ`. ಬುಡ್ಡನ ನಿಜಾ೦ಶ ತಿಳಿಯಲು ನಾವು ಮಕ್ಕಳು ಒಮ್ಮೊಮ್ಮೆ ಮಾತಾಡದೆ ಅವ್ನ ಹಿ೦ದೆ ಹಿ೦ದೆ ನಡೆದುಕೊ೦ಡು ಹೋಗ್ತಿದ್ವಿ. ನಮ್ಮ ಗು೦ಪಿನ ಗಣಿಯಾ ಯಾವಾಗಲು ನಮ್ಮ ಯೋಜನೆಯನ್ನು ಹಾಳು ಮಾಡುತ್ತಿದ್ದ. ಹಿ೦ಬಾಲಿಸಿಕೊ೦ಡು ಹೋಗುತ್ತಿರುವಾಗ ಕಿಸ್ಕ೦ತ ನಕ್ಕು ಬುಡ್ದನಿ೦ದ ಬೈಸಿಕೊಳ್ಳುತ್ತಿದ್ದ.

ನನ್ನ ಗೆಳೆಯ ಭೋಜುವಿಗೆ ಬುಡ್ಡನನ್ನು ಪರೀಕ್ಷಿಸಬೇಕೆ೦ಬ ಛಲ ಇತ್ತು. ಒಮ್ಮೆ ಬೆಳದಿ೦ಗಳ ರಾತ್ರಿ ನಾವು ಹುಡುಗ್ರು ದಾರಿ ಮೇಲೆ ಸೇರಿಕೊ೦ಡು ಮಾತಾಡ್ತಿದ್ವಿ. ಅಷ್ಟೊತ್ತಿಗೆ ಚ೦ದು ಬುಡ್ಡ ನಡೆದುಕೊ೦ಡು ಬರುತ್ತಿದ್ದ. ಏನೋ ಕೆಲಸಕ್ಕೆ ಯಾರದೋ ಮನೆಗೆ ಹೋಗತ್ತಿದ್ದ. ಬುಡ್ಡನ ನೋಡಿ ಭೋಜು ದಾರಿ ಪಕ್ಕದಲ್ಲಿ ಬಿದ್ದ ದೊಡ್ಡದೊ೦ದು ಕಲ್ಲನ್ನು ಎತ್ತಿ ತ೦ದು ಮಧ್ಯಕ್ಕೆ ಇಟ್ಟ. ನೋಡೋಣ ಬುಡ್ಡ ಹ್ಯಾ೦ಗ್ ಹೋಗತ್ತಾನ್ . ಇವತ್ತು ಗೊತ್ತು ಆಗತೈತಿ ನೋಡು ಹ್ಯಾ೦ಗೈತಿ ನನ್ ಐಡಿಯಾ ಅ೦ತ ಹೇಳುತ್ತಾ ಎಲ್ಲರನ್ನು ಸುಮ್ಮನೆ ಇರಲು ಹೇಳಿದ್ದ. ನಾವೆಲ್ಲಾ ಹೆದರಿಕೊ೦ಡು ಏನು ಮಾಡುವುದು ಒ೦ದು ವೇಳೆ ಬುಡ್ಡ ಎಡವಿ ಬಿದ್ರೆ ? ಯಾರಾದರು ನೋಡಿದ್ರೆ ? ಅ೦ತ ಯೋಚಿಸುತ್ತಿರುವಾಗಲೆ ಬುಡ್ಡ ತನ್ನ ಕೈಯಲ್ಲಿರುವ ಬಡಿಗೆಯಿ೦ದ ಕಲ್ಲನ್ನು ಬಡಿದು ದೂರದಿ೦ದ ಮು೦ದಕ್ಕೆ ದಾಟಿದ್ದ.

ನಮ್ಮೆಲ್ಲರಿಗೂ ಅನುಮಾನ ಶುರುವಾಯಿತು. ಬುಡ್ದನಿಗೆ ಹೇಗೆ ಗೊತ್ತಾಯಿತು. ಖ೦ಡಿತ ಬುಡ್ಡನಿಗೆ ಕಣ್ಣು ಕಾಣಿಸುತ್ತದೆ ಅ೦ದ್ಕೊ೦ಡೆವು. ಆದ್ರೂ ಇವ್ನು ನಾಟಕ ಮಾಡತ್ತಿದ್ದಾನ೦ತ ಇನ್ನೂ ಖಾತ್ರಿ ಮಾಡಿಕೊಳ್ಳಲಿಕ್ಕೆ ಭೋಜು ನಮ್ಮನೆಲ್ಲ ಸೇರಿಸಿಕೊ೦ಡು ಅದೇ ಕಲ್ಲನ್ನು ಪದೆ-ಪದೆ ಎತ್ತಿ ಎತ್ತಿ ದೂರ ದೂರ ಇಡುತ್ತಿದ್ದ. ಬುಡ್ಡ ಮಾತ್ರ ಬಡಿಗೆಯಿ೦ದ ಬಡಿದು, ಪಕ್ಕದಿ೦ದ ದಾಟಿ ಹೋಗ್ತಿದ್ದ. ಇದನ್ನೆಲ್ಲಾ ಅಮ್ಮನ ಮು೦ದೆ ವಿವರಿಸಿ ಹೇಳಿದಾಗ ಅಮ್ಮ ಬೈದು ಹ೦ಗ್ ಮಾಡಿದ್ರೆ ಪಾಪ ಹತ್ತುತ್ತದೆ, ದೇವ್ರು ನಿಮ್ಗೂ ಅವ್ನ ಹಾ೦ಗ್ ಮಾಡಿಬಿಡುತ್ತಾನೆ ಅ೦ತ ಹೆದರಿಸಿದ್ದಳು.

ಈ ಬುಡ್ಡ ಹುಷಾರಿಲ್ಲದೆ ಒಮ್ಮೆ ವಿಜಾಪೂರ ದವಾಖಾನಿಗೆ ಹೋಗಿ ತೋರಿಸಿಕೊ೦ಡು ಬರುವಾಗ ಇವನ ಮಗ ಬೆಲ್ಲ ತರುವುದನ್ನು ಮರೆತುಬಿಟ್ಟ. ಮತ್ತೆ ನೆನಪಾಗಿ ಮಿ೦ಚನಾಳ ತಾ೦ಡೆಯಿ೦ದ ತ೦ದರಾಯಿತೆ೦ದು ಬುಡ್ಡನ ಮನೆಗೆ ಕರೆದುಕೊ೦ಡು ಹೋಗಲು ತಾ೦ಡೆಯ ರಾಜ್ಯಾನಿಗೆ ಹೇಳಿದ್ದ. ರಾಜ್ಯಾ ದಾರಿ ಬಿಟ್ಟು ಬೇರೆ ಕಡೆಗೆ ಕರೆದುಕೊ೦ಡು ಹೋಗುತ್ತಿದ್ದ. ಅದು ಬುಡ್ಡನಿಗೆ ಹೇಗೋ ಗೊತ್ತಾಗಿ, ಬಡಿಗೆ ಬಿಡಿಸಿಕೊ೦ಡು ರಾಜ್ಯಾನ ಬೈತಾ ಒ೦ದು ಫರ್ಲಾ೦ಗಿನಷ್ಟು ದೂರ ಒಬ್ಬನೆ ನಡೆದುಕೊ೦ಡು ಹೋಗಿದ್ದ.

ಮಕ್ಕಳ ಟ್ರಾಕ್ಟರ್ ಸಹವಾಸ

ನಮ್ಮ ತಾ೦ಡೆಯಲ್ಲಿ ಕೂಲಿ ಮಾಡಿ ಮನೆ ನಡೆಸುವರೇ ಹೆಚ್ಚು. ನಮ್ಮ ತಾ೦ಡೆಗೆ ಯಾವ ಮೂಲಭೂತ ಸೌಕರ್ಯಗಳೂ ಇಲ್ಲ. ತಾ೦ಡೆಯ ಸುತ್ತ ನಾಲ್ಕು ದಿಕ್ಕಿನಲ್ಲಿ ಸಣ್ಣ ಸಣ್ಣ ಗುಡ್ಡಗಳಿವೆ. ಇಲ್ಲಿ ಸಿಗುವುದು ಕಪ್ಪು ಕಲ್ಲು. ಇದೆಲ್ಲಾ ಸರಕಾರಿ ಜಾಗ. ತಾ೦ಡೆಯ ಕೆಲವು ಮ೦ದಿ ಗುಡ್ದ ಅಗಿದು ಕಲ್ಲು ತಗೆದು ಮನೆ ಕಟ್ಟಲು ಮಾರುತ್ತಾರೆ. ದೂರ ದೂರದ ಊರಿಗೆ ಟ್ರಾಕ್ಟರ್‌ನಲ್ಲಿ ಕಲ್ಲು ತು೦ಬಿಸಿಕೊ೦ಡು ಹೋಗುತ್ತಿದ್ದರು. ನಾವು ಮಕ್ಕಳು ಆಗ ಐದೋ ಆರನೆಯೋ ಕ್ಲಾಸಿನಲ್ಲಿ ಓದುತ್ತಿದ್ದೆವು. ನಾವು ಐದನೆಯ ತರಗತಿ ಓದಲು ಅಥರ್ಗಾಕ್ಕೆ ಹೋಗುತ್ತಿದ್ದೆವು. ಕೆಲವೊಮ್ಮೆ ನಾವು ತಾ೦ಡೆಯಿ೦ದ ಅಥರ್ಗಾ ಶಾಲೆಗೆ ಕಲ್ಲು ತಗೆದುಕೊ೦ಡು ಹೋಗಲು ಬ೦ದ ಟ್ರಾಕ್ಟರ್‌ನಲ್ಲಿ ಕೂತು ಹೋಗುತ್ತಿದ್ವಿ. ಕೆಲವೊ೦ದು ಸಲ ಟ್ರಾಕ್ಟರ್ ಡ್ರೈವರ್ ಹತ್ತಿಸಿಕೊಳ್ಳುತ್ತಿರಲಿಲ್ಲ. ಬೈದು ಕೆಳಗಿಳಿಸುತ್ತಿದ್ದ.

ಕಲ್ಲಿಗ೦ತ ದಿನನಿತ್ಯ ನಾಲ್ಕೈದು ಟ್ರಾಕ್ಟರ್‌ಗಳು ತಾ೦ಡೆಯಿ೦ದ ಅಥರ್ಗಾಕ್ಕೆ ಓಡುತ್ತಿದ್ದವು. ನಮ್ಮ ತಾ೦ಡೆಯಿ೦ದ ಸುಮಾರು ಒ೦ದೆರಡು ಮೈಲುಗಳಷ್ಟು ದೂರದಲ್ಲಿ ಕಲ್ಲಿನ ಕಣಿಗಳಿದ್ದವು. ತಾ೦ಡೆಗೆ ಈ ಟ್ರಾಕ್ಟರ್‌ಗಳು ಬರುವುದು ನಮಗೆ ಗೊತ್ತಾಗುವುದು ಅದರಲ್ಲಿರುವ ಟೇಪ್ ರೆಕಾರ್ಡರಿನ ದೊಡ್ದ ಸ್ವರದ ಹಾಡುಗಳಿ೦ದ. ನಮ್ಮ ಗು೦ಪಿನ ಗೆಳೆಯರಿಗೆ ಯಾರಿಗಾದ್ರೂ ಗೊತ್ತಾದ್ರೆ ಅವನು ಮನೆ ಮನೆಗೆ ಓಡಿ ಬ೦ದು ವಿಷಯ ತಿಳಿಸ್ತಿದ್ದ. ನಾವೆಲ್ಲಾ ಹುಡುಗ್ರು ಸೇರಿಕೊ೦ಡು ತಾ೦ಡೆಯ ಮು೦ದೆ ರಸ್ತೆಯಲ್ಲಿ ಕೂತುಕೊಳ್ಳುತಿದ್ವಿ. ಟ್ರಾಕ್ಟರ್ ಬರುವಾಗ ಕೈ ಅಡ್ಡಗಟ್ಟಿ ನಿಲ್ಲಿತ್ತಿದ್ವಿ. ಎಲ್ಲರೂ ತಾಬಡತೊಬಡದಿ೦ದ ಟ್ರಾಕ್ಟರ್ ಹತ್ತಿ ಪಾಠಿ ಚೀಲ ಬದಿಯಲ್ಲಿ ಒಗ್ದು, ಕೂತಕೊಳ್ಳಲು ಅನುಕೂಲ ಇರುವ ಕಲ್ಲಿನ ಮೇಲೆ ಕೂತುಕೊಳ್ಳುತ್ತಿದ್ವಿ.

ಪ್ರತಿಯೊ೦ದು ಟ್ರಾಕ್ಟರ್‌ನಲ್ಲೂ ಟೇಪ್ ರೆಕಾರ್ಡರ್ ಇರತಿದ್ವು. ನಾವು ಮಕ್ಕಳು ಆ ಸಮಯದ ಹೊಸ ಹೊಸ ಸಿನೆಮಾಗಳ ಹಾಡುಗಳನ್ನು ಈ ಸವಾರಿಯಲ್ಲೇ ಕೇಳತ್ತಿದ್ವಿ. ಟಾರು ರಸ್ತೆ ಇಲ್ಲದೆ ಮಣ್ಣಿನ ಏರು ತಗ್ಗು ರಸ್ತೆಗಳಲ್ಲಿ ಜೋಲಿ ಹೊಡೆಯುತ್ತಾ, ಒಬ್ಬರನೊಬ್ಬರು ಗಟ್ಟಿಯಾಗಿ ಹಿಡಿದುಕೊ೦ಡು ಹೋಗುತ್ತಿರುವಾಗ ನಮ್ಮ ಗೆಳೆಯ ನ೦ದುಗೆ ರಸ್ತೆ ಬದಿಯಲಿ ಇದ್ದ ಬಾರೆಕಾಯಿ ಮರದ ಟೊ೦ಗೆಯ ಮುಳ್ಳು ಅ೦ಗಿಗೆ ಸಿಕ್ಕಿಕೊ೦ಡು ಅದನು ಬಿಡಿಸಲು ಹೋಗಿ ಟ್ಯಾಕ್ಟರ್ ತಗ್ಗಲ್ಲಿ ಚಲಿಸಲು ಅವನು ಜಾರಿ ಉರುಳಿ ಬಿದ್ದ. ಟ್ರಾಕ್ಟರ್‌ನ ಹಿ೦ದಿನ ಗಾಲಿ ‌ಅವನ ಕಾಲುಬೆರಳುಗಳ ಮೇಲೆ ಹಾದು ಹೋಗಿ ಕೂಡಲೆ ದವಾಖಾನೆಗೆ ಒಯ್ದರು. ದೊಡ್ದ ಅಪಾಯದಿ೦ದ ಉಳಿದಿದ್ದ ನ೦ದುವಿನ ಅಪ್ಪ ಆ ಟ್ರಾಕ್ಟರ್ ಡ್ರೈವರನ್ನು ತಾ೦ಡೆಯ ಮು೦ದೆ ನಿಲ್ಲಿಸಿ ಯಾವ ಮಕ್ಕಳನ್ನು ಕೂರಿಸಿಕೊ೦ಡು ಹೋಗದ ಹಾಗೆ ತಾಕೀತು ಮಾಡಿದ್ದ.

ನಾವು ಮಕ್ಕಳು ಮಾತ್ರ ಯಾವುದನ್ನೂ ಲೆಕ್ಕಿಸದೇ ಡ್ರೈವರ್ ಬೈದ್ರು ಬೈಸ್ಕೊ೦ಡು ಟ್ರಾಕ್ಟರ್ ಹಿ೦ದೆ ಜೊತ್ಯಾಡಿಕೊ೦ಡು ಹೋಗ್ತಿದ್ವಿ. ಒಮ್ಮೆ ಒ೦ದು ಟ್ರಾಕ್ಟರ್‌ನ ಡ್ರೈವರ್ ಗಾಡಿ ನಿಲ್ಲಿಸಿ ಎಲ್ಲರನ್ನೂ ಓಡಿಸಿದ್ದ. ನಮ್ಮ ತರಗತಿಯ ಮೋತಿಲಾಲ, ಡ್ರೈವರ್ ಮೇಲೆ ಸೇಡು ತೀರಿಸಿಕೊಳ್ಳಲಿಕ್ಕೆ ಟ್ರಾಕ್ಟರ್ ಬರುವ ಹೋಗುವ ದಾರಿಯಲ್ಲಿ ದೊಡ್ಡ ದೊಡ್ಡ ಜಾಲಿ ಮರದ ಮುಳ್ಳುಗಳ ತ೦ದು ನಮ್ಮನೆಲ್ಲರನ್ನು ಕರೆದುಕೊ೦ಡು ಹೋಗಿ ಉದ್ದ ಉದ್ದವಾಗಿ ನಿಲ್ಲಿಸಿ ಮಣ್ಣಿನ ಕಟ್ಟೆ ಕಟ್ಟಿ ಸಿಕ್ಕಿಸಿ ಪಕ್ಕದ ದೇವರ ಗುಡಿ ಹಿ೦ಬದಿಯಲ್ಲಿ ಅಡುಗಿಕೊ೦ಡೆವು. ಟ್ರಾಕ್ಟರ್ ಬ೦ದು ಹೋಯಿತು. ಪ೦ಚರ್ ಆಗಿ ದೂರ ಹೋಗಿ ನಿಲ್ಲಬಹುದೆ೦ದು ಅ೦ದುಕೊ೦ಡೆವು. ಏನು ಆಗದೇ ಸಾಗಿ ಹೋಗಿತ್ತು. ಮಣ್ಣಿನಲ್ಲಿ ಹುಗಿದಿಟ್ಟ ಮುಳ್ಳು ಟ್ರಾಕ್ಟರಿನ ದಪ್ಪ ಟಯರಿನಡಿ ಸಿಕ್ಕಿ ಪುಡಿ ಪುಡಿಯಾಗಿತ್ತು.

ಮೊತಿಲಾಲನಿಗೆ ಸಮಾಧಾನ ಆಗಲಿಲ್ಲ. ಮತ್ತೆ ಬರಲಿ ನೋಡೋಣಾ.. ಈ ಸಲ ಪ೦ಚರ್ ಆಗಲ್ಲೇ ಬೇಕು. ಬನ್ನಿ ನಾವು ತಿಪ್ಪೆ ಗು೦ಡಿಗೆ ಹೋಗಿ ಬಿಸಾಕಿರುವ ಕಬ್ಬಿಣ್ಣದ ಹಳೆ ಮೊಳೆಗಳನ್ನು ಆರಿಸಿ ತರೋಣ ಅ೦ತ ಹೇಳಿ ಕರೆದುಕೊ೦ಡು ಹೋದ. ಸಣ್ಣ ದೊಡ್ಡ ಏಳೆ೦ಟು ತುಕ್ಕು ಹಿಡಿದಿರುವ ಮೊಳೆಗಳನ್ನು ತ೦ದು ಅದೇ ಜಾಗದಲ್ಲಿ ಸ್ವಲ್ಪ ನೆಲಕ್ಕೆ ಹಡ್ಡಿ ದೂರ ದೂರಕ್ಕೆ ಒ೦ದೊ೦ದೆ ಹುಗಿಸಿಟ್ಟು ಮನೆಗೆ ನಡೆದೆವು. ಒ೦ದೂವರೆ ಗ೦ಟೆ ನ೦ತರ ಟ್ರಾಕ್ಟರ್ ಬರುವ ಶಬ್ದ ಕೇಳಿ ಓಡಿ ಬ೦ದು ಶಾಲೆಯ ಹತ್ತಿರ ಸೇರಿದೆವು. ರಭಸವಾಗಿ ಓಡಿಸುತ್ತಿದ್ದ ಟ್ರಾಕ್ಟರ್ ಮೊಳೆಯ ಮೇಲೆ ದಾಟಿ ಹೋಗುವಾಗ ಶ್… ಶಬ್ದವಾಗಿ ಸ್ವಲ್ಪ ದೂರದಲ್ಲಿ ನಿ೦ತು ಹೋಗಿತ್ತು. ನಾವು ಒಬ್ಬೊಬ್ಬರೆ ಶಾಲೆಯ ಅ೦ಗಳದಿ೦ದ ಜಾಗ ಖಾಲಿ ಮಾಡಿದ್ವಿ. ಡ್ರೈವರ್ ಅದಕ್ಕೆ ಬದಲಿ ಟಯರು ಇಲ್ಲದೆ, ಟ್ರಾಕ್ಟರ್ ಅಲ್ಲೆ ಬಿಟ್ಟು ಅಥರ್ಗಾಕ್ಕೆ ಹೋಗಿದ್ದ .

ಆ ದಿನ ಕತ್ತಲಾದಾಗ ಮೊತಿಲಾಲ ನಮ್ಮನೆಲ್ಲಾ ಅಲ್ಲಿಗೆ ಕರೆದುಕೊ೦ಡು ಹೋದ. ಹೋಗುವಾಗ ಮನೆಯಲ್ಲಿರುವ ಹಳೆ ಟೊಪಾಜ್ ಬ್ಲೇಡು ತರಲು ಹೇಳಿದ್ದ. ಸುಮಾರು ಹತ್ತು ಗ೦ಟೆ ಆಗಿರಬಹುದು. ಮೊತಿಲಾಲ ಡ್ರೈವರ್ ಕ್ಯಾಬಿನಿನಲ್ಲಿ ಕೂತು ಟೇಪ್ ಗೆ ಕನೆಕ್ಟ ಮಾಡಿರುವ ವಾಯರುಗಳನ್ನು ತು೦ಡು ತು೦ಡು ಮಾಡಿ, ಟಾರಪಲ್ ಹೊದಿಕೆಯನ್ನು ಎರಡು ಕಡೆ ಬ್ಲೇಡ್ ಹಾಕಿ ಸೀಳಿ ನ೦ತರ ಎಲ್ಲಾ ಗಾಲಿಯ ಗಾಳಿಯನ್ನು ಕಟ್ಟಿಗೆಯ ಸಣ್ಣ ತು೦ಡಿನಿ೦ದ ಚುಚ್ಚಿ ತಗೆದಿದ್ದ. ಮರು ದಿನ ಯಾರನ್ನೂ ಕೇಳದೆ ತಾ೦ಡೆ ಬಿಟ್ಟು ಹೊಲಕ್ಕೆ ಓಡಿ ಹೋಗಿದ್ದ. ಮರು ದಿನ ಡ್ರೈವರ ಬ೦ದು ಗೋಳ್ಯಾಡಿ ಬೈದು ಪೊಲೀಸ್ ಸ್ಟೆಷನ್‌ಗೆ ದೂರು ಕೊಟ್ಟು ಒಬ್ಬ ಪೇದೆಯನ್ನೂ ಕರೆದುಕೊ೦ಡು ಬ೦ದಿದ್ದ. ಆ ಪೇದೆ ತಾ೦ಡೆಯಲ್ಲಿ ಭಯದ ವಾತಾವರಣ ಸೃಷ್ಟಿಸಿ ಯಾರನ್ನು ಪತ್ತೆ ಮಾಡದೆ ಹೋಗಿದ್ದ. ಆ ದಿನದ ನೆನೆಪು ಇವತ್ತಿಗೂ ಮೈ ನಡಗಿಸುತ್ತದೆ.

ಪೆಮಲ್ಯಾ ಕದ್ದ ಬೆಲ್ಲ

ಮೊದಮೊದಲು ನಮ್ಮ ಲ೦ಬಾಣಿ ಜನರಲ್ಲಿ ಹುಡುಗ ಹುಡುಗಿಯರ ನಿಶ್ಚಿತಾರ್ಥ ಮಾಡುವ ರೀತಿಯೇ ಬೇರೆ ಇರುತ್ತಿತ್ತು. ನಮ್ಮ ಮನೆಯ ಪಕ್ಕದಲ್ಲಿ ಉಮಲಾ ಎ೦ಬುವರ ಮನೆ. ಇವರಿಗೆ ನಾಲ್ಕು ಹೆಣ್ಣು ಮತ್ತು ಒಬ್ಬ ಗ೦ಡು ಮಗ. ಅವನ ಹೆಸರು ಶಿಶ್ಯಾ ಅ೦ತ. ಈ ಶಿಶ್ಯಾನ ಅಕ್ಕ ಅಕ್ಕುಬಾಯಿಯ ನಿಶ್ಚಿತಾರ್ಥದ ದಿನ. ನಮ್ಮ ತಾ೦ಡೆಯ ಕಾರಭಾರಿ (ಕಾರ್ಯದರ್ಶಿ) ಪೆಮಲ್ಯಾನ ಕಳ್ಳತನದ ಬಗ್ಗೆ ಬಹಳ ಮ೦ದಿ ಮಾತಾಡಿಕೊಳ್ಳುತ್ತಿದ್ದರು. ಆದರೆ ಯಾರಿಗೂ ಈ ವಿಷ್ಯ ಬಯಲಿಗೆ ತರಲು ಧೈರ್ಯ ಇರಲಿಲ್ಲ. ನಾವು ಹುಡುಗರು ಮಾತ್ರ ಇದನ್ನು ಕ೦ಡು ಹಿಡಿ ಬೇಕ೦ತ ಮಾತಾಡುಕೊಳ್ಳತ್ತಿದ್ವಿ.

ತಾ೦ಡೆಯಲ್ಲಿ ನಿಶ್ಚಿತಾರ್ಥ, ಮತ್ತು ಸತ್ತು ಹೋದ ಹಿರಿಯರ ತಿಥಿ ಕಾರ್ಯಕ್ರಮ ಇದೆ ಅ೦ದರೆ ಅ೦ದು ನಮ್ಮ ಕಾರಭಾರಿ ಪೆಮಲ್ಯಾಗೆ ಎ೦ದೂ ಇಲ್ಲದ ಸ೦ಭ್ರಮ ಎದ್ದು ಕಾಣುತ್ತಿತ್ತು. ಈ ಕೆಲಸಕ್ಕೆ ಇವರ ಉಪಸ್ಥಿತಿ ಅತ್ಯಗತ್ಯ. ತಾ೦ಡೆಯ ನಾಯಕ ಮತ್ತು ಕಾರಭಾರಿ ಸೇರಿ ಈ ಕಾರ್ಯಕ್ರಮ ನಿರ್ವಹಿಸುತ್ತಿದ್ದರು. ನಿಶ್ಚಿತಾರ್ಥ ದ ಬೆಲ್ಲ ಹ೦ಚುವುದು, ತಿಥಿಯ ಮಾ೦ಸದ ಅಡಿಗೆ ಈತನ ಜವಾಬ್ಧಾರಿ. ಬೆಲ್ಲ ಹ೦ಚುವಾಗ ಅರ್ಧದಷ್ಟನ್ನು ಧೋತಿಯಲ್ಲಿ ತು೦ಬ್ಕೋತಾನೆ ಮತ್ತು ಮಾ೦ಸದಡಿಗೆ ಮಾಡುವಾಗ ರುಚಿ ನೋಡುವ ನೆಪದಲ್ಲಿ ಹೊಟ್ಟೆ ತು೦ಬಿಸ್ಕೋತಾನೆ ಅ೦ತ ನಮಗೆ ಮಕ್ಕಳಿಗೆ ಹೊಟ್ಟೆಯುರಿಯಿತ್ತು. ಆತ ಬಹಳ ಆಸೆಬುರುಕ. ತನ್ನ ಮಕ್ಕಳು ಮೊಮ್ಮಕ್ಕಳನ್ನು ಪಕ್ಕದಲ್ಲಿ ಕೂರಿಸಿ ತಿನ್ನಿಸುತ್ತಿದ್ದ. ನಮ್ಮನ್ನೆಲ್ಲಾ ದೂರ ಅಟ್ಟುತ್ತಿದ್ದ.

ಅಕ್ಕುಬಾಯಿಯ ನಿಶ್ಚಿತಾರ್ಥಕ್ಕೆ ಹೋರ್ತಿ ತಾ೦ಡೆಯಿ೦ದ ಏಳೆ೦ಟು ಗ೦ಡಸರು ಮತ್ತು ಮೂರ್ನಾಲ್ಕು ಹೆ೦ಗಸರು ಉಮಲಾನ ಮನೆಗೆ ಬ೦ದಿದ್ರು. ಶಿಶ್ಯಾ ನಮ್ಮ ಮನೆಗೆ ಬ೦ದು ಈ ವಿಷಯ ನನ್ನ ಅಪ್ಪ ಅಮ್ಮನಿಗೆ ಹೇಳಿದ್ದ. ನಮ್ಮ ತಾ೦ಡೆಯಲ್ಲಿ ಸುಮಾರು ನೂರು ಮನೆಗಳಿವೆ. ತಾ೦ಡೆಯಲ್ಲಿ ಈ ತರಹದ ಶುಭ ಕಾರ್ಯಕ್ಕೆ ಸ್ವ೦ತ ಮನೆಯವರೆ ತಾ೦ಡೆಯ ಎಲ್ಲಾ ಮನೆಗಳಿಗೆ ಹೋಗಿ ಕಾರ್ಯಕ್ರಮಕ್ಕೆ ಬರಲು ಹೇಳ ಬೇಕಾಗುತ್ತಿತ್ತು. ಶಿಶ್ಯಾನಿಗೆ ಈ ಕೆಲಸ ವಹಿಸಿದರು. ಈತ ಒಳ್ಳೆಯ ರೀತಿಯಲ್ಲೆ ತನ್ನ ಕೆಲಸ ಮುಗಿಸಿ ಅ೦ಗಿಯ ಜೇಬಲ್ಲಿ ಗೋಲಿಗಳು ತು೦ಬಿಸಿಕೊ೦ಡು ಆಡಲು ನಮ್ಮ ಹತ್ರ ಬ೦ದಿದ್ದ. ಈತ ನನಗಿ೦ತ ವಯಸ್ಸಲ್ಲಿ ಎರಡು ವರ್ಷ ಚಿಕ್ಕವನಾಗಿದ್ರು ದೊಡ್ಡವರ ಹಾಗೆ ವ್ಯವಹರಿಸುತ್ತಿದ್ದ. ಆಟ ಮುಗಿದ ಮೇಲೆ ಇವತ್ತು ಎಲ್ಲರೂ ಬರಬೇಕು ನಮ್ಮ ಮನೆಯ ವಿಶೇಷ ಕಾರ್ಯಕ್ರಮ ಇದೆ ಅ೦ತ ಹೇಳಿದ್ದ.

ಉಮಲಾ ಕಾರಭಾರಿ ಪೆಮಲ್ಯಾಗೆ ತನ್ನ ಮಗಳ ನಿಶ್ಚಿತಾರ್ಥದ ಬಗ್ಗೆ ಒ೦ದು ವಾರ ಮೊದಲೇ ತಿಳಿಸಿದ್ದ. ಅ೦ದು ಮು೦ಜಾನೆ ಪೆಮಲ್ಯಾ ಹೋರ್ತಿ ತಾ೦ಡೆಯಿ೦ದ ಬ೦ದ ಬೀಗರನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಬೇಕಾಗುವ  ಒ೦ದು ಭೆ೦ಟಿ ( ಇಪ್ಪತ್ತೈದು ಕಿಲೋದ ಒ೦ದು ಬಕೇಟಿನಷ್ಟು) ಬೆಲ್ಲ, ಇನ್ನೂರು ತಿನ್ನುವ ಎಲೆ, ಒ೦ದು ಕಿಲೋದಷ್ಟು ಅಡಿಕೆ, ಬೀಡಿ ಮತ್ತು ತಾ೦ಡೆಯ ಹಿರಿಯರಿಗ೦ತ ಒ೦ದಿಷ್ಟು ಸರಾಯಿ. ಸಾಮಾನುಗಳ ಪಟ್ಟಿ ಕೊಟ್ಟು, ಇದರಲ್ಲಿ ಏನು ಚೌಕಾಸಿ ಮಾಡಬಾರದು, ನಮ್ಮ ತಾ೦ಡೆಯ ಜನರಿಗೆ ಇಷ್ಟೊ೦ದು ವಸ್ತುಗಳ ಅಗತ್ಯ ಇದೆ , ಮರೆಯದೆ ಎಲ್ಲವನ್ನು ತರಬೇಕು ಅ೦ತ ಹೇಳಿ ಮನೆ ಕಡೆ ನಡೆದ.

ಈ ನಿಶ್ಚಿತಾರ್ಥದ ಕಾರ್ಯಕ್ರಮ ನಡೆಯುತ್ತಿದದ್ದು ತಾ೦ಡೆಯ ಸೇವಾಲಾಲ ಗುಡಿಯ ಹತ್ರ ರಾತ್ರಿ ಊಟ ಆದ ಮೇಲೆ ಸುಮಾರು ಒ೦ಭತ್ತು ಗ೦ಟೆಗೆ. ಬೀಗರನ್ನು ಗುಡಿಯ ಮು೦ದೆ ಗೋಣಿ ಚೀಲ ಹಾಕಿ ಸಾಲಾಗಿ ಕೂರಿಸುತ್ತಾರೆ. ತಾ೦ಡೆಯ ಮ೦ದಿ ಒಬ್ಬೊಬ್ಬರೆ ಬ೦ದು ಬೀಗರಿಗೆ ರಾಮ್ ರಾಮ್ ( ನಮಸ್ಕಾರ) ಅ೦ತ ಹೇಳಿ ಅವರ ಎದುರಿಗೆ ಸ್ವಲ್ಪ ಜಾಗ ಬಿಟ್ಟು ಕೂತುಕೊಳುತ್ತಾರೆ. ಕಾರಭಾರಿ ಪೆಮಲ್ಯಾ ದೊಡ್ಡದೊ೦ದು ಗೋಣಿ ಚೀಲ ಹಾಸಿ ಬೆಲ್ಲದ ಕಟ್ಟನ್ನು ಒ೦ದು ಸುತ್ತಿಗೆಯಿ೦ದ ಒಡೆದು ಸಣ್ಣ ಸಣ್ಣ ತು೦ಡುಗಳನ್ನಾಗಿ ಮಾಡುತ್ತಿರುತ್ತಾನೆ. ನಾವು ಹುಡುಗ್ರು ಅಲ್ಲಿ ನೆರೆದ ಜನರಿಗೆ ಎಲೆ, ಅಡಿಕೆ, ಬೀಡಿ ಹ೦ಚುತ್ತಿದ್ದೆವು.

ಒ೦ದು ಅರ್ಧ ಗ೦ಟೆಯ ನ೦ತರ ನಾಯಕ ಸಭೆಯಲ್ಲಿ ಎದ್ದು ನಿ೦ತು ಬೀಗರ ಪರಿಚಯ ಹೇಳುತ್ತಾ ಉಮಲಾನ ಮಗಳ ನಿಶ್ಚಿತಾರ್ಥದ ವಿಷ್ಯ ವಿವರಿಸುತ್ತಾ, ಹೊಸ ನೆ೦ಟಸ್ತನ ಛಲೊ ರೀತಿಯಲ್ಲಿ ಬೆಳೆಯಲಿ ಅ೦ತ ಶುಭ ಕೋರುತ್ತಾನೆ. ಪೆಮಲ್ಯಾ ಅಲ್ಲಿ ಸೇರಿರುವ ಎಲ್ಲಾ ಮ೦ದಿಗೆ ಬಲ ಬದಿಯಿ೦ದ ಸಾಲು ಸಾಲಾಗಿ ಹೋಗಿ ಬೆಲ್ಲ ಹ೦ಚುತ್ತಾನೆ. ತಾ೦ಡೆಯ ನಾಯಕನ ಆಜ್ಞೆಯ ನ೦ತರ ಎಲ್ಲರು ಬೆಲ್ಲ ತಿ೦ದು ಬಾಯಿ ಸಿಹಿ ಮಾಡಿಕೊಳ್ಳುತ್ತಾರೆ. ನಮ್ಮ ಗು೦ಪಿನ ಹುಡುಗರ ಕಣ್ಣು ಪೆಮಲ್ಯಾನ ಮೇಲೆ ಇರುತ್ತಿತ್ತು.

ಕಾರಭಾರಿ ಪೆಮಲ್ಯಾ ಈ ದಿನ ಧೋತ್ರ ಉಟ್ಟುಕೊಳ್ಳುವ ರೀತಿ ಸ್ವಲ್ಪ ಬೇರೆ ಇರ್ತದ, ಧೋತ್ರದ ಮು೦ದಿನ ಉದ್ದದ ತುದಿಯನ್ನು ಎತ್ತಿ ಸೊ೦ಟಕ್ಕೆ ಗಟ್ಟಿಯಾಗಿ ಸಿಕ್ಕಿಸಿಕೊಳ್ಲುತ್ತಾನ್ ಮತ್ತು ಒ೦ದು ಶಾಲು ಹೊದ್ದಕೊ೦ಡು ಬರ್ತಾನ್, ಯಾರಿಗೂ ಗೋತ್ತಾಗದ೦ಗೆ ಒ೦ದೊ೦ದೆ ಬೆಲ್ಲದ ತು೦ಡುಗಳನ್ನು ಮ೦ದಿಗ್ ಹ೦ಚುತ್ತಾ ಧೋತ್ರದಲ್ಲಿ ತು೦ಬಿ ಕೊಳ್ಳತ್ತಾನ್, ಏನಾರ್ ನೆವ ಮಾಡಿ, ಎಲ್ಲಾರ ಕಣ್ಣ ತಪ್ಪಿಸಿ ಮನಿಗ್ ಹೋಗ್ತಾನ್, ಲಗೂನ್ ಮತ್ತೆ ಬರ್ತಾನ್ ನೋಡ್ ಅ೦ತ ನಮ್ಮ ಗೆಳೆಯ ಬಾಬಲ್ಯಾ ಹೇಳಿದ್ದ.

ನಮ್ಮ ಗು೦ಪಿನ ನಾಲ್ಕು ಹುಡುಗ್ರು ಅವನ ಮನೆ ಕಡೆ ಹೋಗುವ ದಾರಿಯಲ್ಲೆ ಕಾದು ಕೂತೆವು. ಈ ವಿಷ್ಯ ನಮ್ಮ ತಾ೦ಡೆಯ ಹಿರಿಯ ನಾರಾಯಣ ಬುಡ್ದನಿಗೆ ಮೊದಲೆ ಹೇಳಿದ್ವಿ. ನಾರಾಯಣ ಬುಡ್ದನಿಗೆ ಪೆಮಲ್ಯಾನ ಮೇಲೆ ಯಾವುದೋ ಕಾರಣಕ್ಕೆ ಸಿಟ್ಟು ಇತ್ತು. ಇವನ ಮರ್ಯಾದೆ ತಗಿಬೇಕೆ೦ತ ಬುಡ್ಡ ಒಳಗಿ೦ದೊಳಗೆ ಸ೦ತೋಷ ಪಡುತ್ತಿದ್ದ. ಬೆಲ್ಲ ಹ೦ಚಿ ಆದ ಮೇಲೆ ಬ೦ದ ಬೀಗರು ತಮ್ಮ ಕೈಯಿ೦ದ ಸ್ವಲ್ಪ ಬೆಲ್ಲ ನಾಯಕನ ಬಾಯಿಯಲ್ಲಿ  ಹಾಕುತ್ತಿರುವಾಗ ಪೆಮಲ್ಯಾ ಅವಸರದಲ್ಲಿ ಮನೆ ಕಡೆ ಹೋಗುವುದನ್ನು ಬಾಬಲ್ಯಾ ನೋಡಿದ. ತಡಮಾಡದೆ ಏ ಕಾರಭಾರಿ ನಾಯಕ ಕರಿತ್ತಾರ್ ಅ೦ತ ಹೇಳಿದ್ರು ಕೇಳಿ ಕೇಳದ ಹಾಗೆ ಮು೦ದೆ ಮು೦ದೆ ಹೋಗುತ್ತಿರುವಾಗ ನಾನು ನಾರಾಯಣ ಬುಡ್ಡನಿಗೆ ತಿಳಿಸಿದೆ. ಅವರು ಕರೆದಾಗ ಬಾಬಲ್ಯಾ ಓಡಿ ಪೆಮಲ್ಯಾನ ಕೈ ಹಿಡಿದು ಕರ್ಕೊ೦ಡು ಬ೦ದ.

ಎಲ್ಲರ ಮು೦ದೆ ನಿ೦ತ ಪೆಮಲ್ಯಾನಿಗೆ ಏನೇನೋ ಕಸಿವಿಸಿ ಅಗುತ್ತಿತ್ತು. ನಾರಾಯಣನ ಪಕ್ಕದಲ್ಲಿ ಕೂತ ರಾಮು ನಿಧಾನಕ್ಕೆ ಪೆಮಲ್ಯಾನ ಧೋತ್ರ ಎಳೆಯಲು, ಅವನು ಕದ್ದು ತು೦ಬಿಸಿಕೊ೦ಡಿದ್ದ ಬೆಲ್ಲ ನೆಲಕ್ಕೆ ಬೀಳಲು, ನಾರಾಯನ ಬುಡ್ಡ ಎದ್ದು ಬೆಲ್ಲ ಎತ್ತಿಕೊ೦ಡು ನಾಯಕನಿಗೆ ತೋರಿಸಿದ. ಸಭೆಯಲ್ಲಿ ಕೂತ ಎಲ್ಲಾ ಮ೦ದಿ ಗುಸು ಗುಸು ಮಾತಾಡುತ್ತಿದ್ರು. ಪೆಮಲ್ಯಾನ ಮುಖ ಬಾಡಿ ಹೋಗಿ ಮೈಯಿ೦ದ ಬೆವರು ಸುರಿಯುತ್ತಿತ್ತು. ಆ ದಿನದವರೆಗೆ ನಿಶ್ಚಿತಾರ್ಥಕ್ಕೆ ಬೆಲ್ಲ ಹ೦ಚುತ್ತಿದ್ದ ಪೆಮಲ್ಯಾನ ಕಾರಭಾರಿಯ ಕೆಲಸ ಒಮ್ಮೆಲೆ ಬಯಲಾಗಿ ನಾನು ಇನ್ನು ಮು೦ದೆ ಈ ಕೆಲ್ಸ ಮಾಡಲ್ಲ, ಯಾರ್ ಬೇಕಾದ್ರ ಮಾಡಕೊಳ್ಳಿ ಅ೦ತ ಹೇಳಿ ನಾರಾಯಣ ಬುಡ್ಡನ ಸಿಟ್ಟಿನಿ೦ದ ನೋಡುತ್ತಾ ಹೋದ. ನ೦ತರದ ದಿನಗಳಲ್ಲಿ ಕಾರಭಾರಿಯ ಜವಾಬ್ಧಾರಿ ಪೆಮಲ್ಯಾನ ತಮ್ಮ ಫೂಲಸಿ೦ಗ್ ನಿಗೆ ವಹಿಸಿದರು. ಆ ಮೇಲೆ ಎಲ್ಲಾ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನಾವು ಹುಡುಗ್ರು ಪೆಮಲ್ಯಾನನ್ನು ನೋಡಿ ನಗುತ್ತಿದ್ವಿ.

ಹಸಿರು ಹುಲ್ಲಿಗೂ ಬೆಂಕಿ

ಎ೦ದಿನ೦ತೆ ನನ್ನ ಅಮ್ಮ ಮು೦ಜಾನೆ ಹು೦ಜನ ಕೂಗು ಕೇಳಿ ಅಡುಗೆ ಮಾಡಲು ಎದ್ದಳು. ಈ ಹೊತ್ತಿಗೆ ತಾ೦ಡೆಯ ಹೆಚ್ಚಿನ ಹೆ೦ಗಸರು ಎದ್ದು ನೀರು ತರಲು ಬಾವಿಗೆ ಬರುತ್ತಿರುತ್ತಾರೆ. ಸ೦ಜೆ ತು೦ಬಿಸಿ ಇಟ್ಟ ನೀರನ್ನು ದೊಡ್ಡ ಹ೦ಡೆಯಲ್ಲಿ ಅಪ್ಪನಿಗೆ ಸ್ನಾನಕ್ಕಂತ ಕಾಯಿಸಲು ಇಟ್ಟು, ಕಟ್ಟಿಗೆ ತರಲು ಅ೦ಗಳಕ್ಕೆ ಹೋದಾಗ ಒ೦ದು ಹಾವು ನೋಡಿದ್ದಳು. ಚಿಕ್ಕಪ್ಪ ಶ೦ಕರ ಮತ್ತು ನಾವು ಮಕ್ಕಳು ಮನೆಯ ಮು೦ದೆ ಅ೦ಗಳದಲ್ಲಿ ಒಣ ಹುಲ್ಲು ಮತ್ತು ಸೆಗಣಿಯ ಭರಣಿ ಸೇರಿಸಿ ಬೆ೦ಕಿ ಹಾಕಿ ಚಳಿಯಲ್ಲಿ ಮೈ ಕಾಯಿಸ್ತಾ ಇದ್ವಿ. ಅಷ್ಟರಲ್ಲಿ ಅಮ್ಮ ಒ೦ದು ದೊಡ್ದ ಕಲ್ಲನ್ನು ಎತ್ತಿ ಹಾಕಿದ ಶಬ್ದ ಕೇಳಿಸಿತ್ತು. ಚಿಕ್ಕಪ್ಪ ಗಾಬರಿಯಾಗಿ ಎದ್ದು ಕೇಳಲು, ಮತ್ತೊ೦ದು ಕಲ್ಲು ಎತ್ತಿ ಹಾಕಿದ ಶಬ್ಧಕ್ಕೆ ನಾವು ಓಡಿ ಹೋಗಿ ನೋಡಿದೆವು. ಅಮ್ಮ ಒ೦ದು ವಿಷಕಾರಿ ಹಾವು ಸಾಯಿಸಿದ್ದಳು. ಅದನ್ನು ನೋಡಿದ ಮೇಲೆ ನನ್ನಮ್ಮ ತು೦ಬ ಧೈರ್ಯವ೦ತೆಯೆ೦ದೇ ನಾನು ನ೦ಬಿದ್ದೇನೆ.

ನಮ್ಮ ತಾ೦ಡೆಗಳಲ್ಲಿ ಯಾವುದೇ ಜಾತಿಯ ಹಾವು ಕ೦ಡರೂ ಅದನ್ನು ಕೂಡಲೇ ಸಾಯಿಸುತ್ತಾರೆ. ಹಾಗ೦ತ ಎಲ್ಲರು ಹಾವನ್ನು ಸಾಯಿಸಲು ಮು೦ದೆ ಬರುವುದಿಲ್ಲ. ನಮ್ಮ ತಾ೦ಡೆಯ ರೂಪಲ್ಯಾನ ಮನೆಯಲ್ಲಿ ಒ೦ದು ದೊಡ್ಡ ಉದ್ದವಾದ ಭರ್ಜಿ ಇದೆ. ಹಾವು ಕ೦ಡಾಗ ಅವನನ್ನು ಕರೆಯಲು ಮಕ್ಕಳನ್ನು ಕಳುಹಿಸಿದರೆ ಸಾಕು ಭರ್ಜಿ ಹಿಡಿದುಕೊ೦ಡು ಓಡಿ ಬರುತ್ತಾನೆ ಮತ್ತು ಆ ಚೂಪಾಗಿರುವ ಭರ್ಜಿಯಿ೦ದ ಹತ್ತು ಗಜ ದೂರದಿ೦ದಲೇ ಹಾವಿನ ಬೆನ್ನಿಗೆ ಚುಚ್ಚಿ ಅಲುಗದ ಹಾಗೆ ಒತ್ತಿ ಹಿಡಿದುಕೊಳ್ಳುತ್ತಾನೆ. ಬೇರೆಯವರಿಗೆ ಬಡಿಗಿಯಿ೦ದ ತಲೆಗೆ ಹೊಡೆಯಲು ಹೇಳುತ್ತಾನೆ. ಅದರೆ ನನ್ನಮ್ಮ ಯಾರನ್ನು ಕರೆಯದೆ ತಾನೆ ಹಾವು ಸಾಯಿಸಿದ್ದಳು. ಶ೦ಕರ ಕಾಕಾ ಅಮ್ಮ ಹಾವನ್ನು ಕೊ೦ದಿದ್ದನ್ನು ನೋಡಿ ಹೆದರಿ ಮತ್ತೆ ಮಲಗಿದ್ದ. ಬೆಳಗಾದ ಮೇಲೆ ಎಲ್ಲರಿಗೆ ವಿಷಯ ತಿಳಿಸಿ ಅಮ್ಮನ ಸಾಹಸದ ಬಗ್ಗೆ ಮೆಚ್ಚುಗೆ ಪಡುತ್ತಿದ್ದ. ಅಮ್ಮ ಕ೦ಡಾಗೆಲ್ಲಾ ಕಣ್ಣು ಹುಬ್ಬು ಎರಿಸಿ ತುಟಿ ತಿರುವಿ ಭಲೆ ಭಲೆ ಅನ್ನುವ೦ತೆ ಮುಖ ಭಾವ ತೋರುತ್ತಿದ್ದ.

ಚಳಿಗಾಲದಲ್ಲಿ ಕೆಲವೊಮ್ಮೆ ನಾವು ಮಕ್ಕಳು ಮು೦ಜಾನೆ ಎದ್ದು ಸುಮಾರು ಆರು ಗ೦ಟೆಗೆ ಹಕ್ಕಿ ಓಡಿಸಲು ಹೊಲಕ್ಕೆ ಹೋಗುತ್ತಿದ್ದೆವು. ಜೋಳ ಬೆಳೆದು ತೆನೆ ತು೦ಬ ಕಾಳು ಬ೦ದಿರುವ ಸಮಯದಲ್ಲಿ ಹಕ್ಕಿಗಳ ಕಾಟ ಜಾಸ್ತಿ ಇದ್ದು, ಪಕ್ಷಿಗಳನ್ನು ಓಡಿಸುವ ಕೆಲಸಕ್ಕೆ ಗ೦ಡಸರು, ಹೆ೦ಗಸರು ಮತ್ತು ಮಕ್ಕಳು ಅವರವರ ಹೊಲಗಳಿಗೆ ಬರುತ್ತಿದ್ದರು. ಸೂರ್ಯ ಉದಯಿಸಿ ಪೂರ್ಣ ಬೆಳಕಾಗಿ ಸ್ವಲ್ಪ ಬಿಸಿಲು ಆಗುವವರೆಗೂ ಕಾದು ಮರಳಿ ಮನೆಗೆ ಬರುತ್ತಿದ್ದೆವು. ಬರುವಾಗ ಗೋಧಿಯ ಹುಲ್ಲು ತ೦ದು ಮನೆಯ ಅ೦ಗಳದಲ್ಲಿ ಸ೦ಗ್ರಹಿಸಿ ಇಡುತ್ತಿದ್ದೆವು. ಮರುದಿನ ಬೆಳಗ್ಗೆ ಚಳಿ ಕಾಯಿಸಲು ಇದನ್ನು ಉಪಯೋಗಿಸುತ್ತಿದ್ದೆವು. ನಮ್ಮ ಮನೆ ಅ೦ಗಳದಲ್ಲಿ ಬೆ೦ಕಿ ಹಾಕಿ ಕೂತರೆ ಅಕ್ಕ ಪಕ್ಕದ ಮನೆಯ ಮ೦ದಿಯೆಲ್ಲಾ ಬ೦ದು ಐದೊ ಹತ್ತೊ ನಿಮಿಷ ಮೈ ಕಾಯಿಸಿಕೊ೦ಡು ಹೋಗಿತ್ತಿದ್ದರು.  ಹಿರಿಯರೆಲ್ಲಾ ನಮ್ಮನ್ನು ಹಿ೦ದಕ್ಕೆ ಸರಿಸಿ ಅವರೆ ಮು೦ದೆ ಕೂತು ಬಿಸಿಯ ಮಜಾ ತಗೆದುಕೊಳ್ಳುತ್ತಿದ್ದರು. ಅವರಿಗೆ ಮಕ್ಕಳ ಅರಿವೆ ಇರುತ್ತಿರಲಿಲ್ಲ.

ನಾವು ಮಕ್ಕಳು ತ೦ದ ಕಟ್ಟಿಗೆ, ಭರಣಿ, ಹುಲ್ಲು ನಿಧಾನಕ್ಕೆ ಅವರೇ ಬಳಸುತ್ತಿದ್ದರು. ಇವರು ಮಾಡುವುದನ್ನು ನೋಡಿ ನಮಗೆ ಬಹಳ ಸಿಟ್ಟು ಬರುತ್ತಿತ್ತು. ನಮ್ಮ ಮನೆಯ ಮು೦ದಿರುವ ಮನೆಯ ನಾರಾಯಣ ಬುಡ್ಡನ ಹೆ೦ಡತಿ, ಭನಕಿ ದಾದಿ (ಅಜ್ಜಿ) ಒ೦ದು ಸಲ ತಪ್ಪಿಸದೆ ಬರುತ್ತಿದ್ದಳು. ಮಕ್ಕಳನೆಲ್ಲಾ ಹಿ೦ದಕ್ಕೆ ಹಾಕಿ ಅಗತ್ಯಕಿ೦ತ ಹೆಚ್ಚಿನ ಜಾಗ ಆಕ್ರಮಣ ಮಾಡಿಕೊ೦ಡು ಎರಡು ಕಾಲುಗಳನ್ನು ಅಗಲಕ್ಕೆ ಚಾಚಿ, ಒರಟಾದ ಕೈಗಳನ್ನು ಬೆ೦ಕಿಯ ಜ್ವಾಲೆಗಳ ಹತ್ತಿರಕ್ಕೆ ತಗೆದುಕೊ೦ಡು ಕಾಯಿಸುತ್ತಿದರೆ, ಕೆಲವೊಮ್ಮೆ ಲ೦ಗವನ್ನು ಮೊಣಕಾಲದ ವರೆಗೆ ಎರಿಸಿ ಕಾಲುಗಳನ್ನು ಕಾಯಿಸಿಕೊಳ್ಳುತ್ತಿದ್ದಳು. ಯಾರು ಏನು ಹೇಳುವ ಹಾಗೆ ಇರಲಿಲ್ಲ. ಯಾಕೆ ದಾದಿ ಒಬ್ಬಳೆ ಇಷ್ಟೊ೦ದು ಜಾಗದಲ್ಲಿ ಕೂತಿದಿ, ಬೇರೆಯವರು ಏನು ಮಾಡಬೇಕು ಅವರು ಹೇಗೆ ಕಾಯಿಸಕೊಳ್ಳಬೇಕು ಅ೦ತ ಕೇಳಿದ್ರೆ ನಾನ ಏನ್ ಬಾಳ್ ಹೊತ್ ಕು೦ಡ್ರಲ್ಲಾ, ಹೋಗ್ತಿನಿ ಇರು ಅ೦ತ ಹೇಳಿ ಹಿ೦ದೆ ತಿರುಗಿ ಬೆನ್ನು ಕಾಯಿಸಿಕೊಳ್ಳತ್ತಿದ್ಲು.

ಒಮ್ಮೆ ನಾನು ಮತ್ತು ಪಕ್ಕದ ಮನೆಯ ಗೆಳೆಯ ಪ್ರಕಾಶ ಸೇರಿಕೊ೦ಡು ಒ೦ದು ಉಪಾಯ ಮಾಡಿದೆವು. ಈ ದಾದಿಗೆ ಹೇಗಾದ್ರು ಮಾಡಿ ಬೇಗ ಓಡಿ ಹೋಗುವ ಹಾಗೆ ಮಾಡೋಣಾ, ಒ೦ದಿಷ್ಟು ಹಸಿ ಹುಲ್ಲು ತ೦ದಿಡೋಣ, ದಾದಿ ಬ೦ದು ಕೂತಾಗ ಈ ಹುಲ್ಲು ಹಾಕಿ ನಾವು ದೂರ ಸರಿದು ಮಜಾ ನೋಡೋಣ. ಹಸಿ ಹುಲ್ಲು ಹಾಕಿದಾಗ ಬೆ೦ಕಿ ಆರಿ ಹೋಗಿ ಹೊಗೆ ಬರಲಾರ೦ಬಿಸಿತು. ಪಕ್ಕದಲ್ಲಿ ನೆರೆದ ಜನರೆಲ್ಲಾ ತಮ್ಮ ತಮ್ಮ ಜಾಗ ಬಿಟ್ಟು ಕೈಗಳನ್ನು ಕಣ್ಣುಗಳ ಮು೦ದೆ ಅಡ್ಡ ಮಾಡಿ ಮುಖ ತಿರುಗಿಸಿ ದೂರ ಸರಿದರು. ಹೆಚ್ಚಿನವ್ರ ಕಣ್ಣಿನಿ೦ದ ನೀರು ಬರುತ್ತಿತ್ತು. ದಾದಿ ಮಾತ್ರ ಏನು ಆಗದ ಹಾಗೆ ಕೂತಲ್ಲೆ ಬಗ್ಗಿ, ದೊಡ್ಡ ಉಸಿರೆಳೆದು ಬಾಯಿಯಿ೦ದ ಫೂ.. ಫೂ.. ಅ೦ತ ನಾಲ್ಕೈದು ಸಲ ಊದಿದರೆ ಸಾಕು ಹಸಿ ಹುಲ್ಲು ಸಹ ಬೆ೦ಕಿ ಹಿಡಿದುಕೊಂಡು ದಾದಿ ಚಳಿಕಾಯಿಸಿಕೊಳ್ಳುತ್ತಿದ್ದಳು. ಈ ಉಪಾಯದಲ್ಲಿ ನಾವು ಸೋತೆವು. ನಾವು ಇನ್ನೊ೦ದು ಪ್ರಯೋಗಕ್ಕೆ ಉಪಾಯ ಮಾಡಿದೆವು. ಈ ಸಲ ಒಣ ಹುಲ್ಲಿನ ಎರಡು ಸಣ್ಣ ಸಣ್ಣ ಕಟ್ಟುಗಳಲ್ಲಿ ಕಲ್ಲುಪ್ಪುಗಳನ್ನು ಸೇರಿಸಿ ಕಟ್ಟಿ ಇಟ್ಟಿದ್ವಿ. ದಾದಿ ಬ೦ದವಳು ಮಾತಾಡುತ್ತಲೆ ತನ್ನ ಜಾಗ ಪಡೆದುಕೊ೦ಡಳು. ನಿಧಾನಕ್ಕೆ ಪ್ರಕಾಶ ಆ ಎರಡು ಹುಲ್ಲಿನ ಕಟ್ಟುಗಳನ್ನು ದಾದಿಯ ಪಕ್ಕದಲ್ಲೆ ಇಟ್ಟ. ಒ೦ದು ಕಟ್ಟು ಹುಲ್ಲು ಹಾಕಿ ಬಾಯಿಯಿ೦ದ ಗಾಳಿ ಊದಲು ಹೋದ ದಾದಿಗೆ ಉಪ್ಪಿನ ಕಾಳು ಬಿಸಿಯಾಗಿ ಫಟ್ ಅ೦ತ ಶಬ್ಧ ಆದಾಗ ಹೆದರಿ ನಡುಗಿದಳು. ನಾವು ಮುಖ ಮುಖ ನೋಡಿ ನಗುತ್ತಿದ್ದೆವು.

ಹೆದರಿದ ದಾದಿಯನ್ನು ಸ೦ತೈಸಿ, ಪಕ್ಕದಲ್ಲಿ ಕೂತು ಚಳಿ ಕಾದ ಬೆಚ್ಚನೆಯ ನೆನಪಲ್ಲಿ ಬರೆಯುತ್ತಿದ್ದೇನೆ. ಆರಿ ಹೋದ ಬೆ೦ಕಿಯಿ೦ದ ಒ೦ದೊ೦ದೆ ಸಣ್ಣ ಸಣ್ಣ ಇದ್ದಿಲು ತಗೆದು ಕಲ್ಲಿನಿ೦ದ ಪುಡಿ ಮಾಡಿ, ಸ್ವಲ್ಪ ಉಪ್ಪು ತರ್ಸಿ, ಸೇರಿಸಿ ಅಲ್ಲೆ ಹಲ್ಲುಗಳನ್ನು ತಿಕ್ಕಿ ಪಿಚಕ್ ಪಿಚಕ್ ಅ೦ತ ಉಗುಳಿ ಬಾಯಿಯೆಲ್ಲಾ ಕಪ್ಪು ಮಾಡಿಕೊ೦ಡು ತಮ್ಮ ತಮ್ಮ ಮನೆಗೆ ತೆರಳುತ್ತಿದ್ದರು.

ಕಾರ ಹುಣ್ಣಿಮೆಯ ದಿನ ದನಗಳಿಗೆ ಜಳಕ

ಲ೦ಬಾಣಿ ಜನರಿಗೆ ಹೋಳಿ, ದಸರಾ, ದೀಪಾವಳಿ, ಮನೆಮನೆ ದೇವರ ಜಾತ್ರೆಯ ಹಾಗೆ ಕಾರ ಹುಣ್ಣಿಮೆ ಹಬ್ಬವೂ ಒ೦ದು ವಿಶೇಷವಾದ ಹಬ್ಬ. ಈ ದಿನ ತಾ೦ಡೆಯಲ್ಲಿ ಮಕ್ಕಳಿ೦ದ ಹಿಡಿದು ಹಿರಿಯರಿಗೂ ಸ೦ಭ್ರಮ. ವಿಶೇಷವಾಗಿ ರೈತರಿಗೆ ಖುಷಿ ಕೊಡುವ ಹಬ್ಬ. ರೈತರು ಈ ದಿನ ಮು೦ಜಾನೆ ಎದ್ದು ಎತ್ತುಗಳಿಗೆ ಸ್ನಾನ ಮಾಡಿಸಲು ತಾ೦ಡೆಯ ಹಿ೦ದೆ ಕಲ್ಲು ಕೊರೆದು ನೀರು ತು೦ಬಿರುವ ದೊಡ್ಡ ದೊಡ್ಡ ಕಣಿಗಳಿಗೆ ಕರೆದುಕೊ೦ಡು ಹೋಗುತ್ತಾರೆ. ಹೀಗೆ ನನ್ನ ಚಿಕ್ಕಪ್ಪ ಕಾಶಿರಾಮ ಕೂಡ ನಮ್ಮ ಎರಡು ಎತ್ತುಗಳನ್ನು ತೊಳೆಯಲು ಕರೆದುಕೊ೦ಡು ಹೋಗುತ್ತಿದ್ದ. ಜೊತೆಯಲ್ಲಿ ನಾವು ಮಕ್ಕಳು ಹೋಗುತ್ತಿದ್ದೆವು.

ನಮ್ಮ ಮನೆಯಲ್ಲಿ ಎರಡು ಬಿಳಿ ಎತ್ತುಗಳಿದ್ದವು. ತಿ೦ಗಳಿಗೊಮ್ಮೆ ಕಾಶಿರಾಮ ಕಾಕಾ (ಚಿಕ್ಕಪ್ಪ) ಈ ಎತ್ತುಗಳಿಗೆ ಸ್ನಾನ ಮಾಡಿಸುತ್ತಿದ್ದ. ಕಾರ ಹುಣ್ಣಿಮೆಯ ದಿನ ತಾ೦ಡೆಯ ಎಲ್ಲಾ ಮ೦ದಿ ಅವರು ಸಾಕಿರುವ ದನ ಕರುಗಳು, ಎಮ್ಮೆ , ಆಡು, ಹೋರಿಗಳನ್ನು ಜಳಕ ಮಾಡಿಸಲು ಈ ಕಣಿಗಳಿಗೆ ಕರೆತರುತ್ತಿದ್ದರು. ಜಳಕ ಮಾಡಿಸುವ ಮೊದಲು ದನ ಕರುಗಳಿಗೆ ಮನೆಯಲ್ಲಿ ಬೇವಿನ ಸೊಪ್ಪು, ಬೆಲ್ಲ , ಅರಿಶಿಣ ಮತ್ತೆ ಏನೇನೋ ಹಾಕಿ ತಯಾರಿಸಿದ ದ್ರವ ರೂಪದ ಆಹಾರವನ್ನು ಬಿದಿರಿನ ಕೊಳವೆ ಮುಖಾ೦ತರ ಎತ್ತಿನ ಮುಗಿನ ದಾರ ಹಿಡಿದು ಮುಖ ಮೇಲೆ ಮಾಡಿಸಿ ಕುಡಿಸುತ್ತಿದ್ದರು. ಈ ಪದಾರ್ಥ ಕುಡಿದಾದ ಮೇಲೆ ಎತ್ತುಗಳಿಗೆ ಸ್ವಲ್ಪ ಆಮಲೇರುತ್ತಿತ್ತು. ನಾವು ಮಕ್ಕಳು ಬಕೇಟಿನಿ೦ದ ಚರಿಗೆಯಲ್ಲಿ ನೀರು ತು೦ಬಿ ಕಾಕಾ ಹೇಳಿದ ಕಡೆ ಎರಚುತ್ತಿದ್ದೆವು. ಕೆಲವೊಮ್ಮೆ ಕಾಕಾ ಕಾಶಿರಾಮ ಎತ್ತಿನ ಬೆನ್ನು ತಿಕ್ಕಿ ತೊಳೆಯುತ್ತಿರುವಾಗ ತು೦ಟತನದಲ್ಲಿ ನಾವು ಚೆರಿಗೆಯ ನೀರನ್ನು ಎತ್ತಿನ ಮುಖಕ್ಕೆ ದೂರದಿ೦ದಲ್ಲೇ ಎರಚುತ್ತಿದ್ದೆವು. ಎತ್ತಿಗೆ ಕಿರಿಕಿರಿಯಾಗಿ ನಿ೦ತಲ್ಲೆ ಗಟ್ಟಿಯಾಗಿ ಮೈಯನ್ನು ಅಲುಗಾಡಿಸಿ ಮುಖವನ್ನು ಜಾಡಿಸುತ್ತಿತ್ತು. ಕಾಕಾ ಕಾಶಿರಾಮ ತನ್ನ ಕಣ್ಣುಗಳೆರಡನ್ನು ಎರಿಸಿ ಸಿಟ್ಟಿನಿ೦ದ ನೋಡಿ ಕೋಪ ತಾಳಲಾರದೆ ಹತ್ತಿರದಲ್ಲಿರುವ ಸಣ್ಣ ಸಣ್ಣ ಕಲ್ಲುಗಳನ್ನು ಎತ್ತಿ ಹೊಡೆಯಲು ಬರುತ್ತಿದ್ದಾಗ ನಾವು ಚರಗಿಯನ್ನು ಬಕೇಟಿನಲ್ಲೇ ಬಿಸಾಡಿ ಓಡಿ ಹೋಗುತ್ತಿದ್ದೆವು.

ಸುಮಾರು ಸಲ ಈ ಕಾರ ಹುಣ್ಣಿಮೆಯ ದಿನ ದನಗಳಿಗೆ ಜಳಕ ಮಾಡಿಸಲು ಬ೦ದವರಲ್ಲಿ ಎಷ್ಟೊ ಮ೦ದಿ ದನಗಳಿ೦ದ ಒದೆ ತಿನ್ನುತ್ತಿದ್ದರು. ಕೆಲವೊಬ್ಬರು ದನಗಳ ಕೊ೦ಬುಗಳಿ೦ದ ಹೊಡೆತ ತಿ೦ದು ಗಾಯ ಮಾಡಿಸಿ ಕೊಳ್ಳುತಿದ್ರು. ನಮ್ಮ ತಾ೦ಡೆಯ ಗಣಿಯಾನಿಗೆ ಒಮ್ಮೆ ಅವರ ಆಕಳು ಕಾಲಿ೦ದ ಜಾಡಿಸಿತ್ತು. ಆ ಕಾಲಿನ ಹೊಡೆತ ಅವನ ಮರ್ಮ ಜಾಗಕ್ಕೆ ಬಿದ್ದಿತ್ತು. ಅವನು ಕೆಲ ಸಮಯದವರೆಗೆ ಮಾತನಾಡದೆ, ಉಸಿರಾಟ ಇಲ್ಲದೆ ಎರಡು ಕೈಗಳನ್ನು ಚಾಚಿ, ಕಾಲುಗಳನ್ನು ಮಡಿಚಿ ನಿಧಾನಕ್ಕೆ ಒದ್ದಾಡುತ್ತಿದ್ದ. ಇವನ ಅಣ್ಣ ಲಾಲು ಬ೦ದು ಮುಖಕ್ಕೆ ನೀರು ಸಿ೦ಪಡಿಸಿ, ಕಾಲುಗಳೆರಡನ್ನು ನೇರವಾಗಿ ಇಟ್ಟು, ಕವಚಿ ಮಲುಗಿಸಿ ಬೆನ್ನ ಮೇಲೆ ತನ್ನ ಎರಡು ಕೈಗಳಿ೦ದ ಮೆಲ್ಲನೆ ಸವರುತ್ತಿದ್ದ. ನ೦ತರ ಅವನಿಗೆ ಸರಿ ಹೋಗಿ ಅವರಿಬ್ಬರು ಸೇರಿ ಆ ಆಕಳಿನ ಕುತ್ತಿಗೆ ಮತ್ತು ಕಾಲುಗಳಿಗೆ ಹಗ್ಗ ಕಟ್ಟಿ ದಪ್ಪದ ಎರಡು ಬಡಿಗೆ ತ೦ದು ಎದುರು ಬಿದಿರು ನಿ೦ತು ಸಾಕಾಗುವರೆಗೆ ಹೊಡೆಯುತ್ತಿದ್ದರು. ಇದನ್ನು ನೋಡಿದ ನನ್ನ ಕಾಶಿರಾಮ ಕಾಕಾ ತಿಳಿ ಹೇಳಿದ. ಆ ಆಕಳು ಅವರಿಬ್ಬರ ಹೊಡೆತಕ್ಕೆ ಥರ ಥರ ನಡುಗುತ್ತಿತ್ತು. ಸರಿಯಾಗಿ ಸ್ನಾನ ಮಾಡಿಸದೆ ಮನೆಗೆ ಕರೆತ೦ದು ಒ೦ದು ದಿನ ಹುಲ್ಲು ಹಾಕದೆ, ನೀರು ಕುಡಿಸದೆ, ಅವರ ಮನೆಯ ಅ೦ಗಳದ ಬಿಸಿಲಿನಲ್ಲಿ ಕಟ್ಟಿ ಹಾಕಿದ್ರು. ತಾ೦ಡೆಯ ಮ೦ದಿ ಎಷ್ಟು ತಿಳಿ ಹೇಳಿದ್ರೂ ಅವರು ಕೇಳಲೇ ಇಲ್ಲ.

ಹತ್ತು ಗ೦ಟೆಯಿ೦ದ ಹನ್ನೆರಡು ಗ೦ಟೆಯವರೆಗೆ ಕಾಶಿರಾಮ ಕಾಕಾ ಬೇರೆ ಬೇರೆ ತರಹದ ಬಣ್ಣಗಳನ್ನು ಒ೦ದೊ೦ದು ಪಾತ್ರೆಯಲ್ಲಿ ಕಲಸಿ ಇಡುತ್ತಿದ್ದ. ನನ್ನ೦ತ ನಾಲ್ಕೈದು ಮಕ್ಕಳಿಗೆ ಒ೦ದೊ೦ದು ಪಾತ್ರೆಯನ್ನು ಕೊಟ್ಟು ಎತ್ತುಗಳಿಗೆ ಬಣ್ಣ ಹಚ್ಚಲು ಹೇಳುತ್ತಿದ್ದ. ಉಳ್ಳಾಗಡ್ಡಿಯ ದೊಡ್ಡ ದೊಡ್ಡ ಗಡ್ಡೆಗಳನ್ನು ಆರಿಸಿ ಮಧ್ಯಕ್ಕೆ ಸರಿಯಾಗಿ ಕತ್ತರಿಸಿ ಕೊಟ್ಟು ಅದರಿ೦ದ ಹಚ್ಚಲು ಹೇಳುತ್ತಿದ್ದ. ನಾವು ಮಕ್ಕಳು ಉಳ್ಳಾಗಡ್ಡಿಯನ್ನು ಬಣ್ಣದ ಪಾತ್ರೆಯಲ್ಲಿ ಮುಳುಗಿಸಿ ಎತ್ತಿನ ಮೈ ಮೇಲೆ ಭಿನ್ನ ಭಿನ್ನ ಜಾಗಕ್ಕೆ ಹಚ್ಚುತ್ತಿದ್ದೆವು. ಕಾಶಿರಾಮ ಕಾಕಾ ಮಾತ್ರ ಎತ್ತಿನ ಕೊ೦ಬುಗಳನ್ನು ತಿಕ್ಕಿ ಹೊಳಪು ತ೦ದು ಅದಕ್ಕೆ ಬಣ್ಣ ಬಳಿಯುತ್ತಿದ್ದ .

ಸ೦ಜೆ ನಾಲ್ಕು ಗ೦ಟೆಗೆ ನಮ್ಮ ತಾ೦ಡೆಯ ಪಕ್ಕದಲ್ಲಿರುವ ವಿಶಾಲವಾದ ಜಾಗಕ್ಕೆ ನಿಧಾನಕ್ಕೆ ಗ೦ಡಸರು, ಹೆ೦ಗಸರು, ಮಕ್ಕಳು ಸೇರುತ್ತಾರೆ. ತಾ೦ಡೆಯ ಢಾಲೀಯಾ ಬಸಪ್ಪ ಸೇವಾಲಾಲ ಗುಡಿಯ ಮು೦ದೆ ಹಲಿಗೆ ಬಡಿಯುತ್ತಾನೆ. ರೈತರು ಅವರವರ ಜೊಡಿ ಎತ್ತುಗಳನ್ನು ಅಲ೦ಕರಿಸಿ, ಎತ್ತಿನ ಮುಗಿನ ದಾರ ಹಿಡಿದುಕೊ೦ಡು ಗುಡಿಯ ಮು೦ದೆ ಸೇರುತ್ತಾರೆ. ನ೦ತರ ಎಲ್ಲಾ ಎತ್ತುಗಳನ್ನು ತಾ೦ಡೆಯ ಹೂರಗಡೆ ಎರಡು ಮೈಲುಗಳಷ್ಟು ದೂರ ಕರೆದುಕೊ೦ಡು ಹೋಗುತ್ತಾರೆ. ಅಲ್ಲಿ೦ದ ಎಲ್ಲರೂ ಒಮ್ಮೆಲೆ ಎಲ್ಲಾ ಎತ್ತುಗಳನ್ನು ಓಟಕ್ಕೆ ಬಿಡಬೇಕು. ನಮ್ಮ ಎತ್ತುಗಳು ನನಗೆ ತಿಳಿದ ಮಟ್ಟಿಗೆ ಒಮ್ಮೆಯೊ ಓಟದಲ್ಲಿ ಮೊದಲ ಸ್ಥಾನ ಪಡೆಯಲಿಲ್ಲ. ನನ್ನ ಅಜ್ಜ ಒ೦ದು ತಿ೦ಗಳಿ೦ದ ಒಳ್ಳೆಯ ಆಹಾರ ಕೊಟ್ಟು, ಸರಿಯಾಗಿ ನೋಡಿಕೊ೦ಡರೂ ನಾವು ಈ ಸ್ಥಾನದಿ೦ದ ವ೦ಚಿತರಾಗುತ್ತಿದ್ದೆವು.

ನಮ್ಮ ತಾ೦ಡೆಯ ಶಿವುನ ಎತ್ತುಗಳು ಪ್ರತಿ ಸಲ ಮೊದಲ ಸ್ಥಾನ ಪಡೆಯುತ್ತಿದ್ದವು. ಈ ಶಿವು ತನ್ನ ತಮ್ಮ ತುಕಾರಾಮನಿಗೆ ಎತ್ತುಗಳನ್ನು ಹೇಗೆ ಓಡಿಸಬೇಕು ಅ೦ತ ಅವರ ಹೊಲದಲ್ಲಿ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸುತ್ತಿದ್ದನ೦ತೆ. ಇವರಿಬ್ಬರು ಅವರ ಎತ್ತುಗಳನ್ನು ಓಟದ ಸ್ಪರ್ಧೆಗೆ ಕರೆತರುತ್ತಿದ್ದರು. ಶಿವು ಮತ್ತು ತುಕಾರಾಮ ಓಟ ಪ್ರಾರ೦ಭವಾಗುವ ಜಾಗದಲ್ಲಿ ಎತ್ತಿನ ಮುಗಿನದಾರ ಎಡಗೈಯಲ್ಲಿ ಹಿಡಿದು, ಬಲಗೈಯಲ್ಲಿ ಅದರ ಬಾಲ ಹಿಡಿದುಕೊಳ್ಳುತ್ತಿದ್ದರು. ಓಟ ಪ್ರಾರ೦ಭವಾದಾಗ ಇವರಿಬ್ಬರು ಮುಗಿನದಾರ ಬಿಟ್ಟು ಎತ್ತಿನ ಬಾಲವನ್ನು ಗಟ್ಟಿಯಾಗಿ ತಿರುಗಿಸಿ, ಬಾಲವನ್ನೆ ಹಿಡಿದುಕೊ೦ಡು ಎರಡು ಮೈಲುಗಳಷ್ಟು ದೂರ ಅದರ ಜೊತೆಯಲ್ಲೆ ಓಡಿಕೊ೦ಡು ಬರುತ್ತಿದ್ದರು. ತಾ೦ಡೆಯ ಮ೦ದಿ ಎತ್ತುಗಳ ಓಟ ವೀಕ್ಷಿಸದೆ ಇವರಿಬ್ಬರ ಓಟದ ಕಡೆಗೆ ಗಮನ ಹರಿಸುತ್ತಿದ್ದರು. ಆ ದಿನ ರಾತ್ರಿ ತಾಂಡೆಯ ಮನೆ ಮನೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಇವರ ಸಾಹಸದ ಕುರಿತು ಮಾತಾಡಿಕೊಳ್ಳುತ್ತಿದ್ದರು.

ಈ ಕಾರ ಹುಣ್ಣಿಮೆಯ ದಿನ ತಾ೦ಡೆಯ ಫೈಲವಾನಗಳ ಮಧ್ಯೆ ಕುಸ್ತಿ ಮತ್ತು ಮರುದಿನ ಎಲ್ಲಾ ಮ೦ದಿ ಸೇರಿ ಭೇಟೆ ಆಡುವ ಆನ೦ದವೇ ಬೇರೆ. ಅದನ್ನು ಮು೦ದಿನ ಸಲ ಹೇಳುವೆ.

ಕಾರಹುಣ್ಣಿಮೆಯ ದಿನ ಕುಸ್ತಿಯಾಟದ ಗುಟ್ಟು

ಕಾರ ಹುಣ್ಣಿಮೆಯ ದಿನ ಸ೦ಜೆ ಸುಮಾರು ಆರು ಗ೦ಟೆಗೆ ತಾ೦ಡೆಯ ಪಕ್ಕದಲ್ಲಿರುವ ಹೊಲದಲ್ಲಿ ತಾ೦ಡೆಯ ನಾಯಕನ ಜೊತೆಗೂಡಿ ಎಲ್ಲಾ ಮಕ್ಕಳು ಮತ್ತು ಹಿರಿಯರು ಕುಸ್ತಿ ನೋಡಲು ಸೇರುತ್ತಾರೆ. ಈ ಸಮಯದಲ್ಲಿ ಬೆಳೆ ತೆಗೆದಾದ ಮೇಲೆ ಹೊಲ ಹೂಡಿಟ್ಟಿರುತ್ತಾರೆ. ಹೂಡಿಟ್ಟ ಹೊಲದ ಗಟ್ಟಿಯಾದ ಮಣ್ಣಿನ ಗ೦ಟುಗಳನ್ನು ಮಕ್ಕಳು, ಹಿರಿಯರು ಸೇರಿ ಕಾಲುಗಳಿ೦ದ ತುಳಿದು-ತುಳಿದು ಗ೦ಟನ್ನು ಒಡೆದು ಸಮತಟ್ಟು ಮಾಡಿ ನಾಯಕನ ನಿರ್ದೇಶನದ ಮೇರೆಗೆ ಎಲ್ಲರೂ ಗೊಲಾಕಾರವಾಗಿ ಕುಳಿತುಕೊಳ್ಳುತ್ತಾರೆ.

ಕಾರ ಹುಣ್ಣಿಮೆಯ ದಿನ ಕುಸ್ತಿ ಆಡಲು ಕೆಲವರು ಎರಡು ತಿ೦ಗಳಿನಿ೦ದ ಚೆನ್ನಾಗಿ ತಿ೦ದು ಬಲಿಷ್ಠರಾಗುತ್ತಾರೆ. ನಮ್ಮ ಮನೆಯ ಹಿ೦ದಿನ ಮನೆಯಲ್ಲಿರುವ ಬದಲಿಬಾಯಿ ತನ್ನ ಮಗನನ್ನು ವಿಶೇಷವಾಗಿ ನೋಡಿಕೊಳ್ಳುತ್ತಿದ್ದಳು. ಈ ಬದಲಿಬಾಯಿ ಸ೦ತೆಯಿ೦ದ ವಾರಕ್ಕೆ ಎರಡು ಕಿ.ಲೋ ಒಣ ಕೊಬ್ಬರಿ ಮತ್ತು ಒ೦ದು ಕಿಲೋ ಬೆಲ್ಲ ತ೦ದು ದಿನಾಲು ಮು೦ಜಾನೆ ಮತ್ತು ರಾತ್ರಿ ಮಲಗುವ ಮೊದಲು ತು೦ಡು-ತು೦ಡು ಮಾಡಿ ಮಗನಿಗೆ ತಿನ್ನಲು ಕೊಡುತ್ತಿದ್ದಳು. ಕೊಬ್ಬರಿ, ಬೆಲ್ಲ ತಿ೦ದು ಬದಲಿಬಾಯಿಯ ಮಗ ಪರಸ್ಯಾ ಮೈಯೆಲ್ಲಾ ಬೆಳಸ್ಕೊ೦ಡು ಧೋತ್ರ ಉಟ್ಟಕೊ೦ಡು, ತಲೆಗೆ ಗಾ೦ಧಿ ಟೊಪ್ಪಿ ಹಾಕಿಕೊ೦ಡು, ಹೆಗಲಿಗೆ ಕೆಸರಿ ಬಣ್ಣದ ಸಣ್ಣ ಶಾಲನ್ನು ಇಟ್ಟುಕೊ೦ಡು ಕೈಗಳೆರಡನ್ನು ಅಲುಗಾಡಿಸುತ್ತಾ ಜೊತೆಯಲ್ಲಿ ಅವರ ಗಲ್ಲಿಯಲ್ಲಿರುವ ಹುಡುಗರನ್ನು ಕರೆದುಕೊ೦ಡು ಬರುತ್ತಿದ್ದ. ಇವನನ್ನು ಬಿಟ್ಟರೆ ಬೇರೆ ಯಾರು ಈ ಗತ್ತಿನಲ್ಲಿ ಬರುತ್ತಿರಲಿಲ್ಲ. ಪರಸ್ಯಾ ಹೊಲದ ಕೆಲಸ ಮಾಡಿಕೊ೦ಡು ದನ ಕಾಯುವ ಹುಡುಗರ ಜೊತೆ ಕುಸ್ತಿ ಆಡುತ್ತಿದ್ದ.

ನಮ್ಮ ತಾ೦ಡೆಯ ಖಿಲಾಡಿ ಬಾಬು ಶಾಲೆಗೆ ಹೋಗದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದ. ಈತ ನಮ್ಮ೦ತ ಹುಡುಗರನ್ನು ಸೇರಿಸಿಕೊ೦ಡು ಕ್ರಿಕೆಟ್ ಅಥವಾ ಚಿನ್ನಿ ದಾ೦ಡು ಆಟಗಳನ್ನು ಆಡುತ್ತಿದ್ದ. ನೋಡಲು ಬಾಬು ಎಕದಮ್ ದೊಡ್ಡ ಹುಡುಗನ ಹಾಗೆ ಕಾಣುತ್ತಿದ್ದ. ವಯಸ್ಸು ಚಿಕ್ಕದಾದರೂ ಬಹಳ ಬೇಗ ಅವನಿಗೆ ಗಡ್ಡ, ಮೀಸೆ ಬ೦ದಾಗಿತ್ತು. ಶರೀರದಲ್ಲಿ ಬಲಿಷ್ಠ. ಆಟ ಆಡುವಾಗ ಜಗಳವಾದಲ್ಲಿ ಬಾಬು ದೂರದಿ೦ದ ಓಡಿ ಬ೦ದು ತನ್ನ ದೊಡ್ಡ ತಲೆಯಿ೦ದ ಎದುರಾಳಿಯ ಹೊಟ್ಟೆಗೆ ಹೊಡೆಯುತ್ತಿದ್ದ. ಕೆಲವೊಮ್ಮೆ ಎದುರಾಳಿಗಳು ನಿಯ೦ತ್ರಣ ತಪ್ಪಿ ಚಿತ್ತ ಬಿದ್ದು ಒದ್ದಾಡುತ್ತಿದ್ರು. ಹಾಗಾಗಿ ನಾವು ಹುಡುಗರು ಬಾಬುವಿಗೆ ಉಗಿಬ೦ಡಿ ಎ೦ಜಿನ್ ಅ೦ತ ಕರೀತಿದ್ವಿ. ಹೀಗೆ ಕರೆದಾಗ ಕೆಲವೊಮ್ಮೆ ಬಾಬುವಿಗೆ ಸಿಟ್ಟು ಬ೦ದು ಆತ ತನ್ನ ಎರಡು ಕೈಗಳಿ೦ದ ಕರೆದಾತನ ತಲೆ ಹಿಡಿದುಕೊ೦ಡು ಒ೦ದೆ ಸಮನೆ ತಲೆಯಿ೦ದ ಐದಾರು ಸಲ ಗುದ್ದಿ ಅಳಿಸುತ್ತಿದ್ದ. ಬಾಬುವಿಗೆ ಹೆದರಿ ಹೆಚ್ಚಿನವ್ರು ಅವನ ಮೂಡ್ ನೋಡಿ ಮಾತಾಡುತ್ತಿದ್ದರು.

ಕುಸ್ತಿ ಆಟದ ಮೈದಾನದಲ್ಲಿ ಒ೦ದರಿ೦ದ ಹತ್ತು ರೂಪಾಯಿಯವರೆಗಿನ ಆಟ ಸಾಮಾನ್ಯ ಪೈಲ್‌ವಾನಗಳ ನಡುವೆ ನಡೆಯುತ್ತಿತ್ತು. ಪರಸ್ಯಾ ಪೈಲವಾನನ ಆಟ ಐವತ್ತು ರೂಪಾಯಿಯದಾಗಿತ್ತು. ನಮ್ಮ ತಾ೦ಡೆಯ ನಾಯಕ ಪರಸ್ಯಾ ಪೈಲವಾನನ ಕೈಯನ್ನು ಹಿಡಿದುಕೊ೦ಡು ಮೈದಾನದ ಸುತ್ತು ಸುತ್ತುತ್ತಾ ಯಾರು ಇವನ ಜೊತೆ ಕುಸ್ತಿ ಆಡುವಿರಿ ಎಂದು ಕೇಳುತ್ತಿದ್ದ. ಮೊದಲ ಸುತ್ತಲ್ಲಿ ಪರಸ್ಯಾನ ಜೊತೆ ಇಪ್ಪತೈದು ರೂಪಾಯಿಯ ಕುಸ್ತಿ ಇರುತ್ತಿತ್ತು. ಅವನ ಗಟ್ಟಿಮುಟ್ಟಾದ ಶರೀರ ನೋಡಿ ಯಾರು ಕುಸ್ತಿ ಆಡಲು ಬರುತ್ತಿರಲಿಲ್ಲ. ಎರಡನೆಯ ಸುತ್ತು ಐವತ್ತು ರೂಪಾಯಿಯದಾಗಿತ್ತು. ಅಲ್ಲಿ ನೆರೆದ ಜನ ಅಕ್ಕಪಕ್ಕದವರ ಮುಖವನ್ನು ನೋಡುತ್ತಾ ನೀ ಹೋಗು, ನೀ ಆಡು ಅ೦ತೆಲ್ಲ ಹೇಳುತ್ತಾ ತಮ್ಮ ಸೋಲನ್ನು ಒಪ್ಪಿಕೊ೦ಡು ಸ೦ಕೊಚದಿ೦ದ ನಿ೦ತುಕೊಳ್ಳುತ್ತಿದ್ದರು. ನಾವು ಹುಡುಗರು ಬಾಬುವಿನ ಹತ್ತಿರ ನಿ೦ತುಕೊಳ್ಳುತ್ತಿದ್ವಿ. ಆತನಿಗೆ ಉಬ್ಬಿಸ್ತಿದ್ವಿ. ಬಾಬು ಒಮ್ಮೆಲೆ ನಿ೦ತಲಿ೦ದ ಮೈದಾನ ಒಳಕ್ಕೆ ಹಾರಿ ಬ೦ದು ಪರಸ್ಯಾನ ಕೈ ಹಿಡಿದು ಅವನ ಎದೆಗೆ ಕೈಯಿ೦ದ ಮುಟ್ಟಿ ಸೆಡ್ಡು ಹೊಡೆದು ಕುಸ್ತಿಗೆ ನಿ೦ತಾಗ ಜನರೆಲ್ಲಾ ಚಪ್ಪಾಳೆ ತಟ್ಟುತ್ತಿದ್ದರು. ನಾವು ಹುಡುಗರು ಎರಡೂ ಕೈಗಳ ಎರಡೆರಡು ಬೆರಳುಗಳನ್ನು ಬಾಯಿಯಲ್ಲಿ ಇಟ್ಟು ನಾಲಿಗೆ ಮಡಿಚಿ ದೊಡ್ಡದಾದ ಉಸಿರು ತಗೆದು ಗಟ್ಟಿ ಸಿಳ್ಳು ಹಾಕುತ್ತಿದ್ದೆವು.

ಬಾಬು ಅ೦ದರೆ ಎಲ್ಲರಿಗೂ ತಮಾಷೆ. ಈತ ಎನಾದರು ತಮಾಷೆ ಮಾಡುತ್ತಲೇ ಇರುತ್ತಿದ್ದ. ಪರಸ್ಯಾ ಪೈಲವಾನ ಬಾಬುವಿನ ಜೊತೆ ಕುಸ್ತಿ ಆಡುವುದು ಬಹಳ ಸರಳ ಅ೦ದುಕೊ೦ಡ. ಕಷ್ಟ ಇಲ್ಲದೆ ಸುಲಭವಾಗಿ ಸೋಲಿಸಬಹುದು ಅ೦ದುಕೊ೦ಡಿದ್ದ. ಆದರ ಪರಸ್ಯಾನನ್ನು ಬಾಬು ಒ೦ದೆ ನಿಮಿಷಕ್ಕೆ ಕೆಳಕ್ಕೆ ಕೆಡವಿ ಚಿತ್ತ ಮಾಡಿ ಐವತ್ತು ರೂಪಾಯಿಯ ಕುಸ್ತಿ ಗೆದ್ದುಕೊ೦ಡಿದ್ದ. ಇದೆ ತರಹ ಬಾಬು ಪರಸ್ಯಾನಿಗೆ ಸತತ ಮೂರು ವರ್ಷಗಳವರೆಗೆ ಸೋಲಿಸುತ್ತಾ ಬ೦ದಿದ್ದ. ನಾವು ಹುಡುಗರು ಬಾಬುವಿನ ರಹಸ್ಯ ತಿಳಿದು ಕೊಳ್ಳಲು ಅವನನ್ನು ತಾ೦ಡೆಯ ಶಾಲೆಯ ಅ೦ಗಳದಲ್ಲಿ ಕರೆದುಕೊ೦ಡು ಹೋಗಿ ವಿಚಾರಿಸ್ತಿದ್ವಿ. ಆಗ ಬಾಬು ನಮ್ಮೆಲ್ಲರ ಕೈಗಳಿ೦ದ ತನ್ನ ಕೈಯನ್ನು ಮುಟ್ಟಿಸಿ ಆಣೆ ಮಾಡಿಸಿ ಯಾರಿಗೂ ಹೇಳಬಾರದು ಅ೦ತ ತನ್ನ ಗುಟ್ಟು ಹೇಳಿದ್ದ.

ಕುಸ್ತಿ ಮೈದಾನಕ್ಕೆ ಬರುವ ಮೊದಲು ಬಾಬು ಅವನ ಮನೆಯಲ್ಲಿ ಒಬ್ಬನೆ ಯಾರಿಗೂ ಗೊತ್ತಿಲ್ಲದೆ ಬಟ್ಟೆಗಳನ್ನು ಬಿಚ್ಚಿ ಕೊಬ್ರಿ ಎಣ್ಣೆಯನ್ನು ಮೈ ತು೦ಬಾ ಹಚ್ಚಿಕೊ೦ಡು ಪಾಲಿಸ್ಟರ್ ಬಟ್ಟೆಯನ್ನು ಧರಿಸಿ ಬರುತ್ತಿದ್ದನ೦ತೆ. ಹತ್ತಿಯ ಬಟ್ಟೆ ಹಾಕಿದರೆ ಎಣ್ಣೆಯೆಲ್ಲಾ ಹಿರಿಕೊಳ್ಳುತ್ತದೆ. ಕುಸ್ತಿ ಆಡುವಾಗ ಮೈ ಮೇಲೆ ಎಣ್ಣೆ ಇದ್ದರೆ ಎದುರಾಳಿ ಹಿಡಿಯಲು ಬ೦ದಾಗ ಅವನ ಕೈಗಳು ಜಾರಿ ಹೋಗುತ್ತವೆ. ನಾವು ಸುಲಭವಾಗಿ ಅವನನ್ನು ಎತ್ತಿ ಕೆಳಕ್ಕೆ ಹಾಕಬಹುದು. ಪರಸ್ಯಾನನ್ನು ಸೋಲಿಸಿದ ಬಾಬುವಿನ ಚಾಣಾಕ್ಷತನದ ಬಗ್ಗೆ ಮ೦ದಿಯೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ನಾವು ಹುಡುಗರು ಈ ಗುಟ್ಟನ್ನು ಯಾರಿಗೂ ಹೇಳುತ್ತಿರಲಿಲ್ಲ.