ದೇಶವೆಂದರೆ ಹರಿದ ಚಡ್ಡಿಯ ತೇಪೆ

ನಾನಿರುವ ಮನೆ
ನನಗಿಷ್ಟ
ಅಲ್ಲಿರುವ ಪಲ್ಲಿಗಳು
ಆಗೀಗ ಬಂದು ಹೋಗುವ ಕೀಟಗಳು
ಹಿತ್ತಲಲ್ಲಿ ನಾಚಿ ನುಸುಳಿ ಹೋಗುವ ಮುಂಗುಸಿ
ಅಪರೂಪಕ್ಕೆ ಇಣುಕಿ
ಬರ್ರನೆ ಹರಿದೋಗುವ ಹಾವು
ನನಗಿಷ್ಟ
ಇದು ನನ್ನ ದೇಶ

ಮೊದಲ ಬಾರಿ ನಾನು
ಬಯಲು ಸೀಮೆ ದಾಟಿ ಹೋಗಿ
ನೂರಾರು ಕಿಲೋಮೀಟರ್ ದೂರದ
ಸಮುದ್ರ ನೋಡಿದಾಗ
ನನಗೆ ಇಪ್ಪತ್ತೊಂದರ ಹರೆಯ
ಸಮುದ್ರ – ನಾನು
ಒಟ್ಟಿಗೆ ಉಕ್ಕಿದೆವು
ಗಡಿ ಮೀರಿದೆ ನಾನು
ದಡದ ಮರಳಲ್ಲಿ ಅಲೆಗಳ ಜೊತೆ ಆಡವಾಡಿ
ಪುಟ ಪುಟನೆ ಪುಟಿವ
ಚಿಟಾಣಿ ಏಡಿಗಳು ಗೂಡು ಕಟ್ಟುತ್ತಿದ್ದವು
ಮೀನುಗಾರರ ಬೆವರು ಸಂಜೆಯ
ಸಹವಾಸದಲ್ಲಿ ಕಂತುತಿತ್ತು
ಆ ಚಿರಹರೆಯದ ಆಗಾಧ ಸಮುದ್ರ
ಏಡಿಗಳ ಗೂಡು
ಮೀನುಗಾರರ ಬೆವರು
ಕತ್ತಲಿನೊಳಗೆ ಮಲಗಿದ ಸಂಜೆ
ಈಗ ನನ್ನ ದೇಶದ ಭಾಗ

ಅರ್ಜೆಂಟೈನಾದ ಆಲೂಗಡ್ಡೆ ಹೊಲದಲ್ಲಿ
ನಾಲ್ಕು ಹೆಂಗಸರು ಮಳೆಗಾಗಿಕುಣಿಯುವುದ ಕಂಡೆ
ನಾನು ಅವರೊಟ್ಟಿಗೆ ಕುಣಿದೆ
ಮಳೆಗಾಗಿ ಹಾಡಿದೆ !
ಕುಡಿದೆ
ಸುಟ್ಟ ಆಲೂಗಡ್ಡೆ ಹಂಚಿ ತಿಂದೆ
ಕವಿ ಕುರುಡ ಬೋರ್ಹಿಸ್‌ನ ಕಥೆ ಕೇಳಿದೆ
ಅವರೂ ನನ್ನ ದೇಶವಾಗಿಬಿಟ್ಟರು

ರಾತ್ರಿಯಲ್ಲಿ
ಮುಗಿಲು ಮಲ್ಲಿಗೆ ಘಮ ಹೆಚ್ಚು
ನನಗೂ ಅವಳಿಗೂ ಘಮಲಿನ ಹುಚ್ಚು
ಬೆಳ್ಳನೆಯ ಮೈಯೊಳಗೆ ತುಸು ನೇರಳೆ ಬಣ್ಣ
ಮಲ್ಲಿಗೆ ಮತ್ತು ಅವಳು ನನ್ನ ದೇಶ

ನಿಮಗೆ ರುಚಿಸುವುದೋ ಇಲ್ಲವೋ
ನನ್ನ ದೇಶ
ಹೀಗೆ ಹಲವು ಜಾಗಗಳ
ಮನುಷ್ಯರ
ಹುಳಹುಪ್ಪಟೆಗಳ
ಮರಗಿಡ ಹೂವುಗಳ
ರುಚಿಗಳ
ಮತ್ತು
ಅವಳ ಪ್ರೀತಿಯ
ತೇಪೆ ಹಾಕಿದ ಕೌದಿ

ತೇಪೆ ಹಾಕುವುದ ಕಲಿಸಿದ್ದು ನನ್ನ ಅವ್ವ
ನನ್ನ ಹರಿದ ಚಡ್ಡಿಯ ಮೇಲೆ
ಅವಳ ಹರಿದ ಲಂಗದ ತುಂಡಿನ ತೇಪೆ
ಅದು ನನ್ನ ಮಾನ ಪ್ರಾಣ ಜೀವ ಗುಣ
ನನ್ನ ಮನೆಯ ಸಾರಿಗೆ
ಮಗ್ಗುಲ ಮನೆಯ ಉಪ್ಪು
ರುಚಿಯೇನು ಬದಲಾಗುವುದಿಲ್ಲ

ನಿಜ ಹೇಳಲೇ
ನನ್ನ ದೇಶಕ್ಕೆ
ಯಾರು ಯಾವಾಗಾದರೂ ಬಂದು ಹೋಗಬಹುದು
ಖರ್ಚು ಅತಿ ಅಗ್ಗ ಪ್ರೀತಿ
ನಾನು ತೇಪೆಯಾಕಿದ
ಕೌದಿ ದೇಶದೊಳಗೆ ಬೆಚ್ಚಗೆ

ಲಕ್ಷ್ಮಣ ಕೆ.ಪಿ. ಮೂಲತಃ ನೆಲಮಂಗಲದ ಕಾಚನಹಳ್ಳಿಯವರು.
ಸಿಂಗಾಪುರದ intercultural theater institute ಮತ್ತು ನೀನಾಸಂನಲ್ಲಿ ನಟನೆ ಮತ್ತು ರಂಗಭೂಮಿ ಕುರಿತು ಪದವಿ ಪಡೆದಿದ್ದಾರೆ.
ದೇಶ-ವಿದೇಶಗಳಲ್ಲಿ ನಟನಾಗಿ, ನಟನೆಯ ಮೇಷ್ಟರಾಗಿ, ನಿರ್ದೇಶಕರಾಗಿ ಮತ್ತು ಬರಹಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ರಂಗಭೂಮಿ ಕುರಿತು ವಿಶೇಷ ಕೆಲಸ ಆರಂಭಿಸಿರುವ ”ಜಂಗಮ ಕಲೆಕ್ಟಿವ್ಸ್” ನ ಸದಸ್ಯರೂ ಹೌದು.