ಕಲ್ಯಾಣ ಚಾಲುಕ್ಯರ ಪ್ರಮುಖ ದೊರೆ ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಿತವಾಗಿರಬಹುದಾದ (ಕ್ರಿ.ಶ. 1006) ಸೋಮನಾಥ ಗುಡಿಗೆ ಸಂಬಂಧಿಸಿದಂತೆ ಅನೇಕ ಶಾಸನಗಳು ಲಭ್ಯವಿವೆ. ಮುಂದಿನ ಶತಮಾನಗಳಲ್ಲಿ ಈ ಪ್ರದೇಶವು ಅನೇಕ ರಾಜವಂಶಗಳ ಆಳ್ವಿಕೆಗೆ ಒಳಪಟ್ಟ ಸಂದರ್ಭದಲ್ಲಿ ಸೋಮೇಶ್ವರ ದೇಗುಲವನ್ನು ಜೀರ್ಣೋದ್ಧಾರ ಮಾಡಿದ ಹಾಗೂ ದಾನದತ್ತಿಗಳನ್ನೂ ಒದಗಿಸಿದ ವಿವರಗಳಿವೆ. ರಾಘವಾಂಕನ ಸೋಮನಾಥ ಚರಿತ್ರೆಯೂ ಸೇರಿದಂತೆ, ಲಕ್ಕಣ ದಂಡೇಶ, ಪಾಲ್ಕುರಿಕೆ ಸೋಮನಾಥ, ಭೀಮಕವಿ ಮೊದಲಾದವರ ಕೃತಿಗಳಲ್ಲಿ ಈ ದೇವಾಲಯಕ್ಕೆ ಸಂಬಂಧಿಸಿದ ವರ್ಣನೆಯನ್ನು ಕಾಣಬಹುದು. 
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ನಲ್ವತ್ತೊಂದನೆಯ ಕಂತು

 

ನಮ್ಮ ನಾಡಿನಲ್ಲಿರುವ ಅಪಾರ ಸಂಖ್ಯೆಯ ದೇಗುಲಗಳಿಂದ ಸಾಕಷ್ಟು ವರಮಾನ ಬರುತ್ತಿದ್ದರೂ ಅವುಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಂಡು ಬರುವ ಬಗೆಗೆ ಸರ್ಕಾರಕ್ಕೆ ಸಾಕಷ್ಟು ಆಸಕ್ತಿಯಿಲ್ಲವೆಂಬ ಜನರ ಆಕ್ಷೇಪ ಸುಳ್ಳೇನೂ ಅಲ್ಲ. ರಾಜ್ಯ ಪುರಾತತ್ವ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಅಧೀನದ ಭಾರತೀಯ ಸರ್ವೇಕ್ಷಣಾ ಇಲಾಖೆಗಳ ಸುಪರ್ದಿನಲ್ಲಿ ಹಲವು ದೇಗುಲಗಳು ಪುನಶ್ಚೇತನಗೊಂಡಿರುವುದೇನೋ ನಿಜ. ಆದರೆ, ಬಹುಸಂಖ್ಯೆಯಲ್ಲಿರುವ ಪುರಾತನ ಸ್ಮಾರಕಗಳ ಉಳಿವು ನಿರ್ವಹಣೆಗಳಿಗೆ ಈ ಇಲಾಖೆಗಳಲ್ಲಿ ಲಭ್ಯವಿರುವ ಸಿಬ್ಬಂದಿ, ಧನವಿನಿಯೋಗ, ಸೌಕರ್ಯಗಳು ಅಗತ್ಯಪ್ರಮಾಣದಲ್ಲಿರಲಿಕ್ಕಿಲ್ಲ. ಹಲವು ಸ್ಥಳೀಯರೂ ಉತ್ಸಾಹಿ ವ್ಯಕ್ತಿಗಳೂ ಖಾಸಗಿ ಸಂಸ್ಥೆಗಳೂ ಸ್ವಯಂಪ್ರೇರಣೆಯಿಂದ ನಾಡಿನ ಗುಡಿಗೋಪುರಗಳ ಜೀರ್ಣೋದ್ಧಾರಕ್ಕೆ ಮುಂದಾಗಿರುವ ಹಲವು ನಿದರ್ಶನಗಳೂ ಇವೆ. ಇತ್ತೀಚೆಗೆ ಇನ್ಫೋಸಿಸ್ ಫೌಂಡೇಶನ್ ನೆರವಿನಿಂದ ಜೀರ್ಣೋದ್ಧಾರಗೊಂಡ ಲಕ್ಷ್ಮೇಶ್ವರದ ಇತಿಹಾಸ ಪ್ರಸಿದ್ಧ ಸೋಮನಾಥ ಗುಡಿಯನ್ನು ಇಲ್ಲಿ ಉದಾಹರಿಸಬಹುದು.

ಹುಬ್ಬಳ್ಳಿಯಿಂದ ನಲವತ್ತೆಂಟು ಕಿ.ಮೀ. ದೂರದಲ್ಲಿರುವ ಲಕ್ಷ್ಮೇಶ್ವರ ಇತಿಹಾಸ ಪ್ರಸಿದ್ಧ ಸ್ಥಳ. ಪುಲಿಗೆರೆ ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದ ಈ ಊರಿನಲ್ಲಿ ಕಲ್ಯಾಣದ ಚಾಲುಕ್ಯರ ಆಡಳಿತ ಕಾಲದ ಅನೇಕ ಸ್ಮಾರಕಗಳನ್ನು ಕಾಣಬಹುದು. ಇಂಥ ಗುಡಿಗಳಲ್ಲಿ ಪುಲಿಗೆರೆಯ ಸೋಮನಾಥ ಎಂದೂ ಕರೆಯಲ್ಪಡುವ ಸೋಮೇಶ್ವರ ದೇವಾಲಯಸಂಕೀರ್ಣ ಪ್ರಮುಖವಾದುದು. ಶಿಥಿಲಾವಸ್ಥೆಗೆ ತಲುಪಿದ್ದ ಈ ಪ್ರಾಚೀನಸ್ಮಾರಕವನ್ನು ಐದೂವರೆ ಕೋಟಿ ರೂಗಳಿಗೂ ಹೆಚ್ಚಿನ ವೆಚ್ಚದಲ್ಲಿ ಪುನಶ್ಚೇತನಗೊಳಿಸುವ ಕಾರ್ಯ ಯಶಸ್ವಿಯಾಗಿ ನೆರವೇರಿದೆ. ಶ್ರೀಮತಿ ಸುಧಾಮೂರ್ತಿಯವರೂ ಸೇರಿದಂತೆ ಈ ಕಾರ್ಯಕ್ಕೆ ತೊಡಗಿಕೊಂಡವರೆಲ್ಲರೂ ಅಭಿನಂದನಾರ್ಹರು.

ಕಲ್ಯಾಣ ಚಾಲುಕ್ಯರ ಪ್ರಮುಖ ದೊರೆ ಆರನೆಯ ವಿಕ್ರಮಾದಿತ್ಯನ ಕಾಲದಲ್ಲಿ ನಿರ್ಮಿತವಾಗಿರಬಹುದಾದ (ಕ್ರಿ.ಶ. 1006) ಸೋಮನಾಥ ಗುಡಿಗೆ ಸಂಬಂಧಿಸಿದಂತೆ ಅನೇಕ ಶಾಸನಗಳು ಲಭ್ಯವಿವೆ. ಮುಂದಿನ ಶತಮಾನಗಳಲ್ಲಿ ಈ ಪ್ರದೇಶವು ಅನೇಕ ರಾಜವಂಶಗಳ ಆಳ್ವಿಕೆಗೆ ಒಳಪಟ್ಟ ಸಂದರ್ಭದಲ್ಲಿ ಸೋಮೇಶ್ವರ ದೇಗುಲವನ್ನು ಜೀರ್ಣೋದ್ಧಾರ ಮಾಡಿದ ಹಾಗೂ ದಾನದತ್ತಿಗಳನ್ನೂ ಒದಗಿಸಿದ ವಿವರಗಳಿವೆ. ರಾಘವಾಂಕನ ಸೋಮನಾಥ ಚರಿತ್ರೆಯೂ ಸೇರಿದಂತೆ, ಲಕ್ಕಣ ದಂಡೇಶ, ಪಾಲ್ಕುರಿಕೆ ಸೋಮನಾಥ, ಭೀಮಕವಿ ಮೊದಲಾದವರ ಕೃತಿಗಳಲ್ಲಿ ಈ ದೇವಾಲಯಕ್ಕೆ ಸಂಬಂಧಿಸಿದ ವರ್ಣನೆಯನ್ನು ಕಾಣಬಹುದು. ಆದಯ್ಯನೆಂಬ ಶರಣನು ಸೌರಾಷ್ಟ್ರದಿಂದ ಸೋಮನಾಥನನ್ನು ತಂದು ಇಲ್ಲಿ ಪ್ರತಿಷ್ಠಾಪಿಸಿದನೆಂದು ನಂಬಲಾಗಿದೆ.

ಉಳಿದೆಲ್ಲೆಡೆ ಶಿವನನ್ನು ಲಿಂಗರೂಪದಲ್ಲಿ ಪೂಜಿಸುತ್ತಿದ್ದರೆ ಇದೊಂದು ದೇವಾಲಯದಲ್ಲಿ ಶಿವನು ವಿಗ್ರಹರೂಪದಲ್ಲಿ ಪೂಜೆಗೊಳ್ಳುತ್ತಿರುವುದೇ ವಿಶೇಷ. ನಂದಿಯ ಮೇಲೇರಿ ಕುಳಿತು ಭಕ್ತರಿಗೆ ಅಭಿಮುಖವಾಗಿ ದರ್ಶನವೀಯುತ್ತಿರುವ ಶಿವ. ಆತನ ಹಿಂದೆ ಕುಳಿತ ಪಾರ್ವತೀದೇವಿಯು ಅಲಂಕಾರವೈಭವದ ನಡುವೆ ಅಷ್ಟು ಸುಲಭವಾಗಿ ಗೋಚರಿಸಲಾರಳು. ಶಿವನ ಬೆನ್ನಿಗೊರಗಿ ಮುಖವನ್ನು ಒಂದು ಪಕ್ಕಕ್ಕೆ ಆನಿಸಿ ಕುಳಿತ ಪಾರ್ವತಿಯ ಭಂಗಿ ತೀರಾ ಅಪೂರ್ವ.

ಅಭಿಷೇಕದ ವೇಳೆಯಲ್ಲಿ ವಿಗ್ರಹವನ್ನು ಮೂಲರೂಪದಲ್ಲಿ ನೋಡಲು ಸಾಧ್ಯವಿರುವ ಸಂದರ್ಭದಲ್ಲಿ ಮಾತ್ರ ಒಂದು ಬದಿಯಿಂದ ದೇವಿಯ ರೂಪವನ್ನು ಕಾಣಬಹುದು. ಡಮರು ತ್ರಿಶೂಲ ಜಪಸರಗಳನ್ನು ಧರಿಸಿದ ಚತುರ್ಭುಜದ ಶಿವ ಕಿರೀಟಧಾರಿಯಾಗಿ ವೃಷಭಾರೂಢನಾಗಿದ್ದಾನೆ. ಅಗಲವಾದ ಕರ್ಣಕುಂಡಲಗಳೂ ಹಸನ್ಮುಖವೂ ವಿಗ್ರಹದ ಸೊಬಗನ್ನು ಮಿಗಿಲುಗೊಳಿಸಿವೆ. ಶಿವಪಾರ್ವತಿಯರನ್ನು ಹೊತ್ತ ನಂದಿ ಸರ್ವಾಲಂಕೃತನಾಗಿ ಸ್ಥಿರವಾಗಿ ನಿಂತಿದ್ದಾನೆ. ದೇವಾಲಯದ ನಡುಭಾಗದ ಮಂಟಪದ ಕಂಬಗಳು ಸೊಗಸಾಗಿವೆ. ಮೇ ತಿಂಗಳ ಕೊನೆಯ ವಾರದಲ್ಲಿ ಸೂರ್ಯಕಿರಣಗಳು ವಿಗ್ರಹದ ಮೇಲೆ ನೇರವಾಗಿ ಬೀಳುವ ಕ್ಷಣಗಳು ನೋಡುಗರಿಗೆ ಅಪೂರ್ವ ದರ್ಶನದ ಅನುಭವ ನೀಡುವುವೆಂದು ಅರ್ಚಕ ಚಿಕ್ಕರಸಯ್ಯ ಹೇಳುತ್ತಾರೆ.

ದೇವಾಲಯದ ಸುತ್ತಲೂ ಇರುವ ಚಿಕ್ಕಚಿಕ್ಕ ಗುಡಿಗಳಲ್ಲಿ ಹಲವು ಶಿವಲಿಂಗಗಳಿವೆ. ದೇವಾಲಯದ ಒಂದು ಬದಿಯಲ್ಲಿರುವ ನವರಂಗ ಮಂಟಪವು ಚಿಕ್ಕದಾಗಿದ್ದರೂ ಆಕರ್ಷಕವಾಗಿದೆ. ದೇವಾಲಯದ ದಕ್ಷಿಣಭಾಗದ ಮಹಾದ್ವಾರ ವಿಜಯನಗರದ ಅರಸರ ಕಾಲದಲ್ಲಿ ನಿರ್ಮಾಣವಾದುದು. ಇಲ್ಲಿನ ಕಂಬಗಳ ಮೇಲಿನ ಶಿಲಾಸುಂದರಿಯರು, ಅರಸರು, ಯಕ್ಷರು, ಭೈರವ ಮೊದಲಾದ ಶಿಲ್ಪಗಳು ಭಗ್ನವಾಗಿದ್ದರೂ ಗಮನಸೆಳೆಯುವಂತಿವೆ. ದೇವಾಲಯದ ಹಿಂಬದಿಯಲ್ಲಿರುವ ಬಾವಿಯನ್ನು ಜೀರ್ಣೋದ್ಧಾರ ಮಾಡಲಾಗಿದ್ದು ಅದರ ಸೋಪಾನಗಳೂ ನಿರ್ಮಿತಿಯೂ ಮನಸೆಳೆಯುತ್ತವೆ.

(ಚಿತ್ರಗಳು: ಟಿ.ಎಸ್. ಗೋಪಾಲ್)

ಕ್ರಿ.ಶ. ಹನ್ನೊಂದನೆಯ ಶತಮಾನದಲ್ಲಿ ಗೌರಾಂಬಿಕೆಯೆಂಬ ಮಹಿಳೆ ಈ ಕೊಳವನ್ನು ಕಟ್ಟಿಸಿದಳೆಂದು ತಿಳಿದುಬರುತ್ತದೆ. ಬಾವಿಯನ್ನು ಶುಚಿಗೊಳಿಸುವಾಗ ಸಿಕ್ಕಿದ ಲಜ್ಜಾಗೌರಿಯ ಅಪೂರ್ವಶಿಲ್ಪವೊಂದನ್ನು ಸನಿಹದ ಗುಡಿಯೊಂದರಲ್ಲಿ ಇರಿಸಿದೆ.

ದೇಗುಲದ ಸುತ್ತಲಿನ ಭಿತ್ತಿಯ ಮೇಲೆ ಕಿರುಗೋಪುರಗಳೂ ಕೀರ್ತಿಮುಖಗಳೂ ವಿವಿಧ ವಿನ್ಯಾಸಗಳಲ್ಲಿ ಕಣ್ತುಂಬುತ್ತವೆ. ಈ ಕೀರ್ತಿಮುಖಗಳ ನಡುವೆ ಅಲ್ಲಲ್ಲಿ ಚಾಮರಧಾರಿಣಿ, ಯಕ್ಷ, ನರ್ತಕಿ, ದೇವತೆಯರು ಕಂಡುಬರುತ್ತಾರೆ. ವಿವಿಧ ಸ್ತರಗಳಲ್ಲಿ ಚಿಕ್ಕ ಚಿಕ್ಕ ಕಳಶಗಳೂ ಇದ್ದು ಶಿಖರದ ಅಂದವನ್ನು ಹೆಚ್ಚಿಸಿವೆ. ದೇಗುಲದ ಹೊರಾವರಣದಲ್ಲಿ ಅನೇಕ ಶಾಸನಗಳನ್ನೂ ವೀರಗಲ್ಲುಗಳನ್ನೂ ಸಾಲಾಗಿ ಇರಿಸಲಾಗಿದ್ದು ಅಧ್ಯಯನಾಸಕ್ತರಿಗೆ ಉಪಯುಕ್ತ ಮಾಹಿತಿ ಒದಗಿಸಬಲ್ಲುವು.

ಲಕ್ಷ್ಮೇಶ್ವರ ಅನೇಕ ಗುಡಿ, ಬಸದಿ, ಮಸೀದಿಗಳಿಂದ ಕೂಡಿದ ಪುರಾತನ ಸ್ಮಾರಕಗಳ ಬೀಡು. ಇವೆಲ್ಲವನ್ನೂ ಪ್ರತ್ಯೇಕವಾಗಿ ನೋಡಲು ಒಂದು ದಿನದ ಅವಧಿಯೂ ಸಾಲದು. ಇಲ್ಲಿಂದ ಮುಂದೆ ಗದಗ, ಲಕ್ಕುಂಡಿ ಮೊದಲಾದ ಸ್ಥಳಗಳಿಗೂ ಹೋಗಿ ಬರಬಹುದು.