ಕೊರೋನಾ ಬಂದ ಈ ದುರಿತ ಕಾಲದಲ್ಲೇ ಆಳುವವರು ಬುದ್ದಿ ಕಲಿಯದೇ ನಮ್ಮ ಕಾಡು, ಬೆಟ್ಟ, ನದಿಗಳನ್ನು ನಮ್ಮಿಂದ ಕಸಿಯುವ ಅಂಕೋಲ-ಹುಬ್ಬಳಿ ರೈಲ್ವೇ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಭದ್ರಾ ನದಿಗೂ ಕಂಟಕ ತರುವ ಯೋಜನೆಯೂ ನಡೆಯುತ್ತಿದೆ. ನಮ್ಮ ಪರಿಸರವನ್ನು ಕಸಿದರೆ ಭವಿಷ್ಯದಲ್ಲಿ ಕೊರೋನಾಕ್ಕಿಂತಲೂ ಭೀಕರ ಸ್ಥಿತಿ ನಿರ್ಮಾಣವಾಗಬಹುದು. ಭೂಕುಸಿತ, ಪ್ರವಾಹಕ್ಕೆ ನಾವೇ ಕಂಬಳಿಹಾಸು ಹಾಸಿದಂತಾಗಬಹುದು. ನದಿ ಮೂಲಗಳನ್ನು ಸಾಯಿಸಿ, ಕಾಡು ಕಬಳಿಸಿದರೆ ನಾವೂ ಕ್ರಮೇಣ ಜೀವ ಕಳೆದುಕೊಳ್ಳುತ್ತಾ ಹೋಗುತ್ತೇವೆ. ಬರಿದಾಗುತ್ತೇವೆ. ನಾವು ಪ್ರಕೃತಿಯಿಂದ ಪಡೆದುಕೊಳ್ಳುವ ಜಗತ್ತನ್ನು ಕಳೆದುಕೊಳ್ಳಲು ಹೊರಟಿದ್ದೇವೆ. ನಾವು ಕಳೆದುಕೊಳ್ಳುವ ಜಗತ್ತು ಅದೆಷ್ಟು ದೊಡ್ಡದ್ದೆಂದು ಯೋಚಿಸುತ್ತಲೇ ಭಯವಾಯ್ತು.
ಪ್ರಸಾದ್ ಶೆಣೈ ಅಂಕಣ

 

ಮೊನ್ನೆ ನಮ್ಮೂರಿನ ಒಂದು ಮೂಲೆಯಲ್ಲಿದ್ದ ಕಾಡನ್ನು ತುಂಬಾ ದಿನಗಳ ನಂತರ ನೋಡುವ ಆಸೆಯಾಯ್ತು. ಆ ದಾರಿಯಾಚೆಯೇ ಒಂದಷ್ಟು ತುರ್ತು ಕೆಲಸವಿದ್ದುದರಿಂದ ಕೆಲಸ ಮುಗಿಸಿ ಬರುತ್ತಾ ಆ ಕಾಡನ್ನು ಕಣ್ತುಂಬಿಕೊಳ್ಳೋಣವೆಂದು ನಿರ್ಧರಿಸಿ, ಬೈಕೇರಿ ತುರ್ತು ಕೆಲಸ ಮುಗಿಸಿ, ಮರಳಿ ಆ ಕಾಡದಾರಿಯತ್ತ ಹೊರಳಿದೆ.

ಕೋರೋನಾ ಈ ಲೋಕದಲ್ಲಿ ಆವರಿಸುವುಕ್ಕಿಂತ ಮೊದಲು ಮನುಷ್ಯರ ಶಬ್ದ, ಸ್ಪರ್ಶ, ಮಾಲಿನ್ಯದ ಬಿಸಿಗೆ ಥಕ್ಕಾಗಿ ಹೋಗಿದ್ದ ಆ ಕಾಡಿನ ಹಸುರು, ಈಗ ದಾರಿ ಅದೆಷ್ಟು ನಿಶ್ಕಲ್ಮಶವಾಗಿ ಕಾಣುತ್ತಿತ್ತೆಂದರೆ, ನಾನು ಈ ಮೊದಲು ನೋಡಿದ್ದ ಕಾಡ ದಾರಿ ಇದೇನಾ? ಎನ್ನುವಷ್ಟು ಅಚ್ಚರಿಯಾಯ್ತು.

ಆಗತಾನೇ ಬೀಳುತ್ತಿದ್ದ ಬಿಸಿಲು ಅಲ್ಲಿದ್ದ ರೆಂಜೆ ಮರದ ಮೇಲೆ ಚಾರಣಮಾಡುತ್ತ, ಕೊನೆಗೆ ರಾಶಿ ರಾಶಿ ರೆಂಜೆ ಹೂವುಗಳ ಮೈಯನ್ನು ಫಳಕ್ಕನೇ ಹೊತ್ತಿಸುತ್ತಿತ್ತು, “ನನ್ನನ್ನೂ ಸ್ವಲ್ಪ ಬೆಳಗಿಸಪ್ಪಾ, ನಿನ್ನ ಮೊದಲ ಕಿರಣ ಸೋಕಿದರೆ ನಾನು ಇನ್ನಷ್ಟು ಚೆಂದವಾಗುತ್ತೇನೆ ಮಾರಾಯ” ಎನ್ನುತ್ತಾ ಡುಮ್ಮ ಹೊಟ್ಟೆಯ ಅರಸಿನ ಬುರುಡೆ ಹಕ್ಕಿ, ತನ್ನ ಹಚ್ಚ ಹಳದಿ ಮೈಯನ್ನು ಸೂರ್ಯನಿಗೆ ತೋರಿಸುತ್ತಾ ಅದೇ ರೆಂಜೆ ಮರದಲ್ಲಿ ಕೂತುಬಿಟ್ಟಿತು.

ಈ ಅಮೂರ್ತ ಕ್ಷಣ ನೋಡುತ್ತ ನೋಡುತ್ತ ನಾನೂ ಬೆಳಗದೇ ಇರುತ್ತೇನಾ ನೀವೇ ಹೇಳಿ. ಆ ರೆಂಜೆ ಮರ, ಅದರ ಕನಸಿನಂತಹ ಚಂದನೆಯ ಪರಿಮಳದ ರೆಂಜೆ ಹೂವು, ಎಳೆ ಬಿಸಿಲು ಮತ್ತು ಆ ಅರಸಿನ ಬುರುಡೆ ಹಕ್ಕಿ ಇವೆಲ್ಲಾ “ಯಾವತ್ತೂ ಬೆಳೆಯುತ್ತಲೇ ಇರುವವರು ನಾವು, ಬೆಳಕಿನಲ್ಲಿಯೂ, ನನ್ನ ಬಾಳು ಕತ್ತಲೆಯೇ ಆಯ್ತಲ್ಲಾ? ಅಂತ ಪ್ರತೀ ಕ್ಷಣವೂ ಅತೃಪ್ತಿಯಿಂದ ಕಳೆಯುವ ಮನುಷ್ಯರಂತಲ್ಲಾ ನಾವು” ಎಂದು ಸೂಚ್ಯವಾಗಿ ಹೇಳುತ್ತಿದ್ದಂತೆ ಕಂಡಿತು.

ಇವನ್ನೇ ಖುಷಿಯಿಂದ ನೋಡುತ್ತ ಮುಂದೆ ಸಾಗಿದರೆ ಅಲ್ಲಿರುವ ತಂತಿಯಲ್ಲಿ ಸಾಲು ಸಾಲಾಗಿ ಕಳ್ಳಪೀರ ಹಕ್ಕಿಗಳು ಬೆಳಗ್ಗಿನ ಉಪಹಾರಕ್ಕೆ ನೆರೆದಿರುವಂತೆ ಕೂತಿದ್ದವು. ಮತ್ತೊಂದು ಕಡೆ ನೋಡುತ್ತೇನೆ, ಅಲ್ಲಿ ಕಾಡು ಮೈನಾಗಳು ತಮ್ಮದೇ ಒಂದು ಗುಂಪು ಕಟ್ಟಿಕೊಂಡು ಆಕಾಶದ ನೀಲಿಯಲ್ಲಿ ಸುಯ್ಯನೇ ಕರಗಿಹೋಯ್ತು. ಯಾವತ್ತೂ ಈ ದಾರಿಗೆ ಬರದಿದ್ದ ಹರಳು ಚೋರೆ ಪಾರಿವಾಳಗಳು, ಇವತ್ತು ಮರದ ಕೊಂಬೆಯಿಂದ ಕೊಂಬೆಗೆ ಹಾರುತ್ತಿದ್ದವು. ನಂಗೆ ಅಚ್ಚರಿಯಾಗಿ, ಮೈಯಲ್ಲೆಲ್ಲಾ ಧನ್ಯತೆ ಆವರಿಸಿ, ಅಲ್ಲೇ ನಿಂತು ಆ ಹಕ್ಕಿಗಳ ಚಿಲಿಪಿಲಿಯ ನಾಡಲ್ಲಿ ಕಳೆದೇಹೋದೆ.

ಅಯ್ಯೋ ಇದರಲ್ಲೇನು ವಿಶೇಷ? ಹಕ್ಕಿಗಳು ಅದರ ಪಾಡಿಗೇ ಕೂತು ಹಾಡು ಹಾಡುತ್ತಿದ್ದರೆ ಸಹಜವಾಗಿ ಧನ್ಯತೆ ಆಗಲೇಬೇಕಲ್ಲವೇ? ಅದು ಅತ್ಯಂತ ಸಹಜ ತಾನೇ? ಎಂದು ನೀವು ಕೇಳಬಹುದು. ಆದರೆ ನಾನೀಗ ನಿಂತ ಜಾಗದಲ್ಲಿ ಕೆಲವು ತಿಂಗಳುಗಳ ಹಿಂದೆ ಹಕ್ಕಿಗಳು ಇಷ್ಟು ಖುಷಿಯಿಂದ ಗುಂಪು ಸೇರುತ್ತಿರಲಿಲ್ಲ, ಕಳೆದು ಹೋದ ಕನಸೊಂದು ಮತ್ತೆ ಸಿಕ್ಕು ನನಸಾಯ್ತು ಎನ್ನುವಂತೆ ಇಷ್ಟೊಂದು ಸಂತಸದಿಂದ ಹಾಡು ಹಾಡುತ್ತಿರಲಿಲ್ಲ. ಅವುಗಳ ರೆಕ್ಕೆಯ ಬೀಸಿನ ಸದ್ದು, ಅವುಗಳು ಸಣ್ಣಗೇ ಇನ್ನೊಂದು ಹಕ್ಕಿಗಳ ಜೊತೆ ಪಿಸುಮಾತನಾಡುವ ಸದ್ದುಗಳು ಇಷ್ಟು ನಿಚ್ಚಳವಾಗಿ ಇವತ್ತಿನಂತೆ ಕೇಳುತ್ತಿರಲಿಲ್ಲ. ಪುರ್ರೆಂದು ಹಾರುವಾಗ ಅವುಗಳ ಬೀಸಣಿಗೆಯಂತಹ ರೆಕ್ಕೆಯ ಗಾಳಿ ಹಿತವಾಗಿ ಮೈಯನ್ನು ಸೋಕುತ್ತಿರಲಿಲ್ಲ. ಆದರೆ ಇವತ್ತು ಹಾಗಲ್ಲ, ಪಿಕಳಾರ ಹಕ್ಕಿಗಳು ಸುಯ್ ಎಂದು ಹಾರುವಾಗ ಅದರ ರೆಕ್ಕೆ ಬಡಿತದ ಸದ್ದು ಸ್ವರ್ಗಲೋಕದಿಂದ ಬಂದ ಮಧುರ ನಿನಾದದಂತೆ ಭಾಸವಾಯ್ತು. ಆ ರೆಕ್ಕೆ ಅನ್ನೋ ಬೀಸಣಿಕೆ ಗಾಳಿ ಮೈಯನ್ನು ಆವರಿಸಿದಾಗ ಈ ಮೊದಲು ಇಂತದ್ದೊಂದು ತಣ್ಣಗಿನ ಗಾಳಿಯನ್ನು ಪಡೆದೇ ಇಲ್ಲ ಎನ್ನುವ ಅರಿವಾಗಿ ಮೈಮನ ಕೃತಾರ್ಥವಾಯ್ತು. ಎಂದೂ ಸಿಗದಿದ್ದ ಈ ಗಾಳಿ, ಹಕ್ಕಿಗಳ ಸಡಗರ, ಈ ಕಾಡಿನ ಮೌನ ಎಲ್ಲವನ್ನೂ ಬೆರಗಿನಿಂದ ಅನುಭವಿಸುತ್ತ ನಿಂತೆ.

ಇದೇ ಕಾಡಿನ ದಾರಿಯಲ್ಲಿ ದೊಡ್ಡದ್ದೊಂದು ಮೈದಾನವೂ ಇದೆ, ಪ್ರವಾಸಿಗರನ್ನು ಸೆಳೆಯಲು ಮಾಡಿದ ಪಾರ್ಕ್, ಈಜುಕೊಳವೂ ಇದೆ. ಸಾಲದಕ್ಕೆ ಈ ಕಾಡಿನ ಕೆಲವೊಂದು ಪ್ರದೇಶಗಳನ್ನು ನುಂಗಿ ನೀರು ಕುಡಿದು, ಕೆಲಸಕ್ಕೆ ಬಾರದ ಪ್ರಾಜೆಕ್ಟ್ ಗಳನ್ನು ಎಬ್ಬಿಸುವ ಹುನ್ನಾರವೂ ದುಷ್ಟ ರಾಜಕಾರಣಿಗಳ ಗೆದ್ದಲು ಹಿಡಿದ ತಲೆಯಲ್ಲಿದೆ. ಇಂತಿಪ್ಪ ಪ್ರದೇಶ, ಒಂದು ಕಾಲದಲ್ಲಿ ಪಶ್ಚಿಮಘಟ್ಟದ ಅಪರೂಪದ ಹಕ್ಕಿಗಳ, ಕಾಡುಕೋಣ, ಕಡವೆ, ಹಂದಿಗಳ ಮನೆಯಾಗಿತ್ತು. ಇಲ್ಲಿ ನೆಮ್ಮದಿಯ ಉಸಿರು ಬಿಡುತ್ತಾ, ಮಳೆಗೆ ಅರಳುತ್ತಾ, ಬಿಸಿಲಿಗೆ ಹೊಳೆಯುತ್ತಾ, ಚಳಿಗೆ ತಂಪಾಗುತ್ತ ಬೆಳೆಯುವ ಕಾಡುಗಳ ಜೊತೆಗೆ ಇವರೆಲ್ಲಾ ನೆಮ್ಮದಿಯಾಗಿದ್ದರು. ಈ ಕಾಡಿನ ಸೆರಗು ಹಿಡಿದು ಸಾಗಿದರೆ ದುರ್ಗದ ಕಾಡು, ದುರ್ಗದ ಕಾಡಿನ ಎಳೆ ಹಿಡಿದು ಸಾಗಿದರೆ ಮಾಳ ಕಾಡು, ಮಾಳದಿಂದ ಕುದುರೆಮುಖದ ನಿತ್ಯಹರಿದ್ವರ್ಣ ಕಾಡು ಸಿಗುತ್ತಿದ್ದುದರಿಂದ ಈ ಕಾಡು ಇವರೆಲ್ಲರ ಆಶ್ರಯಕ್ಕೆ ಅತ್ಯಂತ ಸೂಕ್ತವಾಗಿತ್ತು.

ಪಶ್ಚಿಮಘಟ್ಟದ ಬಣ್ಣ ಬಣ್ಣದ ಹಕ್ಕಿಗಳಂತೂ ಸುಯ್ಯನೇ ರೆಕ್ಕೆ ಬೀಸುತ್ತಾ ಆ ಕಾಡಿನಿಂದ ಈ ಕಾಡಿಗೆ, ಈ ಕಾಡಿನಿಂದ ಆ ಕಾಡಿಗೆ ಜಾರುಬಂಡಿಯಲ್ಲಿ ಜಾರಿದಂತೆ ಮುಗಿಲಲ್ಲಿ ಹಾರುತ್ತಿತ್ತು. ಆದರೆ ಮನುಷ್ಯ ಯಾವುದನ್ನು ಸಹಜವಾಗಿ ಉಳಿಸುತ್ತಾನೆ ಹೇಳಿ? ಸಹಜವಾಗಿರುವುದೆಲ್ಲವೂ ನಮಗೆ ಅಸಹಜದಂತೆ, ಅಸಹಜವಾಗಿರುವುದೆಲ್ಲಾ ಸಹಜವಾಗಿ ಕಾಣುತ್ತಿರುವ ದುಷ್ಕಾಲವಿದು. ಸಹಜವಾಗಿರುವ ಕೆರೆ, ನಮಗೆ ಅಸಹಜ. ಆ ಕೆರೆಯನ್ನು ಸಾಯಿಸಿ, ಅಲ್ಲೇ ಒಂದು ಈಜು ಕೊಳ ಸ್ಥಾಪಿಸುವುದು ನಮಗೆ ಸಹಜ. ಅದೇ ನಮಗೆ ಮುಖ್ಯ, ಇದ್ದ ಕಾಡನ್ನೆಲ್ಲಾ ಬೋಳಿಸಿ ಅಲ್ಲೇ ಒಂದು ಪಾರ್ಕ್ ಮಾಡುತ್ತೇವೆ, ಹಕ್ಕಿಗಳನ್ನು ಬೇಟೆಯಾಡಿ ಸಾಯಿಸಿ, ಆ ಪಾರ್ಕ್ ನ ಆವರಣದಲ್ಲಿ ಕಾಂಕ್ರೀಟಿನಿಂದ ಫಳ ಪಳ ಅನ್ನಿಸೋ ಹಕ್ಕಿಗಳ ಆಕೃತಿ ಮಾಡಿ ನಮ್ಮಷ್ಟು ಪರಿಸರ ಪ್ರೇಮಿಗಳು ಲೋಕದಲ್ಲಿಲ್ಲ ಎಂದು ಬೀಗುತ್ತೇವೆ. ಅಂದರೆ ನಮ್ಮ ಪ್ರಕಾರ ನಿಜವಾಗಿರುವ ಹಕ್ಕಿಗಳೆಲ್ಲಾ ಸುಳ್ಳು, ನಾವು ನಿರ್ಮಿಸಿದ ಸುಳ್ಳು ಹಕ್ಕಿಗಳ ಆಕೃತಿ ಮಾತ್ರ ನಿಜ ಎನ್ನುವ ಭಾವ.

ಈ ಪ್ರದೇಶದಲ್ಲೂ ಹಾಗೇ ಆಯ್ತು, ಕಾಡು ಬೋಳಿಸಿ ಮಕ್ಕಳಿಗೆ ಆಡುವುದಕ್ಕೆ ದೊಡ್ಡ ಮೈದಾನ ಮಾಡಿದರು, ಮೈದಾನದ ಪಕ್ಕ ಈಜುಕೊಳ, ಈಜುಕೊಳದ ಪಕ್ಕ ಪಾರ್ಕ್, ಅಷ್ಟು ವರ್ಷ ಮನುಷ್ಯರೇ ಬರದ ಈ ಜಾಗಕ್ಕೆ ಈಗ ಮನುಷ್ಯರು ಹಿಂಡು ಹಿಂಡಾಗಿ ಬರತೊಡಗಿದರು. ಇವರ ಬೊಬ್ಬೆ, ಇವರು ಎಸೆದ ಕುರ್ಕುರೆ ತೊಟ್ಟೆಗಳು, ಬಾಟ್ಲಿಗಳಿಂದ ಅನಾಚಾರಗಳಿಂದ, ದಿಕ್ಕೆಟ್ಟು, “ನಮಗಿನ್ನು ಇಲ್ಲಿ ಉಳಿಗಾಲವಿಲ್ಲವೆಂದು” ಅಪರೂಪದ ಹಕ್ಕಿಗಳೆಲ್ಲಾ ಇಲ್ಲಿಂದ ಜಾಗ ಖಾಲಿ ಮಾಡಿದವು. ಕೆಲವು ಪ್ರಾಣಿಗಳು ಬೇಟೆಗೀಡಾದವು. ಮತ್ತೆ ಕೆಲವು ಅಲ್ಲಿಂದ ಹ್ಯಾಗೋ ಮಾಯವಾಯ್ತು. ಇಂತಿಪ್ಪ ಕಾಡಾಗಿದ್ದ ಈ ಪ್ರದೇಶದಲ್ಲಿ ಕೆಲವೊಂದು ಹಕ್ಕಿಗಳು ಅಳಿದುಳಿದ ತಮ್ಮ ಸಾಮ್ರಾಜ್ಯವನ್ನೇ ಗಟ್ಟಿಮಾಡಿಕೊಂಡು ನಿಶ್ಚಿಂತೆಯಿಂದಿರುತ್ತಿತ್ತು. ನಾನೂ, ಪಕ್ಷಿಮಿತ್ರ ಅಮಿತ್ ಆಗಾಗ ಈ ಪ್ರದೇಶಕ್ಕೆ ಬಂದು ಹಕ್ಕಿಗಳ ಅವಲೋಕನ ಮಾಡುತ್ತ, ಅವುಗಳ ಜೀವನಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಖುಷಿಪಡುತ್ತಿದ್ದೆವು. ಇಲ್ಲಿ ಬಾಕಿ ಇರುವ ಮರಗಳನನ್ನು ಸಾಯಿಸಲು ಬಿಡಬಾರದು, ಸಾಯಿಸಲು ಬರುವ ದುಷ್ಟ ಶಕ್ತಿಗಳು ಎಂದಿಗೂ ಉದ್ಧಾರವಾಗಬಾರದು ಎಂದು ಶಾಪ ಹಾಕುತ್ತ ಈ ಪರಿಸರದ ಹಕ್ಕಿಗಳನ್ನು, ಇಲ್ಲಿನ ಚಟುವಟಿಕೆಗಳನ್ನು ದಾಖಲಿಸಲು ಏನಾದರೂ ಒಂದು ಮಾಡಬೇಕೆಂದು ಯೋಚಿಸುತ್ತಿದ್ದೆವು. ಈ ಸಂದರ್ಭದಲ್ಲಿ ಅಮಿತ್, ಇಲ್ಲಿ ಹಿಂದೆ ತುಂಬಾ ಮಲಬಾರ್ ಟ್ರೋಗನ್ ಹಕ್ಕಿಗಳು ಇತ್ತೆಂದೂ, ಈ ವಿಪರೀತ ಕಾಡು ನಾಶದಿಂದ ಅವುಗಳು ಈಗ ಒಂದೂ ನೋಡಲು ಸಿಕ್ಕುವುದಿಲ್ಲವೆಂದೂ ಬೇಸರ ವ್ಯಕ್ತಪಡಿಸುತ್ತಿದ್ದ.

(ಕಾಕರಣೆ ಹಕ್ಕಿ)

ಆ ರೆಂಜೆ ಮರ, ಅದರ ಕನಸಿನಂತಹ ಚಂದನೆಯ ಪರಿಮಳದ ರೆಂಜೆ ಹೂವು, ಎಳೆ ಬಿಸಿಲು ಮತ್ತು ಆ ಅರಸಿನ ಬುರುಡೆ ಹಕ್ಕಿ ಇವೆಲ್ಲಾ “ಯಾವತ್ತೂ ಬೆಳೆಯುತ್ತಲೇ ಇರುವವರು ನಾವು, ಬೆಳಕಿನಲ್ಲಿಯೂ, ನನ್ನ ಬಾಳು ಕತ್ತಲೆಯೇ ಆಯ್ತಲ್ಲಾ? ಅಂತ ಪ್ರತೀ ಕ್ಷಣವೂ ಅತೃಪ್ತಿಯಿಂದ ಕಳೆಯುವ ಮನುಷ್ಯರಂತಲ್ಲಾ ನಾವು” ಎಂದು ಸೂಚ್ಯವಾಗಿ ಹೇಳುತ್ತಿದ್ದಂತೆ ಕಂಡಿತು.

ಕನ್ನಡದಲ್ಲಿ ಕಾಕರಣೆ ಹಕ್ಕಿ ಎಂದು ಹೆಸರುಗಳಿಸಿಕೊಂಡಿದ್ದ ಮಲಬಾರ್ ಟ್ರೋಗನ್ ಹಕ್ಕಿ, ಪಶ್ಚಿಮಘಟ್ಟದ ಅಪರೂಪದ ಹಕ್ಕಿ ಎನ್ನುವುದು ಗೊತ್ತಿತ್ತು. ಆದರೆ ಆ ಹಕ್ಕಿಯನ್ನು ಸಮೀಪದಿಂದ ನೋಡಲು ನನಗೆ ಸಾಧ್ಯವಾಗಲೇ ಇಲ್ಲ. ಒಮ್ಮೆ ಮಾಳ ಕಾಡಿನಲ್ಲಿ ದೂರದಿಂದ ಅದರ ಅರ್ಧ ಮೈಭಾಗ ನೋಡಿ, ಅದರ ಕೂಗು ಕೇಳಿ ಆನಂದಪಟ್ಟಿದ್ದೆ ಬಿಟ್ಟರೆ, ಅದನ್ನು ಹತ್ತಿರದಿಂದ ನೋಡಬೇಕು, ರಕ್ತವರ್ಣದಿಂದ ನಳನಳಿಸುವ ಅದರ ಸರ್ವಾಂಗ ಸೌಂದರ್ಯವನ್ನು ಕಾಣಬೇಕು ಎನ್ನುವ ಆಶೆ ಮಾತ್ರ ಆಶೆಯಾಗಿಯೇ ಉಳಿದಿತ್ತು. ಆದರೆ ನಮ್ಮೊಳಗೆ ಪೂರ್ಣಪ್ರಮಾಣದಿಂದ ಉದಯಿಸುತ್ತಲೇ ಇರುವ ಆಶೆಗೆ, ಕನಸಿಗೆ ಒಂದಲ್ಲ ಒಂದು ದಿನ ನನಸಾಗುವ ಭಾಗ್ಯ ಒಂದೇ ಬರುತ್ತದೆ. ನಿಮ್ಮೊಳಗೆ ಯಾವತ್ತೋ ಮೂಡಿ ನಿಮ್ಮೊಳಗೆ ನಿಮಗರಿವಿಲ್ಲದಂತೆಯೇ ಬೆಚ್ಚಗಿದ್ದ ಕನಸೊಂದು ಯಾವತ್ತೋ ಒಂದು ದಿನ ನಿಮ್ಮೆದುರೇ ಥಟ್ ಅಂತ ನನಸಾಗಿಬಿಟ್ಟಾಗ ಆಗುವ ಖುಷಿ ಅವರ್ಣನೀಯ.

ನಿಮ್ಮ ಕಲ್ಪನೆಯ ಹುಡುಗಿ ಬೇಕು ಅಥವಾ ಹುಡುಗ ಬೇಕೆಂದು ಯೋಚನೆ ಮಾಡುತ್ತೀರೆಂದುಕೊಳ್ಳಿ. ಥೇಟ್ ನಿಮ್ಮ ಕಲ್ಪನೆಯನ್ನೇ ನಿಜವಾಗಿಸಿ, ಅಂತದ್ದೇ ಹುಡುಗ/ಹುಡುಗಿ, ಜಿಗ್ ಅಂತ ಸಂತೆಯಲ್ಲೋ, ಪೇಟೆಯಲ್ಲೋ ಸಿಕ್ಕಿಬಿಡುತ್ತಾರೆ. ಆಗ ನಿಮಗೆಷ್ಟು ಖುಷಿಯಾಗಬೇಡ ಯೋಚಿಸಿ.. ಸ್ವರ್ಗವೇ ಬಾಯಿಗೆ ಬಂದಂತಾಗುತ್ತದೆ ಅಲ್ಲವೇ? ಅವರು ಸಂತೆಯ ಜಂಗುಳಿಯಲ್ಲಿ ಕಳೆದುಹೋದರೂ, ಅವರನ್ನೇ ಹಿಂಬಾಲಿಸಿ ಮತ್ತೆ ಮತ್ತೆ ಕಾಣಲು ತವಕಪಡುತ್ತೀರಲ್ಲವೇ? ಆ ತವಕ, ಖುಷಿ ಮಾತ್ರ ಅನುಪಮ. ನನಗೂ ಹಾಗೆ, ನಾನು ನನ್ನ ಕಲ್ಪನೆಯಲ್ಲೇ ಕಟ್ಟಿಕೊಂಡಿದ್ದ ಆ ರಕ್ತವರ್ಣದ ಹಕ್ಕಿಯನ್ನು ನೋಡಬೇಕು ಎನ್ನುವ ಅಪರಿಮಿತ ಕುತೂಹಲವಿತ್ತು. ಪ್ರತೀ ಸಲ ಕಾಡು ಹೊಕ್ಕಾಗಲೂ ಅದರದ್ದೇ ಕನಸು, ಅದನ್ನೊಮ್ಮೆ ಕಾಣಬೇಕು ಎನ್ನುವ ಆಸೆಯ ಜಲಪಾತದಲ್ಲಿ ಮನಸ್ಸು ಧುಮುಕುತ್ತಿತ್ತು. ಆದರೆ ಆ ಹಕ್ಕಿ ಮಾತ್ರ ಯಾವ ಕಾಡಿನಲ್ಲೂ ಅಷ್ಟು ಸುಲಭಕ್ಕೆ ತನ್ನ ದರ್ಶನ ಕೊಡಲೇ ಇಲ್ಲ. “ಹಾಗೆಲ್ಲಾ ದರ್ಶನ ಕೊಡಲು ನಾನು ಧರ್ಮಸ್ಥಳದ ಮಂಜುನಾಥನಲ್ಲ, ಕಾಯು ಕಾಯು, ಒಂದಲ್ಲ ಒಂದು ದಿನ ದರ್ಶನ ಕೊಟ್ಟೇ ಕೊಡುತ್ತೇನೆ” ಅಂತ ಆ ಹಕ್ಕಿ ಪ್ರತಿಜ್ಞೆ ಮಾಡಿತ್ತೋ ಏನೋ. ಕಾದೇ ಕಾಯುವೆ ಅಂತ ನಾನೂ ಪ್ರತಿಜ್ಞೆ ಮಾಡಿದೆ. ಕಂಡ ಕನಸು ಒಂದಲ್ಲ ಒಂದು ದಿನ ನನಸಾಗಲೇಬೇಕಲ್ಲವೇ? ಎನ್ನುವ ಭರವಸೆಯಿಂದ ಆ ಕಾಕರಣೆ ಹಕ್ಕಿಯನ್ನು ನನ್ನೊಳಗೆ ಇನ್ನಷ್ಟು ಪ್ರೀತಿಸುತ್ತಾ ಸುಮ್ಮನಿದ್ದೆ.

ಈಗ ಬಕುಲದ ಮರ, ಅದರ ಪರಿಮಳದ ಹೂವು, ಬಿಸಿಲು, ಕಳ್ಳಪೀರ ಹಕ್ಕಿ, ಪಿಕಳಾರ ಹಕ್ಕಿಗಳ ಬೀಸುಗಾಳಿ ಇವನ್ನೆಲ್ಲಾ ನೋಡುತ್ತ, ಆಸ್ವಾದಿಸುತ್ತ ಕಳೆದುಹೋಗಿದ್ದೆ. ಲಾಕ್ ಡೌನ್ ಆಗಿದ್ದು ನಿಜಕ್ಕೂ ಈ ಹಕ್ಕಿಗಳಿಗೆ ಎಷ್ಟೊಂದು ಒಳ್ಳೆದಾಯ್ತು ಎಂದು ಖುಷಿಪಡುತ್ತಾ ಇದ್ದಾಗ ಸುಯ್ಯ್ ಅಂತ ಒಂದು ಹಕ್ಕಿ ಅಲ್ಲಿರುವ ನೇರಳೆ ಮರದ ಗೆಲ್ಲಿನಲ್ಲಿ ಬಂದು ಕೂತುಬಿಟ್ಟಿತು. ನನ್ನಿಂದ ತುಂಬಾ ಹತ್ತಿರದಲ್ಲಿದ್ದ ಆ ಗೆಲ್ಲನ್ನು ನೋಡುತ್ತೇನೆ “ಅಬ್ಬಾ ಏನು ಹೇಳೋದು, ನಾನಿಷ್ಟು ದಿನ ಪ್ರೀತಿಸಿದ್ದ, ಆಸೆಪಟ್ಟಿದ್ದ ಕಾಕರಣೆ ಹಕ್ಕಿ ಬಂದು ನನ್ನನ್ನೇ ಮಿಕಿ ಮಿಕಿ ನೋಡುತ್ತ ಕೂತುಬಿಟ್ಟಿದೆ. ಅದರ ರಕ್ತವರ್ಣದ ಹೊಟ್ಟೆ, ಕಪ್ಪು ಪಟ್ಟಿಯ ಕೊರಳು, ನಸು ಹಳದಿ ಬೆನ್ನ ಬಣ್ಣವನ್ನು ನೋಡುತ್ತ ನೋಡುತ್ತ ವಿಸ್ಮಿತನಾಗಿಬಟ್ಟೆ. ಕನಸು ಕಂಡದ್ದೆಲ್ಲಾ ನನಸಾಗಿ ನನ್ನೆದುರು ಧುತ್ತೆಂದು ಇಷ್ಟು ಬೇಗ ನನಸಾಗಿ ಬಿಡುತ್ತದೆ ಅಂದುಕೊಂಡಿರಲಿಲ್ಲ. ಸ್ವಲ್ಪ ಹೊತ್ತು ಕಣ್ಣಲ್ಲೇ ಅದರ ಚೆಂದವನ್ನು ಸೆರೆಹಿಡಿದು ಸದ್ದಾಗದಂತೆ ಹಗುರನೇ ಕ್ಯಾಮರಾ ಮುಂದಿಟ್ಟು, ಫೋಟೋ ತೆಗೆದೆ. ಒಂದೇ ಒಂದು ಫೋಸು ಕೊಟ್ಟು ಆ ಹಕ್ಕಿ ಅಲ್ಲೆ ಪಕ್ಕದಲ್ಲಿದ್ದ ಹಲಸಿನ ಮರದ ಹಸಿರಿನಲ್ಲಿ ಅದೃಶ್ಯವಾಯ್ತು. ಇಷ್ಟು ವರ್ಷ ದರ್ಶನ ಕೊಡಲು ಸತಾಯಿಸುತ್ತಿದ್ದ ಕಾಕರಣೆ ಹಕ್ಕಿ ಈಗ ಒಮ್ಮೆಗೇ ಇಷ್ಟು ಹತ್ತಿರದಿಂದ ನನಗೆಂದೇ ಸಾಕ್ಷಾತ್ ದರ್ಶನ ಕೊಟ್ಟಾಗ ಮನಸ್ಸು ಧನ್ಯತೆ ಅನುಭವಿಸದೇ ಇರುತ್ತದಾ? ಕಣ್ಣ ಕ್ಯಾಮರಾದಲ್ಲಿ ಆ ಹಕ್ಕಿ ಮತ್ತೆ ಮತ್ತೆ ಹೊಳೆಯುತ್ತಿತ್ತು.

ಹಲಸಿನ ಮರದ ಮರೆಯಲ್ಲಿ ಅದು ಮತ್ತೆ ಏನಾದರೂ ಕಾಣುತ್ತದಾ ಎಂದು ತುಂಬಾ ಹೊತ್ತು ಅಲ್ಲೇ ನಿಂತೆ. ಆದರೆ ಎಷ್ಟು ಹೊತ್ತು ಕಾದರೂ ಮತ್ತೆ ಆ ಹಕ್ಕಿಯ ದರ್ಶನವಾಗಲಿಲ್ಲ. ಇಷ್ಟು ದಿನ ಈ ಕಡೆ ಭೇಟಿಯೇ ಕೊಡದ ಈ ಹಕ್ಕಿ, ಈಗ ಮತ್ತೆ ಇಲ್ಲಿ ಬಂದಿದೆ ಅನ್ನೋದನ್ನು ಕಣ್ಣಾರೆ ನೋಡಿ ಪಾಯಸ ಕುಡಿದಷ್ಟು ಖುಷಿಯಾಯ್ತು.

(ಚಿತ್ರಗಳು: ಪ್ರಸಾದ್ ಶೆಣೈ)

ಖುಷಿ ಸಿಕ್ಕಿದರೆ ಹೀಗೇ ಸಿಕ್ಕಬೇಕು, ಕಾಕರಣೆ ಹಕ್ಕಿ ಸಿಕ್ಕಂತೆ ಅಂತನ್ನಿಸಿತು. ಎಲ್ಲವೂ ಅಂದುಕೊಂಡಾಗ ಸಿಕ್ಕಿಬಿಟ್ಟರೆ, “ಸಿಕ್ಕಿಬಿಡೋದು” ಎನ್ನುವ ಪದಕ್ಕೆ, ಪ್ರಕ್ರಿಯೆಗೆ ಅರ್ಥವೇ ಇರುತ್ತಿರಲಿಲ್ಲವೇನೋ? ಅಂದುಕೊಂಡದ್ದು ಅಂದುಕೊಂಡಾಗ ಸಿಗೋದಕ್ಕಿಂತ, ಯಾವತ್ತೋ ಅಂದುಕೊಂಡದ್ದು ಮತ್ಯಾವತ್ತೋ ಸಿಗುವುದಲ್ಲಿಯೂ ಅದಮ್ಯ ಖುಷಿ ಇದೆ ಅನ್ನಿಸುತ್ತದೆ.

ಲಾಕ್ ಡೌನ್ ನಿಂದ ಮನುಷ್ಯರೇ ಈ ಪರಿಸರದಲ್ಲಿ ವಿರಳವಾಗಿದ್ದರು. ಪ್ರವಾಸಿಗರ ಕಲ್ಮಶವಿರಲಿಲ್ಲ, ಮೊಬೈಲ್, ಕಿರುಚಾಟಗಳ ಸುಳಿವಿರಲಿಲ್ಲ. ಪ್ಲಾಸ್ಟಿಕ್ಕಿನ ರಾಶಿಯಿರಲಿಲ್ಲ. ಕೆಲವೇ ದಿನಗಳಲ್ಲಿ ಈ ಪರಿಸರ ಮತ್ತೆ ಹಳೆ ಕಾಡಿನಂತೆ ಕಾಣುತ್ತಿತ್ತು, ಯಾವ ಕೃತಕತೆಯೂ ಇಲ್ಲದೇ ನೀರವದಿಂದಿತ್ತು. ಇದೇ ಕಾರಣಕ್ಕೆ ಕಾಕರಣೆ ಹಕ್ಕಿ ಮತ್ತೆ ತನ್ನ ಹಳೆ ಮನೆ ತನಗೆ ಸಿಕ್ಕಿತು ಅನ್ನೋ ಖುಷಿಯಿಂದ ಇಲ್ಲಿಗೆ ಬಂದಿರಬಹುದಾ? ತಾನು ಕಳೆದುಕೊಂಡಿದ್ದ ದೊಡ್ಡ ಲೋಕವೊಂದು ಸಿಕ್ಕಿತೆಂದೂ, ಮತ್ತೆ ತಾನು ಇಲ್ಲೇ ಬದುಕಬಹುದೆಂಬ ಆಶೆಯಿಂದ ಬಂದಿರಬಹುದಾ? ಎನ್ನುವ ಪ್ರಶ್ನೆ ಕಾಡಿತು. ಅದರ ಜೊತೆ ಜೊತೆಗೆ “ಲಾಕ್ ಡೌನ್ ಎಲ್ಲಾ ಕಳೆದ ಮೇಲೆ ಒಂದಷ್ಟು ಸ್ವಾರ್ಥಿಗಳು ಮತ್ತೆ ಈ ಕಾಡನ್ನು ಕಡಿದು, ಇಂತಹ ನೂರಾರು ಹಕ್ಕಿಗಳ ಬಾಳನ್ನು ಸಾಯಿಸಿದರೂ ಅಚ್ಚರಿಯಿಲ್ಲ” ಎನ್ನುವ ಭಯವೂ ಕಾಡತೊಡಗಿತು.

ಕೊರೋನಾ ಬಂದ ಈ ದುರಿತ ಕಾಲದಲ್ಲೇ ಆಳುವವರು ಬುದ್ದಿ ಕಲಿಯದೇ ನಮ್ಮ ಕಾಡು, ಬೆಟ್ಟ, ನದಿಗಳನ್ನು ನಮ್ಮಿಂದ ಕಸಿಯುವ ಅಂಕೋಲ-ಹುಬ್ಬಳಿ ರೈಲ್ವೇ ಯೋಜನೆಗೆ ಅನುಮತಿ ಕೊಟ್ಟಿದ್ದಾರೆ. ಭದ್ರಾ ನದಿಗೂ ಕಂಟಕ ತರುವ ಯೋಜನೆಯೂ ನಡೆಯುತ್ತಿದೆ. ನಮ್ಮ ಪರಿಸರವನ್ನು ಕಸಿದರೆ ಭವಿಷ್ಯದಲ್ಲಿ ಕೊರೋನಾಕ್ಕಿಂತಲೂ ಭೀಕರ ಸ್ಥಿತಿ ನಿರ್ಮಾಣವಾಗಬಹುದು. ಭೂಕುಸಿತ, ಪ್ರವಾಹಕ್ಕೆ ನಾವೇ ಕಂಬಳಿಹಾಸು ಹಾಸಿದಂತಾಗಬಹುದು. ನದಿ ಮೂಲಗಳನ್ನು ಸಾಯಿಸಿ, ಕಾಡು ಕಬಳಿಸಿದರೆ ನಾವೂ ಕ್ರಮೇಣ ಜೀವ ಕಳೆದುಕೊಳ್ಳುತ್ತಾ ಹೋಗುತ್ತೇವೆ. ಬರಿದಾಗುತ್ತೇವೆ. ನಾವು ಪ್ರಕೃತಿಯಿಂದ ಪಡೆದುಕೊಳ್ಳುವ ಜಗತ್ತನ್ನು ಕಳೆದುಕೊಳ್ಳಲು ಹೊರಟಿದ್ದೇವೆ. ನಾವು ಕಳೆದುಕೊಳ್ಳುವ ಜಗತ್ತು ಅದೆಷ್ಟು ದೊಡ್ಡದ್ದೆಂದು ಯೋಚಿಸುತ್ತಲೇ ಭಯವಾಯ್ತು. ನಮ್ಮೂರ ಹಸಿರನ್ನು ಕ್ರಮೇಣ ಇಲ್ಲವಾಗಿಸುವ, ನಮ್ಮೂರ ಕಾಡನ್ನು, ಬೆಟ್ಟವನ್ನು, ನದಿಯನ್ನು ಒಟ್ಟಾರೆ ನಮ್ಮೂರ ಉಸಿರನ್ನು ನಮ್ಮಿಂದಲೇ ಕಸಿಯಬಹುದು ಈ ಯೋಜನೆಗಳು ಎನ್ನುವ ಸತ್ಯ ನಮಗೆಲ್ಲಾ ಯಾವ ಕಾಲಕ್ಕೆ ಅರಿವಾಗುತ್ತದೆ? ಎನ್ನುವ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ.

ನಮ್ಮೂರಿನ ಕಾಡ ಪ್ರದೇಶವೊಂದು ಮನುಷ್ಯರ ಕಾಟವಿಲ್ಲದೇ ಹೇಗೆ ತುಂಬಿಕೊಂಡಿದೆ, ಹೇಗೆ ಮತ್ತೆ ಇಲ್ಲಿ ಪಕ್ಷಿಗಳು ಹಾರಿಕೊಂಡು ಬಂದಿದೆ ಎನ್ನುವ ಕತೆ ಹೇಳಿದೆ ನಿಮಗೆ. ಇದು ಬರೀ ನಮ್ಮೂರಿನ ಕತೆಯಲ್ಲ, ನಿಮ್ಮೂರಿನ ಯಾವುದೋ ಕಾಡ ಪ್ರದೇಶದ ಕತೆಯೂ ಆಗಿರಬಹುದು ಅನ್ನಿಸುತ್ತಿದೆ.

ನಾನು ಮತ್ತೆ ಅಲ್ಲಿಂದ ಹೊರಟಾಗ ಹಕ್ಕಿಗಳು ಇನ್ನಷ್ಟು ಕ್ರಿಯಾಶೀಲರಾಗಿ ಹಾಡುತ್ತಿದ್ದವು. ಈ ಹಾಳಾದ ಕೊರೋನಾ ಬೇಗ ಸತ್ತು ಹೋಗಲಿ, ಆದರೆ ಲಾಕ್ ಡೌನ್ ನಿಂದಾಗಿ ಪ್ರಕೃತಿಯಲ್ಲಿ ತುಂಬಿಕೊಂಡ ಹೊಸ ಪರಿಮಳ, ಚೈತನ್ಯ, ಮೌನ, ಆ ಸಹಜತೆ, ಸ್ವಚ್ಛಂದತೆ ಇವೆಲ್ಲಾ ಎಂದೂ ಸಾಯದಿರಲಿ ಎಂದು ಪ್ರಕೃತಿದೇವರಲ್ಲೇ ಪ್ರಾರ್ಥಿಸಿದೆ.