ಹೊಸ ವರ್ಷ ಹೊಸ ನಿರೀಕ್ಷೆಯ ಈ ಸಂದರ್ಭದಲ್ಲಿ ಸಂಗೀತ ಕಲಾವಿದರು ಬದಲಾದ ಸನ್ನಿವೇಶಗಳ ಕುರಿತು ಆಗಾಗ ವಿಚಾರ ವಿನಿಮಯ ಮಾಡಿಕೊಳ್ಳುವುದುಂಟು. ಲೈವ್ ಕಾರ್ಯಕ್ರಮಗಳ ಇತಿಮಿತಿಗಳ ಕುರಿತ ಸಂವಾದವನ್ನು ಅಕ್ಷರ ರೂಪದಲ್ಲಿ ಪೋಣಿಸಲು ನಡೆಸಿದ ಪ್ರಯತ್ನವಿದು. ಸಂಗೀತದ ಲೈವ್ ಕಾರ್ಯಕ್ರಮಗಳಿದ್ದಾಗ, ಕಲಾವಿದರಿಗೆ ತಯಾರಿ ಮಾಡಿಕೊಳ್ಳಲು ಸಾಕಷ್ಟು ಸಮಯ ದೊರೆಯುತ್ತದೆ. ಆದರೆ ‘ಲೈವ್ʼ ಪ್ರಕ್ರಿಯೆಯ ಮೂಲಕ ಸಂಗೀತದ ವಾತಾವರಣವನ್ನು ಸೃಷ್ಟಿಸುವುದು ಸಾಧ್ಯವೇ ಎಂಬುದರ ಕುರಿತು ಹಿಂದುಸ್ಥಾನೀ ಗಾಯಕಿ ಶ್ರೀಮತಿ ದೇವಿ ಇಲ್ಲಿ ಬರೆದಿದ್ದಾರೆ.

 

ಕೊರೋನಾ ಮತ್ತು ಓಮಿಕ್ರಾನ್‌ಗಳ ಭಯ, ಆತಂಕದ ನುಡುವೆಯೇ ನಿಧಾನವಾಗಿ ಸಂಗೀತದ ಕಾರ್ಯಕ್ರಮಗಳು ಮತ್ತೆ ಆರಂಭವಾಗುತ್ತಿವೆ ಎಂಬ ಖುಷಿಯಿತ್ತು. ಸಂಗೀತ ಕಛೇರಿಗಳು ಆನ್ ಲೈನ್ ನಿಂದ ಆಫ್ ಲೈನ್ ಗೆ ಬಂದಿದ್ದವಷ್ಟೇ. ಕೇಳುಗರಿಗೆ ನೇರವಾಗಿ ಸಂಗೀತವನ್ನು ಕೇಳಿ ಆನಂದಿಸುವ ಅವಕಾಶ ದೊರೆತರೆ, ಸಂಗೀತಗಾರರಿಗಂತೂ ಬಹು ದೊಡ್ಡ ಬಂಧನದಿಂದ ಮುಕ್ತಿ ಸಿಕ್ಕಿದ ಹಾಗಾಗಿತ್ತು. ಕಾರ್ಯಕ್ರಮಕ್ಕಾಗಿ ಪ್ರಯಾಣ ಮಾಡಿ ಹೊಸ ಜಾಗದಲ್ಲಿನ ಶ್ರೋತೃಗಳನ್ನು ಭೇಟಿ ಮಾಡುವುದು, ತಮ್ಮನ್ನು ಆಲಿಸಲೆಂದು ಬಂದ ಸಹೃದಯರ ಮುಂದೆ ಕುಳಿತು, ತಮ್ಮ ಸಂಗೀತದ ಮನೋಧರ್ಮವನ್ನರಿತ ಸಹ ಕಲಾವಿದರೊಂದಿಗೆ, ಧ್ವನಿವರ್ಧಕದ ನೆರವಿನೊಂದಿಗೆ ಭಾವಲೋಕವೊಂದನ್ನು ನಿರ್ಮಿಸುವುದು, ತಾವು ಅದರಲ್ಲಿ ವಿಹರಿಸುತ್ತಾ, ತಮ್ಮೊಂದಿಗೆ ಕೇಳುಗರನ್ನೂ ಕರೆದೊಯ್ಯುವ ಮನಸ್ಸಿನಾಟದಲ್ಲಿ ತೊಡಗುವ ಸಂದರ್ಭ ಮತ್ತೆ ದೊರಕುವಂತಾಗಿತ್ತು. ಬಹು ತರಾತುರಿ-ಬೇಡಿಕೆಯಲ್ಲಿದ್ದ ಫೇಸ್‌ಬುಕ್, ಯೂಟ್ಯೂಬ್ ಲೈವ್ ಕಾರ್ಯಕ್ರಮಗಳಿಗೆ ವಿರಾಮ ದೊರೆತಿದೆಯಷ್ಟೇ.

ಹೊಸ ವರ್ಷ ಹೊಸ ನಿರೀಕ್ಷೆಯ ಈ ಸಂದರ್ಭದಲ್ಲಿ ಸಂಗೀತ ಕಲಾವಿದರು ಬದಲಾದ ಸನ್ನಿವೇಶಗಳ ಕುರಿತು ಆಗಾಗ ವಿಚಾರ ವಿನಿಮಯ ಮಾಡಿಕೊಳ್ಳುವುದುಂಟು. ಲೈವ್ ಕಾರ್ಯಕ್ರಮಗಳ ಇತಿಮಿತಿಗಳ ಕುರಿತ ಸಂವಾದವನ್ನು ಪೋಣಿಸಲು ನಡೆಸಿದ ಪ್ರಯತ್ನವಿದು. ಮತ್ತೊಂದು ಲಾಕ್ ಡೌನ್ ನ ಆತಂಕದ ಈ ಸಂದರ್ಭದಲ್ಲಿ ಲೈವ್ ಕಾರ್ಯಕ್ರಮಗಳು ಅರಳಿಕೊಳ್ಳುವ ಸಂದರ್ಭವೂ ಇಲ್ಲದಿಲ್ಲ.

(ಸಿದ್ಧಾರ್ಥ್ ಬೆಳ್ಮಣ್ಣು)

ಮೊನ್ನೆಯಷ್ಟೇ ಮೈಸೂರಿನಲ್ಲಿ ಯುವ ಗಾಯಕ ಅನಿರುದ್ಧ ಐತಾಳ್ ಅವರ ಹಿಂದೂಸ್ತಾನಿ ಗಾಯನ(ತಬಲಾ-ಶ್ರೀದತ್ತ ಎಂ.ಜಿ. ಹಾಗೂ ಹಾರ್ಮೋನಿಯಂ-ತೇಜಸ್ ಕಾಟೋಟಿ) ಒಳ್ಳೆಯ ಸಂಗೀತವನ್ನು ಸವಿಯುವ ಅವಕಾಶ ನೀಡಿದ್ದರು. ಅವರ ಅಂತರಂಗದ ಧೋರಣೆಯೂ ಇದೇ. ಆಫ್ ಲೈನ್ ಸಂಗೀತ ಕಾರ್ಯಕ್ರಮಗಳ ಸಂತೋಷ ಮತ್ತೆ ಮರುಕಳಿಸಿತು ಎಂಬ ಉಲ್ಲಾಸದ ಭಾವ ಅವರಲ್ಲಿ. ‘ಮನೆಯಲ್ಲಿ ಕೂತೇ ಫೇಸ್ಬುಕ್‌ನಲ್ಲಿ ಲೈವ್ ನಲ್ಲಿ ಬಂದು ಹಾಡುವ ಯೋಚನೆ ಕಳೆದ ವರ್ಷ ಹೊಸದಾಗಿತ್ತು, ರೋಚಕವೆನಿಸಿತ್ತು. ಹಾಗಾಗಿ ತುಂಬಾ ವರ್ಚುವಲ್ ಕಾರ್ಯಕ್ರಮಗಳಾದವು. ಇದರಿಂದಾಗಿ ಒಂದು ಒಳ್ಳೆಯ ಅನುಕೂಲವೆಂದರೆ ಎಲ್ಲೆಲ್ಲೋ ಮೂಲೆಯಲ್ಲಿದ್ದ ಪ್ರತಿಭೆಗಳು ಬೆಳಕಿಗೆ ಬಂದರು. ಯುವಕರು ಮಾತ್ರವಲ್ಲ, ಎಷ್ಟೊಂದು ಮಂದಿ ಹಿರಿಯರು ಕೂಡಾ ತಮ್ಮ ಕೇಳುಗರನ್ನು ಪಡೆದುಕೊಂಡರು. ವರ್ಚುವಲ್ ಕಾರ್ಯಕ್ರಮಗಳಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿರುತ್ತದೆ. ಯಾಕೆಂದರೆ ಸಂಗೀತ ಎನ್ನುವುದು ಘಟಿಸೋದು ‘ಆ ಘಳಿಗೆ’ಯಲ್ಲಿ. ಮತ್ತು ‘ಆ ಘಳಿಗೆ’ಯನ್ನು ಪಡೆಯಲು ನಾವು ಗಾಯಕರು, ಹಾರ್ಮೋನಿಯಂ, ತಬಲಾದವರೊಂದಿಗೆ ಕೇಳುಗರನ್ನು ಸಾಕ್ಷಿಯಾಗಿರಿಸಿಕೊಂಡು ಹೊರಟಿರುತ್ತೇವೆ. ಇದು ಸಿದ್ಧಿಸಲೂಬಹುದು, ಸಿದ್ಧಿಸದೆಯೂ ಇರಬಹುದು. ವರ್ಚುವಲ್ ಕಾರ್ಯಕ್ರಮಗಳಲ್ಲಿ ನಾವು ಹಾಡಿದ್ದೆಲ್ಲವೂ ಒಂದು ಕಡೆ ಶಾಶ್ವತವಾಗಿ ದಾಖಲಾಗಿ ಇರುವ ಕಾರಣ ನಮ್ಮ ಗುರುಗಳ ಗೌರವ, ಪರಂಪರೆಯ ಭಾರವನ್ನು ಹೊತ್ತುಕೊಂಡು ನಾವು ಹಾಡಬೇಕಾಗುತ್ತದೆ. ಇಲ್ಲಿ ಯಾವ ಘಳಿಗೆಗಾಗಿ ಕಾಯಲಾಗುವುದಿಲ್ಲ. ಜೊತೆಗೆ ಸಂಗೀತದ ಸಹಜ ಆನಂದ ಸಿಗೋದು ಅದರ ಪ್ರಕ್ರಿಯೆಯಲ್ಲಿ, ಇದೊಂದು ಪ್ರತಿಭಾ ಪ್ರದರ್ಶನ ಅಲ್ಲ. ಅದೊಂದು ‘ಅನುಭವ’. ಇಲ್ಲಿ ಹಾಡುಗಾರ ತನ್ನ ಸಾಥಿದಾರರ ಜೊತೆಗೆ ತಾನು ಆಯ್ದುಕೊಂಡ ರಾಗದ ಸ್ವರಗಳೊಂದಿಗೆ ಸಂವಹಿಸುತ್ತಾ ಆನಂದದ ಪ್ರಯಾಣ ಮಾಡುತ್ತಾನೆ. ಅಲ್ಲದೇ ಆನ್‌ಲೈನ್ ನಲ್ಲಿ ಕೇಳುವಿಕೆ ಫೋಕಸ್ಡ್ ಆಗಿರುವುದಿಲ್ಲ. ಕೇಳುಗರು ಹೆಚ್ಚಾಗಿ ಇಡೀ ಕಾರ್ಯಕ್ರಮವನ್ನು ಕೇಳಲು ಬಯಸುವುದಿಲ್ಲ. ತಮಗಿಷ್ಟ ಆಗುವ ‘ತಾನ್’ಗಳನ್ನೋ ಅಥವಾ ಕೊನೆಯಲ್ಲಿ ಹಾಡುವ ಭಜನ್ ಗಾಗಿಯೋ ಗಾಯನವನ್ನು ಮುಂದೆ ಓಡಿಸಿ ಐದು ನಿಮಿಷ ಕೇಳಿ ಮತ್ತೆ ಬೇರೆಯವರ ಗಾಯನ ಕೇಳಲು ಹೊರಟು ಬಿಡುತ್ತಾರೆ. ಇದರಿಂದ ಕಲಾಕಾರನಿಗೆ ಅನ್ಯಾಯವಾಗುತ್ತದೆ’ ಎನ್ನುವುದು ಸಿದ್ಧಾರ್ಥ್ ಮಾತು. ವಿನಾಯಕ ತೊರವಿ ಅವರ ಶಿಷ್ಯರಾಗಿರುವ ಸಿದ್ಧಾರ್ಥ್ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವವರು.

(ಹಿರಣ್ಮಯಿ)

ತಾಳ್ಮೆಯೂ ಆಲಿಸುವಿಕೆಯ ಒಂದು ಬಹುಮುಖ್ಯ ಭಾಗವೆಂಬುದು ನಿಜ. ಆಫ್ ಲೈನ್ ಕಾರ್ಯಕ್ರಮಗಳಲ್ಲಿ ತಾಳ್ಮೆ ಒಂದು ತೂಕ ಜಾಸ್ತಿಯೆ ಬೇಕು ಎನಿಸುತ್ತದೆ. ಆದರೆ ಈ ಮಾತನ್ನು ತುಸು ವಿಭಿನ್ನ ನೆಲೆಯಿಂದ ಹೇಳುತ್ತಾರೆ ಹಿರಣ್ಮಯಿ. ಅವರು ಕೋಲ್ಕತ್ತಾದ ಅರ್ಶದ್ ಅಲಿ ಖಾನ್ ಅವರ ಬಳಿ ಅಭ್ಯಾಸ ನಡೆಸುತ್ತಿದ್ದಾರೆ. ಕಳೆದ ವರ್ಷ ಅನೇಕ ಫೇಸ್ ಬುಕ್ ಲೈವ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ‘ಕೊರೊನಾದ ಸಮಯದಲ್ಲಿ ವೈಕ್ತಿಕವಾಗಿ ನನಗಂತೂ ಅಭ್ಯಾಸಕ್ಕಾಗಿ ಸಮಯ ದೊರಕಿತು. ಮೊದಲು ಒಂದೇ ಊರಿನಲ್ಲಿ ಅಲ್ಲಿ ಸೇರಿರುವ ಕೇಳುಗರ ಮುಂದೆ ಮಾತ್ರ ಹಾಡಲು ಸಾಧ್ಯವಾಗುತ್ತಿದ್ದರೆ, ವರ್ಚುವಲ್ ಕಾರ್ಯಕ್ರಮಗಳಿಂದಾಗಿ ಎಲ್ಲ ಭಾಗದ ಕೇಳುಗರನ್ನು ಏಕಕಾಲಕ್ಕೆ ತಲುಪುವುದು ಸಾಧ್ಯವಾಯಿತು. ತುಂಬಾ ಜನರ ಪರಿಚಯವಾಯ್ತು’ .

ವರ್ಚುವಲ್ ಕಾರ್ಯಕ್ರಮಗಳಲ್ಲಿ ಹಾಡುವಾಗ ಪ್ರತಿಕ್ರಿಯೆಗಳು ತಕ್ಷಣವೇ ದಾಖಲಾಗುತ್ತವೆ. ನೇರ ಕಾರ್ಯಕ್ರಮದಲ್ಲಿ ಇರುವಂತೆ ‘ವಾಹ್ ವಾಹ್, ಕ್ಯಾ ಬಾತ್’ ಎಂಬ ಮೆಚ್ಚುಗೆಗಳು ಹಾಡುಗಾರರಿಗೆ ಅಲ್ಲಿ ಸಿಗುವುದಿಲ್ಲ. ಆದರೆ ತನ್ನ ಧ್ವನಿಯಲ್ಲಿ ಯಾವ ರಾಗವು ಹೊಮ್ಮಿದಾಗ, ಯಾವ ಸಂದರ್ಭದಲ್ಲಿನ ಬಾಗು ಬಳುಕುಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ ಎಂಬುದನ್ನು ಅರಿಯಬೇಕಾದರೆ ಆಫ್ ಲೈನ್ ಕಾರ್ಯಕ್ರಮಗಳೇ ಮುಖ್ಯ. ಫೀಡ್ ಬ್ಯಾಕ್ ಗಳು ಯೋಚಿಸಿ ಬರೆದವಾಗಿರುತ್ತವೆ ಮತ್ತು ಅವು ತುಸು ಹೊತ್ತಿನ ನಂತರ ಅರಿವಿಗೆ ಬರುವುದರಿಂದ ಹಾಡುವ ಪ್ರಕ್ರಿಯೆಯಲ್ಲಿ ಅವುಗಳು ಪರಿಣಾಮ ಬೀರುವುದಿಲ್ಲ. ಒಟ್ಟಿನಲ್ಲಿ ಹಾಡುಗಾರಿಕೆಯೂ ಪರೋಕ್ಷ ಕೇಳುಗರನ್ನಷ್ಟೇ ಉದ್ದೇಶಿಸಿ ಮುಂದುವರೆಯುತ್ತದೆ. ‘ನೇರ ಕಾರ್ಯಕ್ರಮದಲ್ಲಿ ಉಂಟಾಗುವ ಗಾಯನದ ‘ಮಹೊಲ್’ ಅಥವಾ ‘ವಾತಾವರಣ’ ವರ್ಚುವಲ್‌ನಲ್ಲಿ ಉಂಟಾಗಲು ಸಾಧ್ಯವಿಲ್ಲ’ ಎಂಬುದನ್ನು ಹಿರಣ್ಮಯಿ ಗಮನಿಸಿದ್ದಾರೆ.

ಲೈವ್ ಕಾರ್ಯಕ್ರಮಗಳ ಇತಿಮಿತಿಗಳ ಕುರಿತ ಸಂವಾದವನ್ನು ಪೋಣಿಸಲು ನಡೆಸಿದ ಪ್ರಯತ್ನವಿದು. ಮತ್ತೊಂದು ಲಾಕ್ ಡೌನ್ ನ ಆತಂಕದ ಈ ಸಂದರ್ಭದಲ್ಲಿ ಲೈವ್ ಕಾರ್ಯಕ್ರಮಗಳು ಅರಳಿಕೊಳ್ಳುವ ಸಂದರ್ಭವೂ ಇಲ್ಲದಿಲ್ಲ.

ಪುಣೆಯ ಪಂ.ಉಲ್ಲಾಸ್ ಕಶಾಲ್‌ಕರ್ ಅವರ ಬಳಿ ಅಭ್ಯಾಸ ಮಾಡುತ್ತಿರುವ ಗಾಯಕಿ ಅನಘಾ ಭಟ್ ಲೈವ್ ಕಾರ್ಯಕ್ರಮಗಳನ್ನು ನೀಡುವ ಬದಲಾಗಿ, ಮುದ್ರಿತ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ‘ಮೊದ ಮೊದಲಲ್ಲಿ ಯಾವುದೋ ಪೂರ್ವಗ್ರಹಕ್ಕೆ ಒಳಗಾದಂತೆ ಇದ್ದ ಅನೇಕ ಹಿರಿಯ ಕಲಾವಿದರೂ ಕೂಡಾ ನಂತರದ ದಿನಗಳಲ್ಲಿ ಈ ಹೊಸ ಅನುಭವಗಳಿಗೆ ತಮ್ಮನ್ನು ತೆರೆದುಕೊಂಡಿದ್ದಾರೆ. ಆದರೆ ಲೈವ್ ಕಾರ್ಯಕ್ರಮಗಳು ಎಷ್ಟು ಹೆಚ್ಚಾದವೆಂದರೆ ಒಂದು ಹಂತದಲ್ಲಿ ಸಾಕೆನಿಸಿಬಿಟ್ಟಿತು. ಮನಸ್ಸಿಗೆ ಒಂದಿಷ್ಟು ಮೌನ ಬೇಕು ಎನಿಸಿದಾಗ, ಫೇಸ್ ಬುಕ್ ಲೈವ್ ಗಳಿಂದ ದೂರ ಉಳಿಯೋಣ ಅನಿಸುತ್ತದೆ. ಕೇಳುಗರಿಗೆ ಬೇಸರ ಮೂಡಿಸುವಷ್ಟು ಕಾರ್ಯಕ್ರಮಗಳಾದರೆ ಅದೂ ಬೋರ್ ಅನಿಸಬಹುದು ಎನ್ನುತ್ತಾರೆ ಅನಘಾ ಭಟ್.

ಕಳೆದ ವರ್ಷ ಲಾಕ್ ಡೌ ನ್ ಸಂದರ್ಭದಲ್ಲಿ ದೊರೆತ ಏಕಾಂತವು ಮೊದ ಮೊದಲು ‘ಒಂದು ಅಗತ್ಯ’ ಎಂದು ಅನಿಸಿದ್ದು ಹೌದು. ಬಹಳ ಗೌಜು ಗದ್ದಲಗಳ ಬದುಕಿಗೆ ಒಂದಿಷ್ಟು ವಿಶ್ರಾಂತಿ ದೊರೆತಂತಾಯಿತು. ಲೈವ್ ಕಾರ್ಯಕ್ರಮಗಳು, ಅಭ್ಯಾಸಕ್ಕೆ ಸಾಕಷ್ಟು ಸಮಯವು ಸಿಕ್ಕಿದಾಗ ಸಂತೃಪ್ತಿಯ ಭಾವವೊಂದು ಮೂಡಿತು. ಆದರೆ ಅದೇ ಏಕಾಂತವು ದೀರ್ಘವಾದಾಗ, ಕೇಳುಗ ಸಮೂಹದೊಡನೆ ಮುಖಾಮುಖಿಯಾಗುವುದು ಅಗತ್ಯ ಎಂಬ ಅರಿವೂ ಮೂಡಿತು. ಅನಿರುದ್ಧ್ ಈ ವಿಚಾರವನ್ನು ಸರಿಯಾಗಿ ಗುರುತಿಸಿದ್ದಾರೆ. ‘ಮೊದಲಲ್ಲಿ ಹೊರಗೆಲ್ಲೂ ಓಡಾಡದೆ ಮನೆಯಲ್ಲೇ ಇರಬೇಕಾಗಿ ಬಂದಾಗ ಏಕಾಂತದ ಅಭ್ಯಾಸಕ್ಕೆ ಬೇಕಾದ ಸಮಯ ಒದಗಿತು. ಕೊರೊನಾ ಕಾಲದ ವರ್ಚುವಲ್ ಕಾರ್ಯಕ್ರಮಗಳಿಂದಾಗಿ ಅನೇಕ ಕಲಾವಿದರು ಮೈಕ್, ಎಡಿಟಿಂಗ್ ಮುಂತಾದ ಹಲವಾರು ತಾಂತ್ರಿಕ ವಿಷಗಳಲ್ಲಿ ಪರಿಣತಿ ಪಡೆದರು. ಈ ಅನುಭವ ನೇರ ಕಾರ್ಯಕ್ರಮಗಳು ಆರಂಭವಾದ ಬಳಿಕ ಖಂಡಿತವಾಗಿಯೂ ನೆರವಾಗುತ್ತಿವೆ. ಮೊದಲೆಲ್ಲಾ ಹೆಚ್ಚಿನ ಕಲಾವಿದರು ಯರೂ ತಮಗೆ ಬೇಕಾದ ಧ್ವನಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಈಗ ಹಲವಾರು ಕಲಾವಿದರು ಮನೆಯಲ್ಲೇ ಹೋಮ್ ಸ್ಟುಡಿಯೋಗಳನ್ನು ಮಾಡಿಕೊಂಡಿದ್ದಾರೆ’ ವಿಶಿಷ್ಟ ಧ್ವನಿ ಮಾಧುರ್ಯ ಹೊಂದಿದ ಅನಿರುದ್ಧ್ ಪಂ.ಅಶೋಕ್ ಹುಗ್ಗಣ್ಣವರ್ ಅವರ ಶಿಷ್ಯರು.

ಆದರೆ ಇಲ್ಲೊಂದು ವಾಸ್ತವಾಂಶವನ್ನು ಮರೆಯುವಂತಿಲ್ಲ. ಫೇಸ್ ಬುಕ್ ಲೈವ್ ಕಾರ್ಯಕ್ರಮಗಳ ಮೂಲಕ ಆದಾಯ ಸಿಗುವುದಿಲ್ಲ. ಎಷ್ಟೋ ಮಂದಿ ಕಲಾವಿದರಿಗೆ ಸಂಗೀತವು ದುಡಿಮೆಯ ಕ್ಷೇತ್ರವೂ ಹೌದು. ಸಹಕಲಾವಿದರಿಗೆ ದೈನಂದಿನ ಬದುಕನ್ನು ಕೊಡುವ ಕ್ಷೇತ್ರವಿದು. ಈ ಲೈವ್ ಗಳು ಅವರ ಹೊಟ್ಟೆ ತುಂಬಿಸುವುದಿಲ್ಲವಲ್ಲ!

ಸಂಗೀತಗಾರರು ಹೇಗೆ ಜನರ ಸಮಕ್ಷಮದಲ್ಲಿ ಹಾಡುವ ಅನುಭವಕ್ಕಾಗಿ ಕಾಯುತ್ತಿದ್ದಾರೋ ಅಷ್ಟೇ ಕಾತರ ಸಂಗೀತ ಪ್ರೇಮಿಗಳಲ್ಲೂ ಇದೆ ಎನ್ನುವ ಸಿದ್ಧಾರ್ಥ್ ಹಾಗೂ ಅನಘಾ ಪರಿಸ್ಥಿತಿ ಮತ್ತೆ ಮೊದಲಿನಂತೆಯೇ ಸಹಜ ಸ್ಥಿತಿಗೆ ಬರುತ್ತಿದೆ ಎಂದು ಹರ್ಷಗೊಂಡವರು.

(ಅನಘಾ ಭಟ್)

ಫೇಸ್ ಬುಕ್, ಯೂಟ್ಯೂಬ್ ಗಳಲ್ಲಿ ಉತ್ತಮ, ಮಧ್ಯಮ, ಕನಿಷ್ಠ ಎಂಬ ಎಲ್ಲಾ ಥರದ ಕಾರ್ಯಕ್ರಮಗಳನ್ನು ನೋಡಿ ಜನ ಎಷ್ಟು ಬೇಸತ್ತಿದ್ದಾರೆಂದರೆ, ಸಂಗೀತ ಕೇಳುವ ಆಸಕ್ತಿ ಇನ್ನೂ ಉಳಿದಿದೆಯೇ ಎನ್ನುವ ಸಂದೇಹ ಬರುತ್ತದೆ. ಇದನ್ನು ‘ಆರ್ಟ್ ಫ್ಯಾಟೀಗ್’ ಎನ್ನುವ ಶಬ್ದದ ಮೂಲಕ ಅನಿರುದ್ಧ್ ಗುರುತಿಸುತ್ತಾರೆ. ಕೇಳುಗರ ಆಸಕ್ತಿ, ಅಪೇಕ್ಷೆ ಬದಲಾದಂತೆ ಕಾಣುತ್ತದೆ. ಸಂಗೀತವೊಂದು ಸಾಂಘಿಕ ಅನುಭವ ಕೊಡುವ ಪ್ರಕ್ರಿಯೆ ಎನ್ನುವುದನ್ನೂ ಮರೆಯುವಂತಿಲ್ಲ.

ಒಂದಂತೂ ನಿಜ, ಒಳ್ಳೆಯ ಸಂಗೀತಕ್ಕೆ ಎಲ್ಲಾ ಕಾಲದಲ್ಲೂ ಬೆಲೆ ಇದ್ದೇ ಇರುತ್ತದೆ, ನಮ್ಮ ಅಭ್ಯಾಸ ನಾವು ಮಾಡುತ್ತಿರಬೇಕು ಎಂಬುದು ಈ ಕಲಾವಿದರೆಲ್ಲರ ಸ್ಪಷ್ಟ ನಿಲುವು. ಆದರೆ, ಕಲೆಯನ್ನು ಮಾತ್ರ ಆಶ್ರಯಿಸಿಕೊಂಡಿದ್ದರೆ ಜೀವನ ಪೋಷಣೆಗೆ ತೊಂದರೆ ಇದ್ದದ್ದೇ. ಎಷ್ಟೋ ವರ್ಷಗಳಿಂದ ನಮ್ಮ ಸಮಾಜದಲ್ಲಿ ಸಂಗೀತ ಎಲ್ಲರಿಗೂ ಪ್ರಿಯವಾದದ್ದಾದರೂ ಬೇರೆ ಎಲ್ಲಾ ವೃತ್ತಿಗಳಂತೆ ಗೌರವದಿಂದ ಬದುಕಲು ಬೇಕಾಗುವಷ್ಟನ್ನೂ ಗಳಿಸಲು ಕಷ್ಟವಿದೆ. ಆದ್ದರಿಂದಲೇ ಆರಂಭದಿಂದಲೇ ನಮ್ಮ ಗುರುಗಳು, ‘ಒಳ್ಳೆಯ ಶಿಕ್ಷಣ ಪಡೆದು, ನೌಕರಿಯೊಂದನ್ನು ಮೊದಲು ಹಿಡಿ, ನಂತರ ಎಷ್ಟು ಬೇಕಾದರೂ ಸಂಗೀತ ಕಲಿ’ ಎಂಬ ಸಲಹೆ ಮಾಡಿದ್ದನ್ನು ಅನಿರುದ್ಧ್ ಸ್ಮರಿಸುತ್ತಾರೆ. ಸಿದ್ಧಾರ್ಥ್ ಅಭಿಪ್ರಾಯ ಪಡುವಂತೆ ನಾವು ಅವಕಾಶವನ್ನರಸಿಕೊಂಡು ಹೋಗುವ ಅಗತ್ಯವಿಲ್ಲ. ನಾವು ಹಾಡುವ/ನುಡಿಸುವ ಸಂಗೀತದಲ್ಲಿ ಏನೋ ಆಕರ್ಷಣೆ, ಅನನ್ಯತೆ ಇದೆ ಎಂದಾದಲ್ಲಿ ನಾವು ಎಲ್ಲೇ ಇದ್ದರೂ ಅವಕಾಶಗಳು ನಮ್ಮನ್ನರಸಿಕೊಂಡು ಬರುತ್ತವೆ. ಸಂಗೀತದಲ್ಲಿ ಸ್ಪರ್ಧೆ ಎನ್ನುವುದು ಇಲ್ಲ. ಅಲ್ಲದೆ ನಮಗೆ ಸಿಗಬೇಕಾದ ಅವಕಾಶವನ್ನು ಮತ್ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ.

‘ಯುವ ಜನತೆ, ಆಯೋಜಕರು ಮುಂದೆಯೂ ನೇರ ಕಾರ್ಯಕ್ರಮ ಮತ್ತು ನೇರ ಪ್ರಸಾರದ ಕಾರ್ಯಕ್ರಮ ಇವೆರಡು ಸಮ್ಮಿಶ್ರಣಗೊಂಡ ‘ಹೈಬ್ರಿಡ್’ ವ್ಯವಸ್ಥೆಯೊಂದನ್ನು ಅನುಸರಿಸಬಹುದು ಎನ್ನುತ್ತಾರೆ ಅನಘ. ಇದಕ್ಕೆ ಉತ್ತಮ ಉದಾಹರಣೆಯಾಗಿ ಅಹಮದಾಬಾದ್‌ನಲ್ಲಿ ಪ್ರತಿವರ್ಷ ನಡೆಯುವ ‘ಸಪ್ತಕ್ ಸಂಗೀತ ಉತ್ಸವ’ವನ್ನು ಈ ಬಾರಿ ಆನ್‌ಲೈನ್ ನಲ್ಲಿ ದೊರಕುವಂತೆ ಮಾಡಿದ್ದನ್ನು ಉದಾಹರಿಸಿದರು. ಇದರಿಂದಾಗಿ ಕಾರ್ಯಕ್ರಮ ಕೇಳಲು ಅಲ್ಲೇ ಹೋಗುವ ಅನಿವಾರ್ಯತೆ ಇಲ್ಲವಾಗಿ, ಅದರ ಲಭ್ಯತೆ ವಿಶಾಲವಾಗುತ್ತದೆ.

ಸಣ್ಣ ಸಂಖ್ಯೆಯಲ್ಲಿ ನೆರೆಯುವ ಸಂಗೀತ ಪ್ರೇಮಿಗಳ ಆಪ್ತ ವಾತಾವರಣವಿರುವ ಬೈಠಕ್ ಗಳಲ್ಲಿಯೇ ಸಂಗೀತ ಅರಳುತ್ತದೆ. ಅವರ ಮೆಚ್ಚುಗೆಯ ‘ವಾಹ್, ವಾಹ್’ಗಳ ಸಮಕ್ಷಮದಲ್ಲಿ ಸೃಜನಶೀಲತೆ ಅರಳುತ್ತದೆ ಅನ್ನುವುದು ಅನಿರುದ್ಧ್ ಅನಿಸಿಕೆ. ಅವರೇನಿದ್ದರೂ ಆಪ್ತ ಕಾರ್ಯಕ್ರಮಗಳನ್ನು ಇಷ್ಟಪಡುವವರು.

ಜನರ ಮಧ್ಯದಲ್ಲಿ ಹುಟ್ಟಿದ ಸಂಗೀತ, ಶಾಸ್ತ್ರದ ಚೌಕಟ್ಟನ್ನು ಪಡೆಯುವ ಮೊದಲೇ ಭಾವಲೋಕವನ್ನು ಪ್ರವೇಶಿಸಿ ಬಿಡುತ್ತದೆ. ಸಂಗೀತ ಅರಳುವುದು ಕೇಳುಗರ ಮುಂದೆ. ಇದುವೇ ಕಲಾವಿದರ ಚೈತನ್ಯದ ಮೂಲ. ಆನ್‌ಲೈನ್ ಕಾರ್ಯಕ್ರಮಗಳಿಂದಾಗಿ ಅನೇಕ ಪ್ರತಿಭಾವಂತ ಕಲಾವಿದರ ಪರಿಚಯ ನಮಗಾಗಿದೆ, ಆದರೆ ಈ ಆನ್‌ಲೈನ್ ಮಾಧ್ಯಮ ಎಷ್ಟರ ಮಟ್ಟಿಗೆ ಮುಂದುವರೆದು ಬೆಳೆಯುತ್ತದೆ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಕಳೆದ ವರ್ಷದ ಅನುಭವ ಪ್ರಕಾರ ಹೇಳುವುದಾದರೆ, ‘ಈ ಪ್ರಕ್ರಿಯೆ ಇಷ್ಟು ಸಾಕು’ ಎಂಬ ಭಾವ ಮೂಡಿದೆ. ಎಷ್ಟೇ ಅತ್ಯುನ್ನತವಾದ ಧ್ವನಿವ್ಯವಸ್ಥೆ, ಸ್ಟುಡಿಯೋ, ಎಡಿಟಿಂಗ್ ಅವಕಾಶಗಳು ಇದ್ದರೂ ಸಂಗೀತಗಾರರು ಮತ್ತೆ ಮೊದಲಿನಂತೆ ಜನರ ಮಧ್ಯೆ ಕೂತು ಹಾಡಲು ಹಾತೊರೆಯುತ್ತಿದ್ದಾರೆ. ಕೇಳುಗರೂ ಅಂತಹ ಗುಂಗಿಗಾಗಿ ಕಾಯುತ್ತಿದ್ದಾರೆ ಎನ್ನುವುದು ಸುಳ್ಳಲ್ಲ.