ಬ್ಯಾಂಕ್ ಲೂಟಿ ಪ್ರಕರಣದಲ್ಲಿ ಸುದ್ದಿಯಲ್ಲಿದ್ದ ಎಂಗೆ ತಾನು ಯಾವ ಊರಿನವನು ಮತ್ತು ತನ್ನ ಹೆಂಡತಿ ಯಾರು ಎಂದು ತಿಳಿದು ಅಲ್ಲಿಗೆ ಹೋದರೆ ಅವನಿಗೆ ಅಘಾತ ಕಾದಿರುತ್ತದೆ. ಕೊಂಚ ಮೇಲ್ವರ್ಗದ ವಾತಾವರಣದ ಅವನ ಮನೆಯಲ್ಲಿ ಹೆಂಡತಿ ಸಂಪೂರ್ಣ ನಿರಾಸಕ್ತಿ ತೋರುವುದಲ್ಲದೆ ತನ್ನಿಂದ ವಿಚ್ಛೇದನ ಪಡೆದಿರುವುದೂ ತಿಳಿಯುತ್ತದೆ. ಇಂಥ ಸನ್ನಿವೇಶದಲ್ಲಿಯೂ ಕೌರಿಸ್ಮಕಿ ಹಾಸ್ಯ ಲೇಪನವನ್ನು ಕೈ ಬಿಡುವುದಿಲ್ಲ.
ಎ. ಎನ್. ಪ್ರಸನ್ನ ಬರೆಯುವ ‘ಲೋಕ ಸಿನೆಮಾ ಟಾಕೀಸ್‌’ ನ ಮೂರನೆಯ ಕಂತು

 

ಅಕಿ ಕೌರಿಸ್ಮಕಿ ವ್ಯಾಸಂಗ ಮಾಡುತ್ತಿರುವಾಗ ನಟನೆಯ ಸ್ಕೂಲಿಂದ ನಿರಾಕರಿಸಲ್ಪಟ್ಟು ಪೋಸ್ಟ್ ಮನ್, ಸಿನಿಮಾ ವಿಮರ್ಶಕ ಮುಂತಾದ ಹಲಕೆಲವು ಕೆಲಸಗಳನ್ನು ಮಾಡಿದ. ಅನಂತರ ಸೋದರ ಮಿಕಾ ಕೌರಿಸ್ಮಕಿ ಜೊತೆಗೂಡಿ ಹೆಚ್ಚುಕಡಿಮೆ ನಿಷ್ಕ್ರಿಯವಾಗಿದ್ದ ಫಿನ್‍ಲ್ಯಾಂಡಿನ ಸಿನಿಮಾ ನಿರ್ಮಾಣ ಮತ್ತು ವಿತರಣ ಸಂಸ್ಥೆಯನ್ನು ಸ್ಥಾಪಿಸಿದ. ಅವನು 1983ರಲ್ಲಿ ಡಾಸ್ಟ್ಕೊವಸ್ಕಿಯ ಕಾದಂಬರಿ ʻಕ್ರೈಮ್ ಅಂಡ್ ಪನಿಷ್‍ನೆಂಟ್ʼ ಆಧಾರಿತ ಮೊದಲ ಚಿತ್ರ ನಿರ್ಮಿಸಿದ. ಅನಂತರದ ʻಲೆನಿನ್ ಕೌಬಾಯ್ಸ್ ಗೋ ಟು ಅಮೆರಿಕʼ ಅವನಿಗೆ ಸಿನಿಮಾ ಪ್ರಪಂಚದಲ್ಲಿ ಮಾನ್ಯತೆ ತಂದುಕೊಟ್ಟ ಚಿತ್ರ.

ಫಿನ್‌ಲ್ಯಾಂಡ್ ಅನೇಕ ಸಂಗತಿಗಳಿಗಾಗಿ ವಿಶಿಷ್ಟವಾದ ದೇಶ. ಕಮ್ಯೂನಿಸಂ ಮತ್ತು ಕ್ಯಾಪಿಟಲಿಸಂ ಧೋರಣೆಗಳೆರಡೂ ಅಲ್ಲಿನ ಜನ ಸಮುದಾಯದಲ್ಲಿ ಬೆರೆತಿದೆ. ಇವುಗಳ ಚೌಕಟ್ಟಿಗೆ ಸಿಲುಕಿ ಬದುಕು ನಡೆಸಲು ಹೆಣಗುತ್ತಿರುವ ಆ ದೇಶದ ಜನಸಂಖ್ಯೆ ಸುಮಾರು ಅರ್ಧ ಕೋಟಿ ಮಾತ್ರ. ಇದು ದೇಶದ ಒಟ್ಟಾರೆ ವಿಸ್ತೀರ್ಣಕ್ಕೆ ಹೋಲಿಸಿದರೆ ತುಂಬ ಕಡಿಮೆ.

ಕಳೆದ ಮೂರು ದಶಕಗಳಲ್ಲಿ ತನ್ನ ದೇಶದ ರಾಜಕೀಯ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಚಿತ್ರಗಳಿಗೆ ಧಾರೆ ಎರೆದ ನಿರ್ದೇಶಕ ಅಕಿ ಕೌರಿಸ್ಮಕಿ. ಚಿಕ್ಕಂದಿನಿಂದಲೂ ಅವನ ಅಂತರಂಗದಲ್ಲಿ ಬೇರೂರಿದ್ದ ಜಗತ್ತಿನ ಚಲನಚಿತ್ರ ಕ್ಷೇತ್ರದ ವ್ಯಕ್ತಿ ಎಂದರೆ ಫ್ರಾನ್ಸ್‍ನ ಜೀನ್ ಲಕ್ ಗೊಡಾರ್ಡ್. ಅದು ಸ್ಫುರಿಸುವ ಭಾವನೆ ಸದಾ ಪ್ರಜ್ವಲಿಸುವಂತೆ ಮಾಡಲು ತನ್ನ ಸೋದರ ಮೈಕ್ ಕೌರಿಸ್ಮಕಿ ಜೊತೆಗೂಡಿ ಸ್ಥಾಪಿಸಿದ ಚಿತ್ರ ನಿರ್ಮಾಣ ಸಂಸ್ಥೆಗೆ `ಆಲ್ಫವಿಲ್ಲಾ’ ಎಂದು ಹೆಸರಿಟ್ಟ. ʻಆಲ್ಫಾವಿಲ್ಲಾʼ ಎಂಬ ಹೆಸರಿನ ಚಿತ್ರವನ್ನು ಗೊಡಾರ್ಡ್‌ ನಿರ್ಮಿಸಿದ್ದು ಇದಕ್ಕೆ ಕಾರಣ. ಬಹುತೇಕ ಕೌರಿಸ್ಮಕಿ ಚಿತ್ರಗಳ ಕೇಂದ್ರ ಫಿನ್ ಲ್ಯಾಂಡಿನ ರಾಜಧಾನಿ ಹೆಲ್ಸಿಂಕಿ. ಆ ದೇಶದಲ್ಲಿ ನಿರ್ಮಾಣವಾಗುವ ಒಟ್ಟು ಸಂಖ್ಯೆಯ ಚಿತ್ರಗಳಲ್ಲಿ ಶೇಕಡ ಇಪ್ಪತ್ತರಷ್ಟು ಈ ಇಬ್ಬರು ಸೋದರರು ನಿರ್ಮಿಸಿದ ಚಿತ್ರಗಳಿರುತ್ತವೆ. ʻಆಲ್ಫ ವಿಲ್ಲಾʼ ಸಂಸ್ಥೆಯಿಂದ ನಿರ್ಮಾಣಗೊಂಡ ಪ್ರಮುಖ ಚಿತ್ರ 1989ರ ಅಕಿ ಕೌರಿಸ್ಮಕಿಯ ʻಏರಿಯಲ್ʼ.

(ಅಕಿ ಕೌರಿಸ್ಮಕಿ)

ಚಿತ್ರಪಯಣದಲ್ಲಿ ಯಾವಾಗಲೂ ಅವನದು ದಾಪುಗಾಲು. ಚಿತ್ರಗಳಲ್ಲಿ ಹಾಸ್ಯ ಲೇಪಿತ ವಿಷಾದ, ಅನಿಶ್ಚಿತ ಭವಿಷ್ಯ, ಅಸಹಾಯಕತೆ, ಮನುಷ್ಯ ಸಂಬಂಧಗಳಲ್ಲಿನ ಅಸಾಂಗತ್ಯ, ಜೀವನೋತ್ಸಾಹಕ್ಕೆ ಎದುರಾಗುವ ಅದೆಷ್ಟೋ ರೀತಿಯ ಅಡೆತಡೆ, ವೃತ್ತಿ ನಿರತ ಅಥವ ವೈಯಕ್ತಿಕ ಸಂಬಂಧಗಳಲ್ಲಿ ಸದಾ ಮುಂದಾಗುವ ಸ್ವಾರ್ಥಪರತೆ, ಸಂಬಂಧಗಳಲ್ಲಿ ವಿವಿಧ ಜೀವನ ಘಟ್ಟಗಳಲ್ಲಿ ಮಡುಗಟ್ಟಿದ ಪರಿತಾಪ ಮುಂತಾದವು ಅಕಿ ಕೌರಿಸ್ಮಕಿಯ ಚಿತ್ರಗಳ ಅಡಿಪಾಯ. `ಎಲ್ಲ ನಿರೀಕ್ಷೆಗಳು ಸತ್ತ ಮೇಲೆ ಹತಾಶೆಗೆ ಅರ್ಥವಿಲ್ಲ’ ಎಂದು ಅವನ ಚಿತ್ರಗಳ ಪಾತ್ರಗಳನ್ನು ಕುರಿತು ಇಂಟರ್ವ್ಯೂ ಒಂದರಲ್ಲಿ ಹೇಳಿದ್ದಾನೆ. ಇಲ್ಲಿಯ ತನಕ ಅವನ ನಿರ್ದೇಶನದ ಹದಿನೆಂಟು ಚಿತ್ರಗಳಲ್ಲಿ ಸಮಾನವಾಗಿರುವ ಅಂಶವೆಂದರೆ ಆಯ್ದ ವಸ್ತುವಿಗೆ ತಕ್ಕ ಹಾಗೆ ಪಾತ್ರಗಳ ಬದುಕು ಮತ್ತು ಅದಕ್ಕೆ ಪೂರಕವಾಗುವ ವಾತಾವರಣಸೃಷ್ಟಿ.

ಅವನದು ಸ್ಥಳೀಯರ ಬದುಕಿನ ವಿವರಗಳನ್ನು ಅತ್ಯಂತ ಹತ್ತಿರವಾದ ರೀತಿಯಲ್ಲಿ ನಿರ್ಭಾವದಿಂದ ವಿಸ್ತೃತವಾಗಿ ನಿರೂಪಿಸುವ ವಿಧಾನ. ಇದನ್ನು ಅವನು ಮಾಡುವುದು ಸ್ವಲ್ಪವೂ ಅಬ್ಬರ, ಆರ್ಭಟ, ಅದ್ದೂರಿ ಇಲ್ಲದ ನಿರೂಪಣೆಯಲ್ಲಿ. ಪಾತ್ರಗಳ ವರ್ತನೆ ಸಹಜತೆಯಿಂದ ಕೂಡಿರುತ್ತದೆ ಮತ್ತು ಪರಸ್ಪರ ಸಂಭಾಷಣೆಯಲ್ಲಿ ಮೌನಕ್ಕೆ ಮಹತ್ವ ಹೆಚ್ಚು. ಈ ಎಲ್ಲ ಅಂಶಗಳಲ್ಲಿ ಎದ್ದು ಕಾಣುವುದೇನೆಂದರೆ ಸಾಂಪ್ರದಾಯಿಕ ನಿರೂಪಣಾ ವಿಧಾನವನ್ನು ಉದ್ದೇಶಪೂರ್ವಕವಾಗಿ ತುಂಡರಿಸುವ ಪ್ರವೃತ್ತಿ. ಅವನ ಈ ವಿಧಾನಕ್ಕೆ ಜಪಾನ್‍ ನ ಖ್ಯಾತ ನಿರ್ದೇಶಕ ಯಸುಜಿರೊ ಓಜುವಿನ ಪ್ರಭಾವ ಸ್ಪಷ್ಟವಾಗಿ ಕಾಣಿಸುತ್ತದೆ. ಅತಿ ತೀವ್ರವಾದ ಭಾವಗಳನ್ನು ಪ್ರಕಟಿಸುವ ಸಂದರ್ಭಗಳನ್ನು ಹೊರತುಪಡಿಸಿದರೆ ನಿರೂಪಣೆಯಲ್ಲಿ ಹೆಚ್ಚಾಗಿ ನಿಧಾನ ಗತಿಯ ಮಾತು, ಚಲನೆ ಪ್ರಧಾನವಾಗಿರುತ್ತದೆ. ಸಂದರ್ಭಕ್ಕೆ ತಕ್ಕಹಾಗೆ ಭಾವನೆಯನ್ನು ಪ್ರಕಟಿಸುವುದಕ್ಕೆ ಬೆಂಬಲವಾಗುವ ರೀತಿಯಲ್ಲಿ ಪಾತ್ರಗಳು ವಸ್ತು-ಪರಿಕರಗಳನ್ನು ಉಪಯೋಗಿಸುತ್ತವೆ.

ಗಮನ ಸೆಳೆಯುವ ಅಂಶವೆಂದರೆ ಅವನು ಚಿತ್ರೀಕಿರಣದಲ್ಲಿ ಹೆಚ್ಚಾಗಿ ಬಳಸುವುದು ದೂರ ಚಿತ್ರಿಕೆ(ಲಾಂಗ್ ಶಾಟ್)ಯನ್ನು. ಕೌರಿಸ್ಮಕಿಯ ಈ ಬಗೆಯ ಚಿತ್ರೀಕರಣವನ್ನು ಅನೇಕ ಖ್ಯಾತರಲ್ಲಿಯೂ ಗುರುತಿಸಬಹುದು. ಉದಾಹರಣೆಗೆ ʻ4 ಮಂತ್ಸ್, 3 ವೀಕ್ಸ್, ೨ ಡೇಸ್ʼನ ಕ್ರಿಸ್ತಿನ್ ಮುಂಗು, ʻಅನ್ನೀ ಹಾಲ್ʼನ ಉಡಿ ಅಲೆನ್, ʻಚಿಲ್ಡ್ರೆನ್ ಆಫ್ ಮೆನ್‍ʼನ ಆಲ್ಫಾನ್ಸೋ ಕುರಾನ್ ಮುಂತಾದವರು.

ಈಗ ಅರವತ್ಮೂರು ತುಂಬಿರುವ ಫಿನ್‍ಲ್ಯಾಂಡ್‍ ನ ಅಕಿ ಕೌರಿಸ್ಮಕಿ ಚಲನಚಿತ್ರ ಪ್ರಪಂಚದಲ್ಲಿ ತನ್ನದೇ ಛಾಪು ಮೂಡಿಸಿರುವ ಪ್ರತಿಭಾವಂತ. ಅವನ ಚಿತ್ರಗಳು ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳಿಸಿವೆ, ನಿಜ. ಆದರೆ ಪ್ರಶಸ್ತಿ ಕೊಡುವ ದೇಶದ ವಿದೇಶಿ ರಾಜಕಾರಣಕ್ಕಾಗಿ ಪ್ರಶಸ್ತಿ ಸ್ವೀಕರಿಸದಿರುವ ವ್ಯಕ್ತಿ ಇಲ್ಲವೆಂದು ಕಾಣುತ್ತದೆ. 2002ನಲ್ಲಿ ಇರಾನಿನ ಖ್ಯಾತ ನಿರ್ದೇಶಕ ಅಬ್ಬಾಸ್ ಕಿಯರೋತ್ಸಮಿಗೆ ಅಮೆರಿಕ ವೀಸಾ ನಿರಾಕರಿಸಿದಕ್ಕೆ ನ್ಯೂಯಾರ್ಕ್ ಚಿತ್ರೋತ್ಸವದಲ್ಲಿ ʻಲೈಟ್ಸ್ ಇನ್ ದ ಡಸ್ಕ್ʼ ಚಿತ್ರಕ್ಕೆ ಪ್ರಶಸ್ತಿ ಸ್ವೀಕರಿಸುವುದಕ್ಕೆ ಹೋಗದೆ ಪ್ರತಿಭಟಿಸಿದ. 2003ರಲ್ಲಿ ಅವನ ʻದ ಮ್ಯಾನ್ ವಿತೌಟ್ ಎ ಪಾಸ್ಟ್ʼ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಚಿತ್ರವೆಂದು ಆಸ್ಕರ್ ಪ್ರಶಸ್ತಿ ಘೋಷಣೆಯಾಯಿತು. ಅಮೆರಿಕ ಇರಾಕ್ ಬಗ್ಗೆ ತಳೆದ ಧೋರಣೆಯನ್ನು ಪ್ರತಿಭಟಿಸಿ ಪ್ರಶಸ್ತಿ ಸ್ವೀಕರಿಸುವುದಕ್ಕೆ ಬರುವುದಿಲ್ಲವೆಂದು ತಿಳಿಸಿದ.

ಅಕಿ ಕೌರಿಸ್ಮಕಿ ಎರಡು ಟ್ರಯಾಲಜಿಗಳನ್ನು ನಿರ್ಮಿಸಿದ್ದಾನೆ. ಹೆಲ್ಸಿಂಕಿ ಟ್ರೈಯಾಲಜಿ ಎಂದು ಕರೆಯುವ ʻಶಾಡೋಸ್ ಆಫ್ ಪ್ಯಾರಡೈಸ್ʼ, ʻಏರಿಯಲ್ʼ ಹಾಗೂ ʻದ ಮ್ಯಾಚ್ ಫ್ಯಾಕ್ಟರಿ ಗರ್ಲ್ʼ ಮತ್ತು ಫಿನ್‍ಲ್ಯಾಂಡ್ ಟ್ರೈಯಾಲಜಿಯಾದ ʻಡ್ರಿಫ್ಟಿಂಗ್ ಕ್ಲೌಡ್ಸ್ʼ, ʻದ ಮ್ಯಾನ್ ವಿತೌಟ್ ಅ ಪಾಸ್ಟ್ʼ ಹಾಗೂ ʻಲೈಟ್ಸ್ ಇನ್ ದ ಡಸ್ಕ್ʼ ಚಿತ್ರಗಳಿಂದ ತನ್ನ ದೇಶದ ಮಧ್ಯಮ ಮತ್ತು ಕಾರ್ಮಿಕ ವರ್ಗದವರ ಒಟ್ಟಾರೆ ಬದುಕಿನ ಏಳಿಗೆ, ಉನ್ನತಿಯೂ ಸೇರಿದಂತೆ ತಕ್ಕಮಟ್ಟಿನ ನೆಮ್ಮದಿ ಹಾಗೂ ಸಮಾಧಾನ ಜೀವನದ ಬಗ್ಗೆ ಅವನು ಹೊಂದಿರುವ ಅತೃಪ್ತ ಧೋರಣೆ ವ್ಯಕ್ತವಾಗುತ್ತದೆ. ಇದರ ಜೊತೆಗೆ ದೇಶವನ್ನು ಬಿಟ್ಟು ಹೋಗಿ ಬೇರೆ ದೇಶದಲ್ಲಿ ಸುಧಾರಿತ ಜೀವನ ಸಾಗಿಸುವುದಕ್ಕೆ, ಅಭಿಲಾಷೆಗಳನ್ನು ಪೂರೈಸಿಕೊಳ್ಳುವುದಕ್ಕೆ ಸಾಧ್ಯ ಎನ್ನುವ ಸೂಚನೆ ಕಾಣುತ್ತದೆ. ತನ್ನ ದೇಶದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ನೆಲಗಟ್ಟಿನ ಬಗ್ಗೆ ಇರುವ ಅಭಿಪ್ರಾಯ ಅವನ ಈ ದೃಷ್ಟಿಕೋನಕ್ಕೆ ಪ್ರೇರಣೆ ಎನ್ನಬಹುದೇನೋ.

ʻದ ಮ್ಯಾನ್ ವಿತೌಟ್ ಎ ಪಾಸ್ಟ್ʼ ಚಿತ್ರದ ಕಥಾವಸ್ತು ಹೀಗಿದೆ. ಮಧ್ಯಮ ವಯಸ್ಸಿನ ವ್ಯಕ್ತಿಯೊಬ್ಬ(ಮರ್ಕು ಪೆಲ್ಟೋಲಾ)ಹೆಸರಿಲ್ಲದ ಊರಿಗೆ ತಿಳಿಯದೂರಿಂದ ಬಂದ ಕೂಡಲೆ ದಾಳಿಕೋರರ ಆಕ್ರಮಣಕ್ಕೆ ತುತ್ತಾಗುತ್ತಾನೆ. ಹೊಡೆತಗಳ ಕಾರಣ ತನ್ನ ಹೆಸರು ಇತ್ಯಾದಿಗಳ ಬಗ್ಗೆ ನೆನಪು ಕಳೆದುಕೊಂಡು ಅಸಹಾಯಕನಾದ ಅವನನ್ನು ಕಾರ್ಮಿಕ ವರ್ಗಕ್ಕೆ ಸೇರಿದ ಇರ್ಮಾ(ಕಟಿ ಔಟಿನೆನ್) ಎಂಬಾಕೆ ಕೇವಲ ಮಾನವೀಯ ದೃಷ್ಟಿಯಿಂದ ಎಲ್ಲ ಬಗೆ ನೆರವು ನೀಡುತ್ತಾಳೆ. ಇದು ಅವನಲ್ಲಿ ತನ್ನ ಜೀವನದ ಬಗ್ಗೆ ಧೈರ್ಯ, ಸ್ಥೈರ್ಯಗಳು ಮೂಡಿಸಿ ಭವಿಷ್ಯದ ಬಗ್ಗೆ ಭರವಸೆ ಒದಗಿಸುತ್ತದೆ.

ಕಥಾವಸ್ತು ವಿಶೇಷವೆನಿಸುವುದಿಲ್ಲ. ಅಷ್ಟೇಕೆ, ಮನುಷ್ಯನಿಗೆ ಆಘಾತದ ಮೂಲಕ ನೆನಪುಗಳು ಮರೆಯಾಗುವುದು ಮತ್ತು ಸಾಮಾನ್ಯವಾಗಿ ಇನ್ನೊಂದು ಅಂಥದೇ ಆಘಾತದಿಂದ ನೆನಪುಗಳು ಮರುಕಳಿಸುವುದು, ಆ ವ್ಯಕ್ತಿ ಪಾಪದ ಪ್ರಾಣಿ ಎಂದು ಬಿಂಬಿಸಲಾಗುವುದು, ಅವನು ಇತರರ ಅಪಾರ ಕರುಣೆಗೆ, ಕನಿಕರಕ್ಕೆ ಪಾತ್ರನಾಗುವುದು ಮುಂತಾದವನ್ನು ಒಳಗೊಂಡ ಚಿತ್ರಗಳು ನಿರ್ಮಾಣಗೊಂಡಿವೆ. ಅಕಿ ಕೌರಿಸ್ಮಕಿ ಈ ಜಾಡಿನಿಂದ ಬಲು ದೂರ. ಚಿತ್ರದ ಮುಖ್ಯ ಪಾತ್ರವನ್ನು ಪರಿಕಲ್ಪಿಸಿರುವ ರೀತಿಯೇ ಬೇರೆಯಾಗಿ ಕಾಣಿಸುತ್ತದೆ. ಚಿತ್ರ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ ಇದು ಮನವರಿಕೆಯಾಗುತ್ತದೆ. ಹೀಗಾಗಲು ದಿಕ್ಕಿಲ್ಲದವನಂತೆ ಕಾಣುವ, ನೆನಪು ಮಾಸಿದ ವ್ಯಕ್ತಿಗೆ(ಚಿತ್ರದ ಬಹುಭಾಗದ ತನಕ ಅವನು ಎಂ ಎಂದು ಹೇಳಿಕೊಳ್ಳಲು ಬಯಸುತ್ತಾನೆ) ಹಸಿವಾಗಿದೆ ಎಂದು ಅರಿತು ಅದಕ್ಕೆ ವ್ಯವಸ್ಥೆ ಮಾಡುವ ಇರ್ಮಾ ಎಂಬಾಕೆ ಅವನು ಸಹಜೀವಿ ಎಂದು ಭಾವಿಸಿರುತ್ತಾಳೆ. ಕಥನದ ಈ ದೃಶ್ಯದಲ್ಲಿಯೇ ಮುಖ್ಯ ಪಾತ್ರಗಳ ಸ್ಪಷ್ಟ ಪರಿಚಯ ಮಾಡಿಕೊಡುತ್ತಾನೆ ಅಕಿ ಕೌರಿಸ್ಮಕಿ.

ನೆನಪು ಮಾಸಿದ ವ್ಯಕ್ತಿಯ ಮುಖಚಹರೆ ಉತ್ತಮ ವರ್ಗಕ್ಕೆ ಸೇರಿದವನು ಎಂದು ಸೂಚಿಸಿದರೆ, ಇರ್ಮಾಳ ಗಂಡ, ಮಗಳನ್ನು ಒಳಗೊಂಡ ಸಂಸಾರ ಕೆಳಮಧ್ಯಮ ವರ್ಗದ್ದು ಎಂದು ಸೂಚಿಸುವಂತೆ ಅವರ ಮನೆ, ಉಡುಪು ಮತ್ತಿತರ ಸಾಮಾನ್ಯ ದರ್ಜೆಯ ವಸ್ತುಗಳಿರುತ್ತವೆ.

ಇರ್ಮಾಳ ಮಾನವೀಯ ಗುಣ ಪ್ರಕಟವಾಗುವ ಮೊದಲು ಎರಡು ಘಟನೆಗಳು ಸಂಭವಿಸುತ್ತವೆ. ಮೊದಲನೆಯದು ರೈಲಿನಿಂದ ಇಳಿದು ಪ್ಲಾಟ್‍ ಫಾರಂನಲ್ಲಿಯೇ ಬೆಂಚಿನ ಮೇಲೆ ನಿದ್ರಿಸುತ್ತ ಕುಳಿತ ವ್ಯಕ್ತಿ ಹಠಾತ್ತಾಗಿ ದಾಳಿಕೋರರ ಹೊಡೆತಗಳಿಗೆ ತುತ್ತಾಗುತ್ತಾನೆ. ಇದು ಕಥನಕ್ಕೆ ಅಗತ್ಯದ ಘಟನೆ. ಇದರಿಂದ ಆ ವ್ಯಕ್ತಿಯ ನೆನಪು ಮಾಸಲು ಕಾರಣವಾಗುತ್ತದೆ. ಇನ್ನೊಂದು ಮನುಷ್ಯನ ದುರ್ಗುಣಕ್ಕೆ ಸಂಬಂಧಿಸಿದ್ದು. ನದಿಯ ದಡದಲ್ಲಿ ಪ್ರಜ್ಞೆಯಿಲ್ಲದೆ ಬಿದ್ದಿರುವ ಅವನನ್ನು ದಾರಿಹೋಕನೊಬ್ಬ ನೋಡುತ್ತಾನೆ. ಬಿದ್ದಿದ್ದವನ ಹೆಚ್ಚಿನ ಅನುಕೂಲದ ಶೂ ಕಳಚಿ ಹಾಕಿಕೊಂಡು, ತನ್ನದನ್ನು ಅವನಿಗೆ ಹಾಕುತ್ತಾನೆ. ಈ ಎರಡೂ ಘಟನೆಗಳನ್ನು ಹೆಚ್ಚಾಗಿ ಹತ್ತಿರದ ಚಿತ್ರಿಕೆ(ಮೀಡಿಯಮ್‌ ಶಾಟ್‌) ಗಳಲ್ಲೇ ನಿರ್ದೇಶಕ ಬಿಂಬಿಸುತ್ತಾನೆ. ಈ ಕ್ರಮದಿಂದ ದಾಳಿಕೋರರ ಮತ್ತು ದೋಚುವವನ ವರ್ತನೆಗಳಿಂದ ಅವರ ಆಂತರ್ಯ ವ್ಯಕ್ತವಾಗುತ್ತದೆ. ಹೀಗಾಗಿ ಕೌರಿಸ್ಮಕಿ ಸಮೀಪ ಚಿತ್ರಿಕೆ‌(ಕ್ಲೋಸ್‌ ಶಾಟ್)ಗಳಲ್ಲಿ ಅವರ ಮುಖಭಾವವನ್ನು ದಾಖಲಿಸುವ ತಂಟೆಗೇ ಹೋಗುವುದಿಲ್ಲ. ಸರಿಸುಮಾರು ಈ ವಿಧಾನವನ್ನೇ ಬಹುತೇಕ ಚಿತ್ರಗಳಲ್ಲಿ ಅನುಸರಿಸಿ, ಅದರಲ್ಲಿ ಅವನು ಸಿದ್ಧ ಹಸ್ತನೆನಿಸಿದ್ದಾನೆ ಮತ್ತು ಚಿತ್ರಗಳಲ್ಲಿ ಅಭಿನಯ ವಿಷಯದ ಬಗ್ಗೆ ತನ್ನ ಪ್ರತ್ಯೇಕತೆಯನ್ನು ಮೆರೆಯುತ್ತಾನೆ. ಪಾತ್ರವೊಂದು ಇನ್ನೊಂದರೊಂದಿಗೆ ನಡೆದುಕೊಳ್ಳುವ ರೀತಿ ಕೂಡ ಅತ್ಯಂತ ಸಹಜವಾಗಿರುತ್ತವೆ. ಭಾವತೀವ್ರತೆಯ ಕ್ಷಣಗಳಲ್ಲಿಯೂ ಅದರ ನಿಯಂತ್ರಣ ಕೊಂಚ ಹೆಚ್ಚಾಯಿತೇನೋ ಎಂದು ಭಾಸವಾಗುವ ಮಟ್ಟದಲ್ಲಿರುತ್ತದೆ.

ಚಿತ್ರಗಳಿಂದ ತನ್ನ ದೇಶದ ಮಧ್ಯಮ ಮತ್ತು ಕಾರ್ಮಿಕ ವರ್ಗದವರ ಒಟ್ಟಾರೆ ಬದುಕಿನ ಏಳಿಗೆ, ಉನ್ನತಿಯೂ ಸೇರಿದಂತೆ ತಕ್ಕಮಟ್ಟಿನ ನೆಮ್ಮದಿ ಹಾಗೂ ಸಮಾಧಾನ ಜೀವನದ ಬಗ್ಗೆ ಅವನು ಹೊಂದಿರುವ ಅತೃಪ್ತ ಧೋರಣೆ ವ್ಯಕ್ತವಾಗುತ್ತದೆ.

ನೆನಪು ಕಳೆದುಕೊಂಡವನನ್ನು ಎಂ ಎಂದು ಹೆಸರಿಸಲಾಗುತ್ತದೆ. ಆ ಎಂನಿಂದ ಅವನ ಪರಿಸ್ಥಿತಿಯನ್ನು ಅರಿತ ಇರ್ಮಾ ಸಹಜೀವಿಯ ಬಗ್ಗೆ ತಳೆಯುವ ಮತ್ತೊಂದು ಕಾಳಜಿ ಪೂರಿತ ಕ್ರಮವೆಂದರೆ ತಾನು ಕೆಲಸ ಮಾಡುವ ಸ್ಥಳದಲ್ಲಿ ಅವನಿಗೊಂದು ಕೆಲಸವನ್ನು ಹಿರಿಯ ಅಧಿಕಾರಿಣಿಯ ಸಹಾಯದಿಂದ ಏರ್ಪಡಿಸುವುದು. ಇದು ಸಂಪೂರ್ಣ ಟೊಳ್ಳಾಗಿದ್ದ ಎಂನಲ್ಲಿ ಆತ್ಮ ಗೌರವವನ್ನು ಹುಟ್ಟಿ ಹಾಕುತ್ತದೆ. ಅವನ ಮುಖ ಚಹರೆಯಲ್ಲಿ ಗೆಲುವು ಇಣುಕುತ್ತದೆ. ಎಂನ ಜೊತೆ ಇರ್ಮಾಳ ಗಂಡ ಆತ್ಮೀಯವಾಗಿ ನಿರ್ಭಿಡೆಯಿಂದ ನಡೆದುಕೊಳ್ಳುತ್ತಾನೆ. ಅವನೊಂದಿಗಿನ ಲಘು ಹಾಸ್ಯ ಭರಿತ ಸಂದರ್ಭದಲ್ಲಿಯೂ ಎಂ ಕಾಸಿಲ್ಲದೆ ಕುಡಿತಕ್ಕೆ ಒಲವು ತೋರಿಸದೆ ವಿವೇಕ ಮತ್ತು ಆತ್ಮ ಗೌರವಕ್ಕೆ ಕುಂದು ಉಂಟುಮಾಡಿಕೊಳ್ಳುವುದಿಲ್ಲ.

ಇರ್ಮಾಳ ಗಂಡ ಎಂಗೆ ಪ್ರತ್ಯೇಕವಾಗಿ ವಾಸಿಸಲು ನೌಕಾ ಸಾಮಗ್ರಿ ಇಡುವ ಸ್ಥಳವನ್ನು ಮನುಷ್ಯನ ಅವಕಾಶವಾದಿತನವನ್ನು ಬಿಂಬಿಸುವ ಅಲ್ಲಿನ ಪೋಲೀಸನ ಮೂಲಕ ನಿರ್ವಹಿಸುತ್ತಾನೆ. ಸದಾ ಪೋಲೀಸನೊಂದಿಗೆ ಬರುವ ಅವನ ಹಾನಿಬಾಲ್ ಎನ್ನುವ ಒಮ್ಮೆಯೂ ಬೊಗಳದ ನಾಯಿಯನ್ನು ಬಳಸಿಕೊಂಡು ಹಾಸ್ಯ ದೃಶ್ಯಗಳನ್ನು ಸೃಷ್ಟಿಸುತ್ತಾನೆ ಮತ್ತು ಅಧಿಕಾರ ದುರುಪಯೋಗದ ಮನುಷ್ಯನ ದುರ್ಗುಣವನ್ನು ಬಯಲುಮಾಡುತ್ತಾನೆ. ಇದು ಅವನಲ್ಲಿ ಸ್ಥೈರ್ಯ ಮತ್ತು ಸ್ವಂತಿಕೆಗಳ ಬಗ್ಗೆ ಅರಿವು ಮೂಡಿಸುವುದಕ್ಕೆ ನೆರವಾಗುವುದನ್ನು ಘಟನೆಗಳ ಮೂಲಕ ಅಕಿ ಕೌರಿಸ್ಮಕಿ ತೆರೆದಿಡುತ್ತಾನೆ.

ಚಿತ್ರದ ನಿರೂಪಣೆ ಮುಖ್ಯ ಪಾತ್ರಗಳ ನಡುವಿನ ಸಂಬಂಧ ಮತ್ತು ವರ್ತನೆ ಒಂದು ನಿಶ್ಚಿತ ಉದ್ದೇಶದ ಕಡೆ ಕೇಂದ್ರೀಕೃತವಾಗಿರುತ್ತದೆ. ಯಾವ ಪ್ರತಿಫಲಾಪೇಕ್ಷೆ ಇಲ್ಲದ ಮಾನವೀಯ ಗುಣವನ್ನು ಪ್ರದರ್ಶಿಸಿದ ಇರ್ಮಾ ಮತ್ತು ಅದರ ಮೂಲಕ ಬದುಕಿನ ಬಗ್ಗೆ ಒಂದು ಸ್ಥಿರ ನೆಲೆ ತಲುಪಿದ ನೆನಪು ಮಾಸಿದ ವ್ಯಕ್ತಿಯೊಬ್ಬನನ್ನು ಪ್ರಸ್ತುತಪಡಿಸುವುದು. ಇಲ್ಲಿಂದ ಮುಂದಕ್ಕೆ ಅವರ ಸಂಬಂಧದಲ್ಲಿ ಉಂಟಾದ ಬೆಳವಣಿಗೆ ಮತ್ತು ಅಂತರಂಗದಲ್ಲಿರುವ ಶಕ್ತಿ ಹೊರಕಾಣಿಸಿಕೊಂಡು ಅವನ ವ್ಯಕ್ತಿತ್ವ ವೃದ್ಧಿಯಾಗುವುದನ್ನು ಆ ಪ್ರದೇಶದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ತೆರೆದಿಡುತ್ತಾನೆ.

ಎಂಗೆ ಸಹಜವಾಗಿಯೇ ಇರ್ಮಾಳಲ್ಲಿ ವಿಶ್ವಾಸ ಹಾಗೂ ಗೌರವ ಮೂಡಿರುತ್ತದೆ ಮತ್ತು ಅದು ಆಪ್ತತೆಗೆ ತಿರುಗಿ ಅವಳ ಸಾನ್ನಿಧ್ಯವನ್ನು ಬಯಸುವ ಮಾನಸಿಕ ಸ್ಥಿತಿಗೆ ತಲುಪುತ್ತಾನೆ. ತನ್ನ ಬಳಿ ಸುಮ್ಮನೆ ಕುಳಿತಿದ್ದರೆ ಹಿತವಾಗಿರುತ್ತದೆ ಎಂದು ಅವಳಿಗೆ ತಿಳಿಸುವುದು ಮತ್ತು ರಾತ್ರಿ ಹೊತ್ತಿನಲ್ಲಿ ಒಬ್ಬಳೇ ನಡೆದುಕೊಂಡು ಹೋಗುವುದು ಕ್ಷೇಮವಲ್ಲವೆಂದು ಅವಳ ಜೊತೆ ಮಾತಿಲ್ಲದೆ ಹೆಜ್ಜೆ ಹಾಕಿ ಮನೆಗೆ ತಲುಪಿಸುವುದು ಮುಂತಾದ ದೃಶ್ಯಗಳು ಅವರ ಸಂಬಂಧದ ಬಗ್ಗೆ ಸಮರ್ಥ ನಿರೂಪಣೆಯಾಗುತ್ತದೆ.

ಎಂ ಕೆಲಸ ಮಾಡುವ ಸ್ಥಳದಲ್ಲಿ ಅಷ್ಟೇನೂ ಸರಿಯಾಗಿ ವೆಲ್ಡಿಂಗ್ ಕೆಲಸವನ್ನು ನೋಡಿ ಅದರ ಬಗ್ಗೆ ಅವನೊಳಗಿದ್ದ ಶಕ್ತಿ ಜಾಗೃತಗೊಳ್ಳುತ್ತದೆ. ತಾನು ಪ್ರಯತ್ನಿಸುವುದಾಗಿ ಕೇಳಿ ಹಾಗೆಯೇ ಮಾಡಿ ಕೆಲಸದಲ್ಲಿ ಬಡ್ತಿ ಪಡೆಯುತ್ತಾನೆ. ಇನ್ನೊಂದು ಕಡೆ ಸಂಗೀತದ ಬಗ್ಗೆ ಅವನಲ್ಲಿರುವ ಆ ಶಕ್ತಿಯೂ ಹೊರದಾರಿ ಪಡೆದು ಆರ್ಕೆಸ್ಟ್ರಾ ಪಡೆಯವರಿಗೆ ಹೊಸದರ ಪರಿಚಯವಾಗಲು ಮುಂದಾಗುತ್ತಾನೆ. ಇದರಿಂದ ಆ ಪ್ರದೇಶದವರಿಗೆಲ್ಲ ಅವನ ವ್ಯಕ್ತಿತ್ವದ ಹಿರಿತನದ ಬಗ್ಗೆ ಅರಿವು ಮೂಡುತ್ತದೆ.

ಎಂ ಬ್ಯಾಂಕಿಗೆ ಹೋದಾಗ ಅದನ್ನು ಕೊಳ್ಳೆ ಹೊಡೆಯಲು ಬರುವವನೊಬ್ಬ ಯಶಸ್ವಿಯಾದ ನಂತರ ಅವನೂ ಸುದ್ದಿಗೆ ಗ್ರಾಸವಾಗುತ್ತಾನೆ. ಇಲ್ಲಿ ಮನುಷ್ಯ ಸ್ವಭಾವದ ಮತ್ತೊಂದು ಅಂಶವನ್ನು ನಿರ್ದೇಶಕ ಮುಂದಿಡುತ್ತಾನೆ. ಬ್ಯಾಕ್ ಲೂಟಿ ಮಾಡಿದವನು ತನ್ನ ಕಾರ್ಖಾನೆ ಸುಟ್ಟು ಕೆಲಸಗಾರರಿಗೆ ಸಂಬಳ ಕೊಡಲಾಗದೆ ಹೋದದ್ದಕ್ಕೆ ಹೀಗೆ ಮಾಡಿದ್ದಾಗಿ ಹೇಳುತ್ತಾನೆ. ಇದರ ಮೂಲಕ ಮನುಷ್ಯ ಸ್ವಭಾವದ ಇನ್ನೊಂದು ಮುಖವನ್ನು ಪರಿಚಯಿಸುತ್ತಾನೆ. ಎಂಗೆ ಲೂಟಿ ಮಾಡಿದ ಹಣ ಮತ್ತು ಕೆಲಸಗಾರರ ವಿಳಾಸ ಕೊಟ್ಟು ಅವರಿಗೆ ತಲುಪಿಸಲು ಕೇಳಿಕೊಳ್ಳುತ್ತಾನೆ. ಇಂಥ ಭಾವಸಾಂದ್ರತೆ ಇರುವ ದೃಶ್ಯಗಳಲ್ಲಿ ಮಾತ್ರ ಕೌರಿಸ್ಮಕಿ ಸಮೀಪ ಚಿತ್ರಿಕೆಗಳನ್ನು(ಕ್ಲೋಸ್ ಶಾಟ್ಸ್) ಬಳಸುತ್ತಾನೆ. ಆದರೆ ಆ ಚಿತ್ರಿಕೆಗಳಲ್ಲಿ ಸಾಮಾನ್ಯವಾಗಿ ಪಾತ್ರಗಳು ನಿರ್ಭಾವವನ್ನು ಪ್ರಕಟಿಸುತ್ತವೆ.

ಬ್ಯಾಂಕ್ ಲೂಟಿ ಪ್ರಕರಣದಲ್ಲಿ ಸುದ್ದಿಯಲ್ಲಿದ್ದ ಎಂಗೆ ತಾನು ಯಾವ ಊರಿನವನು ಮತ್ತು ತನ್ನ ಹೆಂಡತಿ ಯಾರು ಎಂದು ತಿಳಿದು ಅಲ್ಲಿಗೆ ಹೋದರೆ ಅವನಿಗೆ ಅಘಾತ ಕಾದಿರುತ್ತದೆ. ಕೊಂಚ ಮೇಲ್ವರ್ಗದ ವಾತಾವರಣದ ಅವನ ಮನೆಯಲ್ಲಿ ಹೆಂಡತಿ ಸಂಪೂರ್ಣ ನಿರಾಸಕ್ತಿ ತೋರುವುದಲ್ಲದೆ ತನ್ನಿಂದ ವಿಚ್ಛೇದನ ಪಡೆದಿರುವುದೂ ತಿಳಿಯುತ್ತದೆ. ಇಂಥ ಸನ್ನಿವೇಶದಲ್ಲಿಯೂ ಕೌರಿಸ್ಮಕಿ ಹಾಸ್ಯ ಲೇಪನವನ್ನು ಕೈ ಬಿಡುವುದಿಲ್ಲ. ತನ್ನ ಹೆಂಡತಿಯಾಗಿದ್ದವಳನ್ನು ಮದುವೆ ಆಗಿದ್ದವನು ಇಬ್ಬರಲ್ಲಿ ಯಾರು ಅವಳಿಗೆ ಸಲ್ಲಬೇಕು ಎನ್ನುವುದರ ನಿರ್ಧಾರಕ್ಕೆ ಕಾದಾಡೋಣವೆಂದು ಸೂಚಿಸುತ್ತಾನೆ. ದಾಂಪತ್ಯದ ಪಾವಿತ್ರ್ಯತೆಯ ಬಗ್ಗೆ ಇರ್ಮಾಳಿಂದ ಕಲಿತಿದ್ದ ಎಂ ಅದರ ಅಗತ್ಯವಿಲ್ಲವೆಂದು ತಿಳಿಸುತ್ತಾನೆ. ಅಲ್ಲದೆ ಅವನು ತನಗೆ ಹಿತವೆನ್ನಿಸಿದ ಕಡೆ ಹೋಗಲು ನಿರ್ಧರಿಸುತ್ತಾನೆ. ಹಲವಾರು ಬಗೆಯಲ್ಲಿ ಮನುಷ್ಯ ಸ್ವಭಾವದ ಸುಗುಣ ಮತ್ತು ದುರ್ಗುಣಗಳನ್ನು ನಿಷ್ಠುರವಾಗಿ ತೆರೆದಿಡುವ ನಿರ್ದೇಶಕನ ಪ್ರಯತ್ನ ಸಾರ್ಥಕವೆನಿಸುತ್ತದೆ.

ಅಕಿ ಕೌರಿಸ್ಮಕಿ ಎರಡು ಸಾವಿರದ ಹದಿನೇಳರಲ್ಲಿ ʻದಿ ಅದರ್ ಸೈಡ್ ಆಫ್ ಶ್ಯಾಡೊʼ ಚಿತ್ರ ಚಿತ್ರ ನಿರ್ದೇಶಿಸಿದ ನಂತರ ಇನ್ನು ಮುಂದೆ ಚಿತ್ರ ಮಾಡುವುದಿಲ್ಲ ಎಂದು ಹೇಳಿದ್ದಾನೆ. ಅದಕ್ಕೆ ಕಾರಣ ಗೊತ್ತಾಗಿಲ್ಲ. ಆದರೆ ಅವನ ಅಂತರಂಗದಲ್ಲಿ ಇರುವ ಶಕ್ತಿ ಹಾಗೆ ಮಾಡುವುದಕ್ಕೆ ಬಿಡುತ್ತದೆಯೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕು.