ಆಸ್ಟ್ರೇಲಿಯಾದಲ್ಲಿ ಕೋವಿಡ್-೧೯ ನಂತರದ ಪರಿಸ್ಥಿತಿ ಸುಧಾರಿಸಿದೆ, ಜನರ ಹರಿದಾಟ ಸುಗಮವಾಗಿದೆ. ಆದರೆ ಧುತ್ತೆಂದು ದೇಶದಾದ್ಯಂತ, ಅದರಲ್ಲೂ ನಮ್ಮ ರಾಣಿರಾಜ್ಯದಲ್ಲಿ ಇನ್ನೂ ನಿಚ್ಚಳವಾಗಿ, ವಸತಿ ಸಮಸ್ಯೆ ಎನ್ನುವುದು ಹೊಸದಾಗಿ ತಲೆದೋರಿದೆ. ಪ್ರಪಂಚದ ಬೇರೆಬೇರೆ ಭಾಗಗಳಿಂದ ದೇಶದೊಳಕ್ಕೆ ಬರುತ್ತಿರುವವರ ಮತ್ತು ಅಂತರಾಜ್ಯ ವಲಸೆಗಾರರ ಸಂಖ್ಯೆ ಹೆಚ್ಚಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದ ಕೇಂದ್ರ ಸರಕಾರವು ಇತ್ತೀಚೆಗೆ ಹೆಚ್ಚು ಸಂಖ್ಯೆಯ ವಿದ್ಯಾರ್ಥಿ ಮತ್ತು ಉದ್ಯೋಗ ವೀಸಾಗಳನ್ನು ಕೊಡುತ್ತ ಉತ್ತೇಜನಕಾರಿಯಾಗಿದೆ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”

ಕಳೆದೆರಡು ವಾರಗಳಲ್ಲಿ ತಲೆ ಹೋಗುವಂತಹ ಪ್ರಸಂಗಗಳೇನೂ ಘಟಿಸದಿದ್ದರೂ ತಲೆ ಉಳಿಸಿಕೊಳ್ಳುವ ಪ್ರಯತ್ನಗಳು ನಡೆದಿವೆ. ಯಥಾಪ್ರಕಾರ ಆಸ್ಟ್ರೇಲಿಯಾದ ರಾಜಕೀಯದಲ್ಲಿ, ಜನಜೀವನದಲ್ಲಿ ಏರುಪೇರುಗಳು ಇದ್ದೇಯಿವೆ. ಅತ್ತ ಬ್ರಿಟನ್ನಿನಲ್ಲಿ ‘ಹೋದಾ ಪುಟ್ಟ, ಬಂದಾ ಪುಟ್ಟ’ ಎಂಬಂತೆ ಆರು ವಾರಗಳ ಕಾಲ ಮಾತ್ರ ಆಡಳಿತದ ಚುಕ್ಕಾಣಿ ಹಿಡಿದಿದ್ದ ಪ್ರಧಾನ ಮಂತ್ರಿ ಟ್ರಸ್ ಮನೆಗೆ ಹೋದರೆ ಹೊಸ ಪ್ರಧಾನ ಮಂತ್ರಿಯಾಗಿ ಸುನಾಕ್ ಪಟ್ಟಕ್ಕೆ ಬಂದಿದ್ದಾರೆ. ಈ ರೋಲರ್ ಕೋಸ್ಟರ್ ರಾಜಕೀಯದಾಟವನ್ನು ಟೀಕಿಸುತ್ತ ಅಮೇರಿಕಾದ ಅಧ್ಯಕ್ಷರು ಮತ್ತು ಯೂರೋಪಿನ ರಾಜಕೀಯ ನಾಯಕರು ‘ಒಂದಷ್ಟು ಸಾವಧಾನಚಿತ್ತರಾಗಿ ನಡೆಯಿರಿ’ ಎಂದು ಬ್ರಿಟನ್ನಿನ ನಾಯಕತ್ವಕ್ಕೆ ತಿಳಿಮಾತು ಹೇಳಿದ್ದಾರೆ. ನಮ್ಮ ಆಸ್ಟ್ರೇಲಿಯಾದ ಪ್ರಧಾನಿಗಳು ಅಂಥಹದ್ದೇನೂ ಬುದ್ಧಿಮಾತು ಹೇಳದೆ ತಮ್ಮಷ್ಟಕ್ಕೆ ತಾವು ಇರುವುದು ಆಶ್ಚರ್ಯವಾಗಿದೆ. ಹಿಂದಿನ ಕೆಲ ಪ್ರಧಾನಿಗಳು ತಮ್ಮ ತವರು ಮನೆ ಬ್ರಿಟನ್ನಿನಲ್ಲಿ ನಡೆಯುವ ವಿದ್ಯಮಾನಗಳನ್ನೆಲ್ಲ ಸ್ವಯಿಚ್ಛೆಯಿಂದ ತಮ್ಮ ಮೇಲೆಯೇ ಆಹ್ವಾನಿಸಿಕೊಂಡು ಹೇಳಿಕೆಗಳನ್ನು ಕೊಡುತ್ತಿದ್ದರು. ಈಗಿನ ಪ್ರಧಾನಿಗೆ ಇರುವುದು ಇಟಾಲಿಯನ್ ಬೇರುಗಳ ಕೊಂಡಿ. ಅದಲ್ಲದೇ ಹೆಗ್ಗಳಿಕೆಯ ಮಾತನ್ನಾಡುವ ಸ್ವಭಾವ ಇಲ್ಲವೆಂದು ಕಾಣುತ್ತದೆ. ಹಾಗಾಗಿ ‘ತವರು ಮನೆ’ ವ್ಯಾಮೋಹವಿಲ್ಲದೆ ಬ್ರಿಟನ್ನಿನ ವ್ಯವಹಾರಗಳನ್ನು ಗಮನಿಸುತ್ತಾ ನಡೆದಿದ್ದಾರೆಂದು ನನ್ನ ವಿಶ್ಲೇಷಣೆ.

ಅಷ್ಟಕ್ಕೂ ನಮ್ಮಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೇನೂ ಕೊರತೆಯಿಲ್ಲ. ನಮ್ಮ ರಾಣಿರಾಜ್ಯದ ಕೆಳಗಡೆ ಮತ್ತು ನ್ಯೂ ಸೌತ್ ವೇಲ್ಸ್ ರಾಜ್ಯದ ಉತ್ತರ ಭಾಗಗಳಲ್ಲಿ ಅಧಿಕ ಮಳೆ ಮತ್ತು ಜಲಪ್ರವಾಹದ ಸಮಸ್ಯೆಗಳು ಮುಂದುವರೆದಿವೆ. ಪ್ರವಾಹಪೀಡಿತ ಜನರಿಗೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಮತ್ತಷ್ಟು ಧನಸಹಾಯ ಮಾಡುವ ಭರವಸೆ ಕೊಟ್ಟಿದ್ದರೂ ವಸತಿ ಸಮಸ್ಯೆ ಹೆಚ್ಚುತ್ತಿದೆ. ಕಾನೂನಿನ ಪ್ರಕಾರ ಪ್ರವಾಹದಿಂದ ಧಕ್ಕೆಗೊಂಡ ಮನೆಗಳಲ್ಲಿ ವಾಸಿಸುವುದಕ್ಕೆ ಸಾಧ್ಯವಿಲ್ಲದ ಕಾರಣ ಜನರು ಸರಿಯಾದ ನಿವಾಸವಿಲ್ಲದೆ ಪರದಾಡುತ್ತಿದ್ದಾರೆ. ಉದ್ಯೋಗ, ಶಾಲೆ, ಆರೋಗ್ಯಕ್ಕೆ ಸಂಬಂಧಿಸಿದ ಹೊಸ ಸಮಸ್ಯೆಗಳಿಂದ ತತ್ತರಿಸಿದ್ದಾರೆ. ಸತತ ಮಳೆಯಿಂದಾಗಿ ಆಹಾರ ಬೆಳೆ, ತರಕಾರಿ, ಹಣ್ಣುಗಳು, ಗಿಡಗಳು ಕೊಳೆತು, ಅವುಗಳ ಬೆಲೆ ಏರುತ್ತಲೇ ಇದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಇರುವ ತುಟ್ಟಿ ಬೆಲೆಯ ಜೊತೆಗೆ ಅದು ಸೇರಿಕೊಂಡು ಎಲ್ಲಾ ಪದಾರ್ಥಗಳ ಬೆಲೆ ಇನ್ನೂ ಹೆಚ್ಚಲಿದೆ ಎನ್ನುವ ಸುದ್ದಿಯಿದೆ.

ಆಸ್ಟ್ರೇಲಿಯಾದಲ್ಲಿ ಕೋವಿಡ್-೧೯ ನಂತರದ ಪರಿಸ್ಥಿತಿ ಸುಧಾರಿಸಿದೆ, ಜನರ ಹರಿದಾಟ ಸುಗಮವಾಗಿದೆ. ಆದರೆ ಧುತ್ತೆಂದು ದೇಶದಾದ್ಯಂತ, ಅದರಲ್ಲೂ ನಮ್ಮ ರಾಣಿರಾಜ್ಯದಲ್ಲಿ ಇನ್ನೂ ನಿಚ್ಚಳವಾಗಿ, ವಸತಿ ಸಮಸ್ಯೆ ಎನ್ನುವುದು ಹೊಸದಾಗಿ ತಲೆದೋರಿದೆ. ಪ್ರಪಂಚದ ಬೇರೆಬೇರೆ ಭಾಗಗಳಿಂದ ದೇಶದೊಳಕ್ಕೆ ಬರುತ್ತಿರುವವರ ಮತ್ತು ಅಂತರಾಜ್ಯ ವಲಸೆಗಾರರ ಸಂಖ್ಯೆ ಹೆಚ್ಚಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದ ಕೇಂದ್ರ ಸರಕಾರವು ಇತ್ತೀಚೆಗೆ ಹೆಚ್ಚು ಸಂಖ್ಯೆಯ ವಿದ್ಯಾರ್ಥಿ ಮತ್ತು ಉದ್ಯೋಗ ವೀಸಾಗಳನ್ನು ಕೊಡುತ್ತ ಉತ್ತೇಜನಕಾರಿಯಾಗಿದೆ. ದೇಶದೊಳಗಡೆಯೆ ಉದ್ಯೋಗಗಳನ್ನು ಹುಡುಕಿಕೊಂಡು ಇಲ್ಲವೇ ಹವಾಮಾನ ಕಾರಣದಿಂದ ಬೇರೆಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಲಿರುವ ಜನರ ಹರಿವು ಹೆಚ್ಚಿದೆ. ಇತ್ತೀಚೆಗೆ ಮನೆಸಾಲದ ಮೇಲೆ ಬ್ಯಾಂಕ್ ಬಡ್ಡಿದರ ಹೆಚ್ಚಿಸಿರುವುದು ಜನಸಾಮಾನ್ಯರಿಗೆ ಬಿಸಿತುಪ್ಪವಾಗಿದೆ. ಇದರ ಪರಿಣಾಮ ಮನೆ ಬಾಡಿಗೆಯ ಮೇಲೆ. ಎಲ್ಲವೂ ಗಗನಕ್ಕೇರಿದೆ. ನಮ್ಮ ರಾಜ್ಯ ಸರಕಾರಕ್ಕೆ ಬಾಡಿಗೆ ವಸತಿಯ ತೀವ್ರ ಕೊರತೆ ಚಿಂತೆ ಹುಟ್ಟಿಸಿ ಜನರ ವಸತಿಗಳಲ್ಲಿ ಮುಖ್ಯ ಮನೆಯಲ್ಲದೆ ಹಿಂದಿನ ಅಂಗಳದಲ್ಲಿ ‘granny flat’ ಇಲ್ಲವೇ ಹೆಚ್ಚುವರಿ ಬೆಡ್ ರೂಮ್‌ಗಳು ಇದ್ದರೆ ಅವನ್ನು ತೆರವುಗೊಳಿಸಿ ಬಾಡಿಗೆಗೆ ಅನುವು ಮಾಡಿಕೊಡಿ ಎಂದು ಕೇಳಿದೆ.

ಈ ವಾರ ಹೊಸ ಸರಕಾರವು ಮಂಡಿಸಿದ ಮೊಟ್ಟಮೊದಲನೆಯ ಬಜೆಟ್ಟಿನಲ್ಲಿ ನಿತ್ಯಜೀವನದ ಖರ್ಚು ಕಡಿಮೆ ಮಾಡುತ್ತಾರೋ ಇಲ್ಲವೋ ಎನ್ನುವುದರ ಕಡೆಗೆ ಎಲ್ಲರ ಗಮನವಿತ್ತು. ಅಂಥದ್ದೇನೂ ವಿಶೇಷವಿಲ್ಲದೆ ನಮ್ಮಂಥ ಮಧ್ಯಮ ಆದಾಯ ವರ್ಗದವರಿಗೆ ನಿರಾಸೆಯಾಗಿದೆ. ಆದರೆ ಚುನಾವಣಾ ಸಮಯದಲ್ಲಿ ಹೇಳಿದ್ದಂತೆ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿಗಳ ಸಮುದಾಯ ಏಳಿಗೆ, ಅವರೇ ಕೈಗೊಳ್ಳುವ ಅಧ್ಯಯನಗಳಿಗೆ ಹೆಚ್ಚಿನ ಆರ್ಥಿಕ ಬೆಂಬಲವನ್ನು ಘೋಷಿಸಿದ್ದಾರೆ.

ಅಬೊರಿಜಿನಲ್ ಎಂದಾಗ ಜ್ಞಾಪಕ ಬಂದದ್ದು ಅಬೊರಿಜಿನಲ್ ಮಹಿಳಾ ಸೆನೆಟರ್ ಮತ್ತೊಮ್ಮೆ ಮಾಧ್ಯಮದವರ ಕೆಂಗಣ್ಣಿಗೆ ಗುರಿಯಾದದ್ದು. ಈಕೆ ಹೊಸ ಸರಕಾರಕ್ಕೆ ಬೆಂಬಲ ಕೊಟ್ಟಿದ್ದ ಗ್ರೀನ್ಸ್ ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ವಿಕ್ಟೋರಿಯಾ ರಾಜ್ಯದಿಂದ ಸ್ಪರ್ಧಿಸಿ ರಾಜ್ಯದ ಮೊಟ್ಟಮೊದಲ ಅಬೊರಿಜಿನಲ್ ಸೆನೆಟರ್ ಆಗಿ ಆಯ್ಕೆಯಾದದ್ದು. ತಾನು ಪ್ರಮಾಣವಚನ ಸ್ವೀಕರಿಸುವಾಗ ಆಸ್ಟ್ರೇಲಿಯಾದ ಹೆಡ್ ಆಫ್ ಗವರ್ನಮೆಂಟ್ ಆಗಿದ್ದ ಬ್ರಿಟನ್ನಿನ ರಾಣಿ ಒಬ್ಬ ವಸಾಹತುಶಾಹಿ ಎಂದು ಕೂಗಿ ಸೆನಿಟ್ಟಿನಲ್ಲಿ ಗಲಾಟೆಯಾಗಿತ್ತು. ಹೋದವಾರ ಈಕೆ ಗುರುತರವಾದ ಒಂದು ವಿವಾದಕ್ಕೆ ಸಿಲುಕಿ ಆಕೆಯ ಮೌಲ್ಯಗಳನ್ನು ಎಲ್ಲರೂ ಟೀಕಿಸಿ ಆಕೆ ಪಕ್ಷದ ಉಪನಾಯಕಿಯಾಗಿ ರಾಜೀನಾಮೆ ಘೋಷಿಸಿದರು. ತಾನೆಲ್ಲೂ ಹೋಗುವುದಿಲ್ಲ, ಪುಟಿದೇಳುತ್ತೀನಿ ನೋಡುತ್ತಿರಿ ಎಂದು ತನ್ನ ಜನರಿಗೆ ಸಾಂತ್ವನ ಹೇಳಿದ್ದಾರೆ.

ಅಬೊರಿಜಿನಲ್ ಜನರಿಗೆ ಸಂಬಂಧಿಸಿದ ಮತ್ತೊಂದು ಮುಖ್ಯ ಸುದ್ದಿಯೆಂದರೆ ಪಶ್ಚಿಮ ಆಸ್ಟ್ರೇಲಿಯ ರಾಜ್ಯದಲ್ಲಿ ಅಬೊರಿಜಿನಲ್ ಹುಡುಗನೊಬ್ಬನ ಮೇಲೆ ಕೆಲವರು ಹಲ್ಲೆ ನಡೆಸಿ ಅವನು ತೀವ್ರವಾಗಿ ಗಾಯಗೊಂಡು ನಂತರ ಅಸು ನೀಗಿದ. ಇದೊಂದು ಜನಾಂಗೀಯ ದ್ವೇಷದ ಘಟನೆಯೆಂದು ಸ್ವತಃ ಪ್ರಧಾನ ಮಂತ್ರಿಗಳೆ ಹೇಳಿದ್ದಾರೆ. ಈ ಘಟನೆಯು ಸದ್ಯದಲ್ಲಿ ಬಲಗೊಳ್ಳುತ್ತಿರುವ ‘referendum vote’ ಚಳವಳಿಗಾರರಿಗೆ ಬಹಳ ದುಃಖವನ್ನುಂಟು ಮಾಡಿದೆ. ಹುಡುಗನ ಸಾವು ಮತ್ತದರ ಕಾರಣ ಎಲ್ಲರಲ್ಲೂ ಕಳವಳ ಹುಟ್ಟಿಸಿದೆ. ಇಪ್ಪತ್ತೊಂದನೆ ಶತಮಾನದಲ್ಲಿ ಇನ್ನೂ ನಡೆಯುತ್ತಿರುವ ಜನಾಂಗೀಯ ದಳ್ಳುರಿ ಸಾವುಗಳು ಎಂದೆಂದಿಗೂ ಖಂಡನೀಯ. ಆಸ್ಟ್ರೇಲಿಯನ್ ಮೂಲನಿವಾಸಗಳ ಅಭಿಪ್ರಾಯ ಮಂಡಿಕೆ ಮತ್ತು ದನಿಯನ್ನು ದೇಶದ ಸಂವಿಧಾನದಲ್ಲಿ ಸೇರಿಸುವುದರ ಬೇಡಿಕೆಗೆ ಪುಷ್ಟಿ ಬಂದಿದೆ.

ಮತ್ತೊಂದು ಅಬೊರಿಜಿನಲ್ ಜನರಿಗೆ ಸಂಬಂಧಿಸಿದ ವಿಷಯವೆಂದರೆ ಹೋದ ಕೆಲ ವಾರಗಳಲ್ಲಿ SBS ಟಿವಿ ವಾಹಿನಿಯು ‘ದಿ ಆಸ್ಟ್ರೇಲಿಯನ್ ವಾರ್ಸ್’ ಎನ್ನುವ ಸರಣಿಯನ್ನು ಪ್ರಸರಿಸಿತ್ತು. ಇದು ಮೊಟ್ಟಮೊದಲ ಬಾರಿಗೆ ಆಳವಾದ ಅಧ್ಯಯನ ಮತ್ತು ಸಂಶೋಧನೆಗಳನ್ನು ಕೈಗೊಂಡು ಆಧಾರಪೂರಕವಾಗಿ ತಯಾರಿಸಿದ ಸರಣಿ. ಮುಖ್ಯ ವಿಷಯವಿದ್ದದ್ದು ಆಸ್ಟ್ರೇಲಿಯದ ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿ ಅವರ ಮತ್ತು ದೇಶದಾದ್ಯಂತ ಜೀವಿಸಿದ್ದ ಅಬೊರಿಜಿನಲ್ ಸಮುದಾಯಗಳ ನಡುವೆ ನಡೆದ ಅನೇಕಾನೇಕ ಕಾಳಗಗಳು, ಹತ್ಯೆಗಳು ಮತ್ತು ಪೂರ್ವಯೋಜಿತ ಹಲ್ಲೆಗಳು. ಇದರಿಂದ ಸತ್ತ ಸಾವಿರಾರು ಅಬೊರಿಜಿನಲ್ ಗಂಡಸರು, ಹೆಂಗಸರು ಮತ್ತು ಮಕ್ಕಳ ಹೆಸರುಗಳನ್ನು ಇಂದಿಗೂ ಅಧಿಕೃತವಾಗಿ ದಾಖಲಿಸದೆ ಇರುವುದು. ಆದರೆ ಅಂತಹ ಕಾಳಗಗಳಲ್ಲಿ ಸತ್ತ ಬ್ರಿಟಿಷ್ ಸೈನಿಕರ, ಅಧಿಕಾರಿಗಳ ಹೆಸರುಗಳನ್ನು ಅಧಿಕೃತವಾಗಿ ದಾಖಲಿಸಿದ್ದು, ಅವರು ಸತ್ತ ಸ್ಥಳಗಳಲ್ಲಿ ಅವರಿಗೆ ಗೌರವಪೂರ್ವಕ ಟೂಂಬ್ ಸ್ಟೋನ್ ಮತ್ತು ಅಧಿಕೃತ ಗೋರಿಗಳಿವೆ. ಕೆಲ ವಾರಗಳ ಈ ಸರಣಿಯಲ್ಲಿ ಅಬೊರಿಜಿನಲ್ ಜನರು ತಮ್ಮ ಸ್ವಾತಂತ್ರ್ಯಕ್ಕಾಗಿ ನಡೆಸಿದ ನೂರಾರು ಸಮರಗಳನ್ನು ಬಿಚ್ಚಿಟ್ಟಿತ್ತು.

ಈ ರೀತಿ ಆಧಾರಸಮೇತವಾಗಿ ಕಳೆದ ಎರಡೂವರೆ ಶತಮಾನಗಳಲ್ಲಿ ನಡೆದುಹೋದ ಮಾರಣಹೋಮಗಳನ್ನು ಆದರೆ ಅದರ ನೆನಪನ್ನು ಬೇಕಂತಲೇ ಮುಚ್ಚಿಟ್ಟಿರುವುದನ್ನು ಬಯಲು ಮಾಡಿರುವುದು ಇದೆ ಮೊದಲ ಬಾರಿಗೆ. ಸರಣಿಯ ನಿರೂಪಕಿ ಅನೇಕ ಪ್ರಶ್ನೆಗಳನ್ನೆತ್ತಿದ್ದಾರೆ. ‘ಆಸ್ಟ್ರೇಲಿಯದ ವಸಾಹತುಶಾಹಿ ಸರಕಾರಗಳು ನಮಗೆ ಸಂಬಂಧವೇ ಇಲ್ಲದಿದ್ದ ಎಲ್ಲೋ ದೂರದಲ್ಲಿ ನಡೆದ ಹಲವಾರು ಪ್ರಾಪಂಚಿಕ ಯುದ್ಧಗಳಲ್ಲಿ ಪಾಲ್ಗೊಂಡಿದ್ದವು. ಅವುಗಳನ್ನು ಪ್ರತಿವರ್ಷವೂ ನೆನಪಿಸಿಕೊಂಡು ಆ ಯುದ್ಧಗಳ ಪ್ರತಿಯೊಂದು ತಾರೀಕನ್ನು, ವಿವರಗಳನ್ನು ಮೆಲುಕುಹಾಕಿ ಚಾಚೂತಪ್ಪದೆ ಅವನ್ನು ಆಚರಿಸಲಾಗುತ್ತಿದೆ. ಆದರೆ ನಮ್ಮ ದೇಶದೊಳಗಡೆಯೇ ನಡೆದ, ಇಲ್ಲಿನ ಸ್ಥಳೀಯರನ್ನು ಕೊಂದುಹಾಕಿದ ಅನೇಕ ಯುದ್ಧಗಳನ್ನು ಮುಚ್ಚಿಡಲಾಗಿದೆ. ಚಾರಿತ್ರಿಕವಾಗಿ ಅವನ್ನು ದಾಖಲಿಸಿಲ್ಲ. ಮಡಿದವರ ಹೆಸರುಗಳನ್ನು ನೆನಪಿಸಿಕೊಳ್ಳುವಂತಹ ಯಾವುದೇ ವಿವರಗಳು ಸರಕಾರೀ ಕಚೇರಿಗಳಲ್ಲಿ ಲಭ್ಯವಿಲ್ಲ. ಆಸ್ಟ್ರೇಲಿಯನ್ ಮೂಲ ಜನರ ಬಗ್ಗೆ ಇರುವ, ನಡೆದ ಆಸ್ಟ್ರೇಲಿಯನ್ ಯುದ್ಧಗಳನ್ನು ಕುರಿತು ಯಾಕೆ ಮಾತನಾಡಿಲ್ಲ ಎಂದು ಕೇಳಿದ್ದಾರೆ. ಸರಕಾರವು ಅವರ ಪ್ರಶ್ನೆಗಳನ್ನು ಗಮನಿಸುವುದಾಗಿ ಹೇಳಿದೆ. ನಿರೂಪಕಿಯ ಪ್ರಶ್ನೆಗಳು ಎಲ್ಲಾ ಅಬೊರಿಜಿನಲ್ ಜನರ ಪ್ರಶ್ನೆಗಳು ಕೂಡ ಹೌದು. ಅವುಗಳಿಗೆ ಉತ್ತರ ಸಿಕ್ಕಿದಾಗ ಆಸ್ಟ್ರೇಲಿಯನ್ ಸಮಾಜವು ಇಪ್ಪತ್ತೊಂದನೆ ಶತಮಾನಕ್ಕೆ ಕಾಲಿಟ್ಟಿದೆ ಎನ್ನುವುದು ರುಜುವಾಗುತ್ತದೆ.