ಇಲ್ಲಿರುವ ಚಿತ್ರ ನೋಡಿ ವಿಷಯವೇನೆಂದು ಗೊತ್ತಾದರೆ ಮಾತ್ರ ಓದು ಮುಂದುವರೆಸಿ, ಕೃತಾರ್ಥರಾಗಿ. ಅಸಹ್ಯವೆನಿಸಿದರೆ ಪುಟ ಮುಚ್ಚಿ ಹತ್ತಿಪ್ಪತ್ತು ಸಲ ರಾಮ ರಾಮ ಅಂದುಕೊಂಡು ಶುದ್ಧಗೊಳ್ಳಿ.

ಸುತ್ತಿಬಳಸದೆ ಹೇಳಿಬಿಡುತ್ತೇನೆ. ಇದು ಹೊಸ ಕಾಲದ ಶೌಚಗಳ ಬಗ್ಗೆ ಒಂದಿಷ್ಟು ಮಾತು. ದಿಟವೆನಿಸಿದರೆ ದಿಟ. ಲೇವಡಿಯನಿಸಿದರೆ ಲೇವಡಿ. ಲಘುವಾದ ನಗುಬಗೆ. ಓದುತ್ತೀರಾದರೆ- ಕಮೋಡು, ಯೂರಿನಲುಗಳ ಬಗ್ಗೆ ಬರೆಯುತ್ತಿರುವ ನನ್ನೀ ಉದ್ಧಟತನವನ್ನು ಕೊಂಚ ಕ್ಷಮಿಸಿ… ಈಗ ಮುಂದುವರೆಯಿರಿ.

ಒಂದಾನೊಂದು ಕಾಲದಲ್ಲಿ ಬಹಿರ್ದೆಸೆ ಅನ್ನುತ್ತಿದ್ದ, ಬಹಿರ್ದೆಸೆಯಲ್ಲೇ ಆಗುತ್ತಿದ್ದ ಸೊಂಟದ ಆಸುಪಾಸಿನ ಅಪ್ಪಟ ದೈಹಿಕಗಳು ಈಗ ಮನೆಯೊಳಗನ್ನೇ ಹೊಕ್ಕು ಸ್ವಯಂ ಅಂತರ್ದೆಸೆಯೇ ಆಗಿರುವುದು ನಿಮಗೆ ಗೊತ್ತೇ ಇದೆ. ಊರಾಚೆ ಗುಡ್ಡದ ತಪ್ಪಲಿನಲ್ಲೋ, ಹೊಳೆಯ ಮಗ್ಗುಲಿನಲ್ಲೋ ನಡೆಯುತ್ತಿದ್ದ ವಿಸರ್ಜನೆಗಳು ಮನೆಯ ಹಿತ್ತಲಿಗೇ ಬಂದಿದ್ದು ಬ್ರಿಟಿಷರ ಕಾಲದಲ್ಲಿ. ಬಳಿಕ ಹಿತ್ತಲಿನಿಂದ ಮನೆಯೊಳಕ್ಕೆ, ಆಮೇಲೆ ಬೆಡ್ ರೂಮಿನವರೆಗೆ ಬಂದು ಅಟ್ಯಾಚಾಗಿದ್ದು ಸ್ವಾತಂತ್ರ್ಯಾನಂತರದ ಬೆಳವಣಿಗೆ. ಆಧುನಿಕತೆಯ ವಿಕಾಸವಾದದಲ್ಲಿ ಹೀಗೆ ಶೌಚ ಅಂತಃಪುರವನ್ನೇ ಹೊಕ್ಕ ಐತಿಹ್ಯವಿದೆ. ಏಕ್ ದಮ್ ಅಂತರ್ಮುಖೀ ಬೆಳವಣಿಗೆ. ಈ ಇತಿಹಾಸವನ್ನು ಬರೆದರೆ ಅದೇ ಇನ್ನೊಂದು ಆಖ್ಯಾನವಾದೀತು. 

Bathroom is a room too -ಅಂತ ಮೊಳಗಲಾಗಿದ್ದು ಈಚೆಗೆ. ಸುಮಾರು ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಪಶ್ಚಿಮದ ಸಂದರ್ಭದಲ್ಲಿ. ನಮ್ಮ ನರಸಿಂಹರಾಯರು ದೇಶದ ಕದಗಳನ್ನು ಉದಾರವಾಗಿ ಹಾರೊಡೆದ ಬಳಿಕ- `ಬಚ್ಚಲೂ ಕೋಣೆಯೇ!!’ ಅನ್ನುವ ಈ ಮಾತು ಈ ದೇಶದ ಶಹರುಗಳ ಉದ್ಘೋಷವೇ ಆಯಿತು. ಇಷ್ಟಕ್ಕೂ ನಾವು ಆರ್ಕಿಟೆಕ್ಟುಗಳೆನ್ನುವ ಪೀಳಿಗೆಯಿರುವುದು ಯಾತಕ್ಕೆ? ಮನುಷ್ಯ ದೈಹಿಕದ ಕ್ಷುಲ್ಲಕ ಮಗ್ಗುಲುಗಳನ್ನೂ ವಿಸ್ತರಿಸಿ, ವೈಭವಿಸಿ ಮೆರೆಯುವ ಮಂದಿ ನಾವು. ಇದಕ್ಕೆ ಶೌಚವೂ ಹೊರತಲ್ಲ. ಈ ಬಗ್ಗೆ ಕೆಲವು ವರ್ಷಗಳ ಹಿಂದೆ `ಶೌಚೋಪಾಖ್ಯಾನ’ ಅಂತೊಂದು ಉದ್ದಾನುದ್ದ ಪೀಸು ಬರೆದಿದ್ದೆ. ಬಚ್ಚಲುಮನೆಯ ಕಟ್ಟಾ ಖಾಸಗೀ ದೆಸೆಗಳನ್ನು ಮನಸಾ ಅನುಭವಿಸುವವರೆಲ್ಲ ಅದನ್ನು ಒಪ್ಪಿ ಹರಸಿದ್ದರು. ಈ ಕುರಿತು ಯೋಚಿಸಲೂ ಹೇಸುವವರು ಮೂಗು ಮುಚ್ಚಿ ಅಮೇಧ್ಯವಂತ ಹೀಗಳೆದಿದ್ದರು. ಈ ಎರಡನೇ ಜಾತಿಯ ಮಂದಿ ಈಗಾಗಲೇ ಪುಟ ಮುಚ್ಚಿದ್ದಾರೆಂಬ ಖಾತ್ರಿಯೊಡನೆ ಮುಂದುವರೆಯುತ್ತೇನೆ.

ಹೇಳಬೇಕೆಂದರೆ ನಾನಿಲ್ಲಿ ಹೆಚ್ಚೇನೂ ಬರೆಯಕೂಡದು. ನಾವು ಆರ್ಕಿಟೆಕ್ಟುಗಳ ಈಮೇಲುಗಳಲ್ಲಿ ಈ ಕುರಿತು ದಿನವೂ ಹರಿದಾಡುತ್ತ ತುಸು ಪೋಲಿಯೆನಿಸುವ ಜೋಕಲ್ಲದ ಜೋಕುಗಳಲ್ಲಿ ಕೆಲವನ್ನು ಆಯ್ದು ಸಚಿತ್ರ ವಿವರಣೆ ಕೊಟ್ಟಿದ್ದೇನೆ. ಸಭ್ಯವಾಗಿ ನೋಡಿಕೊಳ್ಳಿ.

ಮೊದಲೆರಡು ಚಿತ್ರಗಳು ಹೂಸ್ಟನಿನಲ್ಲಿರುವ ಸಾರ್ವಜನಿಕ ಶೌಚಾಲಯವೊಂದರ ಚಿತ್ರಗಳು. ಮೊದಲದರಲ್ಲಿ ಒಬ್ಬಳು ಲಲನೆ ಕದ ಜೀಕಿ, ತನ್ನೊಳಗಿನ ಜಲವೋ, ಘನವೋ- ಒಟ್ಟಾರೆ ದೇಹಬಾಧೆ ನೀಗಿಕೊಳ್ಳಲು ಸನ್ನದ್ಧಳಾಗಿದ್ದಾಳೆ. ಎರಡನೆಯದು ಅದೇ ಟಾಯ್ಲೆಟಿನ ಒಳನೋಟ. ಗಮನಿಸಿ! ಒಳಗಿನಿಂದ ಹೊರಗಿನದೆಲ್ಲವೂ ನಿಚ್ಚಳವಾಗಿ ತೋರುತ್ತಿದೆ!! ಅಂತರಂಗ, ಬಹಿರಂಗಗಳು ಅದ್ವೈತವೆಂಬಂತೆ ಒಂದಾಗಿರುವ ಏಕಾಂತಕ್ಷೇತ್ರವಿದು. ಹೀಗೆ ಒಳಗಿನದೆಲ್ಲ ಹೊರಕ್ಕೂ ತೋರಿದರೆ…?! ವ್ಯಾ…ಕ್!!

ನಾವು ಆರ್ಕಿಟೆಕ್ಟುಗಳು ಅಷ್ಟು ಮೂರ್ಖರೇನಲ್ಲ.It’s made entirely of one-way glass! -ಅಂತ ಈ ವಿನ್ಯಾಸಕ್ಕೆ ಸಮರ್ಥನೆ ಕೊಡುತ್ತೇವೆ. ಇಷ್ಟಿದ್ದೂ ಈ ಟಾಯ್ಲೆಟಿನಲ್ಲಿ ಚಂದ, ಛಂದ, ಸ್ವಚ್ಛಂದವನ್ನು ಸ್ವೇಚ್ಛೆಯಿಂದ ಅನುಭವಿಸಲು ಎಂಟೆದೆ ಬೇಕೇನೋ…!

ಈಗ ಮೂರನೆಯ ಚಿತ್ರವನ್ನು ನೋಡಿ. ಇಪ್ಪತ್ತನೆಯ ಮಹಡಿಯೊಂದರಲ್ಲಿರುವ ಟಾಯ್ಲೆಟು ಇದು. ನೀವು ಸಂಜೆಯ ಮೇಲೆ ಪಾರ್‍ಟಿ ಮಾಡಿ, ಗಡದ್ದು ಬಿಯರೂಡಿ ಟೈಟಾಗಿದ್ದೀರೆಂದುಕೊಳ್ಳಿ. ನಿಮ್ಮ ಕಿಡ್ನೀಗಳೀಗ ಕಂಡಾಪಟ್ಟೆ ಅಳ್ಳಕಗೊಂಡಿವೆ. ವಿಪರೀತ ಜಲಬಾಧೆಯೆಂದು ಟಾಯ್ಲೆಟಿನತ್ತ ಧಾವಿಸಿ ಕದ ಜೀಕಿದರೆ….?! ಗಾಷ್… ಒಳಗೆ ನೆಲವೇ ಇಲ್ಲ!! ನೀವಿರುವುದು ಇಪ್ಪತ್ತನೆಯ ಮಹಡಿ. ಏನಾಗಬೇಕು?!!

ಸಾವಧಾನ. ನಿಮ್ಮ ಅಡ್ರಿನಾಲನ್ನು ವೃಥಾ ಪೋಲು ಮಾಡಬೇಡಿ. ಇದು ಭ್ರಮೆ ಅಷ್ಟೆ. ನೀವು ಕಂಡಿದ್ದು ಒಳನೆಲದ ಮೇಲಿನ ವಿನ್ಯಾಸವನ್ನು ಮಾತ್ರ!! ಈ ರೀತಿಯ ಆಪ್ಟಿಕಲ್ ಇಲ್ಯೂಷನು ಪುರಾತನ ಗ್ರೀಸಿನಿಂದ ಇಲ್ಲಿನವರೆಗೆ ಆರ್ಕಿಟೆಕ್ಚರಿನ ಉದ್ದಾಮ ಉದ್ದೇಶಗಳನ್ನು ಬದಿಗಿರಿಸಿ ಮಾಡಿರುವ ಸಣ್ಣಪುಟ್ಟ ತರಲೆ ಅಷ್ಟೆ.

ಅಲ್ಲೆಲ್ಲೋ ಅಮೆರಿಕದವರ ರಿಸರ್ಚಾನುಸಾರ ಮೂತ್ರಕುಂಡಗಳೆದುರು ನಿಲ್ಲುವ ಗಂಡಸರು ಆಚೀಚೆ ನೋಡಲು ಕಸಿವಿಸಿಪಡುತ್ತ ಬರೇ ಜ಼ಿಪ್ಪಿನ ಸುತ್ತಲೇ ಏಕಾಗ್ರವಾಗುತ್ತಾರೆಂದು ದೃಢೀಕರಿಸಲಾಗಿದೆಯಂತೆ. ಅಲ್ಲೇನು? ಈ ಬೆಂಗಳೂರಿನ ಗಂಡಸರ ಕತೆಯೂ ಇದೇನೇ. ಶೌಚಾಲಯದೊಳಗೆ ಒಬ್ಬರಿಗೊಬ್ಬರು ಮಾತನಾಡುವುದಿಲ್ಲ. ಒಬ್ಬರನ್ನೊಬ್ಬರು ನೋಡುವುದಿಲ್ಲ. ಉಚ್ಚೆಗೆ ನಿಂತರೆ ಆಚೀಚೆ ನೋಡಲಾಗದ ಬಿಗಿತ. ಅತ್ತಿತ್ತ ಹೊರಳುವ ಆಲಿಗಳಲ್ಲಿ ಏನೋ ಆತಂಕ. ಹುಡುಕಿದರೂ ಮೋರೆಗಳಲ್ಲಿ ನಗೆಮುಗುಳು ತೋರುವುದಿಲ್ಲ. ಗಮನಿಸಿ ನೋಡಿ- ಪಬ್ಲಿಕ್ ಯೂರಿನಲುಗಳಲ್ಲಿ ಸೂತಕದ ಮೌನವಿರುತ್ತದೆ. ಅದರಷ್ಟು ಘನಗಂಭೀರ, ಘನನೀರವದೆಡೆ ಈ ಸೃಷ್ಟಿಯಲ್ಲಿ ಇನ್ನೊಂದಿಲ್ಲ.

ಬರೀ ಪ್ರಮೀಳೆಯರಿರುವ ಒಂದು ವಿನ್ಯಾಸದ ಉದ್ದಿಮೆಯಲ್ಲಿ ಗಂಡಸರ ಟಾಯ್ಲೆಟಿನಲ್ಲಿ ಯೂರಿನಲುಗಳೆದುರಿನ ಗೋಡೆಗೆ ಟೈಲು ಹಚ್ಚುವ ಬದಲು ಮ್ಯೂರಲು ಹರವಿದರೆ ಹೇಗೆ? -ಅಂತೊಂದು ವಿಚಾರವಾಯಿತಂತೆ. ಅದರ ಫಲಶೃತಿಯೇ ಕೊನೆಯ ಚಿತ್ರ. ಪರಿಣಾಮ? ಟಾಯ್ಲೆಟು ಹೊಕ್ಕ ಗಂಡಸರು ಮೊದಲೇಟಿಗೆ ಕಕ್ಕಾವಿಕ್ಕಿಯಾಗಿ, ಮೆಲ್ಲಗೆ ಸುಧಾರಿಸಿಕೊಂಡು, ನಿಧಾನವಾಗಿ ಪರಸ್ಪರ ನಗು ವಿನಿಮಯಿಸಿ, ಕೊನೆಗೆ ಮಾತಿಗಿಳಿದು ಗುಲ್ಲೆಬಿಸುತ್ತಾರಂತೆ!! ಟಾಯ್ಲೆಟಿನಂತಹ ಟಾಯ್ಲೆಟಿನಲ್ಲೂ ಈಗ ಕೇಕೆ, ಜೀವನೋತ್ಸಾಹ.

ಈ ಈಮೇಲು ಕಳಿಸಿದ ಗೆಳತಿ ಹೀಗೆ ಅಡಿಯೊಕ್ಕಣೆಯಿಟ್ಟಿದ್ದಳು.

…and Vastarey, you men say- women don’t have a sense of humour… Send this to all the gal’s in your life that need a smile and also to the guys you think can take having a little fun poked at them sportively…

 

and I wish they are all alive!! ಎಂದು ಇದನ್ನೋದಿದ ಗೆಳೆಯನೊಬ್ಬ ಉದ್ಗರಿಸಿದ.  ಚೆನ್ನಲ್ಲವೆ ಈ ಚನ್ನಿಗನ ಚಪಲ?

ಇವಿಷ್ಟನ್ನೂ ನೀವು ಓದಿದ್ದರೆ, ನೋಡಿದ್ದರೆ ಏನನಿಸಿತೆಂದು ಒಂದೆರಡು ಸಾಲು ಕೀಲಿಸಿ. ನಿಮ್ಮ ಹೆಸರಿನೊಟ್ಟಿಗೆ. ಯಾಕೋ ಈ ಕೆಂಡಸಂಪಿಗೆ ನಿಮ್ಮ ಉವಾಚಗಳಿಲ್ಲದೆ ಬೋರೆನಿಸುತ್ತಿದೆ. ಅಂದಹಾಗೆ… ಕಡೆಯ ಚಿತ್ರದೊಳಗಿನ ಭಿತ್ತಿಯಲ್ಲಿ ಎಡದಿಂದ ಎರಡನೆಯ ತರಳೆ ಟೇಪು ಹಿಡಿದು ಏನು ಹವಣಿಸಿದ್ದಾಳೆ ಗೊತ್ತೋ?!