ಅಭಿಜ್ಞಾನ

ಕಣ್ವಾಶ್ರಮದಂಗಳದಲಿ
ಕಾದ ಶಕುಂತಲೆಯ ಮನಸು
ಶಚೀತೀರ್ಥದಾಳದ ಮೀನೊಡಲಲಿ
ಮಿಂಚುವ ಉಂಗುರದಂತಹ ಆತ್ಮ
ಸುಮ್ಮನೆ ಸುಟ್ಟೊ ಕೊಳೆತೋ
ಹೋಗಿಬಿಡುವ ದೇಹದ ವೇಷ ಮೇಲೆ
ರಕ್ತ ಸಂಚಲನದ ಹಾಗೇ ಕನಸುಗಳನು
ಮೆತ್ತಿಕೊಂಡ ಚರ್ಮ
ನಾಡಿಯಲಿ ಮತ್ತೆ ಯಾರು ಸುರಿಯಬೇಕು
ಕಾರುಣ್ಯದ ಧಾರೆಯ?
ಎಳೆ ಮಗುವಿನ ಉಸಿರೊಳಗಿನ ಕಂಪಿನಂತಹ
ಎಳೆಯ ದುಷ್ಯಂತನ ಎದೆಗೆ?

ಭೃಂಗವೊಂದು ಹಾರಿಬಂದು ಕಿವಿಯಲಿ ಸುರಿದು ಹೋದ ದನಿ
ಮಹಾಕಾವ್ಯದ ನದಿಯಾಗಿ
ಕಣ್ವಾಶ್ರಮದ ಕನಸೊಂದು
ಅಶ್ವಾರೋಹಿಯ ಹಿಂಬಾಲಿಸಿ,
ಅಶ್ವಾರೋಹಿಯ ಮನಸು
ಕಣ್ವಾಶ್ರಮದ ಮೊಗ್ಗನು ಹಿಗ್ಗಿಸಿ
ಇಟ್ಟ ಹೆಜ್ಜೆಯು ಗೀಚಿದ್ದೆಲ್ಲ ನಿಟ್ಟುಸಿರ ಚಿತ್ರ
ಇವಳ ಬೆರಳಿಗೆ ಉಂಗುರದ ವಿರಹ
ಅವನ ಮೆದುಳಿಗೆ ನೆನಪಿನ ಬರ
ಮಾತಾದರೂ ಬರಬಾರದಿತ್ತೆ ನಿಮಗೆ
ಕೋಗಿಲೆ ನವಿಲು ಗಿಳಿ ಗೊರವಂಕ
ಹಸು ಜಿಂಕೆ ಹುಲ್ಲು ಹಂಸ ಮತ್ತು ಆಗಸವೆ
ಅವಳ ಹಣೆಬೊಟ್ಟೇ ಇವನ ಬಿಲ್ಲ ಹೆದೆಯೇ
ನಿಷ್ಕರುಣ ಶಬ್ದಗಳು ಮಾತು ಬಿಟ್ಟಿವೆ
ಕೂಗಿ ಹೇಳುವವರಾರು ದುಷ್ಯಂತನಿಗೆ ಆಗಾಗ
ಕಣ್ವಾಶ್ರಮಕಥನವ!
ಭೃಂಗ ಕಿವಿಯಲಿ ಅಂದು
ಏನು ಉಸಿರಿ ಹಾರಿ ಹೋಯಿತೋ ಏನೋ
ಒಂದಾದ ಅವರಿಬ್ಬರ ಚರಿತೆಯಲಿ
ಅಗಲಿಕೆಯದ್ದೆ ಮೆರವಣಿಗೆ
ಸಾಸಿವೆಯಂತಹ ಮಿಲನಕೆ
ಸಮುದ್ರದ ಪರಿತಾಪ
ನಿರೀಕ್ಷೆಗಳು ಬರೆದಿಟ್ಟು ಹೋದ ಕರಿಮೋಡ
ಸಾಲಿಗಳಲಿ ಆಗಾಗ ಮಿಂಚುವ
ನಗೆ ಭರವಸೆಯ ಬೆಳಕು
ಕಣ್ವಾಶ್ರಮದಲಿ ಅದೇನ ಹುಡುಕುತ್ತ ಬಂತೋ
ಈ ಈ ಭೃಂಗ
ಮಹಾಕಾವ್ಯದ ಮೊದಲಕ್ಷರವ ಮೀಟಿತು
ಮುಚ್ಚಿತೆರೆವ ಕಣ್ಣರೆಪ್ಪೆಗಳನು
ಕಾಲದ ಕಡಲಲ್ಲಿ ತೋಯಿಸಿತು
ನೆನಪನ್ನು ಹೊತ್ತು ಸಾಗಬಹುದಲ್ಲದೆ
ಮರೆವನ್ನು ಬಿತ್ತಿ ಬಾಳಲಾಗದು

ಅವನ ಕರವಸ್ತ್ರ

ಅವನು ಸಂತೆಯ ಹುಸಿಯನು
ಬಿಡಿಸಿ ಹೇಳಲಿಕೆ ಸಂತನಾದ
ಮುರಿದು ಬೀಳುವ ಟೊಂಗೆಯ ಕೆಳಗೆ
ಕುಳಿತು ಧ್ಯಾನವ ಬೆಳೆದ
‘ಇಲ್ಲಿ ಕಣ್ಣೀರನು ಒರೆಸಲಾಗುವುದು’ ಎಂಬ ಫಲಕ
ನೇತಾಕಿಕೊಂಡು ಕೂತು ನಗುವ ಬಿಕರಿಗಿಟ್ಟ
ಬಂದು ಹೋದವರೆಲ್ಲ ಸಂಕಟಗಳ ತಲೆಮೇಲೆ ಸುರಿದು ಹೋದರು
ಹಗಲಿರುಳುಗಳನು ಕಳೆದುಕೊಂಡವನ ಪಾಲಿಗೆ
ಹೃದಯವು ಕಾದ ಕುಲುಮೆ
ಆಗಾಗ ಬೆಳದಿಂಗಳ ಕೊಳ
ರಾಶಿ ಬಿದ್ದ ನೋವುಗಳನೆಲ್ಲ ಕೊಳದಲಿ ಅದ್ದಿಯೋ
ಕುಲುಮೆಯಲಿ ಸುಟ್ಟೊ ಒಣಗಿಸಿ ಪುಡಿಮಾಡಿ ಕುಡಿದ

ಅವನು ಸಂತೆಯ ಹುಸಿಯನು ಬಿಡಿಸಲು
ಕೂತು ಸಂತನಾದ
ಪ್ರೀತಿಯನು ಹಾಸಿಕೊಟ್ಟು ಒಂಟಿಯಾದ
ಅವನ ಕರವಸ್ತ್ರದಲಿ ರಂಗು ರಂಗು ಚಿತ್ತಾರಗಳೆಲ್ಲ
ಕರಗಿ ಹೋಗಿವೆ ಬರೀ ಕಣ್ಣೀರು ಅಂಟಿವೆ
ಬಂದು ಹೋದವರ ಎದುರು ಕೂತವರ
ಬಯಸಿ ನಿಂದವರ ಕಣ್ಣ ಒರೆಸಿ ಒರೆಸಿ ಅಪ್ಪಿ
ಸಾಂತ್ವನ ಹರಿಸಿ
‘ಇಲ್ಲಿ ಪ್ರತಿ ನೋವಿಗೂ ಮದ್ದು ಕೊಡಲಾಗುತ್ತದೆ’
ಫಲಕದಡಿ ತನ್ನ ನೋವನ್ನು ಹುಗಿದ
ಯಾವತ್ತೂ ಒಣಗದ ಅವನ ಕರವಸ್ತ್ರ
ಈಗ ಆಕಾಶದ ಹಾಗೆ ಅಗಲವಾಗಿದೆ
ಆಹಾ!
ನೋಡಿ ಎಷ್ಟು ಚೆನ್ನಾಗಿ ನಾಟಕ ಮಾಡುತ್ತಾನೆ
‘ಕಣ್ಣಲಿ ಕಸ ಬಿದ್ದಿದೆ’ ಎಂದು ತನ್ನ ಅಳುವನ್ನು ಮರೆ ಮಾಚುತ್ತಾನೆ
ಮತ್ತದೇ ಶುದ್ಧಾಂತಃಕರಣವನು ಹಂಚುತ್ತಾನೆ

ಈಗ ಅವನ ಕರವಸ್ತ್ರದಲ್ಲಿ ಅವನ ಕಣ್ಣೀರಿಗೆ ಜಾಗವಿಲ್ಲ