ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಅನುವಾದಕರು ತಮ್ಮ ಕವಿತೆಯನ್ನು ಇ-ಮೇಲ್ ಮೂಲಕ [email protected] ಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ದಿನಕ್ಕೊಂದು ಕವಿತೆಯ ಈ ದಿನ ವಾಸುದೇವ ನಾಡಿಗ್ ಬರೆದ ಕವಿತೆ.

ಕವಿತೆಗೆ

ನೆಚ್ಚಿಕೊಂಡು ಕೂತಿದ್ದೇನೆ
ನಿನ್ನನು
ಪ್ರಾಣಧಾರಣೆ ಮಾಡಲಾಗದ
ಕವಿತೆಯೇ,
ಕಂಡ ವಸ್ತುಗಳೊಳಗೆಲ್ಲ ಹೊಕ್ಕು
ಉಕ್ಕಿಸುವ ಭಾವ
ನನ್ನದಲ್ಲ ಎನಿಸುತಿರುವಾಗ
ಹೇಗೆ ನೆಚ್ಚಲಿ
ನಿನ್ನ
ಪ್ರಾಣಧಾರಣೆ ಮಾಡಲಾಗದ
ಕವಿತೆಯೇ

ತುಂಬು ಗರ್ಭಿಣಿಯ ನಾಟಕ
ಮೋಡ
ತೊಟ್ಟು ನೀರ ತೊಟ್ಟಿಕ್ಕಿಸುತ್ತಿದೆ
ಗಾಳಿಗೆ
ಹೆದರಿ ಕಕ್ಕಾಬಿಕ್ಕಿ ಬಾಗಿಲ
ಹಿಂದೆ
ಅಪ್ರಾಪ್ತ ಕ್ಷಣಗಳನ್ನು
ಜಪಿಸಿದೆ
ಯಾವ ಕಾಲಗರ್ಭದ ಶಾಪವೋ
ಅಕಾಲ ಪಾತಗಳಲಿ
ಗರ್ಭ ಅಶಕ್ತವಾಗಿದೆ!

ಪಕಳೆ ಅಗಲಿಸುವುದು
ಬೀಜಕ್ಕ ಬೇರ
ಪೋಣಿಸುವುದು
ನೋವುಗಳು ನುಸುಳದಂತೆ
ಹೃದಯದ ಗೋಡೆ
ಎತ್ತರಕ್ಕೇರಿಸುವುದು
ಸಾಧ್ಯವಾಗದು
ಕವಿತೆಯೇ
ನಿನ್ನನೇ ನೆಚ್ಚಿಕೊಂಡು
ಕೂತಿದ್ದೇನೆ.

ಮುಚ್ಚಲಾರದ ರೆಪ್ಪೆಗಳು
ನಡುವೆ
ಅಸೀಮ ಕಡಲು
ದಕ್ಕಿದ ಭಾವದಲೆಗಳು
ಪರಕೀಯವಾಗಿ ಕಾಡಲು
ನಿನ್ನನೇ
ನೆಚ್ಚಿಕೊಂಡು ಕೂತಿದ್ದೇನೆ
ಪ್ರಾಣಧಾರಣೆ ಮಾಡಲಾಗದ
ಕವಿತೆಯೇ.