ಹತ್ತಾರು ವರ್ಷದ ಕೆಳಗೆ ಬೆಳಗಾಂವಿಗೆ ಹೋಗಿ ಶೇಕ್ಸ್‌ಪಿಯರನ ಹ್ಯಾಮ್ಲೆಟ್ ನಾಟಕವನ್ನು ಕನ್ನಡದಲ್ಲಿ ಮಾಡಿದ್ದೆವು. ಬೆಳಗಾಂವಿಯ ಜನ ನೋಡಿ ಖುಷಿಪಟ್ಟಿದ್ದರು. ಚೆನ್ನಾಗಿ ಊಟ ಹಾಕಿ, ಸುತ್ತಿಸಿ, ಖುಷಿಯಾಗುವಂತೆ ನೋಡಿಕೊಂಡಿದ್ದರು. ನಾವು ಬೆಳಗಾವಿಯ ಮರಗಳನ್ನು ನೋಡಿ ಚಕಿತರಾಗಿದ್ದೆವು. ಇಲ್ಲೂ ಇಷ್ಟೊಂದು ತಂಪಾದ ಮರಗಳಿವೆಯಲ್ಲಾ ಎಂದು ಮೂಗಿನ ಮೇಲೆ ಬೆರಳಿಟ್ಟು ನಮ್ಮ ಅಜ್ಞಾನಕ್ಕೆ ನಾವೇ ನಾಚಿದ್ದೆವು. “ಹೇಯರ ಕಟಿಂಗ” ಎಂಬಂತ ಅಂಗಡಿಗಳ ಬೋರ್ಡುಗಳನ್ನು ನೋಡಿ ಗಹಗಹಿಸಿ ನಗುತ್ತಾ ಅಲೆದಿದ್ದೆವು. ಅಲ್ಲಿ ಈಗ ವಿಶ್ವ ಕನ್ನಡ ಸಮ್ಮೇಳನ ನಡೆಯುತ್ತಿದೆ. ಇಂಗ್ಲೀಷಿನ ನಾಟಕವೊಂದು ಕನ್ನಡದಲ್ಲಿ ಜನರನ್ನು ಮುಟ್ಟುವುದನ್ನು ನೋಡಿ, ಆಧುನಿಕ ಮನುಷ್ಯರಾಗಿ ನಾವು ಹಂಚಿಕೊಳ್ಳುವುದು ಬೇಕಷ್ಟಿದೆ ಎಂದು ನನ್ನ ಅರಿವಿಗೆ ತಂದುಕೊಂಡ ಕಾಲವದು.

ಮೈಸೂರಿನ ಮೊದಲ ವಿಶ್ವ ಸಮ್ಮೇಳನಕ್ಕೆ ನಾನು, ನನ್ನ ಅಣ್ಣ ಬೆಂಗಳೂರಿನಿಂದ ಮೋಟರು ಬೈಕಲ್ಲಿ ಹೋಗಿದ್ದು ನೆನಪಾಗುತ್ತಿದೆ, ಅರಮನೆಯ ಅಂಗಳದಲ್ಲಿ ರಣಬಿಸಲಲ್ಲಿ ಕೂತು ಭಾಷಣಗಳನ್ನು ಕೇಳಬೇಕೆಂದು ನಮಗೆ ಏಕೆ ಆಸೆಯಾಗಿತ್ತೋ ಗೊತ್ತಿಲ್ಲ. ಬಹುಶಃ ಕನ್ನಡದ ಒಂದು ಅತ್ಯಂತ ಮುಖ್ಯ ಸಂಭ್ರಮದಲ್ಲಿ ಪಾಲುದಾರರಾಗುತ್ತಿದ್ದೇವೆಂಬ ಹುಮ್ಮಸ್ಸು ನಮ್ಮೊಳಗೆ ತಕತಕ ಅನ್ನುತ್ತಿದ್ದಿರಬೇಕು. ಆ ಹೊತ್ತಿಗಾಗಲೇ, ಉತ್ತರ ಕರ್ನಾಟಕದಲ್ಲಿ ಬರಗಾಲ ಜನರನ್ನು ಕೊಲ್ಲುತ್ತಿತ್ತು. “ಇಂತಹ ಹೊತ್ತಲ್ಲಿ ವಿಶ್ವ ಕನ್ನಡ ಸಮ್ಮೇಳನ ಸರಿಯೆ?” ಎಂಬ ಕೂಗು ಎದ್ದಿತ್ತು. ಶಿವರಾಮ ಕಾರಂತರು ತಮ್ಮ ಅಧ್ಯಕ್ಷ ಭಾಷಣದಲ್ಲಿ – “ಬರಗಾಲ ಎಂದು ಮಸಾಲೆ ದೋಸೆ ತಿನ್ನುವುದನ್ನು ಬಿಡುತ್ತೀರ?” ಎಂದು ಎಸೆದಿದ್ದ ಸವಾಲು ಆ ಅರಮನೆಯ ಡೌಲಿನ ಹಿನ್ನೆಲೆಯಲ್ಲಿ ಕೇಳಲು ರೋಚಕವಾಗಿತ್ತು. ಆದರೆ ಒಬ್ಬ ಮನುಷ್ಯ ಹೊಟ್ಟೆಗೆ ತಿನ್ನುವುದಕ್ಕೂ – ಒಂದು ಸರ್ಕಾರ ಹಣ ಖರ್ಚು ಮಾಡುವುದಕ್ಕೂ ತಾಳೆ ಹಾಕುವುದು ಸರಿಯಲ್ಲ ಎಂದು ಅನಿಸಿದ್ದರೂ – ಶಿವರಾಮ ಕಾರಂತರು ನಮ್ಮ ಮೆಚ್ಚಿನ ಲೇಖಕರಾದ್ದರಿಂದ ಅದನ್ನು ನುಂಗಿಕೊಂಡಿದ್ದೆವು.

ಒಂದು ಕಡೆ ಕುವೆಂಪುರವರ ವಿಶ್ವ ಮಾನವ ಸಂದೇಶ ಕೇಳಿ ಗೊಂದಲವೋ ಗೊಂದಲ. ವಿಶ್ವ ಮಾನವನಾಗುವುದು ಎಷ್ಟು ಕಷ್ಟವಲ್ಲವೆ ಎಂದು ಅವರ ಪಟ್ಟಿನೋಡಿ ಅನಿಸುತ್ತಿತ್ತು. ಯಾವುದೋ ಗುಡ್ಡದ ಗುಹೆಯಲ್ಲಿ ಕೂತು, ತಪಸ್ಸು ಮಾಡಿ, ಗಡ್ಡ ಬೆಳೆಸಿಕೊಂಡು ಇಳಿದು ಬರಬೇಕಾಗುತ್ತದೆ ಎಂಬ ಹೆದರಿಕೆ ಮುತ್ತುತ್ತಿತ್ತು. ಇನ್ನೊಂದು ಕಡೆ ಶಿವರಾಮ ಕಾರಂತರು, “ನಮ್ಮ ವಿಶ್ವ ಎಂದರೆ, ನಾವು ನೋಡಿದ ಜನ, ಊರು ದಾರಿ ಅಷ್ಟೆ!” ಎನ್ನುವುದನ್ನು ಕೇಳಿದಾಗ ನಮ್ಮ ಓದು ಚಿಗುರಿಸುತ್ತಿದ್ದ ಕಲ್ಪನೆಗಳ ಮೋಜನ್ನೇ ಅದುಮಿದಂತೆ, ಕಿತ್ತುಕೊಂಡಂತೆ ಸಂಕಟವಾಗುತ್ತಿತ್ತು. ಈ ಎರಡು ತುದಿಗಳ ನಡುವೆ ಯಾವುದನ್ನು ನೆಚ್ಚಬೇಕೆಂದು ಗೊತ್ತಾಗದೆ ತಳಮಳವಾಗಿದ್ದು ಈಗ ನೆನಪಾಗುತ್ತಿದೆ.

ಅದೆಲ್ಲಾ ನನಗೆ ಏಲ್ಲಿ ಬಂದು ನಿಂತಿದೆ ನೋಡಿ. ಈಗ ಹೊರನಾಡಿನಲ್ಲಿ, ಮನೆಯಿಂದ ಹೊರಗೆ ಕಾಲಿಟ್ಟ ಕೂಡಲೇ ನಮ್ಮ ಕನ್ನಡ ಜಗತ್ತು ಮಾಯವಾಗುತ್ತದೆ. ಆದರೆ ಒಳಜಗತ್ತಿನ ಒಂದು ಸಂಗತಿ ಮಾತ್ರ ದಿಟವಾಗಿರುತ್ತದೆ. ಎಷ್ಟೇ ವರ್ಷವಾಗಿದ್ದರೂ ಕೂಡ, ಕೆಲವು ದಿನವಹಿ ನುಡಿಗಟ್ಟುಗಳನ್ನು ಬಿಟ್ಟರೆ, ಉಳಿದೆಲ್ಲವನ್ನೂ ತಲೆಯಲ್ಲಿ ಕನ್ನಡದಿಂದ ತರ್ಜುಮೆ ಮಾಡಿಯೇ ಆಡುತ್ತಿರುತ್ತೇವೆ. ಅಷ್ಟರವರೆಗೆ ಮನಸ್ಸು ಕನ್ನಡವಾಗಿ ಉಳಿಯದೇ ಬೇರೆ ದಾರಿ ಇರುವುದಿಲ್ಲ. ಅಲ್ಲಿ ಕನ್ನಡದ ನೆಲದಲ್ಲಿ – ಕನ್ನಡವನ್ನು ಉಳಿಸುವ ಭರಾಟೆ ನೋಡುವಾಗ ಒಂದು ಸಂಗತಿ ಹೇಳಬೇಕು ಅನಿಸುತ್ತದೆ. ಇಲ್ಲಿ ಹೊರನಾಡಿನಲ್ಲಿರುವ ನಮಗೆ ಕನ್ನಡ ನಮ್ಮನ್ನು ಉಳಿಸುವ ಸಾಧನವಾಗಿರುತ್ತದೆ. ಬಾಲ್ಯದ ಹಾಗು ಹರೆಯದ, ಪ್ರೀತಿ, ಪ್ರೇಮ, ಉತ್ಸಾಹ, ಹುರುಪು ಇವೆಲ್ಲವನ್ನೂ ಬದುಕಿನಲ್ಲಿ ಉಳಿಸಿಕೊಳ್ಳುವ ಸಾಧನವಾಗಿರುತ್ತದೆ. ಸಮುದಾಯವಾಗಿ ನಮ್ಮತನವನ್ನು ಉಳಿಸಿಕೊಳ್ಳುವ ಸಾಧನವಾಗಿರುತ್ತದೆ.

ಮೊನ್ನೆ ಸಿಡ್ನಿಯ ರಸ್ತೆಯಲ್ಲಿ ಹೆಣ್ಣು ಮಗಳೊಬ್ಬಳು ಮೋಬೈಲಿನಲ್ಲಿ ಮಾತಾಡುತ್ತಾ ಹೋಗುತ್ತಿದ್ದಳು. ಭಾರತದಲ್ಲಿರುವ ತನ್ನ ಅಮ್ಮನೊಡನೆ ಕನ್ನಡದಲ್ಲಿ ಮಾತಾಡುತ್ತಿರುವುದು ಕೇಳಿ ಒಂದು ಕ್ಷಣ ನಿಂತಲ್ಲೇ ನಿಂತುಬಿಟ್ಟೆ. ಆಶ್ಚರ್ಯವೇಕೆ ಆಗಬೇಕು ಅನಿಸಿದರೂ, ಮಾಯವಾದ ಜಗತ್ತು ಧುತ್ತನೆ ಎದುರಾಗಿ ಬೆರಗಾಗಿಸಿದ್ದನ್ನು ಅಲ್ಲಗಳೆಯಲಾರೆ. ಸಾವಿರಾರು ಮೈಲು ದೂರದಿಂದ “ಅಮ್ಮಾ ಕೇಳು, ಅಮ್ಮಾ ಹೇಳು” ಎಂದು ಫೋನಲ್ಲಿ ಬೇಕೆಂದಾಗ ಮಾತಾಡಬಲ್ಲ ಯುಗದಲ್ಲಿ ನಾವೀಗ ಇರುವುದು ದಿಟ. ಹಾಗಿರವಾಗ ಈ “ವಿಶ್ವ” ಪದದ ಅರ್ಥವನ್ನು ಮತ್ತೆ ವಿವರಿಸಿಕೊಳ್ಳಬೇಕಾದ ಅನಿವಾರ್ಯತೆ ನಮಗೆಲ್ಲಾ ಇದೆ. ತೀರ ಭೌತಿಕವಾಗಿ ಕಟ್ಟಿ ಹಾಕಿಕೊಳ್ಳದಂತೆ, ತೀರ ಆಧ್ಯಾತ್ಮಿಕವಾಗಿ ಕಳೆದು ಹೋಗದಂತೆ ಕನ್ನಡ ತನ್ನ “ವಿಶ್ವ”ವನ್ನು ನಿಭಾಯಿಸಬೇಕಾಗಿದೆ. ಅಂತಹ ಕೆಲಸ ಈ ಸಮ್ಮೇಳನದ ಗೌಜಿನಲ್ಲಿ ಆಗುತ್ತದೆ ಅನ್ನುವ ಭರವಸೆ ನನಗಿಲ್ಲ. ಸಂಭ್ರಮ ಡೌಲು ಆಗಾಗ ಬೇಕು. ಅದು ಮುಗಿದ ಮೇಲೆ ಅದರಿಂದ ಹೊಸತೇನಾದರೂ ಹುಟ್ಟುವಂತಿರಬೇಕು – ಇಲ್ಲದಿದ್ದರೆ? “ಸಂಭ್ರಮ ಡೌಲೇ ಅಂತಿಮವಾಗುವ ವಿಲಾಸವನ್ನು ನಾವು ಹೊರಬಲ್ಲೆವೆ?” ಎಂದು ಬರಗಾಲದ ಅಂದಿನಂತೆ ಇಂದೂ ಕೇಳಿಕೊಳ್ಳಬೇಕು.