ಕಥೆಗಾರರಾಗಿ ನಿಲುವು ತೆಗೆದು, ಓದುಗರೊಂದಿಗೆ ಕಾಲ್ಪನಿಕ ವಾದಕ್ಕಿಳಿಯುವುದಕ್ಕಿಂತ, ವಿಷಯವನ್ನು ಸಮರ್ಥವಾಗಿ ಮಂಡಿಸಿ ಓದುಗರ ಮನದಲ್ಲಿಯೇ ಪ್ರಶ್ನೆಗಳನ್ನು ಹುಟ್ಟುಹಾಕುವಂತಹ ತಂತ್ರಗಾರಿಕೆಯನ್ನು ಸ್ವಾಮಿ ತೋರುತ್ತಾರೆ. ಆ ತಂತ್ರಗಾರಿಕೆಗೆ ಪೂರಕವಾದ ಭಾಷೆಯೂ ಅವರಲ್ಲಿದೆ. ಘಟನೆಗಳನ್ನು ಜೋಡಿಸುವ ಕ್ರಮವೂ ಇದೆ. ಓದುಗನ ಮನಸ್ಸಿನಲ್ಲಿ ಒಂದು ಚಿತ್ರಣವುಂಟಾಗುವಂತೆ ಮಾಡುವ ಕಲೆಗಾರಿಕೆಯೂ ಇದೆ. ಹೀಗಾಗಿ ಸ್ವಾಮಿಯವರು ಕುತೂಹಲದ ಮತ್ತು ಸಮರ್ಥವಾದ ಕಥೆಗಾರರಾಗಿ ನಮ್ಮ ಮುಂದೆ ನಿಲ್ಲುತ್ತಾರೆ.ಅವರ ಕಥೆಗಳಲ್ಲಿ ವಸ್ತು ವೈವಿಧ್ಯವೂ ಇದೆ
ಸ್ವಾಮಿ ಪೊನ್ನಾಚಿ ಕಥಾ ಸಂಕಲನಕ್ಕೆ ಎಂ.ಎಸ್.ಶ್ರೀರಾಮ್ ಮುನ್ನುಡಿ.

 

ಛಂದ ಪುಸ್ತಕ ಬಹುಮಾನಕ್ಕೆ ಪಾತ್ರವಾದ ಸ್ವಾಮಿ ಪೊನ್ನಾಚಿಯವರ ಕಥೆಗಳು ನಮಗೆ ಒಂದು ವಿಭಿನ್ನ ಮತ್ತು ಅದ್ಭುತ ಜಗತ್ತನ್ನು ತೆರೆದುಕೊಡುತ್ತವೆ. ಒಂದು ಮ್ಯೂಸಿಯಂನಲ್ಲಿ ಇರಬಹುದಾದ ಅನೇಕ ಕೋಣೆಗಳಲ್ಲಿ ಕಾಪಿಟ್ಟಿರುವ ಕಲಾವಸ್ತುವಿನಂತ ಅವರ ಕಥೆಗಳಲ್ಲಿ ಹೊಸತನವೂ, ಭಿನ್ನತೆಯೂ ಇದೆ. ಒಂದು ಕಥೆಯನ್ನು ಸಮರ್ಥವಾಗಿ ಹೆಣೆಯುವ ಕೌಶಲ, ಭಾಷೆಯ ಸಮರ್ಪಕತೆ, ಭಾಷೆಯ ಮತ್ತು ಕಥನ ತಂತ್ರದ ಮೇಲಿನ ಹಿಡಿತ ಮತ್ತು ವಿಚಾರಗಳ ಪ್ರಬುದ್ಧತೆ, ಈ ಎಲ್ಲವನ್ನು ಸ್ವಾಮಿ ತಮ್ಮ ಮೊದಲ ಕಥಾಸಂಕಲನದಲ್ಲೇ ತೋರುತ್ತಾರೆ. ಕನ್ನಡದ ಕಥಾಲೋಕಕ್ಕೆ ಹೊಸತನವನ್ನು ತರುತ್ತಿರುವ ಸ್ವಾಮಿಯವರನ್ನು ನಾವು ತೆರೆದ ಹೃದಯದಿಂದ ಸ್ವಾಗತಿಸೋಣ.

ಸ್ವಾಮಿಯವರು ತಮ್ಮ ಕಥೆಗಳಲ್ಲಿ ಜಟಿಲ ವಿಷಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ. ಅವರ ಕಥೆಗಳಲ್ಲಿ ಆಧುನಿಕತೆ, ಸಹಜ ಬದುಕು, ನೈತಿಕತೆ, ಪರೋಪಕಾರ, ಸ್ವಾರ್ಥ – ಈ ಎಲ್ಲವೂ ವಿಚಿತ್ರ ರೀತಿಯಲ್ಲಿ ಮುಖಾಮುಖಿಯಾಗಿ ನಮ್ಮ ಮುಂದೆ ನಿಲ್ಲುತ್ತವೆ. ಸಾಮಾನ್ಯವಾಗಿ ಈ ರೀತಿ ವಸ್ತುಗಳನ್ನು ಕಥೆಗಾರ ಆಯ್ತು ಕಥೆ ಹೆಣೆಯುವಾಗ ಅದರಲ್ಲಿ ಕಥೆಗಾರನ ನಿಲುವು ಸೂಕ್ಷ್ಮವಾಗಿ ನಮಗೆ ಗೋಚರಿಸುತ್ತದೆ. ಪತ್ರಿಕೆಗಳಿಗೆ ರಾಜಕಾರಣಿಗಳನ್ನು ಸಂದರ್ಶನ ಮಾಡುವ ಪತ್ರಕರ್ತರು ಎಷ್ಟೇ ತಟಸ್ಥರೆಂದು ಕಂಡರೂ, ಅವರು ಸಂದರ್ಶನಕ್ಕೆ ಕರೆಯುವ ಅತಿಥಿಗಳು, ಅವರನ್ನು ಕೇಳುವ ಪ್ರಶ್ನೆಗಳು, ಪ್ರಶ್ನೆಗಳನ್ನು ಕೇಳುವ ಪರಿಯಲ್ಲಿಯೇ ನಮಗೆ ಸೂಕ್ಷವಾಗಿ ಪತ್ರಕರ್ತರ ನಿಲುವು ಮತ್ತು ಒಲವು ಯಾವಕಡೆಗಿದೆಯೆಂದು ತಿಳಿಯುತ್ತದೆ. ಹಾಗೆ ನೋಡಿದರೆ ಯಾರೂ ತಟಸ್ಥರಲ್ಲ. ಆದರೆ ಕಥೆಗಾರನ ಸವಾಲು ಇರುವುದೇ ಇದರಲ್ಲಿ ತನ್ನ ನಿಲುವು ಒಲವಿನ ಬಗ್ಗೆ ಸೂಚನೆ ನೀಡದೆಯೇ, ಆದರೂ ಆಸಕ್ತಿಕರವಾಗಿ ಕಥೆಯನ್ನು ಹೆಣೆದು, ಓದುಗರು ತಮ್ಮ ನಿಲುವನ್ನು ತಮ್ಮಲ್ಲೇ ತೆಗೆದುಕೊಳ್ಳುವಂತೆ ಮಾಡುವುದು ಸುಲಭದ ಮಾತಲ್ಲ. ಸ್ವಾಮಿಯವರ ಕಥೆಗಳು ಈ ಕೆಲಸವನ್ನು ಮಾಡುತ್ತವೆ.

(ಸ್ವಾಮಿ ಪೊನ್ನಾಚಿ)

ಕಥೆಗಾರರಾಗಿ ನಿಲುವು ತೆಗೆದು, ಓದುಗರೊಂದಿಗೆ ಕಾಲನಿಕ ವಾದಕ್ಕಿಳಿಯುವುದಕ್ಕಿಂತ, ವಿಷಯವನ್ನು ಸಮರ್ಥವಾಗಿ ಮಂಡಿಸಿ ಓದುಗರ ಮನದಲ್ಲಿಯೇ ಪ್ರಶ್ನೆಗಳನ್ನು ಹುಟ್ಟುಹಾಕುವಂತಹ ತಂತ್ರಗಾರಿಕೆಯನ್ನು ಸ್ವಾಮಿ ತೋರುತ್ತಾರೆ. ಆ ತಂತ್ರಗಾರಿಕೆಗೆ ಪೂರಕವಾದ ಭಾಷೆಯೂ ಅವರಲ್ಲಿದೆ. ಘಟನೆಗಳನ್ನು ಜೋಡಿಸುವ ಕ್ರಮವೂ ಇದೆ. ಓದುಗನ ಮನಸ್ಸಿನಲ್ಲಿ ಒಂದು ಚಿತ್ರಣವುಂಟಾಗುವಂತೆ ಮಾಡುವ ಕಲೆಗಾರಿಕೆಯೂ ಇದೆ. ಹೀಗಾಗಿ ಸ್ವಾಮಿಯವರು ಕುತೂಹಲದ ಮತ್ತು ಸಮರ್ಥವಾದ ಕಥೆಗಾರರಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಅವರ ಕಥೆಗಳಲ್ಲಿ ವಸ್ತು ವೈವಿಧ್ಯವೂ ಇದೆ. “ ಧೂಪದ ಮಕ್ಕಳು ” ಎನ್ನುವ ಕಥೆಯನ್ನೇ ತೆಗೆದುಕೊಳ್ಳೋಣ. ಈ ಕಥೆಯು ಒಂದೇ ಕಾಲಕ್ಕೆ ಅನೇಕ ಪದರಗಳನ್ನು ತೆರೆಯುತ್ತಾ ಹೋಗುತ್ತದೆ. ಒಂದೆಡೆ ಗಿರಿಜನರ ಮಕ್ಕಳ ಮುಖಾಮುಖಿ ಆಧುನಿಕ ಜಗತ್ತಿನೊಂದಿಗೆ ಆಗುತ್ತದೆ. ಶಾಲೆ – ವಿದ್ಯೆ ಮತ್ತು ಬದುಕಿಗೆ ಬೇಕಾದ ಆದಾಯ ಆರ್ಜನೆಯ ತಾಕಲಾಟವೂ ಇದೆ. ಕಳ್ಳತನವೆಂದು ಶಿಷ್ಟಜಗತ್ತು ಕರೆಯುವುದನ್ನು ಬೇರೊಂದು ರೀತಿಯಲ್ಲಿ ಅರ್ಥೈಸಬಹುದೆಂಬ ಸಾಧ್ಯತೆಯೂ ಇದೆ. ಈ ಎಲ್ಲಕ್ಕಿಂತ ಮಿಗಿಲಾಗಿ ಕಳುವಾದ ಮೊಬೈಲು ( ಬಹುಶಃ ವೈಬ್ರೇಷನ್ ಮೋಡಿನಲ್ಲಿರುವುದರಿಂದ) ಅಲುಗಾಡುವುದು ದೆವ್ವಭೂತಗಳ ನೆನಪನ್ನು ಒಂದೆಡೆ ತಂದರೆ, ಮತ್ತೊಂದೆಡೆ “ಸಾರೇ ಜಹಾಂ ಸೆ ಅಚ್ಚಾ” ಅನ್ನುವ ರಿಂಗ್ ಟೋನಿನ ವಿಡಂಬನೆಯೂ ನಮ್ಮನ್ನು ತಟ್ಟುತ್ತದೆ. ಹೀಗೆ ವಿದ್ಯೆ, ಧೂಪದ ಮಾರಾಟ, ಶಾಲೆ – ಆಟ, ಕಾಯಕ – ಕಲಿಕೆಗಳ ಮಧ್ಯೆ ಯಾವುದೇ ನಿಲುವನ್ನು ತೆಗೆದುಕೊಳ್ಳದೇ ಆದರೆ ಎಲ್ಲ ಆಯಾಮಗಳನ್ನೂ ಪ್ರಶ್ನಿಸುವ ಅವರ ಕಥನದ ಶೈಲಿ ನಿಜಕ್ಕೂ ಹೊಸತನದಿಂದ ಕೂಡಿದ್ದು , – ಇದೇ ಜಾಡಿನಲ್ಲಿ ಕಾಯಕಕ್ಕೆ ತಯಾರದ ವಯಸ್ಸಿಗೆ ಹುಟ್ಟುವ ಕಲಿಕೆಗೂ ಕಾಯಕಕ್ಕೂ ಇರುವ ಘರ್ಷಣೆಯನ್ನು ಮಾಯಿ ಎನ್ನುವ ಕಥೆಯೂ ಸಮರ್ಥವಾಗಿ ಗ್ರಹಿಸುತ್ತದೆ.

ಸ್ವಾಮಿಯವರ ಅನೇಕ ಕಾಳಜಿಗಳಲ್ಲಿ ಬಹುಶಃ ನಮ್ಮ ಒಟ್ಟಾರೆ ಬದುಕಿನಲ್ಲಿ ಶಾಲೆ – ಕಲಿಕೆಯ ಪಾತ್ರದ ಮಹತ್ವವೇನು ಎನ್ನುವುದರ ಅನ್ವೇಷಣೆಯೇ ಮಿಕ್ಕ ವಿಚಾರಗಳಿಗಿಂತ ಹೆಚ್ಚಿನ ಮಹತ್ವವನ್ನು ಪಡೆಯುತ್ತದೇನೋ. ಅವರ “ಶಿವನಜ್ಜಿ” ಕಥೆಯೂ ಶಾಲೆಯೊಂದರ ಆಸುಪಾಸಿನಲ್ಲೇ ಹೆಣೆಯಲಾಗಿದೆ. “ಶಿವನಜ್ಜಿ” ಕಥೆ, ಒಂದು ರೀತಿಯಿಂದ ಅಭಿವೃದ್ಧಿ, ಖಾಸಗೀ ಸ್ವಾತಂತ್ರ, ಸಾಮಾಜಿಕ ಹೊಣೆ, ಚಿಲ್ಲರೆ ರಾಜಕೀಯ, ಮೋಸ ಎಲ್ಲವನ್ನೂ ನಮ್ಮ ಮುಂದೆ ಬಿಚ್ಚಿಡುವ ಕಥೆ. ಇದರ ವಿರೋಧಾಭಾಸ ನೋಡಿ – ಒಂದೆಡೆ ಊರಿಗೆ ಒಂದು ಶಾಲೆ ಬಂದಿದೆ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದು ಅಭಿವೃದ್ಧಿಯ – ಸರಕಾರದ ಲೆಕ್ಕಪತ್ರಗಳಿಗೆ ಸೇರುವ ಒಂದು ಮಾಹಿತಿ, ಸರಕಾರವು ಈ ಶಾಲೆಯನ್ನು ನಿರ್ಮಿಸಿ ಒಂದು ಅದ್ಭುತ ಕೆಲಸವನ್ನು ಮಾಡಿದೆ ಎಂದು ನಾವು ಸರಕಾರದ ಬೆನ್ನು ತಟ್ಟಬಹುದು. ಆದರೆ ಶಾಲೆಯ ನಿರ್ಮಾಣದಲ್ಲಿ ಯಾರು ಎಷ್ಟು ಬೆಲೆ ತೆತ್ತಬೇಕಾಯಿತು – ಬೆಲೆ ತೆತ್ತುವುದರಲ್ಲಿ ಆಗಿರುವ ರಾಜಕೀಯ ಹಾಗೂ ಆ ಶಾಲೆಯಿಂದ ತನ್ನ ಜೀವನದ ಸಂಧ್ಯಾಕಾಲದಲ್ಲಿ ಏನನ್ನೂ ಪಡೆದುಕೊಳ್ಳದ ಶಿವನಜ್ಜಿಯ ದುರಂತ ಕಥೆಯೂ ಅಡಗಿದೆ.

ಅರ್ಥಶಾಸ್ತ್ರಜ್ಞ ಎಡ್ಕಂಡ್ ಫೆಲ್ಸ್ ಇದನ್ನೇ ಹೇಳುತ್ತಾನೆ. ನಮಗೆ ಅಭಿವೃದ್ಧಿ ಕಾಣುವುದು ಮಾಹಿತಿಯ ಮೂಲಕ – ಇಷ್ಟು ಸೇತುವೆ ನಿರ್ಮಾಣವಾಯಿತು. ರಸ್ತೆ ಬಂತು. ಶಾಲೆಗಳನ್ನು ಕಟ್ಟಿದೆವು, ಆಸ್ಪತ್ರೆಯನ್ನು ನಿರ್ಮಿಸಿದೆವು , ಆಣೆಕಟ್ಟುಗಳನ್ನು ನಿರ್ಮಿಸಿ ವಿದ್ಯುತ್ ಉತ್ಪಾದನೆ ಮಾಡಿದವು. ನೀರಾವರಿ ನೀಡಿದೆವು – ಹೀಗೆ; ಮಾಹಿತಿ ಅಭಿವೃದ್ಧಿಯನ್ನು ರೂಪಿಸುತ್ತದೆ. ಆದರೆ ಈ ಅಭಿವೃದ್ಧಿಯ ಹಿಂದಿರುವ ಖಾಸಗೀ ದುರಂತ ಕಥೆಗಳನ್ನು ಗ್ರಹಿಸುವುದು ಸಾಹಿತ್ಯ ಮಾತ್ರ, ಔದ್ಯೋಗಿಕ ಕ್ರಾಂತಿಯು ತಂದ ಅಭಿವೃದ್ಧಿಯನ್ನು ಕೊಂಡಾಡುತ್ತಲೇ ಫೆಲ್ಸ್ ಡಿಕನ್ಸ್, ಜೋಯಾ, ಬೇಕರನ್ನು ನೆನಪು ಮಾಡಿಕೊಂಡು ಅದಕ್ಕಾಗಿ ಖಾಸಗೀ ಬೆಲೆಯನ್ನು ತೆತ್ತವರನ್ನು ಸ್ಮರಿಸುತ್ತಾನೆ. “ಶಿವನಜ್ಜಿ” ಕಥೆ ಈ ಪಂಥಕ್ಕೆ ಸೇರುತ್ತದೆ. ಹೀಗಾಗಿಯೇ ಕಥೆಯನ್ನು ಸುಖಾಂತ, ದುಃಖಾಂತ ಎಂದು ವರ್ಗೀಕರಿಸುವುದಕ್ಕೆ ಕಷ್ಟವಾಗುತ್ತದೆ. ಅದು ಕೇವಲ ದುರಂತವಷ್ಟೇ.

“ಸ್ವಾಮೀಜಿಯ ಪಾದವೂ ಹೆಣದ ತಲೆಯೂ” ಕಥೆಯು ಮನುಷ್ಯ ಮತ್ತು ಮನುಷ್ಯ ಬದುಕಿನಲ್ಲಿ ನಿರ್ವಹಿಸುತ್ತಿರುವ ಪಾತ್ರ – ಅದು ಕಾಯಕದ್ದೇ ಆಗಿರಬಹುದು ಅಥವಾ ಜೀವನಶೈಲಿಯ ಪಾತ್ರವೇ ಆಗಿರಬಹುದು – ಈ ಎರಡರ ನಡುವಿನ ವಿರೋಧಾಭಾಸವನ್ನು ನಮ್ಮ ಮುಂದಿಡುತ್ತದೆ. ನಮ್ಮಲ್ಲಿನ ಎಷ್ಟು ಮಂದಿ ಸ್ವಾಮಿಗಳು – ದೇವ ಪುರುಷರು ದೇವರನ್ನು ಅರ್ಥೈಸಲೆಂದೇ, ತಮ್ಮಾಯ್ಕೆಯಂತೆ ಆ ಸ್ಥಾನದಲ್ಲಿದ್ದಾರೆ? ಎಷ್ಟು ಮಂದಿಗೆ ಅದು ನಂಬುಗೆಯ ವಿಚಾರ? ಯಾರಿಗದು ಕೇವಲ ಒಂದು ಕಾಯಕ? ಯಾರು ಸಾಂಸಾರಿಕ – ಸಾಮಾಜಿಕ ಒತ್ತಡಗಳಿಂದಾಗಿ ಆ ಸ್ಥಾನದಲ್ಲಿದ್ದಾರೆ? ಆ ಸ್ನಾನದ ರೀತಿರಿವಾಜುಗಳು ನಮ್ಮ ಖಾಸಗೀ ಭಾವನೆಗಳಾದ ಸುಖ – ದುಃಖ – ಮದ – ಮತ್ಸರ – ಕಾಮಗಳನ್ನು ಹೇಗೆ ನಿರ್ದೇಶಿಸುತ್ತವೆ? ಈ ಎಲ್ಲ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಈ ಕಥೆ ನಮ್ಮನ್ನು ಪ್ರೇರೇಪಿಸುತ್ತದೆ.

ಕಥೆಗಾರರಾಗಿ ನಿಲುವು ತೆಗೆದು, ಓದುಗರೊಂದಿಗೆ ಕಾಲನಿಕ ವಾದಕ್ಕಿಳಿಯುವುದಕ್ಕಿಂತ, ವಿಷಯವನ್ನು ಸಮರ್ಥವಾಗಿ ಮಂಡಿಸಿ ಓದುಗರ ಮನದಲ್ಲಿಯೇ ಪ್ರಶ್ನೆಗಳನ್ನು ಹುಟ್ಟುಹಾಕುವಂತಹ ತಂತ್ರಗಾರಿಕೆಯನ್ನು ಸ್ವಾಮಿ ತೋರುತ್ತಾರೆ. ಆ ತಂತ್ರಗಾರಿಕೆಗೆ ಪೂರಕವಾದ ಭಾಷೆಯೂ ಅವರಲ್ಲಿದೆ. ಘಟನೆಗಳನ್ನು ಜೋಡಿಸುವ ಕ್ರಮವೂ ಇದೆ. ಓದುಗನ ಮನಸ್ಸಿನಲ್ಲಿ ಒಂದು ಚಿತ್ರಣವುಂಟಾಗುವಂತೆ ಮಾಡುವ ಕಲೆಗಾರಿಕೆಯೂ ಇದೆ.

ಶವದ ಮೇಲೆ ಸ್ವಾಮಿಗಳ ಪಾದಗಳನ್ನು ತಗುಲಿಸಿ ಆಶೀರ್ವಚನ ಮಾಡಿಸುವ ಪ್ರಕ್ರಿಯೆಯಲಿ. ಕಳಚಿ ಅಸಲೀ ಭಾವನೆಗಳು ಉಕ್ಕಿಬರುವ ವಿಷಾದವನ್ನು ಸ್ವಾಮಿ ಸಮರ್ಥವಾಗಿ ನಿರ್ವಹಿಸುತ್ತಾರೆ, – ಹೀಗೆ ದೊಡ್ಡ ಹಂದರದಲ್ಲಿ ತತ್ವ, ಭೂತ, ವರ್ತಮಾನದ ಸಾಮಾಜಿಕ ಲೇನ್ ದೇನ್ಗಳ ಜಗತ್ತನ್ನು ಚಿತ್ರಿಸುತ್ತಿರುವ ಸ್ವಾಮಿ, ಇದೇ ವಿಚಾರಗಳನ್ನು ಖಾಸಗಿಯಾಗಿಯೂ ನಿರ್ವಹಿಸುತ್ತಾರೆ. ಹೊರಜಗತ್ತಿನ ದೊಡ್ಡವಿಚಾರಗಳನ್ನು ಸಂಕೀರ್ಣ ಸಂಬಂಧಗಳನ್ನು ತೆರತೆರೆದು ನೋಡುವ ಈತ ಒಂದು ರೀತಿಯಿಂದ ತೀರಾ ಖಾಸಗಿಯಾದ ಸಂಬಂಧಗಳನ್ನು ಹೇಗೆ ಪರಿಶೀಲಿಸಬಹುದು ಎನ್ನುವುದಕ್ಕೆ “ಸ್ವಗತ” ಒಂದು ಉತ್ತಮ ನಿದರ್ಶನವಾಗಿದೆ. ಇಲ್ಲಿ ನಮ್ಮ ವರ್ತನೆಗೂ ಮನೋವ್ಯಾಪಾರಕ್ಕೂ – ಖಾಸಗಿ ರಾಗದ್ವೇಷಗಳಿಗೂ – ಬಹಿರಂಗವಾಗಿ ಸಂಬಂಧಗಳನ್ನು ನಿಭಾಯಿಸುವ ರೀತಿಗೂ ಇರುವ ವಿರೋಧಾಭಾಸವನ್ನು ಸ್ವಾಮಿ ಪ್ರಬುದ್ಧವಾಗಿ ನಿಭಾಯಿಸುತ್ತಾರೆ.

“ಅಕ್ಕ ಅವನು ಸಿಕ್ಕಿದನೇ?” ಎನ್ನುವ ಕಥೆ ಒಂದು ವಿಲಕ್ಷಣ ಕಥೆಯಂದೇ ಹೇಳಬೇಕು. ಆಧುನಿಕ ಪ್ರತಿಮೆಗಳು – ನಗರ ಮತ್ತು ಯಂತ್ರಚಾಲಿತ ಸಾರಿಗೆಯಲ್ಲಿ ಸಾಗುತ್ತಲೇ ಚೆನ್ನಮಲ್ಲಿಕಾರ್ಜುನನ ಶೋಧಕ್ಕೆ ಹೊರಟಿರುವ ಮಹಿಳೆಯ ಶೋಧ, ಕೇಳುವ ಪ್ರಶ್ನೆಗಳು, ನಡೆಯುವ ಘಟನಾವಳಿಗಳಿಂದ ನಾವೂ ಕೂಡ ಕೆಲವು ಪ್ರಶ್ನೆಗಳನ್ನೆದುರಿಸಬೇಕಾಗುತ್ತದೆ. ಆಕೆಯ ಪ್ರಶ್ನೆಗಳೇ ಬೇರೆ, ಆದರೆ ಆಕೆಯ ಪ್ರಶ್ನೆಗಳಿಂದ ಉದ್ಭವವಾಗುವ ಪ್ರಶ್ನೆಗಳೇ ಬೇರೆ. ಶತಶತಮಾನಗಳಿಂದಲೂ ನಾವು ಮೂಲಭೂತ ಮನುಷ್ಯ ಸಂಬಂಧಗಳನ್ನು ಪ್ರಶ್ನಿಸುತ್ತಾ, ಅರ್ಥೈಸುತ್ತಾ – ಸಮಾಜದಲ್ಲಿನ ಸ್ವರಗಳನ್ನು – ಬಲಶಾಲಿ – ಬಲಹೀನರ ನಡುವಿನ ಸಂಬಂಧಗಳನ್ನು ಪರೀಕ್ಷಿಸುತ್ತಲೇ ಬರುತ್ತಿದ್ದೇವೆ. ಆದರೂ ಪ್ರಶ್ನೆಗಳು ನಿರಂತರವಾಗಿ ನಮ್ಮೆದುರು ನಿಂತಿವೆ. ಹಾಗೂ ಈ ಪ್ರಶ್ನೆಗಳು ಮುಂದೆಯೂ ಇರುತ್ತವೆ. ಆದರೂ ಅವುಗಳನ್ನು ಆಗಿಂದಾಗ್ಗೆ ಕೇಳಿಕೊಳ್ಳುವುದು ಮುಖ್ಯವಾಗುತ್ತದೆ.

ಒಂದು ರೀತಿಯಿಂದ ಸ್ವಾಮಿಯವರು ಸಾಂದರ್ಭಿಕವಾಗಿ ಕಥೆಯನ್ನು ಅಕ್ಕಮಹಾದೇವಿ – ಬಸವಣ್ಣನವರ ರೂಪಕಗಳಿಂದ ನೇಯುವ ಮೂಲಕ ತಾವು ಕೇಳುವ ಪ್ರಶ್ನೆಗಳಿಗೆ, ನಿರೂಪಿಸುವ ಘಟನೆಗಳಿಗೆ ಸಾಂದರ್ಭಿಕವಾಗಿ ಕಾಣದಿದ್ದರೂ, ಅದನ್ನು ಒಂದು ಚರಿತ್ರೆಯಲ್ಲಿ ಅಡಕ ಮಾಡಿ, ಅದಕ್ಕೊಂದು ಘನತೆಯನ್ನು ತರುವ ಪ್ರಯತ್ನವನ್ನು ಮಾಡುತ್ತಾರೆ. ಇದು ಪ್ರಜ್ಞಾಪೂರ್ವಕವಾಗಿ ಅವರು ಮಾಡದಿದ್ದರೂ, ಅದಕ್ಕೆ ಆ ಚರ್ಚೆಯ ಅನುರಣನದ ಘನತೆ ದಕ್ಕುತ್ತದೆ. ಸ್ವಾಮಿಯವರ ಕಥೆಗಳಲ್ಲಿ ಒಂದು ಸಿದ್ಧ ಮಾದರಿ ನಮಗೆ ಕಾಣುತ್ತದೆ. ಅದು ಕಥೆಗಾರರೆಲ್ಲರೂ ಯಾವಾಗಲಾದರೊಮ್ಮೆ ಪ್ರಯೋಗಿಸಿ ಖುಷಿಪಡುವ ತಂತ್ರ. ಕಥೆಯ ಅಂತ್ಯದಲ್ಲಿ ಅನಿರೀಕ್ಷಿತ ತಿರುವೊಂದನ್ನು ಕೊಟ್ಟು ಓದುಗನನ್ನು ಅವಾಕ್ಕು ಮಾಡಿಸುವ ಈ ಟ್ವಿಸ್ಟ್ ಇನ್ ದ ಟೇಲ್ ತಂತ್ರವನ್ನು ಸ್ವಾಮಿಯವರೂ ಸೂಕ್ಷವಾಗಿ ಎಲ್ಲ ಕಥೆಗಳಲ್ಲೂ ಪ್ರಯೋಗಿಸುತ್ತಾರೆ. ಹಾಗೂ ಈ ಟ್ವಿಸ್ಟು ಸಾಮಾನ್ಯವಾಗಿ ಒಂದು ವಿಷಾದದ ಭಾವವನ್ನು ನಮ್ಮಲ್ಲಿ ಬಿಡುವುದರಿಂದ ಕಥೆಯ ಸಾಂಗತ್ಯ ಕಥೆ ಮುಗಿದ ನಂತರವೂ ಕಾಫಿಯ ಆಫರ್ ಟೇಸ್ಟಿನಂತೆ ಉಳಿದುಬಿಡುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಅವರ “ಹೀಗೊಂದು ಭೂಮಿಗೀತ ಕಥೆ”.

(ಎಂ. ಎಸ್. ಶ್ರೀರಾಮ್)

ಭೂತ ಕಥೆಯಲ್ಲೂ ಈ ತಂತ್ರ ಬರುತ್ತದಾದರೂ ಅಲ್ಲೊಂದು ವಿಡಂಬನೆಯಿದೆ. ದೇವರ ದರ್ಶನವಾದಂತೆ ಬಚ್ಚಲು ಮನೆಯಲ್ಲಿ ಭೂತವೂ ಪ್ರತ್ಯಕ್ಷವಾಗಬಹುದಲ್ಲಾ… ಅದನ್ನು ಅವರು ಭೂತವೆಂದು ಭಾವಿಸಬಹುದು, ದೆವ್ವ ಎನ್ನಬಹುದು. ಅದು ಹುಟ್ಟುಹಾಕುವ ಭಾವನೆಯಿಂದ ಅದಕ್ಕೆ ಭೂತವೆಂಬ ಹೆಸರು. ಆ ಘಟನೆ ಮತ್ತದರ ಸುತ್ತಮುತ್ತಲಿನ ವಿವರಣೆಯನ್ನು ಓದಿದಾಗ ನನಗನ್ನಿಸಿದ್ದು – ಪ್ರತ್ಯಕ್ಷವಾದದ್ದನ್ನು ದೇವರೆಂದು ಅರ್ಥೈಸಿ ಪೂಜೆಯನ್ನೂ ಮಾಡಬಹುದಲ್ಲಾ. ಭಯದ ಭಾವನೆಯಿಂದ ಭಕ್ತಿಯ ಭಾವನೆಗೆ ಮಾರ್ಪಾಟಾದರೆ ನಮ್ಮೆದುರು ಪ್ರಕಟವಾದದ್ದು ದೇವರೂ ಆಗಬಹುದು. ಆದರೆ ತಮಾಷೆಯೆಂದರೆ ಇದು ನಡೆಯುವುದು ಕತ್ತಲಲ್ಲಿ. ಭೂತಗಳು ಅವತರಿಸುವುದು ಕತ್ತಲಲ್ಲಿ, ಅವುಗಳ ಮೇಲೆ ಬೆಳಕು ಚೆಲ್ಲಿದಾಕ್ಷಣಕ್ಕೆ ಭೂತವನ್ನುವ ವಿಚಾರವೇ ಮಾಯವಾಗಿಬಿಡುತ್ತದೆ… ಸ್ವಗತ ಕಥೆಯ ಧಾಟಿಯಲ್ಲಿಯೇ ಸಾಗುವ ಮತ್ತೊಂದು ಕಥೆ ‘ವಿದಾಯ’. ಈ ಎರಡೂ ಕಥೆಗಳು ಸಂಕಲನದ ಮಿಕ್ಕ ಕಥೆಗಳಿಗಿಂತ ತೀರಾ ಭಿನ್ನವಾಗಿ ಸ್ವಾಮಿ ನಿಭಾಯಿಸಬಹುದಾದ ವೈವಿಧ್ಯವನ್ನು ಸೂಚಿಸುತ್ತವೆ. – “ ಈ ಕಥೆಗಳನ್ನು ನಿಜ ಎಂದುಕೊಂಡರೆ ನಿಜ, ಕಲ್ಪನೆ ಎಂದುಕೊಂಡರೆ ಅದೂ ನಿಜ” – ಎಷ್ಟು ಸುಂದರ ಮತ್ತು ಘನವಾದ ಮಾತು. ಈ ಮಾತುಗಳೇ ಸ್ವಾಮಿ ಪೊನ್ನಾಚಿಯವರ ಕಥನ ತತ್ವದ ದಿಕ್ಸೂಚಿಯಾಗಿರುವಂತಿದೆ.

ನೈಜವಾದ, ನೈಜವಾಗಿ ಕಾಣಿಸುವ, ನೈಜವಲ್ಲದಿದ್ದರೂ ನಂಬಿಸುವಂತಹ ಕಥೆಗಳನ್ನು ಹೆಣೆಯಬಲ್ಲವನೇ ಸಮರ್ಥ ಕಥೆಗಾರ. ಅಂಥ ಲಕ್ಷಣವನ್ನು ಸ್ವಾಮಿ ಪೊನ್ನಾಚಿ ಈ ಸಂಕಲನದ ಮೂಲಕ ನಮಗೆ ತೋರಿಸಿಕೊಟ್ಟಿದ್ದಾರೆ. ಅವರಿಗೆ ಶುಭವಾಗಲಿ. ಅವರ ಕಥೆಗಳನ್ನು ಓದುವ, ಈ ಎರಡು ಮಾತುಗಳನ್ನು ಬರೆಯುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ವಸುಧೇಂದ್ರನಿಗೂ, ಸ್ವಾಮಿಗೂ ಕೃತಜ್ಞತೆಗಳು.