ಕಣ್ಣ ಹೊಳಪನ್ನಾದರೂ…?

ತಲೆ ಕೂದಲು
ಕತ್ತು ಮುಖ
ಪಾದ ಕೈ
ಇದಿಷ್ಟೇ
ತನ್ನ ದೇಹವೆಂದು
ತಿಳಿದಿರಬಹುದು ಅವಳು!

ಸ್ನಾನ ಮಾಡುವಾಗ
ರೂಢಿಯಂತೆ ನೀರು ಸುರಿಯುತ್ತಾಳೆ
ಸೋಪು ಉಜ್ಜಿ
ಗಸಗಸ ತಿಕ್ಕಿಕೊಳ್ಳುತ್ತಾಳೆ
ಕಲ್ಲೋ
ಕೊರಡೋ
ಎನ್ನುವಂತೆ!

ಮೊದ ಮೊದಲೆಲ್ಲ ಗಂಡ
ಕಿರಿಕಿರಿ ಮಾಡಿದಾಗ
ಒಮ್ಮೆ ಮುಗಿಯಲೆಂಬಂತೆ
ಸಹಿಸಿದ್ದಾಳೆ
ಕಡು ಕತ್ತಲೆಯಲ್ಲಿ,
ಮಗುವಿಗೆ ಹಾಲೂಡಿದ್ದಾಳೆ
ಮಂದ ಬೆಳಕಿನಲ್ಲಿ
ಎಂಬುದೊಂದು ಅಲಾಯಿದ ಮಾತು!

ಮುಚ್ಚಿದ ಬಟ್ಟೆಯನ್ನು
ಅವಳಾದರೂ
ಎಂದು ಸರಿಸಿದ್ದಾಳೆ!
ಸೊಂಟದ ಕೀಲು
ಹಿಡಿದುಕೊಂಡಾಗ
ತೊಡೆಯ ಮಾಂಸ ಖಂಡ
ಎಳೆದೆಳೆದು ಬರುವಾಗ
ನೋವಿನೆಣ್ಣೆಯೆಡೆಗೇ ಗಮನ

ಅಮ್ಮನ ಹೊಟ್ಟೆಯಲ್ಲಿ
ಒಂಬತ್ತು ತಿಂಗಳು
ಬೆಚ್ಚಗೆ ಬೆಳೆದ
ಮಿದು ಮಿದು
ತನ್ನದೇ
ಹುಟ್ಟು ಬೆತ್ತಲೆ ದೇಹ
ಹೇಗಿದೆ ಈಗ…
ಬೆಳಕಿನಲ್ಲಿ ನೋಡಿಕೊಳ್ಳಲೂ;
ಅಸಡ್ಡೆಯಾಗಿ ರೂಪಾಂತರ ಹೊಂದಿರುವ
ಹಳೆಯ ಭಯ ಹಿಂಜರಿಕೆ ನಾಚಿಕೆ!

ಹೋಗಲಿ
ಕಣ್ಣ ಹೊಳಪನ್ನಾದರೂ
ಬಿ ಡು ವಾ ಗಿ
ಕನ್ನಡಿಯಲ್ಲಿ
ಕಂಡಿದ್ದಾಳೆಯೇ!?