ನಿದ್ದೆಹೋಗುವ ಮುನ್ನ

ಹಿತ ಚಳಿ ನೇವರಿಸುವ
ಮಸಿಕತ್ತಲೊಂದು ಸಡಗರ

ಮಡಿವಾಳಹಕ್ಕಿಯ ನೀಳ
ಸಿಳ್ಳುಗಳು ಬೀಳ್ಕೊಟ್ಟ
ಸಂಜೆಯಿಳಿಯುತ್ತಿದ್ದಂತೆಯೇ
ಒಳಗೆಲ್ಲ ತುಂಬಿ ಹರಿವ
ಕತ್ತಲು- ಸಾವಿರದೊಂದು ಚುಕ್ಕಿ
ಕಪ್ಪೆ ಗೂಬೆ ನಾಯಿಗಳ ಗೊಣಗುವಿಕೆ
ಗೂಡೊಳಗೆ ನಾಳಿನ ಕಂದನಿಗೆ
ಕಾವುಕೊಡುವ ಸೂರಕ್ಕಿ ಜೋಡಿ

ಅಡುಗೆಗೊಂದು ರುಚಿ, ಆಪ್ತರ
ಮಾತಿಗೊಂದು ಘಮ ಮಗನ
-ನೇವರಿಕೆಗೊಂದು ಉಮೇದು
ಬೆಕ್ಕಿಗೊಂದು ಅಪ್ಪುಗೆ- ಇರುಳ
ಹೆಜ್ಜೆಗೆ ನನ್ನ ಗೆಜ್ಜೆ

ಊಟ ಕಸ ಮುಸುರೆ
ಕವಿತೆಯೊಲವು ಓದು
ಮುಗಿದರೂ, ದಣಿವು ತುಂಬಿದರೂ
ಮಲಗಲೊಲ್ಲದು ಜೀವ
ಅಗಲಲಾರದು ಕತ್ತಲ ಜಗವ

ಇನ್ನೂ
ಜೀರುಂಡೆ ಬಾವಲಿ ಮಾತಿಗೆ
ತಲೆದೂಗುತ್ತ ತಂಗಾಳಿಯ
ಹೀರಿ ಹೀರಿ ಕುಡಿಯಬೇಕು
ಅರೆಬಿರಿದ ಮೊಗ್ಗುಗಳ ಕಾಣುತ್ತ
ಆಯಾಸಗಳ ದೂಡಿಬಿಡಬೇಕು
ಪಾದಕ್ಕೆ ಎಣ್ಣೆ ಸವರಿ
ಕೂದಲ ಸಿಕ್ಕು ಬಿಡಿಸಿ
ಗುಳಿಗೆ ನುಂಗಿ
ಕಣ್ಣಿಗೆ ಕತ್ತಲೂಡಿಸಿ
ದೀಪವಾರಿಸಲೇ
ಚಳಿಯಿದೆ ಹೊದಿಕೆ ತಾ
ಪಕ್ಕದ ಕೋಣೆಗೆ ಹೋಗಿ ಬಾ….
ಅಂತೂ ಚಾದರಗಳ ಜೋಡಿಸಿ
ಕಿಟಕಿಪರದೆ ಸರಿಸಿ ಸಿಕ್ಕಿಸಿ
ಎಲ್ಲ ಸರಿಯಾಗಿದೆಯೇ
ದೀಪವಾರಿಸಲೇ ….
ಹತ್ತನೇ ಸಲ!
ಆಗಲೇ ಒಂದೂವರೆ
ಉಫ್!
ಹೂವಂತೆ ಮಲಗು
ನಿರಾಳ ಕತ್ತಲು!

ವಿಜಯಶ್ರೀ ಹಾಲಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿಯ ಮುದೂರಿಯವರು.
ಓದು, ಬರೆಹ, ನಿಸರ್ಗ, ಹಕ್ಕಿಗಳನ್ನು ಗಮನಿಸುವುದು, ಫೋಟೋಗ್ರಫಿ, ಕಾಡಿನ ತಿರುಗಾಟ ಇವರ ಆಸಕ್ತಿಗಳು.
ಬೀಜ ಹಸಿರಾಗುವ ಗಳಿಗೆ(ಕವಿತೆ), ಓತಿಕ್ಯಾತ ತಲೆಕುಣ್ಸಿ(ಮಕ್ಕಳ ಕವಿತೆ), ಅಲೆಮಾರಿ ಇರುಳು(ಕಿರುಕವಿತೆ), ಪಪ್ಪುನಾಯಿಯ ಪೀಪಿ(ಮಕ್ಕಳ ಕವಿತೆ), ಸೂರಕ್ಕಿ ಗೇಟ್(ಮಕ್ಕಳ ಕಾದಂಬರಿ), ಜಂಬಿಕೊಳ್ಳಿ ಮತ್ತು ಪುಟ್ಟವಿಜಿ(ಮಕ್ಕಳಿಗಾಗಿ ಅನುಭವಕಥನ) ಪ್ರಕಟಿತ ಕೃತಿಗಳು