ನನ್ನ ನೇಮಕಾತಿಯ ರೀತಿ ಮತ್ತು ಹಿನ್ನೆಲೆಯಿಂದ ನನ್ನನ್ನು ಯಾವುದೇ ರಾಜಕೀಯ ವಿಚಾರಧಾರೆ ಅಥವಾ ಪಕ್ಷಕ್ಕೆ ಜೋಡಿಸುವುದು ಸಾಧ್ಯವಿರಲಿಲ್ಲ. ನೀತಿಯ ಘೋಷಣೆಯನ್ನೂ ಹಾಗೇ ನೋಡುವರೆನ್ನುವ ನಂಬಿಕೆಯಿತ್ತು. ನಿರ್ಗಮಿಸುತ್ತಿರುವ ಸರ್ಕಾರದೊಂದಿಗೆ ಇದ್ದ ಸತ್ಸಂಬಂಧಗಳು ಹೊಸ ಸರ್ಕಾರದೊಂದಿಗೂ ಮುಂದುವರೆಯುವ ನಂಬಿಕೆಯಿತ್ತು. ಹೊಸ ಸರ್ಕಾರದಲ್ಲಿ ಚಿದಂಬರಂ ವಿತ್ತಮಂತ್ರಿಗಳಾದರು. ವಾಣಿಜ್ಯ – ವಿತ್ತ ಮಂತ್ರಿಯಾಗಿ ಅನುಭವವಿದ್ದ ಸರಳ ವ್ಯಕ್ತಿ ಚಿದಂಬರಂ. ಮಂತ್ರಿಯಾಗಿ ಆತ ಹಿರಿಯವರು.
ಎಂ.ಎಸ್. ಶ್ರೀರಾಮ್‌ ಅನುವಾದಿಸಿದ ವೈ.ವಿ. ರೆಡ್ಡಿಯವರ ಆತ್ಮಕಥನದ ಆಯ್ದ ಭಾಗದ ಕೊನೆಯ ಕಂತು

 

ಗವರ್ನರ್ ಜೊತೆಗಿನ ವಿತ್ತಮಂತ್ರಿಗಳ ವ್ಯವಹಾರ ಪರಿಸ್ಥಿತಿಗೆ ಅನುಗುಣವಾಗಿರುತ್ತದೆ. ಆರ್‌ಬಿಐನ ಜವಾಬ್ದಾರಿಗಳಲ್ಲಿ ಹಣಕಾಸು ನೀತಿರೂಪ ಕಲ್ಪನೆ, ಬೆಲೆಯೇರಿಕೆಯ ನಿಯಂತ್ರಣ, ಮತ್ತು ವಿತ್ತೀಯ ಸ್ಥಿರತೆಯನ್ನು ಕಾಪಾಡುವ ಕೆಲಸಗಳು ಪ್ರಮುಖವಾಗಿವೆ. ಇದರ ಜೊತೆ, ಲೆಂಡರ್ ಆಫ್ ದ ಲಾಸ್ಟ್ ರಿಸಾರ್ಟ್ – ಬೇರೆಲ್ಲಿಂದಲೂ ಆರ್ಥಿಕ ಸದುಪಾಯವಿಲ್ಲದ ಪರಿಸ್ಥಿತಿಯಲ್ಲಿ ಬ್ಯಾಂಕುಗಳಿಗೆ ಸಾಲ ನೀಡುವುದು, ಆರ್ಥಿಕ ಬಿಕ್ಕಟ್ಟಾದಾಗ ಇತರ ನಿಯಂತ್ರಕರ ಸಹಕಾರದೊಂದಿಗೆ ಅರ್ಥವ್ಯವಸ್ಥೆಗೆ ಪ್ರಾಥಮಿಕ ರಕ್ಷಣೆಯನ್ನು ಕೊಡವುದೂ ಸೇರಿದೆ. ಈ ಕೆಲಸಗಳನ್ನು ನಿಭಾಯಿಸಲು ಆರ್‌ಬಿಐಗೆ ತಕ್ಕ ಸ್ವಾಯತ್ತತೆ ಬೇಕು. ಆದರೆ ಆ ಸ್ವಾಯತ್ತತೆಯೂ ಒಟ್ಟಾರೆ ಸರ್ಕಾರದ ಸರ್ವವ್ಯಾಪಿ ಅಧಿಕಾರದ ಪರಿಧಿಯಲ್ಲಿರುತ್ತದೆ, ಆರ್.ಬಿ.ಐನ ತಾಕತ್ತನ್ನೂ ಮೀರಿದ ಬಿಕ್ಕಟ್ಟು ಎದುರಾದರೆ ಸರ್ಕಾರದ್ದೇ ಮುಖ್ಯ ಪಾತ್ರವಿರುತ್ತದೆ. ಆರ್‌ಬಿಐನ ಮಸೂದೆಯಲ್ಲಿ ನಮೂದಿಸಿರುವಂತೆ ಸರ್ಕಾರಕ್ಕೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಋಣಸದುಪಾಯವನ್ನು ಏರ್ಪಾಟು ಮಾಡಿಕೊಡುವುದೂ ಆರ್‌ಬಿಐ ಕರ್ತವ್ಯಗಳಲ್ಲಿ ಒಂದು.

ಭಾರತದ ವಿತ್ತೀಯ ಕ್ಷೇತ್ರದಲ್ಲಿ ಬ್ಯಾಂಕಿಂಗ್ ಸಂಸ್ಥೆಗಳ ಪ್ರಾಮುಖ್ಯತೆ ಅಧಿಕವಾಗಿದೆ. ಅಲ್ಲೂ ಸಾರ್ವಜನಿಕ ಬ್ಯಾಂಕುಗಳದ್ದೇ ಸಿಂಹಪಾಲು. ಸಾರ್ವಜನಿಕ ಬ್ಯಾಂಕುಗಳ ಮಾಲೀಕತ್ವದ ಮುಖ್ಯಭಾಗ ಸರ್ಕಾರದ ಬಳಿಯಿದೆ. ಆರ್‌ಬಿಐ ಕೂಡಾ ಸರ್ಕಾರದ ಸ್ವಾಮ್ಯದಡಿಯೇ ಇದೆ. ಸರ್ಕಾರಿ ಸ್ವಾಮ್ಯದ ಆರ್‌ಬಿಐ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ನಿಯಂತ್ರಕರಾಗಿರುವುದು ಒಂದು ವಿಲಕ್ಷಣ ಪರಿಸ್ಥಿತಿಯೇ. ಮಾಲೀಕರ ಸ್ವಾಮಿತ್ವದ ಸಂಸ್ಥೆಯನ್ನು ನಿಯಂತ್ರಿಸಿ, ಅವುಗಳ ತಪ್ಪುಗಳನ್ನು ಕಂಡುಹಿಡಿಯುತ್ತಲೇ, ಮಾಲೀಕರಿಗೆ ಜವಾಬು ನೀಡುವ ವಿಚಿತ್ರ ವರ್ತುಲದಲ್ಲಿ ಆರ್‌ಬಿಐ ಇದೆ. ಹೀಗಾಗಿಯೇ ಆರ್‌ಬಿಐಗೆ ಸಂಪೂರ್ಣ ಸ್ವಾಯತ್ತತೆ ಕೊಡಬೇಕೆನ್ನುವ ವಿಚಾರ ಜಟಿಲವಾದದ್ದು.

ಮೇಲೆ ವಿವರಿಸಿದ ವರ್ತುಲವು ಸಂಕೀರ್ಣವೆನ್ನಿಸಿದರೆ ಕಥೆ ಇನ್ನೂ ಗಹನವಾಗುತ್ತದೆ. ಕಾನೂನಿನ ಪ್ರಕಾರ ವಿದೇಶಿ ವಿನಿಮಯದ ದೇಖರೇಖಿಯನ್ನು ಆರ್‌ಬಿಐ ನಿರ್ವಹಿಸಬೇಕು. ದೇಶದಲ್ಲಿರುವ ವಿನಿಮಯದ ದಾಸ್ತಾನು ಆರ್‌ಬಿಐನ ಖಾತೆಯಲ್ಲಿದ್ದು ತನ್ನ ಲೆಕ್ಕಪತ್ರದಲ್ಲಿ ತೋರಿಸಬೇಕು. ವಿನಿಮಯಕ್ಕೆ ಸಂಬಂಧಿಸಿದ ವ್ಯವಹಾರಗಳು ವಿವಿಧ ದೇಶಗಳೊಂದಿಗಿರುವುದರಿಂದ, ಅದರ ನಿರ್ವಹಣೆ ಸರ್ಕಾರದ ನೀತಿಗೆ ಅನುಗುಣವಾಗಿರುತ್ತದೆ. ಇಲ್ಲಿ ಸರ್ಕಾರ ಮತ್ತು ಆರ್‌ಬಿಐ ಜೊತೆಜೊತೆಯಾಗಿ ಕೆಲಸ ಮಾಡಬೇಕು. ಅನೇಕ ಪ್ರಗತಿಪರ ದೇಶಗಳಲ್ಲಿ ಅರ್ಥವ್ಯವಸ್ಥೆ ಮತ್ತು ಹಣಕಾಸಿನ ವಿಷಯದ ಪರಿಣತಿಯು ನಾವು ಕೇಂದ್ರೀಯ ಬ್ಯಾಂಕಿನಲ್ಲಿರುವುದನ್ನು ಕಾಣಬಹುದು. ಸರ್ಕಾರಗಳು ಈ ಪರಿಣತಿಯನ್ನು ಉಪಯೋಗಿಕೊಳ್ಳುವುದರಿಂದ ಕೇಂದ್ರೀಯ ಬ್ಯಾಂಕು ನಿರ್ವಹಣೆಯಲ್ಲದೇ, ಸಲಹೆಗಾರರ ಭೂಮಿಕೆಯನ್ನೂ ನಿರ್ವಹಿಸುತ್ತದೆ. ಪಾವತಿ ಮತ್ತು ನಿಷ್ಕರ್ಷೆಯ, ನೋಟು ನಾಣ್ಯಗಳ ವಿತರಣೆ, ನಿರ್ವಹಣೆ, ಈ ಎಲ್ಲವನ್ನೂ ಆರ್‌ಬಿಐ ನಿರ್ವಹಿಸುತ್ತದೆ. ಸರ್ಕಾರ-ಆರ್‌ಬಿಐ ನಡುವೆ ಬಹುಮುಖಿ. ಸಂಕೀರ್ಣ, ಮತ್ತು ವರ್ತುಲದಲ್ಲಿ ಗಿರಕಿ ಹೊಡೆಯುವ ಸಂಬಂಧವಿದೆ.

ಗವರ್ನರ್ ಮತ್ತು ವಿತ್ತಮಂತ್ರಿಗಳ ವೈಯಕ್ತಿಕತೆ ಈ ಸಂಬಂಧಗಳನ್ನು ರೂಪಿಸುತ್ತವೆ. ನನ್ನ ಹಾಗೇ ಚಿದಂಬರಂ ಕೂಡಾ ಸೂಕ್ಷ್ಮ ವಿವರಗಳನ್ನು ಕಂಡು, ವಿಷಯದ ಆಳಕ್ಕೆ ಇಳಿದು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ನಮಗಿಬ್ಬರಿಗೂ ಹಟಮಾರಿಯ ಪಟ್ಟ ಅಂಟಿತ್ತು. ಹಣದ ನಿರ್ವಹಣೆ, ಋಣದ ಹಂಚಿಕೆ, ಬಡ್ಡಿದರ, ವಿನಿಮಯದರ, ಬೆಲೆಯೇರಿಕೆ ಹಾಗೂ ಬೆಳವಣಿಗೆಯ ಗುರಿಯನ್ನು ಸಾಧಿಸುವ ವಿಚಾರಗಳು ಹಣಕಾಸು ನೀತಿಯ ಮುಖ್ಯಅಂಶಗಳು. ಹಣಕಾಸು ನೀತಿಯನ್ನು ವರ್ಷಕ್ಕೊಮ್ಮೆ (ಏಪ್ರಿಲ್-ಮೇ) ಮತ್ತು ಮಧ್ಯಮಾವಧಿ ನೀತಿ (ಅಕ್ಟೋಬರ್-ನವಂಬರ್ ತಿಂಗಳಲ್ಲಿ) ಘೋಷಿಸುತ್ತಿದ್ದೆವು. ನಾನು ಆರ್‌ಬಿಐ ಸೇರಿದಾಗ ತ್ರೈಮಾಸಿಕ ಪರಿಶೀಲನೆಯನ್ನು ಪ್ರಾರಂಭಿಸಿದೆವು. ಹಣಕಾಸು ನೀತಿಯ ಫಲವಾಗಿ ಕೈಗೊಳ್ಳುವ ಕ್ರಿಯೆಗಳನ್ನು ಘೋಷಣೆಯಲ್ಲಿ ಅಡಕವಾಗಿಟ್ಟಿದ್ದರೂ ಬೇಕಾದಾಗ ಅದನ್ನು ಬದಲಿಸಬಹುದಿತ್ತು. ತಾಂತ್ರಿಕವಾಗಿ ಆರ್‌ಬಿಐ ನೀತಿಯನ್ನು ರೂಪಿಸಿದರೂ, ವಿತ್ತಮಂತ್ರಿಗಳೊಂದಿಗೆ ಚರ್ಚಿಸಿ ನೀತಿಯ ದಿಕ್ಕಿನ ಬಗ್ಗೆ ಒಪ್ಪಂದಕ್ಕೆ ಬರುವುದು ಪದ್ಧತಿ. ಋಣನೀತಿ ಸಡಿಲಗೊಳಿಸುವುದೋ, ಬಿಗಿಯಾಗಿಸುವುದೋ, ಯಥಾಸ್ಥಿತಿ ಕಾಯ್ದಿಡಬೇಕೋ ಚರ್ಚಿಸುತ್ತೇವೆ. ಸ್ಥಳೀಯ ಪರಿಸ್ಥಿತಿ, ವಿಶ್ವದಲ್ಲಿ ಆಗುತ್ತಿರುವ ಬೆಳವಣಿಗೆ ಸದ್ಯದ ಪರಿಸ್ಥಿತಿ ಮತ್ತು (ನೀತಿಯಿಂದಾಗಿ) ಮುಂಬರುವ ದಿನಗಳಲ್ಲಿ ಕ್ರಮಿಸಬೇಕಾದ ದಾರಿಯನ್ನು ಪರಿಗಣಿಸಿ ಬಡ್ಡಿದರಗಳ ಬದಲಾವಣೆ, ದ್ರವ್ಯತೆಯ ಬಗ್ಗೆ ಆಗಬೇಕಾದ ಹಸ್ತಕ್ಷೇಪದ ಬಗ್ಗೆ ಯೋಚಿಸಿ ನಿರ್ಧರಿಸುತ್ತೇವೆ.

ನಮ್ಮ ದೇಶದಲ್ಲಿ ಹಣಕಾಸು, ವಿತ್ತ, ಅರ್ಥ, ವಿದೇಶಿ ಮತ್ತು ಆರ್ಥಿಕ ಖೋತಾ ಎಲ್ಲವಿಭಾಗಗಳಲ್ಲೂ ಸುಧಾರಣೆಯ ಅವಶ್ಯಕತೆಯಿತ್ತು. ಉತ್ಸಾಹದಿಂದ ಸುಧಾರಣೆಯನ್ನು ಕೈಗೊಳ್ಳುತ್ತ, ಜಾಗರೂಕ ನಿಯಂತ್ರಣ ವ್ಯವಸ್ಥೆಯನ್ನು ದುರ್ಬಲಗೊಳಿಸುವಂತಿರಲಿಲ್ಲ. ಎಲ್ಲವನ್ನೂ ಅಳೆದು ತೂಗಿ ಅವುಗಳ ಮಹತ್ವವನ್ನು ಅರಿತು ನಡೆಯಬೇಕಿತ್ತು. ಪ್ರತಿ ತೀರ್ಮಾನವೂ ಜನರ ಹಿತಾಸಕ್ತಿಯನ್ನು ಭಿನ್ನ ರೀತಿಯಲ್ಲಿ ಪ್ರಭಾವಿಸುತ್ತದೆ. (ಉದಾಹರಣೆಗೆ ಆಮದು ಮತ್ತು ರಫ್ತಿನಲ್ಲಿ ತೊಡಗಿರುವವರು; ಉಳಿತಾಯ ಮಾಡುವವರು ಮತ್ತು ಸಾಲ ಪಡೆಯುವವರು). ಹೀಗಾಗಿ ಎರಡೂ ಪಕ್ಷಗಳನ್ನು ಪರಿಗಣಿಸಿ ಕೈಗೊಳ್ಳಬಹುದಾದ ನೀತಿಯ ದೀರ್ಘಕಾಲಿಕ ಪರಿಣಾಮವನ್ನು ಚರ್ಚಿಸಬೇಕಾಗುತ್ತಿತ್ತು.

ಜಸ್ವಂತ್ ಸಿಂಗ್ ಜೊತೆ ಕೆಲಸ

ಕೇಂದ್ರೀಯ ಬ್ಯಾಂಕು ಸರ್ಕಾರದ ವಿಭಾಗದಂತೆ ಕೆಲಸ ಮಾಡುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಸ್ವಾಯತ್ತವಾಗಿದೆ. ಚುನಾವಣಾ ಆಯೋಗ ಅಥವಾ ಮಹಾಲೆಕ್ಕಪರಿಶೋಧಕರ ವ್ಯವಸ್ಥೆಗೆ ಇರುವ ಸಂವಿಧಾನಬದ್ಧ ಸ್ವಾಯತ್ತತೆ ಆರ್‌ಬಿಐಗೆ ಇಲ್ಲ. ಹೀಗೆ ಆರ್‌ಬಿಐ ಸರ್ಕಾರಕ್ಕೆ ಸಮಾನವಲ್ಲವಾದರೂ ತನ್ನ ಸೀಮಿತ ಸ್ವಾಯತ್ತತೆಯಲ್ಲಿ ಸ್ವತಂತ್ರ ಹಣಕಾಸಿನ ನೀತಿಯನ್ನು ರೂಪಿಸುತ್ತದೆ. ಹಾಗೆಯೇ ಅರ್ಥ ವ್ಯವಸ್ಥೆಯಲ್ಲಿ ಕೈಗೊಳ್ಳಬೇಕಾದ ಇತರ ಕಾರ್ಯಕ್ರಮಗಳನ್ನು ಸರ್ಕಾರದ ಜೊತೆ ನಿಭಾಯಿಸುತ್ತದೆ. ಒಮ್ಮೊಮ್ಮೆ ಆರ್‌ಬಿಐ ಸರ್ಕಾರದ ಪ್ರತಿನಿಧಿಯಾಗೂ ಕೆಲಸ ಮಾಡುತ್ತದೆ.

ಪರಸ್ಪರ ವಿಶ್ವಾಸ

ಸರ್ಕಾರ–ಆರ್‌ಬಿಐ ನಡುವೆ ಸಹಕಾರ, ನಂಬಿಕೆಯ ಸಂಪ್ರದಾಯ ಜಲಾನ್ ಕಾಲದಲ್ಲಿತ್ತು. ವಿತ್ತ ಮಂತ್ರಿ ಜಸ್ವಂತ್ ಸಿಂಗ್ ಆ ಸಂಪ್ರದಾಯವನ್ನು ಮುಂದುವರೆಸಿದರು. ಜಸ್ವಂತ್ ಸಿಂಗ್ ಬಗ್ಗೆ ಪ್ರಧಾನಮಂತ್ರಿ ವಾಜಪೇಯಿಯವರಿಗೆ ವಿಶ್ವಾಸವಿತ್ತು. ವಿರೋಧಪಕ್ಷದವರನ್ನೊಳಗೊಂಡು ಅನೇಕರಿಗೆ ಅವರ ಬಗ್ಗೆ ಗೌರವವಿತ್ತು. ಒಂದು ವಾಕ್ಯ, ಒಂದೇ ನಗೆ ಚಟಾಕಿಯಿಂದ ಸಂಸತ್ತನ್ನೇ ಗೆಲ್ಲಬಹುದಾದ ಪ್ರತಿಭೆ ಅವರಲ್ಲಿತ್ತು.

ಜಸ್ವಂತ್ ಸಿಂಗ್ ಜೊತೆಗಿನ ಭೇಟಿ ಮಧ್ಯವರ್ತಿಗಳಿಲ್ಲದೇ ಖಾಸಗಿಯಾಗಿ ನಡೆಯುತ್ತಿತ್ತು. ಇಲ್ಲೂ ಜಲಾನ್ ಸಂಪ್ರದಾಯವೇ ಮುಂದುವರೆದಿತ್ತು. ಚರ್ಚೆಯ ವಿಷಯಗಳ ಬಗ್ಗೆ ಇಬ್ಬರೂ ಪೂರ್ಣ ತಯಾರಿಯೊಂದಿಗಿರುತ್ತಿದ್ದೆವು. ನಾವು ಪರಸ್ಪರ ಮಾತುಕತೆಯಲ್ಲಿ ತೊಡಗಿರುತ್ತಿದ್ದೆವಾದ್ದರಿಂದ ಅಪಾರ್ಥಗಳಿಗೆ ತಾವಿರಲಿಲ್ಲ. ಅವರ ಕೆಲಸದ ವಿಧಾನ, ಆಲೋಚನಾ ಮಾದರಿಯ ಬಗ್ಗೆ ಗೊತ್ತಿತ್ತು. ಹೇಳಿದ್ದನ್ನು ಮಾಡುತ್ತಾರೆಂಬ ನಂಬಿಕೆಯಿತ್ತು. ಸಲಹೆ-ಸೂಚನೆಗಳನ್ನು ಗಮನವಿಟ್ಟು ಆಲಿಸುತ್ತಿದ್ದರು.

ಸಾಧಿಸಬೇಕಾದ ಗುರಿಯನ್ನು ಕೂಟ್ಟು ಮಿಕ್ಕ ವಿವರಗಳನ್ನು ಬಿಟ್ಟುಬಿಡುತ್ತಿದ್ದರು. ಗಾಳಿಯಲ್ಲಿ ಕಸರತ್ತು ಮಾಡುತ್ತಿರಲಿಲ್ಲ. ಅವರಿಗೆ ಅಂತರ್‍ರಾಷ್ಟ್ರೀಯ ಮಾರುಕಟ್ಟೆಗಳ ಬಗ್ಗೆ ವ್ಯಾಮೋಹವಿರಲಿಲ್ಲ. ಒಬ್ಬ ಶ್ರೀಸಾಮಾನ್ಯನಂತೆ, ಎಲ್ಲರೊಂದಿಗೆ ಸರಿಸಮಾನರಾಗಿರುತ್ತಿದ್ದ ಅವರ ವ್ಯಕ್ತಿತ್ವ ಅಪರೂಪದ್ದು! ಹುಟ್ಟಿ ಬೆಳೆದ ಹಿನ್ನಲೆ, ಪಾಲಿಸುತ್ತಿದ್ದ ಮೌಲ್ಯಗಳು ಎಲ್ಲದರಲ್ಲೂ ಒಂದು ಸಮಾನತೆಯಿತ್ತು.

ನನ್ನ ಅವಧಿಯ ಮೊದಲ ಒಂಬತ್ತು ತಿಂಗಳುಗಳು ಜಸ್ವಂತ್ ಸಿಂಗ್ ಜೊತೆಗಿತ್ತು. ಗವರ್ನರಾಗಿ ಸೇರಿದಾಗ ಅರ್ಥವ್ಯವಸ್ಥೆ ಬೆಳೆಯುತ್ತಿತ್ತು. ಮುಂದಿನ ದಿನಗಳೂ ಚೆನ್ನಾಗಿ ಕಂಡವು. ಬಡ್ಡಿದರ ಕಮ್ಮಿಯಿತ್ತು, ಋಣವ್ಯವಸ್ಥೆ ಬೆಳೆಯಲು ಸಮಯ ಸಮರ್ಪಕವಾಗಿತ್ತು. ವಿದೇಶ ವಿಭಾಗದಲ್ಲೂ ಪ್ರಬಲರಾಗಿದ್ದೆವು. ಜಾಗತಿಕ ವ್ಯವಸ್ಥೆಯೂ ಅನುಕೂಲಕರವಾಗಿತ್ತು. ಯಾವುದೇ ಕಷ್ಟದ ನಿರ್ಧಾರವನ್ನು ಕೈಗೊಳ್ಳುವ ಅಥವಾ ಒಪ್ಪಂದ ಮಾಡಿಕೊಳ್ಳುವ ಅವಶ್ಯಕತೆ ಇರಲಿಲ್ಲ. ಆರ್ಥಿಕ ಪರಿಸ್ಥಿತಿ, ಮಂತ್ರಿಗಳೊಂದಿಗೆ ಸ್ನೇಹಮಯ ಸಂಬಂಧ ಎಲ್ಲವೂ ಒಟ್ಟಾರೆ ಸುಲಲಿತವಾಗಿತ್ತು. ತಮ್ಮ ಒಂದು ಪುಸ್ತಕದಲ್ಲಿ ಭಾರತದ ನಾಯಕತ್ವದ ಡಿ-ಇ-ಎಫ್ ನಿಭಾಯಿಸಿರುವುದನ್ನು ಅವರು ಹೇಳುತ್ತಾರೆ. ಡಿಫೆನ್ಸ್ (ರಕ್ಷಣೆ), ಎಕ್ಸ್ಟರ್ನಲ್ ಅಫೇರ್ಸ್ (ವಿದೇಶಾಂಗ) ಫೈನಾನ್ಸ್ (ವಿತ್ತ). ಜಸ್ವಂತ್ ಸಿಂಗ್ ಅವರ ಒಲವು ವಿತ್ತ ವಿಭಾಗದಲ್ಲಿರಲಿಲ್ಲ. ಆದರೂ ಅರ್ಥವ್ಯವಸ್ಥೆಯ ಹಿನ್ನೆಲೆಯಿದ್ದವರನ್ನು ನಂಬಿ ಅವರಲ್ಲಿ ವಿಶ್ವಾಸವಿಟ್ಟಿದ್ದರು. ಪ್ರಧಾನಮಂತ್ರಿಗಳ ಮೇಲೆ ಅವರದ್ದು ಸಾಕಷ್ಟು ಪ್ರಭಾವವಿತ್ತು. ತನ್ನನ್ನು ನಂಬಿದವರನ್ನು ಬೆಂಬಲಿಸಲು ಆ ಪ್ರಭಾವವನ್ನು ಉಪಯೋಗಿಸುತ್ತಿದ್ದರು. ನನಗೆ ಪೂರ್ಣ ಐದು ವರ್ಷಗಳ ಅವಧಿಯನ್ನು ಒದಗಿಸಿದ್ದು ಒಂದು ದಿಟ್ಟ ನಿರ್ಧಾರವಾಗಿತ್ತು.

ಸಿಂಗ್ ಅಹಂಕಾರದ, ರಾಜಮನೆತನದ ಗತ್ತಿನ ಮತ್ತು ಉಡಾಫೆಯ ಮನುಷ್ಯ ಎನ್ನುವ ಅಭಿಪ್ರಾಯ ಕೆಲವರಿಗಿತ್ತು. ನನಗೆ ಹಾಗನ್ನಿಸಲಿಲ್ಲ. ಪರಸ್ಪರ ಗೌರವವಿದ್ದದರಿಂದ ನಾವು ಮೂಲಭೂತ ಬದಲಾವಣೆ, ಸುಧಾರಣೆಗಳ ಬಗ್ಗೆ ಜೊತೆಯಾಗಿ ವಿಚಾರ ಮಾಡಲು ಆಗಿತ್ತು. ತಮ್ಮ ಮೇಲೆ ರಾಜಕೀಯ ಒತ್ತಡಗಳಿದ್ದರೆ ಸಿಂಗ್ ಪ್ರಾಮಾಣಿಕವಾಗಿ ಹೇಳುತ್ತಿದ್ದರು. ನಾನೂ ನನ್ನ ದ್ವಂದ್ವಗಳನ್ನು ಹಂಚಿಕೊಳ್ಳುತ್ತಿದ್ದೆ. ಒಟ್ಟಾರೆ ಸಿಂಗ್‌ಗೆ ನಾನು ಕೃತಜ್ಞನಾಗಿರುತ್ತೇನೆ. ನನ್ನನ್ನು ಗವರ್ನರಾಗಿ ಶಿಫಾರಸು ಮಾಡಿದ್ದಕ್ಕಾಗಿ ಅಲ್ಲ. ಗವರ್ನರಾಗಿ ಚೆನ್ನಾಗಿ ಕೆಲಸ ಮಾಡಲು, ಗಟ್ಟಿಯಾದ ನಿರ್ಧಾರಗಳನ್ನು ಕೈಗೊಳ್ಳಲು ಬೇಕಾದ ಬೆಂಬಲವನ್ನು ನೀಡಿದ್ದಕ್ಕಾಗಿ. ಸಿಂಗ್ ಬಗ್ಗೆ ಆರಾಧನೆ ಮತ್ತು ಅಭಿಮಾನಗಳೆರಡೂ ನನಗಿತ್ತು.

ಚಿದಂಬರಂ ಜೊತೆ ಕೆಲಸ

ಮೇ 2004ರ ಚುನಾವಣೆಯ ಫಲಿತಾಂಶ ಬಂದಾಗ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿಲ್ಲ. ಹೀಗಾಗಿ ಹೊಸ ಸರ್ಕಾರದ ಅಧಿಕಾರಗ್ರಹಣಕ್ಕೆ ಸಮಯ ಹಿಡಿಯಿತು. ಮೇ 18ಕ್ಕೆ ವಾರ್ಷಿಕ ಋಣ ನೀತಿಯನ್ನು ಘೋಷಿಸಬೇಕಿತ್ತು, ವಿತ್ತ ಮಂತ್ರಿಗಳು ಯಾರೆಂಬ ಸೂಚನೆಯಿರಲಿಲ್ಲ. ಸಮಾಲೋಚನೆ ಸಾಧ್ಯವಿರಲಿಲ್ಲ. ಸ್ಪಷ್ಟ ಫಲಿತಾಂಶನಿಲ್ಲದ್ದರಿಂದ ಮಾರುಕಟ್ಟೆಯಲ್ಲಿದ್ದ ತಲ್ಲಣವನ್ನು ನಿಭಾಯಿಸಲು ನೀತಿಯ ಘೋಷಣೆ ಮಾಡುವುದೇ ಒಳಿತಾಗಿತ್ತು. ಅತಂತ್ರತೆಯಿದ್ದರೂ, ಕೇಂದ್ರೀಯ ಬ್ಯಾಂಕು ರಾಜಕೀಯ ಭೇದವಿಲ್ಲದೇ ವೃತ್ತಿಪರವಾಗಿ ಕೆಲಸ ಮಾಡುತ್ತದೆನ್ನುವ ಸಂದೇಶವನ್ನು ಕೊಟ್ಟು ನಮ್ಮ ವಿಶ್ವಾಸಾರ್ಹತೆಯನ್ನು ನಿರೂಪಿಸಿದೆವು. ರಾಜಕೀಯ ವಿಚಾರವಾದಕ್ಕೆ ಧಕ್ಕೆಬಾರದಂತಹ ನೀತಿಯನ್ನು ಘೋಷಿಸಿದೆವು. ಯಾವುದೇ ವಿವಾದವಾಗಲಿಲ್ಲ.

ನನ್ನ ನೇಮಕಾತಿಯ ರೀತಿ ಮತ್ತು ಹಿನ್ನೆಲೆಯಿಂದ ನನ್ನನ್ನು ಯಾವುದೇ ರಾಜಕೀಯ ವಿಚಾರಧಾರೆ ಅಥವಾ ಪಕ್ಷಕ್ಕೆ ಜೋಡಿಸುವುದು ಸಾಧ್ಯವಿರಲಿಲ್ಲ. ನೀತಿಯ ಘೋಷಣೆಯನ್ನೂ ಹಾಗೇ ನೋಡುವರೆನ್ನುವ ನಂಬಿಕೆಯಿತ್ತು. ನಿರ್ಗಮಿಸುತ್ತಿರುವ ಸರ್ಕಾರದೊಂದಿಗೆ ಇದ್ದ ಸತ್ಸಂಬಂಧಗಳು ಹೊಸ ಸರ್ಕಾರದೊಂದಿಗೂ ಮುಂದುವರೆಯುವ ನಂಬಿಕೆಯಿತ್ತು. ಹೊಸ ಸರ್ಕಾರದಲ್ಲಿ ಚಿದಂಬರಂ ವಿತ್ತಮಂತ್ರಿಗಳಾದರು. ವಾಣಿಜ್ಯ – ವಿತ್ತ ಮಂತ್ರಿಯಾಗಿ ಅನುಭವವಿದ್ದ ಸರಳ ವ್ಯಕ್ತಿ ಚಿದಂಬರಂ. ಮಂತ್ರಿಯಾಗಿ ಆತ ಹಿರಿಯವರು. ನಾನು ಅಧಿಕಾರದಲ್ಲಿ ಒಂದೊಂದೇ ಮೆಟ್ಟಿಲು ಹತ್ತಿಬಂದವನು. ಆದರೂ ಸಮಾನವಾಗಿ ವ್ಯವಹರಿಸುತ್ತಿದ್ದರು. ಚಿದಂಬರಂ ಅಧಿಕಾರ ವಹಿಸಿಕೊಂಡ ನಂತರ ಭೇಟಿಯಾದೆ. ನಮ್ಮ ಪರಸ್ಪರ ಬಲಾಬಲಗಳು ಇಬ್ಬರಿಗೂ ಗೊತ್ತಿತ್ತು. ಅರ್ಥವ್ಯವಸ್ಥೆ, ವಿದೇಶಿ ವಿಭಾಗ ಸ್ವಸ್ಥವಾಗಿತ್ತು. ಋಣ ಹೆಚ್ಚಾಗಿ ಬೆಳೆಯುವ ನಂಬಿಕೆಯಿತ್ತು. ಆಗ ಅರ್ಥಶಾಸ್ತ್ರದ ಹಲವು ನಿಷ್ಣಾತರು ಏಕಕಾಲಕ್ಕೆ ನಿರ್ಣಾಯಕ ಸ್ಥಾನಗಳಲ್ಲಿದ್ದದ್ದು ಅದ್ಭುತ. ವಿತ್ತ ಮಂತ್ರಿ ಚಿದಂಬರಂ, ಪ್ರಧಾನಿ ಮನಮೋಹನ ಸಿಂಗ್, ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಲಿಯ ರಂಗರಾಜನ್, ಯೋಜನಾ ಆಯೋಗದ ಮಾಂಟೆಕ್ ಅಹ್ಲುವಾಲಿಯಾ ಮತ್ತು ನಾನು. ನಾವು ಮುಕ್ತವಾಗಿ ವಿಷಯಗಳನ್ನು ಚರ್ಚಿಸುತ್ತಿದ್ದೆವು. ನಮ್ಮಲ್ಲಿನ ಸಂಬಂಧದಲ್ಲಿ ಎಲ್ಲರ ಒಳನೋಟಗಳ ಪರಿಣಾಮವಿರುತ್ತಿತ್ತು.

ಹೊಸದಾಗಿ ಬಂದ ಮಂತ್ರಿಗಳಿಗೆ ಮಂತ್ರಾಲಯದ ಆಗಿನ ಸ್ಥಿತಿ ಮತ್ತು ಆದ್ಯತೆಗಳ ವಿಚಾರಗಳನ್ನು ಸರ್ಕಾರಿ ಅಧಿಕಾರಿಗಳು ಮಂಡಿಸುವುದು ಪರಿಪಾಠ. ಇದನ್ನು ನಾನಾ ರೀತಿಯಲ್ಲಿ ಮಾಡಬಹುದು. ಹಿಂದಿನದ್ದನ್ನು ಅಲ್ಲಗಳೆವ ದಿಕ್ಸೂಚಿಯನ್ನು ಕೊಟ್ಟು ಮಂತ್ರಿಗಳೊಂದಿಗೆ ಸತ್ಸಂಬಂಧಕ್ಕೆ ಬುನಾದಿ ಹಾಕುವುದು; ಭಿನ್ನಭಿಪ್ರಾಯಗಳನ್ನು ಚರ್ಚೆಗೆ ತರದಿರುವುದು; ನೀತಿಗೆ ಸಂಬಂಧಿಸಿದ ಪ್ರಮುಖ ತೀರ್ಮಾನಗಳ ಹಿನ್ನೆಲೆ ಮತ್ತು ತರ್ಕವನ್ನು ನಿವೇದಿಸುವುದು. ನನ್ನದು ಮೂರನೆಯ ಮಾರ್ಗವಾಗಿತ್ತು. ಮಂತ್ರಿಗಳು ತರ್ಕವನ್ನು ಪರಿಗಣಿಸಲು ತಯಾರಿದ್ದು, ಚರ್ಚೆಗೆ ಪ್ರತಿಸ್ಪಂದಿಸುತ್ತಾರೆನ್ನುವುದು ನಾನು ಅನುಭವದಿಂದ ಕಲಿತಿದ್ದ ಪಾಠ.

ಚಿದಂಬರಂ ಅವರನ್ನು ಭೇಟಿಮಾಡಿ ಹಿಂದಿನ ಸರ್ಕಾರ ಕೈಗೊಂಡ ಮಹತ್ವದ ನೀತಿಗಳ ಬಗ್ಗೆ ಹೇಳಿದೆ: ವಿದೇಶಿ ವ್ಯಾಪಾರಿ ಸಂಸ್ಥೆಗಳ ಹೂಡಿಕೆಯನ್ನು ನಿಷೇಧಿಸಿದ್ದು, ಭಾರತೀಯ ವ್ಯಾಪಾರಿಗಳು ವಿದೇಶದಲ್ಲಿ ಹೂಡಿಕೆಯಿಡುವ ನೀತಿಯನ್ನು ಉದಾರೀಕರಿಸಿದ್ದು, ವ್ಯಕ್ತಿಗಳು ವಿದೇಶಕ್ಕೆ ಹಣ ಪಾವತಿಸುವ ನೀತಿಯ ಉದಾರೀಕರಣ, ಮಾರುಕಟ್ಟೆ ಸ್ಥಿರೀಕರಣ ಯೋಜನೆ ಮತ್ತು ವಿದೇಶಿ ಸಾಲಕ್ಕೆ ಅನುಮತಿಯ ಅಧಿಕಾರವನ್ನು ನಮಗೆ ವರ್ಗಾಯಿಸಿದ್ದು… ಈ ಎಲ್ಲವೂ ಹಾಗೇ ಮುಂದುವರೆಸಲು ಅವರ ಒಪ್ಪಿಗೆ ಬೇಕಿತ್ತು, ಅವರು ಒಪ್ಪಿದರು.

ವಿದೇಶಿ ಬ್ಯಾಂಕುಗಳನ್ನೊಳಪಡಿಸಿ ವ್ಯವಸ್ಥೆಯನ್ನು ಸುಧಾರಣೆಯತ್ತ ಒಯ್ಯುವ ನೀತಿಯನ್ನು ರೂಪಿಸುವುದರಲ್ಲಿ ಕಾರ್ಯಶೀಲರಾದರು. ಬ್ಯಾಂಕಿಂಗ್‌ನಲ್ಲಿ ದೊಡ್ಡಮಟ್ಟದ ಬದಲಾವಣೆ ಮತ್ತು ಸುಧಾರಣೆಗಾಗಿ ಒಂದು ಸಮಿತಿ ರಚಿಸಿದರು. ನಮ್ಮ ತಜ್ಞತೆಗೆ ಮಹತ್ವ ಕೊಟ್ಟ ಚಿದಂಬಂರಂ ನಮ್ಮ ಬದ್ಧತೆಗಳಿಗೆ ಆಯವ್ಯಯ ಪತ್ರದಲ್ಲಿ ಸ್ಥಾನ ಕಲ್ಪಿಸಿದರು. ಸುಧಾರಣೆಗಳನ್ನು ತನ್ನ “ಅಧಿಕಾರಕ್ಕೆ ಒಳಪಟ್ಟು” ಆರ್‌ಬಿಐ ಜಾರಿಮಾಡುತ್ತದೆ ಎಂದಿದ್ದರು. ಕಾನೂನಿನ ಬದಲಾವಣೆಗಳನ್ನು “ಆರ್‌ಬಿಐ ಜೊತೆ ಚರ್ಚಿಸಿ” ಕೈಗೊಳ್ಳುತ್ತೇವೆ ಎಂದಿದ್ದರು. ನಾವು ಕೇಂದ್ರಬಿಂದುವಾಗಿದ್ದನ್ನು ಗಮನಿಸಿದೆವು.

ಆಯವ್ಯಪತ್ರದ ರೂಪಕಲ್ಪನೆಯ ಚರ್ಚೆಗಳು ವಿಸ್ತೃತವಾಗಿದ್ದುವು. 2004 ರಿಂದ 2008ರವರೆಗೆ ಚಿದಂಬರಂ ಜೊತೆ ನಾಲ್ಕು ಆಯವ್ಯಪತ್ರಗಳ ತಯಾರಿಗಾಗಿ ಕೆಲಸ ಮಾಡಿದೆ. ಅವರು ತಮ್ಮ ಲ್ಯಾಪ್‌ಟಾಪಿನಿಂದ ವಿತ್ತೀಯ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರತಿ ಪ್ಯಾರಾವನ್ನು ಓದುತ್ತಿದ್ದರು, ನಾವು ಚರ್ಚಿಸುತ್ತಿದ್ದೆವು. ಬ್ಯಾಂಕಿಂಗ್ ವ್ಯವಸ್ಥೆಗೆ ಮಹತ್ವ ನೀಡಿ, ಆ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದೆವು. ಬ್ಯಾಂಕಿಂಗ್ ಅರ್ಥವ್ಯವಸ್ಥೆಯ ಕೇಂದ್ರದಲ್ಲಿತ್ತು. ಅದರಲ್ಲಿ ಮಹತ್ವದ ಸ್ಥಾನವಿದ್ದ ಸಾರ್ವಜನಿಕ ಬ್ಯಾಂಕುಗಳ ಕಾರ್ಯವೈಖರಿಯನ್ನು ಪರಿಶೀಲಿಸಿದ್ದೆವು. ಅವುಗಳ ಮೂಲಸ್ವರೂಪ, ಆಡಳಿತಾತ್ಮಕವಾದ ಬದಲಾವಣೆಯನ್ನು ಚಿದಂಬರಂ ಬೆಂಬಲಿಸಿದರೂ ಪೂರ್ಣ ಬದಲಾವಣೆಗೆ ರಾಜಕೀಯ ಮಿತಿಗಳಿದ್ದುವು. ಖಾಸಗೀ ಬ್ಯಾಂಕುಗಳ ಆಡಳಿತ ವ್ಯವಸ್ಥೆ, ಕಾರ್ಯವೈಖರಿ, ಹೂಡಿಕೆ ಮತ್ತು ನಿಕ್ಷೇಪನಿಧಿಗಳ ಮಟ್ಟದ ಸಮರ್ಪಕತೆಯ ಬಗ್ಗೆ ಅನುಮಾನಗಳನ್ನು ಮೊದಲೇ ವ್ಯಕ್ತಪಡಿಸಿದ್ದೆ. ಖಾಸಗಿ ಬ್ಯಾಂಕುಗಳ ನಿರ್ವಹಣಾ ವಿಧಾನದಲ್ಲಿ ಸುಧಾರಣೆಯನ್ನು ತ್ವರಿತವಾಗಿ ರೂಪಿಸಬೇಕಾಗಿತ್ತು. ಚಿದಂಬರಂ ಪೂರ್ಣ ಸಹಕಾರ ಕೊಟ್ಟರು.

ಸರ್ಕಾರಿ ಋಣಪತ್ರಗಳು ಮಾರುಕಟ್ಟೆಯಲ್ಲಿ ಮುಕ್ತ ವ್ಯವಹಾರಕ್ಕೊಳಪಡುವ ಏರ್ಪಾಟನ್ನು ನಿರ್ವಹಿಸುವ ವಿಚಾರದಲ್ಲಿ ಚಿದಂಬರಂ ನಮ್ಮ ನಿಲುವನ್ನು ಒಪ್ಪಿದ್ದರು. ವಿತ್ತೀಯ ವಿಕಾಸ ಸಂಸ್ಥೆಗಳ ಸ್ವಾಮ್ಯ ಆರ್‌ಬಿಐನಿಂದ ಹೊರಗೆ ಉಳಿಯಬೇಕೆನ್ನುವುದನ್ನೂ ಒಪ್ಪಿದ್ದರು. ಸಮಾಜದ ಸೇವೆಗಾಗಿ ಅರ್ಥವ್ಯವಸ್ಥೆ ಇರಬೇಕೆನ್ನುವ ಸೈದ್ಧಾಂತಿಕ ನೆಲೆಯಲ್ಲಿ ಅದನ್ನು ಉತ್ತಮಪಡಿಸುವ ಕಾರ್ಯಕ್ರಮಗಳನ್ನು ಬೆಂಬಲಿಸಿದರು. ಗ್ರಾಹಕರನ್ನು ತಲುಪಲು ಕಷ್ಟವಾಗುವ ಜಾಗದಲ್ಲಿ ಮೂಲಭೂತ ಸೇವೆಗಳನ್ನು ಬ್ಯಾಂಕಿಂಗ್ ಪ್ರತಿನಿಧಿಗಳು ಒದಗಿಸಲು ಅನುವಾಗವಂತೆ ಕಾನೂನಿನ ಬದಲಾವಣೆಯನ್ನು ಸಮರ್ಥಿಸಿದರು. ಮೈಕ್ರೋಫೈನಾನ್ಸ್ ಮೂಲಕ ಸಣ್ಣ ಸಾಲಗಳನ್ನು ಬಡವರಿಗೆ ನೀಡುವುದನ್ನು ಬೆಂಬಲಿಸಿದರು. ಕಾನೂನಿನ ಬದಲಾವಣೆಯ ಅವಶ್ಯವಾದಾಗ ಅದನ್ನು ನಿಭಾಯಿಸಿದರು. ಬ್ಯಾಂಕಿಂಗ್‌ನಲ್ಲಿ ಸಾರ್ವಜನಿಕ ತನಿಖಾಧಿಕಾರಿಗಳ ವ್ಯವಸ್ಥೆಯನ್ನು ವಿಸ್ತರಿಸುವುದನ್ನೂ ಬೆಂಬಲಿಸಿದರು. ಅಷ್ಟೇನೂ ಕೀಲಕವಲ್ಲದ ವಿಚಾರಗಳ ಬಗ್ಗೆಯೂ ಚಿದಂಬರಂ ನನ್ನ ಸಲಹೆ ಪಡೆಯುತ್ತಿದ್ದರು. ಸಹಕಾರಿ ವ್ಯವಸ್ಥೆಯನ್ನು ಉತ್ತಮಪಡಿಸುವು, ಕ್ಷೇತ್ರಿಯ ಗ್ರಾಮೀಣ ಬ್ಯಾಂಕುಗಳನ್ನು ಮರುಸಂಘಟಿಸುವ, ಕೃಷಿಗೆ ಸಂಸ್ಥಾಗತ ಮೂಲಗಳಿಂದ ಋಣ ಸದುಪಾಯವನ್ನು ಬೆಳೆಸುವ ಬಗ್ಗೆ ಅವರೊಂದಿಗೆ ಕೆಲಸ ಮಾಡಿದೆ.

ನಮ್ಮೊಡನೆ ಚರ್ಚಿಸಿ ನಮ್ಮ ಒಪ್ಪಿಗೆಯ ನಂತರವೇ ಆರ್‌ಬಿಐನ. ಆಡಳಿತ ಮಂಡಲಿಯ ಸದಸ್ಯರ ನೇಮಕಾತಿ ಆಗುತ್ತಿತ್ತು. ಪ್ರತಿ ಉಪಗವರ್ನರನ್ನೂ ನಾನು ಸೂಚಿಸಿದ ರೀತಿಯಲ್ಲಿಯೇ ನೇಮಿಸಿದ್ದರು. ಯಾವುದೇ ವಿಷಯವಾದರೂ ವೈಯಕ್ತಿಕವಾಗಿ ಚರ್ಚಿಸುತ್ತಿದ್ದರು. ಕಾರ್ಯದರ್ಶಿ ಅಥವಾ ಮುಖ್ಯ ಆರ್ಥಿಕ ಸಲಹೆಗಾರರನ್ನು ಒಂದೆರಡು ಬಾರಿ ಮಾತ್ರ ನಮ್ಮ ಸಭೆಗೆ ಆಹ್ವಾನಿಸಿದ್ದರಷ್ಟೇ. ನಾರ್ಥ್ ಬ್ಲಾಕಿನ ಅವರ ಕೋಣೆಯಲ್ಲಿ ತಿಂಗಳಿಗೊಮ್ಮೆ ಕನಿಷ್ಠ ಒಂದು ಗಂಟೆಯಕಾಲ ಭೇಟಿಯಾಗುತ್ತಿದ್ದೆವು. ಎಲ್ಲ ವಿಷಯಗಳಲ್ಲಿಯೂ ಚಿದಂಬರಂ ಕಾನೂನಿನ ವಿವರಗಳನ್ನು ಪರಿಶೀಲಿಸಿ, ಆರ್ಥಿಕ ವ್ಯವಸ್ಥೆಯೊಳಗೆ ಅದರ ತರ್ಕವನ್ನು ಗ್ರಹಿಸಿ, ಸಾಂಸ್ಥಿಕ ಚೌಕಟ್ಟನ್ನು ನೋಡಿ ಅನುಷ್ಠಾನದ ವಿವರದ ಬಗ್ಗೆ ಯೋಚಿಸುತ್ತಿದ್ದರು. ಸಹಮತವಿದ್ದರೂ ಇಲ್ಲದಿದ್ದರೂ ನಮ್ಮ ಭೇಟಿಯಲ್ಲಿ ಹೊಸ ವಿಷಯವನ್ನು ಕಲಿತ, ಆಲೋಚನಾ ವಿಧಾನ ಮೊನಚಾಯಿತೆಂಬ ಭಾವನೆಯೊಂದಿಗೆ ವಾಪಸ್ಸಾಗುತ್ತಿದ್ದೆ.

ಅಂತರ್‍ರಾಷ್ಟ್ರೀಯ ವೇದಿಕೆಗಳಲ್ಲಿ, ಬಹುಪಕ್ಷೀಯ ಸಂದರ್ಭದಲ್ಲಿ ಚಿದಂಬರಂ ಜೊತೆ ಕೆಲಸ ಸರಳವಾಗಿತ್ತು. ಮುಖ್ಯವಾಗಿ ಐಎಂಎಫ್, ಜಿ20 ಮತ್ತು ಜಿ24ರಲ್ಲಿ ನಮ್ಮ ಸಂಯೋಜನೆ ಉಳಿದವರು ಅಸೂಯೆ ಪಡುವಷ್ಟು ಅದ್ಭುತವಾಗಿತ್ತು. ಆರ್‌ಬಿಐನಿಂದ ವಿರೋಧಾಭಾಸದ ಸಂದೇಶಗಳು ಬರುತ್ತಿವೆ ಎನ್ನುವ ಮಾತು ಬಂದಾಗ “ನಾನು ಪ್ರಗತಿಯ ಭರವಸೆ ನೀಡಿ ಸಾಧಿಸುತ್ತೇನೆ. ಗವರ್ನರ್ ಸ್ಥಿರತೆಯ ಭರವಸೆ ನೀಡಿ ಸಾಧಿಸುತ್ತಿದ್ದಾರೆ. ಸಮಸ್ಯೆ ಎಲ್ಲಿದೆ?” ಎಂದು ಚಿದಂಬರಂ ಕೇಳಿದ್ದರು. ಬಹುರಾಷ್ಟ್ರೀಯ ಸಭೆಗಳಲ್ಲಿ ಚಿದಂಬರಂ ರಾರಾಜಿಸುತ್ತಿದ್ದರು. ಕಾನೂನಿನ ಹಿನ್ನೆಲೆ ಮತ್ತು ವಿವರಗಳ ಮೇಲಿನ ಹಿಡಿತದಿಂದಾಗಿ ಅವರು ವಾದವನ್ನು ಸಶಕ್ತವಾಗಿ, ನಿರರ್ಗಳವಾಗಿ ಮಂಡಿಸುತ್ತಿದ್ದರು. ಯಾವುದಾದರೂ ವಿಷಯದ ಬಗ್ಗೆ ನನ್ನ ಅಭಿಪ್ರಾಯ ಕೇಳಿದರೆ ಕೊಡುತ್ತಿದ್ದೆ. ಈ ಸಂದರ್ಭಕ್ಕೆ ಸರ್ಕಾರವೇ ಸರ್ವೋಚ್ಚ ಮತ್ತು ಕೇಂದ್ರೀಯ ಬ್ಯಾಂಕು ಅದಕ್ಕೆ ಸಮಾನಾಂತರ ಎಂದು ಭಾವಿಸಿದ್ದೆ. ನಮ್ಮ ಸಂಬಂಧ ಸಂಕೀರ್ಣವಾದದ್ದು ಎನ್ನುವುದನ್ನು ಗುರುತಿಸಿದ್ದೆವು: ಜಗತ್ತಿನ ಜೊತೆ ವ್ಯವಹರಿಸುವಾಗ ಮಂತ್ರಿಗಳು ದೇಶವನ್ನು ಪ್ರತಿನಿಧಿಸುತ್ತಾರೆ. ಗವರ್ನರ್ ಸಹಾಯವನ್ನೊದಗಿಸುತ್ತಾರೆ. ದೇಶದೊಳಗೆ ಗವರ್ನರ್ ಮಂತ್ರಿಗಳ ಅಡಿಯಲ್ಲಿ ಕೆಲಸಮಾಡುವುದಿಲ್ಲ. ಆತ ಮಂತ್ರಿಗಳಿಗೆ ಸಮಾನನೂ ಅಲ್ಲ.

ಪ್ರಧಾನಮಂತ್ರಿ ಮನಮೋಹನ ಸಿಂಗ್ ಜೊತೆ ನನಗೆ ವೃತ್ತಿಪರ ಸಂಬಂಧವಿತ್ತು. ಅವರು ಕೋರಿದಂತೆ ಜಗತ್ತಿನ ಅರ್ಥವ್ಯವಸ್ಥೆಯಲ್ಲಿ ನಮ್ಮ ಸ್ಥಾನದ ಬಗ್ಗೆ ಮಾಹಿತಿಯನ್ನು ಕೊಡುತ್ತಿದ್ದೆ. ಅವರಿಗೆ ಮಿಕ್ಕ ಕೇಂದ್ರೀಯ ಬ್ಯಾಂಕರುಗಳ ಚಟುವಟಿಕೆ ಹಾಗೂ ಆಲೋಚನಾ ವಿಧಾನದ ಬಗ್ಗೆ ಆಸಕ್ತಿಯಿತ್ತು. ಹಿಂದೆ ಅವರೂ ಆರ್‌ಬಿಐ ಗವರ್ನರಾಗಿದ್ದರಾದ್ದರಿಂದ, ಆ ಸ್ಥಾನದ ಬಗ್ಗೆ ಗೌರವವಿತ್ತು. ವಿತ್ತಮಂತ್ರಿಯಾಗಿದ್ದರಿಂದ ಈ ಬದಿಯ ಕಥೆಯೂ ಗೊತ್ತಿತ್ತು. ಅವರ ಸರ್ಕಾರ ಎಡ ಪಕ್ಷಗಳ ಬೆಂಬಲದ ಮೇಲೆ ನಿಂತಿತ್ತು. ರಾಜಕೀಯ ವ್ಯವಸ್ಥೆಯ ತಾತ್ವಿಕ ನಿಲುವಿಗೂ ವಿತ್ತೀಯ ಮತ್ತು ವಿದೇಶಿ ವಿಭಾಗಕ್ಕೆ ಸಂಬಂಧಿಸಿದಂತೆ ನಮ್ಮ ನೀತಿ ನಿರೂಪಣಾ ಕ್ರಿಯೆಗಳಿಗೂ ಇದ್ದ ತಿಕ್ಕಾಟ ಸುಲಭದ್ದಲ್ಲ.

ಚಿದಂಬರಂ ಜೊತೆ ನನಗೊಂದು ಕಷ್ಟವಿತ್ತು. ಅವರೊಂದಿಗೆ ನೀತಿಯ ಸಮಾಲೋಚನೆ ನಡೆಯುತ್ತಿದ್ದಾಗಲೇ ಚಿದಂಬರಂ ಅದನ್ನು ಬಹಿರಂಗವಾಗಿ ಹೇಳುತ್ತಿದ್ದರು. ಅವರ ನಿಲುವಿಗೆ ವ್ಯತಿರಿಕ್ತವಾದ ನೀತಿಯನ್ನು ಘೋಷಿಸಲು ನಮಗೆ ಕಷ್ಟವಾಗುತ್ತಿತ್ತು. ಇದರಿಂದ ಮಾರುಕಟ್ಟೆಯಲ್ಲೂ ಗೊಂದಲವಾಗುತ್ತಿತ್ತು. ಅಥವಾ ಒಮ್ಮೊಮ್ಮೆ ನೀತಿಯ ಪರಿಣಾಮ ನಮ್ಮ ನಿರೀಕ್ಷೆಯಂತಿರುತ್ತಿರಲಿಲ್ಲ. ಸಾಲದ್ದಕ್ಕೆ ನೀತಿಯನ್ನು ಘೋಷಿಸಿದ ತಕ್ಷಣ ಚಿದಂಬರಂ ಬ್ಯಾಂಕುಗಳ ಮುಖ್ಯಸ್ಥರ ಸಭೆಸೇರಿಸಿ, ಅವರಿಗೆ ಮಾರ್ಗದರ್ಶನವನ್ನು ಕೊಡುತ್ತಿದ್ದರು. ನೀತಿಯ ಪರಿಣಾಮ ಹೆಚ್ಚಾಗಿ ಸಾರ್ವಜನಿಕ ಬ್ಯಾಂಕುಗಳ ಮೂಲಕವೇ ಆಗಬೇಕಾಗಿತ್ತಾದ್ದರಿಂದ ಈ ಸಭೆ ನೀತಿಯ ಮೊನಚನ್ನು ಕಡಿಮೆ ಮಾಡುತ್ತಿತ್ತು. ಈ ವಿಷಯವನ್ನು ಚಿದಂಬರಂ ಅವರ ಗಮನಕ್ಕೆ ತಂದೆ. ಇದರಿಂದಾಗಿ ಮಾರುಕಟ್ಟೆಗಳು ಪ್ರಭಾವಿತವಾಗುತ್ತವೆಂದು ಹೇಳಿದೆ ‘ನಿಮ್ಮ ಕಾಳಜಿ ಸರಿಯೇ. ನಿಮ್ಮ ನಿಲುವೂ ಅರ್ಥವಾಗುತ್ತಿದೆ. ಆದರಿದು ಪ್ರಜಾಪ್ರಭುತ್ವ, ನನ್ನ ಆಲೋಚನೆಗಳನ್ನು ಜನರಲ್ಲಿ ಹಂಚಿಕೊಳ್ಳುವ ಹಕ್ಕು ನನಗಿದೆ’ ಅಂದರು. ಅಲ್ಲಿಗೆ ಆ ಮಾತು ಬಿಟ್ಟೆ.

ಮುಂದೆ ಚಿದಂಬರಂ ತಮ್ಮ ಅಭಿಪ್ರಾಯವನ್ನು ಜಾಗರೂಕತೆಯಿಂದ ವ್ಯಕ್ತಪಡಿಸುತ್ತಿದ್ದರು. ನಮ್ಮ ನೀತಿಯ ರೂಪಕಲ್ಪನೆಯ ಸಮಯಕ್ಕೆ ಚಿದಂಬರಂ ಪ್ರತಿಕ್ರಿಯೆ ಹೇಗಿರಬಹುದೆಂದು ಊಹಿಸಿ ನನ್ನ ತಯಾರಿ ಮಾಡಿಕೊಳ್ಳುತ್ತಿದ್ದೆ. ಮುಖ್ಯ ವಿಷಯವಿದ್ದರೆ ಪ್ರಧಾನಿಯವರ ಸಲಹೆ ಪಡೆಯುತ್ತಿದ್ದೆವು.

ಚಿದಂಬರಂ ಮಂತ್ರಿಯಾಗುವುದಕ್ಕೆ ಮೊದಲೇ ನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದುವು, ವಿತ್ತೀಯ ವ್ಯವಸ್ಥೆಯನ್ನು ಬಿಗಿಗೊಳಿಸುವ ಪ್ರಯತ್ನದಲ್ಲಿ 2006ರ ಹಣಕಾಸು ನೀತಿಯನ್ನು ಘೋಷಿಸಿದಾಗ ಭಿನ್ನಾಭಿಪ್ರಾಯ ವಿಸ್ತಾರಗೊಂಡಿತು. ಜಾಗತಿಕ ಅಸಮತೋಲನ, ತೈಲದ ಬೆಲೆಗಳು, ಋಣ ವಿತರಣೆಯ ಮಟ್ಟ ಮತ್ತು ಆಸ್ತಿಯ ಬೆಳವಣಿಗೆ ಎಲ್ಲವೂ ಆತಂಕಕ್ಕೆ ಕಾರಣವಾಗಿದ್ದವು. ಬೆಳವಣಿಗೆಯ ಸಾಧ್ಯತೆ ಮತ್ತು ಆಸ್ತಿಯ ಬೆಲೆಗಳ ಬಗ್ಗೆ ನಮ್ಮ ಅಭಿಪ್ರಾಯಗಳು ವಿರುದ್ಧವಾಗಿದ್ದುವು. 2006ರ ಮಧ್ಯಮಾವಧಿ ಋಣ ನೀತಿಯಲ್ಲಿ ಮಾರುಕಟ್ಟೆಗಳು ಕಾವೇರುತ್ತಿವೆಯೆಂದು, ರಿಪೋ ದರಗಳನ್ನು ಹೆಚ್ಚಿಸಿದೆ. ಈ ಸೂಚನೆ, ನಮ್ಮ ಹಣ ತುಟ್ಟಿಯಾಗುತ್ತೆಂಬ ಸಂಕೇತ. ಗೃಹನಿರ್ಮಾಣ ಕ್ಷೇತ್ರದಲ್ಲಿ ಪಾರದರ್ಶಕತೆಯ ಬಗ್ಗೆ ಕೆಲವು ಪ್ರಶ್ನೆಗಳೂ ಉದ್ಭವವಾಗಿದ್ದುವು.

ಶೇಕಡಾ 0.25 ಬಡ್ಡಿದರ ಹೆಚ್ಚಿಸಿದ್ದು “ಒಳ್ಳೆಯ ಉದ್ದೇಶ”ದಿಂದ ಮಾಡಿದ್ದೆಂದು ಚಿದಂಬರಂ ಸಮರ್ಥಿಸಿದರು. ಮಾರುಕಟ್ಟೆ ಕಾವೇರುತ್ತಿರುವ ಲಕ್ಷಣವಿಲ್ಲ ಎಂದ ಅವರು “ಆರ್‌ಬಿಐ ಕ್ರಮ ಕೈಗೊಳ್ಳದಿದ್ದರೆ ಕಾವೇರುತ್ತಿತ್ತೇನೋ” ಎಂದರು. ಹೀಗೆ ಹೊರಗೆ ಆರ್‌ಬಿಐ ಕ್ರಮವನ್ನು ಸಮರ್ಥಿಸಿದರೂ “ಕಾವೇರುತ್ತಿದೆ” ಎಂಬ ಮಾತಿನ ಬಗ್ಗೆ ಖಾರವಾಗಿದ್ದರು. “ಏನು ಮಾಡುತ್ತಿದ್ದೀರಿ? ದಶಕಗಳಿಂದ ಎರಡಂಕಿ ಬೆಳವಣಿಗೆಯ ಕನಸು ಕಾಣುತ್ತಿದ್ದೇವೆ. ಈಗ ಎಟುಕುವಂತಿರುವುದನ್ನ ನಾಶಮಾಡುತ್ತಿದ್ದೀರಿ. ಮಾರುಕಟ್ಟೆ ಕಾವೇರುತ್ತಿರುವುದಕ್ಕೆ ಪುರಾವೆಯಿದೆಯೇ? ಕಾವು ಎನ್ನುವುದೇ ಅರ್ಥವಾಗುತ್ತಿಲ್ಲ” ಎಂದರು. ಆ ಮಾತಿನ ನಂತರ ಕಾವೇರುತ್ತಿದೆ ಎನ್ನುವ ಪರಿಭಾಷೆಯನ್ನು ಬಿಟ್ಟೆ, ಆಸ್ತಿಯ ಋಣ ಸರಬರಾಜಿನ ಅತಿ ಹರಿವನ್ನು ನಿಯಂತ್ರಿಸಿ ತನ್ಮೂಲಕ ಗುಳ್ಳೆಗಳನ್ನು ನಿಯಂತ್ರಿಸುವುದನ್ನು ಮುಂದುವರೆಸಿದೆ. ನನ್ನ ದಾರಿಯನ್ನು ಸೂಕ್ಷ್ಮವಾಗಿ ಟೀಕಿಸಿದ್ದ ಚಿದಂಬರಂ ಅವರಿಗೆ ನನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದೆ. 2007ರಲ್ಲಿ ಬೆಲೆಯೇರಿಕೆಯ ಗರಿಷ್ಠ ಮಟ್ಟದ ಗುರಿಯನ್ನು ನಾವು ಇಟ್ಟುಕೊಂಡದ್ದನ್ನೂ ಚಿದಂಬರಂ ಖಾರವಾಗಿ ಟೀಕಿಸಿದ್ದರು.

ತಾಂತ್ರಿಕವಾಗಿ ಆರ್‌ಬಿಐ ನೀತಿಯನ್ನು ರೂಪಿಸಿದರೂ, ವಿತ್ತಮಂತ್ರಿಗಳೊಂದಿಗೆ ಚರ್ಚಿಸಿ ನೀತಿಯ ದಿಕ್ಕಿನ ಬಗ್ಗೆ ಒಪ್ಪಂದಕ್ಕೆ ಬರುವುದು ಪದ್ಧತಿ. ಋಣನೀತಿ ಸಡಿಲಗೊಳಿಸುವುದೋ, ಬಿಗಿಯಾಗಿಸುವುದೋ, ಯಥಾಸ್ಥಿತಿ ಕಾಯ್ದಿಡಬೇಕೋ ಚರ್ಚಿಸುತ್ತೇವೆ. 

“ಮಧ್ಯಮಾವಧಿ ಬೆಲೆಯೇರಿಕೆಯ ಮಟ್ಟವನ್ನು ಶೇಕಡಾ 5ರಿಂದ ಶೇಕಡಾ 4 ಅಥವಾ 4.5ಕ್ಕೆ ನಿಯಂತ್ರಿಸಬೇಕು” ಎಂದೆ. “ಇದು ಮಹತ್ವಾಕಾಂಕ್ಷೆಯ ಗುರಿ. ಇದನ್ನು ಒಪ್ಪೋದಿಲ್ಲ” ಎಂದು ಚಿದಂಬರಂ ಹೇಳಿದರೂ ತಮ್ಮ ನಿಲುವನ್ನು ಪ್ರಕಟಿಸಲಿಲ್ಲ. ಅವರಿಗೆ ತ್ವರಿತಗತಿಯ ಬೆಳವಣಿಗೆಯೂ ಬೇಕಿತ್ತು, ಆದರೆ ಬೆಲೆಯೇರಿಕೆಯನ್ನ ಹದ್ದುಬಸ್ತಿನಲ್ಲಿಟ್ಟರುವಂತೆ ತೋರಿಸಿಕೊಳ್ಳಬೇಕಿತ್ತು. ಹಣಕಾಸಿನ ನೀತಿಯಂತೆಯೇ, ವಿನಿಮಯ ನಿರ್ವಹಣೆಯೂ ಸರ್ಕಾರ ಮತ್ತು ಆರ್‌ಬಿಐ ನಡುವಿನ ಸಂಬಂಧವನ್ನು ಸಂಕೀರ್ಣಗೊಳಿಸಿತ್ತು. 2006ರ ಅಂತ್ಯದವರೆಗೆ ದರಗಳು ಹದ್ದುಬಸ್ತಿನಲ್ಲಿದ್ದು, ನಮ್ಮ ಸಂಗ್ರಹವೂ ಬೆಳೆದಿತ್ತು. ಹಿಂದೆ ರೂಪಾಯಿನ ದರ ಕುಸಿತದ ಒಮ್ಮುಖ ಯಾತ್ರೆಯನ್ನೇ ಕಂಡಿದ್ದೆವು. ಈಗ ಏರಿಳಿತ ಎರಡೂ ಆಗುತ್ತಿತ್ತು. 2007ರ ಮೊದಲಭಾಗದ ವೇಳೆಗೆ ವಿನಿಮಯದ ಸಂಗ್ರಹ ಸಾಕಷ್ಟಿತ್ತು. ಈ ಮಟ್ಟದಲ್ಲಿ ಮಾರುಕಟ್ಟೆಯ ಹಸ್ತಕ್ಷೇಪ ಮಾಡಿ ಖರ್ಚನ್ನು ಭರಿಸುವುದಕ್ಕಿಂತ ರೂಪಾಯಿಯ ಬೆಲೆ ಹೆಚ್ಚಲು ಬಿಡುವುದೇ ಒಳ್ಳೆಯದೆನ್ನುವ ವಿಚಾರ ಚಿದಂಬರಂ ಅವರಲ್ಲಿತ್ತು. ಹೂಡಿಕೆಗಾಗಿ ಬರುತ್ತಿರುವ ವಿದೇಶಿ ವಾಣಿಜ್ಯ ಸಾಲಗಳ ಒಳಹರಿವನ್ನು ಬಿಗಿಗೊಳಿಸಿ, ಹಸ್ತಕ್ಷೇಪವಿಲ್ಲದೆಯೇ ರೂಪಾಯಿಯ ಮೌಲ್ಯವೃದ್ಧಿಯನ್ನು ನಿಯಂತ್ರಿಸಬಹುದೆನ್ನುವುದು ನಮ್ಮ ವಿಚಾರವಾಗಿತ್ತು. ಸರ್ಕಾರಕ್ಕೆ ಒಳಹರಿವನ್ನು ತಡೆಯುವ ಇರಾದೆಯಿರಲಿಲ್ಲ. ಶುದ್ಧೀಕರಣದ ಮಾರ್ಗವನ್ನು ಬಿಟ್ಟು ರೂಪಾಯಿಯ ಬೆಲೆ ವೃದ್ಧಿಸುವುದಕ್ಕೆ ಬಿಡಬೇಕೆನ್ನುವುದು ಸರ್ಕಾರದ ನಿಲುವಾಗಿತ್ತು.

ರೂಪಾಯಿ ತುಟ್ಟಿಯಾಗುವುದರ ಬಗ್ಗೆ ಚಿದಂಬರಂ ಅವರಲ್ಲಿ ಪ್ರಸ್ತಾಪಿಸಿದೆ. ಅದರಿಂದ ಏನೂ ಮುಜುಗರವಿಲ್ಲವೆಂದೂ – ಶುದ್ಧೀಕರಣದಿಂದಾಗುವ ಖರ್ಚು-ಖೋತಾವನ್ನು ಸರ್ಕಾರ ಭರಿಸಲು ತಯಾರಿಲ್ಲವೆಂಬ ಸೂಚನೆ ವಿತ್ತ ಮಂತ್ರಾಲಯದಿಂದ ಬಂತು. ಮಾರುಕಟ್ಟೆ ಸ್ಥಿರೀಕರಣ ಯೋಜನೆಯ ಮಟ್ಟವನ್ನು ಹೆಚ್ಚಿಸಲು ಕಳುಹಿಸಿದ ಪ್ರಸ್ತಾವನೆಯ ಬಗ್ಗೆ ಚರ್ಚಿಸಿದರಾದರೂ, ಮಾರುಕಟ್ಟೆ ಸ್ಥಿರೀಕರಣ ಯೋಜನೆಯನ್ನು ಸೀಮಿತಗೊಳಿಸಿದರು. ಹೀಗಾಗಿ, ಮಾರುಕಟ್ಟೆಯ ಹಸ್ತಕ್ಷೇಪಕ್ಕೆ ನಮಗಿದ್ದ ಸಾಮರ್ಥ್ಯ ಕುಂಠಿತವಾಯಿತು. ಶುದ್ಧೀಕರಣವೂ ಆಗಲಿಲ್ಲ. ವಿನಿಮಯದ ಮೌಲ್ಯವೃದ್ಧಿಯ ಪರಿಣಾಮಗಳ ಬಗ್ಗೆ ಹೇಳಿದೆ. ಮೌಲ್ಯವೃದ್ಧಿಯ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲವೆನ್ನುವ ಅಭಿಪ್ರಾಯ ಮುಂದುವರೆಯಲು ಅವರಿಗೆ ಅಭ್ಯಂತರವಿರಲಿಲ್ಲ. ಒಂದು ಘಟ್ಟದನಂತರ ಇದನ್ನು ಚರ್ಚಿಸಿ ಪ್ರಯೋಜನವಿಲ್ಲವೆನ್ನಿಸಿ, ಈ ವಿಚಾರದಲ್ಲಿ ಮಂತ್ರಾಲಯದ ಯೋಚನಾವಿಧಾನಕ್ಕೆ ನಮ್ಮನ್ನೊಡ್ಡಿಕೊಳ್ಳುವುದೇ ಸರಿ ಅನ್ನಿಸಿತು.

ರೂಪಾಯಿಯ ಬೆಲೆಯ ವೃದ್ಧಿ ತಡೆಯಲು ಹಸ್ತಕ್ಷೇಪ (ಅಂದರೆ ಮಾರುಕಟ್ಟೆಯಲ್ಲಿ ವಿದೇಶಿ ವಿನಿಮಯ ಖರೀದಿ) ಮಾಡಬಾರದೆಂದು ಆದೇಶ ಕೊಟ್ಟೆ. ಈ ತೀರ್ಮಾನ ಕೈಗೊಂಡದ್ದರ ಬಗ್ಗೆ ಪತ್ರ ಬರೆದು ಅದೇ ಪತ್ರದಲ್ಲಿ, ಬಿಡುಗಡೆಯಾದ ರೂಪಾಯಿಯ ದ್ರವ್ಯತೆಯ ಶುದ್ಧೀಕರಣಕ್ಕಾಗಿ ಸರ್ಕಾರಿ ಬಾಂಡುಗಳನ್ನು ಮಾರಲು ಮಾರುಕಟ್ಟೆ ಸ್ಥಿರೀಕರಣ ಯೋಜನೆಯ ಪರಿಮಿತಿಯನ್ನು ವೃದ್ಧಿಸುವ ಕೋರಿಕೆ ಮತ್ತು ಪತ್ರಿಕೆಗಳಲ್ಲಿ ಬಂದಿದ್ದ ವರದಿಗಳನ್ನೂ ಕಳುಹಿಸಿಕೊಟ್ಟಿದ್ದೆವು. ನಿರೀಕ್ಷೆಯಂತೆ ಹಸ್ತಕ್ಷೇಪ ನಿಲ್ಲಿಸಿದ ಕೂಡಲೇ ರೂಪಾಯಿಯ ಬೆಲೆ ವೃದ್ಧಿಯಾಯಿತು.

ಆರ್‌ಬಿಐ ಹಿಂದಿನಂತೆಯೇ ವಿನಿಮಯ ಮಾರುಕಟ್ಟೆಯ ಹಸ್ತಕ್ಷೇಪ ಮುಂದುವರೆಸಲು ಸರ್ಕಾರದ ಪೂರ್ಣ ಸಹಕಾರವಿರುತ್ತದೆಂದು ವಿತ್ತ ಕಾರ್ಯದರ್ಶಿಗಳು ತಿಳಿಸದರು. ವಿತ್ತಮಂತ್ರಿ ಮತ್ತು ಪ್ರಧಾನಿಗಳ ಪರಸ್ಪರ ಭೇಟಿ, ಚರ್ಚೆಯನಂತರ ಈ ಸೂಚನೆ ನೀಡಲಾಗಿತ್ತು. ನಾವು ವಿನಿಮಯ ಮಾರುಕಟ್ಟೆಯಲ್ಲಿ ಹಸ್ತಕ್ಷೇಪವನ್ನು ಮುಂದುವರೆಸಿದೆವು. ಆ ಹೊತ್ತಿಗೆ ಸರ್ಕಾರ ಬಯಸಿದ್ದ ದಿಕ್ಕಿಗೆ ಬೆಲೆಗಳು ಸಾಗಿ ಸರಿಹೊಂದಿದ್ದವು. ಆವರೆಗಾಗಿದ್ದ ರೂಪಾಯಿಯ ಮೌಲ್ಯವೃದ್ಧಿಯ ಬಗ್ಗೆ ಬಹುಶಃ ಸರ್ಕಾರಕ್ಕೆ ಕಾಳಜಿಯಿರಲಿಲ್ಲವೇನೋ. ಅಥವಾ ರೂಪಾಯಿಯ ಮೌಲ್ಯ ವೃದ್ಧಿಯಿಂದಾಗಿ ಬೆಲೆಯೇರಿಕೆಯ ಮಟ್ಟವನ್ನು ಹದ್ದುಬಸ್ತಿನಲ್ಲಿಡಲು ಸಹಕಾರಿಯಾಗಿತ್ತೆಂದು ಸರ್ಕಾರ ಭಾವಿಸಿತ್ತೇನೋ. ಈ ಬಗ್ಗೆ ಅಧ್ಯಯನ ಮಾಡಿದ ವಿದ್ವಾಂಸರು ಮಾರ್ಚ್ 2007ರ ವಿನಿಮಯದರದ ಏರುಪೇರನ್ನು ಆರ್.ಬಿ.ಐ ನೀತಿಗೆ ಜೋಡಿಸಿ ನೋಡಿದ್ದಾರೆ. ಆದರೆ ಈ ಏರುಪೇರು ಸಂಭವಿಸಿದ್ದು ವಿತ್ತಮಂತ್ರಿಗಳ ಅಸಾಧಾರಣ ಉಪಕ್ರಮದಿಂದಾಗಿ. ನಮ್ಮ ನಡುವೆ ಈ ಬಗ್ಗೆ ಮಾತುಕತೆ ಇಲ್ಲವಾಗಿತ್ತಾದರೂ, ನಮ್ಮ ಜೊತೆ ಕೆಲಸ ಮಾಡುತ್ತಿದ್ದವರು ಈ ವಿಷಯವನ್ನು ಪರಸ್ಪರ ಚರ್ಚಿಸುತ್ತಿದ್ದರು. ನಮ್ಮಲ್ಲಿ ಸಾಕಷ್ಟು ವಿನಿಮಯದ ಸಂಗ್ರಹವಿದ್ದುದರ ಬಗ್ಗೆ ಸರ್ಕಾರಕ್ಕೆ ತಕರಾರಿಲಿಲ್ಲ. ರೂಪಾಯಿಯ ಬೆಲೆ ಹೆಚ್ಚುವುದರ ಬಗ್ಗೆಯೂ ಕಾಳಜಿಯಿರಲಿಲ್ಲ. ಆದರೆ ಖೋತಾವನ್ನು ಹದ್ದುಬಸ್ತಿನಲ್ಲಿಡುವ, ಬೆಲೆಯೇರಿಕೆಯನ್ನು ನಿಯಂತ್ರಿಸುವ ದಾರಿಯನ್ನು ಸರ್ಕಾರ ನೋಡುತ್ತಿತ್ತು. ವಿನಿಮಯದ ಸಮತೋಲನದ ಬಗ್ಗೆ ನಾವು ಮಹತ್ವ ನೀಡಿದ್ದೆವು. ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ಮಾಡಿ ನಮ್ಮ ಚಾಲ್ತಿ ಖಾತೆಯ ಖೋತಾವನ್ನು ಹದ್ದುಬಸ್ತಿನಲ್ಲಿಟ್ಟು, ವಿದೇಶಿ ಮಾರುಕಟ್ಟೆಗಳಲ್ಲಿ ನಮ್ಮ ಸ್ಪರ್ಧಾತ್ಮಕತೆಯನ್ನು ಉಳಿಸಿಕೊಳ್ಳಬೇಕೆನ್ನುವುದು ನನ್ನ ನಿಲುವಾಗಿತ್ತು.

2007ರ ಆಯವ್ಯಯ ಪತ್ರದಲ್ಲಿ ವಿತ್ತ ಮಂತ್ರಿಗಳು ಗೃಹನಿರ್ಮಾಣ ಅಡಮಾನ ಸಾಲದ ವಿಮಾ ಕಂಪನಿಗಳಿಗೆ ಅನುಮತಿ ನೀಡುವುದಾಗಿ ಘೋಷಿಸಿದರು. ವಿದೇಶಗಳಲ್ಲಿ ಈ ಕಂಪನಿಗಳು ವಿಫಲವಾಗುತ್ತಿದ್ದ ಹಿನ್ನೆಲೆಯಿತ್ತು. ಈ ಬಗ್ಗೆ ವಿವರವಾದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಬೇಕಿತ್ತು. ಈ ಸಂಸ್ಥೆಗಳ ಕಾರ್ಯವೈಖರಿಯಲ್ಲಿದ್ದ ದೌರ್ಬಲ್ಯಗಳು ನಮಗೆ ಗೊತ್ತಿದ್ದರಿಂದ, ಕಂಪನಿಗಳು ಅತ್ಯಂತ ಶಕ್ತಿಶಾಲಿಯಾಗದಂತೆ ಸೂತ್ರಗಳನ್ನು ರೂಪಿಸಿದೆವು. ಈ ಮಾರ್ಗದರ್ಶಿ ಸೂತ್ರಗಳನ್ನು ನಾವು ಪ್ರಕಟಿಸುವುದಕ್ಕೆ ಸರ್ಕಾರದ ಅನುಮತಿ ಬೇಕಿತ್ತು. ಈ ಅಡಮಾನದ ಸಾಲಗಳು ಸುಸ್ತಿಗೆ ಬಿದ್ದಾಗ ಬ್ಯಾಂಕುಗಳು ತಮ್ಮ ಸಾಲ ವಸೂಲಿಯ ಮಾರ್ಗಗಳನ್ನೆಲ್ಲಾ ಕ್ರಮಿಸಿದ ನಂತರವೇ ವಿಮಾ ಕಂಪನಿಗಳು ಆಶ್ವಾಸನೆಯ ಮೊತ್ತವನ್ನು ಕೊಡಬೇಕೆಂದು ಸರ್ಕಾರ ಸೂಚಿಸಿತ್ತು. ಒಟ್ಟಾರೆ ಹೂಡಿಕೆಯಲ್ಲಿ ಶೇಕಡಾ 15ರಷ್ಟು ಷೇರು ಬಂಡವಾಳ ಮತ್ತು ನಿಕ್ಷೇಪನಿಧಿಗಳಿರಬೇಕೆಂದು ನಾವು ಸೂಚಿಸಿದ್ದು ಹೆಚ್ಚೆಂದು ಸರ್ಕಾರಕ್ಕೂ ವಿದೇಶಿ ಸಂಘಟಿತ ಸಂಸ್ಥೆಗಳಿಗೂ ಅನ್ನಿಸಿತ್ತು. ಚಿದಂಬರಂಗೂ ಆ ಅಭಿಪ್ರಾಯವಿದ್ದಂತೆ ಕಂಡಿತ್ತಾದರೂ ಸರ್ಕಾರ ನಮ್ಮ ಮಾರ್ಗದರ್ಶಿ ಸೂತ್ರಗಳನ್ನು ಒಪ್ಪಿತು. ಈ ವಿಷಯವನ್ನು ಚಿದಂಬರಂ ಚರ್ಚಿಸಲಿಲ್ಲವಾದರೂ ಅವರ ಅಸಮಾಧಾನವನ್ನು ನನಗೆ ತಿಳಿಸುವಲ್ಲಿ ಸಫಲರಾಗಿದ್ದರು.

ಐಸಿಐಸಿಐ ಮತ್ತದರ ಅಂಗ ಸಂಸ್ಥೆಗಳನ್ನು ಒಂದೇ ಚಾವಣಿಯಡಿಯಲ್ಲಿ ತರಲು ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸುವ ಆಶಯವಿತ್ತು. ಆ ಸಂಸ್ಥೆಯಲ್ಲಿ ವಿದೇಶಿ ಸಂಘಟನೆಗಳೂ ಹೂಡಿಕೆಯನ್ನಿಡಲು ಫಾರಿನ್ ಇನ್ವೆಸ್ಟ್‌ಮೆಂಟ್ ಪ್ರಮೋಷನ್ ಬೋರ್ಡ್ (ವಿದೇಶಿ ಹೂಡಿಕೆ ಪ್ರೋತ್ಸಾಹನ ಮಂಡಳಿ, ಎಫ್‌ಐಪಿಬಿ) ಅನುಮತಿ ಕೊಟ್ಟಿತ್ತು. ಅದಕ್ಕೆ ನಾವೂ ಅನುಮತಿ ಕೊಡಬೇಕಿತ್ತು. ಆದರೆ ಇದಕ್ಕೆ ಬೇಕಿದ್ದ ಮಾರ್ಗದರ್ಶಕ ಸೂತ್ರಗಳು ಮತ್ತು ನಿಯಮಗಳು ನಮ್ಮಲ್ಲಿರಲಿಲ್ಲ. ತಕ್ಷಣಕ್ಕೆ ನಮ್ಮ ಕಾರ್ಯನಿರ್ವಾಹಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಒಂದು ಕಾರ್ಯಕಾರಿ ಸಮಿತಿಯನ್ನು ರಚಿಸಿ ಈ ರೀತಿಯ ಅನುಮತಿಗಳನ್ನು ನೀಡಲು ತಕ್ಕ ನಿಯಮಾವಳಿ ರೂಪಿಸುವ ಕೆಲಸವನ್ನು ಒಪ್ಪಿಸಿದೆವು. ಇದು ಸಂಕೀರ್ಣವಾಗಿತ್ತು. ಕಾರ್ಯಗತಗೊಳಿಸಲು ಸಮಯ ಬೇಕಾಯಿತು. ಇದನ್ನು ನಾವು ವಿರೋಧಿಸಬಹುದು ಎನ್ನುವ ಕಾರಣಕ್ಕಾಗಿಯೇ ಈ ವಿಷಯವನ್ನು ಸರ್ಕಾರ ಮೊದಲೇ ಚರ್ಚಿಸಿರಲಿಲ್ಲವೇನೋ.

ಹಣಕಾಸು ನೀತಿ ಮತ್ತು ವಿದೇಶಿ ಕ್ಷೇತ್ರದ ನಿರ್ವಹಣೆ ಎರಡೂ ಸುಧಾರಣೆಯ ದ್ಯೋತಕಗಳೇ. ನಮ್ಮ ನೀತಿಗಳಲ್ಲಿನ ಸಮತೋಲನ ಕಾಪಾಡುತ್ತಾ ಮಾರುಕಟ್ಟೆಯತ್ತ ಒಯ್ಯುವುದು, ಒಟ್ಟಾರೆ ಬೆಳವಣಿಗೆ ಸಾಧಿಸುತ್ತ, ಸ್ಥಿರತೆಯ ಹಣಕಾಸು ನೀತಿಯನ್ನು ಪಾಲಿಸುತ್ತಲೇ, ಸುಧಾರಣೆಯತ್ತ ಸಾಗಬೇಕೆನ್ನುವ ಬಗ್ಗೆ ಸಹಮತವಿತ್ತು. ಬ್ಯಾಂಕಿಂಗ್, ಹೂಡಿಕೆ ಮತ್ತು ಅರ್ಥವ್ಯವಸ್ಥೆಗೆ ಯಾವ ರೀತಿಯ ಸಂಬಂಧವನ್ನು ಕಲ್ಪಿಸಬೇಕು ಸುಧಾರಣೆ ಯಾವ ಕ್ರಮದಲ್ಲಾಗಿ, ಯಾವುದಕ್ಕೆ ಆದ್ಯತೆ ಕೊಡಬೇಕೆನ್ನುವುದಲ್ಲಿ ಭಿನ್ನಮತವಿತ್ತು. ವಿತ್ತೀಯ ಕ್ಷೇತ್ರದ ಸುಧಾರಣೆಯೇ ಮೊದಲೆಂದು ಚಿದಂಬರಂ ನಂಬಿಕೆ. ಮಾರುಕಟ್ಟೆಯ ಸುಧಾರಣೆಯಿಲ್ಲದೆ ವಿತ್ತೀಯ ಕ್ಷೇತ್ರಕ್ಕೆ ಕಾಲಿಟ್ಟರೆ ಮಾರುಕಟ್ಟೆಯ ಏರುಪೇರಿಗೆ ಕಾರಣವಾಗಬಹುದೆನ್ನುವ ಕಾಳಜಿ ನನ್ನದು. ಮಿಕ್ಕ ಮಾರುಕಟ್ಟೆಗಳು ಬೆಳೆಯಲೆಂದು ವಿತ್ತೀಯ ಕ್ಷೇತ್ರದ ಸುಧಾರಣೆಗಾಗಿ ಕಾಯುವ, ದೀರ್ಘ ಸುಧಾರಣೆಯ ಪ್ರಕ್ರಿಯೆಗೆ ವ್ಯವಧಾನವಿಲ್ಲವೆಂದು ಚಿದಂಬರಂ ವಾದಿಸಿದ್ದರು.
ವಿತ್ತೀಯ ಮಾರುಕಟ್ಟೆಗಳಲ್ಲಿ ಬಾಂಡ್ ಮತ್ತು ಕರೆನ್ಸಿಯ ಉಪೋತ್ಪನ್ನಗಳ ಮಾರುಕಟ್ಟೆಗಳೂ ಸಮಗ್ರವಾಗಿ ಬೆಳೆಯಬೇಕೆನ್ನುವುದು ಚಿದಂಬರಂ ವಿಚಾರ. ಆದರೆ ಅದಕ್ಕೆ ವಿತ್ತೀಯ ಕ್ಷೇತ್ರದ ಸುಧಾರಣೆ ಆಗಬೇಕೆನ್ನುವುದು ನನ್ನ ನಿಲುವು. ಆರ್ಥಿಕ ಮಾರುಕಟ್ಟೆಗಳ ಸಮಗ್ರತೆ ನಮಗೆ ತುಂಬಾ ಮುಖ್ಯವಾಗಿತ್ತು. ಋಣದ ಮಾರುಕಟ್ಟೆ ಹೆಚ್ಚಾಗಿ ಸರ್ಕಾರಿ ಬಾಂಡುಗಳಿಗೆ ಸೀಮಿತವಾಗಿತ್ತು. ಇವು ಬಡ್ಡಿ ದರವನ್ನು ಪ್ರಭಾವಿಸುವುದರಿಂದ ಮೊದಲಿಗೆ ಇದರ ಸುಧಾರಣೆ ಆಗಬೇಕಿತ್ತು. ಇಲ್ಲಿಯೂ ನಮಗೆ ಸಹಮತವಿತ್ತು.

ಆರ್‌ಎಚ್.ಪಾಟೀಲ್ ಸಮಿತಿಯ ವರದಿ ಸುಧಾರಣೆಗೆ ಮೂಲಾಧಾರವಾಗಬೇಕೆಂದು ಒಪ್ಪಿದೆವು. ನಮ್ಮ ಭಿನ್ನಾಭಿಪ್ರಾಯವೆಲ್ಲಾ ಖಾಸಗಿ ವ್ಯಾಪಾರದ ಋಣದ ಮಾರುಕಟ್ಟೆಯಲ್ಲಿ ಯಾವ ಸುಧಾರಣೆ ಕೈಗೊಳ್ಳಬೇಕೆನ್ನುವುದರ ಬಗ್ಗೆಯಿತ್ತು. ವ್ಯಾಪಾರಿ ಋಣಗಳು ಖಾಸಗಿಯಾಗಿದ್ದು ಮಾರುಕಟ್ಟೆಯ ವ್ಯವಹಾರಕ್ಕೆ ಒಡ್ಡಿಕೊಳ್ಳುತ್ತಿಲ್ಲ ಎನ್ನುವ ಕಾಳಜಿಯಿತ್ತು.

ವಿತ್ತೀಯ ವ್ಯವಸ್ಥೆಯಲ್ಲಿ ಕ್ರೋಢೀಕರಣವಾಗುತ್ತಿತ್ತು. ಆರ್ಥಿಕ ವಲಯದ ಸುಧಾರಣೆ ಮತ್ತು ಬ್ಯಾಂಕಿಂಗ್ ಸುಧಾರಣೆಯ ಗತಿಯ ಬಗ್ಗೆ ಚಿದಂಬರಂ ಚಡಪಡಿಸುತ್ತಿದ್ದರು. ಕ್ರೋಢೀಕರಣ ಒಳ್ಳೆಯದು. ಆದರೆ ರಾಜಕೀಯ-ಸಾಮಾಜಿಕ ಹಿತಾಸಕ್ತಿಗಳ ಓಲೈಕೆಯಿಂದಾಗಿ ಶಿಸ್ತು ಸಡಿಲಗೊಳ್ಳುವುದೇ? ಸುಧಾರಣೆಯ ಕ್ರಮಗಳನ್ನು ಹಿಂದೆಗೆದುಕೊಳ್ಳುವುದು ಅಸಾಧ್ಯ. ಒಂದು ಬಿಕ್ಕಟ್ಟು ಎದುರಾದರೂ ಖೋತಾ ಕೈಮೀರುತ್ತದೆ. ನಾವು ಭದ್ರ ಬುನಾದಿಯ ಮೇಲಿದ್ದಾಗ ಸುಧಾರಣೆಗಳನ್ನು ಕೈಗೊಳ್ಳಬೇಕು. ನಮ್ಮ ದೃಕ್ಪಥಗಳು ಭಿನ್ನವಾದರೂ ಚರ್ಚೆಯ ನಂತರ ವ್ಯವಸ್ಥೆಗೆ ಹೆಚ್ಚಿನ ಧಕ್ಕೆಯಾಗದ ಸುಧಾರಣೆಗಳಿಗೆ ನಮ್ಮ ಒಮ್ಮತವಿತ್ತು. ಒಂದೆರಡು ಸುಧಾರಣೆ ಬಿಟ್ಟು ಮಿಕ್ಕೆಲ್ಲವನ್ನೂ ಚಿದಂಬರಂ ಚರ್ಚೆಯ ನಂತರ ಘೋಷಿಸಿದರು.

ಒಟ್ಚಾರೆ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದ ಸಾರ್ವಜನಿಕ ಬ್ಯಾಂಕುಗಳ ಸುಧಾರಣೆ ಮುಖ್ಯವಾಗಿತ್ತು. ಆದರೆ ಸುಧಾರಣೆಯ ನಂತರದ ವಾತಾವರಣದ ಪೈಪೋಟಿಯಲ್ಲಿ ವ್ಯಾಪಾರವನ್ನು ನಿಭಾಯಿಸುವ ಮಟ್ಟದಲ್ಲಿ ಆಡಳಿತ ವ್ಯವಸ್ಥೆ ಮತ್ತು ಕೌಶಲ ಬೆಳೆದಿರಲಿಲ್ಲ. ಕ್ರೋಢೀಕರಣವೇ ಬ್ಯಾಂಕುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉಪಾಯವೆಂದು ಚಿದಂಬರಂ ನಂಬಿದ್ದರು, ನನಗಿದು ಒಪ್ಪಿತವಾಗಿರಲಿಲ್ಲ. ಬ್ಯಾಂಕುಗಳ ಗಾತ್ರಕ್ಕಿಂತ, ಅವುಗಳ ನಿರ್ಮಿತಿಯಲ್ಲಿಯೇ ತೊಂದರೆಯಿತ್ತು. ಮಿಕ್ಕಂತೆ ಬ್ಯಾಂಕುಗಳ ಸುಧಾರಣೆಯ ಕ್ರಮಗಳ ಬಗ್ಗೆ ನಮಗೆ ಸಹಮತವಿತ್ತು. ದುರ್ಬಲ ಖಾಸಗಿ ಬ್ಯಾಂಕುಗಳನ್ನು ಮಿಕ್ಕ ಬ್ಯಾಂಕುಗಳ ಜೊತೆ ವಿಲೀನ ಮಾಡುವ ಬಗೆಗೆ ಚಿದಂಬರಂಗೆ ಸಹಮತವಿತ್ತು. ಇದರಿಂದ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಿಯಂತ್ರಕರಿಗೆ ತಲೆನೋವಾಗಿರುವ ದುರ್ಬಲ ಬ್ಯಾಂಕುಗಳನ್ನು ಇಲ್ಲವಾಗಿಸಬಹುದಿತ್ತು. ಸಾಮಾನ್ಯವಾಗಿ ಒಂದು ಬಿಕ್ಕಟ್ಟಿನ ಪರಿಸ್ಥಿತಿಯಿಲ್ಲದಿದ್ದರೆ ಈ ವಿಷಯಗಳಲ್ಲಿ ರಾಜಕೀಯ ವಿರೋಧ ಕಾಣುತ್ತದೆ. ಆದರೂ ಚಿದಂಬರಂ ಬಲವಾಗಿ ಬೆಂಬಲಿಸಿದರು. ಕೈಗೊಳ್ಳಬೇಕಿದ್ದ ಅನೇಕ ಕ್ರಮಗಳಿಗೆ ಸರ್ಕಾರಿ ಅನುಮತಿ ಪಡೆವ ಔಪಚಾರಿಕತೆಯಿತ್ತು. ಅದನ್ನು ಗೌಪ್ಯವಾಗಿಯೂ ಮಾಡಬೇಕಿತ್ತು. ಆಫೀಸಿನ ಸಮಯದಾಟಿ ಕೆಲಸಮಾಡಿ ಆತ ಸಹಕರಿಸಿದರು.

2006 ನಂತರ ನನ್ನ ಕಾರ್ಯವೈಖರಿಯ ಬಗ್ಗೆ ಚಿದಂಬರಂಗೆ ಅಸಂತೃಪ್ತಿ ಬೆಳೆದಿತ್ತು. ಮಾಧ್ಯಮದಲ್ಲೂ, ಖಾಸಗೀ ಸಂಭಾಷಣೆಗಳಲ್ಲೂ ಅದು ವ್ಯಕ್ತವಾಗುತ್ತಿತ್ತು. ನಂತರದ ಆಡಳಿತ ಮಂಡಲಿಯ ಸಭೆಯಲ್ಲಿ ಗವರ್ನರಾಗಿ ನನ್ನ ವರ್ಚಸ್ಸು ಕುಗ್ಗುತ್ತಿರುವ ಬಗ್ಗೆ ಆತಂಕ ವ್ಯಕ್ತವಾಯಿತು. ಸಾರ್ವಜನಿಕ ಸಂಪರ್ಕ ಸಂಸ್ಥೆಯೊಂದನ್ನು ನಿಯಮಿಸಿ, ಆರ್‌ಬಿಐ ವರ್ಚಸ್ಸನ್ನು ಬೆಳೆಸುವ ಕ್ರಮ ಕೈಗೊಳ್ಳಬೇಕೆಂದು ಸಲಹೆ ಕೊಟ್ಟರು. ಅದರ ಅವಶ್ಯಕತೆಯಿಲ್ಲವೆಂದು, ಆರ್‌ಬಿಐ ವರ್ಚಸ್ಸು ಬೆಳೆಸಲು ಶಕ್ತಿ ಮೀರಿ ಕೆಲಸ ಮಾಡುತ್ತೇನೆಂದು ಹೇಳಿದೆ.

ಅನೇಕ ಬಾರಿ – ಮುಖ್ಯವಾಗಿ ಮಾರುಕಟ್ಟೆ ಕಾವೇರುತ್ತಿದೆ ಎಂಬ ವಾದಕ್ಕಿಳಿದಾಗ – ಕೆಲಸ ಬಿಡಬೇಕೆನ್ನಿಸಿತ್ತಿತ್ತು. ಆದರೆ ಮೂರು ಅದೃಶ್ಯ ಕೈಗಳು ನನ್ನನ್ನು ಹಿಡಿದಿಟ್ಟಿದ್ದುವು. ಪ್ರಧಾನಿ ಮನಮೋಹನ ಸಿಂಗ್ ನನ್ನ ಮೇಲಿಟ್ಟಿದ್ದ ನಂಬಿಕೆ, ವಾಮ ಪಕ್ಷಗಳು ನನಗೆ ನೀಡುತ್ತಿದ್ದ ಬೆಂಬಲ ಮತ್ತು ಆರ್‌ಬಿಐ ಆಡಳಿತ ಮಂಡಲಿ ಮತ್ತು ವೃತ್ತಿಪರ ಸಿಬ್ಬಂದಿಯ ಜೊತೆಗೆ ಕೆಲಸ ಮಾಡುವ ಸಂತೋಷ. ಈ ಮೂರೂ ನನ್ನ ಅವಧಿಯನ್ನು ಪೂರ್ಣಗೊಳಿಸುವಂತೆ ಮಾಡಿದುವು. ಹೀಗಿದ್ದರೂ ಈ ಕಲಸವನ್ನು ಬಿಟ್ಟುಕೊಡುವ ದುರ್ಬಲ ಪ್ರಯತ್ನಗಳನ್ನು ಮಾಡಿದೆ. ಚಿದಂಬರಂ ನನ್ನ ಬಗ್ಗೆ ಯಾವಾಗಲೂ ಗೌರವದಿಂದ ಇರುತ್ತಿದ್ದರಾದ್ದರಿಂದ ನನ್ನ ಪ್ರಯತ್ನ ದುರ್ಬಲವಾಗಿಯೇ ಇತ್ತು. 2007ರ ಬಜೆಟ್ ಮಂಡನೆಯ ನಂತರ 13ನೇ ಹಣಕಾಸು ಆಯೋಗದ ಅಧ್ಯಕ್ಷರ ಸ್ಥಾನಕ್ಕೆ ಯಾರನ್ನಾದರೂ ಸೂಚಿಸಬೇಕೆಂದು ರಂಗರಾಜನ್ ಕೇಳಿದರು. ನಾನೇ ಆ ಹುದ್ದೆಗೆ ಹೋಗಲು ಸಿದ್ಧವೆಂದು ಹೇಳಿದೆ. ಸದ್ಯಕ್ಕೆ ಮಂತ್ರಿಗಳ ಜೊತೆ ನನ್ನ ಸಂಬಂಧ ಏನೇನೂ ಚೆನ್ನಾಗಿಲ್ಲವಾದ್ದರಿಂದ ಗವರ್ನರ್ ಸ್ಥಾನವನ್ನು ಸಂತೋಷದಿಂದ ಬಿಟ್ಟುಕೊಡಲು ತಯಾರಿದ್ದೇನೆ ಎಂದು ಹೇಳಿದೆ. ಕೆಲದಿನಗಳ ನಂತರ ರಂಗರಾಜನ್ ನನಗೆ ಹೇಳಿದರು: “ಈ ವಿಷಯ ವಿತ್ತ ಮಂತ್ರಿಗಳಿಗೆ ಹೇಳಿದೆ. ಅವರು ನಿಮ್ಮನ್ನು ಬಿಡಲು ತಯಾರಿಲ್ಲ. ನೀವಲ್ಲಿಗೆ ಹೋಗಲು ಕಾತರರಾಗಿದ್ದೀರಿ ಎಂದೂ ಹೇಳಿದೆ. ಅದಕ್ಕೆ ಚಿದಂಬರಂ ‘ವೇಣು ಹೋಗಬೇಕೆಂದಿದ್ದರೂ, ನನ್ನ ಬಯಕೆ ಆತ ಇಲ್ಲೇ ಇರಬೇಕೆಂದಿದೆ’ ಅಂದರು.”

ವಿತ್ತಮಂತ್ರಿಗಳು ನನ್ನನ್ನು ಬಿಟ್ಟುಕೊಡಲು ತಯಾರಿಲ್ಲವೆಂದು ತಿಳಿದರೂ ಭಿನ್ನಭಿಪ್ರಾಯ ಮುಂದುವರಿಯಿತು. ಎರಡಂಕಿ ಪ್ರಗತಿ ಸಾಧಿಸಲು ನನ್ನ ನಿಲುವು ಅಡ್ಡಗಾಲು ಹಾಕಿತ್ತು. 2008ರ ಆದಿಯಲ್ಲಿ ಪ್ರಧಾನಮಂತ್ರಿಗಳು ತುರ್ತಾಗಿ ಭೇಟಿಗೆ ಕರೆದರು. ಗಡಿಬಿಡಿಯಿಂದ ದೆಹಲಿಗೆ ಹೋದೆ. ಭೇಟಿಗೆ ಮುನ್ನ ಪದ್ಧತಿಯಂತೆ ವಿತ್ತಮಂತ್ರಿಗಳಿಗೆ ಫೋನ್ ಮಾಡಿ ‘ಸರ್ ನನ್ನನ್ನು ಭೇಟಿಗೆ ಕರೆದಿದ್ದಾರೆ. ಏನಾದರೂ ಹೇಳಬೇಕಾ?’ ಎಂದೆ.

‘ಏನೂ ಇಲ್ಲ..’ ಎಂದು ಚುಟುಕಾಗಿ ಉತ್ತರಿಸಿದರು ಚಿದಂಬರಂ.

ನಂತರ ಪ್ರಧಾನಮಂತ್ರಿಗಳನ್ನು ಭೇಟಿಯಾದೆ. ಆತ ಜ್ವರದಿಂದ ಬಳಲುತ್ತಿದ್ದರು. ಆದರೆ ಅದಕ್ಕಿಂತ ಹೆಚ್ಚಿನ ಚಿಂತೆ ಅವರ ಮುಖದಲ್ಲಿತ್ತು.

‘ವೇಣೂ ವಿತ್ತಮಂತ್ರಿಗಳು ನಿಮ್ಮ ಬಗ್ಗೆ ತೀವ್ರ ಅಸಂತೃಪ್ತಿಯಿಂದಿದ್ದಾರೆ. ಏನು ಮಾಡಬೇಕೋ ತಿಳಿಯದು. ನಿಮ್ಮಿಬ್ಬರಲ್ಲಿ ಯಾರ ಪಕ್ಷವನ್ನೂ ವಹಿಸಲಾರೆ. ನನ್ನ ಆತಂಕ ಹೆಚ್ಚುತ್ತಿದೆ…’ ಎಂದು ಚಿಂತಾಕ್ರಾಂತರಾಗಿ ಹೇಳಿದರು. ನನಗೆ ತುಂಬಾ ಕಷ್ಟವೆನ್ನಿಸಿತು.
‘ಸರ್ ನಿಮಗೆ ಬೇರೆ ಸಮಸ್ಯೆಗಳು, ಮುಖ್ಯವಾದ ಕೆಲಸಗಳಿವೆ. ಆರೋಗ್ಯ ನೋಡಿಕೊಳ್ಳಿ. ಯೋಚನೆ ಮಾಡಬೇಡಿ. ನಾನೇ ಏನಾದರೂ ಮಾಡುತ್ತೇನೆ’ ಅಂದೆ. ಅವರು “ಥ್ಯಾಂಕ್ಸ್” ಎಂದರು. ಪ್ರಧಾನಿ ನಿವಾಸದಿಂದ ಹೊರಬಂದು ಚಿದಂಬರಂಗೆ ಫೋನ್ ಮಾಡಿ ಅವರ ಮನೆಗೆ ಬರುತ್ತಿರುವುದಾಗಿ ಹೇಳಿದೆ.

ನನ್ನಲ್ಲಿ ಹಲವು ಯೋಚನೆಗಳು ಸುಳಿದಾಡಿದವು. ವಿತ್ತಮಂತ್ರಿಗಳು ಯಾಕೆ ನನ್ನಿಂದ ಕಷ್ಟಕ್ಕೊಳಗಾಗಿದ್ದಾರೆ ತಿಳಿದು, ನನ್ನ ನಿಲವುನ್ನು ವಿವರಿಸಬೇಕು ಅಂದುಕೊಂಡೆ. ಸ್ಪಷ್ಟೀಕರಣವೇಕೆ, ತಕ್ಷಣವೇ ರಾಜೀನಾಮೆ ಕೊಡೋಣವೆಂದುಕೊಂಡೆ. ಆದರೆ ನನ್ನ ಪದವಿ ಇದ್ದದ್ದು ಕೆಲವು ತಿಂಗಳಷ್ಟೇ. ರಾಜೀನಾಮೆ ಕೊಟ್ಟು ವಿವಾದ ಉಂಟುಮಾಡುವುದೂ ಸರಿಯಲ್ಲ. ಯೋಚನೆಗಳು ನನ್ನೊಳಗೆ ಸುತ್ತು ಹೊಡೆಯುತ್ತಿರುವಾಗಲೇ ಚಿದಂಬರಂ ಮನೆ ಸೇರಿದೆ.

ತಮ್ಮ ಪುಸ್ತಕ “ಒಳ್ಳೆಯ ಅರ್ಥಶಾಸ್ತ್ರ ಎಲ್ಲರಿಗೂ ಯಾಕೆ ಲಾಭಕಾರಿ: ಒಂದು ಹೊರನೋಟ” ಬಿಡುಗಡೆಯ ಸಂದರ್ಭದಲ್ಲಿ ನನ್ನ ಪ್ರತಿಗೆ ಅವರ ಹಸ್ತಾಕ್ಷರ ಹಾಕುತ್ತಾ ಹೀಗೆ ಬರೆದಿದ್ದರು “ಅರ್ಥಶಾಸ್ತ್ರದ ಗುರುಗಳಲ್ಲಿ ಒಬ್ಬರಾದ ಗವರ್ನರ್ ರೆಡ್ಡಿಯವರಿಗೆ”. ವೃತ್ತಿಯ ಮಟ್ಟದಲ್ಲಿ ಔಪಚಾರಿಕವಾಗಿ, ತೀವ್ರ ಭಿನ್ನಾಭಿಪ್ರಾಯವಿದ್ದರೂ ಹೀಗೆ ಬರೆದದ್ದು ನಿಜಕ್ಕೂ ನನ್ನ ಬಗೆಗಿದ್ದ ಅಭಿಮಾನ ಮತ್ತು ಬೆಚ್ಚನೆಯ ಭಾವವನ್ನು ಪ್ರತಿನಿಧಿಸಿತ್ತು. ಹೀಗಾಗಿ ಅಂಥ ವ್ಯಕ್ತಿಯೆದುರು ಬೇಷರತ್ತು ಕ್ಷಮೆಯಾಚಿಸುವುದೇ ಸರಿಯೆನ್ನಿಸಿತು. ರಾಜೀನಾಮೆಯ ಯೋಚನೆಯನ್ನು ಬದಿಗಿಟ್ಟೆ. ಎಂದೂ ಇಲ್ಲದ ಗಾಂಭೀರ್ಯದಿಂದ ನನ್ನನ್ನು ನೋಡಿದರು. ಇಬ್ಬರೂ ಕುಳಿತಾಗ ‘ಸರ್, ನಾನು ಹೃದಯಪೂರ್ವಕವಾಗಿ ಕ್ಷಮೆ ಯಾಚಿಸುತ್ತಿದ್ದೇನೆ.’ ಅಂದೆ.

‘ಯಾಕೆ’ ಅಂದರಾತ ನಿರ್ಭಾವುಕರಾಗಿ…

‘ನನಗೆ ಗೊತ್ತಿಲ್ಲ. ಆದರೆ ಯಾಕೆ ಅನ್ನುವುದು ದೊಡ್ಡ ವಿಷಯವಲ್ಲ…’ ಅಂದೆ.

‘ನಿಮಗೆಷ್ಟೋ ಸಹಾಯ ಮಾಡಿದೆ, ನಿಮ್ಮನ್ನ ಸಮರ್ಥಿಸಿದ್ದೆ. ಆದರೆ ನೀವು ಪ್ರತಿಸ್ಪಂದಿಸುತ್ತಿಲ್ಲ. ಯಾವ ಕೆಲಸದಲ್ಲೂ ಸಹಕರಿಸುತ್ತಿಲ್ಲ.’ ಎಂದರಾತ.

‘ಇದನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ..’ ಎಂದು ವಿದಾಯ ಹೇಳಿದೆ.

ಇಷ್ಟಾದರೂ, ನನ್ನ ಪದವಿ ತ್ಯಾಗಕ್ಕೆ ಎರಡು ತಿಂಗಳಿರುವಾಗ ಗವರ್ನರಾಗಿ ಇನ್ನೆರಡು ವರ್ಷ ಕಾರ್ಯಕಾಲವನ್ನು ಮುಂದುವರೆಸಲು ಪ್ರಧಾನಿಗಳು ಯೋಚಿಸುತ್ತಿದ್ದಾರೆಂದು ರಂಗರಾಜನ್ ಹೇಳಿದರು. ‘ಈಗಾಗಲೇ ನನಗೆ 67ವರ್ಷ. ಮೇಲಾಗಿ ವಿತ್ತ ಮಂತ್ರಿಗಳ ಜೊತೆ ನನ್ನ ಸಂಬಂಧ ಸರಿಯಿಲ್ಲ’ ಅಂದೆ.

ಸರ್ಕಾರ ನನ್ನ ಅವಧಿಯನ್ನು ವಿಸ್ತರಿಸಿದರೆ ಮುಂದುವರೆಯುತ್ತೇನೆನ್ನುವ ವದಂತಿಗಳಿದ್ದುವು. ಆ ವದಂತಿಯ ಮೂಲ ನಾನಲ್ಲವೆಂದು ಚಿದಂಬರಂಗೆ ಹೇಳಿದೆ. ನಮ್ಮ ಸಿಬ್ಬಂದಿವರ್ಗಕ್ಕೆ ಹೊಸವರ್ಷದ ಶುಭಾಶಯದ ಪತ್ರದಲ್ಲಿ ನನ್ನ ನಿವೃತ್ತಿಯ ಬಗ್ಗೆ ಬರೆದೆ. ಮುಂದುವರೆಯುವ ಆಸಕ್ತಿ ಇಲ್ಲವೆಂದು ಎಲ್ಲರಿಗೂ ಮನದಟ್ಟು ಮಾಡಬೇಕಿತ್ತು. ಜುಲೈನಲ್ಲಿ ಸ್ವಿಟ್ಸರ್ಲೆಂಡಿನ ಬಿಐಎಸ್ ಸಭೆಯಲ್ಲಿ ನಿವೃತ್ತಿಯನ್ನು ಘೋಷಿಸಿ ಬೀಳ್ಕೊಡುಗೆಯಲ್ಲಿ ಪಾಲ್ಗೊಂಡಿದ್ದೆ ಎಂದು ಎಲ್ಲರಿಗೂ ತಿಳಿಸಿದೆ. 2008 ಆಗಸ್ಟ್ ತಿಂಗಳಲ್ಲಿ ಆರ್‌ಬಿಐ ಆಡಳಿತ ಮಂಡಳಿಯ ಸಭೆಯಿತ್ತು. ಇನ್ನಷ್ಟು ಕಾಲ ಮುಂದುವರೆಯುವಂತೆ ಕಂಡರೂ, ಹಾಗೇನೂ ಇಲ್ಲವೆಂದೆ. ಅಧಿಕಾರ ಮುಗಿಸುತ್ತಿರುವುದರ ಪ್ರತೀಕವಾಗಿ ರಾಂಡೀ ಪಾಷ್ ಬರೆದ ‘ದ ಲಾಸ್ಟ್ ಲೆಕ್ಟರ್’ ಪುಸ್ತಕವನ್ನು ಎಲ್ಲರಿಗೂ ಕಾಣಿಕೆಯಾಗಿ ಕೊಟ್ಟೆ. ಆಡಳಿತ ಮಂಡಳಿಗೂ ನನ್ನ ಅಧ್ಯಕ್ಷತೆಯಲ್ಲಿ ನಡೆವ ಕಡೆಯ ಸಭೆ ಇದೆಂದು ಸೂಚಿಸಿದೆ. ಅಂದು ಅನೇಕರು ಬೀಳ್ಕೊಡುಗೆಯ ಮಾತಾಡಿದರು.

ಚಿದಂಬರಂ ಜೊತೆ ನಾಲ್ಕು ವರ್ಷ ನಿಕಟವಾಗಿ ಕೆಲಸ ಮಾಡಿದ್ದೆ. ನಮ್ಮ ನಡುವಿದ್ದ ತಲ್ಲಣದಿಂದ ಒಳಿತೇ ಆಗಿ ಉತ್ತಮ ವಿಚಾರಗಳು ಹೊರಬಂದುವು. ಉತ್ತಮ ಪದ್ಧತಿ-ನೀತಿಗಳನ್ನು ಜಾರಿ ನಾವು ಮಾಡಿದೆವು. ಸೆಪ್ಟೆಂಬರ್‌ನಲ್ಲಿ ನಾನು ಆರ್‌ಬಿಐನಿಂದ ಹೊರಬಿದ್ದೆ. ಚಿದಂಬರಂ ನವಂಬರ್‌ನಲ್ಲಿ ವಿತ್ತ ಮಂತ್ರಾಲಯದಿಂದ ಗೃಹ ಮಂತ್ರಾಲಯಕ್ಕೆ ಹೋದರು. ಇಬ್ಬರ ನಡುವೆ ಸ್ನೇಹವಿದ್ದರೂ ಕಿತ್ತಾಟ ತಪ್ಪಿದ್ದಲ್ಲ. ನಾವು ಜೊತೆಯಾಗಿ ಕೆಲಸಮಾಡಿದ್ದು ಸುಧಾರಣೆಯ ಮೊದಲ ಹಂತದಲ್ಲಿ. ಆಗ ಪ್ರತಿ ಹೆಜ್ಜೆಯನ್ನೂ ಅಳೆದೂ ಸುರಿದೂ ಇಡಬೇಕಿತ್ತು. ನಾವಿಬ್ಬರೂ ಸೇರಿ ಎಷ್ಟೋ ಬದಲಾವಣೆಗಳನ್ನು ಸಾಧಿಸಿದೆವು. ನಮ್ಮ ಭಿನ್ನಾಭಿಪ್ರಾಯವು ಮಾಧ್ಯಮಗಳಲ್ಲಿ ಕಾಣುತ್ತಿತ್ತು. ಯಾವುದೇ ಸರ್ಕಾರವಾದರೂ ತಾನಿರುವ ಐದು ವರ್ಷಗಳ ಅವಧಿಯ ಬಗ್ಗೆಯೇ ಯೋಚಿಸಿ ಆ ಅವಧಿಗೆ ಸರಿದೂಗುವ ಯೋಜನೆಗಳೊಂದಿಗೆ ಮುಂದುವರೆಯುತ್ತವೆ.

ಸರ್ಕಾರಗಳ ಗಮನದಲ್ಲಿ ಬೆಲೆಯೇರಿಕೆ ತಡೆಗಟ್ಟುವ, ಉದ್ಯೋಗಾವಕಾಶ ಹೆಚ್ಚಿಸುವ ಮುಖ್ಯ ವಿಚಾರಗಳಿರುತ್ತವೆ. ಆ ಅಂಶಗಳ ಬಗ್ಗೆ ಸರ್ಕಾರ ತಕ್ಷಣವೇ ಏನಾದರೂ ಮಾಡಬೇಕೆಂದುಕೊಳ್ಳುತ್ತದೆ. ಈ ವಿಚಾರಗಳು ನಮಗೆ ಮುಖ್ಯವಾದರೂ, ನಾವು ದೇಶದ ಆರ್ಥಿಕ ಭದ್ರತೆಯನ್ನು ಪರಿಗಣಿಸಿ ದೂರದೃಷ್ಟಿಯಿಂದ ವ್ಯವಸ್ಥೆಯನ್ನು ನೋಡುತ್ತೇವೆ. ಅತ್ತ ಸರ್ಕಾರ, ಇತ್ತ ಆರ್‌ಬಿಐ, ಎರಡೂ ಜನರನ್ನು ಪರಿಗಣಿಸಿಯೇ ಕೆಲಸ ಮಾಡುತ್ತವಾದರೂ ಭಿನ್ನತೆಯಿರುವುದು ದೃಷ್ಟಿಕೋನದಲ್ಲಿ ಮಾತ್ರ. ಹೀಗಾಗಿ ಸರ್ಕಾರದ ಪ್ರತಿನಿಧಿಯಾದ ವಿತ್ತ ಮಂತ್ರಿಗೂ – ಆರ್‌ಬಿಐ ಗವರ್ನರಿಗೂ ಭಿನ್ನಾಭಿಪ್ರಾಯಗಳಿರುತ್ತವೆ. ಆದರೆ ಭಿನ್ನಭಿಪ್ರಾಯವಿದ್ದರೂ ಸರ್ಕಾರವನ್ನು ಟೀಕಿಸಿ ಅಥವಾ ವಿರೋಧಿಸಿ ನಾನೆಂದೂ ಮಾತನಾಡಲಿಲ್ಲ.

ನಾವು ಜೊತೆಯಾಗಿ ಮಾಡಿದ ಕೆಲಸವನ್ನು ಯಾರೂ ಗಮನಿಸಲಿಲ್ಲ. ಮೂಲಭೂತ ಬದಲಾವಣೆಗಳನ್ನು ತರುವುದರಲ್ಲಿ ನಮ್ಮ ಜೋಡಿ ಸಫಲವಾಗಿತ್ತು. 2006ರಲ್ಲಿ ಆರ್.ಬಿ.ಐ. ಕಾಯಿದೆಯ ಸುಧಾರಣೆ ಕೈಗೊಂಡೆವು. ದಶಕಗಳಿಗೂ ಹೆಚ್ಚು ಕಾಲ ಬಾಕಿ ಉಳಿದಿದ್ದ ಸರಕಾರಿ ಸೆಕ್ಯೂರಿಟೀಸ್ ಕಾನೂನನ್ನು ಸುಧಾರಣೆ ಮಾಡಿದೆವು. 2007ರಲ್ಲಿ ಬ್ಯಾಂಕಿಂಗ್ ರೆಗ್ಯುಲೇಷನ್ ಕಾನೂನಿಗೆ ಬದಲಾವಣೆ ತಂದೆವು. ರಾಜಕೀಯವಾಗಿ ಕಷ್ಟವಾದರೂ ಸರ್ಕಾರದ ಆರ್ಥಿಕ ಪರಿಸ್ಥಿತಿ ಉತ್ತಮಪಡಿಸಲು, ಹಣಕಾಸಿನ ಖೋತಾ ಕಮ್ಮಿಮಾಡಲು ಚಿದಂಬರಂ ಕಂಕಣಬದ್ಧರಾಗಿದ್ದರು. ಎಷ್ಟೋ ಅಂತರ್‍ರಾಷ್ಟ್ರೀಯ ಸಮಾವೇಶಗಳಿಗೆ ನಾವು ಜೊತೆಯಾಗಿ ಹೋಗಿದ್ದೆವು. ಆ ಕಾಲದಲ್ಲಿ ಅವರೊಂದಿಗೆ ಎಷ್ಟೋ ವಿಷಯಗಳನ್ನು ಹಂಚಿಕೊಂಡಿದ್ದೆ.

ಪ್ರೋಟೋಕಾಲ್ ವಿಷಯದಲ್ಲಿ ಅವರು ತುಂಬಾ ಜಾಗರೂಕತೆ ವಹಿಸುತ್ತಿದ್ದರು. ಮೊದಲೇ ಹೇಳಿದಂತೆ ಗವರ್ನರಾಗಿ ಕೆಲಸಮಾಡಿದಾಗ ಎಲ್ಲಾ ಕೀಲಕ ಪದವಿಗಳಲ್ಲೂ ಅರ್ಥಶಾಸ್ತ್ರಜ್ಞರೇ ಇದ್ದುದರಿಂದ ಅನೇಕ ರೀತಿಯ ಪ್ರಯೋಜನವಾಯಿತು. ಮುಖ್ಯವಾದ ವಿಷಯಗಳನ್ನು ಎಲ್ಲರೂ ಚರ್ಚಿಸುತ್ತಿದ್ದೆವು. ಒಂದು ಅಂಶವನ್ನು ನಾಲ್ಕೂ ಜನ ನಾಲ್ಕೂ ಕೋನಗಳಿಂದ ಯೋಚಿಸುತ್ತಿದ್ದೆವು. ಸಾಧಾರಣವಾಗಿ ಮಾಂಟೆಕ್ ಸಿಂಗ್ ಅಭಿವೃದ್ಧಿ ಮುಖ್ಯವೆನ್ನುತ್ತಿದ್ದರು. ರಂಗರಾಜನ್ ಪ್ರಧಾನ ಮಂತ್ರಿಗಳ ಅಭಿಪ್ರಾಯಗಳನ್ನು ತಿಳಿಸುತ್ತಿದ್ದರು. ಚಿದಂಬರಂ ರಾಜಕೀಯ ಕೋನಗಳನ್ನು ತಿಳಿಸುತ್ತಿದ್ದರು. ನನ್ನದೇ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಈ ಎಲ್ಲದರ ದೃಷ್ಟಿಕೋನವನ್ನು ಗ್ರಹಿಸುತ್ತಿದ್ದುದು ನನಗೆ ತುಂಬಾ ಉಪಕಾರಿಯಾಗಿತ್ತು.

ಜನವರಿ 2011ರಲ್ಲಿ ನನ್ನ ಪುಸ್ತಕ ಬಿಡುಗಡೆ ಮಾಡುತ್ತಾ ಚಿದಂಬರಂ ಈ ಮಾತುಗಳನ್ನಾಡಿದರು, “ಬರಲಿದ್ದ ಬಿಕ್ಕಟ್ಟಿಗೆ ದೇಶವನ್ನು ವೇಣು, ತಯಾರಾಗಿಸಿದ್ದರು. ಸಗಟು ಬೇಡಿಕೆಯ ವಿಪರೀತ ಬೆಳವಣಿಗೆಯನ್ನು ನೋಡಿ, ಹಣಕಾಸಿನ ವಿಷಯದಲ್ಲಿ ಜಾಕಗರೂಕವಾದ ಮತ್ತು ಲೆಕ್ಕಾಚಾರದ ಹೆಚ್ಚೆಗಳನ್ನಿಟ್ಟು ರಿಪೋ ಮತ್ತು ರಿವರ್ಸ್ ರಿಪೋ ದರಗಳನ್ನು ಹೆಚ್ಚಿಸಿದರು. ವಿದೇಶಿ ವಿನಿಮಯದ ಒಳಹರಿವು ಹೆಚ್ಚಿದಾಗ ಮಾರುಕಟ್ಟೆ ಸ್ಥಿರೀಕರಣ ಯೋಜನೆಯನ್ನು ರೂಪಿಸಿ ಹೆಚ್ಚಿನ ದ್ರವ್ಯತೆಯನ್ನು ಹೀರಿಕೊಂಡರು. ಆ ಸಂಗ್ರಹವನ್ನು ಸರ್ಕಾರ ಉಪಯೋಗಿಸಿದಂತೆ ಕಾಪಾಡಿದರು. ಸೆಪ್ಟೆಂಬರ್ 2008ರಲ್ಲಿ ಆರ್‌ಬಿಐನಿಂದ ನಿವೃತ್ತರಾದಾಗ ಅವರಿಗೆ ಮುಂದೇನಾಗಬಹುದೆಂದು ಗೊತ್ತಿತ್ತೇ? ಸೆಪ್ಟೆಂಬರ್ 15ರ ವೇಳೆಗೆ ಬಿಕ್ಕಟ್ಟು ನಮ್ಮನ್ನು ಆವರಿಸಿತ್ತು.”

ಗವರ್ನರ್ ಮತ್ತು ವಿತ್ತಮಂತ್ರಿಗಳು ಆಗಾಗ ಕಿತ್ತಾಡುತ್ತಾರೆನ್ನುವ ಮಾತನ್ನು ಒಪ್ಪಿ ಈ ಮಾತನ್ನು ಸೇರಿಸಿದರು – ‘ಇವು ಆರೋಗ್ಯಪೂರ್ಣ ಜಗಳ, ಇಬ್ಬರಲ್ಲೊಬ್ಬರು ವಿರೋಧಿಸದಿದ್ದರೆ ಒಬ್ಬರಲ್ಲಿ ಅಥವಾ ಇಬ್ಬರಲ್ಲೂ ಏನೋ ದೋಷವಿರಬಹುದು. ವಿಚಾರಗಳ ತಿಕ್ಕಾಟದಿಂದಲೇ ಏನು ಮಾಡಬೇಕೆಂಬುದರ ಬಗ್ಗೆ ಸ್ಪಷ್ಟ ದಾರಿಯು ಕಾಣುತ್ತದೆ” ಎಂದರು.

ಸಾಧಾರಣವಾಗಿ ಗವರ್ನರುಗಳಿಗೆ ತೊಂದರೆಗಳು ಬರುತ್ತಿರುತ್ತವೆ. ಆ ವಿಷಯಕ್ಕೆ ನಾನು ಅದೃಷ್ಟವಂತ. ನನ್ನ ಮೇಲಿನ ನಂಬಿಕೆಯಿಂದ ಎನ್‌ಡಿಎ ಸರ್ಕಾರ ಐದು ವರ್ಷದ ಪದವಿಯನ್ನು ಕೊಟ್ಟಿತ್ತು. ಯುಪಿಎ ಸರ್ಕಾರದಲ್ಲಿ ಪರಿಚಯದವರಿದ್ದರು, ವಾಮಪಕ್ಷಗಳು ತಮ್ಮವನೆಂದು ಭಾವಿಸಿದರು. ಹೀಗೆ ನಾನು ಸಂಸ್ಥೆಯ ನಾಯಕನಾಗಿ ಮುಂದುವರೆಯಲು ಸಾಧ್ಯವಾಯಿತು! ಸ್ವಾತಂತ್ರ್ಯ ಮತ್ತು ಜವಾಬ್ದಾರಿಗಳನ್ನು ನಿಖರವಾಗಿ ವಿವರಿಸಲಾಗುವುದಿಲ್ಲ, ಪಾಲಿಸಲು ಕಷ್ಟ. ಗವರ್ನರಾಗಿ ಏನೇ ಸಾಧಿಸಲು – ಸರ್ಕಾರದ ವಿಶ್ವಾಸ, ಪ್ರಧಾನಮಂತ್ರಿ, ವಿತ್ತಮಂತ್ರಿಗಳ ಸಹಕಾರ, ನಂಬಿಕೆ ಬೇಕು. ಗವರ್ನರ್ ಒಳ್ಳೆಯ ನೀತಿಗಳನ್ನು ರೂಪಿಸಿ ಜಾರಿ ಮಾಡಲು ವಿತ್ತಮಂತ್ರಿಗಳ ಸಹಕಾರ ಅತ್ಯವಶ್ಯಕ. ಜವಾಬ್ದಾರಿ ಸ್ವೀಕರಿಸಿದಾಗ ವಿತ್ತಮಂತ್ರಿಯಾಗಿ ಜಸ್ವಂತ್ ಸಿಂಗ್ ಇದ್ದದ್ದು ನನ್ನ ಅದೃಷ್ಟವೇ ಸರಿ.

ಆರ್‌ಬಿಐ ಸ್ವಾಯತ್ತತೆ

ಆರ್‌ಬಿಐನ ಸ್ವಾಯತ್ತತೆಯ ಆಯಾಮಗಳೆಲ್ಲವೂ ಜ್ವಲಂತ ವಿಚಾರಗಳು. ಹಿಂದಿನ ಯೋಜನಾಬದ್ಧ ಪ್ರಗತಿಯ ಕಾಲಕ್ಕೆ ಕೇಂದ್ರೀಯ ಬ್ಯಾಂಕಿನ ಸ್ಥಾನ ಪಂಚವಾರ್ಷಿಕ ಯೋಜನೆಗಳಿಗನುಸಾರ ಇರಬೇಕಿತ್ತು. 1991ರ ಉದಾರೀಕರಣದಲ್ಲಿ ಹೆಚ್ಚಿನ ಸ್ವಾಯತ್ತತೆ ಬಂತು. 2003ರ ವೇಳೆಗೆ ಅರ್ಥವ್ಯವಸ್ಥೆಯಲ್ಲಿ ಮಾರುಕಟ್ಟೆಗಳಿಗೆ ಮುಖ್ಯ ಸ್ಥಾನವಿದ್ದು ಸರ್ಕಾರದ ಪಾತ್ರ ಕುಗ್ಗಿತ್ತು. ನಂತರ ಮತ್ತಷ್ಟು ಮೂಲಭೂತ ಸುಧಾರಣೆಗಳನ್ನು ಕೈಗೂಂಡಾಗ ಆರ್‌ಬಿಐ ಮತ್ತು ಮಾರುಕಟ್ಟೆಗಳಿಗೆ ಇನ್ನಷ್ಟು ಜಾಗ ಉಂಟಾಯಿತು. ಆರ್‌ಬಿಐ ಮತ್ತು ಸರ್ಕಾರದ ನಡುವಿನ ಸಂಬಂಧದ ಮಹತ್ವ ಇನ್ನಷ್ಟು ಹೆಚ್ಚಿತು.

ಗವರ್ನರ್ ಆದಕೂಡಲೇ ಒಬ್ಬ ಪತ್ರಕರ್ತರು ಕೇಳಿದರು “ಗವರ್ನರ್, ಆರ್‌ಬಿಐ ಎಷ್ಟರ ಮಟ್ಟಿಗೆ ಸ್ವತಂತ್ರವಾಗಿದೆ?”
“ನನಗೆ ಪೂರ್ಣ ಸ್ವಾತಂತ್ರವಿದೆ, ಆರ್‌ಬಿಐಗೆ ಪೂರ್ಣ ಸ್ವಾಯತ್ತತೆಯಿದೆ. ಈ ಮಾತನ್ನು ಹೇಳಲು ನನಗೆ ವಿತ್ತ ಮಂತ್ರಿಗಳ ಅನುಮತಿಯೂ ಇದೆ”.

ನಿಜಕ್ಕೂ ಆರ್‌ಬಿಐಗೆ ಸ್ವಾಯತ್ತತೆ ಇದೆಯೇ? ಆರ್‌ಬಿಐ ಸ್ವತಂತ್ರ ಸಂಸ್ಥೆ. ಅದರ ಮಿತಿಗಳನ್ನು ಸರ್ಕಾರ ರೂಪಿಸುತ್ತದೆ. ಆರ್‌ಬಿಐ ಮತ್ತು ಸರ್ಕಾರದ ನಡುವೆ ಸಮನ್ವಯಕ್ಕೆ ಮೂರು ವಿಚಾರಗಳಿವೆ. ದಿನನಿತ್ಯದ ನಿರ್ವಹಣೆ, ನೀತಿಯ ವಿಚಾರಗಳು ಮತ್ತು ಅರ್ಥವ್ಯವಸ್ಥೆಯ ವಿಚಾರಗಳು. ದಿನನಿತ್ಯದ ನಿರ್ವಹಣೆಗೆ ಸ್ವತಂತ್ರ ತೀರ್ಮಾನಗಳನ್ನು ಕೈಗೊಳ್ಳುತ್ತಿದ್ದೆ. ನೀತಿಯ ಬಗ್ಗೆ ಚರ್ಚಿಸಿ, ಭಿನ್ನಾಭಿಪ್ರಾಯವನ್ನು ದೂರಮಾಡಲು ಯತ್ನಿಸುತ್ತಿದ್ದೆ. ಅರ್ಥವ್ಯವಸ್ಥೆಯ ಬಗ್ಗೆ ಸರ್ಕಾರದ ಜೊತೆ ಕೆಲಸಮಾಡುತ್ತಿದ್ದೆ. ಸರ್ಕಾರದ ವ್ಯವಹಾರದಲ್ಲಿ ನಿಷ್ಠುರ ನಿಲುವನ್ನು ಕೈಗೊಳ್ಳಬೇಕಿತ್ತು. ಭಿನ್ನಾಭಿಪ್ರಾಯವಿದ್ದು ಅವಶ್ಯವೆನ್ನಿಸಿದರೆ ಸರ್ಕಾರಕ್ಕೆ ಕಿರಿಕಿರಿ ಮಾಡಲು, ಚಡಪಡಿಕೆ ಉಂಟುಮಾಡಲು ಹೇಸಲಿಲ್ಲ. ಹಾಗೆಂದು ಸರ್ಕಾರಕ್ಕೆ ವಿರುದ್ಧವಾಗಿರಲೂ ಇಷ್ಟಪಡಲಿಲ್ಲ.

ಆರ್‌ಬಿಐ ಸ್ವಾತಂತ್ರ್ಯವನ್ನು ಕಾಪಾಡಲು ಮೂಲಭೂತವಾದ ಮತ್ತು ವ್ಯವಸ್ಥೆಯ ಮಟ್ಟದ ಬದಲಾವಣೆಗಳನ್ನು ಕೈಗೊಳ್ಳುವಲ್ಲಿ ಸರ್ಕಾರದೊಂದಿಗೆ ಕೆಲಸ ಮಾಡಿದ್ದೆ. ಆರ್‌ಬಿಐ ನಿಯಂತ್ರಣದಲ್ಲಿರುವ ವಿಚಾರದಲ್ಲೂ ಜಾಗರೂಕನಾಗಿ ವ್ಯವಹರಿಸುತ್ತಿದ್ದೆ. ರಾಜಕಾರಣಿಗಳು, ಹೂಡಿಕೆದಾರರು ಉದ್ಯಮಿಗಳನ್ನು ಅವಶ್ಯವಿದ್ದರೆ ಮಾತ್ರ ಭೇಟಿಯಾಗುತ್ತಿದ್ದೆ. ವೈಯಕ್ತಿಕವಾಗಿ ಪರಿಚಯವಿದ್ದ ಬಂಧುಮಿತ್ರರ ಜೊತೆಗೂ ಅಂತರವನ್ನು ಕಾಯ್ದುಕೊಂಡೆ. ಆಗ್ಗೆ ಮುಖ್ಯವಾದ ಎಲ್ಲ ವಿಷಯಗಳ ಮೇಲೂ ಭಾಷಣ ಮಾಡಿದ್ದೆ. ಭಾಷಣದ ಪ್ರತಿ ಪದವನ್ನೂ ಅಳೆದು ಸುರಿದೂ ಬರೆಯುತ್ತಿದ್ದೆ. ಅದಕ್ಕೆ ಸಂಬಂಧಿಸಿದ ಪರಿಣಿತ ಉದ್ಯೋಗಿಗಳ ಜೊತೆ ಚರ್ಚಿಸಿಯೇ ಮಾತಾಡುತ್ತಿದ್ದೆ. ಮಾಧ್ಯಮದ ಸಂದರ್ಶನಗಳಲ್ಲಿ ಯಾರ ಕೈಗೂ ಸಿಗದೇ ನುಣುಚಿಕೊಳ್ಳುತ್ತಿದ್ದೆ.

ಸರ್ಕಾರವು ಒಟ್ಟಾರೆ ಜನಹಿತಾಸಕ್ತಿಯಿಂದ ನಮಗೆ ನಿರ್ದೇಶನಗಳನ್ನು ಕೊಡುತ್ತದೆ. ಆದರೆ ಆರ್‌ಬಿಐ ವಿಷಯದಲ್ಲಿ ಗವರ್ನರ್ ಜೊತೆ ಚರ್ಚೆ ನಡೆಸದೆ ಯಾವ ನಿರ್ದೇಶನವನ್ನೂ ನೀಡುವಂತಿಲ್ಲ. ಭಿನ್ನಾಭಿಪ್ರಾಯವಿರುವ ಕೀಲಕ ವಿಷಯಗಳಲ್ಲಿ ಸಾಮಾನ್ಯವಾಗಿ ಲಿಖಿತ-ಅಲಿಖಿತ ನಿರ್ದೇಶನವಿದ್ದರೂ ಇಲ್ಲದಿದ್ದರೂ ಗವರ್ನರ್ ಸರ್ಕಾರದ ನಿಲುವನ್ನು ಸಮರ್ಥಿಸುವುದೇ ರಿವಾಜು. ಹಾಗೆ ಯಾವುದೇ ಲಿಖಿತ ನಿರ್ದೇಶನವನ್ನು ಸಾಧಾರಣವಾಗಿ ಸರ್ಕಾರ ಕೊಡದಿರುವಂತೆ ನೋಡಿಕೊಳ್ಳುತ್ತದೆ. ನನ್ನ ಕಾರ್ಯಾವಧಿ ಮುಗಿಯುವ ಸಮಯಕ್ಕೆ ಆರ್‌ಬಿಐಗೆ ಮೂಲಭೂತ ಉದ್ದೇಶವಿದೆಯೇ ಎಂಬ ಪ್ರಶ್ನೆ ಎದುರಾಯಿತು. ದರಗಳ ಸ್ಥಿರತೆಯೇ ಎನ್ನುವ ಜವಾಬು ಬರಲೆಂದೇ ಈ ಪ್ರಶ್ನೆಯನ್ನು ಕೇಳಿದ್ದರು.

“ನನ್ನ ಏಕೋದ್ದೇಶ ಭಾರತದ ಅರ್ಥವ್ಯವಸ್ಥೆಯನ್ನು ಭಾರತ ಸರಕಾರದಿಂದ ರಕ್ಷಿಸುವುದೇ ಆಗಿದೆ” ಎಂದು ಉತ್ತರಿಸಿದೆ. ಇದು ಆರ್‌ಬಿಐ ಅಸ್ತಿತ್ವಕ್ಕಿದ್ದ ಮೂಲ ಕಾರಣವಿರಬಹುದು. ಸರ್ಕಾರ ತೆಗೆದುಕೊಳ್ಳುವ ಅಲ್ಪಕಾಲಿಕ ದೃಷ್ಟಿಕೋನದ ಪ್ರಲೋಭನೆಯನ್ನು ತಡೆಯಲು ಆರ್‌ಬಿಐ ಇದೆ. ಕೇಂದ್ರೀಯ ಬ್ಯಾಂಕಿಗೆ ಎಂದಿಗೂ ಪೂರ್ಣ ಸ್ವಾತಂತ್ರವಿರುವುದಿಲ್ಲ. ಆರ್‌ಬಿಐ ನಿರ್ವಹಿಸುತ್ತಿರುವ ಜವಾಬ್ದಾರಿ, ಸರ್ಕಾರಕ್ಕೂ ಆರ್‌ಬಿಐಗೂ ಇರುವ ಸಂಬಂಧದ ಸ್ವಾಯತ್ತತೆಯಿರುತ್ತದೆ. ಗವರ್ನರ್‌ಗೂ ವಿತ್ತಮಂತ್ರಿಗೂ ಇರುವ ಸಂಬಂಧ ಇದನ್ನು ನಿರ್ದೇಶಿಸುತ್ತದೆ.

ಆರ್‌ಬಿಐ ಸ್ವಾಯತ್ತತೆಗೆ ಸಾಂಸ್ಥಿಕ ಸವಾಲುಗಳಿವೆ. ಬ್ಯಾಂಕಿಂಗ್ ವ್ಯವಸ್ಥೆಯ ಬಹುತೇಕ ಮಾಲಿಕತ್ವ ಸರ್ಕಾರದ್ದು. ಅರ್ಥವ್ಯವಸ್ಥೆಯಲ್ಲಿ ಬ್ಯಾಂಕಿಂಗ್ ಪಾತ್ರ ಹಿರಿದಾದದ್ದು. ಸಾರ್ವಜನಿಕ ಬ್ಯಾಂಕುಗಳ ನಿಯಂತ್ರಣವನ್ನು ನೈತಿಕತೆಯ ಆಧಾರವಾಗಿಯೇ ನಿಭಾಯಿಸಬೇಕು. ಇದು ಸಾಧಾರಣ ಪ್ರಕ್ರಿಯೆಯಲ್ಲ. ಆದರೆ ಇದನ್ನು ಸರ್ಕಾರ ಒಪ್ಪಬೇಕು. ವಿತ್ತ ಮಂತ್ರಿಗಳು ಬ್ಯಾಂಕುಗಳನ್ನು ಭಿನ್ನ ದಿಕ್ಕಿಗೆ ನಿರ್ದೇಶಿಸುತ್ತಿದ್ದರೆ, ವ್ಯವಸ್ಥೆಯ ಮೇಲೆ ಹಣಕಾಸು ನೀತಿಯ ಪ್ರಭಾವ ಅಲ್ಪವಾಗುತ್ತದೆ. ಆರ್ಥಿಕ ಬೆಳವಣಿಗೆಯಲ್ಲಿ, ಋಣವನ್ನೊದಗಿಸುವ ವಾತಾವರಣವನ್ನು ಉಂಟುಮಾಡುವಲ್ಲಿ ಆರ್‌ಬಿಐ ಪಾತ್ರವಿರಬೇಕು. ವಿಶ್ವವ್ಯಾಪಿಯಾಗಿರುವ ಈ ಆಶಯ ಹೊಸತಲ್ಲ, ಸರ್ಕಾರ ಮತ್ತು ಆರ್‌ಬಿಐ ನಡುವೆ ಜವಾಬ್ದಾರಿ ಮತ್ತು ಅಧಿಕಾರದ ಹಂಚಿಕೆ ಸಂಕೀರ್ಣವಾದದ್ದು. ಆರ್ಥಿಕ ಬೆಳವಣಿಗೆಗೆ ಅದರಲ್ಲೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಂಪನ್ಮೂಲಗಳು ಬೇಕು. ಈ ವಿಷಯದಲ್ಲಿ ನಿಜಕ್ಕೂ ಒತ್ತಡಗಳಿವೆ.