ಕ್ರಿ.ಶ. ಒಂದನೇ ಶತಮಾನದ ಮೊದಲ್ಗೊಂಡು ಬರ್ಮಾದಲ್ಲಿ ಭಾರತೀಯ ಸಂಸ್ಕೃತಿಯ ಪ್ರಚಾರವು ಪ್ರಾರಂಭವಾಯಿತು. ಉತ್ತರ ಹಿಂದುಸ್ತಾನದಿಂದ ನೆಲಮಾರ್ಗವಾಗಿಯೂ, ದಕ್ಷಿಣದಿಂದ ಸಮುದ್ರ ಮಾರ್ಗವಾಗಿಯೂ ಪ್ರಚಾರವು ನಡೆದು, ವೈಷ್ಣವ, ಶೈವ, ಮಹಾಯಾನ, ಹೀನಯಾನ ಬೌದ್ಧಮತಗಳು ಹಬ್ಬಿದುವು. ಹೀನಯಾನ ಮತವು ಹೆಚ್ಚು ಪ್ರಾಬಲ್ಯವನ್ನು ಪಡೆಯಿತು. ಹನ್ನೊಂದು ಹನ್ನೆರಡನೇ ಶತಮಾನದಲ್ಲಿದ್ದ ಅರಸರು ಅನೇಕ ದೇವಸ್ಥಾನಗಳನ್ನು ಕಟ್ಟಿಸಿ ಆಯಾ ಮತಧರ್ಮಗಳ ಪ್ರಚಾರಕ್ಕೆ ಶ್ರಮಿಸಿದರು. ಐದು ಸಾವಿರಕ್ಕಿಂತಲೂ ಹೆಚ್ಚು ಪಾಳುಬಿದ್ದ ದೇವಾಲಯಗಳು ಇಂದು ಬರ್ಮಾ ದೇಶದಲ್ಲಿ ಕಾಣಸಿಗುತ್ತವೆ.
ಕೆ.ವಿ. ತಿರುಮಲೇಶ್ ಬರೆಯುವ ‘ನನ್ನ ಹಿಸ್ಟರಿ ಪುಸ್ತಕ’ ಸರಣಿಯ ಮತ್ತೊಂದು ಬರಹ ನಿಮ್ಮ ಓದಿಗೆ

ಸಿಂಹಳ

ಅನಾದಿ ಕಾಲದಿಂದಲೂ ಭಾರತ ಮತ್ತು ಸಿಂಹಳಗಳೊಳಗೆ ರಾಜಕೀಯ ಮತ್ತು ಸಾಂಸ್ಕೃತಿಕ ಸಂಬಂಧವು ಬೆಳೆದು ಬಂದಿತ್ತು. ಅಶೋಕನು ಬೌದ್ಧ ಸನ್ಯಾಸಿಗಳನ್ನು ಅನುರಾಧಾಪುರಕ್ಕೆ ಕಳಿಸಿ ಆಗಿನ ರಾಜನಾಗಿದ್ದ ‘ತಿಸ್ಸಾ’ನನ್ನು ಬೌದ್ಧ ಧರ್ಮಕ್ಕೆ ಪರಿವರ್ತಿಸಿದ ಮೇಲೆ ಬೌದ್ಧ ಮತವು ಸಿಂಹಳದಲ್ಲಿ ಪ್ರಚಾರಕ್ಕೆ ಬಂತು. ತಿಸ್ಸಾನು ಮಹಾವಿಹಾರ, ಸ್ತೂಪಗಳನ್ನು ಕಟ್ಟಿಸಿ ಬೌದ್ಧ ಮತದ ಪ್ರಚಾರಕ್ಕಾಗಿ ಶ್ರಮಿಸಿದನು. ಇವನ ಅನಂತರವು ಕೂಡ ಬೌದ್ಧ ಧರ್ಮವು ಪ್ರಬಲಗೊಳ್ಳುತ್ತ ಹೋಯಿತು. ಪಾಳಿ ಭಾಷೆಯು ಪ್ರಚಾರಕ್ಕೆ ಬಂತು.

ಗುಪ್ತರ ಕಾಲದಲ್ಲಿ ಮೇಘವರ್ಣನು ಸಮುದ್ರಗುಪ್ತನೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದನು. ಈ ಕಾಲದಲ್ಲಿ ಸಂಸ್ಕೃತವು ಆದರವನ್ನು ಪಡೆಯಿತಲ್ಲದೆ ಹಿಂದೂ ಕಲೆಯು ಪ್ರಚಾರ ಗಳಿಸಿತು. ಸೈಜೀರಿಯಾದಲ್ಲಿನ ಚಿತ್ರಗಳು ಹಿಂದೂ ಕಲೆಯಲ್ಲಿ ಬರೆಯಲ್ಪಟ್ಟಿವೆ.

ಆರನೇ ಶತಮಾನ (ಪಲ್ಲವರ ಕಾಲ) ಮೊದಲ್ಗೊಂಡು ಸಿಂಹಳದಲ್ಲಿ ಶೈವ, ವೈಷ್ಣವ ಮತಗಳು ಪ್ರಚಾರಕ್ಕೆ ಬಂದುವು. ರಾಜರಾಜ, ರಾಜೇಂದ್ರರ ಕಾಲದಲ್ಲಿ ಸಿಂಹಳವು ಚೋಳರ ವಶವಾಗಿತ್ತು. ಆ ಕಾಲದಲ್ಲಿ ಅನೇಕ ಶಿವ ಮತ್ತು ವಿಷ್ಣು ದೇವಸ್ಥಾನಗಳು ಚೋಳರಿಂದ ಸ್ಥಾಪಿತವಾದುವು.

ಬರ್ಮಾ

ಕ್ರಿ.ಶ. ಒಂದನೇ ಶತಮಾನದ ಮೊದಲ್ಗೊಂಡು ಬರ್ಮಾದಲ್ಲಿ ಭಾರತೀಯ ಸಂಸ್ಕೃತಿಯ ಪ್ರಚಾರವು ಪ್ರಾರಂಭವಾಯಿತು. ಉತ್ತರ ಹಿಂದುಸ್ತಾನದಿಂದ ನೆಲಮಾರ್ಗವಾಗಿಯೂ, ದಕ್ಷಿಣದಿಂದ ಸಮುದ್ರ ಮಾರ್ಗವಾಗಿಯೂ ಪ್ರಚಾರವು ನಡೆದು, ವೈಷ್ಣವ, ಶೈವ, ಮಹಾಯಾನ, ಹೀನಯಾನ ಬೌದ್ಧಮತಗಳು ಹಬ್ಬಿದುವು. ಹೀನಯಾನ ಮತವು ಹೆಚ್ಚು ಪ್ರಾಬಲ್ಯವನ್ನು ಪಡೆಯಿತು. ಹನ್ನೊಂದು ಹನ್ನೆರಡನೇ ಶತಮಾನದಲ್ಲಿದ್ದ ಅರಸರು ಅನೇಕ ದೇವಸ್ಥಾನಗಳನ್ನು ಕಟ್ಟಿಸಿ ಆಯಾ ಮತಧರ್ಮಗಳ ಪ್ರಚಾರಕ್ಕೆ ಶ್ರಮಿಸಿದರು. ಐದು ಸಾವಿರಕ್ಕಿಂತಲೂ ಹೆಚ್ಚು ಪಾಳುಬಿದ್ದ ದೇವಾಲಯಗಳು ಇಂದು ಬರ್ಮಾ ದೇಶದಲ್ಲಿ ಕಾಣಸಿಗುತ್ತವೆ. ಇಟ್ಟಿಗೆಯಿಂದ ನಿರ್ಮಿತವಾದ ಈ ದೇವಾಲಯಗಳು ಅವುಗಳ ಮೇಲಿನ ಬುದ್ಧನ ಜೀವನ ಚರಿತ್ರೆಗೆ ಸಂಬಂಧಿಸಿದ ಶಿಲ್ಪ ಮತ್ತು ವರ್ಣಚಿತ್ರಗಳಿಗೆ ಹೆಸರುವಾಸಿಯಾಗಿವೆ.

ಟಿಬೆಟ್

ಟಿಬೆಟಿನ ಜನರು ಕ್ರಿ.ಶ. ಏಳನೆ ಶತಮಾನದಲ್ಲಿ ಬೌದ್ಧ ಧರ್ಮವನ್ನು ಸ್ವೀಕರಿಸುವ ತನಕ ಅತ್ಯಂತ ಅನಾಗರಿಕ ಜೀವನವನ್ನು ನಡೆಸುತ್ತಿದ್ದರು. ನಲಂದ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಶಾಂತರಕ್ಷಿತ ಮತ್ತು ಪದ್ಮಸಂಭವರು ಮಹಾಯಾನ ಪಂತವನ್ನು ಟಿಬೆಟ್ಟಿನಲ್ಲಿ ಪ್ರಚಾರಗೊಳಿಸಿದರು. ಬಳಿಕ ಬೌದ್ಧಗ್ರಂಥಗಳು ಅಲ್ಲಿನ ಭಾಷೆಗೆ ಭಾಷಾಂತರಗೊಳಿಸಲ್ಪಟ್ಟುವು. ಪದ್ಮಸಂಭವನು ಇಂದು ಟಿಬೆಟ್ಟಿನಲ್ಲಿ ಎರಡನೆಯ ಬುದ್ಧನೆಂದು ಪರಿಗಣಿಸಲ್ಪಡುತ್ತಾನೆ.

ಮಧ್ಯ ಏಷ್ಯಾ

ಪುರಾತನ ಕಾಲದಿಂದಲೂ ಮಧ್ಯ ಏಷ್ಯಾವು ಧರ್ಮ ಮತ್ತು ಸಂಸ್ಕೃತಿಗಳ ಪರಿಗ್ರಹಣ ಮತ್ತು ಪ್ರಸರಣ ಕೇಂದ್ರವಾಗಿತ್ತು. ಕ್ರಿ.ಶ. ಒಂದನೇ ಶತಮಾನದಲ್ಲಿ ಮಹಾಯಾನ ಬೌದ್ಧ ಮತದ ಪ್ರಚಾರಕ್ಕೆ ಯತ್ನಿಸಿದ ಕಣಿಷ್ಕನ ಸಾಮ್ರಾಜ್ಯದಲ್ಲಿ ಈ ಭಾಗವು ಸೇರಿತ್ತು. ಗ್ರೀಕರ ಸಂಪರ್ಕವು ಹಿಂದೂ ದೇಶಕ್ಕೆ ಉಂಟಾದಂದಿನಿಂದಲೂ ಈ ಭಾಗಕ್ಕೂ ಭಾರತಕ್ಕೂ ನಿಕಟ ಸಂಬಂಧ ಏರ್ಪಟ್ಟಿತ್ತು. ಬೌದ್ಧ ಸ್ತೂಪಗಳು, ವಿಹಾರಗಳು, ವರ್ಣಚಿತ್ರಗಳಿಂದ ತುಂಬಿದ ಗುಹೆಗಳು ಇಲ್ಲಿ ಕಾಣಿಸುತ್ತವೆ. ಇದಲ್ಲದೆ ಸುಶ್ರುತನ ಆಯುರ್ವೇದ ಗ್ರಂಥ, ಅಶ್ವಘೋಷನ ನಾಟಕ (‘ಸಾರಿಪುತ್ರ ಪ್ರಕರಣ’) ಹಾಗೂ ಬೌದ್ಧ ಗ್ರಂಥಗಳ ಹಸ್ತಲಿಖಿತ ಪ್ರತಿಗಳು ಇಲ್ಲಿ ದೊರೆತಿವೆ. ಆದ್ದರಿಂದ ಮಧ್ಯ ಏಷ್ಯಾದಲ್ಲಿ ಹಿಂದೂ ಸಂಸ್ಕೃತಿ ಹಬ್ಬಿತ್ತೆಂದು ಧಾರಾಳವಾಗಿ ನಿಷ್ಕರ್ಷೆ ಮಾಡಬಹುದು.

ಚೀನಾ

ಕ್ರಿ.ಶ. ಒಂದನೇ ಶತಮಾನದಲ್ಲಿ ಮತಂಗನೆಂಬ ಬೌದ್ಧ ಯತಿಯು ಚೀನಾ ದೇಶಕ್ಕೆ ಹೋಗಿ ಅಲ್ಲಿ ಬೌದ್ಧ ಮತವನ್ನು ಪ್ರಚಾರಗೊಳಿಸಿದನು. ಬಳಿಕ ಆಗಾಗ ಬೌದ್ಧ ಯತಿಗಳು ಚೀನಾವನ್ನು ಸಂದರ್ಶಿಸುತ್ತಿದ್ದರಲ್ಲದೆ ಅಲ್ಲಿಂದಲೂ ಫಾಹಿಯಾನ್ (5ನೇ ಶತಮಾನ), ಹ್ಯೂ ಎನ್ ತ್ಸಾಂಗ್ (7ನೇ ಶತಮಾನ) ಮುಂತಾದ ಬೌದ್ಧ ಯತಿಗಳು ಭಾರತಕ್ಕೆ ಬಂದಿದ್ದರು. ಕ್ರಿ.ಶ. ನಾಲ್ಕನೇ ಶತಮಾನದಲ್ಲಿ ಕಾಶ್ಮೀರದ ಹೀನಯಾನ ಮತದವನಾದ ಕುಮಾರಜೀವನು ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ ಮಧ್ಯ ಏಷ್ಯಾಕ್ಕೆ ಹೋದನು, ಅಲ್ಲಿ ಮಹಾಯಾನವನ್ನು ಅಂಗೀಕರಿಸಿ ಚೀನಾಕ್ಕೆ ಹೋದನು. ಅಲ್ಲಿ ಅನೇಕ ಬೌದ್ಧ ಗ್ರಂಥಗಳನ್ನು ಚೀನೀ ಭಾಷೆಗೆ ಪರಿವರ್ತಿಸಿ, ಬೌದ್ಧ ಧರ್ಮ ಪ್ರಚಾರಕ್ಕೆ ಬಹಳ ಸಾಹಸ ಪಟ್ಟನು. ಕಾಶ್ಮೀರದ ಗುಣವರ್ಮನೆಂಬ ಇನ್ನೊಬ್ಬ ಬೌದ್ಧ ಯತಿಯು ಚೀನಾ ದೇಶದ ವರ್ಣಚಿತ್ರಕಲೆಯ ಮೇಲೆ ಹಿಂದೂ ಚಿತ್ರಕಲೆ ಪ್ರಭಾವ ಬೀರಲು ಕಾರಣನಾದನು.

ಕೊರಿಯಾ

ಬೌದ್ಧ ಧರ್ಮವು ಕೊರಿಯಾ ದೇಶದಲ್ಲೂ ಕ್ರಿ.ಶ. ನಾಲ್ಕನೇ ಶತಮಾನದಲ್ಲಿ ಪ್ರಚಾರಕ್ಕೆ ಬಂತು. ಅಲ್ಲಿಯ ಅರಸನು ಈ ಮತದ ಪ್ರಚಾರಕ್ಕಾಗಿ ಒಂದು ಸಂಘವನ್ನೇರ್ಪಡಿಸಿದನು.

ಜಪಾನ್

ಕ್ರಿ.ಶ. ಆರನೇ ಶತಮಾನದಲ್ಲಿ ಬೌದ್ಧ ಮತವು ಜಪಾನಿನ ರಾಷ್ಟ್ರದ ಮತವಾಗಿ ಮಾಡಲ್ಪಟ್ಟಿತು. ಜಪಾನೀ ವಿದ್ಯಾರ್ಥಿಗಳು ಬೌದ್ಧ ಮತದ ಅಭ್ಯಾಸಕ್ಕಾಗಿ ಚೀನಾ ದೇಶಕ್ಕೆ ಕಳುಹಿಸಲ್ಪಟ್ಟರು. ಜಪಾನಿನಲ್ಲಿ ಪ್ರಚಾರ ಹೊಂದಿದ ಮಹಾಯಾನ ಪಂಥವು ಜಪಾನಿನ ಕಲೆ ಮತ್ತು ತತ್ವಜ್ಞಾನಗಳ ಮೇಲೆ ವಿಶೇಷವಾದ ವರ್ಚಸ್ಸನ್ನು ಉಂಟುಮಾಡಿತು. ಜಪಾನೀಯರು ತಮ್ಮ ಹಿಂದಿನ ಮತವಾದ ಶಿಂಟೊಯಿ ಮತದ ದೇವತೆಗಳನ್ನು ಬುದ್ಧನ ಅವತಾರಗಳೆಂದು ತಿಳಿಯತೊಡಗಿದರು.

ಗುಪ್ತರ ಕಾಲದಲ್ಲಿ ಮೇಘವರ್ಣನು ಸಮುದ್ರಗುಪ್ತನೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದನು. ಈ ಕಾಲದಲ್ಲಿ ಸಂಸ್ಕೃತವು ಆದರವನ್ನು ಪಡೆಯಿತಲ್ಲದೆ ಹಿಂದೂ ಕಲೆಯು ಪ್ರಚಾರ ಗಳಿಸಿತು. ಸೈಜೀರಿಯಾದಲ್ಲಿನ ಚಿತ್ರಗಳು ಹಿಂದೂ ಕಲೆಯಲ್ಲಿ ಬರೆಯಲ್ಪಟ್ಟಿವೆ.

ಇಂಡೋಚೈನಾ ಮತ್ತು ಇಂಡೋನೇಶ್ಯಾ

ಇಂಡೋಚೈನಾ (ಮಲಯ, ಸಯಾಮ, ಕಾಂಬೋಡಿಯಾ, ಮತ್ತು ದಕ್ಷಿಣ ಅಸ್ಸಾಂ) ಮತ್ತು ಇಂಡೋನೇಶ್ಯಾ (ಸುಮಾತ್ರ, ಜಾವಾ, ಬಲಿ, ಮತ್ತು ಬೋರ್ನಿಯೋ)ಗಳಲ್ಲಿ ಹಿಂದೂ ಸಾಮ್ರಾಜ್ಯ ಸ್ಥಾಪನೆಯು ಭಾರತ ಚರಿತ್ರೆಯಲ್ಲಿ ಒಂದು ಪ್ರಮುಖ ಅಧ್ಯಾಯವಾಗಿದೆ. ವ್ಯಾಪಾರದ ಮೂಲಕ ಭಾರತಕ್ಕೆ ಉಂಟಾದ ಈ ಸಂಬಂಧವು ಸಾಮ್ರಾಜ್ಯ ಸ್ಥಾಪನೆ, ಧರ್ಮ ಪ್ರಚಾರಕ್ಕೆ ಕಾರಣವಾಯಿತು. ಶಾಂತ ರೀತಿಯಲ್ಲಿ ಬೆಳೆದ ಸಂಬಂಧವು ಹಿಂದೂ ದೇಶದ ಮತ್ತು ಈ ಸಾಗರದಾಚೆಗಿನ ದೇಶಗಳ ಸಾಂಪತ್ತಿಕ ಅಭಿವೃದ್ಧಿಗೆ ಸಹಾಯಕವಾಯಿತು. ಹಿಂದೂ ದೇಶದ ಭಾಷೆ, ಲಿಪಿ, ಧರ್ಮ, ಆಚಾರ ವಿಚಾರಗಳು ಹಿಂದೂ ವ್ಯಾಪಾರಿಗಳಿಂದ, ಧರ್ಮಪ್ರಚಾರಕರಿಂದ ಮತ್ತು ರಾಜಕೀಯ ಧುರೀಣರಿಂದ ಅಲ್ಲಿ ಪ್ರಸಾರವಾಗಿ ಅಲ್ಲಿಯ ನಾಗರಿಕತೆಗೆ ಸಹಾಯಕವಾಗಿವೆ.

ಸುಮಾತ್ರಾ

ಅಶೋಕನ ಕಾಲದಲ್ಲಿ ಸುಮಾತ್ರಾದೊಡನೆ ಉಂಟಾದ ಸಂಪರ್ಕವು ಅಲ್ಲಿ ಬೌದ್ಧ ಧರ್ಮದ ಪ್ರಸಾರಕ್ಕೆ ಕಾರಣವಾಯಿತು. ಶ್ರೀವಿಜಯ ಮತ್ತು ಶೈಲೇಂದ್ರ ಮನೆತನಗಳ ಅರಸರು ಬೌದ್ಧರಾಗಿದ್ದು ಆ ಮತದ ಪ್ರಸಿದ್ಧಿಯನ್ನು ಹೆಚ್ಚಿಸಿದರು. ಚೋಳರು ಮತ್ತು ಬಂಗಾಳದ ಪಾಲರು ಈ ರಾಜ್ಯದ (ಸುಮಾತ್ರಾ) ಮೇಲೆ ಪ್ರಭಾವವನ್ನು ಸ್ಥಾಪಿಸಿದರು. ಸಂಸ್ಕೃತ ಭಾಷೆಯಲ್ಲಿ ಬೌದ್ಧ ಗ್ರಂಥಗಳನ್ನು, ಕಾವ್ಯ ವ್ಯಾಕರಣಗಳನ್ನು ಕಲಿಸುವ ವಿದ್ಯಾಲಯಗಳಿದ್ದವು. ನಲಂದ, ನಾಗಪಟ್ಟಣಂ ವಿಶ್ವವಿದ್ಯಾಲಯಗಳೊಂದಿಗೆ ಇಲ್ಲಿನ ಅರಸರು ಸಂಪರ್ಕ ಇಟ್ಟುಕೊಂಡಿದ್ದರು.

ಜಾವಾ

ಕಾಶ್ಮೀರದ ಗುಣವರ್ಮನು ಇಲ್ಲಿನ (ಜಾವಾ) ಅರಸನನ್ನು ಬೌದ್ಧ ಧರ್ಮಕ್ಕೆ ಮತಾಂತರಗೊಳಿಸಿದನು. ಶ್ರೀವಿಜಯ ಸಾಮ್ರಾಜ್ಯದ ವೈಭವ ಕಾಲದಲ್ಲಿ ಇಲ್ಲಿ ಬೌದ್ಧ ಮತವು ಪ್ರಚಾರದಲ್ಲಿತ್ತು. ಮುಂದೆ ಏಳನೇ ಶತಮಾನದಲ್ಲಿ ಹಿಂದೂ ಮತವು ಆದರವನ್ನು ಪಡೆದು, ಶಿವ, ವಿಷ್ಣು, ಬ್ರಹ್ಮರ ದೇವಾಲಯಗಳು ನಿರ್ಮಿಸಲ್ಪಟ್ಟುವು. ರಾಮಾಯಣ ಮತ್ತಿತರ ಕಾವ್ಯಗಳು, ಬೌದ್ಧ ಗ್ರಂಥಗಳು ಅಲ್ಲಿನ ಭಾಷೆಗೆ ಅನುವಾದಿಸಲ್ಪಟ್ಟುವಲ್ಲದೆ, ಭಾರತ, ರಾಮಾಯಣ ಕಥಾವಸ್ತುಗಳನ್ನಾಧರಿಸಿ ದೇಸೀ ಭಾಷೆಗಳಲ್ಲಿ ಕೃತಿಗಳು ರಚಿತವಾದುವು.

ಬಾಲಿ

ಜಾವಾ, ಸುಮಾತ್ರಾಗಳ ಮೇಲೆ ಮುಸಲ್ಮಾನರ ಧಾಳಿ ನಡೆದು ಇಸ್ಲಾಂ ಧರ್ಮವು ಹಬ್ಬಿದೆ. ಆದರೆ ಬಾಲಿಯ ನಿವಾಸಿಗಳು ಇಂದಿಗೂ ಹಿಂದೂಗಳಾಗಿದ್ದು ಚತುರ್ವಣ್ರ್ಯವನ್ನು ಪಾಲಿಸುತ್ತಿದ್ದಾರೆ. ಇಲ್ಲಿ ಹಿಂದೂ ಧರ್ಮವು ಕ್ರಿ.ಶ. ಏಳನೇ ಶತಮಾನಕ್ಕಿಂತಲೂ ಹಿಂದೆ ಕೌಂಡಿನ್ಯನೆಂಬ ಬ್ರಾಹ್ಮಣನಿಂದ ಪ್ರತಿಷ್ಠಾಪಿಸಲ್ಪಟ್ಟಿತು,

ಫುನಾನ್

ಕೌಂಡಿನ್ಯನು ಬಲಿ ದ್ವೀಪವನ್ನು ಹಾದು ಫುನಾನಿಗೆ ಬಂದನು. ಅಲ್ಲಿನ ರಾಜಕುಮಾರಿಯನ್ನು ಮದುವೆಯಾಗಿ ಪಟ್ಟವೇರಿದನು. ಇವನು ಆ ದೇಶದ ಮೊದಲನೇ ಹಿಂದೂ ಅರಸನು. ಬೌದ್ಧ ಮತವು ಕೂಡಾ ಅಲ್ಲಿ ಪ್ರಚಾರದಲ್ಲಿತ್ತೆಂದು ಕಂಡುಬರುತ್ತದೆ.

ಸಯಾಂ

ಫುನಾನಿನ ಅರಸನು ಸಯಾಮನ್ನು ಕೆಲವು ಕಾಲ ತನ್ನ ಅಧೀನದಲ್ಲಿ ಇರಿಸಿಕೊಂಡಿದ್ದನು. ಆಗ ಹಿಂದೂ ಧರ್ಮವು ಅಲ್ಲಿ ಹಬ್ಬಿತ್ತು.

ಮಲಯ

ಪ್ರಾಚೀನ ಕಾಲದಿಂದಲೂ ಚೀನಾ ಮತ್ತು ಭಾರತದ ವ್ಯಾಪಾರವು ಮಲಯದ ಮೂಲಕ ನಡೆಯುತ್ತಿತ್ತು. ಅಂದಿನಿಂದಲೂ ಮಲಯವು ಭಾರತದ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಯಿತು. ಶೈಲೇಂದ್ರರ ರಾಜ್ಯದಲ್ಲಿ ಇದು ಅಡಕವಾಗಿದ್ದರಿಂದ ಚೋಳರ ಸಂಪರ್ಕವುಂಟಾಗಿ, ಶೈವ, ವೈಷ್ಣವ ಮತಗಳು ಹೆಚ್ಚು ಪ್ರಚಾರಕ್ಕೆ ಬಂದುವೆನ್ನುವುದನ್ನು ಅಲ್ಲಿ ಈಗ ಪಾಳುಬಿದ್ದಿರುವ ಶಿವ ವಿಷ್ಣು ದೇವಾಲಯಗಳಿಂದಲೂ, ಸಂಸ್ಕೃತ ಶಾಸನಗಳಿಂದಲೂ ತಿಳಿಯಬಹುದು.

ಕಾಂಭೋಜ (ಕಾಂಬೋಡಿಯಾ)

ಫುನಾನ್ ಮತ್ತು ಕಾಂಬೋಡಿಯಾಗಳು ಸಾಧಾರಣ ಒಂದೇ ಕಾಲಕ್ಕೆ ಹಿಂದೂ ಸಂಸ್ಕೃತಿಯನ್ನು ಅವಲಂಬಿಸಿದುವು. ಶೈವ, ವೈಷ್ಣವ, ಮತ್ತು ಬೌದ್ಧ ಮತಗಳು ಪ್ರಚಾರದಲ್ಲಿದ್ದರೂ, ಶೈವ ಮತಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿತ್ತು. ಹಿಂದೂ ದೇಶದ ಪಂಡಿತರು, ಧಾರ್ಮಿಕ ಗುರುಗಳು ಕಾಂಭೋಜವನ್ನು ಸಂದರ್ಶಿಸುತ್ತಿದ್ದರು. ಲಿಂಗಪೂಜೆಯು ವಿಶೇಷವಾಗಿ ಪ್ರಚಾರದಲ್ಲಿತ್ತು. ಬೇರೆ ಬೇರೆ ಹಿಂದೂ ದೇವತೆಗಳಿಗೆ ದೇವಾಲಯಗಳನ್ನು ಕಟ್ಟಿಸಿದ ಕುರುಹುಗಳು ಕಾಣಸಿಗುತ್ತವೆ. ರಾಮಾಯಣ, ಮಹಾಭಾರತ, ಆಯುರ್ವೇದ, ಕಾವ್ಯಗಳು ಮತ್ತು ವಿವಿಧ ತತ್ವಜ್ಞಾನಗಳು ಪ್ರಚಾರದಲ್ಲಿದ್ದುವೆಂದು ಶಾಸನಗಳಿಂದ ಗೊತ್ತಾಗುತ್ತದೆ.

ಚಂಪಾ (ದಕ್ಷಿಣ ಅಸ್ಸಾಂ)

ಉತ್ತರ ಹಿಂದುಸ್ಥಾನದೊಂದಿಗೆ ಈ ಪ್ರದೇಶದ ಸಂಪರ್ಕವು ಬೆಳೆದಿತ್ತು. ಹಿಂದೂ ಮತವು ಇಲ್ಲಿ ವಿಶೇಷವಾಗಿ ಆಚರಣೆಯಲ್ಲಿತ್ತು. ವರ್ಣಾಶ್ರಮವೇ ಮೊದಲಾದ ವೈದಿಕ ಪದ್ಧತಿಗಳು ಪ್ರಚಾರದಲ್ಲಿದ್ದುವು. ಸಂಸ್ಕೃತ ಸಾಹಿತ್ಯದ ವಿವಿಧ ಶಾಖೆಗಳು ಅಭ್ಯಸಿಸಲ್ಪಡುತ್ತಿದ್ದುವಲ್ಲದೆ ತತ್ವಶಾಸ್ತ್ರ, ವ್ಯಾಕರಣ ಮತ್ತಿತರ ಶಾಸ್ತ್ರ ವಿಭಾಗಗಳು ಪ್ರಚಾರದಲ್ಲಿದ್ದುವು.