ನಾನು ಆಶ್ರಮ ತ್ಯಾಗ ಮಾಡಬಾರದೆಂದು ನನ್ನ ಮೇಲೆ ಒತ್ತಡ ತರುವ ಯತ್ನ ಹೀಗೆಯೇ ಸುಮಾರು ಒಂದು ಒಂದೂವರೆ ವರ್ಷಗಳ ಕಾಲ ನಡೆದಿದೆ. ಹೀಗೆ ನನ್ನನ್ನು ಬಿನ್ನವಿಸಿಕೊಂಡವರಲ್ಲಿ ಜಿಲ್ಲೆಯ ಗಣ್ಯಾತಿಗಣ್ಯರು, ಜೊತೆಗೆ ನನಗೆ ತುಂಬ ಆತ್ಮೀಯರಾಗಿದ್ದ ಕ್ರಿಶ್ಚಿಯನ್ ಧರ್ಮ ಗುರುಗಳೂ, ಮುಸಲ್ಮಾನ್ ಬಂಧುಗಳೂ ಇದ್ದರು! ಎಲ್ಲರಿಗು ನಗುಮುಖದೊಂದಿಗೆ ತಲೆಯಲ್ಲಾಡಿಸುವುದೇ ನನ್ನ ಉತ್ತರ! ಈ ರೀತಿಯ ಉತ್ತರಕ್ಕೆ ಸಿಡಿಮಿಡಿಗೊಂಡವರೂ ಇದ್ದರು.
ಹತ್ತು ವರ್ಷಗಳ ಹಿಂದೆ ಕೆಂಡಸಂಪಿಗೆಯಲ್ಲಿ ಪ್ರಕಟಗೊಂಡ ವಿದ್ಯಾಭೂಷಣರ ‘ನೆನಪೇ ಸಂಗೀತ’ ಜನಪ್ರಿಯ ಸರಣಿಯ ಪುಸ್ತಕ ರೂಪ 
ನಾಳೆ ಬಿಡುಗಡೆಯಾಗಲಿದೆ.
ಈ ಪುಸ್ತಕದ ಅಪ್ರಕಟಿತ ಬರಹದ ಆಯ್ದ ಭಾಗ ಇಲ್ಲಿದೆ.

 

ನಾನು ಬಳ್ಳಾರಿಯಿಂದ ಕರ್ನೂಲ್, ಬೆಂಗಳೂರು ಪ್ರವಾಸ ಮುಗಿಸಿ ಕುಕ್ಕೆಗೇ ಹಿಂತಿರುಗಿದೆ. ಮತ್ತಿನ ದಿವಸಗಳಲ್ಲಿ ಪ್ರತಿದಿನವೆಂಬಂತೆ ನಾವು ದೂರವಾಣಿ ಸಂಪರ್ಕದಲ್ಲಿರುತ್ತಿದ್ದೆವು. ಇಲ್ಲದೇ ಇರಲು ನಮ್ಮಿಂದ ಆಗುತ್ತಿರಲಿಲ್ಲ! ಆಕೆ ನಿಧಾನವಾಗಿ ತನ್ನ ಸಮೀಪ ಬಂಧುಗಳಲ್ಲಿ, ತನ್ನ ಗೆಳತಿಯರಲ್ಲಿ, ತಂದೆ ತಾಯಿಯರಲ್ಲಿ ವಿಷಯ ಪ್ರಸ್ತಾಪಿಸಿದ್ದಳು. ಅವರು ಹೌಹಾರಿದ್ದರು. ಬಳ್ಳಾರಿಯ ಆ ಊರಿನಲ್ಲಿ, ಅಷ್ಟೇಕೆ ಜಿಲ್ಲೆಯಲ್ಲೇ ಪ್ರಸಿದ್ಧರಾಗಿದ್ದ, ಅಲ್ಲಿನ ಜನ ವಿಶೇಷ ಪ್ರೀತಿ ಗೌರವಗಳಿಂದ ಕಾಣುತ್ತಿದ್ದ, ಪ್ರತಿಷ್ಠಿತ ಮನೆತನದ ತಮ್ಮ ಹೆಣ್ಣುಮಗಳು ಸ್ವಾಮೀಜಿಗಳೊಬ್ಬರನ್ನು ಮದುವೆಯಾಗಬೇಕೆಂದಿರುವುದು ನಂಬಲಾಗದ, ಅರಗಿಸಿಕೊಳ್ಳಲಾಗದ, ಒಪ್ಪಿಗೆ ನೀಡಲಾಗದ ಸಂಗತಿಯಾಗಿ ಮನೆಯವರೆಲ್ಲರ ತಳಮಳಕ್ಕೆ, ನಿದ್ದೆಗೆಡಿಸಿದ್ದಕ್ಕೆ ಕಾರಣವಾಗಿತ್ತು. ಅದು ಅತ್ಯಂತ ಸಹಜ ಪ್ರತಿಕ್ರಿಯೆಯಾಗಿತ್ತು.

ಆಕೆಯ ತಂದೆ ಜನಪ್ರಿಯ ವೈದ್ಯರು, ಸಂಪನ್ನರು. ತಂದೆ ತಾಯಿಗಳಿಗೆ ತಮ್ಮ ಅಚ್ಚುಮೆಚ್ಚಿನ ಮಗಳು ಯಾರೋ ಒಬ್ಬ ಸ್ವಾಮಿಯನ್ನು, ಅದೂ ವಯಸ್ಸಿನಲ್ಲಿ ಬಹಳ ಅಂತರವಿರುವ ವ್ಯಕ್ತಿಯನ್ನು ಕೈಹಿಡಿಯುವುದೆಂದರೆ ನಿಜಕ್ಕೂ-ಸುತರಾಂ ಬೇಕಿರಲಿಲ್ಲ. ಆಕೆ ‘ಹೂಂ’ ಅಂದರೆ ಎಂತೆಂಥಾ ಯೋಗ್ಯತಾವಂತ, ಸ್ಥಿತಿವಂತ, ಲೌಕಿಕ ವಿದ್ಯಾವಂತ ವ್ಯಕ್ತಿ ಆಕೆಯನ್ನು ಮದುವೆಯಾಗಬಹುದಿತ್ತು. ಅವರಪ್ಪ ಅವರ ಅವಿಭಕ್ತ ಕುಟುಂಬದ ಎಲ್ಲ ಹೆಣ್ಣು ಮಕ್ಕಳ ಮದುವೆಗಳನ್ನು ತಾವೇ ನಿಂತು ಮಾಡಿಸಿದವರು. ತಮ್ಮ ಮಗಳನ್ನು ಅನುರೂಪ ವ್ಯಕ್ತಿಗೆ, ತಮ್ಮ ಯೋಗ್ಯತೆಗೆ ಕುಂದಿಲ್ಲದಂತೆ, ಸ್ವಲ್ಪ ಹೆಚ್ಚೇ ಚೆನ್ನಾಗಿ ಮದುವೆ ಮಾಡಿಕೊಡುವ ಕನಸು ಕಂಡಿದ್ದವರು. ಮಗಳ ಮದುವೆಯನ್ನು ಹೇಗೆ ಮಾಡಬೇಕೆಂದಿದ್ದರೋ ಪಾಪ. ಮಧ್ಯೆ ಎಲ್ಲಿಂದ ಈ ಪೀಡೆ ತಗುಲಿಕೊಂಡಿತೋ ಎಂದವರಿಗೆ ಅನಿಸಿರಬಹುದು. ಪರಮ ಸ್ವಾರ್ಥಿಯಾಗಿ ನಾನವರಿಗೆ ಕಂಡಿರಬಹುದು!


ನೆನಪಿನ ಸುರುಳಿ ಬಿಚ್ಚಿಕೊಂಡಾಗಲೆಲ್ಲ, ಮಿತ್ರ ತೋಳ್ಪಾಡಿ ಮನೆಯ ಆ ಪ್ರಶಾಂತ ಹಳ್ಳಿಯ ಪರಿಸರದ, ಹಾಡಿಯ ನೆನಪು ಬಂದೇ ಬರುತ್ತದೆ. ‘ಶಾಂತಿಗೋಡು’ ಎಂಬ ಹೆಸರಿನ ಊರಿನ ಆ ಮನೆಯನ್ನು ಒಬ್ಬಾತ ಬಂದವನು ಶಾಂತಿಯಗೂಡು ಎಂದು ಬಣ್ಣಿಸಿದ್ದು ನನಗೆ ನೆನಪಿದೆ. ಎಷ್ಟು ಸಲ ಅದನ್ನೇ ಮಾತನಾಡಿದೆವೋ ಅಲ್ಲೇ! ಈ ಸಲ ಸಿಕ್ಕಿದಾಗ ಕೇಳಿದ್ದ “ಏನು ಯಾರೋ ಹುಡುಗಿಯನ್ನು ಪ್ರೀತಿಸಿದ್ದೀರಂತೆ, ತುಂಬ ಹಚ್ಚಿಕೊಂಡಿದ್ದೀರಂತೆ, ಫೋನ್ ನಲ್ಲಿ ಮಾತನಾಡುತ್ತಲೇ ಇರುತ್ತೀರಂತೆ, ಮಠ ಬಿಡುವ ಸಿದ್ಧತೆ ನಡೆಸಿದ್ದೀರಂತೆ? ನನಗೆ ಹೇಳಲೇ ಇಲ್ಲಾ?” ಒಮ್ಮೆಗೆ ನನಗೆ ಪಿಚ್ಚೆನಿಸಿತು. ಯಾವುದನ್ನೂ ಆತನಲ್ಲಿ ಹೇಳದಿರುತ್ತಿರಲಿಲ್ಲ. ತಡವರಿಸಿದೆ. “ಹೌದು ಮಾರಾಯಾ- ಹೇಳಲಾಗಲಿಲ್ಲ-ಯಾಕೋ ಏನೋ ಸಂಕೋಚವೆನಿಸಿತು. ಮತ್ತೆ ಈಗ ಏನು ಮಾಡಲಿ?- ಹೇಗೆ ಮಾಡಲಿ?-ಹೀಗೆ ಇದೆ ಪರಿಸ್ಥಿತಿ-ನೀನೇ ಹೇಳಿಬಿಡು” ಎಂದೆ. ಸ್ವಲ್ಪ ಸುಮ್ಮನಿದ್ದ. “ಅದು ಹೇಗೆ ಮಾಡಬೇಕೋ, ಏನು ಮಾಡಬೇಕೋ ನನಗೆ ಗೊತ್ತಿಲ್ಲ. ನಿಮ್ಮದೇ ನಿರ್ಧಾರ, ಹೆಜ್ಜೆ ಇಡಬೇಕಾದುದು ನೀವೇ. ನಾವ್ಯಾರು ನಿಮ್ಮನ್ನು ಕೈ ಹಿಡಿದು ಹೊರಗೆ ಕರಕೊಂಡು ಬರಲಾಗುವುದಿಲ್ಲ”-ಅಂದ! ಮಾತಲ್ಲಿ ಎಂದಿನ ಸರಸತೆ ಇರಲಿಲ್ಲ. ಸ್ವಲ್ಪ ವ್ಯಗ್ರನಾಗಿದ್ದಂತೆ ಕಂಡಿತು. ನಾನೂ “ಹೌದು-ಹೌದು” ಎಂದು ತಲೆಯಾಡಿಸಿ, ಹಿಂದೆ ಬಂದಿದ್ದೆ. ನಾನು ಆಶ್ರಮ ತ್ಯಾಗ ಮಾಡುವ ದಿನಗಳು ಸಮೀಪಿಸಿದಂತೆ, ಅವನೂ ತಳಮಳಗೊಂಡಂತೆ ಕಂಡಿತು.

ಇದೆಲ್ಲ ಸ್ವಲ್ಪ ವೇಗವಾಗಿ ಬೆಳೆದಂತೆ, ನನ್ನ ಹಿತೈಷಿಗಳು, ಬಂಧುಗಳು, ಬಂದು ಬಂದು ತಿಳಿ ಹೇಳತೊಡಗಿದರು. ಕೆಲವರು ಹೇಳಿದರು, ಮತ್ತೆ ಕೆಲವರು ಇನ್ನು ಕೆಲವರಿಂದ ಹೇಳಿಸಿದರು. “ಬೇಡ ಬೇಡಾ-ಸಂಸಾರದಲ್ಲೇನೂ ಹುರುಳಿಲ್ಲಾ. ಕ್ಷಣ ನಿಮಿಷಗಳ ಸುಖಕ್ಕೆಂದು ಮುಂದೆ ತಾಪತ್ರಯಗಳ ಸರಮಾಲೆಗೆ ಯಾಕೆ ಕತ್ತೊಡ್ಡುತ್ತೀರಿ. ಎಷ್ಟು ಚೆನ್ನಾಗಿದ್ದೀರಿ ನೀವೀಗ. ಪೀಠ ತ್ಯಾಗ ಮಾಡದಿರಿ” ಎಂದು ಕೈ ಮುಗಿದು ನಮಸ್ಕರಿಸಿ ಬಿನ್ನವಿಸಿಕೊಳ್ಳುತ್ತಿದ್ದರು. ಆಗೆಲ್ಲ ನನಗನ್ನಿಸುತ್ತಿತ್ತು “ಇವರು ಹೇಳುವುದು ಒಂದೊಮ್ಮೆ ನಿಜವೇ ಇರಬಹುದು. ಆದರೆ ಅದು ಅವರ ಅನುಭವವಷ್ಟೇ? ನನ್ನದಲ್ಲ ತಾನೇ? ಸ್ವತಃ ಅನುಭವಿಸದೆ ಸಾರಾಸಾರ ನಾನೇ ತಿಳಿಯದೆ ನಾನೇನು ಮಾಡಲಾದೀತು? ಹೇಗೆ ಇಲ್ಲೇ ಇದ್ದು ಬಿಡಲಿ? ಒಂದೊಮ್ಮೆ ಅನುಭವ ನನ್ನದೇ ಆದರೆ, ಒಳ್ಳೆಯದೋ- ಕೆಟ್ಟದೋ ನನ್ನ ಪಕ್ವತೆಗೇ ತಾನೆ? (ನಮ್ಮ ನಮ್ಮ ಮೂಗಿನ ನೇರಕ್ಕೆ ಯೋಚಿಸುವುದು- ಮಾಡುವುದು ಯಾರನ್ನೂ ಬಿಟ್ಟಿಲ್ಲ!)” ಉದ್ಧಾಮ ಪಂಡಿತರಾದ, ಸಹೃದಯರಾದ ಬನ್ನಂಜೆ ಆಚಾರ್ಯರಲ್ಲಿ ಇದೇ ಅಭಿಪ್ರಾಯವನ್ನು ಮಂಡಿಸಿದ್ದೆ. ಅವರಾದರೋ ಕೇಳಿ, ನನ್ನನ್ನು ಸುಮ್ಮನೆ ಪ್ರೀತಿಯಿಂದ ನೋಡಿ ‘ತ್ಚು ತ್ಚು’ ಎಂದು ಲೊಚಗುಟ್ಟಿ ನಕ್ಕಿದ್ದರು! ನಾನು ಮುಂದುವರಿಸಿ “ಇದರಿಂದ ದೇವರಿಗೆ ಸಿಟ್ಟು ಬಂದೀತಾ” ಎಂದು ಕೇಳಿದ್ದೆ.

ಈ ಸಲ ಸಿಕ್ಕಿದಾಗ ಕೇಳಿದ್ದ “ಏನು ಯಾರೋ ಹುಡುಗಿಯನ್ನು ಪ್ರೀತಿಸಿದ್ದೀರಂತೆ, ತುಂಬ ಹಚ್ಚಿಕೊಂಡಿದ್ದೀರಂತೆ, ಫೋನ್ ನಲ್ಲಿ ಮಾತನಾಡುತ್ತಲೇ ಇರುತ್ತೀರಂತೆ, ಮಠ ಬಿಡುವ ಸಿದ್ಧತೆ ನಡೆಸಿದ್ದೀರಂತೆ? ನನಗೆ ಹೇಳಲೇ ಇಲ್ಲಾ?” ಒಮ್ಮೆಗೆ ನನಗೆ ಪಿಚ್ಚೆನಿಸಿತು. ಯಾವುದನ್ನೂ ಆತನಲ್ಲಿ ಹೇಳದಿರುತ್ತಿರಲಿಲ್ಲ. ತಡವರಿಸಿದೆ. “ಹೌದು ಮಾರಾಯಾ- ಹೇಳಲಾಗಲಿಲ್ಲ-ಯಾಕೋ ಏನೋ ಸಂಕೋಚವೆನಿಸಿತು.

ನನ್ನದು ಬಹಳ ದಡ್ಡ ಪ್ರಶ್ನೆಯೆಂದು ಅವರಿಗನ್ನಿಸಿರಬೇಕು. “ಛೇ ಛೇ, ಹಾಗೇನಿಲ್ಲಾ- ಮತ್ತೆ ಈ ಹಿಂದೆಯೂ ಪೀಠತ್ಯಾಗ ಮಾಡಿ, ಸಂಸಾರಿಗಳಾದವರ ಉದಾಹರಣೆ ನಮ್ಮಲ್ಲಿದೆ. ಅಂಥವರ ಪರಿಸ್ಥಿತಿ ಮುಂದೆಲ್ಲ ಚೆನ್ನಾಗಿ ಆಯಿತು ಎನ್ನುವಂತಿಲ್ಲ. ಕೆಲವೊಮ್ಮೆ ಅದು ಅಸಹನೀಯವಾಗಿ ಪರಿಣಮಿಸಿತು. ಎಲ್ಲರು ಆದರ-ಗೌರವಗಳಿಂದ ಕಾಣುವ ದೊಡ್ಡ ಸ್ಥಾನದಿಂದ ಚ್ಯುತರಾದಾಗ ಆಗುವ ಪರಿಣಾಮವನ್ನು ಸಹಿಸಿಕೊಳ್ಳಲು ಎಲ್ಲರಿಂದಲು ಸಾಧ್ಯವಿಲ್ಲ. ಅದಕ್ಕೆ ವಿಶೇಷ ಎದೆಗಾರಿಕೆ ಬೇಕು. ಅದಕ್ಕೆ ತುಂಬು ನಿಸ್ಪೃಹ, ಉದಾರ ಮನಸ್ಥಿತಿ ಬೇಕು. (ಇದು ಇನ್ನೊಂದು ರೀತಿಯ ಸನ್ಯಾಸವಲ್ಲದೆ ಮತ್ತೇನು) ಇದು ಅಧ್ಯಾತ್ಮ, ದೇವರು, ಧರ್ಮಕ್ಕಿಂತಲೂ-ಸಾಮಾಜಿಕ ಸಮಸ್ಯೆ. ನಿಮಗೆ ಯಾವ ದುಃಸ್ಥಿತಿಯೂ ಒದಗಿ ಬರಬಾರದು ಎಂಬುದೇ ನನ್ನ-ನನ್ನಂಥವನ ಮೊದಲ ಕಾಳಜಿ” ಎಂದುಬಿಟ್ಟರು. ಸತ್ಯಕಾಮರದ್ದೂ ಸ್ವಲ್ಪ ವ್ಯತ್ಯಾಸದಲ್ಲಿ ಇದೇ ಅಭಿಪ್ರಾಯವಾಗಿತ್ತು.

ಸಂಸಾರದಲ್ಲಿ ಅಸಾರತೆಯ ತಮ್ಮ ಸ್ವತಃ ಅನುಭವವನ್ನು ವಿವರಪಡಿಸಿ, ಸನ್ಯಾಸದ ಇಂತಹ ಉತ್ತಮ ಸಂದರ್ಭವನ್ನು ನಾನು ಕಳಕೊಳ್ಳಬಾರದೆಂದು ‘ಪುತ್ತೂರಿನ ಅಜ್ಜ’ನವರು ಕಳಕಳಿಯಿಂದಲೇ ನನಗೆ ತಿಳಿಹೇಳಿದ್ದರು. ಒಮ್ಮೆ ಕಛೇರಿಯೊಂದರಲ್ಲಿ ನಾನು ‘ಕಣ್ಣಿನೊಳಗೆ ನೋಡೋ-ಒಳಗಣ್ಣಿನಿಂದಲಿ ನೋಡೋ ಹರಿಯ-ಮೂಜಗಧೊರಿಯ’ ಎಂದು ಕಣ್ಣು ಮುಚ್ಚಿ ಹಾಡುತ್ತಿದ್ದರೆ, ‘ಹರಿ ಒಳಗೆಲ್ಲಿ ಕಾಣುತ್ತಾನೆ ಇವರಿಗೇ-ಇವರಿಗೆ ಮನದ ತುಂಬ ಒಂದೇ ಧ್ಯಾನ’ ಅಂದಿದ್ದರಂತೆ! ತೋಳ್ಪಾಡಿ ಹಾಗೆಂದು ನನ್ನಲ್ಲಿ ಹೇಳಿದ್ದ. ಯಾರು ಏನು ಹೇಳಲಿ-ಆಗೆಲ್ಲ ನನ್ನದೊಂದೇ ಉತ್ತರ-ನಸು ನಗು.

ಪಲಿಮಾರಿನ ದೊಡ್ಡ ಶ್ರೀಗಳವರಿಗೆ, ಪೇಜಾವರ ಸ್ವಾಮಿಗಳವರಿಗೆ ವಿಷಯ ತಿಳಿಯಿತು. ನೇರವಾಗಿ ಬಳ್ಳಾರಿಗೇ ತೆರಳಿ ‘ರಮಾ’ಳನ್ನೇ ವಿಚಾರಿಸಿಕೊಂಡರು! “ಇದೊಂದು ವಿಷಯವನ್ನು ಬಿಟ್ಟುಬಿಡು-ನೀನು ಅವರನ್ನು ಬಿಡದಿದ್ದರೆ ಶಾಪ ಕೊಡುತ್ತೇನೆ” ಎಂದು ಪಲಿಮಾರಿನ ಶ್ರೀಗಳು ಮುನಿಸಿಕೊಂಡು ಹೇಳಿದರೆ, ಆದೀತೆಂದಳಂತೆ ರಮಾ! ಸ್ವಾಮಿಗಳು ನಕ್ಕುಬಿಟ್ಟರಂತೆ. ಪೇಜಾವರರಂತೂ “ನಿನಗೆ ಬೇರೆ ಒಳ್ಳೆಯ ಹುಡುಗನನ್ನು ನಾನೇ ನೋಡಿ ಮದುವೆ ಮಾಡಿಸುತ್ತೇನೆ. ಇವರನ್ನಂತು ಬಿಟ್ಟುಬಿಡು, ಇಡೀ ಸಮಾಜಕ್ಕೆ, ಮಾಧ್ವ ಸಮಾಜಕ್ಕೆ ಇವರು ತುಂಬ ಬೇಕಾದವರು, ತುಂಬ ಹೆಸರು ಮಾಡಿದವರು, ಇವರನ್ನು ಬಿಟ್ಟುಬಿಡು ನೀನು” ಅಂದಿದ್ದರಂತೆ. “ಇದರಲ್ಲಿ ನಾನು ಬಿಡಲಿಕ್ಕೆ ಏನೂ ಇಲ್ಲ. ನೀವು ಅವರನ್ನೇ ಕೇಳಿ ನೋಡಿ” ಎಂದು ಅಂದಿದ್ದಳಂತೆ ರಮಾ! ಪೇಜಾವರರು ನನಗೆ ಸಿಕ್ಕವರು “ಹುಡುಗಿ ತುಂಬಾ ಜೋರಿದ್ದಾಳೆ” ಎಂದು ನಕ್ಕು ನುಡಿದಿದ್ದರು!

ಮತ್ತೆ ನನ್ನ ತಂಗಿ-ತಮ್ಮಂದಿರು, ಅವರ ಸನಿಹ ಸಂಬಂಧಿಗಳು ಎಲ್ಲ ಕಲೆತು ನನ್ನಲ್ಲಿ ಇದೇ ವಿಷಯ ಚರ್ಚಿಸಿದ್ದರು. ಮಾತಿಗೆ ಮಾತು ಬೆಳೆದು ಒಂದೊಮ್ಮೆ ಅದು ವಿಕೋಪಕ್ಕೆ ಹೋಗುತ್ತಿತ್ತೇನೋ. ಆದರೆ ನನ್ನ ನಿರ್ಧಾರ ಅವರಿಗೆ ಮನವರಿಕೆಯಾದಾಗ, ಯಾಕೋ ಏನೋ ಅವರೆಲ್ಲಾ ಒಮ್ಮೆಗೇ ಸುಮ್ಮನಾದರು. ಅಲ್ಲದೆ ನನ್ನ ಸಹೋದರಿಯರೆಲ್ಲಾ ಸುತ್ತುವರಿದು ‘ಬುದ್ದೀ’-‘ನೀವು ಹೇಗೇ ಇರಿ-ಚೆನ್ನಾಗಿರಿ-ಮತ್ತೆ ನಾವೆಲ್ಲಾ ಜೊತೆಗಿರೋಣ, ಚೆನ್ನಾಗಿರೋಣ! ನಮಗೆ ನೀವು ಬೇಕು!”-ಅವರೊಂದಿಗೆ ನಾನೂ ಗದ್ಗದಿತನಾಗಿದ್ದೆ!

ನಾನು ಆಶ್ರಮ ತ್ಯಾಗ ಮಾಡಬಾರದೆಂದು ನನ್ನ ಮೇಲೆ ಒತ್ತಡ ತರುವ ಯತ್ನ ಹೀಗೆಯೇ ಸುಮಾರು ಒಂದು ಒಂದೂವರೆ ವರ್ಷಗಳ ಕಾಲ ನಡೆದಿದೆ. ಹೀಗೆ ನನ್ನನ್ನು ಬಿನ್ನವಿಸಿಕೊಂಡವರಲ್ಲಿ ಜಿಲ್ಲೆಯ ಗಣ್ಯಾತಿಗಣ್ಯರು, ಜೊತೆಗೆ ನನಗೆ ತುಂಬ ಆತ್ಮೀಯರಾಗಿದ್ದ ಕ್ರಿಶ್ಚಿಯನ್ ಧರ್ಮ ಗುರುಗಳೂ, ಮುಸಲ್ಮಾನ್ ಬಂಧುಗಳೂ ಇದ್ದರು! ಎಲ್ಲರಿಗು ನಗುಮುಖದೊಂದಿಗೆ ತಲೆಯಲ್ಲಾಡಿಸುವುದೇ ನನ್ನ ಉತ್ತರ! ಈ ರೀತಿಯ ಉತ್ತರಕ್ಕೆ ಸಿಡಿಮಿಡಿಗೊಂಡವರೂ ಇದ್ದರು. ಇದನ್ನೆಲ್ಲ ಗಮನಿಸಿ ಗುರುಗಳಾದ ಪೇಜಾವರರು ಹಾಗೂ ಪಲಿಮಾರು ಮಠಾಧೀಶರು ಅಂದಿದ್ದರು, “ಎಷ್ಟು ಜನಾನುರಾಗ, ಜನಾದರಣೆ ಗಳಿಸಿಕೊಂಡಿದ್ದೀರಿ! ಎಂಥ ಅಪಾರ ಕೀರ್ತಿ ನಿಮ್ಮದು! ಎಲ್ಲ ಬಿಟ್ಟು ಅದು ಹೇಗೆ ಹೋಗುತ್ತೀರೋ-ಆಶ್ಚರ್ಯ! ಆಶ್ಚರ್ಯ! ಅಷ್ಟಲ್ಲದೆ ನಿಮ್ಮದು ಮಧ್ವಾನುಜ ವಿಷ್ಣುತೀರ್ಥರ ಪರಂಪರೆ! ವಿಷ್ಣುತೀರ್ಥರು ಪೂಜಿಸಿದ ಲಕ್ಷ್ಮೀನರಸಿಂಹನನ್ನು ಬಿಟ್ಟು ಹೋಗುತ್ತೀರಾ?” ನಾನು ಮೌನವಾಗಿ ತಲೆತಗ್ಗಿಸಿ ಕೇಳುತ್ತಿದ್ದೆನಷ್ಟೇ.

ಪೇಜಾವರರಂತೂ “ನಿನಗೆ ಬೇರೆ ಒಳ್ಳೆಯ ಹುಡುಗನನ್ನು ನಾನೇ ನೋಡಿ ಮದುವೆ ಮಾಡಿಸುತ್ತೇನೆ. ಇವರನ್ನಂತು ಬಿಟ್ಟುಬಿಡು, ಇಡೀ ಸಮಾಜಕ್ಕೆ, ಮಾಧ್ವ ಸಮಾಜಕ್ಕೆ ಇವರು ತುಂಬ ಬೇಕಾದವರು, ತುಂಬ ಹೆಸರು ಮಾಡಿದವರು, ಇವರನ್ನು ಬಿಟ್ಟುಬಿಡು ನೀನು” ಅಂದಿದ್ದರಂತೆ. “ಇದರಲ್ಲಿ ನಾನು ಬಿಡಲಿಕ್ಕೆ ಏನೂ ಇಲ್ಲ. ನೀವು ಅವರನ್ನೇ ಕೇಳಿ ನೋಡಿ” ಎಂದು ಅಂದಿದ್ದಳಂತೆ ರಮಾ!

ಈ ಮಧ್ಯೆ ‘ವಿಪಶ್ಯನ ಧ್ಯಾನ’ದಿಂದ ನಾನು ಸರಿಹೋದೇನೆಂದು ಮಿತ್ರರು ಬೆಂಗಳೂರಿಗೆ ಅದಕ್ಕೂ ನನ್ನನ್ನು ಕರೆದುಕೊಂಡು ಹೋಗಿದ್ದರು! ಹತ್ತು ದಿವಸದ ಆ ಶಿಬಿರದಲ್ಲಿ ಭಾಗವಹಿಸಿದ್ದೆ. ಧ್ಯಾನ-ಮೌನಗಳು ನನಗೆ ಇಷ್ಟವಾಯಿತಾಗಿ, ಸದ್ಯದ ವಿಷಯದಲ್ಲಿ ಅದು ಪ್ರಯೋಜನಕ್ಕೆ ಬರಲಿಲ್ಲ.

ನನ್ನನ್ನು ಈ ಎಲ್ಲ ಬೆಳವಣಿಗೆಗಳಿಂದ ವಿಮುಖನನ್ನಾಗಿಸಲು ಏನು ಮಾಡಬಹುದೆಂದು ಕೇಳಲು ಕೆಲವು ಆಸಕ್ತರು ಪ್ರಸಿದ್ಧ ಜ್ಯೋತಿಷಿಗಳೊಬ್ಬರಲ್ಲಿ ತೆರಳಿದ್ದರಂತೆ. ಜ್ಯೋತಿಷಿಗಳು ಇವರನ್ನು ನೋಡಿದೊಡನೆ ಇವರು ಬಂದ ಉದ್ದೇಶವನ್ನು ತಿಳಿದು ಹೇಳಿದರಂತೆ. “ಯಾವ ವ್ಯಕ್ತಿಯ ಕುರಿತು ನೀವೀಗ ಬಂದಿರುವಿರೋ ಅವರು ನಿಮಗೆ ದಕ್ಕುವುದಿಲ್ಲ. ಆ ಬಗ್ಗೆ ಪ್ರಯತ್ನಿಸಬೇಡಿ. ನಿಮಗದರಿಂದ ಕೆಡುಕೇ ಆದೀತು. ಅವರಿಗೆ ದೇವರ ವಿಶೇಷ ಅನುಗ್ರಹವಿದೆ. ಹೋಗಿರಿ” ಎಂದು. ಇದೇ ವ್ಯಕ್ತಿಗಳು ನನ್ನ ಮನಃಪರಿವರ್ತನೆ ಮಾಡಿಸಲೆಂದು ಪ್ರಸಿದ್ಧ ದೇವೀ ಉಪಾಸಕರಲ್ಲಿ ಕರೆದೊಯ್ದಿದ್ದರು (ನಾನಾದರೋ ಇಂತಹದೆಲ್ಲವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಅವರೆಲ್ಲ ಹೇಳಿದಂತೆ ಕೇಳುತ್ತಿದ್ದೆ. ಆಗಿಬಿಡಲಿ-ಅವರಿಗೇಕೆ ಮತ್ತೆ ಬೇಸರ? ಎಂಬ ರೀತಿಯಲ್ಲಿ). ಉಪಾಸಕರು ಮೀನಾ-ಮೇಷ ಮಾಡಿ ನನ್ನನ್ನು ಉಪಾಸನೆಯ ಕೊಠಡಿಗೆ ಕರೆದೊಯ್ದು ಬಾಗಿಲು ಹಾಕಿಕೊಂಡರು. ದೇವಿಯ ಮುಂದೆ ನಿಲ್ಲಿಸಿದರು. “ನಿಮಗೆ ನಾನೇನು ಹೇಳಲಿ? ಆ ತಾಯಿಯ ಮಗು ನೀವು! ನೀವು ತಿಳಿದಂತೆ ಮಾಡಿ, ಆ ತಾಯಿ ನಿಮ್ಮನ್ನು ರಕ್ಷಿಸುತ್ತಾಳೆ!”
ಹೊರಗೆ ಬಂದವನಿಗೆ ಪ್ರಶ್ನೆಗಳ ಸುರಿಮಳೆ! ಉಪಾಸಕರು ಏನು ಹೇಳಿದರು-ಏನು ಹೇಳಿದರು?” ನಾನು ಸುಮ್ಮನಿದ್ದೆ, ನಕ್ಕೆ.

ಇಷ್ಟೆಲ್ಲ ನಡೆಯುತ್ತಿದ್ದಂತೆ ಅಸಹನೀಯ ಮಾನಸಿಕ ಒತ್ತಡ ನನ್ನ ಆರೋಗ್ಯಕ್ಕೆ ಆತಂಕಕಾರಿಯಾಗಿ ಪರಿಣಮಿಸಿತ್ತು. ದೇಹದಲ್ಲಿ ಕೃಶನಾಗಿ ಹೋಗಿದ್ದೆ. ಒಂದು ತೀರ್ಮಾನಕ್ಕೆ ಬಂದಿದ್ದೆ. “ದೇವರಲ್ಲಿ ಶರಣಾಗಿಬಿಡಬೇಕು. ಅವನೇ ಮತಿ ಅವನೇ ಗತಿ. ಬುದ್ಧಿ ಕೊಟ್ಟವನು ಅವನೇ. ದಾಟಿಸಬೇಕಾದವನೂ ಅವನೇ. ನಾನಿನ್ನು ಹಿಂದೆ ಮುಂದೆ ನೋಡುವವನಲ್ಲ. ಮುಂದಿನ ಬದುಕನ್ನು ಅಪಾಯವಿದ್ದರೂ ಸವಾಲಾಗಿ ಸ್ವೀಕರಿಸುವವನು. ನನ್ನ ಜೊತೆ ನನ್ನ ಲಕ್ಷ್ಮೀನರಸಿಂಹನಿದ್ದಾನೆ! ರಕ್ಷತೀತ್ಯೇವ ವಿಶ್ವಾಸಃ” ಅದು ಹರಿದಾಸರ ಆದರ್ಶ. ಸವಾಲನ್ನು ಎದುರಿಸುವುದು ಮತ್ತು ಶರಣಾಗತಿ ಹರಿದಾಸರ ಬದುಕಿನ ರೀತಿ! ನನಗೆ ದಾರಿ ನಿಚ್ಚಳವಾಗಿತ್ತು.

ಮಠದಿಂದ ತುಸುದೂರ ದುರ್ಗಾದೇವಿಯ ಗುಡಿ. ನಮ್ಮ ಹಿರಿಯ ಸ್ವಾಮೀಜಿಗಳು ಕಟ್ಟಿಸಿದ್ದು. ಇದೇ ಸಮಯ ದುರಸ್ತಿಯ ಕೆಲಸವಿದೆಯೆಂದು, ನೋಡಿಕೊಂಡು ಬರೋಣವೆಂದು ನಾನೂ, ನನ್ನ ತಮ್ಮ ವೇಣುಗೋಪಾಲನೂ ಒಂದು ದಿನ ಅಲ್ಲಿಗೆ ಹೋದೆವು. ದುರಸ್ತಿಯ ಕೆಲಸ ವಿಶೇಷವೇನೂ ಇರಲಿಲ್ಲ. ಆದರೆ ಕಟ್ಟಡ ಹಳೆಯದಾಗಿತ್ತು. ಇದ್ದಕ್ಕಿದ್ದಂತೆ ಯಾಕೆ ಈ ಹಳೆಯ ಗುಡಿಯನ್ನು ಕೆಡವಿ, ಹೊಸದಾಗಿ, ಚೆನ್ನಾಗಿ ನಿರ್ಮಿಸಿಬಿಡಬಾರದು? ನಮ್ಮ ಕುಲದೇವತೆಯ ಮಂದಿರ ಸುಂದರವಾಗಿದ್ದರೆ ಎಷ್ಟು ಚೆನ್ನಾಗಿರುತ್ತದೆ. ವಿಷಯ ತಲೆಗೆ ಹೊಕ್ಕಿತೋ-ಕೆಲಸ ಶುರುವಾಯಿತೇ! ಅದಕ್ಕೆ ಹಣ? ಬೆಂಗಳೂರಿನ ಒಬ್ಬ ಭಕ್ತರು ಐದು ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರು. ಅಷ್ಟು ಸಾಲದು. ಆ ಕಾಲದಲ್ಲೇ ಅದಕ್ಕೆ ಹತ್ತು ಲಕ್ಷದಷ್ಟು ಬೇಕಾಗಿತ್ತು. ನನ್ನಲ್ಲಿ ಬೇರೆ ಸಂಗ್ರಹವಿರಲಿಲ್ಲ. ಇದ್ದ ‘ಟೆಂಪೋ ಟ್ರಾವಲರ್’ ಒಂದನ್ನು ಮಾರಿಬಿಟ್ಟೆ- ಹಣ ಹೊಂದಿಸಲು. ಸಾಲದು ಮತ್ತೂ ಬೇಕಿತ್ತು. ನನ್ನ ‘ಇಡುಗಂಟು’ (ಓದುಗರಿಗೆ ಅರ್ಥವಾಗಿರಬಹುದು. ನಾನು ಆಶ್ರಮ ತ್ಯಾಗ ಮಾಡುವಾಗ ನನ್ನೊಂದಿಗೆ ಒಯ್ಯಲು ಮೀಸಲಾಗಿಟ್ಟಿದ್ದ ಸುಮಾರು ಮೂರು-ಮೂರೂವರೆ ಲಕ್ಷದಷ್ಟು ಹಣದ)-ಇಂದಿರಾ ವಿಕಾಸ ಪತ್ರಗಳನ್ನೂ ಮಾರಿ ಹಣ ಹೊಂದಿಸಿದೆ! ಈಗ ನಗುವ ಸರದಿ ಒಳಗೆ ಕುಳಿತ ನರಸಿಂಹ-ದುರ್ಗಾದೇವಿಯರದ್ದು!

ನನಗೆ ಏನೇನೂ ದುಃಖವೆನಿಸಲಿಲ್ಲ! ಭಲೇ- ಭಗವಂತನ ಕಾರುಣ್ಯಕ್ಕೇನೆಂಬೆ? ನಾನೂ ನಕ್ಕೆ. “ಯಸ್ಯಾನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂ”-ದೇವರು ಯಾರನ್ನಾದರೂ ಅನುಗ್ರಹಿಸಬೇಕೆಂದರೆ ಮೊದಲು ಆತನ ಸಂಪತ್ತನ್ನು ಅಪಹರಿಸುವನಂತೆ. ಇದು ದಾಸರ, ಶರಣರ ನಂಬಿಕೆ! “ಹೊರ ನಡೆಯಬೇಕೆಂದಿರುವೆಯಾ? ಬರಿದಾದ ಎರಡೂ ಕೈಮೇಲೆತ್ತಿಕೊಂಡೇ ನಡೆ!!