ಏಕಾಂತದ ಮರುಭೂಮಿಯಲ್ಲಿ, ಓ ಪ್ರಾಣಸಖಿ, ಕಂಪಿಸುತ್ತವೆ
ನಿನ್ನ ಧ್ವನಿಯ ನೆರಳುಗಳು, ನಿನ್ನ ತುಟಿಯ ಮರೀಚಿಕೆಗಳು

ನಮ್ಮ ನಡುವಿನ ಅಂತರದ ಬೂದಿಯಿಂದ ಮೈದಾಳುತ್ತವೆ
ಗುಲಾಬಿ, ಮಲ್ಲಿಗೆಯರಳುಗಳು ಏಕಾಂತದ ಮರುಭೂಮಿಯಲ್ಲಿ,

ಇಲ್ಲೇ, ಹತ್ತಿರದಲ್ಲೆಲ್ಲೋ, ನಿನ್ನ ಉಸಿರಿನ ಬೆಚ್ಚನೆಯ ಬಿಸಿಯೇಳುತ್ತಿದೆ
ತನ್ನದೇ ಗಂಧದಲ್ಲಿ ಸುಡುತ್ತ ಮೆಲ್ಲ ಮೆಲ್ಲನೆ

ದೂರ ದಿಗಂತದಲ್ಲಿ ಹೊಳೆಯುತ್ತ ಹನಿ ಹನಿಯಾಗಿ
ತೊಟ್ಟಿಕ್ಕುತ್ತಿವೆ ನಿನ್ನ ಸಮ್ಮೋಹಕ ನೋಟದ ಇಬ್ಬನಿಗಳು

ಹೃದಯವನ್ನು ಈ ಹೊತ್ತು ನೆನಪುಗಳು
ಅದೆಷ್ಟು ಪ್ರೀತಿಯಿಂದ ನೇವರಿಸಿವೆಯೆಂದರೆ ಜೀವಸಖಿ..

ಇಂಥ ವಿದಾಯದ ಗಳಿಗೆಯಲ್ಲೂ, ವಿರಹದ ದಿನಗಳು ಕಳೆದು
ಸಮೀಪಿಸುತ್ತಿವೆಯೇನೋ ಮಿಲನದ ರಾತ್ರಿಗಳೆಂಬ ಅನುಮಾನ ಕಾಡುತ್ತಿದೆ..

 

ಬೆಂಗಳೂರು ನಿವಾಸಿ ವಿದ್ಯಾ ಸತೀಶ್ ಕವಯತ್ರಿ.
ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತಿ.
ಅನುವಾದಕಿಯೂ ಹೌದು.

 

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)