ವಿಮಾನ ನಿಲ್ದಾಣದ ಆಸುಪಾಸಿನ ಬಾನಾಡಿ ಪಕ್ಷಿಗಳನ್ನು, ಲೋಹದ ಹಕ್ಕಿಗಳನ್ನು, ಅವುಗಳ ಯೋಚನಾ ಲಹರಿಗಳನ್ನು ಆಕಾಶದಲ್ಲಿಯೇ ಬಿಟ್ಟು ಇದೀಗ ದೂರ ಬಂದಿದ್ದೇನೆ. ಬಾನಿನ ತುಂಬಾ ವಿಮಾನ ಹಕ್ಕಿಗಳೇ ತುಂಬಿರುವ ಲಂಡನ್ ಊರಿನಲ್ಲಿ ಬೀಳ್ಕೊಡುವ ಕಾರ್ಯಕ್ರಮ ಮುಗಿಸಿ ಅಲ್ಲಿಂದ ನೂರು ಮೈಲು ದೂರದ ವಿಮಾನಗಳ ಸದ್ದುಗಳು ಕೇಳದ ಬ್ರಿಸ್ಟಲ್ ಮನೆಗೆ ಮರಳಿದ್ದೇನೆ. ಮನೆ ತುಂಬಾ ಮಂದಿಯಿರುವ ಅಭ್ಯಾಸದ ಮನೆಗೆ, ಯಾವ ಮೂಲೆಯಲ್ಲಿ ಸದ್ದಾದರೂ ಅವೆಲ್ಲವೂ ಇವನಿಂದಲೇ ಎಂದೂ ಈಗೀಗ ತಿಳಿಯುತ್ತಿದೆ. ನನ್ನ ಹೆಚ್ಚು ಗುರುತಿರದ ಟಿವಿ ಹಾಗು ರಿಮೋಟ್ ಈಗಷ್ಟೇ ಭೇಟಿಯಾದ ಅಪರಿಚಿತನ ಪರಿಚಯವನ್ನು ಎಚ್ಚರ ಸಂಶಯದಲ್ಲೇ ಮಾಡಿಕೊಳ್ಳುತ್ತಿವೆ.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್

 

ಇದೀಗ ಹೆಂಡತಿ ಮಕ್ಕಳನ್ನು ಹೀತ್ರೋ ನಿಲ್ದಾಣದಲ್ಲಿ ವಿಮಾನ ಹತ್ತಿಸುತ್ತಿದ್ದೇನೆ. ಕಿಟಕಿಯಿಂದಲೇ ಕರವಸ್ತ್ರ ಬಿಸಾಡಿ ಸೀಟು ಹಿಡಿಯುವ, ಚಾಲಕನ ಬಳಿ ನಮ್ಮನೆಯ “ಲೇಡಿಸ್ ಹಾಗು ಮಕ್ಕಳನ್ನು” ಬೆಂಗಳೂರಿನ ಇಂತಹ ಸ್ಟಾಪಿನಲ್ಲಿ ಜಾಗ್ರತೆಯಲ್ಲಿ ಇಳಿಸು ಎನ್ನುವ ಕೋರಿಕೆ ಇಡುವ ಯಾವ ಘನ ಜವಾಬ್ದಾರಿಗಳು ಇಲ್ಲಿಲ್ಲವಾದರೂ ಬಿಡಲು ಬಂದವರನ್ನು ಪ್ರಯಾಣದ ತಯಾರಿಯ ಘಟ್ಟಗಳ ಕೊನೆಯ ಹಂತದವರೆಗೆ ಬಿಡಿ, ನಡುಮಧ್ಯದಲ್ಲೆ ಕೈಬಿಟ್ಟು ಬರಬೇಕಾದ ಅನಿವಾರ್ಯತೆ ಈ ವಿಮಾನ ಪ್ರಯಾಣದ ವಿದಾಯ ಸಮಾರಂಭದ ಚಡಪಡಿಕೆಗಳಲ್ಲಿ ಒಂದು.

ಆಗಷ್ಟೇ ಹೊರಡುತ್ತಿರುವ ಬಸ್ಸಿನ ಚಕ್ರಗಳು ಮೆತ್ತಗೆ ತಿರುಗಲು ಶುರು ಆಗುವವರೆಗೂ ಕಾದು ಕಿಟಕಿಯ ಚೌಕಟ್ಟಿನಲ್ಲಿ ಕಾಣಿಸುವ ನಮ್ಮ ಪೈಕಿಯ ಯಾತ್ರಿಗಳ ಅರೆಬರೆ ಕೈ ಮುಖಗಳು ಮರೆ ಆಗುವ ತನಕ ನೋಡಿ, ಬಸ್ಸು ಎಬ್ಬಿಸಿದ ಧೂಳು ಕರಗಿ ಹೋಗುವ ತನಕ ಉಳಿದು ಮರಳುವ ಸುಖ ಸಂಪತ್ತು ಈ ವಿಮಾನ ಪ್ರಯಾಣದ ಭಾಗ್ಯದಲ್ಲಿ ಇಲ್ಲ. ಇಲ್ಲಂತೂ ಎಲ್ಲೆಲ್ಲೂ ತಪಾಸಣೆಗಳು, ಸಂಶಯಗಳು, ಪರಿಧಿಗಳು, ಎಚ್ಚರಿಕೆಗಳು. ಮನುಕುಲದ ಉತ್ಥಾನದ ಉತ್ಕರ್ಷದ ಸಂಕೇತವಾದ ಗಗನ ಪ್ರಯಾಣ ಮಾಧ್ಯಮದಲ್ಲಿ ಇಷ್ಟಾದರೂ ಅಡೆತಡೆ ಗಡಿಬೇಲಿಗಳು ಇಲ್ಲದಿದ್ದರೆ ನಾವೆಷ್ಟು ಮುಂದೆ ಬಂದಿದ್ದೇವೆ, ಎಷ್ಟೆಲ್ಲ ಮೇಲೆ ಏರಿದ್ದೇವೆ ಎಂದು ತಿಳಿಯುವುದಾದರೂ ಹೇಗೆ? ಪ್ರಯಾಣ ಮಾಡುವವರ ಮತ್ತು ಬಿಡಲು ಬಂದವರ ನಡುವೆ ಅಚಲ ಗಡಿಯಂತೆ ನಿಂತ ಬೇಲಿಗಳ ಹಿಂದಿನಿಂದ ನಾನೂ ಕೈ ಎತ್ತಿ ಟಾಟಾ ಮಾಡುತ್ತಿದ್ದೇನೆ. ಬಿಡಲು ಬಂದವರನ್ನ ತಿರುಗಿ ನೋಡುತ್ತಾ ಕಣ್ಣಿನ ಅಳತೆಯಿಂದ ಕಣ್ಮರೆ ಆಗುತ್ತಿರುವ ಹೊತ್ತಲ್ಲಿ ದೂರದಿಂದ ಎತ್ತಿ ಬೀಸುವ ಅದೆಷ್ಟೋ ಕೈಗಳು ಪಯಣಿಗರಿಗೆ ಕಾಣಿಸುತ್ತಿರಬಹುದು. ಗುರುತಿನದೋ ಅನಾಮಿಕವೊ ಯಾವುದೊ ಕೈಗೆ ಗುರಿ ಇಟ್ಟು ತಾವೂ ಕೈ ಎತ್ತಿ “ಬಾಯ್” ಹೇಳಿ ಅವರು ಪಯಣ ಮುಂದುವರಿಸಬಹುದು.

ಊರೂರಿನ ಬಸ್ಸು ರೈಲು ವಿಮಾನ ನಿಲ್ದಾಣಗಳಲ್ಲಿ ವಿದಾಯ ಹೇಳಲೆಂದೇ ಬಂದು ಕಣ್ಮರೆಯಾಗುವ ಅನಾಮಿಕರ ಗುಂಪು ಇಲ್ಲೂ ಇದೆ. ಬಸ್ಸೋ, ರೈಲೋ, ವಿಮಾನವೋ… ಒಟ್ಟಾರೆ ತಗಡಿನ ಡಬ್ಬಿಯೊಳಗೆ ಕೂತು ಇನ್ನೊಂದು ಊರಿಗೆ ಹೊರಟವರ ಮಧ್ಯೆ ಸಣ್ಣ ಗೆಳೆತನ ನಗೆ ಕುಶಾಲು ಕ್ಯಾತೆ ಜಗಳ ಮೂಡಿ ಹೊಸ ಸಂಬಂಧ ಕುದುರುವಂತೆ, ಬಿಡಲು ಬಂದವರ ನಡುವೆಯೂ ಅನಾಯಾಸದಲ್ಲಿ ಸೇತುವೆ ಕಟ್ಟಿಕೊಳ್ಳುವುದಿದೆ. ಮಾತಾಡದೆಯೂ ಕಣ್ಣೋಟದಲ್ಲೇ ಪರಿಚಯ ಸಾಂತ್ವನ ಆತಂಕ ಪ್ರಶ್ನೆ ಚೋದ್ಯ ಅದಲು ಬದಲಾಗುವುದಿದೆ.

ಇಲ್ಲಿರುವವರ್ಯಾರೂ ಒಬ್ಬರಿಗೊಬ್ಬರು ಪರಿಚಯಸ್ಥರಲ್ಲ; ರಕ್ತ ಸಂಬಂಧಿಗಳಲ್ಲ. ಆದರೂ ಒಂದು ತರಹದ ನೆಂಟರು. ಒಂದು ಮದುವೆ ಮನೆಯಲ್ಲೋ ಇನ್ಯಾವುದೋ ಸಮಾರಂಭದಲ್ಲೋ ಬೇರೆ ಬೇರೆ ಹೇಳಿಕೆ ಕೇಳಿಕೆ ತೆಗೆದುಕೊಂಡು ಬಂದು ಅಂದಿನ ಸಭೆಯ ಗಿಜಿಗಿಜಿ ಸದ್ದು ಸೊಲ್ಲಿಗೆ ತಮ್ಮ ದನಿಯನ್ನೂ ಮೌನವನ್ನೂ ಸೇರಿಸಿ ಮರೆಯಾಗುವ ಅಜ್ಞಾತರಂತೆ ನಾನು ಇವರು ಅವರು ಎಲ್ಲ ಇಲ್ಲಿದ್ದೇವೆ. ಬಿಡಲು ಬಂದ ನೆಂಟರಿಗೆಂದೇ ಕಟ್ಟಿಸಿದ ಬಿಡಾರದಂತೆ ಕಾಣುವ ನಿಲ್ದಾಣದ ಕಾಯುವ ಚಪ್ಪರದಡಿ ನೆರೆದ ಜನಮನ ಸಮೂಹದಲ್ಲಿ ಆ ದಿನದ ಆ ಘಳಿಗೆಯಲ್ಲಿ ಸೇರಿಹೋಗಿದ್ದೇನೆ. ಹೆತ್ತವರನ್ನು ಊರಿಗೆ ಕಳುಹಿಸುವ ಮಕ್ಕಳು, ಹೆಂಡತಿ ಮಕ್ಕಳನ್ನು ಬೀಳ್ಕೊಡುವ ಗಂಡ, ಗೆಳೆಯರನ್ನು ಬಿಟ್ಟು ಹೋಗಲು ಬಂದ ಇನ್ಯಾರೋ ಗೆಳೆಯ ಗೆಳತಿಯರು ಅಥವಾ ಯಾರೋ ಏನೋ ಎಲ್ಲೋ ಗೊತ್ತಿರದ ಯಾತ್ರಿಗಳು, ಮತ್ತವರ ಬ್ಯಾಗುಗಳನ್ನು ಮುಟ್ಟಿಸಿ ಕಾಸು ಇಸಕೊಳ್ಳುವ ತರಾತುರಿಯ ಚಾಲಕ ನಿರ್ವಾಹಕ ಬಂಧುಗಳು… ಹೀಗೆ ಇಹಪರದಲ್ಲಿ ಇರಬಹುದಾದ ತರಹತರಹದ ಸಂಬಂಧಗಳೆಲ್ಲ ಕ್ಷಣದ ಮಟ್ಟಿಗಾದರೂ ಕಣ್ಣಿಗೆ ಕಟ್ಟುವ ಜೀವಂತವಾಗುವ ಸ್ಥಳದಲ್ಲಿ ಕೆಲ ಹೊತ್ತು ಕಳೆಯುತ್ತಿದ್ದೇನೆ.

ಶುಭ ಕಾರ್ಯಕ್ಕೆ ನಗುತ್ತ ಹೊರಟವರು, ವಿಹಾರದ ಕನಸಿನಲ್ಲಿ ತೇಲುವವರು, ಹೊಸ ಮದುವೆಯ ಮತ್ತಿನಲ್ಲಿ ತೂಗುವವರು, ದೂರದಲ್ಲಿರುವ ಹಿರಿಯರ ಆತಂಕದ ದಿನಗಳಿಗೋ, ಕೊನೆಯ ಯಾತ್ರೆಗೋ ಸಾಕ್ಷಿಗಳಾಗಲು ಗದ್ಗದಿತರಾಗಿ ತೆರಳುತ್ತಿರುವವರು… ಎಲ್ಲರಿಗೂ ಅಲ್ಲಿ ಒಂದು ಅದ್ಧೂರಿಯ ನಿರ್ಗಮನ ಸಿಗುತ್ತಿದೆ. ಕಣ್ಣಿನ ಅಳತೆಯಿಂದ ಮರೆಯಾಗುವ ಪ್ರಯಾಣಿಕರು ಮತ್ತೆ ಅವರನ್ನು ಬಿಡಲು ಬಂದವರ ನಡುವಿನ ಕೊನೆಯ ಪದಗಳು ಚುರುಕಾಗುತ್ತಿವೆ. ಜಗತ್ತಿನ ಮೂಲೆ ಮೂಲೆಯ ಭಾಷೆ ಸಂಸ್ಕೃತಿಗಳ ವಿಧಿ ವಿಧಾನ ಶಾಸ್ತ್ರ ಸೂಕ್ತಗಳಿಗೆ ಅನುಸಾರವಾಗಿ ಅಲ್ಲಿ “ಬಿದಾಯಿ” “ಜುದಾಯಿ”ಗಳು ನಡೆಯುತ್ತಿವೆ. ಅಪ್ಪಿಕೊಳ್ಳುವವರು, ಬೆನ್ನು ನೇವರಿಸುವವರು, ಮುತ್ತು ಕೊಡುವವರು ಹಸ್ತ ಕುಲುಕುವವರು, ಕಣ್ಸನ್ನೆ ಮಾಡುವವರು, ತುಟಿಗಳಲ್ಲಿಯೇ ಹಲಬುವವರು, ಮನಸ್ಸಿನಲ್ಲೇ ಕಳವಳ ಪಡುವವರು.. ಎಲ್ಲರೂ ಅಲ್ಲಿ ಜೊತೆಯಾಗಿದ್ದೇವೆ.

ಇವೆಲ್ಲದರ ನಡುವೆಯೇ ತಮ್ಮ ಹಿಂದೆ ಮುಂದೆ ಯಾರನ್ನೂ ಕರೆದುಕೊಂಡು ಬರದೇ ತಮಗೆ ವಿದಾಯ ಹೇಳುವವರು ಯಾರೂ ಇಲ್ಲದವರು, ತಾವು ತಮ್ಮೊಡನೆ ತಂದ ಬ್ಯಾಗು, ಚೀಲಗಳ ಮೇಲೆ ಕಣ್ಣಿಡುತ್ತ ಅವುಗಳನ್ನೇ ಮಾತಾಡಿಸುತ್ತ ಅವುಗಳ ಜೊತೆಗೆ ತಮ್ಮ ಮುದ್ದು ಸಿಟ್ಟು ಬಹಿರಂಗಗೊಳಿಸುತ್ತ, ಯಾವ ಗಡಿ ಬೇಲಿಯಲ್ಲೂ ಕತ್ತು ತಿರುಗಿಸಿ ನೋಡದೆ ಇಹಲೋಕದ ಬಂಧನಗಳನ್ನು ಕಡಿದು ಹೊರಟ ಸನ್ಯಾಸಿಗಳಂತೆ ಸಾಗಿ ಮರೆಯಾಗುತ್ತಿರುವ ಪಯಣಿಗರೂ ಕಾಣಿಸುತ್ತಿದ್ದಾರೆ. ಬಿಡುವ ಕಳುಹಿಸಿ ಕೊಡುವ ಸುದೀರ್ಘ ಹಬ್ಬ ಕೊನೆಯೇ ಇರದ ಅವ್ಯಾಹತ ಮೆರವಣಿಗೆಯಂತೆ ನಡೆಯುತ್ತಿರುವಾಗ ಈಗಷ್ಟೇ ಬಂದವರು ಹೊಸತಾಗಿ ಸೇರಿಕೊಳ್ಳುವುದು, ವಿದಾಯ ಸಮಾರಂಭ ಮುಗಿಸಿದ ನನ್ನಂತಹವರು ಹೊರನಡೆಯುವುದು ಮುಂದುವರಿದಿದೆ.

ಬಿಡಲು ಬಂದವರನ್ನ ತಿರುಗಿ ನೋಡುತ್ತಾ ಕಣ್ಣಿನ ಅಳತೆಯಿಂದ ಕಣ್ಮರೆ ಆಗುತ್ತಿರುವ ಹೊತ್ತಲ್ಲಿ ದೂರದಿಂದ ಎತ್ತಿ ಬೀಸುವ ಅದೆಷ್ಟೋ ಕೈಗಳು ಪಯಣಿಗರಿಗೆ ಕಾಣಿಸುತ್ತಿರಬಹುದು. ಗುರುತಿನದೋ ಅನಾಮಿಕವೊ ಯಾವುದೊ ಕೈಗೆ ಗುರಿ ಇಟ್ಟು ತಾವೂ ಕೈ ಎತ್ತಿ “ಬಾಯ್” ಹೇಳಿ ಅವರು ಪಯಣ ಮುಂದುವರಿಸಬಹುದು.

ಬಿಡುವವರನ್ನು ಬಿಟ್ಟು ಕಳುಹಿಸುವವರನ್ನು ಕಳುಹಿಸಿ ನಿಲ್ದಾಣದ ಹೊರ ಬಂದ ಮೇಲೂ ಮತ್ತೆ ಮತ್ತೆ ಕೇಳಿಸುವ ವಿಮಾನಗಳ ಹತ್ತಿಳಿಯುವಿಕೆ ಕರೆದು ಕೂಗಿದಂತೆ ಭಾಸವಾಗಿ, ಕತ್ತೆತ್ತಿ ಆಗಸದ ಕಡೆಗೂ ನೋಡುತ್ತಿದ್ದೇವೆ. ದಿಕ್ಕು ದೆಸೆಗಳ ಗಾಳಿಯನ್ನು ಸೀಳುತ್ತ ಹತ್ತಿ ಹಾರುವ ವಿಮಾನಗಳಲ್ಲಿ ಬೆಂಗಳೂರಿನ ಕಡೆಗೆ ಹೋಗುವುದೂ ಇರಬಹುದಲ್ಲ ಎಂದು ಮರಳುವ ದಾರಿಯುದ್ದಕ್ಕೂ ಆಕಾಶವನ್ನು ಹುಡುಕಿದ್ದೇನೆ. ನೆಲದ ಮೇಲೆಯೇ ಯಾವ ಊರು ದಿಕ್ಕು ಸಂಬಂಧಗಳ ಗುರುತು ಹತ್ತದ ಇಲ್ಲಿ ಇನ್ನು ವಿಮಾನಗಳು ಇತ್ತ ಬರುತ್ತಿವೆಯೋ.. ಅತ್ತ ಸಾಗುತ್ತಿವೆಯೋ… ಎಂದು ಬಾನನ್ನು ನೋಡಿ ಹೇಳುವುದು ಕಷ್ಟವೇ.

ಲಂಡನ್ನಿನ ಹೀತ್ರೋದ ಆಸುಪಾಸಿನ ಆಕಾಶವನ್ನು ತುಂಬುವ ವಿಮಾನಗಳನ್ನು ಕೇಳಿಸುವ ಸದ್ದುಗಳನ್ನು ಗಮನಿಸಿದರೆ ಈ ನಿಲ್ದಾಣವನ್ನು ವಿಮಾನ ನಿಲ್ಲುವ ತಾಣ ಎಂದು ಕರೆಯುವುದಕ್ಕಿಂತ ಹಾರುವ ತಾಣ ಎಂದು ಮರುನಾಮಕರಣ ಮಾಡಿದರೂ ವಿದಾಯ ಸಮಾರಂಭಕ್ಕೆ ಬಂದವರು ಆಕ್ಷೇಪ ಎತ್ತಲಿಕ್ಕಿಲ್ಲ. ಪ್ರತಿ ನಿಮಿಷಕ್ಕೂ ಆಕಾಶದ ಮೇಲೆ ಹತ್ತುವ ಇಳಿಯುವ ಲೋಹದ ಹಕ್ಕಿಗಳ ಸಾಲು ಸಾಲು. ಇಳಿದ ನಂತರ ಎಕರೆಗಟ್ಟಲೆ ನೆಲದಲ್ಲಿ ರೆಕ್ಕೆ ಹರಡಿಕೊಂಡು ಸೊಂಟಕ್ಕೆ ಕೈಕೊಟ್ಟುಕೊಂಡು ಸುಧಾರಿಸಿಕೊಳ್ಳುವವುಗಳು. ಮತ್ತು ಆ ಲೋಹದ ಹಕ್ಕಿಗಳೊಳಗೆ ಕುಳಿತ ನಿಂತ ತೂಕಡಿಸುವ ಓಲಾಡುವ ಆಗಷ್ಟೇ ವಿದಾಯ ಸ್ವೀಕರಿಸಿದ ಜೀವದ ಹಕ್ಕಿಗಳು.

ಸಣ್ಣ ಕಿರಾಣಿ ಅಂಗಡಿಯಿಂದ ಹಿಡಿದು ಅತಿ ದೊಡ್ಡ ಕಾರ್ಪರೇಟ್ ಸಂಸ್ಥೆಗಳವರೆಗೆ ದಿನದ ವ್ಯವಹಾರ ತಿಂಗಳು ಮೂರು ತಿಂಗಳುಗಳಲ್ಲಿ ಆದ ವಹಿವಾಟಿನ ಆಧಾರದ ಮೇಲೆ ತಮ್ಮ ತಮ್ಮ ಆರ್ಥಿಕ ಆರೋಗ್ಯವನ್ನು ಅಳೆದುಕೊಳ್ಳುತ್ತವಲ್ಲ ಹಾಗೆ ಈ ಹೀತ್ರೋ ನಿಲ್ದಾಣ ಹೇಗೆ ಕಾರ್ಯನಿರತವಾಗಿದೆ ಎನ್ನುವುದನ್ನು ದಿನಕ್ಕೆ ಸಾವಿರಕ್ಕಿಂತ ಹೆಚ್ಚು ವಿಮಾನಗಳ ಚಲಾವಣೆ ಹಲವು ಸಹಸ್ರ ಪ್ರಯಾಣಿಕರ ಯಾತ್ರೆ ಎಂದು ಅಳೆದು ತೂಗಿ ಹೊಗಳಿ ಕೊಂಡಾಡುತ್ತಾರೆ.

ಇನ್ನು ವಿದಾಯ ಹೇಳಲು ಬಂದವರ ದೈನಂದಿನ ಲೆಕ್ಕ ಯಾರೂ ಇಟ್ಟಂತಿಲ್ಲ. ದಣಿಯುತ್ತ ಇಳಿದವು, ಇಳಿದು ಸುಧಾರಿಸಿಕೊಳ್ಳುತ್ತಿರುವವು, ದೊಡ್ಡ ಉಸಿರೊಂದನ್ನು ಸೆಳೆದು ಆಕಾಶಕ್ಕೆ ಮತ್ತೆ ನೆಗೆಯುವವು… ಇವೆಲ್ಲವೂ ಸೇರಿ ಪಯಣಿಗರನ್ನು ಹತ್ತಿಸಿಕೊಂಡು ಬೀಳ್ಕೊಡುವವರನ್ನು ದೂರದಿಂದಲೇ ನೋಡಿ ತಮ್ಮ ದೈನಿಕದಲ್ಲಿ ನಿರತವಾಗಿವೆ.

“ಕಾಯಕವೇ ಕೈಲಾಸ” ಎನ್ನುವ ವಿಮಾನಗಳು, ತಮ್ಮ ಮಾಲಿಕರು ತಮಗೆ ವಿಶ್ರಮಿಸುವ ಸಮಯ ನೀಡದೆ ಅಕ್ಕ ಪಕ್ಕದಲ್ಲಿ ಆಗಷ್ಟೇ ಬಂದು ನಿಂತ ತಮ್ಮ ಜಾತಿಯ ಹಕ್ಕಿಗಳ ಕುಶಲೋಪರಿ ವಿಚಾರಿಸುವ ಎಡೆ ಕೊಡದೇ ಕೆಲಸಮಾಡಿಸುತ್ತಾರೆ ಎಂದು ಗೊಣಗಬಹುದು. ಮತ್ತೆ ಈ ವಿಮಾನಗಳನ್ನು ಎಷ್ಟು ದುಡಿಸಿದರೂ ಲಾಭ ಮಾಡುವುದು ಅದೆಷ್ಟು ಕಠಿಣ ಎಂದು ಮಾಲಿಕರು ಆಡಿಕೊಳ್ಳಬಹುದು. ಇವರಿಬ್ಬರನ್ನು ನೋಡಿ ಕೇಳಿ, ಏನಾಗಿ ಹುಟ್ಟಿದರೂ ಈ ವಿಮಾನಗಳಾಗಿ ಹುಟ್ಟುವುದು ಬೇಡ ಎಂದು ಯಾತ್ರಿಗಳ, ಬಿಡುವವರ, ವಿಮಾನಗಳ, ಮಾಲೀಕರ ಯಾರ ಉಸಾಬರಿಗೂ ಇಲ್ಲದ ಇಲ್ಲಿನ ಹಕ್ಕಿಗಳೂ ಅಂದುಕೊಂಡಿರಬಹುದು.

(ಲಂಡನ್ನಿನ ಹೀತ್ರೋ ವಿಮಾನ ನಿಲ್ದಾಣ)

ವಿಮಾನ ನಿಲ್ದಾಣದ ಆಸುಪಾಸಿನ ಬಾನಾಡಿ ಪಕ್ಷಿಗಳನ್ನು, ಲೋಹದ ಹಕ್ಕಿಗಳನ್ನು, ಅವುಗಳ ಯೋಚನಾ ಲಹರಿಗಳನ್ನು ಆಕಾಶದಲ್ಲಿಯೇ ಬಿಟ್ಟು ಇದೀಗ ದೂರ ಬಂದಿದ್ದೇನೆ. ಬಾನಿನ ತುಂಬಾ ವಿಮಾನ ಹಕ್ಕಿಗಳೇ ತುಂಬಿರುವ ಲಂಡನ್ ಊರಿನಲ್ಲಿ ಬೀಳ್ಕೊಡುವ ಕಾರ್ಯಕ್ರಮ ಮುಗಿಸಿ ಅಲ್ಲಿಂದ ನೂರು ಮೈಲು ದೂರದ ವಿಮಾನಗಳ ಸದ್ದುಗಳು ಕೇಳದ ಬ್ರಿಸ್ಟಲ್ ಮನೆಗೆ ಮರಳಿದ್ದೇನೆ. ಮನೆ ತುಂಬಾ ಮಂದಿಯಿರುವ ಅಭ್ಯಾಸದ ಮನೆಗೆ, ಯಾವ ಮೂಲೆಯಲ್ಲಿ ಸದ್ದಾದರೂ ಅವೆಲ್ಲವೂ ಇವನಿಂದಲೇ ಎಂದೂ ಈಗೀಗ ತಿಳಿಯುತ್ತಿದೆ. ನನ್ನ ಹೆಚ್ಚು ಗುರುತಿರದ ಟಿವಿ ಹಾಗು ರಿಮೋಟ್ ಈಗಷ್ಟೇ ಭೇಟಿಯಾದ ಅಪರಿಚಿತನ ಪರಿಚಯವನ್ನು ಎಚ್ಚರ ಸಂಶಯದಲ್ಲೇ ಮಾಡಿಕೊಳ್ಳುತ್ತಿವೆ. ಯಾವಾಗಲೂ ರುಚಿ, ಬಣ್ಣ, ಮಸಾಲೆ, ಒಗ್ಗರಣೆಗಳ ಸುವಾಸನೆ-ಚಟಪಟಗಳ ಕಲರವದಲ್ಲಿ ಮೈಮರೆಯುವ ಅಡುಗೆ ಮನೆ ಈಗ ಈ ಹೊಸ ಅನನುಭವಿ ಯಜಮಾನನ ಹುರುಪು ಹಾಗು ನವ ಬಾಣಸಿಗನ ಅಚಾತುರ್ಯಗಳಿಗೆ ಬೆಚ್ಚಿ ಬೆಸ್ತು ಬೀಳುತ್ತಿದೆ.

ಬೀಳ್ಕೊಡುವ ಮೆರವಣಿಗೆಯಲ್ಲಿ ನಡೆದು ದಣಿದು ಬಂದವನ ಬೆವರ ವಾಸನೆ ಇಡೀ ಮನೆಯನ್ನು ತುಂಬುತ್ತಿದೆ. ವಿಮಾನ ಪಯಣದ ವಿದಾಯ ಸಮಾರಂಭವೊಂದು ಈಗಷ್ಟೇ ಮುಗಿದಿದೆ.