ಇರಾಕಿನ ಯುದ್ಧ, ಆಫ್ಗಾನಿಸ್ತಾನದ ಯುದ್ಧ ಹಲವರು ಜಾಗತಿಕ ಟೀಕಾಕರಿಗೆ ವಿಯೆಟ್ನಾಂ ಯುದ್ಧದಲ್ಲಿ ಅಮೇರಿಕದ ಪರದಾಟವನ್ನು ನೆನಪಿಸಿದೆ. ವೈರಿಯ ಕೈಯಲ್ಲಿರುವ ಬಾಂಬು ಗನ್ನುಗಳ ಮೇಲೆ ಮಾತ್ರ ಅಮೇರಿಕಕ್ಕೆ ಕಣ್ಣಿರುತ್ತದೆ. ಎಷ್ಟೋ ವೇಳೆ, ಅದು ವೈರಿಯ ಕೈಗೆ ಬರಲು ತಾನೇ ಕಾರಣ ಆಗಿರಬಹುದು ಎಂದೂ ಮರೆತು ಹೋಗಿರುತ್ತದೆ. ಹಾಗೆ ಮರೆತಾಗ ವೈರಿಯ ಹಿಂದಿನ ಶಕ್ತಿ, ಮುಖ್ಯವಾಗಿ ಒಳಗಿನ ಶಕ್ತಿ ಅದರ ಕಣ್ಣಿಗೆ ಕಾಣುವುದಿಲ್ಲ. ಇರಾಕಿನ ಯುದ್ಧ ಶುರುವಾಗಿ ಇನ್ನೂ ವರ್ಷ ಕಳೆಯುವ ಮುನ್ನವೇ ಯುದ್ಧ ದಿರಿಸು ತೊಟ್ಟು, ಅಮೇರಿಕದ ಯುದ್ಧಹಡಗಿನ ಮೇಲೆ ನಿಂತು “ವಿ ಹ್ಯವ್ ಪ್ರಿವೇಲ್ಡ್” ಎಂದು ಬುಷ್ ಸೊಟ್ಟನಗೆ ನಕ್ಕಿದ್ದು ನಿಮಗೆ ನೆನಪಿರಬಹುದು. ಆ ನಗೆಯ ನಂತರವೇ ನಿಜವಾದ ಯುದ್ಧ ಶುರುವಾಯಿತು ಎಂದೂ ಹಲವರು ಹೇಳಿದ್ದಾರೆ. ಇರಲಿ, ಇದೆಲ್ಲಾ ಯಾಕೆ ನೆನಪಾಯಿತೆಂದರೆ ಮೊನ್ನೆ ಟೀವಿಯಲ್ಲಿ ವಿಯಟ್ನಾಮ್ ಹಾಗು ಇನ್ನಿತರ ದೇಶಗಳಿಂದ ನಿರಾಶ್ರಿತರಾಗಿ ಬಂದ ಹೆಂಗಸರಿಗೆ ಈಜು ಕಲಿಸುವ ಬಗ್ಗೆ ಹೇಳುತ್ತಿದ್ದರು. ದೋಣಿಯಲ್ಲಿ ತಪ್ಪಿಸಿಕೊಂಡು ಬಂದ ಹಲವರಿಗೆ ನೀರಿನ ಬಗ್ಗೆಗಿನ ದಿಗಿಲನ್ನು ಗೆಲ್ಲುವುದು ಮುಖ್ಯ ಎಂಬುದು ಅದರ ಹಿಂದಿನ ಕಾಳಜಿ.

ವಿಯೆಟ್ನಾಂ ಯುದ್ಧದ ಕತೆಗಳನ್ನು, ಅಮೇರಿಕಾದ ಕಾರ್ಪೆಟ್ ಬಾಂಬಿಂಗು ಹಾಗು ವಿಯೆಟ್-ಕಾಂಗಿನ ಆಕ್ರೋಶದ ನಡುವೆ ನಲುಗಿದ ಜನರ ಕತೆಯನ್ನು ಆಗಾಗ ಕೇಳಿಯೇ ಇರುತ್ತೇವೆ. ಆ ಯುದ್ಧದ ಹಲವಾರು ಚಿತ್ರಗಳಲ್ಲಿ ನನ್ನನ್ನು ಒಂದು ಮಗುವಿನ ಚಿತ್ರ ಯಾವಾಗಲೂ ಕಾಡುತ್ತದೆ. ನೇಪಾಮ್ ಬಾಂಬಿಗಿನಲ್ಲಿ ಮೈ ಸುಟ್ಟುಕೊಂಡು, ಗದ್ದೆ ನಡುವಿನ ರಸ್ತೆಯಲ್ಲಿ ಕೈಚಾಚಿಕೊಂಡು, ಅಳುತ್ತಾ ಓಡಿಬರುತ್ತಿರುವ ಹುಡುಗಿಯ ಚಿತ್ರ ಇಂದೂ ನೋಡಿದವರಿಗೆ ಪ್ರಶ್ನೆಗಳನ್ನು ಕೇಳುತ್ತವೆ. ಇದೆಲ್ಲಾ ಯಾಕೆ, ನನಗೇಕೆ ಹೀಗೆ ಮಾಡಿದಿರಿ, ನಾನೇನು ಮಾಡಿದೆ… ಹೀಗೆ. ಇಂತಹ ಸಂಗತಿಗಳು ಪುಸ್ತಕ ಪತ್ರಿಕೆಗಳಿಂದ ಜಿಗಿದು ಎದುರಿಗೆ ಬಂದು ನಿಂತಾಗ ನಮ್ಮನ್ನು ಆಳವಾಗಿ ಅಲ್ಲಾಡಿಸುವುದೂ ನಿಮಗೆ ಗೊತ್ತಿರಬಹುದು.

ಇದೆಲ್ಲದರ ನಡುವೆ ವಿಯಟ್ನಾಮಿನ ನನ್ನ ಗೆಳೆಯನೊಬ್ಬನ ನೆನಪಾಯಿತು. ಅವನು ಬೇರೆ ಕಂಪನಿಯಿಂದ ಬಂದು ಕೆಲವು ದಿನಗಳ ಮಟ್ಟಿಗೆ ನನ್ನ ಜತೆ ಕೆಲಸ ಮಾಡುತ್ತಿದ್ದ. ಅವನು ಹೇಳಿದ ತನ್ನ ಕತೆ ಹಲವು ಸಲ ಮತ್ತೆ ಮತ್ತೆ ನನಗೆ ನೆನಪಾಗುತ್ತದೆ. ಒಂದು ಮಧ್ಯಾಹ ನಗುನಗುತ್ತಾ ಊಟ ಮಾಡುತ್ತಿದ್ದೆವು. ನಾನು ಇಂಡಿಯದಿಂದ ಬಂದ ಕತೆ, ಕೆಲಸ ಸಿಕ್ಕದೆ ಪರದಾಡಿದ ಕತೆ ಎಲ್ಲ ಹೇಳಿಕೊಂಡಿದ್ದೆ. ಎಲ್ಲವನ್ನೂ ನಗುತ್ತಾ ಕೇಳಿದ ಅವನು ತನ್ನ ಕತೆಯನ್ನೂ ಹೇಳಿಕೊಂಡಿದ್ದ. ಅವರ ಅಪ್ಪ ಅಮ್ಮಂದಿರಿಗೆ ಅವರು ನಾಕು ಜನ ಮಕ್ಕಳಂತೆ. ಇವನು ಕಡೆಯವನಂತೆ. ಆಸ್ಟ್ರೇಲಿಯಕ್ಕೆ ಅವರು ಬಂದಾಗ ಇವನು ಪುಟ್ಟ ಮಗುವಂತೆ. ಅವನ ಅಪ್ಪನಿಗೆ ತುಂಬಾ ವಯಸ್ಸಾಗಿದೆಯಂತೆ. ಬದುಕಿನಲ್ಲಿ ತುಂಬಾ ಕಷ್ಟ ನಷ್ಟ ಅನುಭವಿಸಿದ್ದಾರಂತೆ. ಈಗೀಗ ತುಸು ನಿರಾಳದಿಂದ ಇದ್ದಾರಂತೆ. ಆದರೂ ಒಂದು ನೆನಪು ಮಾತ್ರ ಅವರನ್ನು ಈಗಲೂ ಬಿಟ್ಟು ಹೋಗದೆ ಕಾಡುತ್ತದಂತೆ.

ಅವನ ಅಪ್ಪ-ಅಮ್ಮ ಯುದ್ಧದ ಮತ್ತು ಯುದ್ಧದ ನಂತರದ ಹಿಂಸೆಯಿಂದ ತಪ್ಪಿಸಿಕೊಂಡು ವಿಯಟ್ನಾಮಿನಿಂದ ಓಡಿಹೋಗಬೇಕಾಯಿತಂತೆ. ತಮ್ಮ ಸಂಸಾರವನ್ನು ಕಾಪಾಡಿಕೊಳ್ಳಲು ಅದೊಂದೇ ದಾರಿಯಾಗಿತ್ತಂತೆ. ತಮ್ಮ ಬೇಸಾಯದ ಭೂಮಿಯನ್ನೆಲ್ಲಾ ಯುದ್ಧದಲ್ಲಿ ಕಳಕೊಂಡಿದ್ದರು. ಅನಾಥರಾಗಿ ಪೇಟೆಯಲ್ಲಿ ಭಿಕ್ಷೆ ಬೇಡುವುದು ಅವರಿಗೆ ಇಷ್ಟವಿರಲಿಲ್ಲ. ತಲೆಯೆತ್ತಿ ಬದುಕಿದ್ದವರ ಸ್ವಾಭಿಮಾನಕ್ಕೆ ಅದೆಂತಹ ಧಕ್ಕೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಬೇರೆ ಎಲ್ಲಾದರೂ ಹೋಗಿ ಹೊಸ ಬದುಕನ್ನು ಕಟ್ಟಿಕೊಳ್ಳುವುದೇ ಅವರಿಗೆ ಸರಿ ಕಂಡ ದಾರಿ.

ನಾಕಾರು ಜನರ ಜತೆ ಸೇರಿಕೊಂಡು ಪುಟ್ಟ ಬೋಟಿನಲ್ಲಿ ಹೊರಟರಂತೆ. ಆ ಬೋಟೂ ಇವರನ್ನೆಲ್ಲ ಸಮುದ್ರ ದಾಟಿಸಿ ಆಸ್ಟ್ರೇಲಿಯ ತಲುಪಿಸಲು ಶಕ್ತವೇ ಎಂದು ಗಮನಿಸಿರಲಿಲ್ಲವಂತೆ. ಯುದ್ಧದ ದಿನಗಳೇ ಹಾಗಲ್ಲವೆ? ಮುಂಚೆ ಹೊರಟ ದೋಣಿಗಳು ಮುಳುಗಿ ಸತ್ತ ಜನರ ಸುದ್ದಿಯನ್ನು ಉಳಕೊಂಡವರಿಂದ ಕೇಳಿದ್ದರೂ – ತಮಗೆ ಹಾಗಾಗುವುದಿಲ್ಲ ಎಂಬ ಸಮಜಾಯಿಷಿ ಇದ್ದೇ ಇರುತ್ತದೆ. ಹೀಗೆಲ್ಲಾ ಧೈರ್ಯಮಾಡಿಕೊಂಡು ಕಡೆಗೂ ಇಲ್ಲಿ ಬಂದು, ಹೊಸ ಬದುಕು ಕಟ್ಟಿ, ಮಕ್ಕಳನ್ನು ಚೆನ್ನಾಗಿ ಬೆಳಸಿ, ಓದಿಸಿ ಈಗ ನಿರಾಳರಾಗಿದ್ದಾರೆ ಎಂದು ಹೇಳಿ ಅವನು ಕೊಂಚ ತಡೆದ.

ತನ್ನ ತಂದೆಯ ಹಳೆಕಾಲದ ವಾದಗಳಿಗೆ ಬೇಸತ್ತು ಇವನು ಆಗಾಗ ಅವರ ಜತೆ ಜಗಳವಾಡುವುದು ಇದೆಯಂತೆ. ಹಾಗೆ ಜಗಳವಾಡಿದ ಒಂದು ಸಲ ಅವನ ತಂದೆ ತಮ್ಮ ಕನಸ್ಸನ್ನು ಹೇಳಿದರಂತೆ. ಈಗಲೂ ಮುಂಜಾವದಲ್ಲಿ ಅವನ ತಂದೆ ಆ ಕನಸಿನಿಂದ ನಡುಗುತ್ತಾ ಎದ್ದು ಕೂರುತ್ತಾರಂತೆ. ತಂದೆ ಹೇಳಿದ್ದಿಷ್ಟಂತೆ : “ನಾವು ವಿಯಟ್ನಾಮಿನಿಂದ ತಪ್ಪಿಸಿಕೊಂಡು ಹೊರಟ ದಿನಗಳು ಈಗಲೂ ದಿಗಿಲು ಮೂಡಿಸುತ್ತದೆ. ದೊಡ್ಡ ಸಾಗರದ ನಡುವಲ್ಲಿ ಯಾವ ದಿಕ್ಕಲ್ಲೂ ನೆಲ ಕಾಣುತ್ತಿರಲಿಲ್ಲ. ಅಂತಲ್ಲಿ ನಾವೆಲ್ಲಾ ಪುಟ್ಟ ದೋಣಿಯಲ್ಲಿರುವ ಕನಸು ಬೀಳುತ್ತದೆ. ನೀವು ನಾಕು ಜನ ಪುಟ್ಟ ಮಕ್ಕಳನ್ನೂ ಬಿಗಿದು ಹಿಡಕೊಂಡಿರುತ್ತೇನೆ. ನೀವೆಲ್ಲಿ ಆ ಪುಟ್ಟ ದೋಣಿಯಿಂದ ಜಾರಿ ನೀರಿಗೆ ಬೀಳುತ್ತೀರೋ ಅಂತ ಹೆದರಿಕೆ. ಕೊನೆಯಿಲ್ಲದಂತಹ ಯಾತ್ರೆ ಅನಿಸುತ್ತದೆ. ನಿಮ್ಮನ್ನು ಹಿಡಿದ ಕೈಗೆ ಸುಸ್ತಾಗುತ್ತದೆ. ನನ್ನ ಶಕ್ತಿ ಉಡುಗಿ ಕೈ ಹಿಡಿತ ಸಡಿಲಾಗುವಂತೆ ಆಗುತ್ತದೆ. ನೋಡ ನೋಡುತ್ತಿದ್ದಂತೆಯೇ ನೀವು ನನ್ನ ಕೈಯಿಂದ ಜಾರಿ ನೀರುಪಾಲು ಆದಂತೆ ಅನಿಸುತ್ತದೆ. ಅಪ್ಪಾ! ಹಿಡಕೋ ಅಪ್ಪಾ ಬಿಡಬೇಡ! ಎಂದು ನೀವೆಲ್ಲಾ ಅಳುತ್ತಾ ಕೂಗುತ್ತಿರುತ್ತೀರ. ನಿಮ್ಮ ಮುಖಗಳಲ್ಲಿ ನಾನೆಂದೂ ಕಂಡಿರದ ದಿಗಿಲು ಕಾಣುತ್ತದೆ. ಸಹಿಸಾಲಾಗದೆ ಕನಸಿಂದ ಧಿಗ್ಗನೆ ಎದ್ದು ಕೂರುತ್ತೇನೆ. ಆಗ ಕಿಟಕಿಯ ಹೊರಗೆ ಮುಂಜಾನೆಯ ಬೆಳಕಿರುತ್ತದೆ. ನನ್ನ ಹಣೆ ಬೆವರಿನಿಂದ ಒದ್ದೆಯಾಗಿರುತ್ತದೆ. ನಡುಗುವ ಮೈ ಮತ್ತೆ ಸರಿ ಹೋಗಲು ಒಂದೆರಡು ಗಂಟೆ ಹಿಡಿಯುತ್ತದೆ”. ತಂದೆಯ ಕನಸು ಹೇಳಿದ ಗೆಳೆಯ “ಅಲ್ಲಿಗೆ ನಮ್ಮ ಜಗಳ ನಿಂತಿತು” ಎಂದು ವಿಚಿತ್ರವಾಗಿ ನಗುತ್ತಾ ನನ್ನನ್ನೇ ನೋಡಿದ. ಅವನ ಪುಟ್ಟಪುಟ್ಟ ಹಲ್ಲುಗಳ ಸಾಲು ಸಣ್ಣ ಮಗುವಿನ ಹಲ್ಲುಗಳಂತೆ ಕಂಡಿತು.