ಓರ್ವ ಸೇವಾಕರ್ತೆ ದೇವಾಲಯದಲ್ಲಿದ್ದು ಏನೆಲ್ಲಾ ಕೈಂಕರ್ಯಗಳನ್ನು ಮಾಡಬಹುದೋ, ಅವೆಲ್ಲವನ್ನೂ ನೃತ್ಯದ ಹೆಜ್ಜೆಗಳ ಮೂಲಕವೇ ಪ್ರಸ್ತುತಪಡಿಸುವುದನ್ನು ವಿಲಾಸಿನಿ ನಾಟ್ಯ ಪ್ರಸ್ತುತಿಯಲ್ಲಿ ನಾವು ಗಮನಿಸಬಹುದು. ‌ ಪ್ರಾತಃಕಾಲದ ಕೈಂಕರ್ಯಗಳಿಂದ ಹಿಡಿದು, ದಿನವೊಂದು ಮುಕ್ತಾಯವಾಗಿ ರಾತ್ರಿ ಶಯನಕ್ಕೆ ಹೋಗುವವರೆಗೆ ದೇವರಿಗೆ ಸಲ್ಲಿಸುವ ಎಲ್ಲಾ ‌ನೃತ್ಯಸೇವೆಗಳು ವಿಲಾಸಿನಿ ನಾಟ್ಯದ ಬಂಧಗಳಾಗಿವೆ.
-ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ವಿಲಾಸಿನಿ ನಾಟ್ಯ ಪ್ರಕಾರದ ಕುರಿತು ಬರೆದ ಪರಿಚಯಾತ್ಮಕ ಲೇಖನ

 

ಆಂಗಿಕ ಚಲನೆಯ ದೇಹ ಭಾಷೆ, ಜತೆಗೆ ಅಂತರಂಗದ ಭಾವಾಭಿವ್ಯಕ್ತಿ ಯೇ ನೃತ್ಯ. ಈ ನೃತ್ಯದ ಹುಟ್ಟಿನ ಕುರಿತು ಅನೇಕ ಕಥೆಗಳು ಇವೆ. ಧ್ಯಾನಸ್ಥ ಸ್ಥಿತಿಯ, ಸೌಂದರ್ಯದ ಉದ್ದೀಪನವೂ ಈ ‌ನೃತ್ಯ. ಅದು ಯಾವುದೇ ಪ್ರಕಾರದ್ದಾಗಿದ್ದರೂ ಕಲಾರಸಿಕರನ್ನು ಸಹಜವಾಗಿಯೇ ಆಕರ್ಷಿಸುತ್ತದೆ ಕೂಡಾ. ಶಾಸ್ತ್ರೀಯ ನೃತ್ಯ ಭರತನಾಟ್ಯ ವನ್ನು ಅಭ್ಯಸಿಸುವ ನಾನು ಅನುಕೂಲವಾದಾಗ ಬೇರೆ ಪ್ರಕಾರದ ನೃತ್ಯವನ್ನು ಅಸ್ವಾದಿಸುವುದು ರೂಢಿಯಾಗಿದೆ. ಹೀಗಿರುವಾಗ ಒಂದೊಮ್ಮೆ ಬಲು ಅಪರೂಪವಾದ ವಿಲಾಸಿನಿ ನಾಟ್ಯವನ್ನು ನೋಡುವ ಅವಕಾಶ ದೊರಕಿತು.

ನೃತ್ಯದ ಪುರಾಣೇತಿಹಾಸಗಳನ್ನು ಗಮನಿಸಿದಾಗ ಈ ನೃತ್ಯ ವೆನ್ನುವುದು ದೇವದಾಸಿಯರ ಕಸುಬಾಗಿತ್ತು ಎಂಬ ಅಂಶ ಕಂಡುಬರುತ್ತದೆ. ಹಿಂದೆ ದೇವಾಲಯಗಳಲ್ಲಿ ದೇವಕಾರ್ಯಕ್ಕಾಗಿ ವಿಧಿವತ್ತಾಗಿ ‌ಸ್ತ್ರೀಯರನ್ನು ಅರ್ಪಿಸುತ್ತಿದ್ದರು. ಅವರು ದೇವಕಾರ್ಯಗಳಲ್ಲಿ ಸಂಪೂರ್ಣ ವಾಗಿ ತಮ್ಮನ್ನು‌ ತಾವು‌ ತೊಡಗಿಸಿಕೊಂಡು, ಮೈ ಮರೆತು ದೈವಿಕ ನಾಟ್ಯವನ್ನು ಮಾಡುತ್ತಿದ್ದರು. ಅದು ಕ್ರಮೇಣ ಪ್ರದರ್ಶನ ಕಲೆಯಾಗಿ, ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ, ಇಂದಿಗೂ ನಮ್ಮ ಮುಂದಿದೆ. ಸಾವಿರಾರು ವರ್ಷ ಹಳೆಯದಾದ, ನಮಗೆ ಇಂದು ಅಪರೂಪವಾದ , ಈಗಿದು ಹೊಸದು ಎನಿಸಿಕೊಳ್ಳುವ ‌ಒಂದು ನೃತ್ಯ ಪ್ರಕಾರ “ವಿಲಾಸಿನಿ” ದೇವದಾಸಿ ನಾಟ್ಯ.

ತೆರೆಮರೆಗೆ ಸರಿದಿದ್ದ “ವಿಲಾಸಿನಿ” ನಾಟ್ಯವನ್ನು ಅಧ್ಯಯನ ನಡೆಸಿ, ಮರುಪ್ರದರ್ಶನಕ್ಕೆ ಸಾಧ್ಯಮಾಡಿದವರು ಪದ್ಮಭೂಷಣ ಗುರು‌ಸ್ವಪ್ನಸುಂದರಿ.‌ ಸ್ವತಃ ದೇವದಾಸಿಯರನ್ನೇ ಭೇಟಿಯಾಗಿ, ಹಿರಿಯ ವಿದ್ವಾಂಸರ ಜತೆ ಚರ್ಚಿಸಿ ವಿಲಾಸಿನಿ ನೃತ್ಯವನ್ನು ಶ್ರೀಮಂತ ಕಲೆಯಾಗಿ ಸಮಾಜಕ್ಕೆ ಕೊಡುಗೆಯಾಗಿ ‌ನೀಡಲು ಶ್ರಮ ವಹಿಸಿದವರು. ಪ್ರಸ್ತುತ ಈ ನಾಟ್ಯವನ್ನು ಮುಖ್ಯಭೂಮಿಕೆಗೆ ತರಲು ಶ್ರಮಿಸುತ್ತಿರುವವರು ಭರತನಾಟ್ಯ ಕಲಾವಿದೆಯೂ ಕೂಡ ಆಗಿರುವ ಪೂರ್ವಧನಶ್ರೀ ಇವರು.

ವಿಲಾಸಿನಿ ನಾಟ್ಯ ಮೂಲತಃ ಆಂದ್ರಪ್ರದೇಶದ ಶಾಸ್ತ್ರೀಯ ನೃತ್ಯಪ್ರಕಾರ. ಈ ನಾಟ್ಯವನ್ನು ದೇವಾಲಯಗಳಲ್ಲೇ ನರ್ತಿಸುತ್ತಿದ್ದರು ಎನ್ನಲಾಗಿದೆ. ದೇವದಾಸಿಯರು ನಡೆಸುವಂತಹ ದಿನಪೂರ್ತಿಯ ಈ ನೃತ್ಯ ಸೇವೆಯನ್ನು ಗುಡಿ‌ಸೇವಾ, ಕಛೇರಿ ಸೇವಾ, ಆಟ ಭಾಗವತಂ ‌ಎಂದು ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ.

ಓರ್ವ ಸೇವಾಕರ್ತೆ ದೇವಾಲಯದಲ್ಲಿದ್ದು ಏನೆಲ್ಲಾ ಕೈಂಕರ್ಯಗಳನ್ನು ಮಾಡಬಹುದೋ, ಅವೆಲ್ಲವನ್ನೂ ನೃತ್ಯದ ಮೂಲಕವೇ ಇಲ್ಲಿ ಪ್ರಸ್ತುತಪಡಿಸಲಾಗುತ್ತದೆ. ‌ ಪ್ರಾತಃಕಾಲದ ಕೈಂಕರ್ಯಗಳಿಂದ ಹಿಡಿದು, ದಿನವೊಂದು ಮುಕ್ತಾಯವಾಗಿ ರಾತ್ರಿ ಶಯನಕ್ಕೆ ಹೋಗುವವರೆಗೆ ದೇವರಿಗೆ ನಡೆಸುವ ಎಲ್ಲಾ ‌ನೃತ್ಯಸೇವೆಗಳು ವಿಲಾಸಿನಿ ನಾಟ್ಯದ ಬಂಧಗಳಾಗಿವೆ.

ಬಾಲಭೋಗ: ನರ್ತಕಿಯರು ಬೆಳಿಗ್ಗೆ ಎದ್ದ ಕೂಡಲೇ ದೇವರಿಗೆ ಭಕ್ತಿಯಿಂದ ತಮ್ಮನ್ನು ತಾವೇ ಸಮರ್ಪಿಸಿಕೊಳ್ಳುವಂತಹ ಒಂದು ವಿಧಾನ. ಈ ಪ್ರಸ್ತುತಿಯನ್ನು ದೇವರನ್ನು ಹೊಗಳುವಂತಹ ಮಾತು, ಚೂರ್ಣಿಕೆಗಳು ಅಂತ ನಾವು ಅದನ್ನು ಹೇಳಬಹುದೇನೋ. ಜತೆಗೆ ನೃತ್ತದ ಜೋಡಣೆಯ ಪಲ್ಲವಿಯಿರುತ್ತದೆ. ಸಾಮಾನ್ಯವಾಗಿ ಏಕತಾಳದಲ್ಲೇ ಇದು ಇದ್ದರೂ ಕ್ರಮೇಣ ಅವುಗಳಲ್ಲಿ ಮಾರ್ಪಾಡು ತಂದು, ವಿವಿಧ ತಾಳಗಳನ್ನು ಅಳವಡಿಸಿಕೊಂಡು ಪ್ರದರ್ಶನ ನೀಡುತ್ತಾರೆ. ಸೂರ್ಯೋದಯವನ್ನು ತೋರಿಸುವಲ್ಲಿಂದ ‌ತೊಡಗಿ, ಹಕ್ಕಿಗಳ ಚಿಲಿಪಿಲಿ ನಾದದ ಅನುರಣನ , ಸೂರ್ಯ ಬಂದ ಎನ್ನುವುದನ್ನು ಕಣ್ಣೆತ್ತಿ ನೋಡುವ ಹೂಗಳು ಇಂತಹ ತಂಪಾದ ವಾತಾವರಣದ ಸೃಷ್ಟಿಯನ್ನೇ ಈ ನಾಟ್ಯ ಪ್ರಸ್ತುತಿಯಲ್ಲಿ ಪ್ರದರ್ಶಿಸಲಾಗುತ್ತದೆ. ಇವೆಲ್ಲವುದರೊಂದಿಗೆ ದೇವರ ಮಹಿಮೆಯನ್ನು ಕೊಂಡಾಡುವ ಪಠಣವೂ ನಡೆಯುತ್ತದೆ, ಇದು ದೇವರು ಎದ್ದೇಳುವ ಹೊತ್ತು ಎನ್ನುವುದನ್ನು ನೃತ್ಯದ ಮೂಲಕವೇ ಪ್ರಸ್ತುತಪಡಿಸುವುದು ವಿಲಾಸಿನಿ ನಾಟ್ಯದ ವಿಶೇಷತೆ.

ಪ್ರಾತಃ ವಿಧಿ ವಿಧಾನಗಳು ಮುಗಿದ ತರುವಾಯ ಧಾರ್ಮಿಕ ವಿಧಿವಿಧಾನಗಳ ಆರಂಭವಾಗುತ್ತವೆ. ‌ಅಷ್ಟ ದಿಕ್ಕುಗಳಲ್ಲಿರುವ ಅಷ್ಟ ದಿಕ್ಪಾಲಕರ ಜತೆಗೆ ಬ್ರಹ್ಮ, ಗರುಡ, ಪಶುಪತಿಯನ್ನು ‌ಶ್ರದ್ಧಾ ಭಕ್ತಿಯಿಂದ ಪೂಜಿಸುವ ನೃತ್ಯ ಎರಡನೆಯ ಹಂತದ್ದು. ಅರ್ಚಕರು ಮತ್ತು ನೃತ್ಯಗಾರ್ತಿಯರು ಮಂತ್ರೋಚ್ಛಾರಣೆಯೊಂದಿಗೆ ನೃತ್ಯ ಮಾಡುತ್ತಾ ದೇವಾಲಯಕ್ಕೆ ಸುತ್ತುವರಿಯುವುದು ಸಂಪ್ರದಾಯ. ಇದೇ ‘ಬಲಿಹರಣ್’ ನೃತ್ಯ ಬಂಧ.

ಹಿಂದೆ ದೇವಾಲಯಗಳಲ್ಲಿ ದೇವಕಾರ್ಯಕ್ಕಾಗಿ ವಿಧಿವತ್ತಾಗಿ ‌ಸ್ತ್ರೀಯರನ್ನು ಅರ್ಪಿಸುತ್ತಿದ್ದರು. ಅವರು ದೇವಕಾರ್ಯಗಳಲ್ಲಿ ಸಂಪೂರ್ಣ ವಾಗಿ ತಮ್ಮನ್ನು‌ ತಾವು‌ ತೊಡಗಿಸಿಕೊಂಡು, ಮೈ ಮರೆತು ದೈವಿಕ ನಾಟ್ಯವನ್ನು ಮಾಡುತ್ತಿದ್ದರು.

ಸಾಮಾನ್ಯವಾಗಿ ಇಂದಿಗೂ ದೇವಾಲಯಗಳ ಉತ್ಸವಗಳಲ್ಲಿ ನಾವು ಪಲ್ಲಕಿ ಸೇವೆಯನ್ನು ಕಾಣುತ್ತೇವೆ. ಸಿಂಗರಿಸಿದ ಪಲ್ಲಕಿಯ ಮೇಲೆ ವಿರಾಮ ಸ್ಥಿತಿಯಲ್ಲಿ ದೇವರು ಪವಡಿಸಿದಾಗ, ಆ ಪಲ್ಲಕಿಯನ್ನು ತೂಗುತ್ತ ಹೊತ್ತೊಯ್ಯುವ ಸಂದರ್ಭದಲ್ಲಿ ಕಲಾಸೇವೆಗಳನ್ನು ಅರ್ಪಿಸುವುದು ಇಂದಿಗೂ ದೇವಸ್ಥಾನಗಳಲ್ಲಿ ನಾವು ನೋಡುತ್ತೇವೆ. ಇದೇ ಆಶಯವಿರುವ ಪ್ರಸ್ತುತಿಯನ್ನು ನಾನು ವಿಲಾಸಿನಿ ನಾಟ್ಯದಲ್ಲಿಯೂ ಕಾಣಬಹುದು. ವಿಲಾಸಿನಿ ನಾಟ್ಯ ಕಲಾವಿದರು ಈ ಪ್ರದರ್ಶನವನ್ನು ದೇವರಿಗೆ ಅರ್ಪಿಸುವ ರೀತಿಯಲ್ಲಿ ಪ್ರಸ್ತುತಪಡಿಸುತ್ತಾರೆ. ‌ ‘ಗೀತಂ, ವಾದ್ಯ ಚ ನೃತ್ಯಂ‌’ ಎನ್ನುವಂತೆ ಹಾಡು, ವಾದ್ಯ ಜೊತೆಗೆ ನೃತ್ಯವನ್ನೂ ಕೂಡಾ ಪಲ್ಲಕಿ‌ ಸೇವೆಯಲ್ಲಿ ಹಿಂದೆ ಮಾಡುತ್ತಿದ್ದರು ಎನ್ನಲಾಗುತ್ತದೆ. ಸಾಹಿತ್ಯ, ಸಂಗೀತದ ಮೂಲಕ ದೇವರನ್ನು ಹೇಗೆ ಸ್ತುತಿ ಮಾಡಿ ಆರಾಧಿಸಲಾಗುತ್ತದೆಯೋ ದೇಹ ಭಾಷೆಯ ಮೂಲಕ ನೃತ್ಯದ ಆರಾಧನೆಯೂ ನಡೆಯುತ್ತಿತ್ತು. ಈ ನೃತ್ಯವಂತೂ ದೇವಾಲಯದಲ್ಲಿ ನಡೆಯುವ ಪಲ್ಲಕಿ ಸೇವೆಯ ಚಿತ್ರಣವನ್ನೇ ಒದಗಿಸುತ್ತದೆ.

ವಿಲಾಸಿನಿ ನಾಟ್ಯದ ಕೊನೆಯ ಘಟ್ಟವೆಂದರೆ ‘ಶಯನ’. ದೇವರ ಉತ್ಸವ ಮೂರ್ತಿಯನ್ನು ಗುಡಿಯೊಳಗೆ ಸೇರಿಸಿ, ಆರಾಧಿಸಿ ಜೋಗುಳ ಹಾಡಿ ಮಲಗಿಸುವ ಪದ್ಧತಿ. “ಲಾಲಿ” ಎಂದು ಕರೆಸಿಕೊಳ್ಳುವ ಈ ನೃತ್ಯ ನಿಧಾನವಾಗಿ‌ ಸಾಗುತ್ತದೆ. ದೇವರನ್ನೇ ಪ್ರೀತಿಯಿಂದ ಒಲಿಸಿ ನಿದ್ರಾವಸ್ಥೆಗೆ ಒಯ್ಯುವ ಈ ಪರಿಕಲ್ಪನೆಯಲ್ಲಿ ಶ್ರದ್ಧೆ, ಭಕ್ತಿ ಮತ್ತು ಪ್ರೀತಿಯಲ್ಲದೆ ಮತ್ತೇನಿದೆ !

ಹೀಗೆ ದೇವದಾಸಿಯರು ದಿನಪೂರ್ತಿ ನೃತ್ಯಸೇವೆಯಲ್ಲಿದ್ದು ತಮ್ಮನ್ನೇ ತಾವು ದೇವರಿಗೆ ಸಮರ್ಪಿಸಿಕೊಳ್ಲುತ್ತಿದ್ದರು. ಇಂದು”ವಿಲಾಸಿನಿ” ನೃತ್ಯ ಪರಿಷ್ಕೃತಗೊಂಡು ಸಣ್ಣ, ಪುಟ್ಟ ಬದಲಾವಣೆಯೊಂದಿಗೆ ಪ್ರದರ್ಶನ ಯೋಗ್ಯವಾದ ಶ್ರೀಮಂತ ಕಲೆಯಾಗಿ ಬೆಳೆದುನಿಂತಿದೆ. ಹಲವು ಭಾಷೆಗಳನ್ನು ತನ್ನ ಒಡಲಲ್ಲಿಟ್ಟುಕೊಂಡ ನೃತ್ಯವಾಗಿ ಬದಲಾಗಿದೆ. ಭಾರತದಲ್ಲಿ ಒಂದು ಭಾಷೆ ,ಇನ್ನೊಂದು ‌ಭಾಷೆಯ ಮೇಲೆ‌ ಪ್ರಭಾವ ಬೀರುವುದು ಸಹಜವೇ ತಾನೇ. ಅಥವಾ ಕೆಲವು ಭಾಷೆಗಳ ನಡುವೆ ಸಾಮ್ಯತೆಗಳನ್ನು ನಾವು ಕಾಣುತ್ತೇವೆ. ಅಂತೆಯೇ ಈ ವಿಲಾಸಿನಿ ನಾಟ್ಯದಲ್ಲೂ ಕೂಡಾ ‌ನಾವು ದೇಶದ ಬೇರೆ ಬೇರೆ ಶಾಸ್ತ್ರೀಯ ನೃತ್ಯಪ್ರಕಾರಗಳ ಅಂಗಿಕ ಚಲನೆಗಳನ್ನು ಕಾಣಬಹುದು. ಅದೇ ರೀತಿ ಭಿನ್ನತೆಯನ್ನೂ ಕೂಡಾ.

ದೇಹದ ಬಾಗು ಬಳಕುವಿಕೆಯಲ್ಲಿಯೇ ಆಪ್ಯಾಯಮಾನವೆನಿಸುವ ನಾಟ್ಯ “ವಿಲಾಸಿನಿ ದೇವದಾಸಿ ನಾಟ್ಯ” . ಸಂಪೂರ್ಣವಾಗಿ ಶರಣಾಗತಿಯಿಂದ ದೈವಿಕ ಕ್ರಿಯೆಯಲ್ಲಿ ತೊಡಗುವುದು, ದೇಹಕ್ರಿಯೆಯಲ್ಲಿ ತಮ್ಮನ್ನು ತಾವೇ ಮರೆತು ಆ ಕ್ರಿಯೆಯಲ್ಲಿ ಲೀನವಾಗುವುದೇ ದೈವಿಕ ನಾಟ್ಯವೆಂದಿನಿಸಿರಬಹುದು. ದಿನಚರಿಯೇ ಒಂದು ನಾಟ್ಯವಾಗಿ ಬದಲಾಗುವ ಕ್ರಮ ಈ ವಿಲಾಸಿನಿ ನಾಟ್ಯ. ಲಾಲಿತ್ಯಪೂರ್ಣ ನಡೆ, ಚಲನೆಗಳು ಈ ನೃತ್ಯವನ್ನು ಆಸ್ವಾದಿಸುವುದಕ್ಕೂ ಸೊಗಸಾಗಿದೆ.

‘ವಿಲಾಸಿನಿ ನಾಟ್ಯ’ ಪದ್ಧತಿಗೆ ಶಾಸ್ತ್ರೀಯ ಸ್ಥಾನಮಾನ ದೊರೆಯುತ್ತದೆ ಎಂದು ಭಾವಿಸುತ್ತೀರಾ ಎಂಬ ಪ್ರಶ್ನೆಯೊಂದನ್ನು ಗುರು ಪದ್ಮಾ ಸುಬ್ರಹ್ಮಣ್ಯ ಅವರಿಗೊಮ್ಮೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸುತ್ತ ಅವರು, “ಈ ಸ್ಥಾನಮಾನವನ್ನು ಯಾರು ಕೊಡಬೇಕು ಎನ್ನುತ್ತೀರಿ ? ಅದೊಂದು ಪುರಾತನವಾದ ತೆಲುಗು ನೃತ್ಯ ಸಂಪ್ರದಾಯ. ದೇವಸ್ಥಾನದಲ್ಲಿ ಸೇವೆ ಮಾಡುವ ಸಮುದಾಯವು ಆನುವಂಶಿಕವಾಗಿ ಈ ಪ್ರಕಾರವನ್ನು ತಲೆಮಾರಿನಿಂದ ತಲೆಮಾರಿಗೆಮುನ್ನಡೆಸುತ್ತ ಬಂದಿದೆ. ‘ಶಾಸ್ತ್ರೀಯತೆ’ ಯು ಈ ನೃತ್ಯ ಪ್ರಕಾರದಲ್ಲಿ ಸಹಜವಾಗಿಯೇ ಅಡಕವಾಗಿದೆ.

ಒಂದು ಸಾವಿರ ವರ್ಷಕ್ಕೂ ಹೆಚ್ಚು ಕಾಲದಿಂದ ಇದು ಮುಂದುವರೆಯುತ್ತ ಉಳಿದು ಬಂದಿದೆ ಎಂದರೆ ಕಲಾಪ್ರಕಾರದಲ್ಲಿರುವ ಆಂತರಿಕ ಶಕ್ತಿಯೇ ಅದಕ್ಕೆ ಕಾರಣ. ಪ್ರಸ್ತುತ ಇರುವ ಕಲಾವಿದರು ಈ ಕಲಾಪ್ರಕಾರದಲ್ಲಿ ಸಮರ್ಪಣಾಭಾವದ ಪ್ರಯತ್ನದಿಂದ, ಇದು ವಿಕಾಸ ಹೊಂದಿ, ಮುಂದುವರೆಯುವುದರಲ್ಲಿ ಸಂಶಯವಿಲ್ಲ. ಈಗ ನಡೆಯುತ್ತಿರುವ ಪ್ರಯತ್ನಗಳು ಫಲಕೊಡುತ್ತಿವೆ. 90ರ ದಶಕದಲ್ಲಿ ನಾನು ಮಾಡಿದ ಪ್ರಯತ್ನಗಳಿಂದಾಗಿ ಮತ್ತು ಹೊಸತಲೆಮಾರಿಗೆ ನೀಡಿದ ತರಬೇತಿಗಳ ಫಲವಾಗಿ, ಈಗ ದೇಶದ ಪ್ರತಿಷ್ಟಿತ ವೇದಿಕೆಗಳಲ್ಲಿ , ನೃತ್ಯೋತ್ಸವಗಳಲ್ಲಿ ವಿಲಾಸಿನಿ ನಾಟ್ಯ ಪ್ರದರ್ಶನವನ್ನು ನೋಡುವುದು ಸಾಧ್ಯವಾಗಿದೆ. ಏಕವ್ಯಕ್ತೀ ಪ್ರದರ್ಶನಕ್ಕೂ ಆಹ್ವಾನಗಳು ದೊರೆಯುತ್ತಿವೆ. ಅಂದರೆ ಉತ್ತಮ ನಾಟ್ಯವನ್ನು ಆಸ್ವಾದಿಸುವ ರಸಿಕರು ಇದ್ದೇ ಇರುತ್ತಾರೆ.’

ಗುರು ಸ್ವಪ್ನ ಸುಂದರಿ ಅವರ ಮಾತುಗಳು ನೂರಕ್ಕೆ ನೂರು ಸತ್ಯ. ಸಂಗೀತ, ನೃತ್ಯ ಅಥವಾ ಇನ್ಯಾವುದೇ ಕಲಾಪ್ರಕಾರವಾಗಲೀ, ಅದು ಜನಮಾನಸದಲ್ಲಿ ಇದ್ದರೆ, ಅದಕ್ಕಿಂತ ದೊಡ್ಡ ಪುರಸ್ಕಾರ ಮತ್ತೊಂದಿಲ್ಲ.