ಅಪವಿತ್ರ ಕಾವ್ಯ

ನಾನು ಅಪವಿತ್ರ ಕಾವ್ಯ
ಕಯ್ಯಿ, ಕಾಲು
ದೇಹ ಎಂಜಲು

ಕೆಂಪು ಮಂದ ಲೈಟಿನಲ್ಲಿ
ಅರಳಿದ ಬಣ್ಣ ಬಣ್ಣದ ಕಾಗದದ ಹೂವು
ಅರಳಿದಲ್ಲೆ ಆಡಿಕೊಂಡು – ಹಾಡಿಕೊಂಡು,
ಹೊಡೆಸಿಕೊಂಡು – ಪರಚಿಸುಕೊಂಡು,
ಮಯ್ಯತುಂಬೆಲ್ಲ ಹುಟ್ಟಿನ ಘಮುಟು ಆದರೂ ನಾನು ಬಂಜೆ….

ಚಾಚಿದ ಸೆರಗಿನ ಪರದೆಯಲ್ಲಿ ಜಗವ ತೋರಿಸಿದ ಕಾವ್ಯ
ಸೀತೆಯಂತೆ ಬೆಂಕಿಗೆ ಪರೀಕ್ಷೆಗೆ ನಿಂತಾಗ ನಾನು ಸುಟ್ಟು ಹೋಗಲಿಲ್ಲ
ಬೆಂಕಿಯ ಕೂಡವು ನನಗೆ ಪರಸಂಗವಿರುವ ಕಾರಣಕ್ಕೆ..

ರೋಡಿನಲ್ಲಿ ಸೆರಗು ಜಾರಿಸಿಕೊಂಡರು ಮಾನಹೋಗಲಿಲ್ಲ
ನಾನಾಗಲೇ ಬಜಾರಿನಲ್ಲಿ ಬೆತ್ತಲಾದ ಕಾರಣಕ್ಕೆ,
ನಾನು ಮಾಂಸದ ಅಂಗಡಿಯಲ್ಲಿ ಗರಿಬಿಚ್ಚಿದ ನವಿಲು.
ಅಷ್ಟೂ ಕಣ್ಣುಗಳು ನಿನ್ನ ಮಯ್ಯಿಗೆ ಕನ್ನಡಿ…..
ಮನಸ್ಸು ಸಿಗದು ನಿನ್ನದು ಮತ್ತು ನನ್ನದು

ಇಷ್ಟೆಲ್ಲಾ ಯಾಕೆ ನಾನು ಅಪವಿತ್ರ ಕಾವ್ಯವೇ..!
ಥೇಟ್ ಸಾರ್ವಜನಿಕ ಮೂತ್ರಿಯೆ.
Pay & use ಅರ್ಥ ಹಣಕಟ್ಟು ಮತ್ತು ಬಳಸಿಕೋ ಹೇಗೆ ಬೇಕೋ ಹಾಗೆ,
ಗಲೀಜು ಮಾಡು ಪಿನಾಯಿಲು ಹಾಕಿ ಉಜ್ಜಿದರೂ ಹೋಗದ ಹಾಗೆ….

 

ವಿಶಾಲ್ ಮ್ಯಾಸರ್ ಹೊಸಪೇಟೆಯವರು
ಪ್ರಸ್ತುತ ವಿಜಯನಗರ ಮಹಾವಿದ್ಯಾಲಯ ಹೊಸಪೇಟೆಯಲ್ಲಿ ಬಿ.ಎಸ್ಸಿ ಪದವಿಯನ್ನ ವ್ಯಾಸಂಗ ಮಾಡುತ್ತಿದ್ದಾರೆ
“ಬಟ್ಟೆಗಂಟಿದ ಬೆಂಕಿ” ಇವರ ಪ್ರಕಟಿತ ಕವಿತಾ ಸಂಕಲನ