ಶೂನ್ಯತತ್ವ ಒಂದು ಬಹುಮುಖ್ಯ ತಾತ್ವಿಕತೆಯಾಗಿ ಈ ಕತೆಯಲ್ಲಿ ಕಂಡುಬರುತ್ತದೆ. ಶೂನ್ಯತತ್ವದ ಪರಿಕಲ್ಪನೆಯೂ ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಬಹುದೊಡ್ಡ ಸಾಧಕ ಪ್ರಮಾಣವಾಗಿದೆ. ಶೂನ್ಯ ಎಂದರೆ ತಟ್ಟನೆ ನೆನಪಾಗುವುದು ಅಲ್ಲಮ ಮತ್ತು ಶರಣರ ಶೂನ್ಯತತ್ವದ ಪರಿಕಲ್ಪನೆ. ಅದೊಂದು ಆನುಭಾವಿಕ ನೆಲೆಯ ಚಿಂತನೆ. ಸೃಷ್ಟಿಯ ಮೂಲತತ್ವವನ್ನು ಕುರಿತು ಆಲೋಚನೆಗೆ, ಚಿಂತನೆಗೆ ಹಚ್ಚುವ ಪರಿಕಲ್ಪನೆಯಾಗಿ ಶೂನ್ಯತತ್ವ ನಮ್ಮ ಮುಂದಿದೆ.
ಬಿ. ಸುಜ್ಞಾನಮೂರ್ತಿ ಅನುವಾದಿಸಿದ “ಆಕಾಶದೇವರು” ವಿಲೋಮಕತೆಯ ಕುರಿತು ಡಾ. ನಂದೀಶ್ವರ ದಂಡೆ ಬರಹ

 

ಆಕಾಶದೇವರು ಕತೆ ಅಥವ ನೀಳ್ಗತೆ. ಇದನ್ನು ತೆಲುಗಿನಲ್ಲಿ ಕಿರು ಕಾದಂಬರಿ ಅಂತ ಕರೆದಿದ್ದಾರೆ. ಸಣ್ಣಕತೆಗಿಂತ ತುಸು ದೊಡ್ಡದಾದ ಇದನ್ನು ನೀಳ್ಗತೆ ಎನ್ನಬಹುದು. ನೀಳ್ಗತೆಯು ಕಾದಂಬರಿಯ ಸ್ವರೂಪವನ್ನು ಪಡೆದುಕೊಂಡಿರಬಹುದು. ಆಕಾಶದೇವರು ಈ ಬಗೆಯ ನೀಳ್ಗತೆ.

ಆಕಾಶದೇವರು ನೀಳ್ಗತೆಯನ್ನು ಓದುತ್ತಿದ್ದರೆ ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡ ಕತೆ ಎಂಬ ಯಾವ ಅಂಶವೂ ನಮ್ಮ ಮುಂದೆ ಸುಳಿಯುವುದಿಲ್ಲ. ಇದೆ ನೆಲದ ಬೆಳೆಯಂತೆ, ನಮ್ಮೊಳಗಿನಿಂದ ಹುಟ್ಟಿದ ಕತೆಯಂತೆ ಕನ್ನಡದ್ದೇ ಎನ್ನುವಷ್ಟರ ಮಟ್ಟಿಗೆ ಬಿ. ಸುಜ್ಞಾನಮೂರ್ತಿಯವರು ಇದನ್ನು ನಮ್ಮದಾಗಿಸಿದ್ದಾರೆ. ಹಾಗೆ ನೋಡಿದರೆ ಒಂದು ಪಠ್ಯದ ಅನುವಾದವು ಅದು ಕೇವಲ ಭಾಷೆಯ ಬದಲಾವಣೆ ಮಾತ್ರವಾಗಿ ಓದುಗರ ಮುಂದೆ ನಿಲ್ಲುವುದಿಲ್ಲ. ಯಾವ ಭಾಷೆಗೆ ಅದು ಅನುವಾದಗೊಂಡಿರುತ್ತದೋ ಅದು ಆ ಭಾಷೆಯಲ್ಲಿ ಮರುಸೃಷ್ಠಿಗೊಂಡ ಕಲಾಕೃತಿಯಾಗಿರುತ್ತದೆ. ಆ ಕಲಾಕೃತಿಯೂ ಮೂಲ ಕಲಾಕೃತಿಯಂತೆ ಇನ್ನೊಂದು ಕಲಾಕೃತಿಯಾಗಿ ನಿಲ್ಲುತ್ತದೆ. ಆಯಾ ಭಾಷೆಯ ಅದರಲ್ಲೂ ಪ್ರಾದೇಶಿಕತೆಯ ಗುಣವನ್ನು ಪಡೆದು ಈ ನೆಲದ ಸತ್ವಭರಿತವಾದ ಬೆಳೆಯಾಗಿ ನಮ್ಮ ಮುಂದೆ ನಿಲ್ಲುತ್ತದೆ. ಓದುಗರಿಗೆ ಬೇರೆ ಭಾಷೆಯ ಸಂಗತಿಗಳು ಎಂದೆನಿಸದೆ ನಮ್ಮದೇ ಸಂಗತಿಗಳು ಎಂಬಂತೆ ಮರುಸೃಷ್ಠಿಯನ್ನು ಪಡೆದಿರುತ್ತದೆ. ಅನುವಾದಕ ಮೂಲ ಕತೃವಿನಂತೆ ಮರುಸೃಷ್ಠಿಸುವ ಇನ್ನೊಂದು ಕಲಾಕೃತಿಯ ಸೃಜಕನಾಗಿರುತ್ತಾನೆ.

ಕತೆಗಾರ ನಗ್ನಮುನಿ ಬರೆದ ‘ಆಕಾಶದೇವರು’ ಕತೆ ಓದುಗರ ವಿಚಾರವಂತಿಕೆಯನ್ನು ವಿಸ್ತಾರ ಮಾಡುತ್ತದೆ. ನಮ್ಮೊಳಗಿನ ಪ್ರಜ್ಞೆಯೊಂದನ್ನು ಜಾಗೃತಗೊಳಿಸುತ್ತದೆ. ಬಂಡವಾಳಶಾಹಿತ್ವದ ಧೋರಣೆಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಆಕಾಶದೇವರು ಕತೆಯನ್ನು ಸುಮಾರು ಮೂರು ದಶಕಗಳ ಹಿಂದೆ ನಗ್ನಮುನಿಯವರು ತೆಲುಗಿನಲ್ಲಿ ಬರೆದಿದ್ದಾರೆ. ಇತ್ತೀಚಿಗೆ ಕನ್ನಡಕ್ಕೆ ಬಿ. ಸುಜ್ಞಾನಮೂರ್ತಿಯವರು ತಂದಿರುವುದು ಸಕಾಲಿಕ. ತುಂಬಾ ದೂರ ಅಲ್ಲದಿದ್ದರು ಮುವ್ವತ್ತು ವರ್ಷಗಳ ಹಿಂದಿನ ರಾಜಕಾರಣಕ್ಕೂ ಸಧ್ಯದ ಭಾರತದ ರಾಜಕಾರಣಕ್ಕೂ ತುಂಬಾ ವ್ಯತ್ಯಾಸಗಳಿಲ್ಲದಿದ್ದರೂ ಅಥವಾ ಇದ್ದರೂ ಜಾಗತೀಕ ಮಟ್ಟದಲ್ಲಿ ಇಡೀ ಜಗತ್ತನ್ನು ಆವರಿಸಿಕೊಂಡಿರುವ ಬಂಡವಾಳಶಾಹಿತ್ವ, ಬಹುರಾಷ್ಟ್ರೀಯ ಕಂಪನಿಗಳ ಹಣದ ಕಡುದಾಹಕ್ಕೆ ಕುಣಿಯುವ ಮಧ್ಯವರ್ತಿಗಳು, ಅವರ ಬೆನ್ನುಕಾಯುವ ರಾಜಕಾರಣಿಗಳು ಹಿಂದೆ, ಇಂದು, ಮುಂದೆ ಯಾವ ಕಾಲಕ್ಕೂ ಪ್ರಸ್ತುತಗೊಳ್ಳುವಂತ ವ್ಯವಸ್ಥೆಯಾಗಿ ನಮ್ಮ ಮುಂದೆ ನಿಲ್ಲುವಂತಹದ್ದು.

(ಬಿ. ಸುಜ್ಞಾನಮೂರ್ತಿ)

ಮುಖ್ಯವಾಗಿ ಕತೆ ಬೆಳಕು ಚೆಲ್ಲುವುದು ಇಂತಹ ಸಾಮಾಜಿಕ ಮಾರಕ ಸಂಗತಿಗಳ ಮೇಲೆ. ಕತೆಗಾರ ಸಮಕಾಲೀನ ಸಮಸ್ಯೆಗಳನ್ನು ಆಕಾಶದೇವರು ಕತೆಯಲ್ಲಿ ಶಕ್ತವಾಗಿ ಹಿಡಿದಿಟ್ಟಿದ್ದಾರೆ. ಜೊತೆಗೆ ಯಾವ ಕಾಲಕ್ಕೂ ಸಲ್ಲುವಂತ ಚಿಂತನೆ ಇಲ್ಲಿ ಅಭಿವ್ಯಕ್ತಿಗೊಳ್ಳುತ್ತದೆ. ತುರ್ತುಪರಿಸ್ಥಿತಿಯಲ್ಲಿನ ದ್ವಂದ್ವಗಳನ್ನು, ಸಂದಿಗ್ಧತೆಯನ್ನು, ಜನವಿರೋಧಿ ನೀತಿಗಳನ್ನು ಪ್ರಭುತ್ವ ಮತ್ತು ವ್ಯಾಪಾರಿ ಪ್ರಭುತ್ವ ಒಟ್ಟಾಗಿ ನಿಂತು ಸಂವೇದನೆಗಳನ್ನು ದಮನಮಾಡಿ ತನ್ನ ಅಟ್ಟಹಾಸವನ್ನು ಮೆರೆದು ಸಾಂಸ್ಕೃತಿಕ ರಾಜಕಾರಣದ ಮೂಲಕ ತನ್ನ ಹುನ್ನಾರವನ್ನು ಸಾಮಾನ್ಯ ಜನರ ಮೇಲೆ ಹೇರುತ್ತ, ತನ್ನ ಲಾಭವನ್ನು ತಾನು ಮಾಡಿಕೊಳ್ಳುವ ಒಳಮರ್ಮವೊಂದನ್ನು ರೂಪಿಸಿಕೊಂಡು ಭಾವನಾತ್ಮಕ ಬೆಸುಗೆಯೊಂದನ್ನು ಹಾಕಿರುತ್ತದೆ; ಅದರ ಮೂಲಕ ತನ್ನ ಲಾಭದ ಲೆಕ್ಕಾಚಾರ ಹಾಕಿಕೊಳ್ಳುತ್ತಿರುತ್ತದೆ. ಇಂತಹ ಅನೇಕ ಸಂಗತಿಗಳ ಮೇಲೆ ಕೃತಿ ಚಿಂತನೆಗೆ ಹಚ್ಚುತ್ತದೆ.

ಲೇಖಕರು ತಮ್ಮ ತಾತ್ವಿಕ ನಿಲುವುಗಳನ್ನು ತಮ್ಮ ಕೃತಿಯಲ್ಲಿ ಇಟ್ಟು ಒಂದು ಪರಿಕಲ್ಪನೆಯೊಂದನ್ನು ಸೃಷ್ಟಿಸಿರುತ್ತಾರೆ. ಅದು ನೇರವಾಗಿ ಓದುಗರಿಗೆ ತಲುಪಬೇಕೆಂದೇನು ಇಲ್ಲ. ಒಂದು ಪಠ್ಯವನ್ನು ಸಾಮಾನ್ಯವಾಗಿ ಓದುಗರು ತಮ್ಮ ಗ್ರಹಿಕೆಗಳಿಂದಲೇ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ನಗ್ನಮುನಿಯವರು ತಮ್ಮ ಚಿಂತನೆಗಳ ಮೂಲ ಸೆಲೆಯನ್ನು ಕೃತಿಯ ಮುನ್ನುಡಿಯಲ್ಲಿ ಒದಗಿಸಿಬಿಟ್ಟಿದ್ದಾರೆ. ಹಾಗಂಥ ಒಂದೇ ನೆಲೆಯಲ್ಲೆ ಕೃತಿಯನ್ನು ಗ್ರಹಿಸುವ ಅಗತ್ಯವಿಲ್ಲ. ಆ ಚೌಕಟ್ಟಿನಲ್ಲೆ ಈ ಕತೆಯನ್ನು ನೋಡಬೇಕೆಂಬ ನಿಲುವು ಅವರದ್ದಲ್ಲ. ಇದನ್ನು ಅವರೇ ಅಲ್ಲಿ ಸೂಚಿಸುತ್ತಾರೆ.

ಓದುಗರಿಗೆ ರಾಜಕೀಯ, ಸಾಂಸ್ಕೃತಿಕ ರಾಜಕಾರಣ, ವ್ಯಾಪಾರೀಕರಣ, ಜಾಗತೀಕರಣಗಳು ಸೃಷ್ಟಿಸಿರುವ ಬಿಕ್ಕಟ್ಟುಗಳನ್ನು ಕುರಿತು ಕತೆ ಮುಖ್ಯವಾಗಿ ಧ್ವನಿಸುತ್ತದೆ. ಬಂಡವಾಳಶಾಹಿತ್ವದ ಧೋರಣೆಗಳು, ದಬ್ಬಾಳಿಕೆಗಳು, ಶೋಷಣೆಗಳು ಸಮಾಜದಲ್ಲುಂಟುಮಾಡಿದ ತಲ್ಲಣಗಳನ್ನು ಹೊರಹಾಕುತ್ತದೆ. ಉಳ್ಳವನ ಬದುಕಿನ ಧೋರಣೆಗಳು ಇಲ್ಲದವನನ್ನು ಪರೋಕ್ಷವಾಗಿ ತಿಂದು ಮುಗಿಸುವ ಕ್ರೌರ್ಯದ ಚಿತ್ರಣವನ್ನು, ಇಲ್ಲದವನ ಅಸಹಾಯಕತೆಯನ್ನು ಸಮರ್ಥವಾಗಿ ಕಟ್ಟಿಕೊಡುವುದರ ಜೊತೆಗೆ ಉಳ್ಳವನ ಕ್ರೂರತ್ವವನ್ನು, ಅವನ ಧನದಾಯಿತ್ವವನ್ನು, ಸ್ವಾರ್ಥ, ಸ್ವಾಹಿತವನ್ನು ಸಾಂಕೇತಿಕವಾಗಿ ವಿರೋಧಿಸುತ್ತದೆ. ಮನುಷ್ಯ ಮನುಷ್ಯನಾಗಿರದೆ ಅವಕಾಶ ಸಿಕ್ಕ ತಕ್ಷಣವೇ ‘ಕಾರ್ನಾವೋರಸ್’ ಜೀವ, ರಕ್ತದಾಹದ ಹಸಿವಿನಿಂದ ನರಭಕ್ಷಕನಾಗಿ ಬದಲಾಗುತ್ತಾನೆ. ತನ್ನ ಒಳಗು ಜಾಗೃತಗೊಂಡಾಗ ವೇಷಹಾಕಿ ನುಡಿಯತ್ತಾನೆ. ಮತ ಕಬಳಿಸುವ ರಾಜಕಾರಣಿಯಾಗಿ, ಮಾನವೀಯ ಮೌಲ್ಯಗಳನ್ನು ಬೋದಿಸುವ ಧರ್ಮಗುರುಗಳ ರೀತಿ, ಸಾಮಾನ್ಯ ಜನರಿಗೆ ದಾರಿ ತೋರುವವನಂತೆ ವೇಷ ಮರೆಸಿಕೊಂಡು ತನ್ನ ಸುಳ್ಳುಗಳನ್ನು ಬಿತ್ತಿ, ಸುಳ್ಳುಗಳನ್ನೆ ಬೆಳೆದು, ಆ ಸುಳ್ಳುಗಳಿಂದಲೇ ಜನರಿಗೆ ಮಂಪರು ಬರುವಂತೆ ಮಾಡುತ್ತಾನೆ. ಇದು ಪ್ರಸ್ತುತ ಸಮಾಜದಲ್ಲಿನ ಉಳ್ಳವರ ಆಟವಾಗಿದೆ ಎಂಬುದನ್ನು ತೋರಿಸುವ ಮೂಲಕ ಉಳ್ಳವರ ಸಮಾಜವನ್ನು ವಿಮರ್ಶೆಗೊಳಪಡಿಸುತ್ತದೆ.

ಈ ಕತೆಯೇ ಒಂದು ಸಂಕೇತದಂತೆ ಕಾಣುತ್ತದೆ. ಇನ್ನೂ ಈ ಕತೆಯಲ್ಲಿ ಅನೇಕ ಸಂಕೇತಗಳಿರುವುದನ್ನು ಗುರುತಿಸಬಹುದು. ಮುಖ್ಯವಾಗಿ ಕತೆಯ ಪ್ರಾರಂಭದಲ್ಲಿಯೇ ಸಂಕೇತಾತ್ಮಕ ನಿರೂಪಣೆಯಿರುವುದನ್ನು ನೋಡುತ್ತೇವೆ. ‘ಒಂದು ಹಕ್ಕಿ ಹಿಕ್ಕೆ ಹಾಕಿತು. ನೇರವಾಗಿ ನೆಲಕ್ಕೆ ಬಿದ್ದಿತು. ಮಣ್ಣಿನ ಆಸರೆಯನ್ನು ಕೋರಿತು. ಮಳೆ ಹನಿ ಅದನ್ನು ಹಿಂಬಾಲಿಸಿ ತಬ್ಬಿಕೊಂಡಿತು. ಎರಡೂ ಪರವಶತೆಯಲ್ಲಿ ಒಂದಾಗಿ ಆಲದ ಮರವಾಗಿ ಬೆಳೆಯಿತು. ನಾಲ್ಕು ಜನರಿಗೆ ನೆರಳನ್ನು ನೀಡಿತು. ಕೊಂಬೆಗಳಿಗೆ, ರೆಂಬೆಗಳಿಗೆ ಎಲೆಗಳಿಗೆ ಮಾತುಗಳನ್ನು ಹೇಳುತ್ತಾ ಪಕ್ಷಿಗಳು ಕಿಲಕಿಲವೆಂದವು. ಪಕ್ಕದಲ್ಲಿನ ಹೊಲಗಳನ್ನು ತೋಯಿಸುತ್ತಾ ಸನಾದಿಯಂತೆ ಪಯಣಿಸುವ ಕಾಲುವೆʼ. ಹೀಗೆ ಒಂದು ಸಂಸ್ಕೃತಿಯ, ನೆಮ್ಮದಿಯ ಜನಜೀವನದ ಕ್ರಮದ ಹುಟ್ಟಿನ ಸೂಚಕದ ಸಂಕೇತದಂತೆ ಕಾಣುತ್ತದೆ. ‘ಹಠಾತ್ತಾಗಿ ಜಬರ್ದಸ್ತಾಗಿ ಒಟ್ಟು ವಾತಾವರಣ ಒಬ್ಬ ರಾಜಕೀಯ ನಾಯಕನ ಆಕ್ರಮಣಕ್ಕೆ ಹೊರಟಿತು. ಯಾವುದೋ ಸ್ವಂತ ಪ್ರಾಜೆಕ್ಟಿಗೆ ಅಡ್ಡವಾಗಿದೆಯೆಂದು ಆಲದ ಮರ ಅಡ್ಡಡ್ಡವಾಗಿ ಕಡಿತಕ್ಕೆ ಒಳಗಾಯಿತು’. ಎನ್ನುವಂತ ಮರುಸಾಲುಗಳಲ್ಲೇ ಇಡೀ ವಾತಾವರಣವೆ ಕಲುಷಿತಗೊಳ್ಳವುದನ್ನು ನೋಡುತ್ತೇವೆ. ಲೇಖಕರು ಇದನ್ನು ವಿಷಾದದಲ್ಲಿ ಎರಡು ಸಾಲಿನಲ್ಲಿ ತೋರಿಸುವ ಮೂಲಕ ಮನುಷ್ಯ ಕುಲ ಅಥವಾ ಜೀವ ಸಂಕುಲ ಅನಾಹುತದಲ್ಲಿ ನರಳುತ್ತಿರುವುದನ್ನು ಸಂಕೇತಿಕವಾಗಿ ಕಟ್ಟಿಕೊಡುವ ಯತ್ನ ಮಾಡಿದ್ದಾರೆ.

ಹಾಗೇ ಇನ್ನೊಂದು ಸಾರಿ ಅದೇ ರೂಪಕ ಬೇರೆಯ ಅರ್ಥದ ಹೊಳವನ್ನು ನೀಡುತ್ತದೆ. ‘ಒಂದು ಹಕ್ಕಿ ಹಿಕ್ಕೆ ಹಾಕಿತು. ಕಾಡಿನಲ್ಲಿ ಕೆಂಪಾಗಿ ಕೆಂಪು ಚಂದನವಾಯಿತು. ಅರ್ಧರಾತ್ರಿಯಲ್ಲಿ ಕಳ್ಳದಾರಿಯಲ್ಲಿ ಪ್ರವೇಶಿಸಿದ. ಕೊಡಲಿಗಳು ಕರ್ಕಶವಾಗಿ ಮೇಲೆಬಿದ್ದು ತುಂಡು ತುಂಡಾಗಿ ದಿಮ್ಮಿಗಳಾಗಿ ಕಡಿತಕ್ಕೊಳಗಾಯಿತು’. ಅಡ್ಡ ಬಂದ ಪ್ರಮಾಣಿಕತೆಯನ್ನು ಧರಿಸಿದ ಕಾವಲುಗಾರರ ಪ್ರಾಣವನ್ನು ತೆಗೆಯುತ್ತಾ ಬಹಿರಂಗವಾಗಿ ಲಾರಿಗಳಲ್ಲಿ ಸರಿಹದ್ದು ದಾಟುತ್ತಲೇ ಇವೆ’. ‘ಒಂದು ಹಕ್ಕಿ ಹಿಕ್ಕೆ ಹಾಕಿತು. ಗಾಂಜಾ ಆಗಿ ಬದಲಾಯಿತು. ವನವಾಗಿ ಹರಡಿತು. ಜನಭಕ್ಷಕರ ರಕ್ಷಣೆಯಲ್ಲಿ ತೆರೆಮರೆಯಲ್ಲಿ ಬೆಳೆಯುತ್ತಿದೆ. ರೂಪಾಯಿಯಾಗಿ, ಡಾಲರ್ ಆಗಿ, ಜಗತ್ತಿನ ವಿವಿಧ ಕರೆನ್ಸಿಯಾಗಿ ಹೂ ಬಿಡುತ್ತ ಬಹಳ ಪ್ರಿಯವಾಗಿ ಬೆಳೆಯುತ್ತದೆ’.

ಯುವಜನರ ರಕ್ತಕ್ಕೆ ನಾಗರದಂತೆ ಸರಸರ ಜಾರಿ ವಿಷ ಚಿಮ್ಮುತ್ತಾ ಶರೀರವನ್ನೆಲ್ಲ ಕುಟುಕುತ್ತಾ ಉನ್ಮತ್ತ ನೃತ್ಯದಿಂದ ಬಾಯಿತೆರೆದು ಮೃತ್ಯುಲೋಕವಾಗಿ ವ್ಯಾಪಿಸುತ್ತಿದೆ’. ‘ಒಂದು ಹಕ್ಕಿ ಹಿಕ್ಕೆ ಹಾಕಿತು. ಅದು ಮನುಷ್ಯನ ತಲೆಯ ಮೇಲೆ ಬಿತ್ತು. ಮೆದುಳಿಗೆ ಇಳಿದು ‘ಕಾರ್ನಾವೋರಸ್’ ಸಸಿ ಮೊಳೆಯಿತು. ಅವನೇ ಮರವಾಗಿ ಒಳಗೆ ಬೆಳೆಯುತ್ತಿದ್ದಾನೆ’. ಎಂದು ಒಂದು ಸಂಸ್ಕೃತಿಯನ್ನು ಮನುಷ್ಯ ತನ್ನ ಸ್ವಾರ್ಥಕ್ಕೆ ಹಾಳುಗೆಡವುವ, ರಕ್ತ ಪಿಪಾಸುವಾಗಿ ಕ್ರೂರ ಕೃತ್ಯಗಳನ್ನು ಮಾಡುತ್ತ ಕೊಲೆ, ಸುಲಿಗೆ, ಲೂಟಿಯಂತ ಕೆಲಸಮಾಡುವುದರ ಸಂಕೇತದಂತೆ ಕಾಣುತ್ತದೆ. ಇಡಿ ಜಾಗತೀಕರಣದ ವಿಷಬೀಜ ಬಂಡವಾಳಶಾಹಿತ್ವದ ಮೂಲಕ ಇಡೀ ಮಾನವ ಕುಲವನ್ನೇ ಶೋಷಣೆ ಮಾಡುವಂತಹ ವಾತಾವರಣವನ್ನು ಕತೆ ವಿಷಾದದಿಂದ ನಿರೂಪಿಸುತ್ತದೆ. ನಿರೂಪಕನ ಸಿಟ್ಟು, ಸೆಡವು, ತಾತ್ವಿಕತೆ ಕತೆಯಲ್ಲಿ ಎದ್ದುಕಾಣುತ್ತದೆ. ಸಾತ್ವೀಕ ಕ್ರಾಂತಿಕಾರಕ ಬದಲಾವಣೆಯನ್ನು ನಿರೀಕ್ಷಿಸುವಿಕೆಯಂತೆ ಚಿಂತನೆಗಳು ಮಾನವೀಯ ಮೌಲ್ಯಗಳ ಪುನರ್ ಪ್ರತಿಷ್ಠಾಪನೆಗೆ ಹಂಬಲಿಸುವಂತೆ ಕಾಣುತ್ತದೆ.

ಒಂದು ಹಕ್ಕಿ ಹಿಕ್ಕೆ ಹಾಕಿತು. ನೇರವಾಗಿ ನೆಲಕ್ಕೆ ಬಿದ್ದಿತು. ಮಣ್ಣಿನ ಆಸರೆಯನ್ನು ಕೋರಿತು. ಮಳೆ ಹನಿ ಅದನ್ನು ಹಿಂಬಾಲಿಸಿ ತಬ್ಬಿಕೊಂಡಿತು. ಎರಡೂ ಪರವಶತೆಯಲ್ಲಿ ಒಂದಾಗಿ ಆಲದ ಮರವಾಗಿ ಬೆಳೆಯಿತು.

ಹಣವನ್ನು ಬಿತ್ತಿ ಹಣವನ್ನು ಬೆಳೆಯುವ ಬಂಡವಾಳಶಾಹಿಗಳ ಬೆನ್ನುಲುಬಾಗಿ ರಾಜಕಾರಣ ನಿಂತಿರುತ್ತದೆ. ಅದಕ್ಕೆ ಪ್ರಭುತ್ವದ ಪಟ್ಟುಗಳನ್ನು ಚನ್ನಾಗಿ ಅರಿತಿರುವಂತ ಸದಾ ತಹರೆವಾರಿ ಸಲಹೆಗಳಿಂದ ಇಡೀ ಪ್ರಭುತ್ವದ ವ್ಯವಸ್ಥೆಯ ಮೇಲೆ ಹಿಡಿತ ಸಾದಿಸಿದವರಿರುತ್ತಾರೆ. ಅಂತವರಲ್ಲಿ ‘ಕಾರಶ್’ ಒಬ್ಬ. ಇಂತವರೇ ‘ಕಾ(ರಣ)ಪುರುಷರು’. ನಾವು ಬದುಕುತ್ತಿರುವ ಕಾಲಘಟ್ಟವನ್ನೇ ನೋಡಿದರೆ ಇದರ ಮಗ್ಗಲುಗಳು ನಮ್ಮ ಮುಂದೆ ನಿಲ್ಲುತ್ತವೆ. ರೈತರ ಭೂಮಿಗಳನ್ನು ಕಿತ್ತುಕೊಂಡು ಬಂಡವಾಳಗಾರನೊಬ್ಬನಿಗೆ ಅವನ ಕಾರ್ಖಾನೆಗೆ ನೀಡುವುದು. ಜನಸಾಮಾನ್ಯರ ಮನೆಗಳಿಗೆ, ಹೊಲಗಳಿಗೆ ನೀಡುತ್ತಿದ್ದ ವಿದ್ಯುತ್ ಅನ್ನು ಕಾರ್ಖಾನೆಗಳಿಗೆ ನೀಡುವುದು; ಹೊಳೆ, ಕೆರೆಗಳ ನೀರನ್ನು ಜನರಿಗೆ ಕುಡಿಯಲು ಕೊಡುತ್ತೇವೆ ಅನ್ನುವಂತ ಲೇಬಲ್ ಅಂಟಿಸಿಕೊಂಡು ಜನರಿಗೆ ಕುಡಿಯಲೂ ನೀರು ಸಿಗದಂತೆ ಉದ್ಯಮಿಗಳ ಉದ್ಯಮಗಳಿಗೆ ಸರಬರಾಜಾಗುತ್ತಿರುವ, ಮಾಡುತ್ತಿರುವುದು ನಮ್ಮ ಮುಂದಿದೆ. ಮುಖ್ಯವಾಗಿ ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ, ಜನರನ್ನು ದಾರಿ ತಪ್ಪಿಸಿ ಜನರಿಂದಲೇ ತಮ್ಮ ಸ್ವಾರ್ಥ ಸಾಧನೆಗೆ ತೊಡಗಿಕೊಳ್ಳುವ, ಲೂಟಿ ಮಾಡುವವರ ಪ್ರತಿನಿದಿಯಂತೆ ಈ ಕತೆಯ ಮುಖ್ಯ ಪಾತ್ರದಾರಿ ಮಿ. ಕಾರಶ್ ಇಲ್ಲಿ ನಿಂತಿರುವುದನ್ನು ನೋಡುತ್ತೇವೆ.

ಆಕಾಶದೇವರು ಕತೆ ವಿಶಿಷ್ಟ ಶಬ್ದಶಿಲ್ಪವಾಗಿದೆ. ಕತೆ ಆರಂಭವಾದ ಕೂಡಲೇ ಇದು ಒಂದು ನಿಗೂಢ ರಹಸ್ಯದ ಕತೆ ಎಂದೆನಿಸುತ್ತದೆ. ಕತೆ ಅರ್ಧ ಸರಿಯುತ್ತಿದ್ದಂತೆ ತಿಳಿಯುತ್ತದೆ ಕತೆಯನ್ನು ಖಳನಾಯಕನ ಸುತ್ತಲೇ ಹೆಣೆದಿದ್ದಾರೆ. ಮಿ. ಕಾರಶ್ ಇಲ್ಲಿ ಮುಖ್ಯಪಾತ್ರಧಾರಿಯಾಗಿದ್ದರೂ ಅವನು ಇಲ್ಲಿ ಖಳನಾಯಕನೇ ಆಗಿದ್ದಾನೆ. ಲೇಖಕರ ಇಲ್ಲಿನ ಕಥಾನಾಯಕನ ಸೃಷ್ಟಿಯೂ ಅನೇಕ ತೆಲುಗು ನಂತರದಲ್ಲಿ ಕನ್ನಡದ ಸಿನಿಮಾಗಳ ಮೇಲೆ ಪ್ರಭಾವಬೀರಿರಬಹುದೇನೋ? ಅನ್ನುವಷ್ಟರ ಮಟ್ಟಿಗೆ ಖಳನಾಯಕನೇ ಕಥಾನಾಯಕನಾಗಿರುವಂತ ಸಿನಿಮಾಗಳು ಬಂದಿದ್ದನ್ನು ನೋಡಬಹುದು.

ಕತೆಯ ಸಾಂಕೇತಿಕ ಪ್ರಾರಂಭದ ನಂತರ ನಿಜವಾದ ಮಿ. ಕಾರಶ್‌ನ ಕತೆ ಆರಂಭವಾಗುತ್ತದೆ. ‘ಮಿಲಿಯನ್ ನೈಟ್ಸ್’ ಎಂಬ ಫೈವ್ ಸ್ಟಾರ್ ಹೊಟೆಲ್‌ನಲ್ಲಿದ್ದ ಮಿ.ಕಾರಶ್‌ಗೆ ಆರ್ಕಿಯಾಲಾಜಿಸ್ಟ್ ಈಶ್ವರಶರ್ಮ ತಾನು ಬರೆದ ಆಕಾಶದೇವರು ಕೃತಿಯನ್ನು ಕೊಡಲು ಬಂದಾಗ. ಬಹುಶ ಕತೆ ಮುಗಿಯುವ ಮುನ್ನ ಕತೆಗೆ ಒಂದು ತಾತ್ವಿಕತೆಯನ್ನು ಒದಗಿಸುವುದೇ ಆಕಾಶದೇವರು ಕೃತಿಯನ್ನು ಮಿ. ಕಾರಶ್ ಓದಿ ಮುಗಿಸಿದ ನಂತರ. ಅಂದರೆ ನಿಜವಾದ ಕಾರಶ್‍ನ ಕತೆ ಆರಂಭವಾಗುವುದೇ ಇಲ್ಲಿ. ಈಶ್ವರಶರ್ಮ ಪಾತ್ರ ಮತ್ತೊಂದು ನಿಗೂಢವಾಗಿ ಕತೆಯಲ್ಲಿ ಉಳಿದುಕೊಂಡು ಬಿಡುತ್ತದೆ. ಆದರೆ ಸ್ಪಷ್ಟವಾಗಿ ಗೊಚರಿಸುವುದೆಂದರೇ ಸತ್ಯ ಮತ್ತು ಅಸತ್ಯದ ನಡುವಿನಲ್ಲಿ ನಡೆವ ಸಂಘರ್ಷ. ಈ ಸಂಘರ್ಷದಲ್ಲಿ ಸುಳ್ಳು ಸತ್ಯದ ಮೇಲೆ ತನ್ನ ಕ್ರೂರ ದೃಷ್ಟಿಯನ್ನು ಬೀರಿ ಜಯ ಸಾಧಿಸುವುದನ್ನು ಕತೆ ನಿರೂಪಿಸುತ್ತದೆ.

ಶೂನ್ಯತತ್ವ ಒಂದು ಬಹುಮುಖ್ಯ ತಾತ್ವಿಕತೆಯಾಗಿ ಈ ಕತೆಯಲ್ಲಿ ಕಂಡುಬರುತ್ತದೆ. ಶೂನ್ಯತತ್ವದ ಪರಿಕಲ್ಪನೆಯೂ ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಬಹುದೊಡ್ಡ ಸಾಧಕ ಪ್ರಮಾಣವಾಗಿದೆ. ಶೂನ್ಯ ಎಂದರೆ ತಟ್ಟನೆ ನೆನಪಾಗುವುದು ಅಲ್ಲಮ ಮತ್ತು ಶರಣರ ಶೂನ್ಯತತ್ವದ ಪರಿಕಲ್ಪನೆ. ಅದೊಂದು ಆನುಭಾವಿಕ ನೆಲೆಯ ಚಿಂತನೆ. ಸೃಷ್ಟಿಯ ಮೂಲತತ್ವವನ್ನು ಕುರಿತು ಆಲೋಚನೆಗೆ, ಚಿಂತನೆಗೆ ಹಚ್ಚುವ ಪರಿಕಲ್ಪನೆಯಾಗಿ ಶೂನ್ಯತತ್ವ ನಮ್ಮ ಮುಂದಿದೆ. ನಗ್ನಮುನಿ ಈ ಕತೆಯಲ್ಲಿ ಒತ್ತುಕೊಟ್ಟಿರುವುದು ಆಧ್ಯಾತ್ಮಿಕ ಅನುಸಂಧಾನದ ಬಗೆಯಿಂದಲ್ಲ, ಅದೊಂದು ಮಿಥ್ಯದ, ಸುಳ್ಳಿನ ಭ್ರಮೆಯ ಸ್ವರೂಪವನ್ನು ಕುರಿತದ್ದಾಗಿದೆ. ಈ ಕತೆಯು ಭಾರತೀಯರ ವಿವೇಕವನ್ನು ಬೌದ್ಧಿಕವಾಗಿ ದಿವಾಳಿಗೊಳಿಸಿ ಹುಸಿ ಆಧ್ಯಾತ್ಮಿಕತೆಯ ಭ್ರಮೆಯನ್ನುಟ್ಟಿಸಿ ಶೂನ್ಯ(ಖಾಲಿ)ದೆಡೆಗೆ ಕರೆದುಕೊಂಡೊಯ್ಯುವ ಬಗೆಯನ್ನು ಕುರಿತು ಮಾತನಾಡುವುದನ್ನು ನೋಡುತ್ತೇವೆ.

ಕತೆಯಲ್ಲಿ ಆಕಾಶದೇವರಗುಡಿ ಪ್ರವೇಶವಾಗುವುದಕ್ಕೂ ಮುಂಚೆ ಓದುಗರಿಗೆ ಶೂನ್ಯತತ್ವದ ಎಲ್ಲಾ ಆಯಾಮಗಳು ಸ್ಮೃತಿಪಟಲದಲ್ಲಿ ಸುಳಿದು ಹೋಗಿಬಿಡುತ್ತವೆ. ಕತೆಯಲ್ಲಿ ಸೂಕ್ಷ್ಮಗಳ ಸಂಕೀರ್ಣವನ್ನೇ ಅಡಕಗೊಳಿಸಲಾಗಿದೆ. ಆಧ್ಯಾತ್ಮಿಕ ವಿಷಯಗಳನ್ನಿಡಿದುಕೊಂಡು ಬಂಡವಾಳಶಾಹಿ ವ್ಯವಸ್ಥೆಯು ಹೇಗೆ ಸಂಪತ್ತನ್ನು ಲೂಟಿ ಮಾಡಬಹುದು, ಮಾಡುತ್ತದೆ ಎನ್ನುವುದನ್ನು ಇಲ್ಲಿ ನೋಡಬಹುದಾಗಿದೆ.

(ನಗ್ನಮುನಿ)

ಧರ್ಮಗಳ ಗುತ್ತಿಗೆಯನ್ನು ಹಿಡಿದು, ಧರ್ಮಾಧಿಕಾರಿಗಳನ್ನು ನೇಮಿಸಿ ಅಥವಾ ಮುಂದಿಟ್ಟುಕೊಂಡು ಪ್ರಭುತ್ವದ ಮೂಲಕ ಜಾಗತೀಕರಣ ತನ್ನ ಬಳ್ಳಿಯನ್ನು ಹಬ್ಬಿಸಿರುವುದನ್ನು ಕತೆ ನಿರೂಪಿಸುತ್ತದೆ. ಗುಡಿ, ದೇವರೆಂದರೆ ಜನ ಭಾವನಾತ್ಮವಾಗಿ ಬಂಧದಲ್ಲಿ ಸಿಲುಕಿಬಿಡುತ್ತಾರೆ. ಅದನ್ನೇ ಇಲ್ಲಿ ಮುಖ್ಯ ಬಂಡವಾಳ ಮಾಡಿಕೊಂಡು ಒಂದು ಗುಡಿ ಸಿದ್ಧಗೊಂಡಿರುತ್ತದೆ. ಹೀಗೆ ಕಟ್ಟಲ್ಪಟ್ಟ ಗುಡಿಗೆ ಒಂದು ಸುಳ್ಳು ಇತಿಹಾಸವನ್ನು ಸೃಷ್ಟಿಸಲಾಗಿರುತ್ತದೆ. ಇತಿಹಾಸ ನಿರ್ಮಾಣದ ಬಗೆಗೆ ಹಿಡಿದ ಕನ್ನಡಿಯಂತೆ ನಿರೂಪಿತಗೊಳಿಸಿರುವುದು ಕತೆಯ ಒಂದು ಬಹುದೊಡ್ಡ ಶಕ್ತಿಯಾಗಿದೆ.

ಒಬ್ಬ ವ್ಯಕ್ತಿಯ ಕನಸಿನಲ್ಲಿ ದೇವರು ಬಂದು ದೂರದ ಬೆಟ್ಟದಲ್ಲಿ ಒಂದು ದೇವಾಲಯವಿದ್ದು, ಆ ದೇವಾಲಯವನ್ನು ಹುಡುಕಿ ಹೊರತೆಗೆಯಬೇಕೆಂದು ಆ ಗ್ರಾಮದ ಜನರನ್ನು ಒಪ್ಪಿಸಿ ಕರೆದುಕೊಂಡು ಹೋಗಿ ಗಿಡ, ಮರಗಳನ್ನು ಕಡಿದು ಹೊಸ ದಾರಿಯೊಂದನ್ನು ಮಾಡಿಕೊಂಡು ಬಲು ಪ್ರಯಾಸದಿಂದ ಗುಡ್ಡ ಹತ್ತುತ್ತಾರೆ. ಗುಡಿಯನ್ನು ಹುಡುಕಿ ಸ್ವಚ್ಚ ಮಾಡುತ್ತಾರೆ. ಆ ದೇವಾಲಯವು ತುಂಬ ಹಳೆಯದರಂತೆ ಕಾಣುತ್ತದೆ. ಆ ದೇವಾಲಯವು ಎರಡು ಕೋಣೆಗಳನ್ನು ಒಳಗೊಂಡಂತೆ ರಚನೆಗೊಂಡಿರುತ್ತದೆ. ಒಂದು ಕೋಣೆ ಗರ್ಭಗುಡಿ ಇನ್ನೊಂದು ಅದಕ್ಕೆ ಅಂಟಿಕೊಂಡಂತೆ ಇರುತ್ತದೆ. ಅಲ್ಲಿ ವಿಗ್ರಹವು ಇರುವುದಿಲ್ಲ. ಇದೇ ವಿಷಯವೇ ಕತೆಗೆ ಹೆಚ್ಚು ತಾತ್ವಿಕತೆಯ ಬಲವನ್ನು ನೀಡುತ್ತದೆ. ಆ ಗುಡಿಯ ಕುರಿತು ಒಂದು ಸಂಕೇತ ಬರುತ್ತದೆ ‘ಒಂದು ಬಲವಾದ ಕಾಡು ಕೋಣದ ಶರೀರವನ್ನು ಹೊರತುಪಡಿಸಿ ಕುತ್ತಿಗೆಯವರೆಗೆ ನೆಲದ ಮೇಲೆ ಅಳವಡಿಸಿದರೆ ಹೇಗಿರುತ್ತದೋ ಹಾಗಿದೆ. ಬಾಯಿ ತೆರೆದು ಕೊಂಬುಗಳಿಂದ ಮುಖ ಹಗಲಿಸಿ ಆಗಸವನ್ನು ನೋಡುತ್ತಿರುವಂತಿದೆ’. ಕತೆಗಾರರು ಉದ್ದೇಶಪೂರ್ವಕವಾಗಿಯೇ ಈ ರೂಪಕವನ್ನು ತರುತ್ತಾರೆ. ಸಾಂಕೇತಿಕವಾಗಿ ಇದು ಬಳಕೆಗೊಳ್ಳತ್ತದೆ.

ಮಿ. ಕಾರಶ್ ಈ ಗುಡಿಯನ್ನು ಕಟ್ಟಿ ಅದಕ್ಕೆ ಅನೇಕ ಸುಳ್ಳಿನ ಕತೆಗಳನ್ನು ಕಟ್ಟಿ, ಇತಿಹಾಸವನ್ನು ಬರೆಸಿ, ಸುಳ್ಳಿನ ಇತಿಹಾಸವನ್ನು ಸೃಷ್ಟಿಸಿರುತ್ತಾನೆ. ಇದರ ಮೂಲಕ ನಡೆಯುವ ಹಣಗಳಿಕೆಯು ಜನರನ್ನು ನಂಬಿಸಿ ಈ ದೇವಾಲಯವು ತಂಬ ಶಕ್ತಿಯಿರುವಂತಹದು ಇಲ್ಲಿ ಧ್ಯಾನ ಮಾಡಿದರೆ ಶಾಂತಿ ಸಿಗುವುದು ಎಂಬಂತೆ ಸುಳ್ಳುಗಳನ್ನು ಸೃಷ್ಟಿಸಲಾಗಿರುತ್ತದೆ. ಅಲ್ಲದೆ ಒಂದು ಕೋಣೆಯಲ್ಲಿ ಧ್ಯಾನ ಮಾಡುವುದು, ಇನ್ನೊಂದು ಕೋಣೆಯನ್ನು ಪ್ರವೇಶಿಸದೇ ಹಣವನ್ನು ಹಾಕಿಹೋಗುವಂತೆ ಮಿಥ್‌ಗಳನ್ನು ಸೃಷ್ಟಿಸಲಾಗಿರುತ್ತದೆ. ಇದನ್ನು ಕತೆಯುದ್ದಕ್ಕೂ ನಿರೂಪಕ ಗೌಪ್ಯವಾಗಿಟ್ಟು ಒಂದು ಕುತೂಹಲವನ್ನು ಮೂಡಿಸುತ್ತಾನೆ. ಮಿ. ಕಾರಶ್ ತನ್ನ ಸ್ನೇಹಿತ ಸತ್ಯಾನಂದನ ಹತ್ತಿರ ಹೇಳುವ ಮೂಲಕ ಮಿ. ಕಾರಶ್‌ನ ಸುಳ್ಳಿನ ಅನಾವರಣ ಮತ್ತು ಸುಳ್ಳಿನ ದೇವಾಲಯದ ಸೃಷ್ಟಿಯ ಕುರಿತು ಸತ್ಯವನ್ನು ಹೊರಹಾಕುವುದು ಕತೆಯು ಓದುಗರನ್ನು ಸೆಳೆದಿಡುವ ಬಹುಮಖ್ಯ ತಂತ್ರವಾಗಿದೆ.

ಕತೆ ಆಯ್ದುಕೊಂಡಿರುವ ಕಥಾ ವಸ್ತವೇ ತುಂಬಾ ಗಂಭೀರವಾದದ್ದು. ಸಮಕಾಲೀನ ವಾಸ್ತವ ಸಮಸ್ಯೆಗಳನ್ನು, ಜಾಗತೀಕರಣ, ರಾಜಕಾರಣವನ್ನೇ ವಸ್ತುವನ್ನಾಗಿ ಮಾಡಿಕೊಂಡಿದೆ. ಸಂಕೀರ್ಣವಾದ ವಿಷಯವನ್ನು ಕತೆಗಾರ ಅಚ್ಚುಕಟ್ಟಾಗಿ ನಿಭಾಯಿಸಿರುವುದು ಕತೆಗೆ ಒಂದು ಮೌಲ್ಯವನ್ನು ತಂದುಕೊಟ್ಟಿದೆ. ಜಾಗತೀಕರಣ, ರಾಜಕಾರಣ ವ್ಯವಸ್ಥೆಯ ಸ್ಥಾಪಿತ ಹಿತಾಸಕ್ತಿಯ ಹುನ್ನಾರಗಳ ಕುರಿತು ಅನೇಕ ಕತೆಗಳು ರಚನೆಗೊಂಡಿವೆ. ರಚನೆಗೊಳ್ಳುತ್ತಲೇ ಇವೆ. ರಚನೆಗೊಳ್ಳಬೇಕು ಕೂಡ.

ಪ್ರಭುತ್ವದ ಕಾಲಡಿಯಲ್ಲಿ ಸಿಕ್ಕು ಜೀವಂತ ಹೆಣವಾಗುತ್ತಿರುವ ಮಾನವ ಸಮಾಜವನ್ನು ಹುಡುಕಿಕೊಂಡುಹೋಗುವ ಪ್ರಯತ್ನಗಳು ಸಾಕಷ್ಟಿವೆ. ಅಂತಹ ಕತೆಗಳಲ್ಲಿ ‘ಆಕಾಶದೇವರು’ ಒಂದು. ಮಾನವ ಸಮಾಜ ಮತ್ತು ಪ್ರಕೃತಿ ಧರ್ಮವು ವ್ಯವಸ್ಥೆಯ ವಿಕೃತಕಾಮಕ್ಕೆ ಸದಾ ಅತ್ಯಚಾರಕ್ಕೊಳಗಾಗುತ್ತಲೇ ಇರುತ್ತದೆ. ಇಂತಹ ಪರಿಸ್ಥಿಯ ನಿರ್ಮಾತೃಗಳನ್ನು ಕತೆ ತರಾಟೆಗೆ ತೆಗೆದುಕೊಳ್ಳುತ್ತದೆ. ಪ್ರತಿಭಟಿಸುವ, ವಿರೋಧಿಸುವ ಪ್ರಯತ್ನವನ್ನು ಮುಖ್ಯವಾಗಿ ಮಾಡುತ್ತದೆ. ಕತೆಗಾರ ವ್ಯವಸ್ಥೆಯ ಮೇಲಿನ ತನ್ನ ಕೋಪವನ್ನು, ಸಿಟ್ಟು, ಸೆಡವನ್ನು ದಾಖಲಿಸುತ್ತಾನೆ. ಅವನ ಸಾಮಾಜಿಕ ಚಿಕಿತ್ಸಕ ಗುಣ ಕೋಮಾ ಸ್ಥಿಗೆ ಹೋಗಿರುವ ರೋಗಿಯೊಬ್ಬನಿಗೆ ವೈದ್ಯ ನೀಡುವ ಚಿಕಿತ್ಸೆಯಂತೆ ಕಾಣುತ್ತದೆ.